“ತೀನ್ ಆಣಿ ದೋನ್ ಕಿತ್ತಿ? [ಮೂರು ಕೂಡಿಸು ಎರಡು ಎಷ್ಟು?],” ಎಂದು ಪ್ರತಿಭಾ ಹಿಲಿಮ್ ಕೇಳುತ್ತಾರೆ. ಅವರ ಮುಂದೆ ನೆಲದ ಮೇಲೆ ಕುಳಿತುಕೊಂಡಿರುವ 7ರಿಂದ 9 ವಯಸ್ಸಿನ ಸುಮಾರು 10 ಮಕ್ಕಳ ಗುಂಪು ಪ್ರತಿಕ್ರಿಯಿಸುವುದಿಲ್ಲ. ಅವರು ಚಾಕ್‌ಬೋರ್ಡ್‌ನಲ್ಲಿ ಬರೆಯುತ್ತಾರೆ, ನಂತರ ಮಕ್ಕಳನ್ನು ಹಿಂತಿರುಗಿ ನೋಡುತ್ತಾರೆ ಮತ್ತು ಅವರು ತೋಳುಗಳು ಮತ್ತು ತಲೆಯಾಡಿಸಿ “ಪಾಂಚ್ [ಐದು]” ಎಂದು ಪುನರಾವರ್ತಿಸುವಂತೆ ಸಂಕೇತಿಸುತ್ತಾರೆ.

ಸೊಂಟಕ್ಕೆ ಜೋಡಿಸಲಾದ ಅಡಿಯಲ್ಲಿ ರಬ್ಬರ್ ಹೊಂದಿರುವ ಚರ್ಮ ಮತ್ತು ಸ್ಟೀಲ್‌ನ ಪ್ರೊಟೆಕ್ಟರ್ ಸಹಾಯದಿಂದ ಪ್ರತಿಭಾ ನಿಂತಿದ್ದಾರೆ. ಅವರ ಮೊಣಕೈಯ ಬಳಿ ಬಿಳಿ ಸೀಮೆಸುಣ್ಣವನ್ನು ಕಟ್ಟಲಾಗಿದೆ.

‘ಶಾಲೆ’ ನಡೆಯುತ್ತಿದೆ, ಮತ್ತು ಈ ಶಾಲೆಯು ಪಾಲ್ಘರ್ ಜಿಲ್ಲೆಯ ಕಾರ್ಹೆ ಗ್ರಾಮದಲ್ಲಿರುವ ಹಿಲಿಮ್ ಕುಟುಂಬದ ಮೂರು ಕೋಣೆಗಳ ಸಿಮೆಂಟ್ ಮನೆಯಲ್ಲಿದೆ. ಇಲ್ಲಿ, ಈ ವರ್ಷದ ಜುಲೈ 20ರಿಂದ ಪ್ರತಿಭಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿಕ್ರಮಗಡ್ ತಾಲೂಕಿನಲ್ಲಿರುವ ಈ ಗ್ರಾಮದ ಸುಮಾರು 30 ಆದಿವಾಸಿ ಮಕ್ಕಳಿಗೆ ಇಂಗ್ಲಿಷ್, ಇತಿಹಾಸ, ಮರಾಠಿ ಮತ್ತು ಗಣಿತವನ್ನು ಕಲಿಸುತ್ತಿದ್ದಾರೆ. 1,378 ಜನರಿರುವ ಈ ಊರಿನ ಎರಡು ಜಿಲ್ಲಾ ಪರಿಷತ್ ಶಾಲೆಗಳು ಒದಗಿಸಿದ ಪಠ್ಯಪುಸ್ತಕಗಳನ್ನು ಹೊತ್ತ ಮಕ್ಕಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತಂಡ‌ಗಳಾಗಿ ಬರುತ್ತಾರೆ.

ವಿದ್ಯಾರ್ಥಿಯೊಬ್ಬ ತನ್ನ ಮೇಲಿನ ತೋಳಿನ ವೆಲ್ಕ್ರೋ ಪಟ್ಟಿಗೆ ಕಟ್ಟಲಾದ ಸೀಮೆಸುಣ್ಣವನ್ನು ಸರಿಪಡಿಸಲು ಸಹಾಯ ಮಾಡುತ್ತಿರುವಾಗ “ಶಸ್ತ್ರಚಿಕಿತ್ಸೆಯ ನಂತರ, ಪ್ರತಿಯೊಂದು ಸಣ್ಣ ಕೆಲಸ ಮುಗಿಸುವುದಕ್ಕೂ ಹೆಚ್ಚು ಸಮಯ ಹಿಡಿಯುತ್ತದೆ. ಇದರೊಂದಿಗೆ ಬರೆಯುವುದು ಸಹ ಕಷ್ಟ,” ಎಂದು ಪ್ರತಿಭಾ ಹೇಳುತ್ತಾರೆ.

ಕಳೆದ ವರ್ಷದವರೆಗೂ, ವರ್ಲಿ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಪ್ರತಿಬಾ ಹಿಲೀಮ್ ಸ್ಥಳೀಯ ಜಿಲ್ಲಾ ಪರಿಷತ್ (ಝಡ್‌ಪಿ) ಶಾಲೆಗಳಲ್ಲಿ ಕಳೆದ 28 ವರ್ಷಗಳಿಂದ ಬೋಧನೆ ಮಾಡುತ್ತಿದ್ದರು. ತನ್ನ 20ನೇ ವಯಸ್ಸಿನಲ್ಲಿ ಮದುವೆಯಾದ ನಂತರ, ಕಾರ್ಹೆಯಿಂದ 100 ಕಿಲೋಮೀಟರ್ ದೂರದಲ್ಲಿರುವ ಭಿವಾಂಡಿ ನಗರಕ್ಕೆ ಸ್ಥಳಾಂತರಗೊಂಡರು, ಅಲ್ಲಿ ಅವರ ಪತಿ ಕೆಲಸ ಮಾಡುತ್ತಿದ್ದರು - ಅವರ ಪತಿ 50 ವರ್ಷದ ಪಾಂಡುರಂಗ್ ಹಿಲೀಮ್ ಈಗ ರಾಜ್ಯ ನೀರಾವರಿ ಇಲಾಖೆಯ ಕಚೇರಿಯಲ್ಲಿ ಹಿರಿಯ ಗುಮಾಸ್ತನಾಗಿದ್ದಾರೆ. ಅವರನ್ನು 2015ರಲ್ಲಿ ಹತ್ತಿರದ ಥಾಣೆ ಜಿಲ್ಲೆಯ ಕಲ್ವಾ ಪಟ್ಟಣಕ್ಕೆ ವರ್ಗಾವಣೆ ಮಾಡಿದಾಗ, ಬೋಧನೆಯನ್ನು ಮುಂದುವರಿಸಲು ಅವರು ಅಲ್ಲಿಂದ ಭಿವಾಂಡಿಗೆ ಹೋಗಿಬರುತ್ತಿದ್ದರು.

ಭಿವಾಂಡಿಯ ಹೊಸ ಝಡ್‌ಪಿ ಶಾಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಕಾರ್ಹೆಯಲ್ಲಿರುವ ಹಿಲೀಮ್ ಕುಟುಂಬದ ಮನೆಗೆ ಬರುತ್ತಿದ್ದರು. ಅಂತಹ ಒಂದು ಭೇಟಿಯ ಸಮಯದಲ್ಲಿ ಜೂನ್ 2019ರಲ್ಲಿ ಅವರ ತೊಂದರೆಗಳು ಪ್ರಾರಂಭವಾದವು. ಆ ತಿಂಗಳು 50 ವರ್ಷದ ಪ್ರತಿಭಾರಿಗೆ ಗ್ಯಾಂಗ್ರೀನ್ ಇರುವುದು ತಿಳಿದುಬಂದಿತು, ಇದು ದೇಹದ ಅಂಗಾಂಶಗಳು ಸಾಯುವುದರಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಅನಾರೋಗ್ಯ, ಗಾಯ ಅಥವಾ ಸೋಂಕು ಉಂಟಾದಾಗ ಅಲ್ಲಿ ರಕ್ತ ಪೂರೈಕೆಯಿಲ್ಲದಿದ್ದಾಗ ಗ್ಯಾಂಗ್ರೀನ್ ಸಂಭವಿಸುತ್ತದೆ.

ಸ್ವಲ್ಪ ಸಮಯದ ನಂತರ, ಅವರ ಎರಡೂ ಮುಂಗೈಗಿಂತ ಕೆಳಗಿನ ಭಾಗ ಮತ್ತು ಮೊಣಕಾಲಿನ ಕೆಳಭಾಗಗಳನ್ನು ಕತ್ತರಿಸಬೇಕಾಯಿತು.

PHOTO • Shraddha Agarwal

ಕಾರ್ಹೆ ಗ್ರಾಮದಲ್ಲಿರುವ ಪ್ರತಿಭಾ ಹಿಲಿಮ್ ಅವರ ಮನೆಯಲ್ಲಿ 'ಶಾಲೆ' ನಡೆಯುತ್ತಿದೆ, ಮತ್ತು ಅವರು ರಕ್ಷಣಾ ಸಲಕರಣೆಯ ಬೆಂಬಲದೊಂದಿಗೆ ತಿರುಗಾಡುತ್ತಾರೆ ಮತ್ತು ಅವರ ಕೈಗೆ ಸೀಮೆಸುಣ್ಣವನ್ನು ಕಟ್ಟಿಕೊಂಡು ಬರೆಯುತ್ತಾರೆ

"ನನಗೆ ಹೀಗಾಗಬಹುದು ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದು ಪ್ರತಿಭಾ ಹೇಳುತ್ತಾರೆ. ನನಗೆ ಇದ್ದಕ್ಕಿದ್ದಂತೆ ತೀವ್ರ ಜ್ವರ ಬಂದಾಗ ನಾನು [ಕಾರ್ಹೆಯಲ್ಲಿ] ಇಲ್ಲಿದ್ದೆ. ಅಂದು ಜೂನ್ 16ರಂದು ರಾತ್ರಿ 8 ಗಂಟೆ ಆಗಿತ್ತು. "ನಾನು ಪ್ಯಾರಸಿಟಮಾಲ್ ತೆಗೆದುಕೊಂಡೆ, ಜ್ವರ ವಾಸಿಯಾಗುತ್ತದೆಂದು ಭಾವಿಸಿದ್ದೆ. ಆದರೆ ಮರುದಿನ ಬೆಳಿಗ್ಗೆ ಆರೋಗ್ಯ ಇನ್ನಷ್ಟು ಹದಗೆಟ್ಟಿತು, ನಂತರ ನನ್ನ ಮಗ ಮತ್ತು ಗಂಡ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಇವುಗಳಲ್ಲಿ ಯಾವುದೂ ನನಗೆ ನೆನಪಿಲ್ಲ. ನಾನು ಇಡೀ ದಿನ ಪ್ರಜ್ಞಾಹೀನಳಾಗಿದ್ದೆ.”

ಜೂನ್ 17ರ ಬೆಳಿಗ್ಗೆ, ಅವರನ್ನು 120 ಕಿಲೋಮೀಟರ್ ದೂರದಲ್ಲಿರುವ ಕಲ್ವಾದ ಖಾಸಗಿ ಗ್ರಾಮೀಣ ಆಸ್ಪತ್ರೆಗೆ ಅವರ ಕುಟುಂಬದ ಕಾರಿನಲ್ಲಿ ಕರೆದೊಯ್ಯಲಾಯಿತು. "ಅಲ್ಲಿನ ವೈದ್ಯರು ನನ್ನ ಗಂಡನಿಗೆ ನನ್ನ ಸ್ಥಿತಿ ಗಂಭೀರವಾಗಿದೆ ಮತ್ತು ನನ್ನನ್ನು ತಕ್ಷಣ ಥಾಣೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಹೇಳಿದರು" ಎಂದು ಪ್ರತಿಭಾ ಹೇಳುತ್ತಾರೆ. ಅದೇ ದಿನ, ಆಕೆಯ ಕುಟುಂಬವು ಆಂಬ್ಯುಲೆನ್ಸಿನನಲ್ಲಿ ಅವರನ್ನು ಅಲ್ಲಿಗೆ ಕರೆದೊಯ್ದಿತು.

"ನಾನು ಅಂತಿಮವಾಗಿ ಎಚ್ಚರಗೊಂಡಾಗ, ನಾನು ಆಸ್ಪತ್ರೆಯಲ್ಲಿದ್ದೇನೆ ಎಂದು ಅರಿತುಕೊಂಡೆ. ನಾನು ಡೆಂಗ್ಯೂ ಜ್ವರಕ್ಕೆ ಒಳಗಾಗಿದ್ದೇನೆ ಎಂದು ವೈದ್ಯರು ಹೇಳಿದ್ದರು. ಹೊಲಗಳಲ್ಲಿ ಕೆಲಸ ಮಾಡುವಾಗ ಏನಾದರೂ ಆಗಿದೆಯೇ ಎಂದು ಅವರು ನನ್ನನ್ನು ಕೇಳಿದರು. ಆದರೆ ಏನೂ ಆಗಿರಲಿಲ್ಲ. ನಾವು ಯಾವಾಗಲೂ ಬಾಬಾ ಅವರನ್ನು ಭೇಟಿ ಮಾಡಲು ಬಂದಾಗ ವಾರಾಂತ್ಯದಲ್ಲಿ ಕೃಷಿ ಕೆಲಸ ಮಾಡುತ್ತೇವೆ. ಅವರಿಗೆ ವಯಸ್ಸಾಗಿದೆಯಾದ್ದರಿಂದ ನಾವು ಸಹಾಯ ಮಾಡುತ್ತೇವೆ ಮತ್ತು ನಮ್ಮ ಗದ್ದೆಯಲ್ಲಿ ಭತ್ತವನ್ನು ಬೆಳೆಯುತ್ತೇವೆ.” ಪಾಂಡುರಂಗ್ ಅವರ ತಂದೆ ಕಾರ್ಹೆ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿ ಹೊಂದಿದ್ದು, ಅಲ್ಲಿ ಕುಟುಂಬವು ಭತ್ತ, ಕಿರುಧಾನ್ಯಗಳು, ತೊಗರಿ ಮತ್ತು ಉದ್ದು ಬೆಳೆಯುತ್ತಾರೆ. "ಆದಾಗ್ಯೂ, ಅನಿಯಮಿತ ಮಳೆಯಿಂದಾಗಿ ನಾವು ಹೊಲದಲ್ಲಿ ಹೆಚ್ಚು ಕೆಲಸ ಮಾಡುವುದನ್ನು ನಿಲ್ಲಿಸಿದ್ದೇವೆ" ಎಂದು ಪ್ರತಿಭಾ ಹೇಳುತ್ತಾರೆ.

ಜೂನ್ 19ರಂದು, ಥಾಣೆಯ ಖಾಸಗಿ ಆಸ್ಪತ್ರೆಯಲ್ಲಿದ್ದಾಗ, ಅವರ ಕೈ ಕಾಲುಗಳು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದ್ದನ್ನು ಅವರು ಗಮನಿಸಿದರು. “ಹೊಲದಲ್ಲಿ ಯಾವುದಾದರೂ ಕೀಟ ಕಚ್ಚಿರಬಹುದೆಂದು ವೈದ್ಯರು ಹೇಳಿದಾಗ. ನಾನು ಅವರನ್ನು ನಂಬಲಿಲ್ಲ. ಆದರೆ ಜ್ವರ ಹೆಚ್ಚುತ್ತಲೇ ಇತ್ತು ಮತ್ತು ನನ್ನ ದೇಹ ಸ್ಥಿತಿ ಕೆಡುತ್ತಿತ್ತು. ನನ್ನ ಎರಡೂ ಕಾಲುಗಳಲ್ಲಿ ಮತ್ತು ನನ್ನ [ಬಲ] ಕೈಯಲ್ಲಿ ಈ ಸುಡುವ ಅನುಭವವಾಗಲು ಪ್ರಾರಂಭವಾಯಿತು. ಮೊದಲಿಗೆ, ಅವರು [ವೈದ್ಯರು] ನಾನು ಆರಾಮವಾಗುತ್ತೇನೆಂದು ಹೇಳಿದರು, ಆದರೆ ಮರುದಿನ ರಾತ್ರಿ ನನ್ನ ಕೈ ಕಾಲುಗಳು ಮಂಜಿನಂತೆ ತಣ್ಣಗಾಗತೊಡಗಿದವು. ನಾನು ಕೂಗುತ್ತಲೇ ಇದ್ದೆ. ಅದರ ನಂತರ, ನಾನು 19 ದಿನಗಳ ತನಕ ಕೂಗುತ್ತಲೇ ಇದ್ದೆ. ನನ್ನ ಕಾಲುಗಳು ನನ್ನ ತೋಳುಗಳಿಗಿಂತ ಹೆಚ್ಚು ಉರಿಯುತ್ತಿತ್ತು ಮತ್ತು ನೋಯುತ್ತಿತ್ತು.”

ಮೂರು ದಿನಗಳ ನಂತರ ಪ್ರತಿಭಾ ಅವರಿಗೆ ಗ್ಯಾಂಗ್ರೀನ್ ಇರುವುದು ಪತ್ತೆಯಾಯಿತು. “ಮೊದಲಿಗೆ, ಇದು ಹೇಗೆ ಸಂಭವಿಸಿತು ಎಂಬುದನ್ನು ವೈದ್ಯರು ಸಹ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅವರು ಅನೇಕ ಪರೀಕ್ಷೆಗಳನ್ನು ಮಾಡಿದರು. ನನ್ನ ಜ್ವರ ಕಡಿಮೆಯಾಗಲಿಲ್ಲ ಜೊತೆಗೆ ನಾನು ಬಹಳ ನೋವಿನಿಂದ ಬಳಲುತ್ತಿದ್ದೆ. ನನ್ನ ಕಾಲುಗಳಲ್ಲಿನ ಸುಡುವಂತಹ ಅನುಭವದಿಂದ ನಾನು ಕಿರುಚುತ್ತಿದ್ದೆ. ಒಂದು ವಾರದ ನಂತರ ಅವರು ಹೇಳಿದರು ಇನ್ನು ಚೇತರಿಸಿಕೊಳ್ಳಬಹುದು ಏಕೆಂದರೆ ನನ್ನ ಎಡಗೈಯ ಮೂರು ಬೆರಳುಗಳು ಇನ್ನೂ ಚಲಿಸುತ್ತಿದ್ದವು. ನನ್ನ ಪತಿ ಸಂಪೂರ್ಣ ಆಘಾತಕ್ಕೊಳಗಾಗಿದ್ದರು. ಏನು ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ. ನನ್ನ ಮಗ ಎಲ್ಲದರ ಜವಬ್ದಾರಿ ವಹಿಸಿಕೊಂಡನು.”

'When the doctors first told me about the operation I went into shock... Since then, every small task takes longer to complete. Even writing with this chalk is difficult'
PHOTO • Shraddha Agarwal
'When the doctors first told me about the operation I went into shock... Since then, every small task takes longer to complete. Even writing with this chalk is difficult'
PHOTO • Shraddha Agarwal

'ವೈದ್ಯರು ಆಪರೇಷನ್ ಬಗ್ಗೆ ಮೊದಲು ಹೇಳಿದಾಗ ನಾನು ಆಘಾತಕ್ಕೊಳಗಾಗಿದ್ದೆ... ಅಂದಿನಿಂದ, ಪ್ರತಿಯೊಂದು ಸಣ್ಣ ಕೆಲಸವೂ ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸೀಮೆಸುಣ್ಣದಿಂದ ಬರೆಯುವುದು ಕೂಡ ಕಷ್ಟ'

ಅವರ 27 ವರ್ಷದ ಮಗ ಸುಮಿತ್ ಸಿವಿಲ್ ಎಂಜಿನಿಯರ್. ಅವರು ತಾಯಿ ಆಸ್ಪತ್ರೆಗೆ ದಾಖಲಾದ ನಂತರ ಮುಂಬೈನ ನಿರ್ಮಾಣ ಕಂಪನಿಯಲ್ಲಿ ಕೆಲಸದಲ್ಲಿದ್ದ ಅವರಿಗೆ ದೀರ್ಘ ರಜೆ ಸಿಗದ ಕಾರಣ ತನ್ನ ಕೆಲಸವನ್ನು ತೊರೆದರು. ಪ್ರತಿಭಾ ನೆನಪಿಸಿಕೊಳ್ಳುತ್ತಾರೆ, "ಅವನು ನನ್ನ ಶಸ್ತ್ರಚಿಕಿತ್ಸೆಯ ಕುರಿತು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡ. ಎಲ್ಲಾ ಎಲ್ಲ ಕಾಗದ ಪತ್ರಗಳಿಗೆ ಸಹಿ ಹಾಕಿದ. ಅವನು ನನಗೆ ಊಟ ಮಾಡಿಸಿ, ಸ್ನಾನ ಮಾಡಿಸಿದ, ನನ್ನ ಮಗ ಎಲ್ಲವನ್ನೂ ಮಾಡಿದ" ಎಂದು ಪ್ರತಿಭಾ ನೆನಪಿಸಿಕೊಳ್ಳುತ್ತಾರೆ.

ಕಳೆದ ವರ್ಷ ಜೂನ್ ಅಂತ್ಯದ ವೇಳೆಗೆ, ಥಾಣೆ ಆಸ್ಪತ್ರೆಯ ವೈದ್ಯರು ಆಕೆಯ ಬಲಗೈಯನ್ನು ಕತ್ತರಿಸಿ ತೆಗೆಬೇಕಾಯಿತು. “ಆ ಶಸ್ತ್ರಚಿಕಿತ್ಸೆ ಸರಿಯಾಗಿ ಆಗಲಿಲ್ಲ. ಅವರು ಅಮ್ಮನ ಬಲಗೈಯನ್ನು ತುಂಬಾ ಕೆಟ್ಟದಾಗಿ ಕತ್ತರಿಸಿದ್ದಾರೆ,” ಎಂದು ಸುಮೀತ್ ಹೇಳುತ್ತಾರೆ. “ಅವರು ಒಂದೆಡೆ ಶಸ್ತ್ರಚಿಕಿತ್ಸೆಗೆ ನಮಗೆ 3.5 ಲಕ್ಷ ಶುಲ್ಕ ವಿಧಿಸಿದರು ಮತ್ತು ಅದನ್ನು ಸರಿಯಾಗಿ ಮಾಡಲಿಲ್ಲ. ಅಮ್ಮ ತುಂಬಾ ನೋವಿನಿಂದ ಅಳುತ್ತಿದ್ದರು. ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚವನ್ನು ನಾವು ಭರಿಸುವುದು ಸಾಧ್ಯವಿಲ್ಲವೆಂದು ನನ್ನ ತಂದೆ ಹೇಳಿದರು.”

ಭಿವಾಂಡಿಯ ಝಡ್‌ಪಿ ಶಾಲೆಯು ಕೆಲವು ಖರ್ಚುಗಳನ್ನು ಭರಿಸಲು ಆಗಸ್ಟ್‌ನಲ್ಲಿ ಪ್ರತಿಭಾರಿಗೆ ಮೂರು ತಿಂಗಳ ಸಂಬಳ ನೀಡಿತು - ಅವರ ಆದಾಯ ಸುಮಾರು ತಿಂಗಳಿಗೆ 40,000 ರೂ. “ಆ [ಥಾಣೆ] ಆಸ್ಪತ್ರೆಯಲ್ಲಿ ನಾವು ತುಂಬಾ ಹಣವನ್ನು ಕಳೆದುಕೊಂಡಿದ್ದೇವೆ. ಅವರು ಸುಮಾರು 20 ದಿನಗಳ ಚಿಕಿತ್ಸೆಗೆ ಸುಮಾರು 13 ಲಕ್ಷ ರೂ ಶುಲ್ಕ ವಿಧಿಸಿದರು. ನನ್ನ ಸಹೋದರ ನಮಗೆ ಸ್ವಲ್ಪ ಹಣವನ್ನು ಸಾಲ ನೀಡಿದರು ಮತ್ತು ಶಾಲೆಯ ನನ್ನ ಸ್ನೇಹಿತರು ಸಹ ನಮಗೆ ಸಹಾಯ ಮಾಡಿದರು. ನಮ್ಮ ಬಳಿ ಏನೂ ಉಳಿದಿಲ್ಲ. ನನ್ನ ಪತಿ ಕೂಡ ಸಾಲ ತೆಗೆದುಕೊಂಡರು” ಎಂದು ಪ್ರತಿಭಾ ಹೇಳುತ್ತಾರೆ.

ಜುಲೈ 12ರ ಸುಮಾರಿಗೆ ಅವರು ನಿಭಾಯಿಸಬಲ್ಲದಕ್ಕಿಂತಲೂ ಸ್ವಲ್ಪ ಹೆಚ್ಚು ಖರ್ಚು ಮಾಡಿದ ನಂತರ, ಪ್ರತಿಭಾ ಅವರ ಕುಟುಂಬವು ಅವರನ್ನು ದಕ್ಷಿಣ ಮುಂಬೈನಲ್ಲಿ ಸರ್ಕಾರ ನಡೆಸುತ್ತಿರುವ ಜೆಜೆ ಆಸ್ಪತ್ರೆಗೆ ಕರೆತಂದಿತು. ಅಲ್ಲಿ ಅವರು ಸುಮಾರು ಒಂದು ತಿಂಗಳು ಇದ್ದರು. ಪ್ರತಿಭಾ ನೆನಪಿಸಿಕೊಳ್ಳುತ್ತಾರೆ, “ಜೆಜೆ ಆಸ್ಪತ್ರೆಗೆ ಬಂದ ನಂತರವೂ ನನ್ನ ಕಾಲುಗಳು ನೋಯುತ್ತಿದ್ದವು. ಯಾರಾದರೂ ನನ್ನ ಪಾದವನ್ನು ಮುಟ್ಟಿದರೆ, ನಾನು ಕಿರುಚುತ್ತಿದ್ದೆ. ಒಂಬತ್ತು ದಿನಗಳವರೆಗೆ ನನಗೆ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ನಾನು ಮಲಗಲಾಗಲಿಲ್ಲ. ಮತ್ತು ನನ್ನ ಕಾಲುಗಳು ತುಂಬಾ ಊದಿಕೊಂಡಿದ್ದವು. ವೈದ್ಯರು ನನ್ನನ್ನು 2-3 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಿ ನಂತರ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು.”

ಜುಲೈ 15ರಂದು ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ, ಅವರ ಉಳಿದ ಮೂರು ಮುಂಗೈ ಮತ್ತು ಮುಂಗಾಲುಗಳು ಕತ್ತರಿಸಲ್ಪಟ್ಟವು.

ಪ್ರತಿಭಾ ಹೇಳುತ್ತಾರೆ, "ವೈದ್ಯರು ಮೊದಲು ಆಪರೇಷನ್ ಬಗ್ಗೆ ಹೇಳಿದಾಗ ನಾನು ಆಘಾತಕ್ಕೊಳಗಾಗಿದ್ದೆ. ನನ್ನ ಭವಿಷ್ಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಇನ್ನು ಮುಂದೆ ಮಕ್ಕಳಿಗೆ ಕಲಿಸಲು ಶಾಲೆಗೆ ಹೋಗಲು ಸಾಧ್ಯವಿಲ್ಲ. ನಾನು ಮನೆಯಲ್ಲೇ ಇರಬೇಕು ಮತ್ತು ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ನಾನು ಇನ್ನು ಮುಂದೆ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸಿ ಅಳಲು ಪ್ರಾರಂಭಿಸಿದೆ, ಆದರೆ ನನ್ನ ಸಂಬಂಧಿಕರು ಮತ್ತು ಸ್ನೇಹಿತರು ಪ್ರತಿದಿನ ನನ್ನನ್ನು ನೋಡಲು ಬರುತ್ತಿದ್ದರು, ಮತ್ತು ಅವರು ನನಗೆ ಬಹಳ ಧೈರ್ಯವನ್ನು ನೀಡಿದರು. ನಾನು ಹೆದರುತ್ತಿದ್ದೆ ಆದರೆ ನನ್ನ ಪೋಷಕರು ಸಹ ನನಗೆ ಧೈರ್ಯವನ್ನು ಹೇಳಿ ಎಲ್ಲವನ್ನೂ ಸುಲಭವಾಗಿಸಿದರು ಜೊತೆಗೆ ಆಪರೇಷನ್ ನಂತರವೂ ನನಗೆ ಸಹಾಯ ಮಾಡಿದರು ನಾನು ಅವರಿಗೆಲ್ಲ ತುಂಬಾ ಋಣಿಯಾಗಿದ್ದೇನೆ."
Pratibha Hilim with her son Sumeet and daughter Madhuri, who says, 'We tell her we are there for you. We children will become your arms and legs'
PHOTO • Shraddha Agarwal
Pratibha Hilim with her son Sumeet and daughter Madhuri, who says, 'We tell her we are there for you. We children will become your arms and legs'
PHOTO • Shraddha Agarwal

ಮಗ ಸುಮಿತ್ ಮತ್ತು ಮಗಳು ಮಾಧುರಿ ಅವರೊಂದಿಗೆ ಪ್ರತಿಭಾ ಹಿಲೀಮ್, ಇಬ್ಬರೂ  ‘ನಾವು ನಿಮ್ಮೊಂದಿಗಿದ್ದೇವೆ. ನಾವು ಮಕ್ಕಳು ನಿಮ್ಮ  ಕೈಕಾಲುಗಳಾಗಿರುತ್ತೇವೆ.' ಎಂದು ತಾಯಿಗೆ ಧೈರ್ಯ ತುಂಬುತ್ತಾರೆ

2019ರ ಆಗಸ್ಟ್ 11ರಂದು ಜೆಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ಪ್ರತಿಭಾ ತನ್ನ ತಾಯಿಯೊಂದಿಗೆ ತೆರಳಿದರು. ಅವರ ತಾಯಿ ಸುನೀತಾ ವಾಘ್ (65) ಕೃಷಿಕರು ಮತ್ತು ಗೃಹಿಣಿ. ಪ್ರತಿಭಾ ಅವರ ಪೋಷಕರು ಪಾಲ್ಘರ್ ಜಿಲ್ಲೆಯ ಜವಾಹರ್ ತಾಲೂಕಿನ ಚಲತ್ವಾಡ್ ಗ್ರಾಮದಲ್ಲಿ ಆರು ಎಕರೆ ಭೂಮಿಯನ್ನು ಹೊಂದಿದ್ದಾರೆ ಮತ್ತು ಅವರು ಭತ್ತ, ಜೋಳ, ತೊಗರಿ ಮತ್ತು ಕಿರುಧಾನ್ಯಗಳನ್ನು ಬೆಳೆಯುತ್ತಾರೆ. ಅವರ 75 ವರ್ಷದ ತಂದೆ ಅರವಿಂದ ವಾಲಾ ಈಗಲೂ ಕೆಲವು ಕೃಷಿ ಕಾರ್ಮಿಕರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಲಾಕ್‌ಡೌನ್ ಕಾರಣ, ಪ್ರತಿಭಾ ಚಲತ್ವಾಡ್‌ನಲ್ಲಿ ಮಾರ್ಚ್ 2020ರವರೆಗೆ ಇದ್ದರು, (ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಪತಿಯ ಊರಿನಲ್ಲಿ ಉಳಿಯಲು ಮತ್ತೆ ಕಾರ್ಹೆಗೆ ತೆರಳಿದರು, ಅವರ ಪತಿ ಮೋಟಾರು ಬೈಕಿನಲ್ಲಿ ಜವಾಹರ್ ತಾಲ್ಲೂಕಿನ ನೀರಾವರಿ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡಲು ಹೋಗುತ್ತಾರೆ).

ಕಳೆದ ವರ್ಷದಲ್ಲಿ, ಪ್ರತಿಭಾ ತನ್ನ ಮಗನೊಂದಿಗೆ 3-4 ಬಾರಿ ಜೆಜೆ ಆಸ್ಪತ್ರೆಗೆ ಫಾಲೋ-ಅಪ್ ಚೆಕಪ್ ಮತ್ತು ಟೆಸ್ಟ್‌ಗಳಿಗಾಗಿ ಭೇಟಿ ನೀಡಬೇಕಾಯಿತು. ಫೆಬ್ರವರಿ 2020ರಲ್ಲಿ, ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಡೆಸುತ್ತಿರುವ ದಕ್ಷಿಣ ಮುಂಬೈನ ಹಾಜಿ ಅಲಿಯಲ್ಲಿರುವ ಅಖಿಲ ಭಾರತ ದೈಹಿಕ ಔಷಧ ಮತ್ತು ಪುನರ್ವಸತಿ ಸಂಸ್ಥೆಯಲ್ಲಿ ಪ್ರಿ-ಪ್ರಾಸ್ಥೆಟಿಕ್ ಫಿಸಿಯೋ ಥೆರಪಿಯನ್ನು ಪ್ರಾರಂಭಿಸಿದರು. ಅವರ ಬಲಗೈ ಸರಿಯಾಗಿ ಗುಣವಾಗುವವರೆಗೂ ಕಾಯುವಂತೆ ಅಲ್ಲಿನ ವೈದ್ಯರು ಹೇಳಿದ್ದರು. ಈ ಕೇಂದ್ರವು ಚಲತ್ವಾಡ್‌ನಿಂದ 160 ಕಿಲೋಮೀಟರ್ ದೂರದಲ್ಲಿದ್ದು ಆಕೆಯ ಮಗ ಸುಮೀತ್ ದಿನ ಬಿಟ್ಟು ದಿನ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು; ಹೋಗಿ ಬರಲು ಒಟ್ಟು ಎಂಟು ಗಂಟೆಯ ಪ್ರಯಾಣ ಹಿಡಿಸುತ್ತಿತ್ತು. "ನನ್ನ ಎಲ್ಲಾ ಗಾಯಗಳು ವಾಸಿಯಾದ ನಂತರ ಚಿಕಿತ್ಸೆಗೆ ಹಿಂತಿರುಗಿ ಎಂದು ಅವರು ನಮಗೆ ತಿಳಿಸಿದ್ದರು. ಆದರೆ ನನ್ನ ಬಲಗೈ ಪ್ರತಿದಿನ [ತಿಂಗಳುಗಳ ತನಕ] ನೋಯುತ್ತಿತ್ತು”ಎಂದು ಪ್ರತಿಭಾ ನೆನಪಿಸಿಕೊಳ್ಳುತ್ತಾರೆ. “ನನ್ನ ಮಗಳು ಮಾಧುರಿ ಎಲ್ಲಾ ಮನೆಕೆಲಸಗಳನ್ನು ನೋಡಿಕೊಂಡಳು ಮತ್ತು ಈಗಲೂ ಅವಳು ತನ್ನ ಕೈಗಳಿಂದ ನನಗೆ ಆಹಾರವನ್ನು ತಿನ್ನಿಸುತ್ತಾಳೆ. ನಾನು ಪಟ್ಟಿಯನ್ನು ಬಳಸಿ ತಿನ್ನಲು ಪ್ರಯತ್ನಿಸುತ್ತೇನಾದರೂ ಚಮಚ ಜಾರಿಹೋಗುತ್ತದೆ.”

ಪ್ರತಿಭಾ ಅವರ ಕಿರಿಯ ಮಗಳು ಮಾಧುರಿ (25) ಸಾವಂತವಾಡಿ ತಾಲ್ಲೂಕು ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಮೆಡಿಸಿನ್ ಕಲಿಯುತ್ತಿದ್ದಾರೆ. ಜುಲೈ 2019ರಲ್ಲಿ ಜೆಜೆ ಆಸ್ಪತ್ರೆಯಲ್ಲಿ ಪ್ರತಿಭಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ಪರೀಕ್ಷೆಗಳು ನಡೆಯುತ್ತಿದ್ದವು ಹೀಗಾಗಿ ಆಕೆಗೆ ತಾಯಿಯೊಂದಿಗೆ ಇರಲು ಸಾಧ್ಯವಾಗಲಿಲ್ಲ. ಅವರು ಹೇಳುತ್ತಾರೆ, "ಆದರೆ ದೇವರು ನನ್ನ ತಾಯಿಗೆ ನಮಗಾಗಿ ಹೊಸ ಜೀವನವನ್ನು ಕೊಟ್ಟನು. ಈಗ ನಾನು ಈ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡಲು ನಾನು ಎಲ್ಲವನ್ನು ಮಾಡುತ್ತೇನೆ. ಕೆಲವೊಮ್ಮೆ ಅವರು ತನ್ನ ಕೈ ಮತ್ತು ಕಾಲುಗಳನ್ನು ಕತ್ತರಿಸಿ ಹಾಕಿದ್ದಕ್ಕಾಗಿ ಬಹಳಷ್ಟು ಅಳುತ್ತಾರೆ. ಈ ಮೊದಲು ಅವರು ನಮಗಾಗಿ ಬಹಳಷ್ಟು ಮಾಡಿದ್ದಾರೆ - ಈಗ ನಮ್ಮ ಸರದಿ. ನಾವು ನಿಮಗೆ ಸಹಾಯ ಮಾಡಲು ಇಲ್ಲಿದ್ದೇವೆ, ನಾವು ನಿಮ್ಮೊಂದಿಗಿದ್ದೇವೆ  ನಾವು ಮಕ್ಕಳು ನಿಮ್ಮ ಕೈ ಮತ್ತು ಕಾಲುಗಳಾಗುತ್ತೇವೆ ಎಂದು ನಾವು ಅವರಿಗೆ ಭರವಸೆ ನೀಡುತ್ತೇವೆ.” ಪ್ರತಿಭಾ ಅವರ ಹಿರಿಯ ಮಗಳು, 29 ವರ್ಷದ ಪ್ರಣಾಲಿ ದರೋತ್, ಜಿಲ್ಲಾ ಕೃಷಿ ಕಚೇರಿಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿದ್ದು ಅವರಿಗೆ ಒಂದು ವರ್ಷದ ಮಗನಿದ್ದಾನೆ.

ಪ್ರತಿಭಾ ಮತ್ತು ಅವರ ಕುಟುಂಬ ಈಗ ಹಾಜಿ ಅಲಿ ಕೇಂದ್ರದಿಂದ ಬರಲಿರುವ ಆಕೆಯ ಪ್ರಾಸ್ಥೆಟಿಕ್ ಕೈಕಾಲುಗಳಿಗಾಗಿ ಕುತೂಹಲದಿಂದ ಕಾಯುತ್ತಿದೆ - ಅಲ್ಲಿಂದ ಅವರಿಗೆ ಸ್ಟಂಪ್ ಪ್ರೊಟೆಕ್ಟರ್‌ಗಳನ್ನು ನೀಡಲಾಯಿತು. "ನಾನು ಮಾರ್ಚ್ನಲ್ಲಿ ನನ್ನ ಕೈ ಕಾಲುಗಳನ್ನು [ಪ್ರಾಸ್ತೆಟಿಕ್ಸ್] ಮರಳಿ ಪಡೆಯಲಿದ್ದೇನೆ. ಅವುಗಳನ್ನು ಈಗಾಗಲೇ ನನ್ನ ಗಾತ್ರಕ್ಕೆ ಅನುಗುಣವಾಗಿ ತಯಾರಿಸಿ ಅಲ್ಲಿಯೇ ಇರಿಸಲಾಗಿದೆ,” ಎಂದು ಅವರು ಹೇಳುತ್ತಾರೆ. “ಆದರೆ ಕೆಲವು ತಿಂಗಳುಗಳ ನಂತರ [ಲಾಕ್‌ಡೌನ್ ಕಾರಣ] ಬನ್ನಿ ಎಂದು ವೈದ್ಯರು ನಮಗೆ ಸಂದೇಶ ಕಳಿಸಿದ್ದಾರೆ. ಕೇಂದ್ರವು ಮತ್ತೆ ತೆರೆದಿರುವಾಗಲೆಲ್ಲಾ, ನಾನು ಮತ್ತೆ ನನ್ನ ತರಬೇತಿಯನ್ನು ಪಡೆಯುತ್ತೇನೆ ಮತ್ತು ನಂತರ ನನಗೆ ತೋಳುಗಳನ್ನು ಜೋಡಿಸುತ್ತಾರೆ.”

Some of Pratibha's students: 'Their parents are really poor. How will they get a phone for online education?' she asks. 'School has always been my whole world. Being with kids also helps me feel like I am normal again'
PHOTO • Shraddha Agarwal

ಪ್ರತಿಭಾ ಅವರ ಕೆಲವು ವಿದ್ಯಾರ್ಥಿಗಳು: ಅವರು ಕೇಳುತ್ತಾರೆ, 'ಅವರ ಪೋಷಕರು ನಿಜಕ್ಕೂ ಬಡವರು. ಆನ್‌ಲೈನ್ ಶಿಕ್ಷಣಕ್ಕಾಗಿ ಅವರು ಫೋನ್ ಎಲ್ಲಿಂದ ತರುತ್ತಾರೆ? ಶಾಲೆ ಯಾವತ್ತಿಗೂ ನನ್ನ ಜಗತ್ತು. ಮಕ್ಕಳೊಂದಿಗಿರುವುದು ನನಗೆ ಮತ್ತೆ ಮೊದಲಿನಂತಾಗಲು ಸಹಾಯ ಮಾಡುತ್ತದೆ.'

ಜನವರಿಯಿಂದ, ಪ್ರತಿಭಾ ತನ್ನ ಎರಡೂ ಕಾಲುಗಳಿಗೆ ಜೋಡಿಸಲಾದ ಮೊಣಕಾಲಿನ ಪ್ಯಾಡ್ ಬಳಸಿ ನಡೆಯುತ್ತಿದ್ದಾರೆ. “ಕೇಂದ್ರವು ಇದನ್ನು ನೀಡಲು ಕಾರಣವೆಂದರೆ ಇದು ನನಗೆ [ಪ್ರಾಸ್ಥೆಟಿಕ್ ಕೈಕಾಲುಗಳೊಂದಿಗೆ] ನಡೆಯಲು ಸುಲಭವಾಗಿಸುತ್ತದೆ ಮತ್ತು ನನ್ನ ಸಮತೋಲನಕ್ಕೆ ಸಹ ಸಹಾಯ ಮಾಡುತ್ತದೆ. ಆರಂಭದಲ್ಲಿ, ಇದು ಬಹಳಷ್ಟು ನೋವುಂಟು ಮಾಡುತ್ತದೆ. ಇವುಗಳನ್ನು ಬಳಸಿ ನಡೆಯಲು ನನಗೆ ಒಂದು ತಿಂಗಳು ಬೇಕಾಯಿತು,” ಎಂದು ಅವರು ಹೇಳುತ್ತಾರೆ. ಪುನರ್ವಸತಿ ಕೇಂದ್ರವು ಪ್ರಾಸ್ಥೆಟಿಕ್ಸ್ ಬಳಸಿ ಕುಳಿತುಕೊಳ್ಳುವುದು, ನಿಲ್ಲುವುದು ಮತ್ತು ಇತರ ಮೂಲಭೂತ ಚಲನೆಗಳನ್ನು ಹೇಗೆ ಮಾಡಬೇಕೆಂದು ಪುನಃ ಕಲಿಯಲು ಸಹಾಯ ಮಾಡಿತು ಮತ್ತು ಸ್ನಾಯುಗಳನ್ನು ಬಲಪಡಿಸಲು ಯೋಗ ಮತ್ತು ಇತರ ವ್ಯಾಯಾಮಗಳನ್ನು ಕಲಿಸಿತು. ಜೊತೆಗೆ ವೆಲ್ಕ್ರೋ ಪಟ್ಟಿಗಳನ್ನು ಬಳಸಿ ಚಮಚ, ಪೆನ್ ಅಥವಾ ಸೀಮೆಸುಣ್ಣವನ್ನು ತನ್ನ ತೋಳುಗಳಿಂದ ಎತ್ತುವುದನ್ನು ಕಲಿಸಲಾಯಿತು.

ಕಳೆದ ವರ್ಷ ನಡೆದ ಅಂಗಚ್ಛೇದನದ ನಂತರ, ಝಡ್‌ಪಿ ಶಾಲೆಯಲ್ಲಿ ಶಿಕ್ಷಕರಾಗಿ ಪ್ರತಿಭಾ ಅವರ ಕೆಲಸ ಸ್ಥಗಿತಗೊಂಡಿತು. ತದನಂತರ ಮಾರ್ಚ್‌ ತಿಂಗಳಿನಲ್ಲಿ ಕೋವಿಡ್ -19 ಲಾಕ್ಡೌನ್ ಬಂದಿತು. ಲಾಕ್ ಡೌನ್ ಸಮಯದಲ್ಲಿ ಹಳ್ಳಿಯ ಮಕ್ಕಳು ಅಧ್ಯಯನ ಮಾಡಲು ಕಷ್ಟಪಡುತ್ತಿರುವುದು ಅವರ ಗಮನಕ್ಕೆ ಬಂದಿತು. ಅವರು ಅಲ್ಲಿ ಇಲ್ಲಿ ಅಲೆದಾಡುವುದು ಅಥವಾ ಹೊಲಗಳಲ್ಲಿ ಕೆಲಸ ಮಾಡುವುದನ್ನು ಅವರು ಕಾಣುತ್ತಿದ್ದರು. “ಇವರು ಬಡವರು. ಅವರಿಗೆ ಆನ್‌ಲೈನ್ ಶಿಕ್ಷಣ ಅರ್ಥವಾಗುವುದಿಲ್ಲ” ಎಂದು ಅವರು ಹೇಳುತ್ತಾರೆ. “ಅವರ ಪೋಷಕರು ನಿಜವಾಗಿಯೂ ಬಡವರು. ಆನ್‌ಲೈನ್ ಶಿಕ್ಷಣಕ್ಕಾಗಿ ಅವರು ಹೇಗೆ ಫೋನ್ ಖರೀದಿಸುತ್ತಾರೆ?”

ಈ ಕಾರಣಕ್ಕಾಗಿ ಪ್ರತಿಭಾ ಮಕ್ಕಳಿಗೆ ಉಚಿತವಾಗಿ ಕಲಿಸಲು ನಿರ್ಧರಿಸಿದರು. “ಆದಿವಾಸಿ ಮಕ್ಕಳ ಪರಿಸ್ಥಿತಿ ಇಲ್ಲಿ ತುಂಬಾ ಕೆಟ್ಟದಾಗಿದೆ. ಅವರಿಗೆ ಎರಡು ಹೊತ್ತಿನ ಆಹಾರ ಸಿಗುವುದು ಕೂಡ ಬಹಳ ಕಷ್ಟ. ಕೆಲವೊಮ್ಮೆ ನನ್ನ ಮಗಳು ಹಸಿವಿನಿಂದ ಬರುವ ಮಕ್ಕಳಿಗೆ ಅಡುಗೆ ಮಾಡುತ್ತಾಳೆ. ನಾವು ಸಾಮಾನ್ಯವಾಗಿ ಅವರಿಗೆ ಬಾಳೆಹಣ್ಣುಗಳನ್ನು ನೀಡುತ್ತೇವೆ, ಆದರೆ ವಿಶೇಷ ದಿನಗಳಲ್ಲಿ ನಾವು ಫರ್ಸಾಣ್‌ (ಮಹಾರಾಷ್ಟ್ರ, ಗುಜರಾತ್‌ ಶೈಲಿಯ ತಿಂಡಿ) ಮತ್ತು ಚಾಕೊಲೇಟ್‌ಗಳನ್ನು ವಿತರಿಸುತ್ತೇವೆ.”

ಆದರೆ, ಅವರು ಹೇಳುತ್ತಾರೆ, “ಫಸಲು ಕಟಾವಿನ ಸಮಯವಾಗಿರುವುದರಿಂದ ಅನೇಕರು [ಮಕ್ಕಳು] [ತನ್ನ ಮನೆಯಲ್ಲಿ ತರಗತಿಗಳಿಗೆ] ಬರುವುದನ್ನು ನಿಲ್ಲಿಸಿದರು. ಅವರ ಪೋಷಕರು ಅವರನ್ನು ಹೊಲಗಳಿಗೆ ಕರೆದೊಯ್ಯುತ್ತಾರೆ. ಅಥವಾ ಮಕ್ಕಳು ತಮ್ಮ ಕಿರಿಯ ಸಹೋದರ ಸಹೋದರಿಯರನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾಗುತ್ತದೆ. ನನ್ನ ಕಾಲುಗಳಿದ್ದಿದ್ದರೆ ನಾನು ಈ ಹಳ್ಳಿಯ ಪ್ರತಿಯೊಂದು ಮನೆಗೂ ಹೋಗಿ ಪೋಷಕರು ತಮ್ಮ ಮಕ್ಕಳನ್ನು ನನ್ನ ಬಳಿಗೆ ಕಳುಹಿಸುವಂತೆ ಮಾಡುತ್ತಿದ್ದೆ.”

ಆಗಸ್ಟ್ 2020ರಲ್ಲಿ, ಪ್ರತಿಭಾ ಭಿವಾಂಡಿಯ ಝಡ್‌ಪಿ ಶಾಲೆಯಿಂದ ಕಾರ್ಹೆ ಗ್ರಾಮಕ್ಕೆ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದರು – ಅವರ ಕೆಲಸ ಈಗಲೂ ಉಳಿದಿದೆ, ಮತ್ತು ಆಗಸ್ಟ್ 2019ರವರೆಗೆ ಮೂರು ತಿಂಗಳ ಸಂಬಳ ಪಡೆದ ನಂತರ ಸಂಬಳ ರಹಿತ ರಜೆಯಲ್ಲಿದ್ದಾರೆ. “ಶಾಲೆಗಳು ಮತ್ತೆ ತೆರೆಯುವವರೆಗೆ, ನಾನು ನನ್ನ ಮನೆಯಲ್ಲಿ ಮಕ್ಕಳಿಗೆ ಕಲಿಸುವುದನ್ನು ಮುಂದುವರಿಸುತ್ತೇನೆ,” ಎಂದು ಅವರು ಹೇಳುತ್ತಾರೆ. ಪ್ರಾಸ್ಥೆಟಿಕ್ ಕೈಕಾಲುಗಳು, ಅವರ ಕೆಲಸವನ್ನು ಮತ್ತೆ ಮಾಡಲು ಸಹಾಯ ಮಾಡಲಿದೆ ಎಂದು ಭರವಸೆಯಿಂದ ಹೇಳುತ್ತಾರೆ.

“ನಾನು ನನ್ನ ಸ್ವಂತ ಕಾಲುಗಳ ಮೇಲೆ ನಿಲ್ಲಲು ಬಯಸುತ್ತೇನೆ. ಮತ್ತೆ ಶಾಲೆಗೆ ಹೋಗಿ ಕಲಿಸಲು ಬಯಸುತ್ತೇನೆ. ನನ್ನ ಸ್ವಂತ ಕೆಲಸಗಳನ್ನು ನಾನೇ ಮಾಡಿಕೊಳ್ಳಲು ಬಯಸುತ್ತೇನೆ,” ಎಂದು ಅವರು ಹೇಳುತ್ತಾರೆ. "ಶಾಲೆ ಯಾವತ್ತಿಗೂ ನನ್ನ ಪೂರ್ಣ ಪ್ರಪಂಚವಾಗಿದೆ. ಮಕ್ಕಳೊಂದಿಗೆ ಇರುವುದು ನಾನು ಮತ್ತೆ ಮೊದಲಿನಂತಾಗಿರುವೆ ಎಂದು ಭಾವಿಸಲು ಸಹ ಸಹಾಯ ಮಾಡುತ್ತದೆ,” ಎಂದು ಪ್ರತಿಭಾ ಹೇಳುತ್ತಾರೆ, ಅವರು ತಾನಾಗಿಯೇ ಸೋಫಾದಿಂದ ಎದ್ದು ಮುಂಭಾಗದ ಬಾಗಿಲಲ್ಲಿ ನನ್ನನ್ನು ನೋಡಲು ಪ್ರಯತ್ನಿಸುತ್ತಾರೆ. ಆದರೆ ಅವರ ಮೊಣಕಾಲಿನ ಪ್ಯಾಡ್ಗಳನ್ನು ಜೋಡಿಸಲಾಗಿರಲಿಲ್ಲ, ಇದರಿಂದಾಗಿ ತನ್ನ ಸಮತೋಲನವನ್ನು ಕಳೆದುಕೊಂಡು ಬಹುತೇಕ ಬೀಳುತ್ತಾರೆ. ತನ್ನ ಸಮತೋಲನವನ್ನು ಮರಳಿ ಪಡೆಯುತ್ತಾರೆ, ಮುಖದಲ್ಲಿ ಅಸಮಧಾನ ಕಾಣುತ್ತಿತ್ತು. "ಮುಂದಿನ ಬಾರಿ ಬಂದಾಗ ನಮ್ಮೊಂದಿಗೆ ಊಟ ಮಾಡಬೇಕು" ಎಂದು ಹೇಳುತ್ತಾ, ಸೋಫಾದ ಮೇಲೆ ಒರಗಿ ವಿದಾಯ ಹೇಳುತ್ತಾರೆ.

ಅನುವಾದ: ಶಂಕರ ಎನ್. ಕೆಂಚನೂರು

Shraddha Agarwal

Shraddha Agarwal is a Reporter and Content Editor at the People’s Archive of Rural India.

Other stories by Shraddha Agarwal
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru