ಅಂಬಾಪಾನಿ ಗ್ರಾಮದ ಜನರು ಒಬ್ಬ ಅಥವಾ ಇಬ್ಬರು ಸಂಸದರಿಗೆ ಆತಿಥ್ಯ ನೀಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ತಮ್ಮ ಮನೆಯ ಬೀಸುಕಲ್ಲಿನಿಂದ ತಾಜಾ ಹಿಟ್ಟು ಬೀಸಿ ತಯಾರಿಸಿದ ಜೋಳದ ಭಕ್ರಿ ಹಾಗೂ ಮಕ್ಕಳು ಆಡಲು ಹೋದಾಗ ಕಿತ್ತು ತಂದ ಚರೋಲಿ ಹಣ್ಣುಗಳನ್ನು ಅವರಿಗೆ ನೀಡಿ ಉಪಚರಿಸುವ ದಿನಕ್ಕಾಗಿ ಈ ಊರಿನ ಜನರು ಕಾಯುತ್ತಿದ್ದಾರೆ.

ಜನರು ಬಿದಿರು ಮತ್ತು ಸಗಣಿ ಬೆರೆಸಿ ತಮ್ಮ ಮನೆಗಳನ್ನು ನಿರ್ಮಿಸಿ ಐದು ದಶಕಗಳು ಕಳೆದಿವೆ. ಕಳೆದ ಐದು ದಶಕಗಳಲ್ಲಿ ಇಲ್ಲಿಗೆ ಒಬ್ಬ ರಾಜಕೀಯ ಪ್ರತಿನಿಧಿಯೂಭೇಟಿ ನೀಡಿಲ್ಲ. ಸತ್ಪುರದ ಕಲ್ಲಿನ ಇಳಿಜಾರುಗಳ ನಡುವೆ ಹರಡಿರುವ ಈ ಊರು ಮೋಟಾರು ರಸ್ತೆಯಿಂದ 13 ಕಿಲೋಮೀಟರ್ ಎತ್ತರದಲ್ಲಿದೆ.

818 (ಜನಗಣತಿ 2011) ಜನಸಂಖ್ಯೆಯನ್ನು ಹೊಂದಿರುವ ಅಂಬಾಪಾನಿಗೆ ರಸ್ತೆ ಸಂಪರ್ಕವಿಲ್ಲ, ವಿದ್ಯುತ್ ಮಾರ್ಗವಿಲ್ಲ, ಹರಿಯುವ ನೀರಿನ ವ್ಯವಸ್ಥೆಯಿಲ್ಲ, ಮೊಬೈಲ್ ಫೋನ್ ನೆಟ್ವರ್ಕ್ ಇಲ್ಲ, ನ್ಯಾಯಬೆಲೆ ಅಂಗಡಿಯಿಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ ಮತ್ತು ಅಂಗನವಾಡಿ ಕೇಂದ್ರವಿಲ್ಲ. ನಿವಾಸಿಗಳೆಲ್ಲರೂ ಪವಾರರಾಗಿದ್ದು, ಅವರನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ. 120 ಕುಟುಂಬಗಳಲ್ಲಿ ಹೆಚ್ಚಿನವು ತಮ್ಮ ವಂಶಾವಳಿಯನ್ನು ಮಧ್ಯಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವ ನಾಲ್ಕು ಅಥವಾ ಐದು ದೊಡ್ಡ ಕುಲಗಳೊಂದಿಗೆ ಗುರುತಿಸಿಕೊಳ್ಳುತ್ತವೆ, ಇದು ಉತ್ತರಕ್ಕೆ ಕೇವಲ 30 ಕಿ.ಮೀ ದೂರದಲ್ಲಿದೆ.

ನೆಟ್ವರ್ಕ್‌ ಸಿಗದ ಈ ಊರಿನಲ್ಲಿ ಫೋನ್‌ ಅಥವಾ ಟಿವಿ ಕೂಡಾ ಇಲ್ಲ. ಪ್ರಧಾನಿ ಮೋದಿಯವರ ಮಂಗಳಸೂತ್ರದ ಕುರಿತಾದ ಎಚ್ಚರಿಕೆಯಿಂದ ಹಿಡಿದು ಕಾಂಗ್ರೆಸ್‌ ಪಕ್ಷದ ಸಂವಿಧಾನ ರಕ್ಷಣೆಯ ವಿಷಯದ ತನಕ 2024ರ ಲೋಕಸಭಾ ಚುನಾವಣೆಯ ಪ್ರಚಾರದ ಕುರಿತಾದ ವಿಷಯಗಳು ಅಂಬಾಪಾನಿ ಮತದಾರರನ್ನು ತಲುಪಿಲ್ಲ.

ಚುನಾವಣೆಯಲ್ಲಿ ತಮ್ಮನ್ನು ಆಕರ್ಷಿಸಬಹುದಾದ ಆಶ್ವಾಸನೆಯೆಂದರೆ “ಬಹುಶಃ ರಸ್ತೆ” ಎಂದು ಉಂಗ್ಯಾ ಗುರ್ಜಾ ಪವಾರ ಹೇಳುತ್ತಾರೆ. 56 ವರ್ಷದ ಅವರು ಈ ಕುಗ್ರಾಮದ ಮೂಲ ನಿವಾಸಿಗಳ ವಂಶಗಳಲ್ಲಿ ಒಂದಕ್ಕೆ ಸೇರಿದವರು. ಸುಮಾರು ಒಂದು ದಶಕದ ಹಿಂದೆ ಅವರು ಒಂದಷ್ಟು ಹಣವುಳಿಸಿ ಉಕ್ಕಿನ ಅಲ್ಮೇರಾವೊಂದನ್ನು ಖರೀದಿಸಿದರು. 75 ಕೇಜಿ ತೂಕದ ಆ ಅಲ್ಮೆರಾವನ್ನು ನಾಲ್ವರು ಗಂಡಸರು “ಸ್ಟ್ರೆಚರ್‌ ರೀತಿಯಲ್ಲಿ ಹಿಡಿದು” ಎತ್ತರದಲ್ಲಿರುವ ಮನೆಗೆ ಸಾಗಿಸಿದ್ದರು.

ಇಲ್ಲಿಂದ 13 ಕಿ,ಮೀ. ದೂರದಲ್ಲಿರುವ ಮೊಹ್ರಾಲೆ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ದ್ವಿಚಕ್ರ ವಾಹನಗಳಲ್ಲಿ ಸಾಗಿಸಲಾಗುತ್ತದೆ. ಒಂದು ಬಾರಿಗೆ ಇಳಿಜಾರು ಹಾದಿ ಒಂದೊಂದು ಕ್ವಿಂಟಾಲ್‌ ಧಾನ್ಯಗಳನ್ನು ಸಾಗಿಲಾಗುತ್ತದೆ. ಈ ದಾರಿಯು ಕಡಿದಾಗಿದ್ದು ಹಲವು ಏರು ತಗ್ಗುಗಳಿಂದ ಕೂಡಿದೆ. ಜೊತೆಗೆ ಕಡಿದಾದ ತಿರುವುಗಳು ಸಡಿಲ ಜಲ್ಲಿಕಲ್ಲು, ಹಾಗೂ ಸಣ್ಣ ಜರಿಗಳು ಮತ್ತು ಕೆಲವೊಮ್ಮೆ ಇಲ್ಲಿ ಕರಡಿಗಳು ಸಹ ಎದುರಾಗುತ್ತವೆ.

“ಆದರೆ ರಸ್ತೆಯ ಆಗಮನ ಮರ ಕಡಿಯುವಿಕೆಯನ್ನು ಹೆಚ್ಚಿಸುವ ಸಾಧ್ಯತೆಯ ಕುರಿತಾಗಿಯೂ ಯೋಚಿಸಬೇಕಾಗುತ್ತದೆ” ಎಂದು ಉಂಗ್ಯಾ ಹೇಳುತ್ತಾರೆ.

PHOTO • Kavitha Iyer
PHOTO • Kavitha Iyer

ಎಡ: ಅಂಬಾಪಾನಿಯಲ್ಲಿರುವ ತಮ್ಮ ಮನೆಯ ಮುಂದೆ ಉಂಗ್ಯಾ ಪವಾರ ಮತ್ತು ಅವರ ಕುಟುಂಬ. ಬಲ: ಉಂಗ್ಯಾ ಅವರ ಪತ್ನಿ ಬಾಧಿಬಾಯಿಯವರ ಕಾಲ್ಬೆರಳು ಸೌದೆ ಕಡಿಯುವ ಸಮಯದಲ್ಲಿ ಕತ್ತಿ ತಗುಲಿ ಬಹುತೇಕ ಕತ್ತರಿಸಿ ಹೋಗಿದೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಹತ್ತಿರದಲ್ಲೆಲ್ಲೂ ಆಸ್ಪತ್ರೆಗಳಿಲ್ಲ

PHOTO • Kavitha Iyer
PHOTO • Kavitha Iyer

ಊರಿನಲ್ಲಿನ ಉಂಗ್ಯಾ ಪವಾರ ಅವರ ಮನೆ (ಎಡಕ್ಕೆ). ಅವರು ಈ ಕುಗ್ರಾಮದ ಮೂಲ ನಿವಾಸಿಗಳಲ್ಲಿ ಒಬ್ಬರ ವಂಶಕ್ಕೆ ಸೇರಿದವರು. ಉಂಗ್ಯಾ ಮತ್ತು ಬಾಧಿಬಾಯಿಯವರ ಮಗಳು ರೆಹೆಂಡಿ ಪವಾರ, ಉಂಗ್ಯಾ ಮತ್ತು ಬಾಧಿಬಾಯಿಯವರ ಮಗಳ ಗಂಡನ ಮನೆಯ ಹೊರಗಿನ ಚರೋಲಿ ಮರ (ಬಲ). ಮರವನ್ನು ಹತ್ತುವುದು ಮತ್ತು ಅದರ ಸಿಹಿ ಹಣ್ಣುಗಳನ್ನು ಕೀಳುವುದು ಹಳ್ಳಿಯ ಮಕ್ಕಳ ಪಾಲಿಗೆ ಜನಪ್ರಿಯ ಆಟ

ಉಂಗ್ಯಾ ಅವರ ಪತ್ನಿ ಕಾಲ್ಬೆರಳಿನ ಮೇಲೆ ಕತ್ತಿ ಬಿದ್ದು ಗಾಯವಾಗಿ ಅದು ವಾಸಿಯಾಗುವುದನ್ನು ತಿಂಗಳಿನಿಂದ ಕಾಯುತ್ತಿದ್ದಾರೆ. ಗಾಯ ಆಳವಾಗಿದೆ ಆದರೆ ಅವರು ಅದಕ್ಕೆ ಬ್ಯಾಂಡೇಜ್‌ ಮಾಡಿಸಿಲ್ಲ. ಆಸ್ಪತ್ರೆಗೆ ಏಕೆ ಹೋಗಿಲ್ಲ ಎಂದು ಕೇಳಿದಾಗ, “ಮೊಹ್ರಾಲಾ ಕಿಂವಾ ಹರಿಪುರಪರ್ಯಂತ್ ಜಾವೆ ಲಗ್ತೆ [ಮೊಹ್ರಾಲೆ ಅಥವಾ ಹರಿಪುರಕ್ಕೆ ಹೋಗಬೇಕಿತ್ತು]” ಎಂದು ಅವರು ಹೇಳಿದರು. “ಯಾವ ಪಕ್ಷವಾದರೂ ಇಲ್ಲಿ ಒಂದು ಒಳ್ಳೆಯ ದವಾಖಾನಾ [ಕ್ಲಿನಿಕ್] ಮಾಡಿಸುತ್ತದೆಯೇ?” ಎಂದು ಅವರು ನಗುತ್ತಾರೆ.

ಅಂಬಾಪಾನಿಯಲ್ಲಿ ಕನಿಷ್ಠ ಒಂದು ಮಗುವಾದರೂ ಅಪೌಷ್ಟಿಕತೆಯಿಂದ ಬಳಲುತ್ತಿರುತ್ತದೆ. ಆದರೆ ಆ ಪುಟ್ಟ ಹುಡುಗಿ ಎಷ್ಟು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎನ್ನುವುದು ಊರಿನವರಿಗೆ ಗೊತ್ತಿರುವುದಿಲ್ಲ. ಇಲ್ಲಿಗೆ ಅಂಗನವಾಡಿ ಅನುಮೋದನೆಗೊಂಡು ಒಂದು ದಶಕ ಕಳೆದಿದೆ. ಆದರೆ ಇದುವರೆಗೂ ಅಂಗನವಾಡಿ ನಿರ್ಮಾಣಗೊಂಡಿಲ್ಲ ಎಂದು ಊರಿನ ಜನರು ಹೇಳುತ್ತಾರೆ.

ಇಲ್ಲಿ ಅಂಗನವಾಡಿ ಬದಲಿಗೆ ಮೊಹ್ರಾಲೆಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಂಬಾಪಾನಿಯ ಹೆಚ್ಚುವರಿ ಉಸ್ತುವಾರಿಯನ್ನು ಹೊಂದಿದ್ದಾರೆ ಮತ್ತು ಪ್ರತಿ ಕೆಲವು ವಾರಗಳಿಗೊಮ್ಮೆ ಫಲಾನುಭವಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಮನೆಗೆ ಕೊಂಡು ಹೋಗಲು ಪಡಿತರದ ಪ್ಯಾಕೇಜುಗಳನ್ನು ನೀಡಲು ಹಾಗೂ ಕಬ್ಬಿಣದಂಶದ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಪೂರೈಸಲು ಬಹಳ ಕಷ್ಟಪಟ್ಟು ಪ್ರಯಾಣಿಸುತ್ತಾರೆ. "ಇಲ್ಲಿ ಅಂಗನವಾಡಿ ಇದ್ದಿದ್ದರೆ, ಕನಿಷ್ಠ ಸಣ್ಣ ಮಕ್ಕಳು ಅಲ್ಲಿಗೆ ಹೋಗಿ ಏನನ್ನಾದರೂ ಕಲಿಯಬಹುದಿತ್ತು" ಎಂದು ಬಾಧಿಬಾಯಿ ಹೇಳುತ್ತಾರೆ. ಗ್ರಾಮದಲ್ಲಿ ಆರು ವರ್ಷದವರೆಗಿನ 50ಕ್ಕೂ ಹೆಚ್ಚು ಮಕ್ಕಳಿದ್ದಾರೆ, ಈ ವಯಸ್ಸಿನ ಗುಂಪು ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುವ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ಐಸಿಡಿಎಸ್)ಯ ಪ್ರಯೋಜನಕ್ಕೆ ಅರ್ಹವಾಗಿದೆ.

ಇಲ್ಲಿ ಹೆರಿಗೆಗಳನ್ನು ಸಾಂಪ್ರದಾಯಿಕವಾಗಿ ಮನೆಯಲ್ಲೇ ಮಾಡಲಾಗುತ್ತದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಕೆಲವು ಯುವತಿಯರು 13 ಕಿ.ಮೀ ದೂರದಲ್ಲಿರುವ ಮೊಹ್ರಾಲೆ ಅಥವಾ ಹರಿಪುರದ ಕ್ಲಿನಿಕ್ಕುಗಳಿಗೆ ಹೆರಿಗೆಗಾಗಿ ಹೋಗಿದ್ದಾರೆ.

ಉಂಗ್ಯಾ ಮತ್ತು ಬಾಧಿಬಾಯಿಗೆ ಐದು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳ ದೊಡ್ಡ ಕುಟುಂಬವಿದೆ. ಈ ಅನಕ್ಷರಸ್ಥ ದಂಪತಿಗಳು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಿದರು, ಆದರೆ ರಸ್ತೆ ಇಲ್ಲದ ಕಾರಣ ಅವರಿಗೆ ಈ ಗುರಿಯನ್ನು ತಲುಪಲಾಗಲಿಲ್ಲ.

ಕಡೆಗೂ ಸುಮಾರು ಎರಡು ದಶಕಗಳ ಹಿಂದೆ ಈ ಊರಿನಲ್ಲಿ ಶಾಲೆಯೊಂದು ಕಾಣಿಸಿಕೊಂಡಿತು. ಬಿದಿರು ಮತ್ತು ಹುಲ್ಲಿನ ಈ ಶಾಲೆಯ ರಚನೆಯನ್ನು ಬಹುಶಃ ಊರಿನಲ್ಲೇ ಹಳೆಯ ನಿರ್ಮಾಣವೆನ್ನಬಹುದು.

“ಒಬ್ಬ ಶಿಕ್ಷಕರನ್ನೂ ಈ ಶಾಲೆಗೆ ನೇಮಿಸಲಾಗಿತ್ತು. ಆದರೆ ತಹಸಿಲ್‌ನ ಬೇರೆಡೆಯಿಂದ ಯಾರಾದರೂ ಪ್ರತಿದಿನ ಇಲ್ಲಿಗೆ ಬರುತ್ತಾರೆಂದು ನಿಮಗೆ ಅನ್ನಿಸುತ್ತದೆಯೇ?” ಎಂದು ಅಂಬಾಪಾನಿ ನಿವಾಸಿ ಮತ್ತು ಅಂಬಾಪಾನಿಯ ಮತ್ತೊಬ್ಬ ಮೂಲ ನಿವಾಸಿ ಬಜ್ರಿಯಾ ಕಾಂಡ್ಲ್ಯ ಪವಾರ ಅವರ ಪುತ್ರ ರೂಪ್‌ ಸಿಂಗ್ ಪವಾರ ಕೇಳುತ್ತಾರೆ. ಅವರಿಗೆ ಇಬ್ಬರು ಪತ್ನಿಯರಿಂದ 15 ಮಕ್ಕಳಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಪರಿಣಿತ ಬೈಕ್ ಸವಾರರು ಮತ್ತು ಸ್ಥಳೀಯರು ಮಾತ್ರ ಈ 40 ನಿಮಿಷಗಳ ದಾರಿಯನ್ನು ಕ್ರಮಿಸುವ ಸಾಹಸ ಮಾಡುತ್ತಾರೆ. ಈ ದಾರಿ ದುರ್ಬಲ ಹೃದಯದವರಿಗಲ್ಲ ಎನ್ನುವ ಅವರು ಈ ಅರಣ್ಯ ಇಲಾಖೆಯ ಕಾವಲುಗಾರರು ಸಹ ಈ ದಾರಿಯಲ್ಲಿ ಕಳೆದು ಹೋಗಿದ್ದಾರೆ ಎನ್ನುತ್ತಾರೆ.

PHOTO • Kavitha Iyer
PHOTO • Kavitha Iyer

ಕಡೆಗೂ ಸುಮಾರು ಎರಡು ದಶಕಗಳ ಹಿಂದೆ ಈ ಊರಿನಲ್ಲಿ ಶಾಲೆಯೊಂದು ಕಾಣಿಸಿಕೊಂಡಿತು (ಎಡಕ್ಕೆ) . ಹಳ್ಳಿಯ ರೂಪಸಿಂಗ್ ಪವಾರ (ಬಲ) ಕೇಳುತ್ತಾರೆ, 'ಒಬ್ಬ ಶಿಕ್ಷಕರನ್ನೂ ಈ ಶಾಲೆಗೆ ನೇಮಿಸಲಾಗಿತ್ತು. ಆದರೆ ತಹಸಿಲ್‌ನ ಬೇರೆಡೆಯಿಂದ ಯಾರಾದರೂ ಪ್ರತಿದಿನ ಇಲ್ಲಿಗೆ ಬರುತ್ತಾರೆಂದು ನಿಮಗೆ ಅನ್ನಿಸುತ್ತದೆಯೇ?'

PHOTO • Kavitha Iyer

ಜಲ್ಗಾಂವ್ ಜಿಲ್ಲೆಯ ಯವಾಲ್ ತಾಲ್ಲೂಕಿನ ಅಂಬಾಪಾನಿ ಗ್ರಾಮಕ್ಕೆ ಹೋಗುವ ಏಕೈಕ ಮಾರ್ಗವಾದ 40 ನಿಮಿಷಗಳ ಅಪಾಯಕಾರಿ ಮೋಟಾರುಬೈಕ್ ಪ್ರಯಾಣದ ಕಚ್ಚಾ ದಾರಿ

ಬಾಧಿಬಾಯಿಯ ಮೊಮ್ಮಕ್ಕಳಲ್ಲಿ ಒಬ್ಬರಾದ ಬರ್ಕ್ಯಾ, ನೆರೆಯ ಚೋಪ್ಡಾ ತಹಸಿಲ್ನ ಧನೋರಾದಲ್ಲಿರುವ ಆಶ್ರಮ ಶಾಲೆಯಿಂದ (ವಿಶೇಷವಾಗಿ ಪರಿಶಿಷ್ಟ ಪಂಗಡಗಳು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ಸೇರಿದ ಮಕ್ಕಳಿಗಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ವಸತಿ ಶಾಲೆಗಳು) ಬೇಸಿಗೆ ರಜೆಗಾಗಿ ಮರಳಿದ್ದಾರೆ. ಇನ್ನೊಬ್ಬ ಮೊಮ್ಮಗ ಬೇರೆ ಆಶ್ರಮ ಶಾಲೆಗೆ ಹೋಗುತ್ತಾನೆ.

ಅಂಬಾಪಾನಿಯಲ್ಲಿ, ನಮಗೆ ಸ್ಟೀಲ್ ಲೋಟಗಳಲ್ಲಿ ಕುಡಿಯಲು ನದಿ ನೀರನ್ನು ಮತ್ತು ಸಣ್ಣ ಸೆರಾಮಿಕ್ ಕಪ್ಪುಗಳಲ್ಲಿ ಕಪ್ಪು ಚಹಾ ನೀಡಲಾಯಿತು. ಅದನ್ನು ನಮಗೆ ನೀಡಿದ ನಾಲ್ವರು ಯುವತಿಯರು ತಾವು ಶಾಲೆ ಮೆಟ್ಟಿಲನ್ನು ಹತ್ತಿದವರಲ್ಲ ಎಂದು ಹೇಳಿದರು.

ಬಾಧಿಬಾಯಿಯವರ ಮಗಳಾದ ರೆಹೆಂದಿಯವರ ಗಂಡನ ಮನೆ ಸುಮಾರು ಒಂದು ಅಥವಾ ಎರಡು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ತಲುಪಲು ಪವಾರ ಗಂಡಸರು ಸ್ವತಃ ನಿರ್ಮಿಸಿದ ಮಣ್ಣಿನ ದಾರಿಯಲ್ಲಿ ನಡೆದು ಹೋದರೆ ಬೆಟ್ಟದ ಹಾದಿಯಲ್ಲಿನ ಇಳಿಜಾರಿನ ದಾರಿ ದಾಟಿ ಮತ್ತೆ ಎತ್ತರಕ್ಕೆ ಹೋಗಬೇಕು.

ಜಾತಿ ಪ್ರಮಾಣಪತ್ರ ಪಡೆಯುವ ವಿಷಯದಲ್ಲಿ ಸರ್ಕಾರಿ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕೆನ್ನುವುದು ಕೆಲವು ಮತದಾರರ ಬಯಕೆ ಎಂದು ರೆಹೆಂದಿ ಹೇಳುತ್ತಾರೆ. ಗ್ರಾಮದ ಸುಮಾರು 20 ರಿಂದ 25 ಪ್ರತಿಶತದಷ್ಟು ಜನರು ಪಡಿತರ ಚೀಟಿಗಳನ್ನು ಹೊಂದಿಲ್ಲ ಎಂದು ಸುತ್ತಲೂ ನೆರೆದಿದಿದ್ದ ಇತರ ಪುರುಷರು ಹೇಳಿದರು.

ಪಡಿತರ ಅಂಗಡಿ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಮೊಹ್ರಾಲೆಯಿಂದ ದಕ್ಷಿಣಕ್ಕೆ ಸುಮಾರು 15 ಕಿ.ಮೀ ದೂರದಲ್ಲಿರುವ ಕೊರ್ಪವಾಲಿ ಗ್ರಾಮದಲ್ಲಿದೆ. ಸಾಂಸ್ಥಿಕ ಹೆರಿಗೆಗಳಿಲ್ಲದ ಕಾರಣ ಇಲ್ಲಿನ ಆರು ವರ್ಷ ಪ್ರಾಯದ ಮಕ್ಕಳಿಗೆ ಜನನ ಪ್ರಮಾಣಪತ್ರ ದೊರೆತಿಲ್ಲ. ಮತ್ತು ಇದರಿಂದಾಗಿ ಕುಟುಂಬಗಳು ಕಿರಿಯ ಸದಸ್ಯರಿಗೆ ಆಧಾರ್ ಕಾರ್ಡ್ ಪಡೆಯಲು ಅಥವಾ ಕುಟುಂಬದ ಪಡಿತರ ಚೀಟಿಯಲ್ಲಿ ಫಲಾನುಭವಿಗಳಾಗಿ ಸೇರಿಸಲು ಪರದಾಡಬೇಕಾಗುತ್ತದೆ.

ನೀರಿನ ಲಭ್ಯತೆ ಇಲ್ಲಿನ ರಾಜಕಾರಣಿಗಳು ಗಮನಿಸಬೇಕಾದ ಮತ್ತೊಂದು ಅಂಶ ಎಂದು ಇಲ್ಲಿನ ಮಹಿಳೆಯರು ಹೇಳುತ್ತಾರೆ.

ಊರಿನಲ್ಲಿ ಬಾವಿ, ಬೋರ್‌ವೆಲ್‌, ಹ್ಯಾಂಡ್‌ ಪಂಪ್‌ ಅಥವಾ ಪೈಪ್‌ ಲೈನುಗಳಂತಹ ಯಾವುದೇ ವ್ಯವಸ್ಥೆ ಲಭ್ಯವಿಲ್ಲ. ಗ್ರಾಮಸ್ಥರು ಕುಡಿಯುವ ನೀರು ಮತ್ತು ನೀರಾವರಿಗಾಗಿ ತಾಪಿಯ ಪಶ್ಚಿಮಕ್ಕೆ ಹರಿಯುವ ಮಳೆಗಾಲದ ತೊರೆಗಳು ಮತ್ತು ಉಪನದಿಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ತೀವ್ರವಾದ ನೀರಿನ ಕೊರತೆ ಅಪರೂಪ, ಆದರೆ ಬೇಸಿಗೆ ಕಳೆದಂತೆ ನೀರಿನ ಗುಣಮಟ್ಟವು ಹದಗೆಡುತ್ತದೆ. “ಕೆಲವೊಮ್ಮೆ ನಾವು ಗಂಡಸರ ಬಳಿ ಕ್ಯಾನ್‌ ಕಳಿಸಿಕೊಟ್ಟು ಮೋಟಾರುಬೈಕುಗಳಲ್ಲಿ ನೀರು ತರಿಸಿಕೊಳ್ಳುತ್ತೇವೆ” ಎಂದು ರೆಹೆಂದಿ ಹೇಳುತ್ತಾರೆ. ನೀರು ತರುವ ವಿಷಯದಲ್ಲಿ ಮಹಿಳೆಯರು ಮತ್ತು ಹುಡುಗಿಯರು ದಿನಕ್ಕೆ ಹಲವಾರು ಬಾರಿ ನೀರಿನ ಕೊಡ ಹೊತ್ತು ತಿರುಗುತ್ತಾರೆ. ಕೆಲವೊಮ್ಮೆ ಬರಿಗಾಲಿನಲ್ಲಿ ಕಚ್ಚಾ ದಾರಿಯಲ್ಲಿ ನೀರಿಗೆ ಹೋಗಬೇಕಾಗುತ್ತದೆ.

PHOTO • Kavitha Iyer
PHOTO • Kavitha Iyer

ಅಂಬಾಪಾನಿಯಲ್ಲಿ ಪ್ರಾಥಮಿಕ ಪೈಪ್ ಲೈನ್ ವ್ಯವಸ್ಥೆಯ ಮೂಲಕ ಶುದ್ಧ ಬೆಟ್ಟದ ನೀರು ಹರಿಯುತ್ತದೆ. ಗ್ರಾಮದಲ್ಲಿ ಬಾವಿ, ಬೋರ್ವೆಲ್, ಹ್ಯಾಂಡ್ ಪಂಪ್ ಅಥವಾ ಪೈಪ್ ಲೈನ್ ರೀತಿಯ ಸೌಲಭ್ಯಗಳು ಇಲ್ಲ

ಶಾಲಾ ಕಟ್ಟಡದ ಕಡೆಗೆ ಹೋಗುವ ಮಣ್ಣಿನ ಹಾದಿಯ ಉದ್ದಕ್ಕೂ, ಕಮಲ್ ರಹಂಗ್ಯ ಪವಾರ ಸಾಲ್ ಮರದ ತೊಗಟೆಯನ್ನು ನೋಡುತ್ತಾ, ಅದರ ಮೇಲೆ ಚೂಪಾದ ಅಂಚುಗಳನ್ನು ಹೊಂದಿರುವ ಶಂಕು ಆಕಾರದ ಲೋಹದ ಕಪ್ ಒಂದನ್ನು ಉಜ್ಜುತ್ತಿದ್ದರು. ಸಾಲ್ ಮರದಿಂದ (ಶೋರಿಯಾ ರೊಬಸ್ಟಾ) ಸುಮಾರು ಮೂರು ಕಿಲೋಗ್ರಾಂಗಳಷ್ಟು ಪರಿಮಳಯುಕ್ತ ರಾಳವನ್ನು ಹೊತ್ತೊಯ್ಯುವ ರೆಕ್ಸಿನ್ ಚೀಲವನ್ನು ಅವರಿಗೆ ಹೆಗಲಿಗೆ ಹಾಕಿಕೊಂಡಿದ್ದರು. ಅದು ಮುಂಜಾನೆಯ ಹೊತ್ತು. ಅದರ ಹಿಂದಿನ ದಿನ ಮಧ್ಯಾಹ್ನ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ಸಿಗಬಹುದಾದ ರಾಳವೆಲ್ಲವನ್ನೂ ಸಂಗ್ರಹಿಸುವ ಗುರಿಯನ್ನು ಹೊಂದಿರುವ ಕಮಲ್‌, ಹರಿಪುರ ಮಾರುಕಟ್ಟೆಯಲ್ಲಿ ಒಂದು ಕೇಜಿ ರಾಳಕ್ಕೆ 300 ರೂಪಾಯಿ ಸಿಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ. ದಿನಕ್ಕೆ ಐದು ಗಂಟೆಗಳ ಕಾಲ ದುಡಿದರೆ ನಾಲ್ಕು ದಿನಗಳಲ್ಲಿ ಒಂದು ಚೀಲದಷ್ಟು ರಾಳ ದೊರೆಯುತ್ತದೆ. ಸ್ಥಳೀಯವಾಗಿ ಈ ಜಿಗುಟು ರಾಳವನ್ನು ʼಡಿಂಕ್‌ʼ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ ಡಿಂಕ್‌ ಲಾಡು ಎನ್ನುವ ತಿಂಡಿಯೂ ಇದ್ದು ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ತಿನಿಸನ್ನು ಚಲಿಗಾಲದಲ್ಲಿ ಬಹಳ ಜನಪ್ರಿಯ. ಈ ಮರದ ರಾಳವು ಒಂದಷ್ಟು ಕಸ್ತೂರಿ ವಾಸನೆಯನ್ನು ಹೊಂದಿದ್ದು, ಅಗರಬತ್ತಿ ಮೊದಲಾದ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ  ಕಚ್ಛಾ ವಸ್ತುವಾಗಿಬಳಸಲಾಗುತ್ತದೆ.

ರಾಳ ತೆಗೆಯುವ ಪ್ರಕ್ರಿಯೆಯು ಮರದ ತೊಗಟೆಯ ಹೊರ ಭಾಗವನ್ನು ನೆಲದಿಂದ ಸುಮಾರು ಒಂದು ಮೀಟರ್‌ ಎತ್ತರದಲ್ಲಿ ಹಲವೆಡೆ ಕಚ್ಚು ಹಾಕಲಾಗುತ್ತದೆ. ನಂತರ ಈ ಪ್ರಕ್ರಿಯೆಯನ್ನು ಪುನರಾವರ್ತನೆ ಮಾಡುವ ಮೂಲಕ ರಾಳ ಹೊರಬರುವ ತನಕ ಕಾಯುತ್ತಾರೆ.

ಸರ್ಕಾರಿ ಅಧಿಕಾರಿಗಳ ಪ್ರಕಾರ, ಮರದ ಬುಡವನ್ನು ಸುಡುವ ಮೂಲಕ ರಾಳ ಸಂಗ್ರಹಿಸುವ ಪದ್ಧತಿಯು ಅರಣ್ಯ ನಾಶದ ಹೊಸ ರೂಪವಾಗಿ ಹೊರಹೊಮ್ಮಿದೆ. ಹೀಗೆ ಮರದ ಬುಡಕ್ಕೆ ಬೆಂಕಿ ಹಚ್ಚಿದಾಗ ಮರ ರಾಳ ಬಿಡುಗಡೆ ಮಾಡಲು ಪ್ರಚೋದನೆಯಾಗುತ್ತದೆ. ಆದರೆ ಅಂಬಾಪಾನಿಯ ಡಿಂಕ್-ಸಂಗ್ರಾಹಕರು ಸಾಂಪ್ರದಾಯಿಕ ತೊಗಟೆ ತೆಗೆಯುವ ವಿಧಾನವನ್ನು ಅನುಸರಿಸುತ್ತಿರುವುದಾಗಿ ಕಮಲ್‌ ಹೇಳುತ್ತಾರೆ. ನಮ್ಮ ಮನೆಗಳೂ ಕೂಡಾ ಇದೇ ಪ್ರದೇಶದಲ್ಲಿರುವುದರಿಂದಾಗಿ ಇಲ್ಲಿನ ಯಾರೂ ಮರಕ್ಕೆ ಬೆಂಕಿ ಹಚ್ಚುವ ಸಾಹಸ ಮಾಡುವುದಿಲ್ಲ” ಎಂದು ಅವರು ಕಾರಣ ನೀಡುತ್ತಾರೆ.

ಮರದ ರಾಳ, ಸಾಲ್ ಮರದ ಎಲೆಗಳು, ಕಾಡು ಹಣ್ಣುಗಳು, ತೆಂಡು ಎಲೆಗಳು ಮತ್ತು ಮಹುವಾ ಹೂವುಗಳು ಸೇರಿದಂತೆ ಅರಣ್ಯ ಉತ್ಪನ್ನಗಳ ಸಂಗ್ರಹವು ವರ್ಷವಿಡೀ ಸಿಗುವ ಉದ್ಯೋಗವೂ ಅಲ್ಲ ಅಥವಾ ಲಾಭದಾಯಕವೂ ಅಲ್ಲ. ಕಮಲ್ ಅವರಂತಹ ಗಂಡಸರು ವರ್ಷಕ್ಕೆ ಸರಿಸುಮಾರು 15,000 - 20,000 ರೂ.ಗಳನ್ನು ರಾಳದಿಂದ ಗಳಿಸುತ್ತಾರೆ.

ಅಂಬಾಪಾನಿಯ 24 ಕುಟುಂಬಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಹಕ್ಕುಗಳ ಮಾನ್ಯತೆ) ಕಾಯ್ದೆ v, 2006ರ ಅಡಿಯಲ್ಲಿ ಭೂ ಹಕ್ಕುಗಳನ್ನು ಪಡೆದಿವೆ. ಆದರೆ ಈ ಜಮೀನುಗಳು ನೀರಾವರಿ ಇಲ್ಲದೆ, ಶುಷ್ಕ ಋತುವಿನಲ್ಲಿ ಪಾಳು ಬೀಳುತ್ತವೆ.

PHOTO • Kavitha Iyer
PHOTO • Kavitha Iyer

ಕಮಲ್ ಪವಾರ ಸಾಲ್ ಮರಗಳಿಂದ ರಾಳವನ್ನು ಸಂಗ್ರಹಿಸುತ್ತಾರೆ, ಅದನ್ನು ಅವರು 13 ಕಿ.ಮೀ ದೂರದಲ್ಲಿರುವ ಹರಿಪುರದ ಮಾರುಕಟ್ಟೆಯಲ್ಲಿ ಕಿಲೋಗೆ ಸುಮಾರು 300 ರೂ.ಗೆ ಮಾರಾಟ ಮಾಡುತ್ತಾರೆ

PHOTO • Kavitha Iyer
PHOTO • Kavitha Iyer

ಅವರು ಸಾಲ್ ಮರದ ತೊಗಟೆಯ ಮೇಲೆ ಚೂಪಾದ ಅಂಚುಗಳನ್ನು ಹೊಂದಿರುವ ಶಂಕು ಆಕಾರದ ಲೋಹದ ಕಪ್ ಒಂದನ್ನು ಉಜ್ಜುತ್ತಿದ್ದರು. ಸಾಲ್ ಮರದಿಂದ (ಶೋರಿಯಾ ರೊಬಸ್ಟಾ) ಸುಮಾರು ಮೂರು ಕಿಲೋಗ್ರಾಂಗಳಷ್ಟು ಪರಿಮಳಯುಕ್ತ ರಾಳವನ್ನು ಹೊತ್ತೊಯ್ಯುವ ರೆಕ್ಸಿನ್ ಚೀಲವನ್ನು ಅವರಿಗೆ ಹೆಗಲಿಗೆ ಹಾಕಿಕೊಂಡಿದ್ದರು

ಸುಮಾರು ಒಂದು ದಶಕದ ಹಿಂದೆ, ಕುಟುಂಬಗಳು ಬೆಳೆಯುತ್ತಿದ್ದಂತೆ ಜೊತೆಗೆ ಇಲ್ಲಿನ ನೆಲದಲ್ಲಿ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಕಾರಣ ಅಂಬಾಪಾನಿಯ ಪವಾರರು ಕಬ್ಬು ಕಡಿಯುವ ಕೆಲಸ ಹುಡುಕಿಕೊಂಡು ವಲಸೆ ಹೋಗತೊಡಗಿದರು. "ಪ್ರತಿ ವರ್ಷ, ಸುಮಾರು 15ರಿಂದ 20 ಕುಟುಂಬಗಳು ಈಗ ಕರ್ನಾಟಕಕ್ಕೆ ಪ್ರಯಾಣಿಸುತ್ತವೆ" ಎಂದು ಉಪ ಗುತ್ತಿಗೆದಾರ ಕೇಲಾರ್ಸಿಂಗ್ ಜಾಮ್‌ ಸಿಂಗ್ ಪವಾರ ಹೇಳುತ್ತಾರೆ, ಅವರು ಕಬ್ಬು ಕೊಯ್ಲು ಕೆಲಸಕ್ಕೆ ಬರುವ ಪ್ರತಿ 'ಕೊಯ್ತಾ'ಗೆ 1,000 ರೂ.ಗಳ ಕಮಿಷನ್ ಪಡೆಯುತ್ತಾರೆ.

'ಕೊಯ್ಟಾ'ದ ಅಕ್ಷರಶಃ ಅರ್ಥ ಕತ್ತಿ, ಇದು ಮಹಾರಾಷ್ಟ್ರದ ಕಬ್ಬಿನ ಹೊಲಗಳಲ್ಲಿ ದುಡಿಯುವ ದಂಪತಿಯ ಘಟಕಕ್ಕೆ ನೀಡಲಾದ ಹೆಸರು. ಅನನುಭವಿ ಕಬ್ಬಿನ ಕಾರ್ಮಿಕರಾಗಿರುವ ಕಾರಣ ಪವಾರ್ ಕುಟುಂಬಗಳಿಗೆ ಕಬ್ಬಿನ ತೋಟಗಳಲ್ಲಿನ ಇತರರಿಗಿಂತ ಕಡಿಮೆ ಮೊತ್ತದ ಮುಂಗಡವನ್ನು ನೀಡಲಾಗುತ್ತದೆ. ಅವರಿಗೆ ಪ್ರತಿ ಕೊಯ್ತಾಗೆ ಸುಮಾರು 50,000 ರೂ. ದೊರೆಯುತ್ತದೆ.

"ಬೇರೆ ಯಾವುದೇ ಕೆಲಸ ಲಭ್ಯವಿಲ್ಲ" ಎಂದು ಕೇಲಾರ್ಸಿಂಗ್ ಹೇಳುತ್ತಾರೆ. ದಿನಕ್ಕೆ 12-16 ಗಂಟೆಗಳ ಕಾಲ ಕಬ್ಬನ್ನು ಕತ್ತರಿಸಿ, ಅವುಗಳನ್ನು ಕಟ್ಟು ಮಾಡಿ ನಂತರ ಕಬ್ಬಿನ ಕಾರ್ಖಾನೆಗೆಳಿಗೆ ಹೋಗುವ ಟ್ರ್ಯಾಕ್ಟರುಗಳಿಗೆ ಭಾರದ ಕಟ್ಟುಗಳನ್ನು ಲೋಡ್‌ ಮಾಡಿದರೆ ಜೋಡಿಯೊಂದು ತಿಂಗಳಿಗೆ ಸರಿಸುಮಾರು 10,000 ರೂ. ಗಳಿಸುತ್ತಾರೆ. ಕೆಲವೊಮ್ಮೆ ಮುಂಜಾನೆಯ ತನಕವೂ ಕೆಲಸ ಮಾಡುತ್ತಾರೆ.

ಅಂಬಾಪಾನಿ ಕಬ್ಬಿನ ಕಟಾವಿಗೆ ಹೋದ ಇಬ್ಬರು ಕಾರ್ಮಿಕರ ಸಾವುಗಳನ್ನು ದಾಖಲಿಸಿದೆ ಎಂದು ರೂಪ್‌ಸಿಂಗ್ ಹೇಳುತ್ತಾರೆ. "ಮುಂಗಡ ಪಾವತಿಯು ಸಿಕ್ಕ ಕೆಲವೇ ದಿನಗಳಲ್ಲಿ ಖರ್ಚಾಗುತ್ತದೆ. ಅಪಘಾತ ಅಥವಾ ಸಾವುನೋವುಗಳ ಸಂದರ್ಭದಗಳಲ್ಲಿ ಯಾವುದೇ ವೈದ್ಯಕೀಯ ನೆರವು ಅಥವಾ ವಿಮೆ ಅಥವಾ ಪರಿಹಾರ ಸಿಗುವುದಿಲ್ಲ" ಎಂದು ಅವರು ಹೇಳುತ್ತಾರೆ.

ರೆಹೆಂದಿಯವರ ಮನೆಯಲ್ಲಿ ಜಮಾಯಿಸಿದ ಪುರುಷರು ಮನೆಗೆ ಹತ್ತಿರದಲ್ಲಿ ಉದ್ಯೋಗ ಸಿಕ್ಕರೆ ತಾವು ಕಬ್ಬು ಕಟಾವು ಮಾಡುವ ಕೆಲಸಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾರೆ. ಅವರು ಭಾಷಾ ಸಮಸ್ಯೆಗಳು, ಕೊಯ್ಲಿನ ಅವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಕಬ್ಬಿನ ಹೊಲಗಳ ಬಳಿ ಡೇರೆಗಳಲ್ಲಿ ವಾಸಿಸುವಾಗ ಅನುಭವಿಸುವ ಕಷ್ಟಗಳು ಮತ್ತು ಲಾರಿಗಳು ಮತ್ತು ಟ್ರಾಕ್ಟರುಗಳ ಅಪಾಯಗಳನ್ನು ಉಲ್ಲೇಖಿಸುತ್ತಾ ಮೇಲಿನ ಮಾತುಗಳನ್ನು ಹೇಳುತ್ತಾರೆ. "ಪರಿಸ್ಥಿತಿಗಳು ಭಯಾನಕವಾಗಿವೆ, ಆದರೆ ಬೇರೆ ಯಾವ ಕೆಲಸದಲ್ಲಿ ಇಷ್ಟು ದೊಡ್ಡ ಮೊತ್ತದ ಮುಂಗಡವನ್ನು ನೀಡುತ್ತಾರೆ?" ಎಂದು ಕೇಲಾರ್ಸಿಂಗ್ ಕೇಳುತ್ತಾರೆ.

ಅಂಬಾಪಾನಿಯ ಸುಮಾರು 60 ಪ್ರತಿಶತದಷ್ಟು ಪುರುಷರು ಕಬ್ಬಿನ ಕೊಯ್ಲು ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ.

ಗಣನೀಯ ಮೊತ್ತದ ಮುಂಗಡ ಪಾವತಿಯು ಸಣ್ಣ ಮನೆ ರಿಪೇರಿ ಅಥವಾ ಬೈಕ್ ಖರೀದಿಗೆ ಮಾತ್ರವಲ್ಲ, ಪವಾರ ಸಮುದಾಯದ ಮದುಮಗ ಭಾವಿ ವಧುವಿನ ಪೋಷಕರಿಗೆ ಪಾವತಿಸಬೇಕಾದ ವಧುವಿನ ಬೆಲೆಗೂ ಉಪಯುಕ್ತವಾಗಿದೆ, ಈ ಮೊತ್ತವನ್ನು ಪವಾರ ಪಂಚಾಯತ್ ಮಾತುಕತೆ ನಡೆಸಿ ನಿಗದಿಪಡಿಸುತ್ತದೆ.

PHOTO • Kavitha Iyer
PHOTO • Kavitha Iyer

ಅಂಬಾಪಾನಿಯ ಅನೇಕ ನಿವಾಸಿಗಳು ಕಬ್ಬು ಕಡಿಯುವ ಕೆಲಸ ಮಾಡಲು ವಲಸೆ ಹೋಗುತ್ತಾರೆ. ಕೇಲಾರ್ಸಿಂಗ್ ಜಮ್ಸಿಂಗ್ ಪವಾರ (ಎಡ) ಅವರು ಕರ್ನಾಟಕದಲ್ಲಿ ಕಬ್ಬಿನ ಕಟಾವು ಮಾಡಲು ಬರುವ ಪ್ರತಿ ಗಂಡ-ಹೆಂಡತಿ ಜೋಡಿಗೆ 1,000 ರೂ.ಗಳ ಕಮಿಷನ್ ಗಳಿಸುತ್ತಾರೆ. ಹೆಚ್ಚಿನವರು ಕಳೆದ ಕೆಲವು ವರ್ಷಗಳಿಂದ ಕಬ್ಬಿನ ಗದ್ದೆಗಳ ಕೆಲಸಕ್ಕೆ ವಲಸೆ ಹೋಗುತ್ತಿದ್ದಾರೆ (ಬಲಕ್ಕೆ). ಮನೆಗೆ ಹತ್ತಿರದಲ್ಲಿ ಉದ್ಯೋಗ ಸಿಕ್ಕರೆ ಕಬ್ಬು ಕಡಿಯುವ ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆ ಎಂದು ಇಲ್ಲಿನ ಜನರು ಹೇಳುತ್ತಾರೆ

PHOTO • Kavitha Iyer
PHOTO • Kavitha Iyer

ಎಡ: ಗ್ರಾಮದಲ್ಲಿ ಮತದಾನದ ದಿನ ಇವಿಎಂಗಳನ್ನು ಶಾಲಾ ಕಟ್ಟಡದಲ್ಲಿ ಇರಿಸಲಾಗುವುದು, ಮೂಲಭೂತವಾಗಿ ಇದೊಂದು ಬಿದಿರು ಮತ್ತು ಹುಲ್ಲಿನ ಕೋಣೆಯಾಗಿದೆ. ಬಲ: ಶಾಲೆಯ ಹೊರಗೆ ಮುರಿದ ಶೌಚಾಲಯದ ಬ್ಲಾಕ್

ಪವಾರ ಬುಡಕಟ್ಟು ಜನಾಂಗದ ನಡುವಿನ ಸಾಮಾಜಿಕ ಮತ್ತು ವೈವಾಹಿಕ ಸಂಬಂಧಗಳನ್ನು ನಿಯಂತ್ರಿಸುವ ನಿಯಮಗಳು ವಿಶಿಷ್ಟವಾಗಿವೆ. ಮದುವೆ ವಿವಾದಗಳ ಬಗ್ಗೆ ಪಂಚಾಯತ್ ಹೇಗೆ ಆಡಳಿತ ನಡೆಸುತ್ತದೆ ಎಂಬುದನ್ನು ರೂಪ್ ಸಿಂಗ್ ವಿವರಿಸುತ್ತಾರೆ. ಮಾತುಕತೆಯ ಸಮಯದಲ್ಲಿ ಎರಡೂ ಕಡೆಯವರು ಪರಸ್ಪರ ಕೆಲವು ಮಾರುಗಳಷ್ಟು ದೂರದಲ್ಲಿ ಕುಳಿತುಕೊಳ್ಳುತ್ತಾರೆ, ಈ ಪ್ರಕ್ರಿಯೆಯನ್ನು ಜಗಡ ಎಂದು ಕರೆಯಲಾಗುತ್ತದೆ. ಸಾಂದರ್ಭಿಕವಾಗಿ, ಹುಡುಗಿಯನ್ನು ಮದುವೆಯಾದ ಕೆಲವು ದಿನಗಳ ನಂತರ ಅವಳನ್ನು ಹೆತ್ತವರ ಬಳಿ ಕಳುಹಿಸಲಾಗುತ್ತದೆ, ಜೊತೆಗೆ ಇಜ್ಜತ್ ಎಂಬ ಪಾವತಿಯನ್ನು ನೀಡಲಾಗುತ್ತದೆ, ಆದರೆ ಅವಳು ಇನ್ನೊಬ್ಬ ಪುರುಷನೊಂದಿಗೆ ಓಡಿಹೋದರೆ, ವಧುವಿನ ಕುಟುಂಬವು ತಾನು ಪಡೆದ ವಧುವಿನ ಬೆಲೆಯ ಎರಡು ಪಟ್ಟು ಪರಿಹಾರವನ್ನು ಪಾವತಿಸಬೇಕು.

"ಅಂಬಾಪಾನಿ ನಿಜಕ್ಕೂ ಒಂದು ವಿಶಿಷ್ಟ ಗ್ರಾಮ" ಎಂದು ಜಲ್ಗಾಂವ್ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಹೇಳುತ್ತಾರೆ. 2023ರ ಡಿಸೆಂಬರ್ ತಿಂಗಳಿನಲ್ಲಿ ಊರಿಗೆ ಭೇಟಿ ನೀಡಲೆಂದು 10 ಕಿ.ಮೀ ಚಾರಣ ಮಾಡಿದ ಮೊದಲ ಜಿಲ್ಲಾಧಿಕಾರಿ ಅವರು ಎಂದು ಸ್ಥಳೀಯರು ಹೇಳುತ್ತಾರೆ. "ಇದು [ಹಳ್ಳಿ] ಅದರ ಸ್ಥಳಾಕೃತಿಯಿಂದಾಗಿ ವಿಶಿಷ್ಟ ಸವಾಲುಗಳನ್ನು ಹೊಂದಿದೆ, ಆದರೆ ನಾವು ಉತ್ತಮ ಸೇವೆಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ." ಮೂಲತಃ ಅರಣ್ಯ ಭೂಮಿಯಲ್ಲಿದ್ದ ಈ ಗ್ರಾಮವನ್ನು ಕಂದಾಯ ಇಲಾಖೆಯಿಂದ ಗುರುತಿಸಲಾಗಿಲ್ಲ ಮುಖ್ಯ ಕಾನೂನು ಸವಾಲು. "ಅಂಬಾಪಾನಿಯನ್ನು ಗಾಂವ್‌ ಠಾಣ್ ಮಾಡುವ ಕೆಲಸ ಪ್ರಾರಂಭವಾಗಿದೆ, ಮತ್ತು ಸರ್ಕಾರದ ಅನೇಕ ಯೋಜನೆಗಳು ಸಹ ಈ ಮೂಲಕ ಬರಬಹುದು" ಎಂದು ಪ್ರಸಾದ್ ಹೇಳಿದರು.

ಸದ್ಯಕ್ಕೆ, ಶಾಲೆಯ ಕೊಠಡಿ, ಅದರ ಹೊರಗಿನ ಮುರಿದ ಶೌಚಾಲಯ ಬ್ಲಾಕ್ ಬಳಿ 300ಕ್ಕೂ ಹೆಚ್ಚು ನೋಂದಾಯಿತ ಮತದಾರರು ಮೇ 13ರಂದು ಮತ ಚಲಾಯಿಸಲಿದ್ದಾರೆ. ಅಂಬಾಪಾನಿ ಜಲ್ಗಾಂವ್ ಜಿಲ್ಲೆಯ ರಾವೆರ್ ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇವಿಎಂ ಮತ್ತು ಇತರ ಎಲ್ಲಾ ಮತದಾನ ಸಾಮಗ್ರಿಗಳನ್ನು ಕಾಲ್ನಡಿಗೆಯಲ್ಲಿ ಮತ್ತು ಮೋಟಾರು ಬೈಕುಗಳಲ್ಲಿ ಮೇಲಕ್ಕೆ ಕೊಂಡೊಯ್ಯಲಾಗುವುದು.

ಸಾರ್ವತ್ರಿಕ ಚುನಾವಣೆಯಲ್ಲಿ ಈ ಬೂತ್ ಸರಾಸರಿ 60 ಪ್ರತಿಶತದಷ್ಟು ಮತದಾನಕ್ಕೆ ಸಾಕ್ಷಿಯಾಗಿದೆ ಮತ್ತು ಅಂಬಾಪಾನಿ ಗ್ರಾಮಕ್ಕೆ ತನ್ನ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಅಗತ್ಯವಿರುವ ಎಲ್ಲವೂ ಲಭ್ಯವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ಪ್ರತಿಫಲಗಳು ಮಾತ್ರ ಇಲ್ಲಿಗೆ ನಿಧಾನವಾಗಿ ಬರುತ್ತವೆ.

ಅನುವಾದ: ಶಂಕರ. ಎನ್. ಕೆಂಚನೂರು

Kavitha Iyer

Kavitha Iyer has been a journalist for 20 years. She is the author of ‘Landscapes Of Loss: The Story Of An Indian Drought’ (HarperCollins, 2021).

Other stories by Kavitha Iyer
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru