"ನಾನು ಯಾವುದೇ ಕೃಷಿಭೂಮಿಯನ್ನು ಹೊಂದಿಲ್ಲ, ನನ್ನ ಪೂರ್ವಜರೂ ಹೊಂದಿರಲಿಲ್ಲ" ಎಂದು ಕಮಲ್‌ಜಿತ್ ಕೌರ್ ಹೇಳುತ್ತಾರೆ. "ಆದರೂ, ನಮ್ಮ ರೈತರಿಗೆ ನನ್ನ ಸಣ್ಣ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ, ಏಕೆಂದರೆ ನಾನು ಮಾಡದೆ ಹೋದರೆ, ನನ್ನ ಮಕ್ಕಳ ತಟ್ಟೆಯಲ್ಲಿ ಏನಾದರೂ ಆಹಾರ ಕಾಣಿಸಲು ನಾನು ಕಾರ್ಪೊರೇಟ್ ದುರಾಶೆಯನ್ನು ಎದುರಿಸಬೇಕಾಗುತ್ತದೆನ್ನುವ ಭಯವಿದೆ"

ಕಮಲ್‌ಜಿತ್ (35) ಪಂಜಾಬ್‌ನ ಲುಧಿಯಾನ ನಗರದ ಶಿಕ್ಷಕಿಯಾಗಿದ್ದು, ಕೆಲವು ಸ್ನೇಹಿತರ ಜೊತೆಗೂಡಿ ಸಿಂಘುವಿನಲ್ಲಿ ನೆರಳಿರುವ ಜಾಗದಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ನಡೆಸುತ್ತಿದ್ದಾರೆ. ಅವರು ಪ್ರತಿಭಟನಾ ಸ್ಥಳಕ್ಕೆ ಸರದಿಯಂತೆ ಬರುತ್ತಾರೆ. ಒಮ್ಮೆ ಬಂದರೆ ಮೂರು ದಿನಗಳವರೆಗೆ ಇರುತ್ತಾರೆ, ಮತ್ತು ಪ್ರತಿಭಟನಾ ನಿರತ ರೈತರ ಅಂಗಿಯ ಹರಿದ ಗುಂಡಿಗಳನ್ನು ಸರಿಪಡಿಸುತ್ತಾರೆ ಅಥವಾ ಅವರ ಹರಿದ ಸಲ್ವಾರ್-ಕಮೀಜ್ ಅನ್ನು ಹೊಲಿಯುತ್ತಾರೆ. ಅವರ ಬಳಿ ಪ್ರತಿದಿನ ಸುಮಾರು 200 ಜನರು ಬರುತ್ತಾರೆ.

ಈ ರೀತಿಯ ಸೇವೆಗಳು ವಿವಿಧ ರೂಪಗಳಲ್ಲಿ ಮತ್ತು ಸಿಂಘುವಿನಲ್ಲಿ ಪ್ರತಿಭಟನೆಗೆ ಬೆಂಬಲವಾಗಿ ಅತ್ಯಂತ ಉದಾರವಾದ ರೀತಿಯಲ್ಲಿ ಲಭ್ಯವಿದೆ.

ಅಂತಹ ಸೇವೆಗಳನ್ನು ಒದಗಿಸುವವರಲ್ಲಿ ಇರ್ಷಾದ್ (ಪೂರ್ಣ ಹೆಸರು ಲಭ್ಯವಿಲ್ಲ) ಕೂಡ ಒಬ್ಬರು. ಸಿಂಘು ಗಡಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕುಂಡ್ಲಿ ಕೈಗಾರಿಕಾ ಪ್ರದೇಶದ ಟಿಡಿಐ ಮಾಲ್‌ನ ಹೊರಗಿನ ಕಿರಿದಾದ ಮೂಲೆಗಳಲ್ಲಿ, ಅವರು ಸಿಖ್ ಪ್ರತಿಭಟನಾಕಾರರ ತಲೆಗೆ ಮಸಾಜ್ ಮಾಡುತ್ತಿದ್ದಾರೆ. ಇನ್ನೂ ಅನೇಕರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಕುರುಕ್ಷೇತ್ರದ ನಿವಾಸಿಯಾಗಿರುವ ಇರ್ಷಾದ್ ಕ್ಷೌರಿಕರಾಗಿದ್ದು, ಬಿರದಾರಿ - ಭ್ರಾತೃತ್ವದ ಭಾವದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾರೆ.

ಇದೇ ಮಾರ್ಗದಲ್ಲಿ, ತನ್ನ ಮಿನಿ ಟ್ರಕ್‌ನ ಹೊರಗೆ ಕುಳಿತ ಸರ್ದಾರ್ ಗುರ್ಮಿಕ್ ಸಿಂಗ್ ಅವರ ಬಳಿ ಮಸಾಜ್‌ ಮಾಡಿಸಿಕೊಂಡು ತಮ್ಮ ಸ್ನಾಯುಗಳನ್ನು ಸಡಿಲಗೊಳಿಸಿಕೊಳ್ಳಲು ಅನೇಕರು ಒಗ್ಗೂಡಿದ್ದಾರೆ. "ಅವರು ಇದೀಗ ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ....." ಈ ವಿಷಯವೇ ಅವರನ್ನು ಇಲ್ಲಿಗೆ ಕರೆತಂದಿದ್ದೆಂದು ಅವರು ಹೇಳುತ್ತಾರೆ.

ಚಂಡೀಗಢದ ವೈದ್ಯ ಸುರಿಂದರ್ ಕುಮಾರ್ ಅವರು ಸಿಂಘುವಿನಲ್ಲಿ ಇತರ ವೈದ್ಯರೊಂದಿಗೆ ವೈದ್ಯಕೀಯ ಶಿಬಿರದಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಇದು ಪ್ರತಿಭಟನಾ ಸ್ಥಳದಲ್ಲಿನ ಹಲವಾರು ವೈದ್ಯಕೀಯ ಶಿಬಿರಗಳಲ್ಲಿ ಒಂದಾಗಿದೆ - ಅವುಗಳಲ್ಲಿ ಕೆಲವು ಕೋಲ್ಕತಾ ಅಥವಾ ಹೈದರಾಬಾದ್‌ನಂತಹ ದೂರದ ಪ್ರದೇಶಗಳ ವೈದ್ಯರಿಂದ ನಡೆಸಲ್ಪಡುತ್ತಿವೆ. "ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶೀತವನ್ನು ಎದುರಿಸುತ್ತಿರುವ ವಯಸ್ಸಾದವರಿಗೆ ಸೇವೆ ಸಲ್ಲಿಸುವ ಮೂಲಕ, ನಾವು ಪದವಿ ಪಡೆಯುವಾಗ ತೆಗೆದುಕೊಂಡ ಪ್ರತಿಜ್ಞೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ. ಅವರಲ್ಲಿ ಹಲವರು ತೆರೆದ ರಸ್ತೆಗಳಲ್ಲಿ ವಾಸಿಸುತ್ತಿದ್ದಾರೆ" ಎಂದು ಸುರಿಂದರ್ ಹೇಳುತ್ತಾರೆ.

Kamaljit Kaur, a teacher from Ludhiana, and her colleagues have brought two sewing machines to Singhu, and fix for free missing shirt-buttons or tears in salwar-kameez outfits of the protesting farmers – as their form of solidarity
PHOTO • Joydip Mitra

ಲುಧಿಯಾನದ ಶಿಕ್ಷಕಿ ಕಮಲ್ಜೀತ್ ಕೌರ್ ಮತ್ತು ಅವರ ಸ್ನೇಹಿತರು ಎರಡು ಹೊಲಿಗೆ ಯಂತ್ರಗಳನ್ನು ಸಿಂಘು ಪ್ರತಿಭಟನಾ ಸ್ಥಳಕ್ಕೆ ತಂದಿದ್ದಾರೆ, ಮತ್ತು ಅಲ್ಲಿ ಅದರಿಂದ ಪ್ರತಿಭಟನಾಕಾರರ ಕಿತ್ತು  ಹೋಗಿರುವ ಗುಂಡಿಗಳನ್ನು ಸರಿಪಡಿಸುತ್ತಾರೆ ಅಥವಾ ರೈತರ ಅಂಗಿಯ ಸಲ್ವಾರ್-ಕಮೀಜ್ ಅನ್ನು ಉಚಿತವಾಗಿ ಹೊಲಿದು ಕೊಡುತ್ತಾರೆ - ಇದು ಅವರ ಬೆಂಬಲದ ರೂಪ

ಹೋರಾಟಗಾರರ ಮನೋಸ್ಥೈರ್ಯವನ್ನು ಹೆಚ್ಚಿಸಲು ಸಹಾಯ ಮಾಡಲು, ಲುಧಿಯಾನಾದ ಸತ್ಪಾಲ್ ಸಿಂಗ್ ಮತ್ತು ಅವರ ಸ್ನೇಹಿತರು ತೆರೆದ ಟ್ರಕ್‌ನಲ್ಲಿ ಕಬ್ಬು ಹಿಂಡುವ ಭಾರೀ ಯಂತ್ರವನ್ನು ಸಿಂಘುವಿಗೆ ತಂದಿದ್ದಾರೆ. ಈ ಯಂತ್ರಗಳನ್ನು ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ - ಪ್ರತಿಭಟನಾ ಸ್ಥಳದಲ್ಲಿ, ಸತ್ಪಾಲ್ ಅವರ ಕ್ರಷರ್ ಹಾದುಹೋಗುವ ಎಲ್ಲರಿಗೂ ಸಿಹಿ, ತಾಜಾ ಕಬ್ಬಿನ ರಸವನ್ನು ಹಂಚುತ್ತದೆ. ಅವರು ಪ್ರತಿದಿನ ಒಂದು ಟ್ರಕ್  ಕಬ್ಬನ್ನು ಬಳಸುತ್ತಾರೆ, ಇದನ್ನು ಲುಧಿಯಾನ ಜಿಲ್ಲೆಯ ಅವರ ಊರಾದ ಅಲಿವಾಲ್‌ನಲ್ಲಿ ಸಂಗ್ರಹಿಸಿದ ದೇಣಿಗೆ ಹಣದಿಂದ ಖರೀದಿಸಲಾಗುತ್ತದೆ.

ಮತ್ತು ಕುಂಡ್ಲಿಯ ಅದೇ ಮಾಲ್‌ನ ಮೈದಾನದಲ್ಲಿ, ಬಟಿಂಡಾದ ನಿಹಾಂಗ್ ಅಮಂದೀಪ್ ಸಿಂಗ್ ಕಪ್ಪು ಕುದುರೆಗೆ ಸ್ನಾನ ಮಾಡಿಸುತ್ತಿದ್ದರು, ಅವರು ಪಂಜಾಬಿನ ಕೃಷಿ ಆರ್ಥಿಕತೆಯನ್ನು ರಕ್ಷಿಸಲು ತಾನು ಸಿಂಘುವವಿಗೆ ಬಂದಿರುವುದಾಗಿ ಹೇಳುತ್ತಾರೆ. ಮಾಲ್ ಬಳಿಯ ಲಂಗರಿನನಲ್ಲಿ ಸಂದರ್ಶಕರಿಗೆ ಆಹಾರವನ್ನು ನೀಡುವುದರ ಹೊರತಾಗಿ, ಅಮಂದೀಪ್ ಮತ್ತು ಇತರರು (ಇವರೆಲ್ಲರೂ ನಿಹಾಂಗ್ಸ್, ಸಿಖ್ ಯೋಧರ ಗುಂಪಿಗೆ ಸೇರಿದವರು) ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳಾಗಿ ಬಳಸಿರುವ  ಕಂಟೇನರ್‌ಗಳ ನೆರಳಿನಲ್ಲಿ ಪ್ರತಿದಿನ ಸಂಜೆ ಕೀರ್ತನೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಅಮೃತಸರದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರುವೇಜ್ ಸಿಂಗ್, ಇತರ ವಿದ್ಯಾರ್ಥಿಗಳೊಂದಿಗೆ, ಟ್ರಾಲಿ ಟೈಮ್ಸ್ ಎಂಬ ವಾರಕ್ಕೆರಡು ಸಲ ಪ್ರಕಟವಾಗುವ ಪತ್ರಿಕೆಯನ್ನು, ಸಿಂಘುವಿನಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ವಿತರಿಸುತ್ತಾರೆ. ಅವರು ಬಟ್ಟೆ ಮತ್ತು ಪ್ಲಾಸ್ಟಿಕ್ ಶೀಟ್‌ಗಳನ್ನು ದೊಡ್ಡ ಜಾಗದಲ್ಲಿ ಸುತ್ತಲೂ ಕಟ್ಟಿ ಅಲ್ಲಿ ಪೋಸ್ಟರ್‌ಗಳಲ್ಲಿ ಘೋಷಣೆಗಳನ್ನು ಬರೆಯಲು ಸಂದರ್ಶಕರಿಗಾಗಿ ಪೇಪರ್‌ಗಳು ಮತ್ತು ಪೆನ್‌ಗಳನ್ನು ಇರಿಸಿದ್ದಾರೆ - ಈ ಪೋಸ್ಟರ್‌ಗಳ ಪ್ರದರ್ಶನ ಸದಾ ತೆರೆದಿರುತ್ತದೆ ಮತ್ತು ಅವರು ಅಲ್ಲಿ ಉಚಿತ ಗ್ರಂಥಾಲಯವನ್ನು ಸಹ ನಡೆಸುತ್ತಾರೆ. ಪಂಜಾಬ್ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯರು ಕೂಡ ಸಿಂಘುವಿನಲ್ಲಿ ಉಚಿತ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ, ಮತ್ತು ಅವರು ಪೋಸ್ಟರ್‌ಗಳನ್ನು ಸಹ ತಯಾರಿಸುತ್ತಾರೆ (ಮೇಲಿನ ಕವರ್ ಫೋಟೋ ನೋಡಿ).

ರಾತ್ರಿ, ನಾವು ಸಿಂಘು ಗಡಿಯಿಂದ ಕುಂಡ್ಲಿಗೆ ಹಿಂತಿರುಗುವಾಗ, ವಿವಿಧ ಗುಂಪುಗಳು ಅಲ್ಲಿ ಬೆಂಕಿಯೆದುರು ಕುಳಿತು ಚಳಿ ಕಾಯಿಸುತ್ತಿದ್ದವು. ನಾವೂ ಅಲ್ಲಲ್ಲಿ ನಿಂತು ಮೈ ಬೆಚ್ಚಗಾಗಿಸಿಕೊಂಡು ಮುಂದುವರೆಯುತ್ತಿದ್ದೆವು.

ನಾವು ಬಾಬಾ ಗುರ್ಪಾಲ್ ಸಿಂಗ್ ಅವರನ್ನು ರಸ್ತೆಯ ಗುಡಾರದಲ್ಲಿ ಭೇಟಿಯಾಗಿ ಅವರು ಹೋರಾಟಗಾರರಿಗಾಗಿ ಮಾಡಿಟ್ಟಿದ್ದ ಚಹಾವನ್ನು ಸೇವಿಸಿದೆವು, ಅದನ್ನು ಅವರು ಯಾವಾಗಲೂ ಸಿದ್ಧವಾಗಿರಿಸಿರುತ್ತಾರೆ. 86 ವರ್ಷದ ಬಾಬಾ ಗುರ್ಪಾಲ್ ಅವರು ಪಟಿಯಾಲ ಬಳಿಯ ಖಾನ್ಪುರ್ ಗೊಂಡಿಯಾ ಗುರುದ್ವಾರದಲ್ಲಿ ಸನ್ಯಾಸಿ ಮತ್ತು ಗ್ರಂಥಿಯಾಗಿದ್ದಾರೆ. ಅವರು ಕಲಿತ ವ್ಯಕ್ತಿ, ಮತ್ತು ಸಿಖ್ಖರ ಅಸ್ಮಿತೆಯಾಧರಿಸಿ ರಾಜಕೀಯದ ಇತಿಹಾಸವನ್ನು ತಿಳಿಸುತ್ತಾರೆ ಮತ್ತು ಈ ರೈತ ಪ್ರತಿಭಟನೆಯು ಪಂಜಾಬ್‌ ಅಸ್ಮಿತೆಯ ಗಡಿಗಳನ್ನು ದಾಟಿ ಎಲ್ಲರ ಒಳಿತಿಗಾಗಿ ಅಖಿಲ ಭಾರತ ಚಳುವಳಿಯಾಗಿ ಹೇಗೆ ಮಾರ್ಪಟ್ಟಿದೆ ಎನ್ನುವುದನ್ನೂ ನಮಗೆ ವಿವರಿಸಿದರು.

ನಾನು ಬಾಬಾ ಗುರ್‌ಪಾಲ್‌ ಅವರ ಬಳಿ ಅವರು ತನ್ನ ಹಿರಿಯ ಜೊತೆಗಾರರೊಂದಿಗೆ ಸೇರಿ ದಿನಕ್ಕೆ ಎಂಟು ಗಂಟೆಗಳ ಕಾಲ ಎಲ್ಲರಿಗೂ ಚಹಾವನ್ನು ನೀಡುತ್ತಾ ಸೇವೆ ಮಾಡಲು ಕಾರಣವೇನೆಂದು ಕೇಳಿದಾಗ ಅವರು, ಅಲ್ಲಿ ರಾತ್ರಿಯ ಕತ್ತಲಿನೊಂದಿಗೆ  ಬೆರೆಯುತ್ತಿದ್ದ ಹೊಗೆ ಮತ್ತು ಬೆಂಕಿಯ ಕಡೆ  ನೋಡುತ್ತಾ "ಇದು ನಾವೆಲ್ಲ ಮನೆಗಳಿಂದ ನಮ್ಮ ಪಾಲಿನ ಕೊಡುಗೆಯನ್ನು ನೀಡಬೇಕಿರುವ ಸಮಯವಾಗಿದೆ, ಏಕೆಂದರೆ ಇದು ಈಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ನೇರ ಯುದ್ಧ. ಕುರುಕ್ಷೇತ್ರದ ಯುದ್ಧದಲ್ಲೂ [ಮಹಾಭಾರತ] ಇದೇ ನಡೆದಿತ್ತು.” ಎಂದು ಹೇಳಿದರು.

PHOTO • Joydip Mitra

ಕುರುಕ್ಷೇತ್ರದ ಹಿರಿಯ ಸ್ವಯಂಸೇವಕ, ತನ್ನ ದಿನದ ಬಹುಪಾಲು ಭಾಗವನ್ನು ಹೋರಾಟದ ಸ್ಥಳಕ್ಕೆ ಬರುವ ಜನರಿಗಾಗಿ ಮೇಥಿ ಪರಾಥಾ ತಯಾರಿಸುತ್ತಾ ಕಳೆಯುತ್ತಾರೆ. ಸಿಂಘುವಿನಲ್ಲಿರುವ ಅನೇಕ ಲಂಗರ್‌ಗಳು ಸ್ವಯಂಚಾಲಿತ ರೊಟ್ಟಿ ತಯಾರಿಸುವ ಯಂತ್ರಗಳನ್ನು ಬಳಸುತ್ತಿದ್ದರೆ (ಕೆಲವು ಯಂತ್ರಗಳು ಒಂದು ಗಂಟೆಯಲ್ಲಿ 2,000 ರೊಟ್ಟಿಗಳನ್ನು ಉತ್ಪಾದಿಸಬಲ್ಲವವು) - ಅವರು ಸ್ವತಃ ಪರಾಥಾ ತಯಾರಿಸುವ ಯಂತ್ರವಾಗಿ ಬದಲಾಗುವ ಮೂಲಕ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ

PHOTO • Joydip Mitra

ಸತ್ಪಾಲ್ ಸಿಂಗ್ (ಬಲ ಬದಿಯಲ್ಲಿ ಕುಳಿತು ಕಬ್ಬಿನ ರಸಕ್ಕೆ ಉಪ್ಪು ಹಾಕುತ್ತಿರುವವರು) ಮತ್ತು ಲುಧಿಯಾನದ ಅವರ ಸ್ನೇಹಿತ ಭಾರೀ ಕಬ್ಬಿನ ರಸ ತೆಗೆಯುವ ಯಂತ್ರವನ್ನು ತೆರೆದ ಟ್ರಕ್‌ನಲ್ಲಿ ಸಿಂಗುವಿಗೆ ತಂದರು. ಈ ಯಂತ್ರಗಳನ್ನು ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ - ಪ್ರತಿಭಟನಾ ಸ್ಥಳದಲ್ಲಿ ಈ ಕ್ರಷರ್ ದಾರಿಯಲ್ಲಿ ಹಾದುಹೋಗುವ ಪ್ರತಿಯೊಬ್ಬರಿಗೂ ಸಿಹಿಯಾದ ತಾಜಾ ರಸವನ್ನು ನೀಡುತ್ತದೆ.

PHOTO • Joydip Mitra

ಸಿಖ್ಖರಿಗೆ ಪೇಟವನ್ನು ಕಟ್ಟಲು ಸಹಾಯ ಮಾಡಲು ಮತ್ತು ಇತರರು ಬಳಸಲು ಕನ್ನಡಿಗಳನ್ನು ಸಾಲಾಗಿ ಟ್ರಕ್‌ನ ಬದಿಯಲ್ಲಿ ನೇತುಹಾಕಲಾಗಿದೆ. ಈ ಟ್ರಕ್ ದಿನವಿಡೀ ಟೂತ್ ಬ್ರಷ್, ಟೂತ್‌ಪೇಸ್ಟ್, ಸೋಪ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ವಿತರಿಸುತ್ತದೆ.

PHOTO • Joydip Mitra

ಹರಿಯಾಣದ ಹಳ್ಳಿಯೊಂದು ಸಿಂಘುವಿಗೆ ಸೌರ ಫಲಕಗಳನ್ನು ಅಳವಡಿಸಿರುವ ಟ್ರಕ್ ಒಂದನ್ನು ಕಳುಹಿಸಿದೆ, ಇದು ಟ್ರಕ್‌ನ ಬದಿಗಳಲ್ಲಿ ತೂಗುಹಾಕಲಾದ ಚಾರ್ಜಿಂಗ್‌ ಪೋಟ್‌ಗಳು ಚಾರ್ಜ್ ಮಾಡಲು ವಿದ್ಯುತ್ ಶಕ್ತಿಯನ್ನು ನೀಡುತ್ತದೆ. ಪ್ರತಿಭಟನಾಕಾರರು ತಮ್ಮ ಫೋನ್ಗಳನ್ನು ಈ ಮೊಬೈಲ್ ಚಾರ್ಜರ್‌ ಮೂಲಕ ಚಾರ್ಜ್ ಮಾಡಿಕೊಳ್ಳುತ್ತಾರೆ.

PHOTO • Joydip Mitra

ಪಂಜಾಬ್‌ನ ಮೊಗಾ ಜಿಲ್ಲೆಯ ಖುಕ್ರಾನಾ ಗ್ರಾಮದ ಯುವಕರು ವೃತ್ತಿಪರ ಚಮ್ಮಾರರನ್ನು ನೇಮಿಸಿಕೊಂಡಿದ್ದಾರೆ ಮತ್ತು ಅವರು ಪ್ರತಿಭಟನಾ ನಿರತ ರೈತರು ತಮ್ಮ ಬೂಟುಗಳನ್ನು ಸರಿಪಡಿಕೊಳ್ಳಲು ಈ ಮೂಲಕ ಅವರಿಗೆ ಸಹಾಯ ಮಾಡುತ್ತಿದ್ದಾರೆ.

PHOTO • Joydip Mitra

ವಾರಗಳವರೆಗೆ ತೆರೆದ ಹೆದ್ದಾರಿಯಲ್ಲಿ ಕ್ಯಾಂಪ್ ಮಾಡಿದ ನಂತರವೂ ಬಟ್ಟೆಗಳು ಒಗೆದು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಅನೇಕ ಸ್ವಯಂಸೇವಕರು ಉಚಿತ ಲಾಂಡ್ರಿ ಸೇವೆಯನ್ನು ಪ್ರಾರಂಭಿಸಿದ್ದಾರೆ. ಅರ್ಧ ಡಜನ್ ವಾಷಿಂಗ್‌ ಮಷೀನ್‌ಗಳನ್ನು ಆವರಣದಲ್ಲಿ ಇರಿಸಲಾಗಿದೆ, ಅಲ್ಲಿ ಯಾರು ಬೇಕಿದ್ದರೂ ಬಂದು ಸ್ವಯಂಸೇವಕರನ್ನು ತಮ್ಮ ಬಟ್ಟೆಗಳನ್ನು ಒಗೆದು ಕೊಡುವಂತೆ ವಿನಂತಿಸಬಹುದು.

PHOTO • Joydip Mitra

ಸಂಜೆ ಕೀರ್ತನೆಗಾಗಿ ತಯಾರಿ ಮಾಡಲು ಅಮಂದೀಪ್ ಸಿಂಗ್ ನಿಹಾಂಗ್ ತನ್ನ ಕುದುರೆಗೆ ಸ್ನಾನ ಮಾಡಿಸುತ್ತಿರುವುದು. ಪ್ರವಚನ ಮತ್ತು ಇತರ ಧಾರ್ಮಿಕ ಚಟುವಟಿಕೆಗಳ ಜೊತೆಗೆ, ಸಿಂಘುವಿನಲ್ಲಿ ಕ್ಯಾಂಪಿಂಗ್ ಮಾಡಿರುವ ನಿಹಾಂಗರ ಗುಂಪು ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ತಮ್ಮ ಲಂಗರ್‌ನಿಂದ ಆಹಾರವನ್ನು ಪೂರೈಸುತ್ತದೆ.

PHOTO • Joydip Mitra

ಜಲಂಧರ್‌ನ ಶಿಕ್ಷಕಿ, ಬಲ್ಜಿಂದರ್ ಕೌರ್ ಅಸಂಖ್ಯಾತ ಹಾಸಿಗೆಗಳು, ಕಂಬಳಿಗಳು, ದಿಂಬುಗಳಿಂದ ತುಂಬಿದ ದೊಡ್ಡ ಸ್ಥಳವನ್ನು ನೋಡಿಕೊಳ್ಳುತ್ತಿದ್ದಾರೆ; ಸಿಂಘುವಿನಲ್ಲಿ ಒಂದು ಅಥವಾ ಎರಡು ರಾತ್ರಿ ಕಳೆಯಲು ಬಯಸುವ ಪ್ರತಿಭಟನಾಕಾರರು ಮತ್ತು ಬೆಂಬಲಿಗರಿಗೆ ಸಮಾನವಾಗಿ ಆಶ್ರಯ ಮತ್ತು ಸೌಕರ್ಯವನ್ನು ಒದಗಿಸಲು ಇದನ್ನು ವ್ಯವಸ್ಥೆ ಮಾಡಲಾಗಿದೆ.

PHOTO • Joydip Mitra

ಭಗತ್ ಸಿಂಗ್ ಸೊಸೈಟಿಯ ಸ್ನೇಹಿತರು ಪ್ರತಿಭಟನಾಕಾರರಿಗಾಗಿ ಪ್ರಕಟಿಸಲಾಗುವ ಟ್ರಾಲಿ ಟೈಮ್ಸ್ ಪತ್ರಿಕೆಯನ್ನು ವಿತರಿಸುತ್ತಾರೆ. ಅವರು ಉಚಿತ ಗ್ರಂಥಾಲಯ ಮತ್ತು ಪೋಸ್ಟರ್‌ಗಳ ಪ್ರದರ್ಶನವನ್ನು ಸಹ ನಡೆಸುತ್ತಾರೆ ಮತ್ತು ಪ್ರತಿದಿನ ಸಂಜೆ ಚರ್ಚೆಯ ಸೆಷನ್ ಏರ್ಪಡಿಸುತ್ತಾರೆ.

PHOTO • Joydip Mitra

ಪ್ರತಿಭಟನಾಕಾರರಿಗೆ ಸ್ಥಳಾವಕಾಶ ಕಲ್ಪಿಸಲು ಮತ್ತು ಚಳಿ ರಾತ್ರಿಗಳಲ್ಲಿ ಅವರನ್ನು ಬೆಚ್ಚಗಿರಿಸಲು ಪಂಜಾಬ್‌ನ ಎನ್‌ಜಿಒ ಒಂದು ಸಿಂಗು ಪೆಟ್ರೋಲ್ ಪಂಪ್‌ನ ಕಾಂಪೌಂಡ್‌ನಲ್ಲಿ 100 ಚಾರಣದ ಡೇರೆಗಳನ್ನು ಹಾಕಿದೆ; ಅವರು ಅದನ್ನು ಟೆಂಟ್ ಸಿಟಿ ಎಂದು ಕರೆಯುತ್ತಾರೆ.

PHOTO • Joydip Mitra

ಚಂಡೀಗಢದ ವೈದ್ಯ ಸುರಿಂದರ್ ಕುಮಾರ್ ಮತ್ತು ಇತರ ವೈದ್ಯರು ಸೇರಿ ಸಿಂಘುವಿನಲ್ಲಿ ವೈದ್ಯಕೀಯ ಶಿಬಿರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿರುವ ಸುಮಾರು 30 ವೈದ್ಯಕೀಯ ಶಿಬಿರಗಳಲ್ಲಿ ಇದೂ ಒಂದಾಗಿದೆ.

PHOTO • Joydip Mitra

ಹಕೀಮರಾಗಿರುವ ಗುರ್ಮಿತ್‌ ಸಿಂಗ್‌, ಮೂಳೆ ವೈದ್ಯವನ್ನು ಸ್ವಯಂ ಕಲಿತಿದ್ದಾರೆ. ಮತ್ತು ಸಿಂಘುವಿನಲ್ಲಿ ಅವರು ತುಂಬಿದ ಟ್ರಾಲಿಯಲ್ಲಿ ಅಲ್ಲಿಗೆ ಬಂದು ತಲುಪಿದ ಜನರ ಮೈಕೈ ನೋವನ್ನು ಪರಿಹರಿಸಲು ಮಸಾಜ್‌ ಮಾಡುವ ಮೂಲಕ ಪ್ರತಿಭಟನೆಗೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾರೆ .

PHOTO • Joydip Mitra

ಸಿಂಘುವಿನಲ್ಲಿರುವ 'ಟರ್ಬನ್ ಲಂಗರ್', ಅಲ್ಲಿ ಟರ್ಬನ್ ಬಳಕೆದಾರರು ತಮ್ಮ ತಲೆಗೆ ಹೊಸ ಟರ್ಬನ್ ಕಟ್ಟಿಕೊಳ್ಳಬಹುದು. ಟರ್ಬನ್ ಬಳಸದವರೂ ಸಹ ಈ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲವನ್ನು ಸೂಚಿಸಲು ಟರ್ಬನ್ ಕಟ್ಟಿಕೊಳ್ಳುತ್ತಾರೆ.

PHOTO • Joydip Mitra

86 ವರ್ಷದ ಬಾಬಾ ಗುರ್ಪಾಲ್ ಅವರು ಪಟಿಯಾಲ ಬಳಿಯ ಖಾನ್ಪುರ್ ಗೊಂಡಿಯಾ ಗುರುದ್ವಾರದಲ್ಲಿ ಸನ್ಯಾಸಿ ಮತ್ತು ಗ್ರಂಥಿಯಾಗಿದ್ದಾರೆ. ಅವರು ಬಹಳ ತಿಳುವಳಿಕೆಯುಳ್ಳ ವ್ಯಕ್ತಿ  “ಇದು ನಾವೆಲ್ಲ ಮನೆಗಳಿಂದ ಹೊರಬಂದು ನಮ್ಮ ಪಾಲಿನ ಕೊಡುಗೆಯನ್ನು ನೀಡಬೇಕಿರುವ ಸಮಯವಾಗಿದೆ, ಏಕೆಂದರೆ ಇದು ಈಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ನೇರ ಯುದ್ಧ. ಕುರುಕ್ಷೇತ್ರದ ಯುದ್ಧದಲ್ಲೂ [ಮಹಾಭಾರತ] ಇದೇ ನಡೆದಿತ್ತು.”

ಅನುವಾದ - ಶಂಕರ ಎನ್. ಕೆಂಚನೂರು

Joydip Mitra

Joydip Mitra is a freelance photographer based in Kolkata, who documents people, fairs and festivals across India. His work has been published in various magazines, including ‘Jetwings’, ‘Outlook Traveller’, and ‘India Today Travel Plus’.

Other stories by Joydip Mitra
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru