ಮೇ 4ರಂದು ಅಂತ್ಯಕ್ರಿಯೆಗಾಗಿ ಕೊನೆಯ ಎರಡು ಶವಗಳನ್ನು ಸಿದ್ಧಪಡಿಸುವಂತೆ ಹರಿಂದರ್ ಸಿಂಗ್ ತನ್ನ ಸಹೋದ್ಯೋಗಿ ಪಪ್ಪುವಿಗೆ ಹೇಳಿದಾಗ ಆತ ಹೇಳಿದ ಮಾತು ಅವರನ್ನು ಬೆಚ್ಚಿಬೀಳಿಸಿತ್ತು.

ಹರಿಂದರ್‌ "ದೋ ಲೌಂಡೇ ಲೇಟೆ ಹುವೇ ಹೈಂ [ಇಬ್ಬರು ಹುಡುಗರು ಬಿದ್ದುಕೊಂಡಿದ್ದಾರೆ"  ಎಂದು ಹೇಳಿದಾಗ ಅವರ ಸಹೋದ್ಯೋಗಿಗಳಿಗೆ ಆ ಮಾತುಗಳಿಂದ ಆಶ್ಚರ್ಯವಾದರೂ ಅವರು ಕೆಲಸದಲ್ಲಿ ಮಗ್ನತೆಯಿಂದಿರುವುದನ್ನು ನೋಡಿ ವಿನೋದದಿಂದ ಎಲ್ಲರೂ ನಕ್ಕರು. ನವದೆಹಲಿಯ ಅತ್ಯಂತ ವ್ಯಸ್ತ ಸ್ಮಶಾನವಾದ ನಿಗಮ್ ಬೋಧ್ ಘಾಟ್‌ನಲ್ಲಿ ಅವರ ಬಿಡುವಿರದ ಕೆಲಸದ ನಡುವೆ ಇಂತಹ ಹಗುರ ಕ್ಷಣಗಳು ಅಪರೂಪ.

ಆದರೆ ತನ್ನ ಮಾತುಗಳ ಕುರಿತು ವಿವರಿಸಬೇಕಿದೆಯೆಂದು ಹರಿಂದರ್‌ ಅವರಿಗೆ ಎನ್ನಿಸಿತು. ಅವರು ಸ್ಮಶಾನದ ಚಿತಾಗಾರಗಳ (furnaces) ಬಳಿಯ ಸಣ್ಣ ಕೋಣೆಯೊದರಲ್ಲಿ ಸೋದ್ಯೋಗಿಗಳೊಂದಿಗೆ ಕುಳಿತು ರಾತ್ರಿಯ ಊಟ ಮಾಡುತ್ತಿದ್ದರು. ನಿಧಾನವಾಗಿ ಉಸಿರೆಳೆದುಕೊಂಡ ಅವರು (ಈ ಕೊವಿಡ್‌ ಸೃಷ್ಟಿಸಿರುವ ನರಕದಲ್ಲಿ ಉಸಿರಾಡಲು ಸಾಧ್ಯವಿರುವುದು ಕೂಡ ಅದೃಷ್ಟವೇ) "ನೀವು ಅವುಗಳನ್ನು ದೇಹಗಳೆಂದು ಕರೆಯುತ್ತೀರಿ ನಾವು ಲೌಂಡೇ [ಹುಡುಗರು] ಎಂದು ಕರೆಯುತ್ತೇವೆ" ಎಂದರು.

"ಇಲ್ಲಿಗೆ ಕರೆತರಲಾಗುವ ಪ್ರತಿಯೊಂದು ಶವವೂ ನನ್ನಂತೆಯೇ ಯಾರಿಗೋ ಮಗ ಅಥವಾ ಮಗಳು ಆಗಿರುತ್ತಾರೆ" ಎಂದು ಪಪ್ಪು ಮುಂದುವರೆದು ಹೇಳಿದರು. “ಅವರನ್ನು ಚಿತೆಯ ಬೆಂಕಿಯಲ್ಲಿಡುವುದು ನೋವಿನ ಸಂಗತಿ. ಆದರೆ ನಾವು ಅದನ್ನು ಅವರ ಆತ್ಮದ ಸದ್ಗತಿಗಾಗಿ ಮಾಡಲೇಬೇಕು, ಅಲ್ಲವೇ?” ತಿಂಗಳಿಗೂ ಹೆಚ್ಚು ಕಾಲ ನಿಗಮ್ ಬೋಧ್‌ ಸ್ಮಶಾನದಲ್ಲಿ ಸಿಎನ್‌ಜಿ ಮತ್ತು ತೆರೆದ ಸ್ಥಳದ ಕಟ್ಟಿಗೆಯ ಚಿತೆಗಳಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಶವಗಳನ್ನು  ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು.

ಆ ದಿನ, ಮೇ 4ರಂದು ನಿಗಮ್ ಬೋಧ್ ಘಾಟ್‌ನಲ್ಲಿ ಸಿಎನ್‌ಜಿ ಚಿತೆಗಳಲ್ಲಿ 35 ಶವಗಳನ್ನು ಅಂತ್ಯಕ್ರಿಯೆ ಮಾಡಲಾಯಿತು. ಎರಡನೇ ಕೋವಿಡ್ ಅಲೆ ದೆಹಲಿಯನ್ನು ಕಾಡುತ್ತಿದ್ದ ಏಪ್ರಿಲ್ ಮೊದಲ ವಾರಕ್ಕೆ ಹೋಲಿಸಿದರೆ ಈ ಸಂಖ್ಯೆ ಅಂದಿನ ದೈನಂದಿನ ಸರಾಸರಿ 45-50ಕ್ಕಿಂತ ಸ್ವಲ್ಪ ಕಡಿಮೆಯಿತ್ತು. ಆದರೆ ಸಾಂಕ್ರಾಮಿಕ ಪಿಡುಗಿನ ಮೊದಲು, ಶ್ಮಶಾನದ ಸಿಎನ್‌ಜಿ ಚಿತೆಗಳು ತಿಂಗಳಿಗೆ ಸುಮಾರು 100 ಶವಗಳಿಗಷ್ಟೇ ಅಂತ್ಯಕ್ರಿಯೆಯನ್ನು ನಿಭಾಯಿಸುತ್ತಿದ್ದವು.

ದೆಹಲಿಯ ಕಾಶ್ಮೀರ್ ಗೇಟ್ ಬಳಿ ಯಮುನಾ ನದಿಯ ದಡದಲ್ಲಿರುವ ಘಾಟ್‌ನ ಪ್ರವೇಶದ್ವಾರದಲ್ಲೊಂದು ದೊಡ್ಡ ಭಿತ್ತಿ ಚಿತ್ರವಿದೆ. ಅದರಲ್ಲಿ ಹೀಗೆ ಬರೆಯಲಾಗಿದೆ: “ನನ್ನನ್ನು ಇಲ್ಲಿಯವರೆಗೆ ಕರೆತಂದಿದ್ದಕ್ಕಾಗಿ ಧನ್ಯವಾದಗಳು. ಇಲ್ಲಿಂದ ನಾನು ಏಕಾಂಗಿಯಾಗಿ ಮುಂದುವರಿಯುತ್ತೇನೆ.” ಆದರೆ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ -19 ರಾಷ್ಟ್ರ ರಾಜಧಾನಿಯನ್ನು ಆಕ್ರಮಿಸಿಕೊಂಡಾಗ, ಸತ್ತವರು ಒಬ್ಬಂಟಿಯಾಗಿರಲಿಲ್ಲ - ಮರಣಾನಂತರದ ಜೀವನದೆಡೆಗಿನ ಪ್ರಯಾಣದಲ್ಲಿ ಅವರು ಸ್ನೇಹಿತರನ್ನು ಕಂಡುಕೊಂಡಿರಬಹುದು.

Left: New spots created for pyres at Nigam Bodh Ghat on the banks of the Yamuna in Delhi. Right: Smoke rising from chimneys of the CNG furnaces
PHOTO • Amir Malik
Left: New spots created for pyres at Nigam Bodh Ghat on the banks of the Yamuna in Delhi. Right: Smoke rising from chimneys of the CNG furnaces
PHOTO • Amir Malik

ಎಡ: ದೆಹಲಿಯ ಯಮುನಾ ದಡದಲ್ಲಿರುವ ನಿಗಮ್ ಬೋಧ್ ಘಾಟಿನಲ್ಲಿ ಚಿತೆಗಳಿಗಾಗಿ ಹೊಸ ತಾಣಗಳನ್ನು ರಚಿಸಲಾಗಿದೆ. ಬಲ: ಸಿಎನ್‌ಜಿ ಚಿತೆಗಳ ಚಿಮಣಿಗಳಿಂದ ಹೊಗೆ ಏಳುತ್ತಿರುವುದು

ಒಳಗೆ ಹೋಗುವಾಗ, ಕಲುಷಿತ ಯಮುನಾ ನದಿಯ ವಾಸನೆಯೊಂದಿಗೆ ಸುಡುತ್ತಿರುವ ಶವಗಳ ಹಾನಿಕಾರಕ ವಾಸನೆಯು ಗಾಳಿಯನ್ನು ವ್ಯಾಪಿಸುತ್ತಿತ್ತು, ಆ ಕಮಟು ವಾಸನೆ ನಾನು ಧರಿಸಿದ್ದ ಡಬಲ್ ಮಾಸ್ಕನ್ನು ಮೀರಿ ನನ್ನ ಮೂಗಿಗೆ ತಲುಪುತ್ತಿತ್ತು. ನದಿಗೆ ಹತ್ತಿರದಲ್ಲಿ ಸುಮಾರು 25 ಚಿತೆಗಳು ಉರಿಯುತ್ತಿದ್ದವು. ನದಿಯ ದಡಕ್ಕೆ ಹೋಗುವ ಕಿರಿದಾದ ಹಾದಿಯ ಎರಡೂ ಬದಿಗಳ ಹಾದಿಯಲ್ಲಿ ಹೆಚ್ಚಿದ್ದವು - ಬಲಭಾಗದಲ್ಲಿ ಐದು ಚಿತೆಗಳು ಮತ್ತು ಎಡಭಾಗದಲ್ಲಿ ಮೂರು. ಮತ್ತು ಇನ್ನೂ ಹೆಚ್ಚಿನ ಶವಗಳು ತಮ್ಮ ಸರದಿಗಾಗಿ ಕಾಯುತ್ತಿದ್ದವು.

ಸ್ಮಶಾನದ ಆವರಣದಲ್ಲಿ ಖಾಲಿ ಜಾಗವನ್ನು ಸಮತಟ್ಟುಗೊಳಿಸಿ 21 ಹೊಸ ಚಿತೆಗಳಿಗಾಗಿ ಸ್ಥಳವನ್ನು ಸಿದ್ಧಪಡಿಸಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದೂ ಸಾಲುವುದಿಲ್ಲ. ಈ ಜಾಗದಲ್ಲಿ ನಡುವೆ ಎಳೆಯ ಮರವೊಂದು ನಿಂತಿದೆ. ಅದರ ಎಲೆಗಳು ಹೆಣಗಳನ್ನು ಸುಡುವ ಜ್ವಾಲೆ ಸೋಕಿ ಬಾಡಿ ಹೋಗಿವೆ. ಇದು ಕಾಫ್ಕಾನ ಕತೆಗಳಲ್ಲಿ ಬರುವ ರೂಪಕಗಳಂತೆ ದೇಶ ಎಂತಹ ಸ್ಥಿತಿಗೆ ತಳ್ಳಲ್ಪಟ್ಟಿದೆಯೆನ್ನುವುದನ್ನು ಸಾಂಕೇತಿಕವಾಗಿ ತೋರಿಸುವಂತೆ ಕಾಣುತ್ತಿತ್ತು.

ಕಾರ್ಮಿಕರಿಗೂ ಈ ಬಗ್ಗೆ ಒಂದಿಷ್ಟು ತಿಳಿದಿತ್ತು. ಸಿಎನ್‌ಜಿ ಚಿತೆಗಳನ್ನು ಹೊಂದಿದ್ದ ಹಾಲ್‌ ಒಳಗೆ ಜನರು ಅಲ್ಲಿ ಪ್ರಾರ್ಥನಾ ಭಂಗಿಯಲ್ಲಿ ನಿಲ್ಲುತ್ತಿದ್ದರು. ಚಿತೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿದರು. ಅಳುತ್ತಾ ಸತ್ತವರಿಗಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಇತ್ತೀಚೆಗೆಲ್ಲಿ ಮಿನುಗುವ ಟ್ಯೂಬ್‌ಲೈಟುಗಳಿಂದ ಕೂಡಿದ ಆ ಹಾಲ್‌ ಬಳಕೆಯಾಗಿಯೇ ಇಲ್ಲ.

ಅಲ್ಲಿರುವ ಆರು ಚಿತೆಗಳಲ್ಲಿ, "ಮೂರನ್ನು ಕಳೆದ ವರ್ಷ[2020] ಕೊರೋನಾ ಸೋಂಕಿತ ರೋಗಿಗಳ ಶವಗಳು ರಾಶಿಯಾಗಲು ಪ್ರಾರಂಭಿಸಿದ ನಂತರ ಸ್ಥಾಪಿಸಲಾಗಿದೆ" ಎಂದು ಪಪ್ಪು ಹೇಳುತ್ತಾರೆ. ಕೋವಿಡ್ -19 ವಿಸ್ಫೋಟದ ನಂತರ ಸಿಎನ್‌ಜಿ ಚಿತೆಗಳಲ್ಲಿ ಕೇವಲ ಸೋಂಕಿನಿಂದ ಸಾವನ್ನಪ್ಪಿದ ಜನರ ಶವಗಳನ್ನು ಮಾತ್ರ ದಹನ ಮಾಡಲಾಗುತ್ತಿತ್ತು.

ಆಯಾ ಶವದ ಸಂಸ್ಕಾರದ ಸರದಿ ಬಂದಾಗ ಅದರ ಜೊತೆಯಲ್ಲಿರುವ ವ್ಯಕ್ತಿಗಳು ಅಥವಾ ಆಸ್ಪತ್ರೆಯ ಸಿಬ್ಬಂದಿ ಅಥವಾ ಶವಾಗಾರ ಕೆಲಸಗಾರರು ಅದನ್ನು ಚಿತೆಯ ಬಳಿಗೆ ತರುತ್ತಿದ್ದರು. ಅಲ್ಲಿನ ಕೆಲವು ಶವಗಳು ಇತರ ಶವಗಳಿಗಿಂತಲೂ ಅದೃಷ್ಟಶಾಲಿಗಳು, ಅವುಗಳ ಮೇಲೆ ಬಿಳಿ ಬಟ್ಟೆಯನ್ನು ಹೊದ್ದಿಸಿರಲಾಗುತ್ತಿತ್ತು. ಉಳಿದವುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ನೇರವಾಗಿ ಆಂಬುಲೆನ್ಸ್‌ಗಳಿಂದ ತರಲಾಗುತ್ತಿತ್ತು. ಕೆಲವನ್ನು ಸ್ಟ್ರೆಚರ್‌ಗಳಲ್ಲಿಯಾದರೆ ಉಳಿದವನ್ನು ಹಾಗೇ ಕಟ್ಟಡಕ್ಕೆ ಸಾಗಿಸಲಾಗುತ್ತಿತ್ತು.

ನಂತರ ಅಲ್ಲಿ ಶವಸಂಸ್ಕಾರ ನಿರ್ವಹಿಸುವ ಕೆಲಸಗಾರರು ಶವವನ್ನು ಚಕ್ರಗಳಿಂದ ಕೂಡಿದ ಪ್ಲಾಟ್‌ಫಾರ್ಮ್‌ಮೇಲೆ ಇರಿಸುತ್ತಾರೆ. ಮುಂದಿನ ಕಾರ್ಯಗಳಿಗೆ ಚುರುಕುತನ ಅಗತ್ಯವಿರುತ್ತದೆ. ದೇಹವನ್ನು ಚೇಂಬರ್‌ ಒಳಗೆ ತಳ್ಳಿದ ನಂತರ ಅದರ ಬಾಗಿಲನ್ನು ಮುಚ್ಚಿ ಬೋಲ್ಟ್‌ ಹಾಕಬೇಕಾಗುತ್ತದೆ. ಅಲ್ಲಿ ನಿಂತ ನಿಧನ ಹೊಂದಿದವರ ಕುಟುಂಬ ಸದಸ್ಯರು ಪ್ರೀತಿ ಪಾತ್ರರನ್ನು ಕೊನೆಯ ಬಾರಿಗೆ ನೋಡಿ ಕಣ್ಣೀರು ಹರಿಸುತ್ತಾರೆ. ಇತ್ತ ದೊಡ್ಡ ಚಿಮಣಿಯಿಂದ ಗಾಢ ಹೊಗೆ ಮೇಲೇರತೊಡಗುತ್ತದೆ.

Left: A body being prepared for the funeral pyre. Right: Water from the Ganga being sprinkled on the body of a person who died from Covid-19
PHOTO • Amir Malik
Left: A body being prepared for the funeral pyre. Right: Water from the Ganga being sprinkled on the body of a person who died from Covid-19
PHOTO • Amir Malik

ಎಡ: ಚಿತೆಯ ಮೇಲಿಡುವ ಸಲುವಾಗಿ ಶವವನ್ನು ಸಿದ್ಧಗೊಳಿಸುತ್ತಿರುವುದು. ಬಲ: ಕೋವಿಡ್ -19ರಿಂದ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಗಂಗಾ ನದಿಯ ನೀರನ್ನು ಚಿಮುಕಿಸುತ್ತಿರುವುದು

"ಆಯಾ ದಿನದ ಮೊದಲ ಶವವು ಸಂಪೂರ್ಣವಾಗಿ ಸುಟ್ಟುಹೋಗಲು ಎರಡು ಗಂಟೆ ಸಮಯ ಬೇಕಾಗುತ್ತದೆ" ಎಂದು ಪಪ್ಪು ನನಗೆ ಹೇಳಿದರು, "ಚೇಂಬರ್ ಬಿಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಅದರ ನಂತರದ ದೇಹಗಳು ತಲಾ ಒಂದೂವರೆ ಗಂಟೆ ತೆಗೆದುಕೊಳ್ಳುತ್ತವೆ.” ಒಂದು ಚಿತೆಯಲ್ಲಿ ದಿನವೊಂದಕ್ಕೆ 7-9 ಶವಗಳನ್ನು ಸುಡಬಲ್ಲದು.

ನಿಗಮ್ ಬೋಧ್ ಘಾಟ್‌ನಲ್ಲಿರುವ ಚಿತೆಗಳನ್ನು ನಾಲ್ಕು ಕಾರ್ಮಿಕರು ನಿರ್ವಹಿಸುತ್ತಿದ್ದಾರೆ - ಎಲ್ಲರೂ ಉತ್ತರ ಪ್ರದೇಶದ ಪರಿಶಿಷ್ಟ ಜಾತಿಯ ಕೋರಿ ಸಮುದಾಯಕ್ಕೆ ಸೇರಿದವರು. ಹಿರಿಯರಾದ ಹರೀಂದರ್, 55, ಮೂಲತಃ  ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯವರು. ಅವರು 2004ರಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ. 2011ರಲ್ಲಿ ಸೇರಿದ ಪಪ್ಪು, 39, ಉತ್ತರ ಪ್ರದೇಶದ ಕಾನ್ಶಿರಾಮ್ ನಗರ ಜಿಲ್ಲೆಯ ಸೊರೊನ್ ಬ್ಲಾಕ್‌ನವರು. ಈ ಉದ್ಯೋಗಕ್ಕೆ ಹೊಸಬರಾದ ಇತರ ಇಬ್ಬರೂ ರಾಜು ಮೋಹನ್ (37) ಮತ್ತು ರಾಕೇಶ್ (28) ಸೊರೊನ್ ಮೂಲದವರು.

ಇಲ್ಲಿರುವ ಪ್ರತಿಯೊಬ್ಬರೂ ಏಪ್ರಿಲ್-ಮೇ ತಿಂಗಳಲ್ಲಿ ಪ್ರತಿದಿನ 15-17 ಗಂಟೆಗಳ ಕಾಲ - ಬೆಳಿಗ್ಗೆ 9ರಿಂದ ಮಧ್ಯರಾತ್ರಿಯವರೆಗೆ - ಕೆಲಸದ ಹೊರೆಯನ್ನು ನಿಭಾಯಿಸುವ ಸಲುವಾಗಿ ಅಲ್ಲಿನ ಚಿತಾಗರದ 840 ಡಿಗ್ರಿ ಸೆಲ್ಸಿಯಸ್‌ ಬಿಸಿಗೆ ವೈರಸ್‌ಗಳ ಅಪಾಯವನ್ನು ಇಲ್ಲವಾಗಿಸಿರುವುದರ ಹೊರತಾಗಿಯು ​ಪ್ರಾಣವನ್ನೇ ಪಣಕ್ಕಿಟ್ಟು ದುಡಿದಿದ್ದಾರೆ. "ರಾತ್ರಿ ಅದನ್ನು ಸ್ವಿಚ್ ಆಫ್ ಮಾಡಿದ ನಂತರ,   ಶವವೊಂದನ್ನು ಅದರಲ್ಲಿ ಇರಿಸಿದರೆ ಬೆಳಿಗ್ಗೆ ನಮಗೆ ಸಿಗುವುದು ಬೂದಿ" ಎಂದು ಹರಿಂದರ್ ಹೇಳಿದರು.

ಅವರು ಯಾವುದೇ ಮಧ್ಯಂತರ ವಿರಾಮಗಳಿಲ್ಲದೆ ಕೆಲಸ ಮಾಡುತ್ತಿದ್ದರು. "ನೀರು ಅಥವಾ ಚಹಾ ಕುಡಿಯಲು ನಮಗೆ ಸಮಯ ಸಿಗದಿರುವಾಗ ನಾವು ಹೇಗೆ ವಿರಾಮ ಪಡೆಯುವುದು?" ಪಪ್ಪು ಹೇಳಿದರು. "ನಾವು ಒಂದೆರಡು ಗಂಟೆಗಳ ಕಾಲ ಇಲ್ಲಿಂದ ಹೊರ ಹೋದರೂ ಇಲ್ಲಿ ಗೊಂದಲವೇರ್ಪಡುತ್ತದೆ.”

ಆದರೂ ಅವರಲ್ಲಿ ಒಬ್ಬರೂ ಅಲ್ಲಿನ ಖಾಯಂ ಕೆಲಸಗಾರರಲ್ಲ. ನಿಗಮ್ ಬೋಧ್ ಘಾಟ್ ಪುರಸಭೆಯ ಆಡಳಿತದಡಿಯಲ್ಲಿರುವ ಒಂದು ಚಿತಾಗಾರವಾಗಿರುವ ಇದನ್ನು, ಬಡಿ ಪಂಚಾಯತ್ ವೈಶ್ಯ ಬೀಸೆ ಅಗರ್ವಾಲ್ (ಈ ಪ್ರದೇಶದ ಜನರು ಇದನ್ನು ‘ಸಂಸ್ಥಾ’ ಎಂದು ಕರೆಯುತ್ತಾರೆ) ಎಂಬ ದತ್ತಿ ಸಂಸ್ಥೆ ನಿರ್ವಹಿಸುತ್ತದೆ.

ಸಂಸ್ಥೆ ಹರಿಂದರ್‌ ಅವರಿಗೆ ತಿಂಗಳಿಗೆ 16,000 ರೂ ವೇತನ ನೀಡುತ್ತದೆ. ಎಂದರೆ ದಿನವೊಂದಕ್ಕೆ 533 ರೂಪಾಯಿಗಳು.  ದಿನವೊಂದಕ್ಕೆ 8 ಶವಗಳನ್ನು ಸುಟ್ಟರೆ ಪ್ರತಿ ಶವಕ್ಕೆ 66 ರೂ. ಪಪ್ಪು ಅವರಿಗೆ ಮಾಸಿಕ 12,000 ರೂಪಾಯಿಗಳ ವೇತನ ನೀಡಲಾಗುತ್ತಿದ್ದರೆ, ರಾಜು ಮೋಹನ್ ಮತ್ತು ರಾಕೇಶ್ ಅವರಿಗೆ ತಲಾ 8,000 ರೂ. ನೀಡಲಾಗುತ್ತಿದೆ.  “ಸಂಸ್ಥಾ ನಮ್ಮ ಸಂಬಳವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಆದರೆ ಎಷ್ಟು ಹೆಚ್ಚಿಸಲಾಗುವುದೆಂದು ಹೇಳಲಿಲ್ಲ,” ಎಂದು ಹರಿಂದರ್ ಹೇಳಿದ್ದರು.

Left: Harinder Singh. Right: The cremation workers share a light moment while having dinner in a same room near the furnace
PHOTO • Amir Malik
Left: Harinder Singh. Right: The cremation workers share a light moment while having dinner in a same room near the furnace
PHOTO • Amir Malik

ಎಡ: ಹರಿಂದರ್ ಸಿಂಗ್. ಬಲ: ಚಿತಾಗಾರದ ಬಳಿಯ ಕೋಣೆಯಲ್ಲಿ ಊಟ ಮಾಡುತ್ತಿರುವ ರಾಜು ಮೋಹನ್, ಹರಿಂದರ್, ರಾಕೇಶ್ ಮತ್ತು ಪಪ್ಪು ಒಂದು ಲಘು ಕ್ಷಣವನ್ನು ಹಂಚಿಕೊಳ್ಳುತ್ತಿರುವುದು

ಅದಾಗ್ಯೂ ಶವಸಂಸ್ಕಾರವೊಂದಕ್ಕೆ 1,500 ರೂ (ಕೊವಿಡ್‌ ಬರುವ ಮೊದಲು 1,000 ರೂ.) ಶುಲ್ಕವನ್ನು ವಿಧಿಸುವ ಸಂಸ್ಥಾ ಸಂಬಳ ಹೆಚ್ಚಿಸುವ ಯೋಚನೆಯಲ್ಲಿಲ್ಲ. ಅದರ ಪ್ರಧಾನ ಕಾರ್ಯದರ್ಶಿ ಸುಮನ್ ಗುಪ್ತಾ ಅವರು ನನಗೆ ಹೀಗೆ ಹೇಳಿದರು: "ನಾವು ಅವರ ಸಂಬಳವನ್ನು ಹೆಚ್ಚಿಸಿದರೆ, ಸಂಸ್ಥೆಯು ವರ್ಷವಿಡೀ ಹೆಚ್ಚಿದ ಮೊತ್ತದ ಸಂಬಳವನ್ನೇ ನೀಡಬೇಕಾಗುತ್ತದೆ. ಹೀಗಾಗಿ ಅವರಿಗೆ ಇನ್ಸೆಂಟಿವ್ ನೀಡಲಾಗುತ್ತಿದೆ"

ಕಾರ್ಮಿಕರು ರಾತ್ರಿ ಊಟ ಮಾಡುತ್ತಿದ್ದ ಕೋಣೆಯನ್ನು ಕೋಣೆಯೆನ್ನಲು ಸಾಧ್ಯವಿರಲಿಲ್ಲ. ಚಿತೆಯಿಂದ ಕೇವಲ ಐದು ಮೀಟರ್‌ ದೂರದಲ್ಲಿರುವ ಇದು ಬೇಸಿಗೆಯನ್ನು ಬೆವರಿನ ಸ್ನಾನವನ್ನೇ ಮಾಡಿಸಿಬಿಡುತ್ತದೆ. ಸೆಕೆಯ ಕಾರಣಕ್ಕಾಗಿ ಪಪ್ಪು ಎಲ್ಲರಿಗೂ ತಂಪು ಪಾನೀಯಗಳನ್ನು ತಂದರು. ಅದರ ಬೆಲೆ 50 ರೂಪಾಯಿಗಳು. ಎಂದರೆ ಆ ದಿನ ಅವರ ಸುಟ್ಟ ಶವವೊಂದಕ್ಕೆ ಅವರಿಗೆ ನೀಡಲಾಗುವ ಶುಲ್ಕ.

ಒಂದು ಶವವನ್ನು ಸುಡಲು ಸುಮಾರು 14 ಕಿಲೋ ಸಿಎನ್‌ಜಿ ಬೇಕಾಗುತ್ತದೆಂದು ಪಪ್ಪು ನನಗೆ ನಂತರ ಹೇಳಿದ್ದರು. “ಮೊದಲ ಶವಕ್ಕೆ ನಮ್ಮ ಅಡಿಗೆಮನೆಗಳಲ್ಲಿ ಬಳಸುವ ಎರಡು ಡೊಮೆಸ್ಟಿಕ್ ಸಿಲಿಂಡರ್‌ಗಳಷ್ಟು ಅನಿಲ ಬೇಕಾಗುತ್ತದೆ.‌ ನಂತರ ಕಡಿಮೆ ಅಗತ್ಯವಿರುತ್ತದೆ - ಒಂದರಿಂದ ಒಂದೂವರೆ ಸಿಲಿಂಡರ್‌ಗಳು ಬೇಕಾಗುತ್ತವೆ.”‌ ಏಪ್ರಿಲ್‌ ತಿಂಗಳಿನಲ್ಲಿ, ನಿಗಮ್ ಬೋಧ್ ಚಿತಾಗಾರದ ಸಿಎನ್‌ಜಿ ಚಿತೆಗಳು 543 ಶವಗಳನ್ನು ದಹನ ಮಾಡಿವೆ ಎಂದು ಗುಪ್ತಾ ಹೇಳಿದರು, ಮತ್ತು ಆ ತಿಂಗಳ ಸಿಎನ್‌ಜಿ ಬಿಲ್ 3,26,960 ರೂ ಬಂದಿದೆ.

ಕಾರ್ಮಿಕರು ಚೇಂಬರಿನ ಬಾಗಿಲನ್ನು ಎತ್ತಿ ದೇಹವನ್ನು ಉದ್ದನೆಯ ಕೋಲಿನಿಂದ ತಳ್ಳುವ ಮೂಲಕ ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತಾರೆ, ಅದನ್ನು ಯಂತ್ರದ ಆಳಕ್ಕೆ ತಳ್ಳುತ್ತಾರೆ. "ನಾವು ಹಾಗೆ ಮಾಡದಿದ್ದರೆ, ದೇಹವು ಸಂಪೂರ್ಣವಾಗಿ ಸುಡಲು ಕನಿಷ್ಠ 2-3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ" ಎಂದು ಹರಿಂದರ್ ಹೇಳಿದರು. ನಾವು ಸಿಎನ್‌ಜಿಯನ್ನು ಉಳಿಸಲು ಬೇಗನೆ ಮುಗಿಸಬೇಕು. ಇಲ್ಲದಿದ್ದರೆ ಸಂಸ್ಥೆಗೆ ನಷ್ಟವಾಗುತ್ತದೆ ”

ಸಂಸ್ಥೆಯ ವೆಚ್ಚವನ್ನು ಉಳಿಸುವಲ್ಲಿ ಅವರ ಪ್ರಯತ್ನದ ಹೊರತಾಗಿಯೂ, ಶವಸಂಸ್ಕಾರ ನಡೆಸುವ ಕಾರ್ಮಿಕರ ವೇತನವನ್ನು ಹೆಚ್ಚಿಸಿ ಎರಡು ವರ್ಷಗಳಾಗಿವೆ. "ನಾವು ಈಗ ಕೋವಿಡ್ ಪೀಡಿತ ದೇಹಗಳನ್ನು ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ, ನಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದೇವೆ" ಎಂದು ಪಪ್ಪು ಹೇಳಿದರು, ಹೆಚ್ಚು ಸಂಬಳ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ʼಸಂಸ್ಥೆ ದಾನ ಮತ್ತು ದೇಣಿಗೆಗಳಿಂದ ನಡೆಯುತ್ತಿದೆ ನಾವು ಏನು ಮಾಡಲು ಸಾಧ್ಯ?ʼ ಎಂದು ನಮ್ಮನ್ನು ಕೇಳುತ್ತಾರೆ’” ಹರಿಂದರ್ ಮುಂದುವರೆದು ಹೇಳುತ್ತಾರೆ. ಅಕ್ಷರಶಃ, ಅವರ ಪಾಲಿಗೆ ಏನೂ ಮಾಡಲಾಗಿಲ್ಲ.

Pappu (left) cuts bamboo into pieces (right) to set up a pyre inside the CNG furnace
PHOTO • Amir Malik
Pappu (left) cuts bamboo into pieces (right) to set up a pyre inside the CNG furnace
PHOTO • Amir Malik

ಪಪ್ಪು 2011ರಿಂದ ನಿಗಮಬೋಧ್ ಘಾಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಎನ್‌ಜಿ ಚೇಂಬರ್‌ ಒಳಗಿನ ಚಿತೆಗಾಗಿ ಬಿದಿರನ್ನು ತುಂಡುಗಳಾಗಿ ಕತ್ತರಿಸುವುದು ಅವರ ಅನೇಕ ಕೆಲಸಗಳಲ್ಲಿ ಒಂದಾಗಿದೆ

ಅವರಿಗೆ ಎರಡೂ ಡೋಸ್‌ ಲಸಿಕೆಯೂ ದೊರೆತಿಲ್ಲ. ಮುಂಚೂಣಿ ಕಾರ್ಮಿಕರಿಗೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಪಪ್ಪು ಮತ್ತು ಹರಿಂದರ್ ತಮ್ಮ ಮೊದಲ ಲಸಿಕೆ ಪ್ರಮಾಣವನ್ನು ಪಡೆದರು. “ಸಮಯವಿಲ್ಲದ ಕಾರಣ ನಾನು ಎರಡನೇ ಬಾರಿಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಶ್ಮಶಾನದ ಕೆಲಸದಲ್ಲಿ ನಿರತನಾಗಿದ್ದೆ” ಎಂದು ಪಪ್ಪು ಹೇಳಿದರು. ಅವರ ಲಸಿಕೆ ಪೂರ್ಣಗೊಂಡಿಲ್ಲ. ನನಗೆ ಕರೆ ಬಂದಾಗ, ವ್ಯಾಕ್ಸಿನೇಷನ್ ಕೇಂದ್ರದ ವ್ಯಕ್ತಿಗೆ ನನ್ನ ಲಸಿಕೆಯನ್ನು ಬೇರೆಯವರಿಗೆ ನೀಡುವಂತೆ ಹೇಳಿದೆ."

ಪಪ್ಪು ಬೆಳಿಗ್ಗೆ ಮತ್ತೊಂದು ಕೆಲಸ ಮಾಡಿದರು. ಹಿಂದಿನ ದಿನ ಬಂದ ಸಂಬಂಧಿಕರು ಚಿತೆಯ ಬಳಿ ಮತ್ತು ಅದರ ಕೆಳಗೆ ಡಸ್ಟ್‌ಬಿನ್‌ನಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಕಿಟ್‌ಗಳನ್ನು ಬಿದ್ದಿರುವುದನ್ನು ಅವರು ಗಮನಿಸಿದರು. ಸುರಕ್ಷತೆಗಾಗಿ ಅವರನ್ನು ಹೊರಗೆ ಹಾಕಬೇಕೆನ್ನುವ ನಿಯಮವಿತ್ತು, ಆದರೆ ಅನೇಕ ಜನರು ಅವುಗಳನ್ನು ಅಲ್ಲಿಯೇ ಎಸೆದಿದ್ದರು. ಪಪ್ಪು ಈ ಕಿಟ್‌ಗಳನ್ನು ಕೋಲುಗಳ ಸಹಾಯದಿಂದ ತೆಗೆದುಕೊಂಡು ದೊಡ್ಡ ಡಸ್ಟ್‌ಬಿನ್‌ನಲ್ಲಿ ಹಾಕಿದರು. ವಿಪರ್ಯಾಸವೆಂದರೆ ಪಪ್ಪು ಸ್ವತಃ ಯಾವುದೇ ಪಿಪಿಇ ಧರಿಸಿರಲಿಲ್ಲ, ಮತ್ತು ಆ ಸಮಯದಲ್ಲಿ ಅವರು ಕೈಗವಸುಗಳನ್ನು ಸಹ ಹಾಕಿಕೊಂಡಿರಲಿಲ್ಲ.

ಚಿತೆಗಳ ಬಳಿ ಅಸಹನೀಯ ಶಾಖವಿರುವುದರಿಂದಾಗಿ ಪಿಪಿಇ ಧರಿಸುವುದು ಅಸಾಧ್ಯ ಎಂದು ಪಪ್ಪು ಹೇಳುತ್ತಾರೆ. "ಅಲ್ಲದೆ, ಪಿಪಿಇಗೆ ಬೆಂಕಿ ಹಿಡಿಯುವ ಸಾಧ್ಯತೆಯಿದೆ, ವಿಶೇಷವಾಗಿ ಶವದ ಹೊಟ್ಟೆಯು ಸ್ಫೋಟಗೊಂಡು ಜ್ವಾಲೆಗಳ ಒಳಗೆ ಉರಿಯುತ್ತಿರುವಾಗ ಬಾಗಿಲಿನ ಮೂಲಕ ಕಿಡಿಗಳು ಮೈಗೆ ಸಿಡಿಯುತ್ತವೆ. ಆಗ ಬೆಂಕಿ ಹೊತ್ತಿಕೊಂಡರೆ  ಕಿಟ್‌ ತೆಗೆಯಲು ಬಹಳ ಸಮಯ ಹಿಡಿಸುತ್ತದೆ. ಅದು ಸಾವಿಗೂ ಕಾರಣವಾಗಬಲ್ಲದು" ಎನ್ನುತ್ತಾರೆ. ನಂತರ ಹರೀಂದರ್ ಹೇಳಿದರು: “ನನಗೆ ಕಿಟ್ ಧರಿಸಿಕೊಂಡರೆ ಉಸಿರುಗಟ್ಟಿದಂತಾಗುತ್ತದೆ. ಅದನ್ನು ಧರಿಸಿ ನಾನು ಸಾಯುವುದೇ? "

ಅವರಿಗಿದ್ದ ಏಕೈಕ ರಕ್ಷಣೆಯೆಂದರೆ ಮಾಸ್ಕ್‌ ಮಾತ್ರ, ಅದನ್ನು ಅವರು ದಿನಗಳಿಂದ ಧರಿಸುತ್ತಿದ್ದರು. “ನಾವು ವೈರಸ್ ಸೋಂಕಿಗೆ ಒಳಗಾಗುವ ಬಗ್ಗೆ ಚಿಂತಿತರಾಗಿದ್ದೇವೆ. ಆದರೆ ಇದು ನಾವು ನಿರ್ಲಕ್ಷಿಸಲಾಗದ ಬಿಕ್ಕಟ್ಟು,” ಎಂದು ಪಪ್ಪು ಹೇಳಿದರು. "ಜನರು ಈಗಾಗಲೇ ದುಃಖಿತರಾಗಿದ್ದಾರೆ, ನಾವು ಅವರನ್ನು ಹತಾಶರಾಗುವಂತೆ ಮಾಡಲು ಸಾಧ್ಯವಿಲ್ಲ."

ಅಪಾಯದ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಒಮ್ಮೆ ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡುವಾಗ, ತನ್ನ ಎಡಗೈಗೆ ಜ್ವಾಲೆ ತಾಗಿ ಅದು ಗಾಯವಾಗಿ ಕಲೆ ಉಳಿದುಬಿಟ್ಟಿತ್ತೆಂದು ಪಪ್ಪು ಹೇಳಿದರು, “ನಾನು ಅದನ್ನು ಅನುಭವಿಸಿದೆ, ನೋವು ಕೂಡ ಇದೆ, ಆದರೆ ಈಗ ನಾವು ಏನು ಮಾಡಬಹುದು. ಅದಕ್ಕೂ ಒಂದು ಗಂಟೆ ಮೊದಲು ನಾನು ಹರಿಂದರ್ ಅವರನ್ನು ಭೇಟಿಯಾದಾಗ, ಹರಿಂದರ್ ಕೂಡ ಗಾಯಗೊಂಡಿದ್ದರು. "ನಾನು ಬಾಗಿಲು ಮುಚ್ಚುವಾಗ ಅದು ನನ್ನ ಮೊಣಕಾಲಿಗೆ ಬಡಿಯಿತು" ಎಂದು ಅವರು ನನಗೆ ಹೇಳಿದರು.

Left: The dead body of a Covid-positive patient resting on a stretcher in the crematorium premises. Right: A body burning on an open pyre at Nigam Bodh Ghat
PHOTO • Amir Malik
Left: The dead body of a Covid-positive patient resting on a stretcher in the crematorium premises. Right: A body burning on an open pyre at Nigam Bodh Ghat
PHOTO • Amir Malik

ಎಡ: ಶವಸಂಸ್ಕಾರದ ಆವರಣದಲ್ಲಿ ಸ್ಟ್ರೆಚರ್ ಮೇಲೆ ಮಲಗಿಸಲಾಗಿರುವ ಕೋವಿಡ್-ಪಾಸಿಟಿವ್ ರೋಗಿಯ ಮೃತ ದೇಹ. ಬಲ: ನಿಗಮ್ ಬೋಧ್ ಘಾಟ್‌ನಲ್ಲಿ ತೆರೆದ ಚಿತೆಯ ಮೇಲೆ ದೇಹ ಉರಿಯುತ್ತಿರುವುದು

“ಸಿಎನ್‌ಜಿ ಚಿತೆಯ ಬಾಗಿಲಿನ ಹ್ಯಾಂಡಲ್ ಮುರಿದುಹೋಗಿದೆ. ನಾವು ಅದನ್ನು ಬಿದಿರಿನ ಕೋಲಿನಿಂದ ಸರಿಪಡಿಸಿದ್ದೇವೆ” ಎಂದು ರಾಜು ಮೋಹನ್ ಹೇಳಿದರು. “ನಾವು ನಮ್ಮ ಮೇಲ್ವಿಚಾರಕರಿಗೆ ಬಾಗಿಲು ರಿಪೇರಿ ಮಾಡಿಸುವಂತೆ ಕೇಳಿದೆವು. ‘ನಾವು ಅದನ್ನು ಲಾಕ್‌ಡೌನ್‌ನಲ್ಲಿ ಹೇಗೆ ಸರಿಪಡಿಸಲು ಸಾಧ್ಯ?’ ಅವರು ನಮಗೆ ಹೇಳಿದರು. ಏನೂ ಮಾಡಲಾಗುವುದಿಲ್ಲ ಎಂದು ನಮಗೆ ತಿಳಿದಿದೆ,” ಎಂದು ಹರಿಂದರ್ ಹೇಳಿದರು.

ಅವರಿಗೆ ಅಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯೂ ಲಭ್ಯವಿಲ್ಲ

ಇದರೊಂದಿಗೆ ಶವವನ್ನು ಚಿತೆಯೊಳಗೆ ಕಳಿಸುವ ಮೊದಲು ಅದನ್ನು ನೆಲದ ಮೇಲಿರಿಸಿದಾಗ ಸಂಬಂಧಿಕರು ಸುರಿಯುವ ತುಪ್ಪ ಮತ್ತು ನೀರಿನಿಂದಾಗಿ ಜಾರಿ ಬೀಳುವ ಅಪಾಯವೂ ಇತ್ತು.  “ಇದನ್ನು ಅನುಮತಿಸಲಾಗುವುದಿಲ್ಲ. ಇದು ಅನಾರೋಗ್ಯಕರ ಮತ್ತು ಅಪಾಯಕಾರಿ, ಆದರೆ ಜನರು ನಿರ್ಬಂಧಗಳನ್ನು ನಿರ್ಲಕ್ಷಿಸುತ್ತಾರೆ” ಎಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿ ಅಮರ್ ಸಿಂಗ್ ಹೇಳುತ್ತಾರೆ. ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ನಿಗಮ್ ಬೋಧ್ ಘಾಟ್‌ನ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ನೇಮಕಗೊಂಡ ಏಳು ಎಂಸಿಡಿ ಮೇಲ್ವಿಚಾರಕರಲ್ಲಿ ಅವರೂ ಒಬ್ಬರು.

ರಾತ್ರಿ 8 ಗಂಟೆಯ ಮೊದಲು ಬಂದ ಮೃತ ದೇಹಗಳನ್ನು ಅದೇ ದಿನ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಸಿಂಗ್ ಹೇಳಿದರು. ನಂತರ ಬರುವವರು ಮರುದಿನ ಬೆಳಿಗ್ಗೆ ತನಕ ಕಾಯಬೇಕಾಗಿರುತ್ತದೆ, ಮತತೆ ಅಲ್ಲಿ ನೋಡಿಕೊಳ್ಳುವುದಕ್ಕೂ ಹತ್ತಿರ ಯಾರು ಬರಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಂಬುಲೆನ್ಸ್ ವೆಚ್ಚವು ಹೆಚ್ಚಾಗುತ್ತದೆ, ಏಕೆಂದರೆ ಅವರು ರಾತ್ರಿಯಿಡೀ ಅಲ್ಲಿಯೇ ಇರಬೇಕಾಗುತ್ತದೆ. "ಈ ಸಮಸ್ಯೆಗೆ ತಕ್ಷಣದ ಪರಿಹಾರವೆಂದರೆ ಚಿತಾಗಾರವನ್ನು ದಿನವಿಡೀ ನಡೆಸುವುದು."

ಆದರೆ ಅದು ಸಾಧ್ಯವೇ? "ಯಾಕಿಲ್ಲ?" ಸಿಂಗ್ ಕೇಳುತ್ತಾರೆ. “ನೀವು ತಂದೂರ್‌ನಲ್ಲಿ ಕೋಳಿಯನ್ನು ರೋಸ್ಟ್‌ ಮಾಡಿದಾಗ, ತಂದೂರ್ ಹಾಗೇ ಇರುತ್ತದೆ. ಇಲ್ಲಿರುವ ಚಿತೆಗಳು 24 ಗಂಟೆಗಳ ಕಾಲ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಸಂಸ್ಥೆಯು ಅದನ್ನು ಅನುಮತಿಸುವುದಿಲ್ಲ.” "ಮನುಷ್ಯನಂತೆಯೇ ಯಂತ್ರಕ್ಕೂ ಸ್ವಲ್ಪ ವಿಶ್ರಾಂತಿ ಬೇಕು" ಎಂದು ಹೇಳುವ ಪಪ್ಪು ಈ ಪ್ರಸ್ತಾಪವನ್ನು ತಳ್ಳಿ ಹಾಕುತ್ತಾರೆ.

ಆದರೆ, ಸ್ಮಶಾನದಲ್ಲಿ ಕಾರ್ಮಿಕರ ತೀವ್ರ ಕೊರತೆ ಇದೆ ಎಂದು ಅಮರ್ ಸಿಂಗ್ ಮತ್ತು ಪಪ್ಪು ಇಬ್ಬರೂ ಸರ್ವಾನುಮತದಿಂದ ಅಭಿಪ್ರಾಯಪಟ್ಟರು. "ಅವರಲ್ಲಿ ಯಾರಿಗಾದರೂ ಏನಾದರೂ ಸಂಭವಿಸಿದಲ್ಲಿ, ಈಗಾಗಲೇ ಉಸಿರುಗಟ್ಟಿಸುವಷ್ಟು ಒತ್ತಡವಿರುವ ಕೆಲಸದಲ್ಲಿ ವ್ಯತ್ಯಯವುಂಟಾಗಿಬಿಡುತ್ತದೆ" ಎಂದು ಸಿಂಗ್ ಹೇಳಿದರು. ಕಾರ್ಮಿಕರಿಗೆ ಯಾವುದೇ ವಿಮೆ ಇಲ್ಲ ಎಂದು ಅವರು ಹೇಳಿದರು. ಪಪ್ಪು ಮತ್ತೊಮ್ಮೆ ವಿಭಿನ್ನವಾಗಿ ಯೋಚಿಸಿದರು, "ಹರಿಂದರ್ ಮತ್ತು ನನ್ನಂತಹ ಹೆಚ್ಚಿನ ಕೆಲಸಗಾರರು ಇದ್ದಿದ್ದರೆ, ಇಲ್ಲಿ ವಿಷಯಗಳು ಸುಲಭವಾಗುತ್ತಿದ್ದವು, ಮತ್ತು ನಮಗೆ ಒಂದಿಷ್ಟು ವಿಶ್ರಾಂತಿ ಸಿಗುತ್ತಿತ್ತು." ಎಂದು ಅವರು ಹೇಳಿದರು.

Left: The large mural at the entrance of Nigam Bodh Ghat. Right: A garland of marigold flowers and dried bananas left on the ashes after cremation
PHOTO • Amir Malik
Left: The large mural at the entrance of Nigam Bodh Ghat. Right: A garland of marigold flowers and dried bananas left on the ashes after cremation
PHOTO • Amir Malik

ಎಡ: ನಿಗಮ್ ಬೋಧ್ ಘಾಟ್‌ನ ಪ್ರವೇಶದ್ವಾರದಲ್ಲಿನ ದೊಡ್ಡ ಮ್ಯೂರಲ್. ಬಲ: ಚೆಂಡು ಹೂವುಗಳ ಮಾಲೆ  ಮತ್ತು ಒಣಗಿದ ಬಾಳೆಹಣ್ಣುಗಳು ದಹನದ ನಂತರ ಚಿತಾಭಸ್ಮದ ಮೇಲೆ ಬಾಕಿಯಾಗಿರುವುದು

ಈ ನಾಲ್ಕು ಕಾರ್ಮಿಕರಲ್ಲಿ ಒಬ್ಬರಿಗೆ ಏನಾದರೂ ಸಂಭವಿಸಿದರೆ? ನಾನು ಅದೇ ಪ್ರಶ್ನೆಯನ್ನು ಸಂಸ್ಥಾ ಪ್ರಧಾನ ಕಾರ್ಯದರ್ಶಿ ಸುಮನ್ ಗುಪ್ತಾ ಅವರ ಬಳಿ ಕೇಳಿದೆ. ಅವರ ಉತ್ತರ ಹೀಗಿತ್ತು, “ಆಗ ಉಳಿದ ಮೂವರು ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ನಾವು ಹೊರಗಿನಿಂದ ಕಾರ್ಮಿಕರನ್ನು ಕರೆತರುತ್ತೇವೆ. ಅವರಿಗೆ ಇನ್ಸೆಂಟಿವ್‌ ಕೂಡ ನೀಡಲಾಗುತ್ತದೆ, "ನಾವು ಅವರಿಗೆ ಆಹಾರವನ್ನು ನೀಡುವುದಿಲ್ಲವೆಂದಲ್ಲ. ನಾವು ಅವರಿಗೆ ಆಹಾರ, ಔಷಧಿಗಳು ಮತ್ತು ಸ್ಯಾನಿಟೈಜರ್‌ಗಳನ್ನು ಸಹ ನೀಡುತ್ತೇವೆ.”

ಹರಿಂದರ್ ಮತ್ತು ಅವರ ಸಹಚರರು ಸಣ್ಣ ಕೋಣೆಯಲ್ಲಿ ಊಟ ಮಾಡುತ್ತಿರುವಾಗ, ಬೆಂಕಿಯು ಹತ್ತಿರದ ಚಿತೆಯು ಮೃತ ದೇಹವನ್ನು ಸುಡುತ್ತಿತ್ತು. ತನ್ನ ಗಾಜಿನಲ್ಲಿ ಲೋಟದಲ್ಲಿ ಸ್ವಲ್ಪ ವಿಸ್ಕಿಯನ್ನು ಸುರಿಯುತ್ತಾ ಹರಿಂದರ್ ಹೇಳಿದ್ದು; “ನಾವು [ಮದ್ಯ] ಕುಡಿಯಲೇಬೇಕು. ಅದು ಇಲ್ಲದೆ, ನಮಗೆ ಇಲ್ಲಿ ಬದುಕುವುದು ಅಸಾಧ್ಯ."

ಕೋವಿಡ್ ಮಹಾಮಾರಿಗೂ ಮೊದಲು, ಅವರು ದಿನಕ್ಕೆ ಮೂರು ಪೆಗ್ ವಿಸ್ಕಿಯೊಂದಿಗೆ ಕೆಲಸ ಮಾಡುತ್ತಿದ್ದರು (ಒಂದು ಪೆಗ್‌ನಲ್ಲಿ 60 ಮಿಲಿ ಮದ್ಯವಿರುತ್ತದೆ), ಆದರೆ ಈಗ ಅವರು ದಿನವಿಡೀ ಕುಡಿಯಬೇಕಾಗಿರುತ್ತದೆ, ಆಗಲಷ್ಟೇ ಅವರಿಗೆ ಕೆಲಸ ಮಾಡಲು ಸಾಧ್ಯ. ಪಪ್ಪು ಹೇಳುತ್ತಾರೆ, “ನಾವು ಬೆಳಿಗ್ಗೆ ಕ್ವಾರ್ಟರ್ [180 ಮಿಲಿ] ಕುಡಿಯಬೇಕು, ಮಧ್ಯಾಹ್ನ, ಸಂಜೆ, ಮತ್ತು ರಾತಿ ಊಟದ ನಂತರ ಒಂದೊಂದು ಕ್ವಾರ್ಟರ್‌ ಕುಡಿಯುತ್ತೇವೆ. ಕೆಲವೊಮ್ಮೆ, ಮನೆಗೆ ಹಿಂದಿರುಗಿದ ನಂತರವೂ ನಾವು ಕುಡಿಯುತ್ತೇವೆ." ಹರಿಂದರ್ ಮುಂದುವರೆದು," ಪುಣ್ಯಕ್ಕೆ ಸಂಸ್ಥಾ ನಮ್ಮನ್ನು [ಕುಡಿಯುವುದನ್ನು] ತಡೆಯುವುದಿಲ್ಲ. ಬದಲಾಗಿ, ಅವರು ನಮಗೆ ಪ್ರತಿದಿನ ಮದ್ಯವನ್ನು ಒದಗಿಸುತ್ತಾರೆ."

ಮದ್ಯವು ಈ 'ಲಾಸ್ಟ್‌ಲೈನ್' ಕಾರ್ಮಿಕರಿಗೆ ಸತ್ತ ಮನುಷ್ಯನನ್ನು ಸುಡುವ ನೋವು ಮತ್ತು ಕಠಿಣ ಪರಿಶ್ರಮದಿಂದ ಬಿಡುಗಡೆ ನೀಡುತ್ತದೆ. "ಅವರು ಸತ್ತಿದ್ದಾರೆ, ನಾವು ಕೂಡಾ ಜೀವಂತ ಹೆಣದಂತಾಗಿದ್ದೇವೆ ಏಕೆಂದರೆ ಇಲ್ಲಿ ಕೆಲಸ ಮಾಡುವುದು ಬೇಸರದ ಮತ್ತು ಬಳಲಿಕೆಯ ವಿಷಯವಾಗಿದೆ" ಎಂದು ಹರಿಂದರ್ ಹೇಳಿದರು. "ನಾನು ಒಂದು ಪೆಗ್ ಕುಡಿದ ನಂತರ ಶವಗಳನ್ನು ನೋಡಿದರೆ ಕುಡಿದಿದ್ದು ಇಳಿದು ಹೋಗುತ್ತದೆ" ಎಂದು ಪಪ್ಪು ಮುಂದುವರೆದು ಹೇಳುತ್ತಾರೆ. "ಮತ್ತು ಧೂಳು ಮತ್ತು ಹೊಗೆ ಕೆಲವೊಮ್ಮೆ ನಮ್ಮ ಗಂಟಲಿನಲ್ಲಿ ಸಿಲುಕಿಕೊಂಡಾಗ, ಆಲ್ಕೋಹಾಲ್ ಅದನ್ನು ಕೆಳಕ್ಕೆ ತಳ್ಳುತ್ತದೆ."

ಬಿಡುವಿನ ಆ ಕ್ಷಣ ಕಳೆಯಿತು. "ಇಬ್ಬರು ಬಿದ್ದುಕೊಂಡಿರುವ ಹುಡುಗರ" ಕೊನೆಯ ವಿಧಿಗಳನ್ನು ನಡೆಸಲು ಪಪ್ಪು ಹೋಗಬೇಕಾಗಿತ್ತು. ಕಣ್ಣೀರು ತುಂಬಿಕೊಂಡ ಅವರ ಕಣ್ಣುಗಳು ಅವರ ನಾಲಿಗೆಗೆ ಪದಗಳು ಬರುವ ಮೊದಲೇ ಅವರೊಳಗಿನ ನೋವನ್ನು ವ್ಯಕ್ತಪಡಿಸುತ್ತಿದ್ದವು; ಅವರು ಹೇಳುತ್ತಾರೆ, “ನಾವು ಕೂಡ ಅಳುತ್ತೇವೆ. ನಮಗೂ ಕಣ್ಣೀರು ಬರುತ್ತದೆ. ಆದರೆ ನಾವು ನಮ್ಮ ಹೃದಯವನ್ನು ಗಟ್ಟಿ ಮಾಡಿಕೊಳ್ಳಬೇಕು ಮತ್ತು ಅದನ್ನು ರಕ್ಷಿಸಿಕೊಳ್ಳಬೇಕು.”

ಅನುವಾದ: ಶಂಕರ ಎನ್. ಕೆಂಚನೂರು

Amir Malik

Amir Malik is an independent journalist, and a 2022 PARI Fellow.

Other stories by Amir Malik
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru