ಅವರು ಸುಮಾರು 50 ವರ್ಷಗಳ ಹಿಂದೆ ತಾವೇ ನಿರ್ಮಿಸಿದ ಈಗಲೂ ಗಟ್ಟಿಮುಟ್ಟಾಗಿರುವ ಸಣ್ಣ ಸೇತುವೆಯ ಮೇಲೆ ಉರಿವ ಬಿಸಿಲಿನಲ್ಲಿಯೂ ತಣ್ಣಗೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಾ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದು ಊಟದ ಸಮಯವಾಗಿದ್ದರು ನಮ್ಮೊಂದಿಗೆ ತಾಳ್ಮೆಯಿಂದಲೇ ಮಾತನಾಡಿದರು. ಆ ಸೇತುವೆಯ ಮೇಲೆ ನಡೆದಾಡುತ್ತಾ 1959ರಲ್ಲಿ ಈ ಅಣೆಕಟ್ಟನ್ನು ಹೇಗೆ ನಿರ್ಮಿಸಲಾಯಿತು ಎಂಬುದನ್ನು ವಿವರಿಸಿದರು.

ಆರು ದಶಕಗಳ ನಂತರವೂ ಗಣಪತಿ ಈಶ್ವರ ಪಾಟೀಲ್ ಅವರಿಗೆ ನೀರಾವರಿ ಜ್ಞಾನ ಮತ್ತು ರೈತರು ಮತ್ತು ಕೃಷಿಯ ಕುರಿತು ಸಂಪೂರ್ಣ ತಿಳುವಳಿಕೆಯಿದೆ. ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಜ್ಞಾನವನ್ನು ಹೊಂದಿದ್ದಾರೆ, ಅವರು ಅದರ ಭಾಗವಾಗಿದ್ದರು. ಅವರಿಗೆ ಈಗ 101 ವರ್ಷ ಮತ್ತು ಅವರು ನಮ್ಮ ನಡುವೆ ಬದುಕಿರುವ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು.

ಅವರು 1930ರ ನಂತರದ ತಮ್ಮ ಜೀವನವನ್ನು ಬಹಳ ಹಿಂಜರಿಕೆ ಮತ್ತು ನಮ್ರತೆಯಿಂದ ವಿವರಿಸುತ್ತಾರೆ, "ನಾನು ಕೇವಲ ಸಂದೇಶವಾಹಕನಷ್ಟೇ. ಬ್ರಿಟಿಷ್ ವಿರೋಧಿ ಭೂಗತ ಚಳುವಳಿಗಳ ಸಂದೇಶವಾಹಕ." ಇದು ನಿಷೇಧಿತ ಕಮ್ಯುನಿಸ್ಟರು, ಸಮಾಜವಾದಿಗಳು ಮತ್ತು ಕಾಂಗ್ರೆಸ್ ಪಕ್ಷದ ಆಂದೋಲನ ಗುಂಪುಗಳ ಜಾಲವನ್ನು ಒಳಗೊಂಡಿತ್ತು (1942ರ ಕ್ವಿಟ್ ಇಂಡಿಯಾ ಚಳುವಳಿಯ ಸುತ್ತ). ಈ ಕೆಲಸ ಮಾಡುವವರು ಇಂತಹ ಕೆಲಸದಲ್ಲಿ ತುಂಬಾ ಚುರುಕಾಗಿರಬೇಕು, ಏಕೆಂದರೆ ಅವರು ಎಂದಿಗೂ ಸಿಕ್ಕಿಬೀಳಬಾರದು. ಅವರು ಬಹುತೇಕ ತಪ್ಪಿತಸ್ಥ ಧ್ವನಿಯಲ್ಲಿ ಹೇಳುತ್ತಾರೆ, "ನಾನು ಜೈಲಿಗೆ ಹೋಗಿಲ್ಲ." ಅವರು ಸರಕಾರ ನೀಡುವ ತಾಮ್ರಪತ್ರ ಮತ್ತು ಪಿಂಚಣಿಯನ್ನು ಸ್ವೀಕರಿಸಲಿಲ್ಲ ಎನ್ನುವುದನ್ನು ಅವರು ಹೇಳಿಕೊಳ್ಳಲಿಲ್ಲ. ಅದನ್ನು ನಮಗೆ ಬೇರೆಯವರು ಹೇಳಿದರು.

PHOTO • P. Sainath

ಗಣಪತಿ ಪಾಟೀಲ್ ಅವರ ಸಹ ಹೋರಾಟಗಾರ ದಿವಂಗತ ಶಾಂತರಾಮ್ ಪಾಟೀಲ್ (ಲಾಲ್ ನಿಶಾನ್ ಪಕ್ಷದ ಸಹ ಸಂಸ್ಥಾಪಕ) ಅವರ ಮಗ ಅಜಿತ್ ಪಾಟೀಲ್ ಜೊತೆ

"ನಾನು ಜೈಲಿಗೆ ಹೋಗಿಲ್ಲ." ಅವರು ಸರಕಾರ ನೀಡುವ ತಾಮ್ರಪತ್ರ ಮತ್ತು ಸರಕಾರ 1972ರಲ್ಲಿ ನೀಡಲು ಆರಂಭಿಸಿದ ಪಿಂಚಣಿಯನ್ನು ಸ್ವೀಕರಿಸಲಿಲ್ಲ ಎನ್ನುವುದನ್ನು ಅವರು ಹೇಳಿಕೊಳ್ಳಲಿಲ್ಲ. ಅದನ್ನು ನಮಗೆ ಬೇರೆಯವರು ಹೇಳಿದರು

ಈ ಕುರಿತು ನಾವು ಅವರನ್ನು ಕೊಲ್ಹಾಪುರ ಜಿಲ್ಲೆಯ ಕಾಗಲ್‌ ತಾಲ್ಲೂಕಿನ ಸಿದ್ಧನೇರಳಿ ಗ್ರಾಮದಲ್ಲಿರುವ ಅವರ ಮಗನ ಮನೆಯಲ್ಲಿ ವಿಚಾರಿಸಿದಾಗ “ಅದು ಹೇಗೆ ಪಡೆಯಲಿ ನಾನು?” ಎಂದು ಕೇಳಿದರು. “ನಮಗೆ ಈಗಾಗಲೇ ವರ್ಷಕ್ಕಾಗುವಷ್ಟು ಬೆಳೆದು ಕೊಡುವ ನೆಲವಿರುವಾಗ ಇನ್ನೇನೋ ಬೇಡಲು ಹೇಗೆ ಸಾಧ್ಯ?” ಆ ಸಮಯದಲ್ಲಿ ಅವರ ಬಳಿ 18 ಎಕರೆ ಜಮೀನಿತ್ತು. “ಹೀಗಾಗಿ ನಾನು ಅರ್ಜಿ ಹಾಕಲಿಲ್ಲ.” ಅವರ ಮಾತು ಅವರಂತಹ ಹಲವು ಸ್ವಾತಂತ್ರ್ಯಹೋರಾಟಗಾರರ ಮಾತಿನ ಪ್ರತಿಧ್ವನಿಯಾಗಿದೆ. “ನಾವು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು. ನಮಗೆ ಪೆನ್ಷನ್‌ ಸಿಗುತ್ತದೆ ಎಂದಲ್ಲ.” ಮತ್ತು ಅವರು ಹೋರಾಟದಲ್ಲಿ ತನ್ನ ಪಾತ್ರ ಚಿಕ್ಕದಾಗಿತ್ತು ಎಂದು ಪದೇ ಪದೇ ಒತ್ತಿ ಹೇಳುತ್ತಾರೆ - ಉಗ್ರ ಭೂಗತ ಚಳುವಳಿಯಲ್ಲಿ ಸಂದೇಶವಾಹಕನಾಗಿ ಕೆಲಸ ಮಾಡುವದು ಅಪಾಯಕಾರಿಯಾಗಿದ್ದರೂ, ಅದರಲ್ಲೂ ವಿಶೇಷವಾಗಿ ಯುದ್ಧದ ಸಮಯದಲ್ಲಿ ವಸಾಹತು ಸರ್ಕಾರವು ಕಾರ್ಯಕರ್ತರನ್ನು ಸಾಮಾನ್ಯ ದಿನಗಳಿಗಿಂತ ವೇಗವಾಗಿ ಕೆಲಸ ಮಾಡುವ ಅನಿವಾರ್ಯತೆಗೆ ದೂಡಿದ ಸಮಯದಲ್ಲಿ.

ಈ ಕೆಲಸದಲ್ಲಿರುವ ಅಪಾಯಗಳ ಅರಿವಿಲ್ಲದ ಕಾರಣ ಅವರ ತಾಯಿ ಅವರು ಈ ಕೆಲಸ ಮಾಡುವುದನ್ನು ಒಪ್ಪಿಕೊಂಡಿರಬಹುದು. ದೀರ್ಘಕಾಲದವರೆಗೆ ಅವರು ಸಾರ್ವಜನಿಕ ಬದುಕಿನಲ್ಲಿ ಎದ್ದು ಕಾಣುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಕಾಗಲ್‌ನ ಸಿದ್ಧನೇರಳಿ ಗ್ರಾಮದಲ್ಲಿರುವ ಅವರ ತಂದೆಯ ಮನೆಗೆ ಹೋದ ಕೆಲವೇ ದಿನಗಳಲ್ಲಿ ಅವರ ತಾಯಿಯನ್ನು ಹೊರತುಪಡಿಸಿ, ಇಡೀ ಕುಟುಂಬವು ಪ್ಲೇಗ್ ಸಾಂಕ್ರಾಮಿಕ ರೋಗದಲ್ಲಿ ನಾಶವಾಯಿತು. ಅದೇ ಸಮಯದಲ್ಲಿ, ಮೇ 27, 1918ರಂದು ಅದೇ ತಾಲ್ಲೂಕಿನ ಕರ್ನೂರು ಗ್ರಾಮದಲ್ಲಿ ತಾಯಿಯ ತವರು ಮನೆಯಲ್ಲಿ ಜನಿಸಿದ ಗಣಪತಿಯವರು ಆಗ ತಾನು ಕೇವಲ "ನಾಲ್ಕೂವರೆ ತಿಂಗಳ ಮಗು" ಎಂದು ಅವರು ಹೇಳುತ್ತಾರೆ.

ಹೀಗಾಗಿ ಅವರು ಕುಟುಂಬದ ಭೂಮಿಗೆ ಏಕೈಕ ಉತ್ತರಾಧಿಕಾರಿಯಾದರು. ಇದೇ ಕಾರಣಕ್ಕಾಗಿ ಅವರ ತಾಯಿ ಯಾವುದೇ ಉದ್ದೇಶಕ್ಕಾಗಿ ತನ್ನ ಪ್ರಾಣವನ್ನು ಪಣಕ್ಕಿಡಲು ಅವರಿಗೆ ಅವಕಾಶ ನೀಡಬಾರದು ಎಂದು ಭಾವಿಸಿದ್ದರು. "(1945 ರ ಸಮಯದಲ್ಲಿ) ನಾನು ತೆರೆದ ಮೆರವಣಿಗೆಯನ್ನುಸಂಘಟಿಸಿ ಭಾಗವಹಿಸಿದಾಗ ಮಾತ್ರ ಜನರಿಗೆ ನನಗೆ ರಾಜಕೀಯ ಒಲವಿರುವುದು ತಿಳಿಯಿತು." ಮತ್ತು ಅವರು 1930 ರ ದಶಕದ ಉತ್ತರಾರ್ಧದಲ್ಲಿ ಮತ್ತು 1940 ರ ದಶಕದ ಆರಂಭದಲ್ಲಿ ಕಾರ್ಯಕರ್ತರ ಸಭೆಗಳನ್ನು ಸದ್ದಿಲ್ಲದೆ ನಡೆಸಲು ಸಿದ್ದನೇರಳಿಯಲ್ಲಿರುವ ತೋಟವನ್ನು ಬಳಸಿದರು. "ನನ್ನ ತಾಯಿ ಮತ್ತು ನಾನು ಮಾತ್ರ ಮನೆಯಲ್ಲಿದ್ದೆವು - ಉಳಿದವರೆಲ್ಲರೂ ತೀರಿಕೊಂಡಿದ್ದರು - ಮತ್ತು ಜನರು ನಮ್ಮ ಕುರಿತು ಅನುಕಂಪವನ್ನು ಹೊಂದಿದ್ದರು ಮತ್ತು ನನ್ನ ಬಗ್ಗೆ ಕಾಳಜಿ ಮಾಡುತ್ತಿದ್ದರು."

PHOTO • Samyukta Shastri
PHOTO • P. Sainath

ಮೋಹನ್ ದಾಸ್ ಕರಮಚಂದ ಗಾಂಧಿ ಮಾತನಾಡುವುದನ್ನು ಕೇಳಲು ಗಣಪತಿ ಪಾಟೀಲ್ ಅವರು ತನ್ನ 12ನೇ ವಯಸ್ಸಿನಲ್ಲಿ ಸಿದ್ಧನೇರಳಿಯಿಂದ ನಿಪ್ಪಾಣಿಗೆ 28 ಕಿಲೋಮೀಟರ್ ನಡೆದು ಹೋದ ದಿನದಿಂದ ಇದೆಲ್ಲವೂ ಪ್ರಾರಂಭಗೊಂಡಿತು

ಅವರ ಕಾಲದ ಲಕ್ಷಾಂತರ ಇತರ ಜನರಂತೆ, ಗಣಪತಿ ಪಾಟೀಲ್ ಅವರು 12ನೇ ವಯಸ್ಸಿನಲ್ಲಿ ಈ ವ್ಯಕ್ತಿಯ ಐದು ಪಟ್ಟು ದೊಡ್ಡವರನ್ನು ಬೇಟಿಯಾಗಲು ಹೋಗುವುದರೊಂದಿಗೆ ಇದೆಲ್ಲವೂ ಪ್ರಾರಂಭಗೊಂಡಿತು. ಮೋಹನ್ ದಾಸ್ ಕರಮಚಂದ ಗಾಂಧಿಯವರ ಭಾಷಣವನ್ನು ಕೇಳಲು ಪಾಟೀಲರು ಸಿದ್ದನೇರಳಿಯಿಂದ ಪ್ರಸ್ತುತ ಕರ್ನಾಟಕದಲ್ಲಿರುವ ನಿಪ್ಪಾಣಿಗೆ 28 ಕಿಮೀ ನಡೆದು ತೆರಳಿದರು. ಅದು ಅವರ ಜೀವನವನ್ನು ಬದಲಿಸಿತು. ಗಣಪತಿ ಸಮಾರಂಭದ ಕೊನೆಯಲ್ಲಿ ವೇದಿಕೆಯನ್ನು ತಲುಪಿದರು ಮತ್ತು "ಮಹಾತ್ಮರ ದೇಹವನ್ನು ಸ್ಪರ್ಶಿಸುವ ಮೂಲಕ ಸಂತೋಷಗೊಂಡೆ."

ಕ್ವಿಟ್ ಇಂಡಿಯಾ ಚಳವಳಿಯ ಮುನ್ನಾದಿನದಂದು ಅವರು 1941 ರಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಅದೇ ಸಮಯದಲ್ಲಿ, ಇತರ ರಾಜಕೀಯ ಶಕ್ತಿಗಳೊಂದಿಗೆ ಅವರ ತೊಡಗ್ಸಿಕೊಳ್ಳುವಿಕೆಯೂ ಮುಂದುವರಿಯಿತು. 1930ರಲ್ಲಿ, ಅವರು ನಿಪ್ಪಾಣಿಗೆ ಹೋದಾಗಿನಿಂದ, ಅವರು ಕಾಂಗ್ರೆಸ್ ಸೇರುವವರೆಗೂ, ಅವರ ಮುಖ್ಯ ಸಂಪರ್ಕಗಳು ಆ ಪಕ್ಷದ ಸಮಾಜವಾದಿ ಬಣದಲ್ಲಿದ್ದವು. 1937ರಲ್ಲಿ ಅವರು ಬೆಳಗಾವಿಯ ಅಪ್ಪಚ್ಚಿವಾಡಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಸಮಾಜವಾದಿ ನಾಯಕರಾದ ಎಸ್. ಎಂ. ಜೋಶಿ ಮತ್ತು ಎನ್.ಜಿ. ಗೋರೆ. ಭವಿಷ್ಯದ ಸತಾರ ಪ್ರತಿ ಸರ್ಕಾರದ ನಾಗನಾಥ ನಾಯಕ್ವಾಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮತ್ತು ಗಣಪತಿ ಸೇರಿದಂತೆ ಅವರೆಲ್ಲರೂ ಕೆಲವು ಶಸ್ತ್ರಾಸ್ತ್ರ ತರಬೇತಿಯನ್ನು ಪಡೆದರು. ( ನೋಡಿ: 'ಕ್ಯಾಪ್ಟನ್ ಎಲ್ಡರ್ ಬ್ರದರ್ ' ಮತ್ತು ಸುಂಟರಗಾಳಿ ಸೈನ್ಯ ಮತ್ತು ಪ್ರತಿ ಸರ್ಕಾರದ ಕೊನೆಯ ಹುರ್ರೇ )

ಅವರು ಹೇಳುತ್ತಾರೆ: "1942ರಲ್ಲಿ ಭಾರತದ ಕಮ್ಯುನಿಸ್ಟ್ ವಿಭಾಗದ ಉಚ್ಛಾಟಿತ ನಾಯಕರಾದ ಶಾಂತಾರಾಮ್ ಪಾಟೀಲ್, ಯಶವಂತ್ ಚವಾಣ್ [ಕಾಂಗ್ರೆಸ್ ನಾಯಕ ವೈ.ಬಿ. ಚವಾಣ್ ಅವರಲ್ಲ], ಎಸ್.ಕೆ.ಲಿಮಾಯೆ, ಡಿ.ಎಸ್.ಕುಲಕರ್ಣಿ ಮತ್ತು ಇತರ ಕಾರ್ಯಕರ್ತರು ಸೇರಿ ನವಜೀವನ್ ಸಂಘಟನೆಯನ್ನು ರಚಿಸಿದರು. ಗಣಪತಿ ಅವರೊಂದಿಗೆ ಸೇರಿಕೊಂಡರು.

ಆ ಸಮಯದಲ್ಲಿ, ಈ ನಾಯಕರು ಪ್ರತ್ಯೇಕ ಪಕ್ಷವನ್ನು ರಚಿಸಲಿಲ್ಲ, ಆದರೆ ಅವರು ರಚಿಸಿದ ಗುಂಪನ್ನು ಲಾಲ್ ನಿಶಾನ್ (ಕೆಂಪು ಧ್ವಜ) ಎಂದು ಕರೆಯಲಾಯಿತು. (ಇದು 1965ರಲ್ಲಿ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. 1990ರ ದಶಕದಲ್ಲಿ ಒಮ್ಮೆ ಮಾತ್ರ ಮತ್ತೆ ವಿಭಜನೆಯಾಯಿತು).

ವಿಡಿಯೋ ನೋಡಿ: ಗಣಪತಿ ಪಾಟೀಲ್ - ಸ್ವಾತಂತ್ರ್ಯದ ಸಂದೇಶವಾಹಕ

ಸ್ವಾತಂತ್ರ್ಯಪೂರ್ವದ ಹಲವು ಬಗೆಯ ಪ್ರಕ್ಷುಬ್ಧತೆಯ ನಡುವೆ "ನಮ್ಮ ವಿವಿಧ ಗುಂಪುಗಳು ಮತ್ತು ಒಡನಾಡಿಗಳಿಗೆ ಸಂದೇಶಗಳು, ದಾಖಲೆಗಳು ಮತ್ತು ಮಾಹಿತಿಯನ್ನು ಒಯ್ಯುತ್ತಿದ್ದರು" ಎಂದು ಗಣಪತಿ ಪಾಟೀಲ್ ಹೇಳುತ್ತಾರೆ. ಆದರೆ ಅದೇನು ದೊಡ್ಡ ಕೆಲಸವಲ್ಲ ಎನ್ನುವ ಮೂಲಕ ತನ್ನ ಪಾತ್ರವನ್ನು ಗೌಣಗೊಳಿಸುತ್ತಾರೆ. ಆದರೂ ತನ್ನ ಮಗನ ಮನೆಯಲ್ಲಿ ಊಟಕ್ಕಾಗಿ ಎಲ್ಲರೂ ಸೇರಿದ್ದಾಗ ಸಂದೇಶವಾಹಕನಾಗಿ ಅವರ ಸಾಮರ್ಥ್ಯ ಅವರ ಹನ್ನೆರಡನೇ ವಯಸ್ಸಿನಲ್ಲೇ ಸಾಬೀತಾಗಿತ್ತು ಎಂದಾಗ ಈ ಹಿರಿಯ ಸಜ್ಜನ ನಗುತ್ತಾರೆ (ಖುಷಿಯಿಂದಲೇ). ಅವರು ಆ ವಯಸ್ಸಿನಲ್ಲೇ ನಿಪ್ಪಾಣಿಗೆ ಹೋಗಿ ಬರುವ ಮೂಲಕ 56 ಕಿಲೋಮೀಟರ್‌ ನಡೆದಿದ್ದರು.

"ಸ್ವಾತಂತ್ರ್ಯದ ನಂತರ, ಲಾಲ್ ನಿಶಾನ್ ರೈತರು ಮತ್ತು ಕಾರ್ಮಿಕರ ಪಕ್ಷದೊಂದಿಗೆ (ಪಿಡಬ್ಲ್ಯುಪಿ) ಸೇರಿಕೊಂಡು ಕಾಮ್‌ಗಾರ್ ಕಿಸಾನ್ ಪಾರ್ಟಿ [ರೈತರು ಮತ್ತು ಕಾರ್ಮಿಕರ ಪಕ್ಷ]ಯನ್ನು ಸ್ಥಾಪಿಸಿದರು" ಎಂದು ಗಣಪತಿ ಹೇಳುತ್ತಾರೆ. ನಾನಾ ಪಾಟೀಲ್ ಮತ್ತು ಅವರ ನಿಕಟ ಸಹೋದ್ಯೋಗಿಗಳು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸೇರುವುದರೊಂದಿಗೆ ಈ ಪಕ್ಷವು ವಿಭಜನೆಯಾಯಿತು. ಪಿಡಬ್ಲ್ಯೂಪಿಯನ್ನು ಪುನರ್ರಚಿಸಲಾಯಿತು ಮತ್ತು ಲಾಲ್ ನಿಶಾನ್ ಪಕ್ಷವನ್ನು ಮತ್ತೊಮ್ಮೆ ಪುನರ್ರಚಿಸಿದರು. 2018ರಲ್ಲಿ, ಎಲ್‌ಎನ್‌ಪಿ ಬಣವನ್ನು ಸಿಪಿಐನೊಂದಿಗೆ ವಿಲೀನಗೊಳಿಸಲಾಯಿತು. ಗಣಪತಿ ಇದರೊಂದಿಗೆ ಗುರುತಿಸಿಕೊಂಡರು.

1947ರಲ್ಲಿ ಸ್ವಾತಂತ್ರ್ಯದ ನಂತರ, ಕೊಲ್ಹಾಪುರದ ಭೂ ಸುಧಾರಣಾ ಕಾರ್ಯಕ್ರಮದಂತಹ ಕೆಲವು ಚಳುವಳಿಗಳಿಗೆ ಪಾಟೀಲ್ ಕೊಡುಗೆಯು ಕೇಂದ್ರವಾಗಿತ್ತು. ಸ್ವತಃ ಭೂಮಾಲೀಕನಾಗಿದ್ದರೂ ಸಹ, ರೈತರಿಗೆ ನ್ಯಾಯಯುತ ವೇತನವನ್ನು ಪಡೆಯಲು ಸಾಧ್ಯವಾಗುವಂತೆ ಮಾಡಲು ಶ್ರಮಿಸಿದರು ಮತ್ತು ಇತರ ರೈತರನ್ನು ಅದೇ ರೀತಿ ಮಾಡಲು ಮನವೊಲಿಸಿದರು. ಅವರು ನೀರಾವರಿಗಾಗಿ 'ಕೊಲ್ಹಾಪುರ ಮಾದರಿಯ ಅಣೆಕಟ್ಟು' ನಿರ್ಮಿಸಿದರು - ಅದರಲ್ಲಿ ಮೊದಲ ಒಡ್ಡು (ನಾವು ಕುಳಿತಿರುವ) ಈಗಲೂ 10-12 ಹಳ್ಳಿಗಳಿಗೆ ನೀರು ಪೂರೈಸುತ್ತಿದೆ ಮತ್ತು ಇದನ್ನು ಸ್ಥಳೀಯ ರೈತರು ನಿರ್ವಹಿಸುತ್ತಿದ್ದಾರೆ.

"ನಾವು ಹತ್ತಿರದ 20 ಹಳ್ಳಿಗಳ ರೈತರನ್ನು ಸಂಘಟಿಸಿ ಅದನ್ನು ಸಹಕಾರಿ ರೀತಿಯಲ್ಲಿ ನಿರ್ಮಿಸಿದ್ದೇವೆ" ಎಂದು ಪಾಟೀಲ್ ಹೇಳುತ್ತಾರೆ. ದೂಧ್‌ಗಂಗಾ ನದಿಗೆ ಕಟ್ಟಿರುವ ಈ ಕಲ್ಲಿನ ಅಣೆಕಟ್ಟು 4,000 ಎಕರೆಗಳಿಗೂ ಹೆಚ್ಚು ಪ್ರದೇಶಕ್ಕೆ ನೀರುಣಿಸುತ್ತದೆ. ಮತ್ತು, ಅವರು ಹೆಮ್ಮೆಯಿಂದ ಹೇಳುತ್ತಾರೆ, ಇದಕ್ಕಾಗಿ ಯಾರನ್ನೂ ಸ್ಥಳಾಂತರಿಸಲಿಲ್ಲ. ಇಂದು, ಇದನ್ನು ರಾಜ್ಯ ಮಟ್ಟದ ಮಧ್ಯಮ ನೀರಾವರಿ ಯೋಜನೆ ಎಂದು ವರ್ಗೀಕರಿಸಲಾಗಿದೆ.

PHOTO • P. Sainath
PHOTO • P. Sainath

ಎಡ: 'ಈ ರೀತಿಯ ಅಣೆಕಟ್ಟು,' ಅಜಿತ್ ಪಾಟೀಲ್ ಹೇಳುತ್ತಾರೆ, 'ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದು ಪರಿಸರಕ್ಕೆ ಹೆಚ್ಚು ಹಾನಿ ಮಾಡುವುದಿಲ್ಲ, ಮತ್ತು ಸ್ಥಳೀಯರಿಂದಲೇ ನಿರ್ವಹಿಸಲ್ಪಡುತ್ತಿದೆ'. ಬಲ: ಗಣಪತಿ ಪಾಟೀಲ್ ಅವರ ವಾಹನವು ಮೊಮ್ಮಗ ಅಥವಾ ಸೋದರ ಮೊಮ್ಮಗ ಉಡುಗೊರೆಯಾಗಿ ನೀಡಿದ ಸೇನೆಯ ಹೆಚ್ಚುವರಿ ಜೀಪ್ ಆಗಿತ್ತು. ಇಲ್ಲಿನ ವಿಪರ್ಯಾಸವೆಂದರೆ, ವಾಹನದ ಮುಂಭಾಗದ ಬಂಪರ್ ಮೇಲೆ ಬ್ರಿಟಿಷ್ ಧ್ವಜವನ್ನು ಚಿತ್ರಿಸಲಾಗಿದೆ

"ಈ ರೀತಿಯ ಬ್ಯಾರೇಜುಗಳನ್ನು ನದಿಯ ಹರಿವಿನ ಉದ್ದಕ್ಕೂ ನಿರ್ಮಿಸಲಾಗಿದೆ" ಎಂದು ಕೊಲ್ಹಾಪುರದ ಎಂಜಿನಿಯರ್ ಮತ್ತು ಗಣಪತಿಯ ಹೊರಾಟದ ಕಾಲದ ಜೊತೆಗಾರ ದಿವಂಗತ ಶಾಂತಾರಾಮ್ ಪಾಟೀಲ್ (ಲಾಲ್ ನಿಶಾನ್ ಪಕ್ಷದ ಸಹ ಸಂಸ್ಥಾಪಕ) ಅವರ ಮಗ ಅಜಿತ್ ಪಾಟೀಲ್ ಹೇಳುತ್ತಾರೆ. "ಇಲ್ಲವೇ ಇಲ್ಲ ಎನ್ನಬಹುದಾದಷ್ಟು ಭೂಮಿಯ ಮುಳುಗಡೆ, ಮತ್ತು ನದಿಯ ಹರಿವನ್ನು ಅನಗತ್ಯವಾಗಿ ಎಲ್ಲೂ ನಿರ್ಬಂಧಿಸಲಾಗಿಲ್ಲ. ವರ್ಷವಿಡೀ ನೀರಿನ ಸಂಗ್ರಹಣೆಯು ಎರಡೂ ಬದಿಗಳಲ್ಲಿ ಅಂತರ್ಜಲವನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತದೆ ಮತ್ತು ನೇರ ನೀರಾವರಿ ವಲಯದ ಹೊರಗಿರುವ ಬಾವಿಗಳಿಂದಲೂ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಕಡಿಮೆ ವೆಚ್ಚದಲ್ಲಿ, ಸ್ಥಳೀಯವಾಗಿ ನಿರ್ವಹಿಸಲ್ಪಡುತ್ತದೆ ಮತ್ತು ಜೀವ ಜಗತ್ತು ಮತ್ತು ಪರಿಸರಕ್ಕೆ ಸ್ವಲ್ಪವೂ ಹಾನಿ ಮಾಡುವುದಿಲ್ಲ.

ಮತ್ತು ನಾವು ನೋಡಿದಂತೆ, ಮೇ ತಿಂಗಳ ಬೇಸಿಗೆಯಲ್ಲೂ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ತುಂಬಿದ್ದು ನೀರಿನ ಹರಿವನ್ನು ನಿಯಂತ್ರಿಸಲು ಬಾಗಿಲುಗಳನ್ನು ತೆರೆಯಲಾಗಿತ್ತು. ಅಣೆಕಟ್ಟಿನ ಜಲಾಶಯದಲ್ಲಿ ಸಣ್ಣ ಪ್ರಮಾಣದ ಮೀನು ಸಾಕಣೆಯೂ ಇತ್ತು.

ಗಣಪತಿ ಪಾಟೀಲ್ ಹೆಮ್ಮೆಯಿಂದ ಹೇಳುತ್ತಾರೆ, "ನಾವು ಇದನ್ನು 1959ರಲ್ಲಿ ನಿರ್ಮಿಸಿದೆವು." ಅಣೆಕಟ್ಟಿನಿಂದ ನೇರವಾಗಿ ಪ್ರಯೋಜನ ಪಡೆಯುತ್ತಿದ್ದ ಹಲವಾರು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದು ಸಾಗುವಳಿ ಮಾಡುತ್ತಿದ್ದ ವಿಷಯವನ್ನು ಅವರು ನಾವು ಕೇಳದೆ ಹೇಳಲಿಲ್ಲ. ಅಣೆಕಟ್ಟು ಕಟ್ಟಿದ ತಕ್ಷಣ ಅವರು ಆ ಗುತ್ತಿಗೆಯನ್ನು ರದ್ದುಗೊಳಿಸಿ ಭೂಮಿಯನ್ನು ಮಾಲೀಕರಿಗೆ ಹಿಂತಿರುಗಿಸಿದರು. ಅವರಿಗೆ "ನನ್ನ ವೈಯಕ್ತಿಕ ಲಾಭಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿರುವಂತೆ ಕಾಣಬಾರದು" ಎನ್ನುವುದು ಮುಖ್ಯವಾಗಿತ್ತು. ಈ ಪಾರದರ್ಶಕತೆ ಮತ್ತು ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲದಿರುವುದು, ಅವರು ಹೆಚ್ಚಿನ ರೈತರನ್ನು ಈ ಸಹಕಾರಿ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಅನುಕೂಲವಾಯಿತು. ಅವರು ಅಣೆಕಟ್ಟನ್ನು ನಿರ್ಮಿಸಲು 1 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಪಡೆದು, ಅದನ್ನು 75,000ಕ್ಕೆ ಪೂರ್ಣಗೊಳಿಸಿದರು - ಮತ್ತು ಉಳಿದ 25,000 ರೂಪಾಯಿಗಳನ್ನು ತಕ್ಷಣವೇ ಹಿಂದಿರುಗಿಸಿದರು. ಅವರು ಈ ಬ್ಯಾಂಕ್ ಸಾಲವನ್ನು ನಿಗದಿತ ಮೂರು ವರ್ಷಗಳಲ್ಲಿ ಮರುಪಾವತಿಸಿದರು. (ಇಂದು, ಈ ಮಟ್ಟದ ಯೋಜನೆಗೆ 3-4 ಕೋಟಿ ರೂ. ವೆಚ್ಚವಾಗುತ್ತದೆ, ಮುಂದೆ ಹೋದರೆ ಹಣದುಬ್ಬರದ ದರದಲ್ಲಿ ವೆಚ್ಚವು ಹೆಚ್ಚಾಗುತ್ತದೆ, ಮತ್ತು ಅಂತಿಮವಾಗಿ ಸಾಲವನ್ನು ಮರುಪಾವತಿಸಲಾಗುವುದಿಲ್ಲ).

ನಾವು ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರನನ್ನು ದಿನವಿಡೀ ಕಾರ್ಯನಿರತರನ್ನಾಗಿರಿಸಿದ್ದೆವು, ಅದೂ ಮೇ ತಿಂಗಳ ಮಧ್ಯಾಹ್ನದ ಬಿಸಿಲಿನಲ್ಲಿ, ಆದರೆ ಅವರು ದಣಿದಂತೆ ಕಾಣುತ್ತಿರಲಿಲ್ಲ. ಅವರು ಸಂತೋಷದಿಂದಲೇ ನಮ್ಮೆಲ್ಲರ ಕುತೂಹಲವನ್ನು ತಣಿಸುತ್ತಿದ್ದರು. ಕೊನೆಗೆ, ನಾವು ಸೇತುವೆಯಿಂದ ಇಳಿದು ನಮ್ಮ ವಾಹನಗಳ ಕಡೆಗೆ ಹೊರಟೆವು. ಅವರ ಬಳಿ ಸೈನ್ಯದ ಜೀಪ್ ಇದೆ, ಅದನ್ನು ಅವರ ಅಥವಾ ಸೋದರಸಂಬಂಧಿಯ ಮೊಮ್ಮಗ ಕೊಡಿಸಿದ್ದು. ವಿಪರ್ಯಾಸವೆಂದರೆ, ಅದರ ಮುಂಭಾಗದ ಬಂಪರ್ ಮೇಲೆ ಬ್ರಿಟಿಷ್ ಧ್ವಜವನ್ನು ಚಿತ್ರಿಸಲಾಗಿದೆ ಮತ್ತು ಬಾನೆಟ್ ನ ಎರಡೂ ಬದಿಗಳಲ್ಲಿ 'USA C 928635' ಮುದ್ರಿಸಲಾಗಿದೆ. ವಿಭಿನ್ನ ತಲೆಮಾರುಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ಕಾಣಬಹುದಾಗಿದೆ.

ಈ ಜೀಪಿನ ಮುಖ್ಯ ಪಯಣಿಗ ತನ್ನ ಜೀವನದುದ್ದಕ್ಕೂ ಬೇರೊಂದು ಧ್ವಜವನ್ನು ಅನುಸರಿಸುತ್ತಿದ್ದರು. ಮತ್ತು ಇಂದಿಗೂ ಅನುಸರಿಸುತ್ತಿದ್ದಾರೆ.

PHOTO • Sinchita Maji

ಗಣಪತಿ ಪಾಟೀಲ್ ಕುಟುಂಬದೊಂದಿಗೆ, ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಸಿದ್ದನೇರಳಿ ಗ್ರಾಮದಲ್ಲಿರುವ ಅವರ ಮಗನ ಮನೆಯಲ್ಲಿ

ಅನುವಾದ: ಶಂಕರ ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru