ಗುಲಾಬ್ ಮತ್ತು ಶಹಜಾದ್  ತಮ್ಮ ಮುಖ್ಯ ಮ್ಯಾಜಿಕ್ ಟ್ರಿಕ್ ಅನ್ನು ಪ್ರಾರಂಭಿಸುವ ಮೊದಲು,  ಅವರು "ಹುರುಕ್ ಬೊಮ್ ಬೊಮ್ ಖೇಲಾ!" ಎಂದು ಜೋರಾಗಿ ಕಿರುಚುತ್ತಾರೆ. ಇದು ಅವರ ಸ್ವಂತ ಬಂಗಾಳಿ ಆವೃತ್ತಿಯ “ಅಬ್ರಕಾದಾಬ್ರಾ!” ಈ ಕೂಗು ಅವರ ಪ್ರದರ್ಶನಕ್ಕೆ ಸುಮಾರು 80-90 ಜನ ಪ್ರೇಕ್ಷಕರನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ - ಪುರುಷರು, ಮಹಿಳೆಯರು ಮತ್ತು ಮಕ್ಕಳ ತಮಾಷೆಯ ಮಾತುಗಳು ಅಲ್ಲಿ ಪ್ರಾರಂಭಗೊಳ್ಳುತ್ತದೆ. ನಂತರ ಇಬ್ಬರು ಸಹೋದರರಲ್ಲಿ ಹಿರಿಯರಾದ ಗುಲಾಬ್, ಪ್ರೇಕ್ಷಕರಲ್ಲಿ ಒಬ್ಬರಾದ ಮಿಂಟು ಹಾಲ್ದರ್ ಅವರನ್ನು ಸಹಾಯ ಮಾಡುವಂತೆ ಕೇಳುತ್ತಾರೆ. ಮಿಂಟು ಧೈರ್ಯದಿಂದ ಮುಂದೆ ಹೆಜ್ಜೆ ಹಾಕುತ್ತಾರೆ. ಮ್ಯಾಜಿಕ್ ಟ್ರಿಕ್ ಪ್ರಾರಂಭವಾಗುತ್ತದೆ.

ಕಿರಿಯ ಸಹೋದರ ಶಹಜಾದ್ ಕಣ್ಮರೆಯಾಗುತ್ತಾರೆಂದು ಗುಲಾಬ್ ಭರವಸೆ ನೀಡುತ್ತಾರೆ. ಶೀಘ್ರದಲ್ಲೇ ಮಾಯವಾಗಲಿರುವ ಸಹೋದರ ದೊಡ್ಡ ಬಲೆಯೊಳಗೆ ಕುಳಿತುಕೊಳ್ಳುತ್ತಾನೆ, ನಂತರ ಮಿಂಟು ಶಹಜಾದ್ ಕುಳಿತಿರುವ ಬಲೆಯ ಮೇಲ್ಬಾಗವನ್ನು ಬಿಗಿಗೊಳಿಸುತ್ತಾರೆ. ಗುಲಾಬ್ ಒಂದು ಪೆಟ್ಟಿಗೆಯನ್ನು ಇರಿಸಿ, ಎರಡು ಬದಿ ತೆರೆದು ಶಹಜಾದ್‌ನನ್ನು ಅದರಡಿ ಮರೆಯಾಗಿಸುತ್ತಾರೆ ಮತ್ತು ಅದನ್ನು ಬಟ್ಟೆಗಳಿಂದ ಮುಚ್ಚುತ್ತಾರೆ. ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ, ಮುಂದೆ ಏನು ಏನಾಗಬಹುದೆಂಬ ಕುತೂಹಲದೊಂದಿಗೆ ಕಾಯುತ್ತಿದ್ದಾರೆ.

ಮುಂದೆ, ಪ್ರಾಣಿಯ ಮೂಳೆಯ ತುಂಡನ್ನು ಕೈಗೆತ್ತಿಕೊಂಡು ಅದನ್ನು ತಿರುಗಿಸುತ್ತಾ ಮತ್ತು ಹುಡುಗನನ್ನು ಕಣ್ಮರೆಯಾಗುವಂತೆ ಮಾಡಲು ಹೆಚ್ಚಿನ ಶಕ್ತಿಯನ್ನು ಕೋರುತ್ತಾರೆ: “ಅರ್ಘಾಟ್ ಖೋಪ್ಡಿ ಮಾರ್ಗಟ್ ಮಸಾನ್, ಬಚ್ಚಾ ಕೆ ಲೇಜಾ ತೆಲಿಯಾ ಮಸಾನ್.” ನಂತರ ತನ್ನ ಕೈಯಿಂದ ಪೆಟ್ಟಿಗೆಯ ಪ್ರತಿಯೊಂದು ಮೂಲೆಯನ್ನೂ ಮುಟ್ಟಿ ನೋಡುವಂತೆ ಮಿಂಟುಗೆ ಹೇಳುತ್ತಾರೆ. ಮಿಂಟು ಹೇಳಿದಂತೆ ಮಾಡುತ್ತಾರೆ ಮತ್ತು ಬಾಕ್ಸ್ 'ಖಾಲಿ'ಯಾಗಿದೆ. ಶಹಜಾದ್ ಎಲ್ಲಿಯೂ ಕಂಡುಬರುವುದಿಲ್ಲ.

“ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ: ಈ ಹುಡುಗನಿಗೆ ಕಷ್ಟವಾಗಿದೆಯೇ? ಎಲ್ಲರೂ ನನಗೆ ಹೇಳಬೇಕೆಂದು ನಾನು ಬಯಸುತ್ತೇನೆ: ಅವನು ಇದ್ದಾನೋ ಅಥವಾ ಇಲ್ಲವೋ?” ಎಂದು ಗುಲಾಬ್ ಕೇಳುತ್ತಾರೆ. ಈಗ ಅಗೋಚರವಾಗಿರುವ ಶಹಜಾದ್ ನಿಜಕ್ಕೂ ಕಠಿಣ ಸಮಯವನ್ನು ಹೊಂದಿರಬೇಕು ಎಂದು ಪ್ರೇಕ್ಷಕ ಜನರು ಒಪ್ಪುತ್ತಾರೆ.

'ನಾನು ನಿಮ್ಮ ಮಾತುಗಳಲ್ಲಿ ಕೇಳಬಯಸುತ್ತೇನೆ: ಈ ಹುಡುಗನಿಗೆ ಕಷ್ಟವಾಗಿದೆಯೇ?' ಎಂದು ಗುಲಾಬ್ ಕೇಳುತ್ತಾರೆ. ಈಗ ಅಗೋಚರವಾಗಿರುವ ಶಹಜಾದ್ ನಿಜಕ್ಕೂ ಕಠಿಣ ಸಮಯವನ್ನು ಎದುರಿಸುತ್ತಿರಬಹುದು ಎಂದು ಪ್ರೇಕ್ಷಕ ಜನರು ಒಪ್ಪುತ್ತಾರೆ


ವೀಡಿಯೊ ನೋಡಿ: ʼಅವನು ಇಲ್ಲಿಯೇ ಇದ್ದಾನೋ ಅಥವಾ ಕಣ್ಮರೆಯಾಗಿದ್ದಾನೋʼ

ಅಲೆಮಾರಿ ಮಾಂತ್ರಿಕರಾದ ಗುಲಾಬ್ ಶೇಖ್, 34, ಮತ್ತು ಶಹಜಾದ್, 16, ಅವರು ಪ್ರೇಕ್ಷಕರನ್ನು ಹುಡುಕುತ್ತಾ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಪ್ರಯಾಣಿಸುವಾಗ ತೆರೆದ ಮೈದಾನದಲ್ಲಿ ಅಥವಾ ಬೀದಿಗಳಲ್ಲಿ ಪ್ರದರ್ಶನ ನೀಡುತ್ತಾರೆ. ಅಕ್ಟೋಬರ್ ಅಂತ್ಯದಲ್ಲಿ ನಾನು ಅವರನ್ನು ನೋಡಿದಾಗ, ಅವರು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪಾಂಡುವಾ ಪಟ್ಟಣದಿಂದ ನಾಡಿಯಾ ಜಿಲ್ಲೆಯ ತೆಹಟ್ಟಾ ಗ್ರಾಮಕ್ಕೆ ಬಂದಿದ್ದರು. "ನಮ್ಮ ಪೂರ್ವಜರು ಇದನ್ನು ಮಾಡುತ್ತಿದ್ದರು [ನಾವೂ] ಇದನ್ನು ಮಾಡುತ್ತಿದ್ದೇವೆ" ಎಂದು ಗುಲಾಬ್ ಹೇಳುತ್ತಾರೆ, ಅವರು ಸುಮಾರು 20 ವರ್ಷಗಳಿಂದ ಮ್ಯಾಜಿಕ್ ತಂತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ, ಆದರೆ ಶಹಜಾದ್ ನಾಲ್ಕು ವರ್ಷಗಳ ಹಿಂದೆ ಇವರನ್ನು ಸೇರಿಕೊಂಡನು.

ನಾನು ಮೊದಲು ಅವರ ಡುಗ್ಡುಗಿಯ ಸದ್ದನ್ನು ದೂರದಿಂದ ಕೇಳಿದಾಗ, ಮಾದಾರಿಯು (ಕೋತಿ ಆಡಿಸುವವನು) ಅವನ ಮರಳು ಗಡಿಯಾರದ ಆಕಾರದ ಸಂಗೀತ ವಾದ್ಯ ಮತ್ತು ತರಬೇತಿ ಪಡೆದ ಮಂಗನೊಡನೆ ತಂತ್ರಗಳನ್ನು ಮಾಡುತ್ತಾ ಕಾರ್ಯಕ್ರಮ ನಡೆಸುತ್ತಿದ್ದಾನೆ ಎಂದು ನಾನು ಭಾವಿಸಿದೆ. ತೆರೆದ ಮೈದಾನದಲ್ಲಿ ಹುಡುಗನನ್ನು ಬಲೆಗೆ ಕಟ್ಟಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅವರ ಯಾವುದೇ ರಹಸ್ಯಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸಹೋದರರಿಗೆ ಭರವಸೆ ನೀಡಿದ ನಂತರ ನೆಮ್ಮದಿಯಾದ ಅವರು ತೆಹಟ್ಟಾದ ದತ್ತಾ ಪಾರಾ ಪ್ರದೇಶದಲ್ಲಿ ತಮ್ಮ ಮುಂದಿನ ಪ್ರದರ್ಶನಕ್ಕಾಗಿ ಅವರೊಂದಿಗೆ ಬರಲು ಹೇಳಿದರು.

ಗುಲಾಬ್ ಪ್ರದರ್ಶನದುದ್ದಕ್ಕೂ ಪ್ರೇಕ್ಷಕರೊಂದಿಗೆ ಮಾತನಾಡುತ್ತಾರೆ, ಅವರನ್ನು ತಮಾಷೆ ಮತ್ತು ಹಾಸ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಧರ್ಮ ಮತ್ತು ಇತರ ವಿಷಯಗಳ ಬಗ್ಗೆಯೂ ಚರ್ಚಿಸುತ್ತಾರೆ. ಕಣ್ಮರೆಗೊಳಿಸುವ ತಂತ್ರದ ಮಧ್ಯದಲ್ಲಿ, ಅವರು ಹೀಗೆ ಮುಂದುವರಿಸುತ್ತಾರೆ: “ದೇವರಿಂದ ಮಗುವನ್ನು ನೀಡಲ್ಪಡದವನು ಮಾತ್ರ ಈ ಹುಡುಗನಿಗೆ ಕಷ್ಟವಾಗುವುದಿಲ್ಲ ಎಂದು ಹೇಳುತ್ತಾನೆ. ಸೂರ್ಯನ ಬಿಸಿಲಿನಲ್ಲಿ ಅವನನ್ನು ಹುರಿಯಲಾಗಿದೆ. ಅವನು ಅರ್ಧ ಘಂಟೆಯವರೆಗೆ ಭೂಮಿಯಡಿ ಹೋಗಿದ್ದನು. ಇಷ್ಟು ದೊಡ್ಡ ಹುಡುಗನನ್ನು 7-8 ನಿಮಿಷಗಳ ಕಾಲ ಅಷ್ಟು ಸಣ್ಣ ಬಲೆಯಲ್ಲಿ [ಕಟ್ಟಿಹಾಕಲಾಯಿತು]. ನೀವು ಈ ರೀತಿ ಯಾವುದೇ ಹುಡುಗನನ್ನು ಕಟ್ಟಿಹಾಕಿದರೆ, ಅವನಿಗೆ ಉಸಿರುಗಟ್ಟುತ್ತದೆ ಅಥವಾ ಅವನ ಕತ್ತು ಮುರಿದು ಹೋಗುತ್ತದೆ. ಆದರೆ ಈ ಹುಡುಗ ಹಸಿವಿನಿಂದಾಗಿ ತನ್ನನ್ನು ಈ ರೀತಿ ಕಟ್ಟಿಹಾಕಿಸಿಕೊಂಡಿದ್ದಾನೆ.”

ಗುಲಾಬ್ ಪ್ರದರ್ಶನದುದ್ದಕ್ಕೂ ಆಗಾಗ್ಗೆ ಲಘು ಮಧ್ಯಂತರವಾಗಿ ಅವರ ಕಷ್ಟಗಳ ಬಗ್ಗೆ ಮಾತನಾಡುತ್ತಾ ಕೊಳಲನ್ನು ನುಡಿಸುತ್ತಾರೆ. ಮತ್ತೊಂದು  ಕ್ಷಣದಲ್ಲಿ ಗಂಭೀರವಾಗಿ, ಅವರು ಪ್ರೇಕ್ಷಕರನ್ನು ಕೇಳುತ್ತಾರೆ, "ನಾನು ಈ ಕೆಲಸವನ್ನು ಏಕೆ ಮಾಡುತ್ತೇನೆ?" ಅವರು ತನ್ನ ಪ್ರಶ್ನೆಗೆ ತಾನೇ ಉತ್ತರಿಸುತ್ತಾರೆ: “ಹಸಿವೆಗಾಗಿ.”

ಶಹಜಾದ್ ಹೆಚ್ಚಿನ ಪ್ರದರ್ಶನಗಳಲ್ಲಿ ಪೆಟ್ಟಿಗೆಯೊಳಗೆ ಉಳಿಯುತ್ತಾನೆ.

ಗುಲಾಬ್‌ ಶೇಖ್‌ ಬೀದಿ ಪ್ರದರ್ಶನ ನೀಡುತ್ತಿರುವುದು

Gulab Shaikh performing street magic
PHOTO • Soumyabrata Roy

ಕಣ್ಮರೆಯಾಗಿಸುವ ತಂತ್ರದ ಸಮಯದಲ್ಲಿ, ಗುಲಾಬ್ ಶೇಖ್ ತೆಹಟ್ಟಾ ಗ್ರಾಮದಲ್ಲಿ ಒಟ್ಟುಗೂಡಿದ ಪ್ರೇಕ್ಷಕರೊಂದಿಗೆ ಮಾತನಾಡುತ್ತಿರುವುದು. ಸಹೋದರರ ಪ್ರದರ್ಶನದ ಅಂತಿಮ ಭಾಗದಲ್ಲಿ ಬೈಸಿಕಲ್ ಟೈರ್ ಒಂದನ್ನು ಸಣ್ಣ 'ಹಾವನ್ನಾಗಿʼ ಪರಿವರ್ತಿಸಲಾಗುತ್ತದೆ - ಮತ್ತು ಅವರು ಅದನ್ನು ಜನರಿಗೆ ನಿಜವೆನ್ನಿಸುವಂತೆ ಮಾಡುತ್ತಾರೆ

ಕಣ್ಮರೆಯಾಗಿಸುವ ತಂತ್ರದ ಸಮಯದಲ್ಲಿ, ಗುಲಾಬ್ ಶೇಖ್ ತೆಹಟ್ಟಾ ಗ್ರಾಮದಲ್ಲಿ ಒಟ್ಟುಗೂಡಿದ ಪ್ರೇಕ್ಷಕರೊಂದಿಗೆ ಮಾತನಾಡುತ್ತಾ ಇರುತ್ತಾರೆ. ಸಹೋದರರ ಪ್ರದರ್ಶನದ ಅಂತಿಮ ಭಾಗದಲ್ಲಿ ಬೈಸಿಕಲ್ ಟೈರ್ ಒಂದನ್ನು ಸಣ್ಣ 'ಹಾವನ್ನಾಗಿʼ ಪರಿವರ್ತಿಸಲಾಗುತ್ತದೆ - ಮತ್ತು ಅವರು ಅದನ್ನು ಜನರಿಗೆ ನಿಜವೆನ್ನಿಸುವಂತೆ ಮಾಡುತ್ತಾರೆ. ಗುಲಾಬ್‌ ತನ್ನ ಕೊಳಲಿನಲ್ಲಿ ಜನಪ್ರಿಯ ಬಂಗಾಳಿ ಗೀತೆಯನ್ನು ನುಡಿಸುವ ಮೂಲಕ ಪ್ರದರ್ಶನವನ್ನು ಕೊನೆಗೊಳಿಸುತ್ತಾರೆ.

ಇದರ ನಂತರ ಈಗ ಪ್ರೇಕ್ಷಕರಿಂದ ಹಣವನ್ನು ಸಂಗ್ರಹಿಸುವ ಸಮಯ. ಅವರು ಇದನ್ನು ಮಾಡುತ್ತಿರುವಾಗ, ಗುಲಾಬ್ ಹೇಳುತ್ತಾರೆ, “ನಾನು ಹಸಿವಿನ ಬಗ್ಗೆ ಮಾತನಾಡಿದ್ದೇನೆ, ದಯವಿಟ್ಟು ಯಾರನ್ನೂ ಹೋಗಲು ಬಿಡಬೇಡಿ... ನೀವು ಪ್ರದರ್ಶನವನ್ನು ಅರ್ಥಮಾಡಿಕೊಂಡಿದ್ದರೆ, ಅದು 500 ರೂಪಾಯಿಗಳ ಮೌಲ್ಯದ್ದಾಗಿದೆ, ಮತ್ತು ಮಾಡಿಕೊಳ್ಳದೆ ಹೋದರೆ, ಇದಕ್ಕೆ ಐದು ಪೈಸೆಗಳ ಮೌಲ್ಯವೂ ಇಲ್ಲ. ಇದನ್ನು ಪ್ರದರ್ಶಿಸಲು ಒಂದು ಗಂಟೆ ಕಾಲ ನನ್ನ ಸಹೋದರ ಮತ್ತು ನಾನು ಬಹಳ ಶ್ರಮವನ್ನು ವ್ಯಯಿಸಿದ್ದೇವೆ. ಮ್ಯಾಜಿಕ್ ತೋರಿಸಲು ನಾವು ಅನೇಕ ಜನರನ್ನು ಒಟ್ಟುಗೂಡಿಸಿ ಅವರಿಗಾಗಿ ಕೊಳಲನ್ನೂ ನುಡಿಸಿದ್ದೇವೆ. ನಾನು ಎಲ್ಲರಿಗೂ ಖುಷಿ ನೀಡಿದ್ದೇನೋ ಅಥವಾ ದುಃಖ ನೀಡಿದ್ದೇನೋ? ನಾನು ನಿಮ್ಮಿಂದ ಉತ್ತರವನ್ನು ಕೇಳಲು ಬಯಸುತ್ತೇನೆ.”

ಪ್ರೇಕ್ಷಕರಲ್ಲಿ ಎಲ್ಲರೂ ಜಾದೂಗಾರರಿಗೆ ಹಣ ನೀಡುವುದಿಲ್ಲ. ಪ್ರದರ್ಶನ ಮುಗಿಸಿದ ನಂತರ ನನಗೆ ತಿಳಿಸಿದ ಪ್ರಕಾರ, ಗುಲಾಬ್ ಮತ್ತು ಶಹಜಾದ್ ಅವರು ಸಾಮಾನ್ಯವಾಗಿ ಪ್ರತಿದಿನ 3ರಿಂದ 4 ನಾಲ್ಕು ಪ್ರದರ್ಶನಗಳನ್ನು ನೀಡುತ್ತಾರೆ ಮತ್ತು ಕೆಲವು ದಿನಗಳಲ್ಲಿ ಈ ಎಲ್ಲಾ ಪ್ರದರ್ಶನಗಳಿಂದ ಒಟ್ಟು 500 ರೂ ಸಂಪಾದಿಸುತ್ತಾರೆ. ಪ್ರತಿ ಪ್ರೇಕ್ಷಕರು ರೂ. 20 ಕೊಡಬಹುದೆಂದು ನಿರೀಕ್ಷಿಸುತ್ತಾರೆ, ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಯಾರಾದರೂ ಪಾವತಿಸಿದರೆ, ಅವರು ಸಾಮಾನ್ಯವಾಗಿ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸುತ್ತಾರೆ. ಇದು ಅವರ ಸಂಪ್ರದಾಯ - ಅವರು ತಮ್ಮ ಕನಿಷ್ಟ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳಲು ಬಯಸುತ್ತಾರೆ. "ಒಂದು ಪ್ಲೇಟ್ ಅನ್ನದ ಬೆಲೆ 20 ರೂಪಾಯಿಗಳು" ಎಂದು ಶಹಜಾದ್ ಹೇಳುತ್ತಾರೆ.

ಕೋವಿಡ್ -19 ಪಿಡುಗು ಮತ್ತು ಚಲನೆ ಮತ್ತು ಜನಸಂದಣಿಯ ಮೇಲಿನ ನಿರ್ಬಂಧಗಳು ಖಂಡಿತವಾಗಿಯೂ ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಿರಬೇಕಲ್ಲವೆ? ಗುಲಾಬ್ ಹೇಳುತ್ತಾರೆ, “ಮೊದಲ ನಾಲ್ಕು ತಿಂಗಳು, ಲಾಕ್‌ಡೌನ್‌ನಿಂದಾಗಿ ನಮಗೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಆ ಸಾಲದ ಹೊರೆಯನ್ನು ನಾನು ಈಗಲೂ ಹೊರುತ್ತಿದ್ದೇನೆ.”

ಆದರೆ ಗುಲಾಬ್ ಮತ್ತು ಶಹಜಾದ್ ಜೀವನಕ್ಕಾಗುವಷ್ಟು ಸಂಪಾದಿಸಿ ತಮ್ಮ ಕುಟುಂಬವನ್ನು ಪೋಷಿಸಬೇಕಾದರೆ ಪ್ರದರ್ಶನವು ಮುಂದುವರಿಯಬೇಕು. ಮತ್ತು ಅವರು ಆ ದಿನದ ಪ್ರದರ್ಶನವನ್ನು ಮುಗಿಸುವ ಮೊದಲು, ಅವರು ಪ್ರೇಕ್ಷಕರಿಗೆ ಮತ್ತೊಂದು ವಿನಂತಿಯನ್ನು ಮಾಡುತ್ತಾರೆ: “ಎಲ್ಲರೂ ನನಗೆ ಸಹಾಯ ಮಾಡುತ್ತಾರೆ, ಎಲ್ಲರೂ ಒಟ್ಟಾಗಿ, ಆದರೆ ಹಣದ ಸಹಾಯವಲ್ಲ ಚಪ್ಪಾಳೆ ತಟ್ಟಲು ದೇವರು ನಿಮಗೆ ಎರಡು ಕೈಗಳನ್ನು ಕೊಟ್ಟಿದ್ದಾನೆ!" ಎಂದು ಗುಲಾಬ್ ಹೇಳುತ್ತಾರೆ. ನೆರೆದ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ ಮತ್ತು ಪ್ರದರ್ಶಕರು ಬಾಗಿ ನಿಂತು ಗೌರವ ಸಲ್ಲಿಸುತ್ತಾರೆ

ಅನುವಾದ: ಶಂಕರ ಎನ್. ಕೆಂಚನೂರು

Soumyabrata Roy

Soumyabrata Roy is a freelance photojournalist based in Tehatta, West Bengal. He has a Diploma in Photography (2019) from the Ramakrishna Mission Vidyamandira, Belur Math (University of Calcutta).

Other stories by Soumyabrata Roy
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru