ಪ್ರವೀಣ್‌ ಕುಮಾರ್‌ ಅವರು ಊರುಗೋಲು ಹಿಡಿದು ಸ್ಕೂಟರ್‌ ಮೇಲೆ ಕುಳಿತು ಒಂದು ಕೈಯಲ್ಲಿ ಬ್ರಷ್ ಹಿಡಿದು ತನ್ನ ಸುತ್ತಮುತ್ತಲಿನ ಜನರೊಂದಿಗೆ ಮಾತನಾಡುತ್ತಿದ್ದರೆ, ಹತ್ತಿರದಲ್ಲೇ ಸುಮಾರು 18 ಅಡಿ ಉದ್ದದ ದೊಡ್ಡ ಕ್ಯಾನ್ವಾಸ್ ಇದೆ - ಅದರ ಮೇಲೆ ಸಿಂಘುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೆಲವು ರೈತರ ಚಿತ್ರಗಳನ್ನು ಅವರು ಬಿಡಿಸಿದ್ದಾರೆ.

ಕಲಾ ಶಿಕ್ಷಕ ಮತ್ತು ಕಲಾವಿದರಾಗಿರುವ ಪ್ರವೀಣ್ ಲುಧಿಯಾನದಿಂದ ಸುಮಾರು 300 ಕಿ.ಮೀ ಪ್ರಯಾಣಿಸಿ ಸಿಂಘು ತಲುಪಿದ್ದಾರೆ. ಜನವರಿ 10ರಂದು ಹರಿಯಾಣ-ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳವನ್ನು ತಲುಪಿ ತಮ್ಮ ಕೊಡುಗೆಯನ್ನು ನೀಡುವ ಹಂಬಲಕ್ಕೊಳಗಾಗಿದ್ದಾಗಿ ಅವರು ಹೇಳುತ್ತಾರೆ.

"ನಾನು ಯಾವುದೇ ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ, ದೇವರು ನನಗೆ ಸಾಕಷ್ಟು ಕೊಟ್ಟಿದ್ದಾನೆ, ನಾನು ಆ ಕುರಿತು ಚಿಂತಿಸುತ್ತಿಲ್ಲ. ನನಗೆ ಸಂತೋಷ ನೀಡುವ ವಿಷಯವೆಂದರೆ ನಾನು ಈಗ ಈ ಚಳವಳಿಯ ಭಾಗವಾಗಿದ್ದೇನೆನ್ನುವುದು" ಎಂದು ಅವರು ಹೇಳುತ್ತಾರೆ.

"ನಾನು 70 ಪ್ರತಿಶತ ಅಂಗವಿಕಲನಾಗಿದ್ದೇನೆ" ಎಂದು ಅವರು ಹೇಳುತ್ತಾರೆ, ಅವರ ಕಾಲನ್ನು ತೋರಿಸಿ, ಇದು ಮೂರು ವರ್ಷ ವಯಸ್ಸಿನಲ್ಲಿ ಪೋಲಿಯೊ ಪಾರ್ಶ್ವವಾಯುವಿಗೆ ಒಳಗಾಯಿತು. ಪ್ರವೀಣ್ ಅವರ ಅಂಗವೈಕಲ್ಯವಾಗಲಿ ಅಥವಾ ಅವರ ಕುಟುಂಬದ ಆರಂಭಿಕ ಅಸಮಾಧಾನವಾಗಲಿ ಅವರು ಸಿಂಘುವಿಗೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

43ರ ಹರೆಯದ ಪ್ರವೀಣ್, ಲುಧಿಯಾನದ ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ಬಿಡಿಸಲು ಪ್ರಾರಂಭಿಸಿದರು ಮತ್ತು ಅದನ್ನು ತನ್ನೊಂದಿಗೆ ಸಿಂಘುವಿಗೆ ತಂದು, ಅಲ್ಲಿ ಪ್ರತಿಭಟನಾಕಾರರ ನಡುವೆ ಬೀದಿಯಲ್ಲಿ ಕುಳಿತು ಚಿತ್ರ ಸಿದ್ಧವಾಗುವ ತನಕ ಬಿಡಿಸುತ್ತಿದ್ದರು.
Praveen Kumar, whose painting covers the stages of the protests, says, 'What makes me happy is that I am now a part of this agitation'
PHOTO • Anustup Roy
Praveen Kumar, whose painting covers the stages of the protests, says, 'What makes me happy is that I am now a part of this agitation'
PHOTO • Anustup Roy

ಪ್ರತಿಭಟನೆಯ ವಿವಿಧ ಹಂತಗಳನ್ನು ಒಳಗೊಂಡ ಪ್ರವೀಣ್ ಕುಮಾರ್ ಅವರ ಚಿತ್ರಕಲೆ, 'ನಾನು ಈಗ ಈ ಆಂದೋಲನದ ಭಾಗವಾಗಿದ್ದೇನೆನ್ನುವುದು ನನಗೆ ಸಂತೋಷ ತಂದಿದೆ'

ರೈತರು ಸಿಂಘು ಮತ್ತು ಇತರ ಹೋರಾಟ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರು ಈ ಕಾನೂನುಗಳು ತಮ್ಮ ಬದುಕನ್ನು ನಾಶಗೋಳಿಸಲಿವೆ ಎನ್ನುತ್ತಾರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಪ್ರವೀಣ್ ಅವರ ವರ್ಣಚಿತ್ರಗಳು ಈ ಕಾನೂನುಗಳ ವಿರುದ್ಧದ ಪ್ರತಿಭಟನೆಯ ವಿವಿಧ ಹಂತಗಳನ್ನು ಒಳಗೊಂಡಿವೆ. ಈ ಕ್ಯಾನ್ವಾಸ್ ಈ ಚಳವಳಿಯ ಪ್ರಮುಖ ಚಿತ್ರಣವಾಗಿದೆ - ರೈತರು ರೈಲು ತಡೆ ಪ್ರಾರಂಭಿಸಿದ ದಿನದಿಂದ, ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಎದುರಿಸಿದ ಸನ್ನಿವೇಶ, ಇಂದಿನವರೆಗೂ, ದೆಹಲಿಯ ಗಡಿಯಲ್ಲಿ ದೃಢನಿಶ್ಚಯದಿಂದ ಇರುವುದರವರೆಗೆ ಎಲ್ಲವನ್ನೂ ಹಂತ ಹಂತವಾಗಿ ಚಿತ್ರಿಸಲಾಗಿದೆ.

ಅವರು ಕ್ಯಾನ್ವಾಸ್‌ ಮೇಲೆ ಶ್ರಮವಹಿಸಿ  ಕೆಲಸ ಮಾಡಿದ್ದಾರೆ, ಆದರೆ ಮುಂದೆ ಇದನ್ನು ಇನ್ನಷ್ಟು ವಿಸ್ತರಿಸಲು ಬಯಸುತ್ತಾರೆ, ಮತ್ತು “ನಾನು ಇದಕ್ಕೆ ಅಂತಿಮ ರೂಪ ನೀಡಲು ಬಯಸುತ್ತೇನೆ” - ಆ ಅಂತ್ಯವು ಪ್ರತಿಭಟನೆಯ ಯಶಸ್ಸು ಮತ್ತು ಕೃಷಿ ಕಾನೂನುಗಳ ವಾಪಾಸಾತಿಯಾಗಿರಬೇಕು.

ಅನುವಾದ: ಶಂಕರ ಎನ್. ಕೆಂಚನೂರು
Anustup Roy

Anustup Roy is a Kolkata-based software engineer. When he is not writing code, he travels across India with his camera.

Other stories by Anustup Roy
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru