ರಾಧಾ ತೋರಿದ ಧೈರ್ಯಕ್ಕೆ ಬೆಲೆ ತೆತ್ತಿದ್ದು ಮಾತ್ರ ಅವರ ಬಳಿಯಿದ್ದ ನಾಲ್ಕು ನಾಯಿಗಳು. ಮೊದಲ ನಾಯಿಯ ಕುತ್ತಿಗೆ ಕೊಯ್ದಿದ್ದರು. ಎರಡನೆಯದಕ್ಕೆ ವಿಷವಿಕ್ಕಿದ್ದರು, ಮೂರನೆಯದು ಕಾಣೆಯಾದರೆ ನಾಲ್ಕನೇ ನಾಯಿಯನ್ನು ಅವರ ಕಣ್ಣ ಮುಂದೆಯೇ ಕೊಲ್ಲಲಾಯಿತು. “ನನ್ನ ಮೇಲೆ ಎಸಗಿದ ಕ್ರೌರ್ಯಕ್ಕಾಗಿ ನಮ್ಮೂರಿನ ನಾಲ್ಕು ಬಲಶಾಲಿ ಜನರು ಜೈಲಿನಲ್ಲಿದ್ದಾರೆ, ಅದಕ್ಕಾಗಿ ಅವರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ” ಎನ್ನುತ್ತಾರೆ ರಾಧಾ

ಸುಮಾರು ಆರು ವರ್ಷಗಳ ಹಿಂದೆ ನಾಲ್ವರು ಪುರುಷರು ರಾಧಾ ಅವರ(ಹೆಸರು ಬದಲಾಯಿಸಲಾಗಿದೆ) ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅವರು ತನ್ನ ಹಳ್ಳಿಯಿಂದ ಬೀಡ್ ನಗರಕ್ಕೆ ಹೋಗುತ್ತಿದ್ದರು - ಸುಮಾರು 100 ಕಿಲೋಮೀಟರ್ ದೂರದಲ್ಲಿ, ಬೀಡ್ ಜಿಲ್ಲೆಯಲ್ಲಿ - ಖಾಸಗಿ ವಾಹನದ ಚಾಲಕ ಲಿಫ್ಟ್ ನೀಡುವ ನೆಪವೊಡ್ಡಿ ಅವರನ್ನು ಅಪಹರಿಸಿದ್ದನು. ನಂತರ ಅವನು ಮತ್ತು ಅದೇ ಗ್ರಾಮದ ಅವನ ಮೂವರು ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದರು.

"ಅದರ ನಂತರ ನಾನು ವಾರಗಳವರೆಗೆ ವಿಚಲಿತಳಾಗಿದ್ದೆ" ಎಂದು 40 ವರ್ಷದ ರಾಧಾ ತನಗಾಗಿದ್ದ ಆಘಾತದ ಕುರಿತು ಹೇಳುತ್ತಾರೆ. "ಅವರನ್ನು ಕಾನೂನಿನ ಮೂಲಕ ಶಿಕ್ಷಿಸುವ ನಿರ್ಧಾರಕ್ಕೆ ಬಂದ ನಾನು ಪೊಲೀಸ್ ದೂರು ದಾಖಲಿಸಿದೆ."

ಅವರ ಮೇಲೆ ಹಿಂಸಾತ್ಮಕ ಹಲ್ಲೆ ನಡೆದ ಸಮಯದಲ್ಲಿ, ರಾಧಾ ತನ್ನ ಪತಿ ಮತ್ತು ಮಕ್ಕಳೊಂದಿಗೆ ಬೀಡ್ ನಗರದಲ್ಲಿ ನೆಲೆಸಿದ್ದರು. "ನನ್ನ ಪತಿ ಅಲ್ಲಿನ ಫೈನಾನ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಕೃಷಿಭೂಮಿಯನ್ನು ನೋಡಿಕೊಳ್ಳಲು ನಾನು ಆಗೊಮ್ಮೆ ಈಗೊಮ್ಮೆ ಹಳ್ಳಿಗೆ ಹೋಗುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ದೂರು ದಾಖಲಿಸಿದ ನಂತರ, ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ರಾಧಾರ ಮೇಲೆ ಒತ್ತಡ ಹೇರಲಾಯಿತು. ದುಷ್ಕರ್ಮಿಗಳು ಮತ್ತು ಅವರ ಸಂಬಂಧಿಕರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮದ ಪ್ರಭಾವಿ ವ್ಯಕ್ತಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆಂದು ಅವರು ಹೇಳುತ್ತಾರೆ. "ನಾನು ಒತ್ತಡವನ್ನು ಎದುರಿಸಿದ್ದೇನೆ. ಆದರೆ ನಾನು ಹಳ್ಳಿಯಿಂದ ದೂರದಲ್ಲಿ ವಾಸಿಸುತ್ತಿದ್ದೆ. ನಗರದಲ್ಲಿ ಜನರು ನನ್ನನ್ನು ಬೆಂಬಲಿಸಿದ್ದರು. ಇದು ನನ್ನಲ್ಲಿ ಸ್ವಲ್ಪ ಮಟ್ಟಿಗೆ ಸುರಕ್ಷಿತ ಮತ್ತು ಆತ್ಮವಿಶ್ವಾದ ಭಾವವನ್ನು ಹುಟ್ಟಿಸಿತ್ತು."

ಆದರೆ ಮಾರ್ಚ್ 2020ರಲ್ಲಿ ಕೋವಿಡ್ -19 ಪ್ರಕೋಪಕ್ಕೇರಿದ ನಂತರ, ಅವರ ಭದ್ರತೆಯ ಪರದೆ ಹರಿದುಬಿದ್ದಿತು. ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಕೂಡಲೇ, ಅವರ ಪತಿ ಮನೋಜ್ (ಹೆಸರು ಬದಲಾಯಿಸಲಾಗಿದೆ) ತನ್ನ ಕೆಲಸವನ್ನು ಕಳೆದುಕೊಂಡರು. ರಾಧಾ ಹೇಳುತ್ತಾರೆ, “ಅವರು ತಿಂಗಳಿಗೆ 10,000 ರೂ ಗಳಿಸುತ್ತಿದ್ದರು ಮತ್ತು ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆವು, ಆದರೆ ಮನೋಜ್ ನಿರುದ್ಯೋಗಿಯಾದ ನಂತರ ನಮಗೆ ಬಾಡಿಗೆ ಕಟ್ಟುವುದು ಕಷ್ಟವಾಯಿತು. ದಿನ ಕಳೆದಂತೆ ನಮಗೆ ಹೊಟ್ಟೆ ಹೊರೆದುಕೊಳ್ಳುವುದಕ್ಕೂ ಕಷ್ಟವಾಗತೊಡಗಿತು.”

ಬೇರೆ ಆಯ್ಕೆಗಳಿಲ್ಲದ ಕಾರಣ ರಾಧಾ, ಮನೋಜ್ ಮತ್ತು ಅವರ ಮಕ್ಕಳು ಒಲ್ಲದ ಮನಸ್ಸಿನಿಂದ ರಾಧಾ ಅತ್ಯಾಚಾರಕ್ಕೊಳಗಾದ ಸ್ಥಳವಾದ ತಮ್ಮ ಹಳ್ಳಿಯಲ್ಲಿ ವಾಸಿಸಲು ಹೋದರು. "ನಮಗೆ ಇಲ್ಲಿ ಮೂರು ಎಕರೆ ಭೂಮಿಯಿದೆ, ಇತರ ಆಯ್ಕೆಗಳ ಕುರಿತು ಹೆಚ್ಚು ಯೋಚಿಸದೆ ಇಲ್ಲಿ ಉಳಿಯಲು ಬಂದೆವು." ಎಂದು ಅವರು ಹೇಳುತ್ತಾರೆ. ಕುಟುಂಬವು ಈಗ ಹೊಲದಲ್ಲಿರುವ ಗುಡಿಸಲಿನಲ್ಲಿ ವಾಸಿಸುತ್ತಿದೆ, ಮತ್ತು ರಾಧಾ ತಮ್ಮ ಹೊಲದಲ್ಲಿ ಹತ್ತಿ ಮತ್ತು ಜೋಳವನ್ನು ಬೆಳೆಯುತ್ತಾರೆ.

ಮತ್ತೆ ಊರಿಗೆ ಬಂದ ಕೂಡಲೇ ಪಾತಕಿಗಳ ಕುಟುಂಬದವರು ರಾಧಾರನ್ನೇ ಟಾರ್ಗೆಟ್ ಮಾಡತೊಡಗಿದರು. ಅವರು ಹೇಳುತ್ತಾರೆ, "ಕೇಸ್ ನಡೆಯುತ್ತಿತ್ತು. ಅದನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ತುಂಬಾ ಹೆಚ್ಚಾಗತೊಡಗಿತು." ಆದರೆ ಅವರು ಹಿಂದೆ ಸರಿಯಲು ನಿರಾಕರಿಸಿದಾಗ, ಒತ್ತಡವು ಬಹಿರಂಗ ಬೆದರಿಕೆಗಳಾಗಿ ಪರಿವರ್ತನೆಗೊಂಡವು. ರಾಧಾ ಅವರ ಪ್ರಕಾರ, “ನಾನು ಊರಿನಲ್ಲಿ ಜನರ ಕಣ್ಣ ಮುಂದೆಯೇ ಇದ್ದೆ. ಇದರಿಂದಾಗಿ ನನಗೆ ಬೆದರಿಕೆ ಹಾಕುವುದು, ಕಿರುಕುಳ ನೀಡುವುದು ಅವರಿಗೆ ಸುಲಭವಾಗಿತ್ತು.’’ ಆದರೆ ರಾಧಾ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ರಾಧಾ ತನ್ನ ಊರಿನ ಜಮೀನಿನಿಂದ ನಗರಕ್ಕೆ ಹೋಗುತ್ತಿದ್ದಾಗ ಅವರನ್ನು ಅಪಹರಿಸಿ ಹಲ್ಲೆ ನಡೆಸಲಾಯಿತು

2020ರ ಮಧ್ಯದಲ್ಲಿ, ಅವರ ಗ್ರಾಮದ ಗ್ರಾಮ ಪಂಚಾಯತ್ ಮತ್ತು ನೆರೆಯ ಎರಡು ಗ್ರಾಮ ಪಂಚಾಯತ್‌ಗಳು ರಾಧಾ ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ರಾಧಾ "ಚಾರಿತ್ರ್ಯ ಹೀನರು" ಮತ್ತು ಅವರ ಗ್ರಾಮಕ್ಕೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಈ ಬಹಿಷ್ಕಾರವನ್ನು ಹೇರಲಾಗಿತ್ತು. ಈ ಮೂರು ಗ್ರಾಮಗಳಲ್ಲಿ ಅವರ ಸಂಚಾರವನ್ನು "ನಿಷೇಧಿಸಲಾಗಿತ್ತು". ಅವರು ನೆನಪಿಸಿಕೊಳ್ಳುತ್ತಾರೆ, “ಮನೆಯ ಅಗತ್ಯಗಳಿಗಾಗಿ ಒಂದು ಬಕೆಟ್ ನೀರು ತರಲೆಂದು ಹೊರಗೆ ಹೋದರೂ, ನನ್ನನ್ನು ಕೆಟ್ಟದಾಗಿ ನಿಂದಿಸಲಾಗುತ್ತಿತ್ತು. ಅವರು ಮನಸಿನಲ್ಲಿದ್ದುದು "ನಮ್ಮವರನ್ನು ಜೈಲಿಗೆ ಕಳುಹಿಸಿ ನಮ್ಮ ನಡುವೆಯೇ ಬದುಕಲು ಬಯಸುತ್ತಿರುವೆ ನೀನು" ಎನ್ನುವುದು.

ಅವರಿಗೆ ಕೆಲವೊಮ್ಮೆ ತೀವ್ರ ಹತಾಶೆ ಕಾಡಿ ಜೋರಾಗಿ ಅಳಬೇಕು ಎನ್ನಿಸುತ್ತಿತ್ತು. ಅವರು ಮರಾಠಿಯಲ್ಲಿ ಹೇಳುತ್ತಾರೆ, "ಮಲಾ ಸ್ವತಲಾ ಸಂಭಾಲ್ನಾ ಆಮ್ಚಾಚಾ ಹೋತಾ (ಈ ಸಮಯದಲ್ಲಿ ನನ್ನನ್ನು ನಾನು ಸಂಭಾಳಿಸಿಕೊಂಡಿರುವುದು ಬಹಳ ಮುಖ್ಯವಾಗಿತ್ತು) ಕೇಸು ಬಹುತೇಕ ಮುಗಿಯುವುದರಲ್ಲಿತ್ತು."

ಬೀಡ್‌ ಜಿಲ್ಲೆಯವರಾದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮನಿಷಾ ಟೋಕ್ಲೆ ನ್ಯಾಯಾಲಯದ ಪ್ರಕರಣದ ಸಂದರ್ಭದಲ್ಲಿ ರಾಧಾ ಅವರೊಂದಿಗೆ ಸಂಪರ್ಕದಲ್ಲಿದ್ದರು. ಈ ಹಿಂದೆ ರಾಧಾರಿಗೆ ಪೊಲೀಸ್ ದೂರು ನೀಡಲು ಸಹ ಅವರೇ ಸಹಾಯ ಮಾಡಿದ್ದರು. ಟೋಕ್ಲೆ ಹೇಳುತ್ತಾರೆ, "ನಮ್ಮ ವಕೀಲರು [ಸಕಾರಾತ್ಮಕ] ತೀರ್ಪಿನ ಬಗ್ಗೆ ವಿಶ್ವಾಸ ಹೊಂದಿದ್ದರು. ಆದರೆ ರಾಧಾ ತಾಳ್ಮೆಯಿಂದ ಇರಬೇಕಾಗಿತ್ತು. ಪರಿಸ್ಥಿತಿಯೆದುರು ಕುಸಿಯದೆ ಅವರು ಆತ್ಮವಿಶ್ವಾಸದಿಂದ ಇರಬೇಕೆಂದು ನಾನು ಬಯಸಿದ್ದೆ." ಅತ್ಯಾಚಾರ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ಮನೋಧೈರ್ಯ ಯೋಜನೆಯಡಿ ರಾಧಾರಿಗೆ 2.5 ಲಕ್ಷ ರೂಪಾಯಿಗಳನ್ನು ಕೊಡಿಸಲು ಮನಿಷಾ ಕಾಳಜಿವಹಿಸಿದ್ದರು.

ಸುದೀರ್ಘ ಕಾನೂನು ಪ್ರಕ್ರಿಯೆಯು ಪತಿ ಮನೋಜ್‌ ಅವರನ್ನು ಹಲವಾರು ಬಾರಿ ಚಡಪಡಿಸುವಂತೆ ಮಾಡಿತು. "ಅವರು ಕೆಲವೊಮ್ಮೆ ನಿರಾಶೆಗೊಳ್ಳುತ್ತಿದ್ದರು. ನಾನು ತಾಳ್ಮೆಯಿಂದಿರಿ ಎಂದು ಹೇಳಿದ್ದೆ" ಎಂದು ಟೋಕ್ಲೆ ಹೇಳುತ್ತಾರೆ. ರಾಧಾರ ಹೋರಾಟದಲ್ಲಿ ಮನೋಜ್ ಹೇಗೆ ಧೈರ್ಯದಿಂದ ಬೆಂಬಲಿಸಿದರು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು.

ನ್ಯಾಯಾಲಯವು ಆನ್ ಲೈನ್ ಮೂಲಕ ಕಾರ್ಯನಿರ್ವಹಿಸತೊಡಗಿದಾಗ, ನಿಧಾನವಾಗಿ ಮುಂದುವರೆಯುತ್ತಿದ್ದ ಈ ಪ್ರಕರಣವು ಕೊವಿಡ್‌ ಸಮಯದಲ್ಲಿ ಇನ್ನಷ್ಟು ನಿಧಾನವಾಯಿತು. "ಆಗಲೇ ನಾಲ್ಕು ವರ್ಷಗಳಾಗಿತ್ತು. ಲಾಕ್ ಡೌನ್ ನಂತರ ವಿಚಾರಣೆಗಳನ್ನು ಕೆಲವು ಬಾರಿ ಮುಂದೂಡಲಾಯಿತು. ನಾವು ಬಿಟ್ಟುಕೊಡಲಿಲ್ಲ, ಆದರೆ ಈ ಅಡಚಣೆಗಳು ನ್ಯಾಯ ಪಡೆಯುವ ನಮ್ಮ ಭರವಸೆ ಕುಸಿಯುವಂತೆ ಮಾಡಿತು" ಎಂದು ರಾಧಾ ಹೇಳುತ್ತಾರೆ.

ಅವರ ತಾಳ್ಮೆ ಮತ್ತು ಛಲ ವ್ಯರ್ಥವಾಗಲಿಲ್ಲ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ, ಅಪರಾಧ ನಡೆದ ಸುಮಾರು ಆರು ವರ್ಷಗಳ ನಂತರ, ಬೀಡ್ ಸೆಷನ್ಸ್ ನ್ಯಾಯಾಲಯವು ಅತ್ಯಾಚಾರ ಮಾಡಿದ ಆರೋಪಿಗಳನ್ನು ದೋಷಿ ಎಂದು ಘೋಷಿಸಿತು. ಅಪರಾಧಿಗಳೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು. "ನಾವು ತೀರ್ಪನ್ನು ರಾಧಾಗೆ ತಿಳಿಸಿದಾಗ, ಅವರು ಒಂದು ನಿಮಿಷ ನಿಟ್ಟುಸಿರಿನೊಡನೆ ಮೌನವಾದರು ಮತ್ತು ನಂತರ ಕುಸಿದುಬಿದ್ದರು. ಅವರ ಸುದೀರ್ಘ ಹೋರಾಟವು ಅಂತಿಮವಾಗಿ ಫಲಿತಾಂಶದ ಹಂತಕ್ಕೆ ಬಂದಿತ್ತು" ಎಂದು ಟೋಕ್ಲೆ ಹೇಳುತ್ತಾರೆ.

ಆದರೆ ಕಿರುಕುಳ ಅಲ್ಲಿಗೇ ನಿಲ್ಲಲಿಲ್ಲ.

ಎರಡು ತಿಂಗಳ ನಂತರ, ರಾಧಾ ನೀವು ಬೇರೊಬ್ಬರ ಭೂಮಿಯನ್ನು ಒತ್ತುವರಿ ಮಾಡಿದ್ದೀರಿ ಎಂದು ಆರೋಪಿಸಲಾಗಿದ್ದ ನೋಟಿಸ್ ಒಂದನ್ನು ಸ್ವೀಕರಿಸಿದರು. ರಾಧಾ ಅವರು ಸಾಗುವಳಿ ಮಾಡಿಕೊಂಡು ವಾಸಿಸುತ್ತಿದ್ದ ಜಮೀನು ಅವರ ಗ್ರಾಮದ ಇತರ ನಾಲ್ಕು ಜನರಿಗೆ ಸೇರಿದ್ದು ಎಂದು ಗ್ರಾಮ ಸೇವಕರು ಸಹಿ ಮಾಡಿದ ದಾಖಲೆಯಲ್ಲಿ ಬರೆಯಲಾಗಿತ್ತು. ರಾಧಾ ಹೇಳುತ್ತಾರೆ, "ಈಗ ಆ ಜನರು ನನ್ನ ಜಮೀನಿನ ಹಿಂದೆ ಬಿದ್ದಿದ್ದರು, ಇಲ್ಲಿ ಏನಾಗುತ್ತಿದೆಯೆನ್ನುವುದು ಎಲ್ಲರಿಗೂ ತಿಳಿದಿದೆ, ಆದರೆ ಭಯದಿಂದ ಯಾರೂ ಬಹಿರಂಗವಾಗಿ ನನ್ನ ಬೆಂಬಲಕ್ಕೆ ಬರುತ್ತಿಲ್ಲ. ಈ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಮಹಿಳೆಯೊಬ್ಬಳು ಬದುಕಲು ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಜನರು ಒಬ್ಬ ಮಹಿಳೆಯನ್ನು ಸೋಲಿಸಲು ಯಾವ ಮಟ್ಟಕ್ಕೆ ಇಳಿಯಬಲ್ಲರೆನ್ನುವುದನ್ನು ಸ್ವತಃ ಅನುಭವಿಸಿ ನೋಡಿದೆ"

ದೂರು ದಾಖಲಿಸಿದ ನಂತರ ರಾಧಾ ಅವರಿಗೆ ಪ್ರಕರಣವನ್ನು ಹಿಂಪಡೆಯುವಂತೆ ಅಪರಾಧಿಗಳ ಕಡೆಯವರು ಒತ್ತಡ ಹೇರಿದ್ದರು. ಅಪರಾಧಿಗಳು ಮತ್ತು ಅವರ ಸಂಬಂಧಿಕರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮದ ಪ್ರಭಾವಿ ವ್ಯಕ್ತಿಗಳಿಗೆ ಆಪ್ತರು

ರಾಧಾ ಅವರ ಕುಟುಂಬವು ತಗಡಿನ ಛಾವಣಿಯ ಮನೆಯಲ್ಲಿ ವಾಸಿಸುತ್ತಿದೆ. ಮಳೆಗಾಲದಲ್ಲಿ ಮನೆಯ ಮೇಲ್ಛಾವಣಿ ಸೋರಲಾಂಭಿಸಿದರೆ ಬೇಸಿಗೆಯಲ್ಲಿ ಬಿಸಿಲಿಗೆ ತಗಡು ಕಾದು ಮೆನೆಯೆಲ್ಲ ಬಿಸಿಯಾಗುತ್ತದೆ. ಅವರು ಹೇಳುತ್ತಾರೆ, “ಗಾಳಿ ಜೋರಾಗಿ ಬೀಸುವಾಗ, ಸೂರಿನ ತಗಡುಗಳು ಹಾರಿ ಹೋಗುತ್ತವೆ. ಇಂತಹ ಸಂದರ್ಭಗಳಲ್ಲಿ, ನನ್ನ ಮಕ್ಕಳು ಹಾಸಿಗೆಯ ಕೆಳಗೆ ಅಡಗಿಕೊಳ್ಳುತ್ತಾರೆ. ನನ್ನ ಬದುಕಿನ ಸ್ಥಿತಿ ಬಹಳ ಶೋಚನೀಯವಾಗಿದೆ, ಆದರೂ ಅವರು ನನ್ನನ್ನು ಬೆನ್ನಟ್ಟುತ್ತಲೇ ಇದ್ದಾರೆ. ಮನೆಯ ನೀರಿನ ಪೂರೈಕೆಯನ್ನೂ ನಿಲ್ಲಿಸಿ ಇಲ್ಲಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದರು. ಆದರೆ ನನ್ನ ಬಳಿ ಎಲ್ಲ ಕಾಗದ ಪತ್ರಗಳಿವೆ. ನಾನು ಎಲ್ಲಿಗೂ ಹೋಗುವುದಿಲ್ಲ."

ರಾಧಾ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನಗಳ ಬಗ್ಗೆ ದೂರಿದ್ದಾರೆ. ಅವರು ತಾನು ಅಪಾಯದಲ್ಲಿದ್ದು ತನಗೆ ರಕ್ಷಣೆಯ ಅಗತ್ಯವಿದೆ ಎಂದು ಹೇಳುತ್ತಾರೆ. ಇದಾದ ನಂತರ ಗ್ರಾಮಸೇವಕ ನೋಟಿಸ್‌ನಲ್ಲಿರುವ ತಮ್ಮ ಸಹಿ ನಕಲಿಯಾಗಿದ್ದು ಆ ಜಮೀನು ರಾಧಾ ಅವರಿಗೆ ಮಾತ್ರ ಸೇರಿದ್ದೆಂದು ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿದ್ದಾರೆ.

ರಾಧಾ ಅವರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, 2021ರ ಆರಂಭದಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪ ಸಭಾಪತಿ ನೀಲಂ ಗೋರ್ಹೆಯವರು, ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರೀಫ್ ಅವರಿಗೆ  ಪತ್ರ ಬರೆದು, ರಾಧಾ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಮತ್ತು ಮೂರು ಗ್ರಾಮಗಳು ಹೊರಡಿಸಿದ ಕಾನೂನುಬಾಹಿರ ಸಾಮಾಜಿಕ ಬಹಿಷ್ಕಾರ ನೋಟಿಸ್ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಈಗ ಒಬ್ಬ ಪೊಲೀಸ್ ಕಾನ್ ಸ್ಟೆಬಲ್ ರಾಧಾರ ಮನೆಯ ಬಳಿ ಎಲ್ಲಾ ಸಮಯದಲ್ಲೂ ಕಾವಲಿಗಿರುತ್ತಾರೆ. "ನಾನು ಈಗಲೂ ಸಂಪೂರ್ಣ ಸುರಕ್ಷಿತಳಲ್ಲ. ಪೊಲೀಸ್ ಕೆಲವೊಮ್ಮೆ ಇದ್ದರೆ, ಕೆಲವೊಮ್ಮೆ ಇರುವುದಿಲ್ಲ. ರಾತ್ರಿ ವೇಳೆ ನೆಮ್ಮದಿಯ ನಿದ್ರೆಯೇ ಇಲ್ಲವಾಗಿದೆ" ಎಂದು ಅವರು ಹೇಳುತ್ತಾರೆ. "ಲಾಕ್ ಡೌನ್‌ಗೂ ಮೊದಲು (ಮಾರ್ಚ್ 2020ರಲ್ಲಿ) ನಾನು ಊರಿನಿಂದ ದೂರವಿದ್ದಿದ್ದರಿಂದಾಗಿ ಕನಿಷ್ಟ ಒಂದೊಳ್ಳೆ ನಿದ್ರೆಯಾದರೂ ಸಿಗುತ್ತಿತ್ತು. ಈಗ ನಾನು ಯಾವಾಗಲೂ ಒಂದಿಷ್ಟು ಎಚ್ಚರವಾಗಿರುತ್ತೇನೆ, ವಿಶೇಷವಾಗಿ ನಾನು ಮತ್ತು ಮಕ್ಕಳು ಮಾತ್ರ ಇದ್ದಾಗ.

ಕುಟುಂಬದಿಂದ ದೂರವಿರುವಾಗ ಮನೋಜ್‌ ಅವರಿಗೂ ಸರಿಯಾಗಿ ನಿದ್ದೆ ಬರುವುದಿಲ್ಲ. ಅವರು ಹೇಳುತ್ತಾರೆ, “ಅವರೆಲ್ಲರೂ ಹೇಗಿದ್ದಾರೋ, ನಿದ್ರೆ ಮಾಡಿದರೋ ಇಲ್ಲವೋ ಎಂದು ಚಿಂತೆಯಾಗುತ್ತದೆ." ನಗರದ ಕೆಲಸ ಕಳೆದುಕೊಂಡ ನಂತರ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಅವರಿಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕೆಲಸ ಸಿಕ್ಕಿತು, ಅವರು ಕೆಲಸ ಮಾಡುವ ಸ್ಥಳವು ಹಳ್ಳಿಯಿಂದ 60 ಕಿಮೀ ದೂರದಲ್ಲಿದೆ, ಆದ್ದರಿಂದ ಅವರು ಅಲ್ಲೇ ಒಂದು ಸಣ್ಣ ಬಾಡಿಗೆ ಕೋಣೆ ಪಡೆದು ಉಳಿದುಕೊಂಡಿದ್ದಾರೆ. “ಮೊದಲಿನ ಕೆಲಸಕ್ಕಿಂತಲೂ ಸಂಬಳ ಕಡಿಮೆಯಿರುವ ಕಾರಣ ಅವರಿಗೆ ದೊಡ್ಡ ಮನೆ ಮಾಡಿ ಬಾಡಿಗೆ ಕಟ್ಟುವುದು ಕಷ್ಟ, ಹೀಗಾಗಿ ವಾರದಲ್ಲಿ 3-4 ದಿನ ನಮ್ಮೊಂದಿಗೆ ಇರುತ್ತಾರೆ.” ರಾಧಾ ಹೇಳುತ್ತಾರೆ

ಶಾಲೆಗಳು ಪುನರಾರಂಭವಾದ ನಂತರ ಸ್ಥಳೀಯ ಶಾಲೆಯಲ್ಲಿ 8, 12 ಮತ್ತು 15 ವರ್ಷ ವಯಸ್ಸಿನ ತನ್ನ ಮೂವರು ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆಯೋ ಎಂದು ರಾಧಾ ಚಿಂತಿತರಾಗಿದ್ದಾರೆ. ಅವರು "ಮಕ್ಕಳಿಗೆ ಕಿರುಕುಳ ನೀಡುತ್ತಾರೋ ಅಥವಾ ಬೆದರಿಕೆ ಹಾಕುತ್ತಾರೋ ನನಗೆ ಗೊತ್ತಿಲ್ಲ."

ನಾಯಿಗಳು ಅವರ ಹೆದರಿಕೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. “ಅವು ಒಂದಷ್ಟು ಭದ್ರತೆಯನ್ನೂ ನೀಡುತ್ತಿದ್ದವು. ಯಾರಾದರೂ ಗುಡಿಸಲ ಬಳಿ ಬಂದರೆ ಬೊಗಳಿ ಎಚ್ಚರಿಸುತ್ತಿದ್ದವು,” ಎನ್ನುತ್ತಾರೆ ರಾಧಾ. “ಆದರೆ ಈ ಜನರು ಅವುಗಳನ್ನು ಒಂದೊಂದಾಗಿ ಕೊಂದರು. ಇತ್ತೀಚೆಗೆ ನನ್ನ ನಾಲ್ಕನೇ ನಾಯಿಯನ್ನು ಕೊಂದರು.”

ಐದನೇ ನಾಯಿ ಸಾಕಬೇಕೆ ಬೇಡವೇ ಎನ್ನುವುದೊಂದು ಪ್ರಶ್ನೆಯೇ ಅಲ್ಲವೆನ್ನುತ್ತಾ ರಾಧಾ ಹೇಳುತ್ತಾರೆ, “ಕನಿಷ್ಟ ಹಳ್ಳಿಯ ನಾಯಿಗಳಾದರೂ ಸುರಕ್ಷಿತವಾಗಿರಬೇಕಿತ್ತು.”

ಈ ವರದಿಯು ಪತ್ರಕರ್ತರಿಗೆ ಕೊಡುವ ಪುಲಿಟ್ಜರ್ ಕೇಂದ್ರದ ಸಹಯೋಗದ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಸರಣಿ ವರದಿಗಳ ಒಂದು ಭಾಗ.

ಅನುವಾದ: ಶಂಕರ. ಎನ್. ಕೆಂಚನೂರು

Text : Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Illustrations : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru