ನಾನು ಜನಿಸಿದ ಅವಿಭಜಿತ ಕಾಲಹಂಡಿ ಜಿಲ್ಲೆಯಲ್ಲಿ, ಬರ, ಹಸಿವು, ಹಸಿವಿನಿಂದ ಸಂಭವಿಸಿದ ಸಾವುಗಳು ಮತ್ತು ಸಂಕಷ್ಟದ ವಲಸೆ ಇವೆಲ್ಲವೂ ಜನರ ಜೀವನದ ಅವಿಭಾಜ್ಯ ಅಂಗವಾಗಿತ್ತು. ನಾನು ಸಣ್ಣ ಹುಡುಗನಾಗಿ ಮತ್ತು ನಂತರ ಪತ್ರಕರ್ತನಾಗಿ ಇಂತಹ ವಿಷಯಗಳಿಗೆ ಸ್ಪಷ್ಟವಾಗಿ ಸಾಕ್ಷಿಯಾಗಿರುವುದರ ಜೊತೆಗೆ ಅವುಗಳ ಬಗ್ಗೆ ವರದಿಯನ್ನೂ ಮಾಡಿದ್ದೇನೆ. ಇದರಿಂದಾಗಿ ಇಲ್ಲಿ ಜನರು ವಲಸೆ ಹೋಗುವುದೇಕೆ?, ವಲಸೆ ಹೋಗುವವರು ಯಾರು, ಎಂತಹ ಪರಿಸ್ಥಿತಿಗಳು ಅವರನ್ನು ವಲಸೆ ಹೋಗುವಂತೆ ಮಾಡುತ್ತವೆ, ಅವರು ತಮ್ಮ ಜೀವನೋಪಾಯವನ್ನು ಗಳಿಸುವುದು ಹೇಗೆ- ಮತ್ತು ಅವರು ತಮ್ಮ ದೈಹಿಕ ಸಾಮರ್ಥ್ಯವನ್ನು ಮೀರಿ ಮಾಡುವ ಕೆಲಸದ ವಿಧಾನದ ಬಗ್ಗೆ ನನಗೆ ಅರಿವಿದೆ.

ಅವರಿಗೆ ಸರ್ಕಾರದ ನೆರವಿನ ಅಗತ್ಯವಿದ್ದಾಗಲೇ ಅವರನ್ನು ಕೈಬಿಡುವುದು ಈಗ ಸಹಜ ಎನ್ನುವಂತಾಗಿದೆ, ಆಹಾರ, ನೀರು, ಸಾರಿಗೆಯಿಲ್ಲದೆ ಮತ್ತು ನೂರಾರು ಕಿಲೋಮೀಟರ್ ದೂರದ ಸ್ಥಳಗಳಿಗೆ ಅವರು ಒಂದು ಜೊತೆ ಚಪ್ಪಲಿ ಇಲ್ಲದೆ ನಡೆಯಬೇಕಾಯಿತು.

ನಾನು ಭಾವಜೀವಿಯಾಗಿರುವುದರಿಂದ ನನಗೆ ಇದು ನೋವನ್ನುಂಟು ಮಾಡುತ್ತದೆ, ಇಲ್ಲಿನ ಜನರಲ್ಲಿ ನಾನೂ ಒಬ್ಬ ಎನ್ನುವಂತೆ, ಅವರು ಖಂಡಿತವಾಗಿಯೂ ನನ್ನ ಜನರು. ಹಾಗಾಗಿ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದೇನೆ ಮತ್ತು ಅದೇ ಜನರನ್ನು ಅದೇ ಸಮುದಾಯಗಳನ್ನು ನೋಡಿದಾಗ ಅಸಹಾಯಕನಾಗಿದ್ದೇನೆ, ಅದು ನನ್ನನ್ನು ಕೆರಳಿಸಿದೆ, ಮತ್ತು ಈ ಪದಗಳನ್ನು ಮತ್ತು ಪದ್ಯವನ್ನು ಬರೆಯಲು ನಾನು ಯಾವುದೇ ಕವಿಯಲ್ಲ.

PHOTO • Kamlesh Painkra ,  Satyaprakash Pandey ,  Nityanand Jayaraman ,  Purusottam Thakur ,  Sohit Misra

ಸುಧನ್ವಾ ದೇಶಪಾಂಡೆ ಕವಿತೆ ವಾಚನ ಮಾಡುವುದನ್ನು ಆಲಿಸಿರಿ

When the lockdown enhances the suffering of human beings you’ve grown up knowing and caring about for decades, says this photographer, it forces you to express yourself in poetry, beyond the lens
PHOTO • Purusottam Thakur

ನಾನು ಕವಿಯಲ್ಲ

ನಾನೊಬ್ಬ ಫೋಟೊಗ್ರಾಫರ್
ಹರೆಯದ ಬಾಲಕರ ಫೋಟೊ ತೆಗೆದಿದ್ದೇನೆ
ತಲೆಯಲ್ಲಿ ಬಾಸಿಂಗ ಮತ್ತು ಗೆಜ್ಜೆಗಳೊಂದಿಗೆ
ಸುತ್ತಿದ ಹೂಮಾಲೆ ಅವರ ಕೊರಳಲ್ಲಿ ಇದೆ.
ಉತ್ಸಾಹಭರಿತರಾಗಿ ಇದೇ ರಸ್ತೆಗಳಲ್ಲಿ
ಸೈಕ್ಲಿಂಗ್ ಮಾಡುವ
ಬಾಲಕರನ್ನು ನೋಡಿದ್ದೇನೆ
ಈಗ ಅದೇ ರಸ್ತೆಯಲ್ಲಿಯೇ ಬರಿಗಾಲಿನಲ್ಲಿ ಮನೆಗೆ ತೆರಳುತ್ತಿದ್ದಾರೆ
ಅವರ ಒಡಲೊಳಗೆ ಕಿಚ್ಚಿದೆ
ಪಾದದಡಿಯಲ್ಲಿ ಬೆಂಕಿಯಿದೆ
ಕಣ್ಣುಗಳಲ್ಲಿ ಉರಿಯಿದೆ
ಈಗ ಅವರು ಸುಡುಗೆಂಡದ ಮೇಲೆ ನಡೆಯುತ್ತಿದ್ದಾರೆ
ಅವರ ಅಂಗಾಲುಗಳೂ ಉರಿಯುತ್ತಿವೆ.

ನಾನು ಪುಟ್ಟ ಬಾಲಕಿಯರ ಫೋಟೊ ತೆಗೆದಿದ್ದೇನೆ
ತಲೆಗೆ ಹೂಗಳನ್ನು ಮುಡಿದಿದ್ದರು
ಅವರ ನಗುವ ಕಣ್ಣುಗಳು ನೀರಿನಂತೆ
ಕಣ್ಣುಗಳಿದ್ದವು ನನ್ನ ಮಗಳಂತೆಯೇ
ಇದೇ ಬಾಲಕಿಯರೇ
ಈಗ ನೀರಿಗಾಗಿ ಅಳುತ್ತಿರುವವರು?
ಅವರ ನಗೆ ಈಗ ಕಣ್ಣೀರಿನಲ್ಲಿ ಮುಳುಗಿದೆಯೇ?

ರಸ್ತೆ ಬದಿಯಲ್ಲಿ ಸಾಯುತ್ತಿರುವವರು ಯಾರು?
ಅದೂ ನಮ್ಮ ಮನೆಯ ಹತ್ತಿರದಲ್ಲೇ?
ಇದು ಜಾಮ್ಲೋನಾ..?
ಬರಿಗಾಲಿನಲ್ಲೇ
ಹಸಿರು ಕೆಂಪು ಮೆಣಸಿನಕಾಯಿ
ಗದ್ದೆಯಲ್ಲಿ ಕೀಳುತ್ತಾ , ಬೇರ್ಪಡಿಸುತ್ತಾ
ಅಂಕಿಗಳಂತೆ ಮೆಣಸಿನಕಾಯಿ
ಲೆಕ್ಕ ಹಾಕುತ್ತಿದ್ದಾಗ
ನಾ ನೋಡಿದ್ದು, ಇದೇ ಜಾಮ್ಲೋನಾ..?
ಯಾರದು ಈ ಹಸಿದ ಮಗು..?
ಯಾರ ದೇಹ ಕರಗುತ್ತಿದೆ
ರಸ್ತೆ ಬದಿಯಲಿ ಸೊರಗುತ್ತಿದೆ

ನಾನು ಮಹಿಳೆಯರ ಫೋಟೊ ತೆಗೆದಿದ್ದೇನೆ
ತರುಣಿಯರು ಮತ್ತು ಹಿರಿಯರು
ಡೊಂಗ್ರಿಯಾ ಕೊಂಡ್ ಮಹಿಳೆಯರು
ಬಂಜಾರ ಮಹಿಳೆಯರು
ತಲೆ ಮೇಲೆ ಹಿತ್ತಾಳೆ
ಮಡಿಕೆ ಹೊತ್ತು ನರ್ತಿಸುವ
ಸಂತಸದಿಂದ
ಹೆಜ್ಜೆಹಾಕುವ ಮಹಿಳೆಯರು
ಇವರು ಆ ಮಹಿಳೆಯರಲ್ಲ -
ಅವರ ಭುಜಗಳು ಬಾಗಿವೆ
ಅವರು ಎಂತಹ ಹೊರೆಗಳನ್ನು ಒಯ್ಯುತ್ತಾರೆ!
ಇಲ್ಲ, ಇಲ್ಲ, ಇವರು ತಲೆ ಮೇಲೆ
ಕಟ್ಟಿಗೆ ಹೊರೆ ಹೊತ್ತು ರಸ್ತೆಯಲ್ಲಿ
ಬಿರುಸು ನಡಿಗೆ ನಡೆಯುವ
ಗೊಂಡ್ ಮಹಿಳೆಯರಾಗಲು ಸಾಧ್ಯವೇ ಇಲ್ಲ.
ಇವರು ಅರ್ಧ ಸತ್ತಂತಿರುವ, ಹಸಿದ ಮಹಿಳೆ
ಅವಳ ಕಂಕುಳ ಮೇಲೊಂದು ಅಳುವ ಮಗು
ಮತ್ತು ಉಳಿದ ಇನ್ನೊಬ್ಬಳೊಳಗೆ ಯಾವ ಭರವಸೆಯೂ ಇಲ್ಲ
ಹೌದು, ನನಗೆ ಗೊತ್ತು,
ಅವರು ನನ್ನ ತಾಯಿ, ಸಹೋದರಿಯಂತೆ ಕಾಣುವರು
ಆದರೆ ಇವರು ಅಪೌಷ್ಟಿಕತೆ ಹೊಂದಿರುವ, ಶೋಷಿತ ಮಹಿಳೆಯರು.
ಈ ಮಹಿಳೆಯರು ಸಾವನ್ನು ನಿರೀಕ್ಷಿಸುತ್ತಿದ್ದಾರೆ.
ಇವರು ಆ ಮಹಿಳೆಯರಲ್ಲ
ನೋಡಲು ಅವರಂತೆಯೇ ಕಾಣಬಹುದು
ಆದರೆ
ನಾನು ಫೋಟೊ ತೆಗೆದಿರುವವರಲ್ಲ.

ನಾನು ವ್ಯಕ್ತಿಯೊಬ್ಬನ ಫೋಟೊ ತೆಗೆದಿದ್ದೇನೆ
ಹೊಂದಿಕೊಳ್ಳುವ, ಬಲಶಾಲಿ ವ್ಯಕ್ತಿ
ಒಬ್ಬ ಮೀನುಗಾರ ಮತ್ತು ಒಬ್ಬ ಧಿನಕಿಯಾದಲ್ಲಿನ ಕಾರ್ಮಿಕ
ನಾನು ಅವನ ಹಾಡುಗಳನ್ನ ಕೇಳಿದ್ದೇನೆ
ಅವು ದೈತ್ಯ ಸಂಸ್ಥೆಗಳನ್ನೇ ಓಡಿಸುತ್ತವೆ
ಇದು ಅವನ ರೋಧನೆಯಲ್ಲ, ಅಲ್ಲವೇ ?
ಈ ಯುವಕ, ಆ ಮುದುಕನ ಬಗ್ಗೆಯೂ
ನನಗೆ ತಿಳಿದಿದೆಯೇ?
ಮೈಲುಗಳವರೆಗೆ ನಡೆದು
ಬೆನ್ನತ್ತಿದ ಎಲ್ಲ ದುಃಖವನ್ನು ಮರೆಯುತ್ತಾ
ಒಂಟಿತನವನ್ನು ದೂರ ಮಾಡುವುದು
ಕತ್ತಲೆಯಿಂದ ಪಾರಾಗಲು ಇಷ್ಟೊತ್ತು
ಯಾರು ನಡೆಯುತ್ತಾರೆ ಹೇಳಿ?
ಆಕ್ರೋಶದ ಕಣ್ಣೀರಿನ ವಿರುದ್ಧ ಹೋರಾಡಲು
ಕಷ್ಟದಿಂದ ಯಾರು ನಡೆಯುತ್ತಾರೆ ಹೇಳಿ?
ಇವರೆಲ್ಲರೂ ನನಗೆ ಸಂಬಂಧಿಸಿದ್ದಾರೆಯೇ?
ಅವನು ದೇಗುವೆ?
ಅಂತಿಮವಾಗಿ ಇಟ್ಟಿಗೆ ಗೂಡುಗಳಿಂದ ಪಲಾಯನಗೈದು
ಮನೆಗೆ ಹೋಗಲು ಬಯಸುವವನು?

ನಾನು ಅವರ ಫೋಟೊಗ್ರಾಫ್ ತೆಗೆಯಬೇಕೇ?
ನಾನು ಅವರನ್ನು ಹಾಡಲು ಕೋರಬೇಕೇ?
ಇಲ್ಲ, ನಾನು ಕವಿಯಲ್ಲ
ನಾನು ಹಾಡು ಬರೆಯಲು ಸಾಧ್ಯವಿಲ್ಲ
ನಾನೊಬ್ಬ ಫೋಟೊಗ್ರಾಫರ್
ಆದರೆ ಇವರ್ಯಾರು ಕೂಡ
ನಾನು ಫೋಟೊ ತೆಗೆದವರಲ್ಲ
ಅವರು.., ಇರಬಹುದೇ?

ಕಾವ್ಯದ ಸಂಪಾದಕರಾದ ಪ್ರತಿಷ್ಠಾ ಪಾಂಡ್ಯ ನೀಡಿರುವ ಒಳನೋಟದ ಅಮೂಲ್ಯ ಸಲಹೆಗಳಿಗೆ ಲೇಖಕರು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾರೆ.

ಆಡಿಯೋ: ಸುಧನ್ವಾ ದೇಶಪಾಂಡೆ ಜನ ನಾಟ್ಯ ಮಂಚ್ ತಂಡದಲ್ಲಿ ನಟ ಮತ್ತು ನಿರ್ದೇಶಕರಾಗಿದ್ದಾರೆ, ಲೆಫ್ಟ್ ವರ್ಡ್ ಬುಕ್ಸ್ (LeftWord Books) ಪ್ರಕಾಶನದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅನುವಾದ - ಎನ್ . ಮಂಜುನಾಥ್

Purusottam Thakur

Purusottam Thakur is a 2015 PARI Fellow. He is a journalist and documentary filmmaker and is working with the Azim Premji Foundation, writing stories for social change.

Other stories by Purusottam Thakur
Translator : N. Manjunath