“ಕೊರೊನಾ ಬಂದಾಗಿಂದ ಕೊಚಿಯಾ (ಮಧ್ಯವರ್ತಿ) ನಮ್ಮ ಊರಿಗೆ ಬರೋದನ್ನ ನಿಲ್ಲಿಶ್ಯಾರಿ" ಎಂದು ಜಮುನಾ ಬಾಯಿ ಮಾಂಡವಿ ಹೇಳುತ್ತಾರೆ."ಅವ್ರು ಕೊನೆ ಬಾರಿಗೆ ಇಲ್ಲೀಗ ಬುಟ್ಟಿ ಖರೀದಿ ಮಾಡಾಕ ಬಂದ ಮೂರು ವಾರ ಆತ್ರಿ, ಹಂಗಾಗಿ ನಮಗ ಈಗ ಏನೂ ಮಾರಾಟ ಮಾಡಕ್ಕೂ ಸಾಧ್ಯವಾಗಲ್ರಿ ಮತ್ತ ನಮ್ಮ ಹತ್ರ ಖರೀದಿ ಮಾಡಲಿಕ್ಕೂ ದುಡ್ಡು ಇಲ್ರಿ" ಎಂದು ಹೇಳಿದರು.

ಜಮುನಾ ಬಾಯಿ, ನಾಲ್ಕು ಮಕ್ಕಳನ್ನು ಹೊಂದಿರುವ ವಿಧವೆಯಾಗಿದ್ದು, ಧಮ್ತರಿ ಜಿಲ್ಲೆಯ ನಾಗರಿ ಬ್ಲಾಕ್‌ನ ಕೌಹಾಬಹ್ರಾ ಗ್ರಾಮದ ನಿವಾಸಿ. ಸುಮಾರು 40 ವರ್ಷ ವಯಸ್ಸಿನ ಅವರು, ಕಮರ್ ಬುಡಕಟ್ಟಿನ ಆದಿವಾಸಿ ಸಮುದಾಯಕ್ಕೆ ಸೇರಿದ್ದಾರೆ, ಕೇಂದ್ರ ಗೃಹ ಸಚಿವಾಲಯವು ಛತ್ತೀಸ್‌ಗಡದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪಿನಲ್ಲಿ (Particularly Vulnerable Tribal Group (PVTG) ) ಈ ಸಮುದಾಯವನ್ನು ಪಟ್ಟಿ ಮಾಡಿದೆ. ಹಳ್ಳಿಯ ಈ ಕ್ಲಸ್ಟರ್‌ನಲ್ಲಿ ಅವರಂತಹ 36 ಇತರ ಕಮರ್ ಕುಟುಂಬಗಳಿವೆ. ಅವರಂತೆಯೇ ಅವರೆಲ್ಲರೂ ಸುತ್ತಮುತ್ತಲಿನ ಕಾಡುಗಳಿಂದ ಬಿದಿರು ಸಂಗ್ರಹಿಸಿ ಬುಟ್ಟಿ ಹೆಣೆಯುತ್ತಾ ಜೀವನ ಸಾಗಿಸುತ್ತಿದ್ದಾರೆ.

ಅವರು ಹೇಳುತ್ತಿರುವ 'ಕೊಚಿಯಾ' ಜಮುನಾ ಬಾಯಿ ಮತ್ತು ಇತರ ಬುಟ್ಟಿ ನೇಕಾರರಿಗೆ ಬಹಳ ಮುಖ್ಯವಾಗಿದ್ದಾರೆ. ಅವರು ಮಧ್ಯವರ್ತಿಗಳು ಅಥವಾ ವ್ಯಾಪಾರಿಗಳು, ಪ್ರತಿ ವಾರವೂ ಬುಟ್ಟಿಗಳನ್ನು ಖರೀದಿಸಲು ಹಳ್ಳಿಗೆ ಭೇಟಿ ನೀಡುತ್ತಾರೆ, ನಂತರ ಅವರು ಪಟ್ಟಣದ ಮಾರುಕಟ್ಟೆಗಳಲ್ಲಿ ಮತ್ತು ಗ್ರಾಮೀಣ ಸಂತೆಗಳಲ್ಲಿ ಚಿಲ್ಲರೆ ಮಾರಾಟ ಮಾಡುತ್ತಾರೆ.

ಅವರು ಕೊನೆಯದಾಗಿ ಕೌಹಾಬಹ್ರಾದಲ್ಲಿ ಕಾಣಿಸಿಕೊಂಡು ಒಂದು ತಿಂಗಳಾಗುತ್ತಾ ಬಂತು-ಕೋವಿಡ್ -19 ಲಾಕ್‌ಡೌನ್ ಪ್ರಾರಂಭವಾದ ನಂತರ ಅವರು ಬರುವುದನ್ನು ನಿಲ್ಲಿಸಿದರು.

ಜಮುನಾಗೆ ನಾಲ್ಕು ಮಕ್ಕಳಿದ್ದಾರೆ- 12 ವರ್ಷದ ಲಾಲೇಶ್ವರಿ, 5ನೇ ತರಗತಿಯ ನಂತರ ಶಾಲೆಯನ್ನು ತೊರೆದರು, ತುಳೇಶ್ವರಿ, 8, ಲೀಲಾ, 6, ಮತ್ತು ಲಖ್ಮಿ, 4. ಅವರ ಪತಿ 40ರ ಹರೆಯದ ಸಿಯಾರಾಮ್ ನಾಲ್ಕು ವರ್ಷಗಳ ಹಿಂದೆ ಅತಿಸಾರದಿಂದ ಅವರು ಕೊನೆಯುಸಿರೆಳೆದಿದ್ದರಿಂದಾಗಿ ಜೀವ ಬದುಕಿನ ಈ ಹೋರಾಟದಲ್ಲಿ ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ. ಈ ಲಾಕ್‌ಡೌನ್ ಕೇವಲ ಅವರ ಬುಟ್ಟಿಗಳಿಂದ ಬರುವ ಆದಾಯದ ಮೇಲೆ ಮಾತ್ರವಲ್ಲ, ಇತರ ಮೂಲಗಳ ಮೇಲೂ ಪರಿಣಾಮ ಬೀರುತ್ತದೆ.

ಈಗ ಕಾಡಿನಲ್ಲಿ ಮಹುವಾ ಹೂವುಗಳ (ಇದರಿಂದ ಸ್ಥಳೀಯವಾಗಿ ಮದ್ಯವನ್ನು ತಯಾರಿಸಲಾಗುತ್ತದೆ) ಋತುಮಾನವಾಗಿರುವುದರಿಂದ, ಇದೊಂದು ರೀತಿ ಇಲ್ಲಿನ ಆದಿವಾಸಿಗಳಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯಗಳಿಸುವ ಮೂಲವಾಗಿದೆ.

Top row: Samara Bai and others from the Kamar community depend on forest produce like wild mushrooms and  taramind. Bottom left: The families of Kauhabahra earn much of their a living by weaving baskets; even children try their hand at it
PHOTO • Purusottam Thakur

ಮೇಲಿನ ಎಡಭಾಗ: ಸಮರಿ ಬಾಯಿ (ಮುಂಭಾಗ) ಮತ್ತು ಜಮುನಾ ಬಾಯಿ, ಕೌಹಾಬಹ್ರಾ ಗ್ರಾಮದಲ್ಲಿ. ಮೇಲಿನ ಬಲಭಾಗ: ಸಮಾರಿ ಬಾಯಿ ತಮ್ಮ ಹಿತ್ತಲಲ್ಲಿ, ಅಲ್ಲಿ ಮಹುವಾ ಹೂವುಗಳನ್ನು ಬಿಸಿಲಿನಲ್ಲಿ ಒಣಗಲು ಇಡಲಾಗುತ್ತದೆ. ಕೆಳಗೆ: ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಜಮುನಾ ಬಾಯಿ ಒಂದೇ ಒಂದು ಬುಟ್ಟಿಯನ್ನು ಸಹ ಮಾರಾಟ ಮಾಡಿಲ್ಲ

'ಕೊರೊನಾದಿಂದ ಮಾರ್ಕೆಟ್ ಮತ್ತss ವಾರದ ಸಂತೆ ಎಲ್ಲಾ ಬಂದ್ ಆಗ್ಯಾವ್ರಿ" ಎಂದು ಜಮುನಾ ಬಾಯಿ ಹೇಳುತ್ತಾರೆ."ಹಂಗಾಗಿ ನಾವು ಕಲೆ ಹಾಕಿರೋ ಮಹುವಾ ಹೂವುಗಳನ್ನ ಚೊಲೋ ರೇಟಿಗೆ ಮಾರಾಕ ಆಗ್ತಾ ಇಲ್ರಿ, ಅಷ್ಟ ಅಲ್ಲಾ, ನಮಗ ಈಗ ದುಡ್ಡಿನ ಸಮಸ್ಯೆಯಿಂದ ಸ್ವಂತ ಖರೀದಿ ಮಾಡಲಿಕ್ಕೂ ಏನೂ ಆಗ್ತಿಲ್ಲ" ಎನ್ನುತ್ತಾರೆ.

ಛತ್ತೀಸ್ ಗಢದಲ್ಲಿ ವಿಧವೆಯರಿಗೆ ನೀಡುವ ಮಾಸಿಕ ಪಿಂಚಣಿ 350 ರೂ.ಗೆ ಅರ್ಹರು -ಆದರೆ ಅವರು ಇದಕ್ಕೆ ನೋಂದಣಿ ಮಾಡಿಸದಿರುವುದರಿಂದಾಗಿ ಅವರು ಯಾವುದೇ ಪಿಂಚಣಿಯನ್ನು ಸ್ವೀಕರಿಸಿಲ್ಲ.

ಛತ್ತೀಸ್‌ಗಡ್ ಸರ್ಕಾರವು ತನ್ನ ಭರವಸೆಯಂತೆ ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ (ಬಿಪಿಎಲ್) ಸಂಪೂರ್ಣ ಉಚಿತ ಕೋಟಾ ಪಡಿತರವನ್ನು ತಲುಪಿಸಲು ಗಂಭೀರ ಪ್ರಯತ್ನಗಳನ್ನು ಮಾಡಿದೆ. ಅವರು 70 ಕಿಲೋಗ್ರಾಂಗಳನ್ನು (ಪ್ರತಿ ತಿಂಗಳಿಗೆ 35 ಕಿಲೋ) ಉಚಿತವಾಗಿ ಮತ್ತು ಮುಂಚಿತವಾಗಿ ಪಡೆದಿದ್ದಾರೆ. ಆ ಸಮಯಕ್ಕೆ ಅವರು ನಾಲ್ಕು ಪ್ಯಾಕೆಟ್ ಉಪ್ಪನ್ನು (ಪ್ರತಿ ತಿಂಗಳಿಗೆ ಎರಡು) ಉಚಿತವಾಗಿ ಪಡೆದಿದ್ದಾರೆ. ಬಿಪಿಎಲ್ ಕುಟುಂಬಗಳು ಸಕ್ಕರೆಯಂತಹ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ಪಡೆಯುತ್ತವೆ ( ಕಿಲೋಗೆ 17 ರೂ. ) ಆದರೆ ಅದಕ್ಕಾಗಿ ಪಾವತಿಸಬೇಕಾಗುತ್ತದೆ. ಇದರಿಂದಾಗಿಯೇ ಈಗ ಜಮುನಾ ಬಾಯಿ ಅವರ ಕುಟುಂಬದ ಜೀವನ ಹೇಗೋ ಸಾಗುತ್ತಿದೆ.

ಆದರೆ ಗಳಿಕೆ ಸಂಪೂರ್ಣ ಸ್ಥಗಿತಗೊಂಡಿದೆ ಮತ್ತು ಯಾವುದೇ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲ. ಇಲ್ಲಿ ಅಧಿಕೃತ ವಿತರಕರಲ್ಲಿ  ತರಕಾರಿಗಳು ಇರುವುದಿಲ್ಲ. ಮತ್ತು ಕೆಲವು ಬಡ ಕುಟುಂಬಗಳಿಗೆ ಪಡಿತರ ಚೀಟಿಗಳಿಲ್ಲ. ಲಾಕ್‌ಡೌನ್ ವಿಸ್ತರಣೆಯೊಂದಿಗೆ, ಪ್ರತ್ಯೇಕವಾಗಿರುವ ಈ ಹಳ್ಳಿಯಲ್ಲಿನ ಕಮರ್ ಕುಟುಂಬಗಳ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗುತ್ತವೆ.

ಜಮುನಾ ಬಾಯಿ ಮತ್ತು ಅವರ ಕುಟುಂಬವು ಮರ, ಮಣ್ಣು ಮತ್ತು ಜೇಡಿಮಣ್ಣಿನ ಹೆಂಚುಗಳಿಂದ ನಿರ್ಮಿಸಿದ ಮನೆಯಲ್ಲಿ ಅವರ ಅತ್ತೆಯವರೊಂದಿಗೆ ವಾಸಿಸುತ್ತಾರೆ, ಅವರು ಮನೆಯ ಹಿಂಭಾಗದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಾರೆ (ಅವರು ತಮ್ಮದೇ ಪಡಿತರ ಚೀಟಿ ಹೊಂದಿದ್ದಾರೆ).

"ನಾವು ಬುಟ್ಟಿ ತಯಾರು ಮಾಡುವುದರ ಜೊತೆಗೆ ಕಾಡಿನ ಉತ್ಪನ್ನಗಳನ್ನು ಕೂಡಿ ಹಾಕ್ತೇವೆ, ಅದರ ಮೂಲಕ ನಮ್ಮ ಬದಕ ನಡಿತೈತ್ರಿ" ಎಂದು ಅವರ ಅತ್ತೆ ಸಮರಿಬಾಯಿ ಹೇಳುತ್ತಾರೆ.“ಆದ್ರ ಈಗ ಕೊರೋನಾದಿಂದಾಗಿ ಕಾಡಿಗೆ ಹೋಗಬ್ಯಾಡ ಅಂತಾ ಅಧಿಕಾರಿಗಳು ನಮಗ ಹೇಳ್ಯಾರ್ರೀ, ಹಂಗಾಗಿ ಈಗ ನಾನು ಅಲ್ಲಿಗೆ ಹೋಗುದು ನಿಲ್ಲಿಸೇನ್ರಿ, ಆದ್ರ ನಮ್ಮ ಯಜಮಾನ್ರು ಸ್ವಲ್ಪ ದಿನಗಳಿಂದ ಮಹುವಾ ಹೂ ಉರುವಲು ಕಟ್ಟಿಗೆ ತರಾಕ ಹೋಗ್ತಾರ್ರಿ" ಎಂದು ಅವರು ಹೇಳಿದರು.

Left: Sunaram Kunjam sits alone in his mud home; he too is not receiving an old age pension. Right: Ghasiram Netam with his daughter and son; his wife was gathering mahua flowers from the forest – they are being forced to sell the mahua at very low rates
PHOTO • Purusottam Thakur

ಮೇಲ್ಭಾಗ : ಸಮರ್ ಬಾಯಿ ಮತ್ತು ಕಮರ್ ಸಮುದಾಯದ ಇತರರು ಕಾಡು ಅಣಬೆಗಳು ಮತ್ತು ಹುಣಸೆಹಣ್ಣಿನಂತಹ ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಕೆಳಗಿನ ಎಡ ಭಾಗ: ಕೌಹಾಬಹ್ರಾದ ಕುಟುಂಬಗಳು ಬುಟ್ಟಿಗಳನ್ನು ನೇಯ್ಯುವ ಮೂಲಕ ತಮ್ಮ ಜೀವನದ ಬಹುಪಾಲು ಆದಾಯವನ್ನು ಸಂಪಾದಿಸುತ್ತಾರೆ; ಮಕ್ಕಳು ಕೂಡ ಈಗ ಕೌಶಲ್ಯವನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರೆ

"ಮಹುವಾ ಹೂವನ್ನು ದಿನಾಲೂ ಟೈಮಿಗೆ ಸರಿಯಾಗಿ ಕೂಡಿಸಲಿಲ್ಲಂದ್ರ, ಅದನ್ನ ಪ್ರಾಣಿಗಳು ತಿಂತಾವು, ಇಲ್ಲಾಂದ್ರ ಹಂಗ ಕೆಟ್ಟೂ ಹೋಗಬಹುದು" ಎಂದು ಸಮರಿಬಾಯಿ ಹೇಳುತ್ತಾರೆ. ಮಾಹುವಾ ಹೂವನ್ನು ಆದಿವಾಸಿ ನಗದು ಬೆಳೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ವಾರದ  ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದಿವಾಸಿ ಸಮುದಾಯವು ಬುಟ್ಟಿಗಳನ್ನು ಮಾರಿ ಗಳಿಸಿದ ಹಣವನ್ನು ಹೊರತುಪಡಿಸಿ, ಮಹುವಾ ಹೂವಿನಿಂದ ಪಡೆಯುವ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಸ್ವಂತ ಖರೀದಿ ಖರ್ಚುಗಳಿಗೆ ವ್ಯಯ ಮಾಡುತ್ತಾರೆ.

"ಕಳೆದ ಸಲ ಕೊಚಿಯಾ ನಮ್ಮನ್ನ ಭೇಟಿ ಮಾಡಾಕ ಬಂದಾಗ ಅವನಿಗೆ ಬುಟ್ಟಿ ಮಾರಿ 300 ರೂ.ಗಳಿಸಿದ್ದೆ, ಅದೇ ದುಡ್ಡಿನಿಂದ ಎಣ್ಣೆ, ಮಸಾಲ,ಸಾಬೂನು ಮತ್ತು ಇನ್ನಿತರ ಸಾಮಾನು ತಗೊಳ್ಳಾಕ್ ಬಳಸಿದೆ" ಎಂದು ಸಮರಿ ಬಾಯಿ ಹೇಳಿದರು. “ಆದರೆ ಕರೋನಾ ಬಂದಾಗಿಂದ, ನಮಗ ಬೇಕಾಗಿರೋ ವಸ್ತುಗಳ ಖರ್ಚು ಎರಡು ಪಟ್ಟು ಜಾಸ್ತಿ ಆಗ್ಯಾವ್” ಎನ್ನುತ್ತಾರೆ ಸಮರಿ ಬಾಯಿ.

ಸಮರಿ ಬಾಯಿ ಅವರ ಎಲ್ಲಾ ನಾಲ್ಕು ಮಕ್ಕಳು - ಜಮುನಾ ಬಾಯಿ ಪತಿ ಸಿಯಾರಾಮ್ ಸೇರಿದಂತೆ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನು ನಮಗೆ ಹೇಳುವಾಗ ಅವರು ತುಂಬಾ ಭಾವುಕರಾಗುತ್ತಾರೆ. ಅವರಿಗೆ ನಿಶ್ಚಿತವಾಗಿಯೂ 65ಕ್ಕಿಂತ ಹೆಚ್ಚು ವಯಸ್ಸಾಗಿದೆ. ಅವರಿಗೆ ವೃದ್ಯಾಪ್ಯ ವೇತನ ಬರಬೇಕಾಗಿತ್ತು, ಆದರೆ ಅವರು ನೋಂದಣಿ ಮಾಡದಿರುವುದರಿಂದಾಗಿ ಅವರಿಗೆ ಸಿಗುತ್ತಿಲ್ಲ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಕೇವಲ 26,530 ಕಮರ್‌ ಜನಸಂಖ್ಯೆ ಇದೆ (1025 ರ ಆರೋಗ್ಯಕರ ಲಿಂಗಾನುಪಾತದೊಂದಿಗೆ). ಅವರಲ್ಲಿ ಅನೇಕರು, ಸುಮಾರು 8,000 ಜನಸಂಖ್ಯೆ ನೆರೆಯ ಒಡಿಶಾ ರಾಜ್ಯದಲ್ಲಿ ನೆಲೆಸಿದ್ದಾರೆ. ಆದಾಗ್ಯೂ, ಆ ರಾಜ್ಯದಲ್ಲಿ, ಅವರು ಆದಿವಾಸಿ ಸಮುದಾಯ ಎಂದು ಗುರುತಿಸಿಲ್ಲ, ಆದರೆ ಕೇವಲ ಪಿವಿಟಿಜಿ (Particularly Vulnerable Tribal Group) ಎಂದು ಪ್ರಮಾಣೀಕರಿಸಲಾಗಿದೆ.

Left: Sunaram Kunjam sits alone in his mud home; he too is not receiving an old age pension.
PHOTO • Purusottam Thakur
Ghasiram Netam with his daughter and son; his wife was gathering mahua flowers from the forest – they are being forced to sell the mahua at very low rates
PHOTO • Purusottam Thakur

ಎಡಕ್ಕೆ: ಸೋನಾರಾಮ್ ಕುಂಜಮ್ ತಮ್ಮ ಮಣ್ಣಿನ ಮನೆಯಲ್ಲಿ ಏಕಾಂಗಿಯಾಗಿ ಕುಳಿತಿರುವುದು; ಅವರಿಗೂ ಕೂಡ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಬಲಕ್ಕೆ: ಘಾಸಿರಾಮ್ ನೇತಮ್ ತಮ್ಮ ಮಗಳು ಮತ್ತು ಮಗನೊಂದಿಗೆ; ಅವರ ಹೆಂಡತಿ ಕಾಡಿನಿಂದ ಮಹುವಾ ಹೂವುಗಳನ್ನು ಸಂಗ್ರಹಿಸುಸುತ್ತಾರೆ -ಅನಿವಾರ್ಯವಾಗಿ ಬಹಳ ಕಡಿಮೆ ದರದಲ್ಲಿ ಮಾಹುವಾ ಹೂಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿದೆ

ಇತ್ತ ಕೌಹಾಬಹ್ರಾದಲ್ಲಿ, ಇನ್ನೊಬ್ಬ 65ಕ್ಕೂ ಹೆಚ್ಚಿನ ವಯಸ್ಸಿನ ಸುನಾರಾಮ್ ಕುಂಜಮ್, ಕೂಡ ವೃದ್ಯಾಪ್ಯ ವೇತನವನ್ನು ಪಡೆಯುತ್ತಿಲ್ಲ ಎಂದು ಹೇಳುತ್ತಾರೆ. “ನಾನು ವೃದ್ಧ ಮತ್ತು ದುರ್ಬಲ ಮತ್ತು ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ನನ್ನ ಮಗನ ಕುಟುಂಬದ ಮೇಲೆ ಅವಲಂಬಿತನಾಗಿದ್ದೇನೆ’ ಎಂದು ಅವರು ತಮ್ಮ ಮಣ್ಣಿನ ಮನೆಯಲ್ಲಿ ಕುಳಿತು ನಮಗೆ ವಿವರಿಸುತ್ತಿದ್ದರು. "ನನ್ನ ಮಗ ದಿನಗೂಲಿ ಕೃಷಿ ಕಾರ್ಮಿಕ, ಆದರೆ ಈ ದಿನಗಳಲ್ಲಿ ಅವನಿಗೆ ಯಾವುದೇ ಕೆಲಸವಿಲ್ಲ. ಆದ್ದರಿಂದ ಇಂದು ಅವನು ಮತ್ತು ನನ್ನ ಅಳಿಯ ಇಬ್ಬರೂ ಮಹುವಾ ಹೂವುಗಳನ್ನು ಸಂಗ್ರಹಿಸಲು ಕಾಡಿಗೆ ಹೋಗಿದ್ದಾರೆ." ಎಂದು ಹೇಳಿದರು.

ಆದಿವಾಸಿಗಳು ಅನಿವಾರ್ಯವಾಗಿ ಅತ್ಯಂತ ಕಡಿಮೆ ದರದಲ್ಲಿ ಮಾಹುವಾವನ್ನು ಮಾರಾಟ ಮಾಡಬೇಕಾಗಿದೆ- ಇದೊಂದು ರೀತಿ ಸಂಕಷ್ಟದ ಮಾರಾಟವೆನ್ನಬಹುದು. “ಈಗ ಹತ್ತಿರದ ಹಳ್ಳಿಗಳಲ್ಲಿರುವ ಜನರು ನಮ್ಮ ಬುಟ್ಟಿಗಳನ್ನು ಖರೀದಿ ಮಾಡಬೇಕೆಂದರೆ ಅವರ ಬಳಿ ಹಣ ಇಲ್ಲ, ಆದ್ದರಿಂದ ನಾವು ಅವುಗಳನ್ನು ತಯಾರಿಸುವುದನ್ನು ನಿಲ್ಲಿಸಿದ್ದೇವೆ" ಎಂದು 35 ವರ್ಷದ ಗಾಸಿರಾಮ್ ನೇತಮ್ ಹೇಳುತ್ತಾರೆ. "ನನ್ನ ಹೆಂಡತಿ ಮತ್ತು ನಾನು ಇಬ್ಬರೂ ಮಹುವಾ ಹೂವುಗಳನ್ನು ಸಂಗ್ರಹಿಸುತ್ತಿದ್ದೇವೆ. ಹಾತ್ಗಳು ( ಸಂತೆಗಳು) ಮುಚ್ಚಿರುವುದರಿಂದ, ನಾನು ಸುಮಾರು 9 ಕಿಲೋಗಳನ್ನು ಹತ್ತಿರದ ಅಂಗಡಿಯಲ್ಲಿ ಪ್ರತಿ ಕಿಲೋಗ್ರಾಂಗೆ 23 ರೂ.ದಂತೆ ಮಾರಿದೆ". ಅದೇ ಹಾತ್ ನಲ್ಲಾಗಿದ್ದರೆ ಅವರಿಗೆ ಒಂದು ಕಿಲೋಗೆ 30 ರೂ. ಸಿಗುತ್ತಿತ್ತು.

ಘಾಸಿರಾಮ್‌ಗೆ ಐದು ಮಕ್ಕಳಿದ್ದಾರೆ, ಅವರಲ್ಲಿ ಒಬ್ಬರು, ಮಾಯಾವತಿ, 5ನೇ ತರಗತಿಯ ನಂತರ ಶಾಲೆಯನ್ನು ತೊರೆದರು. ಅವರು ಕೂಡ ಆಕೆಯು ಶಾಲೆ ತೊರೆಯುವುನ್ನು ಬಯಸಿರಲಿಲ್ಲ. "ನಾನು ತುಂಬಾ ಪ್ರಯತ್ನಿಸಿದೆ, ಆದರೆ ಮಾಯಾವತಿಗೆ ಬುಡಕಟ್ಟು ವಿದ್ಯಾರ್ಥಿಗಳಿಗಿರುವ ಯಾವುದೇ ಬೋರ್ಡಿಂಗ್ ಶಾಲೆಯಲ್ಲಿ ಸೀಟು ಸಿಗಲಿಲ್ಲ. ಆದ್ದರಿಂದ ಅವಳು ಹೆಚ್ಚಿನ ವ್ಯಾಸಂಗ ಮಾಡುವುದನ್ನು ನಿಲ್ಲಿಸಿದ್ದಾಳೆ,” ಎಂದು ಅವರು ಹೇಳುತ್ತಾರೆ. ಅವಳಂತೆಯೇ ಇತರ ವಿದ್ಯಾರ್ಥಿಗಳು ಸಹಿತ ಜಾತಿ ಪ್ರಮಾಣ ಪತ್ರವನ್ನು ನೀಡಲು ಅಸಾಧ್ಯವಾಗಿದ್ದರಿಂದಾಗಿ ಅವರಿಗೆ ಪ್ರವೇಶ ದೊರೆಯಲಿಲ್ಲ.

ಇಲ್ಲಿನ ಗ್ರಾಮಸ್ಥರು ಈಗಾಗಲೇ ಅಪೌಷ್ಟಿಕತೆಯಿಂದ ದುರ್ಬಲರಾಗಿದ್ದಾರೆ, ಬಡತನದಲ್ಲಿ ಮುಳುಗಿದ್ದಾರೆ, ಅನೇಕ ಸಾಮಾಜಿಕ ಸೇವೆಗಳು ಅಥವಾ ಕಲ್ಯಾಣ ಕ್ರಮಗಳಿಂದ ಅವರನ್ನು ಹೊರಗಿಡಲಾಗಿದೆ - ಸಾಂಕ್ರಾಮಿಕ ಕೊರೊನಾ ಸಮಯದಲ್ಲಿ ಅವರು ವಿಶೇಷವಾಗಿ ದುರ್ಬಲರಾಗಿದ್ದಾರೆ.ಲಾಕ್‌ಡೌನ್ ಅವರ ಜೀವನೋಪಾಯದ ಸರಪಳಿಯನ್ನು ಕಡಿದುಕೊಂಡಿದೆ, ಆದರೂ ಅನೇಕರು ಕಾಡಿನಲ್ಲಿ ಮಹುವಾ ಹೂವುಗಳನ್ನು ಸಂಗ್ರಹಿಸುವ ಮೂಲಕ ಚದುರಿರುವ ಬದುಕಿನ ಭಾಗಗಳನ್ನು ಮತ್ತೆ ಜೋಡಿಸಲು ಪ್ರಯತ್ನಿಸುತ್ತಿದ್ದಾರೆ.

ಅನುವಾದ - ಎನ್. ಮಂಜುನಾಥ್

Purusottam Thakur

Purusottam Thakur is a 2015 PARI Fellow. He is a journalist and documentary filmmaker and is working with the Azim Premji Foundation, writing stories for social change.

Other stories by Purusottam Thakur
Translator : N. Manjunath