“ಅದು ನನ್ನ ತೋಳು ಮತ್ತು ಕುತ್ತಿಗೆಗೆ ತನ್ನ ಮುಂಗಾಲಿನಿಂದ ಹೊಡೆದು ಪರಚಿತು, ನಾನು ಕೋಲಿನಿಂದ ಹೊಡೆದೆ. ಆಗ ನಾನು ಕಾಡಿನಿಂದ ಸುಮಾರು ನಾಲ್ಕು ಕಿಲೋಮೀಟರುಗಳಷ್ಟು ಒಳಗಿದ್ದೆ. ನನ್ನ ಬಟ್ಟೆಗಳು ಪೂರ್ತಿಯಾಗಿ ರಕ್ತದಿಂದ ಒದ್ದೆಯಾಗಿದ್ದವು. ಮನೆಗೆ ಬರಲು ಬಹಳ ಒದ್ದಾಡಿದ್ದೆ.” ವಿಶಾಲರಾಮ್‌ ಮರಕಮ್ ಮುಂದಿನ ಎರಡು ವಾರಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದರು. ಆದರೆ ಅವರಿಗೆ ತಮ್ಮ ಎಮ್ಮೆಗಳಿಗೆ ಯಾವುದೇ ತೊಂದರೆಯಾಗದಿದ್ದನ್ನು ಕಂಡು ಸಂತೋಷವಾಗಿತ್ತು. “ಅಂದು ಚಿರತೆ ನನ್ನ ನಾಯಿಗಳ ಮೇಲೂ ದಾಳಿ ಮಾಡಿತ್ತು. ಆದರೆ ಅವು ಓಡಿ ತಪ್ಪಿಸಿಕೊಂಡವು.” ಎಂದು ಅವರು ಹೇಳುತ್ತಾರೆ.

ಈ ದಾಳಿ ನಡೆದಿದ್ದು 2015ರಲ್ಲಿ. ಮರಕಮ್ ಈಗ ಅದನ್ನು ನೆನೆದು ನಗುತ್ತಾ, ತಾನು ಈ ರೀತಿ ಬೇಟೆಗಾರ ಪ್ರಾಣಿಗಳನ್ನು ಹತ್ತಿರದಿಂದ ಎದುರಿಸಿದ್ದು ಅದೇ ಮೊದಲೇನಲ್ಲ, ಹಾಗೆಯೇ ಅದೇ ಕೊನೆಯೂ ಅಲ್ಲವೆನ್ನುತ್ತಾರೆ. ಅವರು ಎಮ್ಮೆಗಳು ಮೇಯಲು ಹೋಗುವ ಚತ್ತೀಸಗಢದ ಜಬರ್ರಾ ಕಾಡಿನಲ್ಲಿ ಕೇವಲ ಹಸಿದ ಚಿರತೆಗಳಷ್ಟೇ ಎದುರಾಗುವುದಿಲ್ಲ, ಆಗಾಗ ಹುಲಿಗಳು, ತೋಳಗಳು, ನರಿಗಳು, ಕಾಡು ನಾಯಿಗಳು, ಗುಳ್ಳೆ ನರಿಗಳು ಮತ್ತು ಕಾಡು ಹಂದಿಗಳು, ಮತ್ತು ಸಂಭಾರ್ ಮತ್ತು ಚಿತಾಲ್ ಜಿಂಕೆಗಳು ಮತ್ತು ಪ್ರಬಲ ಕಾಡೆಮ್ಮೆಗಳೂ ಎದುರಾಗುವುದುಂಟು. ಬೇಸಿಗೆ ಸಮಯದಲ್ಲಿ ಪ್ರಾಣಿಗಳು ನೀರನ್ನು ಹುಡುಕಿಕೊಂಡು ಕಾಡಿನಲ್ಲಿರುವ ನೀರಿನ ಒರತೆಗಳನ್ನು ಹುಡುಕಿಕೊಂಡು ಹೋಗುವಾಗ, ಅಂತಹ ಸ್ಥಳಗಳಲ್ಲಿ ಬೇಟೆಗಾರ ಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆ ಎರಡರಷ್ಟಿರುತ್ತದೆ, ಕೆಲವೊಮ್ಮೆ ಮೂರರಷ್ಟೂ ಇರುತ್ತದೆ!

“ನನ್ನ ಎಮ್ಮೆಗಳು ಅವುಗಳಿಗೆ ಇಷ್ಟ ಬಂದಂತೆ ಕಾಡಿನ ತುಂಬಾ ಅಲೆದು ಮೇಯುತ್ತವೆ. ಅವು ಮನೆಗೆ ಬರದಿದ್ದರೆ ಮಾತ್ರವೇ ನಾನು ಹುಡುಕಿಕೊಂಡು ಹೋಗುತ್ತೇನೆ,” ಎನ್ನುತ್ತಾರೆ ಮರಕಮ್.‌ “ಕೆಲವೊಮ್ಮೆ ನನ್ನ ಎಮ್ಮೆಗಳು ಬೆಳಗಿನ ಜಾವ ನಾಲ್ಕು ಗಂಟೆಯಾದರೂ ಮನೆಗೆ ಮರಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಾನು ಡಬಲ್‌ [ಶಕ್ತಿಯ] ಟಾರ್ಚ್‌ ಹಿಡಿದು ಅವುಗಳನ್ನು ಹುಡುಕಲು ಕಾಡಿಗೆ ಹೋಗುತ್ತೇನೆ.” ಹೀಗೆ ಕಾಡಿಗೆ ಬರಿಗಾಲಿನಲ್ಲಿ ಹೋದಾಗಲೆಲ್ಲ ಉಂಟಾದ ಗಾಯಗಳು ಮತ್ತು ಕಲೆಯನ್ನು ತೋರಿಸಿದರು.

ಅವರ ಸರ್ವಸ್ವತಂತ್ರ ಮನಸ್ಸಿನ ಎಮ್ಮೆಗಳು ಧಮ್ತಾರಿ ಜಿಲ್ಲೆಯ ನಗರಿ ತೆಹ್ಸಿಲ್‌ನ ಜಬರ್ರಾ ಗ್ರಾಮದ ಪಕ್ಕದಲ್ಲಿರುವ ಕಾಡಿನಲ್ಲಿ ಪ್ರತಿದಿನ ಸುಮಾರು 9-10 ಕಿಲೋಮೀಟರುಗಳಷ್ಟು ದೂರದವರೆಗೂ ಮೇಯಲು ಹೋಗುತ್ತವೆ. “ಬೇಸಿಗೆಯಲ್ಲಿ ಅವು ಆಹಾರ ಹುಡುಕಿಕೊಂಡು ಇದರ ಎರಡರಷ್ಟು ದೂರವನ್ನು ಪ್ರಯಾಣಿಸುತ್ತವೆ. ಆದರೆ ಇನ್ನು ಮುಂದೆ ಆಹಾರಕ್ಕಾಗಿ ಅವು ಕಾಡಿನ ಮೇಲೆ ಅವಲಂಬಿತವಾಗುವುದು ಕಷ್ಟ. ಹಾಗೊಂದು ವೇಳೆ ಅವಲಂಬಿತವಾದಲ್ಲಿ ಅವು ಹಸಿವಿನಿಂದ ಸಾಯಬೇಕಾಗುತ್ತದೆ,” ಎನ್ನುತ್ತಾರೆ ಮರಕಮ್.‌

Vishalram Markam's buffaloes in the open area next to his home, waiting to head out into the forest.
PHOTO • Priti David
Markam with the grazing cattle in Jabarra forest
PHOTO • Priti David

ಎಡಕ್ಕೆ: ವಿಶಾಲ ರಾಮ್ ಮರಕಮ್ ಅವರ ಎಮ್ಮೆಗಳು ಅವರ ಮನೆಯ ಪಕ್ಕದ ತೆರೆದ ಪ್ರದೇಶದಲ್ಲಿ, ಕಾಡಿಗೆ ಹೋಗಲು ಕಾಯುತ್ತಿವೆ. ಬಲ: ಜಬಾರ್ರಾ ಕಾಡಿನಲ್ಲಿ ಮೇಯುತ್ತಿರುವ ಜಾನುವಾರುಗಳೊಂದಿಗೆ ಮರಕಮ್

“ನಾನು ಅವುಗಳಿಗಾಗಿ ಪಯ್ರಾ ಖರೀದಿ ಮಾಡುತ್ತೇನೆ, ಆದರೆ ಅವು ಕಾಡಿನಲ್ಲೆಲ್ಲ ಅಲೆಯುತ್ತಾ ಮೇಯುವುದನ್ನು ಹೆಚ್ಚು ಇಷ್ಟಪಡುತ್ತವೆ.” ಎನ್ನುತ್ತಾರೆ ತನ್ನ ಎಮ್ಮೆಗಳನ್ನು ಮನೆಯ‌ ತುಂಟ ಮಕ್ಕಳೆಂಬಂತೆ ನೋಡಿಕೊಳ್ಳುವ ಮರಕಮ್. ಮತ್ತು ಎಲ್ಲ ಪೋಷಕರಂತೆ ಇವರೂ ತಮ್ಮ ತುಂಟ ಮಕ್ಕಳನ್ನು ಮನೆಗೆ ಕರೆಸಲು ಕೆಲವು ತಂತ್ರಗಳನ್ನೂ ಹೊಂದಿದ್ದಾರೆ. ಅದರಲ್ಲಿ ಉಪ್ಪಿನ ದಿಬ್ಬವೂ ಒಂದು. ಅವು ಅದನ್ನು ನೆಕ್ಕುವುದಕ್ಕೆಂದೇ ರಾತ್ರಿ 8 ಗಂಟೆಗೆ ಮನೆಗೆ ಬಂದು ಸೇರುತ್ತವೆ. ಈ ಎಮ್ಮೆಗಳ ʼಮನೆʼ ಬಹಳ ಸುತ್ತಲೂ ಬೇಲಿ ನಿರ್ಮಿಸಲಾಗಿರುವ ದೊಡ್ಡ ಅಂಗಳ. ಅದರ ಪಕ್ಕದಲ್ಲೇ ಅವುಗಳ ಮಾಲಿಕರ ಮನೆಯೂ ಇದೆ.

ಜಬಾರ್ರಾದ 117 ಕುಟುಂಬಗಳಲ್ಲಿ ಹೆಚ್ಚಿನವು ಗೊಂಡ್ ಮತ್ತು ಕಮರ್ ಆದಿವಾಸಿ ಸಮುದಾಯಗಳಿಗೆ ಸೇರಿವೆ, ಮತ್ತು ಕೆಲವು ಯಾದವ್ ( ಈ ರಾಜ್ಯದಲ್ಲಿ ಇವರನ್ನು ಇತರ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ). ಗೊಂಡ್ ಆದಿವಾಸಿ ಸಮುದಾಯದವರಾದ ಮರಕಮ್‌ ಅವರಿಗೆ 5,352 ಹೆಕ್ಟೇರ್ ಅರಣ್ಯದ ಕುರಿತಾದ ಪ್ರತಿಯೊಂದು ವಿವರವೂ ತಿಳಿದಿದೆ. ಅವರು ಸುಮಾರು 50 ವರ್ಷಗಳ ತಮ್ಮ ಇಡೀ ಜೀವನವನ್ನು ಅದರ ಆಸುಪಾಸಿನಲ್ಲಿ ಕಳೆದಿದ್ದಾರೆ. "ನಾನು ಸ್ಥಳೀಯ ಶಾಲೆಯಲ್ಲಿ 5ನೇ ತರಗತಿಯವರೆಗೆ ಓದಿದೆ. ಶಾಲೆ ಬಿಟ್ಟ ನಂತರ ಇಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ" ಎಂದು ಅವರು ಹೇಳುತ್ತಾರೆ.

ಚತ್ತೀಸಗಢದ ಪೂರ್ವ ಮೂಲೆಯಲ್ಲಿರುವ ಧಮ್ತಾರಿ ಜಿಲ್ಲೆಯ ಶೇಕಡಾ 52ರಷ್ಟು ಭಾಗ ಮೀಸಲು ಮತ್ತು ಸಂರಕ್ಷಿತ ಪ್ರದೇಶವಾಗಿದೆ, ಮತ್ತು ಅದರಲ್ಲಿ ಸುಮಾರು ಅರ್ಧದಷ್ಟು ದಟ್ಟ ಅರಣ್ಯವಾಗಿದೆ ಎಂದು ಭಾರತದ ಅರಣ್ಯ ಸಮೀಕ್ಷೆಯ 2019ರ ವರದಿ ಹೇಳುತ್ತದೆ. ವ್ಯಾಪಕವಾಗಿ ಹರಡಿರುವ ಸಾಲ್ ಮತ್ತು ತೇಗದ ಮರಗಳನ್ನು ಹೊರತುಪಡಿಸಿ, ಸಾಜ್, ಕೋಹಾ, ಹರ್ರಾ, ಬಹೆರಾ, ಟಿನ್ಸಾ, ಬಿಜಾ, ಕುಂಬಿ ಮತ್ತು ಮಹುವಾ ಮರಗಳು ಇಲ್ಲಿವೆ.

ಅಸಮರ್ಪಕ ಮಳೆ ಮತ್ತು ತೆಳುವಾಗುತ್ತಿರುವ ಮರಗಳ ದಟ್ಟಣೆಯ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ, ಪ್ರಾಣಿಗಳ ಮೇಯುವ ನೆಲ ಕಡಿಮೆಯಾಗುತ್ತದೆ. ಮರಕಾಮ್ ಅವರು ತಮ್ಮ‌ ಬಳಿಯಿದ್ದ 90 ಎಮ್ಮೆಗಳ ಹಿಂಡನ್ನು ಕಡಿಮೆಗೊಳಿಸಿ ಅವುಗಳ ಸಂಖ್ಯೆಯನ್ನು 60-70ಕ್ಕೆ ಇಳಿಸಿದ್ದಾರೆ, ಅವುಗಳಲ್ಲಿ 25 ಕರುಗಳು. "ಎಮ್ಮೆಗಳಿಗೆ ಕಾಡಿನಲ್ಲಿ ಮೇವು ಕಡಿಮೆಯಾಗುತ್ತಿದೆ. ಅವರು ಮರಗಳನ್ನು ಕಡಿಯುವುದನ್ನು ನಿಲ್ಲಿಸಿದರೆ ಬಹುಶಃ ಹೆಚ್ಚಾಗಬಹುದು" ಎಂದು ಅವರು ಹೇಳುತ್ತಾರೆ. "ನಾನು ನನ್ನ ಜಾನುವಾರುಗಳಿಗೆ (2019ರಲ್ಲಿ) ಚಾರಾ (ಹುಲ್ಲು) ಖರೀದಿಸಲು 10,000 ರೂಪಾಯಿಗಳನ್ನು ಖರ್ಚು ಮಾಡಿದ್ದೆ. ಪ್ರತಿ ಟ್ರ್ಯಾಕ್ಟರ್ ಲೋಡ್ ಗೆ 600 ರೂಪಾಯಿ ವೆಚ್ಚವಾಗುತ್ತದೆ ಮತ್ತು ಅದನ್ನು ರೈತರಿಂದ ಸಂಗ್ರಹಿಸಲು ನಾನು 20 ಕ್ಕೂ ಹೆಚ್ಚು ಬಾರಿ ಓಡಾಟ ನಡೆಸಬೇಕಾಯಿತು."

ಬೇಸಿಗೆಯಲ್ಲಿ, ಜಾನುವಾರುಗಳು ಕಾಡಿನಲ್ಲಿ ವಿರಳವಾದ ನೀರಿನ ಮೂಲಗಳ ಬಳಿ ಹೋದಾಗ, ಹಸಿದ ಬೇಟೆಗಾರ ಪ್ರಾಣಿಗಳನ್ನು ಎದುರಿಸುವ ಸಾಧ್ಯತೆಗಳು ಎರಡು ಪಟ್ಟು ಹೆಚ್ಚಿರುತ್ತದೆ, ಕೆಲವೊಮ್ಮೆ ಮೂರು ಪಟ್ಟು ಸಹ

ವೀಡಿಯೊ ನೋಡಿ: 'ನಾನು ಈ ಎಮ್ಮೆಗಳಿಂದ ಬೇರ್ಪಡುವುದು ನನ್ನ ಜೀವ ಹೋದ ಮೇಲೆಯೇ'

2006ರ ಅರಣ್ಯ ಹಕ್ಕುಗಳ ಕಾಯ್ದೆಯಡಿ ಆಗಸ್ಟ್ 2019ರಲ್ಲಿ ಜಬಾರ್ರಾ ಗ್ರಾಮ ಸಭೆಯಲ್ಲಿ ನೀಡಲಾದ 'ಸಮುದಾಯ ಅರಣ್ಯ ಸಂಪನ್ಮೂಲಗಳ ಹಕ್ಕುಗಳನ್ನು' ಚಲಾಯಿಸುವ ಮೂಲಕ ಮೇವಿನ ಪ್ರದೇಶವನ್ನು ವಿಸ್ತರಿಸುವ ಆಸೆಯನ್ನು ಮರಕಾಮ್ ಹೊಂದಬಹುದು. ಕಾನೂನು ಹೇಳುವಂತೆ, ಸಮುದಾಯವು ಸಾಂಪ್ರದಾಯಿಕವಾಗಿ ರಕ್ಷಿಸುತ್ತಿರುವ ಅರಣ್ಯ ಸಂಪನ್ಮೂಲಗಳನ್ನು ರಕ್ಷಿಸುವ, ಪುನರುತ್ಪಾದಿಸುವ ಅಥವಾ ಸಂರಕ್ಷಿಸುವ ಅಥವಾ ನಿರ್ವಹಿಸುವ ಹಕ್ಕನ್ನು ಹೊಂದಿದೆ. ಈ ಹಕ್ಕುಗಳನ್ನು ಹೊಂದಿರುವ ಚತ್ತೀಸಗಢದ ಮೊದಲ ಗ್ರಾಮ ಜಬಾರ್ರಾ.

"ಯಾವ ಮರಗಳನ್ನು ರಕ್ಷಿಸಬೇಕು ಮತ್ತು ನೆಡಬೇಕು; ಯಾವ ಪ್ರಾಣಿಗಳನ್ನು ಮೇಯಲು ಅನುಮತಿಸಬೇಕು; ಯಾರು ಅರಣ್ಯವನ್ನು ಪ್ರವೇಶಿಸಬಹುದು; ಸಣ್ಣ ಕೊಳಗಳ ತೋಡುವಿಕೆ; ಮತ್ತು ಸವಕಳಿಯನ್ನು ತಡೆಯುವ ಕ್ರಮಗಳು - ಈ ಎಲ್ಲಾ ನಿರ್ಧಾರಗಳು ಈಗ ಗ್ರಾಮಸಭೆಯ ಕೈಯಲ್ಲಿವೆ" ಎಂದು ಜಬಾರ್ರಾದಲ್ಲಿ ಪಂಚಾಯತ್ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ ಅಥವಾ ಪಿಇಎಸ್ಎ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಸಂಯೋಜಕರಾದ ಪ್ರಖರ್ ಜೈನ್ ಹೇಳುತ್ತಾರೆ.

ಕಾನೂನು ನಿಬಂಧನೆಗಳು ಸ್ವಾಗತಾರ್ಹವಾಗಿವೆ ಎಂದು ಮರಕಾಮ್ ಹೇಳುತ್ತಾರೆ, ಅನೇಕ ಹೊರಗಿನವರು ಕಾಡಿಗೆ ಬಂದು ಹಾನಿ ಮಾಡುತ್ತಾರೆ. "ಮೀನು ಹಿಡಿಯಲು ಜನರು ಕಾಡಿನ ಒಳಗೆ ಬಂದು ಜಲಮೂಲಗಳಲ್ಲಿ ಕೀಟನಾಶಕವನ್ನು ಸಿಂಪಡಿಸುವುದನ್ನು ಮತ್ತು ದೊಡ್ಡ ಪ್ರಾಣಿಗಳನ್ನು ಹಿಡಿಯಲು ವಿಷವನ್ನು ಬಳಸುವುದನ್ನು ನಾನು ನೋಡಿದ್ದೇನೆ" ಎಂದು ಅವರು ಹೇಳುತ್ತಾರೆ. "ಇವರು ನಮ್ಮ ಜನರಲ್ಲ."

ಮುಂದಿನ ಗ್ರಾಮ ಸಭೆ ಸಭೆಯಲ್ಲಿ ಕಡಿಮೆಯಾಗುತ್ತಿರುವ ಹುಲ್ಲಿನ ವಿಷಯವನ್ನು ಎತ್ತುವುದಾಗಿ ಅವರು ಹೇಳುತ್ತಾರೆ. "ನನಗೆ ಸಮಯವಿಲ್ಲದ ಕಾರಣ ನಾನು ಇಲ್ಲಿಯವರೆಗೆ ಅದನ್ನು ಮಾಡಿಲ್ಲ. ನಾನು ತಡರಾತ್ರಿಯವರೆಗೆ ಗೋಬರ್ (ಸಗಣಿ) ಒಟ್ಟುಗೂಡಿಸುತ್ತಲೇ ಇರುತ್ತೇನೆ, ಹೀಗಿರುವಾಗ ನಾನು ಸಭೆಗೆ ಹೇಗೆ ಹಾಜರಾಗಲಿ?" ಎಂದು ಅವರು ಪ್ರಶ್ನಿಸುತ್ತಾರೆ. "ಅರಣ್ಯನಾಶದ ವಿರುದ್ಧ ನಮ್ಮ ಜನರು ಒಂದಾಗಬೇಕು. ಕಾಡು ಉಳಿಸಿದರೆ ನಮ್ಮ ಜೀವನೋಪಾಯ ಸುರಕ್ಷಿತವಾಗಿರುತ್ತದೆ. ಅರಣ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ'' ಎನ್ನುತ್ತಾರವರು.

ಕಾಡಿನ ಅಂಚಿನಲ್ಲಿರುವ ಮರಕಾಮ್ ಅವರ ಮೂರು ಕೋಣೆಗಳ ಪಕ್ಕಾ ಮನೆ ದೊಡ್ಡ ಅಂಗಳವನ್ನು ಹೊಂದಿದೆ, ಅಲ್ಲಿ ಅವರು ರಾತ್ರಿ ಹೊತ್ತು ಸಣ್ಣ ಕರುಗಳನ್ನು ಬಿಡುತ್ತಾರೆ. ದೊಡ್ಡ ಎಮ್ಮೆಗಳು ಅದರ ಪಕ್ಕದ ತೆರೆದ ಪ್ರದೇಶದಲ್ಲಿರುತ್ತವೆ.

A pile of hay that Markam has bought to feed his buffaloes as there isn't enough grazing ground left in the forest.
PHOTO • Purusottam Thakur
He restrains the calves in his fenced-in courtyard to stop them from straying into the jungle.
PHOTO • Priti David
The 'community forest resources rights' title granted under the Forest Rights Act to Jabarra gram sabha

ಎಡ: ಕಾಡಿನಲ್ಲಿ ಸಾಕಷ್ಟು ಮೇವಿನ ಹುಲ್ಲುಗಾವಲು ಉಳಿದಿಲ್ಲದ ಕಾರಣ ಮರಕಾಮ್ ತನ್ನ ಎಮ್ಮೆಗಳಿಗೆ ನೀಡಲು ಖರೀದಿಸಿದ ಹುಲ್ಲಿನ ರಾಶಿ. ನಡುವೆ: ಅವರು ತನ್ನ ಬೇಲಿಯಿರುವ ಅಂಗಳದಲ್ಲಿರುವ ಕರುಗಳನ್ನು ಕಾಡಿಗೆ ಓಡಿ ದಾರಿ ತಪ್ಪದಂತೆ ತಡೆಯುತ್ತಿರುವುದು. ಬಲ: ಜಬಾರ್ರಾ ಗ್ರಾಮ ಸಭೆಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯಡಿ ನೀಡಲಾದ 'ಸಮುದಾಯ ಅರಣ್ಯ ಹಕ್ಕುಗಳು' ಇದರ ಪ್ರತಿ

ನಾವು ಅವರನ್ನು ಭೇಟಿಯಾಗಲೆಂದು ಹೋದಾಗ ಬೆಳಗಿನ 6 ಗಂಟೆ. ಸೂರ್ಯ ಆಗಷ್ಟೇ ತನ್ನ ಬೆಳಗಿನ ಪಾಳಿಗೆ ತಯಾರಾಗುತ್ತಿದ್ದ. ಅವರು ರಾತ್ರಿ ಚಳಿ ಕಾಯಿಸಲೆಂದು ಹಚ್ಚಿದ್ದ ಮರದ ತುಂಡಿನ ಬೆಂಕಿಯ ಕೆಂಡ ಇನ್ನೂ ಹೊಳೆಯುತ್ತಿತ್ತು. ಕೂಗುವ ಎಮ್ಮೆಗಳ ಮತ್ತು ಕರುಗಳ ಸದ್ದು ವಾತಾವರಣದಲ್ಲಿ ತುಂಬಿತ್ತು. ಉದ್ದನೆಯ ಹಾಲಿನ ಕ್ಯಾನುಗಳು ಅಂಗಳದಲ್ಲಿ ಒಣಗುತ್ತಿದ್ದವು. ಅದರಲ್ಲಿ ಹಾಲನ್ನು ತುಂಬಿಸಿ ಧಮ್ತಾರಿಗೆ ಕಳಿಸುತ್ತಾರೆ. ಒಳ್ಳೆ ಕರಾವು ದೊರಕಿದ ದಿನಗಳಲ್ಲಿ 35 – 40 ಲೀಟರ್‌ ಹಾಲನ್ನು ಕರೆಯುವುದಾಗಿ ಮರಕಾಮ್‌ ಹೇಳುತ್ತಾರೆ. ಲೀಟರ್‌ ಹಾಲಿನ 35 ರೂಪಾಯಿಗಳಷ್ಟಿದೆ. ಸಗಣಿಯನ್ನೂ ಮಾರಲಾಗುತ್ತದೆ. “ಪ್ರತಿದಿನ ನಾನು 50-70 [ಬಿದಿರಿನ] ಬುಟ್ಟಿಯಷ್ಟು ಸಗಣಿ ಸಂಗ್ರಹಿಸುತ್ತೇನೆ. ಗಿಡಗಳನ್ನು ಬೆಳೆಸುವ ನರ್ಸರಿಯವರ ಇದನ್ನು ಕೊಳ್ಳುತ್ತಾರೆ. ತಿಂಗಳಿಗೆ ಒಂದು ಟ್ರ್ಯಾಕ್ಟರ್‌ ಟ್ರಾಲಿಯಷ್ಟು ಸಗಣಿಯನ್ನು ಮಾರುತ್ತೇನೆ. ಅದಕ್ಕೆ 1,000 ರೂಪಾಯಿ ಸಿಗುತ್ತದೆ [ಒಂದು ಬ್ಯಾಚಿಗೆ,]” ಎಂದು ಅವರು ಹೇಳುತ್ತಾರೆ.

ಅವರು ನಮ್ಮೊಡನೆ ಮಾತು ಮುಂದುವರೆಸುತ್ತಾ, ದೊಡ್ಡಿಯೊಳಗೆ ಕೂಡಿ ಹಾಕಿದ್ದ ಕರುಗಳು ಹೊರಗೆ ಬಾರದಂತೆ ಅದಕ್ಕೆ ಅಡ್ಡಲಾಗಿ ಹಾಕಿದ್ದ ಮರದ ಕೋಲುಗಳನ್ನು ಸರಿಪಡಿಸಿದರು. ಇದನ್ನು ಆ ಕರುಗಳು ದೊಡ್ಡ ಎಮ್ಮೆಗಳೊಡನೆ ಮೇಯಲು ಹೋಗದಂತೆ ತಡೆಯಲು ಅವರು ಹೀಗೆ ಮಾಡುತ್ತಿದ್ದರು. “ಅವಿನ್ನೂ ಸಣ್ಣವು, ಅವುಗಳನ್ನು ಮನೆಯಿಂದ ದೂರ ಬಿಡುವಂತಿಲ್ಲ. ಅವುಗಳನ್ನು ಬೇರೆ ಪ್ರಾಣಿಗಳು ಹಿಡಿದು ತಿನ್ನುವ ಸಾಧ್ಯತೆಯಿರುತ್ತದೆ,” ಕರುಗಳನ್ನು ದೊಡ್ಡಿಯ ಒಳಗೆ ಒಂದೆಡೆ ಹೋಗುವಂತೆ ದೊಡ್ಡ ದನಿ ಮಾಡಿ ಕೂಗುತ್ತಾ, ಹೇಳಿದರು.

ಮರಕಾಮ್ ತನ್ನ ಜಾನುವಾರುಗಳನ್ನು ಮೇಯಿಸುವುದಲ್ಲದೆ ಒಂದು ಎಕರೆ ಜಮೀನಿನಲ್ಲಿ ಭತ್ತದ ಕೃಷಿಯನ್ನೂ ಮಾಡುತ್ತಾರೆ. ಅವರು ವರ್ಷದಲ್ಲಿ ಸುಮಾರು 75 ಕೆಜಿ ಭತ್ತವನ್ನು ಉತ್ಪಾದಿಸುತ್ತಾರೆ, ಅದನ್ನು ಅವರ ಕುಟುಂಬವು ಸೇವಿಸುತ್ತದೆ. ಮೊದಲು ವ್ಯವಸಾಯ ಮಾತ್ರ ಮಾಡುತ್ತಿದ್ದೆ, ನಂತರ 200 ರೂಪಾಯಿಗೆ ಎಮ್ಮೆಯೊಂದನ್ನು ಖರೀದಿಸಿದೆ, ಅದು ಹತ್ತು ಕರುಗಳಿಗೆ ಜನ್ಮ ನೀಡಿತು’ ಎಂದು ಪಶುಪಾಲನೆ ಆರಂಭಿಸಿದ ಬಗೆಯನ್ನು ಮೆಲುಕು ಹಾಕುತ್ತಾರೆ. ಜಬರ‍್ರಾದ ಸುಮಾರು 460 ಜನಸಂಖ್ಯೆಯ ಬಹುಪಾಲು ಜನರು ಜೀವನೋಪಾಯಕ್ಕಾಗಿ ಸಣ್ಣ ಜಮೀನುಗಳಲ್ಲಿ ಭತ್ತ, ಕುಲ್ತಿ ಮತ್ತು ಉದ್ದನ್ನು ಬೆಳೆಯುತ್ತಾರೆ. ಇದರೊಂದಿಗೆ, ಅವರು ಸ್ವಲ್ಪ ಮಟ್ಟಿಗೆ ಪಶುಪಾಲನೆಯನ್ನು ಅವಲಂಬಿಸಿ ಕಾಡಿನಿಂದ ಮಹುವಾ ಹೂವುಗಳು ಮತ್ತು ಜೇನುತುಪ್ಪವನ್ನು ಸಂಗ್ರಹಿಸುತ್ತಾರೆ.

Markam fixes the horizontal bars on the makeshift fence to corral the calves.
PHOTO • Purusottam Thakur
Outside his three-room house in Jabarra village
PHOTO • Priti David

ಎಡ:ಮರಕಾಮ್‌ ಕರುಗಳ ದೊಡ್ಡಿಗೆ ಅಡ್ಡಲಾಗಿ ಹಾಕಿರುವ ತಡೆಕೋಲುಗಳನ್ನು ಸರಿಪಡಿಸುತ್ತಿರುವುದು. ಬಲ: ಅವರ ಮೂರು ಕೋಣೆಯ ಮನೆಯ ಹೊರಗೆ

ಮರಕಾಮ್‌ ತನ್ನ ಪತ್ನಿ ಕಿರಣ್‌ ಬಾಯಿ ಅವರೊಡನೆ ವಾಸಿಸುತ್ತಾರೆ. ಅವರು ಜಾನುವಾರುಗಳ ಕಾಳಜಿಯಲ್ಲಿ ಸಹಾಯ ಮಾಡುತ್ತಾರೆ. ಅವರು ಸ್ಪೆಷಲ್‌ ಪೊಲೀಸ್‌ ಆಫೀಸರ್‌ ಆಗಿದ್ದ ಮಗನನ್ನು ತೀವ್ರಗಾಮಿಗಳೊಂದಿಗಿನ ʼಮುಖಾಮುಖಿಯೊಂದರಲ್ಲಿʼ ಕಳೆದುಕೊಂಡರು.ಇನ್ನೊಬ್ಬ ಮಗ ಹಾವಿನ ಕಡಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡರು. ಉಳಿದಿಬ್ಬರು ಹೆಣ್ಣು ಮಕ್ಕಳು ಮದುವೆಯಾಗಿದ್ದು ಬೇರೆಡೆ ವಾಸಿಸುತ್ತಿದ್ದಾರೆ.

ಮಾರ್ಚ್ 2020ರಿಂದ ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ, ಮರಕಾಮ್ ಅವರು ಎಮ್ಮೆಗಳ ಹಾಲನ್ನು ಧಮ್ತಾರಿಯ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದ ಕಾರಣ ನಷ್ಟವನ್ನು ಅನುಭವಿಸಿದರು. "ಹೋಟೆಲುಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿತ್ತು, ಇದು ನಮ್ಮ ಹಾಲು ವಿತರಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು" ಎಂದು ಅವರು ಹೇಳುತ್ತಾರೆ. ನಂತರ ಅವರು ಹೆಚ್ಚು ದಿನ ಬಾಳಿಕೆ ಬರುತ್ತದೆನ್ನುವ ಕಾರಣಕ್ಕೆ ಹಾಲಿನಿಂದ ತುಪ್ಪ ತಯಾರಿಸಲು ಆರಂಭಿಸಿದರು. ಕಿರಣ್‌ ಬಾಯಿ ಗಂಡನಿಗೆ ಹಾಲು ಮತ್ತು ಕೆನೆಯನ್ನು ಕಾಯಿಸಿ ತಿರುಗಿಸಲು ಸಹಾಯ ಮಾಡಿದರು.

ಕಮರ್ ಆದಿವಾಸಿ ಸಮುದಾಯದವರಾದ ಕಿರಣ್ ಬಾಯಿ ಮರಕಾಮ್ ಅವರ ಎರಡನೇ ಪತ್ನಿ. ಅವನರು ಚತ್ತೀಸಗಢದ ಅತಿದೊಡ್ಡ ಆದಿವಾಸಿ ಸಮುದಾಯವಾದ ಗೊಂಡ್ ಆಗಿರುವುದರಿಂದ ಅವರನ್ನು ಮದುವೆಯಾಗಲು ದೊಡ್ಡ ಬೆಲೆ ತೆರಬೇಕಾಯಿತು. "ನಾನು ಸುಮಾರು 1.5 ಲಕ್ಷ ರೂಪಾಯಿಗಳನ್ನು ಹಬ್ಬಗಳಿಗಾಗಿ ಖರ್ಚು ಮಾಡಬೇಕಾಗಿತ್ತು, ಇದು [ಸಮುದಾಯದ ಹೊರಗೆ] ಮದುವೆಯಾಗಿದ್ದಕ್ಕಾಗಿ ದಂಡವಾಗಿ" ಎಂದು ಅವರು ಹೇಳುತ್ತಾರೆ.

ತನ್ನ ಕಾಲದ ನಂತರ ಎಮ್ಮೆಗಳನ್ನು ನೋಡಿಕೊಳ್ಳಲು ಮಕ್ಕಳಿಲ್ಲದಿರುವುದು ಅವರ ಚಿಂತೆಗೆ ಕಾರಣವಾಗಿದೆ. “ನಾನು ಇಲ್ಲವಾದ ದಿನ ನನ್ನ ಎಮ್ಮೆಗಳು ಅನಾಥವಾಗಿ ಅಲೆಯುತ್ತವೆ. ಅವುಗಳನ್ನು ಬೀದಿಪಾಲು ಮಾಡಬೇಕಾಗುತ್ತದೆ, ಏಕೆಂದರೆ ಅವುಗಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ನಾನು ಇವುಗಳ ಕಾಳಜಿಯ ಬಲೆಯೊಳಗೆ ಸಿಕ್ಕಿದ್ದೇನೆ. ನಾನು ಇವುಗಳಿಂದ ದೂರವಾಗುವುದು ನನ್ನ ಉಸಿರುನಿಂತಾಗಲೇ,” ಎಂದು ಹೇಳುತ್ತಾರೆ.

ಸೆಪ್ಟೆಂಬರ್ 22, 2020 ರಂದು ಪರಿ ಪ್ರಕಟಿಸಿ ರುವ ಈ ವೀಡಿಯೊದಲ್ಲಿ ವಿಶಾ ಲ ರಾ ಮ್ ರಕಾ ಮ್ ಹವಾಮಾನ ಬದಲಾವಣೆಯ ಕುರಿತು ಮಾತನಾಡುವುದನ್ನು ನೋಡಿ : ಹವಾಮಾನ ಬದಲಾವಣೆಯ ಯುದ್ಧದಲ್ಲಿ ಕೀಟಗಳ ಹೋರಾಟ .

ಅನುವಾದ : ಶಂಕರ . ಎನ್ . ಕೆಂಚನೂರು

Purusottam Thakur

Purusottam Thakur is a 2015 PARI Fellow. He is a journalist and documentary filmmaker and is working with the Azim Premji Foundation, writing stories for social change.

Other stories by Purusottam Thakur
Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru