ದೀಪಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವಾಗ ತನ್ನ ದೇಹದಲ್ಲಿ ಕಾಪರ್-ಟಿ ಸೇರಿಸಲಾಗಿದೆಯೆನ್ನುವುದು ಅವರಿಗೆ ತಿಳಿದಿರಲಿಲ್ಲ.

ಅವರು ಆಗಷ್ಟೇ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು, ಇನ್ನೊಂದು ಗಂಡು ಮಗುವಾಗಿತ್ತು. ಈ ಹೆರಿಗೆಯೊಂದಿಗೆ ಸಂತಾನಹರಣ ಚಿಕಿತ್ಸೆಗೆ ಒಳಗಾಗಲು ಬಯಸಿದ್ದರು. ಆದೆರೆ ಸಿ-ಸೆಕ್ಷನ್‌ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಲಾಗಿತ್ತು. ಮತ್ತು ದೀಪಾ ಹೇಳುತ್ತಾರೆ, "ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಂದೇ ಸಮಯದಲ್ಲಿ ಮಾಡಲು ಸಾಧ್ಯವಿಲ್ಲವೆಂದು ವೈದ್ಯರು ನನಗೆ ಹೇಳಿದರು."

ನಂತರ ವೈದ್ಯರಯ ಕಾಪರ್-ಟಿ ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ದೀಪಾ ಮತ್ತು ಆಕೆಯ ಪತಿ ನವೀನ್ (ಅವರ ನಿಜವಾದ ಹೆಸರುಗಳಲ್ಲ) ಅವರು ಸಲಹೆ ನೀಡುತ್ತಿದ್ದಾರಷ್ಟೇ ಎಂದು ಭಾವಿಸಿದ್ದರು.

ಮೇ 2018ರಲ್ಲಿ ಹೆರಿಗೆಯಾದ ಸುಮಾರು ನಾಲ್ಕು ದಿನಗಳ ನಂತರ, 21 ವರ್ಷದ ದೀಪಾ ಅವರನ್ನು ದೆಹಲಿ ಸರ್ಕಾರ ನಡೆಸುತ್ತಿರುವ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. "ವೈದ್ಯರು ಕಾಪರ್‌-ಟಿ ಆಳವಡಿಸಿದ್ದಾರೆಂದು ಎಂದು ನಮಗೆ ತಿಳಿದಿರಲಿಲ್ಲ" ಎಂದು ನವೀನ್ ಹೇಳುತ್ತಾರೆ.

ಸುಮಾರು ಒಂದು ವಾರದ ನಂತರ, ಅವರ ಊರಿನ ಆಶಾ ಕಾರ್ಯಕರ್ತೆ ದೀಪಾ ಅವರ ಆಸ್ಪತ್ರೆಯ ಡಿಸ್ಚಾರ್ಜ್ ವರದಿಯನ್ನು ಓದಿದಾಗಲೇ ಅವರಿಗೆ ವಿಷಯ ಏನೆಂದು ಅರಿವಿಗೆ ಬಂದಿದ್ದು. ಈ ವರದಿಯನ್ನು ದೀಪಾ ಮತ್ತು ನವೀನ್ ಓದಿರಲಿಲ್ಲ.

ಕಾಪರ್‌-ಟಿ ಎನ್ನುವುದು ಗರ್ಭಕೋಶದೊಳಗೆ ಅಳವಡಿಸುವ ಸಾಧನವಾಗಿದ್ದು (ಇಂಟ್ರಾ-ಯೂಟೆರೈನ್ ಡಿವೈಸ್ - ಐಯುಡಿ) ಇದೊಂದು ಗರ್ಭನಿರೋಧಕ ಸಾಧನವಾಗಿದೆ. "ಇದು ದೇಹಕ್ಕೆ ಹೊಂದಿಕೊಳ್ಳಲು ಮೂರು ತಿಂಗಳ ತನಕ ಬೇಕಾಗಬಹುದು. ಕೆಲವರಿಗೆ ಈ ಸಾಧನದಿಂದಾಗಿ ಅಸ್ವಸ್ಥತೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಇದಕ್ಕಾಗಿಯೇ ನಾವು ರೋಗಿಗಳಿಗೆ ಔಷಧಾಲಯದಲ್ಲಿ ನಿಯಮಿತ ತಪಾಸಣೆಗೆ [ಆರು ತಿಂಗಳವರೆಗೆ] ಬರುವಂತೆ ಹೇಳುತ್ತೇವೆ," ಎಂದು 2013ರಿಂದ ದೀಪಾರ ನೆರೆಹೊರೆಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ 36 ವರ್ಷದ ಸುಶೀಲಾ ದೇವಿ ವಿವರಿಸುತ್ತಾರೆ.

ಆದರೆ ಮೊದಲ ಮೂರು ತಿಂಗಳಲ್ಲಿ ದೀಪಾ ಯಾವುದೇ ಅಸ್ವಸ್ಥತೆಯನ್ನು ಎದುರಿಸಲಿಲ್ಲ, ಮತ್ತು, ತನ್ನ ಹಿರಿಯ ಮಗನ ಅನಾರೋಗ್ಯದ ಕಾರಣ ಅದರಲ್ಲಿ ವ್ಯಸ್ತರಾಗಿದ್ದರು, ಅವರು ತಪಾಸಣೆಗಳಿಗಾಗಿ ಹೋಗಿರಲಿಲ್ಲ. ಹಾಗೆಯೇ ಕಾಪರ್‌-ಟಿ  ಬಳಕೆ ಮುಂದುವರೆಸಲು ತೀರ್ಮಾನಿಸಿದರು.

Deepa at her house in West Delhi: preoccupied with her son’s illness, she simply decided to continue using the T
PHOTO • Sanskriti Talwar

ದೀಪಾ ಪಶ್ಚಿಮ ದೆಹಲಿಯಲ್ಲಿರುವ ತನ್ನ ಮನೆಯಲ್ಲಿ: ತನ್ನ ಮಗನ ಅನಾರೋಗ್ಯದ ಕಾರಣ ಅವನ ಆರೈಕೆಯಲ್ಲಿ ವ್ಯಸ್ತರಾಗಿದ್ದರು, ಅವರು ಹಾಗೆಯೇ ಕಾಪರ್-ಟಿ ಮುಂದುವರೆಸಲು ತೀರ್ಮಾನಿಸಿದರು

ಇದೆಲ್ಲ ಆಗಿ ಸರಿಯಾಗಿ ಎರಡು ವರ್ಷದ ನಂತರ ಮೇ 2020ರಲ್ಲಿ ದೀಪಾ ಮುಟ್ಟಾದ ದಿನದಿಂದ ಅಸಹನೀಯ ನೋವು ಕಾಣಿಸಿಕೊಳ್ಳುವುದರೊಂದಿಗೆ ಸಮಸ್ಯೆಗಳು ಪ್ರಾರಂಭವಾದವು.

ಹಲವು ದಿನಗಳವರೆಗೂ ನೋವು ವಾಸಿಯಾಗದೆ ಇದ್ದ ಕಾರಣ ಅವರು ತಮ್ಮ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ದೆಹಲಿಯ ಬಕ್ಕರ್ ವಾಲಾ ಪ್ರದೇಶದಲ್ಲಿರುವ ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್ (ಎಎಎಮ್‌ಸಿ)ಗೆ ಹೋದರು. "ಅಲ್ಲಿನ ವೈದ್ಯರು ಒಂದಷ್ಟು ನೋವಿನ ಪರಿಹಾರಕ್ಕಾಗಿ ಔಷಧಿಗಳನ್ನು ಸೂಚಿಸಿದರು" ಎಂದು ದೀಪಾ ಹೇಳುತ್ತಾರೆ. ದೀಪಾ ಅದೇ ವೈದ್ಯರ ಬಳಿ ಒಂದು ತಿಂಗಳಿಗೂ ಹೆಚ್ಚು ಕಾಲ ಹೋದರು. "ನನ್ನ ಸ್ಥಿತಿ ಸುಧಾರಿಸದಿದ್ದ ಕಾರಣ, ಅವರು ನನ್ನನ್ನು ಬಕ್ಕರ್‌ವಾಲಾದ ಮತ್ತೊಂದು ಎಎಎಮ್‌ಸಿಯಲ್ಲಿ ಮಹಿಳಾ ವೈದ್ಯರನ್ನು ಕಾಣುವಂತೆ ಶಿಫಾರಸು ಮಾಡಿದರು" ಎಂದು ಅವರು ಹೇಳುತ್ತಾರೆ.

ದೀಪಾ ಭೇಟಿ ನೀಡಿದ ಮೊದಲ ಬಕ್ಕರ್‌ವಾಲಾ ಎಎಎಮ್‌ಸಿಯಲ್ಲಿನ ವೈದ್ಯಕೀಯ ಅಧಿಕಾರಿ ಡಾ.ಅಶೋಕ್ ಹನ್ಸ್ ಅವರೊಂದಿಗೆ ಮಾತನಾಡಿದಾಗ ದೀಪಾರ ಪ್ರಕರಣ ಅವರಿಗೆ ನೆನಪಿಗೆ ಬರಲಿಲ್ಲ. ಅವರು ಪ್ರತಿದಿನ 200ಕ್ಕೂ ಹೆಚ್ಚು ರೋಗಿಗಳನ್ನು ನೋಡುತ್ತಾರೆ. "ಅಂತಹ ಪ್ರಕರಣ ನಮ್ಮಲ್ಲಿ ಬಂದರೆ ಚಿಕಿತ್ಸೆ ನೀಡುತ್ತೇವೆ" ಎಂದು ಅವರು ನನಗೆ ಹೇಳಿದರು. ತಿಂಗಳ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಗಷ್ಟೇ (ಅನಿಯಮಿತ ಋತುಚಕ್ರ) ನಾವು ಚಿಕಿತ್ಸೆ ನೀಡುತ್ತೇವೆ. ಉಳಿದಂತೆ ನಾವು ಅಲ್ಟ್ರಾಸೌಂಡ್ ಸ್ಕ್ಯಾನ್‌ ಮಾಡಿಸಲು ಸಲಹೆ ನೀಡುತ್ತೇವೆ ಅಥವಾ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವಂತೆ ಶಿಫಾರಸು ಮಾಡುತ್ತೇವೆ. ಕ್ಲಿನಿಕ್ ಅಂತಿಮವಾಗಿ ದೀಪಾ ಅವರಿಗೆ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಸೂಚಿಸಿತು.

"ದೀಪಾ ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಅನಿಯಮಿತ ಮುಟ್ಟಿನ ಕುರಿತು ಹೇಳಿದ್ದರು. ಅದರ ಆಧಾರದ ಮೇಲೆ ನಾನು ಅವರ ಮೊದಲ ಭೇಟಿಯಲ್ಲಿ ಅವರಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೂಚಿಸಿದ್ದೆ” ಎಂದು ಬಕ್ಕರ್‌ವಾಲಾದ ಇನ್ನೊಂದು ಚಿಕ್ಕ ಎಎಎಮ್‌ಸಿಯಲ್ಲಿನ ಡಾ. ಅಮೃತ ನಾಡಾರ್ ಹೇಳುತ್ತಾರೆ. "ಅವರು ಕಾಪರ್-ಟಿ ಕುರಿತು ಹೇಳಿರಲಿಲ್ಲ, ಹೇಳಿದ್ದರೆ ನಾವು ಅದನ್ನು ಅಲ್ಟ್ರಾಸೌಂಡ್ ಮೂಲಕ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೆವು. ಆದರೆ ಅವರು ಹಿಂದಿನ ಅಲ್ಟ್ರಾಸೌಂಡ್ ವರದಿಯನ್ನು ತೋರಿಸಿದರು. ಅದರಲ್ಲಿ ಎಲ್ಲವೂ ನಾರ್ಮಲ್‌ ಇತ್ತು." ಆದರೆ ದೀಪಾ ತಾನು ಕಾಪರ್‌-ಟಿ ಕುರಿತು ವೈದ್ಯರಿಗೆ ತಿಳಿಸಿರುವುದಾಗಿ ಹೇಳುತ್ತಾರೆ.

ಮೇ 2020ರಲ್ಲಿ ಮುಟ್ಟಿನ ಸಮಯದಲ್ಲಿ ಪ್ರಾರಂಭವಾದ ತೀವ್ರ ನೋವಿನ ನಂತರ ಅವರ ಸಮಸ್ಯೆಗಳು ಹೆಚ್ಚಾದವು. "ಆ ತಿಂಗಳಿನಲ್ಲಿ ಮುಟ್ಟು ಐದು ದಿನಗಳಲ್ಲಿ ಕೊನೆಗೊಂಡಿತು. ಇದು ವಾಡಿಕೆಯಾಗಿತ್ತು," ಎಂದು ಅವರು ಹೇಳುತ್ತಾರೆ. "ಆದರೆ ನಂತರದ ತಿಂಗಳುಗಳಲ್ಲಿ, ಸಾಮಾನ್ಯಕ್ಕಿಂತ ಹೆಚ್ಚು ಹೆಚ್ಚು ರಕ್ತಸ್ರಾವವಾಗಲು ಪ್ರಾರಂಭಿಸಿತು. ಜೂನ್ ತಿಂಗಳಲ್ಲಿ 10 ದಿನಗಳ ಕಾಲ ಮುಟ್ಟಾಗಿದ್ದೆ. ಮುಂದಿನ ತಿಂಗಳು ಅದು 15 ದಿನಗಳವರೆಗೆ ಮುಂದುವರೆಯಿತು. ಆಗಸ್ಟ್ 12ರಿಂದ ಒಂದು ತಿಂಗಳ ಕಾಲ ಇದು ನಿರಂತರವಾಗಿತ್ತು" ಎಂದು ಹೇಳಿದರು.

ಪಶ್ಚಿಮ ದಿಲ್ಲಿಯ ನಂಗ್ಲೋಯ್-ನಜಾಫ್‌ಗಢ ರಸ್ತೆಯಲ್ಲಿರುವ ತನ್ನ ಎರಡು ಕೋಣೆಗಳ ಸಿಮೆಂಟ್ ಮನೆಯಲ್ಲಿ ಮರದ ಮಂಚದ ಮೇಲೆ ಕುಳಿತಿದ್ದ ದೀಪಾ, "ಆ ದಿನಗಳಲ್ಲಿ ನಾನು ಬಹಳ ದುರ್ಬಲಳಾಗಿದ್ದೆ. ನಡೆಯಲು ಕೂಡ ಕಷ್ಟವಾಗುತ್ತಿತ್ತು. ನನಗೆ ತಲೆ ಸುತ್ತು ಬರುತ್ತಿತ್ತು, ಸುಮ್ಮನೆ ಮಲಗಿರುತ್ತಿದ್ದೆ, ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ, ಹೊಟ್ಟೆಯ ಬಳಿ ತೀಕ್ಷ್ಣವಾದ ನೋವು ಉಂಟಾಗುತ್ತಿತ್ತು. ಕೆಲವೊಮ್ಮೆ, ದಿನಕ್ಕೆ ನಾಲ್ಕು ಬಾರಿ ನನ್ನ ಬಟ್ಟೆಗಳನ್ನು ಬದಲಾಯಿಸಬೇಕಾಗಿತ್ತು ಏಕೆಂದರೆ ಅವು ಭಾರೀ ರಕ್ತಸ್ರಾವದಿಂದ ನೆನೆದಿರುತ್ತಿದ್ದವು. ಬೆಡ್‌ಶೀಟ್‌ಗಳು ಸಹ ಹಾಳಾಗಿವೆ."

Deepa and Naveen with her prescription receipts and reports: 'In five months I have visited over seven hospitals and dispensaries'
PHOTO • Sanskriti Talwar

ನವೀನ್ ಮತ್ತು ದೀಪಾ ಅವರ ಔಷಧಿ ಚೀಟಿ ಮತ್ತು ವರದಿಗಳೊಂದಿಗೆ: 'ಐದು ತಿಂಗಳಲ್ಲಿ ನಾನು ಏಳು ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಭೇಟಿ ನೀಡಿದ್ದೇನೆ '

ಜುಲೈ ಮತ್ತು ಆಗಸ್ಟ್ 2020ರಲ್ಲಿ, ದೀಪಾ ಎರಡು ಬಾರಿ ಬಕ್ಕರ್‌ವಾಲಾದಲ್ಲಿನ ಸಣ್ಣ ಕ್ಲಿನಿಕ್‌ಗೆ ಭೇಟಿ ನೀಡಿದರು. ಎರಡೂ ಬಾರಿ, ಅಲ್ಲಿನ ವೈದ್ಯರು ಮಾತ್ರೆಗಳನ್ನು ಸೂಚಿಸಿದರು. "ನಾವು ಹೆಚ್ಚಾಗಿ ಅನಿಯಮಿತ ಮುಟ್ಟಿನ ತೊಂದರೆಗಳಿರುವ ರೋಗಿಗಳಿಗೆ ಔಷಧಿಗಳನ್ನು ಸೂಚಿಸಿದ ನಂತರ ಒಂದು ತಿಂಗಳ ಕಾಲ ಅವರ ಮುಟ್ಟಿನ ಚಕ್ರವನ್ನು ಗಮನಿಸುವಂತೆ ಹೇಳುತ್ತೇವೆ. ಇಲ್ಲಿ ಕ್ಲಿನಿಕ್‌ಗಳಲ್ಲಿ ನಾವು ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಷ್ಟೇ ಸಮರ್ಥರು. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರ ವಿಭಾಗಕ್ಕೆ ಭೇಟಿ ನೀಡಲು ಶಿಫಾರಸು ಮಾಡಿದೆ" ಎಂದು ಡಾ. ಅಮೃತಾ ನನಗೆ ಹೇಳಿದರು.

ದೀಪಾ ನಂತರ ರಘುಬೀರ್ ನಗರದಲ್ಲಿರುವ ಗುರು ಗೋವಿಂದ್ ಸಿಂಗ್ ಆಸ್ಪತ್ರೆಗೆ (ಅವರ ಮನೆಯಿಂದ ಸುಮಾರು 12 ಕಿಲೋಮೀಟರ್), 2020ರ ಮಧ್ಯದಲ್ಲಿ ಬಸ್ಸಿನಲ್ಲಿ ಹೋದರು. ಈ ಆಸ್ಪತ್ರೆಯ ವೈದ್ಯರು ರೋಗನಿರ್ಣಯದಲ್ಲಿ 'ಮೆನೊರ್ಹೇಜಿಯಾ' (ಮುಟ್ಟಿನ ಅವಧಿಯು ಅಸಹಜವಾಗಿರುವುದು ಅಥವಾ ದೀರ್ಘಕಾಲದ ರಕ್ತಸ್ರಾವ) ಎಂದು ಗುರುತಿಸಿದರು.

ದೀಪಾ ಹೇಳುತ್ತಾರೆ, "ನಾನು ಈ ಆಸ್ಪತ್ರೆಯ ಸ್ತ್ರೀರೋಗ ತಜ್ಞರ ವಿಭಾಗಕ್ಕೆ ಎರಡು ಬಾರಿ ಹೋಗಿದ್ದೆ. ಪ್ರತಿ ಬಾರಿಯೂ ಅವರು ನನಗೆ ಎರಡು ವಾರಗಳವರೆಗಾಗುವಷ್ಟು ಔಷಧಿಗಳನ್ನು ಸೂಚಿಸಿದರು. ಆದರೆ ನೋವು ಕಡಿಮೆಯಾಗಲಿಲ್ಲ."

24 ವರ್ಷ ವಯಸ್ಸಿನ ದೀಪಾ ದೆಹಲಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದಾರೆ. ಬಿಹಾರದ ಮುಜಾಫರ್‌ಪುರದಿಂದ ಆಕೆಯ ಪೋಷಕರು ದೆಹಲಿಗೆ ಬಂದಾಗ ಅವರಿಗೆ ಕೇವಲ ಮೂರು ತಿಂಗಳು. ಅವರ ತಂದೆ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪ್ರಸ್ತುತ ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ.

2ನೇ ತರಗತಿಯವರೆಗೆ ಓದಿರುವ ಅವರ ಪತಿ ನವೀನ್ (೨೯ ವರ್ಷ) ರಾಜಸ್ಥಾನದ ದವುಸಾ ಜಿಲ್ಲೆಯವರು ಮತ್ತು ಲಾಕ್ ಡೌನ್ ಆರಂಭದವರೆಗೂ ಶಾಲಾ ಬಸ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು.

ಅವರು ಅಕ್ಟೋಬರ್ 2015ರಲ್ಲಿ ವಿವಾಹವಾದರು, ಮತ್ತು ಕೆಲವು ದಿನಗಳಲ್ಲಿ ದೀಪಾ ಗರ್ಭಿಣಿಯಾದರು. ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಅವರು ಕೇವಲ ಒಂದು ಮಗುವನ್ನು ಮಾತ್ರ ಹೊಂದಲು ಬಯಸಿದ್ದರು. ಆದರೆ ಅವರ ಮೊದಲಮಗು ಜನಿಸಿದ ಎರಡು ತಿಂಗಳಿನಿಂದಲೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿತ್ತು.

"ಅವನಿಗೆ ಗಂಭೀರವಾದ ಡಬಲ್ ನ್ಯುಮೋನಿಯಾ ಕಾಯಿಲೆ ಇದೆ," ಎಂದು ಅವರು ವಿವರಿಸುತ್ತಾರೆ. ಅವನ ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ವೈದ್ಯರು ಕೇಳಿದಷ್ಟು ಹಣ ನೀಡಿದ್ದೇವೆ. ಒಮ್ಮೆ ಆಸ್ಪತ್ರೆಯ ವೈದ್ಯರು ಅವನ ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬದುಕುಳಿಯುವುದು ಕಷ್ಟವೆಂದು ನಮಗೆ ಹೇಳಿದರು. ಆಗಲೇ ನಮ್ಮ ಕುಟುಂಬ ಸದಸ್ಯರು ನಾವು ಇನ್ನೊಂದು ಮಗು ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು."

The couple's room in their joint family home: 'I felt too weak to move during those days. It was a struggle to even walk. I was dizzy, I’d just keep lying down'
PHOTO • Sanskriti Talwar
The couple's room in their joint family home: 'I felt too weak to move during those days. It was a struggle to even walk. I was dizzy, I’d just keep lying down'
PHOTO • Sanskriti Talwar

ಅವಿಭಕ್ತ ಕುಟುಂಬದೊಂದಿಗೆ ವಾಸವಿರುವ ಮನೆಯಲ್ಲಿನ ದಂಪತಿಗಳ ಕೋಣೆ: ಆ ದಿನಗಳಲ್ಲಿ ನಾನು ತುಂಬಾ ದುರ್ಬಲಳಾಗಿದ್ದೆ. ಚಲಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ತಲೆ ತಿರುಗುತ್ತಿತ್ತು, ನಾನು ಮಲಗಿಯೇ ಇರುತ್ತಿದ್ದೆ '

ಮದುವೆಗೆ ಕೆಲವು ತಿಂಗಳು ಮುಂಚೆ, ದೀಪಾ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ತಿಂಗಳಿಗೆ 5000 ರೂ. ಸಂಬಳ ಪಡೆಯುತ್ತಿದ್ದರು. ಮಗನ ಅನಾರೋಗ್ಯದ ಕಾರಣ, ಅವರು ತನ್ನ ಕೆಲಸವನ್ನು ಮುಂದುವರಿಸುವ ಆಲೋಚನೆಯನ್ನು ಬಿಡಬೇಕಾಯಿತು.

ಅವನಿಗೆ ಈಗ ಐದು ವರ್ಷ ವಯಸ್ಸಾಗಿದೆ ಮತ್ತು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ (ಆರ್‌ಎಂಎಲ್) ಚಿಕಿತ್ಸೆ ಪಡೆಯುತ್ತಿದ್ದಾನೆ, ಅಲ್ಲಿಗೆ ಅವನನ್ನು ದೀಪಾ ಮೂರು ತಿಂಗಳಿಗೊಮ್ಮೆ ಬಸ್ಸಿನಲ್ಲಿ ತಪಾಸಣೆಗೆ ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಅವರ ಸಹೋದರರು ಮೋಟಾರ್ ಸೈಕಲ್ಲಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

ಈ ನಿಯಮಿತ ತಪಾಸಣೆಯ ಭಾಗವಾಗಿ ಅವರು 3ನೇ ಸೆಪ್ಟೆಂಬರ್ 2020ರಂದು ಆರ್‌ಎಂಎಲ್‌ಗೆ ಹೋಗಿದ್ದರು ಮತ್ತು ಇತರ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಪರಿಹರಿಸಲಾಗದ ತನ್ನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಆಸ್ಪತ್ರೆಯ ಸ್ತ್ರೀರೋಗ ತಜ್ಞರ ವಿಭಾಗಕ್ಕೆ ಭೇಟಿ ನೀಡಲು ನಿರ್ಧರಿಸಿದರು.

ದೀಪಾ ಹೇಳುತ್ತಾರೆ, "ನಿರಂತರ ನೋವಿನ ಕಾರಣವನ್ನು ಕಂಡುಹಿಡಿಯಲು ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲಾಯಿತು, ಆದರೆ ಅದು ಏನನ್ನೂ ತೋರಿಸಲಿಲ್ಲ. ವೈದ್ಯರು ಕೂಡ ಕಾಪರ್-ಟಿ ಸ್ಥಿತಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು, ಆದರೆ ಒಂದು ದಾರ ಕೂಡ ಪತ್ತೆಯಾಗಲಿಲ್ಲ. ಅವರು ಔಷಧಿಗಳನ್ನು ಶಿಫಾರಸು ಮಾಡಿ ಎರಡು ಮೂರು ತಿಂಗಳ ನಂತರ ಮತ್ತೆ ಬರುವಂತೆ ಸೂಚಿಸಿದರು"

ಅಸಹಜ ರಕ್ತಸ್ರಾವಕ್ಕೆ ಕಾರಣ ವನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ದೀಪಾ ಸೆಪ್ಟೆಂಬರ್ 4ರಂದು ಇನ್ನೊಬ್ಬ ವೈದ್ಯರನ್ನು ಭೇಟಿಯಾದರು. ಈ ಬಾರಿ ಅವರು ತನ್ನ ಏರಿಯಾದಲ್ಲಿರುವ ಖಾಸಗಿ ಕ್ಲಿನಿಕ್ ವೈದ್ಯರ ಬಳಿಗೆ ಹೋದರು. "ಅಲ್ಲಿನ ಡಾಕ್ಟರ್‌ ನನ್ನ ಹತ್ತಿರ ʼಇಷ್ಟೊಂದು ರಕ್ತಸ್ರಾವವನ್ನು ಹೇಗೆ ತಡೆದುಕೊಂಡಿರಿʼ ಎಂದು ಕೇಳಿದರು. ಅವರು ಕಾಪರ್‌-ಟಿಯನ್ನು ಹುಡುಕಲು ಪ್ರಯತ್ನಿಸಿದರು, ಆದರೆ ಅದು ಸಿಗಲಿಲ್ಲ" ಎಂದು ದೀಪಾ ಹೇಳಿದರು. ಅಲ್ಲಿ ಚೆಕಪ್‌ಗಾಗಿ 250 ರೂಪಾಯಿಗಳನ್ನು ಪಾವತಿಸಿದರು. ಅದೇ ದಿನ, ಕುಟುಂಬದ ಸದಸ್ಯರ ಸಲಹೆಯ ಮೇರೆಗೆ, ಅವರು ಪೆಲ್ವಿಕ್ ಎಕ್ಸ್-ರೇ ಮಾಡಲು ಖಾಸಗಿ ಪ್ರಯೋಗಾಲಯದಲ್ಲಿ 300 ರೂ. ಖರ್ಚು ಮಾಡಿದ್ದಾರೆ.

ಆ ವರದಿಹೀಗಿತ್ತು: 'ಹೆಮಿಪೆಲ್ವಿಸ್‌ನ ಒಳಭಾಗದಲ್ಲಿ ಕಾಪರ್-ಟಿ ಕಂಡುಬಂದಿದೆ.'

Deepa showing a pelvic region X-ray report to ASHA worker Sushila Devi, which, after months, finally located the copper-T
PHOTO • Sanskriti Talwar
Deepa showing a pelvic region X-ray report to ASHA worker Sushila Devi, which, after months, finally located the copper-T
PHOTO • Sanskriti Talwar

ಆಶಾ ಕಾರ್ಯಕರ್ತೆ ಸುಶೀಲಾ ದೇವಿಗೆ ಪೆಲ್ವಿಕ್ ಪ್ರದೇಶದ ಎಕ್ಸ್-ರೇ ವರದಿಯನ್ನು ತೋರಿಸುತ್ತಿರುವ ದೀಪಾ,  ಹಲವು ತಿಂಗಳ ನಂತರ, ಅಂತಿಮವಾಗಿ ಕಾಪರ್-ಟಿ‌ ಪತ್ತೆಯಾಯಿತು

"ಹೆರಿಗೆ ಅಥವಾ ಸಿಸೇರಿಯನ್ ನಂತರ ಕಾಪರ್‌ -ಟಿ ಆಳವಡಿದರೆ, ಅದು ಪಕ್ಕಕ್ಕೆ ಬಾಗುವ ಸಾಧ್ಯತೆಯಿರುತ್ತದೆ" ಎಂದು ಪಶ್ಚಿಮ ದೆಹಲಿಯ ಸ್ತ್ರೀರೋಗ ತಜ್ಞೆ ಡಾ. ಜ್ಯೋತ್ಸ್ನಾ ಗುಪ್ತಾ ವಿವರಿಸುತ್ತಾರೆ. ಏಕೆಂದರೆ ಎರಡೂ ಸಂದರ್ಭಗಳಲ್ಲಿ ಗರ್ಭಾಶಯದ ಕುಹರವು ತುಂಬಾ ದೊಡ್ಡದಾಗಿರುತ್ತದೆ ಮತ್ತು ಸಾಮಾನ್ಯ ಗಾತ್ರಕ್ಕೆ ಮರಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಮಧ್ಯೆ, ಕಾಪರ್-ಟಿ ತನ್ನ ‌ಸ್ಥಳವನ್ನು  ಬದಲಾಯಿಸಬಹುದು ಮತ್ತು ವಕ್ರವಾಗಬಹುದು. ಮುಟ್ಟಿನ ಸಮಯದಲ್ಲಿ ಮಹಿಳೆಗೆ ತುಂಬಾ ತೀವ್ರವಾದ ನೋವು ಬಂದರೂ, ಅದು ತನ್ನ ಸ್ಥಾನವನ್ನು ಬದಲಾಯಿಸಬಹುದು ಅಥವಾ ವಕ್ರವಾಗಬಹುದು."

ಆಶಾ ಕಾರ್ಯಕರ್ತೆ ಸುಶೀಲಾ ದೇವಿ ಹೇಳುವಂತೆ ಇಂತಹ ದೂರುಗಳು ಬಹಳ ಸಾಮಾನ್ಯವಾಗಿವೆ. ಅವರು ಹೇಳುತ್ತಾರೆ, "ನಾವು ಸಾಮಾನ್ಯವಾಗಿ ಮಹಿಳೆಯರು ಕಾಪರ್-ಟಿ ಕುರಿತು ದೂರು ಹೇಳುವುದನ್ನು ನೋಡುತ್ತೇವೆ. ಕೆಲವೊಮ್ಮೆ ಅವರು "ಹೊಟ್ಟೆಯೊಳಗೆ ಹೋಗಿದೆ" ಎಂದು ಹೇಳುತ್ತಾರೆ ಮತ್ತು ಅದನ್ನು ತೆಗೆಸಲು ಬಯಸುತ್ತಾರೆ."

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 (2015-16) ಪ್ರಕಾರ, ಕೇವಲ 1.5 ಮಹಿಳೆಯರು ಮಾತ್ರ ಐಯುಡಿಗಳನ್ನು ಗರ್ಭನಿರೋಧಕ ವಿಧಾನವಾಗಿ ಬಳಸುತ್ತಾರೆ. ಆದರೆ ದೇಶದ 15-49  ವಯಸ್ಸಿನ 36% ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡುತ್ತಾರೆ.

"ಕಾಪರ್-ಟಿ ಎಲ್ಲಾ ಮಹಿಳೆಯರಿಗೂ ಹೊಂದಿಕೆಯಾಗುವುದಿಲ್ಲ‌ ಅದು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನಾನು ಇತರರು ಹೇಳುವುದನ್ನು ಕೇಳಿದ್ದೆ. ಆದರೆ ನನಗೆ ಎರಡು ವರ್ಷಗಳವರೆಗೆ ಯಾವುದೇ ಸಮಸ್ಯೆ ಇದ್ದಿರಲಿಲ್ಲ" ಎಂದು ದೀಪಾ ಹೇಳುತ್ತಾರೆ.

ಹಲವು ತಿಂಗಳುಗಳ ಕಾಲ ನೋವು ಮತ್ತು ವಿಪರೀತ ರಕ್ತಸ್ರಾವದೊಡನೆ ಹೋರಾಡಿದ ನಂತರ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ, ವಾಯುವ್ಯ ದೆಹಲಿಯ ಪೀತಂಪುರದ ಸರ್ಕಾರಿ ಆಸ್ಪತ್ರೆಯ ಭಗವಾನ್ ಮಹಾವೀರ್ ಆಸ್ಪತ್ರೆಯಲ್ಲಿ ತೋರಿಸಲು ದೀಪಾ ನಿರ್ಧರಿಸಿದರು. ಆಸ್ಪತ್ರೆಯಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಂಬಂಧಿಯೊಬ್ಬರು ಅಲ್ಲಿ ಕೋವಿಡ್ -19 ಪರೀಕ್ಷೆ ನಡೆಸಿದ ನಂತರವೇ ವೈದ್ಯರನ್ನು ಭೇಟಿ ಮಾಡುವಂತೆ ಸೂಚಿಸಿದರು. ಆದ್ದರಿಂದ, 7 ಸೆಪ್ಟೆಂಬರ್ 2020ರಂದು, ಅವರು ತಮ್ಮ ಮನೆಯ ಹತ್ತಿರದ ಔಷಧಾಲಯದಲ್ಲಿ ಪರೀಕ್ಷೆಗೆ ಒಳಗಾದರು.

ಆಕೆಗೆ ಕೋವಿಡ್ ಸೋಂಕು ಇರುವುದು ಪತ್ತೆಯಾದ ಕಾರಣ ಎರಡು ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಯಿತು. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬರುವವರೆಗೂ, ಕಾಪರ್-ಟಿ ತೆಗೆಸಲು ಅವರು ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ.

'We hear many women complaining about copper-T', says ASHA worker Sushila Devi; here she is checking Deepa's oxygen reading weeks after she tested positive for Covid-19 while still enduring the discomfort of the copper-T
PHOTO • Sanskriti Talwar

'ಅನೇಕ ಮಹಿಳೆಯರು ಕಾಪರ್-ಟಿ ಬಗ್ಗೆ ದೂರು ಹೇಳುವುದನ್ನು ನಾವು ಆಗಾಗ್ಗೆ ಕೇಳುತ್ತೇವೆ' ಎಂದು ಆಶಾ ಕಾರ್ಯಕರ್ತೆ ಸುಶೀಲಾ ದೇವಿ ಹೇಳುತ್ತಾರೆ. ಚಿತ್ರದಲ್ಲಿ ಅವರು ವಾರಗಳ ಹಿಂದೆ ಕೋವಿಡ್‌ ಸೋಂಕಿತರಾದ ನಂತರ ದೀಪಾರ ಆಮ್ಲಜನಕದ ಮಟ್ಟವನ್ನು ಪರಿಶೀಲಿಸುತ್ತಿದ್ದಾರೆ, ಆಗ ಅವರು ಕಾಪರ್-ಟಿ ಕಾರಣದಿಂದ ನೋವು ಅನುಭವಿಸುತ್ತಿದ್ದರು

ಕಳೆದ ವರ್ಷ ಮಾರ್ಚ್ 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿ ಶಾಲೆಗಳನ್ನು ಮುಚ್ಚಿದಾಗ, ಶಾಲಾ ಬಸ್ ಕಂಡಕ್ಟರ್ ಆಗಿದ್ದ ಆಕೆಯ ಪತಿ ನವೀನ್, ತಿಂಗಳಿಗೆ 7,000 ರೂಪಾಯಿಗಳ ಕೆಲಸವನ್ನು ಕಳೆದುಕೊಂಡರು. ಮತ್ತು ಮುಂದಿನ ಐದು ತಿಂಗಳು ಅವರಿಗೆ ಕೆಲಸವಿರಲಿಲ್ಲ. ನಂತರ ಅವರು ಹತ್ತಿರದ ಉಪಾಹಾರ ಗೃಹದಲ್ಲಿ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ಅಲ್ಲಿ ಅವರು ಕೆಲವೊಮ್ಮೆ ದಿನಕ್ಕೆ 500 ರೂ. ಸಿಗುತ್ತಿತ್ತು (ಕಳೆದ ತಿಂಗಳಷ್ಟೇ ಅವರಿಗೆ ಬಕ್ಕರ್‌ವಾಲಾ ಪ್ರದೇಶದಲ್ಲಿ ಪ್ರತಿಮೆಯನ್ನು ತಯಾರಿಸುವ ಕಾರ್ಖಾನೆಯಲ್ಲಿ ತಿಂಗಳಿಗೆ 5,000 ರೂಪಾಯಿಗಳಿಗೆ ಕೆಲಸ ಸಿಕ್ಕಿದೆ.)‌

ಸೆಪ್ಟೆಂಬರ್ 25ರಂದು, ದೀಪಾ ಅವರ ಕೋವಿಡ್ ಪರೀಕ್ಷೆಯು ನೆಗೆಟಿವ್ ಬಂದಿತು ಮತ್ತು ಅವರು ಭಗವಾನ್ ಮಹಾವೀರ್ ಆಸ್ಪತ್ರೆಯಲ್ಲಿ ತನ್ನ ಪರೀಕ್ಷೆಗಾಗಿ ಕಾಯುತ್ತಿದ್ದರು. ಸಂಬಂಧಿಕರೊಬ್ಬರು ಎಕ್ಸ್-ರೇ ವರದಿಯನ್ನು ವೈದ್ಯರಿಗೆ ತೋರಿಸಿದರು, ಅವರು ಈ ಆಸ್ಪತ್ರೆಯಲ್ಲಿ ಕಾಪರ್-ಟಿ ತೆಗೆಯಲಾಗುವುದಿಲ್ಲವೆಂದು ಹೇಳಿ, ಮೇ 2018ರಲ್ಲಿ ಅವರಿಗೆ ಐಯುಡಿ ಅಳವಡಿಸಿದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ (ಡಿಡಿಯು) ಹೋಗುವಂತೆ ಹೇಳಲಾಯಿತು.

ಡಿಡಿಯುನ ಸ್ತ್ರೀರೋಗ ವಿಭಾಗದ ಹೊರಗಿನ ಕ್ಲಿನಿಕ್‌ನಲ್ಲಿ ದೀಪಾ ಒಂದು ವಾರ (ಅಕ್ಟೋಬರ್ 2020ರಲ್ಲಿ) ಕಾಯಬೇಕಾಯಿತು. ಅವರು ಹೇಳುತ್ತಾರೆ, "ನಾನು ಕಾಪರ್-ಟಿ ತೆಗೆದು ಟ್ಯೂಬಲೈಜೇಶನ್‌ ಮಾಡುವಂತೆ ವೈದ್ಯರಿಗೆ ವಿನಂತಿಸಿದೆ. ಆದರೆ ಕೋವಿಡ್‌ನಿಂದಾಗಿ ನಮ್ಮ ಆಸ್ಪತ್ರೆಯು ಟ್ಯೂಬಲೈಜೇಶನ್‌ ಆಪರೇಷನ್ ಮಾಡುತ್ತಿಲ್ಲವೆಂದು ಅವರು ನನಗೆ ಹೇಳಿದರು."

ಸೇವೆ ಮರುಪ್ರಾರಂಭಗೊಂಡ ನಂತರ ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಕಾಪರ್-ಟಿಯನ್ನು ತೆಗೆಸಬಹುದು ಎಂದು ಹೇಳಲಾಯಿತು.

ಅಂದು ಇನ್ನಷ್ಟು ಔಷಧಿಗಳನ್ನು ಬರೆದುಕೊಡಲಾಯಿತು. "ಏನಾದರೂ ಸಮಸ್ಯೆ ಇದ್ದಲ್ಲಿ ನಾವು ಅದನ್ನು ನಿಭಾಯಿಸುತ್ತೇವೆ ಆದರೆ ಅದನ್ನು ಔಷಧಿಗಳಿಂದಲೇ ಪರಿಹರಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದರು" ಎಂದು ಕಳೆದ ವರ್ಷದ ಅಕ್ಟೋಬರ್ ಮಧ್ಯದಲ್ಲಿ ದೀಪಾ ನನಗೆ ಹೇಳಿದ್ದರು.

(ಈ ವರದಿಗಾರರು ನವೆಂಬರ್ 2020ರಲ್ಲಿ ಡಿಡಿಯು ಆಸ್ಪತ್ರೆಯಲ್ಲಿ ಗೈನಕಾಲಜಿ ಒಪಿಡಿಗೆ ಭೇಟಿ ನೀಡಿ ದೀಪಾ ಪ್ರಕರಣದ ಕುರಿತು ವಿಭಾಗದ ಮುಖ್ಯಸ್ಥರೊಂದಿಗೆ ಮಾತನಾಡಲು ಹೋದರು, ಆದರೆ ಆ ದಿನ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಹಾಜರಿದ್ದ ಇನ್ನೊಬ್ಬ ವೈದ್ಯರು ನಾನು ಮೊದಲು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರ ಅನುಮತಿ ಪಡೆಯಬೇಕು ಎಂದು ಸೂಚಿಸಿದರು. ದೂರವಾಣಿ ಮೂಲಕ ನಿರ್ದೇಶಕರನ್ನು ತಲುಪಲು ಅನೇಕ ಪ್ರಯತ್ನಗಳು ಮಾಡಲಾಯಿತು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.)

PHOTO • Priyanka Borar

ʼಆಕೆ ಯಾವ ಉಪಕರಣ ಬಳಸಿದರೆಂದು ಸರಿಯಾಗಿ ತಿಳಿದಿಲ್ಲ... [ಕಾಪರ್-ಟಿ ತೆಗೆಯುವ ಸಾಧನ]ʼ ʼಆದರೆ ಇನ್ನೂ ಒಂದೆರಡು ತಿಂಗಳು ಅದನ್ನು ತೆಗೆಯದೇ ಹೋಗಿದ್ದರೆ ನನ್ನ ಜೀವಕ್ಕೆ ಅಪಾಯವಿತ್ತೆಂದು ಮಿಡ್‌ ವೈಫ್‌ ಹೇಳಿದರು

ದೆಹಲಿಯ ಕುಟುಂಬ ಕಲ್ಯಾಣ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ, "ಸಾಂಕ್ರಾಮಿಕ ಪಿಡುಗನ್ನು ನಿರ್ವಹಿಸುವ ಹೊರೆಯಿಂದಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳೂ ಸಮಸ್ಯೆಗಳನ್ನು ಎದುರಿಸುತ್ತಿವೆ, ಆದರೆ ನಗರವು ಮಹಾಮಾರಿಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿತ್ತು. ಇದರಿಂದಾಗಿ ಕುಟುಂಬ ಯೋಜನೆಯಂತಹ ನಿಯಮಿತ ಸೇವೆಗಳು ಅಸ್ತವ್ಯಸ್ತಗೊಂಡಿವೆ. ಟ್ಯೂಬೆಕ್ಟಮಿಯಂತಹ ಶಾಶ್ವತ ಪರಿಹಾರಗಳ ಮೇಲೆ ವಿಶೇಷವಾಗಿ ಪರಿಣಾಮ ಬೀರಿವೆ. ಆದರೆ, ಅದೇ ಸಮಯದಲ್ಲಿ ಲಭ್ಯ ತಾತ್ಕಾಲಿಕ ಕ್ರಮಗಳ ಬಳಕೆ ಹೆಚ್ಚಾಗಿದೆ. ಸೇವೆಗಳ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ."

ಭಾರತದ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಪ್ರತಿಷ್ಠಾನದ (ಎಫ್‌ಆರ್‌ಎಚ್‌ಎಸ್) ಕ್ಲಿನಿಕಲ್ ಸೇವೆಗಳ ನಿರ್ದೇಶಕರಾದ ಡಾ. ರಶ್ಮಿ ಆರ್ಡೆ ಹೇಳುತ್ತಾರೆ, "ಕಳೆದ ವರ್ಷ ದೀರ್ಘಕಾಲದವರೆಗೆ ಕುಟುಂಬ ಯೋಜನೆ ಸೇವೆಗಳು ಲಭ್ಯವಿರಲಿಲ್ಲ. ಈ ಸಮಯದಲ್ಲಿ ಅನೇಕ ಜನರಿಗೆ ಅಗತ್ಯ ಸೇವೆಗಳು ಸಿಗಲಿಲ್ಲ. ಈಗ ಪರಿಸ್ಥಿತಿ ಖಂಡಿತ ಮೊದಲಿಗಿಂತಲೂ ಸುಧಾರಿಸಿದೆ. ಈ ಸೌಲಭ್ಯಗಳನ್ನು ಸರ್ಕಾರದ ಮಾರ್ಗಸೂಚಿಗಳೊಂದಿಗೆ ಸಾಧಿಸಬಹುದು, ಆದರೆ ಈ ಸೇವೆಗಳ ಪೂರೈಕೆಯು ಮಹಾಮಾರಿಯ ಹಿಂದಿನಷ್ಟು ಹೆಚ್ಚಿಲ್ಲ. ಇದು ಮಹಿಳೆಯರ ಆರೋಗ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ."

ತನ್ನ ಸಮಸ್ಯೆಯನ್ನು ಪರಿಹರಿಸಲು ಮುಂದೇನು ಮಾಡಬೇಕೆಂದು ತೋಚದೆ, ಕಳೆದ ವರ್ಷ ಅಕ್ಟೋಬರ್ 10ರಂದು ದೀಪಾ ತಾನು ವಾಸವಿರುವ ಏರಿಯಾದ ಮಿಡ್‌ವೈಫ್ ಒಬ್ಬರನ್ನು ಸಂಪರ್ಕಿಸಿದರು. ಕಾಪರ್‌-ಟಿ ತೆಗೆದುಹಾಕಿದ ಆಕೆ 300 ರೂಪಾಯಿಗಳನ್ನು ಪಡೆದರು.

“ಆಕೆ ಯಾವ ಉಪಕರಣ ಬಳಸಿದರೆಂದು ಸರಿಯಾಗಿ ತಿಳಿದಿಲ್ಲ. [ಕಾಪರ್-ಟಿ ತೆಗೆಯುವ ಸಾಧನ] ನಾನಾಗ ಮಲಗಿದ್ದೆ. ಆಕೆ ಮೆಡಿಸಿನ್‌ ಓದುತ್ತಿರುವ ತನ್ನ ಮಗಳ ಸಹಾಯ ಪಡೆದುಕೊಂಡರು. ಅದನ್ನು ಹೊರತೆಗೆಯಲು ಅವರಿಗೆ ಸುಮಾರು 45 ನಿಮಿಷಗಳ ಕಾಲ ಬೇಕಾಯಿತು” ಎಂದು ಅವರು ಹೇಳುತ್ತಾರೆ. “ಆದರೆ ಇನ್ನೂ ಒಂದೆರಡು ತಿಂಗಳು ಅದನ್ನು ತೆಗೆಯದೇ ಹೋಗಿದ್ದರೆ ನನ್ನ ಜೀವಕ್ಕೆ ಅಪಾಯವಿತ್ತೆಂದು ಮಿಡ್‌ ವೈಫ್‌ ಹೇಳಿದರು.”

ಕಾಪರ್-ಟಿ ತೆಗೆದ ನಂತರ, ದೀಪಾರ ಅನಿಯಮಿತ ಮುಟ್ಟಿನ ಸಮಸ್ಯೆ ಮತ್ತು ನೋವು ಕೊನೆಗೊಂಡಿತು.

ತನ್ನ ಹಾಸಿಗೆಯ ಮೇಲಿದ್ದ ವಿವಿಧ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಂದ ಪ್ರಿಸ್ಕ್ರಿಪ್ಷನ್‌ಗಳು ಮತ್ತು ವರದಿಗಳನ್ನು ಜೋಡಿಸುತ್ತಾ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ನನಗೆ ಹೇಳಿದ್ದರು, "ಈ ಐದು ತಿಂಗಳಲ್ಲಿ, ನಾನು ಒಟ್ಟು ಏಳು ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಹೋಗಿದ್ದೆ." ಆ ಸಮಯದಲ್ಲಿ ಅವರು ಅದಕ್ಕಾಗಿ ಸಾಕಷ್ಟು ಖರ್ಚನ್ನೂ ಮಾಡಬೇಕಾಯಿತು. ಜೊತೆಗೆ ಆಗ ಪತಿ ನವೀನ್‌ಗೂ ಕೆಲಸವಿದ್ದಿರಲಿಲ್ಲ.

ದೀಪಾ ಅವರು ಇನ್ನು ಮುಂದೆ ಮಕ್ಕಳನ್ನು ಹೊಂದದಿರಲು ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಲು ತೀರ್ಮಾನಿಸಿದ್ದಾರೆ. ಅವರು ನಾಗರಿಕ ಸೇವೆಗಳ ಪರೀಕ್ಷೆಯನ್ನು ಬರೆಯುವ ಗುರಿಯನ್ನು ಹೊಂದಿದ್ದಾರೆ. ಅವರು ಹೇಳುತ್ತಾರೆ, "ನಾನು ಅರ್ಜಿ ನಮೂನೆಯನ್ನು ತಂದಿದ್ದೇನೆ." ಮಹಾಮಾರಿ ಮತ್ತು ಕಾಪರ್-ಟಿಯಿಂದಾಗಿ ನಿಂತು ಹೋಗಿದ್ದ ತನ್ನ ಬದುಕನ್ನು ಕುಟುಂಬದ ಸಹಕಾರದೊಂದಿಗೆ ಮತ್ತೆ ಚಲನೆಗೆ ತರುವ ನಿರೀಕ್ಷೆಯಲ್ಲಿದ್ದಾರೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರ ಎನ್. ಕೆಂಚನೂರು

Sanskriti Talwar

Sanskriti Talwar is an independent journalist based in New Delhi, and a PARI MMF Fellow for 2023.

Other stories by Sanskriti Talwar
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru