ಅವರು ತನ್ನೂರಿನ ಆದಿವಾಸಿ ಮಹಿಳೆಯರೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಹಳ್ಳಿಯಾದ ಸಾಲಿಹಾದ ಯುವಕನೊಬ್ಬ ಓಡಿ ಬಂದು: "ಅವರು ಹಳ್ಳಿಯ ಮೇಲೆ ದಾಳಿ ಮಾಡಿ ನಿಮ್ಮ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ." ಎಂದು ಹೇಳಿದ.

ಇಲ್ಲಿ "ಅವರು" ಎಂದರೆ ಶಸ್ತ್ರಸಜ್ಜಿತ ಬ್ರಿಟಿಷ್ ಪೋಲಿಸ್ ಪಡೆ, ಅವರು ಬ್ರಿಟಿಷರನ್ನು (ರಾಜ್) ವಿರೋಧಿಸುವ ಹಳ್ಳಿಯ ಮೇಲೆ ದಾಳಿ ಮಾಡಿದ್ದರು. ಅಂದು ಇತರ ಅನೇಕ ಹಳ್ಳಿಗಳು ಧ್ವಂಸಗೊಂಡವು, ಸುಟ್ಟುಹೋದವು, ಅವುಗಳ ಧಾನ್ಯವನ್ನು ಲೂಟಿ ಮಾಡಲಾಯಿತು. ಅಧಿಕಾರವು ಬಂಡುಕೋರರಿಗೆ ಅವರ ಸ್ಥಾನವನ್ನು ತೋರಿಸಿತ್ತು.

ಕೂಡಲೇ ಸಬಾರ್ ಬುಡಕಟ್ಟಿನ ಆದಿವಾಸಿ ಯುವತಿ ದೇಮತಿ ದೇಯಿ ಸಬಾರ್ 40 ಇತರ ಯುವತಿಯರೊಂದಿಗೆ ಸಾಲಿಹಾಕ್ಕೆ ಓಡಿದರು. "ನನ್ನ ತಂದೆ ನೆಲದ ಮೇಲೆ ರಕ್ತ ಮಡುವಿನಲ್ಲಿ ಮಲಗಿದ್ದರು" ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಹೇಳುತ್ತಾರೆ. "ಅವರ ಕಾಲಿನಲ್ಲಿ ಗುಂಡು ಸೇರಿತ್ತು."

ವಯಸ್ಸಿನೊಂದಿಗೆ ಮರೆಯಾಗುತ್ತಿರುವ ಆ ನೆನಪು ಮತ್ತೆ ಬಂದು ಅವರನ್ನು ರೋಮಾಂಚನಗೊಳಿಸಿತು. "ನಾನು ಕೋಪದಿಂದಲೇ ಬಂದೂಕು ಹಿಡಿದ ಅಧಿಕಾರಿಯ ಬಳಿಗೆ ಹೋದೆ. ಆ ದಿನಗಳಲ್ಲಿ ನಾವು ಹೊಲಕ್ಕೆ ಹೋಗುವಾಗ ದಾರಿಯಲ್ಲಿ ಎದುರಾಗಬಹುದಾದ ಪ್ರಾಣಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಏನಾದರೂ ಹೊಂದಿರಬೇಕಿತ್ತು. ನಾವೆಲ್ಲರೂ ಲಾಠಿಗಳನ್ನು ಕೈಯಲ್ಲಿ ಹಿಡಿದು ಹೋಗುತ್ತಿದ್ದೆವು.

ಒಮ್ಮೆ ಆಕೆ ಅಧಿಕಾರಿಯ ಮೇಲೆ ದಾಳಿ ಮಾಡಿದ ಕೂಡಲೇ, ಆಕೆಯ ಜೊತೆಗಿದ್ದ 40 ಯುವತಿಯರು ಉಳಿದ ಸಿಬ್ಬಂದಿಯ ಮೇಲೆ ಲಾಠಿ ಪ್ರಹಾರ ಮಾಡಿದರು. "ಆ ಪುಂಡನನ್ನು ನಾನು ಬೀದಿಯ ತುದಿಯವರೆಗೂ ಓಡಿಸಿಕೊಂಡು ಹೋಗಿದ್ದೆ" ಎಂದು ಅವರು ಹೇಳಿದರು. ಇದನ್ನು ಹೇಳುವಾಗ ಅವರಲ್ಲಿ ಆಕ್ರೋಶ ತುಂಬಿತ್ತಾದರೂ ನಂತರ ನಕ್ಕರು. “ಅವನಿಗೆ ಈ ಪ್ರತಿಕ್ರಿಯೆ ತೀರಾ ಅನಿರೀಕ್ಷಿತವಾಗಿತ್ತು. ನಾನು ಹೀಗೆ ಮಾಡಬಹುದೆಂದು ಅವನು ಎಣಿಸಿರಲಿಲ್ಲ. ಈ ಪ್ರತಿಕ್ರಿಯೆಯಿಂದ ದಿಗ್ಭ್ರಮೆಗೊಂಡ ಅವನು ತಿರುಗಿ ಹೊಡೆಯಲಾಗದೆ ಓಡುತ್ತಲೇ ಇದ್ದನು" ಅವರು ಅವನನ್ನು ಹೊಡೆದು ಊರ ತುಂಬೆಲ್ಲ ಓಡಾಡಿಸಿದರು. ನಂತರ ಅವರು ತನ್ನ ತಂದೆಯನ್ನು ಅಲ್ಲಿಂದ ಎತ್ತಿಕೊಂಡರು. ನಂತರ ಅವರ ತಂದೆಯನ್ನು ಬಂಧಿಸಲಾಯಿತು, ಆದರೆ ಅದು ವಿಭಿನ್ನ ಪ್ರತಿಭಟನೆಗೆ ಕಾರಣವಾಯಿತು. ಕಾರ್ತಿಕ್ ಸಾಬರ್ ಅಲ್ಲಿನ ಬ್ರಿಟಿಷ್ ವಿರೋಧಿ ಚಳುವಳಿಯ ಪ್ರಮುಖ ಸಂಘಟಕರಾಗಿದ್ದರು.

Talk of the British shooting her father and Salihan’s memory comes alive with anger

ಬ್ರಿಟಿಷರು ಆಕೆಯ ತಂದೆಯ ಮೇಲೆ ಗುಂಡು ಹಾರಿಸಿದ್ದು ಮತ್ತು ಅದರ ನಂತರ ಸಾಲಿಹಾದಲ್ಲಿ ನಡೆದ ಘಟನೆಯ ನೆನಪು ಈಗಲೂ ಅದೇ ಆಕ್ರೋಶದೊಂದಿಗೆ ನೆನಪಾಗಿ ಉಳಿದಿದೆ

ದೇಮತಿ ದೇಯಿ ಸಬರ್ ಅವರನ್ನು ಅವರು ಹುಟ್ಟಿದ ನುವಾಪಾಡಾ ಜಿಲ್ಲೆಯ ಹಳ್ಳಿಯಾದ  'ಸಾಲಿಹಾನ್' ಎನ್ನುವ ಊರಿನ ಹೆಸರಿನಿಂದಲೇ ಕರೆಯತೊಡಗಿದರು. ಒಡಿಶಾದ ಒಬ್ಬ ಸ್ವಾತಂತ್ರ್ಯ ಹೋರಾಟಗಾರ್ತಿ ಒಬ್ಬ ಶಸ್ತ್ರಸಜ್ಜಿತ ಬ್ರಿಟಿಷನನ್ನು ಲಾಠಿಯಲ್ಲಿ ಬಡಿದು ಓಡಿಸಿದ್ದನ್ನು ಅಲ್ಲಿ ಕೊಂಡಾಡಲಾಗುತ್ತದೆ. ಅವರಲ್ಲಿ ಆ ನಿರ್ಭಯತೆ ಈಗಲೂ ಇದೆ. ಆದರೂ, ಅವರು ತಾನು ಅಸಾಮಾನ್ಯವಾದುದನ್ನು ಮಾಡಿದೆನೆಂದು ನಂಬುವುದಿಲ್ಲ. ಅವರು ಆ ಕುರಿತು ಹೆಚ್ಚು ಯೋಚಿಸುವುದೂ ಇಲ್ಲ. "ಅವರು ನಮ್ಮ ಮನೆಗಳನ್ನು, ನಮ್ಮ ಬೆಳೆಗಳನ್ನು ನಾಶಪಡಿಸಿದರು. ಮತ್ತು ಅವರು ನನ್ನ ತಂದೆಯ ಮೇಲೆ ದಾಳಿ ಮಾಡಿದರು. ಖಂಡಿತವಾಗಿಯೂ ನಾನು ಅವರೊಂದಿಗೆ ಹೋರಾಡುತ್ತಿದ್ದೆ."

ಅದು 1930ನೇ ಇಸವಿ. ಆಗ ಅವರಿಗೆ ಸುಮಾರು 16 ವರ್ಷ. ಬಂಡುಕೋರ ಪ್ರದೇಶದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ-ಪರ ಸಭೆಗಳ ಮೇಲೆ ರಾಜ್ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಬ್ರಿಟಿಷರು ಮತ್ತು ಅವರ ಪೊಲೀಸರ ವಿರುದ್ಧ ದೇಮತಿಯವರ ದಾಳಿಯು ಸಾಲಿಹಾ ದಂಗೆ ಮತ್ತು ಗುಂಡಿನ ದಾಳಿ ಎಂದು ಕರೆಯಲ್ಪಡುತ್ತಿತ್ತು.

ನಾನು ದೇಮತಿಯವರನ್ನು ಭೇಟಿಯಾದಾಗ, ಅವರಿಗೆ 90 ವರ್ಷ ತುಂಬುತ್ತಿತ್ತು. ಅವರ ಮುಖದಲ್ಲಿ ಆಗಲೂ ಆತ್ಮವಿಶ್ವಾಸ ಮತ್ತು ಸೌಂದರ್ಯವಿತ್ತು. ಅವರು ತುಂಬಾ ದುರ್ಬಲರಾಗಿದ್ದರು, ಮತ್ತು ಅವರ ದೃಷ್ಟಿ ವೇಗವಾಗಿ ಕ್ಷೀಣಿಸುತ್ತಿತ್ತು, ಆದರೆ ಅವರು ತನ್ನ ಯೌವನ ದಿನಗಳಲ್ಲಿ ತುಂಬಾ ಸುಂದರವಾಗಿ, ಎತ್ತರವಾಗಿ ಮತ್ತು ಬಲವಾಗಿದ್ದಿರಬಹುದು. ಅವರ ಉದ್ದನೆಯ ಕೈಗಳು ಅವರ ಸುಪ್ತ ಶಕ್ತಿ ಮತ್ತು ಲಾಠಿಗಳನ್ನು ಹಿಡಿಯಬಲ್ಲ ಸಾಮರ್ಥ್ಯವನ್ನು ಸೂಚಿಸುತ್ತಿದ್ದವು. ಬಹುಶಃ ಆ ಕೈಗಳಿಂದ ಬಿದ್ದ ಪೆಟ್ಟು ಬಲವಾಗಿಯೇ ಇದ್ದಿರಬೇಕು. ಹೀಗಾಗಿಯೇ ಆ ಬ್ರಿಟಿಷ್‌ ಅಧಿಕಾರಿ ಕಾಲಿಗೆ ಬುದ್ಧಿ ಹೇಳಿದ.

ಈ ಅಸಾಧರಣ ಧೈರ್ಯಕ್ಕಾಗಿ ಅವರಿಗೆ ಇನ್ನೂ ಪ್ರತಿಫಲ ಸಿಕ್ಕಿಲ್ಲ ಮತ್ತು ಅವರ ಹಳ್ಳಿಯ ಹೊರಗಿನ ಹೆಚ್ಚಿನ ಜನರು ಅವರನ್ನು ಮರೆತಿದ್ದಾರೆ. ನಾನು 'ಸಾಲಿಹಾನ್'ರನ್ನು ಭೇಟಿಯಾದಾಗ ಅವಳು ಬಾರ್‌ಗಢ್ ಜಿಲ್ಲೆಯಲ್ಲಿ ಅತ್ಯಂತ ಬಡತನದ ಜೀವನವನ್ನು ನಡೆಸುತ್ತಿದ್ದರು. ಅವರಲ್ಲಿದ್ದ ಏಕೈಕ ಆಸ್ತಿಯೆಂದರೆ ಅವರ ಹೆಸರಿನಲ್ಲಿ ನೀಡಲಾಗಿದ್ದ ವರ್ಣರಂಜಿತ ಸರ್ಕಾರಿ ಪ್ರಮಾಣವಾಗಿತ್ತು. ಅದರಲ್ಲಿ ಅವರ ಶೌರ್ಯವನ್ನು ಗುರುತಿಸಲಾಗಿತ್ತು. ಇದು 'ಸಾಲಿಹಾನ್' ಅವರಿಗಿಂತ ಹೆಚ್ಚು ಅವರ ತಂದೆಯ ಕುರಿತು ಹೆಚ್ಚು ಹೇಳುತ್ತದೆ ಮತ್ತು ಅವರು ಮುನ್ನಡೆಸಿದ ಪ್ರತೀಕಾರದ ಬಗ್ಗೆಯೂ ಅದರಲ್ಲಿ ಉಲ್ಲೇಖಿಸಿಲ್ಲ. ಅವರಿಗೆ ಯಾವುದೇ ಪಿಂಚಣಿ ದೊರೆಯುತ್ತಿಲ್ಲ, ಅಥವಾ ಕೇಂದ್ರ ಅಥವಾ ಒಡಿಶಾ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಬರುತ್ತಿರಲಿಲ್ಲ.

ಅವರು ತನ್ನ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದರು. ಒಂದೇ ಒಂದು ವಿಷಯ ಅವರ ಕಣ್ಣುಗಳನ್ನು ಹೊಳೆಯುವಂತೆ ಮಾಡಿತು, ಅದೆಂದರೆ ಅವರ ತಂದೆ ಕಾರ್ತಿಕ್ ಸಬಾರ್ ಗುಂಡು ಹಾರಿಸಿದ ಘಟನೆ. ನಾನು ಅದನ್ನು ಅವರ ನೆನಪಿಗೆ ತಂದೆ, ಅವರು ಆ ಘಟನೆಯನ್ನು ಬಹಳ ಕೋಪದಿಂದ ನೆನಪಿಸಿಕೊಳ್ಳುತ್ತಾರೆ ಮತ್ತು ಅದು ಅವರ ಕಣ್ಣೆದುರೇ ನಡೆಯುತ್ತಿರುವಂತೆ ಕಾಣುತ್ತಿತ್ತು. ಇದು ಅವರ ನೆನಪುಗಳನ್ನು ಮತ್ತೆ ಜೀವಂತಗೊಳಿಸಿತು.

Talk of the British shooting her father and Salihan’s memory comes alive with anger

"ನನ್ನ ಅಕ್ಕ ಭಾನ್ ದೇಯಿ ಮತ್ತು ಗಂಗಾ ತಲೆನ್ ಮತ್ತು ಸಖಾ ತೊರೆನ್ (ಬುಡಕಟ್ಟಿನ ಇತರ ಇಬ್ಬರು ಮಹಿಳೆಯರು) - ಅವರನ್ನೂ ಬಂಧಿಸಲಾಯಿತು. ಅವರೆಲ್ಲ ಈಗ ತೀರಿಕೊಂಡಿದ್ದಾರೆ. ತಂದೆ ಎರಡು ವರ್ಷಗಳನ್ನು ರಾಯಪುರ ಜೈಲಿನಲ್ಲಿ ಕಳೆದರು.

ಇಂದು ಅವರ ಪ್ರದೇಶವು ಬ್ರಿಟಿಷರನ್ನು ಬೆಂಬಲಿಸಿದ ಅದೇ ಊಳಿಗಮಾನ್ಯ ಜನರ ಪ್ರಾಬಲ್ಯವನ್ನು ಹೊಂದಿದೆ. ಈ ಊಳಿಗಮಾನ್ಯ ಜನರು ಸಾಲಿಹಾನ್ ಯಾವ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ ಅದರ ಲಾಭ ಪಡೆದರು. ಇಲ್ಲಿ ಬಡತನದ ಸಾಗರದ ನಡುವೆ ಅಲ್ಲಲ್ಲಿ ದ್ವೀಪದಂತೆ ಸಿರಿವಂತಿಕೆಯಿದೆ.

ಅವರು ನಮ್ಮನ್ನು ನೋಡಿದ ತಕ್ಷಣ ಒಮ್ಮೆ ಭವ್ಯವಾದ ನಗು ನಗುತ್ತಾರೆ. ನಗುತ್ತಲೇ ಇರುತ್ತಾರೆ. ಆದರೆ ಅವರು ದಣಿದಿದ್ದಾಳೆ. ತನ್ನ ಮೂವರು ಪುತ್ರರಾದ ಬಿಷ್ಣು ಭೋಯ್, ಅಂಕುರ್ ಭೋಯ್ ಮತ್ತು ಅಕುರಾ ಭೋಯ್ ಅವರ ಹೆಸರನ್ನು ನೆನಪಿಸಿಕೊಳ್ಳಲು ಅವರು ಕಷ್ಟಪಡುತ್ತಿದ್ದರು. ನಾವು ಹೋಗುತ್ತಿದ್ದೇವೆ ಎಂದು ಹೇಳಿದಾಗ ಅವರು ನಮ್ಮ ಕೈ ಕುಲುಕಿದಳು. ದೇಮತಿ ಡೇ ಸಬರ್‌ ಈಗಲೂ ನಗುತ್ತಿದ್ದಾರೆ.

ʼಸಾಲಿಹಾನ್‌ʼ ನಮ್ಮ ಭೇಟಿಯ ಸ್ವಲ್ಪ ಸಮಯದ ನಂತರ ಅಂದರೆ 2002ರಲ್ಲಿ ನಿಧನರಾದರು.

ದೇಮತಿ ಸಬರ್‌ ʼಸಾಲಿಹಾನ್‌ʼ ಅವರಿಗಾಗಿ

ಅವರು ನಿಮ್ಮ ಕತೆಯನ್ನು ಹೇಳುವುದಿಲ್ಲ ಸಾಲಿಹಾನ್‌
ನಿಮ್ಮನ್ನು ನಾನು ಪೇಜ್‌ ತ್ರೀ  ವರದಿಗಳಲ್ಲಿ ಕಾಣಲು ಸಾಧ್ಯವಿಲ್ಲ
ಅದು ಇರುವುದು ತಾನು ಯಾವುದಲ್ಲವೋ
ಅದು ತಾನೆಂದು ಬಿಂಬಿಸಿಕೊಂಡ ಜನರಿಗಾಗಿ
ತಮ್ಮ ಅಂದ ಚಂದಗಳನ್ನು ತಿದ್ದಿ ತೀಡಿಕೊಂಡವರಿಗಾಗಿ
ಮತ್ತೆ ಉದ್ಯಮಪತಿಗಳ ಮೆಹರುಬಾನಿಗೆ
ಪ್ರೈಮ್‌ ಟೈಮಿನಲ್ಲಿ ನಿಮ್ಮಂತಹವರನ್ನು ತೋರಿಸಲಾಗುವುದಿಲ್ಲ ಸಾಲಿಹಾನ್
ಇದರಲ್ಲೇನೂ ವಿಚಿತ್ರವಿಲ್ಲ
ಅದು ಇರುವುದೇ ಹಂತಕರಿಗಾಗಿ, ಹಲ್ಲೆ ಮಾಡುವವರಿಗಾಗಿ
ತಾವೇ ಬೆಂಕಿಯಿಟ್ಟು ದೂರುವವರಿಗಾಗಿ
ನಂತರ ಸಂತನಂತೆ ಮಾತನಾಡುವವರಿಗಾಗಾಗಿ, ಶಾಂತಿಗಾಗಿ ಶ್ರಮಿಸುವವರಿಗಾಗಿ
ಸಾಲಿಹಾನ್‌, ಬ್ರಿಟಿಷರು ನಿಮ್ಮ ಊರನ್ನೇ ಸುಟ್ಟರು
ಕೈಗಳಲ್ಲಿ ಬಂದೂಕು ಹಿಡಿದ ಜನರು
ನೋವು ಮತ್ತು ಭಯವನ್ನು ತಮ್ಮೊಂದಿಗೆ ಹೊತ್ತು
ರೈಲಿನಲ್ಲಿ ಬಂದರು ನಿಮ್ಮೂರಿಗೆ
ಹುಚ್ಚುತನವೇ ಬೇಸರಗೊಳ್ಳುವಂತೆ ಎಲ್ಲವನ್ನೂ ಸುಟ್ಟರು‌, ಸಾಲಿಹಾನ್
ಊರಿನ ನಗದು, ಧಾನ್ಯ ಲೂಟಿ ಮಾಡಿದ ದುಷ್ಟರು
ಮನುಷ್ಯರ ಮೇಲೂ ಎರಗಿದರು
ಎಲ್ಲವನ್ನೂ ನಾಶಗೊಳಿಸಿದರು
ಆದರೆ, ನೀವು ಸುಮ್ಮನಾಗಲಿಲ್ಲ
ಬಂದೂಕು ಹಿಡಿದವನನ್ನೇ ಬೆನ್ನಟ್ಟಿ ಬಡಿದಿರಿ
ಬೀದಿಯ ಕೊನೆಯವರೆಗೂ ಅಟ್ಟಿಸಿಕೊಂಡು ಹೋದಿರಿ
ಸಾಲಿಹಾ ಈಗಲೂ ಹೆಮ್ಮೆಯಿಂದ ಹೇಳುತ್ತದೆ
ನೀವು ಮಾಡಿದ ಯುದ್ದವನ್ನು ಅದನ್ನು ಗೆದ್ದ ಕತೆಯನ್ನು
ಮತ್ತು ನೀವು ಗೆದ್ದಿರಿ
ಸಂಬಂಧಿಕರು ಸುತ್ತಲೂ ರಕ್ತದ ಮಡುವಿನಲ್ಲಿದ್ದರು
ತಂದೆಯ ಕಾಲಿನಲ್ಲಿ ಗುಂಡು ನಾಟಿತ್ತು
ಆಗಲೂ ನೀವು ಧೃತಿಗೆಡದೆ ನಿಂತಿರಿ,
ಆ ಬ್ರಿಟಿಷರನ್ನು ಬಡಿದು ಓಡಿಸಿದಿರಿ
ಏಕೆಂದರೆ ನೀವು ಅಲ್ಲಿಗೆ ಹೋರಾಡಲು ಹೋಗಿದ್ದೀರಿ, ಭಿಕ್ಷೆ ಬೇಡಲಲ್ಲ
ಸಾಲಿಹಾನ್‌, ನೀವು ಹೊಡೆದುರುಳಿಸಿದ್ದ ಅಧಿಕಾರಿ
ಹದಿನಾರು ವರ್ಷದ ನಿಮ್ಮೆದುರು
ಮೊಣಕಾಲೂರಿ ಕಾಪಾಡುವಂತೆ ಬೇಡಿದ್ದ
ಸಾಲಿಹಾನ್‌, ಅಂದು ಬ್ರಿಟಿಷರ ಎದುರು
ನಲವತ್ತು ಹುಡುಗಿಯರಯ ಹೋರಾಟ ನಡೆಸಿದಿರಿ
ಈಗ ನೀವು ಬಡವಾಗಿದ್ದೀರಿ, ಕೂದಲು ಬಿಳಿಯಾಗಿವೆ
ದೇಹ ಒಣಗಿದೆ
ಆದರೆ ಆ ಕಣ್ಣುಗಳಲ್ಲಿನ ಕಿಡಿ ಈಗಲೂ ಹಾಗೆಯೇ ಉಳಿದಿದೆ
ಸಾಲಿಹಾನ್‌, ಬ್ರಿಟಿಷರ ಸೇವೆ ಮಾಡಿದವರು
ಇಂದು ನಿಮ್ಮ ಹಳ್ಳಿಗಳನ್ನಾಳುತ್ತಿದ್ದಾರೆ
ಮತ್ತು ಕಲ್ಲಿನ ದೇಗುಲಗಳ ಕಟ್ಟುತ್ತಿದ್ದಾರೆ
ಆದರೆ ಅವರಿಗೆಂದೂ ಪಶ್ಚತ್ತಾಪ ಕಾಡುವುದಿಲ್ಲ
ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಕ್ಕಾಗಿ
ಸಾಲಿಹಾನ್, ನೀವು ಹಸಿವು, ಉಪವಾಸ ಎದುರಿಸಿ
ಬದುಕಿದಂತೆಯೇ ಸಾಯಲಿರುವಿರಿ
ಇತಿಹಾಸದ ನೆರಳುಗಳಲ್ಲಿ
ನಿಮ್ಮ ನೆನಪು, ಮರೆಯಾಗುತ್ತದೆ
ರಾಯ್‌ಪುರ ಜೈಲಿನ ರೋಸ್ಟರ್ ಶೀಟ್‌ನಂತೆ
ಸಾಲಿಹಾನ್‌, ನನಗೂ ನಿಮ್ಮಂತಹದೇ ಹೃದಯವಿದ್ದಿದ್ದರೆ
ನಾನು ಕಂಡಂತಹ ಯಶಸ್ಸನ್ನು ಕಾನುವುದು ಸಾಧ್ಯವಿರುತ್ತಿರಲಿಲ್ಲ
ಅದು ಯುದ್ಧವೇ ಆಗಿದ್ದರೂ
ಅದು ನಿಮ್ಮ ಸಲುವಾಗಿ ಆಗಿರಲಿಲ್ಲ
ಅದರಿಂದ ಎಲ್ಲರೂ ಸ್ವತಂತ್ರರಾಗುತ್ತಿದ್ದರು
ಸಾಲಿಹಾನ್‌, ನಿಮ್ಮ ಕುರಿತು ನಮ್ಮ ಮಕ್ಕಳು ತಿಳಿಯಬೇಕು
ಆದರೆಖ್ಯಾತಿಗೊಳ್ಳಲು ನಿಮಗಿರುವ ಅರ್ಹತೆಯೇನು?
ನೀವು ಯಾವುದೇ ರ‍್ಯಾಂಪ್‌ ಏರಿಲ್ಲ
ಯಾವುದೇ ಹೆಮ್ಮೆಯ ಕಿರೀಟ ತೊಡಲಿಲ್ಲ
ನಿಮ್ಮ ಹೆಸರನ್ನು ಕೋಕ್‌ ಅಥವಾ ಪೆಪ್ಸಿಗೆ ನೀಡಿಲ್ಲ
ನನ್ನೊಂದಿಗೆ ಮಾತನಾಡಿ ಸಾಲಿಹಾನ್‌
ನೀವು ಬಯಸಿದಂತೆಯೇ ಕೊನೆಯೇ ಇಲ್ಲದ ಒಂದು ಗಂಟೆಯ ಹೊತ್ತು
ಈ ಓಡಲಾಗದ ಕುದುರೆ, ನಾವು ಬೇರ್ಪಟ್ಟ ನಂತರ
ನಿಮ್ಮ ಕುರಿತು ಬರೆಯುವ ಆಸೆ ಹೊಂದಿದೆ
ಅದಕ್ಕೆ ಭಾರತದ ಲಂಪಟ ನಾಯಕರ ಪ್ರೇಮ ಲೀಲೆಗಳ ಕುರಿತು ಬರೆಯುವ ಮನಸಿಲ್ಲ

P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru