ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಜೀವಮಾನದ ಬಾಗುವಿಕೆ

ವಿಜಯನಗರಂನ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ ಬಿಸಿಲಿಗೆ ದಣಿದು ಒಂದು ಕ್ಷಣ ಕೆಲಸ ನಿಲ್ಲಿಸಿದರು. ಆದರೆ ಆಗಲೂ ಬಾಗಿದಂತೆಯೇ ಇದ್ದರು. ಏಕೆಂದರೆ ಅವರಿಗೆ ಗೊತ್ತಿತ್ತು ಇನ್ನೊಂದು ಕ್ಷಣದಲ್ಲಿ ಮತ್ತೆ ಅದೇ ರೀತಿಯಲ್ಲಿ ಬಾಗಿ ನಿಂತು ಕೆಲಸ ಮಾಡಬೇಕೆಂದು.

ಇದೇ ಗೇರು ಹೊಲದಲ್ಲಿ ಅವರ ಗ್ರಾಮದ ಇತರ ಎರಡು ಗುಂಪುಗಳ ಮಹಿಳೆಯರೂ ಕೆಲಸ ಮಾಡುತ್ತಿದ್ದರು. ಒಂದು ಗುಂಪು ಜಮೀನಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಅವರ ಮನೆಯಿಂದ ಊಟ ಮತ್ತು ನೀರನ್ನು ತಂದಿತು. ಇನ್ನೊಂದು ಗುಂಪು ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು. ಕೆಲಸದಲ್ಲಿದ್ದ ಪ್ರತಿ ಮಹಿಳೆಯೂ ಬಾಗಿಕೊಂಡಿದ್ದರು.

ಒಡಿಶಾದ ರಾಯಗಡದಲ್ಲಿರುವ ಈ ಜಮೀನಿನಲ್ಲಿ ಗಂಡಸರೂ ಕೆಲಸ ಮಾಡುತ್ತಿದ್ದರು. ಕೆಮೆರಾ ಲೆನ್ಸ್‌ ಮೂಲಕ ನೋಡುವಾಗ ಅದೊಂದು ಅದ್ಭುತ ದೃಶ್ಯವಾಗಿತ್ತು. ಎಲ್ಲಾ ಗಂಡಸರು ನಿಂತಿದ್ದರು, ಮಹಿಳೆಯರೆಲ್ಲರೂ ಬಾಗಿದ್ದರು. ಒಡಿಶಾದ ನುವಾಪಾಡಾದಲ್ಲಿ ಈ ಮಹಿಳೆ ಕಳೆ ತೆಗೆಯುವುದನ್ನು ಮಳೆ ಬಂದರೂ ನಿಲ್ಲಿಸಲಿಲ್ಲ. ಸೊಂಟದವರೆಗೆ ಬಾಗಿಕೊಂಡು ತನ್ನ ಕೆಲಸ ಮುಗಿಸುತ್ತಿದ್ದರು. ಒಂದು ಕೈಯಲ್ಲಿ ಛತ್ರಿ ಹಿಡಿದು ಇನ್ನೊಂದು ಕೈಯಲ್ಲಿ ಕಳೆ ಕೀಳುತ್ತಿದ್ದರು.

ವೀಡಿಯೊ ನೋಡಿ: 'ಮಹಿಳೆಯರು ಕೆಲಸ ಮಾಡುವುದನ್ನು ನೋಡಿದಾಗ ನನಗೆ ಇದೇ ಮೊದಲ ಬಾರಿಗೆ ಹೊಳೆಯಿತು - ಅವರು ಯಾವಾಗಲೂ ಬಾಗಿಕೊಂಡೇ ಕೆಲಸ ಮಾಡುತ್ತಿದ್ದರು ಎಂದು' ಎನ್ನುತ್ತಾರೆ ಪಿ. ಸಾಯಿನಾಥ್

ಕೈಯಿಂದ ನಾಟಿ ಮಾಡುವುದು, ಬಿತ್ತನೆ ಮತ್ತು ಕಳೆ ಕೀಳುವುದು ಕಷ್ಟದ ಕೆಲಸ. ಈ ಕೆಲಸಕ್ಕೆ ಗಂಟೆಗಟ್ಟಲೆ ಬಾಗಿಕೊಂಡಿರಬೇಕಾಗುತ್ತದೆ. ಇದು ಜೀವ ಹಿಂಡುವಂತಹ ನೋವಿಗೆ ಕಾರಣವಾಗುತ್ತದೆ.

ಭಾರತದಲ್ಲಿ, 81 ಪ್ರತಿಶತ ಮಹಿಳೆಯರು ಕೃಷಿಕರಾಗಿ, ಕಾರ್ಮಿಕರಾಗಿ, ಕಾಡು ಉತ್ಪನ್ನಗಳನ್ನು ಸಂಗ್ರಹಿಸುವುದು ಮತ್ತು ಪ್ರಾಣಿಗಳ ಆರೈಕೆಯಲ್ಲಿ ತೊಡಗುವಂತಹ ಕೆಲಸಗಳನ್ನು ಮಾಡುತ್ತಾರೆ. ಕೃಷಿಯಲ್ಲಿ ಲಿಂಗಾಧರಿತವಾದ ದೊಡ್ಡ ವಿಭಾಗವಿದೆ. ಮಹಿಳೆಯರಿಗೆ ಉಳುಮೆ ಮಾಡಲು ಅವಕಾಶವಿಲ್ಲ. ಆದರೆ ಉಳಿದ ಕೃಷಿ ಕೆಲಸಗಳು ಅವರದೇ ಆಗಿರುತ್ತವೆ, ವಿಶೇಷವಾಗಿ ಬೀಜ ನೆಡುವುದು, ಕಳೆ ತೆಗೆಯುವುದು, ಬೆಳೆ ಕೊಯ್ಲು, ಧಾನ್ಯ ಸ್ವಚ್ಛಗೊಳಿಸುವಿಕೆ ಮತ್ತು ಇತರ ಎಲ್ಲಾ ಸುಗ್ಗಿಯ ನಂತರದ ಕೆಲಸಗಳು.

ಒಂದು ವಿಶ್ಲೇಷಣೆಯ ಪ್ರಕಾರ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಒಟ್ಟು ಕಾರ್ಮಿಕರಲ್ಲಿ:

ಶೇಕಡಾ 32ರಷ್ಟು ಮಹಿಳೆಯರು ಕೃಷಿಗಾಗಿ ಭೂಮಿಯನ್ನು ಸಿದ್ಧಪಡಿಸುತ್ತಾರೆ.
ಶೇಕಡಾ 76ರಷ್ಟು ಮಹಿಳೆಯರು ಬೀಜ ಬಿತ್ತುವ ಕೆಲಸವನ್ನು ಮಾಡುತ್ತಾರೆ.
ಶೇಕಡಾ 90ರಷ್ಟು ಮಹಿಳೆಯರು ಬೀಜಗಳ ನಾಟಿ ಮಾಡುವಲ್ಲಿ ತೊಡಗಿಸಿಕೊಳ್ಳುತ್ತಾರೆ.
ಶೇಕಡಾ 82ರಷ್ಟು ಮಹಿಳೆಯರು ಕೊಯ್ಲು ಮಾಡಿದ ಬೆಳೆಯನ್ನು ಹೊಲದಿಂದ ಮನೆಗೆ ಒಯ್ಯುತ್ತಾರೆ.
ಶೇಕಡಾ 100 ಮಹಿಳೆಯರು ಅಡುಗೆ ಕೆಲಸವನ್ನು ಮಾಡುತ್ತಾರೆ. ಮತ್ತು
ಶೇಕಡಾ 69ರಷ್ಟು ಮಹಿಳೆಯರು ಹಾಲು ಉತ್ಪಾದನೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

PHOTO • P. Sainath
PHOTO • P. Sainath

ಈ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗುವುದೆಂದರೆ ಬಾಗಿಕೊಂಡಿರುವುದು ಅಥವಾ ದೀರ್ಘಕಾಲ ಕೆಲಸ ಮಾಡುವುದು. ಜೊತೆಗೆ ಕೃಷಿಯಲ್ಲಿ ಬಳಸುವ ಅನೇಕ ಉಪಕರಣಗಳು ಮತ್ತು ಸಲಕರಣೆಗಳು ಮಹಿಳೆಯರ ಅನುಕೂಲಕ್ಕಾಗಿ ತಯಾರಿಸಲ್ಪಟ್ಟಿಲ್ಲ.

ಹೊಲಗಳಲ್ಲಿ ಕೆಲಸ ಮಾಡುವಾಗ ಮಹಿಳೆಯರು ಬಾಗಿ ಅಥವಾ ಕುಳಿತ ಭಂಗಿಯಲ್ಲೇ ನಿರಂತರವಾಗಿ ಮುಂದೆ ಸಾಗಬೇಕಿರುತ್ತದೆ. ಇದರಿಂದ, ಅವರ ಬೆನ್ನು ಮತ್ತು ಕಾಲುಗಳಲ್ಲಿ ತೀವ್ರವಾದ ನೋವು ಬರುವುದು ಸಾಮಾನ್ಯ ಸಮಸ್ಯೆಯಾಗಿದೆ. ಈ ಮಹಿಳೆಯರು  ಆಗಾಗ್ಗೆ ಕಾಲು ಮುಳುಗುವಷ್ಟು ಆಳವಾದ ನೀರಿನಲ್ಲಿ ಗಂಟೆಗಟ್ಟಲೆ ಕೆಲಸದ ಸಮಯದಲ್ಲಿ ನಿಲ್ಲುವುದರಿಂದಾಗಿ ಚರ್ಮದ ಕಾಯಿಲೆಗಳಿಗೂ ಒಳಗಾಗುತ್ತಾರೆ.

ಹಾಗೂ ಪುರುಷರಿಗಾಗಿ ತಯಾರಿಸಿದ ಉಪಕರಣಗಳಿಂದ ಕೆಲಸ ಮಾಡುವಾಗ ಗಾಯಗಳಾಗುತ್ತವೆ ಮತ್ತು ಅವುಗಳನ್ನು ಮಹಿಳೆಯರ ಅನುಕೂಲಕ್ಕಾಗಿ ಎಂದಿಗೂ ಮರುವಿನ್ಯಾಸ ಮಾಡಲಾಗುವುದಿಲ್ಲ. ಕುಡುಗೋಲುಗಳು ಮತ್ತು ಮಚ್ಚುಗಳಿಂದ ಗಾಯಗಳು ಕೃಷಿ ಕೆಲಸಗಳಲ್ಲಿ ಸಾಮಾನ್ಯ ಮತ್ತು ಯೋಗ್ಯ ವೈದ್ಯಕೀಯ ಆರೈಕೆ ಅಪರೂಪ. ಇವರಿಗೆ ಟೆಟನಸ್ (Tetanus/ಸೆಟೆಬೇನೆ) ಎನ್ನುವುದು ನಿರಂತರ ಬೆದರಿಕೆಯಾಗಿದೆ.

PHOTO • P. Sainath
PHOTO • P. Sainath
PHOTO • P. Sainath

ಈ ರೀತಿಯ ಕೆಲಸದಿಂದಾಗಿ ಹೆಚ್ಚಿನ ಶಿಶು ಮರಣ ಪ್ರಮಾಣವು ಕೃಷಿರಂಗದಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಉದಾಹರಣೆಗೆ, ನಾಟಿಯ ಸಮಯದಲ್ಲಿ, ಹೆಂಗಸರು ದಿನದ ಹೆಚ್ಚಿನ ಸಮಯ ಬಾಗಿಕೊಂಡೇ ಇರಬೇಕಾಗುತ್ತದೆ. ಅತಿ ಹೆಚ್ಚು ಗರ್ಭಪಾತ ಮತ್ತು ಶಿಶು ಮರಣ ಪ್ರಕರಣಗಳು ವರದಿಯಾಗುವ ಅವಧಿ ಇದಾಗಿದೆ ಎಂದು ಮಹಾರಾಷ್ಟ್ರದ ಅಧ್ಯಯನವೊಂದು ಬಹಿರಂಗಪಡಿಸಿದೆ. ದೀರ್ಘಕಾಲದವರೆಗೆ ಅಡ್ಡ ಕಾಲಿನಲ್ಲಿ ಕುಳಿತುಕೊಳ್ಳುವುದು ಆಯಾಸ ಮತ್ತು ಒತ್ತಡವನ್ನು ಉಂಟುಮಾಡುತ್ತದೆ, ಇದು ಸಾಮಾನ್ಯವಾಗಿ ಶಿಶುಗಳ ಅಕಾಲಿಕ ಜನನಕ್ಕೆ ಕಾರಣವಾಗುತ್ತದೆ.

ಜತೆಗೆ ಮಹಿಳಾ ಕಾರ್ಮಿಕರಿಗೆ ಸಾಕಷ್ಟು ಆಹಾರವೂ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಬಡತನ. ಎಲ್ಲಕ್ಕಿಂತ ಹೆಚ್ಚಾಗಿ, ಕುಟುಂಬವು ಮೊದಲು ತಿನ್ನಬೇಕು ಮತ್ತು ಮಹಿಳೆಯರು ಕೊನೆಯದಾಗಿ ತಿನ್ನಬೇಕು ಎನ್ನುವ ಸಂಪ್ರದಾಯವು ಈ ಪರಿಸ್ಥಿತಿಯನ್ನು ಇನ್ನಷ್ಟು ಕರುಣಾಜನಕಗೊಳಿಸುತ್ತದೆ. ಗರ್ಭಿಣಿಯರಿಗೆ ಹೆಚ್ಚು ಅಗತ್ಯವಿದ್ದರೂ ಉತ್ತಮ ಆಹಾರ ಸಿಗುತ್ತಿಲ್ಲ. ತಾಯಂದಿರು ಸ್ವತಃ ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದಾಗಿ, ಅಕಾಲಿಕವಾಗಿ ಜನಿಸಿದ ಶಿಶುಗಳು ತುಂಬಾ ಕಡಿಮೆ ತೂಕವನ್ನು ಹೊಂದಿದ್ದ. ಅಂತಹ ಮಕ್ಕಳು ಬದುಕುಳಿಯುವುದು ಬಹಳ ಕಷ್ಟ.

ಈ ಕಾರಣದಿಂದಾಗಿ, ಕೃಷಿರಂಗದ ಮಹಿಳೆಯರು ಪುನರಾವರ್ತಿತ ಗರ್ಭಧಾರಣೆ ಮತ್ತು ಹೆಚ್ಚಿನ ಶಿಶು ಮರಣದ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಇದು ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ, ಅಂತಹ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ.

PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru