ಅದು ಮಧ್ಯ ಭಾರತದಲ್ಲಿರುವ ಖಾರ್ಗೋನ್‌ ಪಟ್ಟಣ. ಮಧ್ಯಪ್ರದೇಶದ ಈ ಪಟ್ಟಣದ ಜನದಟ್ಟಣೆಯ ಚಾಂದನಿ ಚೌಕ್ ಪ್ರದೇಶದಲ್ಲಿ ಎಪ್ರಿಲ್‌ ತಿಂಗಳ ಚುರುಕು ಬಿಸಿಲಿನ ಬೆಳಗು ಆಗಷ್ಟೇ ಕಣ್ಣು ಬಿಡುತ್ತಿತ್ತು. ಅಲ್ಲಿಗೆ ಇದ್ದಕ್ಕಿದ್ದಂತೆ ನುಗ್ಗಿಬಂದ ಬುಲ್ಡೋಜರುಗಳು ಅಲ್ಲಿನ ಜನರ ಗದ್ದಲವನ್ನು ಒಮ್ಮೆಗೇ ತಣ್ಣಗಾಗಿಸಿತು. ಇದರಿಂದ ಭಯಭೀತರಾದ ನಿವಾಸಿಗಳು ತಮ್ಮ ಸಣ್ಣ ಅಂಗಡಿಗಳು ಮತ್ತು ಮನೆಗಳಿಂದ ಹೊರಬರತೊಡಗಿದರು.

ಜೆಸಿಬಿಯ ದಪ್ಪ ಬ್ಲೇಡಿನ ಹಲ್ಲುಗಳು ಕೆಲವೇ ನಿಮಿಷಗಳಲ್ಲಿ ತನ್ನ ದಿನಸಿ ಅಂಗಡಿ ಮತ್ತು ಅದರೊಳಗಿನ ವಸ್ತುಗಳನ್ನು ಪುಡಿಪುಡಿ ಮಾಡುವುದನ್ನು ಭಯಭೀತರಾಗಿ ನೋಡುತ್ತಾ ನಿಂತಿದ್ದ 35 ವರ್ಷದ ವಾಸಿಮ್ ಅಹ್ಮದ್ ಇಡೀ ಜೀವಮಾನದ ಸಂಪಾದನೆ ಅಂದು ಮಣ್ಣುಪಾಲಾಗಿತ್ತು. “ನನ್ನ ಬಳಿ ಇದ್ದಿದ್ದನ್ನೆಲ್ಲ ಈ ಅಂಗಡಿಯ ಮೇಲೆ ಸುರಿದಿದ್ದೆ” ಎಂದು ಅವರು ಹೇಳುತ್ತಾರೆ.

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಲ್ಲಿಗೆ ಬಂದಿದ್ದ ಬುಲ್ಡೋಜರುಗಳು ಕೇವಲ ಅವರೊಬ್ಬರ ಸಣ್ಣ ಅಂಗಡಿಯನ್ನಷ್ಟೇ ನೆಲಸಮಗೊಳಿಸಿರಲಿಲ್ಲ. ಅಂದು (ಏಪ್ರಿಲ್ 11, 2022ರಂದು) ಮುಸ್ಲಿ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಸುಮಾರು 50 ಅಂಗಡಿಗಳು ಮತ್ತು ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ಮಧ್ಯಪ್ರದೇಶ ರಾಜ್ಯ ಸರ್ಕಾರವು ರಾಮನವಮಿ ಹಬ್ಬದ ಸಂದರ್ಭದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದ "ಗಲಭೆಕೋರರಿಗೆ" ಪಾಠ ಕಲಿಸುವ ಸಲುವಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು.

ಆದರೆ ವಾಸಿಮ್‌ ಅಂತಹ ಕೆಲಸ ಮಾಡಿದ್ದಾರೆನ್ನುವುದನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ ಅವರು ಕಲ್ಲು ಹೊಡೆಯುವುದು ಅತ್ತಗಿರಲಿ, ಅವರಿಗೆ ಇನ್ನೊಬ್ಬರ ಸಹಾಯವಿಲ್ಲದೆ ಒಂದು ಕಪ್‌ ಚಹಾ ಕುಡಿಯಲು ಸಹ ಸಾಧ್ಯವಿಲ್ಲ. ಏಕೆಂದರೆ ಅವರೊಬ್ಬ ಎರಡೂ ಕೈಗಳಿಲ್ಲದ ಅಂಗವಿಕಲ.

“ಆ ದಿನ ನಡೆದ ಘಟನೆಗೂ ನನಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ” ಎನ್ನುತ್ತಾರೆ ವಾಸಿಮ್.‌

ಒಂದು ಕಾಲದಲ್ಲಿ ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದ ಅವರು, 2005ರಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡರು. “ಒಂದು ಕೆಲಸ ಮಾಡುತ್ತಿರುವಾಗ ನನಗೆ ವಿದ್ಯುತ್‌ ಶಾಕ್‌ ಹೊಡೆಯಿತು. ನಂತರ ಚಿಕಿತ್ಸೆಯ ಸಮಯದಲ್ಲಿ ವೈದ್ಯರು ನನ್ನ ಎರಡೂ ತೋಳುಗಳನ್ನು ಕತ್ತರಿಸಬೇಕಾಗಿ ಬಂತು. ಇಂತಹ ಪರಿಸ್ಥಿತಿಯಲ್ಲೂ ನಾನು ಹೇಗೋ [ಅಂಗಡಿ ಮೂಲಕ] ಬದುಕು ಕಟ್ಟಿಕೊಂಡಿದ್ದೆ.” ಎನ್ನುವ ವಾಸಿಮ್‌ ಅವರಿಗೆ ತಾನು ಸ್ವಾನುಕಂಪದೊಂದಿಗೆ ವ್ಯರ್ಥ ಕುಳಿತುಕೊಳ್ಳದೆ ಬದುಕು ಕಟ್ಟಿಕೊಂಡ ಕುರಿತು ಹೆಮ್ಮೆಯಿದೆ.

Left: Wasim Ahmed lost both hands in an accident in 2005.
PHOTO • Parth M.N.
Right: Wasim’s son Aleem helping him drink chai at his house in Khargone
PHOTO • Parth M.N.

ಎಡ: ವಾಸಿಮ್ ಅಹ್ಮದ್ 2005ರಲ್ಲಿ ಅಪಘಾವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರು. ಬಲ: ವಾಸಿಮ್ ಅವರ ಮಗ ಅಲೀಮ್ ಖಾರ್ಗೋನ್ ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ ಚಹಾ ಕುಡಿಯಲು ತಂದೆಗೆ ಸಹಾಯ ಮಾಡುತ್ತಿದ್ದಾನೆ

ವಾಸಿಮ್‌ ಅವರ ಅಂಗಡಿಗೆ ಬರುವ ಗ್ರಾಹಕರು ತಮಗೆ ಬೇಕಿರುವ ದಿನಸಿ, ಲೇಖನ ಸಾಮಗ್ರಿಗಳ ವಿವರಗಳನ್ನು ಅವರಿಗೆ ತಿಳಿಸಿ ನಂತರ ಅವರೇ ಪೊಟ್ಟಣ ಕಟ್ಟಿಕೊಳ್ಳುತ್ತಿದ್ದರು. “ಗಿರಾಕಿಗಳು ಹಣವನ್ನು ನನ್ನ ಜೇಬಿನಲ್ಲಿ ಅಥವಾ ಅಂಗಡಿಯ ಡ್ರಾಯರಿನಲ್ಲಿ ಹಾಕಿ ಹೋಗುತ್ತಿದ್ದರು. ಇದು ಕಳೆದ 15 ವರ್ಷಗಳಿಂದ ನನ್ನ ಹೊಟ್ಟೆಪಾಡಿನ ದಾರಿಯಾಗಿತ್ತು” ಎಂದು ಅವರು ಹೇಳುತ್ತಾರೆ.

ಅದೇ ಖಾರ್ಗೋನ್‌ ಪಟ್ಟಣದ ಚಾಂದನಿ ಚೌಕ್ ಪ್ರದೇಶದಲ್ಲಿ ತನ್ನ ನಾಲ್ಕು ಅಂಗಡಿಗಳಲ್ಲಿ ಮೂರನ್ನು ಕಳೆದುಕೊಂಡಿರುವ 73 ವರ್ಷದ ಮೊಹಮ್ಮದ್ ರಫೀಕ್ ಅವರ ಪಾಲಿಗೆ ಒದಗಿರುವ ಒಟ್ಟು ನಷ್ಟ 25 ಲಕ್ಷ. “ನಾನು ಆ ದಿನ ಅವರ ಕಾಲಿಗೆ ಬಿದ್ದು ಬೇಡಿಕೊಂಡೆ. ಅವರು [ಪುರಸಭೆಯ ಅಧಿಕಾರಿಗಳು] ನಮಗೆ ದಾಖಲೆಗಳನ್ನು ತೋರಿಸಲು ಸಹ ಅವಕಾಶ ನೀಡಲಿಲ್ಲ. ನನ್ನ ಅಂಗಡಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳೂ ಸರಿಯಿದ್ದವು. ಆದರೆ ಅವರಿಗೆ ಅದೆಲ್ಲವನ್ನು ಕಟ್ಟಿಕೊಂಡು ಆಗಬೇಕಿದ್ದುದು ಏನೂ ಇಲ್ಲ” ಎಂದು ಆ ದಿನದ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಗಲಭೆಯಿಂದ ಉಂಟಾದ ನಷ್ಟವನ್ನು ವಸೂಲಿ ಮಾಡುವ ಸಲುವಾಗಿ ಸ್ಟೇಷನರಿ, ಚಿಪ್ಸ್, ಸಿಗರೇಟ್, ಕ್ಯಾಂಡಿ, ತಂಪು ಪಾನೀಯಗಳು ಮತ್ತು ಮುಂತಾದವುಗಳನ್ನು ಮಾರಾಟ ಮಾಡುವ ವಾಸಿಮ್ ಮತ್ತು ರಫೀಕ್ ಅವರ ಅಂಗಡಿಗಳನ್ನು ನೆಲಸಮಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದಾದ ನಂತರ ಜಿಲ್ಲಾಡಳಿತವು ನೆಲಸಮಗೊಂಡ ಕಟ್ಟಡಗಳು “ಅಕ್ರಮವಾಗಿದ್ದವು” ಎಂದು ಹೇಳಿದೆ. ಆದರೆ  ಆದರೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಜಿಸ್ ಘರೋಂ ಸೇ ಪತ್ತರ್ ಆಯೇ ಹೈ, ಉನ್ ಘರೊಂಕೊ ಹೀ ಪತ್ತರೋಂಕಾ ಧೇರ್ ಬನಾಯೆಂಗೆ [ಯಾವ ಮನೆಗಳಿಂದ ಕಲ್ಲು ತೂರಲಾಗಿತ್ತೋ ಆ ಮನೆಗಳನ್ನು ನಾವು ಕಲ್ಲು-ಮಣ್ಣಿನ ರಾಶಿಯನ್ನಾಗಿ ಮಾಡುತ್ತೇವೆ] ಎಂದು ಹೇಳಿದ್ದರು.

Mohammad Rafique surveying the damage done to his shop in Khargone’s Chandni Chowk by bulldozers
PHOTO • Parth M.N.

ಖಾರ್ಗೋನ್ ಪಟ್ಟಣದ ಚಾಂದನಿ ಚೌಕದಲ್ಲಿರುವ ತನ್ನ ಅಂಗಡಿಗೆ ಬುಲ್ಡೋಜರುಗಳಿಂದ ಉಂಟಾದ ಹಾನಿಯನ್ನು ಸಮೀಕ್ಷೆ ಮಾಡುತ್ತಿರುವ ಮೊಹಮ್ಮದ್ ರಫೀಕ್

ಬುಲ್ಡೋಜರ್‌ ದಾಳಿಗೂ ಮೊದಲು, ಗಲಭೆಯ ಸಮಯದಲ್ಲಿ ಮುಖ್ತಿಯಾರ್ ಖಾನ್ ಅವರಂತಹ ಕೆಲವರು ತಮ್ಮ ಮನೆಗಳನ್ನು ಕಳೆದುಕೊಂಡರು. ಅವರ ಮನೆ ಸಂಜಯ್ ನಗರದ ಹಿಂದೂ ಸಮುದಾಯದ ಪ್ರಾಬಲ್ಯವಿರುವ ಪ್ರದೇಶದಲ್ಲಿತ್ತು. ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಸಫಾಯಿ ಕರ್ಮಚಾರಿಯಾಗಿದ್ದ ಅವರು ಹಿಂಸಾಚಾರ ಭುಗಿಲೆದ್ದಾಗ ಕರ್ತವ್ಯದಲ್ಲಿದ್ದರು. “ನನಗೆ ಸ್ನೇಹಿತರೊಬ್ಬರು ಕರೆ ಮಾಡಿ ನನ್ನ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ತಿಳಿಸಿದರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮುಖ್ತಿಯಾರ್ ಅವರ ಮನೆ ಸಂಜಯ್ ನಗರದ ಪ್ರಮುಖ ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿರುವುದರಿಂದಾಗಿ ಇದು ಅವರ ಪಾಲಿಗೆ ಜೀವದಾನ ನೀಡಿದಂತಹ ಸಲಹೆಯಾಗಿತ್ತು. ಅದೃಷ್ಟವಶಾತ್‌ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಮರಳಿದ ಅವರು ತನ್ನ ಕುಟುಂಬವನ್ನು ಕುಟುಂಬವು ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿರುವ ಅವರ ಸಹೋದರಿಯ ಮನೆಗೆ ಸ್ಥಳಾಂತರಿಸಿದರು.

ಅವರು ತಮ್ಮ ಮನೆಗೆ ಮರಳುವ ಹೊತ್ತಿಗೆ ಅದು ಸುಟ್ಟು ಬೂದಿಯಾಗಿತ್ತು. “ಎಲ್ಲವೂ ಸರ್ವನಾಶವಾಗಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮುಖ್ತಿಯಾರ್ ತಾನು ಜನಿಸಿದಾಗಿನಿಂದಲೂ ಇಲ್ಲಿಯೇ ಬದುಕಿ ಬಾಳಿದ್ದಾರೆ. ಅವರಿಗೀಗ 44 ವರ್ಷ. “ನಾವು [ಪೋಷಕರು] ಒಂದು ಸಣ್ಣ ಗುಡಿಸಲಿನಲ್ಲಿದ್ದೆವು. 15 ವರ್ಷಗಳ ಕಾಲ ದುಡಿದು ಹಣವುಳಿಸಿ 2016ರಲ್ಲಿ ನಮ್ಮೆಲ್ಲರಿಗಾಗಿ ಮನೆಯೊಂದನ್ನು ನಿರ್ಮಿಸಿದ್ದೆ. ನಾನು ಇಡೀ ಬದುಕನ್ನು ಅಲ್ಲಿ ಕಳೆದಿದ್ದೆ. ಸದಾ ಅಲ್ಲಿನ ಜನರೊಂದಿಗೆ ಸ್ನೇಹಪರ ಸಂಬಂಧವನ್ನು ಹೊಂದಿದ್ದೆ" ಎಂದು ಅವರು ವಿಷಾದದಿಂದ ಹೇಳುತ್ತಾರೆ.

ತನ್ನ ಮನೆಯನ್ನು ಕಳೆದುಕೊಂಡ ಮುಖಿಯಾರ್‌ ಪ್ರಸ್ತುತ ಖಾರ್ಗೋನ್‌ ಪಟ್ಟಣದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ವಾಸಿಸುತ್ತಿದ್ದಾರೆ. ಈ ಮನೆಗೆ 5,000 ರೂಪಾಯಿ ಬಾಡಿಗೆಯಿದ್ದು, ಇದು ಅವರ ಸಂಬಳದ ಮೂರನೇ ಒಂದು ಭಾಗವನ್ನು ನುಂಗುತ್ತದೆ. ಹಳೆಯ ಮನೆಯೊಂದಿಗೆ ಪಾತ್ರೆಗಳು, ಬಟ್ಟೆ, ಪೀಠೋಪಕರಣ ಎಲ್ಲವೂ ಸುಟ್ಟು ಹೋದ ಕಾರಣ ಅವುಗಳನ್ನೂ ಅವರು ಹೊಸದಾಗಿ ಖರೀದಿಸಬೇಕಾಯಿತು.

“ಅವರು ನಮ್ಮ ಮನೆಯನ್ನು ನಾಶಗೊಳಿಸುವ ಮೊದಲು ಒಂದಿಷ್ಟೂ ಯೋಚಿಸಲಿಲ್ಲ. ಕಳೆದ 4-5 ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆ ಹೆಚ್ಚಿದೆ. ಮೊದಲು ಎಂದೂ ಹೀಗಿರಲಿಲ್ಲ. ಈ ದಿನಗಳಲ್ಲಿ ನಮ್ಮನ್ನು ಬಹಳವಾಗಿ ಬದಿಗೊತ್ತಲಾಗುತ್ತಿದೆ.”

Mukhtiyar lost his home during the communal riots in Khargone
PHOTO • Parth M.N.

ಖಾರ್ಗೋನ್‌ ಪಟ್ಟಣದಲ್ಲಿ ನಡೆದ ಕೋಮು ಗಲಭೆಯಲ್ಲಿ ಮುಖ್ತಿಯಾರ್ ತಮ್ಮ ಮನೆಯನ್ನು ಕಳೆದುಕೊಂಡರು

ಮುಖ್ತಿಯಾರ್‌ ಅವರಿಗೆ ಉಂಟಾದ ನಷ್ಟದ ಒಂದು ಭಾಗವಾಗಿ 1.76 ಲಕ್ಷ ರೂಪಾಯಿ ಬರುವುದಿದೆ. ಆದರೆ ಈ ವರದಿ ಪ್ರಕಟವಾಗುವವರೆಗೂ ಅವರಿಗೆ ಈ ಪರಿಹಾರ ಮೊತ್ತ ಸಿಕ್ಕಿಲ್ಲ. ಅದು ಸದ್ಯಕ್ಕೆ ಸಿಗುತ್ತದೆ ಎನ್ನುವ ಭರವಸೆಯನ್ನೂ ಅವರು ಹೊಂದಿಲ್ಲ.

“ನನ್ನ ಮನೆಯನ್ನು ನೆಲಸಮಗೊಳಿಸಿರುವುದಕ್ಕೆ ನನಗೆ ಪರಿಹಾರ ಮತ್ತು ನ್ಯಾಯ ಎರಡೂ ಬೇಕು” ಎಂದು ಅವರು ಹೇಳುತ್ತಾರೆ. “ಎರಡು ದಿನಗಳ ನಂತರ ಗಲಭೆಕೋರರು ಮಾಡಿದ ಕೆಲಸವನ್ನೇ ಆಡಳಿತವೂ ಮಾಡಿತು.”

ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ಬಿಜೆಪಿ ಆಡಳಿತದ ಹಲವಾರು ರಾಜ್ಯಗಳು "ಬುಲ್ಡೋಜರ್ ನ್ಯಾಯ"ಕ್ಕೆ ಸಮಾನಾರ್ಥಕ ಪದವಾಗಿ ಹೊರಹೊಮ್ಮಿವೆ. ಮಧ್ಯಪ್ರದೇಶವಲ್ಲದೆ, ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅಪರಾಧದ ಆರೋಪ ಹೊತ್ತ ಜನರ ಮನೆಗಳು ಮತ್ತು ಅಂಗಡಿಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದ ನಿದರ್ಶನಗಳಿವೆ. ಈ ಪ್ರಕರಣಗಳಲ್ಲಿ ಆರೋಪಿ ತಪ್ಪಿತಸ್ಥನಾಗಿರಬಹುದು ಅಥವಾ ಆಗಿಲ್ಲದಿರಬಹುದು. ಆದರೆ ಹೀಗೆ ಬುಲ್ಡೋಜರ್‌ ಶಿಕ್ಷೆಗೆ ಒಳಗಾದವರಲ್ಲಿ ಬಹುತೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.

ಖಾರ್ಗೋನ್‌ ಪಟ್ಟಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಕಟ್ಟಡಗಳನ್ನು ಮಾತ್ರ ನೆಲಸಮಗೊಳಿಸಿದೆ ಎಂದು ರಾಜ್ಯದ ನೆಲಸಮ ಕಾರ್ಯಾಚರಣೆಯನ್ನು ಪರಿಶೀಲಿಸಿದ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಈ ವರದಿಗಾರನೊಂದಿಗೆ ಹಂಚಿಕೊಂಡ ವರದಿಯಲ್ಲಿ ಹೇಳಲಾಗಿದೆ.

"ಹಿಂಸಾಚಾರದಿಂದ ಎರಡೂ ಸಮುದಾಯಗಳು ಬಾಧಿತವಾಗಿದ್ದರೂ, ಆಡಳಿತವು ನಾಶಪಡಿಸಿದ ಎಲ್ಲಾ ಆಸ್ತಿಗಳು ಮುಸ್ಲಿಮರಿಗೆ ಸೇರಿವೆ" ಎನ್ನುತ್ತದೆ ವರದಿ. "ಈ ಸಮಯದಲ್ಲಿ ಯಾವುದೇ ನೋಟಿಸ್ ನೀಡಿಲ್ಲ, ವಸ್ತುಗಳನ್ನು ಖಾಲಿ ಮಾಡಲು ಯಾವುದೇ ಸಮಯವನ್ನು ನೀಡಲಾಗಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದ ನೆಲಸಮ ತಂಡಗಳು ಮನೆಗಳು ಮತ್ತು ಅಂಗಡಿಗಳ ಮೇಲೆ ಒಂದೇ ಸಮ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದವು.

*****

ಇದೆಲ್ಲ ಎಂದಿನಂತೆ ಒಂದು ವದಂತಿಯೊಂದಿಗೆ ಆರಂಭಗೊಂಡಿತು. ಮೊದಲಿಗೆ ಏಪ್ರಿಲ್ 10, 2022ರಂದು ನಡೆಯುತ್ತಿರುವ ರಾಮನವಮಿ ಆಚರಣೆಯ ಸಮಯದಲ್ಲಿ, ಖಾರ್ಗೋನ್ ಪಟ್ಟಣದ ತಲಾಬ್ ಚೌಕ್ ಬಳಿ ಹಿಂದೂಗಳ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ ಎಂಬ ಸುದ್ದಿ ಹರಡಿತು. ಸಾಮಾಜಿಕ ಮಾಧ್ಯಮಗಳು ಈ ವದಂತಿಯ ಬೆಂಕಿಗೆ ತುಪ್ಪ ಸುರಿದವು. ಸ್ವಲ್ಪ ಸಮಯದಲ್ಲೇ ಅಲ್ಲಿ ಉದ್ರಿಕ್ತ ಗುಂಪು ಜಮಾಯಿಸಿತು. ನಂತರ ಅವರು ಗಲಭೆ ಸ್ಥಳದತ್ತ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

Rafique in front of his now destroyed shop in Khargone. A PUCL report says, 'even though both communities were affected by the violence, all the properties destroyed by the administration belonged to Muslims'.
PHOTO • Parth M.N.

ರಫೀಕ್ ಖಾರ್ಗೋನ್ ಪಟ್ಟಣದಲ್ಲಿ ಪ್ರಸ್ತುತ ನಾಶವಾಗಿರುವ ತನ್ನ ಅಂಗಡಿಯ ಮುಂದೆ. ಪಿಯುಸಿಎಲ್ ವರದಿಯ ಪ್ರಕಾರ, 'ಹಿಂಸಾಚಾರದಿಂದ ಎರಡೂ ಸಮುದಾಯಗಳು ಬಾಧಿತವಾಗಿದ್ದರೂ, ಆಡಳಿತವು ನಾಶಪಡಿಸಿದ ಎಲ್ಲಾ ಆಸ್ತಿಗಳು ಮುಸ್ಲಿಮರಿಗೆ ಸೇರಿವೆ'

ಅದೇ ಸಮಯದಲ್ಲಿ, ಹತ್ತಿರದ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ಮುಸ್ಲಿಮರನ್ನು ಈ ಉದ್ರಿಕ್ತ ಗುಂಪು ಎದುರಿಸಿತು. ಕಲ್ಲು ತೂರಾಟದೊಂದಿಗೆ ಘಟನೆ ಹಿಂಸಾಚಾರಕ್ಕೆ ತಿರುಗಿತು ಮತ್ತು ಹಿಂಸಾಚಾರವು ಶೀಘ್ರದಲ್ಲೇ ಪಟ್ಟಣದ ಉಳಿದ ಭಾಗಗಳಿಗೆ ಹರಡಿತು, ಅಲ್ಲಿ ಬಲಪಂಥೀಯ ಹಿಂದೂ ಗುಂಪುಗಳು ಮುಸ್ಲಿಂ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಸಿಕೊಂಡವು.

ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೆಂಬಂತೆ, ಸಿಎನ್ಎನ್ ನ್ಯೂಸ್ 18 ವಾಹಿನಿಯ ಪ್ರೈಮ್ ಟೈಮ್ ನಿರೂಪಕ ಅಮನ್ ಚೋಪ್ರಾ ಅದೇ ಸಮಯದಲ್ಲಿ ಖಾರ್ಗೋನ್ ಘಟನೆ ಕುರಿತು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿದ್ದರು, ಅದಕ್ಕೆ "ಹಿಂದೂ ರಾಮ ನವಮಿ ಮನಾಯೇ, 'ರಫೀಕ್' ಪತ್ತರ್ ಬರ್ಸಾಯೇ ಎಂಬ ಶೀರ್ಷಿಕೆ ನೀಡಲಾಯಿತು. ಇದನ್ನು “ಹಿಂದೂಗಳು ರಾಮ ನವಮಿ ಆಚರಿಸಿದರೆ, ರಫೀಕ್‌ ಅದರ ಮೇಲೆ ಕಲ್ಲಿನ ಮಳೆ ಸುರಿಸುತ್ತಾನೆ” ಎಂದು ಮೇಲ್ಮಟ್ಟಕ್ಕೆ ಅನುವಾದಿಸಬಹುದು.

ಚೋಪ್ರಾ ನಿರ್ದಿಷ್ಟವಾಗಿ ಮೊಹಮ್ಮದ್ ರಫೀಕ್ ಅವರನ್ನು ಗುರಿಯಾಗಿಸಲು ಉದ್ದೇಶಿಸಿದ್ದರೇ ಅಥವಾ ಅವರು ಸಾಮಾನ್ಯ ಮುಸ್ಲಿಂ ಹೆಸರನ್ನು ಬಳಸಲು ಬಯಸಿದ್ದರೇ ಎಂಬುದು ಸ್ಪಷ್ಟವಿಲ್ಲ. ಆದರೆ ಈ ಪ್ರಕಾರ್ಯಕ್ರಮವು ರಫೀಕ್ ಮತ್ತು ಅವರ ಕುಟುಂಬದ ಮೇಲೆ ಭಯಾನಕ ಪರಿಣಾಮ ಬೀರಿತು. "ಅದರ ನಂತರ ಕೆಲವು ದಿನಗಳವರೆಗೆ ನನಗೆ ನಿದ್ರೆ ಬರಲಿಲ್ಲ" ಎಂದು ಅವರು ಹೇಳುತ್ತಾರೆ. "ಈ ವಯಸ್ಸಿನಲ್ಲಿ, ನಾನು ಈ ಒತ್ತಡವನ್ನು ಸಹಿಸಲು ಸಾಧ್ಯವಿಲ್ಲ."

ರಫೀಕ್ ಅವರ ಅಂಗಡಿಗಳನ್ನು ನೆಲಸಮಗೊಳಿಸಿ ಒಂದೂವರೆ ವರ್ಷವಾಗಿದೆ. ಆದರೆ ಚೋಪ್ರಾ ನಡೆಸಿಕೊಟ್ಟ ಕಾರ್ಯಕ್ರಮದ ಸ್ಕ್ರೀನ್ ಪ್ರಿಂಟ್ ಔಟ್ ಇನ್ನೂ ಅವರ ಬಳಿ ಇದೆ. ಇದನ್ನು ನೋಡಿದಾಗಲೆಲ್ಲ ಹಳೆಯ ನೋವು ಮತ್ತೆ ಅವರಲ್ಲಿ ಹಸಿಯಾಗುತ್ತದೆ.

ಚೋಪ್ರಾ ನಡೆಸಿಕೊಟ್ಟ ಕಾರ್ಯಕ್ರಮದ ನಂತರ ಹಿಂದೂ ಸಮುದಾಯವು ಸ್ವಲ್ಪ ಸಮಯದವರೆಗೆ ಅವರಿಂದ ತಂಪು ಪಾನೀಯಗಳು ಮತ್ತು ಡೈರಿ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿತು ಎಂದು ಅವರು ಹೇಳುತ್ತಾರೆ. ಬಲಪಂಥೀಯ ಹಿಂದೂ ಗುಂಪುಗಳು ಈಗಾಗಲೇ ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ಕಾರ್ಯಕ್ರಮವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. "ಮಗೂ, ನೀನೂ ಒಬ್ಬ ಪತ್ರಕರ್ತ. ಒಬ್ಬ ಪತ್ರಕರ್ತ ಹೀಗೆ ಮಾಡುವುದು ಸರಿಯೇ?" ಎಂದು ರಫೀಕ್‌ ಅವರು ನನ್ನ ಬಳಿ ಕೇಳಿದರು.

The rubble after the demolition ordered by the Khargone Municipal Corporation
PHOTO • Parth M.N.

ಖಾರ್ಗೋನ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶದ ನಂತರ ನಡೆದ ನೆಲಸಮದಲ್ಲಿ ಅಳಿದುಳಿದ ಅವಶೇಷಗಳು

ಆಗ ನನಗೆ ನನ್ನ ವೃತ್ತಿಯ ಕುರಿತಾಗಿಯೇ ನಾಚಿಕೆ ಹುಟ್ಟಿತು. ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. “ನಾನು ನಿನ್ನನ್ನು ಅವರೊಂದಿಗೆ ಹೋಲಿಸುತ್ತಿಲ್ಲ. ನೀನು ನೋಡಲು ಒಳ್ಳೆಯ ಹುಡುಗನಂತೆ ಕಾಣುತ್ತಿರುವೆ” ಎಂದು ಅವರು ಮುಗುಳ್ನಗುತ್ತಾ ನನ್ನನ್ನು ಸಮಾಧಾನಿಸುವ ದನಿಯಲ್ಲಿ ಹೇಳಿದರು. ಜೊತೆಗೆ ಅವರ ಅಂಗಡಿಯಲ್ಲಿದ್ದ ತಂಪು ಪಾನೀಯವೊಂದನ್ನು ನನಗೆ ಕುಡಿಯಲು ಕೊಟ್ಟರು.

ಮತ್ತೆ ಅಂಗಡಿ ಇಡುವ ಸಲುವಾಗಿ ವಾಸಿಮ್‌ ಅವರ ಬಳಿ ಯಾವುದೇ ಉಳಿತಾಯದ ಮೊತ್ತವಿಲ್ಲ. ಅಂಗಡಿ ನೆಲಸಮವಾಗಿ ಒಂದೂವರೆ ವರ್ಷ ಕಳೆದಿದೆ. ಅಂದಿನಿಂದ ಅವರ ಬಳಿ ಅಂಗಡಿಯಾಗಲೀ, ಯಾವುದೇ ಸಂಪಾದನೆಯಾಗಿಲ್ಲ ಇಲ್ಲ. ಖಾರ್ಗೋನ್ ಮುನ್ಸಿಪಲ್ ಕಾರ್ಪೊರೇಷನ್ ಅವರಿಗೆ ಸಹಾಯ ಮಾಡುವುದಾಗಿ ಹೇಳಿತ್ತು: "ಮುಜೆ ಬೋಲಾ ಥಾ ಮದದ್ ಕರೆಂಗೆ ಲೇಕಿನ್ ಬಸ್ ನಾಮ್ ಕೆ ಲಿಯೆ ಥಾ ವೋ [ಅವರು ನನಗೆ ಪರಿಹಾರ ನೀಡಿ ಸಹಾಯ ಮಾಡುವುದಾಗಿ ಹೇಳಿದ್ದರು ಆದರೆ ಅದೆಲ್ಲ ಕೇವಲ ಬಾಯಿ ಮಾತಿನ ಉಪಚಾರವಾಗಿಯೇ ಉಳಿಯಿತು]."

“ಎರಡೂ ಕೈಗಳಿಲ್ಲದ ಮನುಷ್ಯನೊಬ್ಬ ಮಾಡಬಹುದಾದಂತಹ ಕೆಲಸಗಳು ಬಹಳ ಕಡಿಮೆಯಿವೆ” ಎಂದು ಅವರು ಹೇಳುತ್ತಾರೆ.

ವಾಸಿಮ್‌ ಅವರ ಅಂಗಡಿ ಸರ್ಕಾರಿ ಆದೇಶದಡಿ ನೆಲಸಮಗೊಂಡ ದಿನದಿಂದ ಅವರ ಅಣ್ಣ ವಾಸಿಮ್‌ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಸಹ ಅಂತಹದ್ದೇ ಒಂದು ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. ನಾನು ನನ್ನ ಇಬ್ಬರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ" ಎಂದು ಅವರು ಹೇಳುತ್ತಾರೆ. "ಮೂರನೇ ಮಗುವಿಗೆ ಎರಡು ವರ್ಷ. ಅವನು ಕೂಡ ಸರ್ಕಾರಿ ಶಾಲೆಗೆ ಹೋಗಬೇಕಾಗುತ್ತದೆ. ನನ್ನ ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ನನ್ನ ಹಣೆಬರಹದೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ನಾನು ಒಳಗಾಗಿದ್ದೇನೆ."

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru