ಅಬ್ದುಲ್‌ ಲತೀಫ್‌ ಬಜ್ರಾನ್‌ ಮೇ ತಿಂಗಳ ಮೊದಲ ವಾರದಲ್ಲಿ ರಜೌರಿ ಜಿಲ್ಲೆಯಲ್ಲಿರುವ ಪೆರಿಯಿಂದ ತಮ್ಮ ಜಾನುವಾರುಗಳೊಡನೆ – ಕುರಿ, ಆಡುಗಳು, ಕುದುರೆಗಳು ಮತ್ತು ಒಂದು ನಾಯಿ – ಕಾಶ್ಮೀರದ ಬೆಟ್ಟಗಳಲ್ಲಿ ಮೇವು ಹುಡುಕಿಕೊಂಡು ಹೊರಟಿದ್ದರು. ಅವರೊಡನೆ ಅವರ ಮಗ ತಾರೀಖ್‌ ಮತ್ತು ಇನ್ನೂ ಕೆಲವರನ್ನು ಜೊತೆಯಲ್ಲಿ ಕರೆದೊಯ್ದಿದ್ದರು. “ನಾನು ನನ್ನ ಕುಟುಂಬವನ್ನು [ಹೆಂಡತಿ ಮತ್ತು ಸೊಸೆ] ಕೆಲವು ದುರ್ಬಲವಾಗಿದ್ದ ಜಾನುವಾರುಗಳೊಡನೆ, ಆಹಾರ, ಆಶ್ರಯ ಮತ್ತು ಇತ್ಯಾದಿ ಅವಶ್ಯ ವಸ್ತುಗಳೊಡನೆ ಮಿನಿ ಟ್ರಕ್ಕಿನಲ್ಲಿ ಕಳಿಸಿದ್ದೆ” ಎಂದು ಜಮ್ಮುವಿನ ಈ 65 ವರ್ಷದ ಹಿರಿಯ ಪಶುಪಾಲಕ ತಿಳಿಸಿದರು.

ಆದರೆ ಎರಡು ವಾರಗಳ ನಂತರ, “ನನಗೆ ಅವರನ್ನು ನೋಡಿ ಆಘಾತವಾಗಿತ್ತು [ನೋವಿನಿಂದ]” ಎಂದು ಅವರು ಹೇಳುತ್ತಾರೆ. ಅವರು ಅವರೆಲ್ಲ ಅವರು ತಲುಪಬೇಕಿದ್ದ ಸ್ಥಳವಾದ ಮಿನಿಮಾರ್ಗವನ್ನು (ಭಾರತ-ಪಾಕಿಸ್ಥಾನ ಗಡಿ) ತಲುಪಿ, ಅಲ್ಲಿ ಬೇಸಗೆ ಕಾಲದ ಶಿಬಿರವನ್ನು ಸ್ಥಾಪಿಸಿರಬಹುದು ಎಂದು ಭಾವಿಸಿದ್ದರು.

ಆದರೆ ಅವರು ತಲುಪಬೇಕಿದ್ದ ಸ್ಥಳದಿಂದ ಹದಿನೈದು ದಿನಗಳಷ್ಟು ದೂರವಿದ್ದರು. ಹವಾಮಾನದ ಕಾರಣದಿಂದಾಗಿ ಅವರು ಮಿನಿಮಾರ್ಗ್‌ ತಲುಪದೆ ಅಲ್ಲಿ ನಿಂತಿದ್ದರು ಎಂದು ಅವರು ಹೇಳುತ್ತಾರೆ. ಅವರು ಜೋಜಿಲಾ ಪಾಸ್‌ ಎನ್ನುವಲ್ಲಿ ಹಿಮ ಕರಗಲಿ ಎಂದು ಕಾಯುತ್ತಿದ್ದರು.

ಪ್ರತಿವರ್ಷ ಬೇಸಗೆ ಬರುತ್ತಿದ್ದ ಹಾಗೆ ಜಮ್ಮು ಪ್ರದೇಶದಲ್ಲಿ ಹುಲ್ಲು ಒಣಗತೊಡಗುತ್ತದೆ. ಹೀಗಾಗಿ ಬಕರ್ವಾಲ್‌ ರೀತಿಯ ಪಶುಪಾಲಕ ಸಮುದಾಯಗಳು ಮೇವು ಹುಡುಕಿಕೊಂಡು ಕಾಶ್ಮೀರದ ಕಣಿವೆಗಳಿಗೆ ವಲಸೆ ಹೋಗುತ್ತಾರೆ. ನಂತರ ಅವರು ವಾಪಸ್‌ ಬರುವುದು ಅಕ್ಟೋಬರ್‌ ತಿಂಗಳ ಸುಮಾರಿಗೆ, ಆಗ ಇಲ್ಲಿ ಮತ್ತೆ ವಾತಾವರಣ ತಣ್ಣಗಾಗಿರುತ್ತದೆ.

ಆದರೆ ಎತ್ತರದ ಪ್ರದೇಶಗಳಲ್ಲಿನ ಮೈದಾನಗಳು ಹಿಮಾವೃತವಾಗಿದ್ದಾಗ, ಅಬ್ದುಲ್‌ ಅವರಂತಹ ಪಶುಪಾಲಕರು ಸಿಕ್ಕಿಹಾಕಿಕೊಂಡು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನಲ್ಲಿ ಹುಲ್ಲು ಸಿಗದ ಕಾರಣ ಅಲ್ಲಿಗೆ ಹೋಗುವಂತಿರುವುದಿಲ್ಲ, ಹಾಗೆಂದು ಎತ್ತರದ ಪ್ರದೇಶಕ್ಕೂ ಹಿಮದ ಕಾರಣಕ್ಕೆ ಹೋಗಲಾಗುವುದಿಲ್ಲ.

Abdul Latief Bajran (left) migrated out of his village, Peri in Rajouri district, in early May with his 150 animals – sheep, goats, horses and a dog – in search of grazing grounds high up in the mountains of Kashmir. Seated with Mohammad Qasim (right) inside a tent in Wayil near Ganderbal district, waiting to continue his journey
PHOTO • Muzamil Bhat

ಅಬ್ದುಲ್ ಲತೀಫ್ ಬಜ್ರಾನ್ (ಎಡ) ಮೇ ತಿಂಗಳ ಆರಂಭದಲ್ಲಿ ತನ್ನ 150 ಜಾನುವಾರುಗಳಾದ ಕುರಿ, ಮೇಕೆ, ಕುದುರೆಗಳು ಮತ್ತು ನಾಯಿಯೊಂದಿಗೆ ಕಾಶ್ಮೀರದ ಪರ್ವತಗಳಲ್ಲಿ ಮೇವುಮಾಳವನ್ನು ಹುಡುಕಿಕೊಂಡು ರಜೌರಿ ಜಿಲ್ಲೆಯ ಪೆರಿ ಗ್ರಾಮದಿಂದ ವಲಸೆ ಬಂದರು. ಗಂಡರ್ಬಾಲ್ ಜಿಲ್ಲೆಯ ವಯಿಲ್ ಪ್ರದೇಶದ ಟೆಂಟಿನಲ್ಲಿ ಮೊಹಮ್ಮದ್ ಖಾಸಿಮ್ (ಬಲಕ್ಕೆ) ಅವರೊಂದಿಗೆ ಕುಳಿತು ತಮ್ಮ ಪ್ರಯಾಣವನ್ನು ಮುಂದುವರಿಸಲು ಕಾಯುತ್ತಿರುವುದು

Left: Women from the Bakarwal community sewing tents out of polythene sheets to use in Minimarg.
PHOTO • Muzamil Bhat
Right: Zabaida Begum, Abdul Latief's wife is resting in the tent.
PHOTO • Muzamil Bhat

ಎಡ: ಬಕರ್ವಾಲ್ ಸಮುದಾಯದ ಮಹಿಳೆಯರು ಮಿನಿಮಾರ್ಗ್ ಎನ್ನುವಲ್ಲಿ ಬಳಸಲು ಪಾಲಿಥಿನ್ ಶೀಟುಗಳಿಂದ ಡೇರೆಗಳನ್ನು ಹೊಲಿಯುತ್ತಿದ್ದಾರೆ. ಬಲ: ಅಬ್ದುಲ್ ಲತೀಫ್ ಅವರ ಪತ್ನಿ ಜಬೈದಾ ಬೇಗಂ ಟೆಂಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ

ಮುಹಮ್ಮದ್‌ ಖಾಸಿಮ್‌ ಅವರು ಎತ್ತರದ ಪ್ರದೇಶದ ಕಡೆ ಸಂಚರಿಸುವ ಮೊದಲೇ ಅಕಾಲಿಕ ಬಿಸಿಲಿಗೆ ಹಲವು ಜಾನುವಾರುಗಳನ್ನು ಕಳೆದುಕೊಂಡು ಅಬ್ದುಲ್‌ ಅವರಂತೆಯೇ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. “ಸೆಕೆ ಹೆಚ್ಚಾದಂತೆ ನಮ್ಮ ಕುರಿ ಮತ್ತು ಮೇಕೆಗಳಿಗೆ ಸಾಮಾನ್ಯವಾಗಿ ಜ್ವರ ಮತ್ತು ಅತಿಸಾರ ಆರಂಭಗೊಳ್ಳುತ್ತದೆ. ಇದು ಅವುಗಳ ಸಾವಿಗೂ ಕಾರಣವಾಗಬಹದು” ಎಂದು 65 ವರ್ಷದ ಅವರು ಹೇಳುತ್ತಾರೆ.

ಜಮ್ಮುವಿನ ಅಂಧ ಗ್ರಾಮದವರಾದ ಈ ಬಕರ್ವಾಲ್‌ ಸಮುದಾಯದ ಪಶುಪಾಲಕನ ಅನೇಕ ಜಾನುವಾರುಗಳು ಬೇಸಗೆಯ ಆರಂಭದಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ಬಿಸಿಲಿಗೆ ಅನಾರೋಗ್ಯಕ್ಕೆ ಒಳಗಾದವು. ಜೊತೆಗೆ  50 ಆಡು ಮತ್ತು ಮೇಕೆಗಳು ತೀರಿಕೊಂಡಿದ್ದರಿಂದಾಗಿ ಅವರು ತಡವಾಗಿ ಹೊರಟರು.

ಅವರು ಅಲ್ಲಿಗೆ ಹೋಗಲು ಕಾಯುತ್ತಲೇ, ಲಿಯಾಕತ್‌ ಎನ್ನುವ ಅಲೆಮಾರಿಯೊಬ್ಬರ ಬಳಿ ಕಾಶ್ಮೀರದ ಕಣಿವೆಯಲ್ಲಿನ ವಾತಾವರಣದ ಕುರಿತು ಫೋನ್‌ ಮೂಲಕ ವಿಚಾರಿಸುತ್ತಿದ್ದರು. “ಯಾವಾಗ ಕೇಳಿದರೂ ವಾತಾವರಣ ಸರಿಯಿಲ್ಲ” ಎನ್ನುವ ಉತ್ತರವೇ ಬರುತ್ತಿತ್ತು. ಲಿಯಾಕತ್‌ ಅವರನ್ನು ಸಂಪರ್ಕಿಸುವುದು ಕೂಡಾ ಅಲ್ಲಿನ ಫೋನ್‌ ನೆಟ್ವರ್ಕ್‌ ಲಭ್ಯತೆಯ ಕೊರತೆ ಕಾರಣಕ್ಕೆ ಬಹಳ ಕಷ್ಟವಾಗುತ್ತಿತ್ತು.

ಕಣಿವೆಯಲ್ಲಿ ಇನ್ನೂ ಹಿಮ ಬೀಳುತ್ತಿರುವುದನ್ನು ತಿಳಿದ ಖಾಸಿಮ್‌ ಊರನ್ನು ಬಿಡಲು ಹಿಂಜರಿದರು. ಅಲ್ಲದೇ ಸೆಕೆಗೆ ಈಗಾಗಲೇ ಜಾನುವಾರುಗಳು ಬೇರೆ ದುರ್ಬಲಗೊಂಡಿದ್ದವು. ಆಡುಗಳು ಹೆಚ್ಚು ತಣ್ಣಗಿನ ವಾತಾವರಣವನ್ನು ಸಹಿಸಲಾರವು, ಅವು ಚಳಿ ಹೆಚ್ಚಾದರೆ ಸಾಯುವ ಸಾಧ್ಯತೆಯೂ ಇರುತ್ತದೆ. ಆದರೆ ಕುರಿಗಳ ಮೈಯಲ್ಲಿ ಉಣ್ಣೆ ಇರುತ್ತದೆಯಾದ್ದರಿಂದ ಅವು ಚಳಿಯನ್ನು ಸಹಿಸಬಲ್ಲವು ಎನ್ನುತ್ತಾರೆ.

ಆದರೆ ಹಲವು ದಿನಗಳ ಕಾದ ನಂತರ, ಅವರು ಬೇರೆ ದಾರಿಯಿಲ್ಲದೆ ತಮ್ಮ ಜಾನುವಾರುಗಳನ್ನು ಟ್ರಕ್‌ ಒಂದಕ್ಕೆ ತುಂಬಿಸಿಕೊಂಡು ಇತರ ಬಕರ್ವಾಲ್‌ ಕುಟುಂಬಗಳೊಡನೆ ಹೊರಟರು. ಅವರು ನೆನಪಿಸಿಕೊಂಡು ಹೇಳುತ್ತಾರೆ “ನಾನು ಅವುಗಳನ್ನು ಕೂಡಲೇ ಸಾಗಿಸದೆ ಹೋಗಿದ್ದ ಎಲ್ಲವೂ ಸತ್ತು ಹೋಗಿರುತ್ತಿದ್ದವು.”

ಖಾಸಿಮ್ ಈಗಾಗಲೇ ಎರಡು ವಾರಗಳ ಕಾಲ ಕಾದಿದ್ದರು, ಇನ್ನೂ ಕಾಯುವ ಪರಿಸ್ಥಿತಿಯಲ್ಲಿ ಅವರು ಇದ್ದಿರಲಿಲ್ಲ.‌ “ನನ್ನ ಜಾನುವಾರುಗಳನ್ನು ಕಾಲಕೋಟೆಯಿಂದ ಗಂದೇರ್‌ಬಾಲ್‌ ಸಾಗಿಸಲು ನಾನು 35,000 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದೇನೆ.”

A herd of sheep and goat climbing up towards Lidwas peak in Srinagar for grazing.
PHOTO • Muzamil Bhat
Imran (right) is one of the youngest herders who will travel with his family to Lidwas.
PHOTO • Muzamil Bhat

ಕುರಿ ಮತ್ತು ಮೇಕೆಗಳ ಹಿಂಡು ಮೇವು ಹುಡುಕಿಕೊಂಡು ಶ್ರೀನಗರದ ಲಿಡ್ವಾಸ್ ಶಿಖರದ ಕಡೆಗೆ ಸಾಗುತ್ತಿರುವುದು. ಇಮ್ರಾನ್ (ಬಲ) ತನ್ನ ಕುಟುಂಬದೊಂದಿಗೆ ಲಿಡ್ವಾಸ್ ಕಡೆ ಪ್ರಯಾಣಿಸುತ್ತಿರುವ ಕಿರಿಯ ಪಶುಪಾಲಕರಲ್ಲಿ ಒಬ್ಬ

ತನ್ನ ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡಿದ ಅಬ್ದುಲ್‌ ಕೂಡಾ ಈಗಾಗಲೇ ಒಂದು ತಿಂಗಳು ತಡವಾಗಿ ಮಿನಿಮಾರ್ಗ್‌ ಕಡೆ ಹೊರಟಿದ್ದರು. “ಈ ವರ್ಷ ಕಾಶ್ಮೀರದ ಎತ್ತರದ ಪ್ರದೇಶದಲ್ಲಿ ಇಂದಿಗೂ ಹಿಮ ಬೀಳುತ್ತಿದೆ.” ಕುಟುಂಬ ಮತ್ತು ಅದರ ಜಾನುವಾರು ಹಿಂಡು ಕೊನೆಗೂ ಜೂನ್‌ 12ರಂದು ತನ್ನ ಗಮ್ಯವನ್ನು ತಲುಪಿತು.

ಬೆಟ್ಟದ ದಾರಿಯಲ್ಲಿ ಅಬ್ದುಲ್‌ ಅವರ ಸಾಕುಪ್ರಾಣಿಗಳ ಪಾಲಿಗೆ ಕೇವಲ ಹಿಮವಷ್ಟೇ ಅಲ್ಲ ಮಳೆಯೂ ದುಬಾರಿಯಾಗಿ ಪರಿಣಮಿಸಿತು. "ದಕ್ಷಿಣ ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಎದುರಾದ ಪ್ರವಾಹದಲ್ಲಿ ನಾನು 30 ಕುರಿಗಳನ್ನು ಕಳೆದುಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ. ಈ ವರ್ಷ ಮಿನಿಮಾರ್ಗ್ ಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಈ ಘಟನೆ ನಡೆಯಿತು. "ನಾವು ಶೋಪಿಯಾನ್ ಜಿಲ್ಲೆಯ ಮೊಘಲ್ ರಸ್ತೆಯಿಂದ ಬರುತ್ತಿದ್ದೆವು. ಅಂದು ಇದ್ದಕ್ಕಿದ್ದಂತೆ ಶುರುವಾದ ಮಳೆ ಐದು ದಿನಗಳವರೆಗೆ ಮುಂದುವರಿಯಿತು."

ತನ್ನ ಬಾಲ್ಯದಿಂದಲೂ ಪ್ರತಿ ಬೇಸಿಗೆಗೆ ಜಮ್ಮುವಿನಿಂದ ಕಾಶ್ಮೀರಕ್ಕೆ ವಲಸೆ ಬರುತ್ತಿರುವ ಅಬ್ದುಲ್, ಮೇ ಅಂತ್ಯ ಮತ್ತು ಜೂನ್ ಆರಂಭದಲ್ಲಿ ಇಂತಹ ವಿಪರೀತ ಹವಾಮಾನವನ್ನು ಈ ಹಿಂದೆ ನೋಡಿರಲಿಲ್ಲ ಎಂದು ಹೇಳುತ್ತಾರೆ. ತಮ್ಮ ಕುಟುಂಬವು ಕೆಲವು ದಿನಗಳವರೆಗೆ ವಯಿಲ್ನಲ್ಲಿ ಉಳಿದು, ಪರ್ವತದ ಮೇಲೆ ಬರದೆ ಹೋಗಿದ್ದು ಬಹಳ ಒಳ್ಳೆಯದಾಯಿತು ಎಂದು ಅವರು ಹೇಳುತ್ತಾರೆ. "ದೈತ್ಯ ಜೊಜಿಲ್ಲಾ ದಾಟುವ [ಮಿನಿಮಾರ್ಗಕ್ಕೆ ಹೋಗುವ ದಾರಿಯಲ್ಲಿ] ಸಂದರ್ಭದಲ್ಲಿ ಇನ್ನಷ್ಟು ಕುರಿಗಳನ್ನು ಕಳೆದುಕೊಳ್ಳುವುದು ನನಗೆ ಬೇಡವೆನ್ನಿಸಿತ್ತು" ಎಂದು ಅವರು ಹೇಳುತ್ತಾರೆ.

ಗ್ರಾಮೀಣ ಅಲೆಮಾರಿ ಸಮುದಾಯಗಳ ಪಾಲಿನ ಸಾಂಪ್ರದಾಯಿಕ ಮಾರ್ಗವು ಶೋಪಿಯಾನ್ ಮಾರ್ಗದಿಂದ ಹಳೆಯ ಮೊಘಲ್ ಮಾರ್ಗದ ಮೂಲಕ ಹಾದುಹೋಗುತ್ತದೆ.

ಮೇಲೆ ಬಂದವರಿಗೆ ಹುಲ್ಲುಗಾವಲಿನ ಬದಲು ಹಿಮ ಕಾಣಿಸಿತ್ತು. “ನಾವು ಮೊದಲಿಗೆ ಆಶ್ರಯಕ್ಕಾಗಿ ಅಥವಾ ನಮ್ಮ ಟೆಂಟ್‌ ಕಟ್ಟಲು ಸೂಕ್ತ ಸ್ಥಳಕ್ಕಾಗಿ ಹುಡುಕುತ್ತೇವೆ. ಸಾಮಾನ್ಯವಾಗಿ ಇದಕ್ಕಾಗಿ ನಾವು ದೊಡ್ಡ ಮರಗಳು ಅಥವಾ ಅಥವಾ ಡೋಕಾಗಳನ್ನು [ಮಣ್ಣಿನ ಮನೆಗಳು] ಹುಡುಕುತ್ತೇವೆ" ಎಂದು ಅಬ್ದುಲ್ ಹೇಳುತ್ತಾರೆ. “ಅದೃಷ್ಟ ಚೆನ್ನಾಗಿದ್ದರೆ ಏನಾದರೂ ಸಿಗುತ್ತದೆ, ಇಲ್ಲವಾದರೆ ತೆರೆದ ಸ್ಥಳದಲ್ಲಿ ಟೆಂಟ್‌ ಹಾಕಿಕೊಂಡು ಉಳಿದು ಮಳೆಯಲ್ಲಿ ನೆನೆಯಲು ಸಿದ್ಧವಾಗಬೇಕಾಗುತ್ತದೆ.” ಸಾಧ್ಯವಿರುವಷ್ಟು ಜಾನುವಾರುಗಳನ್ನು ಉಳಸಿಕೊಳ್ಳುವುದು ಅವರ ಪಾಲಿಗೆ ಬಹಳ ಮುಖ್ಯ, ಅವರು ಹೇಳುತ್ತಾರೆ, “ಸಬ್ಕೋ ಅಪ್ನಿ ಝಿಂದಗಿ ಪ್ಯಾರಿ ಹೈ [ಎಲ್ಲರಿಗೂ ಅವರ ಜೀವದ ಕುರಿತು ಆಸೆಯಿರುತ್ತದೆ].”

ಪಶುಪಾಲಕರು ಸಾಮಾನ್ಯವಾಗಿ ತಮ್ಮೊಡನೆ ಕೆಲವು ವಾರಗಳಿಗೆ ಸಾಕಾಗುವಷ್ಟು ಆಹಾರವನ್ನು ಒಯ್ದಿರುತ್ತಾರಾದರೂ, ಪ್ರತಿಕೂಲ ಸಂದರ್ಭಗಳಲ್ಲಿ ಶುದ್ಧ ನೀರನ್ನು ಹುಡುಕುವುದು ಅವರ ಪಾಲಿಗೆ ಒಂದು ಸವಾಲಾಗಿರುತ್ತದೆ. “ಪ್ರತಿಕೂಲ ವಾತಾವರಣದಲ್ಲಿ ಸಿಕ್ಕಿಬಿದ್ದ ಸಂದರ್ಭದಲ್ಲಿ ನಾವು ಎದುರಿಸುವ ಪ್ರಮುಖ ಸಮಸ್ಯೆಯೆಂದರೆ ನೀರಿನ ಕೊರತೆ. ಹಿಮ ಬೀಳುವಾಗ ನಮಗೆ ನೀರು ಹುಡುಕುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಶುದ್ಧವೋ, ಅಶುದ್ಧವೋ ಯಾವುದಾದರೂ ಸರಿಯೆಂದು ನೀಡು ಹುಡುಕತೊಡಗುತ್ತೇವೆ. ನಂತರ ಸಿಕ್ಕ ನೀರನ್ನು ಕುದಿಸಿ ಅದನ್ನು ಕುಡಿಯಲು ಯೋಗ್ಯವಾದ ನೀರನ್ನಾಗಿ ಮಾಡುತ್ತೇವೆ” ಎಂದು ತಾರಿಖ್‌ ಅಹ್ಮದ್‌ ಹೇಳುತ್ತಾರೆ.

Shakeel Ahmad (left) enjoying lunch on a sunny afternoon in Wayil, Ganderbal with his wife Tazeeb Bano, and daughters Nazia and Rutba. The wait is finally over and the family are packing up to move into the higher Himalayas
PHOTO • Muzamil Bhat
Shakeel Ahmad (left) enjoying lunch on a sunny afternoon in Wayil, Ganderbal with his wife Tazeeb Bano, and daughters Nazia and Rutba. The wait is finally over and the family are packing up to move into the higher Himalayas.
PHOTO • Muzamil Bhat

ಶಕೀಲ್ ಅಹ್ಮದ್ (ಎಡ) ತನ್ನ ಪತ್ನಿ ತಜೀಬ್ ಬಾನು ಮತ್ತು ಪುತ್ರಿಯರಾದ ನಾಜಿಯಾ ಮತ್ತು ರುತ್ಬಾ ಅವರೊಂದಿಗೆ ಗಂಡರ್ಬಾಲ್ ಪ್ರದೇಶದ ವಯಿಲ್ ಎನ್ನುವಲ್ಲಿ ಬಿಸಿಲಿನ ನಡುವೆ ಮಧ್ಯಾಹ್ನದ ಊಟವನ್ನು ಆನಂದಿಸುತ್ತಿದ್ದಾರೆ. ಅವರ ಕಾಯುವಿಕೆ ಅಂತಿಮವಾಗಿ ಮುಗಿದಿದ್ದು, ಕುಟುಂಬವು ಹಿಮಾಲಯದ ಎತ್ತರದ ಪ್ರದೇಶಕ್ಕೆ ಹೋಗಲು ತಮ್ಮ ವಸ್ತುಗಳನ್ನು ಸಿದ್ಧಪಡಿಸಿದೆ

The family of Shakeel are taking along their household items to set up a new home in Baltal before the final destination at Zero point, Zojilla.
PHOTO • Muzamil Bhat
Right: A Bakerwal hut ( dok ) in Lidwas is still under snow even in late summer. Lidwas is a grazing ground and also base camp for climbing to Mahadev peak –Srinagar’s highest mountain at 3,966 metres
PHOTO • Muzamil Bhat

ಜೊಜಿಲ್ಲಾದ ಝೀರೋ ಪಾಯಿಂಟ್‌ ಎನ್ನುವಲ್ಲಿರುವ ಅಂತಿಮ ಗಮ್ಯಸ್ಥಾನಕ್ಕೆ ಮೊದಲು ಬಾಲ್ತಾಲ್ ಎನ್ನುವಲ್ಲಿ ಹೊಸ ಮನೆಯನ್ನು ಸ್ಥಾಪಿಸಲು ಶಕೀಲ್ ಅವರ ಕುಟುಂಬವು ತಮ್ಮ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದೆ. ಬಲ: ಲಿಡ್ವಾಸ್ನಲ್ಲಿನ ಬಕರ್ವಾಲ್ ಗುಡಿಸಲು (ಡೋಕ್) ಬೇಸಿಗೆಯ ಕೊನೆಯಲ್ಲಿಯೂ ಹಿಮದಡಿಯಲ್ಲಿದೆ. ಲಿಡ್ವಾಸ್ 3,966 ಮೀಟರ್ ಎತ್ತರದಲ್ಲಿರುವ ಶ್ರೀನಗರದ ಅತ್ಯುನ್ನತ ಪರ್ವತವಾದ ಮಹಾದೇವ್ ಶಿಖರವನ್ನು ಏರಲು ಇರುವ ಮೂಲ ಶಿಬಿರವಾಗಿದೆ ಮತ್ತು ಇದು ಮೇವುಮಾಳವೂ ಹೌದು

ಇಲ್ಲಿನ ಇತರ ಬಕರ್ವಾಲ್‌ ಜನರು ಈ ವರ್ಷದ ಕೊನೆಯಲ್ಲಿ ಕಣಿವೆಯ ಎತ್ತರದ ಪ್ರದೇಶಗಳಿಗೆ ಹೋಗುವುದಾಗಿ ಹೇಳುತ್ತಾರೆ. “ನಾವು ಈ ವರ್ಷ ಮೇ 1ರಂದು [2023] ರಜೌರಿಯಿಂದ ನಮ್ಮ ಪ್ರಯಾಣ ಆರಂಭಿಸಿದೆವು. ಆದರೆ ಹಿಮ ಕರಗುವುದನ್ನು ಕಾಯುತ್ತಾ 20 ದಿನಗಳ ಕಾಲ ಪಹಲ್‌ಗಾಂವ್‌ ಎನ್ನುವಲ್ಲಿ ಸಿಕ್ಕಿಕೊಂಡೆವು” ಎಂದು ಅಬ್ದುಲ್ ವಹೀದ್ ಹೇಳುತ್ತಾರೆ. 35 ವರ್ಷದ ಈ ಬಕರ್ವಾಲ್‌ ಸಮುದಾಯದ ಸದಸ್ಯ ತನ್ನ ಸಮುದಾಯದ ಪಶುಪಾಲಕರ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಅವರು ಲಿಡ್ಡರ್ ಕಣಿವೆಯ ಮೂಲಕ ಕೊಲಾಹೋಯ್ ಹಿಮನದಿಯತ್ತ ಹೊರಟಿದ್ದರು.

ಈ ದಾರಿಯಲ್ಲಿ ಹಾದು ಹೋಗಲು ಸಾಮಾನ್ಯವಾಗಿ 20-30 ದಿನಗಳಷ್ಟು ಹಿಡಿಯುತ್ತದೆ. ಆದರೆ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ ಇದು ಬದಲಾಗಬಹುದು. “ನಾನು ನನ್ನೊಂದಿಗೆ ತಂದಿದ್ದ 40 ಕುರಿಗಳಲ್ಲಿ ಎಂಟು ಕುರಿಗಳನ್ನು ನಾನು ಈಗಾಗಲೇ ಕಳೆದುಕೊಂಡಿದ್ದೇನೆ" ಎಂದು 28 ವರ್ಷದ ಶಕೀಲ್ ಅಹ್ಮದ್ ಬರ್ಗಡ್ ಹೇಳುತ್ತಾರೆ. ಸೋನಾಮಾರ್ಗ್‌ ದಾರಿಯಲ್ಲಿ ಬಾಲ್ತಾಲ್‌ ಎನ್ನುವಲ್ಲಿ ಇನ್ನೂ ಹಿಮ ಕರಗದಿದ್ದ ಕಾರಣ ಅವರು ಮೇ 7ರಂದು ವೆಯಲ್‌ ಎನ್ನುವಲ್ಲಿ ಟೆಂಟ್‌ ಹಾಕಿದ್ದರು. ಬಾಲ್ತಾಲ್‌ ಪ್ರದೇಶದಿಂದ ಅವರು ಜೊಜಿಲಾದ ಝೀರೋ ಪಾಯಿಂಟ್ ಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಮುಂದಿನ ಮೂರು ತಿಂಗಳ ಕಾಲ ಇನ್ನೂ ಕೆಲವು ಬಕರ್ವಾಲ್‌ ಕುಟುಂಬಗಳೊಡನೆ ಜಾನುವಾರು ಕಾಯುತ್ತಾ ತಂಗಲಿದ್ದಾರೆ. "ನಾವು ಹೋಗಲಿರುವ ಪ್ರದೇಶವು ಹಿಮಪಾತಕ್ಕೆ ಗುರಿಯಾಗುವುದರಿಂದ ಇನ್ನೂ ಹೆಚ್ಚಿನ ಪ್ರಾಣಿಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ" ಎಂದು ಶಕೀಲ್ ಹೇಳುತ್ತಾರೆ.

ತನ್ನ ಸ್ನೇಹಿತರಲ್ಲಿ ಒಬ್ಬರಾದ ಫಾರೂಕ್ ಎನ್ನುವವರು ಕಳೆದ ವರ್ಷ ಎದುರಾದ ಪ್ರವಾಹವೊಂದರಲ್ಲಿ ತನ್ನ ಇಡೀ ಕುಟುಂಬ ಮತ್ತು ತನ್ನೆಲ್ಲಾ ಪ್ರಾಣಿಗಳನ್ನು ಕಳೆದುಕೊಂಡಿದ್ದನ್ನು ಶಕೀಲ್ ನೆನಪಿಸಿಕೊಳ್ಳುತ್ತಾರೆ.

ಅಕಾಲಿಕ ಮಳೆ ಮತ್ತು ಹಿಮ ಬೀಳುವಿಕೆಯನ್ನು ಎದುರುಗೊಳ್ಳುವುದು ಬಕರ್ವಾಲ್‌ ಸಮುದಾಯದವರಿಗೆ ಹೊಸದೇನೂ ಅಲ್ಲ. 2018ರಲ್ಲಿ ಮಿನಿಮಾರ್ಗದಲ್ಲಿ ಇದ್ದಕ್ಕಿದ್ದ ಹಾಗೆ ಹಿಮಪಾತ ಆರಂಭಗೊಂಡಿದ್ದನ್ನು ತಾರಿಖ್‌ ನೆನಪಿಸಿಕೊಳ್ಳುತ್ತಾರೆ. "ಅಂದು ಬೆಳಗ್ಗೆ ಎದ್ದಾಗ ಸುಮಾರು 2 ಅಡಿ ಹಿಮವನ್ನು ನೋಡಿ ನಮಗೆ ಆಘಾತವಾಯಿತು ಮತ್ತು ಡೇರೆಗಳ ಎಲ್ಲಾ ಪ್ರವೇಶದ್ವಾರಗಳು ಮುಚ್ಚಿಹೋಗಿದ್ದವು" ಎಂದು 37 ವರ್ಷದ ಈ ಕುರಿಗಾಹಿ ಹೇಳುತ್ತಾರೆ. ಸುರಿದಿದ್ದ ಹಿಮವನ್ನು ತೆಗೆದುಹಾಕಲು ಅವರ ಬಳಿ ಯಾವುದೇ ಉಪಕರಣಗಳು ಲಭ್ಯವಿಲ್ಲದ ಕಾರಣ, "ನಮ್ಮಲ್ಲಿದ್ದ ಪಾತ್ರೆಗಳನ್ನೇ ಬಳಸಿ ಹಿಮವನ್ನು ತೆಗೆದುಹಾಕಿದೆವು" ಎಂದು ಅವರು ಹೇಳುತ್ತಾರೆ.

ಅವರು ತಮ್ಮ ಸಾಕುಪ್ರಾಣಿಗಳನ್ನು ಗಮನಿಸಲು ಬರುವ ಹೊತ್ತಿಗಾಗಲೇ ಅವುಗಳಲ್ಲಿ ಹಲವು ಸತ್ತಿದ್ದವು. "ನಾವು ಕುರಿಗಳು, ಮೇಕೆಗಳು, ಕುದುರೆಗಳನ್ನು ಕಳೆದುಕೊಂಡೆವು ಮತ್ತು ನಾಯಿಗಳು ಸಹ [ಟೆಂಟ್] ಹೊರಗೆ ಉಳಿದಿದ್ದರಿಂದ ಭಾರಿ ಹಿಮಪಾತ ತಡೆಯಲು ಸಾಧ್ಯವಾಗದ ಕಾರಣ ಕೊಲ್ಲಲ್ಪಟ್ಟವು" ಎಂದು ತಾರಿಕ್ ನೆನಪಿಸಿಕೊಳ್ಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Muzamil Bhat

Muzamil Bhat is a Srinagar-based freelance photojournalist and filmmaker.

Other stories by Muzamil Bhat
Editor : Sanviti Iyer

Sanviti Iyer is Assistant Editor at the People's Archive of Rural India. She also works with students to help them document and report issues on rural India.

Other stories by Sanviti Iyer
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru