“ನನ್ನ ಹೆಸರು ಇಂದೂ, ಆದರೆ ನನ್ನ ಮೊದಲ ಆಧಾರ್ ಕಾರ್ಡ್‌ನಲ್ಲಿ ಅದು ‘ಹಿಂದೂ’ ಎಂದಾಗಿತ್ತು. ಹಾಗಾಗಿ ನಾನು ಹೊಸ ಕಾರ್ಡ್‌ಗೆ (ಹೆಸರಿನ ತಿದ್ದುಪಡಿ) ಅರ್ಜಿ ಸಲ್ಲಿಸಿದೆ, ಆದರೆ ಅವರು ಅದನ್ನು ಮತ್ತೆ 'ಹಿಂದೂ' ಎಂದು ಮಾಡಿದ್ದಾರೆ.

ಇದರಿಂದಾಗಿ ಸರಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ದಲಿತ ಬಾಲಕಿ ಜೆ. ಇಂದೂ ಹಾಗೂ ಇತರೆ ನಾಲ್ವರು ವಿದ್ಯಾರ್ಥಿಗಳಿಗೆ ಈ ವರ್ಷ ಶಿಷ್ಯವೇತನ ಸಿಗುವುದಿಲ್ಲ. ಇದಕ್ಕೆ ಕಾರಣ ಆಧಾರ್ ಕಾರ್ಡ್‌ನಲ್ಲಿ ಅವರ ಹೆಸರಿನ ಕಾಗುಣಿತ ಸರಿಯಾಗಿಲ್ಲ ಎನ್ನುವುದು. ಇನ್ನುಳಿದ ನಾಲ್ವರು ವಿದ್ಯಾರ್ಥಿಗಳಲ್ಲಿ ಮೂವರು ಸಿಂಧೂವಿನಂತೆಯೇ ದಲಿತರು. ಓರ್ವ ವಿದ್ಯಾರ್ಥಿ ಮುಸ್ಲಿಂ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಅತ್ಯಂತ ಬಡ ಮಂಡಲಗಳಲ್ಲಿ ಅಮಡಗೂರ್ ಒಂದಾಗಿದೆ.

ತೊಂದರೆ ಪ್ರಾರಂಭವಾದಾಗ, ಜಾಗರುಸುಪಲ್ಲಿಯಲ್ಲಿನ ಇಂದೂವಿನ ಶಾಲೆ ಮತ್ತು ಕುಟುಂಬವು ಅವಳಿಗೆ ಹೊಸ ಕಾರ್ಡ್ ಮಾಡಿಸಲು ಪ್ರಯತ್ನಿಸಿದರು. ಆಗ ಅವಳ ಜನ್ಮ ದಿನಾಂಕ ಮತ್ತು ಹೊಸ ಭಾವಚಿತ್ರವನ್ನು ಮರು ನೋಂದಾಯಿಸಿ ಹೊಸ ಆಧಾರ್ ಕಾರ್ಡ್ ಅನ್ನು ಸಹ ನೀಡಲಾಯಿತು. ಆದರೆ ಈ ಆಧಾರ್ ಕಾರ್ಡ್‌ನಲ್ಲಿಯೂ ಅವಳ ಹೆಸರು 'ಹಿಂದೂ' ಎಂದೇ ಉಳಿದಿತ್ತು. ಈ ಕಾರಣದಿಂದಾಗಿ, ಇಂದೂವಿನ ಶಾಲೆಯು ಅವಳ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಸರಿಯಾದ ಮತ್ತು ಹೊಂದಾಣಿಕೆಯ ಹೆಸರಿನೊಂದಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇತರ ನಾಲ್ವರು ವಿದ್ಯಾರ್ಥಿಗಳು, ಗಂಡು ಮಕ್ಕಳು, ಅವರು ಕೂಡಾ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಆಂಧ್ರಪ್ರದೇಶದಲ್ಲಿ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಐದನೇ ತರಗತಿಯಿಂದ ವಾರ್ಷಿಕ ರೂ 1,200 ಸ್ಕಾಲರ್‌ಶಿಪ್ವನ್ನು ಪಡೆಯುತ್ತಾರೆ. ಅಮಡಗೂರಿನ ಈ ಶಾಲೆಯಲ್ಲಿ ಐದನೇ ತರಗತಿಯ ಒಟ್ಟು 23 ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಮಾತ್ರ ಮೇಲ್ಜಾತಿಗೆ ಸೇರಿದವರು. ಸಾಮಾನ್ಯವಾಗಿ ಇಂದೂ ಮತ್ತು ಇತರ 21 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ದ ಹಣವನ್ನು ಫೆಬ್ರವರಿಯಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಆದರೆ ಈ ಐದು ಮಕ್ಕಳಿಗೆ ಮಾತ್ರ ಬ್ಯಾಂಕ್ ಖಾತೆ ಇಲ್ಲ.

ಈ ಶಾಲೆಯಲ್ಲಿ ಓದುತ್ತಿರುವ ಬಹುತೇಕ ಮಕ್ಕಳ ಪಾಲಕರು ಸಣ್ಣ ರೈತರು ಅಥವಾ ಕೃಷಿ ಕೂಲಿಕಾರರಾಗಿದ್ದು, ಕೆಲಸ ಅರಸಿ ಬೆಂಗಳೂರಿಗೆ ವಲಸೆ ಹೋಗುತ್ತಾರೆ. ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ರೋಸಯ್ಯ ಅವರ ಪ್ರಕಾರ, ಸ್ಕಾಲರ್‌ಶಿಪ್ ಹಣವನ್ನು ಪೋಷಕರು ತಮ್ಮ ಮಕ್ಕಳಿಗೆ "ಸರ್ಕಾರ ನೀಡದ ಪೆನ್ನುಗಳು, ಬಿಡಿ ಪುಸ್ತಕಗಳು ಮತ್ತು ಕೆಲವೊಮ್ಮೆ ಬಟ್ಟೆಗಳನ್ನು" ಖರೀದಿಸಲು ಬಳಸುತ್ತಾರೆ. ಈ ಹೊಸ ವರ್ಷ ಇಂದೂ ಮತ್ತು ಅವಳ ನಾಲ್ವರು ಸಹಪಾಠಿಗಳಿಗೆ ಒಳ್ಳೆಯ ವರ್ಷವಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Rahul M.

Rahul M. is an independent journalist based in Andhra Pradesh, and a 2017 PARI Fellow.

Other stories by Rahul M.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru