ಮತ್ತು ಅವರ ದಣಿದ ಕಣ್ಣುಗಳು ಏನನ್ನು ನೋಡುತ್ತವೆ?
ಚದುರಿಹೋದ ಕನಸುಗಳು!
ಛಿದ್ರಗೊಂಡ ಸ್ವರ್ಗದ ಯೋಜನೆ!

(ಶ್ರೀರಂಗಂ ಶ್ರೀನಿವಾಸರಾಯರ 1935ರ 'ಪರಾಜಿತುಲು' ಕವಿತೆಯ ಅನುವಾದ)

ಬೆಳಿಗ್ಗೆ 5:00 ಗಂಟೆಗೆ, ಮನೆ ನೆಲಸಮ ಮಾಡುವ ತಂಡವು ಬಂದಿಳಿಯಿತು. "ನಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಳ್ಳಲು ಬಿಡದೆ ಅವರು ನಮ್ಮನ್ನು ಮನೆಯಿಂದ ಹೊರಹಾಕಿದರು," ಎಂದು ಆ ಪ್ರದೇಶದ ಕೂಲಿ ಕಾರ್ಮಿಕರಾದ ಡಿ. ಗಂಗುಲಮ್ಮ ಹೇಳುತ್ತಾರೆ. ಅವರು ಆಂಧ್ರಪ್ರದೇಶದ ಅನಂತಪುರ ನಗರದಲ್ಲಿರುವ ವಿಜಯನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. "ಅವರು ನಮ್ಮ ಬದುಕನ್ನು ಬೀದಿಗೆ ಎಸೆದಿದ್ದಾರೆ."

ಎಂಟು ಬುಲ್ಡೋಜರುಗಳು ಮತ್ತು ಎಂಟು ಮಹಿಳಾ ಪೇದೆಗಳು ಸೇರಿದಂತೆ ಸುಮಾರು 200 ಪೊಲೀಸ್ ಸಿಬ್ಬಂದಿ ಬೆಳಿಗ್ಗೆ 9.00ರ ಸುಮಾರಿಗೆ ಸ್ಥಳದಲ್ಲಿ ಹಾಜರಿದ್ದರು ಎಂದು ನಿವಾಸಿಗಳು ಹೇಳುತ್ತಾರೆ. ನಂತರ ಅವರು 300 ಗುಡಿಸಲುಗಳಲ್ಲಿ ಸುಮಾರು 150 ಗುಡಿಸಲುಗಳನ್ನು ನೆಲಸಮಗೊಳಿಸಿದರು. ಇವುಗಳಲ್ಲಿ ಅನೇಕ ಮನೆಗಳನ್ನು ಕಳೆದ 3-4 ವರ್ಷಗಳಲ್ಲಿ ನಿರ್ಮಿಸಲಾಗಿದೆ. ಕಾಲೊನಿನಲ್ಲಿ ಬಹಳ ಬಡ ಕುಟುಂಬಗಳು ವಾಸಿಸುತ್ತಿದ್ದವು.

ನಾಶವಾದ ಮನೆಗಳ ಹಿಂದೆ, ಮುರಿದ ಪ್ಲಾಸ್ಟಿಕ್ ಬಕೆಟುಗಳು, ಹರಿದ ಪುಸ್ತಕಗಳು, ಒಡೆದ ದೇವರ ಚಿತ್ರಗಳು, ಕಲೆಯಾದ ಬಟ್ಟೆಗಳನ್ನು ಎಲ್ಲೆಂದರಲ್ಲಿ ಹರಡಲಾಗಿದೆ.

PHOTO • Rahul M.

ವೃತ್ತಿಯಲ್ಲಿ ದರ್ಜಿಯಾಗಿರುವ ಮೊಹಮ್ಮದ್ ಹುಸೇನ್ ತನ್ನ ಐದು ವರ್ಷದ ಮಗಳು ಅಲಿಶಾಳೊಂದಿಗೆ ತನ್ನ ಮುರಿದ ಮನೆಯ ಮುಂದೆ ನಿಂತಿರುವುದು

ತಮ್ಮ ಮನೆಗಳನ್ನು ಕಳೆದುಕೊಂಡ ಆರು ಕುಟುಂಬಗಳು ಆಗಸ್ಟ್ 3ರಂದು, ಎಂದರೆ ತಮ್ಮ ಮನೆಗಳನ್ನು ನೆಲಸಮ ಮಾಡುವ ಒಂದು ವಾರದ ಮೊದಲು ಕಾಲೋನಿಗೆ ಸ್ಥಳಾಂತರಗೊಂಡಿದ್ದವು. ಆಕೆಯ ಪತಿ ದಿನಗೂಲಿ ಕಾರ್ಮಿಕ. ಮತ್ತು ಅವರು ಮನೆಯಲ್ಲೇ ಟೈಲರಿಂಗ್‌ ಮಾಡುತ್ತಾರೆ, ಇಬ್ಬರೂ ಅನಂತಪುರದ ಭವಾನಿ ಕಾಲೋನಿಯಿಂದ ವಿಜಯನಗರ ಕಾಲೋನಿಗೆ ಸ್ಥಳಾಂತರಗೊಂಡರು. "ನಾವು ಕಳೆದ ವಾರವಷ್ಟೇ ಇಲ್ಲಿಗೆ ಸ್ಥಳಾಂತರಗೊಂಡಿದ್ದೆವು" ಎಂದು ಮನೆಯಿಂದ ಟೈಲರಿಂಗ್ ಮಾಡುವ ಪರ್ವೀನ್ ಭಾನು ಹೇಳುತ್ತಾರೆ; ಆಕೆಯ ಪತಿ ದಿನಗೂಲಿ ಕಾರ್ಮಿಕ. ಇಬ್ಬರೂ ಅನಂತಪುರದ ಭವಾನಿ ಕಾಲೋನಿಯಿಂದ ವಿಜಯನಗರ ಕಾಲೋನಿಗೆ ಸ್ಥಳಾಂತರಗೊಂಡಿದ್ದರು . ಕಡಿಮೆ ಬಾಡಿಗೆಯ ಕಾರಣಕ್ಕೆ ಅನಂತಪುರದ ಇತರ ಕಡಿಮೆ ಆದಾಯದ ಹೊಂದಿರುವ ಹಲವಾರು ಇತರ ಕುಟುಂಬಗಳು ಇಲ್ಲಿಗೆ ಬಂದಿವೆ. "ಮತ್ತು ಅವರು ಬಂದು ನಮ್ಮ ಮನೆಗಳನ್ನು ನೆಲಸಮ ಮಾಡಿದರು," ಎಂದು ಪರ್ವೀನ್ ಹೇಳುತ್ತಾರೆ. "ನಾವು ಮನೆಗೆ ಅಡಿಪಾಯ ಹಾಕುವ ಮೊದಲು ಅವರು ನಮಗೆ ತಿಳಿಸಬಹುದಿತ್ತು."

ವಿಜಯನಗರ ಕಾಲೋನಿಯ ಹೆಚ್ಚಿನ ನಿವಾಸಿಗಳು ದಲಿತರು, ಪರಿಶಿಷ್ಟ ಪಂಗಡಗಳು ಮತ್ತು ಮುಸ್ಲಿಮರು; ಅವರಲ್ಲಿ ಹೆಚ್ಚಿನವರು ಮನೆಗೆಲಸ ಮಾಡುವವರು, ಕಾರ್ಮಿಕರು, ಹಣ್ಣು ಅಥವಾ ಹೂವು ಮಾರಾಟಗಾರರಾಗಿ ಕೆಲಸ ಮಾಡುತ್ತಾರೆ, ಅಥವಾ ಅವರು ಇತರ ಸಣ್ಣ ವ್ಯವಹಾರಗಳನ್ನು ಮಾಡುತ್ತಾರೆ. ಮಹಮದ್ ಹುಸೇನ್ ಅವರಂತಹ ಅನೇಕರು ಅನಂತಪುರ ಜಿಲ್ಲೆಯ ಇತರ ಭಾಗಗಳಿಂದ ವಲಸೆ ಬಂದವರು. ಕೃಷಿ ಮತ್ತು ನೇಯ್ಗೆ ಎಂಬ ಎರಡು ವಲಯಗಳ ಗ್ರಾಹಕರ ಮೇಲೆ ಅವಲಂಬಿತವಾಗಿದ್ದ ಹಳ್ಳಿಯಲ್ಲಿನ ತನ್ನ ವ್ಯಾಪಾರವು ಕುಸಿಯಲು ಪ್ರಾರಂಭಿಸಿದ ನಂತರ, ಟೈಲರ್ ಹುಸೇನ್ ಸುಮಾರು 20 ವರ್ಷಗಳ ಹಿಂದೆ ಧರ್ಮಾವರಂನಿಂದ ಇಲ್ಲಿಗೆ ಬಂದರು. "ನಾವು ನಮ್ಮ ದುಡಿಮೆಗಾಗಿ ಇಲ್ಲಿಗೆ ಬಂದಿದ್ದೇವೆ," ಎಂದು ಅವರು ಹೇಳುತ್ತಾರೆ. ಅವರು ಸಹ ಮೂರು ವರ್ಷಗಳ ಹಿಂದೆ ನಿರ್ಮಿಸಿದ ತನ್ನ ಮನೆಯನ್ನು ಆಗಸ್ಟ್ 3ರಂದು ಕಳೆದುಕೊಂಡರು.

PHOTO • Rahul M.

ಅನಂತಪುರ ಪಟ್ಟಣದ ಹೊರವಲಯದಲ್ಲಿರುವ ವಿಜಯನಗರ ಕಾಲೋನಿಯ ನಿವಾಸಿಗಳು ಮುಂಜಾನೆ ಮನೆ ನೆಲಸಮ ಮಾಡುವ ಸಿಬ್ಬಂದಿಗಳನ್ನು ಕಂಡು ಆಶ್ಚರ್ಯಚಕಿತರಾದರು

ವಿಜಯನಗರ ಕಾಲನಿಯೇ ಸುಮಾರು ಮೂರು ದಶಕಗಳಷ್ಟು ಹಳೆಯದು. ನೆಲಸಮಗೊಂಡ ಮನೆಗಳು, ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾದವು, ಹಲವು ವರ್ಷಗಳ ಮಳೆ ಕೊರತೆಯ ನಂತರ ಬತ್ತಿಹೋಗಿರುವ ಬುಕ್ಕರಾಯಸಮುದ್ರಂ ಮತ್ತು ಚಿಕ್ಕವಾಡಿಯಾಲು ಚೆರುವು ಎಂಬ ಎರಡು ಸರೋವರಗಳಿದ್ದ ನೆಲದ ಮೇಲಿದ್ದವು.

ಜೂನ್ 2014ರಲ್ಲಿ ಹೊಸ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಧಿಕಾರಕ್ಕೆ ಬಂದಾಗ, ವಿಜಯನಗರ ಕಾಲೋನಿಯ ಈಗಿನ ವಸತಿರಹಿತ ನಿವಾಸಿಗಳು ಹೇಳುತ್ತಾರೆ, ಸ್ಥಳೀಯ ಟಿಡಿಪಿ ಕಾರ್ಪೊರೇಟರ್ ಆರ್ ಉಮಾಮಹೇಶ್ವರ್ ಅವರು ಇಲ್ಲಿ ನಾವು ಮನೆಗಳನ್ನು ನಿರ್ಮಿಸಬಹುದು ಎಂದು ಭರವಸೆ ನೀಡಿದರು. ಅವರು ಮನೆ ಕಟ್ಟಿದರು, ಮತ್ತು ಅವರಿಗೆ ವಿದ್ಯುತ್ ಮೀಟರುಗಳನ್ನು ಸಹ ನೀಡಲಾಯಿತು, ಮತ್ತು ಅವರು ವಿದ್ಯುತ್ ಬಿಲ್ಲುಗಳನ್ನು ಪಾವತಿಸುತ್ತಿದ್ದರು.

ಆದಾಗ್ಯೂ, ಕಂದಾಯ ಅಧಿಕಾರಿಗಳು ನೀಡಿದ ನೋಟಿಸಿನಲ್ಲಿ ಜೂನ್ 8, 2017ರಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾದ ಅರ್ಜಿ ಮತ್ತು ಜುಲೈ 5, 2001ರ ವಿಶೇಷ ರಜಾ ಪೀಠದ ಅರ್ಜಿ ಮತ್ತು ಎರಡು ಮೆಮೊಗಳನ್ನು ಉಲ್ಲೇಖಿಸಲಾಗಿದೆ. ಕೆರೆ ಜಾಗದಲ್ಲಿ ನಿರ್ಮಿಸಲಾದ ಮನೆಗಳನ್ನು ನೆಲಸಮಗೊಳಿಸಲು ಇದೇ ಕಾರಣ ಎಂದು ಅವರು ಹೇಳುತ್ತಾರೆ. "ಇದು ಕೆರೆ" ಎಂದು ನೆಲಸಮ ಕಾರ್ಯಾಚರಣೆಯ ಮೇಲ್ವಿಚಾರಕ ಮತ್ತು ಅನಂತಪುರದ ವಿಭಾಗೀಯ ಕಂದಾಯ ಅಧಿಕಾರಿ ಎ. ಮಲೋಲಾ ಹೇಳುತ್ತಾರೆ. ಅವರ ಪ್ರಕಾರ, ಹಲವಾರು ನ್ಯಾಯಾಲಯಗಳಲ್ಲಿ ಅತಿಕ್ರಮಣಗೊಂಡ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಆದೇಶಿಸಿತ್ತು. ಅವರು ತಮ್ಮ ಹಿರಿಯರ ಆದೇಶದಂತೆ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. "ಕೆರೆಯ ಸ್ಥಳವನ್ನು ಯಾರಾದರೂ ಅತಿಕ್ರಮಿಸಿದರೆ, ನೀವು ಒಪ್ಪುತ್ತೀರಾ?" ಎಂದು ಅವರು ಕೇಳುತ್ತಾರೆ ಮತ್ತು ಕೇವಲ 10-15 ಮನೆಗಳಲ್ಲಿ ಮಾತ್ರ ಜನರಿದ್ದರು, “ಉಳಿದ ಮನೆಗಳು ಖಾಲಿಯಿದ್ದವು.”

PHOTO • Rahul M.

ಎಡ: ನೆಲಸಮಗೊಳಿಸಲು ಪ್ರಾರಂಭಿಸುತ್ತಿದ್ದಂತೆ ಮನೆಗಳ ಮೇಲೆ ಅಂಟಿಸಲಾಗಿದೆ ಎಂದು ಹೇಳಲಾದ ನೋಟಿಸ್. ಬಲ: ಶಾಲೆಯ ನೋಟ್ ಬುಕ್ ಅವಶೇಷಗಳ ಅಡಿಯಲ್ಲಿ ಬಿದ್ದಿರುವುದು

ಆದಾಗ್ಯೂ, ಕಾಲನಿ ನಿವಾಸಿಗಳ ಪ್ರಕಾರ, ಅವರ ಮನೆಗಳನ್ನು ನೆಲಸಮ ಮಾಡುವ ಮೊದಲು ಅವರಿಗೆ ಸರಳ ಮಾಹಿತಿಯನ್ನು ಸಹ ನೀಡಲಾಗಿಲ್ಲ. "[ಅದೇ ದಿನ ಬೆಳಿಗ್ಗೆ] ಬೆಳಿಗ್ಗೆ ಮನೆಗಳಿಗೆ ನೋಟಿಸ್‌ ಅಂಟಿಸಲಾಯಿತು. ಪೊಲೀಸರು ಜನರನ್ನು ದೂರ ತಳ್ಳುತ್ತಿದ್ದರು. ಆಗ ನಾನು ಅಲ್ಲಿಂದ ಓಡಿದೆ," ಎಂದು ಸ್ಥಳೀಯ ಜಿಲ್ಲಾ ಪರಿಷತ್ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾದ ಸುಮಾರು 12 ವರ್ಷದ ಬಿ. ಅನಿಲ್ ಕುಮಾರ್ ಹೇಳುತ್ತಾನೆ.

ಇತರರು ಸಹ ಈ ಸರಣಿ ಘಟನೆಗಳ ಬಗ್ಗೆ ಮಾತನಾಡುತ್ತಾರೆ. ಸರ್ಕಾರದ ನೋಟಿಸುಗಳ ಮೇಲೆ ಜುಲೈ 25ರ ದಿನಾಂಕವಿದೆ ಮತ್ತು ಅವರ ಮನೆಗಳನ್ನು ನೆಲಸಮ ಮಾಡುವ ಕೆಲವೇ ನಿಮಿಷಗಳ ಮೊದಲು ಹಾಕಲಾಗಿದೆ ಎಂದು ಅವರು ಹೇಳುತ್ತಾರೆ. "ಅವರು ಈ ನೋಟೀಸುಗಳನ್ನು ನಮ್ಮ ಕಣ್ಣ ಮುಂದೆ ಅಂಟಿಸುತ್ತಿದ್ದರು ಮತ್ತು ನಮ್ಮ ಮನೆಗಳನ್ನು ತರಿದು ಹಾಕುತ್ತಿದ್ದರು. ನಮ್ಮಲ್ಲಿ ಕೆಲವರು ಇದನ್ನು ನಮ್ಮ ಮೊಬೈಲುಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದರು ಮತ್ತು ಅವರು ನಮ್ಮ ಫೋನುಗಳನ್ನು ಕಸಿದುಕೊಂಡರು," ಎಂದು ವಿಜಯನಗರ ಕಾಲೋನಿಯಲ್ಲಿ ಹುಟ್ಟಿ ಬೆಳೆದ ಪಿ. ಜಗದೀಶ್ ಹೇಳುತ್ತಾರೆ, ಆದರೆ ಕೆಲವು ವರ್ಷಗಳ ಹಿಂದೆಯಷ್ಟೇ ಅವರು ಇಲ್ಲಿಂದ ತಮ್ಮ ಸ್ವಂತ ಮನೆಗೆ ಸ್ಥಳಾಂತರಗೊಂಡಿದ್ದರು.

ಸ್ಥಳೀಯ ಮುನ್ಸಿಪಲ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಅನಿಲ್ ಕುಮಾರ್, 'ಪೊಲೀಸರು ಜನರನ್ನು ದೂರ ತಳ್ಳುತ್ತಲೇ ಇದ್ದರು. ನಾನು ಅಲ್ಲಿಂದ ಓಡಿಹೋದೆ'

"ಹಂದಿಗಳಿಗೂ ಅವುಗಳನ್ನು ಬೇರೆಡೆ ಸ್ಥಳಾಂತರಿಸುವ ಮೊದಲು (ಅಧಿಕಾರಿಗಳು ರಾಜ್ಯದ ಆರೋಗ್ಯ ಅಭಿಯಾನದ ಸಮಯದಲ್ಲಿ) ಸ್ವಲ್ಪ ಸಮಯವನ್ನು ನಿಗದಿಪಡಿಸುತ್ತಾರೆ," ಎಂದು ಅನಂತಪುರ ಪಟ್ಟಣದಲ್ಲಿ ಕಾರ್ಮಿಕರಾಗಿ ಜೀವನೋಪಾಯವನ್ನು ಸಂಪಾದಿಸುವ 28 ವರ್ಷದ ಎಸ್. ಪರ್ವೀನ್ ಹೇಳುತ್ತಾರೆ. 160 ರೂ.ಗಳ ದೈನಂದಿನ ಕೂಲಿ ಅವರ ಸಂಪಾದನೆ, ಅದಕ್ಕಾಗಿ ಅವರು 150 ಸಿಮೆಂಟ್ ಇಟ್ಟಿಗೆಗಳನ್ನು ತಯಾರಿಸಬೇಕು, ಪ್ರತಿಯೊಂದೂ 20 ಕಿಲೋಗಳಷ್ಟು ತೂಗುತ್ತದೆ. ಪರ್ವೀನ್ ಅವರ ಪತಿ ನಗರದಲ್ಲಿ ಗಾರೆ ಕೆಲಸ ಮಾಡುತ್ತಾರೆ. ಅವರ ಕುಟುಂಬವು ಒಂದು ವರ್ಷದ ಹಿಂದೆ ಮನೆಯನ್ನು ನಿರ್ಮಿಸಿತು, ಅವರು ಸದಸ್ಯರಾಗಿರುವ ಉಳಿತಾಯ ಗುಂಪಿನಿಂದ ಸುಮಾರು 3 ಲಕ್ಷ ರೂ.ಗಳ ಸಾಲವನ್ನು ಪಡೆದು; ಅವರು ಖಾಸಗಿ ಲೇವಾದೇವಿಗಾರರಿಗೂ ಹಣವನ್ನು ನೀಡಬೇಕಾಗಿದೆ. ನಾಲ್ಕು ಜನರ ಕುಟುಂಬವು, ಸುಮಾರು 12,000 ರೂ.ಗಳ ಮಾಸಿಕ ಆದಾಯವನ್ನು ಹೊಂದಿದ್ದು, ಪ್ರತಿ ತಿಂಗಳು ಸಾಲದ ಮೇಲೆ 7,000 ರೂ.ಗಳನ್ನು ಬಡ್ಡಿಯಾಗಿ ಪಾವತಿಸುತ್ತದೆ. ಇದೆಲ್ಲವನ್ನು ಸಂಭಾಳಿಸಲು ಅವರು ಮತ್ತೆ ಮತ್ತೆ ಸಾಲ ಪಡೆಯುತ್ತಾರೆ.

PHOTO • Rahul M.

ಎಸ್. ಪರ್ವೀನ್ ಒಂದು ವರ್ಷದ ಹಿಂದೆ ತನ್ನ ಪತಿಯೊಂದಿಗೆ ಸೇರಿ ನಿರ್ಮಿಸಿದ ಮನೆಯ ಅವಶೇಷಗಳ ನಡುವೆ ನಿಂತಿದ್ದಾರೆ

ಮನೆ ನೆಲಸಮದ ನಂತರ, ವಿಚಲಿತರಾದ ಪರ್ವೀನ್ ಕಲೆಕ್ಟರ್ ಕಚೇರಿಗೆ ಹೋಗಿ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು - ಆದರೆ ಪೊಲೀಸರು ಅವರನ್ನು ತಡೆದರು. "ಅವರು ಮೊದಲೇ ನಮಗೆ ಮಾಹಿತಿ ನೀಡಿದ್ದರೆ, ನಾವು ಕನಿಷ್ಠ ಬಾಗಿಲುಗಳು ಮತ್ತು ಕಿಟಕಿಗಳನ್ನು ಮಾರಾಟ ಮಾಡಬಹುದಿತ್ತು..." ಎಂದು ಅವರು ಹೇಳುತ್ತಾರೆ. ಒಂದು ಲೋಹದ ಸೇಫ್, ಬಟ್ಟೆಗಳು ಮತ್ತು ಕೆಲವು ಪಾತ್ರೆಗಳು ಸೇರಿದಂತೆ ಅವಶೇಷಗಳಲ್ಲಿ ಅವರು ಸಂಗ್ರಹಿಸಿಟ್ಟಿದ್ದ ಕೆಲವು ವಸ್ತುಗಳನ್ನು ಕುಟುಂಬವು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಆದರೆ ಫ್ಯಾನುಗಳು, ಲೈಟುಗಳು, ಪಾತ್ರೆ ಮತ್ತು ಇತರ ವಸ್ತುಗಳು ಹಾನಿಗೀಡಾಗಿವೆ.

ವೀಡಿಯೊ ನೋಡಿ: 'ನನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡರೆ ಅವರನ್ನು ತಡೆಯಬಹುದೆಂದು ನಾನು ಭಾವಿಸಿದೆ, ಆದರೆ ... ವಿಚಲಿತರಾದ ಗಂಗುಲಮ್ಮ ಹೇಳುತ್ತಾರೆ, ಇತರ ನಿವಾಸಿಗಳೂ ನೆಲಸಮ ಸಿಬ್ಬಂದಿಯ ಕಠಿಣತೆಯ ಬಗ್ಗೆ ಮಾತನಾಡುತ್ತಾರೆ

ಗಂಗುಲಮ್ಮ ಕೂಡ ಸೀಮೆಎಣ್ಣೆ ಸುರಿದುಕೊಂಡರು. "ಹೀಗೆ ಮಾಡುವ ಮೂಲಕ ಅವರನ್ನು ತಡೆಯಬಹುದು ಎಂದು ನಾನು ಭಾವಿಸಿದೆ... ನಾನು ಬೆಂಕಿ ಹಚ್ಚಿಕೊಂಡರೆ ಅವರು ನಮ್ಮ ಮನೆಗಳನ್ನು ತೊರೆಯುತ್ತಾರೆ ಎಂದು ನಾನು ಭಾವಿಸಿದ್ದೆ," ಎಂದು ಅವರು ಹೇಳುತ್ತಾರೆ. ಆದರೆ ಪೊಲೀಸರು ಅವರ ಆತ್ಮಹತ್ಯೆ ಪ್ರಯತ್ನವನ್ನು ನಿಲ್ಲಿಸಿದರು, ಮತ್ತು "ಅವರು ನಮ್ಮ ಮನೆಗಳನ್ನು ನೆಲಸಮ ಮಾಡುತ್ತಲೇ ಇದ್ದರು," ಎಂದು ಅವರು ಹೇಳುತ್ತಾಳೆ.

ಅಷ್ಟೇ ಅಲ್ಲ, ಆ ದಿನ ಬೆಳಿಗ್ಗೆ ಅಧಿಕಾರಿಗಳು ಮತ್ತು ಪೊಲೀಸರು ತಮ್ಮನ್ನು ದೈಹಿಕವಾಗಿ ಹಿಂಸಿಸಿದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ನಿವಾಸಿಗಳು ಆರೋಪಿಸುತ್ತಾರೆ - ಕಂದಾಯ ವಿಭಾಗೀಯ ಅಧಿಕಾರಿ ಮಲೋಲಾ ಅವರು ತಮ್ಮ ಇಲಾಖೆಯ ಸಿಬ್ಬಂದಿ ಅಂತಹ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಒತ್ತಿ ಹೇಳುತ್ತಾರೆ. "ನನ್ನನ್ನು ತಳ್ಳಲಾಯಿತು ಮತ್ತು ನಾನು ಮನೆಯ ಹೊರಗಿನ ನೀರಿನ ಗುಂಡಿಗೆ ಬಿದ್ದೆ," ಎಂದು ಗೃಹಿಣಿ ಬಿ. ಶೋಭಾ ಹೇಳುತ್ತಾರೆ, ಅವರ ಪತಿ ರಸಗೊಬ್ಬರ ವ್ಯವಹಾರವನ್ನು ನಡೆಸುತ್ತಿದ್ದಾರೆ. ಶೋಭಾ ಗರ್ಭಿಣಿ, ಮತ್ತು ಅವರು ಬಿದ್ದ ಸಮಯದಲ್ಲಿ, ಅವರ ನೆರೆಹೊರೆಯವರು, ಆಕೆಯ ಮೂರು ವರ್ಷದ ಮಗಳು ಗೀತಿಕಾ ಅವರ ತೋಳುಗಳಲ್ಲಿದ್ದಳು ಎಂದು ಹೇಳುತ್ತಾರೆ.

PHOTO • Rahul M.

ನೆಲಸಮಗೊಳಿಸುವ ಸಿಬ್ಬಂದಿ ಕಾಲೋನಿಯನ್ನು ಬುಲ್ಡೋಜ್ ಮಾಡುವಾಗ ಕಾಲನಿಯ ಹಿರಿಯ ಮಹಿಳೆಯನ್ನು ಸಹ ಮನೆಯಿಂದ ಹೊರ ಹಾಕಿದರು

ನೆಲಸಮವಾದ ಒಂದು ವಾರಕ್ಕೂ ಹೆಚ್ಚು ಕಾಲದ ನಂತರವೂ, ಇಲ್ಲಿನ ಅನೇಕರು ಇನ್ನೂ ಆಘಾತದಲ್ಲಿದ್ದಾರೆ, ಬುಲ್ಡೋಜರುಗಳು ತಮ್ಮ ಮನೆಗಳನ್ನು ನಾಶಪಡಿಸಿದ ಚಿತ್ರಗಳು ಅವರ ಕಣ್ಣಲ್ಲಿ ಇನ್ನೂ ಸ್ಪಷ್ಟವಾಗಿವೆ. "ನಾನು ಎರಡು ಬಾರಿ ಮೂರ್ಛೆ ಹೋದೆ. ನಮ್ಮಲ್ಲಿ ಅನೇಕ ಚಿಂತೆಗಳಿವೆ [ಈಗ], ನಮ್ಮಲ್ಲಿ ಸಾಕಷ್ಟು ನೀರು ಅಥವಾ ಆಹಾರವಿಲ್ಲ," ಎಂದು ಪಿ. ಭಾರತಿ ಹೇಳುತ್ತಾರೆ. "ನನ್ನ ಮಕ್ಕಳು ಶಾಲೆಗೆ ಹೋಗಿ ಒಂದು ವಾರವಾಗಿದೆ. ನಮಗೆ ತಿನ್ನಲು ಏನೂ ಇಲ್ಲದಿದ್ದಾಗ ನಾವು ಅವರನ್ನು ಹೇಗೆ ಕಳುಹಿಸಬಹುದು?

ಕಾಲೋನಿಯ ಜನರು ಈಗ ತಮ್ಮ ಮುರಿದ ಮನೆಗಳ ಪಕ್ಕದಲ್ಲಿ ಅಡುಗೆ ಮಾಡುತ್ತಿದ್ದಾರೆ, ತಿನ್ನುತ್ತಿದ್ದಾರೆ ಮತ್ತು ಮಲಗುತ್ತಿದ್ದಾರೆ. ನೆಲಸಮಗೊಳಿಸಿದ ದಿನ, ಕೆಲವು ಸ್ಥಳೀಯರು ಒಟ್ಟುಗೂಡಿ ಪೆಂಡಾಲ್ ಹಾಕಿದರು; ಸ್ವಲ್ಪ ಸಮಯದ ನಂತರ, ರಾತ್ರಿಯಲ್ಲಿ ಮಳೆಯಾದ ಕಾರಣ, ಅವರು ತಾತ್ಕಾಲಿಕ ಆಶ್ರಯವನ್ನು ಸಹ ನಿರ್ಮಿಸಿದರು – ಬಿದಿರಿನ ಕಂಬ ಮತ್ತು ಸಿಮೆಂಟ್‌ ಶೀಟು ಬಳಸಿ.  ಸಾಮೂಹಿಕವಾಗಿ ಅಡುಗೆ ಮಾಡಲು ಸಾಮಗ್ರಿಗಳನ್ನು ಸಂಗ್ರಹಿಸಲು ಅವರು ಹಣವನ್ನು ಸಂಗ್ರಹಿಸುತ್ತಿದ್ದಾರೆ, ಮತ್ತು ಅವರ ಊಟವನ್ನು ಕಡಿಮೆಗೊಳಿಸಿದ್ದಾರೆ.

PHOTO • Rahul M.

ಚಿಕ್ಕ ಮಕ್ಕಳು ಈಗ ನೆಲಸಮವಾದ ನಂತರ ತಮ್ಮ ಹಿರಿಯರು ನಿರ್ಮಿಸಿದ ತಾತ್ಕಾಲಿಕ ಆಶ್ರಯಗಳ ಅಡಿಯಲ್ಲಿ ಮಲಗುತ್ತಿದ್ದಾರೆ

ವಿಜಯನಗರ ಕಾಲೋನಿ ಟಿಡಿಪಿಯ ಬೆಂಬಲ ನೆಲೆಯಾಗಿದೆ ಮತ್ತು ನಿವಾಸಿಗಳಿಗೆ ಈ ಹೊಡೆತವು ತಮ್ಮ ನಾಯಕರು ತಮಗೆ ಎಸಗಿದ ದ್ರೋಹ ಎಂದು ಭಾವಿಸುವಂತೆ ಮಾಡಿದೆ. ತಾತ್ಕಾಲಿಕ ಆಶ್ರಯವನ್ನು ನಿರ್ಮಿಸಲು ಸಹಾಯ ಮಾಡಿದ ಕಾರ್ಮಿಕ ಮತ್ತು ಟಿಡಿಪಿ ಸದಸ್ಯ ಎಂ. ಜಯಪುತ್ರಾ, "ತಾಯಿ ಕೋಳಿ ತನ್ನ ಮರಿಗಳನ್ನು ನಾಶಪಡಿಸುತ್ತಿರುವಂತೆ ಭಾಸವಾಯಿತು," ಎಂದು ಹೇಳುತ್ತಾರೆ. ಸ್ಥಳೀಯ ಕಾರ್ಪೊರೇಟರ್ ಆರ್. ಉಮಾಮಹೇಶ್ವರ್ ಮತ್ತು ಇತರರ ನಡುವಿನ ಭಿನ್ನಾಭಿಪ್ರಾಯಗಳು - ಅಂತರ್-ಪಕ್ಷ ವೈಷಮ್ಯ - ತಮ್ಮ ಮೇಲೆ ನೆಲಸಮ ದಳವನ್ನು ಬಿಚ್ಚಿಟ್ಟಿವೆ ಎಂದು ಟಿಡಿಪಿ ಸದಸ್ಯರಾಗಿರುವ ಇಲ್ಲಿನ ಅನೇಕ ನಿವಾಸಿಗಳು ಆರೋಪಿಸುತ್ತಾರೆ. "ಕೆರೆ ಪ್ರದೇಶದಲ್ಲಿ ಸುಮಾರು 18 ಕಾಲನಿಗಳಿವೆ. ಆದರೆ ನಮ್ಮದನ್ನು ಮಾತ್ರ ನೆಲಸಮ ಮಾಡಲಾಯಿತು," ಎಂದು ಉಮಾಮಹೇಶ್ವರ್ ಹೇಳುತ್ತಾರೆ.

ನಿರಾಶೆಗೊಂಡ ಜನರು ತಮ್ಮ ದೈನಂದಿನ ಕೆಲಸಗಳು ಮತ್ತು ಜೀವನವನ್ನು ಮುಂದುವರಿಸುತ್ತಾ ಅವಶೇಷಗಳ ನಡುವೆಯೇ ಉಳಿಯಲು ಯೋಜಿಸುತ್ತಿದ್ದಾರೆ. "ನಾವು ಇಲ್ಲಿಯೇ ಇದ್ದು, ಎಷ್ಟು ಸಮಯ ಬೇಕಾದರೂ ಹೋರಾಡುತ್ತೇವೆ," ಎಂದು ಹೂವು ಮಾರುವ ಎಸ್. ಶಿವಮ್ಮ ಹೇಳುತ್ತಾರೆ.

ನೋಡಿ: ಅನಂತಪುರದ ನೆಲಸಮಗೊಂಡ ಮನೆಗಳ ಫೋಟೋ ಆಲ್ಬಂ

ಅನುವಾದ: ಶಂಕರ. ಎನ್. ಕೆಂಚನೂರು

Rahul M.

Rahul M. is an independent journalist based in Andhra Pradesh, and a 2017 PARI Fellow.

Other stories by Rahul M.
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru