"ನಮಗೆ ಈ ಕರ್‍ಫ್ಯೂ ಅನ್ವಯಿಸುವುದಿಲ್ಲ. ನಾವು ಒಂದು ದಿನವೂ ರಜೆ ಪಡೆಯುವಂತಿಲ್ಲ. ಜನರು ಸುರಕ್ಷಿತವಾಗಿರಬೇಕಲ್ಲವೇ – ಅದಕ್ಕಾಗಿ ನಾವು ನಗರವನ್ನು ಸ್ವಚ್ಛಗೊಳಿಸುತ್ತಲೇ ಇರಬೇಕು", ಎನ್ನುತ್ತಾರೆ ಚೆನ್ನೈನ ಥೌಸಂಡ್‍ ಲೈಟ್ಸ್ ಪ್ರದೇಶದಲ್ಲಿನ ಸಫಾಯಿ ಕರ್ಮಚಾರಿ ದೀಪಿಕ.

ಎಲ್ಲ ಆರೋಗ್ಯ ಕಾರ್ಯಕರ್ತರಿಗೂ ‘ಕೃತಜ್ಞತೆಯನ್ನು’ ಸೂಚಿಸುವ ಸಲುವಾಗಿ ಸಂಜೆ 5ರ ವೇಳೆಗೆ ನೆರೆದಿದ್ದ ಗುಂಪುಗಳ ಹೊರತಾಗಿ, ಮಾರ್ಚ್‍ 22ರ ‘ಜನತಾ ಕರ್‍ಫ್ಯೂ’ ದೆಸೆಯಿಂದಾಗಿ ಎಲ್ಲರೂ ಮನೆಯಲ್ಲೇ ಉಳಿದಿದ್ದರು. ಈ ಕೃತಜ್ಞತೆಯು ಸಲ್ಲಿಕೆಯಾಗಿರಬಹುದಾದ ಸಫಾಯಿ ಕರ್ಮಚಾರಿಗಳು ಮೆಟ್ರೊ ಅನ್ನು ಗುಡಿಸುತ್ತಾ, ಸ್ವಚ್ಛಗೊಳಿಸುತ್ತ ದಿನವಿಡೀ ಕೆಲಸದಲ್ಲಿ ತೊಡಗಿದ್ದರು. "ಹಿಂದಿಗಿಂತಲೂ ಈಗ ನಮ್ಮ ಸೇವೆಯ ಅಗತ್ಯ ಹೆಚ್ಚಾಗಿದೆ. ಬೀದಿಗಳನ್ನು ನಾವು ವೈರಸ್‍ನಿಂದ  ಮುಕ್ತಗೊಳಿಸಬೇಕು", ಎನ್ನುತ್ತಾರೆ ದೀಪಿಕ.

ಎಂದಿನಂತೆಯೇ ದೀಪಿಕ ಹಾಗೂ ಇತರರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆಯೇ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಪರಿಸ್ಥಿತಿಯು ಎಂದಿಗಿಂತಲೂ ಮತ್ತಷ್ಟು ಬಿಗಡಾಯಿಸಿತ್ತು. ದೇಶಾದ್ಯಂತ ಜಾರಿಗೊಳಿಸಲಾದ ಲಾಕ್‍ಡೌನ್‍ ಕಾರಣದಿಂದಾಗಿ, ಅವರಲ್ಲಿನ ಅನೇಕರು ಕಸವನ್ನು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಸಿ ಕೆಲಸದ ಸ್ಥಳವನ್ನು ತಲುಪಬೇಕಾಯ್ತು. ಕೆಲವರು ಹಲವಾರು ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಸವೆಸಿ ಕೆಲಸದ ಜಾಗಕ್ಕೆ ತಲುಪಿದರು. "ಮಾರ್ಚ್‍ 22ರಂದು ಬಹಳ ದೂರದಲ್ಲಿ ನೆಲೆಸಿರುವ ನನ್ನ ಸಹೋದ್ಯೋಗಿಗಳು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ, ಎಂದಿಗಿಂತಲೂ ಹೆಚ್ಚಿನ ಬೀದಿಗಳನ್ನು ನಾನು ಸ್ವಚ್ಭಗೊಳಿಸಬೇಕಾಯ್ತು", ಎಂದರು ದೀಪಿಕ.

ಛಾಯಾಚಿತ್ರದಲ್ಲಿನ ಬಹುತೇಕ ಮಹಿಳೆಯರು ಚೆನ್ನೈ ಕೇಂದ್ರೀಯ ಹಾಗೂ ದಕ್ಷಿಣ ಭಾಗದಲ್ಲಿನ ಥೌಸಂಡ್‍ ಲೈಟ್ಸ್ ಮತ್ತು ಆಳ್ವಾರ್‍ಪೇಟ್‍ ಹಾಗೂ ಅನ್ನಾ ಸಲೈನ ಹರಹೊಂದರ ಬಡಾವಣೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ. ಈ ಮಹಿಳೆಯರ ಮನೆಗಳು ಬಹುತೇಕ ಉತ್ತರ ಚೆನ್ನೈನಲ್ಲಿದ್ದು, ಅವರು ಅಲ್ಲಿನ ತಮ್ಮ ಮನೆಗಳಿಂದ ಪ್ರಯಾಣಿಸಿ ಕೆಲಸದ ಸ್ಥಳವನ್ನು ತಲುಪಬೇಕಿರುತ್ತದೆ.

"ಇವರೀಗ ವಿಚಿತ್ರ ತೆರನಾದ ಕೃತಜ್ಞತೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್‍ 24ರಂದು ಲಾಕ್‍ಡೌನ್‍ ಪ್ರಕಟಣೆಯಾದಾಗಿನಿಂದಲೂ ನಾವು ರಜೆ ಪಡೆಯಲು ಸಾಧ್ಯವಾಗಿಲ್ಲವೆಂದು" ಇವರು ದೂರುತ್ತಾರೆ. ಇವರು ರಜೆಯ ಮೇಲೆ ತೆರಳುವಂತಿಲ್ಲ. ಸಿಐಟಿಯು ಜೊತೆಗೆ ಸಂಯೋಜಿತಗೊಂಡ ಚೆನ್ನೈ ಕಾರ್ಪೊರೇಷನ್‍ ರೆಡ್‍ ಫ್ಲ್ಯಾಗ್‍ ಯೂನಿಯನ್‍ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸುಲು; ಈಗ ಗೈರುಹಾಜರಾದಲ್ಲಿ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆಯೆಂದು ಅವರಿಗೆ ತಿಳಿಸಲಾಗಿದೆ ಎಂಬುದಾಗಿ ತಿಳಿಸಿದರು. ಸಂಚಾರಕ್ಕೆಂದು ಬಸ್ಸುಗಳನ್ನು ಒದಗಿಸಿದ್ದಾಗ್ಯೂ, ಅವುಗಳು ಸಾಕಷ್ಟಿಲ್ಲ ಹಾಗೂ ಆಗಾಗ್ಗೆ ತಡವಾಗುತ್ತಿದೆ. ಹೀಗಾಗಿ ಕೆಲಸಗಾರರು ಬಲವಂತದಿಂದ ಕಸಕ್ಕೆಂದು ನಿಯೋಜಿಸಲ್ಪಟ್ಟ ಲಾರಿಗಳನ್ನು ಬಳಸುವಂತಾಗಿದೆ. ಇಲ್ಲಿನ ಸಫಾಯಿ ಕರ್ಮಚಾರಿಗಳು ಮಾಹೆಯಾನ 9 ಸಾವಿರ ರೂ.ಗಳನ್ನು ಸಂಪಾದಿಸುತ್ತಾರಾದರೂ, ಸಹಜ ಪರಿಸ್ಥಿತಿಗಳಲ್ಲೂ, ಪ್ರತಿದಿನವೂ ಅವರು 60 ರೂ.ಗಳನ್ನು ಪ್ರಯಾಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ನಿಷೇಧಾಜ್ಞೆ ಹಾಗೂ ಲಾಕ್‍ಡೌನ್‍ ಸಮಯದಲ್ಲಿ, ಸರ್ಕಾರಿ ಬಸ್ಸುಗಳು ಅಥವ ಕಾರ್ಪೊರೇಷನ್‍ ವ್ಯವಸ್ಥೆಗೊಳಿಸಿದ ವಾಹನಗಳಲ್ಲಿ ಪ್ರಯಾಣಿಸಲಾಗದವರು ಕಾಲ್ನಡಿಗೆಯನ್ನೇ ನೆಚ್ಚಿದ್ದಾರೆ ಎಂದು ಸಹ ಶ್ರೀನಿವಾಸುಲು ತಿಳಿಸುತ್ತಾರೆ.

PHOTO • M. Palani Kumar

‘ಜನರು ಸುರಕ್ಷಿತರಾಗಿರಬೇಕಲ್ಲವೇ – ಅದಕ್ಕಾಗಿ ನಾವು ನಗರವನ್ನು ಸ್ವಚ್ಛಗೊಳಿಸುತ್ತಲೇ ಇರಬೇಕಾಗುತ್ತದೆ’, ಎನ್ನುತ್ತಾರೆ ಚೆನ್ನೈನ ಥೌಸಂಡ್‍ ಲೈಟ್ಸ್ ಪ್ರದೇಶದ ಸಫಾಯಿ ಕರ್ಮಚಾರಿ ದೀಪಿಕ

"ತೀರ ಇತ್ತೀಚೆಗೆ, ಚೆನ್ನೈ ಕಾರ್ಪೊರೇಷನ್‍ ಇವರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸಲು ಪ್ರಾರಂಭಿಸಿದೆಯಾದರೂ. ಅವುಗಳ ಗುಣಮಟ್ಟ ಉತ್ತಮವಾಗಿಲ್ಲ. ಅವರಿಗೆ ಬಳಸಿ ಬಿಸಾಡುವ ಮುಖಗವಸುಗಳನ್ನು ನೀಡಲಾಗಿದ್ದು, ಅವನ್ನೇ ಮತ್ತೆ ಬಳಸುವಂತೆ ಒತ್ತಾಯಿಸಲಾಗುತ್ತಿದೆ. ಮಲೇರಿಯ ಕಾರ್ಯಕರ್ತರ (ಸೊಳ್ಳೆಗಳನ್ನು ತಡೆಗಟ್ಟುವ ಕೆಲಸವನ್ನು ಇವರು ನಿರ್ವಹಿಸುತ್ತಾರೆ) ವಿಭಾಗವೊಂದರಲ್ಲಿನ ಕೆಲವರಿಗಷ್ಟೇ ಕೆಲವು ರಕ್ಷಣಾ ಮುಸುಕನ್ನು ಒದಗಿಸಲಾಗಿದೆಯಾದರೂ ಅವರಿಗೆ ಬೂಟು ಹಾಗೂ ಉತ್ತಮ ಗುಣಮಟ್ಟದ ಕೈಗವಸನ್ನು ನೀಡಿರುವುದಿಲ್ಲ", ಎನ್ನುತ್ತಾರೆ ಶ್ರೀನಿವಾಸುಲು. ಕೊರೊನ ವೈರಸ್‍ ವಿರುದ್ಧದ ಅಭಿಯಾನಕ್ಕೆಂದು ಕಾರ್ಪೊರೇಷನ್‍, ವಲಯವಾರು ಹೆಚ್ಚುವರಿ ಹಣವನ್ನು ಮಂಜೂರು ಮಾಡಿದೆಯಾದರೂ ಅದು ಕಾರ್ಯರೂಪಕ್ಕೆ ಬರಲು ಇನ್ನೂ ಸ್ವಲ್ಪ ಸಮಯ ಹಿಡಿಯುತ್ತದೆಂತಲೂ ಅವರು ತಿಳಿಸುತ್ತಾರೆ.

ಇಂದಿನ ದಿನಗಳಲ್ಲಿ ವಾಸದ ಬಡಾವಣೆಗಳಲ್ಲಿನ ವಿಲಕ್ಷಣ ನೀರವತೆಯಿಂದ ಕೂಡಿದ ಬರಿದಾದ ಬೀದಿಗಳು, ಬಿಗಿಯಾಗಿ ಭದ್ರಪಡಿಸಿದ ಕಿಟಕಿ, ಬಾಗಿಲುಗಳು ಸಫಾಯಿ ಕರ್ಮಚಾರಿಗಳನ್ನು ಎದುರುಗೊಳ್ಳುವ ಆವರ್ತಕ ದೃಶ್ಯಗಳಾಗಿವೆ. "ಇವರ ಮಕ್ಕಳಿಗೆ ಯಾವುದೇ ವೈರಸ್‍ ಸೋಂಕದಂತೆ ನಾವು ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸಮಾಡಬೇಕು. ನಮ್ಮ ಸ್ವಂತ ಮಕ್ಕಳು ಹಾಗೂ ಅವರ ಸುರಕ್ಷತೆಯ ಕಾಳಜಿ ಯಾರಿಗಿದೆ? ", ಎಂಬುದಾಗಿ ಅವರಲ್ಲೊಬ್ಬರು ಪ್ರಶ್ನಿಸುತ್ತಾರೆ. ನಿಷೇಧಾಜ್ಞೆಯ ನಂತರ ಬೀದಿಯಲ್ಲಿನ ಕಸವು ಕಡಿಮೆಯಾಗಿದೆಯಾದರೂ ಮನೆಗಳ ಕಸದಲ್ಲಿ ಹೆಚ್ಚಳವಾಗಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ಕೆಲಸಗಾರರು ಕೊಳೆಯುವ ಹಾಗೂ ಕೊಳೆಯದ ವಸ್ತುಗಳನ್ನು ಪ್ರತ್ಯೇಕಿಸುವುದು ನಿಜಕ್ಕೂ ಸಾಧ್ಯವಾಗುತ್ತಿಲ್ಲ. ಲಾಕ್‍ಡೌನ್‍ ಸಮಯದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕುಡಿಯುವ ನೀರು ದೊರೆಯುವುದು ಸಹ ದುಸ್ತರವಾಗಿದೆ ಎಂಬ ಅಂಶದತ್ತ ಬೊಟ್ಟುಮಾಡುವ ಶ್ರೀನಿವಾಸುಲು, ಇದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ನಾವು ಕಾರ್ಪೊರೇಷನ್‍ಗೆ  ಬೇಡಿಕೆ ಸಲ್ಲಿಸಿದ್ದೇವೆ ಎನ್ನುತ್ತಾರೆ. "ಇದಕ್ಕೂ ಮೊದಲು ಇವರು ಕಾರ್ಯನಿರ್ವಹಿಸುವ ಕಾಲೋನಿಗಳಲ್ಲಿನ ಸ್ಥಳೀಯ ನಿವಾಸಿಗಳು ನೀರನ್ನು ಒದಗಿಸುತ್ತಿದ್ದರು. ಈ ದಿನಗಳಲ್ಲಿ ಅವರಿಗೆ ನೀರನ್ನು ನಿರಾಕರಿಸಲಾಗುತ್ತಿದೆಯೆಂಬುದಾಗಿ", ಅನೇಕರು ತಿಳಿಸಿದರು.

ತಮಿಳು ನಾಡಿನಲ್ಲಿ ಸುಮಾರು 2 ಲಕ್ಷ ಸಫಾಯಿ ಕರ್ಮಚಾರಿಗಳಿದ್ದಾರೆಂದು ಶ್ರೀನಿವಾಸುಲು ತಿಳಿಸಿದರು. ಚೆನ್ನೈಯೊಂದರಲ್ಲೇ ಸುಮಾರು 7 ಸಾವಿರ ಪೂರ್ಣಾವಧಿ ಕೆಲಸಗಾರರಿದ್ದಾಗ್ಯೂ, ಈ ಸಂಖ್ಯೆಯು ಅತ್ಯಂತ ಕಡಿಮೆ. "2015ರ ಪ್ರವಾಹಗಳು ಹಾಗೂ ನಂತರದ ವರ್ಷದಲ್ಲೇ ಕಾಣಿಸಿಕೊಂಡ ವರ್ಧ ಚಂಡಮಾರುತದ ನೆನಪಿದೆಯೇ? ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು 13 ಜಿಲ್ಲೆಗಳಿಂದ ಬಂದ ಕೆಲಸಗಾರರು 20 ದಿನಗಳು ಚೆನ್ನೈನಲ್ಲಿ ಕೆಲಸವನ್ನು ನಿರ್ವಹಿಸುವಂತಾಯಿತು. ರಾಜ್ಯದ ರಾಜಧಾನಿಯಲ್ಲೇ ಈ ಪರಿಸ್ಥಿತಿಯಿದ್ದು, ಜಿಲ್ಲೆಗಳಲ್ಲಿನ ಕೆಲಸಗಾರರ ಸಂಖ್ಯೆ ಅತ್ಯಂತ ಕಡಿಮೆ", ಎನ್ನುತ್ತಾರೆ ಶ್ರೀನಿವಾಸುಲು.

ಸಫಾಯಿ ಕರ್ಮಚಾರಿಗಳು ನಿವೃತ್ತಿಗೆ ಮೊದಲೇ ಸಾವನ್ನಪ್ಪುವುದು ಅಸಾಧಾರಣ ವಿಷಯವೇನಲ್ಲ. "ನಮಗೆ ಸುರಕ್ಷತಾ ಸಾಧನಗಳಿಲ್ಲದ ಕಾರಣ ನಾವು ಸದಾ ಸೋಂಕು ರೋಗಗಳಿಗೆ ತುತ್ತಾಗುತ್ತೇವೆ", ಎಂಬುದಾಗಿ ಅವರಲ್ಲೊಬ್ಬರು ತಿಳಿಸುತ್ತಾರೆ. ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಅದರಲ್ಲಿಳಿಯುವ ಅವರಲ್ಲಿನ ಕೆಲವರು ಉಸಿರುಕಟ್ಟಿ ಸಾಯುತ್ತಾರೆ. ಫೆಬ್ರುವರಿ ತಿಂಗಳೊಂದರಲ್ಲೇ ತಮಿಳು ನಾಡಿನಲ್ಲಿ ಕನಿಷ್ಟ 5 ಕೆಲಸಗಾರರು ಒಳಚರಂಡಿಗಳಲ್ಲಿ ಸಾವಿಗೀಡಾಗಿದ್ದಾರೆ.

"ಬೀದಿಗಳನ್ನು ಸ್ವಚ್ಛವಾಗಿಟ್ಟು, ತಮ್ಮನ್ನು ಸೋಂಕಿನಿಂದ ರಕ್ಷಿಸುವ ಕಾರಣ ಜನರು ಈಗ ನಮಗೆ ಕೃತಜ್ಞರಾಗಿದ್ದೇವೆಂದು ತಿಳಿಸುತ್ತಾರೆ. ದೂರದರ್ಶನದ ವಾಹಿನಿಗಳು ನಮ್ಮನ್ನು ಸಂದರ್ಶಿಸಿವೆ. ಆದರೆ ನಾವು ಈ ಕೆಲಸವನ್ನು ಎಂದಿನಿಂದಲೂ ಮಾಡುತ್ತಲೇ ಇದ್ದೇವೆ", ಎನ್ನುತ್ತಾರೆ ಆಕೆ.

"ನಮ್ಮ ಜೀವವನ್ನು ಅಪಾಯಕ್ಕೆ ದೂಡಿ, ನಗರವನ್ನು ಸ್ವಚ್ಛವಾಗಿಡುವ ಕೆಲಸವನ್ನು ನಾವು ಎಲ್ಲ ಸಮಯದಲ್ಲೂ ನಿರ್ವಹಿಸಿದ್ದೇವೆ. ಅವರು ಈಗ ಧನ್ಯವಾದವನ್ನು ಅರ್ಪಿಸುತ್ತಿರಬಹುದು, ಆದರೆ ನಾವು ಸದಾ ಅವರ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ".

ಲಾಕ್‍ಡೌನ್‍ ಸಮಯದಲ್ಲಿ ಕೆಲಸವನ್ನು ನಿರ್ವಹಿಸಿದ್ದಕ್ಕಾಗಿ ಸಫಾಯಿ ಕರ್ಮಚಾರಿಗಳಿಗೆ ಹೆಚ್ಚಿನ ಹಣವನ್ನೇನು ಪಾವತಿಸಿರುವುದಿಲ್ಲ.

ನಿಮಗೆ ಕೃತಜ್ಞತೆಗಳಿವೆಯಷ್ಟೇ.

PHOTO • M. Palani Kumar

ಮೌಂಟ್‍ ರಸ್ತೆ ಹಾಗೂ ಚೆನ್ನೈನಲ್ಲಿ ಸದಾ ಚಟುವಟಿಕೆಯಿಂದಿರುವ ರಸ್ತೆಗಳಲ್ಲೊಂದಾದ ಅನ್ನಾ ಸಲೈನಲ್ಲಿನ ಸಫಾಯಿ ಕರ್ಮಚಾರಿಗಳು. ಇವರು ಪ್ರತಿ ತಿಂಗಳು 9 ಸಾವಿರ ರೂ.ಗಳನ್ನು ಸಂಪಾದಿಸುತ್ತಾರಾದರೂ, ಪರಿಸ್ಥಿತಿಗಳು ಸಹಜವಾಗಿದ್ದಾಗ್ಯೂ, ಪ್ರತಿ ದಿನವೂ ಪ್ರಯಾಣಕ್ಕೆಂದು ಅವರು ಬಹುತೇಕ 60 ರೂ.ಗಳನ್ನು ವಿನಿಯೋಗಿಸುತ್ತಾರೆ. ನಿಷೇಧಾಜ್ಞೆ ಹಾಗೂ ಲಾಕ್‍ಡೌನ್‍ ಸಮಯದಲ್ಲಿ ಸರ್ಕಾರಿ ಬಸ್ಸುಗಳು ಅಥವ ಕಾರ್ಪೊರೇಷನ್‍ ವ್ಯವಸ್ಥೆಗೊಳಿಸಿದ ವಾಹನಗಳಲ್ಲಿ ಪ್ರಯಾಣಿಸಲಾಗದವರು ಕಾಲ್ನಡಿಗೆಯನ್ನೇ ನೆಚ್ಚಿದ್ದರು

PHOTO • M. Palani Kumar

ಸಫಾಯಿ ಕರ್ಮಚಾರಿಗಳಲ್ಲಿನ ಅನೇಕರು ತಮ್ಮ ಮನೆಗಳಿಂದ ಕಸದ ಟ್ರಕ್ಕುಗಳಲ್ಲಿ ಪ್ರಯಾಣಿಸಿ, ಚೆನ್ನೈನಲ್ಲಿನ ಮೌಂಟ್‍ ರಸ್ತೆ, ಅನ್ನಾ ಸಲೈ ಮತ್ತಿತರ ಕೆಲಸದ ಸ್ಥಳಗಳನ್ನು ತಲುಪುತ್ತಿದ್ದಾರೆ

PHOTO • M. Palani Kumar

ಮಾರ್ಚ್‍ 22ರ ‘ಜನತಾ ಕರ್‍ಫ್ಯೂ’ ಸಮಯದಲ್ಲಿ ಬೇರಾವುದೇ ಸುರಕ್ಷತಾ ಸಾಧನಗಳಿಲ್ಲದೆ, ಕೇವಲ ಕೈಗವಸನ್ನು ಧರಿಸಿ, ಸದಾ ಚಟುವಟಿಕೆಯಿಂದಿರುವ ಎಲ್ಲಿಸ್‍ ರಸ್ತೆಯನ್ನು ಶುಚಿಗೊಳಿಸುತ್ತಿರುವ ಒಬ್ಬ ಸಫಾಯಿ ಕರ್ಮಚಾರಿ

PHOTO • M. Palani Kumar

‘ಜನತಾ ಕರ್‍ಫ್ಯೂ’ ದಿನದಂದು 'ಬಳಸಿ ಬಿಸಾಡುವ‘ ಮತ್ತು ‘ರಕ್ಷಣಾತ್ಮಕವೆಂದು’ ತಿಳಿಸಲಾದ ಸಾಧನದೊಂದಿಗೆ ಎಲ್ಲಿಸ್‍ ರಸ್ತೆಯಲ್ಲಿ ಇತರೆ ಎಲ್ಲರ ಕಸವನ್ನು ಸ್ವಚ್ಛಗೊಳಿಸುತ್ತಿರುವ ಕೆಲಸಗಾರರು

PHOTO • M. Palani Kumar

ಸಫಾಯಿ ಕರ್ಮಚಾರಿಯೊಬ್ಬರು ಎಲ್ಲಿಸ್‍ ರಸ್ತೆಯ ಗಲ್ಲಿಯೊಂದನ್ನು ಶುಚಿಗೊಳಿಸುತ್ತಿರುವುದು: ಸಫಾಯಿ ಕರ್ಮಚಾರಿಗಳಲ್ಲೊಬ್ಬರು ಹೀಗೆ ತಿಳಿಸುತ್ತಾರೆ - ‘ನಮ್ಮಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲವಾಗಿ ಈ ಯಾವುದಾದರೊಂದು ಸೋಂಕು ರೋಗಕ್ಕೆ ತುತ್ತಾಗುತ್ತೇವೆ.’

PHOTO • M. Palani Kumar

‘ಜನತಾ ಕರ್‍ಫ್ಯೂ’ ದಿನದಂದು ಆಗತಾನೇ ಕಸವನ್ನು ತೆಗದು, ಬೀದಿಗಳನ್ನು ಗುಡಿಸಿದಂತೆ ಕಾಣುವ ಮೌಂಟ್‍ ರಸ್ತೆಯ ದೃಶ್ಯ

PHOTO • M. Palani Kumar

ಛೆಪಕ್‍ ಪ್ರದೇಶದಲ್ಲಿನ ಸಫಾಯಿ ಕರ್ಮಚಾರಿ: ಲಾಕ್‍ಡೌನ್‍ ಅವಧಿಯಲ್ಲಿ ಕೆಲಸವನ್ನು ನಿರ್ವಹಿಸಿದ್ದಕ್ಕಾಗಿ ಅವರಿಗೆ ಹೆಚ್ಚುವರಿ ಹಣವನ್ನು ಪಾವತಿಸಿರುವುದಿಲ್ಲ

PHOTO • M. Palani Kumar

ಚೆನ್ನೈನ ಎಂ. ಎ. ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹತ್ತಿರದ ಚೆಪಕ್‍ಅನ್ನು  ಸ್ವಚ್ಛಗೊಳಿಸಲಾಗುತ್ತಿದೆ

PHOTO • M. Palani Kumar

ಛೆಪಕ್ನ ಅನೇಕ ಸರ್ಕಾರಿ ಕಛೇರಿಗಳನ್ನು ಹೊಂದಿರುವ ಕಾಂಪ್ಲೆಕ್ಸ್‍ ಜನಶೂನ್ಯವಾಗಿದೆ

PHOTO • M. Palani Kumar

‘ಸುರಕ್ಷತಾ’ ಸಾಧನಗಳಾದ ಜಾಳಾಗಿರುವ ಮುಖಗವಸು ಹಾಗೂ ಕೈಗವಸುಗಳನ್ನಷ್ಟೇ ಧರಿಸಿ ಆಳ್ವಾರ್‍ಪೇಟೆಯ ಬೀದಿಗಳ ಸೋಂಕುನಿವಾರಣೆಯಲ್ಲಿ ತೊಡಗಿರುವ ಸಫಾಯಿ ಕರ್ಮಚಾರಿಗಳು

PHOTO • M. Palani Kumar

ಸೋಂಕುರಹಿತವಾಗಿ ಶುಚಿಗೊಳಿಸಲ್ಪಟ್ಟ ಆಳ್ವಾರ್‍ಪೇಟ್‍ನ ಖಾಲಿ ರಸ್ತೆ

PHOTO • M. Palani Kumar

ಯಾವುದೇ ಗಟ್ಟಿಮುಟ್ಟಾದ ಸುರಕ್ಷತಾ ಸಾಧನಗಳಿಲ್ಲದೆ ಕೇವಲ ಮುಖಗವಸಿನೊಂದಿಗೆ ಟಿ. ನಗರದ ವಾಣಿಜ್ಯ ಪ್ರದೇಶದಲ್ಲಿ ಸದಾ ಚಟುವಟಿಕೆಯಿಂದಿರುವ ಬೀದಿಗಳನ್ನು ತೊಳೆದು ಶುಚಿಗೊಳಿಸುತ್ತಿರುವ ದೃಶ್ಯ

PHOTO • M. Palani Kumar

ಟಿ. ನಗರದ ವಿವಿಧ ಬೀದಿಗಳ ಸ್ವಚ್ಛತಾ ಕಾರ್ಯವು ಮುಂದುವರಿದಿದೆ

PHOTO • M. Palani Kumar

ಛೂಳೈಮೇಡು ಸರ್ಕಾರಿ ಶಾಲೆಯನ್ನು ಸೋಂಕುಮುಕ್ತಗೊಳಿಸಲು ಸಜ್ಜಾಗುತ್ತಿರುವ ಕೆಲಸಗಾರರು

PHOTO • M. Palani Kumar

ಕೊಯಂಬೇಡು ಮಾರುಕಟ್ಟೆಯ ಕೇಂದ್ರ ಸ್ಥಾನವನ್ನು ಗುಡಿಸಿ ಸ್ವಚ್ಛಗೊಳಿಸುವ ದೃಶ್ಯ

PHOTO • M. Palani Kumar

ಕೊಯಂಬೇಡುವಿನಲ್ಲಿ ಸಫಾಯಿ ಕರ್ಮಚಾರಿಗಳು: ‘ನಮ್ಮ ಜೀವವನ್ನು ಅಪಾಯಕ್ಕೊಡ್ಡಿ ಎಲ್ಲ ಸಮಯಗಳಲ್ಲೂ ನಗರವನ್ನು ಸ್ವಚ್ಛವಾಗಿಡುವ ಕೆಲಸದಲ್ಲಿ ನಾವು ತೊಡಗಿರುತ್ತೇವೆ. ಈಗ ಅವರು ನಮಗೆ ಧನ್ಯವಾದವನ್ನು ಸಲ್ಲಿಸುತ್ತಿರಬಹುದು. ನಾವಾದರೋ ಸದಾ ಅವರ ಸ್ವಾಸ್ಥ್ಯದ ಕಾಳಜಿ ವಹಿಸುತ್ತೇವೆ’

ಅನುವಾದ: ಶೈಲಜ ಜಿ. ಪಿ.

M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.