ಅತ ಸಂಜೆಯಾದರೆ ನಿರ್ಜನ ಉದ್ಯಾನವನಕ್ಕೆ ಹೋಗುತ್ತಿದ್ದ. ಒಂದು ಸಣ್ಣ ಫೋನ್ ಮತ್ತು ಕೈಯಲ್ಲಿ ದೊಡ್ಡ ಕೋಲು ಹಿಡಿದುಕೊಂಡು ಅಲ್ಲಿಯೇ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದ. ಒಂದು ವರ್ಷದೊಳಗೆ ಎರಡನೇ ಬಾರಿಗೆ, ಆ ಉದ್ಯಾನದಲ್ಲಿ ವಿಚಿತ್ರ ಮೌನ ನೆಲೆಯಾಗಿತ್ತು. ಮಕ್ಕಳು ಮತ್ತು ವೃದ್ಧರು ಮತ್ತೊಮ್ಮೆ ತಮ್ಮ ಮನೆಗಳಲ್ಲೇ ಉಳಿದು ಹೋಗಿದ್ದರು.

ಆತ ಕೆಲವು ದಿನಗಳಿಂದ ಉದ್ಯಾನವನದಲ್ಲಿ ಸುತ್ತಾಡಲು ಹೋಗುತ್ತಿದ್ದ. ಕತ್ತಲು ಹೆಚ್ಚಾಗುತ್ತಿದ್ದಂತೆ, ಬೀದಿದೀಪಗಳು ಬೆಳಗಲಾರಂಭಿಸಿ ಮರಗಳ ನೆರಳುಗಳು ನೆಲದ ಮೇಲೆ ಬೀಳಲು ಆರಂಭಿಸಿದ್ದವು. ತಣ್ಣನೆಯ ಗಾಳಿ ಬೀಸಲಾರಂಭಿಸಿತ್ತು, ನೆಲದ ಮೇಲೆ ಬಿದ್ದಿರುವ ಒಣ ಎಲೆಗಳು ಮನಸ್ಸನ್ನು ತಮ್ಮತ್ತ ಸೆಳೆಯುತ್ತಿದ್ದವು. ಆದರೂ ಆತನ ಮನಸ್ಸಿನಲ್ಲಿ ಕತ್ತಲು ಆಳವಾಗುತ್ತಿತ್ತು. ಆತ ಗಂಟೆಗಟ್ಟಲೆ ಶಾಂತವಾಗಿ ಕುಳಿತಿದ್ದ, ಆದರೆ ಅವನ ಎದೆಯೊಳಗೆ ದೊಡ್ಡ ಗಲಭೆಯೇ ಎದ್ದಿತ್ತು.

ಸುಮಾರು 25 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಇಲ್ಲಿನ ಸುತ್ತಮುತ್ತಲಿನವರಿಗೆ ಪರಿಚಿತನಾದರೂ ಬಹುತೇಕರಿಗೆ ಅಪರಿಚಿತನಾಗಿದ್ದ. ಅವನ ಸಮವಸ್ತ್ರವು ಅವನ ಕೆಲಸವನ್ನು ಸೂಚಿಸುತ್ತದೆ: ಅವನು ಹತ್ತಿರದ ಕಟ್ಟಡದ ಕಾವಲುಗಾರ ಎಂದು. ಅವನ ಹೆಸರು... ಯಾರು ಅದರ ಬಗ್ಗೆ ಕಾಳಜಿ ವಹಿಸುತ್ತಾರೆ? ಏಳು ವರ್ಷಗಳಿಂದ ಅವನು ಇಲ್ಲಿ ಕೆಲಸ ಮಾಡುತ್ತಿದ್ಸಾನೆ, ಆದರೆ ಅಲ್ಲಿನ ಫ್ಲಾಟುಗಳ ಮಾಲಿಕರ ಪಾಲಿಗೆ ಅನಾಮಿಕನಾಗಿಯೇ ಉಳಿದಿದ್ದ.

ಆತ ಉತ್ತರ ಪ್ರದೇಶದ ಬುಂದೇಲಖಂಡದಿಂದ ಇಲ್ಲಿಗೆ ಬಂದಿದ್ದ. ಕವಿ ಮತ್ತು ಕಥೆಗಾರನಾಗಿದ್ದ ಅವನ ತಂದೆಯನ್ನು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣದಿಂದಾಗಿ ಕೊಲ್ಲಲಾಗಿತ್ತು. ಅವರ ಏಕೈಕ ಆಸ್ತಿಯಾಗಿದ್ದ ಬರವಣಿಗೆ ಮತ್ತು ಪುಸ್ತಕಗಳನ್ನು ಸುಟ್ಟು ಹಾಕಲಾಗಿತ್ತು. ಅದೇ ಬೆಂಕಿಯಲ್ಲಿ ಅವರ ಗುಡಿಸಲು ಕೂಡಾ ಸುಟ್ಟು ಹೋಗಿತ್ತು. ಆ ಮುರಿದ ಗುಡಿಸಲಿನಲ್ಲಿ ನೊಂದ ತಾಯಿ ಮತ್ತು ಹತ್ತು ವರ್ಷದ ಮಗ ಮಾತ್ರವೇ ಉಳಿದಿದ್ದರು. ತಾಯಿಗೆ ಅವರು ತನ್ನ ಮಗನನ್ನೂ ಕೊಂದರೆ ಏನು ಮಾಡುವುದೆಂಬ ಚಿಂತೆ ಕಾಡತೊಡಗಿತು. ಆಕೆ ತನ್ನ ಮಗನಿಗೆ ನಿನ್ನಿಂದ ಎಷ್ಟು ದೂರ ಹೋಗಲು ಸಾಧ್ಯವೋ ಅಷ್ಟು ದೂರ ಹೋಗೆಂದು ಕಳುಹಿಸಿಕೊಟ್ಟರು.

ಆತ ಚೆನ್ನಾಗಿ ಓದಲು ಬಯಸಿದ್ದ, ದೊಡ್ಡ ಕನಸು ಕಂಡಿದ್ದ, ಆದರೆ ಬದುಕಿನ ಅನಿವಾರ್ಯತೆ ಮುಂಬೈನ ರೈಲು ನಿಲ್ದಾಣಗಳಲ್ಲಿ ಶೂಗಳಿಗೆ ಪಾಲಿಶ್ ಮಾಡುವಂತೆ ಮಾಡಿತು (ಆತ ಓಡಿ ಹೋಗಿದ್ದ ಸ್ಥಳ). ಆತ ಚರಂಡಿಗಳನ್ನು ಸ್ವಚ್ಛಗೊಳಿಸಿದ, ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಿದ ಮತ್ತು ನಂತರ ನಿಧಾನವಾಗಿ ಒಂದು ದಿನ ಕಾವಲುಗಾರನಾಗಿ ಬಡ್ತಿ ಪಡೆದ. ಈಗ ತನ್ನ ತಾಯಿಗೆ ಹಣವನ್ನು ಕಳುಹಿಸಬಹುದಿತ್ತು. ತಾಯಿ ಮಗನಿಗೆ ಮದುವೆ ಮಾಡಿಸಬೇಕೆಂದು ಬಯಸಿದ್ದರು.

ತಾಯಿಯೇ ಆತನಿಗೆ ಹುಡುಗಿಯನ್ನು ಆರಿಸಿದರು. ಆತ ಅವಳ ಕಪ್ಪು ಕಪ್ಪು ಕಣ್ಣುಗಳನ್ನು ಪ್ರೀತಿಸುತ್ತಿದ್ದ. ಮಧುನಾ ಭಂಗಿ ಕೇವಲ 17 ವರ್ಷ ವಯಸ್ಸಿನವಳಾಗಿದ್ದಳು, ಮತ್ತು ಅವಳು ತನ್ನ ಹೆಸರಿನಂತೆಯೇ ಮಾಧುರ್ಯ ಮತ್ತು ಹರ್ಷಚಿತ್ತದಿಂದ ಕೂಡಿದ್ದಳು. ಆತ ಅವಳನ್ನು ಮುಂಬೈಗೆ ಕರೆತಂದ. ಅದಕ್ಕೂ ಮೊದಲು ಅವನು ನಲಸೋಪಾರದ ಸಣ್ಣ ಚಾಲ್‌ನಲ್ಲಿ ಹತ್ತು ಜನರೊಂದಿಗೆ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ. ಆದರೆ, ಮಧುನಾ ಜೊತೆ ಇರಲು ಗೆಳೆಯನ ಕೋಣೆಯನ್ನು ಕೆಲ ದಿನ ಬಾಡಿಗೆಗೆ ಪಡೆದಿದ್ದ. ಅವಳು ಯಾವಾಗಲೂ ಪತಿಯೊಂದಿಗೆ ಇರುತ್ತಿದ್ದಳು. ಆದರೆ ಶೀಘ್ರದಲ್ಲೇ ಅವಳು ಕಿಕ್ಕಿರಿದ ರೈಲುಗಳು, ದೊಡ್ಡ ಕಟ್ಟಡಗಳು ಮತ್ತು ಕೊಳೆಗೇರಿಗಳಿಂದ ಬೇಸತ್ತು ಹೇಳಿದಳು: ನಾನು ಇನ್ನು ಮುಂದೆ ಇಲ್ಲಿ ಉಳಿಯಲು ಸಾಧ್ಯವಿಲ್ಲ. ಇಲ್ಲಿ ನಮ್ಮ ಹಳ್ಳಿಯಂತಿಲ್ಲ." ಕಾವಲುಗಾರ ತನ್ನ ಹಳ್ಳಿಯಿಂದ ಹೊರಡುವಾಗಲೂ ಹಾಗೆಯೇ ಭಾವಿಸಿದ್ದ.

ಸ್ವಲ್ಪ ಸಮಯದ ನಂತರ ಅವಳು ಗರ್ಭಿಣಿಯಾಗಿ ತನ್ನ ಹಳ್ಳಿಗೆ ಹೋದಳು. ಕಾವಲುಗಾರ ಆಕೆಯ ಬಳಿ ಹೋಗುವ ಯೋಜನೆಯಲ್ಲಿದ್ದ, ಆದರೆ ಲಾಕ್‌ಡೌನ್‌ನಿಂದ ಯೋಜನೆಗಳೆಲ್ಲ ಮಣ್ಣುಪಾಲಾದವು. ರಜೆಗಾಗಿ ಅರ್ಜಿ ಸಲ್ಲಿಸಿದ, ಆದರೆ ಮೇಲಧಿಕಾರಿಗಳು ನಿರಾಕರಿಸಿದರು. ಮನೆಗೆ ಹೋದರೆ ವಾಪಸ್ ಬರುವಾಗ ಕೆಲಸ ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ಮನೆಗೆ ಹೋದರೆ ನವಜಾತ ಶಿಶುವಿಗೂ ಸೋಂಕು ತಗಲುತ್ತದೆ ಎಂದರು.

ಕಾವಲುಗಾರ ಅಧಿಕಾರಿಗಳ ಅಕ್ಕರೆ ಕಂಡು ಕರಗಿ ತನ್ನನ್ನು ತಾನೇ ಸಮಧಾನ ಮಾಡಿಕೊಳ್ಳತೊಡಗಿದ (ವಾಸ್ತವವಾಗಿ ಅವರ ಕಾಳಜಿ ಇದ್ದಿದ್ದು ತಮ್ಮ ಕಟ್ಟಡ ಕಾವಲುರಹಿತವಾಗುವ ಕುರಿತಾಗಿತ್ತು). ಇದು ಕೆಲವೇ ವಾರಗಳವರೆಗೆ ಇರುತ್ತದೆ ಎಂದು ಅವನು ಭಾವಿಸಿದ್ದ. ಅವನ ಪಾಲಿಗೆ ಹಣವು ಮುಖ್ಯವಾಗಿತ್ತು. ತನ್ನ ಮಗುವಿಗೆ ಬಾಲ್ಯದಲ್ಲಿ ತಾನು ಪಡೆಯಲು ಸಾಧ್ಯವಿಲ್ಲದಿದ್ದ ಎಲ್ಲವನ್ನೂ ಕೊಡಿಸುವ ಬಯಕೆಯಲ್ಲಿದ್ದ. ಸ್ವಲ್ಪ ಸಮಯದ ಹಿಂದೆ, ಬಜಾರಿನಲ್ಲಿ ಹಳದಿ ಬಟ್ಟೆಯನ್ನು ನೋಡಿದ್ದ. ಅಂಗಡಿ ಮತ್ತೆ ತೆರೆದ ನಂತರ, ತನ್ನ ಮಗುವಿಗೆ ಹಳದಿ ಬಟ್ಟೆಯ ಜೊತೆಗೆ ಮಧುನಾಗೆ ಸೀರೆಯನ್ನು ಖರೀದಿಸಲು ಬಯಸಿದ್ದ. ಅವನ ಚಡಪಡಿಕೆಯೆಲ್ಲಾ ಅವರ ನವಜಾತ ಶಿಶುವಿನ ಕುರಿತಾದ ಕನಸುಗಳಿಂದ ತುಂಬಿತ್ತು.

ಇತ್ತ ಮಧುನಾ ಬಳಿ ಫೋನ್‌ ಇದ್ದಿರಲಿಲ್ಲ. ಮತ್ತು ಅಲ್ಲಿ ನೆಟ್ವರ್ಕ್‌ ಕೂಡಾ ಕಣ್ಣುಮುಚ್ಚಾಲೆಯಾಡುತ್ತಿತ್ತು. ಆಕೆ ತನ್ನ ಗಂಡ ಚೀಟಿಯಲ್ಲಿ ಬರೆದುಕೊಟ್ಟಿದ್ದ ಫೋನ್‌ ನಂಬರ್‌ ಹಿಡಿದು ಹತ್ತಿರದ ಕಿರಾಣಿ ಅಂಗಡಿಗೆ ಹೋಗುತ್ತಿದ್ದಳು. ಅಂಗಡಿ ಮುಚ್ಚಿದ ನಂತರ ತನ್ನ ಪಕ್ಕದ ಮನೆಯವರ ಫೋನ್‌ ಬಳಸಿ ಕಾಲ್‌ ಮಾಡುತ್ತಿದ್ದಳು.

ಆಕೆ ತನ್ನ ಗಂಡನ ಬಳಿ ಮನೆಗೆ ಬರುವಂತೆ ಬೇಡಿಕೊಂಡಿದ್ದಳು. ಆದರೆ ಆತ ಎಲ್ಲೂ ಹೋಗಲಾಗದೆ ಮುಂಬಯಿಯಲ್ಲಿ ಸಿಲುಕಿಕೊಂಡಿದ್ದ. ಕೆಲವು ವಾರಗಳ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಸುದ್ದಿ ಬಂದಿತು. ಅವಳು ಇನ್ನೂ ಮಗುವಿಗೆ ಹೆಸರಿಟ್ಟಿರಲಿಲ್ಲ. ಮಧುನಾ ತನ್ನ ಗಂಡ ಮೊದಲು ಮಗುವನ್ನು ನೋಡಬೇಕೆಂದು ಬಯಸಿದ್ದಳು.

ತಡರಾತ್ರಿ ಬೆಳಕು ಮಸುಕಾಗತೊಡಗಿದಂತೆ, ಗಾರ್ಡ್‌ ಎದ್ದು ಗಾರ್ಡನ್ನಿನಿಂದ ಹೊರಬಂದು ತನ್ನ ನೈಟ್‌ ರೌಂಡ್‌ ಆರಂಭಿಸಿದರು. ಫ್ಲಾಟ್‌ಗಳು ಬೆಳಕಿನಿಂದ ಬೆಳಗತೊಡಗಿದ್ದವು. ಟಿವಿಗಳ ಬೆಳಕು ಕಿಟಕಿಯ ಮೂಲಕ ಮೂಡುತ್ತಿತ್ತು. ಮಗುವಿನ ಅಳು, ಪ್ರೆಜರ್‌ ಕುಕ್ಕರ್‌ ವಿಜಲ್‌ ರಾತ್ರಿಯ ವಾತಾವರಣದಲ್ಲಿ ಬೆರೆಯತೊಡಗಿತ್ತು.

ಲಾಕ್‌ಡೌನ್‌ ಸಮಯದಲ್ಲಿ ಆತ ಹಗಲು ರಾತ್ರಿಯೆನ್ನದೆ ಫ್ಲಾಟ್‌ಗಳಿಂದ ಆಹಾರದ ಬೇಡಿಕೆಗಳನ್ನು ತೆಗೆದುಕೊಳ್ಳುತ್ತಿದ್ದ. ಮತ್ತು ತನ್ನ ಹೆಂಡತಿ ಮತ್ತು ಮಗು ಹೊಟ್ಟೆ ತುಂಬಾ ತಿನ್ನುತ್ತಾ ನೆಮ್ಮದಿಯಾಗಿರಲಿ ಎಂದು ಹಾರೈಸುತ್ತಿದ್ದ. ಆತ ಫ್ಲಾಟಿನ ನಿವಾಸಿಗಳನ್ನು ಆಂಬುಲೆನ್ಸಿಗೆ ಒಯ್ಯಲು ಸಹಾಯ ಮಾಡುತ್ತಿದ್ದ. ಆದರೆ ಈ ರೋಗ ಒಂದು ದಿನ ತನಗೂ ಕಾಡಬಹುದೆನ್ನುವುದನ್ನು ಮರೆತಿದ್ದ. ಸೋಂಕು ತಗುಲಿದ್ದ ಸಹೋದ್ಯೋಗಿಯೊಬ್ಬರನ್ನು ಕೆಲಸದಿಂದ ತೆಗೆದುಹಾಕಿದಾಗ, ತನಗೆ ಕೆಮ್ಮು ಬಂದರೂ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಸದ್ದು ಮಾಡದೆ ಕೆಮ್ಮುತ್ತಾ ಉಳಿದುಬಿಟ್ಟ.

ಮನೆ ಕೆಲಸಗಾರ ಹೆಂಗಸೊಬ್ಬರು ಕಟ್ಟಡದಲ್ಲಿ ಕೆಲಸಕ್ಕೆ ಕರೆದುಕೊ‍ಳ್ಳುವಂತೆ ಮನವಿ ಮಾಡುವುದನ್ನು ಆತ ನೋಡಿದ. ಆಕೆಯ ಮಗ ಕ್ಷಯರೋಗ (ಟಿಬಿ) ಮತ್ತು ಹಸಿವಿನಿಂದ ದುರ್ಬಲಗೊಂಡಿದ್ದ ಮತ್ತು ಆಕೆಯ ಪತಿ ಅವಳ ಎಲ್ಲಾ ಸಂಪಾದನೆಯೊಂದಿಗೆ ಓಡಿಹೋಗಿದ್ದ. ಕೆಲವು ದಿನಗಳ ನಂತರ, ಕಾವಲುಗಾರನಿಗೆ ಅವಳು ತನ್ನ ಪುಟ್ಟ ಮಗಳೊಡನೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡಿತು.

ಈ ನಡುವೆ ಗಾರ್ಡ್‌ ಕೆಲವು ಸ್ಥಳೀಯ ಗೂಂಡಾಗಳು ತರಕಾರಿ ಮಾರುವವನ ಗಾಡಿಯನ್ನು ಉರುಳಿಸಿದುದನ್ನು ಆತ ನೋಡಿದ. ಆ ಗಾಡಿಯೊಡನೆ ಆ ವ್ಯಾಪಾರಿಯ ಬದುಕೂ ಬೀದಿಗೆ ಬಿದ್ದಿತ್ತು. ಆತ ತನಗೆ ವ್ಯಾಪಾರ ಮಾಡಲು ಬಿಡಿ ಎಂದು ಕೂಗೂತ್ತಾ, ಅಳುತ್ತಲೇ ಇದ್ದ. ಆತನ ಬಳಿ ಸಂಜೆಯ ಇಫ್ತಾರಿಗೆ ಹಣವಿರಲಿಲ್ಲ. ಅವನ ಮನೆಯವರು ಅವನಿಗಾಗಿ ಕಾಯುತ್ತಿದ್ದರು. ವ್ಯಾಪಾರ ಮಾಡುವಾಗ ಆತನಿಗೆ ಸೋಂಕು ತಗುಲಬಹುದು ಹೀಗಾಗಿ ನಾವು ಅವನನ್ನು ರಕ್ಷಿಸುತ್ತಿರುವುದಾಗಿ ಗೂಂಡಾಗಳು ಹೇಳಿದ್ದರು. ರಸ್ತೆಯ ಮೇಲೆ ಯಾರೋ ಅಲಂಕರಿಸಿದಂತೆ ತರಕಾರಿಗಳು ಬಿದ್ದಿದ್ದವು. ಆತ ಒಂದೊಂದಾಗಿ ತರಕಾರಿಗಳನ್ನು ತನ್ನ ಅಂಗಿಯಲ್ಲಿ ಹಾಕಿಕೊಳ್ಳತೊಡಗಿದ. ಒಡೆದ ಟೊಮ್ಯಾಟೊ ಆತನ ಅಂಗಿಯನ್ನು ಕೆಂಪಗಾಗಿಸಿತ್ತು. ಸ್ವಲ್ಪ ಹೊತ್ತಿನಲ್ಲಿ ಅಲ್ಲಿದ್ದ ಎಲ್ಲಾ ವಸ್ತುಗಳು ಖಾಲಿಯಾದವು.

ಅಲ್ಲಿನ ನಿವಾಸಿಗಳು ಇದನ್ನೆಲ್ಲ ಕಿಟಕಿಯಿಂದ ನೋಡುತ್ತಿದ್ದರು. ಅವರು ತಮ್ಮ ಮೊಬೈಲಿನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ ಘಟನೆಯ ವೀಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಾಕಿ ಸರಕಾರವನ್ನು ಟೀಕಿಸುವ ಸಾಲುಗಳನ್ನು ಬರೆದರು.

ಕೆಲವು ದಿನಗಳ ಹಿಂದೆ ಗಾರ್ಡ್‌ ಬಜಾರಿನಲ್ಲಿ ಪುಟ್ಟ ಹಳದಿ ಅಂಗಿಯೊಂದನ್ನು ನೋಡಿದ್ದ. ಅದನ್ನು ಕೊಳ್ಳುವುದರ ಜೊತೆಗೆ ಮಧುನಾಳಿಗಾಗಿ ಒಂದು ಸೀರೆಯನ್ನೂ ಕೊಳ್ಳುವ ಯೋಚನೆಯಲ್ಲಿದ್ದ

ಡಿಸೆಂಬರ್‌ ವೇಳೆಗೆ ಇತರ ಗಾರ್ಡುಗಳು ಕೆಲಸಕ್ಕೆ ಮರಳಲು ಆರಂಭಿಸಿದಾಗ ಇನ್ನು ತಾನು ಊರಿಗೆ ಹೋಗಬಹುದೆಂದು ಗಾರ್ಡ್‌ ಭಾವಿಸಿದ. ಆದರೆ ಅಲ್ಲಿಗೆ ಹೊಸಬರು ಕೆಲಸ ಹುಡುಕಿಕೊಂಡು ಬರುತ್ತಿದ್ದರು. ಅವರ ಕಣ್ಣಲ್ಲಿದ್ದ ಹತಾಶೆ ಹಾಗೂ ಅವರು ತನ್ನೆಡೆಗೆ ಹೊಟ್ಟೆಕಿಚ್ಚಿನಿಂದ ನೋಡುತ್ತಿದ್ದ ನೋಟ ಕಾವಲುಗಾರನನ್ನು ಕಾಡುತ್ತಿತ್ತು. ಆತ ತಾನು ಈಗ ಊರಿಗೆ ಹೋದರೆ ಮತ್ತೆ ಕೆಲಸ ಸಿಗದೆ ಹೋಗಬಹುದೆಂದು ಹೆದರಿದ. ಅಷ್ಟಕ್ಕೂ ಅವನು ದುಡಿಯುತ್ತಿದ್ದುದೇ ಮಧುನಾ ಮತ್ತು ಮಗಳಿಗಾಗಿ. ಅಲ್ಲಿ ಅವಳು ಅರ್ಧ ಹೊಟ್ಟೆ ಉಣ್ಣುತ್ತಾ, ಊರಿನ ಜಮೀನುದಾರನ ಸಾಲದ ಕಿರುಕುಳವನ್ನು ತನಗೆ ತಿಳಿಸದೆ ಬದುಕುತ್ತಿರುವುದು ಅವನಿಗೂ ತಿಳಿದಿತ್ತು.

ನಂತರ ಮತ್ತೊಂದು ಲಾಕ್ಡೌನ್ ಸುದ್ದಿ ಬಂತು. ಆಂಬ್ಯುಲೆನ್ಸ್ ಗಳು ಅಳುತ್ತಲೇ ಇದ್ದವು, ಈ ಬಾರಿ ಪರಿಸ್ಥಿತಿ ಹಿಂದಿನ ವರ್ಷಕ್ಕಿಂತ ಕೆಟ್ಟದಾಗಿತ್ತು. ಮಗನೊಬ್ಬ ವಯಸ್ಸಾದ ತಂದೆಯನ್ನು ಪಾಸಿಟಿವ್ ಬಂದಾಗ ಮನೆಯಿಂದ ಹೊರಹಾಕುವುದನ್ನು ಅವನು ನೋಡಿದನು. ಚಿಕ್ಕ ಮಕ್ಕಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವುದನ್ನು ಸಹ ನೋಡಿದನು.

ಆತ ತಾನು ಕೆಲಸ ಮಾಡುವುದನ್ನು ಮುಂದುವರೆಸಿದ ಮತ್ತು ಮಧುನಾಳಿಗೆ ತಾನು ಆದಷ್ಟು ಬೇಗ ಬರುವುದಾಗಿ ಹೇಳುತ್ತಿದ್ದ. ಪ್ರತಿ ಸಲ ಫೋನ್‌ ಮಾಡಿದಾಗಲೂ ಆಕೆ ಅಳುತ್ತಿದ್ದಳು. ಅವಳು ಹೆದರಿದ್ದಳು: “ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನಮಗೆ ನೀವು ಮಾತ್ರ ಬೇಕು. ನಮ್ಮ ಮಗುವಿಗೆ ಅವಳಿಗೊಬ್ಬ ಅಪ್ಪನಿರುವುದು ಇನ್ನೂ ತಿಳಿದಿಲ್ಲ.” ಅವಳ ಮಾತುಗಳು ಅವನನ್ನು ಚುಚ್ಚುತ್ತಿದ್ದವು. ಅವಳ ದನಿ ಅವನ ಪಾಲಿಗೆ ಸಾಂತ್ವನವಾಗಿತ್ತು. ಆ ಕೆಲವೇ ನಿಮಿಷಗಳ ಫೋನ್‌ ಕರೆಯೆನ್ನುವುದು ಇಬ್ಬರ ಪಾಲಿಗೂ ಜಗತ್ತೇ ಆಗಿತ್ತು. ಅವರು ಬಹಳ ಕಡಿಮೆ ಮಾತನಾಡುತ್ತಿದ್ದರು ಮತ್ತು ಹೆಚ್ಚು ಹೆಚ್ಚು ದೂರದಿಂದ ಕೇಳುವ ಉಸಿರಾಟವನ್ನು ಆಲಿಸುತ್ತಿದ್ದರು.

ಇದಾದ ಸ್ವಲ್ಪ ದಿನಗಳಲ್ಲೇ ಒಂದು ಕರೆ ಬಂದಿತು: “ಇಲ್ಲಿ ಯಾವ ಆಸ್ಪತ್ರೆಗಳಲ್ಲೂ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಹಾಸಿಗೆಗಳು ಭರ್ತಿಯಾಗಿವೆ, ಆಕ್ಷಿಜನ್‌ ಸಿಗುತ್ತಿಲ್ಲ. ನಿನ್ನ ಹೆಂಡತಿ ಮತ್ತು ಮಗು ಕೊನೆಯ ಗಳಿಗೆಯವರೆಗೂ ಉಸಿರಾಟಕ್ಕಾಗಿ ಪರದಾಡುತ್ತಿದ್ದರು,” ಎಂದು ತನ್ನ ತಂದೆಗಾಗಿ ಆಕ್ಷಿಜನ್‌ ಸಿಲಿಂಡೆರಿನ ಹುಡುಕಾಟದಲ್ಲಿದ್ದ ಹಳ್ಳಿಗನೊಬ್ಬ ಹೇಳಿದ್ದ. ಆ ಸಮಯದಲ್ಲಿ ಇಡೀ ಊರಿಗೆ ಊರೇ ಉಸಿರಿಗಾಗಿ ಪರದಾಡುತ್ತಿತ್ತು.

ಗಾರ್ಡ್‌ ತಾನು ಆಸರೆಗಾಗಿ ಹಿಡಿದಿದ್ದ ಕೊನೆಯ ಬಳ್ಳಿಯೂ ತುಂಡಾಗಿ ಬಿದ್ದಿತ್ತು. ಅವನ ಮಾಲಿಕ ಕೊನೆಗೂ ಆತನಿಗೆ ರಜೆ ನೀಡಿದ. ಆದರೆ ಆತ ರಜೆ ತೆಗೆದುಕೊಂಡು ಹೋಗುವುದಾದರೂ ಎಲ್ಲಿಗೆ? ಆತ ಮತ್ತೆ ತನ್ನ ಊಟದ ಬುತ್ತಿಯೊಡನೆ ʼಡ್ಯೂಟಿಗೆʼ ಮರಳಿದ. ಪುಟ್ಟ ಹಳದಿ ಉಡುಪು ಮತ್ತು ಸೀರೆಯನ್ನು ಆತ ತನ್ನ ಸಣ್ಣ ಚೀಲದಲ್ಲಿ ಮಡಚಿ ಜೋಪಾನ ಮಾಡಿಟ್ಟಿದ್ದಾನೆ. ಮಧುನಾ ಮತ್ತು ಅವನ ಹೆಸರಿಲ್ಲದ ಮಗು ಅಲ್ಲೆಲ್ಲೋ ಸುಟ್ಟು ಕರಕಲಾಗಿದ್ದರು ಅಥವಾ ಹೂಳಲ್ಪಟ್ಟಿದರು.

ಅನುವಾದ: ಶಂಕರ. ಎನ್. ಕೆಂಚನೂರು

Aakanksha

Aakanksha is a reporter and photographer with the People’s Archive of Rural India. A Content Editor with the Education Team, she trains students in rural areas to document things around them.

Other stories by Aakanksha
Illustrations : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru