ಕುರಿಯನ್ನು ಕೊಳ್ಳುವವರು ಚೌಕಾಸಿಗೆ ತೊಡಗಿದಾಗ ಇದರ ಬೆಲೆ ೩೫೦ ರೂ.ಗಳು. ಬೆಲೆಯನ್ನು ಕಡಿಮೆ ಮಾಡಬೇಡಿ, ಕೊರೊನಾ ಕಾರಣದಿಂದಾಗಿ ನಮಗೆ ಯಾವುದೇ ಸಂಪಾದನೆಯಿಲ್ಲ ಎಂದರು ಪ್ರಕಾಶ್‌ ಕೊಕ್ರೆ. ಶ್ವೇತ ವರ್ಣದ ಕುರಿಮರಿಯೊಂದನ್ನು ನೆಲದ ಮೇಲಿನ ತಕ್ಕಡಿಗೆ ಹಾಕಿದ ಅವರು, “ತೀನ್‌ ಕಿಲೋ (ಮೂರು ಕೆ.ಜಿ.)” ಎಂದರು. ಕೆ.ಜಿ.ಗೆ ೨೦೦ ರೂ.ಗಳಂತೆ ಮಾರಲು ಒತ್ತಾಯಿಸಿದ ಇಬ್ಬರು ಗಿರಾಕಿಗಳಿಗೆ, “ಬೆಲೆ ಬಹಳ ಕಡಿಮೆಯಾಯಿತು. ಆದರೆ ನನಗೆ ಹಣದ ಅವಶ್ಯಕತೆಯಿದೆ” ಎಂದು ತಿಳಿಸುತ್ತಾ ಕುರಿಯನ್ನು ಅದರ ಹೊಸ ಮಾಲೀಕರುಗಳಿಗೆ ಒಪ್ಪಿಸಿದರು.

ವಾಡಾ ತಾಲ್ಲೂಕಿನ ದೆಸೈಪಾಡ ಕೊಪ್ಪಲಿನ ತೆರೆದ ಬಯಲಿನಲ್ಲಿ ಜೂನ್‌ ಕೊನೆಯ ವಾರದ ಮಧ್ಯಾಹ್ನ, ಪ್ರಕಾಶ್‌ ಅವರ ಕುಟುಂಬವನ್ನು ನಾನು ಸಂಧಿಸಿದಾಗ, “ಹೋಗಲಿ ಬಿಡಿ. ನಾವು ಏನು ತಾನೇ ಮಾಡಲು ಸಾಧ್ಯ?” ಎನ್ನುತ್ತ ಪ್ರಕಾಶ್‌ ನಿಡುಸುಯ್ದರು. ಕೋವಿಡ್‌-೧೯ ಲಾಕ್‌ ಡೌನ್‌ ಪ್ರಾರಂಭಗೊಂಡು ಮೂರು ತಿಂಗಳು ಕಳೆದಿತ್ತು.

ಧಂಗರ್‌ ಸಮುದಾಯದ ಆರು ಅಲೆಮಾರಿ ಪಶುಪಾಲಕ ಕುಟುಂಬಗಳೊಂದಿಗೆ ಪ್ರಕಾಶ್‌ ಅವರ ಕುಟುಂಬವೂ ಸಹ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಬಯಲೊಂದರಲ್ಲಿ, ಎರಡು ದಿನಗಳ ಮಟ್ಟಿಗೆ ಬೀಡುಬಿಟ್ಟಿತ್ತು. ಕೆಲವು ಹೆಂಗಸರು ತೊಂಡಲೆಯುವ ಚಿಕ್ಕ ಜಾನುವಾರುಗಳನ್ನು ಹಿಡಿದಿಡಲು ನೈಲಾನ್‌ ಬಲೆಯನ್ನು ಅಣಿಗೊಳಿಸುತ್ತಿದ್ದರು. ಧಾನ್ಯಗಳನ್ನು ತುಂಬಿದ್ದ ಮೂಟೆಗಳು, ಅಲ್ಯುಮಿನಿಯಂ ತಪ್ಪಲೆಗಳು, ಪ್ಲಾಸ್ಟಿಕ್‌ ಬಕೆಟ್‌ ಹಾಗೂ ಇತರೆ ವಸ್ತುಗಳು ಬಯಲಿನ ಸುತ್ತಲೂ ಹರಡಿದ್ದವು. ಕೆಲವು ಮಕ್ಕಳು ಕುರುಮರಿಗಳೊಂದಿಗೆ ಆಡುತ್ತಿದ್ದರು.

ಈಗ ತಾನೇ ಚೌಕಾಸಿ ಮಾಡಿದ ಬೆಲೆಗೆ ನಡೆಸಿದ ವ್ಯಾಪಾರದಂತೆಯೇ ಕುರಿಮರಿಗಳು, ಕುರಿಗಳು ಹಾಗೂ ಮೇಕೆಗಳ ಮಾರಾಟವು ಧನ್ಗರ್‌ ಸಮುದಾಯದ ಜೀವನ ನಿರ್ವಹಣೆಯ ಪ್ರಮುಖ ಆಧಾರವಾಗಿದೆ. ಏಳು ಕುಟುಂಬಗಳು, ಸುಮಾರು ೨೦ ಕುದುರೆಗಳೊಂದಿಗೆ ೫೦೦ ಜಾನುವಾರಗಳನ್ನು ಹೊಂದಿವೆ. ಕುರಿಗಳನ್ನು ಸಾಕುವ ಇವರು, ಹಣ ಅಥವ ದವಸ ಧಾನ್ಯಗಳಿಗೆ ಪ್ರತಿಯಾಗಿ ಅವನ್ನು ಮಾರುತ್ತಾರೆ. ಸಾಮಾನ್ಯವಾಗಿ, ಕುಟುಂಬದ ಸ್ವಂತ ಬಳಕೆಯ ಹಾಲಿಗೆಂದು ಮೇಕೆಗಳನ್ನು ಸಾಕಲಾಗುತ್ತದೆ. ಪ್ರಾಸಂಗಿಕವಾಗಿ ಅವನ್ನು ಮಾಂಸದ ವ್ಯಾಪಾರಿಗಳಿಗೆ ಮಾರುತ್ತಾರೆ. ಕೆಲವೊಮ್ಮೆ ಅವರ ಜಾನುವಾರುಗಳು ಹೊಲಗಳಲ್ಲಿ ಮೇಯುತ್ತವೆ. ಅವುಗಳ ಗೊಬ್ಬರಕ್ಕೆ ಪ್ರತಿಯಾಗಿ ಭೂಮಾಲೀಕನು ಆ ಕುಟುಂಬಗಳಿಗೆ ಆಹಾರ, ನೀರು ಹಾಗೂ ಕೆಲವು ದಿನಗಳ ಮಟ್ಟಿಗೆ ತಂಗಲು ಜಾಗವನ್ನು ಒದಗಿಸುತ್ತಾನೆ.

“ಗಂಡು ಕುರಿಯನ್ನು (ಮೆಂಧ) ಮಾತ್ರವೇ ನಾವು ಮಾರಾಟ ಮಾಡಿ, ಹೆಣ್ಣು ಕುರಿಯನ್ನು ಉಳಿಸಿಕೊಳ್ಳುತ್ತೇವೆ. ತಮ್ಮ ಜಮೀನುಗಳಲ್ಲಿ ಮೇಯಿಸಲು ಉಪಯೋಗವಾಗುತ್ತವೆಂಬ ಕಾರಣಕ್ಕಾಗಿ, ರೈತರು ನಮ್ಮಿಂದ ಕುರಿಗಳನ್ನು ಕೊಳ್ಳುತ್ತಾರೆ. ಅವುಗಳ ಗೊಬ್ಬರದಿಂದ ಮಣ್ಣು ಫಲವತ್ತಾಗುತ್ತದೆ” ಎಂಬುದಾಗಿ, ಈ ಪಶುಪಾಲಕರ ಗುಂಪಿನ ಮುಖ್ಯಸ್ಥರಾದ ೫೫ರ ವಯಸ್ಸಿನ ಪ್ರಕಾಶ್‌ ನಮಗೆ ತಿಳಿಸಿದರು.

In June, Prakash’s family – including his daughter Manisha, and grandchildren (left) – and others from this group of Dhangars had halted in Maharashtra's Vada taluka
PHOTO • Shraddha Agarwal
In June, Prakash’s family – including his daughter Manisha, and grandchildren (left) – and others from this group of Dhangars had halted in Maharashtra's Vada taluka
PHOTO • Shraddha Agarwal

ಮಗಳು ಮನೀಷ, ಮೊಮ್ಮಕ್ಕಳು (ಎಡಕ್ಕೆ) ಹಾಗೂ ಧಂಗರ್‌ ಸಮೂಹದ ಇತರರೊಂದಿಗೆ ಜೂನ್‌ ತಿಂಗಳಿನಲ್ಲಿ ಪ್ರಕಾಶ್‌ ಅವರ ಕುಟುಂಬವು ಮಹಾರಾಷ್ಟ್ರದ ವಾಡಾ ತಾಲ್ಲೂಕಿನಲ್ಲಿ ಬೀಡುಬಿಟ್ಟಿತ್ತು.

ಮಹಾರಾಷ್ಟ್ರದ ಅಲೆಮಾರಿ ಬುಡಕಟ್ಟು ಜನಾಂಗವೆಂಬುದಾಗಿ ಪಟ್ಟಿಮಾಡಲಾಗಿರುವ ಧಂಗರ್‌ ಸಮುದಾಯದ ಈ ಏಳು ಕುಟುಂಬಗಳು ಖಾರಿಫ್‌ ಫಸಲಿನ ನಂತರ ನವೆಂಬರ್‌ ತಿಂಗಳ ಸುಮಾರಿಗೆ ತಮ್ಮ ವಾರ್ಷಿಕ ಪ್ರಯಾಣವನ್ನು ಆರಂಭಿಸುತ್ತವೆ. (ಭಾರತದಲ್ಲಿ ಸುಮಾರು ೩.೬ ಮಿಲಿಯನ್‌ ಧಂಗರ್‌ಗಳಿದ್ದಾರೆ. ಮಹಾರಾಷ್ಟ್ರವಷ್ಟೇ ಅಲ್ಲದೆ ಪ್ರಮುಖವಾಗಿ ಬಿಹಾರ್‌, ಛತ್ತೀಸ್‌ಗಡ್‌, ಝಾರ್ಖಂಡ್‌, ಮಧ್ಯ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಇವರನ್ನು ಕಾಣಬಹುದಾಗಿದೆ.)

ಸಂಚಾರದ ಹಿನ್ನೆಲೆಯಲ್ಲಿ ಬೀದಿಗಿಳಿದ ಈ ಏಳು ಕುಟುಂಬಗಳ ಸುಮಾರು ೪೦ ಜನರು ಪ್ರತಿ ಗ್ರಾಮದಲ್ಲೂ ಕೆಲವೊಮ್ಮೆ ಸುಮಾರು ಒಂದು ತಿಂಗಳವರೆಗೂ ಬೀಡುಬಿಟ್ಟಿದ್ದು, ಸಾಮಾನ್ಯವಾಗಿ, ಪ್ರತಿ ೨-೩ ದಿನಗಳಿಗೊಮ್ಮೆ ಹೊಲದಿಂದ ಹೊಲಕ್ಕೆ ಸಾಗುತ್ತಾ ಟಾರ್ಪಾಲಿನಿಂದ ತಮ್ಮ ಆಶ್ರಯ ಸ್ಥಾನವನ್ನು ನಿರ್ಮಿಸಿಕೊಳ್ಳುತ್ತಾರೆ. ಪ್ರಯಾಣ ಕಾಲದಲ್ಲಿ, ತಾವು ಗ್ರಾಮಗಳಿಂದ ದೂರವಿದ್ದಲ್ಲಿ, ಕಾಡಿನ ಪ್ರದೇಶಗಳಲ್ಲಿ ನೆಲೆಸುತ್ತಾರೆ.

ಪ್ರಕಾಶ್‌ ಹಾಗೂ ಆತನ ಸಂಗಡಿಗರು ಮೂಲತಃ ಅಹ್ಮದ್‌ ನಗರ್‌ ಜಿಲ್ಲೆಯ ಧವಲ್ಪುರಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ರಾಜ್ಯಾದ್ಯಂತದ ಇವರ ವಲಸೆಯು ಜೂನ್‌ ತಿಂಗಳ ಹೊತ್ತಿಗೆ ನಾಸಿಕ್‌ ಜಿಲ್ಲೆಯಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿ ಅವರು, ಬರಡು ಜಮೀನುಗಳಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು, ವಿವಿಧ ಗ್ರಾಮಗಳಲ್ಲಿ ನೆಲೆಸಿ, ಮಾನ್ಸೂನ್‌ ತಿಂಗಳುಗಳನ್ನು ಕಳೆಯುತ್ತಾರೆ.

ಆದರೆ ಮಾರ್ಚ್‌ ೨೫ ರಂದು ಕೋವಿಡ್‌-೧೯ ಲಾಕ್‌ಡೌನ್‌ ಪ್ರಾರಂಭಗೊಂಡ ಕಾರಣ, ತಮ್ಮ ಎಂದಿನ ಮಾರ್ಗಗಳಲ್ಲಿನ ಅವರ ಸಂಚಾರವು ತ್ರಾಸದಾಯಕವೆನಿಸಿತು. “ನಾವು ಪ್ರತಿ ದಿನ ಸುಮಾರು ೩೦ ಕಿ.ಮೀ ದೂರವನ್ನು ಕ್ರಮಿಸುತ್ತೇವೆ. ಆದರೆ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ತಮ್ಮ ಜಮೀನುಗಳಲ್ಲಿ ನಾವು ನೆಲೆಸಲು ಅವಕಾಶವೀಯಲಿಲ್ಲ”, ಎಂದರು ಪ್ರಕಾಶ್‌.

ಈ ಕುಟುಂಬಗಳು ವಾಡಾ ತಾಲ್ಲೂಕಿಗೆ ಬರುವ ಮೊದಲು, ವಾಡಾದಿಂದ ಸುಮಾರು ೫೫ ಕಿ.ಮೀ. ದೂರವಿರುವ ಪಾಲ್ಘರ್‌ನ ವನ್‌ಗಾಂವ್‌ ಗ್ರಾಮದ ಜಮೀನೊಂದರಲ್ಲಿ, ಲಾಕ್‌ಡೌನ್‌ ತೆರವಾಗುವುದನ್ನು ಕಾಯುತ್ತಾ ಸುಮಾರು ೪೦ ದಿನಗಳ ಕಾಲ ತಂಗಿದ್ದವು. ಜೂನ್‌ನಲ್ಲಿ ಸಂಚಾರಕ್ಕೆ ಅವಕಾಶ ದೊರೆತ ಕಾರಣ ಇವರು ಮತ್ತೆ ಪ್ರಯಾಣವನ್ನು ಆರಂಭಿಸಿದರು. “ನಮ್ಮ ಜಾನುವಾರುಗಳಿಗಾಗಿ ನಾವು ಪ್ರಯಾಣಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಪೊಲೀಸರು ನಮಗೆ ತೊಂದರೆ ನೀಡಲಿಲ್ಲ. ಜನರಿಗೂ ನಾವು ಅವರ ಗ್ರಾಮವನ್ನು ತೊರೆಯುವುದೇ ಬೇಕಿತ್ತು.” ಎಂಬುದಾಗಿ ಪ್ರಕಾಶ್‌ ತಿಳಿಸಿದರು.

Selling lambs, sheep and goats is the main source of sustenance for the Dhangar families, headed by Prakash (right image) – with his wife Jayshree (left) and niece Zai
PHOTO • Shraddha Agarwal
Selling lambs, sheep and goats is the main source of sustenance for the Dhangar families, headed by Prakash (right image) – with his wife Jayshree (left) and niece Zai
PHOTO • Shraddha Agarwal

ಕುರಿಮರಿಗಳು, ಕುರಿ ಹಾಗೂ ಮೇಕೆಗಳ ಮಾರಾಟವು ಧಂಗರ್‌ ಕುಟುಂಬಗಳ ಜೀವನ ನಿರ್ವಹಣೆಯ ಪ್ರಮುಖ ಆಧಾರವೆನಿಸಿದೆ. ತಮ್ಮ ಪತ್ನಿ ಜಯಶ್ರೀ (ಎಡಕ್ಕೆ) ಹಾಗೂ ಸೋದರನ ಯಾ ಸೋದರಿಯ ಮಗಳು, ಜೈ಼ಯೊಂದಿಗಿರುವ ಇವರ ಮುಖಂಡ ಪ್ರಕಾಶ್‌.

ವನ್‌ಗಾಂವ್‌ ನ ಕೆಲವು ನಿವಾಸಿಗಳು ತನ್ನ ಕುಟುಂಬದ ಮೇಲೆ ಹರಿಹಾಯ್ದ ಘಟನೆಯನ್ನು ಪ್ರಕಾಶ್‌ ನೆನಪಿಸಿಕೊಂಡರು. “ನಮ್ಮ ಜಮೀನಿಗೆ ಬಂದು ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತೀರೆಂದ ಅವರು, ನಮಗೆ ಮನೆಯಲ್ಲೇ ಉಳಿಯಬೇಕೆಂಬುದಾಗಿ ತಿಳಿಸಿದರು. ಆದರೆ ಇದೇ ನಮ್ಮ ಜೀವನ. ನನ್ನ ತಂದೆ ಹಾಗೂ ಆತನ ತಂದೆ ಎಲ್ಲರೂ ತಮ್ಮ ಜಾನುವಾರುಗಳೊಂದಿಗೆ ಸುತ್ತುತ್ತಿದ್ದವರೇ. ನಾವು ಕೇವಲ ಒಂದು ಜಾಗದಲ್ಲಿ ಎಂದಿಗೂ ನೆಲೆಸಿದ್ದೇ ಇಲ್ಲ. ನಾವು ಮನೆಯಲ್ಲೇ ಉಳಿಯಲು ನಮಗೆ ಮನೆಯೇ ಇಲ್ಲ.”

ಆದಾಗ್ಯೂ, ಈ ಲಾಕ್‌ಡೌನ್‌; ತಮಗೂ ಒಂದು ಮನೆಯೆಂಬುದು ಇರಬೇಕಿತ್ತು ಎಂದು ಅವರಿಗೆ ಅನಿಸುವಂತೆ ಮಾಡಿದೆ. “ಲಾಕ್‌ಡೌನ್‌ನಿಂದಾಗಿ ನಾವು ತೊಂದರೆಗೆ ಸಿಲುಕಿದ್ದೇವೆ. ನಮಗೂ ಒಂದು ಮನೆಯಿದ್ದಲ್ಲಿ ಸುಲಭವೆನಿಸುತ್ತಿತ್ತು” ಎನ್ನುತ್ತಾರೆ ಪ್ರಕಾಶ್‌.

ಲಾಕ್‌ಡೌನ್‌ ಸಂದರ್ಭದಲ್ಲಿ, ಯಾವುದೇ ವಾಹನ ಸೌಕರ್ಯವಿಲ್ಲದ ಕಾರಣ, ಧನ್ಗರ್‌ ಕುಟುಂಬಗಳು ಇತರೆ ಸಮಸ್ಯೆಗಳನ್ನೂ ಎದುರಿಸಬೇಕಾಯಿತು. ಪಶುಪಾಲಕರು ಸದಾ ಸಂಚರಿಸುತ್ತಲೇ ಇರುವ ಕಾರಣ ಅಥವ ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಿ ಅವರು ನೆಲೆಸುವುದರಿಂದಾಗಿ ಅವರಿಗೆ ವೈದ್ಯಕೀಯ ಸೌಲಭ್ಯಗಳು ಸುಲಭವಾಗಿ ದೊರಕುವುದಿಲ್ಲ. ಜೂನ್‌ ತಿಂಗಳ ಮಧ್ಯ ಭಾಗದಲ್ಲಿ “ನಮ್ಮ ಸೋದರನ ಮಗಳು ಹಾಗೂ ಆಕೆಯ ಮಗುವನ್ನು ನಾವು ಕಳೆದುಕೊಳ್ಳಬೇಕಾಯಿತು. ಆಕೆ ಗರ್ಭಿಣಿಯಾಗಿದ್ದಳು” ಎಂದರು ಪ್ರಕಾಶ್‌.

ಸುಮನ್‌ ಕೊಕ್ರೆ, ಹತ್ತಿರದ ನಲ್ಲಿಯಲ್ಲಿ ನೀರು ಹಿಡಿಯಲು ಹೋದಾಗ, ಆಕೆಗೆ ಹಾವು ಕಚ್ಚಿತು. ಸಮುದಾಯದ ಕೆಲವು ಸದಸ್ಯರು ಆಕೆಯನ್ನು ಪತ್ತೆಹಚ್ಚಿದರು. ಆಟೋರಿಕ್ಷಾ ದೊರಕದ ಕಾರಣ, ಇವರು ಖಾಸಗಿ ವಾಹನಕ್ಕೆ ಮೊರೆಹೋದರು. ಪಾಲ್ಘರ್‌ ಆಸ್ಪತ್ರೆಯಲ್ಲಿ ಕೋವಿಡ್‌-೧೯ ರೋಗಿಗಳು ಹೆಚ್ಚಾಗಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು. “ಒಂದು ಆಸ್ಪತ್ರೆಯಿಂದ ಮತ್ತೊಂದಕ್ಕೆ ಆಕೆಯನ್ನು ಒಯ್ಯುತ್ತಾ ನಾವು ಹಲವಾರು ಗಂಟೆಗಳನ್ನು ವ್ಯಯಿಸಿದೆವು. ಆದರೆ ಯಾರೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ. ರಾತ್ರಿ, ನಾವು ಆಕೆಯನ್ನು ಉಲ್ಹಾಸ್‌ನಗರ್‌ಗೆ (ಸುಮಾರು ೧೦೦ ಕಿ.ಮೀ. ದೂರದ) ಕರೆದೊಯ್ಯಲು ಪ್ರಾರಂಭಿಸಿದೆವು. ಆದರೆ ಆಕೆ ದಾರಿಯಲ್ಲೇ ಮೃತಪಟ್ಟಳು. ಅಲ್ಲಿನ ಆಸ್ಪತ್ರೆಯವರು ಎರಡು ದಿನಗಳ ನಂತರ ಆಕೆಯ ದೇಹವನ್ನು ನಮಗೆ ನೀಡಿದರು,” ಎಂಬುದಾಗಿ ಪ್ರಕಾಶ್‌ ತಿಳಿಸಿದರು.

“ಮೂರು ಹಾಗೂ ನಾಲ್ಕರ ವಯಸ್ಸಿನ ನನ್ನ ಗಂಡು ಮಕ್ಕಳು ಆಯಿ ಎಲ್ಲಿಗೆ ಹೋದಳು ಎಂದು ನನ್ನನ್ನು ಪ್ರಶ್ನಿಸುತ್ತಾರೆ. ನಾನು ಅವರಿಗೆ ಏನೆಂದು ಹೇಳಲಿ? ಇನ್ನೂ ಜಗತ್ತನ್ನೇ ಕಾಣದ ನನ್ನ ಮಗು ಹಾಗೂ ಪತ್ನಿ ತೀರಿಹೋದರು. ಇದನ್ನು ಅವರಿಗೆ ನಾನು ಹೇಳುವುದಾದರೂ ಹೇಗೆ?”

'We will take care of ourselves, but our sheep need fodder and water', says Zai Kokre (left and centre), with her aunt Jagan, her son (centre) and others from her family
PHOTO • Shraddha Agarwal
'We will take care of ourselves, but our sheep need fodder and water', says Zai Kokre (left and centre), with her aunt Jagan, her son (centre) and others from her family
PHOTO • Shraddha Agarwal
'We will take care of ourselves, but our sheep need fodder and water', says Zai Kokre (left and centre), with her aunt Jagan, her son (centre) and others from her family
PHOTO • Shraddha Agarwal

' ನಾವು ನಮ್ಮ ಕಾಳಜಿ ವಹಿಸುತ್ತೇವೆ. ಆದರೆ ನಮ್ಮ ಕುರಿಗಳಿಗೆ ಮೇವು ಹಾಗೂ ನೀರಿನ ಅಗತ್ಯವಿದೆ, ʼ ಎನ್ನುತ್ತಾರೆ ತನ್ನ ಚಿಕ್ಕಮ್ಮ ಜಗನ್‌, ಮಗ (ಮಧ್ಯದಲ್ಲಿ) ಹಾಗೂ ಕುಟುಂಬದ ಇತರ ಸದಸ್ಯರೊಂದಿಗಿರುವ ಜೈ಼ ಕೊಕ್ರೆ (ಎಡ ಹಾಗೂ ಮಧ್ಯ ಭಾಗದಲ್ಲಿರುವ).

ಸರ್ವವ್ಯಾಪಿಯಾಗಿರುವ ಈ ವ್ಯಾಧಿಯ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ಕುರಿತಂತೆ ಈ ಪಶುಪಾಲಕರಿಗೆ ಅರಿವಿದೆಯಾದರೂ ಕಾಡಿನ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ಮೊಬೈಲ್‌ ನೆಟ್‌ವರ್ಕ್‌ ಲಭ್ಯವಿಲ್ಲದ ಕಾರಣ, ಸದಾ ಇವರಿಗೆ ಸುದ್ದಿ ಸಮಾಚಾರಗಳು ಹಾಗೂ ಇತರೆ ಮಾಹಿತಿಗಳು ದೊರೆಯುವುದಿಲ್ಲ. “ನಾವು ರೇಡಿಯೋದಲ್ಲಿ ಬರುವುದನ್ನು ಆಲಿಸುತ್ತೇವೆ. ಕೈಯನ್ನು ತೊಳೆದು, ಮಾಸ್ಕ್‌ ಧರಿಸುವಂತೆ ನಮಗೆ ತಿಳಿಸಲಾಗುತ್ತದೆ. ಗ್ರಾಮಗಳಿಗೆ ತೆರಳಿದಾಗ ನಮ್ಮ ಪದರ್‌ನಿಂದ (ಸೀರೆಯ ಸೆರಗು) ಮುಖವನ್ನು ಮುಚ್ಚಿಕೊಳ್ಳುತ್ತೇವೆ” ಎನ್ನುತ್ತಾರೆ ಜೈ಼ ಕೊಕ್ರೆ.

ಅಂದು ಅವರು ಪಾಲ್ಘರ್‌ನಲ್ಲಿ ಬೀಡುಬಿಟ್ಟಿದ್ದರು. ಪ್ರಕಾಶ್‌ ಅವರ ಸೋದರನ ಮಗಳು ೨೩ ವರ್ಷದ ಜೈ಼, ತಾತ್ಕಾಲಿಕವಾಗಿ ಹೂಡಿದ್ದ ಕಲ್ಲಿನ ಒಲೆಯಲ್ಲಿ ಕಟ್ಟಿಗೆಗಳನ್ನು ಉರಿಸಿ, ಜೋಳದ ಭಕ್ರಿಗಳನ್ನು (ರೊಟ್ಟಿ) ತಯಾರಿಸುತ್ತಿದ್ದರು. ಆಕೆಯ ಒಂದು ವರ್ಷದ ಮಗ, ದನೇಶ್‌ ಹತ್ತಿರದಲ್ಲೇ ಆಡಿಕೊಂಡಿದ್ದ. ಧನ್ಗರ್‌ನ ನಿವಾಸಿಗಳು ಇವರನ್ನು ಅಲ್ಲಿಂದ ತೆರಳುವಂತೆ ತಿಳಿಸಿದ ಸಂದರ್ಭವನ್ನು ಉಲ್ಲೇಖಿಸುತ್ತ ಆಕೆ, “ನಾವು ಒಂದು ಹೊತ್ತು ಉಂಡರೂ ಚಿಂತೆಯಿಲ್ಲ. ಆದರೆ ದಯವಿಟ್ಟು ನಮ್ಮ ಜಾನುವಾರುಗಳ ಕಾಳಜಿ ವಹಿಸಿ. ನಮ್ಮ ಕುರಿಗಳಿಗೆ ಸೂಕ್ತವೆನಿಸುವ ಜಾಗವೊಂದನ್ನು ನೀವು ನೀಡಿದ್ದಲ್ಲಿ ನಾವು ಸಂತೋಷದಿಂದಿರುತ್ತೇವೆ. ಆ ಜಾಗವು ಕಾಡಿನಲ್ಲಿದ್ದರೂ ಸರಿಯೇ. ನಾವು ನಮ್ಮ ಕಾಳಜಿ ವಹಿಸುತ್ತೇವೆ. ಆದರೆ ನಮ್ಮ ಕುರಿಗಳಿಗೆ ಮೇವು ಹಾಗೂ ನೀರಿನ ಅಗತ್ಯವಿದೆ.” ಎಂದು ತಿಳಿಸಿದರು.

ಲಾಕ್‌ಡೌನ್‌ಗೆ ಮೊದಲು, ಏಳು ಕುಟುಂಬಗಳು ಒಟ್ಟಾಗಿ ಸೇರಿ, ಒಂದು ವಾರಕ್ಕೆ ಸುಮಾರು ೫-೬ ಕುರಿಗಳನ್ನು ಮಾರುತ್ತಿದ್ದವು. ಕೆಲವೊಮ್ಮೆ ವಾರಕ್ಕೆ ಒಂದು ಪ್ರಾಣಿಯಷ್ಟೇ ಮಾರಾಟವಾಗುತ್ತಿದ್ದುದೂ ಉಂಟು. ಸ್ಥಿತಿವಂತ ರೈತರು ಆಗಾಗ ಇವರಿಂದ ಹೆಚ್ಚಿನ ಕುರಿಗಳನ್ನು ಕೊಳ್ಳುತ್ತಾರೆ. ಪ್ರತಿ ತಿಂಗಳು ಸಾಮಾನ್ಯವಾಗಿ ೧೫ ಮೇಕೆಗಳನ್ನು ಮಾರುವ ಇವರು, ಆದಾಯ ಹಾಗೂ ಖರ್ಚನ್ನು ಸಾಮೂಹಿಕವಾಗಿ ನಿಭಾಯಿಸುತ್ತಾರೆ. ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ನಾವು ಒಟ್ಟಾಗಿ ಬದುಕುತ್ತೇವೆ.” ಎನ್ನುತ್ತಾರೆ ಪ್ರಕಾಶ್‌.

ಲಾಕ್‌ಡೌನ್‌ ಸಂದರ್ಭದಲ್ಲಿ ಮಾರಾಟವು ಕ್ಷೀಣಿಸಿತ್ತು. (ಇದರ ಅಂಕಿ ಅಂಶಗಳು ಪ್ರಕಾಶ್‌ಗೆ ನೆನಪಿರಲಿಲ್ಲ.) ಒಂದು ಕೆ.ಜಿ.ಗೆ ಅಕ್ಕಿಯ ಬೆಲೆ ೫೦ರಿಂದ ೯೦ ರೂ.ಗಳಿಗೆ ಹಾಗೂ ಗೋಧಿಯ ಬೆಲೆಯು ಕೆ.ಜಿ.ಯೊಂದಕ್ಕೆ ೩೦ರಿಂದ ೬೦ ರೂ.ಗಳಿಗೆ ಏರಿಕೆಯಾಗಿದ್ದಾಗ್ಯೂ, ತಮ್ಮ ಉಳಿತಾಯದ ಹಣದಿಂದ ಇವರು ತಮ್ಮ ವೆಚ್ಚಗಳನ್ನು ನಿಭಾಯಿಸಿದರು. “ಇಲ್ಲಿನ (ವಾಡಾ) ಅಂಗಡಿಗಳೆಲ್ಲವೂ ನಮ್ಮನ್ನು ಲೂಟಿ ಮಾಡುತ್ತಿವೆ. ಇವರು ಧಾನ್ಯಗಳನ್ನು ನಮಗೆ ಅತ್ಯಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಈಗ ನಾವು ನಮ್ಮ ಮುಂದಿನ ತಂಗುದಾಣದವರೆಗೂ ದವಸ ಧಾನ್ಯಗಳನ್ನು ಉಳಿಸಿಕೊಳ್ಳಬೇಕು. ಈ ದಿನಗಳಲ್ಲಿ ನಾವು ಕೇವಲ ಒಂದು ಹೊತ್ತಿನ ಊಟವನ್ನಷ್ಟೇ ಮಾಡುತ್ತಿದ್ದೇವೆ.” ಎಂದರು ಜೈ಼.

ಸರ್ಕಾರದಿಂದಲೂ ತಮಗೆ ಸ್ವಲ್ಪ ದಿನಸಿ ದೊರೆಯಿತೆಂಬುದಾಗಿ ಇವರು ತಿಳಿಸುತ್ತಾರೆ. “ಅಹ್ಮದ್‌ನಗರದಲ್ಲಿ ಸರ್ಕಾರದ ವತಿಯಿಂದ ಏಳು ಕುಟುಂಬಗಳಿಗೆ ಕೇವಲ ೨೦ ಕೆ.ಜಿ. ಅಕ್ಕಿ ದೊರೆಯಿತು. ನೀವೇ ಹೇಳಿ, ನಮ್ಮಲ್ಲಿನ ಇಷ್ಟೊಂದು ಜನಕ್ಕೆ ೨೦ ಕೆ.ಜಿ. ದಿನಸಿಯು ಸಾಲುತ್ತದೆಯೇ? ಧವಲ್ಪುರಿಯಲ್ಲಿ (ಈ ಕುಟುಂಬಗಳು ಆಗಾಗ್ಗೆ ಭೇಟಿ ನೀಡುವ ಗ್ರಾಮ) ನಾವು ಕಡಿಮೆ ಬೆಲೆಗೆ ದಿನಸಿಯನ್ನು ಕೊಳ್ಳಬಹುದು. ಆದರೆ ಇತರೆ ಸ್ಥಳಗಳಲ್ಲಿ ಪೂರ್ತಿ ಹಣವನ್ನು ನಾವು ಪಾವತಿಸಬೇಕು…” ಎನ್ನುತ್ತಾರೆ ಪ್ರಕಾಶ್‌.

While travelling, this group – which includes Gangadhar (left) and Ratan Kurhade – carries enough rations on their horses to last nearly a month
PHOTO • Shraddha Agarwal
While travelling, this group – which includes Gangadhar (left) and Ratan Kurhade – carries enough rations on their horses to last nearly a month
PHOTO • Shraddha Agarwal

ಗಂಗಾಧರ್‌ (ಎಡಕ್ಕೆ) ಹಾಗೂ ರತನ್‌ ಕುರ್ಹಡೆ ಅವರನ್ನೊಳಗೊಂಡ ಈ ಸಮೂಹವು ತಮ್ಮ ಪ್ರಯಾಣ ಕಾಲದಲ್ಲಿ,  ಕುದುರೆಗಳ ಮೇಲೆ ಸುಮಾರು ಒಂದು ತಿಂಗಳಿಗಾಗುವಷ್ಟು ದಿನಸಿಯನ್ನು ಒಯ್ಯುತ್ತದೆ.

ಪ್ರಯಾಣ ಕಾಲದಲ್ಲಿ ಈ ಕುಟುಂಬಗಳ ಸಮೂಹವು ಕುದುರೆಗಳ ಮೇಲೆ ಸುಮಾರು ಒಂದು ತಿಂಗಳಿಗಾಗುವಷ್ಟು ದಿನಸಿಯನ್ನು ಒಯ್ಯುತ್ತಾರೆ. “ಕೆಲವೊಮ್ಮೆ, ಕಾಡುಗಳಲ್ಲಿ ನೆಲೆಸಿದಾಗ, ಎಣ್ಣೆಯು ಬೇಗನೆ ಮುಗಿದುಹೋಗುತ್ತದೆ ಅಥವ ಕೆಲವೊಮ್ಮೆ ಅಕ್ಕಿಯು ೧೫ ದಿನಗಳಿಗೇ ಖಾಲಿಯಾಗುತ್ತದೆ. ಆಗ ನಾವು ಹತ್ತಿರದ ಗ್ರಾಮಗಳಿಗೆ ವಾಪಸ್ಸು ಬಂದು ದಿನಸಿಯನ್ನು ಕೊಳ್ಳಬೇಕು” ಎಂಬುದಾಗಿ ಪ್ರಕಾಶ್‌ ತಿಳಿಸಿದರು.

“ಈ ರೋಗದ (ಕೋವಿಡ್‌-೧೯) ದೆಸೆಯಿಂದಾಗಿ, ನಮ್ಮ ಮಕ್ಕಳೂ ನಮ್ಮೊಂದಿಗೆ ಪ್ರಯಾಣಿಸುತ್ತಿದ್ದಾರೆ. ಅವರು ಶಾಲೆಯಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಬೇಕಿತ್ತು,” ಎನ್ನುತ್ತಾರೆ ಪ್ರಕಾಶ್‌ ಅವರ ಸಹೋದರಿ, ೩೦ ವರ್ಷದ ಜಗನ್‌ ಕೊಕ್ರೆ. ಸಾಮಾನ್ಯವಾಗಿ, ಕೇವಲ ಚಿಕ್ಕ ಮಕ್ಕಳು ಮಾತ್ರವೇ ತಮ್ಮ ಹೆತ್ತವರೊಂದಿಗೆ ಪ್ರಯಾಣಿಸುತ್ತಾರೆ. ೬ರಿಂದ ೮ ವರ್ಷದ ಮಕ್ಕಳು ಧವಲ್ಪುರಿಯ ವಸತಿ ಶಾಲೆಗಳಲ್ಲಿಯೇ (ಆಶ್ರಮಶಾಲೆಗಳು) ನೆಲೆಸುತ್ತಾರೆ. ಬೇಸಿಗೆಯಲ್ಲಿ ಶಾಲೆಗಳು ಮುಚ್ಚಿದಾಗ ಮಾತ್ರ ಹಿರಿಯ ಮಕ್ಕಳು ಹೆತ್ತವರೊಂದಿಗೆ ತಾವೂ ಪ್ರಯಾಣವನ್ನು ಕೈಗೊಳ್ಳುತ್ತಾರೆ. “ನನ್ನ ಮಗನು ಕುರಿಗಳ ಆರೈಕೆ ಮಾಡುತ್ತಿದ್ದಾನೆ. ನಾನು ತಾನೇ ಏನು ಮಾಡಲಾದೀತು? ಆಶ್ರಮಶಾಲೆಗಳು ಮುಚ್ಚಿರುವ ಕಾರಣ ನಮ್ಮೊಂದಿಗೆ ಅವನನ್ನೂ ಕರೆತರಬೇಕಾಯಿತು” ಎಂದರು ಜಗನ್‌.

ಜಗನ್‌ ಅವರ ಇಬ್ಬರು ಗಂಡು ಮಕ್ಕಳಾದ ಸನ್ನಿ ಹಾಗೂ ಪ್ರಸಾದ್‌, ಧವಲ್ಪುರಿಯಲ್ಲಿ, ೯ ಮತ್ತು ೭ನೇ ತರಗತಿಯಲ್ಲಿ ಓದುತ್ತಿದ್ದಾರೆ; ಆಕೆಯ ೬ ವರ್ಷದ ಮಗಳು, ತೃಪ್ತಿ ಇನ್ನೂ ಶಾಲೆಗೆ ಸೇರಿಲ್ಲ. ಆಕೆಯು ಕುದುರೆಗಳ ಮೇಲೆ ಸಾಮಾನು ಸರಂಜಾಮುಗಳನ್ನು ಪೇರಿಸಲು ತಾಯಿಗೆ ನೆರವಾಗುತ್ತಾಳೆ. “ನಮ್ಮ ಮಕ್ಕಳು ನಮ್ಮಂತೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸೂಕ್ತ ಆಶ್ರಯ ಸ್ಥಾನವಿಲ್ಲದೆ, ಅಲೆಯುವುದು

ನಮಗೆ ಬೇಕಿಲ್ಲ. ಪ್ರಯಾಣವು ತ್ರಾಸದಾಯಕ. ಆದರೆ ನಮ್ಮ ಜಾನುವಾರುಗಳಿಗಾಗಿ ನಾವು ಪ್ರಯಾಣಿಸಲೇಬೇಕು” ಎಂಬುದಾಗಿ ಜಗನ್‌ ತಿಳಿಸುತ್ತಾರೆ.

ಜೂನ್‌ ಕೊನೆಯ ಹೊತ್ತಿಗೆ ನಾನು ಅವರನ್ನು ಸಂಧಿಸಿದಾಗ, ಏಳು ಕುಟುಂಬಗಳು ಪಾಲ್ಘರ್‌ನಿಂದ ಹೊರಡಲು ಅಣಿಯಾಗುತ್ತಿದ್ದವು. “ನಮ್ಮ ಕುರಿಗಳು ಈ ಪ್ರದೇಶಗಳಲ್ಲಿನ ಮಳೆಯನ್ನು ತಾಳಲಾರವು. ಇಲ್ಲಿನ ಮಣ್ಣು ಜಿಗುಟಾಗಿದ್ದು, ಅವು ಅನಾರೋಗ್ಯಕ್ಕೀಡಾಗುತ್ತವೆ. ಆದ್ದರಿಂದ ನಾವು ನಾಸಿಕ್‌ಗೆ ಮರಳಬೇಕು. ಅಲ್ಲಿ ಮಳೆ ಕಡಿಮೆ.” ಎಂದರು ಪ್ರಕಾಶ್‌.

ಇತ್ತೀಚೆಗೆ ನಾವು ದೂರವಾಣಿಯಲ್ಲಿ ಮಾತನಾಡಿದಾಗ, ಪಶುಪಾಲಕರು, ತಾವು ತಲೆಮಾರುಗಳಿಂದಲೂ ಬಳಸುತ್ತಿರುವ ಮಾರ್ಗಗಳನ್ನು ಹಾಗೂ ಚಲನೆಯ ಗತಿಯನ್ನು ಅನುಸರಿಸುತ್ತಾ ನಾಸಿಕ್‌ ಜಿಲ್ಲೆಯ ಸಿನ್ನರ್‌ ತಾಲ್ಲೂಕಿನಲ್ಲಿ ಪ್ರಯಾಣಿಸುತ್ತಿದ್ದರು.

ಅನುವಾದ: ಶೈಲಜ ಜಿ. ಪಿ.

Shraddha Agarwal

Shraddha Agarwal is a Reporter and Content Editor at the People’s Archive of Rural India.

Other stories by Shraddha Agarwal
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.