ಫಾತಿಮಾ ಬೀಬಿಯ ನವಜಾತ ಶಿಶುವು ಸಾವನ್ನಪ್ಪಿದ ನಂತರವೇ ಆಕೆ ತನ್ನ ಐದನೇ ಹೆರಿಗೆಗಾಗಿ ಸಮುದಾಯ ಪ್ರಸೂತಿ ಗೃಹಕ್ಕೆ ಬಂದಿದ್ದಳು. ಅವಳ ಎಲ್ಲಾ ಮಕ್ಕಳೂ (ಮೂರು ಹೆಣ್ಣು ಮತ್ತು ಒಂದು ಗಂಡು) ಕೂಡ ಮನೆಯಲ್ಲೇ ಹುಟ್ಟಿದವುಗಳು. ''ಆಮ್ಲಜನಕದ ಕೊರತೆಯಿಂದ ನನ್ನ ಗಂಡುಮಗು ಸಾವನ್ನಪ್ಪಿತ್ತು. ಹೀಗಾಗಿ ಈ ಬಾರಿ ಆಸ್ಪತ್ರೆಗೆ ಬಂದಿದ್ದೇವೆ'', ಎನ್ನುತ್ತಿದ್ದಾರೆ ಫಾತಿಮಾಳ ತಾಯಿ ಜಮೀಲಾ.

ತಾವು ನೆಲೆಸಿರುವ ರಾಮಪುರ ಹಳ್ಳಿಯಿಂದ ಉತ್ತರ 24 ಪರ್ಗನಾಸ್ ಜಿಲ್ಲೆಯಲ್ಲಿರುವ ಬಯೇರ್ಮಾರಿ ಹಳ್ಳಿಗೆ ಇರುವ ಕೇವಲ 30 ನಿಮಿಷಗಳ ದೂರವನ್ನು ಕ್ರಮಿಸಲು ಈ ಕುಟುಂಬವು 700 ರೂಪಾಯಿಗಳನ್ನು ಬಾಡಿಗೆ ವ್ಯಾನಿಗಾಗಿ ಖರ್ಚುಮಾಡಿತ್ತು. ''ಇಲ್ಲಿಯ ಬಡ ಹೆಂಗಸರು ದೋಣಿಗಳಲ್ಲಿ ಆಸ್ಪತ್ರೆಗೆ ಬರುತ್ತಾರೆ. ನೀರಿನಲ್ಲಿ ಹೆಚ್ಚಿನ ಉಬ್ಬರಗಳಿದ್ದಾಗ ಇದು ಅಪಾಯಕಾರಿ. ಇಂಥದ್ದೇ ಘಟನೆಯೊಂದರಲ್ಲಿ ಕಳೆದ ಬಾರಿ ಜನರಿಂದ ತುಂಬಿದ್ದ ದೋಣಿಯೊಂದು ಭಾರೀ ಗಾತ್ರದ ಅಲೆಗಳಿಗೆ ಸಿಲುಕಿ ಕಟ್ಖಲಿ ಪ್ರದೇಶದ ಆಸುಪಾಸಿನಲ್ಲಿ ತಲೆಕೆಳಗಾಗಿತ್ತು. ಕೆಲವರ ಪ್ರಾಣ ಬೇರೆ ಹೋಗಿತ್ತು'', ಎನ್ನುತ್ತಾಳೆ ಆಕೆ.

ಫಾತಿಮಾಳ ಕಷ್ಟದ ಕಥೆಯು ಸುಂದರಬನದಲ್ಲಿ ಗರ್ಭಿಣಿ ಹೆಂಗಸರು ಎದುರಿಸಬೇಕಾದ ಸವಾಲುಗಳಿಗೆ ಕನ್ನಡಿ ಹಿಡಿದಂತಿದೆ. ಇದು ಇತರೆ ವೈದ್ಯಕೀಯ ಸಮಸ್ಯೆಗಳ ವಿಚಾರದಲ್ಲೂ ಸತ್ಯವೇ. ಈ ದ್ವೀಪಪ್ರದೇಶದಲ್ಲಿ ನೆಲೆಸಿರುವ ಎಲ್ಲರಿಗೂ ಕೂಡ ವೈದ್ಯಕೀಯ ನೆರವನ್ನು ಪಡೆಯುವುದೆಂದರೆ ಇಂದಿಗೂ ಕನಸಿನ ಮಾತೇ.

ಹಾಗೆ ನೋಡಿದರೆ ಸುಂದರ್ ಬನ್ ನಲ್ಲಿರುವ ವೈದ್ಯಕೀಯ ಉಪಕೇಂದ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯವಸ್ಥೆಯ ಸಹಿತವಾಗಿ ಈ ಉಪಕೇಂದ್ರಗಳು ಇಲ್ಲಿಯ ಸಮುದಾಯದ ಜನರಿಗೆ ಕೈಗೆಟಕುವ ಮೊದಲ ಆರೋಗ್ಯ ಸೇವಾ ಘಟಕಗಳು. ಪ್ರತೀ ಉಪಕೇಂದ್ರವೂ ಕೂಡ 5000 ದಷ್ಟು ಜನರನ್ನು ತಲುಪಬೇಕೆಂಬ ಉದ್ದೇಶವನ್ನಿರಿಸಿಕೊಂಡು ಮಾಡಿದ್ದ ವ್ಯವಸ್ಥೆ. ದಕ್ಷಿಣ 24 ಪರ್ಗನಾಸ್ ಜಿಲ್ಲೆಯ ಪಶ್ಚಿಮ ಶ್ರೀಪತಿನಗರ ಮತ್ತು ಪೂರ್ವ ಶ್ರೀಪತಿನಗರ ಹಳ್ಳಿಗಳ ಒಟ್ಟು ಜನಸಂಖ್ಯೆಯು ಸುಮಾರು 9500 ರಷ್ಟಾಗುತ್ತದೆ (2011 ರ ಜನಗಣತಿಯ ಪ್ರಕಾರ). ಇನ್ನು ಈ ಅವಧಿಯಿಂದ ಹೆಚ್ಚಿದ ಜನಸಂಖ್ಯೆಯನ್ನು ಪರಿಗಣಿಸಿದ್ದೇ ಆದರೆ 10,000 ಕ್ಕೂ ಹೆಚ್ಚು ಜನರು ತಮ್ಮ ವೈದ್ಯಕೀಯ ಅವಶ್ಯಕತೆಗಾಗಿ ಉತ್ತಮ ಉಪಕರಣ, ಸೌಲಭ್ಯಗಳಿಲ್ಲದ ಇರುವ ಎರಡೇ ಎರಡು ಉಪಕೇಂದ್ರಗಳ ಮೇಲೆ ಮತ್ತು ತಮ್ಮನ್ನು ತಾವು ವೈದ್ಯರೆಂದು ಕರೆದುಕೊಳ್ಳುವ ಕೆಲ ಸ್ಥಳೀಯರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಪಶ್ಚಿಮ ಶ್ರೀಪತಿನಗರ ಹಳ್ಳಿಯೂ ಸೇರಿದಂತೆ ಸುಂದರಬನದ ದೂರದೂರದ ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಮಸ್ಥರು ಮೊಬೈಲ್ ವೈದ್ಯಕೀಯ ಘಟಕಗಳ ಮೊರೆ ಹೋಗಬೇಕಾಗಿ ಬಂದಿದೆ. ಇಂಥಾ ಕೆಲವು ಘಟಕಗಳು ಇಲ್ಲಿಯ ನದಿಗಳನ್ನು ದಾಟುತ್ತಿರುವ ದೋಣಿಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ನಾವು ಭೇಟಿ ನೀಡಿದ ದಿನದಂದು ಆಸುಪಾಸಿನ ಪ್ರದೇಶಗಳ ಹಲವು ರೋಗಿಷ್ಠರು ಗುಂಪಾಗಿ ಚಿಕ್ಕದೊಂದು ಖಾಲಿ ಕೋಣೆಯ ಪಕ್ಕದಲ್ಲಿ ನಿಂತಿದ್ದರು. ಆ ದಿನದಂದು ಈ ಪುಟ್ಟ ಕೋಣೆಯೇ ಇವರಿಗಾಗಿ ಕ್ಲಿನಿಕ್ ಆಗಿ ಬದಲಾಗಲಿತ್ತು. ಶಿಬುವಾ ನದಿಯನ್ನು ದಾಟಿ ಎರಡು ಘಂಟೆಗಳ ಪ್ರಯಾಣವನ್ನು ಮುಗಿಸಿದ ವೈದ್ಯಕೀಯ ಸಿಬ್ಬಂದಿಗಳು ಆಗಷ್ಟೇ ಬಂದಿಳಿದಿದ್ದರು. ಇನ್ನು ಆ ದಿನವು ಮಂಗಳವಾರವೂ ಆಗಿತ್ತು ಎನ್ನುವುದನ್ನು ಹೇಳಲೇಬೇಕು. ಪ್ರತೀ ಮಂಗಳವಾರವನ್ನು ಈ ವೈದ್ಯಕೀಯ ತಂಡವು ಹಳ್ಳಿಗೆ ಭೇಟಿಕೊಡುವ ದಿನವೆಂದು ನಿಗದಿಪಡಿಸಲಾಗಿದೆ.
PHOTO • Urvashi Sarkar

ಸುಂದರಬನದ ಜಲರಾಶಿಯಲ್ಲಿ ಸಾಗುತ್ತಿರುವ, ರಾಷ್ಟ್ರೀಯ ಆರೋಗ್ಯ ಮಿಷನ್ನಿನ ಒಂದು ಭಾಗವಾಗಿ ನಡೆಸಲ್ಪಡುತ್ತಿರುವ ಮೊಬೈಲ್ ವೈದ್ಯಕೀಯ ಘಟಕ

ಈ ಮೊಬೈಲ್ ಕ್ಲಿನಿಕ್ ಗಳು ರಾಷ್ಟ್ರೀಯ ಆರೋಗ್ಯ ಮಿಷನ್ನಿನ ಒಂದು ಭಾಗವೂ ಹೌದು. ಪಶ್ಚಿಮ ಶ್ರೀಪತಿನಗರ ಮತ್ತು ಪೂರ್ವ ಶ್ರೀಪತಿನಗರಗಳಲ್ಲಿನ ಎರಡು ಉಪಕೇಂದ್ರಗಳಿಗೆ ಆರೋಗ್ಯಸೇವೆಯ ನೆಲೆಯಲ್ಲಿ ಸಂಪರ್ಕಗಳನ್ನು ಕಲ್ಪಿಸುವುದು ಸೇರಿದಂತೆ ಸುಂದರಬನದ ಇತರ ಭಾಗಗಳಿಗೂ ಉಪಯೋಗವಾಗುವಂತೆ ಮಾಡಲು ದ ಸದರ್ನ್ ಹೆಲ್ತ್ ಇಂಪ್ರೂಮೆಂಟ್ ಸಮಿತಿ (SHIS / ದಕ್ಷಿಣ ಆರೋಗ್ಯ ಸುಧಾರಣಾ ಸಮಿತಿ) ಮತ್ತು ಇತರ ಕೆಲ ಸರ್ಕಾರೇತರ ಸಂಸ್ಥೆಗಳು ಈ ಘಟಕಗಳನ್ನು ನಿರ್ವಹಿಸುತ್ತವೆ.

ಅಂದಹಾಗೆ ಇಡೀ ಸುಂದರಬನದಲ್ಲಿ ಕಾರ್ಯನಿರ್ವಹಿಸುವ ಇಂಥಾ ಮೊಬೈಲ್ ಘಟಕಗಳ ಒಟ್ಟು ಸಂಖ್ಯೆ ಹತ್ತಕ್ಕೂ ಕಮ್ಮಿ. ಆದರೆ ದ್ವೀಪದ ಜನಸಂಖ್ಯೆ ಮಾತ್ರ 4.4 ಲಕ್ಷಕ್ಕೂ ಹೆಚ್ಚು. ಆರೋಗ್ಯ ಕೇಂದ್ರಗಳನ್ನು ತಲುಪುವುದೇ ಒಂದು ದೊಡ್ಡ ಸಾಹಸವಾಗಿರುವುದರಿಂದ ಹಾಗೂ ಒಂದು ಪಕ್ಷ ತಲುಪಿದರೂ ಪರಿಣತ ವೈದ್ಯರ ಲಭ್ಯತೆಗಳ ಬಗ್ಗೆ ಖಾತ್ರಿಯಿಲ್ಲದಿರುವುದರಿಂದಾಗಿ ಬಹಳಷ್ಟು ಗ್ರಾಮಸ್ಥರು ಈ ತಾತ್ಕಾಲಿಕ ಘಟಕಗಳನ್ನೇ ಅವಲಂಬಿಸಿದ್ದಾರೆ.

ಪಶ್ಚಿಮ ಶ್ರೀಪತಿನಗರದಲ್ಲಿ ಆಶಾ ದಾಸ್ ತನ್ನ ಮನೆಯಿಂದ ವಾರಕ್ಕೊಮ್ಮೆ ನಡೆಯುವ ಈ ಒಂದು ಕೋಣೆಯ ಕ್ಲಿನಿಕ್ಕಿನತ್ತ ಹೆಜ್ಜೆಹಾಕಿದ್ದಳು. ಆರೋಗ್ಯವು ಚೆನ್ನಾಗಿಲ್ಲದಿದ್ದಾಗ ಬಿಸಿಲಿನ ಝಳಕ್ಕೆ ಬೆಂದುಹೋಗುತ್ತಾ ಇಟ್ಟಿಗೆಯ ಕೆಟ್ಟ ರಸ್ತೆಗಳ ಮೇಲೆ ನಡೆದು ಇಂಥಾ ಕ್ಲಿನಿಕ್ ಗಳನ್ನು ತಲುಪುವುದು ಪ್ರಯಾಸದ ಮಾತೇ ಸರಿ. ಚಿಕಿತ್ಸೆಗಾಗಿ ನಾವು ಎಂತೆಂಥಾ ಕಷ್ಟಗಳನ್ನನುಭವಿಸಬೇಕು ಎಂಬುದನ್ನು ಆಕೆ ಹೀಗೆ ಹೇಳುತ್ತಾರೆ ನೋಡಿ: ''SHIS ನಂತಹ ಸಂಸ್ಥೆಗಳು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಕಾರ್ಯನಿರ್ವಹಿಸುತ್ತವೆ. ಉಳಿದ ದಿನಗಳಲ್ಲೆಲ್ಲಾ ನಾವುಗಳು ಈ ಉಪಕೇಂದ್ರಗಳ ಮೇಲೆಯೇ ಅವಲಂಬಿತರಾಗಿದ್ದೇವೆ. ಪಥರ್ ಪ್ರತಿಮಾದ (ಸಾರ್ವಜನಿಕ) ಆಸ್ಪತ್ರೆಯನ್ನು ತಲುಪಲು ಮೂರು ತಾಸುಗಳು ಹಿಡಿಯುವುದಲ್ಲದೆ ಪ್ರಯಾಣದ ಖರ್ಚಿಗೆ ಏನಿಲ್ಲವೆಂದರೂ 100 ರೂಪಾಯಿ ಬೇಕಾಗುತ್ತದೆ. ಎರಡು ದೋಣಿ ಮತ್ತು ವ್ಯಾನುಗಳನ್ನು ಬದಲಾಯಿಸಿದ ನಂತರವಷ್ಟೇ ಅಲ್ಲಿಗೆ ತಲುಪಲು ಸಾಧ್ಯ. ಹೀಗಾಗಿ ತುರ್ತಿನ ಸಂದರ್ಭಗಳಲ್ಲಿ ಯಾವಾಗಲೂ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ನಮಗೆ ದಿಕ್ಕುತೋಚದಂತಾಗುತ್ತದೆ.''

PHOTO • Urvashi Sarkar

ಮೊಬೈಲ್ SHIS ಕ್ಲಿನಿಕ್ ನಲ್ಲಿ ದಾದಿಯಾಗಿರುವ ಬುಲು ಸಮಂತಾ ಮತ್ತು ಫಾರ್ಮಾಸಿಸ್ಟ್ ಆಗಿರುವ ಪರೇಶ್ಚಂದ್ರ ಜನ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ

ಮೊಬೈಲ್ ಆರೋಗ್ಯ ಘಟಕಗಳಿಗೆ ಬರುವ ಜನರ ಸಾಮಾನ್ಯ ತೊಂದರೆಗಳೆಂದರೆ ಸಂಧಿವಾತ, ಗಂಟುನೋವು, ಸ್ಪಾಂಡಿಲೈಟಿಸ್, ಲ್ಯುಕೋರಿಯಾ, ಸ್ಕೇಬೀಸ್, ಎಝೆಮಾ ಮತ್ತು ಸುಟ್ಟಗಾಯಗಳು ಎನ್ನುತ್ತಾರೆ SHIS ನ ಉದ್ಯೋಗಿಯಾದ ದೇಬಜಿತ್ ಮೈತಿ. SHIS ನಲ್ಲಿ ರೋಗಿಗಳನ್ನು ಪರೀಕ್ಷಿಸುವ ವೈದ್ಯರಾದ ಡಾ. ಪ್ರಶಾಂತ್ ರಾಯ್ ಚೌಧರಿಯವರು ಹೇಳುವಂತೆ ಇಲ್ಲಿಯ ನೀರಿನಲ್ಲಿರುವ ಹೆಚ್ಚಿನ ಉಪ್ಪಿನ ಪ್ರಮಾಣವು ಸುಂದರಬನದಾದ್ಯಂತ ವಿವಿಧ ರೋಗಗಳಿಗೆ ಮುಖ್ಯಕಾರಣವಾಗಿ ಪರಿಣಮಿಸಿದೆ.

PHOTO • Urvashi Sarkar

ಸುಂದರಬನದ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಉಪ್ಪಿನ ಅಂಶವು ವಿವಿಧ ರೋಗಗಳಿಗೆ ಕಾರಣವಾಗಿ ಪರಿಣಮಿಸಿದೆ

ಸುಂದರಬನದಾದ್ಯಂತ ನಿವಾಸಿಗಳು ಎದುರಿಸುತ್ತಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಇವರೂ ಕೂಡ ಮನೋಜ್ಞವಾಗಿ ಮಾತಾಡುತ್ತಾರೆ. ''ಯಾವ ವೈದ್ಯರಿಗೂ ಇಲ್ಲಿಗೆ ಬರಲು ಆಸಕ್ತಿಯಿಲ್ಲ. ಹಣ ಮತ್ತು ಒಳ್ಳೆಯ ಜೀವನ ಇಲ್ಲಿಲ್ಲವೆಂದು ಎಲ್ಲರೂ ಹಿಂದೇಟು ಹಾಕುತ್ತಾರೆ. ಕೆಲವು ಪ್ರದೇಶಗಳಲ್ಲಂತೂ ಈ ವೈದ್ಯರು ಪ್ರಾಕ್ಟೀಸ್ ಗಳನ್ನು ಮಾಡಲೂ ಕೂಡ ಸರಕಾರವು ಸ್ಥಳವನ್ನು ನೀಡುತ್ತಿಲ್ಲ. ಹೀಗಿರುವಾಗ ವೈದ್ಯರು ಯಾಕಾದರೂ ಬರುತ್ತಾರೆ? ಈ ಪರಿಸ್ಥಿತಿಯನ್ನೇ ಬಳಸಿಕೊಂಡು ಕೆಲ ಸ್ಥಳೀಯರು ಈ ಕೆಲಸವನ್ನು ಕೆಟ್ಟದಾಗಿ ಮಾಡುವುದಲ್ಲದೆ ರೋಗಿಗಳಿಂದ ಹೆಚ್ಚಿನ ಮೊತ್ತವನ್ನೂ ಕಸಿದುಕೊಳ್ಳುತ್ತಾರೆ'', ಎನ್ನುತ್ತಾರೆ ಡಾ. ರಾಯ್ ಚೌಧರಿ.

ಇನ್ನು ಈ ವೈದ್ಯಕೀಯ ಸೌಲಭ್ಯಗಳ ಕೊರತೆಗಳು ಗರ್ಭಿಣಿಯರ ಸಮಸ್ಯೆಗಳನ್ನಂತೂ ಮತ್ತಷ್ಟು ಹೆಚ್ಚಿಸಿದೆ. ಪಶ್ಚಿಮ ಶ್ರೀಪತಿನಗರದಲ್ಲಿರುವ ಸರಕಾರಿ ಉಪಕೇಂದ್ರವು SHIS ಕ್ಲಿನಿಕ್ ನಿಂದ ಸ್ವಲ್ಪವೇ ದೂರದಲ್ಲಿದೆ. ಒಳಗಡೆ ಇಬ್ಬರು ANM ಗಳಾದ (ಆಕ್ಸಿಲಿಯರಿ ನರ್ಸ್ ಮಿಡ್ವೈಫ್ / ಸಹಾಯಕ ದಾದಿ ಸೂಲಗಿತ್ತಿಯರು) ಮೊಹಿಮಾ ಮೊಂಡಲ್ ಮತ್ತು ಲೋಖಿ ಬೋರ್ ಮೊಂಡಲ್ ಡೆಸ್ಕ್ ಒಂದರ ಬಳಿ ಕುಳಿತುಕೊಂಡಿದ್ದಾರೆ. ಈ ಕೇಂದ್ರವು ರೋಗಿಗಳನ್ನು ಪರೀಕ್ಷಿಸಲು ಎರಡು ಮೇಜುಗಳನ್ನು ಹೊಂದಿದ್ದರೆ ಇಲ್ಲಿಯ ಕೋಣೆಯು ಹಾಸಿಗೆ ಮತ್ತು ವಿದ್ಯುಚ್ಛಕ್ತಿ ಸೌಲಭ್ಯಗಳನ್ನು ಹೊಂದಿಲ್ಲದಿರುವುದು ವಿಪರ್ಯಾಸ. ಆ ಅಪರಾಹ್ನದಂದು ಒಬ್ಬನೇ ಒಬ್ಬ ರೋಗಿಯೂ ಆ SHIS ಮೊಬೈಲ್ ಕ್ಲಿನಿಕ್ ನಲ್ಲಿ ಕಾಲಿರಿಸಿಲ್ಲ. ''ದ್ವೀಪಕ್ಕೆ ಬಂದಾಗಲೆಲ್ಲಾ ನೀವು SHIS ನಲ್ಲಿರುವಂತಹ ಪರಿಣತ ವೈದ್ಯರನ್ನೇ ಸಂಪರ್ಕಿಸಿ ಎಂದು ಜನರಲ್ಲಿ ನಾವೇ ಕೇಳಿಕೊಳ್ಳುತ್ತೇವೆ'', ಎನ್ನುತ್ತಿದ್ದಾರೆ ಇಲ್ಲಿಯ ದಾದಿ ಮತ್ತು ಸೂಲಗಿತ್ತಿಯರು.

ಉಪಕೇಂದ್ರಗಳಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳು ಕೆಲ ಸಾಮಾನ್ಯ ರೋಗಗಳಿಗೆ ಮಾತ್ರ ಸೀಮಿತವಾಗಿದೆ. ಇವುಗಳನ್ನು ಬಿಟ್ಟರೆ ಪ್ರಸವದ ಮುಂಚಿನ ಮತ್ತು ಪ್ರಸವದ ನಂತರದ ಕೆಲ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದನ್ನೂ ಕೂಡ ಬೆರಳೆಣಿಕೆಯ ANM ಗಳು, ASHA (ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್ / ಮಾನ್ಯತೆಯನ್ನು ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ) ಕಾರ್ಯಕರ್ತೆಯರು ಮತ್ತು ದಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಂಡಸೊಬ್ಬ ನಿಭಾಯಿಸುತ್ತಾನೆ. ಇಷ್ಟಿದ್ದರೂ ಇಲ್ಲಿ ಹೆರಿಗೆಗಳಾಗುವುದಿಲ್ಲ. ''ಹೆರಿಗೆಯು ಆಸ್ಪತ್ರೆಯಲ್ಲೇ ಆಗಲಿ ಎಂದು ನಾವು ಬಹಳ ಪ್ರಯಾಸಪಟ್ಟು ಇಲ್ಲಿಯ ಮಹಿಳೆಯರ ಮನವೊಲಿಸುತ್ತೇವೆ (ಹೆಚ್ಚಿದ ದೂರ ಮತ್ತು ಖರ್ಚುಗಳನ್ನು ಗಮನದಲ್ಲಿರಿಸಿಕೊಂಡು). ಪಂಚಾಯತ್ ಕೂಡ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ತಾಯಂದಿರಿಗಷ್ಟೇ ಜನನ ಪ್ರಮಾಣಪತ್ರ ಮತ್ತು ಪಡಿತರ ಚೀಟಿಯನ್ನು ನೀಡಲಾಗುವುದು ಎಂಬ ತಂತ್ರವನ್ನು ಬಳಸಿ ಹೆರಿಗೆಗಳು ಆಸ್ಪತ್ರೆಗಳಲ್ಲೇ ಆಗುವಂತೆ ನೋಡಿಕೊಂಡಿವೆ'', ಎನ್ನುತ್ತಾರೆ ಲೋಖಿ ಬೋರ್ ಮೊಂಡಲ್.

ಬಲಿಯಾರಾ ಹಳ್ಳಿಯ ಉಪಕೇಂದ್ರವೊಂದರಲ್ಲಿ 'ದೈಮಾ' (ಸಾಂಪ್ರದಾಯಿಕ ಸೂಲಗಿತ್ತಿ) ಆಗಿ ದುಡಿಯುತ್ತಿರುವ ಹಮಿದೊನ್ ಬೀಬಿ 50 ಕ್ಕೂ ಮೀರಿದ ವಯಸ್ಸಿನವರು. 14 ವರ್ಷಗಳ ಹಿಂದೆ ಆಕೆ ಈ ವೃತ್ತಿಯಲ್ಲಿ ತೊಡಗಿಕೊಂಡಾಗ ಆಕೆಗಿದ್ದ ಮಾಸಿಕ ಸಂಬಳದ ಮೊತ್ತವೆಂದರೆ 25 ರೂಪಾಯಿಗಳು. ಪ್ರಸ್ತುತ ಅದು 550 ರೂಪಾಯಿಗಳಿಗೆ ಬಂದು ಮುಟ್ಟಿದೆ. ಗರ್ಭಿಣಿಯರ ಪ್ರಸವ ಕ್ರಿಯೆಯಲ್ಲಿ ನೆರವಾಗುವ ಕೆಲಸ ಈಕೆಯದ್ದು. ''ANM ಮತ್ತು ASHA ಕಾರ್ಯಕರ್ತೆಯರಂತೆ ನನಗೂ ಯಾಕೆ ಬಣ್ಣದ ಸೀರೆಗಳನ್ನು ನೀಡುತ್ತಿಲ್ಲ? ನಾನೆಷ್ಟೇ ಕೆಲಸ ಮಾಡಿದರೂ ನನ್ನನ್ನಿಲ್ಲಿ ಗುರುತಿಸಲಾಗುತ್ತಿಲ್ಲ. ನನಗೆ ಮಧ್ಯಾಹ್ನದ ಊಟವೂ, ಆಹಾರದ ಭತ್ಯೆಯೂ ನಸೀಬಾಗುತ್ತಿಲ್ಲ'', ಎನ್ನುತ್ತಿದ್ದಾರೆ ಬೀಬಿ.

PHOTO • Urvashi Sarkar

ಮೌಸುನಿ ದ್ವೀಪದಲ್ಲಿ 'ದೈಮಾ' ಆಗಿರುವ ಹಮಿದೊನ್ ಬೀಬಿ ತನ್ನ ಮೊಮ್ಮಗಳಾದ ಹೊಸ್ನಾರಾ ಖಟೂನ್ ಳೊಂದಿಗೆ

ಮೂರು ತಿಂಗಳ ಹಿಂದೆ ಲಕ್ಷ್ಮೀಪುರ ಹಳ್ಳಿಯಲ್ಲಿ ಆರಂಭವಾದ ಕಮ್ಯೂನಿಟಿ ಡೆಲಿವರಿ ಸೆಂಟರ್ (CDC / ಸಾಮುದಾಯಿಕ ಪ್ರಸೂತಿ ಕೇಂದ್ರ) ನಿಂದ ಇಲ್ಲಿಯ ಪರಿಸ್ಥಿತಿಗಳು ಕೊಂಚ ಸುಧಾರಿಸಿದ್ದಂತೂ ಸತ್ಯ. ಸರ್ಕಾರೇತರ ಸಂಸ್ಥೆಗಳಿಂದ ನಡೆಸಲ್ಪಡುತ್ತಿರುವ CDC ಗಳು ವ್ಯವಸ್ಥಿತವಾದ ಹೆರಿಗೆಯನ್ನೇ ಪ್ರಚಾರಕ್ಕೆ ತರುತ್ತಿವೆ. ಸರಕಾರಿ ಆಸ್ಪತ್ರೆಗಳ ಸಹಯೋಗದೊಂದಿಗೆ ಬಹಳಷ್ಟು ಗರ್ಭಿಣಿಯರು ಈ ಬಗೆಯ ಹೆರಿಗೆಯನ್ನು ಮಾಡಿಸಿಕೊಳ್ಳುವಲ್ಲಿ ಇವುಗಳು ಸಫಲವಾಗಿವೆ. ಆದರೆ ಕೋಲ್ಕತ್ತಾದ ಭಾರತೀಯ ಆರೋಗ್ಯ ಸಂಶೋಧನಾ ಸಂಸ್ಥೆಯು 2014 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸುಂದರಬನ ಪ್ರದೇಶದಲ್ಲಿ 55% ಕ್ಕೂ ಹೆಚ್ಚಿನ ಶಿಶುಗಳು ಮನೆಯಲ್ಲೇ ಹುಟ್ಟುತ್ತಿವೆ.

ಕೆಲವೊಮ್ಮೆ ಸರ್ಕಾರೇತರ ಸಂಸ್ಥೆಗಳೂ ಕೂಡ ಚಿಕ್ಕ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಸೇವೆಗಳ ಕೊರತೆಗಳನ್ನು ನೀಗಿಸುವುದುಂಟು. ಮೌಸುನಿ ದ್ವೀಪದ ನಮ್ಖಾನಾ ಬ್ಲಾಕಿನ ನಿವಾಸಿಯಾದ ಫರೀದಾ ಬೇಗ್ ಇಂಥದ್ದೇ ಶಿಬಿರವೊಂದನ್ನು ಶಾಲೆಯ ತರಗತಿಯೊಂದರ ಕೋಣೆಯಲ್ಲಿ ಸಮಾಜ ಉನ್ನಾಯನ್ ಕೇಂದ್ರದ ಆಯೋಜಕತ್ವದೊಂದಿಗೆ ಆರಂಭಿಸಲು ನೆರವಾಗುತ್ತಿದ್ದಾರೆ. ದೈನಿಕ ಮೆಡಿಕಲ್ ಲಾಂಚ್ (ಇದು ರಾಷ್ಟ್ರೀಯ ಆರೋಗ್ಯ ಮಿಷನ್ನಿನ ಭಾಗವಲ್ಲ) ಒಂದನ್ನೂ ಕೂಡ 2015 ರಲ್ಲಿ ದೇಣಿಗೆಯು ನಿಂತುಹೋಗುವ ತನಕ ಈ ಸರ್ಕಾರೇತರ ಸಂಸ್ಥೆಯು ನಡೆಸುತ್ತಿತ್ತು. ಸದ್ಯ ಈ ಸಂಸ್ಥೆಯು ಅಪರೂಪಕ್ಕೊಮ್ಮೆ ಆರೋಗ್ಯ ಶಿಬಿರಗಳನ್ನು ನಡೆಸುತ್ತದೆ. ಈ ವರ್ಷದ ಮೇ ತಿಂಗಳಿನಲ್ಲಿ ನೇತ್ರಚಿಕಿತ್ಸಾ ಶಿಬಿರವೊಂದನ್ನೂ ಕೂಡ ಇದು ದ್ವೀಪದಲ್ಲಿ ಹಮ್ಮಿಕೊಂಡಿತ್ತು.

PHOTO • Urvashi Sarkar

ಮೌಸುನಿ ದ್ವೀಪದಲ್ಲಿ ನಡೆಯುತ್ತಿರುವ ನೇತ್ರಚಿಕಿತ್ಸಾ ಶಿಬಿರ

''ಸ್ಥಳೀಯ ಪಂಚಾಯತ್ ಈ ಶಿಬಿರದ ಬಗ್ಗೆ ಧ್ವನಿವರ್ಧಕಗಳ ಮೂಲಕ ಪ್ರಚಾರವನ್ನು ನಡೆಸಿದ್ದರಿಂದಾಗಿ ಎಲ್ಲರಿಗೂ ಇದರ ಬಗ್ಗೆ ತಿಳಿಯಿತು. ನಮ್ಮ ಆರೋಗ್ಯವು ಹದಗೆಟ್ಟಾಗಲೆಲ್ಲಾ ಇಲ್ಲಿಂದ ಸುಮಾರು 15 ಕಿಲೋಮೀಟರ್ ದೂರವಿರುವ ದರಿಕ್ ನಗರ್ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಎಂದು ನಮಗೆ ಹೇಳಲಾಗುತ್ತದೆ. ಆದರೆ ಅಲ್ಲಿಗೆ ಹೋಗಲು ಬೇಕೆಂದಾಗಲೆಲ್ಲಾ ದೋಣಿಗಳು ಸಿಗುವುದು ಕಷ್ಟ. ಕೆಲವೊಮ್ಮೆ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿದ್ದರೆ ಇನ್ನು ಕೆಲವೊಮ್ಮೆ ವೈದ್ಯರೇ ಇರುವುದಿಲ್ಲ. ಹಲವು ಬಾರಿ ವೈದ್ಯರಿದ್ದರೂ ಕೂಡ ಅವರು ಸಿಸೇರಿಯನ್ ಹೆರಿಗೆಯನ್ನು ಮಾಡುವವರಾಗಿರುವುದಿಲ್ಲ. ನಂತರ ಇವರುಗಳು ಅಲ್ಲಿಂದ 35 ಕಿಲೋಮೀಟರ್ ದೂರವಿರುವ ಕಕದ್ವೀಪ್ ಆಸ್ಪತ್ರೆಗೆ ಹೋಗಿ ಅಂದುಬಿಡುತ್ತಾರೆ. ಗರ್ಭಿಣಿಯೊಬ್ಬಳು ಅಲ್ಲಿಯವರೆಗೆ ಹೋಗುವುದೇ ಆದರೆ ಕೆಟ್ಟ ರಸ್ತೆಗಳು ಮತ್ತು ನೀರಿನ ಅಲೆಗಳೊಂದಿಗೆ ಸೆಣಸಾಡುತ್ತಲೇ ಹೋಗಬೇಕು'', ಎನ್ನುತ್ತಾರೆ ಫರೀದಾ.

ಇನ್ನು ಇಲ್ಲಿಯ ಯಾವ ಆಸ್ಪತ್ರೆಗಳೂ ಕೂಡ ಅಗತ್ಯ ಚಿಕಿತ್ಸೆಯನ್ನು ನೀಡಲು ವಿಫಲವಾದರೆ ಡೈಮಂಡ್ ಬಂದರು ಅಥವಾ ಕೋಲ್ಕತ್ತಾದ ದೊಡ್ಡಾಸ್ಪತ್ರೆಗಳಿಗೇ ಈ ದ್ವೀಪದ ನಿವಾಸಿಗಳು ತೆರಳಬೇಕಾಗುತ್ತದೆ. ಇದು 5-6 ತಾಸುಗಳ ಸುದೀರ್ಘ ಪ್ರಯಾಣವಾಗಿರುವುದಲ್ಲದೆ ಖರ್ಚು ಮಾಡಬೇಕಾದ ಮೊತ್ತವೂ ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ.

SHIS ನ ಆರೋಗ್ಯ ಕಾರ್ಯಕ್ರಮದ ಸಂಯೋಜಕರಾದ ಅನ್ವರ್ ಆಲಂ ಹೇಳುವ ಪ್ರಕಾರ ಹಳ್ಳಿಯ ಮೂಲೆಮೂಲೆಗಳಿಗೂ ಆರೋಗ್ಯ ಸೇವೆಯನ್ನು ಒದಗಿಸಿಕೊಡುವುದು ಸರಕಾರಕ್ಕೆ ಸಾಧ್ಯವಾಗದ ಮಾತು. ''ಅವರು ಹೆಚ್ಚೆಂದರೆ ಎಷ್ಟು ದೂರ ಸಾಗಬಹುದು? ಅವರಿಗೂ ಕೂಡ ಆರ್ಥಿಕ ಮಿತಿಗಳಿರುತ್ತವೆ. ಮೊಬೈಲ್ ಆರೋಗ್ಯ ಘಟಕಗಳಾಗಲೀ ಅಥವಾ ಸಾಮುದಾಯಿಕ ಪ್ರಸೂತಿ ಕೇಂದ್ರಗಳಾಗಲೀ ನಡೆಯುವುದು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕವಾಗಿ. ಆರೋಗ್ಯ ಸೇವೆಗಳನ್ನು ಯಶಸ್ವಿಯಾಗಿ ನೀಡಬಲ್ಲ ಸರ್ಕಾರೇತರ ಸಂಸ್ಥೆಗಳನ್ನು ಸರಕಾರವು ಹೆಚ್ಚೇ ನೆಚ್ಚಿಕೊಂಡಿದೆ'', ಎಂದು ಘಾಟಕ್ ಪುಕುರ್ ನಲ್ಲಿರುವ ತನ್ನ ಕಾರ್ಯಾಲಯದಲ್ಲಿ ಕುಳಿತುಕೊಂಡು ನನ್ನೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ ಅನ್ವರ್ ಆಲಂ.

''PPP ಮಾದರಿಯನ್ನು ತಂದ ಹೊರತಾಗಿಯೂ ಸುಂದರಬನದ ದಕ್ಷಿಣ 24 ಪರ್ಗನಾಸ್ ಜಿಲ್ಲೆಯ ಬಹಳಷ್ಟು ಭಾಗಗಳಿಗೆ ಆರೋಗ್ಯ ಸೇವೆಗಳು ತಲುಪಿಯೇ ಇಲ್ಲ. ನಮ್ಖಾನಾದ ಕೆಲ ಭಾಗಗಳು, ಕುಲ್ಟಾಲಿ, ಪಥ್ಥರ್ ಪ್ರತಿಮಾ, ರಾಯಿಢಿಗಿ, ಗೊಸಾಬಾ ಮತ್ತು ಬಸಂತಿಗಳು ಇದಕ್ಕೆ ಉತ್ತಮ ಉದಾಹರಣೆಗಳು. ಇನ್ನು ಉತ್ತರ 24 ಪರ್ಗನಾಸ್ ಜಿಲ್ಲೆಯ ಕೆಲ ಭಾಗಗಳೂ ಕೂಡ ಈ ಸ್ಥಿತಿಯಲ್ಲೇ ಇವೆ'', ಎಂದು ತಮ್ಮ ಮಾತನ್ನೂ ಸೇರಿಸಿಕೊಳ್ಳುತ್ತಿದ್ದಾರೆ ದೇಬಜಿತ್ ಮೈತಿ.

ಆದರೆ ಬಯೇರ್ಮರಿ ಸಾಮುದಾಯಿಕ ಪ್ರಸೂತಿ ಕೇಂದ್ರದಲ್ಲಿರುವ ಡಾ. ನಿಲ್ಮಾಧಬ್ ಬ್ಯಾನರ್ಜಿಯವರಿಗೆ ಈ ಬಗ್ಗೆ ಭಿನ್ನವೆನಿಸುವಂತಹ ದೃಷ್ಟಿಕೋನವಿದೆ. ''ಕೆಟ್ಟ ರಸ್ತೆಗಳನ್ನು ಮತ್ತು ಅಪಾಯಕಾರಿ ನದಿಗಳನ್ನು ಎಲ್ಲಿಯವರೆಗೆ ದೂರುತ್ತಲೇ ಇರುತ್ತೀರಿ? ಈ ಪರಿಸ್ಥಿತಿಯು ಸುಂದರಬನಕ್ಕಷ್ಟೇ ಸೀಮಿತವಲ್ಲ. ಇವುಗಳೆಲ್ಲಾ ಒಂದು ನೆಪವಷ್ಟೇ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಸೇರಿದಂತೆ ಆರೋಗ್ಯ ವ್ಯವಸ್ಥೆಯ ಎಲ್ಲಾ ಹಂತಗಳಲ್ಲೂ ಸವಾಲುಗಳಿರುತ್ತವೆ. ಅವುಗಳತ್ತ ಗಮನಹರಿಸಿ ವ್ಯವಸ್ಥಿತವಾಗಿ ಪರಿಹರಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ'', ಎಂಬುದು ಡಾ. ಬ್ಯಾನರ್ಜಿಯವರ ಅನಿಸಿಕೆ.

PHOTO • Urvashi Sarkar

ಮೌಸುನಿ ದ್ವೀಪದಲ್ಲಿ ವೈದ್ಯರನ್ನು ಕಾಣಲು ತಮ್ಮ ಸರದಿಗಾಗಿ ಕಾಯುತ್ತಿರುವ ಜನಸಮೂಹ

ಇವೆಲ್ಲದರ ಮಧ್ಯದಲ್ಲೇ ಸುಂದರಬನದ ಜನತೆ ತಮ್ಮದೇ ಸಾವು-ಬದುಕುಗಳ ನಡುವೆ ಕಣ್ಣುಮುಚ್ಚಾಲೆಯಾಡುತ್ತಿದೆ ಎಂಬುದೇ ವಿಷಾದ.

Urvashi Sarkar is an independent journalist and a 2016 PARI Fellow.

Other stories by Urvashi Sarkar
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik