"ನಕ್ಷತ್ರಗಳನ್ನ ನಾವು ನೀವು ಕರೆಯೋ ಹೆಸರಿನಿಂದ ಕರೆಯೋದಿಲ್ಲ, ಅವುಗಳಿಗೆ ನಮ್ಮದೇ ಆದ ಹೆಸರುಗಳಿವೆ," ಎಂದು ಮಶ್ರುಭಾಯ್ ಹೇಳುತ್ತಾರೆ. " ತುಮ್ಹಾರ ಧ್ರುವ ತಾ ರಾ , ಹಮಾರಾ ಪರೋಡಿಯಾ [ನಿಮ್ಮ ಧ್ರುವ ತಾರೆ ನಮ್ಮಲ್ಲಿ ಪರೋಡಿಯಾ].

ನಾವು ವಾರ್ಧಾ ಜಿಲ್ಲೆಯ ಡೆನೋಡಾ ಗ್ರಾಮದಲ್ಲಿ ಅವರು ನಿರ್ಮಿಸಿದ್ದ ತಾತ್ಕಾಲಿಕ ಡೇರೆಯೊಂದರಲ್ಲಿ ಕುಳಿತು ಮಾತನಾಡುತ್ತಿದ್ದೆವು. ಇಲ್ಲಿಂದ ನಾಗಪುರಕ್ಕೆ 60 ಕಿ.ಮೀ ದೂರವಾದರೆ ಅವರ ಮನೆಯಿರುವ ಕಛ್‌ಗೆ 1,300 ಕಿಲೋಮೀಟರ್‌ ದೂರವಿದೆ.

ಅದು ಮಾರ್ಚ್‌ ತಿಂಗಳ ಆರಂಭ ಕಾಲ, ಚಳಿ ಹೊಸ್ತಿಲಿನ ಹೊರಗೆ ಕಾಲಿಡುತ್ತಿದ್ದರೆ ಬೇಸಿಗೆ ಕಾಲ ಒಳಗೆ ಬರುವ ಸಮಯ. ನಾವು ತಂಗಿದ್ದ ಈ ರಬರಿ ಡೇರೆಯ ಮೇಲೆ ಮುಸ್ಸಂಜೆಯ ಬೆಳಕು ಬೀಳುತ್ತಿತ್ತು. ಆಕಾಶದಲ್ಲಿ ಕಿತ್ತಳೆ ಬಣ್ಣ ಈ ಸಮಯದಲ್ಲಿ ಬಹಳ ಹೊತ್ತಿನ ತನಕ ಇರುತ್ತದೆ. ಪಲಾಶ್ ಅಥವಾ ಕೆಸುಡೋ ( ಬ್ಯೂಟಿಯಾ ಮೊನೊಸ್ಪೆರ್ಮಾ ) ಎಂಬ ಕಾಡಿನ ಬೆಂಕಿಂಯಂತೆ ಕಾಣುವ ಹೂವುಗಳು ನೆಲವನ್ನು ಕೇಸರಿ ಬಣ್ಣದಿಂದ ಅಲಂಕರಿಸಿದ್ದವು. ಬಣ್ಣಗಳ ಹಬ್ಬವಾ ಹೋಲಿಯೂ ಹತ್ತಿರದಲ್ಲೇ ಇತ್ತು.

ತಮ್ಮ ಜನರ ನಡುವೆ ಮಶ್ರು ಮಾಮಾ ಎಂದು ಪರಿಚಿತರಾಗಿರುವ ಅವರು ಮತ್ತು ನಾನು ವಿದರ್ಭದ ಈ ಭಾಗದಲ್ಲಿ ಕುಳಿತು ಸಂಜೆಯ ಆಕಾಶ ನೋಡುತ್ತಾ ಮನಸಿಗೆ ಬಂದ ವಿಷಯಗಳೆಲ್ಲದರ ಕುರಿತು ಮಾತನಾಡುತ್ತಿದ್ದೆವು. ಅದೊಂದು ಹತ್ತಿಯ ಹೊಲವಾಗಿತ್ತು ಮತ್ತು ನಾವು ಅದರ ನಡುವೆ ಮಂಚ ಹಾಕಿಕೊಂಡು ಕುಳಿತಿದ್ದೆವು. ನಕ್ಷತ್ರಗಳು, ನಕ್ಷತ್ರಪುಂಜಗಳು, ಬದಲಾಗುತ್ತಿರುವ ಹವಾಮಾನ ಮತ್ತು ಪರಿಸರ ವಿಜ್ಞಾನ, ಅವನ ಜನರು ಮತ್ತು ಪ್ರಾಣಿಗಳ ಅಸಂಖ್ಯಾತ ಮನಸ್ಥಿತಿಗಳು, ಕಠಿಣ ಮತ್ತು ಕಷ್ಟಕರವಾದ ಅಲೆಮಾರಿ ಜೀವನ, ಸದಾ ಚಲನೆಯಲ್ಲಿರುವ ಅವರಿಗೆ ತಿಳಿದಿರುವ ದಂತಕತೆಗಳು, ಜಾನಪದ ಕತೆಗಳು… ಹೀಗೆ ಮಾತುಗಳು ಸಾಗುತ್ತಲೇ ಇದ್ದವು.

ನಕ್ಷತ್ರಗಳಿಗೆ ರಬರಿ ಸಮುದಾಯ ವಿಶೇಷ ಮಹತ್ವವನ್ನು ನೀಡುತ್ತವೆ, ಏಕೆಂದರೆ ಅವರು ತಮ್ಮ ಮಾರ್ಗಗಳಿಗೆ ಮಾರ್ಗದರ್ಶನ ನೀಡಲು ಅವುಗಳನ್ನು ಅವಲಂಬಿಸಿದ್ದಾರೆ, ವಿಶೇಷವಾಗಿ ರಾತ್ರಿಯಲ್ಲಿ. "ಏಳು ನಕ್ಷತ್ರಗಳ ನಕ್ಷತ್ರಪುಂಜವಾದ ಸಪ್ತರ್ಷಿ ಮಂಡಲವನ್ನು ನಾವು ಹರನ್ [ಜಿಂಕೆ] ಎಂದು ಕರೆಯುತ್ತೇವೆ," ಎಂದು ಅವರು ವಿವರಿಸುತ್ತಾರೆ. "ಈ ಏಳು ನಕ್ಷತ್ರಗಳು ಮುಂಜಾನೆ ಹೊತ್ತಿಗೆ ಮಸುಕಾಗುತ್ತವೆ, ಆದರೆ ಅವು ಕತ್ತಲೆಯಿರುವಾಗ ಹೊಸ ಮುಂಜಾನೆಯ ಆಗಮನ, ಹೊಸ ಸವಾಲುಗಳು ಮತ್ತು ಅನೇಕ ಸಾಧ್ಯತೆಗಳನ್ನು ಘೋಷಿಸುತ್ತವೆ," ಎಂದು ಅವರು ತಾತ್ವಿಕವಾಗಿ ಹೇಳುತ್ತಾರೆ.

PHOTO • Jaideep Hardikar
PHOTO • Jaideep Hardikar

ಮಶ್ರು ರಬರಿ (ಎಡ) ಮತ್ತು ರಬರಿ ಸಮುದಾಯದ ಇತರ ಸದಸ್ಯರು ವಾರ್ಧಾ ಜಿಲ್ಲೆಯ ಡೆನೋಡಾ ಗ್ರಾಮದಲ್ಲಿ ಅವರ ತಾತ್ಕಾಲಿಕ ನೆಲೆಯಾದ ಡೇರಾದಲ್ಲಿ. ಇವರ ತಂಡವು ತನ್ನ ವಾರ್ಷಿಕ ವಲಸೆ ಮಾರ್ಗದಲ್ಲಿ ಡೇರಾ ನಾಗ್ಪುರ, ವಾರ್ಧಾ, ಚಂದ್ರಾಪುರ್ ಮತ್ತು ಯವತ್ಮಾಲ್ ಜಿಲ್ಲೆಗಳು ಮತ್ತು ನೆರೆಯ ಪ್ರದೇಶಗಳ ಸುತ್ತಲೂ ಚಲಿಸುತ್ತದೆ

ದಪ್ಪ ಮೀಸೆ, ಬಿಳಿ ಕೂದಲು, ದೊಡ್ಡ ಅಂಗೈಗಳು ಮತ್ತು ದೊಡ್ಡ ಹೃದಯವನ್ನು ಹೊಂದಿರುವ 60ರ ಹರೆಯದ ಮಶ್ರು ಮಾಮಾ ಈ ಡೇರಾದ ಹಿರಿಯ ಸದಸ್ಯರಾಗಿದ್ದಾರೆ. ಅವರು ಮತ್ತು ಡೇರಾದಲ್ಲಿನ ಇತರ ಐದು ಕುಟುಂಬಗಳು ಒಂದೆರಡು ದಿನಗಳ ಹಿಂದೆ ಇಲ್ಲಿಗೆ ಬಂದವು. "ನಾವು ಇಂದು ಇಲ್ಲಿದ್ದೇವೆ ಮತ್ತು ಇಂದಿನಿಂದ 15 ದಿನಗಳ ನಂತರ ನಾಗ್ಪುರ ಜಿಲ್ಲೆಯಲ್ಲಿರುತ್ತೇವೆ. ಮಳೆ ಬಂದಾಗ ಯವತ್ಮಾಲ್ ಪಂಢರಕವಾಡ ಬಳಿ ನೀವು ನಮ್ಮನ್ನು ಕಾಣಬಹುದು. ನಾವು ವರ್ಷವಿಡೀ ಪರಿಚಿತ ಸ್ಥಳಗಳಿಗೆ ಪ್ರಯಾಣಿಸುತ್ತೇವೆ ಮತ್ತು ಹೊಲಗಳಲ್ಲಿ ಉಳಿಯುತ್ತೇವೆ," ಎಂದು ಅವರು ನನಗೆ ಹೇಳಿದರು.

ಈ ವರ್ಷ ಪೂರ್ತಿ ಸಾಗುವ ಪ್ರಯಾಣದಲ್ಲಿ ಹೊಲ-ಗದ್ದೆಗಳಂತಹ ಪ್ರದೇಶಗಳಲ್ಲಿ ಆಕಾಶವೇ ಅವರ ತಲೆಯ ಮೇಲಿನ ಸೂರಾಗಿರುತ್ತದೆ.

*****

ರಬರಿ ಸಮುದಾಯವು ಮೂಲತಃ ಗುಜರಾತಿನ ಕಛ್ ಮೂಲದ ಅರೆ-ಪಶುಪಾಲಕ ಸಮುದಾಯವಾಗಿದೆ. ಮಶ್ರು ಮಾಮಾ ಅವರಂತಹ ಅನೇಕರು ಮಧ್ಯ ಭಾರತದ ವಿದರ್ಭವನ್ನು ತಲೆಮಾರುಗಳಿಂದ ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಅವರು ಆಡುಗಳು, ಕುರಿಗಳು ಮತ್ತು ಒಂಟೆಗಳ ದೊಡ್ಡ ಹಿಂಡುಗಳನ್ನು ಸಾಕುತ್ತಾರೆ. ಕಛ್‌ನಲ್ಲಿ ಉಳಿದಿರುವ ಹೆಚ್ಚಿನ ರಬರಿಗಳು ತಮಗಿರುವ ಭೂಮಿಯಲ್ಲಿ ಕೆಲಸ ಮಾಡುತ್ತಾರೆ; ಮಶ್ರು ಮಾಮ ಅವರಂತಹ ಇತರರು ಸದಾ ಅಲೆಯುತ್ತಾ ಡೇರೆಗಳಲ್ಲಿ ಬದುಕುತ್ತಿದ್ದಾರೆ.

ವಿದರ್ಭ ಮತ್ತು ನೆರೆಯ ಛತ್ತೀಸಗಢದೆಲ್ಲೆಡೆ ಸೇರಿ ಇಂತಹ 3,000ಕ್ಕೂ ಹೆಚ್ಚು ಡೇರಾಗಳಿವೆ ಎಂದು ಮಶ್ರು ಮಾಮಾ ಅಂದಾಜಿಸುತ್ತಾರೆ. ಪ್ರತಿಯೊಬ್ಬರೂ ಅವರದೇ ಆದ ಸ್ಥಿರ ವಲಸೆ ಮಾದರಿಯನ್ನು ಹೊಂದಿರುತ್ತಾರೆ, ಆದರೆ ಅವರ ವಾಸ್ತವ್ಯದ ಸ್ಥಳ ಯಾವತ್ತೂ ನಿಗದಿವಾಗಿರುವುದಿಲ್ಲ.

ಅವರು ಹಲವು ಜಿಲ್ಲೆಗಳ ಮೂಲಕ ಸಾಗುತ್ತಾರೆ ಮತ್ತು ತಮ್ಮ ವಲಸೆ ಮಾರ್ಗದಲ್ಲಿ ಕೆಲವು ದಿನಗಳಿಗೊಮ್ಮೆ ತಮ್ಮ ನೆಲೆಯನ್ನು ಬದಲಾಯಿಸುತ್ತಾರೆ. ಅವರು ಎಷ್ಟು ಕಡೆ ನೆಲೆ ಸ್ಥಾಪಿಸುತ್ತಾರೆಂದು ಹೇಳುವುದು ಕಷ್ಟವಾದರೂ ಒಂದು ತಿರುಗಾಟದಲ್ಲಿ ಸರಿಸುಮಾರು 50-75 ಬೇರೆ ಬೇರೆ ಸ್ಥಳಗಳ ನಡುವೆ ಚಲಿಸುವುದನ್ನು ಕಾಣಬಹುದು. ಒಂದು ದಿನ ಅವರು ವಾರ್ಧಾ ಜಿಲ್ಲೆಯ ಒಂದು ಹಳ್ಳಿಯಲ್ಲಿದ್ದಾರೆ, ಮರುದಿನ ಅವರು ಯವತ್ಮಾಲ್ ಜಿಲ್ಲೆಯ ವಾನಿ ಬಳಿ ಇರುತ್ತಾರೆ. ಋತುಮಾನ ಮತ್ತು ಸ್ಥಳೀಯ ರೈತರೊಂದಿಗಿನ ಅವರ ಸಂಬಂಧವನ್ನು ಅವಲಂಬಿಸಿ ಪ್ರತಿ ಸ್ಥಳದಲ್ಲಿ ಅವರ ವಾಸ್ತವ್ಯದ ಅವಧಿಯು ಒಂದೆರಡು ದಿನಗಳಿಂದ ಹದಿನೈದು ದಿನಗಳವರೆಗೆ ಬದಲಾಗಬಹುದು.

PHOTO • Jaideep Hardikar
PHOTO • Jaideep Hardikar

ಮಶ್ರು ಮಾಮಾ ಮೇಕೆಗಳು , ಕುರಿಗಳು ಮತ್ತು ಒಂಟೆಗಳ ದೊಡ್ಡ ಹಿಂಡುಗಳನ್ನು ಸಾಕುತ್ತಾರೆ . ರಾಮ ( ಎಡ ), ಜಾನುವಾರುಗಳನ್ನು ನೋಡಿಕೊಳ್ಳುವುದು ಮತ್ತು ಮುಂದಿನ ನೆಲೆಯನ್ನು ಹುಡುಕುವ ಕೆಲಸಗಳನ್ನು ಮಾಡುತ್ತಾರೆ

ರೈತರು ಮತ್ತು ರಬರಿಗಳ ನಡುವಿನ ಸಂಬಂಧ ಪರಸ್ಪರ ಸಹಕಾರಿಯಾದುದು. ರೈತರು ತಮ್ಮ ಹೊಲದಲ್ಲಿ ಇವರ ಕುರಿಗಳನ್ನು ಮೇಯಿಸಲು ಬಿಡುತ್ತಾರೆ. ಅಲ್ಲಿ ಅವು ಕಳೆ, ಕೂಳೆ ಇತ್ಯಾದಿಯನ್ನು ತಿನ್ನುತ್ತವೆ. ಜೊತೆಗೆ ಈ ಸಣ್ಣ ಪ್ರಾಣಿಗಳ ವಿಸರ್ಜನೆಯಿಂದ ರೈತರ ಭೂಮಿಯ ಫಲವತ್ತತೆ ಹೆಚ್ವಾಗುತ್ತದೆ.

ಕೆಲವೊಮ್ಮೆ ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ಕುರಿ ಮತ್ತು ಮೇಕೆಗಳ ಹಿಂಡುಗಳನ್ನು ಜಮೀನಿನಲ್ಲಿ ನಿಲ್ಲಿಸಲು ರೈತರು ರಬರಿಗಳಿಗೆ ಸಾಕಷ್ಟು ಹಣವನ್ನು ಪಾವತಿಸುತ್ತಾರೆ. ನಾಗ್ಪುರ ಮೂಲದ ಸೆಂಟರ್ ಫಾರ್ ಪೀಪಲ್ಸ್ ಕಲೆಕ್ಟಿವ್ ನಡೆಸಿದ ಇನ್ನೂ ಪ್ರಕಟಗೊಳ್ಳದ ಅಧ್ಯಯನದಲ್ಲಿ ಹೇಳಿರುವಂತೆ, ಅವರು ಪಡೆಯುವ ಹಣದ ನಿಖರವಾದ ಮೊತ್ತವು ಪ್ರಾಣಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ, ಆದರೆ ಕೆಲವು ಅಂದಾಜುಗಳು ವರ್ಷಕ್ಕೆ 2-3 ಲಕ್ಷ ರೂ. ಹೀಗೆ ಕುರಿ ಕೂಡುವುದರಿಂದ ಕೃಷಿ ಉತ್ಪಾದಕತೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಮಾಮಾ ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಹೊಂದಿದ್ದಾರೆ - ಅದೇ ಅವರ ಟ್ರಂಪ್ ಕಾರ್ಡ್.

ಖರೈ ಈಜು ಒಂಟೆಗಳಲ್ಲದ ಅವರ ಮೂರು ಕಛ್ಚಿ ತಳಿಯ ಒಂಟೆಗಳು ಹತ್ತಿರದ ಪೊದೆಗಳ ಬಳಿ ಮೇಯಲು ಹೋಗಿ ಮಾರಳಿದ್ದವು. ಮಾಮಾ ಹೊಂದಿರುವ ನಂಬಿಕಸ್ಥರಲ್ಲಿ ಒಬ್ಬರಾದ ರಾಮ ಎನ್ನುವವರ ಜೊತೆ ಅವು ಮೇಯಲು ಹೋಗಿದ್ದವು. ಅವರು ಈ ಜಾನುವಾರುಗಳನ್ನು ನೋಡಿಕೊಳ್ಳುವುದಲ್ಲದೆ ಮುಂದಿನ ನೆಲೆಯನ್ನು ಗುರುತಿಸಲು ಸಹ ಸಹಾಯ ಮಾಡುತ್ತಾರೆ.  ನಾವು ಕುಳಿತು ಹರಟೆ ಹೊಡೆಯುತ್ತಿರುವ ಸ್ಥಳದಿಂದ, ಒಂಟೆಗಳು ಸರಿಯಾಗಿ ಕಾಣುತ್ತಿರಲಿಲ್ಲ, ಆದರೆ ಅವುಗಳ ನೆರಳುಗಳು ಮರೆಯಾಗುತ್ತಿರುವ ಬೆಳಕಿನಲ್ಲಿ ಕುಣಿಯುತ್ತಿತ್ತು. ಹತ್ತಿರದ  ಮರದ ಮರೆಯಿಂದ ಅವುಗಳ ಸದ್ದು ನಾವು ಕೇಳುತ್ತಿತ್ತು.

ಅವರ ಡೇರಾ ಎದುರಿನ ಹತ್ತಿಯ ಹೊಲದಲ್ಲಿ, ಪ್ರಸ್ತುತ ಶಿಬಿರದಿಂದ ಒಂದು ಕಲ್ಲು ಬೀಸುವಷ್ಟು ದೂರದಲ್ಲಿ, ಕುರಿಗಳು ಮತ್ತು ಮೇಕೆಗಳು ತಾಜಾ ಹಸಿರು ಎಲೆಗಳನ್ನು ತಿನ್ನುತ್ತಿವೆ. ಡೇರಾದಲ್ಲಿ ನೀವು ಯಾವಾಗಲೂ ನಾಯಿಯನ್ನು ಕಾಣುತ್ತೀರಿ ಮತ್ತು ಇಲ್ಲಿ ಮಾಮ ಅವರ ನಾಯಿ ಮೋತಿ, ರಬರಿ ಮಹಿಳೆಯರು ತಯಾರಿಸಿದ ಕೈಯಿಂದ ನೇಯ್ದ ಮೃದುವಾದ ಜೊಹಾದ್ (ಕಂಬಳಿ)ನಿಂದ ಆವೃತವಾದ ನಮ್ಮ ಚಾರ್ಪಾಯ್ ಬಳಿ ಉತ್ಸಾಹದಿಂದ ಆಡುತ್ತಿತ್ತು.

PHOTO • Jaideep Hardikar

ಮಶ್ರು ಮಾಮಾ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಹೊಂದಿದ್ದಾರೆ ಮತ್ತು ಅವುಗಳೊಡನೆ ಹಲವೆಡೆ ಪ್ರಯಾಣಿಸುತ್ತಾರೆ. 'ಅವು ಚಳಿಗಾಲ ಮತ್ತು ಮಳೆಯಿಂದ ಮೃದುವಾಗುತ್ತವೆ, ಬೇಸಿಗೆಯಲ್ಲಿ ಶಾಖದ ಅಲೆಗಳಿಂದ ಗಟ್ಟಿಯಾಗುತ್ತವೆ'

*****

ಮಹಾರಾಷ್ಟ್ರದ ಪೂರ್ವ ಭಾಗದಲ್ಲಿ ಹೆಚ್ಚಾಗಿ ಸಣ್ಣ ರೈತರ ಒಡೆತನದ ಅನೇಕ ಮಳೆಯಾಧಾರಿತ, ಏಕ ಬೆಳೆ ಹೊಲಗಳು ಈಗ ಬರಡಾಗಿವೆ. ಹತ್ತಿಯನ್ನು ಸಂಪೂರ್ಣವಾಗಿ ಕೊಯ್ಲು ಮಾಡಲಾಗಿದೆ. ಚಳಿಗಾಲದ ಬೆಳೆಗಳು - ಹೆಸರು ಕಾಳು, ಅಲ್ಲಲ್ಲಿ ಸ್ವಲ್ಪ ಗೋಧಿ ಮತ್ತು ಜೋಳ (ಸಿಹಿ ಜೋಳ) - ಕೊನೆಯ ಹಂತದಲ್ಲಿವೆ, ಹದಿನೈದು ದಿನಗಳಲ್ಲಿ ಕೊಯ್ಲು ನಡೆಯಲಿದೆ. ಮಶ್ರು ಮಾಮಾ ಒಂದೆರಡು ದಿನಗಳಲ್ಲಿ ಹೊಸ ಜಮೀನಿಗೆ ಸ್ಥಳಾಂತರಗೊಳ್ಳಲಿದ್ದಾರೆ, ಅವರ ಕುರಿಗಳು ಮತ್ತು ಮೇಕೆಗಳು ಈ ಜಮೀನಿನಲ್ಲಿ ಉಳಿದಿರುವ ಕೊನೆಯ ಹಸಿರು ಎಲೆಗಳನ್ನು ಸಹ ತಿಂದು ಮುಗಿಸಿವೆ.

"ನನಗೆ ಇಲ್ಲಿ ವಿಳಾಸವಿಲ್ಲ" ಎಂದು ಮಶ್ರು ಮಾಮಾ ಹೇಳುತ್ತಾರೆ. ಮಳೆ ಬಂದಾಗ, ಡೇರಾದ ಪುರುಷರು ಮತ್ತು ಮಹಿಳೆಯರು, ಸುಮಾರು 15ರಿಂದ 20 ಹತ್ತಿರದ ಸಂಬಂಧಿಕರು, ಟಾರ್ಪಾಲಿನ್ ಹಾಳೆಗಳಿಂದ ಮುಚ್ಚಿದ ಚಾ ರ್ಪಾ ಯ್ ಕೆಳಗೆ ಆಶ್ರಯ ಪಡೆಯುತ್ತಾರೆ. ಅವರ ಒಂಟೆಗಳು, ಕುರಿಗಳು ಮತ್ತು ಮೇಕೆ ಹಿಂಡುಗಳು ಮಳೆಯಲ್ಲಿ ನೆನೆಯುತ್ತವೆ. "ಅವು ಚಳಿಗಾಲ ಮತ್ತು ಮಳೆಯಿಂದ ಮೃದುವಾಗುತ್ತವೆ, ಬೇಸಿಗೆಯಲ್ಲಿ ಶಾಖದ ಅಲೆಗಳಿಂದ ಗಟ್ಟಿಯಾಗುತ್ತವೆ. "ರಬರಿಗಳು ಮೂಲ ಹವಾಮಾನ ರಕ್ಷಕರು" ಎಂದು ಅವರು ಹೇಳುತ್ತಾರೆ.

"ನಮ್ಮ ಬದುಕಿನಲ್ಲಿ ಅನಿಶ್ಚಿತತೆಯೊಂದೇ ಸ್ಥಿರವಾದುದು. ಅದರ ಬಗ್ಗೆ ಖಚಿತತೆ ಇದೆ," ಎಂದು ಅವರು ನಗುತ್ತಾರೆ. ಅವರ ಡೇರಾ ನಾಗ್ಪುರ, ವಾರ್ಧಾ, ಚಂದ್ರಾಪುರ್ ಮತ್ತು ಯವತ್ಮಾಲ್ ಜಿಲ್ಲೆಗಳು ಮತ್ತು ನೆರೆಯ ಪ್ರದೇಶಗಳಲ್ಲಿ ಸಂಚರಿಸುತ್ತದೆ. "ಮಾನ್ಸೂನ್ ಬದಲಾಗುತ್ತಿದೆ. ಕಾಡುಗಳು ಮಾಯವಾಗಿವೆ. ಒಂದು ಕಾಲದಲ್ಲಿ ಹೊಲಗಳಲ್ಲಿ ನಿಂತಿದ್ದ ಮರಗಳು ನಾಶವಾಗಿವೆ." ಮಶ್ರು ಮಾಮಾ ಅವರು ಕೃಷಿ ಬಿಕ್ಕಟ್ಟನ್ನು ಮತ್ತು ರೈತಾಪಿ ಜನರ ಹದಗೆಡುತ್ತಿರುವ ಹಣೆಬರಹವನ್ನು ಹತ್ತಿರದಿಂದ ನೋಡಿದ್ದಾರೆ. ವ್ಯಾಪಕವಾದ ಆರ್ಥಿಕ ಬದಲಾವಣೆಗಳು ಸಂಭವಿಸಿದರೂ, ಸಂಕೀರ್ಣ ಪರಿಸರ ಮತ್ತು ಹವಾಮಾನ ಅಂಶಗಳು ಸಹ ಒಂದು ಪಾತ್ರವನ್ನು ವಹಿಸಿವೆ ಎಂದು ಅವರು ಹೇಳುತ್ತಾರೆ.

ಬದಲಾಗುತ್ತಿರುವ ಹವಾಮಾನವು ಕೆಟ್ಟ ಶಕುನವಾಗಿದೆ ಎಂದು ಮಶ್ರು ಮಾಮಾ ಹೇಳುತ್ತಾರೆ, ಇದು ಹೊಲಗಳು, ನೀರು, ಕಾಡುಗಳು ಮತ್ತು ಪ್ರಾಣಿಗಳನ್ನು ಅಸ್ತವ್ಯಸ್ತಗೊಳಿಸುತ್ತದೆ. ಅವರು ಹೋಗುತ್ತಿದ್ದ ಕೆಲವು ಹಳೆಯ ಸ್ಥಳಗಳು ಈಗ ಬಿಕ್ಕಟ್ಟಿನಲ್ಲಿವೆ. ಸುಮಾರು 30 ವರ್ಷಗಳ ಹಿಂದೆ ಅವರು ನೋಡಿದಷ್ಟು ಹಸಿರು ಎಲೆಗಳು ಮತ್ತು ಹುಲ್ಲನ್ನು ಈಗ ಈ ಪ್ರದೇಶದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಅವರು ವಿವರಿಸುತ್ತಾರೆ. ಇದು ಅವರ ಹಿಂಡುಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ. "ಪ್ರಕೃತಿಯಲ್ಲಿ ಸಮಸ್ಯೆ ಇದ್ದರೆ , ಅದನ್ನು ಹೇಗೆ ಸರಿಪಡಿಸುವುದು ಎಂದು ಮಾನವರಿಗೆ ಅರ್ಥವಾಗುವುದಿಲ್ಲ ಅಥವಾ ತಿಳಿದಿರುವುದಿಲ್ಲ" ಎಂದು ಅಲೆಮಾರಿ ಹಿರಿಯ ಹೇಳುತ್ತಾರೆ.

PHOTO • Jaideep Hardikar
PHOTO • Jaideep Hardikar

ಮುಸ್ಸಂಜೆ ನಿಧಾನವಾಗಿ ಇಳಿಯುತ್ತಿದ್ದಂತೆ, ಮಶ್ರು ಮಾಮಾ ಅವರ ಒಂಟೆಗ  ಹತ್ತಿರದಪೊದೆ ಕಾಡಿನಲ್ಲಿಮೇಯುವುದನ್ನು ನಿಲ್ಲಿಸಿ ಡೇರಾಗೆ ಮರಳುತ್ತವೆ. 'ಒಂಟೆಗಳು ನಮ್ಮ ಹಡಗುಗಳು, ಹಮಾರಾ ಜಹಜ್ ಹೈ, ನಮ್ಮ ದೇವರು'

ಹೈದರಾಬಾದ್‌ನ ಕಸಾಯಿಖಾನೆಗಳಿಗೆ ಒಂಟೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಕೆಲವು ರಬರಿ ಪಶುಪಾಲಕರ ಮೇಲೆ ತಪ್ಪಾಗಿ ಆರೋಪ ಹೊರಿಸಲಾದ ಇತ್ತೀಚಿನ ಘಟನೆಯನ್ನು ವಿಷಾದದಿಂದ ನೆನಪಿಸಿಕೊಳ್ಳುವ ಅವರು, "ನಮ್ಮನ್ನು ತಿಳಿದಿಲ್ಲದ ಜನರು ನಮ್ಮ ಒಂಟೆಗಳೊಂದಿಗಿನ ನಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ," ಎಂದು ಹೇಳುತ್ತಾರೆ. (ಓದಿ: ಕಛ್ ಒಂಟೆಗಳ ಬಂಧನ: ನಿರ್ಜನ ಹಡಗುಗಳು ).

"ಒಂಟೆಗಳು ನಮ್ಮ ಹಡಗುಗಳು, ಹಮಾರಾ ಜಹಜ್ ಹೈ, ನಮ್ಮ ದೇವರು" ಎಂದು ಅವರು ಹೇಳುತ್ತಾರೆ, "ಪ್ರತಿ ಡೇರಾದಲ್ಲಿ ಮೂರು ಅಥವಾ ನಾಲ್ಕು ಒಂಟೆಗಳು ತಮ್ಮ ವಸ್ತುಗಳನ್ನು ಮತ್ತು ಮಕ್ಕಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಇರುತ್ತವೆ" ಎಂದು ಅವರು ಹೇಳುತ್ತಾರೆ.

ಮಧ್ಯ ಭಾರತದ ರಬರಿಗಳು ಹೆಚ್ಚು ಸಂಶೋಧನೆಗೆ ಒಳಗಾಗಿಲ್ಲ; ಅವರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸರ್ಕಾರಿ ವಲಯಗಳು ಸಹ ಒಪ್ಪಿಕೊಳ್ಳುವುದಿಲ್ಲ. ಮಶ್ರು ಮಾಮಾ ವಾರ್ಧಾ ಜಿಲ್ಲೆಯ ಜಮೀನಿನಲ್ಲಿ ಜನಿಸಿದರು. ಅವರು ವಿದರ್ಭದ ಈ ಹೊಲಗಳಲ್ಲಿ ವಿವಾಹವಾದರು ಮತ್ತು ತಮ್ಮ ಕುಟುಂಬವನ್ನು ಬೆಳೆಸಿದರು. ಆದರೂ ಅವರ ನಡುವೆ ಅವರ ಉಪಸ್ಥಿತಿಯ ಬಗ್ಗೆ ಯಾರಿಗೂ ತಿಳಿದಿಲ್ಲ.

ವಿದರ್ಭದ ಪಶ್ಚಿಮ ಭಾಗಗಳಲ್ಲಿ ಮಾತನಾಡುವ ಮರಾಠಿಯ ಉಪಭಾಷೆಯಾದ ವರ್ಹಾಡಿಯಲ್ಲಿ ಅವರು ಗುಜರಾತಿ ಮಾತನಾಡುವಷ್ಟೇ ಸುಲಭವಾಗಿ ಮಾತುಕತೆ ನಡೆಸಬಲ್ಲರು!. "ಒಂದರ್ಥದಲ್ಲಿ ನಾನು ವರ್ಹಾಡಿ" ಎಂದು ಮಶ್ರು ಮಾಮಾ ಹೇಳುತ್ತಾರೆ. ವಿಶಿಷ್ಟವಾದ ಬಿಳಿ .ಧೋತಿ ಮತ್ತು ಬಿಳಿ ಪೇಟದ ರಬರಿ ವೇಷಭೂಷಣವನ್ನು ಧರಿಸುವ ಕಾರಣಕ್ಕೆ ಜನರು ಅವರನ್ನು ಹೊರಗಿನವರು ಎಂದು ಭಾವಿಸಬಹುದು. ಆದರೆ ಅವರು ಸ್ಥಳೀಯ ಸಂಸ್ಕೃತಿಯಲ್ಲಿ ಬೇರೂರಿದ್ದಾರೆ ಮತ್ತು ಆ ಪ್ರದೇಶದ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ತಿಳಿದಿದ್ದಾರೆ. ಅಗತ್ಯವಿದ್ದಾಗ ಅವರು ಸ್ಥಳೀಯ ಅವಾಚ್ಯ ಶಬ್ದಗಳು ಮತ್ತು ಆಡುಭಾಷೆಯ ಪದಗಳನ್ನು ಬಳಸಬಲ್ಲರು!

ರಬರಿಗಳು ಕಛ್‌ನಲ್ಲಿರುವ ತಮ್ಮ ಬೇರುಗಳಿಂದ ಬಹಳ ದೂರದಲ್ಲಿ ವಾಸಿಸುತ್ತಿದ್ದರೂ, ಈ ಬುಡಕಟ್ಟು ಜನರು ತಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಿದ್ದಾರೆ. ಅವರು ಕಛ್‌ನಲ್ಲಿರುವ ತಮ್ಮ ಸಂಬಂಧಿಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಮಶ್ರು ಮಾಮಾ ಅವರ ಪತ್ನಿ ಪ್ರಸ್ತುತ ಕಛ್ ಜಿಲ್ಲೆಯ ಅಂಜಾರ್ ವಿಭಾಗದಲ್ಲಿರುವ ಭದ್ರೋಯಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಇಬ್ಬರು ಹಿರಿಯ ಹೆಣ್ಣುಮಕ್ಕಳು ಅಲ್ಲಿ ಅದೇ ಬುಡಕಟ್ಟಿನ ಪುರುಷರನ್ನು ಮದುವೆಯಾಗಿದ್ದಾರೆ.

PHOTO • Jaideep Hardikar
PHOTO • Jaideep Hardikar

ಮಶ್ರುಮಾಮ ಅವರ ಮನೆಯೆನ್ನುವುದು ಸದಾ ತೆರೆದ ಆಕಾಶದ ಕೆಳಗಿನ ಡೇರೆಯಷ್ಟೇ. ಅತಿಥಿಗಳು ಬಂದಾಗ ಡೇರೆಯಲ್ಲಿನ ಹೆಂಗಸರು ಅಂದು ಹಬ್ಬದಡುಗೆಯನ್ನು ತಯಾರಿಸಿ ಎಲ್ಲರೊಡನೆ ಕುಳಿತು ಉಣ್ಣುತ್ತಾರೆ

“ನಯೀ ಪೀಡಿ ಯಂಹಾ ನಹೀ ರೆಹ್ನಾ ಚಾಹ್ತೀ [ಈಗಿನ ತಲೆಮಾರು ಹೊಲಗಳಲ್ಲಿ ಉಳಿಯಲು ಇಷ್ಟಪಡುವುದಿಲ್ಲ]” ಎನ್ನುತ್ತಾರವರು. ಡೇರಾದಲ್ಲಿನ ಮಕ್ಕಳನ್ನು ಕುಟುಂಬದ ಉಳಿದವರೊಡನೆ ನೆಲೆಸಲು ಕಳುಹಿಸಲಾಗುತ್ತದೆ. ಅವರು ಅಲ್ಲಿಯೇ ಶಾಲೆಗೆ ಹೋಗಿ ಓದಿ, ಕೆಲಸ ಹಿಡಿಯಲಿ ಎನ್ನುವುದು ಅವರ ಆಶಯ. “ಲೋಗ್‌ ಮೆಹನತ್‌ ಭೀ ನಹಿ ಕರ್‌ ರಹೀ ಹೈ; ದೌಡ್‌ ಲಗೀ ಹೈ [ಜನರು ಹಿಂದಿನಂತೆ ಶ್ರಮಜೀವಿಗಳಾಗಿ ಉಳಿದಿಲ್ಲ. ಈಗ ಹುಚ್ಚು ಓಟ ನಡೆಯುತ್ತಿದೆ.” ಎನ್ನುತ್ತಾರೆ ಮಶ್ರು ಮಾಮ. ಅವರ ಸ್ವಂತ ಮಗ ಭರತ್‌ ಕೂಡಾ ದೂರದ ಮುಂಬಯಿಯಲ್ಲಿದ್ದಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿರುವ ಅವರು ಒಂದು ಸ್ಥಿರ ಉದ್ಯೋಗದ ಹುಡುಕಾಟದಲ್ಲಿದ್ದಾರೆ.

ಅವರ ಕಿರಿಯ ಮಗಳು ಅವರೊಡನೆ ಡೇರಾದಲ್ಲೇ ವಾಸಿಸುತ್ತಾರೆ. ಆಕೆಯಲ್ಲದೆ ಇನ್ನೂ ಐದು ಮಹಿಳೆಯರಿದ್ದು ಅವರೆಲ್ಲರೂ ಸೇರಿ ಅಂದಿನ ಅಡುಗೆಯ ತಯಾರಿಯಲ್ಲಿದ್ದರು. ಅಲ್ಲಿದ್ದ ಪ್ರಾಣಿಗಳು ಮತ್ತು ಹಕ್ಕಿಗಳ ದನಿಯಲ್ಲಿ ಅವರ ದನಿಯೂ ಬೆರೆತಂತಿತ್ತು. ಉರಿಯುತ್ತಿದ್ದ ಒಲೆಯ ಮುಂದೆ ಕುಳಿತಿದ್ದ ಅವರ ಮುಖಗಳು ಒಲೆಯ ಬೆಂಕಿಗೆ ಹೊಳೆಯುತ್ತಿದ್ದವು. ಎಲ್ಲರೂ ಕಪ್ಪು ಬಟ್ಟೆ ತೊಟ್ಟಿದ್ದರು.

ಗಂಡಸರಿಗೆ ಬಿಳಿ ಬಟ್ಟೆ ಮತ್ತೆ ಹೆಣ್ಣಿಗೆ ಬಿಳಿ ಬಟ್ಟೆ ಯಾಕೆ ಹೀಗೆ?

ಮಶ್ರು ಮಾಮ ಈ ಪ್ರಶ್ನೆಗೆ ಉತ್ತರವಾಗಿ ಬಹಳ ಹಿಂದಿನ ದಂತಕತೆಯೊಂದನ್ನು ಹೇಳುತ್ತಾರೆ. ಅವರ ಸಮುದಾಯದ ಕಾವಲು ದೇವತೆಯಾದ ಸತಿ ಮಾ ಮತ್ತು ಆಕೆಯಲ್ಲಿ ಮೋಹಗೊಂಡ ಕ್ರೂರ ರಾಜನೊಬ್ಬನ ನಡುವೆ ಘೋರ ಯುದ್ಧ ಜೈಸಲ್ಮೇರ್‌ ಎನ್ನುವಲ್ಲಿ ನಡೆಯುತ್ತದೆ. ಇದು ಬಹಳಷ್ಟು ರಕ್ತಪಾತಕ್ಕೆ ಕಾರಣವಾಗುತ್ತದೆ. ರಾಜನು ಅವಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿರುತ್ತಾನೆ ಆದರೆ ಸಮುದಾಯ ಈ ಪ್ರಸ್ತಾಪವನ್ನು ನಿರಾಕರಿಸುತ್ತದೆ. ಈ ಯುದ್ಧವನ್ನು ಕೊನೆಗೊಳಿಸಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿ ರಬರಿ ರಾಜಕುಮಾರಿ ಭೂಮಾತೆಯ ಮಡಿಲಿನಲ್ಲಿ ಶಾಶ್ವತ ಸಮಾಧಿಯಾಗುತ್ತಾಳೆ. "ಅವಳ ಸಾವಿಗೆ ದುಃಖ ವ್ಯಕ್ತಪಡಿಸುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ. "ನಾವು ಈಗಲೂ ಆಕೆಗಾಗಿ ದುಃಖ ವ್ಯಕ್ತಪಡಿಸುತ್ತೇವೆ."

ಅಷ್ಟು ಹೊತ್ತಿಗೆ ಕತ್ತಲೆ ಎಲ್ಲೆಡೆ ಹರಡಿತ್ತು; ಊಟ ಸಿದ್ಧವಾಗಿತ್ತು. ಸಾಮಾನ್ಯವಾಗಿ, ಡೇರಾದ ಐದು-ಆರು ಕುಟುಂಬಗಳು ಪ್ರತ್ಯೇಕವಾಗಿ ಅಡುಗೆ ಮಾಡುತ್ತವೆ. ಆದರೆ ಅತಿಥಿಗಳು ಬಂದಾಗ ಈ ಸಂಜೆಯಂತೆ, ಅವರು ಹಬ್ಬದಡುಗೆ ಮಾಡಿ ಒಟ್ಟಿಗೆ ತಿನ್ನುತ್ತಾರೆ. ಇಂದಿನ ವಿಶೇಷದಲ್ಲಿ ಕುರಿ ಹಾಲಿನಲ್ಲಿ ತಯಾರಿಸಿದ ಅಕ್ಕಿ ಖೀರ್, ಕುರಿ ಹಾಲು-ಬೆಣ್ಣೆಯಿಂದ ತಯಾರಿಸಿದ ತುಪ್ಪದೊಂದಿಗೆ ಬೆಲ್ಲ, ಚಪಾತಿ, ಮಸಾಲೆಯುಕ್ತ ದಾಲ್, ಚಾವಲ್ ಅನ್ನ) ಮತ್ತು ಮಜ್ಜಿಗೆ ಸೇರಿವೆ.

ನಾವು ಮೊಬೈಲ್‌ ಟಾರ್ಚಿನ ಬೆಳಕಿನ ಊಟ ಮಾಡತೊಡಗಿದೆವು.

ಅನುವಾದ: ಶಂಕರ. ಎನ್. ಕೆಂಚನೂರು

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru