ಗಡಚಿರೋಲಿ ಲೋಕಸಭಾ ಕ್ಷೇತ್ರ ಎಪ್ರಿಲ್‌ 19ರಂದು ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ತಯಾರಾಗುತ್ತಿತ್ತು. ಏಳು ಹಂತಗಳಲ್ಲಿ ನಡೆಯಲಿರುವ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುವುದರಲ್ಲಿತ್ತು. ಇದಕ್ಕೂ ಒಂದು ವಾರದ ಮೊದಲು ಜಿಲ್ಲೆಯ 12 ತಹಸಿಲ್‌ಗಳ ಸುಮಾರು 1450 ಗ್ರಾಮ ಸಭೆಗಳು ಕಾಂಗ್ರೆಸ್ ಅಭ್ಯರ್ಥಿ ಡಾ. ನಾಮದೇವ್ ಕಿರ್ಸನ್ ಅವರಿಗೆ ಷರತ್ತುಬದ್ಧ ಬೆಂಬಲವನ್ನು ಘೋಷಿಸಿದವು.

ಜಿಲ್ಲೆಯ ಮಟ್ಟಿಗೆ ಇದೊಂದು ಅಭೂತಪೂರ್ವ ಘಟನೆಯಾಗಿತ್ತು. ಏಕೆಂದರೆ ಬುಡಕಟ್ಟು ಸಮುದಾಯಗಳು ಎಂದಿಗೂ ಬಹಿರಂಗವಾಗಿ ರಾಜಕೀಯ ಪಕ್ಷಗಳನ್ನು ಬೆಂಬಲಿಸದ ಜಿಲ್ಲೆಯಲ್ಲಿ, ಗ್ರಾಮ ಸಭೆಗಳು ಒಟ್ಟಾಗಿ ಜಿಲ್ಲಾವ್ಯಾಪಿ ಒಕ್ಕೂಟದ ಮೂಲಕ ಹೀಗೆ ಬೆಂಬಲ ಘೋಷಿಸಿದ್ದವು. ಈ ಬೆಂಬಲ ಕಾಂಗ್ರೆಸ್ ಪಕ್ಷವನ್ನು ಅಚ್ಚರಿಗೆ ಒಳಗಾಗಿಸಿದರೆ, ಭಾರತೀಯ ಜನತಾ ಪಕ್ಷವನ್ನು ಬೆಚ್ಚಿಬೀಳಿಸಿತು. ಇಲ್ಲಿಂದ ಬಿಜೆಪಿಯ ಹಾಲಿ ಸಂಸದ ಅಶೋಕ್ ನೇಟೆ ಸತತ ಮೂರನೇ ಬಾರಿಗೆ ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ.

ಏಪ್ರಿಲ್ 12ರಂದು ಗಡಚಿರೋಲಿ ನಗರದ ಕಲ್ಯಾಣ ಮಂಟಪವಾದ ಸುಪ್ರಭಾತ್ ಮಂಗಲ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ನಾಯಕರ ಬಹಿರಂಗ ಸಭೆಗಾಗಿ ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಗ್ರಾಮ ಸಭೆಗಳ ಪ್ರತಿನಿಧಿಗಳು ತಾಳ್ಮೆಯಿಂದ ಕಾಯುತ್ತಿದ್ದರು. ಸಂಜೆ, ಜಿಲ್ಲೆಯ ಆಗ್ನೇಯ ಬ್ಲಾಕ್‌ನ ಮಡಿಯಾದ ದುರ್ಬಲ ಬುಡಕಟ್ಟು ಗುಂಪಿನ ವಕೀಲ ಕಾರ್ಯಕರ್ತ ಲಾಲ್ಸು ನೊಗೊಟಿ ಸದ್ದಿಲ್ಲದೆ ಕಿರ್ಸನ್ ಅವರೆದುರು ಷರತ್ತುಗಳನ್ನು ಓದಿ ಹೇಳಿದರು. ನಂತರ ಬೆಂಬಲ ಪತ್ರವನ್ನು ಸ್ವೀಕರಿಸಿದ ಕಿರ್ಸನ್‌ ತಾನು ಸಂಸತ್ತಿಗೆ ಆಯ್ಕೆಯಾದರೆ ಬೇಡಿಕೆಗಳಿಗೆ ಬದ್ಧನಾಗಿರುವುದಾಗಿ ಪ್ರತಿಜ್ಞೆ ಮಾಡಿದರು.

ಹಲವು ಬೇಡಿಕೆಗಳ ಜೊತೆಗೆ ಜಿಲ್ಲೆಯ ಅರಣ್ಯ ಭಾಗಗಳಲ್ಲಿ ಅಡೆತಡೆಯಿಲ್ಲದ ಹಾಗೂ ಅನಿಯಂತ್ರಿತ ಗಣಿಗಾರಿಕೆಯನ್ನು ನಿಲ್ಲಿಸುವುದು ಸಹ ಸೇರಿತ್ತು. ಅದರೊಂದಿಗೆ ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿನ ನಿಯಮಗಳನ್ನು ಸುಗಮಗೊಳಿಸುವುದು; ಇದುವರೆಗೂ ಸಮುದಾಯ ಅರಣ್ಯ ಹಕ್ಕುಗಳು (ಸಿಎಫ್ಆರ್) ಸಿಗದಿರುವ ಅರ್ಹ ಗ್ರಾಮಗಳಿಗೆ ಆ ಹಕ್ಕುಗಳನ್ನು ನೀಡುವುದು; ಮತ್ತು ಭಾರತದ ಸಂವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಷರತ್ತುಗಳೂ ಇದ್ದವು.

"ನಮ್ಮ ಬೆಂಬಲ ಈ ಚುನಾವಣೆಗೆ ಮಾತ್ರ" ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ, "ಭರವಸೆಗೆ ದ್ರೋಹ ಬಗೆದರೆ ನಾವು, ಜನರು, ಭವಿಷ್ಯದಲ್ಲಿ ಭಿನ್ನ ನಿಲುವು ತೆಗೆದುಕೊಳ್ಳುತ್ತೇವೆ" ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಗ್ರಾಮ ಸಭೆಗಳು ಈ ಕ್ರಮವನ್ನು ಏಕೆ ತೆಗೆದುಕೊಂಡವು?

" ಸರ್ಕಾರಕ್ಕೆ ನಾವು ಗಣಿಗಳಿಗಿಂತಲೂ ಹೆಚ್ಚಿನ ರಾಯಧನವನ್ನು ನೀಡುತ್ತೇವೆ" ಎಂದು ಹಿರಿಯ ಬುಡಕಟ್ಟು ಕಾರ್ಯಕರ್ತ , ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕರೂ ಆಗಿದ್ದ ಸೈನು ಗೋಟಾ ಹೇಳುತ್ತಾರೆ. "ಈ ಪ್ರದೇಶದಲ್ಲಿ ಕಾಡುಗಳನ್ನು ಕಡಿಯುವುದು ಮತ್ತು ಗಣಿಗಳನ್ನು ಅಗೆಯುವುದು ತಪ್ಪು."

PHOTO • Jaideep Hardikar
PHOTO • Jaideep Hardikar

ಎಡ: ಲಾಲ್ಸು ನೊಗೊಟಿ ವಕೀಲ-ಕಾರ್ಯಕರ್ತ ಮತ್ತು ಗಡಚಿರೋಲಿಯ ಪ್ರಮುಖ ಗ್ರಾಮ ಸಭೆ ಒಕ್ಕೂಟದ ನಾಯಕರಲ್ಲಿ ಒಬ್ಬರು. ಬಲ: ಹಿರಿಯ ಆದಿವಾಸಿ ಕಾರ್ಯಕರ್ತ ಮತ್ತು ದಕ್ಷಿಣ ಮಧ್ಯ ಗಡಚಿರೋಲಿಯ ನಾಯಕ ಸೈನು ಗೋಟಾ ಅವರು ತಮ್ಮ ಪತ್ನಿ ಮತ್ತು ಮಾಜಿ ಪಂಚಾಯತ್ ಸಮಿತಿ ಅಧ್ಯಕ್ಷೆ ಶೀಲಾ ಗೋಟಾ ಅವರೊಂದಿಗೆ ತೊಡ್ಗಟ್ಟಾ ಬಳಿಯ ತಮ್ಮ ಮನೆಯಲ್ಲಿ

ಕೊಲೆಗಳು, ದಬ್ಬಾಳಿಕೆ, ಅರಣ್ಯ ಹಕ್ಕುಗಳ ದೊರಕುವಿಕೆಯಲ್ಲಿನ ವಿಳಂಬ ಮತ್ತು ತನ್ನ ಗೊಂಡ್ ಬುಡಕಟ್ಟು ಜನಾಂಗದ ನಿರಂತರ ಅಧೀನತೆ ಇವೆಲ್ಲವಕ್ಕೂ ಗೋಟಾ ಸಾಕ್ಷಿಯಾಗಿದ್ದಾರೆ. ಕಪ್ಪು ಚೂಪಾದ ಮೀಸೆಯನ್ನು ಹೊಂದಿರುವ 60 ರ ಹರೆಯದ ಎತ್ತರದ ಮತ್ತು ಗಟ್ಟಿಮುಟ್ಟಾದ ವ್ಯಕ್ತಿಯಾದ ಗೋಟಾ, ಗಡಚಿರೋಲಿಯ ಪಂಚಾಯತ್ ಎಕ್ಸ್ಟೆನ್ಷನ್ ಟು ಶೆಡ್ಯೂಲ್ಡ್ ಏರಿಯಾಸ್ (ಪಿಇಎಸ್ಎ) ಅಡಿಯಲ್ಲಿ ಬರುವ ಗ್ರಾಮ ಸಭೆಗಳು ಒಗ್ಗೂಡಿ ಬಿಜೆಪಿಯ ಹಾಲಿ ಸಂಸದರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಗೆ ಎರಡು ಕಾರಣಗಳಿಗಾಗಿ ಬೆಂಬಲ ನೀಡಲು ನಿರ್ಧರಿಸಿದವು ಎನ್ನುತ್ತಾರೆ: ಒಂದು, ದುರ್ಬಲ ಎಫ್ಆರ್‌ಎ ಕಾನೂನು ಮತ್ತು ಎರಡು, ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ಸಾಧ್ಯತೆಯ ಬೆದರಿಕೆ ಅವರ ಸಂಸ್ಕೃತಿ ಮತ್ತು ಆವಾಸಸ್ಥಾನವನ್ನು ನಾಶಪಡಿಸುತ್ತದೆ. "ಜನರ ಮೇಲೆ ನಿರಂತರ ಪೊಲೀಸ್ ಕಿರುಕುಳ ಮುಂದುವರಿಯಬಾರದು, ಅದು ನಿಲ್ಲಬೇಕು" ಎಂದು ಅವರು ಹೇಳುತ್ತಾರೆ.

ಬುಡಕಟ್ಟು ಗ್ರಾಮ ಸಭೆಯ ಪ್ರತಿನಿಧಿಗಳು ಬೆಂಬಲದ ವಿಷಯದಲ್ಲಿ ಒಮ್ಮತಕ್ಕೆ ಬರುವ ಮತ್ತು ಷರತ್ತುಗಳನ್ನು ರೂಪಿಸುವ ಮೊದಲು ಒಟ್ಟು ಮೂರು ಸಮಾಲೋಚನಾ ಸಭೆಗಳನ್ನು ನಡೆಸಲಾಯಿತು.

"ಇದು ದೇಶದ ಮಟ್ಟಿಗೆ ನಿರ್ಣಾಯಕ ಚುನಾವಣೆಯಾಗಿದೆ" ಎಂದು 2017ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ನೊಗೋಟಿ ಹೇಳುತ್ತಾರೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಅವರನ್ನು ವಕೀಲ್ ಸಾಹೇಬ್ ಎಂದು ಕರೆಯಲಾಗುತ್ತದೆ. "ಇಲ್ಲಿನ ಜನರು ತಿಳುವಳಿಕೆಯುಳ್ಳ ನಿಲುವನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದರು."

ಈ ಕಬ್ಬಿಣದ ಅದಿರು ಸಮೃದ್ಧ ಪ್ರದೇಶದಲ್ಲಿ ಮತ್ತೊಂದು ಗಣಿಯನ್ನು ತೆರೆಯುವ ಸಾಧ್ಯತೆಯ ವಿರುದ್ಧ ಬುಡಕಟ್ಟು ಸಮುದಾಯಗಳು 253 ದಿನಗಳ ಮೌನ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕಳೆದ ನಂವೆಂಬರ್‌ (2023) ತಿಂಗಳಿನಲ್ಲಿ ಪೊಲೀಸರು ಅಪ್ರಚೋದಿತವಾಗಿ ಮೌನ ಪ್ರತಿಭಟನೆ ನಡೆಯುತ್ತಿದ್ದ ಸ್ಥಳವನ್ನು ನೆಲಸಮಗೊಳಿಸಿದ್ದರು.

ಪ್ರತಿಭಟನಾಕಾರರು ಭದ್ರತಾ ತಂಡದ ಮೇಲೆ ದಾಳಿ ನಡೆಸಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ, ಸಶಸ್ತ್ರ ಭದ್ರತಾ ಸಿಬ್ಬಂದಿಯ ಬೃಹತ್ ತುಕಡಿ ಸುರ್ಜಾಘರ್ ಪ್ರದೇಶದಲ್ಲಿ ಆರು ಉದ್ದೇಶಿತ ಮತ್ತು ಹರಾಜು ಮಾಡಲಾಗಿರುವ ಗಣಿಗಳ ವಿರುದ್ಧ ಸುಮಾರು 70 ಹಳ್ಳಿಗಳ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದ ತೊಡ್ಗಟ್ಟಾ ಗ್ರಾಮದಲ್ಲಿನ ಸ್ಥಳವನ್ನು ನಾಶಪಡಿಸಿಅವರ ಹೋರಾಟವನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು ದೆ ಎಂದು ಆರೋಪಿಸಲಾಗಿದೆ.

PHOTO • Jaideep Hardikar
PHOTO • Jaideep Hardikar

ಎಡ: ಸ್ಥಳೀಯ ಬುಡಕಟ್ಟು ಸಮುದಾಯಗಳು ಪವಿತ್ರವೆಂದು ಪರಿಗಣಿಸುವ ಬೆಟ್ಟಗಳ ಮೇಲೆ ಸುಮಾರು 450 ಹೆಕ್ಟೇರ್ ಭೂಮಿಯಲ್ಲಿ ಹರಡಿರುವ ಸುರ್ಜಘರ್ ಕಬ್ಬಿಣದ ಅದಿರು ಗಣಿ, ಒಂದು ಕಾಲದಲ್ಲಿ ಅರಣ್ಯ ಸಮೃದ್ಧ ಪ್ರದೇಶವಾಗಿದ್ದ ಈ ಪ್ರದೇಶ ಈಗ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ರಸ್ತೆಗಳು ಕೆಂಪು ಬಣ್ಣಕ್ಕೆ ತಿರುಗಿವೆ ಮತ್ತು ನದಿಗಳಲ್ಲಿ ಕಲುಷಿತ ನೀರು ಹರಿಯುತ್ತಿದೆ. ಬಲ: ಸರ್ಕಾರವು ಗಣಿಗಳನ್ನು ನಿರ್ಮಿಸಲು ಅನುಮತಿ ನೀಡಿದರೆ ತೊಡ್ಗಟ್ಟಾ ಗ್ರಾಮದ ಅರಣ್ಯ ಪ್ರದೇಶವನ್ನು ಕಬ್ಬಿಣದ ಅದಿರಿಗಾಗಿ ಕಡಿಯಲಾಗುತ್ತದೆ. ಇದರಿಂದ ತಮ್ಮ ಕಾಡುಗಳು, ಮನೆಗಳು ಮತ್ತು ಸಂಸ್ಕೃತಿಯ ಶಾಶ್ವತ ನಾಶವಾಗುತ್ತದೆ ಎಂದು ಸ್ಥಳೀಯರು ಭಯಪಡುತ್ತಾರೆ. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸುಮಾರು 1450 ಗ್ರಾಮ ಸಭೆಗಳು ಕಾಂಗ್ರೆಸ್ ಅಭ್ಯರ್ಥಿ ಡಾ.ನಾಮದೇವ್ ಕಿರ್ಸನ್ ಅವರನ್ನು ಬಹಿರಂಗವಾಗಿ ಬೆಂಬಲಿಸುವುದಕ್ಕೆ ಇದೂ ಒಂದು ಕಾರಣ

ಪ್ರಸ್ತುತ ಲಾಯ್ಡ್ಸ್ ಮೆಟಲ್ ಅಂಡ್ ಎನರ್ಜಿ ಲಿಮಿಟೆಡ್ ಎಂಬ ಕಂಪನಿಯು ನಿರ್ವಹಿಸುತ್ತಿರುವ ಸುರ್ಜಾಘರ್ ಗಣಿಗಳಿಂದ ಉಂಟಾದ ಪರಿಸರ ನಾಶವನ್ನು ನೋಡಿದ ನಂತರ, ಸಣ್ಣ ಹಳ್ಳಿಗಳು ಮತ್ತು ಕುಗ್ರಾಮಗಳ ಜನರು ಧರಣಿ ಸ್ಥಳದಲ್ಲಿ ಸರದಿಯಲ್ಲಿ ಬಂದು ಕುಳಿತರು; 10-15 ಜನರು, ಪ್ರತಿ ನಾಲ್ಕು ದಿನಗಳಿಗೊಮ್ಮೆ, ಸುಮಾರು ಎಂಟು ತಿಂಗಳುಗಳವರೆಗೆ. ಅವರ ಬೇಡಿಕೆ ಸರಳವಾಗಿತ್ತು: ಈ ಪ್ರದೇಶದಲ್ಲಿ ಗಣಿಗಾರಿಕೆ ಬೇಡ. ಅವರ ಪಾಲಿಗೆ ಇದು ಕೇವಲ ಕಾಡಿನ ಪ್ರಶ್ನೆಯಷ್ಟೇ ಅಲ್ಲ. ಇದು ಅವರ ಸಂಸ್ಕೃತಿ, ಸಂಪ್ರದಾಯದ ಉಳಿವಿನ ಪ್ರಶ್ನೆಯೂ ಹೌದು. ಈ ಪ್ರದೇಶವು ಅನೇಕ ದೇವಾಲಯಗಳಿಗೆ ನೆಲೆಯಾಗಿದೆ.

ಪೊಲೀಸರು ಸುಮಾರು ಎಂಟು ನಾಯಕರನ್ನು ಪ್ರತ್ಯೇಕಿಸಿ ಸುತ್ತುವರೆದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರು, ಇದು ಸ್ಥಳೀಯರ ಖಂಡನೆಗೆ ಕಾರಣವಾಗಿ ಅಶಾಂತಿಯನ್ನು ಉಂಟುಮಾಡಿತು. ಅದು ಇತ್ತೀಚಿನ ಸ್ಫೋಟಕ ಕಾರಣವಾಗಿತ್ತು.

ಈಗ ಅಲ್ಲೊಂದು ತತ್ಕಾಲೀನ ಶಾಂತಿ ನೆಲೆಸಿದೆ.

ಸಿಎಫ್ಆರ್ ಅಂಗೀಕಾರಕ್ಕೆ ಸಂಬಂಧಿಸಿದಂತೆ ಗಡಚಿರೋಲಿ ಜಿಲ್ಲೆ ದೇಶದಲ್ಲಿ ಮುಂಚೂಣಿಯಲ್ಲಿದೆ, ಇಲ್ಲಿ ಪಿಇಎಸ್ಎ ಅಡಿಯಲ್ಲಿ ಬರುವ ಪ್ರದೇಶಗಳ ಒಳಗೆ ಮತ್ತು ಹೊರಗೆ ಸುಮಾರು 1500 ಗ್ರಾಮ ಸಭೆಗಳಿವೆ.

ಸಮುದಾಯಗಳು ತಮ್ಮ ಕಾಡುಗಳನ್ನು ನಿರ್ವಹಿಸಲು, ಸಣ್ಣ ಅರಣ್ಯ ಉತ್ಪನ್ನಗಳನ್ನು ಕೊಯ್ಲು ಮಾಡಲು ಮತ್ತು ಉತ್ತಮ ಬೆಲೆ ಏರಿಕೆಗಾಗಿ ಹರಾಜುಗಳನ್ನು ನಡೆಸಲು ಪ್ರಾರಂಭಿಸಿವೆ, ಇದು ಅವರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಸಿಎಫ್ಆರ್‌ಗಳು ಸಾಮಾಜಿಕ ಮತ್ತು ಆರ್ಥಿಕ ಸ್ಥಿರತೆಯನ್ನು ಒದಗಿಸಿವೆ ಮತ್ತು ದಶಕಗಳ ಸಂಘರ್ಷ ಮತ್ತು ಕಲಹಗಳಿಗೆ ವಿರಾಮ ತಂದಿವೆ ಎಂಬುದರ ಸಂಕೇತಗಳಾಗಿವೆ.

ಸುರ್ಜಾಘರ್ ಗಣಿಗಳು ಕಿರಿಕಿರಿಯಾಗಿ ಪರಿಣಮಿಸಿವೆ: ಇಲ್ಲಿನ ಬೆಟ್ಟಗಳನ್ನು ಅಗೆಯಲಾಗಿದೆ; ಬೆಟ್ಟಗಳಿಂದ ಹರಿಯುವ ನದಿಗಳು ಮತ್ತು ತೊರೆಗಳಲ್ಲಿ ಈಗ ಕೆಂಪು ಕಲುಷಿತ ನೀರು ಹರಿಯುತ್ತಿದೆ. ದೂರದವರೆಗೂ ಗಣಿ-ಸ್ಥಳದಿಂದ ಅದಿರನ್ನು ಸಾಗಿಸುವ ಲಾರಿಗಳ ಬೃಹತ್ ಸಾಲುಗಳನ್ನು ನೀವು ನೋಡಬಹುದು. ಗಣಿ ಪ್ರದೇಶಗಳಿಗೆ ಭಾರಿ ಭದ್ರತೆಯಿದ್ದು ಬೇಲಿಯನ್ನೂ ಹಾಕಲಾಗಿದೆ. ಗಣಿಗಳ ಸುತ್ತಲಿನ ಅರಣ್ಯ ಗ್ರಾಮಗಳು ಸೊರಗಿವೆ ಮತ್ತು ಅವು ತಮ್ಮ ಮೂಲ ಸ್ವರೂಪದ ಮಸುಕಾದ ಛಾಯೆಯಾಗಿ ಬದಲಾಗಿವೆ.

PHOTO • Jaideep Hardikar
PHOTO • Jaideep Hardikar

ದೊಡ್ಡ ಲಾರಿಗಳು (ಬಲ) ಕಬ್ಬಿಣದ ಅದಿರನ್ನು ಜಿಲ್ಲೆಯಿಂದ ಬೇರೆಡೆಯ ಉಕ್ಕಿನ ಸ್ಥಾವರಗಳಿಗೆ ಸಾಗಿಸುತ್ತಿದ್ದರೂ, ಸರೋವರದಿಂದ ಸುರ್ಜಾಘರ್ ಗಣಿಗಳಿಗೆ ನೀರನ್ನು ಸಾಗಿಸಲು ಬೃಹತ್ ಪೈಪ್ ಲೈನುಗಳನ್ನು (ಎಡ) ಹಾಕಲಾಗುತ್ತಿದೆ

PHOTO • Jaideep Hardikar
PHOTO • Jaideep Hardikar

ಎಡ: ಉದ್ದೇಶಿತ ಕಬ್ಬಿಣದ ಅದಿರು ಗಣಿಗಳ ವಿರುದ್ಧ ಸುಮಾರು 70 ಹಳ್ಳಿಗಳ ಜನರು ತೊಡ್ಗಟ್ಟಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಲ: ಸುರ್ಜಾಘಢ ಗಣಿಗಳ ಹಿಂದೆ ಶಾಂತ ಮತ್ತು ಪ್ರಶಾಂತ ಮಲ್ಲಂಪಾಡ್ ಗ್ರಾಮವಿದೆ. ಒರಾನ್ ಬುಡಕಟ್ಟು ಜನಾಂಗದವರು ವಾಸಿಸುವ ಈ ಊರು ಅಲ್ಲಿನ ಕಾಡುಗಳು ಮತ್ತು ಹೊಲಗಳ ನಾಶವನ್ನು ಕಂಡಿದೆ

ಉದಾಹರಣೆಗೆ, ಮಲ್ಲಂಪಾಡ್ ಗ್ರಾಮವನ್ನು ತೆಗೆದುಕೊಳ್ಳಿ. ಸ್ಥಳೀಯವಾಗಿ ಮಲಂಪಾಡಿ ಎಂದು ಕರೆಯಲ್ಪಡುವ ಇದು ಚಮೋರ್ಶಿ ಬ್ಲಾಕ್ ಸುರ್ಜಾಗಢ ಗಣಿಗಳ ಹಿಂಭಾಗದಲ್ಲಿರುವ ಒರಾನ್ ಸಮುದಾಯದ ಸಣ್ಣ ಕುಗ್ರಾಮವಾಗಿದೆ. ಗಣಿಯಿಂದ ಬರುವ ಮಾಲಿನ್ಯಕಾರಕಗಳು ಕೃಷಿಯ ಮೇಲೆ ಹೇಗೆ ತೀವ್ರ ಪರಿಣಾಮ ಬೀರಿವೆ ಎಂಬುದರ ಬಗ್ಗೆ ಇಲ್ಲಿನ ಯುವಕರು ಮಾತನಾಡುತ್ತಾರೆ. ಅವರು ಇಲ್ಲಿನ ಆಗಿರುವ ಹಾನಿ ಮತ್ತು ಪ್ರಸ್ತುತ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಹೊರಗಿನವರು 'ಅಭಿವೃದ್ಧಿ' ಎಂದು ಕರೆಯುವ ಕೆಲಸಕ್ಕೆ ಹಲವಾರು ಸಣ್ಣ ಕುಗ್ರಾಮಗಳು ತಮ್ಮ ಶಾಂತಿಯನ್ನು ಬಲಿ ನೀಡುತ್ತಿವೆ.

ಗಡಚಿರೋಲಿ ರಾಜ್ಯ ಭದ್ರತಾ ಪಡೆಗಳು ಮತ್ತು ಸಿಪಿಐ (ಮಾವೋವಾದಿ) ಸಶಸ್ತ್ರ ಗೆರಿಲ್ಲಾಗಳ ನಡುವಿನ ಹಿಂಸಾಚಾರ ಮತ್ತು ಕಲಹದ ಸುದೀರ್ಘ ಇತಿಹಾಸವನ್ನು ಹೊಂದಿದೆ, ವಿಶೇಷವಾಗಿ ಜಿಲ್ಲೆಯ ದಕ್ಷಿಣ, ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ದು ತೀವ್ರವಾಗಿತ್ತು.

ಇಲ್ಲಿ ರಕ್ತ ಹರಿಯಿತು. ಬಂಧನಗಳು ನಡೆದವು. ಕೊಲೆಗಳು, ಸಂಚುಗಳು, ಹೊಂಚು ದಾಳಿಗಳು, ಹೊಡೆದಾಟಗಳು ಮೂರು ದಶಕಗಳ ಕಾಲ ಅಡೆತಡೆಯಿಲ್ಲದೆ ನಡೆದವು. ಈ ಪ್ರದೇಶ ಹಸಿವು ಮತ್ತು ಉಪವಾಸ, ಮಲೇರಿಯಾ ಮತ್ತು ಶಿಶು ಮತ್ತು ತಾಯಂದಿರ ಮರಣ ಪ್ರಮಾಣಗಳಲ್ಲಿ ಹೆಚ್ಚಳವನ್ನು ಕಂಡಿತು. ಇಲ್ಲಿ ಜನರು ಸತ್ತರು.

"ನಮಗೆ ಏನು ಬೇಕು ಮತ್ತು ನಮ್ಮ ಅಗತ್ಯಗಳೇನು ಎಂದು ಒಮ್ಮೆ ನಮ್ಮನ್ನು ಕೇಳಿ" ಎಂದು ಅವರ ಸಮುದಾಯದ ಮೊದಲ ತಲೆಮಾರಿನ ವಿದ್ಯಾವಂತ ಯುವಕರಲ್ಲಿ ಒಬ್ಬರಾದ ನೊಗೊಟಿ ಹೇಳುತ್ತಾರೆ. "ನಾವು ನಮ್ಮದೇ ಆದ ಸಂಪ್ರದಾಯಗಳನ್ನು ಹೊಂದಿದ್ದೇವೆ; ನಾವು ನಮ್ಮದೇ ಆದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದೇವೆ; ಮತ್ತು ನಾವು ಸ್ವತಃ ಯೋಚಿಸಬಲ್ಲೆವು."

ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿರುವ ಈ ದೊಡ್ಡ ಕ್ಷೇತ್ರದಲ್ಲಿ ಏಪ್ರಿಲ್ 19ರಂದು ಶೇಕಡಾ 71ಕ್ಕಿಂತಲೂ ಹೆಚ್ಚು ಮತದಾನವಾಗಿದೆ. ಜೂನ್ 4ರಂದು, ಮತ ಎಣಿಕೆಯ ನಂತರ, ಹೊಸ ಸರ್ಕಾರ ರಚನೆಯಾದಾಗ ಈ ಗ್ರಾಮ ಸಭೆಗಳು ನಡೆಸಿದ ಹೋರಾಟ ಏನಾದರೂ ಫಲ ನೀಡಿದೆಯೇ ಎನ್ನುವುದು ನಮಗೆ ತಿಳಿಯಲಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru