MH34AB6880‌ ನೋಂದಣಿ ಹೊಂದಿರುವ ಮಾಡಿಫೈ ಮಾಡಲಾದ ಮಹೀಂದ್ರಾ ಸರಕು ವಾಹನವೊಂದು ಚಂದ್ರಾಪುರದ ಹೊರವಲಯದಲ್ಲಿರುವ 2920 ಮೆಗಾವ್ಯಾಟ್ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಬಳಿಯ ಕಲ್ಲಿದ್ದಲು ತೊಳೆಯುವ ಯಂತ್ರಗಳು, ಬೂದಿ ದಿಬ್ಬಗಳಿಂದ ಕೂಡಿದ ಪ್ರದೇಶದ ಬಳಿ ದಟ್ಟವಾದ ಪೊದೆ ಕಾಡಿನ ನಡುವೆ ಇರುವ ಹಳ್ಳಿಯ ಜನನಿಬಿಡ ಚೌಕದಲ್ಲಿ ಬಂದು ನಿಂತಿತು.

ಈ ವಾಹನದ ವಾಹನದ ಎರಡೂ ಬದಿಗಳಲ್ಲಿ ಘೋಷಣೆಗಳು ಮತ್ತು ಛಾಯಾಚಿತ್ರಗಳನ್ನು ಹೊಂದಿರುವ ವರ್ಣರಂಜಿತ ಮತ್ತು ಆಕರ್ಷಕ ಪೋಸ್ಟರುಗಳನ್ನು ಅಂಟಿಸಲಾಗಿತ್ತು. ಅದು 2023ರ ಅಕ್ಟೋಬರ್‌ ತಿಂಗಳ ಆರಂಭಿಕ ದಿನಗಳ ಅಷ್ಟೇನೂ ಚಟುವಟಿಕೆಯಿಲ್ಲದ ಭಾನುವಾರವಾಗಿತ್ತು. ಈ ಸಮಯದಲ್ಲಿ ಬಂದು ನಿಂತ ವಾಹನವು ಹಳ್ಳಿಯ ಮಕ್ಕಳು, ಪುರುಷರು ಮತ್ತು ಮಹಿಳೆಯರ ಗಮನವನ್ನು ಸೆಳೆಯಿತು. ಕೂಡಲೇ ಅವರೆಲ್ಲರೂ ಯಾರು ಬಂದಿದ್ದಾರೆಂದು ನೋಡಲು ಗಾಡಿಯತ್ತ ದೌಡಾಯಿಸಿದರು.

ಎಪ್ಪತ್ತರ ಹರೆಯದ ವಿಠ್ಠಲ್‌ ಬದ್ಕಲ್‌ ತನ್ನ ಒಂದು ಕೈಯಲ್ಲಿ ಮೈಕ್ರೊಫೋನ್‌ ಹಾಗೂ ಇನ್ನೊಂದು ಕೈಯಲ್ಲಿ ಕಂದು ಬಣ್ಣದ ಡೈರಿಯೊಂದನ್ನು ಹಿಡಿದು ಗಾಡಿಯಿಂದ ಇಳಿದರು. ಬಿಳಿ ಧೋತಿ, ಬಿಳಿ ಕುರ್ತಾ ಮತ್ತು ಬಿಳಿ ನೆಹರೂ ಟೋಪಿ ಧರಿಸಿದ ಅವರು ವಾಹನದ ಮುಂಭಾಗದ ಬಾಗಿಲಿಗೆ ಅಳವಡಿಸಲಾದ ಧ್ವನಿವರ್ಧಕಕ್ಕೆ ಆಳವಡಿಸಲಾಗಿದ್ದ ಮೈಕನ್ನು ಹಿಡಿದು ಮಾತನಾಡತೊಡಗಿದರು.

ಅವರು ತಾನು ಇಲ್ಲಿಗೆ ಬಂದ ಕಾರಣವನ್ನು ಮೈಕಿನಲ್ಲಿ ವಿವರಿಸತೊಡಗಿದರು. ಅವರ ದನಿ 5,000 ಜನಸಂಖ್ಯೆಯ ಈ ಹಳ್ಳಿಯ ಮೂಲೆ ಮೂಲೆಗಳಲ್ಲಿಮೊಳಗತೊಡಗಿತು. ಈ ಊರಿನ ಹೆಚ್ಚಿನ ಜನರು ರೈತರು, ಉಳಿದವರು ಹತ್ತಿರದ ಕಲ್ಲಿದ್ದಲು ಘಟಕಗಳು ಅಥವಾ ಸಣ್ಣ ಕೈಗಾರಿಕೆಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಐದು ನಿಮಿಷಗಳಲ್ಲಿ ಅವರ ಭಾಷಣ ಮುಗಿಯಿತು. ನಂತರ ಇಬ್ಬರು ಹಿರಿಯ ಗ್ರಾಮಸ್ಥರು ಅವರನ್ನು ಮುಗುಳ್ನಗೆಯೊಂದಿಗೆ ಊರಿಗೆ ಸ್ವಾಗತಿಸಿದರು.

“ಅರ್ರೆ ಮಾಮ, ನಮಸ್ಕಾರ್‌, ಯಾ ಬಸಾ [ನಮಸ್ಕಾರ ಮಾಮಾ, ಬನ್ನಿ, ಕೂತ್ಕೊಳ್ಳಿ]” ಎಂದು ಗ್ರಾಮದ ಮುಖ್ಯ ಚೌಕದಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ 65 ವರ್ಷದ ರೈತ ಹೇಮರಾಜ್ ಮಹಾದೇವ್ ದಿವಾಸೆ ಸ್ವಾಗತಿಸಿದರು.

“ನಮಸ್ಕಾರ್‌ ಜೀ” ಎನ್ನುತ್ತಾ ಬದ್ಖಲ್‌ ಮಾಮ ಎರಡೂ ಕೈ ಜೋಡಿಸಿ ನಮಸ್ಕರಿಸಿದರು.

Vitthal Badkhal on a campaign trail in Chandrapur in October 2023. He is fondly known as ‘Dukkarwale mama ’ – ran-dukkar in Marathi means wild-boar. He has started a relentless crusade against the widespread menace on farms of wild animals, particularly wild boars. His mission is to make the government acknowledge the problem, compensate and resolve it.
PHOTO • Sudarshan Sakharkar
Hemraj Mahadev Diwase is a farmer who also runs a grocery shop in Tadali village. He says the menace of the wild animals on farms in the area is causing losses
PHOTO • Sudarshan Sakharkar

ಎಡ: ವಿಠ್ಠಲ್ ಬದ್ಖಲ್ ಅಕ್ಟೋಬರ್ 2023ರಲ್ಲಿ ಚಂದ್ರಾಪುರದ ಪ್ರಚಾರದ ಹಾದಿಯಲ್ಲಿದ್ದಾರೆ. ಅವರನ್ನು ಇಲ್ಲಿ ಪ್ರೀತಿಯಿಂದ 'ದುಕ್ಕರ್ವಾಲೆ ಮಾಮಾ' ಎಂದು ಕರೆಯಲಾಗುತ್ತದೆ - ಮರಾಠಿಯಲ್ಲಿ ರಣ್-ದುಕ್ಕರ್ ಎಂದರೆ ಕಾಡುಹಂದಿ. ಕಾಡು ಪ್ರಾಣಿಗಳ, ವಿಶೇಷವಾಗಿ ಕಾಡು ಹಂದಿಗಳ ದಾಳಿಯ ವಿರುದ್ಧ ಅವರು ಪಟ್ಟುಬಿಡದ ಹೋರಾಟವನ್ನು ಪ್ರಾರಂಭಿಸಿದ್ದಾರೆ. ಅವರ ಧ್ಯೇಯವೆಂದರೆ ಸರ್ಕಾರವು ಸಮಸ್ಯೆಯನ್ನು ಒಪ್ಪಿಕೊಳ್ಳುವಂತೆ ಮಾಡುವುದು, ಪರಿಹಾರ ನೀಡುವಂತೆ ಮಾಡುವುದು ಮತ್ತು ಸಮಸ್ಯೆಯನ್ನು ಪರಿಹರಿಸುವುದು. ಬಲ: ಹೇಮರಾಜ್ ಮಹಾದೇವ್ ದಿವಾಸೆ ರೈತರಾಗಿದ್ದು, ತಡಲಿ ಗ್ರಾಮದಲ್ಲಿ ದಿನಸಿ ಅಂಗಡಿಯನ್ನೂ ನಡೆಸುತ್ತಿದ್ದಾರೆ. ಈ ಭಾಗದ ಜಮೀನಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಅವರು

ಊರಿನ ಜನರಿಂದ ಸುತ್ತುವರೆಯಲ್ಪಟ್ಟ ಅವರು ಸದ್ದಿಲ್ಲದೆ ದಿನಸಿ ಅಂಗಡಿಯ ಕಡೆಗೆ ನಡೆದು, ಹಳ್ಳಿಯ ಚೌಕಕ್ಕೆ ಎದುರಾಗಿ, ದಿವಾಸೆಯವರ ಅಂಗಡಿಗೆ ಬೆನ್ನು ಹಾಕಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ.

ಸ್ಥಳೀಯವಾಗಿ ಗೌರವದಿಂದ ಮಾಮಾ ಎಂದು ಕರೆಸಿಕೊಳ್ಳುವ ಅವರು ಮೃದುವಾದ ಬಿಳಿ ಹತ್ತಿ ಟವೆಲ್ ನಿಂದ ಮುಖದ ಮೇಲಿನ ಬೆವರನ್ನು ಒರೆಸುತ್ತಾ, ಜನರ ಬಳಿ ಕುಳಿತು ಅಥವಾ ನಿಂತು ತನ್ನ ಮಾತುಗಳನ್ನು ಕೇಳುವಂತೆ ಹೇಳಿದರು. ಅದೊಂದು 20 ನಿಮಿಷಗಳ ಕಾರ್ಯಾಗಾರವಾಗಿತ್ತು.

ರೈತರು ತಮ್ಮ ಹೊಲಗಳಲ್ಲಿನ ಬೆಳೆ ನಷ್ಟ, ಕಾಡು ಪ್ರಾಣಿಗಳ ದಾಳಿ, ಹೆಚ್ಚುತ್ತಿರುವ ಹಾವು ಕಡಿತ ಪ್ರಕರಣಗಳು ಮತ್ತು ಹುಲಿ ದಾಳಿಯಿಂದಾಗಿ ಉಂಟಾಗುತ್ತಿರುವ ಮಾನವ ಸಾವುಗಳಿಗೆ ಹೇಗೆ ಪರಿಹಾರವನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಹಂತ ಹಂತದ ಮಾರ್ಗದರ್ಶನವನ್ನು ಇದರಲ್ಲಿ ನೀಡಲಾಗುತ್ತದೆ. ಕ್ಲಿಷ್ಟ ಮತ್ತು ತೊಡಕಿನಿಂದ ಕೂಡಿದ ಈ ಕಾರ್ಯವಿಧಾನಗಳನ್ನು ಅವರು ಸರಳಗೊಳಿಸಿ ಹೇಳಿಕೊಡುತ್ತಾರೆ. ಜೊತೆಗೆ ಮಳೆಗಾಲದಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿಯದಂತೆ ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ಸಹ ಹೇಳಿಕೊಡುತ್ತಾರೆ.

“ಕಾಡು ಪ್ರಾಣಿಗಳು, ಹುಲಿಗಳು, ಹಾವುಗಳು, ಮತ್ತು ಸಿಡಿಲಿನ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಈ ಸಮಸ್ಯೆಗಳನ್ನು ಸರ್ಕಾರ ಆಲಿಸುವಂತೆ ಮಾಡುವುದು ಹೇಗೆ? ನಾವು ಸರ್ಕಾರದ ಬಾಗಿಲನ್ನು ಬಡಿಯದೆ ಸರ್ಕಾರ ಎಚ್ಚರಗೊಳ್ಳುವುದಿಲ್ಲ” ಎಂದು ಬದ್ಖಲ್‌ ಅವರು ಗಡಸು ದನಿಯಲ್ಲಿ ಜನರೆದುರು ಮಾತನಾಡುತ್ತಿದ್ದರೆ ಕುಳಿತಿದ್ದ ಜನರು ತನ್ಮಯರಾಗಿ ಕೇಳತೊಡಗುತ್ತಾರೆ.

ಈ ನಿಟ್ಟಿನಲ್ಲಿ ಅವರು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚಂದ್ರಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿ ಭಾಷಣ ಮಾಡುತ್ತಾರೆ. ಆ ಮೂಲಕ ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟದ ವಿರುದ್ಧ ಪರಿಹಾರವನ್ನು ಹೇಗೆ ಪಡೆಯುವುದು ಎಂದು ರೈತರಿಗೆ ವಿವರಿಸುತ್ತಾರೆ.

ಸದ್ಯದಲ್ಲೇ ಭದ್ರಾವತಿ ಪಟ್ಟಣದಲ್ಲಿ ರೈತರ ಮೆರವಣಿಗೆ ನಡೆಸಲಾಗುವುದು ಎಂದು ಅವರು ಅಲ್ಲಿದ್ದ ಜನರಿಗೆ ಮಾಹಿತಿ ನೀಡಿದರು. ಮುಂದಿನ ಹಳ್ಳಿಗೆ ತನ್ನ ವಾಹನದಲ್ಲಿ ಹೊರಡುವ ಮೊದಲು "ನೀವೆಲ್ಲರೂ ಅಲ್ಲಿರಬೇಕು" ಎಂದು ಅವರು ಗ್ರಾಮಸ್ಥರ ಬಳಿ ಆಗ್ರಹಿಸಿದರು.

*****

ಯುವ ವಿದ್ಯಾರ್ಥಿಗಳು ಅವರನ್ನು 'ಗುರೂಜಿ' ಎಂದು ಕರೆಯುತ್ತಾರೆ. ಅವರ ಬೆಂಬಲಿಗರು ಅವರನ್ನು 'ಮಾಮಾ' ಎಂದು ಕರೆಯುತ್ತಾರೆ. ಕೃಷಿ ಭೂಮಿಯಲ್ಲಿ ಕಾಡು ಪ್ರಾಣಿಗಳ, ವಿಶೇಷವಾಗಿ ಕಾಡು ಹಂದಿಗಳ ವ್ಯಾಪಕ ಬೆದರಿಕೆಯ ವಿರುದ್ಧದ ಅವರ ನಿರಂತರ ಹೋರಾಟದ ಕಾರಣಕ್ಕಾಗಿ ವಿಠ್ಠಲ್ ಬದ್ಖಲ್ ಅವರನ್ನು ಪ್ರೀತಿಯಿಂದ 'ದುಕ್ಕರ್ ವಾಲೆ ಮಾಮಾ' ಎಂದು ಕರೆಯಲಾಗುತ್ತದೆ. ಸರ್ಕಾರವು ಸಮಸ್ಯೆಯನ್ನು ಒಪ್ಪಿಕೊಳ್ಳುವಂತೆ ಮಾಡುವುದು, ಅದಕ್ಕೆ ಪರಿಹಾರ ಪಡೆಯುವುದು ಮತ್ತು ಈ ಸಮಸ್ಯಗೆ ಪರಿಹಾರ ಕಂಡುಕೊಳ್ಳುವಂತೆ ಮಾಡುವುದು ಅವರ ಧ್ಯೇಯವಾಗಿದೆ.

Women farmers from Tadali village speak about their fear while working on farms which are frequented by wild animals including tigers.
PHOTO • Sudarshan Sakharkar
Vitthal Badkhal listens intently to farmers
PHOTO • Sudarshan Sakharkar

ಎಡ: ಹುಲಿಗಳು ಸೇರಿದಂತೆ ಹಲವು ಬಗೆಯ ಕಾಡು ಪ್ರಾಣಿಗಳ ದಾಳಿಯ ಕುರಿತು ಮಹಿಳೆಯರು ಮಾತನಾಡುತ್ತಾರೆ. ಬಲ: ವಿಠ್ಠಲ್ ಬದ್ಕಲ್ ರೈತರ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆ

ಬದ್ಖಲ್‌ ಅವರದು ಏಕವ್ಯಕ್ತಿ ಸೈನ್ಯವಾಗಿದ್ದು, ಅವರು ಬೆಳೆ ಹಾನಿ ಪರಿಹಾರ ಪಡೆಯಲು ರೈತರಿಗೆ ಸಹಾಯವನ್ನು ಒದಗಿಸುತ್ತಾರೆ.  ಅದರ ಸ್ಥಳ ಪರಿಶೀಲನೆಯಂತಹ ಕಷ್ಟಕರ ಪ್ರಕ್ರಿಯೆಗಳಿಂದ ಹಿಡಿದು ಪರಿಹಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ತನಕ ಅವರು ತರಬೇತಿ ನೀಡುತ್ತಾರೆ.

ಇಡೀ ಚಂದ್ರಾಪುರ ಜಿಲ್ಲೆ, ತಡೋಬಾ ಅಂಧಾರಿ ಹುಲಿ ಮೀಸಲು (ಟಿಎಟಿಆರ್) ವ್ಯಾಪ್ತಿಯಲ್ಲಿ ಇವರ ಕಾರ್ಯಕ್ಷೇತ್ರ ಹರಡಿದೆ.

ಈ ವಿಷಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅನೇಕರು ಇದ್ದಾರೆ. ಆದರೆ ಈ ವ್ಯಕ್ತಿಯ ಆಂದೋಲನದಿಂದಾಗಿಯೇ ಮಹಾರಾಷ್ಟ್ರ ಸರ್ಕಾರವು ಮೊದಲ ಬಾರಿಗೆ ಸಮಸ್ಯೆಯನ್ನು ಒಪ್ಪಿಕೊಂಡಿತು; ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಬೆಳೆ ನಷ್ಟಕ್ಕೆ ರೈತರಿಗೆ ನಗದು ಪರಿಹಾರವನ್ನು ಅನುಮೋದಿಸುವ ನಿರ್ಣಯವನ್ನು ಅದು 2003ರಲ್ಲಿ ಅಂಗೀಕರಿಸಿತು, ಇದನ್ನು ಜನರು "ಹೊಸ ರೀತಿಯ ಬರಗಾಲ"ಕ್ಕೆ ಹೋಲಿಸುತ್ತಾರೆ. ರೈತರಿಗೆ ಶಿಕ್ಷಣ ನೀಡಲು ಮತ್ತು ಹೋರಾಟಕ್ಕೆ ಸಜ್ಜುಗೊಳಿಸಲು ಮತ್ತು ಮತ್ತೆ ಮತ್ತೆ ಪ್ರತಿಭಟನೆಗಳನ್ನು ನಡೆಸಲು ಪ್ರಾರಂಭಿಸಿದ ಐದು-ಆರು ವರ್ಷಗಳ ನಂತರ ಅದು ಸಾಧ್ಯವಾಯಿತು ಎಂದು ಬದ್ಖಲ್ ಹೇಳುತ್ತಾರೆ.

1996ರಲ್ಲಿ, ಭದ್ರಾವತಿ ಸುತ್ತಮುತ್ತ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ಗಣಿಗಳು ಪ್ರವರ್ಧಮಾನಕ್ಕೆ ಬಂದಾಗ, ಇಲ್ಲಿನ ರೈತರು ಸಾರ್ವಜನಿಕ ವಲಯದ ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಅಂಗಸಂಸ್ಥೆಯಾದ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಡಬ್ಲ್ಯುಸಿಎಲ್) ಓಪನ್ ಕ್ಯಾಸ್ಟ್ ಗಣಿಗೆ ಅವರು ತಮ್ಮ ಸಂಪೂರ್ಣ ಕೃಷಿಭೂಮಿಯನ್ನು ನೀಡಬೇಕಾಯಿತು. ಬದ್ಖಲ್ ಮೂಲದ ತೆಲ್ವಾಸಾ-ಧೋರ್ವಾಸಾ ಎನ್ನುವ ಅವಳಿ ಗ್ರಾಮಗಳು ತಮ್ಮ ಕೃಷಿ ಭೂಮಿಗಳನ್ನು ಕಳೆದುಕೊಂಡವು .

ಅಷ್ಟೊತ್ತಿಗಾಗಲೇ ಹೊಲಗಳಲ್ಲಿ ಕಾಡು ಪ್ರಾಣಿಗಳ ದಾಳಿ ಆತಂಕಕಾರಿಯಾಗಿತ್ತು. ಎರಡು ಅಥವಾ ಮೂರು ದಶಕಗಳಲ್ಲಿ ಅರಣ್ಯಗಳ ಗುಣಮಟ್ಟದಲ್ಲಿ ಕ್ರಮೇಣ ಕಂಡುಬಂದ ಬದಲಾವಣೆ, ಜಿಲ್ಲೆಯಾದ್ಯಂತ ಹೊಸ ಗಣಿಗಾರಿಕೆ ಯೋಜನೆಗಳ ಸ್ಫೋಟ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ವಿಸ್ತರಣೆಯು ಒಟ್ಟಾರೆಯಾಗಿ ಕಾಡು-ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ಉಲ್ಬಣಗೊಳಿಸಲು ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.

2002ರ ಸುಮಾರಿಗೆ  ತಮ್ಮ ಪತ್ನಿ ಮಂದಾತಾಯಿ ಅವರೊಂದಿಗೆ ಭದ್ರಾವತಿಗೆ ಸ್ಥಳಾಂತರಗೊಂಡ ಬದ್ಕಲ್ ನಂತರ ಪೂರ್ಣ ಸಮಯದ ಸಮಾಜ ಸೇವಕರಾಗಿ ಗುರುತಿಸಿಕೊಂಡರು. ಅವರು ವ್ಯಸನ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಮಗಳಿದ್ದು, ಎಲ್ಲರೂ ಮದುವೆಯಾಗಿದ್ದಾರೆ. ಅವರ ತಂದೆಗೆ ಹೋಲಿಸಿದರೆ ಕೆಳಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ.

ಮಾಮಾ ತನ್ನ ಸ್ವಂತ ಜೀವನಕ್ಕಾಗಿ, ಸಣ್ಣ ಕೃಷಿ ಸಂಸ್ಕರಣಾ ಉದ್ಯಮವನ್ನು ಹೊಂದಿದ್ದಾರೆ. ಅದರ ಮೂಲಕ ಅವರು ಮೆಣಸಿನಕಾಯಿ ಪುಡಿ ಮತ್ತು ಅರಿಶಿನ ಪುಡಿ, ಸಾವಯವ ಬೆಲ್ಲ ಮತ್ತು ಮಸಾಲೆಗಳನ್ನು ಮಾರಾಟ ಮಾಡುತ್ತಾರೆ.

Badkhal with farmers in the TATR. He says, gradual changes over two or three decades in the quality of forests, an explosion of new mining projects all over the district and expansion of thermal power plants have cumulatively led to the aggravation of the wild-animal and human conflict
PHOTO • Sudarshan Sakharkar

ಟಿಎಟಿಆರ್‌ನಲ್ಲಿ ರೈತರೊಂದಿಗೆ ಬದ್ಖಲ್. ಎರಡು ಅಥವಾ ಮೂರು ದಶಕಗಳಿಂದ ಅರಣ್ಯಗಳ ಗುಣಮಟ್ಟದಲ್ಲಿ ಕ್ರಮೇಣ ಕಂಡು ಬಂದ ಬದಲಾವಣೆಗಳು, ಜಿಲ್ಲೆಯಾದ್ಯಂತ ಹೊಸ ಗಣಿಗಾರಿಕೆ ಯೋಜನೆಗಳ ಸ್ಫೋಟ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ವಿಸ್ತರಣೆಯು ಕಾಡು-ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ಉಲ್ಬಣಗೊಳಿಸಲು ಕಾರಣವಾಗಿದೆ ಎಂದು ಅವರು ಹೇಳುತ್ತಾರೆ

ಸಸ್ಯಾಹಾರಿ ಪ್ರಾಣಿಗಳು ಮತ್ತು ಜಾನುವಾರುಗಳಿಂದ ವ್ಯಾಪಕವಾಗಿರುವ ಬೆಳೆ ಹಾನಿ ಮತ್ತು ಮಾಂಸಾಹಾರಿ ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಸಾವುನೋವುಗಳ ವಿರುದ್ಧ  ಪರಿಹಾರದ ವಿಷಯದಲ್ಲಿ ಸರ್ಕಾರದ ಬಜೆಟ್ ವೆಚ್ಚವನ್ನು ಹೆಚ್ಚಿಸಲು ದಣಿವರಿಯದ ಮಾಮಾ ಚಂದ್ರಾಪುರ ಮತ್ತು ನೆರೆಯ ಜಿಲ್ಲೆಗಳ ಸುತ್ತಮುತ್ತಲಿನ ರೈತರನ್ನು ಸಂಘಟಿಸಿದ್ದಾರೆ.

2003ರಲ್ಲಿ ಸರ್ಕಾರದ ಮೊದಲ ನಿರ್ಣಯವನ್ನು ಹೊರಡಿಸಿದಾಗ, ಪರಿಹಾರವು ಕೇವಲ ಕೆಲವು ನೂರು ರೂಪಾಯಿಗಳಷ್ಟಿತ್ತು - ಈಗ ಆ ಮೊತ್ತ ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 2 ಹೆಕ್ಟೇರ್ ಭೂಮಿಗೆ ಪ್ರತಿ ಹೆಕ್ಟೇರಿಗೆ 25,000 ರೂಪಾಯಿಗಳಿಗೆ ಏರಿದೆ. ಆದರೆ ಇದು ಸಾಕಾಗುವುದಿಲ್ಲ, ಆದರೆ ರಾಜ್ಯ ಸರ್ಕಾರವು ಪರಿಹಾರದ ಮೊತ್ತವನ್ನು ಹೆಚ್ಚಿಸಿರುವುದು ಅದು ಸ್ವತಃ ಸಮಸ್ಯೆಯನ್ನು ಒಪ್ಪಿಕೊಂಡಿರುವುದರ ಸೂಚನೆ ಎಂದು ಬದ್ಖಲ್ ಮಾಮಾ ಹೇಳುತ್ತಾರೆ. "ಸಮಸ್ಯೆಯೆಂದರೆ ರಾಜ್ಯದಾದ್ಯಂತ ಹೆಚ್ಚಿನ ರೈತರು ಪರಿಹಾರಕ್ಕಾಗಿ ಹಕ್ಕನ್ನು ಮಂಡಿಸುವುದಿಲ್ಲ" ಎಂದು ಅವರು ಹೇಳುತ್ತಾರೆ. ಇಂದು, ಆ ಪರಿಹಾರವನ್ನು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 70,000 ರೂ.ಗೆ ಹೆಚ್ಚಿಸಬೇಕೆನ್ನುವುದು ಅವರ ಬೇಡಿಕೆಯಾಗಿದೆ, ಏಕೆಂದರೆ "ಇದು ಸಮಂಜಸ ಪರಿಹಾರ ಮೊತ್ತ".

ಮಹಾರಾಷ್ಟ್ರದಲ್ಲಿ, ದೊಡ್ಡ ಮಾಂಸಾಹಾರಿ ಪ್ರಾಣಿಗಳ ದಾಳಿಯಿಂದ ಉಂಟಾಗುವ ಜಾನುವಾರುಗಳ ಸಾವು, ಬೆಳೆ ನಷ್ಟ ಮತ್ತು ಮಾನವ ಸಾವುಗಳ ಪರಿಹಾರಕ್ಕಾಗಿ ಅರಣ್ಯ ಇಲಾಖೆ ವಾರ್ಷಿಕವಾಗಿ 80-100 ಕೋಟಿ ರೂ.ಗಳನ್ನು ಬಜೆಟ್ ಮಾಡುತ್ತದೆ ಎಂದು ಆಗಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ) ಸುನಿಲ್ ಲಿಮಯೆ ಮಾರ್ಚ್ 2022ರಲ್ಲಿ ಪರಿಗೆ ತಿಳಿಸಿದ್ದರು.

"ಅದು ಅತ್ಯಲ್ಪ ಮೊತ್ತ" ಎಂದು ಮಾಮಾ ಹೇಳುತ್ತಾರೆ. "ನಮ್ಮ ಜಾಗೃತಿ ಅಭಿಯಾನದಿಂದಾಗಿ ಭದ್ರಾವತಿ [ಅವರ ಗ್ರಾಮ] ಗ್ರಾಮವೊಂದೇ ವಾರ್ಷಿಕವಾಗಿ ಸರಾಸರಿ 2 ಕೋಟಿ ರೂ.ಗಳ ಬೆಳೆ ಪರಿಹಾರಕ್ಕೆ ಅರ್ಹವಾಗಿದೆ; ಇಲ್ಲಿನ ರೈತರಿಗೆ ತರಬೇತಿ ಮತ್ತು ಅರಿವು ಇದೆ" ಎಂದು ಅವರು ಹೇಳುತ್ತಾರೆ. "ಬೇರೆಡೆ, ಈ ವಿಷಯದ ಕುರಿತು ಅಷ್ಟು ಅರಿವು ಮೂಡಿಲ್ಲ" ಎಂದು ಅವರು ಹೇಳುತ್ತಾರೆ.

"ನಾನು ಇದನ್ನು ಕಳೆದ 25 ವರ್ಷಗಳಿಂದ ಮಾಡುತ್ತಿದ್ದೇನೆ" ಎಂದು ಚಂದ್ರಾಪುರ ಜಿಲ್ಲೆಯ ಭದ್ರಾವತಿ ಪಟ್ಟಣದ ತಮ್ಮ ಮನೆಯಲ್ಲಿ ಹಳ್ಳಿಗಾಡಿನ ಹಾಸ್ಯ ಪ್ರಜ್ಞೆ ಮತ್ತು ಧ್ವನಿಯನ್ನು ಹೊಂದಿರುವ ವ್ಯಕ್ತಿ ನಮ್ಮೊಡನೆ ಮಾತನಾಡುತ್ತಾ ಹೇಳಿದರು. "ನಾನು ಇದನ್ನು ಬದುಕಿರುವವರೆಗೂ ಮುಂದುವರೆಸಲಿದ್ದೇನೆ."

ಇಂದು, ಬದ್ಖಲ್ ಮಾಮಾ ಮಹಾರಾಷ್ಟ್ರದಾದ್ಯಂತ ಬೇಡಿಕೆ ಹೊಂದಿದ್ದಾರೆ.

Badkhal mama is in demand all over Maharashtra. 'I’ve been doing it for 25 years... I will do it for the rest of my life,' says the crusader from Bhadravati town in Chandrapur district
PHOTO • Jaideep Hardikar

ಬದ್ಖಲ್ ಮಾಮಾ ಮಹಾರಾಷ್ಟ್ರದಾದ್ಯಂತ ಬೇಡಿಕೆ ಹೊಂದಿದ್ದಾರೆ. 'ನಾನು ಇದನ್ನು 25 ವರ್ಷಗಳಿಂದ ಮಾಡುತ್ತಿದ್ದೇನೆ... ನಾನು ಇದನ್ನು ಬದುಕಿರುವವರೆಗೂ ಮುಂದುವರೆಸಲಿದ್ದೇನೆ' ಎಂದು ಚಂದ್ರಾಪುರ ಜಿಲ್ಲೆಯ ಭದ್ರಾವತಿ ಪಟ್ಟಣದ ಈ ಉಗ್ರ ಹೋರಾಟಗಾರ ಹೇಳುತ್ತಾರೆ

ರಾಜ್ಯ ಸರ್ಕಾರವು ಪರಿಹಾರದ ಮೊತ್ತವನ್ನು ಹೆಚ್ಚಿಸಿರುವುದು ಅದು ಸ್ವತಃ ಸಮಸ್ಯೆಯನ್ನು ಒಪ್ಪಿಕೊಂಡಿರುವುದರ ಸೂಚನೆ ಎಂದು ಬದ್ಖಲ್ ಹೇಳುತ್ತಾರೆ, ಆದರೆ ಸಾಕಷ್ಟು ರೈತರು ತಮ್ಮ ಹಕ್ಕನ್ನು ಮಂಡಿಸುತ್ತಿಲ್ಲ

*****

ಫೆಬ್ರವರಿ 2023ರಲ್ಲಿ, ನಾವು ಮಾಮಾ ಅವರೊಂದಿಗೆ ಭದ್ರಾವತಿ ತಾಲ್ಲೂಕಿನ ತಡೋಬಾದ ಪಶ್ಚಿಮದ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೆವು. ಹೆಚ್ಚಿನ ರೈತರು ಹಿಂಗಾರು ಬೆಳೆಗಳ ಕೊಯ್ಲಿನಲ್ಲಿ ನಿರತರಾಗಿದ್ದರು. ಗಾಳಿ ತಂಪಾಗಿತ್ತು.

ನಾವು ಐದು ಹಳ್ಳಿಗಳಿಗೆ ಹೋದೆವು. ಎಲ್ಲಾ ರೈತರದೂ ಒಂದೇ ಸಮಸ್ಯೆ - ಕಾಡು ಪ್ರಾಣಿಗಳ ದಾಳಿ. ಅದು ಯಾವುದೇ ಜಾತಿ ಅಥವಾ ವರ್ಗದ ರೈತನಾಗಿರಲಿ, ಕಡಿಮೆ ಭೂಮಿ ಅಥವಾ ಅದಕ್ಕಿಂತ ಹೆಚ್ಚಿನದಾಗಿರಲಿ, ಎಲ್ಲರೂ ತೊಂದರೆಯಲ್ಲಿದ್ದರು.

"ಇದು ನೋಡಿ," ಹೆಸರು ಹೊಲದಲ್ಲಿ ನಿಂತಿರುವ ಒಬ್ಬ ರೈತ ನಮಗೆ ಹೇಳುತ್ತಾರೆ. "ನಮ್ಮ ಪಾಲಿಗೆ ಏನು ಉಳಿದಿದೆ?" ಹಿಂದಿನ ರಾತ್ರಿ, ಕಾಡುಹಂದಿಗಳು ಅವರ ಹೊಲದಲ್ಲಿನ ಬೆಳೆಗಳನ್ನು ತಿಂದುಹಾಕಿದ್ದವು. ಇಂದು ಅವರು ಹಿಂತಿರುಗಿ ಬಂದು ಉಳಿದದ್ದನ್ನು ತಿನ್ನುತ್ತವೆ. "ನಾನೇನು ಮಾಡಲಿ, ಮಾಮಾ?" ಅವರು ಕೋಪದಿಂದ ಮಾಮಾ ಬಳಿ ಕೇಳುತ್ತಾರೆ.

ಹೊಲದಲ್ಲಿ ಆಗಿರುವ ಬೆಳೆ ನಷ್ಟವನ್ನು ಮಾಮಾ ನೋಡುತ್ತಾರೆ. ಅವರು ತಮ್ಮ ಕಣ್ಣುಗಳನ್ನು ನಂಬಲು ಸಾಧ್ಯವಾಗದೆ ತಲೆಯಾಡಿಸಿದರು. "ನಾನು ಕ್ಯಾಮೆರಾ ಜೊತೆಗೊಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ ಅವನು ಫೋಟೋಗಳನ್ನು ತೆಗೆದುಕೊಳ್ಳಲಿ, ವೀಡಿಯೊಗಳನ್ನು ತೆಗೆದುಕೊಳ್ಳಲಿ. ಫಾರ್ಮ್ ಭರ್ತಿ ಮಾಡಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ. ಅರ್ಜಿಗೆ ಸಹಿ ಮಾಡಿದ ನಂತರ ಸ್ಥಳೀಯ ವಲಯ ಅರಣ್ಯಾಧಿಕಾರಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ” ಎಂದು ನೋವಿನಿಂದ ಹೇಳಿದರು.

Manjula helps farmers with the paperwork necessary to file claims. Through the year, and mostly during winters, she travels on her Scooty (gearless bike) from her village Gaurala covering about 150 villages to help farmers with documentation to apply for and claim compensation.
PHOTO • Jaideep Hardikar
Vitthal Badkhal visiting a farm
PHOTO • Jaideep Hardikar

ಎಡ: ಪರಿಹಾರ ಅರ್ಜಿಗಳನ್ನು ಸಲ್ಲಿಸಲು ಮಂಜುಳಾ ರೈತರಿಗೆ ಸಹಾಯ ಮಾಡುತ್ತಾರೆ. ವರ್ಷವಿಡೀ, ವಿಶೇಷವಾಗಿ ಚಳಿಗಾಲದಲ್ಲಿ, ಅವರು ತಮ್ಮ ಗೌರಾಲಾ ಗ್ರಾಮದಿಂದ ತಮ್ಮ ಸ್ಕೂಟಿಯಲ್ಲಿ ಸುಮಾರು 150 ಹಳ್ಳಿಗಳಿಗೆ ಭೇಟಿ ನೀಡುತ್ತಾರೆ ಮತ್ತು ದಾಖಲೆಗಳನ್ನು ಸಂಗ್ರಹಿಸಲು ಮತ್ತು ಪರಿಹಾರ ಬೇಡಿಕೆ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುತ್ತಾರೆ. ಬಲ: ಬದ್ಖಲ್ ಮಾಮಾ ಹೊಲವನ್ನು ಪರಿಶೀಲಿಸಲು ಬಂದಿದ್ದಾರೆ

ಮಾಮಾ ಕಳುಹಿಸುವ ವ್ಯಕ್ತಿ 35 ವರ್ಷದ ಮಂಜುಳಾ ಬದ್ಖಲ್. ಅವರು ಗೌರಾಲಾದ ಭೂರಹಿತ ನಿವಾಸಿ. ಅವರು ಸಣ್ಣ ಬಟ್ಟೆ ವ್ಯಾಪಾರವನ್ನು ಹೊಂದಿದ್ದಾರೆ. ಇದಲ್ಲದೆ, ಇದು ರೈತರಿಗೆ ಇಂತಹ ಸೇವೆಗಳನ್ನು ಜೊತೆಗೆ ಒದಗಿಸುತ್ತಾರೆ.

ವರ್ಷವಿಡೀ, ವಿಶೇಷವಾಗಿ ಚಳಿಗಾಲದಲ್ಲಿ, ಅವರು ತಮ್ಮ ಗೌರಾಲಾ ಗ್ರಾಮದಿಂದ ತಮ್ಮ ಸ್ಕೂಟಿಯಲ್ಲಿ ಸುಮಾರು 150 ಹಳ್ಳಿಗಳಿಗೆ ಭೇಟಿ ನೀಡುತ್ತಾರೆ ಮತ್ತು ಅಲ್ಲಿ ರೈತರಿಗೆ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಪರಿಹಾರ ಬೇಡಿಕೆ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುತ್ತಾರೆ.

"ನಾನು ಮೊದಲಿಗೆ ಫೋಟೊಗಳನ್ನು ತೆಗೆದುಕೊಳ್ಳುತ್ತೇನೆ, ಅವರ ಅರ್ಜಿಗಳನ್ನು ಭರ್ತಿ ಮಾಡುತ್ತೇನೆ, ಅಗತ್ಯವಿದ್ದರೆ ಅಫಿಡವಿಟ್ಟುಗಳನ್ನು ಸಿದ್ಧಪಡಿಸುತ್ತೇನೆ ಮತ್ತು ಭೂಮಿಯಲ್ಲಿ ಪಾಲು ಹೊಂದಿದ್ದರೆ ಕುಟುಂಬದಲ್ಲಿನ ಬೇರೊಬ್ಬರ ಒಪ್ಪಿಗೆ ಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇನೆ" ಎಂದು ಮಂಜುಳಾತಾಯಿ ಪರಿಗೆ ತಿಳಿಸಿದರು.

ಒಂದು ವರ್ಷದಲ್ಲಿ ಅಂತಹ ಎಷ್ಟು ರೈತರನ್ನು ಭೇಟಿ ಮಾಡುತ್ತಾರೆ?

"ನಾವು ಒಂದು ಹಳ್ಳಿಯಿಂದ 10 ರೈತರನ್ನು ಹಿಡಿದರೂ, 1,500 ರೈತರಾಗುತ್ತಾರೆ" ಎಂದು ಅವರು ಹೇಳುತ್ತಾರೆ. ಅವರು ತಮ್ಮ ಕೆಲಸಕ್ಕೆ ಪ್ರತಿ ರೈತರಿಗೆ 300 ರೂ.ಗಳನ್ನು ವಿಧಿಸುತ್ತಾರೆ. ಪ್ರಯಾಣ ಮತ್ತು ಇತರ ದಾಖಲೆಗಳಿಗಾಗಿ 200 ರೂ., ಅವರ ಸಮಯ ಮತ್ತು ಕಠಿಣ ಪರಿಶ್ರಮಕ್ಕೆ 100 ರೂ. ಜನರು ಈ ಹಣವನ್ನು ಸಂತೋಷದಿಂದ ನೀಡುತ್ತಿದ್ದಾರೆ ಎಂದು ಮಂಜುಳಾ ಹೇಳುತ್ತಾರೆ.

The 72-year-old activist resting at Gopal Bonde’s home in Chiprala, talking to him (left) and his family about filing claims
PHOTO • Jaideep Hardikar

ಚಿಪ್ರಾಲಾದಲ್ಲಿರುವ ಗೋಪಾಲ್ ಬೊಂಡೆ ಅವರ ಮನೆಯಲ್ಲಿ 72 ವರ್ಷದ ಹೋರಾಟಗಾರ. ಮಾಮಾ ಅವರ ಕುಟುಂಬದೊಂದಿಗೆ ಪರಿಹಾರ ಬೇಡಿಕೆಯ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ

ಮಾಮಾ ಎಲ್ಲರಿಗೂ ಒಂದೇ ಸಲಹೆ ನೀಡುತ್ತಾರೆ. ರೈತನ ಹೇಳಿಕೆಯ ನಂತರ, ಅಧಿಕಾರಿಗಳು ಸ್ಥಳಕ್ಕೆ ಬಂದು ಪಂಚನಾಮೆ ನಡೆಸುತ್ತಾರೆ. ತಲಾಥಿಗಳು (ಅರಣ್ಯ ರಕ್ಷಕರು) ಮತ್ತು ಕೃಷಿ ಸಹಾಯಕರು ಬಂದು ಸ್ಥಳದಲ್ಲೇ ಪಂಚನಾಮೆ ನಡೆಸುತ್ತಾರೆ ಎಂದು ಮಾಮಾ ಹೇಳುತ್ತಾರೆ. "ತಲಾಥಿ ಭೂಮಿಯ ಅಳತೆ ಮಾಡುತ್ತಾನೆ, ಕೃಷಿ ಸಹಾಯಕರು ಯಾವ ಬೆಳೆಗಳನ್ನು ಪ್ರಾಣಿಗಳು ತಿಂದಿವೆ ಎಂಬುದನ್ನು ದಾಖಲಿಸುತ್ತಾರೆ ಮತ್ತು ಯಾವ ಪ್ರಾಣಿ ಅದನ್ನು ನಾಶಪಡಿಸಿದೆ ಎಂದು ಅರಣ್ಯ ಇಲಾಖೆಯ ವ್ಯಕ್ತಿಗೆ ತಿಳಿದಿರುತ್ತದೆ" ಎಂದು ಮಾಮಾ ವಿವರಿಸುತ್ತಾರೆ. ಅದು ನಿಯಮ ಎಂದು ಅವರು ಹೇಳುತ್ತಾರೆ.

"ನಿಮಗೆ ಅರ್ಹ ಪರಿಹಾರ ಸಿಗದಿದ್ದರೆ, ನಾವು ಹೋರಾಡುತ್ತೇವೆ" ಎಂದು ಮಾಮಾ ಸ್ಪಷ್ಟವಾಗಿ ಹೇಳುತ್ತಾರೆ. ಅವರ ಈ ಭರವಸೆಯ ಧ್ವನಿ ಅಲ್ಲಿ ನೆರೆದಿರುವ ರೈತರನ್ನು ವಿಶ್ವಾಸವನ್ನು ಬಲಪಡಿಸುತ್ತದೆ. ಮತ್ತು ಮಾಮಾ ಕೂಡ ಆ ಪ್ರತಿಕ್ರಿಯೆಯನ್ನು ನೋಡಿ ಸಂತೋಷಪಡುತ್ತಾರೆ.

" ಆದರೆ ಅಧಿಕಾರಿಗಳು ಪಂಚನಾಮೆ ಮಾಡಲು ಬರದಿದ್ದರೆ ಏನು ಮಾಡುವುದು?" ಎಂದು ರೈತರೊಬ್ಬರು ಆತಂಕದಿಂದ ಕೇಳುತ್ತಾರೆ.

ಬದ್ಖಲ್ ಮಾಮಾ ಅವರಿಗೆ ತಾಳ್ಮೆಯಿಂದ ವಿವರಿಸುತ್ತಾರೆ. ಪರಿಹಾರ ಬೇಡಿಕೆಯನ್ನು 48 ಗಂಟೆಗಳ ಒಳಗೆ ಸಲ್ಲಿಸಬೇಕು. ನಂತರ ನೀವು ದೂರು ಸಲ್ಲಿಸಬೇಕು. ಮತ್ತು ಅಧಿಕಾರಿಗಳ ತಂಡವು ಏಳು ದಿನಗಳ ಒಳಗೆ ಬಂದು 10 ದಿನಗಳ ಒಳಗೆ ತಪಾಸಣೆಯ ವರದಿಯನ್ನು ಸಲ್ಲಿಸಬೇಕು. ಮತ್ತು ರೈತರಿಗೆ 30 ದಿನಗಳೊಳಗೆ ಪರಿಹಾರ ನೀಡಬೇಕು.

"ನೀವು ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅವರು ಬರದಿದ್ದರೆ, ನಿಮ್ಮ ಪಂಚನಾಮೆ ಮತ್ತು ಫೋಟೋಗಳನ್ನು ಇಲಾಖೆ ಪುರಾವೆಯಾಗಿ ಸ್ವೀಕರಿಸಬೇಕು" ಎಂದು ಮಾಮಾ ಸ್ಪಷ್ಟವಾಗಿ ಹೇಳುತ್ತಾರೆ.

"ಮಾಮ, ಮಾಯಿ ಭಿಸ್ಟ್ ತುಮ್ಚ್ಯಾವರ್‌ ಹೇ [ಮಾಮಾ ನನ್ನ ಹಣೆಬರಹ ನಿನ್ನ ಕೈಯಲ್ಲಿದೆ]" ಎಂದು ಒಬ್ಬ ರೈತ ಕೈಮುಗಿದು ಹೇಳುತ್ತಾನೆ. ಅವನ ಭುಜವನ್ನು ತಟ್ಟುತ್ತಾ, ಮಾಮಾ ವಿವರಿಸುತ್ತಾರೆ, "ಚಿಂತಿಸಬೇಡಿ."

ಅವರ ತಂಡವು ಈ ಪ್ರಕ್ರಿಯೆಯನ್ನು ಒಮ್ಮೆ ಮಾತ್ರ ಮಾಡುತ್ತದೆ; ನಂತರ ಅವನು (ರೈತ) ಅದನ್ನು ಸ್ವತಃ ಮಾಡಲು ಕಲಿಯಬೇಕು ಎಂದು ಅವರು ಹೇಳುತ್ತಾರೆ.

Vitthal Badkhal inspecting the farm of one of his close volunteers, Gopal Bonde in Chiprala village of Bhadravati tehsil , close to the buffer area of the TATR. The farm is set for rabi or winter crop, and already wild animals have announced their arrival on his farm
PHOTO • Jaideep Hardikar

ಭದ್ರಾವತಿ ತಾಲ್ಲೂಕಿನ ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶದ ಬಫರ್ ವಲಯದ ಬಳಿಯ ಚಿಪ್ರಾಲಾ ಗ್ರಾಮದ ಗೋಪಾಲ್ ಬೊಂಡೆ ಅವರ ಜಮೀನನ್ನು ವಿಠ್ಠಲ್ ಬದ್ಕಲ್ ಪರಿಶೀಲಿಸುತ್ತಿದ್ದಾರೆ. ಬೊಂಡೆ ಮಾಮಾ ಅವರೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾರೆ. ಹೊಲದಲ್ಲಿ ಹಿಂಗಾರು ಹಂಗಾಮು ಪ್ರಾರಂಭವಾದ ಕೂಡಲೇ, ಕಾಡು ಪ್ರಾಣಿಗಳು ತಿರುಗಾಡಲು ಪ್ರಾರಂಭಿಸಿವೆ

ಅವರು ತಾವಾಗಿಯೇ ಹೊಲಗಳಿಗೆ ಹೋಗಿ ಪರಿಶೀಲಿಸುವುದು ಮಾತ್ರವಲ್ಲದೆ, ಅವರು ತಮ್ಮ ಭೇಟಿಗಳ ಬಗ್ಗೆ ತರಬೇತಿಯನ್ನು ಸಹ ಪ್ರಾರಂಭಿಸುತ್ತಾರೆ. ಪರಿಹಾರದ ಅರ್ಜಿಗಳನ್ನು ಹೇಗೆ ಹಾಕಲಾಗುತ್ತದೆ ಎಂಬುದರ ಒಂದು ನೋಟವನ್ನು ಅವರು ಗ್ರಾಮಸ್ಥರಿಗೆ ನೀಡುತ್ತಾರೆ.

"ನನ್ನ ಕರಪತ್ರವನ್ನು ಎಚ್ಚರಿಕೆಯಿಂದ ಓದಿ" ಎಂದು ಅಕ್ಟೋಬರ್ 2023ರಲ್ಲಿ ತಡಾಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಮಾ ಹೇಳಿದ್ದರು. ಅವರು ಒಟ್ಟುಗೂಡಿದ ಗ್ರಾಮಸ್ಥರಿಗೆ ಕರಪತ್ರಗಳನ್ನು ವಿತರಿಸುತ್ತಾರೆ.

"ನಿಮಗೆ ಏನಾದರೂ ಸಂದೇಹಗಳಿದ್ದರೆ, ಈಗಲೇ ಕೇಳಿ, ನಾನು ಎಲ್ಲವನ್ನೂ ವಿವರಿಸುತ್ತೇನೆ." ಇದು ವೈಯಕ್ತಿಕ ಮಾಹಿತಿ, ಎಷ್ಟು ಭೂಮಿಯಿದೆ, ಬೆಳೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

"ಈ ಅರ್ಜಿ, ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಫೋಟೊಗಳೊಂದಿಗೆ 7/12 [ಸಾತ್-ಬಾರಾ ಭೂಮಿ ದಾಖಲೆ] ಲಗತ್ತಿಸಿ. ಬೆಳೆಗಳನ್ನು ಕಾಡು ಪ್ರಾಣಿಗಳು ತಿಂದಿವೆ ಎಂಬುದು ಸ್ಪಷ್ಟವಾಗಬೇಕು" ಎಂದು ಮಾಮಾ ಹೇಳುತ್ತಾರೆ. "ದೂರು ಮತ್ತು ಕ್ಲೈಮ್ ಫಾರ್ಮಿನಲ್ಲಿ ಯಾವುದೇ ದೋಷ ಇರಬಾರದು. ಮತ್ತು ಒಂದೇ ಹಂಗಾಮಿನಲ್ಲಿ ನೀವು ಎಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಪರವಾಗಿಲ್ಲ" ಎಂದು ಅವರು ಒತ್ತಿ ಹೇಳುತ್ತಾರೆ. "ಕಷ್ಟಪಡದೆ ಯಾವ ಸುಖವೂ ಸಿಗುವುದಿಲ್ಲ" ಎಂದು ಅವರು ನಗುತ್ತಾ ಹೇಳುತ್ತಾರೆ.

ಪರಿಹಾರದ ಮೊತ್ತ ರೈತರಿಗೆ 30 ದಿನಗಳಲ್ಲಿ ಸಿಗಬೇಕು ಎಂದು ಕಾನೂನು ಹೇಳುತ್ತದೆ. ಆದಾಗ್ಯೂ, ಸರ್ಕಾರದಿಂದ ಹಣವನ್ನು ಪಡೆಯಲು ಒಂದು ವರ್ಷ ತೆಗೆದುಕೊಳ್ಳುತ್ತದೆ. "ಈ ಹಿಂದೆ, ಅರಣ್ಯ ಅಧಿಕಾರಿಗಳು ಈ ಕೆಲಸಕ್ಕೆ ಲಂಚ ಕೇಳುತ್ತಿದ್ದರು, ಆದರೆ ಈಗ ನಾವು ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾಯಿಸುವಂತೆ ಒತ್ತಾಯಿಸುತ್ತೇವೆ" ಎಂದು ಅವರು ಹೇಳುತ್ತಾರೆ.

Badkhal at his home in Bhadravati tehsil of Chandrapur district
PHOTO • Jaideep Hardikar

ಚಂದ್ರಾಪುರದ ಭದ್ರಾವತಿ ತಾಲ್ಲೂಕಿನ ತನ್ನ ಮನೆಯಲ್ಲಿ ಕುಳಿತಿರುವ ಬದ್ಕಲ್ ಮಾಮಾ

ಪ್ರಸ್ತುತ, ಕಾಡು ಪ್ರಾಣಿಗಳು ಹೊಲಕ್ಕೆ ಪ್ರವೇಶಿಸುವುದನ್ನು ತಡೆಯಲು ಯಾವುದೇ ಮಾರ್ಗವಿಲ್ಲ ಎಂದು ತೋರುತ್ತದೆ, ಮತ್ತು ಈಗ ಲಭ್ಯವಿರುವ ಏಕೈಕ ಮಾರ್ಗವೆಂದರೆ ರೈತರಿಗೆ ಅವರ ನಷ್ಟವನ್ನು ಸರಿದೂಗಿಸಿಕೊಡುವುದು. ಕೃಷಿ ಮತ್ತು ಬೆಳೆಗಳಿಗೆ ಆಗಿರುವ ಹಾನಿಯನ್ನು ಅಳೆಯುವ, ನಿಗದಿಪಡಿಸಿದ ನಿಯಮಗಳ ಪ್ರಕಾರ ಪರಿಹಾರ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯು ತುಂಬಾ ಜಟಿಲವಾಗಿದೆ, ಹೀಗಾಗಿ ಹೆಚ್ಚಿನ ಜನರು ಅದರ ಸಹವಾಸಕ್ಕೆ ಹೋಗುವುದಿಲ್ಲ.

ಆದರೆ ಬದ್ಖಲ್ ಹೇಳುತ್ತಾರೆ, "ನಾವು ಅದನ್ನು ಮಾಡಬೇಕು." ಮತ್ತು ಇದನ್ನು ಮಾಡಲು ಇರುವ ಉತ್ತಮ ಮಾರ್ಗವೆಂದರೆ ಅಜ್ಞಾನವನ್ನು ಹೋಗಲಾಡಿಸುವುದು ಮತ್ತು ಮಾಹಿತಿ ಮತ್ತು ನಿಯಮಗಳ ಬಗ್ಗೆ ಜನರಿಗೆ ಸಂಪೂರ್ಣವಾಗಿ ತಿಳಿಸುವ ಮೂಲಕ ಅವರ ಪ್ರಕರಣವನ್ನು ಬಲಪಡಿಸುವುದು ಎಂದು ಅವರು ಹೇಳುತ್ತಾರೆ.

ಮಾಮಾ ಅವರ ಫೋನ್ ರಿಂಗಣಿಸುತ್ತಲೇ ಇರುತ್ತದೆ. ವಿದರ್ಭದ ಎಲ್ಲಾ ಮೂಲೆಗಳಿಂದ ಜನರು ನಿರಂತರವಾಗಿ ಸಹಾಯಕ್ಕಾಗಿ ಅವರಿಗೆ ಫೋನ್‌ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಅವರಿಗೆ ರಾಜ್ಯದ ಇತರ ಭಾಗಗಳಿಂದ ಮತ್ತು ಕೆಲವೊಮ್ಮೆ ಇತರ ರಾಜ್ಯಗಳಿಂದ ಸಹ ಕರೆಗಳು ಬರುತ್ತವೆ.

ನಿಜವಾಗಿ ಎಷ್ಟು ಹಾನಿಯಾಗಿದೆಯೆನ್ನುವುದನ್ನು ನಿರ್ಧರಿಸುವುದು ಕಷ್ಟ. ಏಕೆಂದರೆ ಕೆಲವೊಮ್ಮೆ ನೇರ ತಪಾಸಣೆಯ ನಂತರವೂ, ಎಷ್ಟು ಹಾನಿಯಾಗಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲರುವುದಿಲ್ಲ. "ಈಗ ಕಾಡು ಪ್ರಾಣಿಗಳು ಬಂದು ಹತ್ತಿ ಅಥವಾ ಸೋಯಾಬೀನ್ ಬೀಜಗಳನ್ನು ಮಾತ್ರ ತಿನ್ನುತ್ತವೆ. ಸಸ್ಯವು ಹಾಗೆಯೇ ಇರುತ್ತದೆ. ನಾವು ಹಾನಿಯನ್ನು ಹೇಗೆ ಲೆಕ್ಕ ಹಾಕುವುದು?" ಅರಣ್ಯ ಇಲಾಖೆ ಅಧಿಕಾರಿಗಳು ಬಂದು, ಹೊಲಗಳಲ್ಲಿ ನಿಂತಿರುವ ಹಸಿರು ಸಸ್ಯಗಳನ್ನು ನೋಡಿ ತಮ್ಮ ಕಚೇರಿಗಳಿಗೆ ಹೋಗಿ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಮಾಡುತ್ತಾರೆ. ವಾಸ್ತವದಲ್ಲಿ, ರೈತನು ಭಾರಿ ನಷ್ಟವನ್ನು ಅನುಭವಿಸಿರುತ್ತಾನೆ.

"ಪರಿಹಾರ ನಿಯಮಗಳಲ್ಲಿ ಬದಲಾವಣೆಯ ಅಗತ್ಯವಿದೆ ಮತ್ತು ಅದೂ ರೈತರ ಪರವಾಗಿ" ಎಂದು ಬದ್ಖಲ್ ಮಾಮಾ ಹೇಳುತ್ತಾರೆ.

*****

ಕಳೆದ ಎರಡು ವರ್ಷಗಳಲ್ಲಿ, ನಾನು ಬದ್ಖಲ್ ಮಾಮಾ ಅವರೊಂದಿಗೆ ತಡೋಬಾ-ಅಂಧಾರಿ ಯೋಜನೆಯ ಸುತ್ತಮುತ್ತಲಿನ ಕಾಡುಗಳ ಹಲವಾರು ದೂರದ ಹಳ್ಳಿಗಳಿಗೆ ಹೋಗಿದ್ದೇನೆ.

ಅವರು ಪ್ರವಾಸದಲ್ಲಿದ್ದಾಗ, ಅವರ ದಿನವು ಹೀಗೆ ಸಾಗುತ್ತದೆ. ಬೆಳಿಗ್ಗೆ 7 ಗಂಟೆಗೆ ಹೊರಡುತ್ತಾರೆ. ದಿನಕ್ಕೆ 5-10 ಹಳ್ಳಿಗಳಿಗೆ ಭೇಟಿ ನೀಡಿ ಸಂಜೆ 7 ಗಂಟೆಗೆ ಭೇಟಿ ನಿಲ್ಲುತ್ತಿತ್ತು. ರೈತರು, ಹಿತೈಷಿಗಳು ಮತ್ತು ಅನೇಕ ದಾನಿಗಳ ಸಹಾಯದಿಂದ ಅವರ ತಿರುಗಾಟಗಳನ್ನು ನಡೆಸಲಾಗುತ್ತದೆ.

Alongwith Badkhal on the campaign trail is a Mahindra vehicle in which he travels to the villages
PHOTO • Sudarshan Sakharkar

ಪ್ರಚಾರದ ಹಾದಿಯಲ್ಲಿ ಬದ್ಖಲ್ ಅವರೊಂದಿಗೆ ಮಹೀಂದ್ರಾ ವಾಹನವಿರುತ್ತದೆ, ಇದರಲ್ಲಿ ಅವರು ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ

ಪ್ರತಿ ವರ್ಷ, ಬದ್ಖಲ್ ಮಾಮಾ ಮರಾಠಿಯಲ್ಲಿ 5,000 ವಿಶೇಷ ಕ್ಯಾಲೆಂಡರುಗಳನ್ನು ಮುದ್ರಿಸುತ್ತಾರೆ. ಇದು ಸರ್ಕಾರದ ನಿರ್ಧಾರಗಳು, ಯೋಜನೆಗಳು, ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಇತರ ಉಪಯುಕ್ತ ಮಾಹಿತಿಯನ್ನು ಹಿಂದಿನ ಪುಟಗಳಲ್ಲಿ ಒಳಗೊಂಡಿದೆ. ಮತ್ತು ಈ ಎಲ್ಲಾ ಕೆಲಸಗಳನ್ನು ದೇಣಿಗೆಗಳ ಮೂಲಕ ಮಾಡಲಾಗುತ್ತದೆ. ಅವರೊಂದಿಗೆ ಸ್ವಯಂಸೇವಕರಾಗಿ ಬರುವ ರೈತರ ಗುಂಪು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯನ್ನು ಹರಡುತ್ತದೆ ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ.

ಹತ್ತು ವರ್ಷಗಳ ಹಿಂದೆ, ಚಂದ್ರಾಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ಆಂದೋಲನವನ್ನು ಜಾರಿಗೆ ತರಲು ಮಾಮಾ ರೈತರ ಸಂರಕ್ಷಣಾ ಸಮಿತಿಯನ್ನು ರಚಿಸಿದರು. ಇಂದು, ಅವರು ಈ ಕೆಲಸದಲ್ಲಿ ಸಹಾಯ ಮಾಡುವ ಸುಮಾರು 100 ಸ್ವಯಂಸೇವಕ ರೈತರ ತಂಡವನ್ನು ಹೊಂದಿದ್ದಾರೆ.

ಜಿಲ್ಲೆಯ ಕೃಷಿ ಕೇಂದ್ರಗಳು ನಮೂನೆಗಳು ಮತ್ತು ಇತರ ದಾಖಲೆಗಳಿಗಾಗಿ ಪರಿಹಾರ ಕೋರಿಕೆಗಳ ಮಾದರಿಗಳನ್ನು ಇಡುತ್ತವೆ. ಪ್ರತಿಯೊಬ್ಬ ರೈತರು ಕೃಷಿ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ ಮತ್ತು ಕೃಷಿ ಕೇಂದ್ರಗಳ ಕೆಲಸವೂ ರೈತರ ಆಧಾರದ ಮೇಲೆ ಇರುತ್ತದೆ. ಮತ್ತು ಅದಕ್ಕಾಗಿಯೇ ಈ ಅಭಿಯಾನದಲ್ಲಿ ಮಾಹಿತಿಯನ್ನು ಪ್ರಸಾರ ಮಾಡಲು ಈ ಕೇಂದ್ರಗಳನ್ನು ಬಳಸಿಕೊಳ್ಳಲಾಗಿದೆ ಮತ್ತು ಅವರು ಅದನ್ನು ಪೂರ್ಣ ಹೃದಯದಿಂದ ಮಾಡುತ್ತಾರೆ.

ಮಾಮಾಗೆ ದಿನವಿಡೀ ರೈತರಿಂದ ಕರೆಗಳು ಬರುತ್ತವೆ. ಕೆಲವೊಮ್ಮೆ ಸಹಾಯಕ್ಕಾಗಿ ಬೇಡಿಕೊಂಡರೆ, ಕೆಲವೊಮ್ಮೆ ಕೋಪವನ್ನು ವ್ಯಕ್ತಪಡಿಸುತ್ತರಾರೆ. ಹೆಚ್ಚಿನ ಸಮಯದಲ್ಲಿ, ಜನರು ಅವರ ಸಲಹೆಯನ್ನು ಪಡೆಯಲು ಕರೆ ಮಾಡಿರುತ್ತಾರೆ.

"ನೋಡಿ ಇಲ್ಲಿ ರೈತರಿದ್ದಾರೆ, ಕಾಡು ಪ್ರಾಣಿಗಳಿವೆ. ಇಲ್ಲಿ ರೈತ ಮುಖಂಡರು ಮತ್ತು ವನ್ಯಜೀವಿ ಪ್ರೇಮಿಗಳು ಇದ್ದಾರೆ. ಮತ್ತು ಅಲ್ಲಿ ಸರ್ಕಾರ ಕುಳಿತಿದೆ - ಅರಣ್ಯ ಇಲಾಖೆ, ಕೃಷಿ ಮತ್ತು ಕಂದಾಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ ಮತ್ತು ನಿಜವಾದ ಸಮಸ್ಯೆಯನ್ನು ಪರಿಹರಿಸದೆ ಮುಂದಕ್ಕೆ ತಳ್ಳಲಾಗುತ್ತಿದೆ. ಯಾರ ಬಳಿಯೂ ಪರಿಹಾರವಿಲ್ಲ." ಎಂದು ಬದ್ಖಲ್‌ ಹೇಳುತ್ತಾರೆ.

Pamphlets and handbills that Badkhal prints for distribution among farmers.
PHOTO • Jaideep Hardikar
He is showing calendars that he prints to raise awareness and educate farmers about the procedure to claim compensation
PHOTO • Jaideep Hardikar

ಎಡ: ರೈತರಿಗೆ ವಿತರಿಸಲು ಮುದ್ರಿಸಲಾಗಿರುವ ಕರಪತ್ರಗಳು. ಪರಿಹಾರ ಬೇಡಿಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ವಿವರಿಸುವ ಕ್ಯಾಲೆಂಡರನ್ನು ಸಹ ಮಾಮಾ ಮುದ್ರಿಸುತ್ತಾರೆ (ಬಲ)

ನಾವು ಈಗ ಏನು ಮಾಡಬಹುದು ಎಂದರೆ ಪರಿಹಾರವನ್ನು ಪಡೆಯುವುದು, ಏಕೆಂದರೆ ಅದೊಂದೇ ಈಗ ನಮ್ಮ ಬಳಿ ಇರುವ ಏಕೈಕ ಪರಿಹಾರ.

ಅದಕ್ಕಾಗಿಯೇ ಮಾಮಾ ಯಾವಾಗಲೂ ಹಳ್ಳಿಗಳಲ್ಲಿ ತಿರುಗಾಟ ನಡೆಸುತ್ತಲೇ ಇರುತ್ತಾರೆ. ಕೆಲವೊಮ್ಮೆ ತಮ್ಮ ಟೆಂಪೊದಲ್ಲಿ, ಕೆಲವೊಮ್ಮೆ ಬಸ್ಸುಗಳಲ್ಲಿ, ಕೆಲವೊಮ್ಮೆ ಯಾರದೋ ಬೈಕಿನಲ್ಲಿ, ಅವರು ಹಳ್ಳಿಗಳನ್ನು ತಲುಪುತ್ತಾರೆ, ಅಲ್ಲಿ ರೈತರೊಂದಿಗೆ ಮಾತನಾಡುತ್ತಾರೆ ಮತ್ತು ಹೋರಾಡಲು ಸಂಘಟಿತರಾಗುವಂತೆ ಒತ್ತಾಯಿಸುತ್ತಾರೆ.

"ಎಲ್ಲಾ ಸಂಪನ್ಮೂಲಗಳೂ ದೊರೆತ ನಂತರ, ನಾನು ನನ್ನ ಪ್ರವಾಸವನ್ನು ನಿಗದಿಪಡಿಸುತ್ತೇನೆ" ಎಂದು ಅವರು ಹೇಳುತ್ತಾರೆ.

2023ರ ಜುಲೈನಿಂದ ಅಕ್ಟೋಬರ್ ತನಕ ಅವರು ಚಂದ್ರಾಪುರ ಜಿಲ್ಲೆಯೊಂದರಲ್ಲೇ 1,000 ಗ್ರಾಮಗಳಿಗೆ ಭೇಟಿ ನೀಡಿದ್ದರು.

"ಪ್ರತಿ ಹಳ್ಳಿಯಿಂದ ಕೇವಲ ಐದು ರೈತರು ತಮ್ಮ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದರೂ, ನನ್ನ ಅಭಿಯಾನ ಯಶಸ್ವಿಯಾಗುತ್ತಿತ್ತು" ಎಂದು ಅವರು ಹೇಳುತ್ತಾರೆ.

ರೈತರನ್ನು ಅವರದ್ದೇ ಲಾಭಕ್ಕಾಗಿ ಒಟ್ಟುಗೂಡಿಸುವುದು ತುಂಬಾ ಕಷ್ಟ ಎಂದು ಬದ್ಖಲ್ ಮಾಮಾ ಹೇಳುತ್ತಾರೆ. ಅಳುವುದು ಜನರ ಸ್ವಭಾವ, ಹೋರಾಡುವುದಲ್ಲ. ಅಳುವುದು ಸುಲಭ ಮತ್ತು ಸರ್ಕಾರವನ್ನು ಶಪಿಸುವುದು ಸುಲಭ. ಆದರೆ ಹಕ್ಕುಗಳಿಗಾಗಿ ಹೋರಾಡುವುದು, ನ್ಯಾಯವನ್ನು ಹುಡುಕುವುದು ಮತ್ತು ಎಲ್ಲರ ಪ್ರಯೋಜನಕ್ಕಾಗಿ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡುವುದು ಕಷ್ಟ.

'Even if five farmers in every village submit a compensation claim to the forest department, this campaign would have accomplished its objective,' he says
PHOTO • Jaideep Hardikar
'Even if five farmers in every village submit a compensation claim to the forest department, this campaign would have accomplished its objective,' he says
PHOTO • Jaideep Hardikar

'ಪ್ರತಿ ಹಳ್ಳಿಯಿಂದ ಕೇವಲ ಐದು ರೈತರು ತಮ್ಮ ಪರಿಹಾರ ಅರ್ಜಿಗಳನ್ನು ಸಲ್ಲಿಸಿದರೂ, ನನ್ನ ಅಭಿಯಾನವು ಯಶಸ್ವಿಯಾಗುತ್ತಿತ್ತು' ಎಂದು ಅವರು ಹೇಳುತ್ತಾರೆ

ಕೆಲವು ಸಂರಕ್ಷಣಾವಾದಿಗಳು, ಪ್ರಾಣಿ ಪ್ರಿಯರು, ತಜ್ಞರು ಮತ್ತು ಹುಲಿ ಪ್ರಿಯರು ತಡೋಬಾ-ಅಂಧಾರಿ ಹುಲಿ ಮೀಸಲು ಪ್ರದೇಶದ ಮತ್ತು ಸುತ್ತಮುತ್ತಲಿನ ವನ್ಯಜೀವಿಗಳ ಕಲ್ಯಾಣಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಕೆಲಸದಲ್ಲಿನ ನಕಾರಾತ್ಮಕ ಅಂಶವೆಂದರೆ ಇಲ್ಲಿ ವಾಸಿಸುವ ಜನರ ಕಾಳಜಿಗಳು ಮತ್ತು ಸಮಸ್ಯೆಗಳ ಕುರಿತು ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬದ್ಖಲ್ ಮಾಮಾ ಹೇಳುತ್ತಾರೆ.

ಆದಾಗ್ಯೂ, ಅವರ ಅಭಿಯಾನವು ಈ ಇನ್ನೊಂದು ಮುಖವನ್ನು ಬೆಳಕಿಗೆ ತಂದಿದೆ, ಮತ್ತು ಕಳೆದ ಎರಡು ದಶಕಗಳಲ್ಲಿ ಅವರ ದಣಿವರಿಯದ ಪ್ರಯತ್ನಗಳಿಂದಾಗಿ ಈಗ ರೈತರ ಧ್ವನಿಗಳು ಕೇಳಿಬರುತ್ತಿವೆ.

"ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುವವರಿಗೆ ನಾವು ಹೇಳುವುದು ಇಷ್ಟವಾಗುವುದಿಲ್ಲ, ಆದರೆ ಇಲ್ಲಿ ವಾಸಿಸುವ ಜನರಿಗೆ ಬದುಕು ಮತ್ತು ಸಾವಿನ ಸಮಸ್ಯೆಗಳಿವೆ ಎಂಬುದನ್ನು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಬದ್ಖಲ್ ಮಾಮಾ ಹೇಳುತ್ತಾರೆ.

ಮತ್ತು ಪ್ರತಿ ವರ್ಷ ಆ ರೈತರು ತಮ್ಮ ಹೊಲದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Photographs : Sudarshan Sakharkar

Sudarshan Sakharkar is a Nagpur-based independent photojournalist.

Other stories by Sudarshan Sakharkar
Photographs : Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru