“ಹಿಂದೆಲ್ಲ ನಮ್ಮ ಜೀವನವು ನಾಟಕೀಯವಾಗಿರುತ್ತಿತ್ತು. ನಗರದಿಂದ ನಗರಕ್ಕೆ, ಹಳ್ಳಿಯಿಂದ ಹಳ್ಳಿಗೆ ಸಾಗುತ್ತಾ, ನಮ್ಮ ನಂದಿಯ(ಶಿವನ ಅವತಾರವೆಂದು ಪರಿಗಣಿಸಲ್ಪಟ್ಟ ಎತ್ತು) ಜೊತೆಗೆ, ಜನರ ಮನರಂಜಿಸಿ, ಹಣವನ್ನು ಸಂಪಾದಿಸಬೇಕಿತ್ತು. ನಮಗೆ ಸ್ವಂತ ಮನೆ ಅಥವಾ ಭೂಮಿಯಿರಲಿಲ್ಲ. ನಾವು ಒಂದು ಸ್ಥಳದಲ್ಲಿ ನೆಲೆನಿಲ್ಲದ ಕಾರಣ, ನಮ್ಮ ಮಕ್ಕಳಿಗೆಂದಿಗೂ ಶಿಕ್ಷಣವು ದೊರೆಯಲ್ಲಿಲ್ಲ.”

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ತಿರ್ಮಲಿ ನಂದಿವಾಲೆ ಅಲೆಮಾರಿ ಬುಡಕಟ್ಟಿನ ಭುರ ಗಾಯಕ್‌ವಾಡ್‌ ಅವರ ಮಾತುಗಳನ್ನು ನಾವು ಆಲಿಸುತ್ತಿದ್ದೇವೆ. ಇವರು ಹಾಗೂ ಈ ಆದಿವಾಸಿ ಗುಂಪಿನ ಇತರೆ 300 ಜನರು, ಬೀಡ್‌ ಊರಿನಿಂದ 110 ಕಿ. ಮೀ. ದೂರದ ಅಶ್ತಿ ತಾಲ್ಲೂಕಿನ ಕನಡಿ ಬದ್ರುಕ್‌ ಗ್ರಾಮದಲ್ಲಿ ವಾಸಿಸುತ್ತಾರೆ. ಗ್ರಾಮದ ಹೊರವಲಯದ ರಸ್ತೆಯ ಪಕ್ಕದಲ್ಲಿ ಇವರ ಬಸ್ತಿಯಿದೆ.

“೨೫ ವರ್ಷಗಳ ಹಿಂದೆಯೇ ಅಲೆದಾಡುವುದನ್ನು ನಿಲ್ಲಿಸಿದ್ದ ನಾವು, ಈ ಬಂಜರು ಭೂಮಿಯಲ್ಲಿ ನೆಲೆಸಿ, ವ್ಯವಸಾಯವನ್ನು ಆರಂಭಿಸಲು ನಿಶ್ಚಯಿಸಿದೆವು” ಎಂಬುದಾಗಿ ಗಾಯಕ್‌ವಾಡ್‌ ತಿಳಿಸಿದರು. ಈ ಹಿಂದೆ ಅಲೆಮಾರಿಗಳಾಗಿದ್ದವರಿಗೆ ಒಂದು ಸ್ಥಳದಲ್ಲಿ ನೆಲೆಯನ್ನು ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ. ಸುಮಾರು 3,200 ಮೇಲ್ಜಾತಿಯ ಜನರು, ಈ ಆಗಂತುಕರ ಬಗ್ಗೆ ಅಸಮಾಧಾನಗೊಂಡರು. ಆ ಪ್ರದೇಶದ ಆದಿವಾಸಿ ಮತ್ತು ದಲಿತರ ಹಕ್ಕುಗಳನ್ನು ಕುರಿತ ಸಕ್ರಿಯ ಕಾರ್ಯಕರ್ತರ ನೆರವಿನಿಂದ ಅಶ್ತಿ ಪೊಲೀಸ್‌ ಠಾಣೆಯಲ್ಲಿ ನಂದಿವಾಲೆಗಳ ಪರವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯಗಳ ನಿವಾರಣೆ) ಕಾಯಿದೆಯಡಿಯಲ್ಲಿ, ಮೊಕದ್ದಮೆಯೊಂದನ್ನು ದಾಖಲಿಸಲಾಯಿತು. ವಿರೋಧಿಸುತ್ತಿದ್ದ ಗುಂಪು, ಕೊನೆಗೊಮ್ಮೆ, ಇದನ್ನು ಸೌಹಾರ್ದಯುತ ಹಾಗೂ ಉಭಯ ಸಮ್ಮತವಾಗಿ ಬಗೆಹರಿಸಿದ ಕಾರಣ, ಮೊಕದ್ದಮೆಯನ್ನು ಹಿಂಪಡೆಯಲಾಯಿತು.

ಆದರೆ ನಂತರ ಮತ್ತೊಂದು ಸಮಸ್ಯೆ ಎದುರಾಯಿತು. “ನಮಗೆ ವ್ಯವಸಾಯದಲ್ಲಿ ಯಾವುದೇ ನೈಜ ಹಿನ್ನೆಲೆಯಿರಲಿಲ್ಲ. ಹೀಗಾಗಿ ನಾವು, ಇತರರಿಂದ ಅದನ್ನು ಕಲಿಯಲು ನಿರ್ಧರಿಸಿದೆವು. ಒಂದು ದಿನ ನಮ್ಮ ನೆರೆಯ ದಲಿತ ಗ್ರಾಮಸ್ಥರನ್ನು ವ್ಯವಸಾಯವನ್ನು ಕಲಿಸುವಂತೆ ವಿನಂತಿಸಿದೆವು. ಅವರು ನಿಜಕ್ಕೂ ವಿನಯಶೀಲ ಹಾಗೂ ಉದಾರ ಮನೋಭಾವದವರಾಗಿದ್ದು, ನಮಗೆ ಕಲಿಸುವ ಮನಸ್ಸುಳ್ಳವರಾಗಿದ್ದರು. ಕೃಷಿ ಸಾಧನಗಳು ಮತ್ತು ಕಾರ್ಯವಿಧಾನಗಳೊಂದಿಗೆ, ನಮ್ಮ ಬದುಕಿನಲ್ಲಿ ಹೊಸ ಧ್ಯೇಯವೊಂದು ಆರಂಭವಾಯಿತು.”

PHOTO • Shirish Khare

‘ವ್ಯವಸಾಯದಲ್ಲಿ ನಮಗೆ ನೈಜ ಹಿನ್ನೆಲೆಯಿಲ್ಲವಾದ್ದರಿಂದ, ನಾವು ಅದನ್ನು ಇತರರಿಂದ ಕಲಿಯಬೇಕೆಂದು ನಿರ್ಧರಿಸಿದೆವು… ನಮ್ಮ ಕೆಲವು ಜನರು ಈಗ ಕೃಷಿಯಲ್ಲಿ ನಿಪುಣರಾಗಿದ್ದಾರೆ.’ ಎಡಕ್ಕೆ: ಕನಡಿ ಬದ್ರುಕ್‌ ಗ್ರಾಮದ ಈರುಳ್ಳಿಯ ಕೃಷಿ ಭೂಮಿಯೊಂದರಲ್ಲಿ ಕೆಲಸದಲ್ಲಿ ತೊಡಗಿರುವ ತಿರ್ಮಲಿ ಮಹಿಳೆಯರು. ಬಲಕ್ಕೆ: ಮಾರುಕಟ್ಟೆಯಲ್ಲಿ ಮಾರಾಟಮಾಡಲು, ಈರುಳ್ಳಿ ಬೆಳೆಯನ್ನು ಸ್ವಚ್ಛಗೊಳಿಸಿ, ವರ್ಗೀಕರಿಸುತ್ತಿರುವುದು (ಛಾಯಾಚಿತ್ರಗಳು: ಕೈಲಾಶ್‌ ಜೋಗ್ದಂದ್‌)

1991ಕ್ಕೂ ಮೊದಲು, ಅವರ ಅಲೆಮಾರಿ ಜೀವನದಿಂದಾಗಿ, ನಂದಿವಾಲೆಗಳಿಗೆ ಪಿತ್ರಾರ್ಜಿತ ಮನೆ ಅಥವಾ ಅಂಚೆ ವಿಳಾಸಕ್ಕೆ ಸಂಬಂಧಿಸಿದಂತೆ ಯಾವುದೇ ಗುರುತು ಇರಲಿಲ್ಲ. ಮತದಾರರ ಪಟ್ಟಿಗಳಲ್ಲಿ ಇವರ ಅಸ್ತಿತ್ವವೇ ಇಲ್ಲವಾಗಿತ್ತು. ಎಂದಿಗೂ ಮತದಾನವನ್ನು ಮಾಡದ ಇವರಿಗೆ ಪೌರ ಹಕ್ಕುಗಳೂ ಇರಲಿಲ್ಲವೆಂಬುದು ಇದರ ಅರ್ಥ. ಈ ಕಾರಣದಿಂದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯದಲ್ಲಿನ ತಿರ್ಮಲಿ ನಂದಿವಾಲೆಗಳ ಸಂಖ್ಯೆಯ ಬಗ್ಗೆ ವಿಶ್ವಸನೀಯ ಅಂದಾಜು ಸಹ ಇರಲಿಲ್ಲ. ಆದಾಗ್ಯೂ, ಕಾಲ ಸರಿದಂತೆ, ಗ್ರಾಮ ಪಂಚಾಯತಿ ಮತದಾರರ ಪಟ್ಟಿಯಲ್ಲಿ ಅವರನ್ನು ಸೇರ್ಪಡೆಗೊಳಿಸಿದ್ದು, ಪಡಿತರ ಚೀಟಿ ಹಾಗೂ ಇತರೆ ದಾಖಲೆಗಳು ಅವರಿಗೆ ದೊರೆತವು.

ತಿರ್ಮಲಿ ನಂದಿವಾಲೆಗಳು ಅಥರ (18) ಅಲುತೆದಾರ್‌ಗಳಲ್ಲೊಬ್ಬರು. ಇವರು ಹಾಗೂ ಬರ (12) ಬಲುತೆದಾರ್‌ಗಳು ಗ್ರಾಮೀಣ ಮಹಾರಾಷ್ಟ್ರದ ಜಾತಿಯಾಧಾರಿತ ವೃತ್ತಿಗಳಿಗೆ ಸಂಬಂಧಿಸಿದ ವ್ಯವಸ್ಥೆಯೊಂದರ ಭಾಗವಾಗಿದ್ದರು. ಈ ಹಿಂದೆ, ಬಲುತೆದಾರ್‌ಗಳ ಕೆಲಸಕ್ಕೆ ಹಣವನ್ನು ನೀಡಲಾಗುತ್ತಿತ್ತಾದರೂ, ಅಲುತೆದಾರ್‌ಗಳಿಗೆ ಹಣವನ್ನು ಪಾವತಿಸುವಂತೆ ಕೇಳುವ ಹಕ್ಕಿರಲಿಲ್ಲ, ಜಮೀನಿನ ಮಾಲೀಕರಾಗಿದ್ದ ರೈತರು, ಇವರ ಕೆಲಸವನ್ನು ಅಷ್ಟೇನು ಮಹತ್ವದ್ದಲ್ಲವೆಂದು ಪರಿಗಣಿಸಿದ್ದರು. ವಿವಿಧ ರೀತಿಯ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ, ಪ್ರಬಲ ಜಾತಿಗಳಿಗೆ ಮನರಂಜನೆಯನ್ನು ಒದಗಿಸುವುದು ಇವರ ಕೆಲಸವಾಗಿತ್ತು.

ದ ಪೀಪಲ್‌ ಆಫ್‌ ಇಂಡಿಯ: ಮಹಾರಾಷ್ಟ್ರ ಎಂಬ ಹೆಸರಿನ ಬಿ.ವಿ. ಭಾನು ಅವರ ಸಂಪಾದಿತ ಕೃತಿಯ 2004ರ ಸಂಪುಟವು ಫುಲ್ಮಲಿ ನಂದಿವಾಲೆ, ದೇವ್‌ವಾಲೆ ನಂದಿವಾಲೆ ಮತ್ತು ತಿರ್ಮಲಿ ನಂದಿವಾಲೆಗಳೆಂಬ, ನಂದಿವಾಲೆಗಳಲ್ಲಿನ ವಿವಿಧ ಉಪ-ಸಮೂಹಗಳ ಬಗ್ಗೆ ತಿಳಿಸುತ್ತದೆ. 800 ವರ್ಷಗಳ ಹಿಂದೆ, ತಿರ್ಮಲಿಗಳು ಆಂಧ್ರ ಪ್ರದೇಶದಿಂದ ಮಹಾರಾಷ್ಟ್ರದ ಅಹ್ಮದ್‌ನಗರ್‌, ಪುಣೆ, ಸಾಂಗ್ಲಿ, ಸತಾರ, ಕೊಲ್ಹಾಪುರ, ಔರಂಗಬಾದ್‌, ಜಲ್ಗಾಂವ್‌ ಮತ್ತು ಬೀಡ್‌ ಜಿಲ್ಲೆಗಳಿಗೆ ವಲಸೆ ಹೋದರು. ಪುಸ್ತಕದಲ್ಲಿ ತಿಳಿಸಿರುವಂತೆ, ಶತಮಾನಗಳ ಕಾಲ, ಈ ಅಲೆಮಾರಿ ಗುಂಪಿನ ಸ್ತ್ರೀಯರು ಕಡಿಮೆ ಬೆಲೆಯ ಒಡವೆಗಳು, ಸ್ಥಳೀಯ ಔಷಧಿಗಳನ್ನು ಮಾರುತ್ತಿದ್ದರು; ಪುರುಷರು ಜೀವನೋಪಾಯಕ್ಕಾಗಿ ತಮ್ಮ ಎತ್ತುಗಳೊಂದಿಗೆ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು.

PHOTO • Shirish Khare

ನಂದಿವಾಲೆಗಳು ಏನನ್ನಾದರೂ ಸಂಪಾದಿಸುವ ಸಲುವಾಗಿ, ಗ್ರಾಮಗಳು, ಪಟ್ಟಣಗಳು ಮತ್ತು ಜಿಲ್ಲೆಗಳ ಮೂಲಕ ಸಂಚರಿಸುತ್ತ ತಮ್ಮ ನಂದಿ(ಎತ್ತು)ಯೊಂದಿಗೆ ಜನರ ಮನರಂಜಿಸಬೇಕಿತ್ತು (ಛಾಯಾಚಿತ್ರ: ಸಿಗ್ರಿದ್‌ ವಿಲಿ)

ಕನಡಿ ಬದ್ರುಕ್‌ನಲ್ಲಿ ತಿರ್ಮಲಿಗಳು ಈಗ ವ್ಯವಸ್ಥಿತ ಜೀವನವನ್ನು ನಡೆಸುತ್ತಿರುವುದನ್ನು ನೋಡಿ ಅನೇಕರು ವಿಸ್ಮಯಗೊಂಡಿದ್ದಾರೆ. ಅನೇಕ ಅಲೆಮಾರಿ ಬುಡಕಟ್ಟುಗಳೊಂದಿಗೆ ತೊಡಗಿಸಿಕೊಂಡಿದ್ದು, ನಂದಿವಾಲೆಗಳ ಪ್ರಯಾಸಗಳ ಪ್ರತ್ಯಕ್ಷದರ್ಶಿ ಹಾಗೂ ರಾಜಶ್ರೀ ಶಾಹು ಗ್ರಾಮೀಣ್‌ ವಿಕಾಸ್‌ ಪ್ರಕಲ್ಪ್‌ನ ಸದಸ್ಯರಾಗಿರುವ ವಕೀಲ ಸತೀಶ್‌ ಗಾಯಕ್‌ವಾಡ್‌, “25 ವರ್ಷಗಳ ಸಂಘರ್ಷದ ತರುವಾಯ, ಈಗ ಅವರಿಗೆ 150 ಎಕರೆಗಳ ಸಮುದಾಯ ಕೃಷಿಭೂಮಿಯಿದೆ. ಕುಡಿಯುವ ನೀರು, ವಿದ್ಯುಚ್ಛಕ್ತಿ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು (ಸರ್ಕಾರದಿಂದ ನಿರ್ವಹಿಸಲ್ಪಡುವ ಶಾಲೆಗಳಿಗೆ ಪ್ರವೇಶ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಬಸ್‌ ಟಿಕೆಟ್‌ ರಿಯಾಯಿತಿಗಳಂತಹ) ಅವರು ಪಡೆಯುತ್ತಿದ್ದಾರೆ. ಈ ಸಮುದಾಯದ ಮಕ್ಕಳೀಗ ಶಾಲೆ ಮತ್ತು ಕಾಲೇಜುಗಳಿಗೆ ಹಾಜರಾಗಬಲ್ಲರು ಹಾಗೂ ಸ್ವತಂತ್ರ ಜೀವನವನ್ನು ಸಾಗಿಸಬಲ್ಲರು” ಎಂದು ತಿಳಿಸಿದರು.

PHOTO • Shirish Khare

ತಿರ್ಮಲಿ ರೈತ, ಬಾಜಿರಾವ್‌ ಫುಲ್ಮಲಿ (ಮುಂಭಾಗದಲ್ಲಿ): ನಂದಿವಾಲೆಗಳು ತಮ್ಮ ಗ್ರಾಮದಲ್ಲಿ, ನೀರಾವರಿಗಾಗಿ ಈ ಬಾವಿಯನ್ನು ತೋಡಲು ಸಹ ಕಷ್ಟಪಟ್ಟು ದುಡಿದಿದ್ದಾರೆ (ಛಾಯಾಚಿತ್ರ: ಅಕ್ಷಯ್‌ ಜೋಗ್ದಂದ್‌)

ಆದಿವಾಸಿ ಹಾಗೂ ದಲಿತರನ್ನು ಕುರಿತ ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಕಲ್ಪ್‌ ಎಂಬ ಸಮೂಹವು ಹಿಂದಿನಿಂದಲೂ ನಂದಿವಾಲೆಗಳನ್ನು ಬೆಂಬಲಿಸುತ್ತಿದೆ. ಕಾಲಾನುಕಾಲದಿಂದಲೂ ಇದರ ಸಕ್ರಿಯ ಕಾರ್ಯಕರ್ತರೊಂದಿಗಿನ ಒಡನಾಟವು ನಂದಿವಾಲೆಗಳು ತಮ್ಮ ಅಲೆಮಾರಿ ಜೀವನವನ್ನು ಬದಲಿಸಿಕೊಳ್ಳುವ ನಿರ್ಧಾರದಲ್ಲಿ ಪ್ರಭಾವವನ್ನು ಬೀರಿದೆ. ಕನಡಿ ಬದ್ರುಕ್‌ನಲ್ಲಿ ಇವರು ನೆಲೆಗೊಳ್ಳುವುದನ್ನು ಖಚಿತಪಡಿಸಲು ಪರಿಶಿಷ್ಟ ಜಾತಿ/ಪಂಗಡದ ಅಧಿನಿಯಮದಡಿಯಲ್ಲಿ ನಂದಿವಾಲೆಗಳಿಗಾಗಿ ಪ್ರಕಲ್ಪ್‌ನ ಖ್ಯಾತ  ಕ್ರಿಯಾಶೀಲ ವಕೀಲರಾದ ವಾಲ್ಮಿಕ್‌ ನಿಕಲ್ಜೆಯವರು ಮೊಕದ್ದಮೆಯನ್ನು  ಹೂಡಿದರು.

ತಿರ್ಮಲಿ ನಂದಿವಾಲೆಯ ಅನೇಕ ಯುವಜನರು ಈಗ ಪದವೀಧರರಾಗಿದ್ದಾರೆಂಬುದನ್ನು ನಿಕಲ್ಜೆ ಗಮನಿಸಿದ್ದಾರೆ. ರಮೇಶ್‌ ಫುಲ್ಮರಿ, ವಿಶೇಷ ಭದ್ರತಾ ಪಡೆಯನ್ನು ಸೇರಿದ್ದು, ಬೀಡ್‌ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿದ್ದಾರೆ. ಮತ್ತೊಬ್ಬರು, ರಾಮ ಫುಲ್ಮರಿ, ಈಗ ಬಸ್‌ ಕಂಡಕ್ಟರ್‌. ಬಹುಶಃ ಅನೇಕರಿಗಿದು ವಾಡಿಕೆಯ ಕೆಲಸದ ಆಯ್ಕೆಗಳಾಗಿರಬಹುದು. ಆದರೆ ಹಿಂದೆ ಅಲೆಮಾರಿಗಳಾಗಿದ್ದವರಿಗೆ ಇದು ಬೃಹತ್‌ ಬದಲಾವಣೆ. ತಿರ್ಮಲಿ ನಂದಿವಾಲೆಗಳ ಸಕ್ರಿಯ ವಿದ್ಯಾರ್ಥಿ, ಸಾಹೆಬ ಬಾಜಿರಾವ್‌ ಹೀಗೆನ್ನುತ್ತಾರೆ, “ನಾವೀಗ ಅಕ್ಷರಸ್ಥರು. ಸ್ವಾವಲಂಬಿಗಳು ಹಾಗೂ ಸಂಘಟಿತರು.”

ಆದರೆ, “ಮಹಾರಾಷ್ಟ್ರ ರಾಜಸ್ವ ಸಂಹಿತೆ [1994] ಮತ್ತು 1964ರಿಂದ 2011ರವರೆಗೆ ಕಾಲಕಾಲಕ್ಕೆ ಸರ್ಕಾರದಿಂದ ಅಂಗೀಕರಿಸಲ್ಪಟ್ಟ ನಿರ್ಣಯಗಳ ಅನುಸಾರ, ಭೂರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲೆಮಾರಿ ಬುಡಕಟ್ಟುಗಳ ಹಾಗೂ ಅಧಿಸೂಚಿತ ಬುಡಕಟ್ಟುಗಳ ಸರ್ಕಾರಿ ಹುಲ್ಲುಗಾವಲು ಭೂಮಿ(ಗೈರನ್‌)ಯ ʼಅತಿಕ್ರಮಣʼಗಳನ್ನು ಕ್ರಮಬದ್ಧಗೊಳಿಸುವ ಮತ್ತು 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಭೂಮಿಯಲ್ಲಿ ವ್ಯವಸಾಯವನ್ನು ಕೈಗೊಂಡಿರುವವರಿಗೆ ಭೂಮಿಯ ಒಡೆತನವನ್ನು  ನೀಡುವ ನಿಟ್ಟಿನಲ್ಲಿ ಈ ಆದಿವಾಸಿ ಸಮೂಹಕ್ಕಿನ್ನೂ ಭೂಮಿಯ ಒಡೆತನವು ದೊರೆತಿರುವುದಿಲ್ಲ. ತಿರ್ಮಲಿ ನಂದಿವಾಲೆ ಬುಡಕಟ್ಟು ಜನಾಂಗವು ಕನಿಷ್ಟಪಕ್ಷ 1991ರಿಂದಲೂ ಈ ಹುಲ್ಲುಗಾವಲು ಭೂಮಿಯಲ್ಲಿದೆಯಾದರೂ, ಭೂಮಿಯ ಹಕ್ಕನ್ನು ಅವರ ಹೆಸರಿಗೆ ವರ್ಗಾಯಿಸಿರುವುದಿಲ್ಲ.”

ಮುಂಬರುವ ತಿಂಗಳು ಹಾಗೂ ವರ್ಷಗಳಲ್ಲಿ, ಇದು ಅವರ ಮುಂದಿನ ಬೃಹತ್‌ ಹೋರಾಟವೆನಿಸಲಿದೆ ಎಂದರವರು.

ಮೇಲಿನ ಚಿತ್ರ: ದೀಪ ಕೃಷ್ಙನ್‌

ಬಿಲಾಸ್ಪುರ್‌ನಲ್ಲಿನ ರಾಜಸ್ಥಾನ್‌ ಪತ್ರಿಕದ ಸಂಪಾದಕರಾದ ಬರುನ್‌ ಶ್ರೀವಾಸ್ತವ ಅವರಿಂದ ಹಿಂದಿಯಿಂದ ಆಂಗ್ಲ ಭಾಷೆಗೆ ಅನುವಾದಿಸಲ್ಪಟ್ಟಿದೆ. ಈ ಕಥಾನಕದ ಪಾಠಾಂತರವೊಂದು, 2016 ರ ಜುಲೈ 28 ರಂದು ಕ್ಯಾಚ್‌ ನ್ಯೂಸ್‌ನಲ್ಲಿ ಮೂಲರೂಪದಲ್ಲಿ ಪ್ರಕಾಶಿತಗೊಂಡಿದೆ.

ಅನುವಾದ : ಶೈಲಜಾ ಜಿ . ಪಿ .

Shirish Khare

Shirish Khare is based in Raipur, Chhattisgarh, and works as a special correspondent for the Rajasthan Patrika.

Other stories by Shirish Khare
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.