“ನಮ್ಮ ಜೀವನವು ಸುಧಾರಿಸುತ್ತದೆಯೆಂದು ಅವರು ತಿಳಿಸಿದ್ದರಾದರೂ ನಮ್ಮನ್ನು ಅವರು ಮೋಸಗೊಳಿದರು. ನಮ್ಮ ಭೂಮಿಯನ್ನು ವಶಪಡಿಸಿಕೊಂಡ ನಂತರ ನೌಕರಶಾಹಿಯು ಭೂಮಿಯ ಚಿಕ್ಕ ಭಾಗವೊಂದನ್ನು ಮಾತ್ರ ಕರಾರಿನ ಮೇಲೆ ವಾಪಸ್ಸು ನೀಡಿ, ಅಷ್ಟು ಮಾತ್ರವೇ ನಮ್ಮ ಸ್ವಂತದ್ದೆಂದು ನಾವು ನಂಬುವಂತೆ ಮಾಡಿದರು. ನಮ್ಮಲ್ಲಿನ ಕೆಲವರು ನಮ್ಮ ಮನೆ, ಹೊಲ ಮತ್ತು ಕೈತೋಟವನ್ನು ಕಳೆದುಕೊಂಡೆವು.” ಆದರೆ ನಾವು ನಿಜವಾಗಿ ಕಳೆದುಕೊಂಡದ್ದು, ನಮ್ಮ ಹುಲ್ಲುಗಾವಲು, ಅರಣ್ಯಗಳು, ಸಾರ್ವಜನಿಕ ಪ್ರದೇಶ, ಸ್ಮಶಾನ ಮತ್ತು ಆಟದ ಮೈದಾನಗಳು. ನಮ್ಮ ಭೂಮಿಯನ್ನು ವಾಪಸ್ಸು ಪಡೆಯಲು ತಿಂಗಳಾನುಗಟ್ಟಲೆ ಸರ್ಕಾರಿ ಕಛೇರಿಗಳಿಗೆ ಎಡತಾಕುತ್ತಿದ್ದೇವೆ” ಎಂದರು ಜುನ್ವನಿ ಗ್ರಾಮದ ಪ್ರೀತಮ್‌ ಕುಂಜಂ.

ರಾಯ್‌ಪುರ್‌ನಿಂದ 140 ಕಿ.ಮೀ. ದೂರದ ಛತ್ತೀಸ್‌ಗಡ್‌ನಲ್ಲಿನ ಧಮ್ತರಿ ಜಿಲ್ಲೆಯಲ್ಲಿ, ಜುನ್ವನಿಯ ಜನರು ತಮ್ಮ ಭೂಮಿಯನ್ನು ಮರಳಿ ಪಡೆಯಲು, ಡಿಸೆಂಬರ್‌ 2015ರಲ್ಲಿ, ಹೋರಾಟವನ್ನು ಪ್ರಾರಂಭಿಸಿದರು. ಇವರು ಪರಿಶಿಷ್ಟ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕಾಯಿದೆ, ಅಥವಾ ಅರಣ್ಯ ಹಕ್ಕು ಕಾಯಿದೆ (ಎಫ್‌ಆರ್‌ಎ) ಅನುಸಾರ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಡಿಸೆಂಬರ್‌ 2006ರಲ್ಲಿ ರಚಿಸಲ್ಪಟ್ಟ ಕಾಯಿದೆಯು 2008ರ ಜನವರಿ 1ರಂದು ಜಾರಿಗೆ ಬಂದಿತು. ಭಾರತದಾದ್ಯಂತದ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯು ಪಾರಂಪರಿಕ ಅರಣ್ಯ ಹಕ್ಕುಗಳ ಪುನಃಪ್ರದಾನಕ್ಕೆ ಅವಕಾಶ ನೀಡುತ್ತದೆ. ಅರಣ್ಯದ ಕಿರು ಉತ್ಪನ್ನಗಳು ಮತ್ತು ಗೋಮಾಳದ ಭೂಮಿಗಳನ್ನು ಬಳಸಲು ಸಮುದಾಯ ಹಕ್ಕುಗಳನ್ನು ಹಾಗೂ 2005ರ ಡಿಸೆಂಬರ್‌ 13ರ ಹೊತ್ತಿಗೆ ಆದಿವಾಸಿಗಳು ಕೃಷಿಯಲ್ಲಿ ತೊಡಗಿದ್ದ ಭೂಮಿಗೆ ಪ್ರತ್ಯೇಕ ಸ್ವಾಮಿತ್ವವನ್ನು ನೀಡುತ್ತದೆ.

ಛತ್ತೀಸ್‌ಗಡ್‌ ಸರ್ಕಾರವು ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಭೂಮಿಯನ್ನು ಗೇಣಿಗೆ ನೀಡುವಲ್ಲಿ ಇತರೆ ರಾಜ್ಯಗಳಿಗಿಂತಲೂ ಮುಂಚೂಣಿಯಲ್ಲಿದೆಯೆಂದು ಪ್ರತಿಪಾದಿಸುತ್ತಿರುವಾಗಲೇ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರಶಾಹಿಯ ಉಪಸ್ಥಿತಿಯಲ್ಲಿ ರಾಯ್‌ಪುರ್‌ನಲ್ಲಿ ೨೦೧೫ರ ನವೆಂಬರ್‌ ೧೫ರಂದು, ಆಯೋಜಿಸಲ್ಪಟ್ಟ ಅರಣ್ಯ ಹಕ್ಕುಗಳನ್ನು ಕುರಿತ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ ದತ್ತಾಂಶವು ವಾಸ್ತವ ಪರಿಸ್ಥಿತಿಯು ಇದಕ್ಕಿಂತಲೂ ಭಿನ್ನವಾಗಿದೆಯೆಂದು ತಿಳಿಸುತ್ತದೆ.

ರಾಜ್ಯ ಸರ್ಕಾರವು ಕಳೆದ 7 ವರ್ಷಗಳಲ್ಲಿ ಆದಿವಾಸಿಗಳ ಶೇ. 60ರಷ್ಟು ವ್ಯಕ್ತಿಗತ ದಾವೆಗಳನ್ನು ಅಥವಾ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿನ ಅಂತಹ ಸುಮಾರು 512,000 ದಾವೆಗಳನ್ನು ರದ್ದುಪಡಿಸಿದೆ ಮತ್ತು ಪ್ರತಿಯೊಬ್ಬ ವಯಸ್ಕನಿ/ಳಿಗೆ 2.5 ಎಕರೆ ಜಮೀನಿನ ಭರವಸೆ ನೀಡಲಾದ ಕಾನೂನಿಗೆ ವ್ಯತಿರಿಕ್ತವಾಗಿ, ಛತ್ತೀಸ್‌ಗಡ್‌ ಸರ್ಕಾರವು ಕುಟುಂಬವೊಂದಕ್ಕೆ ಕೇವಲ ಸರಾಸರಿ 2 ಎಕರೆ ಅರಣ್ಯ ಭೂಮಿಯನ್ನು ಪರಿಗಣಿಸಿದೆ.

ಛತ್ತೀಸ್‌ಗಡ್‌ನಲ್ಲಿನ ಶೇ. 44ರಷ್ಟು ಭೂಮಿಯು ವನಚ್ಛಾದಿತವಾಗಿದ್ದು, ಹಕ್ಕುದಾರರಿಗೆ ಈ ಹಕ್ಕನ್ನು ನೀಡದಿರುವುದು ಇನ್ನಷ್ಟು ಮಹತ್ವಪೂರ್ಣವಾದುದು. ಇದೇ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ ದತ್ತಾಂಶವು, ತ್ರಿಪುರ ಹಾಗೂ ಕೇರಳದಲ್ಲಿ ಇಂತಹ ದಾವೆಗಳ ಕೇವಲ ಶೇ. 34ರಷ್ಟನ್ನು ಮಾತ್ರ ರದ್ದುಪಡಿಸಲಾಗಿದೆಯೆಂಬುದನ್ನು ತೋರ್ಪಡಿಸಿತು.

ಜುನ್ವನಿಯ ಪಂಚಾಯತ್‌ ಮತದಾರರ ಪಟ್ಟಿಯ ಅನುಸಾರ 265 ಮತದಾರರಿದ್ದಾರೆ. ವ್ಯಕ್ತಿಗತ ಹಕ್ಕಿನ ಪ್ರಕಾರ, 662 ಎಕರೆಯು ಅವರಿಗೆ ಸಲ್ಲತಕ್ಕದ್ದು. ಆದರೆ ಸ್ಥಳೀಯ ಕಾರ್ಯಕರ್ತರಾದ ಬೆನಿಪುರಿ ಗೋಸ್ವಾಮಿ ಅವರು ಹೇಳುವಂತೆ, “ದಶಕಗಳಷ್ಟು ಹಿಂದಿನ ದಾಖಲೆಗಳನ್ನು ಬಳಸಲಾಗುತ್ತಿದ್ದು, ಕೇವಲ 180 ಎಕರೆಗಳನ್ನು ಮಾತ್ರವೇ ವ್ಯಕ್ತಿಗತ ಕರಾರಿನ ನಿಟ್ಟಿನಲ್ಲಿ ನೀಡಲಾಗಿದೆ.” ಭುವನೇಶ್ವರದಲ್ಲಿ ನೆಲೆಗೊಂಡಿದ್ದು, ಪರಿಸರ ಮತ್ತು ಸುಸ್ಥಿರತೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ನೀತಿಯ ವಿಷಯದಲ್ಲಿ ತೊಡಗಿರುವ ವಸುಂಧರ ತಂಡದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಮಧು ಸರಿನ್‌, ಹೀಗೆನ್ನುತ್ತಾರೆ: “ನಮ್ಮ ಕಾಯಿದೆಯ ಪ್ರಕಾರ, ಒಬ್ಬ ವ್ಯಕ್ತಿಗೆ 2.5 ಎಕರೆಯ ಅವಕಾಶವಿದೆಯಾದರೂ, ಅವರಿಗೆ ಚಿಕ್ಕ ಜಾಗವೊಂದನ್ನು ಮಾತ್ರವೇ ಅದೂ ಅವರ ತಂದೆಯ ಹೆಸರಿನಲ್ಲಿ ನೀಡಲಾಗಿದೆ.” ಮಹಿಳೆಯರಿಗೆ ಜುನ್ವನಿಯಲ್ಲಿ ಯಾವುದೇ ಭೂಮಿಯನ್ನು ನೀಡಿರುವುದಿಲ್ಲ. “ಒಬ್ಬ ಮಹಿಳೆಯ ಹೆಸರೂ ನೋಂದಾಯಿಸಲ್ಪಟ್ಟಿರುವುದಿಲ್ಲ. ಕರಾರಿನ ಜೊತೆಗೆ ಯಾವುದೇ ಗುರುತು ಅಥವಾ ನಕ್ಷೆಯನ್ನು ಒದಗಿಸಿಲ್ಲ”ವೆಂಬುದಾಗಿ ಕುಂಜಮ್‌ ತಿಳಿಸುತ್ತಾರೆ.

PHOTO • Shirish Khare

ಇತರೆ ಗ್ರಾಮೀಣರು ವಂಚನೆಗೊಳಗಾಗಿದ್ದಾರೆ, ಮಹಿಳೆಯರಿಗೆ ಜುನ್ವನಿಯಲ್ಲಿ ಯಾವುದೇ ಭೂಮಿಯನ್ನು ನೀಡಿರುವುದಿಲ್ಲ

ಸರ್ಕಾರವು ಮಂಜೂರುಮಾಡುವ ಸಮುದಾಯ ಗೇಣಿಯ (ಇದು, ವ್ಯಕ್ತಿಗತ ಸ್ವಾಮಿತ್ವಕ್ಕಿಂತಲೂ ವಿಭಿನ್ನವಾದುದು) ಸಂಖ್ಯೆಯನ್ನು ಸಹ ಛತ್ತೀಸ್‌ಗಡ್‌ ಸರ್ಕಾರವು ಪ್ರಕಟಿಸಿರುವುದಿಲ್ಲ. “ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿದ್ದಾಗ್ಯೂ, ಸರ್ಕಾರವು ಸಮುದಾಯ ಗೇಣಿಗೆ ಭೂಮಿಯನ್ನು ಕೊಡುತ್ತಿಲ್ಲ” ಎನ್ನುತ್ತಾರೆ, ಬೆನಿಪುರಿ. ಸಮುದಾಯ ಗೇಣಿಗೆ ಸಂಬಂಧಿಸಿದಂತೆ, ರಾಯ್‌ಪುರ್‌ನ ಇದೇ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ ದತ್ತಾಂಶದ ಅನುಸಾರ, ಗುಜರಾತ್‌, ಪ್ರತಿಯೊಂದು ಗ್ರಾಮಕ್ಕೆ ಸರಾಸರಿ 280ಎಕರೆಗಳ ಅರಣ್ಯ ಭೂಮಿಯನ್ನು ವಿತರಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣವು, ಅನುಕ್ರಮವಾಗಿ ಸರಾಸರಿ, 260, 247 ಹಾಗೂ 676 ಎಕರೆಗಳನ್ನು ವಿತರಿಸಿವೆ.

ಅಲ್ಲದೆ, ಛತ್ತೀಸ್‌ಗಡ್‌, ಜನವರಿ 2014ರಲ್ಲಿ, 425 ಅರಣ್ಯ ಗ್ರಾಮಗಳನ್ನು ರೆವಿನ್ಯೂ ಗ್ರಾಮಗಳನ್ನಾಗಿ ಪರಿವರ್ತಿಸುವ ತನ್ನ ನಿರ್ಧಾರವನ್ನು ಪ್ರಕಟಿಸಿತು. ಇಲ್ಲಿನ ಜನರನ್ನು ʼಮುಖ್ಯವಾಹಿನಿಗೆʼ ತರಲು ಮತ್ತು ʼಅಭಿವೃದ್ಧಿʼಯನ್ನು ಸುಗಮಗೊಳಿಸಲು, ಇದನ್ನು ಕೈಗೊಳ್ಳಲಾಗಿದ್ದರೂ, ಈ ಪ್ರಕ್ರಿಯೆಯಲ್ಲಿ ಅಲ್ಲಿನ ನಿವಾಸಿಗಳ ಅಭಿಪ್ರಾಯವನ್ನು ಪಡೆದಿರುವುದಿಲ್ಲ.

ಆದಾಗ್ಯೂ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಯ ನಿರ್ದೇಶಕರಾದ ರಾಜೇಶ್‌ ಸುಕುಮಾರ್‌ ಟೊಪ್ಪು ಅವರು, “ವ್ಯಕ್ತಿಗತ ಗೇಣಿಯನ್ನು ನೀಡುವಲ್ಲಿ, ಛತ್ತೀಸ್‌ಗಡ್‌, ಮುಂಚೂಣಿಯಲ್ಲಿದ್ದು, ಈಗ ಸಮುದಾಯ ಗೇಣಿಗೆ ಆದ್ಯತೆ ನೀಡಲಾಗುತ್ತದೆ” ಎಂದು ತಿಳಿಸುತ್ತಾ, ತಮ್ಮ ಮಾತಿಗೆ ಒತ್ತು ನೀಡಿದರು. “2015ರ ನವೆಂಬರ್‌ 20ರಂದು, ಮುಖ್ಯ ಕಾರ್ಯದರ್ಶಿಯವರು, ಸಮುದಾಯ ಗೇಣಿಯಲ್ಲಿ ನೆರವಾಗುವಂತೆ ಕಲೆಕ್ಟರ್‌ ಅವರಿಗೆ ನಿರ್ದೇಶನವನ್ನು ನೀಡಿದರಲ್ಲದೆ, ಇಂತಹ ಭೂಮಿಗಳನ್ನು ಸಹ ದಾಖಲೆಗಳಲ್ಲಿ ಸೇರಿಸಲಾಗುತ್ತದೆ” ಎಂದು ಸಹ ತಿಳಿಸಿದರು.

“ಬುಡಕಟ್ಟು ಸಮುದಾಯ”ವು, ಬುಡಕಟ್ಟು ಅಲ್ಲದ ಜನರಿಗಿಂತ ಹೆಚ್ಚು ಸುಲಭವಾಗಿ (ಅರಣ್ಯ) ಭೂಮಿಯನ್ನು ಪಡೆಯುತ್ತದೆ. ಭೂಮಿಯನ್ನು (ಗ್ರಾಮ ಸಭೆಯ ಶಿಫಾರಸ್ಸನ್ನು ಆಧರಿಸಿ) ಗ್ರಾಮದ ಹಂತದಲ್ಲಿ ವಿತರಿಸಲಾಗುತ್ತದೆಯೇ ಹೊರತು ಸರ್ಕಾರದಿಂದಲ್ಲ. ಆದರೆ, ಅನೇಕ ದಾವೆಗಳು ರದ್ದುಗೊಂಡಿದ್ದು, ಈ ದೂರುಗಳನ್ನು ಪರಿಶೀಲಿಸಲಾಗುತ್ತಿದೆ” ಎಂಬುದಾಗಿ ರಾಜ್ಯ ಸಚಿವರಾದ ಮಹೇಶ್‌ ಗಗ್ದ ತಿಳಿಯಪಡಿಸಿದರು.

“ಸರ್ಕಾರವು ಮತ-ಬ್ಯಾಂಕ್‌ನ ಆಟವಾಡುತ್ತಿದೆ. ಅಂಕಿಅಂಶಗಳ ಪ್ರಕಾರ, 2009ರ ನಂತರ ಮೂರು ವರ್ಷಗಳ ಗೇಣಿಯ ಪ್ರಕ್ರಿಯೆಯು ಬಹುತೇಕ ನಿಲುಗಡೆಯಾಗಿತ್ತು. ಆದಾಗ್ಯೂ, ವರದಿಯ ಪ್ರಕಾರ, 2013ರ ಚುನಾವಣಾ ಸಮಯದಲ್ಲಿ, 100,000 ಗೇಣಿ ಪ್ರಕ್ರಿಯೆಗಳು ಒಂದು ವರ್ಷದೊಳಗೆ ಪೂರ್ಣಗೊಂಡವು. ಈಗ ಮತ್ತೊಮ್ಮೆ ಪ್ರಕ್ರಿಯೆಯು ನಿಧಾನ ಗತಿಯಲ್ಲಿದೆ” ಎಂಬುದಾಗಿ, ರಾಯ್‌ಪುರ್‌ ಆದಿವಾಸಿ ಸಮತ ಮಂಚ್‌ನ ಇಂದು ನೇತಮ್‌ ತಿಳಿಸಿದರು.

ಧಮ್ತರಿಯ ಆದಿವಾಸಿಗಳು, ಅರಣ್ಯ ಹಕ್ಕು ಕಾಯಿದೆಯ ಅನುಸಾರ ತಮಗೆ ಆಶ್ವಾಸನೆ ನೀಡಲಾಗಿದ್ದ ಹಕ್ಕುಗಳನ್ನು ಪಡೆಯಲು, ಸರ್ಕಾರದ ಬಾಗಿಲು ತಟ್ಟುತ್ತಿರುವಾಗಲೇ, 2005-2010ರ ನಡುವೆ ಛತ್ತೀಸ್‌ಗಡ್‌ನಲ್ಲಿನ 186,000 ಎಕರೆಗಳ ಅರಣ್ಯದ ಜಾಗವನ್ನು ಕೈಗಾರಿಕೆಗಳಿಗೆ ಪಥಾಂತರಿಸಲಾಗಿದೆ. ರಾಜ್ಯದ ಶಾಸನ ಸಭೆಯಲ್ಲಿ ಪ್ರಸ್ತುತಪಡಿಸಲಾದ ಗಣಿ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ಹೀಗೆ ಪಥಾಂತರಿಸಿದ ಜಾಗದ ಶೇ. 97ರಷ್ಟನ್ನು ಗಣಿಗಾರಿಕೆಗೆಂದು ಗುರುತಿಸಲಾಗಿದೆ.

ಭಾರತದ ಅರಣ್ಯ ಸಮೀಕ್ಷೆಯು 1997 ಮತ್ತು 2007ರ ನಡುವೆ 233,000 ಎಕರೆಗಳ ಅರಣ್ಯದ ಜಾಗವನ್ನು ಈಗಾಗಲೇ ಗಣಿಗಾರಿಕೆ ನೀಡಲಾಗಿದೆಯೆಂದು ದಾಖಲಿಸಿದೆ. ಕೇಂದ್ರ ಮತ್ತು ರಾಜ್ಯ ಗಣಿಗಾರಿಕೆ ಇಲಾಖೆಗಳ ವಾರ್ಷಿಕ ವರದಿಗಳು 2014ರಲ್ಲೇ 20,841 ಕೋಟಿಯಷ್ಟು ಬೆಲೆಬಾಳುವ ಖನಿಜಗಳನ್ನು ಛತ್ತೀಸ್‌ಗರ್‌ನಲ್ಲಿ ಭೂಮಿಯಿಂದ ಹೊರತೆಗೆಯಲಾಗಿದೆಯೆಂದು ಸೂಚಿಸುತ್ತವೆ.

PHOTO • Shirish Khare

ಧಮ್ತರಿ ಆದಿವಾಸಿಗಳು ತಮ್ಮ ಅರಣ್ಯ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗಲೇ, ಕೇವಲ ಐದು ವರ್ಷಗಳಲ್ಲಿ, ೧೫೦,೦೦೦ ಎಕರೆಗಳಿಗಿಂತಲೂ ಹೆಚ್ಚು ಭೂಮಿಯನ್ನು ಛತ್ತೀಸ್‌ಗರ್‌ನಲ್ಲಿ ಗಣಿಗಾರಿಕೆಗೆ ಗೊತ್ತುಪಡಿಸಲಾಗಿದೆ

ಸರ್ಕಾರದ ಆದ್ಯತೆಗಳು ಸ್ಪಷ್ಟ. ಈ ನಡುವೆ, “ನಾವು ನಮ್ಮ ಭೂಮಿಯನ್ನು ಕಳೆದುಕೊಂಡಲ್ಲಿ ಎಲ್ಲಿಗೆ ಹೋಗಬೇಕು?”

ಛಾಯಾಚಿತ್ರಗಳು: ಶಿರಿಷ್‌ ಖರೆ ಮತ್ತು ದೀಪಿಕ ಗುಪ್ತ

ಈ ಕಥೆಯ ಆವೃತ್ತಿಯು 2015ರ ಡಿಸೆಂಬರ್‌ 4ರಂದು ರಾಜಾಸ್ಥಾನ್‌ ಪತ್ರಿಕದ ರಾಯ್‌ಪುರ್‌ ಆವೃತ್ತಿಯಲ್ಲಿ ಪ್ರಕಟಗೊಂಡಿದೆ.

ಅನುವಾದ: ಶೈಲಜಾ ಜಿ.ಪಿ.

Shirish Khare

Shirish Khare is based in Raipur, Chhattisgarh, and works as a special correspondent for the Rajasthan Patrika.

Other stories by Shirish Khare
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.