ತನ್ನ ಅಜ್ಜಿಯ ಮಡಿಲಿನಲ್ಲಿ ನಿರುತ್ಸಾಹದಿಂದ ಮಲಗಿದ್ದ 3 ವರ್ಷ ವಯಸ್ಸಿನ ಸುಹಾನಿಯನ್ನು ಗಮನಿಸುತ್ತ  ದುಗ್ಗ, “ನೀವು ಅದನ್ನು ಯಾವಾಗಲೂ ಜೇನುತುಪ್ಪ ಅಥವಾ ಬೆಲ್ಲದಂತಹ ಸಿಹಿ ಪದಾರ್ಥದೊಂದಿಗೆ ಸೇವಿಸಬೇಕು” ಎಂದರು.

ಮಗುವಿನ ಅಜ್ಜಿ, ಮತ್ತೊಬ್ಬ ಗ್ರಾಮೀಣ ಆರೋಗ್ಯಾಧಿಕಾರಿ (RHO) ಸಾವಿತ್ರಿ ನಾಯಕ್‌ ಮತ್ತು ಮನ್ಕಿ ಕಚ್ಲನ್ (ಆಶಾ ಕಾರ್ಯಕರ್ತೆ) ಇವರುಗಳ‌ ಪ್ರೀತಿಯ ಮನವೊಲಿಕೆಯಿಂದ ಮಲೇರಿಯಾದ ಕಹಿ ಗುಳಿಗೆಯನ್ನು ಮಗುವಿನ ಗಂಟಲಿಗಿಳಿಸಲಾಗುತ್ತದೆ.

ಈ ಪ್ರಕ್ರಿಯೆಯ ಉಸ್ತುವಾರಿ ವಹಿಸುತ್ತ, ಅಂಗಳದಲ್ಲಿ ಆಟವಾಡುತ್ತಿರುವ ಮಕ್ಕಳ ಕಲರವದ ನಡುವೆ, ದೊಡ್ಡ ದಾಖಲೆ ಪುಸ್ತಕವೊಂದರಲ್ಲಿ 39ರ ವಯಸ್ಸಿನ ಊರ್ಮಿಳ, ಈ ಪ್ರಕರಣದ ವಿವರಗಳನ್ನು ಬರೆಯುತ್ತಾರೆ. ಛತ್ತಿಸ್‌ಗಡದ ನಾರಯಣಪರ ಜಿಲ್ಲೆಯ ನೌಮುನ್ಜ್‌ಮೆತ ಹಳ್ಳಿಯಲ್ಲಿನ ಅಂಗನವಾಡಿಯೊಂದರ ಭಾಗಶಃ ಆವೃತಗೊಂಡ ಪಡಸಾಲೆಯು ಇವರ ತಾತ್ಕಾಲಿಕ ಚಿಕಿತ್ಸಾಲಯ.

ಪ್ರತಿ ತಿಂಗಳ ಎರಡನೆ ಮಂಗಳವಾರದಂದು ಅಂಗನವಾಡಿಯು ಹೊರರೋಗಿಗಳ ಚಿಕಿತ್ಸಾಲಯವಾಗಿಯೂ ಕಾರ್ಯನಿರ್ವಹಿಸುತ್ತದೆ. ಮಕ್ಕಳು ಅಕ್ಷರಗಳ ಕಲಿಕೆಯಲ್ಲಿ ಮಗ್ನರಾಗಿದ್ದು, ತಾಯಂದಿರು, ಶಿಶುಗಳು ಹಾಗೂ ಇತರರು ಆರೋಗ್ಯ ತಪಾಸಣೆಗಾಗಿ ಹೊರಗೆ ಸಾಲುಗಟ್ಟುತ್ತಾರೆ. ಮುಂಜಾನೆ 10 ಗಂಟೆಗೆ ಹಾಜರಾಗುವ ಊರ್ಮಿಳ ಮತ್ತು ಆರೋಗ್ಯ ಕಾರ್ಯಕರ್ತರ ಆಕೆಯ ತಂಡವು ತಪಾಸಣೆ ಹಾಗೂ ಚುಚ್ಚುಮದ್ದಿನ ಸಲಕರಣೆಗಳೊಂದಿಗೆ ತಮ್ಮ ದಾಖಲೆ ಪುಸ್ತಕಗಳು ಮತ್ತು ಚೀಲಗಳನ್ನು ಹೊರತೆಗೆಯುತ್ತಾರೆ. ಟೇಬಲ್ಲು ಹಾಗೂ ಬೆಂಚೊಂದನ್ನು ಪಡಸಾಲೆಗೆ ಸಾಗಿಸಿ, ತಮ್ಮ ರೋಗಿಗಳ ಭೇಟಿಗೆ ಸಜ್ಜಾಗುತ್ತಾರೆ.

ನಾರಾಯಣ್‌ಪುರ್‌ ವಲಯದಲ್ಲಿನ 6 ಜಿಲ್ಲೆಗಳ ಮಲೇರಿಯ ತಪಾಸಣೆಯನ್ನು 35ರ ವಯಸ್ಸಿನ ಸಾವಿತ್ರಿ ನಾಯಕ್‌ ಅವರನ್ನೊಳಗೊಂಡಂತೆ, ಊರ್ಮಿಳ ಮತ್ತು ಆಕೆಯ ಸಹೋದ್ಯೋಗಿಗಳಿಗೆ ವಹಿಸಲಾಗಿದ್ದು, ಅವರು ಒಂದು ವರ್ಷದಲ್ಲಿ ಕೈಗೊಂಡ ಸುಮಾರು 400 ಮಲೇರಿಯ ತಪಾಸಣೆಗಳಲ್ಲಿ, ಅಂದು ಸುಹಾನಿಯವರು ನಡೆಸಿದ ರಾಪಿಡ್‌ ಡಯಾಗ್ನೊಸ್ಟಿಕ್‌ ಟೆಸ್ಟ್ (RDT) ಸಹ ಒಂದೆನಿಸಿದೆ.

ನಾರಾಯಣ್‌ಪುರ್‌ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಆನಂದ್‌ ರಾಂ ಗೋಟ ಹೀಗೆನ್ನುತ್ತಾರೆ: “ಆರೋಗ್ಯವನ್ನು ಕುರಿತ ನಮ್ಮ ಸಮಸ್ಯೆಗಳಲ್ಲಿ, ಮಲೇರಿಯ, ಒಂದು ಬೃಹತ್‌ ಸಮಸ್ಯೆ.. ಅದು ರಕ್ತ ಕಣಗಳು ಮತ್ತು ಯಕೃತ್ತಿನ ಮೇಲೆ ಪರಿಣಾಮವನ್ನು ಬೀರಿ, ರಕ್ತಹೀನತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ದೈಹಿಕ ಸಾಮರ್ಥ್ಯವು ಕುಂದುತ್ತದೆ. ಆದ್ದರಿಂದ, ಕೂಲಿಯೂ ಕಡಿಮೆಯಾಗುತ್ತದೆ. ಮಕ್ಕಳು ಜನಿಸಿದಾಗಿನ ಅವರ ತೂಕವು ಕಡಿಮೆಯಿದ್ದು, ಇದು ಆವರ್ತಿತವಾಗುತ್ತಲೇ ಇರುತ್ತದೆ.”

At a makeshift clinic in an anganwadi, Urmila Dugga notes down the details of a malaria case, after one of the roughly 400 malaria tests that she and her colleagues conduct in a year in six villages in Narayanpur block
PHOTO • Priti David

ನಾರಾಯಣ್‌ಪುರ್‌ ವಲಯದ ಆರು ಹಳ್ಳಿಗಳಲ್ಲಿ, ಊರ್ಮಿಳ ದುಗ್ಗ ಹಾಗೂ ಆಕೆಯ ಸಹೋದ್ಯೋಗಿಗಳು ಒಂದು ವರ್ಷದಲ್ಲಿ,  ಸುಮಾರು ೪೦೦ ಮಲೇರಿಯ ತಪಾಸಣೆಗಳನ್ನು ನಡೆಸಿದ್ದು, ಅಂತಹ ಒಂದು ಸಂದರ್ಭದಲ್ಲಿ, ಅಂಗನವಾಡಿಯ ತಾತ್ಕಾಲಿಕ ಚಿಕಿತ್ಸಾಲಯದಲ್ಲಿ, ಮಲೇರಿಯ ಪ್ರಕರಣವೊಂದರ ವಿವರಗಳನ್ನು ಊರ್ಮಿಳ ದುಗ್ಗ ಬರೆದುಕೊಳ್ಳುತ್ತಿದ್ದಾರೆ

2020ರಲ್ಲಿ, ಛತ್ತಿಸ್‌ಗಡ್‌ ರಾಜ್ಯದಲ್ಲಿ ಮಲೇರಿಯದಿಂದಾಗಿ 18 ಸಾವುಗಳು ಸಂಭವಿಸಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ, ಈ ಸಂಖ್ಯೆಯು ಅತ್ಯಂತ ಹೆಚ್ಚಿನದು. 10 ಸಾವುಗಳು ಸಂಭವಿಸಿದ ಮಹಾರಾಷ್ಟ್ರ, ಎರಡನೆಯ ಸ್ಥಾನದಲ್ಲಿದೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮನ ಅನುಸಾರ, ಶೇ. ೮೦ರಷ್ಟು ಮಲೇರಿಯ ಪ್ರಕರಣಗಳು, ಬುಡಕಟ್ಟು, ಪರ್ವತ, ದುರ್ಗಮ ಹಾಗೂ ತಲುಪಲು ದುಸ್ಸಾಧ್ಯವೆನಿಸಿದ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಊರ್ಮಿಳ ಅವರು ತಿಳಿಸುವಂತೆ ಸಾಮಾನ್ಯವಾಗಿ, ಬೇವಿನ ಎಲೆಗಳನ್ನು ಸುಟ್ಟು, ಸೊಳ್ಳೆಗಳನ್ನು ಓಡಿಸಲು, ಆದ್ಯತೆ ನೀಡಲಾಗುತ್ತದೆ. “ಮಲಗಿದಾಗ ಸೊಳ್ಳೆ ಪರದೆಗಳನ್ನು ಬಳಸಲು ಮತ್ತು ತಮ್ಮ ಮನೆಯ ಬಳಿಯಲ್ಲಿ ನೀರು ನಿಲ್ಲದಂತೆ ನಿಗಾವಹಿಸುವಂತೆ ನಾವು ಆಗಾಗ ಅವರಿಗೆ ತಿಳಿಸುತ್ತೇವೆ. ಬೇವನ್ನು ಸುಟ್ಟಾಗಿನ ಹೊಗೆಯು ಸೊಳ್ಳೆಗಳನ್ನು ಓಡಿಸುತ್ತದೆಯಾದರೂ, ಹೊಗೆಯು ಕಡಿಮೆಯಾಗುತ್ತಿದ್ದಂತೆ ಸೊಳ್ಳೆಗಳು ಮತ್ತೆ ಕಾಣಿಸಿಕೊಳ್ಳುತ್ತವೆ.”

ನಂತರ, ನಾರಾಯಣಪುರ್‌ ಜಿಲ್ಲೆಯಲ್ಲಿನ ಇಂತಹ ೬೪ ಕೇಂದ್ರಗಳಲ್ಲೊಂದಾದ, ಹಲಮಿಮುನ್ಮೆಟದಲ್ಲಿನ ಉಪ ಆರೋಗ್ಯ ಕೇಂದ್ರದಲ್ಲಿ (SHC) ಊರ್ಮಿಳ, ದೊಡ್ಡ ರಿಜಿಸ್ಟರುಗಳಲ್ಲಿ ಮಲೇರಿಯ ಪ್ರಕರಣದ ವಿವರಗಳನ್ನು ಎರಡನೆಯ ಬಾರಿ ಬರೆಯುತ್ತಾರೆ. ರಿಜಿಸ್ಟರುಗಳನ್ನು ಅಪ್ಡೇಟ್‌ ಮಾಡಲು ಆಕೆಗೆ ಸುಮಾರು 3 ತಾಸು ಹಿಡಿಯುತ್ತದೆ. ಪ್ರತಿಯೊಂದು ತಪಾಸಣೆ, ಹಲವು ವಿಧದ ಪ್ರತಿರಕ್ಷಣೆಗಳು, ಪ್ರಸವಪೂರ್ವ ಮತ್ತು ಪ್ರಸವಾನಂತರದ ಪರೀಕ್ಷಣಗಳು, ಮಲೇರಿಯ ಮತ್ತು ಕ್ಷಯ ರೋಗದ ತಪಾಸಣೆಗಳು ಮತ್ತು ಜ್ವರ, ನೋವು, ತಾಪಕ್ಕೆ ಒದಗಿಸುವ ಪ್ರಥಮ ಚಿಕಿತ್ಸೆಗಳ ವಿವರಗಳನ್ನು ದಾಖಲಿಸಬೇಕಾಗುತ್ತದೆ.

ಎರಡು ವರ್ಷಗಳ ತರಬೇತಿಯನ್ನು ಪೂರೈಸಿರುವ ಊರ್ಮಿಳ, ಸಹಾಯಕ ಹೆರಿಗೆ ದಾದಿಯೂ ಹೌದು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಿಂದ ಆಯೋಜಿಸಲಾಗುವ 1ರಿಂದ 3 ದಿನಗಳವರೆಗಿನ ತರಬೇತಿ ಶಿಬಿರಗಳಿಗೆ ಗ್ರಾಮೀಣ ಆರೋಗ್ಯಾಧಿಕಾರಿಯಾಗಿ ವರ್ಷಂಪ್ರತಿ 5 ಬಾರಿ ಇವರು ಹಾಜರಾಗುತ್ತಾರೆ.

ಪುರುಷ ಗ್ರಾಮೀಣ ಆರೋಗ್ಯಾಧಿಕಾರಿಗಳನ್ನು ವಿವಿದೋದ್ದೇಶ ಆರೋಗ್ಯ ಕಾರ್ಯಕರ್ತರಾಗಿ ಕೇವಲ ಒಂದು ವರ್ಷಗಳ ಮಟ್ಟಿಗೆ ತರಬೇತಿ ನೀಡಲಾಗುತ್ತದೆ. “ಇದು ಸರಿಯಲ್ಲ. ನಾವು ಇದೇ ಕೆಲಸವನ್ನು ಮಾಡುವ ಕಾರಣ, ತರಬೇತಿಯು (ಅರ್ಹತೆಯ ನಿಟ್ಟಿನ) ಒಂದೇ ರೀತಿಯಾಗಿರತಕ್ಕದ್ದು. ರೋಗಿಗಳು ನನ್ನನ್ನು ʼದಾದಿʼ ಎಂಬುದಾಗಿಯೂ, ಪುರುಷ ಗ್ರಾಮೀಣ ಆರೋಗ್ಯಾಧಿಕಾರಿಯನ್ನು ʼಡಾಕ್ಟರ್‌ ಸಾಹೇಬ್‌ʼ ಎಂತಲೂ ಕರೆಯುವುದೇಕೆ? ಇದನ್ನು ನಿಮ್ಮ ಕಥೆಯಲ್ಲಿ ತಿಳಿಸತಕ್ಕದ್ದು” ಎನ್ನುತ್ತಾರೆ ಊರ್ಮಿಳ.

Once a month the Naumunjmeta school doubles up as an outpatient clinic for Urmila, Manki (middle), Savitri Nayak and other healthcare workers
PHOTO • Priti David
Once a month the Naumunjmeta school doubles up as an outpatient clinic for Urmila, Manki (middle), Savitri Nayak and other healthcare workers
PHOTO • Priti David

ತಿಂಗಳಿಗೊಮ್ಮೆ ನೌಮುನ್ಜ್‌ಮೆತ ಶಾಲೆಯು, ಊರ್ಮಿಳ, ಮನ್ಕಿ (ಮ‍ಧ್ಯದಲ್ಲಿರುವವರು), ಸಾವಿತ್ರಿ ನಾಯಕ್‌ ಮತ್ತು ಇತರೆ ಆರೋಗ್ಯ ಕಾರ್ಯಕರ್ತರಿಗೆ ಹೊರರೋಗಿಗಳ ಚಿಕಿತ್ಸಾಲಯವಾಗಿಯೂ ಕಾರ್ಯನಿರ್ವಹಿಸುತ್ತದೆ

ಮಕ್ಕಳು ಇಷ್ಟುಹೊತ್ತಿಗೆ, ಅಕ್ಷರಗಳನ್ನು ಪಠಿಸುತ್ತಾ ತರಗತಿಗೆ ವಾಪಸ್ಸಾಗಿರಬಹುದು. ಔಷಧಿಯ ಸೇವನೆಯ ನಂತರ, ಸುಹಾನಿಯು ನಿದ್ದೆಗೆ ಜಾರಿದ್ದನ್ನು ಕಂಡ ಊರ್ಮಿಳ, ತ್ವರಿತ ಮಾತುಕತೆ, ಗೊಂಡ್‌ ಸಮುದಾಯದ ಮಲೇರಿಯ ಔಷಧೋಪಚಾರವನ್ನು ಕುರಿತ ಕೆಲವು ಸಲಹೆಗಳು ಮತ್ತು ಪೋಷಕವಸ್ತುಗಳನ್ನು ತಿಳಿಸಲು ಅಜ್ಜಿಯತ್ತ ತಿರುಗಿದರು. ನಾರಾಯನಣ್‌ಪುರ್‌ ಜಿಲ್ಲೆಯ ಶೇ. 78ರಷ್ಟು ನಿವಾಸಿಗಳು ಗೊಂಡ್‌ ಸಮುದಾಕ್ಕೆ ಸೇರಿದ್ದಾರೆ

“ನಾನು ಅವರಲ್ಲೊಬ್ಬಳು (ಗೊಂಡ್‌). ಗೊಂಡಿ, ಹಲ್ಬಿ, ಛತ್ತಿಸ್‌ಗರಿ ಮತ್ತು ಹಿಂದಿಯಲ್ಲಿ ಮಾತನಾಡಬಲ್ಲೆ. ಪರಿಣಾಮಕಾರಿಯಾದ ಸಂವಹನಕ್ಕೆ ಇದು ಅವಶ್ಯಕವೂ ಹೌದು. ಇಂಗ್ಲಿಷಿನಲ್ಲಿ ಮಾತನಾಡಲು ನನಗೆ ಸ್ವಲ್ಪ ತೊಡಕೆನಿಸುತ್ತದೆಯಾದರೂ ಅರ್ಥಮಾಡಿಕೊಳ್ಳಬಲ್ಲೆ" ಎಂದರು ಊರ್ಮಿಳ.

ತನ್ನ ಉದ್ಯೋಗವನ್ನು ಕುರಿತಂತೆ, ಈ ಸಂವಹನಗಳನ್ನು ಅವರು ಹೆಚ್ಚು ಇಷ್ಟಪಡುತ್ತಾರೆ. “ಜನರ ಭೇಟಿ ಹಾಗೂ ಅವರನ್ನು ಮನೆಗಳಲ್ಲಿ ಸಂಧಿಸುವುದು ನನಗೆ ಇಷ್ಟದ ವಿಷಯ. ಪ್ರತಿದಿನ 20ರಿಂದ 60 ಜನರನ್ನು ಭೇಟಿಯಾಗುತ್ತೇನೆ ಅವರ ಚಿಂತೆಗಳನ್ನು ಆಲಿಸಿ, ಅವರ ಜೀವನದ ಬಗ್ಗೆ ತಿಳಿದುಕೊಳ್ಳುತ್ತೇನೆ. ನಾನು ಪ್ರವಚನ ಕೊಡುವುದಿಲ್ಲ. ಹಾಗೆ ಅಂದುಕೊಂಡಿದ್ದೇನೆ” ಎಂದು ಆಕೆ ನಕ್ಕರು.

ಆಗ ಮಧ್ಯಾಹ್ನ 1ರ ಸಮಯ. ಊರ್ಮಿಳಾ, ಅಂದು ಮುಂಜಾನೆ ತಾನು ಮಾಡಿದ ಋತುಕಾಲಿಕ ಸೊಪ್ಪಿನ ಪಲ್ಯ ಮತ್ತು ರೊಟ್ಟಿಯ ಊಟದ ಡಬ್ಬಿಯನ್ನು ಹೊರತೆಗೆದರು. ಮನೆಯ ಭೇಟಿಗಳಿಗೆಂದು ಆಕೆಯ ತಂಡವು ರಸ್ತೆಗಿಳಿಯುವ ಸಲುವಾಗಿ ಊಟವನ್ನು ತರಾತುರಿಯಲ್ಲಿ ಮುಗಿಸುತ್ತಿದ್ದರು. ಊರ್ಮಿಳ, ಸಾವಿತ್ರಿಯವರನ್ನು (ಹಲ್ಬಿ ಆದಿವಾಸಿ ಸಮುದಾಯದವರು) ತಮ್ಮ ಗೇರಿಲ್ಲದ ಸ್ಕೂಟರಿನಲ್ಲಿ ಹಿಂದೆ ಕೂರಿಸಿಕೊಂಡು ಅವರು ಪ್ರತಿ ದಿನವೂ ಸುಮಾರು 30 ಕಿ. ಮೀ. ದೂರವನ್ನು ಕ್ರಮಿಸುತ್ತಾರೆ. ಹಳ್ಳಿಗಳ ನಡುವಿನ ಅವರ ಬಹುತೇಕ ಪ್ರಯಾಣವು ದಟ್ಟ ಕಾಡುಗಳ ನಡುವೆ ಸಾಗುವ ಕಾರಣ, ಇಬ್ಬರು ಪ್ರಯಾಣಿಸಿದಲ್ಲಿ ಕ್ಷೇಮವೆಂದು ಅವರು ತಿಳಿಸುತ್ತಾರೆ.

ಹೀಗೆ, ಸುತ್ತಾಡುತ್ತ, ತಮ್ಮ ಕೆಲಸದ ನಿಟ್ಟಿನಲ್ಲಿ, 10ರಿಂದ 16 ಕಿ. ಮೀ. ವ್ಯಾಪ್ತಿಯ ಆರು ಹಳ್ಳಿಗಳ ಸುಮಾರು 2,500 ಜನರ ಆರೋಗ್ಯದ ಅವಶ್ಯಕತೆಗಳ ಬಗ್ಗೆ ಊರ್ಮಿಳ ಮತ್ತು ಆಕೆಯ ತಂಡದವರು ಗಮನಹರಿಸುತ್ತಾರೆ. ಅವರು ಭೇಟಿ ನೀಡುವ 390 ಬಹುತೇಕ ಮನೆಗಳು ಗೊಂಡ್‌ ಮತ್ತು ಹಲ್ಬಿ ಆದಿವಾಸಿಗಳಿಗೆ ಸೇರಿದ್ದು, ಕೆಲವು ಕುಟುಂಬಗಳು ದಲಿತ ಸಮುದಾಯಕ್ಕೆ ಸೇರಿವೆ.

Savitri pricking Suhani’s finger for the malaria test. Right: Manki, Savitri and Bejni giving bitter malaria pills to Suhani
PHOTO • Priti David
Savitri pricking Suhani’s finger for the malaria test. Right: Manki, Savitri and Bejni giving bitter malaria pills to Suhani
PHOTO • Priti David

ಮಲೇರಿಯ ತಪಾಸಣೆಗಾಗಿ ಸಾವಿತ್ರಿಯವರು ಸುಹಾನಿಯ ಬೆರಳನ್ನು ಚುಚ್ಚುತ್ತಿದ್ದಾರೆ. ಬಲಕ್ಕೆ: ಮನ್ಕಿ, ಸಾವಿತ್ರಿ ಮತ್ತು ಬೆಜ್ನಿ ಅವರು ಸುಹಾಸಿನಿಗೆ ಮಲೇರಿಯಾದ ಕಹಿ ಗುಳಿಗೆಗಳನ್ನು ನೀಡುತ್ತಿದ್ದಾರೆ

‘ಗ್ರಾಮೀಣ್‌ ಸ್ವಾಸ್ತ್ಯ ಸ್ವಚ್ಛತಾ ಆಹಾರ್‌ ದಿವಸ್‌’ (ಗ್ರಾಮೀಣ ಸ್ವಾಸ್ಥ್ಯ, ಸ್ವಚ್ಛತೆ ಮತ್ತು ಪೋಷಣೆಯ ದಿನ) ಎಂದು ಕರೆಯಲಾಗುವ ಅವರ ಮಾಸಿಕ ಭೇಟಿಯನ್ನು ವಿವಿಧ ಪ್ರದೇಶಗಳಲ್ಲಿ ಮಾಹೆಯಾನ ನಿಗದಿತ ದಿವೊಂದರಲ್ಲಿ ಕೈಗೊಳ್ಳಲಾಗುತ್ತದೆ. ಈ ದಿನದಂದು, ಊರ್ಮಿಳ ಮತ್ತು ಆಕೆಯ ಸಹೋದ್ಯೋಗಿಗಳು (ಒಬ್ಬ ಪುರುಷ ಹಾಗೂ ಮಹಿಳಾ ಗ್ರಾಮೀಣ ಆರೋಗ್ಯಾಧಿಕಾರಿ) ಪ್ರತಿರಕ್ಷಣೆ, ಜನನ ದಾಖಲಾತಿ ಮತ್ತು ತಾಯಂದಿರ ಸ್ವಾಸ್ಥ್ಯಸೇವೆಯನ್ನೊಳಗೊಂಡಂತೆ 28 ರಾಷ್ಟ್ರೀಯ ಯೋಜನೆಗಳಲ್ಲಿನ ಅನೇಕ ಯೋಜನೆಗಳನ್ನು ಪರಿಶೀಲಿಸುತ್ತಾರೆ.

ಈ ಕೆಲಸಗಳ ಪಟ್ಟಿ ದೊಡ್ಡದು – ಊರ್ಮಿಳ ಮತ್ತು ಇತರೆ ಗ್ರಾಮೀಣ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಸ್ವಾಸ್ಥ್ಯಸೇವಾ ವ್ಯವಸ್ಥೆಯ ಮೇಲ್ವಿಚಾರಕರಾಗಿದ್ದು, ವಿಭಾಗಗಳಲ್ಲಿನ ವೈದ್ಯರು, ಕ್ಷೇತ್ರ ಆರೋಗ್ಯಾಧಿಕಾರಿಗಳ ವ್ಯವಸ್ಥೆಯು ಇವರನ್ನು ಅವಲಂಬಿಸಿದೆ.

“ಗ್ರಾಮೀಣ ಆರೋಗ್ಯಾಧಿಕಾರಿಗಳು ಮುಂಚೂಣಿಯ ಆರೋಗ್ಯ ಕಾರ್ಯಕರ್ತರು. ಅವರು, ಸ್ವಾಸ್ಥ್ಯ ವ್ಯವಸ್ಥೆಯ ಮುಖವಾಣಿಯಿದ್ದಂತೆ” ಎನ್ನುವ ನಾರಾಯಣ್‌ಪುರ್‌ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಗೋಟ, ಮುಂದುವರಿದು, 74 ಮಹಿಳಾ ಮತ್ತು 66 ಪುರುಷ ಗ್ರಾಮೀಣ ಆರೋಗ್ಯಾಧಿಕಾರಿಗಳು “ಶಿಶು ಮತ್ತು ತಾಯಂದಿರ ಆರೋಗ್ಯ, ಮಾನಸಿಕ ಸ್ವಾಸ್ಥ್ಯ, ಕ್ಷಯ, ಕುಷ್ಠ, ಮತ್ತು ರಕ್ತಹೀನತೆಯ ನಿಗಾ ವಹಿಸುತ್ತಾರೆ. ಇವರ ಕೆಲಸಕ್ಕೆ ಕೊನೆಯೆಂಬುದೇ ಇಲ್ಲ” ಎಂದು ತಿಳಿಸುತ್ತಾರೆ.

ಸ್ವಲ್ಪ ದಿನಗಳ ನಂತರ, ಹಲ್ಮಿನೂನ್‌ಮೆಟದಿಂದ ಸುಮಾರು 16 ಕಿ. ಮೀ ದೂರದಲ್ಲಿನ ಮಲೆಚೂರ್‌ ಗ್ರಾಮದ 'ಆರೋಗ್ಯ, ನೈರ್ಮಲ್ಯ ಮತ್ತು ಪೋಷಣೆಯ ದಿನʼದಂದು, ಊರ್ಮಿಳ, ಸುಮಾರು 15 ಮಹಿಳೆಯರಿಗೆ ಸಹೆಯನ್ನು ನೀಡುತ್ತಾರೆ. ಅವರಲ್ಲಿನ ಬಹುತೇಕರು ಚಿಕ್ಕ ಮಕ್ಕಳು.

ಕಾಯುತ್ತಿರುವವರಲ್ಲಿ, ಗಂಡ ಸಮುದಾಯದ (ಛತ್ತಿಸ್‌ಗಡದ ಸೂಚಿಬದ್ಧ ಪರಿಶಿಷ್ಟ ಜಾತಿ) ಫುಲ್‌ಕುವರ್‌ ಕರಂಗ ಕೂಡ ಒಬ್ಬರು. ಕೆಲವು ದಿನಗಳ ಹಿಂದೆ ಊರ್ಮಿಳ ಈ ಕ್ಷೇತ್ರಕ್ಕೆ ಭೇಟಿಯಿತ್ತಾಗ, ನಿತ್ರಾಣ ಮತ್ತು ಬಳಲಿಕೆಯನ್ನು ಅನುಭವಿಸುತ್ತಿರುವುದಾಗಿ ಆಕೆ ತಿಳಿಸಿದ್ದರು. ರಕ್ತಹೀನತೆ ಇರಬಹುದೆಂದು ಊಹಿಸಿದ ಊರ್ಮಿಳ, ಕಬ್ಬಿಣದ ಮಾತ್ರೆಗಳ ಸಲಹೆ ನೀಡಿದ್ದ ಕಾರಣ, ಅವನ್ನು ಪಡೆದುಕೊಳ್ಳಲು ಆಕೆ ಬಂದಿದ್ದರು. ಆಗ ಸುಮಾರು ಮಧ್ಯಾಹ್ನ ೨ರ ಸಮಯ. ಆಕೆ, ಅಂದಿನ ಕೊನೆಯ ರೋಗಿ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4ರ (2015-16) ವರದಿಯಂತೆ, ಛತ್ತಿಸ್‌ಗಡದಲ್ಲಿ 15ರಿಂದ 49ರ ವಯಸ್ಸಿನ ಸುಮಾರು ಅರ್ಧ ಭಾಗದಷ್ಟು (47%) ಮಹಿಳೆಯರಿಗೆ ರಕ್ತಹೀನತೆಯಿದೆ. ಇದರ ಪರಿಣಾಮದಿಂದಾಗಿ, ರಾಜ್ಯದಲ್ಲಿನ 42% ಮಕ್ಕಳು ಸಹ ರಕ್ತಹೀನರಾಗಿದ್ದಾರೆ.

Savitri pricking Suhani’s finger for the malaria test. Right: Manki, Savitri and Bejni giving bitter malaria pills to Suhani
PHOTO • Priti David

ಸಾವಿತ್ರಿಯವರನ್ನು ತಮ್ಮ ಗೇರುರಹಿತ (gearless) ಸ್ಕೂಟರಿನಲ್ಲಿ ಹಿಂದೆ ಕೂರಿಸಿಕೊಂಡು, ಊರ್ಮಿಳ, ದಿನಂಪ್ರತಿ ಸುಮಾರು 30 ಕಿ. ಮೀ. ದೂರವನ್ನು ಕ್ರಮಿಸುತ್ತಾರೆ. ಹಳ್ಳಿಗಳ ನಡುವಿನ ಅವರ ಬಹುತೇಕ ಪ್ರಯಾಣವು ದಟ್ಟ ಕಾಡುಗಳ ನಡುವಿನ ಮೂಲಕ ಸಾಗುವ ಕಾರಣ, ಇಬ್ಬರು ಕ್ಷೇಮಕರವೆಂದು ಅವರ ಅಂಬೋಣ

ವಿವಾಹಕ್ಕೆ ಮೊದಲು ಹುಡುಗಿಯರೊಂದಿಗೆ ಈ ಪರಿಸ್ಥಿತಿಯನ್ನು ಚರ್ಚಿಸುವುದು ಸುಲಭವಲ್ಲವೆಂದು ಊರ್ಮಿಳ ತಿಳಿಸುತ್ತಾರೆ. ತಮ್ಮ ದಾಖಲೆ ಪುಸ್ತಕದಲ್ಲಿ ಕೊನೆಯ ಕೆಲವು ವಿವರಗಳನ್ನು ಬರೆಯುತ್ತ, ಊರ್ಮಿಳ ಹೀಗೆಂದರು: “ಹುಡುಗಿಯರು 16 ಅಥವಾ 17ರ ವಯಸ್ಸಿನಲ್ಲಿ ವಿವಾಹವಾಗಿ, ತಮ್ಮ ಋತುಸ್ರಾವವು ನಿಂತ ನಂತರ ಹಾಗೂ ಸಂಭವತಃ ಗರ್ಭವತಿಯಾದ ನಂತರವಷ್ಟೇ ನಮ್ಮನ್ನು ಕಾಣಲು ಬರುತ್ತಾರೆ. ಪ್ರಸವ-ಪೂರ್ವ ಕಬ್ಬಿಣ ಮತ್ತು ಫೋಲಿಕ್‌ ಆಸಿಡ್‌ಗಳಂತಹ ಪೂರಕಗಳನ್ನು (supplements) ಕೊಡಲು ನನಗೆ ಸಾಧ್ಯವಾಗುವುದಿಲ್ಲ.”

ಗರ್ಭನಿರೋಧಕ ಸಲಹೆಗಳನ್ನು ನೀಡುವುದು ಊರ್ಮಿಳಾರ ಕೆಲಸದ ಮತ್ತೊಂದು ದೊಡ್ಡ ಭಾಗವೆನಿಸಿದ್ದು, ಇದು ಹೆಚ್ಚಿನ ಪರಿಣಾಮವನ್ನು ಬೀರಬಹುದೆಂಬುದು ಅವರ ನೀರೀಕ್ಷೆ. “ಹುಡುಗಿಯರ ವಿವಾಹಕ್ಕೂ ಮೊದಲು ನಾನು ಅವರನ್ನು ನೋಡಿಯೇ ಇರುವುದಿಲ್ಲವಾಗಿ, ಗರ್ಭಧಾರಣೆಯಲ್ಲಿನ ಅಂತರ ಅಥವಾ ಮುಂದೂಡುವಿಕೆಯ ಬಗ್ಗೆ ಮಾತನಾಡಲು ಸಮಯವಿರುವುದಿಲ್ಲ” ಎನ್ನುತ್ತಾರೆ ಊರ್ಮಿಳ. ಆದ್ದರಿಂದ ಅವರು, ಪ್ರಾಯದ ಹುಡುಗಿಯರೊಂದಿಗೆ ಮಾತನಾಡಲು, ತಿಂಗಳಿಗೊಮ್ಮೆ ಕನಿಷ್ಠ ಒಂದು ಶಾಲೆಗೆ ಭೇಟಿ ನೀಡಲು ಪ್ರಯತ್ನಿಸುತ್ತಾರಲ್ಲದೆ, ಹಿರಿಯ ಮಹಿಳೆಯರು ನೀರನ್ನು ತುಂಬಿಸಲು, ಮೇವನ್ನು ಸಂಗ್ರಹಿಸಲು ತೆರಳಿದಾಗ ಅಥವಾ ಅನೌಪಚಾರಿಕವಾಗಿ ಹುಡುಗಿಯರನ್ನು ಸಂಧಿಸಿದಾಗ, ಕೆಲವು ತಿಳಿವಳಿಕೆಗಳನ್ನು ರವಾನಿಸುತ್ತಾರೆಂಬ ನಿರೀಕ್ಷೆಯೊಂದಿಗೆ ಅವರಿಗೆ ಸಲಹೆಯನ್ನು ನೀಡಿ, ಇದರಲ್ಲಿ ತೊಡಗಿಸಲು ಪ್ರಯತ್ನಿಸುತ್ತಾರೆ.

ಊರ್ಮಿಳಾ ಅವರು ಗ್ರಾಮೀಣ ಆರೋಗ್ಯಾಧಿಕಾರಿಯ ಕೆಲಸವನ್ನು ಪ್ರಾರಂಭಿಸಿದಾಗ, 52ರ ವಯಸ್ಸಿನ ಫುಲ್‌ಕುವರ್‌, ಟ್ಯೂಬಲ್‌ ಲಿಗೇಷನ್‌ಗೆ ಒಪ್ಪಿಗೆಯಿತ್ತ ಮೊದಲ ಮಹಿಳೆ. ಅವರು 10 ವರ್ಷಗಳಲ್ಲಿ 4 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ವರ್ಧಿಸುತ್ತಿದ್ದ ತಮ್ಮ ಕುಟುಂಬದಿಂದಾಗಿ, ತಮ್ಮ ಒಡೆತನದಲ್ಲಿದ್ದ ಕೆಲವು ಬಿಘಾಗಳಷ್ಟು ಜಮೀನಿನ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆಯೆಂದು ಅರಿತ ಆಕೆ, ಗರ್ಭವತಿಯಾಗುವುದನ್ನು ತಡೆಯಲು ಬಯಸಿದ್ದರು. “ನನ್ನ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯಿಂದ ಮೊದಲ್ಗೊಂಡು, ನಾರಾಯಣ್‌ಪುರದಲ್ಲಿನ ಜಿಲ್ಲಾ ಆಸ್ಪತ್ರೆಗೆ ನನ್ನನ್ನು ಕರೆದೊಯ್ಯುವವರೆಗೂ ಊರ್ಮಿಳ ಜೊತೆಯಲ್ಲಿದ್ದರು. ನನ್ನ ಜೊತೆಗೇ ಇದ್ದ ಆಕೆ ಮರುದಿನ ನನ್ನನ್ನು ವಾಪಸ್ಸು ಕರೆತಂದರು” ಎಂಬುದಾಗಿ ಆಕೆ ನೆನಪಿಸಿಕೊಂಡರು.

ಈ ಇಬ್ಬರು ಮಹಿಳೆಯರ ನಡುವಿನ ಅನುಬಂಧದಿಂದಾಗಿ, ಫುಲ್‌ಕುವರ್‌ ಅವರ ಇಬ್ಬರು ಗಂಡು ಮಕ್ಕಳ ವಿವಾಹವಾಗಿ, ಅವರ ಮೊದಲ ಮಗುವು ಜನಸಿದ ನಂತರ, ತಮ್ಮ ಸೊಸೆಯಂದಿರನ್ನು ಊರ್ಮಿಳ ಅವರ ಬಳಿಗೆ ಕರೆತರಲಾಗಿ, ಮುಂದಿನ ಗರ್ಭಧಾರಣೆಯ ನಡುವೆ ಅಂತರವನ್ನು ಕಾಯ್ದುಕೊಳ್ಳುವ ಮಹತ್ವವನ್ನು ಊರ್ಮಿಳ ವಿವರಿಸಿದರು.

ತನ್ನ ನಿರಿಗೆಯ ಮಡಿಕೆಗೆ ಕಬ್ಬಿಣದ ಮಾತ್ರೆಗಳನ್ನು ತುಂಬಿಸಿಕೊಂಡು, ಸೀರೆಯನ್ನು ಹೊಂದಿಸಿಕೊಳ್ಳುತ್ತಾ, ಹೊರಡಲನುವಾದ ಫುಲ್‌ಕುವರ್‌, “ಪ್ರತಿ ಎರಡು ವರ್ಷಗಳಿಗೊಮ್ಮೆ ನಾನು ಗರ್ಭವತಿಯಾಗುತ್ತಿದ್ದು, ಅದರ ಸಂಕಷ್ಟವನ್ನು ನಾನು ಬಲ್ಲೆ” ಎಂದರು. ಇವರ ಇಬ್ಬರು ಸೊಸೆಯಂದಿರೂ ಕಾಪರ್‌—ಟಿಯನ್ನು ಅಳವಡಿಸಿಕೊಂಡಿದ್ದು, 3ರಿಂದ 6 ವರ್ಷಗಳವರೆಗೆ ಕಾಯ್ದು ನಂತರ ಮತ್ತೊಮ್ಮೆ ಗರ್ಭವತಿಯರಾದರು.

Left: Phulkuwar Karanga says, 'I got pregnant every two years, and I know the toll it takes'. Right: Dr. Anand Ram Gota says, 'RHOs are frontline health workers, they are the face of the health system'
PHOTO • Urmila Dagga
Left: Phulkuwar Karanga says, 'I got pregnant every two years, and I know the toll it takes'. Right: Dr. Anand Ram Gota says, 'RHOs are frontline health workers, they are the face of the health system'
PHOTO • Courtesy: Dr. Gota

ಎಡ: ಫುಲ್‌ಕುವರ್‌ ಕರಂಗ ಅವರು ಹೀಗೆನ್ನುತ್ತಾರೆ: ‘ಪ್ರತಿ ಎರಡು ವರ್ಷಗಳಿಗೊಮ್ಮೆ ನಾನು ಗರ್ಭವತಿಯಾಗುತ್ತಿದ್ದು, ಅದರ ಸಂಕಷ್ಟವನ್ನು ನಾನು ಅರಿತಿದ್ದೇನೆ.’ ಬಲ: ‘ಗ್ರಾಮೀಣ ಆರೋಗ್ಯಾಧಿಕಾರಿಗಳು ಮುಂಚೂಣಿ ಆರೋಗ್ಯ ಕಾರ್ಯಕರ್ತರೆನಿಸಿದ್ದು, ಸ್ವಾಸ್ಥ್ಯ ವ್ಯವಸ್ಥೆಯ ಮುಖವಾಣಿಯಿದ್ದಂತೆ’ ಎನ್ನುತ್ತಾರೆ, ಡಾ. ಆನಂದ್‌ ರಾಮ್‌ ಗೊಟ

ಊರ್ಮಿಳ ಅವರು ವರ್ಷದಲ್ಲಿ, 18 ಅಥವಾ ಅದಕ್ಕಿಂತಲೂ ಕಿರಿಯ ಅವಿವಾಹಿತ ಯುವತಿಯರ ಕನಿಷ್ಠ ಮೂರು ಅನಪೇಕ್ಷಿತ ಗರ್ಭಧಾರಣೆಯ ಪ್ರಕರಣಗಳನ್ನು ಕಾಣುತ್ತಿದ್ದಾರೆ. ಅವರಲ್ಲಿನ ಬಹುತೇಕರನ್ನು ಅವರ ತಾಯಂದಿರು ಕರೆತರುತ್ತಿದ್ದು, ಗರ್ಭಪಾತಕ್ಕೆ ಕಾತರಿಸುತ್ತಿರುತ್ತಾರೆ. ಸಾಮಾನ್ಯವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಗರ್ಭಪಾತವನ್ನು ಕೈಗೊಳ್ಳಲಾಗುತ್ತದೆ. ಇವರು ತಮ್ಮ ಪರಿಸ್ಥಿತಿಯ ಬಗ್ಗೆ ತಮ್ಮೊಂದಿಗೆ ‘ಲುಕ್ಕ ಛುಪ್ಪಿ(ಕಣ್ಣುಮುಚ್ಚಾಲೆಯಾಟ)’ ಆಡುತ್ತಾರೆ. “ಗರ್ಭಧಾರಣೆಯ ಲಕ್ಷಣಗಳನ್ನು ನಾನು ತಿಳಿಸಿದಾಗ, ಕೋಪಗೊಳ್ಳುವ ಅವರು ಸಿರಾಹ (ಸ್ಥಳೀಯ ಉಪಶಮನಕಾರರು) ಬಳಿಗೆ ತೆರಳುತ್ತಾರೆ ಅಥವಾ ದೇವಸ್ಥಾನಗಳಿಗೆ ತೆರಳಿ ತಮ್ಮ ಋತುಸ್ರಾವವು “ಮತ್ತೆ ಪ್ರಾರಂಭವಾಗಲು” ಪ್ರಾರ್ಥನೆ ಸಲ್ಲಿಸುತ್ತಾರೆ” ಎನ್ನುತ್ತಾರೆ ಊರ್ಮಿಳ. ರಾಷ್ಟ್ರೀಯ ಕುಟುಂಬ ಸ್ವಾಸ್ಥ್ಯ ಸಮೀಕ್ಷೆ – 4ರ ವರದಿಯಂತೆ, ರಾಜ್ಯದ 45% ಗರ್ಭಪಾತವನ್ನು ಮನೆಯಲ್ಲೇ ಕೈಗೊಳ್ಳಲಾಗುತ್ತದೆ.

ಉಪ ಆರೋಗ್ಯ ಕೇಂದ್ರಕ್ಕೆ ಒಮ್ಮೆಯೂ ಭೇಟಿ ನೀಡದ ಪುರುಷರನ್ನು ಗ್ರಾಮೀಣ ಆರೋಗ್ಯಾಧಿಕಾರಿಯು ತೀಕ್ಷ್ಣವಾಗಿ ಟೀಕಿಸುತ್ತಾರೆ. “ಅವರು ಇಲ್ಲಿಗೆ ಬರುವುದು ಅಪರೂಪ. ಗರ್ಭಧಾರಣೆಯು ಮಹಿಳೆಯರ ಸಮಸ್ಯೆಯೆಂಬುದು ಅವರ ಭಾವನೆ. ಕೆಲವು ಪುರುಷರು ವ್ಯಾಸೆಕ್ಟಮಿ ಮಾಡಿಸಿಕೊಳ್ಳುತ್ತಾರಾದರೂ ಸಾಮಾನ್ಯವಾಗಿ ಸಂತಾನಹರಣವನ್ನು ಮಹಿಳೆಯರಿಗೇ ಬಿಡುತ್ತಾರೆ. ಉಪ ಕೇಂದ್ರದಿಂದ ಕಾಂಡೋಮ್‌ಗಳನ್ನು ಪಡೆಯಲು ಸಹ ಮಹಿಳೆಯರನ್ನೇ ನಿಯೋಜಿಸುತ್ತಾರೆ!”

ಊರ್ಮಿಳಾರ ಅಂದಾಜಿನಂತೆ ತಮ್ಮ ಕಾರ್ಯಕ್ಷೇತ್ರದಲ್ಲಿ, ಒಂದು ವರ್ಷದಲ್ಲಿ ಒಬ್ಬ ಪುರುಷನು ವ್ಯಾಸೆಕ್ಟಮಿಗೆ ಒಳಪಡುತ್ತಾನೆ. “ಈ ವರ್ಷ (2020) ಒಬ್ಬ ಪುರುಷನೂ ಇದಕ್ಕೆ ಒಳಪಡಲಿಲ್ಲ. ನಾವು ಸಲಹೆ ನೀಡಬಹುದಷ್ಟೇ. ಬಲವಂತ ಮಾಡಲಾಗದು. ಆದರೆ ಭವಿಷ್ಯದಲ್ಲಿ ಹೆಚ್ಚು ಜನರು ಇದಕ್ಕೆ ಮುಂದೆ ಬರುತ್ತಾರೆಂಬ ನಿರೀಕ್ಷೆಯಿದೆ” ಎಂದರಾಕೆ.

ಮುಂಜಾನೆ 10ಕ್ಕೂ ಮೊದಲು ಪ್ರಾರಂಭಗೊಂಡ ಆಕೆಯ ಕೆಲಸದ ದಿನವು ಸಂಜೆಯ 5 ಗಂಟೆಯ ಸುಮಾರಿಗೆ ಕೊನೆಗೊಳ್ಳುತ್ತಲಿದೆ. ಪೊಲೀಸು ಹುದ್ದೆಯಲ್ಲಿರುವ ೪೦ರ ವಯಸ್ಸಿನ ಆಕೆ ತನ್ನ ಪತಿ ಕನ್ಹಯ್ಯ ಲಾಲ್‌ ದುಗ್ಗ ಮನೆಗೆ ಹಿಂದಿರುಗುವ ಸಮಯಕ್ಕೇ ಈಕೆಯೂ ಮನೆಗೆ ಮರಳುತ್ತಾರೆ. ನಂತರ ಅವರ 6 ವರ್ಷದ ಮಗಳು ಪಲಕ್‌ ಜೊತೆಗೆ ಕುಳಿತು ಆಕೆಯ ಶಾಲೆಗೆ ಸಂಬಂಧಿಸಿದ ಮನೆಕೆಲಸದ ಉಸ್ತುವಾರಿ ಹಾಗೂ ಕೆಲವು ಮನೆಕೆಲಸಗಳ ನಿರ್ವಹಣೆಯ ಸಮಯ.

ದೊಡ್ಡವಳಾದ ನಂತರ ಜನರಿಗಾಗಿ ಏನಾದರೂ ಮಾಡಬೇಕೆಂಬುದು ತಮ್ಮ ಇಚ್ಛೆ ಎಂಬುದು ಊರ್ಮಿಳಾರಿಗೆ ತಿಳಿದಿತ್ತು. ತಮ್ಮ ಕೆಲಸವು ಶ್ರಮದಾಯಕವಾಗಿದ್ದಾಗ್ಯೂ, ಅವರಿಗಿದು ಪ್ರಿಯವಾದುದು. “ಈ ಕೆಲಸವು ನನಗೆ ಅಪಾರ ಗೌರವವನ್ನು ತರುತ್ತದೆ. ನಾನು ಯಾವುದೇ ಹಳ್ಳಿಗಾದರೂ ತೆರಳಬಹುದು. ಜನರು ತಮ್ಮ ಮನೆಗಳಿಗೆ ನನ್ನನ್ನು ಆಹ್ವಾನಿಸಿ, ನನ್ನ ಮಾತುಗಳನ್ನು ಕೇಳುತ್ತಾರೆ. ಇದು ನನ್ನ ಕೆಲಸ” ಎನ್ನುತ್ತಾರೆ ಆಕೆ.

ಅನುವಾದ: ಶೈಲಜಾ ಜಿ.ಪಿ.

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.