“ಬಿಲೊಶಿಗೆ ಹೋಗಬಯಸಿರುವ ನಾವು, ನಸುಕಿನ 5 ಗಂಟೆಯಿಂದಲೇ ಕಾಲ್ನಡಿಗೆಯಲ್ಲಿ ಹೊರಟಿದ್ದೇವೆ. ಯಾವುದೇ ವಾಹನಗಳು ಲಭ್ಯವಿಲ್ಲ. ನಮ್ಮ ಶೇಟ್‌ (ಉದ್ಯೋಗದಾತ) ನಮ್ಮಿಬ್ಬರಿಗೂ ಒಂದು ಸಾವಿರ ರೂ.ಗಳನ್ನು ನೀಡಿದ್ದಾರೆ. ಅದರಿಂದ, ಉಪ್ಪು ಹಾಗೂ ಮಸಾಲೆ, ದಿನಸಿ ಪದಾರ್ಥಗಳನ್ನು ಖರೀದಿಸಿದ್ದೇವೆ. ನಾವು ಮನೆಯನ್ನು ತಲುಪಲು ಸಾಧ್ಯವಾಗದಿದ್ದಲ್ಲಿ, ತಿನ್ನುವುದಾದರೂ ಏನನ್ನು? “ನೀವೆಲ್ಲರೂ ಈಗ ವಾಪಸ್ಸು ಬರದಿದ್ದಲ್ಲಿ, ಎರಡು ವರ್ಷಗಳು ಹೊರಗೇ ಇರಬೇಕಾಗುತ್ತದೆ” ಎಂಬುದಾಗಿ ನಮ್ಮ ಹಳ್ಳಿಯಿಂದ ದೂರವಾಣಿ ಕರೆ ಬಂದಿದೆ.”

ಜನರೂ ಸಹ ಇದನ್ನೇ ಹೇಳುತ್ತಿದ್ದರು. ತಲೆಯ ಮೇಲೆ ಸಾಮಾನು ಸರಂಜಾಮುಗಳನ್ನು, ಭುಜದಲ್ಲಿ ಮಕ್ಕಳನ್ನು ಹೊತ್ತು ಉರಿ ಬಿಸಿಲಿನಲ್ಲಿ ಅವರು ನಡೆಯುತ್ತಿದ್ದರು. ನನ್ನ ಹಳ್ಳಿಯಿಂದ ಸಾಗುತ್ತಿದ್ದ ಅವರನ್ನು ನೋಡಿದ ನಾನು, ಈ ಬಗ್ಗೆ ವಿಚಾರಿಸಿದೆ. ಪಾಲ್ಘರ್‌ ಜಿಲ್ಲೆಯ ವಡ ಕ್ಷೇತ್ರದ ಬಿಲೊಶಿ ಹಳ್ಳಿಗೆ ಸೇರಿದ ಇವರು, ಇಟ್ಟಿಗೆ ಗೂಡುಗಳಲ್ಲಿ ಕೆಲಸವನ್ನು ನಿರ್ವಹಿಸಲು ವಸೈ ಕ್ಷೇತ್ರದ ಭತನೆ ಹಳ್ಳಿಗೆ ವಲಸೆ ಬಂದಿದ್ದಾರೆ. ಮಕ್ಕಳು, ಹೆಂಗಸರು, ಗಂಡಸರಾದಿಯಾಗಿ ಒಟ್ಟು 18 ಜನರಿದ್ದರು. ಎಲ್ಲರೂ ಕಟ್ಕರಿ ಸಮುದಾಯದ ಆದಿವಾಸಿಗಳು.

ಅವರು ಕೊರೊನಾ ವೈರಸ್‌ ಬಗ್ಗೆ ಚಿಂತಿತರಾಗಿದ್ದರು. ಲಾಕ್‌ಡೌನ್‌ನಿಂದಾಗಿ, ಅವರನ್ನು ಮನೆಗೆ ಕರೆದೊಯ್ಯುವ ವಾಹನಗಳಾವುವೂ ಲಭ್ಯವಿರಲಿಲ್ಲ. ತಕ್ಷಣವೇ ಮನೆಗೆ ವಾಪಸ್ಸಾಗುವಂತೆ ತಮ್ಮ ಹಳ್ಳಿಯಿಂದ ಅವರಿಗೆ ಕಟ್ಟುನಿಟ್ಟಿನ ಸೂಚನೆಯು ತಲುಪಿತ್ತು. ಹೀಗಾಗಿ, ಅವರೆಲ್ಲರೂ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಮಾರ್ಚ್‌ 29ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅವರು ನನ್ನ ಹಳ್ಳಿಯಾದ ನಿಂಬಾವಳಿಗೆ ತಲುಪಿದ್ದರು.

45ರ ವಯಸ್ಸಿನ ಕವಿತ ದಿವ, ತಮ್ಮ ಮಂಡಿಯನ್ನು ತೋರಿಸುತ್ತಾ, “ಸೂರ್ಯನ ಬಿಸಿಲು ಪ್ರಖರವಾಗಿತ್ತು. ತಲೆಯ ಮೇಲೆ ಸಾಮಾನುಗಳನ್ನು ಹೊತ್ತು ನಡೆಯುತ್ತಿದ್ದ ನಾನು, ಕೆಳಗೆ ಬಿದ್ದ ಕಾರಣ, ಗಾಯಗೊಂಡೆ,” ಎಂದರು. ಆಕೆಯ ಪಕ್ಕದಲ್ಲಿ 20ರ ವಯಸ್ಸಿನ ಸ್ವಪ್ನ ವಾಘ್‌ ಕುಳಿತಿದ್ದರು. ಆಕೆಯು 60 ತಿಂಗಳ ಗರ್ಭಿಣಿ. ಮದುವೆಯಾದಾಗಿನಿಂದಲೂ ಆಕೆ ತನ್ನ ಪತಿ, 23 ವರ್ಷದ ಕಿರಣ್‌ ವಾಘ್‌ ಅವರೊಂದಿಗೆ ಇಟ್ಟಿಗೆ ಗೂಡುಗಳಲ್ಲಿ ಕೆಲಸಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ, ಈಕೆಯೂ ಸಹ ತಲೆಯ ಮೇಲೆ ಸಾಮಾನು ಸರಂಜಾಮುಗಳನ್ನು, ಗರ್ಭದಲ್ಲಿ ಜೀವವೊಂದನ್ನು ಹೊತ್ತು ಮನೆಗೆ ತೆರಳುತ್ತಿದ್ದಾರೆ.

Sapna and her husband Kiran Wagh (top left), Devendra Diva and his little daughter (top right), and Kavita Diva (bottom right) were among the group of Katkari Adivasis trying to reach their village in Palghar district from the brick kilns where they work
PHOTO • Mamta Pared

ತಾವು ಕೆಲಸಮಾಡುತ್ತಿರುವ ಇಟ್ಟಿಗೆ ಗೂಡುಗಳಿಂದ, ಪಾಲ್ಘರ್‌ ಜಿಲ್ಲೆಯ ತಮ್ಮ ಹಳ್ಳಿಯನ್ನು ತಲುಪಲು ಪ್ರಯತ್ನಿಸುತ್ತಿರುವ ಕಟ್ಕರಿ ಆದಿವಾಸಿಗಳ ಸಮೂಹದಲ್ಲಿ, ಸಪ್ನ ಮತ್ತು ಆಕೆಯ ಪತಿ ಕಿರಣ್‌ ವಾಘ್‌ (ಮೇಲಿನ ಸಾಲಿನಲ್ಲಿ ಎಡಕ್ಕೆ), ದೇವೇಂದ್ರ ದಿವ ಮತ್ತು ಆತನ ಪುಟ್ಟ ಮಗಳು (ಮೇಲಿನ ಸಾಲಿನಲ್ಲಿ ಬಲಕ್ಕೆ), ಹಾಗೂ ಕವಿತ ದಿವ (ಕೆಳಗಿನ ಸಾಲಿನಲ್ಲಿ ಬಲಕ್ಕೆ) ಸಹ ಇದ್ದಾರೆ.

ಕಾಲ್ನಡಿಗೆಯಿಂದಾಗಿ ಎಲ್ಲರೂ ಬಳಲಿದ್ದರು. ಹತ್ತಿರದಲ್ಲಿ ಎಲ್ಲಿಯಾದರೂ ಬಾವಿಯಿದೆಯೇ ಎಂದು ನನ್ನನ್ನು ಕೇಳಿದ ಅವರು, ಕೆಲವು ಯುವಕರನ್ನು ತಮ್ಮ ಬಾಟಲಿಗಳಲ್ಲಿ ನೀರು ತರಲು ಕಳುಹಿಸಿದರು. ಸ್ವಲ್ಪ ಹೊತ್ತಿಗೆ, ಹಿಂದುಳಿದಿದ್ದ 28ರ ವಯಸ್ಸಿನ ದೇವೇಂದ್ರ ದಿವ ಹಾಗೂ 25ರ ದೇವಯಾನಿ ದಿವ ಸಹ ಇಲ್ಲಿಗೆ ತಲುಪಿದರು. ತಾವು ಹೊತ್ತಿದ್ದ ಸಾಮಾನು, ಸರಂಜಾಮುಗಳು ಮತ್ತು ಜೊತೆಗಿದ್ದ ಮಗುವಿನಿಂದಾಗಿ ಇತರರಂತೆ ವೇಗವಾಗಿ ನಡೆಯುವುದು ಅವರಿಗೆ ಸಾಧ್ಯವಿರಲಿಲ್ಲ.

ನಾನು ಅವರಿಗಾಗಿ ವ್ಯವಸ್ಥೆಗೊಳಿಸಿದ ಟೆಂಪೋ ಅವರನ್ನು ಮುಂದಕ್ಕೆ ಕರೆದೊಯ್ಯಲು ಇಲ್ಲಿಗೆ ಬಂದು ತಲುಪಿತು. 2,000 ರೂ.ಗಳ ಪ್ರಯಾಣದರವನ್ನು ನಿಗದಿಪಡಿಸಲಾಯಿತು. ಅವರು ಕೇವಲ 600 ರೂ.ಗಳನ್ನು ಪಾವತಿಸಲು ಸಾಧ್ಯವಾಯಿತಷ್ಟೇ. ಉಳಿದ ಹಣವನ್ನು ನಾನು ಹೇಗೋ ನಿಭಾಯಿಸಿ, ಹೆಚ್ಚು ಸಮಯವನ್ನು ವ್ಯರ್ಥಗೊಳಿಸದೆ, ಅವರನ್ನು ಮನೆಗೆ ಕಳುಹಿಸಿದೆ.

ಆದರೆ, ಅವರು ಹಳ್ಳಿಗೆ ಹಿಂದಿರುಗಿ ಮಾಡುವುದಾದರೂ ಏನು? ಅಲ್ಲಿ ಕೆಲಸವಿಲ್ಲ. ಟೆಂಪೋಗೆ ಹಣವನ್ನು ಪಾವತಿಸಲು ಸಹ ಅವರ ಬಳಿ ಹಣವಿರಲಿಲ್ಲ. ಈ ಲಾಕ್‌ಡೌನ್‌ ಅವಧಿಯಲ್ಲಿ ಅವರು ಜೀವಿಸುವುದಾದರೂ ಹೇಗೆ? ಉತ್ತರಗಳೇ ಇಲ್ಲದ ಹಲವಾರು ಪ್ರಶ್ನೆಗಳಿದ್ದವು.

ಇವರಂತೆಯೇ ಭಾರತದಾದ್ಯಂತ ಹಲವರು ತಮ್ಮ ಹಳ್ಳಿಗಳನ್ನು ತಲುಪಲು ಕಠಿಣ ಪ್ರಯತ್ನಗಳನ್ನು ನಡೆಸಿರಬಹುದು. ಕೆಲವರು ಮನೆಯನ್ನು ತಲುಪಿ, ಇನ್ನು ಕೆಲವರು ಮಧ್ಯದಲ್ಲೇ ಸಿಲುಕಿರಬಹುದು. ಮತ್ತೆ ಕೆಲವರು ದೂರದ ತಮ್ಮ ತಲುಪುದಾಣಗಳತ್ತ ನಡೆಯುತ್ತಲೇ ಸಾಗಿರಬಹುದು.

ಅನುವಾದ: ಶೈಲಜ ಜಿ. ಪಿ .

Mamta Pared

Mamta Pared (1998-2022) was a journalist and a 2018 PARI intern. She had a Master’s degree in Journalism and Mass Communication from Abasaheb Garware College, Pune. She reported on Adivasi lives, particularly of her Warli community, their livelihoods and struggles.

Other stories by Mamta Pared
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.