ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೊಸ ಸಂಸತ್ ಭವನದಲ್ಲಿ ನಡೆಯುತ್ತಿದ್ದ ಕಲಾಪಗಳ ಮೇಲೆ ಯಾವಾಗಲೂ ಸಂಶಯದ ದೃಷ್ಟಿಯನ್ನು ಇಟ್ಟುಕೊಂಡಿದ್ದರು. ಅಲ್ಲದೇ, "ಸಂವಿಧಾನದ ದುರುಪಯೋಗವಾಗುವುದು ಕಂಡುಬಂದರೆ, ಅದನ್ನು ಸುಡುವವರಲ್ಲಿ ನಾನೇ ಮೊದಲಿರುತ್ತೇನೆ," ಎಂದು ಹೇಳಿರುವುದು ಕೂಡ ಅವರೇ.

2023 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ, ನಾಗರಿಕರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರುವ ಪ್ರಮುಖ ಹೊಸ ಮಸೂದೆಗಳನ್ನು ಪರಿ ಗ್ರಂಥಾಲಯವು ತೀಕ್ಣವಾಗಿ ಓರೆಗೆ ಹಚ್ಚಿ ನೋಡುತ್ತದೆ.

ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯಿದೆ, 2023 ರ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ಗಡಿಯ ಸಮೀಪ ಇರುವ ಅರಣ್ಯಗಳ ಬಳಕೆ ಇನ್ನು ಮುಂದೆ ಕಾನೂನು ಉಲ್ಲಂಘನೆಯಾಗುವುದಿಲ್ಲ. ಬೇರೆ ಬೇರೆ ದೇಶಗಳೊಂದಿಗೆ ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಳ್ಳುವ ಭಾರತದ ಈಶಾನ್ಯ ಭಾಗದ ಉದಾಹರಣೆಯನ್ನೇ ನೋಡಿ. ಈಶಾನ್ಯ ಭಾರತದಲ್ಲಿರುವ 'ವರ್ಗೀಕರಿಸದ ಅರಣ್ಯಗಳಲ್ಲಿ' ಶೇಕಡಾ 50 ಕ್ಕಿಂತಲೂ ಹೆಚ್ಚು ದಾಖಲೆಯಾಗಿರುವ ಅರಣ್ಯ ಪ್ರದೇಶಗಳನ್ನು ಹೊಂದಿವೆ. ಈಗ ಈ ತಿದ್ದುಪಡಿಯ ನಂತರ ಮಿಲಿಟರಿ ಮತ್ತು ಇತರ ಬಳಕೆಗಳಿಗೆ ಇವುಗಳನ್ನು ತೆಗೆದುಕೊಳ್ಳಬಹುದು.

ಡಿಜಿಟಲ್ ಗೌಪ್ಯತೆ ಜಾಗದಲ್ಲಿ, ಈಗ ಭಾರತೀಯ ನಾಗರಿಕ್ ಸುರಕ್ಷಾ (ಎರಡನೇ) ಸಂಹಿತಾ ಕಾಯಿದೆ‌ ಎಂಬ ಹೊಸ ಕಾನೂನು ಬಂದಿದೆ. ಇದನ್ನು ಬಳಸಿ ತನಿಖಾ ಸಂಸ್ಥೆಗಳು ತನಿಖೆಯ ಸಂದರ್ಭಲ್ಲಿ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವುದು ಇನ್ನು ಸುಲಭವಾಗಲಿದೆ. ಇದು ನಾಗರಿಕರ ಗೌಪ್ಯತೆಯ ಮೂಲಭೂತ ಹಕ್ಕಿನ ಮೇಲೆ ನಡೆಸುವ ಸವಾರಿಯಾಗುತ್ತದೆ. ಅದೇ ರೀತಿ ಹೊಸ ದೂರಸಂಪರ್ಕ ಕಾಯಿದೆಯೂ ದೂರಸಂಪರ್ಕ ಸೇವೆಗಳ ಅಧಿಕೃತ ಘಟಕದಿಂದ ಪರಿಶೀಲಿಸಬಹುದಾದ ಬಯೋಮೆಟ್ರಿಕ್ ಆಧಾರಿತ ಗುರುತಿನ ಬಳಕೆಯ ಬಗ್ಗೆ ಹೇಳುತ್ತದೆ. ಬಯೋಮೆಟ್ರಿಕ್ ದಾಖಲೆಗಳ ಸ್ವಾಧೀನ ಮತ್ತು ಶೇಖರಣೆಯು ಗೌಪ್ಯತೆ ಮತ್ತು ಸೈಬರ್‌ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಈ ಹೊಸ ಕಾಯಿದೆಗಳನ್ನು 2023 ರಲ್ಲಿ ಭಾರತದ ಸಂಸತ್ ಅಧಿವೇಶನಗಳಲ್ಲಿ ಅಂಗೀಕರಿಸಲಾಯಿತು. 72 ವರ್ಷಗಳ ಸಂಸತ್ತಿನ‌ ಇತಿಹಾಸದಲ್ಲಿ ಮೊದಲ ಬಾರಿಗೆ, ಡಿಸೆಂಬರ್ 2023 ರಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ 146 ವಿರೋಧ ಪಕ್ಷದ ಸದಸ್ಯರನ್ನು (ಸಂಸದರು) ಅಮಾನತು ಮಾಡಿ ಹೊರಹಾಕಲಾಯಿತು. ಒಂದೇ ಅಧಿವೇಶನದಲ್ಲಿ ಅತ್ಯಧಿಕ ಸಂಖ್ಯೆಯ ಅಮಾನತುಗಳು ನಡೆದವು.

ರಾಜ್ಯಸಭೆಯ 46 ಮತ್ತು ಲೋಕಸಭೆಯ 100 ಸದಸ್ಯರನ್ನು ಅಮಾನತುಗೊಳಿಸಿದ್ದರಿಂದ, ಕ್ರಿಮಿನಲ್ ಕಾನೂನು ತಿದ್ದುಪಡಿಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಪ್ರತಿಪಕ್ಷಗಳ ಕುರ್ಚಿಗಳು ಖಾಲಿ ಖಾಲಿಯಾಗಿ ಕಾಣುತ್ತಿದ್ದವು.

ಭಾರತೀಯ ಕ್ರಿಮಿನಲ್ ಕಾನೂನುಗಳ ಸುಧಾರಣೆ ಮತ್ತು ವಸಾಹತುಶಾಹಿ ಕಾನೂನುಗಳನ್ನು ಅಳಿಸುವ ಉದ್ದೇಶಗಳಿಂದ ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಪರಿಚಯಿಸಲಾಯಿತು. ಈ ಹಿಂದೆ ಇದ್ದ ಭಾರತೀಯ ದಂಡ ಸಂಹಿತೆ, 1860; ಕ್ರಿಮಿನಲ್ ಪ್ರೊಸೀಜರ್ ಕೋಡ್, 1973; ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್, 1872 - ಇವುಗಳನ್ನು ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023 (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023 (ಬಿಎನ್‌ಎಸ್‌ಎಸ್), ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ಬಿಲ್, 2023 (ಬಿಎಸ್‌ಬಿ) ಎಂದು ಕ್ರಮವಾಗಿ ಬದಲಿಸಲಾಗಿದೆ. 13 ದಿನಗಳಲ್ಲಿ ಈ ಮೂರೂ ಮಸೂದೆಗಳು ಡಿಸೆಂಬರ್ 25 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದವು ಮತ್ತು ಜುಲೈ 1, 2024 ರಂದು ಜಾರಿಗೆ ಬರಲಿವೆ

ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023 ( ಬಿಎನ್‌ಎಸ್ ) ಕಾಯಿದೆಯು ಮುಖ್ಯವಾಗಿ ಸದ್ಯ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಪುನರ್‌ ನಿರೂಪಿಸುತ್ತದೆ, ಬಿಎನ್‌ಎಸ್ ಮಸೂದೆಯ ಎರಡನೇ ಪುನರಾವೃತ್ತಿಯಲ್ಲಿ ತಿದ್ದುಪಡಿಗಳನ್ನು ತರಲಾಗಿದೆ. ಈ ಮೂಲಕ ಹಿಂದಿನ ಭಾರತೀಯ ದಂಡ ಸಂಹಿತೆ, 1860 ( ಐಪಿಸಿ ) ಯಿಂದ ಇದು ಭಿನ್ನವಾಗಿರಲಿದೆ.

ಈ ಕಾಯಿದೆಯು ದೇಶದ್ರೋಹದ ಅಪರಾಧಕ್ಕೆ ಸಂಬಂಧಿಸಿದ ಕಾನೂನನ್ನು ಹಾಗೆಯೇ ಉಳಿಸಿಕೊಂಡು (ಈಗ ಹೊಸ ಹೆಸರು ಇಡಲಾಗಿದೆ) "ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಚಟುವಟಿಕೆಗಳು" ಎಂಬುದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಪ್ರಸ್ತಾವಿತ ಸೆಕ್ಷನ್ 152 ದೇಶದ್ರೋಹದ ಆರೋಪಗಳನ್ನು ಪ್ರಚೋದಿಸುವ ನಿಬಂಧನೆಗಳಂತೆ "ಹಿಂಸಾಚಾರಕ್ಕೆ ಪ್ರಚೋದನೆ" ಅಥವಾ "ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ" ಎಂಬ ಹಿಂದಿನ ಮಾನದಂಡಗಳನ್ನು ಕೂಡ ಮೀರಿದೆ. ಬದಲಾಗಿ, ಅದು "ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ, ವಿಭಜನಕಾರಿ ನಡೆ ಅಥವಾ ಸಶಸ್ತ್ರ ದಂಗೆ, ಅಥವಾ ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸುವ" ಯಾವುದೇ ಕೃತ್ಯವನ್ನೂ ಅಪರಾಧ ಎಂದು ಪರಿಗಣಿಸುತ್ತದೆ.

ಬಿಎನ್‌ಎಸ್ ಕಾಯಿದೆಯ ಎರಡನೇ ಪುನರಾವೃತ್ತಿಯಲ್ಲಿನ ಮತ್ತೊಂದು ಗಮನಾರ್ಹ ತಿದ್ದುಪಡಿಯೆಂದರೆ ಐಪಿಸಿ ಸೆಕ್ಷನ್ 377ನ್ನು ಕೈಬಿಡಲಾಗಿದೆ. ಈ ಸೆಕ್ಷನ್‌ ಹೀಗೆ ಹೇಳುತ್ತದೆ: "ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿ ಸ್ವಯಂಪ್ರೇರಣೆಯಿಂದ ದೈಹಿಕ ಸಂಭೋಗವನ್ನು ನಡೆಸುವವರು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ [...]." ಆದರೆ, ಹೊಸ ಕಾಯಿದೆಯಲ್ಲಿ ಇತರ ಲಿಂಗಗಳ ವ್ಯಕ್ತಿಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಭದ್ರತೆಯನ್ನು ನೀಡುವ ಯಾವುದೇ ಅಗತ್ಯ ನಿಬಂಧನೆಗಳು ಇಲ್ಲ.

ಬಿಎನ್‌ಎಸ್‌ಎಸ್‌ ಕಾಯಿದೆ ಎಂದು ಕರೆಯಲಾದ 2023 ರ ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಕಾಯಿದೆಯು 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡನ್ನು ಮೀರಿಸುತ್ತದೆ. ಈ ಕಾಯಿದೆಯು ಆರಂಭಿಕ 15 ದಿನಗಳಿಂದ ಗರಿಷ್ಟ 90 ದಿನಗಳ ವರೆಗೆ ಪೊಲೀಸ್ ಕಸ್ಟಡಿಯಲ್ಲಿ ಬಂಧನದಲ್ಲಿಡುವ ಅವಧಿಯನ್ನು ವಿಸ್ತರಿಸುತ್ತದೆ. ಬಂಧನದ ವಿಸ್ತೃತ ಅವಧಿಯು ನಿರ್ದಿಷ್ಟವಾಗಿ ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯಂತಹ ಕಠಿಣ ಅಪರಾಧಗಳಿಗೆ ಅನ್ವಯವಾಗುತ್ತದೆ.

ಇದಲ್ಲದೆ, ಈ ಕಾಯಿದೆಯು ತನಿಖೆಯ ಸಮಯದಲ್ಲಿ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ. ಇದು ಗೌಪ್ಯತೆಯ ಹಕ್ಕಿನ ಉಲ್ಲಂಘನೆ.

ಭಾರತೀಯ ಸಾಕ್ಷ್ಯ (ಎರಡನೇ) ಕಾಯಿದೆ , 2023, ಬೃಹತ್‌ ಇಂಡಿಯನ್‌ ಎವಿಡೆನ್ಸ್‌ ಆಕ್ಟ್‌ 1872ರ ಸಂರಚನೆಯನ್ನು ಕನಿಷ್ಠ ತಿದ್ದುಪಡಿಗಳೊಂದಿಗೆ ಉಳಿಸಿಕೊಂಡಿದೆ.

2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯಿದೆಯನ್ನು ಅರಣ್ಯ (ಸಂರಕ್ಷಣೆ) ಕಾಯಿದೆ, 1980 ರ ಬದಲಿಗೆ ತರಲಾಗಿದೆ. ತಿದ್ದುಪಡಿ ಮಾಡಿದ ಕಾಯಿದೆ ಯ ನಿಬಂಧನೆಗಳ ಅಡಿಯಲ್ಲಿ ಕೆಲವು ರೀತಿಯ ಭೂ-ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಈ ಕೆಳಗಿನವು ಸೇರಿವೆ:

"(ಎ) ರೈಲು ಮಾರ್ಗದ ಅಥವಾ ಸರ್ಕಾರವು ನಿರ್ವಹಿಸುತ್ತಿರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಅರಣ್ಯ ಭೂಮಿಯು ಜನ ವಸತಿಗೆ ಅವಕಾಶವನ್ನು ನೀಡುತ್ತದೆ, ಅಥವಾ ರೈಲುಮಾರ್ಗ, ಮತ್ತು ರಸ್ತೆಬದಿಯ ಸೌಕರ್ಯವನ್ನು‌ ಕಲ್ಪಿಸಲು ಪ್ರತಿ ಸಂದರ್ಭದಲ್ಲಿ ಗರಿಷ್ಠ 0.10 ಹೆಕ್ಟೇರ್ ವರೆಗೆ ಅವಕಾಶವಿದೆ;

(ಬಿ) ಉಪ-ವಿಭಾಗ (1) ಅಧ್ಯಾಯ (ಎ) ಅಥವಾ ಷರತ್ತು (ಬಿ) ನಲ್ಲಿ ನಿರ್ದಿಷ್ಟಪಡಿಸದ ಭೂಮಿಯಲ್ಲಿ ಅಂತಹ ಮರ, ಮರ ನೆಡುವಿಕೆ ಅಥವಾ ಮರು ಅರಣ್ಯೀಕರಣ; ಮತ್ತು

(ಸಿ) ಅಂತಹ ಅರಣ್ಯ ಭೂಮಿ:

(i) ಅಂತರಾಷ್ಟ್ರೀಯ ಗಡಿಗಳು ಅಥವಾ ನಿಯಂತ್ರಣ ರೇಖೆ ಅಥವಾ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ನೂರು ಕಿಲೋಮೀಟರ್ ದೂರದಲ್ಲಿ ನೆಲೆಗೊಂಡಿರುವಂತೆ, ರಾಷ್ಟ್ರೀಯ ಪ್ರಾಮುಖ್ಯತೆ ಇರುವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರ್ಯತಂತ್ರದ ರೇಖೀಯ ಯೋಜನೆಯ ನಿರ್ಮಾಣಕ್ಕಾಗಿ ಬಳಸುವುದನ್ನು ಪ್ರಸ್ತಾಪಿಸಲಾಗಿದೆ; ಅಥವಾ

(ii) ಭದ್ರತಾ ಸಂಬಂಧಿತ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಬಳಸಲು ಪ್ರಸ್ತಾಪಿಸಲಾದ ಹತ್ತು ಹೆಕ್ಟೇರ್‌ಗಳವರೆಗೆ; ಅಥವಾ

(iii) ರಕ್ಷಣಾ ಸಂಬಂಧಿತ ಯೋಜನೆಯ ನಿರ್ಮಾಣಕ್ಕಾಗಿ ಅಥವಾ ಅರೆಸೇನಾ ಪಡೆಗಳಿಗೆ ಅಥವಾ ಸಾರ್ವಜನಿಕ ಬಳಕೆಯ ಯೋಜನೆಗಳಿಗೆ ಒಂದು ಶಿಬಿರವನ್ನು ನಿರ್ಮಿಸಲು ಬಳಸಲು ಪ್ರಸ್ತಾಪಿಸಲಾಗಿದೆ [...]."

ಗಮನಾರ್ಹವಾಗಿ, ಈ ತಿದ್ದುಪಡಿಯು ಹವಾಮಾನ ಬಿಕ್ಕಟ್ಟು ಮತ್ತು ಪರಿಸರ ನಾಶದಂತ ಪರಿಸರ ಪರ ಕಾಳಜಿಗಳ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ.

ಸಂಸತ್ತಿನಲ್ಲಿ ದೂರಸಂಪರ್ಕ ಕಾಯ್ದೆ 2023 , ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆ 2023 ( ಡಿಪಿಡಿಪಿ ಕಾಯಿದೆ ) ಮತ್ತು ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ 2023 - ಇವು ಅಂಗೀಕಾರವಾಗಿ ಭಾರತದ ಡಿಜಿಟಲ್ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುವ ಕೆಲವು ಶಾಸಕಾಂಗ ಕ್ರಮಗಳನ್ನು ಪರಿಚಯಿಲಾಗಿದೆ. ನಾಗರಿಕರ ಡಿಜಿಟಲ್ ಹಕ್ಕುಗಳು ಮತ್ತು ಸಾಂವಿಧಾನಿಕವಾಗಿ ರಕ್ಷಿಸಲ್ಪಡುವ ಗೌಪ್ಯತೆ ಹಕ್ಕುಗಳ ಮೇಲೆ ಪ್ರಭಾವ ಬೀರಲಿವೆ. ಆನ್‌ಲೈನ್ ಕಂಟೆಂಟನ್ನು ನಿಯಂತ್ರಿಸುವ ಮತ್ತು ದೂರಸಂಪರ್ಕ ಜಾಲವನ್ನು ನಿಯಂತ್ರಕ ಸಾಧನವಾಗಿ ಬಳಸಿ ಬಲವಂತವಾಗಿ ಸ್ಥಗಿತಗೊಳಿಸುವ ಅವಕಾಶವೂ ಇದರಿಂದ ಸಿಗಲಿದೆ.

ವಿರೋಧ ಪಕ್ಷಗಳ ದನಿ ಇಲ್ಲದ ಕಾರಣ, ದೂರಸಂಪರ್ಕ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡ ಕೇವಲ ನಾಲ್ಕೇ ನಾಲ್ಕು ದಿನಗಳ ನಂತರ ಡಿಸೆಂಬರ್ 25 ರಂದು ರಾಷ್ಟ್ರಪತಿಗಳ ಮೇಜಿನ ಮೇಲೆ ಬಿದ್ದು ತಕ್ಷಣದ ಒಪ್ಪಿಗೆಯನ್ನು ಪಡೆಯಿತು. ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885 ಮತ್ತು ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್, 1933 ಅನ್ನು ಸುಧಾರಿಸುವ ಹೆಸರಿನಲ್ಲಿ, ಈ ಕಾಯಿದೆಯ ಮೂಲಕ ನಿಯಂತ್ರಕ ಚೌಕಟ್ಟುಗಳನ್ನು ಆಧುನೀಕರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಇಂತವುಗಳಲ್ಲಿ:

“(a) [...] ನಿರ್ದಿಷ್ಟ ಸಂದೇಶಗಳನ್ನು ಅಥವಾ ನಿರ್ದಿಷ್ಟ ಸಂದೇಶಗಳ ಗುಂಪನ್ನು ಸ್ವೀಕರಿಸಲು ಬಳಕೆದಾರರ ಪೂರ್ವಾನುಮತಿ;

(ಬಿ) ಪೂರ್ವ ಸಮ್ಮತಿಯಿಲ್ಲದೆ ಬಳಕೆದಾರರು ನಿರ್ದಿಷ್ಟ ಸಂದೇಶಗಳನ್ನು ಅಥವಾ ನಿರ್ದಿಷ್ಟ ಸಂದೇಶಗಳ ಗುಂಪನ್ನು ಸ್ವೀಕರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಒಂದು ಅಥವಾ ಹೆಚ್ಚಿನ ರೆಜಿಸ್ಟರ್‌ಗಳ ತಯಾರಿಕೆ ಮತ್ತು ನಿರ್ವಹಣೆಯನ್ನು “ಅಡಚಣೆ ಮಾಡದ” ರಿಜಿಸ್ಟರ್ ಎಂದು ಕರೆಯಲಾಗುವುದು; ಅಥವಾ

(ಸಿ) ಈ ವಿಭಾಗದಲ್ಲಿ ವಿರುದ್ಧ ಸ್ವೀಕರಿಸಿದ ಯಾವುದೇ ಮಾಲ್‌ವೇರ್ ಅಥವಾ ನಿರ್ದಿಷ್ಟ ಸಂದೇಶಗಳನ್ನು ವರದಿ ಮಾಡಲು ಬಳಕೆದಾರರನ್ನು ಸಕ್ರಿಯಗೊಳಿಸುವ ಕಾರ್ಯವಿಧಾನ.

ಅಪರಾಧ ಚಟುವಟಿಕೆಗಳ ಪ್ರಚೋದನೆಗಳನ್ನು ತಡೆಗಟ್ಟಲು ಸಾರ್ವಜನಿಕ ತುರ್ತು ಸಂದರ್ಭಗಳಲ್ಲಿ "ಯಾವುದೇ ದೂರಸಂಪರ್ಕ ಸೇವೆ ಅಥವಾ ದೂರಸಂಪರ್ಕ ಜಾಲವನ್ನು ಅಧಿಕೃತ ಘಟಕದಿಂದ ತಾತ್ಕಾಲಿಕ ಸ್ವಾಧೀನಪಡಿಸಿಕೊಳ್ಳಲು" ಈ ಕಾಯಿದೆಯು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ.

ಸಾರ್ವಜನಿಕ ಸುರಕ್ಷತೆಯ ಹೆಸರಿನಲ್ಲಿ ಟೆಲಿಕಾಂ ನೆಟ್‌ವರ್ಕ್‌ನಾದ್ಯಂತ ಸಂವಹನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಈ ನಿಬಂಧನೆಯು ಅಧಿಕಾರಿಗಳಿಗೆ ಗಣನೀಯ ಅಧಿಕಾರವನ್ನು ನೀಡುತ್ತದೆ.

ಮೂಲ ಕಾಯಿದೆಗಳಲ್ಲಿ ತಂದಿರುವ ಈ ಸುಧಾರಣೆಗಳನ್ನು ದೇಶದ ಗೃಹ ಸಚಿವರು ಘೋಷಿಸಿದಂತೆ 'ನಾಗರಿಕ ಕೇಂದ್ರಿತ' ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಶದ ನಾಗರಿಕರಾಗಿರುವ ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳು 'ವರ್ಗೀಕರಿಸದ ಅರಣ್ಯಗಳ' ಬಳಿ ವಾಸಿಸುತ್ತಾರೆ. ಇವರು ತಮ್ಮ ಜೀವನೋಪಾಯ, ಸಂಸ್ಕೃತಿ ಮತ್ತು ಚರಿತ್ರೆಯನ್ನು ಕಳೆದುಕೊಳ್ಳಬಹುದು. ಹೊಸ ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಅವರ ಹಕ್ಕುಗಳಿಗೆ ಯಾವುದೇ ರಕ್ಷಣೆಯಿಲ್ಲ.

ಕ್ರಿಮಿನಲ್ ಕಾನೂನು ತಿದ್ದುಪಡಿಗಳು ನಾಗರಿಕರ ಡಿಜಿಟಲ್ ಹಕ್ಕುಗಳ ಮೇಲೆ ಮತ್ತು ಸಾಂವಿಧಾನಿಕವಾಗಿ ರಕ್ಷಿಸಲ್ಪಡುವ ಅವರ ಗೌಪ್ಯತೆಯ ಹಕ್ಕುಗಳ ಮೇಲೆ ಪರಿಣಾಮ ಬೀರಲಿವೆ. ಈ ಕಾಯಿದೆಗಳು ನಾಗರಿಕರ ಹಕ್ಕುಗಳು ಮತ್ತು ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳ ನಡುವಿನ ಸಮತೋಲನವನ್ನು ಕಾಪಾಡುವಲ್ಲಿ ಸವಾಲುಗಳನ್ನು ಒಡ್ಡುತ್ತವೆ.

ದೇಶದ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿಯು ಕೇಂದ್ರ ಸರ್ಕಾರದ ಪ್ರಕಾರ, 'ನಾಗರಿಕ-ಕೇಂದ್ರಿತ' ಎಂಬುದು ಏನನ್ನು ರೂಪಿಸುತ್ತದೆ ಎಂಬುದನ್ನು ಕಂಡುಕೊಳ್ಳುವ ಆಸಕ್ತಿಯನ್ನು ಖಂಡಿತವಾಗಿಯೂ ಹೊಂದಿರುತ್ತಾರೆ.

ಕವರ್ ವಿನ್ಯಾಸ: ಸ್ವದೇಶ ಶರ್ಮಾ

ಅನುವಾದ: ಚರಣ್‌ ಐವರ್ನಾಡು

PARI Library

The PARI Library team of Dipanjali Singh, Swadesha Sharma and Siddhita Sonavane curate documents relevant to PARI's mandate of creating a people's resource archive of everyday lives.

Other stories by PARI Library
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad