ಅದು ಭಾನುವಾರದ ಮುಂಜಾನೆ, ಆದರೆ ಜ್ಯೋತಿರಿಂದ್ರ ನಾರಾಯಣ ಲಾಹಿರಿ ಮಾತ್ರ ಕೆಲಸದಲ್ಲಿ ತೊಡಗಿದ್ದರು. ಹೂಗ್ಲಿ ಜಿಲ್ಲೆಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ ಮೂಲೆಯ ಕೋಣೆಯೊಂದರಲ್ಲಿ 50 ವರ್ಷ ಪ್ರಾಯದ ಜ್ಯೋತಿರಿಂದ್ರ 1778 ರಲ್ಲಿ ಮೇಜರ್ ಜೇಮ್ಸ್ ರೆನ್ನೆಲ್ ಸಿದ್ಧಪಡಿಸಿದ ಸುಂದರಬನ್ಸ್‌ನ ಮೊದಲ ನಕ್ಷೆಯನ್ನು ನೋಡುತ್ತಿದ್ದರು.

"ಬ್ರಿಟಿಷರು ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ರಚಿಸಲ್ಪಟ್ಟ ಸುಂದರಬನ್ಸ್‌ನ ಮೊದಲ ಅಧಿಕೃತ ನಕ್ಷೆ ಇದು. ಈ ನಕ್ಷೆಯು ಕೋಲ್ಕತ್ತಾದವರೆಗೆ ವಿಸ್ತರಿಸಿರುವ ಮ್ಯಾಂಗ್ರೋವ್‌ಗಳನ್ನು ತೋರಿಸುತ್ತದೆ. ಈಗ ತುಂಬಾ ಬದಲಾಗಿದೆ,” ಎಂದು ನಕ್ಷೆಯ ಮೇಲೆ ಬೆರಳಾಡಿಸುತ್ತಾ ಲಾಹಿರಿ ಹೇಳುತ್ತಾರೆ. ಭಾರತ ಮತ್ತು ಬಾಂಗ್ಲಾದೇಶದ ಆಚೆಗೂ, ಪ್ರಪಂಚದ ಅತಿ ದೊಡ್ಡ ಮ್ಯಾಂಗ್ರೋವ್‌ಗಳ ತಾಣವಾದ ಸುಂದರಬನ್ಸ್ ತನ್ನ ಅಪಾರ ಜೀವವೈವಿಧ್ಯಕ್ಕೆ, ಅಷ್ಟು ಮಾತ್ರವಲ್ಲ, ರಾಯಲ್ ಬೆಂಗಾಲ್ ಹುಲಿಗಳಿಗೂ (ಪ್ಯಾಂಥೆರಾ ಟೈಗ್ರಿಸ್) ಹೆಸರುವಾಸಿಯಾಗಿದೆ.

ಅವರ ಕೋಣೆಯ ಗೋಡೆಗಳಲ್ಲಿರುವ ಕವಾಟುಗಳಲ್ಲಿ ಸುಂದರಬನ್ಸ್‌ನ ಸಸ್ಯ ಪ್ರಭೇದ - ಪ್ರಾಣಿಗಳಿಗೆ, ದೈನಂದಿನ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು, ನಕ್ಷೆಗಳು, ಅಟ್ಲಾಸ್‌ಗಳು ಮತ್ತು ಇಂಗ್ಲಿಷ್ ಹಾಗೂ ಬೆಂಗಾಲಿಯಲ್ಲಿರುವ ಮಕ್ಕಳ ಪುಸ್ತಕಗಳು ತುಂಬಿವೆ. 2009 ರಲ್ಲಿ ಐಲಾ ಚಂಡಮಾರುತವು ಈ ಪ್ರದೇಶದಲ್ಲಿ ವಿನಾಶದ ಜಾಡನ್ನು ಹರಡಿದ ನಂತರ ಅವರು ಸುಂದರಬನ್ಸ್ ಕುರಿತ ತ್ರೈಮಾಸಿಕ ಪತ್ರಿಕೆ 'ಸುಧು ಸುಂದರಬನ್ ಚರ್ಚಾ'ವನ್ನು ಆರಂಬಿಸಿದರು.

“ನಾನು ಪ್ರದೇಶದ ಸ್ಥಿತಿಗತಿಯನ್ನು ನೋಡಲು ಅನೇಕ ಬಾರಿ ಸುತ್ತಾಡಿದ್ದೇನೆ. ತುಂಬಾ ಭಯಾನಕವಾಗಿತ್ತು ಅದು,'' ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು, ಜನರು ಮನೆಮಠ ಕಳೆದುಕೊಂಡಿದ್ದರು, ಹೆಚ್ಚಿನ ಪುರುಷರು ಬೇರೆಕಡೆ  ಹೋಗಿದ್ದರು ಮತ್ತು ಎಲ್ಲವನ್ನೂ ಮಹಿಳೆಯರೇ ನೋಡಿಕೊಳ್ಳಬೇಕಾಗಿತ್ತು. ಜನರ ಇಡೀ ಭವಿಷ್ಯ ನದಿಯ ಒಡ್ಡುಗಳು ಉಳಿಯುತ್ತದೆಯೇ ಅಥವಾ ಕುಸಿಯುತ್ತದೆಯೇ ಎಂಬುದರ ಮೇಲೆ ನಿಂತಿತ್ತು," ಎನ್ನುತ್ತಾರೆ. ಲಾಹಿರಿ ಅವರ ಪ್ರಕಾರ ಈ ದುರಂತದ ಕುರಿತು ಮಾಧ್ಯಮಗಳು ಮಾಡಿದ ವರದಿಗಳು ತುಂಬಾ ಕಡಿಮೆ ಮತ್ತು ಮೇಲಿಂದ ಮೇಲೆ ಮಾಡಿದ ವರದಿಗಳಾಗಿದ್ದವು.“ ಮಾಧ್ಯಮಗಳು ಸುಂದರಬನ್ಸ್ ಬಗ್ಗೆ ಇರುವ ಸ್ಟೀರಿಯೊಟೈಪ್‌ಗಳನ್ನು ಮರುಬಳಕೆ ಮಾಡುತ್ತದೆ. ಅದರಲ್ಲೂ, ನೀವು ಹುಲಿ ದಾಳಿ ಅಥವಾ ಮಳೆಯ ಬಗ್ಗೆ ನೋಡಬಹುದು. ಮಳೆಯಾಗದಿದ್ದಾಗ ಅಥವಾ ಪ್ರವಾಹಕ್ಕೆ ಸಿಲುಕದಿದ್ದಾಗ, ಸುಂದರ್‌ಬನ್ಸ್ ಅಲ್ಪಸ್ವಲ್ಪ ಸುದ್ದಿಯಲ್ಲಿರುತ್ತದೆ. ವಿಪತ್ತು, ವನ್ಯಜೀವಿ ಮತ್ತು ಪ್ರವಾಸೋದ್ಯಮ - ಇವುಗಳ ಮೇಲಷ್ಟೇ ಮಾಧ್ಯಮದ ಆಸಕ್ತಿ," ಎಂದು ಅವರು ಹೇಳುತ್ತಾರೆ.

Lahiri holds the first map of the Sundarbans (left) prepared by Major James Rennel in 1778. In his collection (right) are many books on the region
PHOTO • Urvashi Sarkar
Lahiri holds the first map of the Sundarbans (left) prepared by Major James Rennel in 1778. In his collection (right) are many books on the region
PHOTO • Urvashi Sarkar

ಎಡ: ಲಾಹಿರಿಯವರ ಬಳಿ ಇರುವ ಬ್ರಿಟಿಷರು ತಾವು ಮಾಡಿದ ಸಮೀಕ್ಷೆಯ ಆಧಾರದ ಮೇಲೆ ಮಾಡಿದ 1778 ರ ಸುಂದರಬನ್ಸ್‌ನ ಮೊದಲ ನಕ್ಷೆ. ಬಲ: ಲಾಹಿರಿಯವರ ಸಂಗ್ರಹದಲ್ಲಿ ಸುಂದರಬನ್ಸ್‌ನ ಕುರಿತು ನೂರಾರು ಪುಸ್ತಕಗಳಿವೆ

Lahiri has been collecting news (left) about the Sundarbans for many years. 'When it isn’t raining or flooded, the Sundarbans is rarely in the news,' he says. He holds up issues of Sudhu Sundarban Charcha (right), a magazine he founded in 2010 to counter this and provide local Indian and Bangladeshi perspectives on the region
PHOTO • Urvashi Sarkar
Lahiri has been collecting news (left) about the Sundarbans for many years. 'When it isn’t raining or flooded, the Sundarbans is rarely in the news,' he says. He holds up issues of Sudhu Sundarban Charcha (right), a magazine he founded in 2010 to counter this and provide local Indian and Bangladeshi perspectives on the region
PHOTO • Urvashi Sarkar

ಲಾಹಿರಿ ಹಲವು ವರ್ಷಗಳಿಂದ ಸುಂದರಬನದ ಬಗ್ಗೆ ಬರುವ ಸುದ್ದಿಗಳನ್ನು (ಎಡ) ಸಂಗ್ರಹಿಸುತ್ತಿದ್ದಾರೆ. 'ಮಳೆಯಾಗದೆ ಇದ್ದಾಗ ಅಥವಾ ಪ್ರವಾಹಕ್ಕೆ ಒಳಗಾದಾಗ, ಸುಂದರಬನ್ಸ್ ಸ್ವಲ್ಪ ಸುದ್ದಿಯಾಗುತ್ತದೆ' ಎಂದು ಅವರು ಹೇಳುತ್ತಾರೆ. ಈ ಸಮಸ್ಯೆಯನ್ನು ಎದುರಿಸಲು, ಈ ಪ್ರದೇಶದ ಬಗ್ಗೆ ಸ್ಥಳೀಯ ಭಾರತೀಯರಿಗೆ ಮತ್ತು ಬಾಂಗ್ಲಾದೇಶದವರಿಗೆ ಅರಿವನ್ನು ನೀಡಲು 2010 ರಲ್ಲಿ ಸ್ಥಾಪಿಸಿದ ಸುಧು ಸುಂದರಬನ್ ಚರ್ಚಾ (ಬಲ) ಪತ್ರಿಕೆಯ ಸಂಚಿಕೆಗಳನ್ನು ಹಿಡಿದಿರುವ ಲಾಹಿರಿ

ಅವರು ಭಾರತೀಯ ಮತ್ತು ಬಾಂಗ್ಲಾದೇಶೀ - ಎರಡೂ ದೃಷ್ಟಿಕೋನಗಳಿಂದ ಈ ಪ್ರದೇಶದ ಸಮಗ್ರತೆಯನ್ನು ಕಟ್ಟಿಕೊಡಲು ಸುಧು ಸುಂದರಬನ್ ಚರ್ಚಾವನ್ನು ಸ್ಥಾಪಿಸಿದರು (‘ಕೇವಲ ಸುಂದರ್‌ ಬನ್‌ ಕುರಿತಾದ ಸಂವಾದ’ ಎಂದು ಅನುವಾದಿಸಬಹುದು). 2010ರಿಂದ ಈ ನಿಯತಕಾಲಿಕದ 49 ಸಂಚಿಕೆಗಳನ್ನು ಪ್ರಕಟಿಸಲಾಗಿದೆ ಮತ್ತು 50ನೇ ಸಂಚಿಕೆಯನ್ನು ನವೆಂಬರ್ 2023ರಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. “ಹಿಂದಿನ ಸಂಚಿಕೆಗಳು ವೀಳ್ಯದೆಲೆ ಹೇಗೆ ಬೆಳೆಸುತ್ತಾರೆ, ಸುಂದರಬನ್ಸ್‌ನ ನಕ್ಷೆಗಳು, ಹೆಣ್ಣು ಮಕ್ಕಳ ಜೀವನ, ಇವೆಲ್ಲದರ ಮೇಲೆ ಕೇಂದ್ರೀಕೃತವಾಗಿದ್ದವು. ಬೇರೆ ಬೇರೆ ಹಳ್ಳಿಗಳ ವಿವರಗಳು, ಕಡಲುಗಳ್ಳರ ಬಗ್ಗೆ ಮತ್ತು ಮಳೆಯ ಪ್ರಮಾಣದ ಬಗ್ಗೆ ಕೂಡಾ ಸಂಚಿಕೆಗಳಲ್ಲಿ ಪ್ರಕಟಿಸಲಾಗಿತ್ತು," ಎಂದು ಅವರು ಹೇಳುತ್ತಾರೆ. ಒಂದು ಸಂಚಿಕೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಪತ್ರಕರ್ತರ ದೃಷ್ಟಿಕೋನದಲ್ಲಿ ಸುಂದರಬನ್‌ಗಳ ಬಗ್ಗೆ ಮಾಧ್ಯಮಗಳು ಹೇಗೆ ಸುದ್ದಿ ಮಾಡುತ್ತವೆ ಎಂಬುದನ್ನು ಸಹ ಚರ್ಚಿಸಲಾಗಿದೆ.

ಏಪ್ರಿಲ್ 2023ರಲ್ಲಿ ಪ್ರಕಟವಾದ ನಿಯತಕಾಲಿಕದ ಇತ್ತೀಚಿನ, ಅಂದರೆ 49 ನೇ ಸಂಚಿಕೆಯನ್ನು  ಮ್ಯಾಂಗ್ರೋವ್‌ ಕಾಡುಗಳುಳ ಮತ್ತು ಹುಲಿಗಳಿಗೆ ಸಮರ್ಪಿಸಲಾಗಿದೆ. "ಸುಂದರಬನಗಳು ಬಹುಶಃ ಹುಲಿಗಳು ವಾಸಿಸುವ ವಿಶ್ವದ ಏಕೈಕ ಮ್ಯಾಂಗ್ರೋವ್ ಕಾಡುಗಳು. ಆದ್ದರಿಂದ, ನಾವು ಇದರ ಸುತ್ತಲಿನ ಸಮಸ್ಯೆಯನ್ನು ಯೋಜಿಸಿದ್ದೇವೆ," ಎಂದು ಅವರು ಹೇಳುತ್ತಾರೆ. 50 ನೇ ಸಂಚಿಕೆಯಲ್ಲಿ ಸಹ ಹವಾಮಾನ ಬದಲಾವಣೆ ಮತ್ತು ಏರುತ್ತಿರುವ ಸಮುದ್ರ ಮಟ್ಟಗಳು ಸುಂದರಬನ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ವ್ಯಾಪಕವಾಗಿ ಸಂಶೋಧಿಸಿದ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಲೇಖನಗಳನ್ನು ಪ್ರಕಟಿಸಲಾಗಿದೆ.

"ನಮ್ಮ ಓದುಗರು ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ನಿರ್ದಿಷ್ಟ ಡೇಟಾ ಅಥವಾ ಮಾಹಿತಿಯನ್ನು ಹುಡುಕುವ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಆ ಪ್ರದೇಶದಲ್ಲಿ ಪ್ರಾಮಾಣಿಕವಾಗಿ ಆಸಕ್ತಿವಹಿಸಿ ಕೆಲಸ ಮಾಡುವವರು. ನಮ್ಮ ಸಮಸ್ಯೆಗಳನ್ನು ಓದುವ 80 ವರ್ಷ ವಯಸ್ಸಿನವರೂ ಇದ್ದಾರೆ,”ಎಂದು ಲಾಹಿರಿ ಹೇಳುತ್ತಾರೆ.

ಪ್ರತಿ ತ್ರೈಮಾಸಿಕಕ್ಕೊಮ್ಮೆ ಪತ್ರಿಕೆಯ ಅಂದಾಜು 1,000 ಪ್ರತಿಗಳನ್ನು ಪ್ರಕಟಿಸಲಾಗುತ್ತದೆ. “ನಾವು 520-530 ಸಾಮಾನ್ಯ ಚಂದಾದಾರರನ್ನು, ಹೆಚ್ಚಾಗಿ ಪಶ್ಚಿಮ ಬಂಗಾಳದವರನ್ನು ಹೊಂದಿದ್ದೇವೆ. ಪತ್ರಿಕೆಯನ್ನು ಅವರಿಗೆ ಕೊರಿಯರ್ ಮಾಡಲಾಗಿದೆ. ಸುಮಾರು 50 ಪ್ರತಿಗಳು ಬಾಂಗ್ಲಾದೇಶಕ್ಕೆ ಹೋಗುತ್ತವೆ. ನಾವು ಈ ಪ್ರತಿಗಳನ್ನು ನೇರವಾಗಿ ಕೊರಿಯರ್ ಮಾಡುವುದಿಲ್ಲ, ಏಕೆಂದರೆ ಅದು ತುಂಬಾ ದುಬಾರಿ,” ಎಂದು ಲಾಹಿರಿ ವಿವರಿಸುತ್ತಾರೆ. ಬದಲಿಗೆ, ಬಾಂಗ್ಲಾದೇಶದ ಪುಸ್ತಕ ಮಾರಾಟಗಾರರು ಕಾಲೇಜ್ ಸ್ಟ್ರೀಟ್‌ನಲ್ಲಿರುವ ಕೋಲ್ಕತ್ತಾದ ಜನಪ್ರಿಯ ಪುಸ್ತಕ ಮಾರುಕಟ್ಟೆಯಿಂದ ಪ್ರತಿಗಳನ್ನು ಖರೀದಿಸಿ ತಮ್ಮ ದೇಶಕ್ಕೆ ಕೊಂಡೊಯ್ಯುತ್ತಾರೆ. "ನಾವು ಬಾಂಗ್ಲಾದೇಶದ ಬರಹಗಾರರು ಮತ್ತು ಛಾಯಾಗ್ರಾಹಕರ ಲೇಖನಗಳನ್ನೂ ಪ್ರಕಟಿಸುತ್ತೇವೆ," ಎಂದು ಅವರು ಹೇಳುತ್ತಾರೆ.

Left: An issue of Sudhu Sundarban Charcha that focuses on women in the Sundarbans
PHOTO • Urvashi Sarkar
Right: Forty nine issues have been published so far
PHOTO • Urvashi Sarkar

ಎಡ: ಸುಧು ಸುಂದರ್ಬನ್ ಚರ್ಚಾದ ಸಂಚಿಕೆಯು ಸುಂದರಬನ್ ಪ್ರದೇಶಗಳ ಮಹಿಳೆಯರನ್ನು ಕೇಂದ್ರೀಕರಿಸಿವೆ. ಬಲ: ನಲವತ್ತೊಂಬತ್ತು ಸಂಚಿಕೆಗಳನ್ನು ಇದುವರೆಗೆ ಪ್ರಕಟಿಸಲಾಗಿದೆ

Jyotirindra Narayan Lahiri with his wife Srijani Sadhukhan. She along with their two children, Ritaja and Archisman help in running the magazine
PHOTO • Urvashi Sarkar

ಸಾಧುಖಾನ್ ಅವರೊಂದಿಗೆ ಜ್ಯೋತಿರಿಂದ್ರ ನಾರಾಯಣ ಲಾಹಿರಿ ಅವರ ಪತ್ನಿ ಸೃಜನಿ. ಅವರು ತಮ್ಮ ಇಬ್ಬರು ಮಕ್ಕಳಾದ ರಿತಾಜಾ ಮತ್ತು ಆರ್ಕಿಸ್ಮನ್ ಜೊತೆಗೆ ಪತ್ರಿಕೆಯನ್ನು ನಡೆಸುವುದರಲ್ಲಿ ನೇರವಾಗುತ್ತಾರೆ

ನಿಯತಕಾಲಿಕವನ್ನು ಹೊರತರುವುದು ದುಬಾರಿ ಕೆಲಸ. ಏಕೆಂದರೆ, ಪ್ರತಿ ಆವೃತ್ತಿಯನ್ನು ಹೊಳಪು ಕಾಗದದ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಮುದ್ರಿಸುವ ಮೊದಲು ಟೈಪ್‌ಸೆಟ್ ಮಾಡಲಾಗುತ್ತದೆ. “ಆ ನಂತರ, ಶಾಯಿ, ಕಾಗದ ಮತ್ತು ಸಾರಿಗೆ ವೆಚ್ಚಗಳೂ ಇವೆ. ಆದಾಗ್ಯೂ, ನಮ್ಮ ಸಂಪಾದಕೀಯ ವೆಚ್ಚ ಹೆಚ್ಚು ಏನೂ ಇಲ್ಲ. ಏಕೆಂದರೆ ಆ ಎಲ್ಲವನ್ನೂ ನಾವೇ ಮಾಡುತ್ತೇವೆ,” ಎಂದು ಲಾಹಿರಿ ಹೇಳುತ್ತಾರೆ. ಅವರ ಪತ್ನಿ ಸೃಜನಿ ಸಾಧುಖಾನ್, 48, ಮಗಳು ರಿತಾಜಾ, 22, ಮತ್ತು ಮಗ ಆರ್ಕಿಸ್ಮನ್, 15 ಜೊತೆಗೆ, ಸಂಪಾದಕೀಯ ತಂಡವು ಸುಮಾರು 15-16 ಸದಸ್ಯರನ್ನು ಒಳಗೊಂಡಿದೆ. ಅವರು ತಮ್ಮ ಸಮಯ ಮತ್ತು ಶ್ರಮವನ್ನು ಉಚಿತವಾಗಿ ನೀಡುತ್ತಾರೆ. "ನಮ್ಮಲ್ಲಿ ಜನರಿಗೆ ಉದ್ಯೋಗ ನೀಡುವ ಕ್ರಮವಿಲ್ಲ. ಅವರು ತಮ್ಮ ಸಮಯ ಮತ್ತು ಶ್ರಮವನ್ನು ಕೊಡುಗೆಯಾಗಿ ನೀಡುತ್ತಾರೆ, ಏಕೆಂದರೆ ಅವರಿಗೆ ಪತ್ರಿಕೆಯಲ್ಲಿ ನಾವು ಪ್ರಕಟಿಸುವ ವಿಚಾರಗಳ ಬಗ್ಗೆ ಕಾಳಜಿಯಿದೆ,” ಎಂದು ಅವರು ಹೇಳುತ್ತಾರೆ.

ಪತ್ರಿಕೆಯ ಪ್ರತಿ ಸಂಚಿಕೆಯ ಬೆಲೆ 150 ರೂಪಾಯಿ. "ನಮ್ಮ ಸ್ವಂತ ವೆಚ್ಚವು 80 ರೂಪಾಯಿಗಳಾಗಿದ್ದರೆ, ನಾವು [ಪ್ರತಿ ಪ್ರತಿಯನ್ನು] 150 ರೂಪಾಯಿಗಳಿಗೆ ಮಾರಾಟ ಮಾಡಬೇಕು. ಏಕೆಂದರೆ ನಾವು ಸ್ಟ್ಯಾಂಡ್ ಮಾಲೀಕರಿಗೆ ಶೇಕಡಾ 35 ಕಮಿಷನ್ ಅನ್ನು ತಕ್ಷಣವೇ ನೀಡಬೇಕಾಗಿದೆ," ಎಂದು ಲಾಹಿರಿ ಪ್ರಕಾಶನದ ಆರ್ಥಿಕತೆಯ ಬಗ್ಗೆ ಹೇಳುತ್ತಾರೆ.

ಪ್ರತಿದಿನ, ಲಾಹಿರಿ ಮತ್ತು ಅವರ ಕುಟುಂಬವು ಆರು ಬಂಗಾಳಿ ಮತ್ತು ಮೂರು ಇಂಗ್ಲಿಷ್ ಪತ್ರಿಕೆಗಳನ್ನು ಈ ಪ್ರದೇಶದ ಸುದ್ದಿಗಳಿಗಾಗಿ ಗಮನಿಸುತ್ತದೆ. ಈ ಪ್ರದೇಶದಲ್ಲಿ ಅವರು ಸ್ವತಃ ಗುರುತಿಸಲ್ಪಟ್ಟ ಧ್ವನಿಯಾಗಿರುವುದರಿಂದ, ಹುಲಿ ದಾಳಿಯ ಸುದ್ದಿಗಳು ಅವರನ್ನು ನೇರವಾಗಿ ತಲುಪುತ್ತವೆ. ಪತ್ರಿಕೆಗಳ ಸಂಪಾದಕರಿಗೆ ಓದುಗರು ಬರೆದ ಪತ್ರಗಳನ್ನೂ ಲಾಹಿರಿ ಸಂಗ್ರಹಿಸುತ್ತಾರೆ. "ಓದುಗರು ಶ್ರೀಮಂತರು ಅಥವಾ ಶಕ್ತಿಶಾಲಿಗಳಲ್ಲದಿರಬಹುದು, ಆದರೆ ಅವರಿಗೆ ತಮ್ಮ ವಿಚಾರಗಳು ತಿಳಿದಿವೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ," ಎಂದು ಅವರು ಹೇಳುತ್ತಾರೆ.

ಕೇವಲ ಪತ್ರಿಕೆ ಮಾತ್ರ ಅವರ ಜವಾಬ್ದಾರಿಯಲ್ಲ. ಪ್ರತಿ ದಿನ ಅವರು ಸರ್ಕಾರಿ ಶಾಲೆಯಲ್ಲಿ ಒಂಬತ್ತು ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಭೌಗೋಳಿಕ ಶಾಸ್ತ್ರವನ್ನು ಕಲಿಸಲು ಪಕ್ಕದ ಪುರ್ಬಾ ಬರ್ಧಮಾನ್ ಜಿಲ್ಲೆಗೆ 180 ಕಿಮೀ ಪ್ರಯಾಣಿಸುತ್ತಾರೆ. “ನಾನು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಟು ರಾತ್ರಿ 8 ಗಂಟೆಗೆ ಹಿಂತಿರುಗುತ್ತೇನೆ. ಪ್ರಿಂಟಿಂಗ್ ಪ್ರೆಸ್ ಬರ್ಧಮಾನ್ ನಗರದಲ್ಲಿದೆ. ಹಾಗಾಗಿ ಅಲ್ಲಿ ಕೆಲಸವಿದ್ದರೆ ಮುದ್ರಣಾಲಯದಲ್ಲಿ ಹೋಗಿ ಸಂಜೆ ತಡವಾಗಿ ಮನೆಗೆ ಬರುತ್ತೇನೆ,” ಎಂದು ಕಳೆದ 26 ವರ್ಷಗಳಿಂದ ಪಾಠ ಮಾಡುತ್ತಿರುವ ಲಾಹಿರಿ ಹೇಳುತ್ತಾರೆ. "ಪತ್ರಿಕೆಯಂತೆ ಕಲಿಸುವುದು ಕೂಡ ನನಗೆ ಉತ್ಸಾಹ ನೀಡುತ್ತದೆ," ಎನ್ನುತ್ತಾರೆ ಅವರು.

ಅನುವಾದ: ಚರಣ್‌ ಐವರ್ನಾಡು

Urvashi Sarkar is an independent journalist and a 2016 PARI Fellow.

Other stories by Urvashi Sarkar
Editor : Sangeeta Menon

Sangeeta Menon is a Mumbai-based writer, editor and communications consultant.

Other stories by Sangeeta Menon
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad