ಸಂಜೆಗತ್ತಲಾಗುತ್ತಿದ್ದಂತೆ ತಮಿಳುನಾಡಿನ ವದನಮೆಲ್ಲಿ ಗ್ರಾಮದಲ್ಲಿ ಶ್ರೀ ಪೊನ್ನಿಯಮ್ಮನ್ ತೆರುಕೂತ್ತು ಮಂಡ್ರಂನ ಸದಸ್ಯರು ಕರಿಯಕೂತ್ತು ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಸಂಜೆ ಶುರುವಾದರೆ ಬೆಳಗ್ಗಿನವರೆಗೆ ಅನೇಕ ಪಾತ್ರಗಳು, ನಿರಂತರವಾಗಿ ವೇಷಭೂಷಣಗಳನ್ನು ಬದಲಾಯಿಸಿಕೊಂಡು ರಂಗಪ್ರವೇಶ ಮಾಡುತ್ತವೆ.

ತೆರೆಯ ಹಿಂದೆ 33 ವರ್ಷದ ಪ್ರಾಯದ ಶರ್ಮಿ ಬಣ್ಣ ಹಚ್ಚಲು ಶುರು ಮಾಡಿದ್ದಾರೆ. ಕೆಂಪು ಪುಡಿಯನ್ನು ಎಣ್ಣೆಯೊಂದಿಗೆ ಬೆರೆಸಿ ತುಟಿಗೆ ಹಚ್ಚಿಕೊಳ್ಳುವ ಬಣ್ಣವನ್ನು ತಯಾರಿಸುವಾಗ, ಅವರು ಅರಿತಾರಂ (ಮೇಕಪ್) ನ ಕೆಲವು ಮೂಲಭೂತ ನಿಯಮಗಳ ಬಗ್ಗೆ ವಿವರಿಸುತ್ತಾರೆ: “ಪುರುಷರ ಮತ್ತು ಮಹಿಳೆಯರ ಅರಿತಾರಂ ಬೇರೆ ಬೇರೆಯಾಗಿರುತ್ತದೆ. ಇದು ಪಾತ್ರ ಮತ್ತು ಪಾತ್ರ ಪ್ರದರ್ಶನದ ಅವಧಿಗೆ ಅನುಗುಣವಾಗಿ ಭಿನ್ನವಾಗುತ್ತದೆ.”

ಶ್ರೀ ಪೊನ್ನಿಯಮ್ಮನ್ ತೆರುಕೂತ್ತು ಮಂಡ್ರಂ ತಮಿಳುನಾಡಿನ ಪುರಾತನ ಕಲಾ ಪ್ರಕಾರಗಳಲ್ಲಿ ಒಂದಾದ ಈ ಪ್ರದರ್ಶನ ಕಲೆಯನ್ನು ಆಡಿ ತೋರಿಸುವ ನಾಟಕ ಕಂಪನಿ. 17 ಮಂದಿ ಸದಸ್ಯರಿರುವ ಈ ತಂಡದ ನಾಲ್ಕು ಟ್ರಾನ್ಸ್‌ಜೆಂಡರ್ ಕಲಾವಿದೆಯರಲ್ಲಿ ಶರ್ಮಿ ಕೂಡ ಒಬ್ಬರು. "ನನ್ನ ಹಿಂದಿನ ತಲೆಮಾರಿನವರೂ ತೆರುಕೂತ್ತನ್ನು ಪ್ರದರ್ಶಿಸಿದ್ದಾರೆ. ಇದು ಎಷ್ಟು ಪ್ರಾಚೀನ ಎಂದು ನಿಖರವಾಗಿ ಹೇಳಲು ನನಗೆ ಸಾಧ್ಯವಿಲ್ಲ," ಎಂದು ಶರ್ಮಿ ಹೇಳುತ್ತಾರೆ.

ತೆರುಕೂತ್ತು, ಅಥವಾ ಬೀದಿನಾಟಕದಲ್ಲಿ ಸಾಮಾನ್ಯವಾಗಿ ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ಕಥನಗಳನ್ನು ಆಧರಿಸಿದ ಪ್ರಸಂಗಗಳನ್ನು ರಾತ್ರಿಯಿಡೀ ಪ್ರದರ್ಶಿಸಲಾಗುತ್ತದೆ. ಸಾಮಾನ್ಯವಾಗಿ ಪಂಗುನಿ (ಏಪ್ರಿಲ್) ಮತ್ತು ಪುರಟ್ಟಸ್ಸಿ (ಸೆಪ್ಟೆಂಬರ್) ತಿಂಗಳ ನಡುವೆ ತೆರುಕೂತ್ತು ಸೀಸನ್‌ ಬರುತ್ತದೆ. ಈ ಅವಧಿಯಲ್ಲಿ ಶರ್ಮಿ ಮತ್ತು ಅವರ ತಂಡ ಪ್ರತಿ ವಾರದ ದಿನವೂ ಪ್ರದರ್ಶನ ನಡೆಸುತ್ತದೆ. ಒಂದು ತಿಂಗಳಿಗೆ ಸುಮಾರು 15-20 ಆಟಗಳು ನಡೆಯುತ್ತವೆ. ಪ್ರತಿ ಆಟಕ್ಕೂ ಕಲಾವಿದರಿಗೆ 700-800 ರುಪಾಯಿ ಸಂಭಾವನೆ ನೀಡಲಾಗುತ್ತದೆ. ಅಂದರೆ ಒಂದು ತಿಂಗಳಿಗೆ ಪ್ರತಿ ಕಲಾವಿದರಿಗೆ ಸುಮಾರು 10,000-15,000 ರುಪಾಯಿ ಸಿಗುತ್ತದೆ.

ಹಾಗಿದ್ದೂ ಕೂಡ, ಸೀಸನ್‌ ಮುಗಿದ ಮೇಲೆ ಕಲಾವಿದರು ಆದಾಯದ ಇತರ ಮೂಲಗಳನ್ನು ಹುಡುಕಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂತ್ಯಕ್ರಿಯೆಗಳಲ್ಲಿ ಮಾತ್ರ ಪ್ರದರ್ಶಿಸಲಾಗುವ ತೆರುಕೂತ್ತಿನ ಆರಾಧನಾ ಸ್ವರೂಪವಾದ ಕರಿಯಕ್ಕೂತ್ತನ್ನೂ ಮಾಡುತ್ತಾರೆ. ತಿರುವಳ್ಳೂರು ಜಿಲ್ಲೆಯ ಪಟ್ಟರೈಪೆರಂಬದೂರಿನಲ್ಲಿರುವ ತಮ್ಮ ನಾಟಕ ಕಂಪನಿಯ ಕಟ್ಟಡದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ವದನಮೆಲ್ಲಿಯಲ್ಲಿ ನಡೆಯಲಿರುವ ಕರಿಯಕೂತ್ತು ಪ್ರದರ್ಶನಕ್ಕೆ ತಯಾರಿ ನಡೆಸುತ್ತಾ, "ಯಾರಾದರೂ ಸತ್ತರೆ ನಮಗೆ ವಾರಕ್ಕೆ ಒಂದೆರಡು ಆಟಗಳು ಸಿಗುತ್ತವೆ," ಎಂದು ಶರ್ಮಿ ಹೇಳುತ್ತಾರೆ.

PHOTO • Akshara Sanal
PHOTO • Akshara Sanal

ಶರ್ಮಿಯವರು ವದನಮೆಲ್ಲಿ ಗ್ರಾಮದಲ್ಲಿ ನಡೆಯಲಿರುವ ತೆರುಕೂತ್ತು ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಅವರು ಮಹಾಭಾರತ ಮತ್ತು ರಾಮಾಯಣಗಳಂತಹ ಮಹಾಕಾವ್ಯಗಳ ಕಥೆಗಳನ್ನು ಆಧರಿಸಿದ ಬೀದಿ ನಾಟಕದ ಒಂದು ಸ್ವರೂಪವಾದ ತೆರುಕೂತ್ತುವನ್ನು ಪ್ರದರ್ಶಿಸಲು ಆರಂಭಿಸಿ ನಾಲ್ಕು ವರ್ಷಗಳೇ ಕಳೆದಿವೆ

PHOTO • Akshara Sanal
PHOTO • Akshara Sanal

ಕೆಂಪು ಪುಡಿಯನ್ನು ಎಣ್ಣೆಯೊಂದಿಗೆ ಬೆರೆಸಿ ತುಟಿಗೆ ಹಚ್ಚಿಕೊಳ್ಳುವ ಬಣ್ಣವನ್ನು ತಯಾರಿಸುವಾಗ, ಅವರು ಅರಿತಾರಂ (ಮೇಕಪ್) ನ ಕೆಲವು ಮೂಲಭೂತ ನಿಯಮಗಳ ಬಗ್ಗೆ ವಿವರಿಸುತ್ತಾರೆ: 'ಪುರುಷರ ಮತ್ತು ಮಹಿಳೆಯರ ಅರಿತಾರಂ ಬೇರೆ ಬೇರೆಯಾಗಿರುತ್ತದೆ. ಇದು ಪಾತ್ರ ಮತ್ತು ಪಾತ್ರ ಪ್ರದರ್ಶನದ ಅವಧಿಗೆ ಅನುಗುಣವಾಗಿ ಭಿನ್ನವಾಗುತ್ತದೆʼ

ಕೂತ್ತು ಪ್ರದರ್ಶನಕ್ಕೆ ‘ವೇದಿಕೆ’ ಸಜ್ಜಾಗಿದೆ. ಮೃತರ ಮನೆಯ ಹೊರಗೆ ಬಟ್ಟೆಯ ಟೆಂಟೊಂದನ್ನು ಏರಿಸಲಾಗಿದೆ. ರಸ್ತೆಯುದ್ದಕ್ಕೂ ಕಪ್ಪು ನೆಲಹಾಸನ್ನು ಹಾಸಲಾಗಿದೆ. ಮೃತರ ಫೋಟೋವನ್ನು ಮನೆಯ ಮುಂದೆ ಇರಿಸಿ, ಅದರ ಸುತ್ತಲೂ ಜಗಮಗಿಸುವ ಸಣ್ಣ ದೀಪಗಳನ್ನು ಹಾಕಲಾಗಿದೆ. ಬೀದಿಯಲ್ಲಿರುವ ಬೆಂಚುಗಳು, ಪಾತ್ರೆಗಳು ಮತ್ತು ಟೇಬಲ್‌ಗಳು ಊಟದ ಸಮಯಕ್ಕಾಗಿ ಕಾಯುತ್ತಿವೆ.

"ಇಡೀ ಗ್ರಾಮವೇ ಮೌನವಾದಾಗ, ನಾವು ಹಿಮ್ಮೇಳದ ವಾದ್ಯ ಪರಿಕರಗಳನ್ನು ಜೋಡಿಸಲು ಆರಂಭಿಸುತ್ತೇವೆ. ಅವುಗಳು ಸರಿಯಾಗಿ ಟ್ಯೂನ್ ಆಗಿವೆಯೇ ಮತ್ತು ಶಬ್ಧ ಸರಿಯಾಗಿ ಬರುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಮೇಕಪ್ ಮಾಡಿಕೊಳ್ಳಲು ಶುರು ಮಾಡುತ್ತೇವೆ,” ಎನ್ನುತ್ತಾರೆ ಶರ್ಮಿ. ಮುಡಿಗೆ (ಪ್ರದರ್ಶನದಲ್ಲಿ ಬಳಸುವ ಕಿರೀಟ) ಪೂಸೈ (ಪೂಜೆ) ಮಾಡಿದ ನಂತರ ರಾತ್ರಿ 10 ಗಂಟೆಗೆ ಕೂತ್ತು ಆರಂಭವಾಗುತ್ತದೆ. “ಪೂಸೈ ನಾಟಕಕ್ಕೆ ಕೊಡುವ ಒಂದು ಗೌರವ. ಆಟ ಯಶಸ್ವಿಯಾಗಲಿ ಮತ್ತು ಕಲಾವಿದರು ಸುರಕ್ಷಿತವಾಗಿ ತಮ್ಮ ತಮ್ಮ ಮನೆಗೆ ಮರಳಲಿ ಎಂದು ಆಶಿಸಿ ನಾವು ಪ್ರಾರ್ಥಿಸುತ್ತೇವೆ,” ಎಂದು ಅವರು ವಿವರಿಸುತ್ತಾರೆ.

ಇವತ್ತು ಸಂಜೆ ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನನ್ ಮತ್ತು ಅವನ ಎಂಟು ಹೆಂಡತಿಯರ ಬಗ್ಗೆ ಇರುವ ಮಹಾಭಾರತದ ಕಥೆಯನ್ನು ಆಧರಿಸಿ ಮಿನ್ನಲೋಳಿ ಶಿವಪೂಜೆ ಎಂಬ ಪ್ರಸಂಗವನ್ನು ಆಡಿತೋರಿಸಲಿದ್ದಾರೆ. "ನಾನು ಎಲ್ಲಾ ಎಂಟು ಪಾತ್ರಗಳನ್ನೂ ಮಾಡಬಲ್ಲೆ [ಆದರೆ] ಇವತ್ತು ನಾನು ಬೋಗಾವತಿಯ ಪಾತ್ರ ಮಾಡುತ್ತಿದ್ದೇನೆ," ಎಂದು ಮಹಾಕಾವ್ಯದಲ್ಲಿರುವ ಪಾತ್ರಗಳು ಮತ್ತು ಅವುಗಳಿಗಿರುವ ತೊಡಕುಗಳ ಬಗ್ಗೆ ವಿವರಿಸುತ್ತಾ ಶರ್ಮಿ ಹೇಳುತ್ತಾರೆ.

ಮಿನ್ನಲೋಳಿ (ಮಿಂಚು) ಅರ್ಜುನನ ಎಂಟು ಹೆಂಡತಿಯರಲ್ಲಿ ಒಬ್ಬಳು ಎನ್ನುತ್ತಾ ಶರ್ಮಿ ಕಥೆಯನ್ನು ವಿವರಿಸಲು ತೊಡಗುತ್ತಾರೆ. ಮಿನ್ನಲೋಳಿ ರಾಜ ಮೇಗರಸನ್ (ಮೋಡಗಳ ರಾಜ) ಮತ್ತು ರಾಣಿ ಕೋಡಿಕ್ಕಲಾದೇವಿಯ ಮಗಳು. ಇವಳಿಗೆ ಐದು ವರ್ಷದಲ್ಲಿಯೇ ಅರ್ಜುನನ್‌ನೊಂದಿಗೆ ವಿವಾಹವಾಗುತ್ತದೆ. ಪ್ರೌಢಾವಸ್ಥೆಗೆ ಬಂದ ನಂತರ, ಅವಳು ತನ್ನ ಗಂಡನ ಬಗ್ಗೆ ತನ್ನ ಹೆತ್ತವರಲ್ಲಿ ಕೇಳುತ್ತಾಳೆ. ಆಗ ಅವಳಿಗೆ ಅವನನ್ನು ಭೇಟಿಯಾಗುವ ಮೊದಲು 48 ದಿನಗಳ ಕಾಲ ಶಿವಪೂಸೈ (ಶಿವಪೂಜೆ) ಮಾಡುವಂತೆ ಅವರು ಹೇಳುತ್ತಾರೆ. ಮಿನ್ನಲೋಳಿ 47 ದಿನಗಳ ಕಾಲ ಶ್ರದ್ಧೆಯಿಂದ ಪೂಜೆಯನ್ನು ಮಾಡುತ್ತಾಳೆ. 48 ನೇ ದಿನದಂದು ಅರ್ಜುನನ್ ಪೂಸೈ ಮುಗಿಯುವ ಮೊದಲೇ ಅವಳನ್ನು ಭೇಟಿಯಾಗಲು ಬರುತ್ತಾನೆ. ಆದರೆ ಅವಳು ಅವನನ್ನು ಭೇಟಿಯಾಗಲು ನಿರಾಕರಿಸಿ, ಪೂಸೈ ಮುಗಿಯುವವರೆಗೆ ಕಾಯುವಂತೆ ಹೇಳುತ್ತಾಳೆ. ಇದನ್ನು ಅರ್ಜುನನ್ ಒಪ್ಪುವುದಿಲ್ಲ. ಹೀಗೆ, ಪ್ರಸಂಗವು ಈ ಘಟನೆಯ ಸುತ್ತ ಸುತ್ತುತ್ತದೆ. ಅನೇಕ ತಿರುವುಗಳನ್ನು ಪಡೆದು ಕೊನೆಗೆ ಭಗವಾನ್‌ ಕೃಷ್ಣನ ಆಗಮನದೊಂದಿಗೆ ಮಿನ್ನಲೋಲಿ ಮತ್ತು ಅರ್ಜುನನ್ ಮತ್ತೆ ಒಂದಾಗಿ ಪ್ರಸಂಗ ಸುಖಾಂತ್ಯವಾಗುತ್ತದೆ.

PHOTO • Akshara Sanal
PHOTO • Akshara Sanal

ಎಡ: ಪ್ರದರ್ಶನದಲ್ಲಿ ಧರಿಸುವ ಆಭರಣಗಳಲ್ಲಿ ಒಂದಾದ ಮುಡಿಗೆ (ಕಿರೀಟ) ಪೂಜೆ ಮಾಡಿ ರಾತ್ರಿ 10 ಗಂಟೆಗೆ ಆಟ ಆರಂಭವಾಗುತ್ತದೆ. ಬಲ: ತೆರುಕೂತ್ತುಗೆ ಸಜ್ಜಾಗಿರುವ ವೇದಿಕೆ

ಶರ್ಮಿ ತಮ್ಮ ತುಟಿಗಳಿಗೆ ಮೈ (ಕಪ್ಪು ಕಾಡಿಗೆ) ಹಚ್ಚಿಕೊಳ್ಳಲು ಆರಂಭಿಸುತ್ತಾರೆ. "ನಾನು ತುಟಿಗಳಿಗೆ ಮೈ ಹಚ್ಚುವುದನ್ನು ನೋಡಿದ ನಂತರ, ಅನೇಕರು ಹಾಗೇ ಮಾಡಲು ಆರಂಭಿಸಿದ್ದಾರೆ," ಎಂದು ಅವರು ಹೇಳುತ್ತಾರೆ. “ನನ್ನ ವೇಷ ನೋಡಿ ನನ್ನನ್ನು ಜನರು ನಾನು ಹೆಣ್ಣೇ ಎಂದು ಕೇಳುತ್ತಾರೆ. [ನನಗೂ ಅದೇ ಬೇಕು] ನಾನು ಮೇಕ್ ಓವರ್ ಮಾಡಿ ಹೊರಗೆ ಹೋಗುವಾಗ ಗಂಡಸರು ನನ್ನನ್ನು ಎವೆಯಿಕ್ಕದೆ ನೋಡಬೇಕು,” ಎನ್ನುತ್ತಾರೆ ಅವರು.

ಶರ್ಮಿಯವರಿಗೆ "ಮೇಕ್ಅಪ್ ಬಗ್ಗೆ ಅಂಥಾ ಒಂದು ಆಸಕ್ತಿ" ಇದೆ, ಅವರು ಕೆಲವು ವರ್ಷಗಳ ಹಿಂದೆ ಆರು ತಿಂಗಳ ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದರು. "ಆದರೆ [ಲಿಂಗ ಪರಿವರ್ತನೆಗೆ] ಮೊದಲೆಲ್ಲಾ, ಮಹಿಳೆಯರಿಗೆ ಮೇಕಪ್ ಮಾಡಲು ನನಗೆ ಅವಕಾಶವೇ ಸಿಗುತ್ತಿರಲಿಲ್ಲ," ಎಂದು ಅವರು ಹೇಳುತ್ತಾರೆ.

ಶರ್ಮಿ ತಮ್ಮ ಅರಿತಾರಮ್ ಮಾಡಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತಾರೆ. ಸೀರೆ ಉಟ್ಟು ಬೋಗಾವತಿಯ ‘ಲುಕ್‌ʼನ್ನು ಪೂರ್ಣಗೊಳಿಸುತ್ತಾರೆ. “ನನಗೆ ಸೀರೆ ಉಡುವುದನ್ನು ಯಾರೂ ಹೇಳಿಕೊಟ್ಟಿಲ್ಲ. ನಾನೇ ಸೀರೆ ಉಡುವುದನ್ನು ಕಲಿತೆ. ನನ್ನ ಮೂಗು, ಕಿವಿಗಳನ್ನು ನಾನೇ ಚುಚ್ಚಿಕೊಂಡೆ. ಎಲ್ಲವನ್ನೂ ನಾನೇ ಕಲಿತುಕೊಂಡೆ,” ಎಂದು ಅವರು ಹೇಳುತ್ತಾರೆ.

“ಆಪರೇಷನ್ ಮಾತ್ರ ಡಾಕ್ಟರ್‌ ಮಾಡಿದ್ದಾರೆ. ಆಪರೇಷನ್ ಮಾಡುವುದು ಹೇಗೆ ಎಂದು ನನಗೆ ಗೊತ್ತಿದ್ದರೆ, ಅದನ್ನು ನಾನೇ ಮಾಡಿಕೊಳ್ಳುತ್ತಿದ್ದೆ. ಆದರೆ ಅದಕ್ಕಾಗಿ ನಾನು ಆಸ್ಪತ್ರೆಯಲ್ಲಿ 50,000 ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು,” ಎಂದು 23 ನೇ ವಯಸ್ಸಿನಲ್ಲಿ ಮಾಡಿಸಿಕೊಂಡ ತಮ್ಮ ಲಿಂಗ ದೃಢೀಕರಣದ ಶಸ್ತ್ರಚಿಕಿತ್ಸೆಯ ಬಗ್ಗೆ ಹೇಳುತ್ತಾರೆ.

“ಸೀರೆ ಉಡುವ ಟ್ರಾನ್ಸ್ ಮಹಿಳೆಯನ್ನು ಜನ ಇನ್ನೂ ನಾರ್ಮಲ್ ಎಂದು ಭಾವಿಸುತ್ತಿಲ್ಲ. ಬೇರೆ ಮಹಿಳೆಯರಂತೆ ನಾವು ಸೀರೆ ಉಟ್ಟುಕೊಂಡು ರಸ್ತೆಯಲ್ಲಿ ಸುಲಭವಾಗಿ ನಡೆದಾಡಲು ಸಾಧ್ಯವಿಲ್ಲ,’’ ಎಂದು ಅವರು ತಮಗಿರುವ ಸವಾಲುಗಳ ಬಗ್ಗೆ ಗಮನಸೆಳೆಯುತ್ತಾರೆ. ಹಾಗಿದ್ದೂ, ಅವರ ವೃತ್ತಿ ಟ್ರಾನ್ಸ್ ಮಹಿಳೆಯರು ಪದೇಪದೇ ಎದುರಿಸುವ ಬೆದರಿಕೆ ಮತ್ತು ಕಿರುಕುಳದಿಂದ ಸ್ವಲ್ಪ ರಕ್ಷಣೆ ಕೊಡುತ್ತದೆ. "ನಾನು ರಂಗಭೂಮಿ ಕಲಾವಿದೆ ಎಂಬ ಕಾರಣಕ್ಕೆ ಜನರು ನನ್ನನ್ನು ಗೌರವಿಸುತ್ತಾರೆ," ಎನ್ನುತ್ತಾರೆ ಅವರು.

PHOTO • Akshara Sanal
PHOTO • Akshara Sanal

ಶರ್ಮಿ ತಮಗೆ ಮೇಕಪ್ (ಎಡ) ಮಾಡಿಕೊಳ್ಳಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತಾರೆ. 'ನಾನು ತುಟಿಗಳಿಗೆ ಮೈ [ಕಪ್ಪು ಕಾಡಿಗೆ] ಹಚ್ಚುವುದನ್ನು ನೋಡಿ ಅನೇಕರು ಅದೇ ರೀತಿ ಮಾಡಲು ಆರಂಭಿಸಿದ್ದಾರೆ," ಎಂದು ಅವರು ಹೇಳುತ್ತಾರೆ. ಅವರು ಬೇರೆ ಪಾತ್ರದಾರಿಗಳಿಗೂ ಮೇಕಪ್‌ನಲ್ಲಿ ಸಹಾಯ ಮಾಡುತ್ತಾರೆ

PHOTO • Akshara Sanal
PHOTO • Akshara Sanal

ಮೇಕಪ್ ಮಾಡಿಕೊಳ್ಳುತ್ತಾ ಪ್ರದರ್ಶನಕ್ಕೆ ತಯಾರಾಗುತ್ತಿರುವ ಪುರುಷ ಕಲಾವಿದರು

*****

"ನಾನು ಬಂದಿರುವುದು [ತಮಿಳುನಾಡಿನ] ತಿರುವಳ್ಳೂರು ಜಿಲ್ಲೆಯ ಈಕ್ಕಾಡು ಗ್ರಾಮದಿಂದ," ಎಂದು ಶರ್ಮಿ ಅವರು ತಮ್ಮ ಟೊಪ್ಪಾವನ್ನು (ವಿಗ್) ಬಾಚಿಕೊಳ್ಳುತ್ತಾ ಹೇಳುತ್ತಾರೆ. ಬಾಲ್ಯದಲ್ಲಿಯೇ ಹಾಡುವ ಮತ್ತು ಡೈಲಾಗ್ ಹೇಳುವ ಕೌಶಲ್ಯ ಸ್ವಾಭಾವಿಕವಾಗಿ ತಮ್ಮಲ್ಲಿ ಇದ್ದದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. “ನಾನು ಬಾಲ್ಯದಲ್ಲಿಯೇ ರಂಗಭೂಮಿಯನ್ನು ಇಷ್ಟಪಟ್ಟಿದ್ದೆ. ಮೇಕಪ್, ವೇಷಭೂಷಣಗಳು- ಹೀಗೆ ನಾನು [ಆ ಬಗ್ಗೆ] ಎಲ್ಲವನ್ನೂ ಇಷ್ಟಪಟ್ಟೆ. ಆದರೆ ಮುಂದೊಂದು ದಿನ ನಾನೂ ರಂಗಭೂಮಿ ಕಲಾವಿದೆಯಾಗುತ್ತೇನೆ ಎಂದು ಊಹಿಸಿರಲಿಲ್ಲ,” ಎನ್ನುತ್ತಾರೆ ಅವರು.

ನೃತ್ಯ ಮತ್ತು ಪಕ್ಕವಾದ್ಯಗಳನ್ನು ಸಂಯೋಜಿಸುವ ಒಂದು ರೀತಿಯ ಬೀದಿ ಪ್ರದರ್ಶನ 'ರಾಜಾ ರಾಣಿ ನೃತ್ಯ'ದಿಂದ ತನ್ನ ರಂಗಭೂಮಿಯ ಪಯಣ ಹೇಗೆ ಶುರುವಾಯಿತು ಎಂಬುದನ್ನು ಅವರು ವಿವರಿಸುತ್ತಾರೆ. “ನಂತರ, ಸುಮಾರು ಹತ್ತು ವರ್ಷಗಳ ಕಾಲ ನಾನು ಸಮಕಾಲೀನ ಕಥೆಗಳ ತೇರುಕೂತುವಿನ ಪ್ರಸಂಗಗಳಲ್ಲಿ ವೇದಿಕೆಗಳ ಮೇಲೆ ಅಭಿನಯಿಸಿದೆ. ನಾನು ತೆರುಕೂತ್ತು ಪ್ರದರ್ಶನ ಆರಂಭಿಸಿ ಸುಮಾರು ನಾಲ್ಕು ವರ್ಷಗಳಾಗಿವೆ,” ಎಂದು ಶರ್ಮಿ ಹೇಳುತ್ತಾರೆ.

ತೆರೆಯ ಹಿಂದೆ, ಪಾತ್ರದಾರಿಗಳು ಅರಿತಾರಂ ಹಚ್ಚಿಕೊಳ್ಳಲು ಆರಂಭಿಸಿದ್ದರು; ಶರ್ಮಿ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. “ನನ್ನ ಮನೆಯವರು ನನ್ನನ್ನು ಹುಡುಗಿಯಂತೆ ಬೆಳೆಸಿದರು. ಇದು ತುಂಬಾ ಸ್ವಾಭಾವಿಕವಾಗಿತ್ತು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಇವರಿಗೆ ತಮ್ಮ ಟ್ರಾನ್ಸ್‌ಜೆಂಡರ್ ಗುರುತಿನ ಅರಿವಾದಾಗ ನಾಲ್ಕನೇ ತರಗತಿಯಲ್ಲಿದ್ದರು. "ಆದರೆ ಇತರರಿಗೆ ಅದನ್ನು ಹೇಗೆ ಅರ್ಥ ಮಾಡಿಸುವುದು ಎಂಬುದು ನನಗೆ ಗೊತ್ತಿರಲಿಲ್ಲ," ಎನ್ನುತ್ತಾರೆ ಅವರು.

ಅವರು ಹೇಳುವಂತೆ ಇದು ಸುಲಭದ ಪ್ರಯಾಣವಾಗಿರಲಿಲ್ಲ. ಶಾಲೆಯಲ್ಲಿ ಅನುಭವಿಸುತ್ತಿದ್ದ ಚಿತ್ರಹಿಂಸೆಯನ್ನು ತಾಳಲಾರದೆ ಹತ್ತನೇ ತರಗತಿಗೇ ಓದನ್ನು ನಿಲ್ಲಿಸಿದರು. “ಆ ಸಮಯದಲ್ಲಿ ತಿರುಡಾ ತಿರುಡಿ ಎಂಬ ಚಲನಚಿತ್ರವೊಂದು ಬಂತು. ತರಗತಿಯ ಹುಡುಗರು ನನ್ನ ಸುತ್ತಮುತ್ತ ಸೇರುತ್ತಿದ್ದರು. ಅದರಲ್ಲಿದ್ದ ವಂದಾರ್ಕುಳಲಿ ಎಂಬ ಹಾಡಿನ [ಟ್ರಾನ್ಸ್‌ಜೆಂಡರ್‌ಗಳನ್ನು ಅಸಭ್ಯವಾಗಿ ಉಲ್ಲೇಖಿಸುವ ಹಾಡು] ಸಾಲುಗಳನ್ನು ಹಾಡಿ ನನಗೆ ಅವಮಾನ ಮಾಡುತ್ತಿದ್ದರು. ಅದರ ನಂತರ ನಾನು ಶಾಲೆಗೇ ಹೋಗಲಿಲ್ಲ,” ಎಂದು ನೆನಪಿಸಿಕೊಳ್ಳುತ್ತಾರೆ.

“ಇದನ್ನು ನನ್ನ ಹೆತ್ತವರಿಗೆ ಹೇಳಲಾಗಲಿಲ್ಲ [ನಾನು ಶಾಲೆಗೆ ಹೋಗುವುದನ್ನು ಏಕೆ ನಿಲ್ಲಿಸಿದೆ ಎಂಬುದನ್ನು]. ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಯೂ ಅವರಿರಲಿಲ್ಲ. ಹಾಗಾಗಿ ನಾನು ಏನನ್ನೂ ಹೇಳಲಿಲ್ಲ. ನಾನು ನನ್ನ ಹದಿಹರೆಯದ ಆರಂಭದಲ್ಲಿಯೇ ಮನೆಬಿಟ್ಟು ಓಡಿಹೋದೆ. ಆಮೇಲೆ 15 ವರ್ಷಗಳ ನಂತರ ಹಿಂದಿರುಗಿದೆ,” ಎಂದು ಅವರು ಹೇಳುತ್ತಾರೆ.

ಮನೆಗೆ ಮರಳಿ ಬರುವುದು ಸುಲಭದ ಮಾತಾಗಿರಲಿಲ್ಲ. ಮನೆಯಿಂದ ದೂರವಿದ್ದಾಗ, ಅವರ ಬಾಲ್ಯದ ಮನೆ ತೀವ್ರವಾಗಿ ಹಾನಿಗೊಳಗಾಯಿತು ಮತ್ತು ವಾಸಯೋಗ್ಯವಲ್ಲದಂತಾಗಿತ್ತು. ಬಾಡಿಗೆಗೆ ಮನೆಯೊಂದನ್ನು ಹುಡುಕಬೇಕಾಗಿತ್ತು. "ನಾನು ಈ ಹಳ್ಳಿಯಲ್ಲಿಯೇ ಬೆಳೆದಿದ್ದೇನೆ, ಆದರೆ ನಾನು ಟ್ರಾನ್ಸ್‌ಜೆಂಡರ್‌ ಎಂಬ ಕಾರಣಕ್ಕೆ ಇಲ್ಲಿ ಬಾಡಿಗೆಗೆ ಮನೆಗಳೇ ಸಿಗಲಿಲ್ಲ. ಅವರು [ಮನೆ ಮಾಲೀಕರು] ನಾವು ಮನೆಯಲ್ಲಿ ಲೈಂಗಿಕ ಚಟುವಟಿಕೆಗಳನ್ನು ಮಾಡುತ್ತೇವೆ ಎಂದು ಭಾವಿಸುತ್ತಾರೆ," ಎಂದು ಶರ್ಮಿ ಹೇಳುತ್ತಾರೆ. ಕೊನೆಗೆ ಗ್ರಾಮದ ಕೇಂದ್ರಭಾಗದಿಂದ ದೂರದಲ್ಲಿರುವ ಬಾಡಿಗೆ ಮನೆಯೊಂದಕ್ಕೆ ಹೋಗಬೇಕಾಯಿತು.

PHOTO • Akshara Sanal
PHOTO • Akshara Sanal

'ನಾನು ಬಾಲ್ಯದಲ್ಲಿಯೇ ರಂಗಭೂಮಿಯನ್ನು ಇಷ್ಟಪಟ್ಟಿದ್ದೆ. ಮೇಕಪ್, ವೇಷಭೂಷಣಗಳು- ಹೀಗೆ ನಾನು ಎಲ್ಲವನ್ನೂ ಇಷ್ಟಪಟ್ಟೆ. ಆದರೆ ಮುಂದೊಂದು ದಿನ ನಾನೂ ರಂಗಭೂಮಿ ಕಲಾವಿದೆಯಾಗುತ್ತೇನೆ ಎಂದು ಊಹಿಸಿರಲಿಲ್ಲ,’ ಎನ್ನುತ್ತಾರೆ ಶರ್ಮಿ

PHOTO • Akshara Sanal
PHOTO • Akshara Sanal

'ನನ್ನ ಮನೆಯವರು ನನ್ನನ್ನು ಹುಡುಗಿಯಂತೆ ಬೆಳೆಸಿದರು.ಇದು ತುಂಬಾ ಸಹಜ ಅನಿಸಿತು' ಎಂದು ನೆನಪಿಸಿಕೊಳ್ಳುತ್ತಾರೆ. ಶಾಲೆಯಲ್ಲಿನ ದಬ್ಬಾಳಿಕೆಯನ್ನು ಸಹಿಸಲಾಗದೆ, ಅವರು 10 ನೇ ತರಗತಿಗೇ ತಮ್ಮ ಶಿಕ್ಷಣವನ್ನು ನಿಲ್ಲಿಸಿದರು. ಸದ್ಯ 57 ವರ್ಷದ ತಮ್ಮ ತಾಯಿಯ (ಬಲ) ಜೊತೆಗೆ ವಾಸಿಸುವ ಶರ್ಮಿಯವರು 10 ಮೇಕೆಗಳನ್ನೂ ಸಾಕಿದ್ದಾರೆ. ತೆರುಕೂತ್ತು ಇಲ್ಲದ ತಿಂಗಳುಗಳಲ್ಲಿ ಇದೇ ಅವರ ಆದಾಯದ ಮೂಲ

ಆದಿ ದ್ರಾವಿಡರ್ ಸಮುದಾಯದ ಶರ್ಮಿ [ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿದೆ], ಸದ್ಯ 57 ವರ್ಷದ ತಮ್ಮ ತಾಯಿ ಮತ್ತು ತಮ್ಮ 10 ಮೇಕೆಗಳೊಂದಿಗೆ ವಾಸಿಸುತ್ತಿದ್ದಾರೆ. ಈ ಮೇಕೆಗಳೇ ತೆರುಕೂತ್ತು ಇಲ್ಲದ ತಿಂಗಳುಗಳಲ್ಲಿ ಅವರಿಗೆ ಆದಾಯವನ್ನು ತಂದುಕೊಡುತ್ತವೆ.

“ತೆರುಕೂತ್ತು ನನ್ನ ಏಕೈಕ ವೃತ್ತಿ. ಅದಕ್ಕೊಂದು ಗೌರವವಿದೆ. ನಾನು ಜನರ ನಡುವೆ ಘನತೆಯಿಂದ ಬದುಕುತ್ತಿದ್ದೇನೆ ಎಂಬುದೇ ನನಗೆ ಸಂತೋಷ. ತೆರುಕೂತ್ತು ಇಲ್ಲದಿದ್ದಾಗ [ಅಕ್ಟೋಬರ್ ಮತ್ತು ಮಾರ್ಚ್ ನಡುವೆ] ನಾವು ಮೇಕೆಗಳನ್ನು ಮಾರಿ ಬದುಕುತ್ತೇವೆ. ನಾನು ಪಿಚ್ಚೈ [ಭಿಕ್ಷಾಟನೆ] ಅಥವಾ ಸೆಕ್ಸ್‌ ವರ್ಕ್‌ ಮಾಡುವುದಿಲ್ಲ,'' ಎಂದು ಅವರು ಹೇಳುತ್ತಾರೆ.

ಚಿಕಿತ್ಸೆ-ಆರೈಕೆಯ ಕೆಲಸದ ಮೇಲೂ ಶರ್ಮಿಯವರಿಗೆ ಅಪಾರ ಆಸಕ್ತಿ. “ನನ್ನ ಮೇಕೆಗಳ ಆರೋಗ್ಯ ಕೆಟ್ಟಾಗ ನಾನೇ ಅವುಗಳಿಗೆ ಚಿಕಿತ್ಸೆ ಕೊಡುತ್ತೇನೆ. ಅವು ಮರಿಹಾಕುವಾಗಲೂ ನಾನೇ ಅವುಗಳ ಸೂಲಗಿತ್ತಿಯಾಗುತ್ತೇನೆ. ಆದರೆ ವೃತ್ತಿಪರ ನರ್ಸ್ ಆಗಲು ನನಗೆ ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.

*****

ಪ್ರೇಕ್ಷಕರ ಗಮನವನ್ನು ಸೆಳೆಯಲು ಕೋಡಂಗಿಯ ವೇಷದ ಹಾಡುಗಾರಿಕೆ ಮತ್ತು ಹಾಸ್ಯದೊಂದಿಗೆ ಪ್ರದರ್ಶನ ಆರಂಭವಾಗುತ್ತದೆ. ನಂತರ, ಪ್ರಧಾನ ಪಾತ್ರವನ್ನು ಮಾಡುವ ಪುರುಷ ಕಲಾವಿದ ವೇದಿಕೆಯ ಮೇಲೆ ಬಂದ. ಮೇಗರಾಜನ್ ಮತ್ತು ಕೋಡಿಕ್ಕಳದೇವಿ ತಮ್ಮ ಪರಿಚಯ ಗೀತೆಗಳನ್ನು ಅಭಿನಯಿಸಿ ಪ್ರಸಂಗದ ಆರಂಭವನ್ನು ಸಾರಿದರು.

PHOTO • Akshara Sanal
PHOTO • Akshara Sanal

ಇಲ್ಲಿ ಪ್ರದರ್ಶಿಸಲಾದ ಮಿನ್ನಲೋಳಿ ಶಿವಪೂಜೆ ಎಂಬ ಪ್ರಸಂಗವು ಪಾಂಡವ ರಾಜಕುಮಾರ ಅರ್ಜುನನ್ ಮತ್ತು ಅವನ ಎಂಟು ಹೆಂಡತಿಯರ ಕುರಿತಾದ ಮಹಾಭಾರತದ ಕಥೆಯೊಂದನ್ನು ಆಧರಿಸಿದೆ. ಬೋಗಾವತಿಯ ಪಾತ್ರವನ್ನು ಶರ್ಮಿಯವರು ಮಾಡುತ್ತಿದ್ದಾರೆ

PHOTO • Akshara Sanal
PHOTO • Akshara Sanal

ಶರ್ಮಿ ಮತ್ತು ಇತರ ಕಲಾವಿದರು ನಾಟಕದ ಸಮಯದಲ್ಲಿ ಸುಮಾರು 10 ಬಾರಿ ವೇಷಭೂಷಣಗಳನ್ನು ಬದಲಾಯಿಸಿದರು, ಇದು ಪ್ರೇಕ್ಷಕರನ್ನು ಅಚ್ಚರಿಗೊಳಿಸಿತು

ಹಾಸ್ಯ, ಹಾಡುಗಳು ಮತ್ತು ಪ್ರಲಾಪಗಳೊಂದಿಗೆ ಕಥೆಯು ವೇಗವಾಗಿ ಸಾಗುತ್ತಿತ್ತು. ಮುನುಸಾಮಿ ಎಂಬ ವಿದೂಷಕನು ತನ್ನ ಮಾತು ಮತ್ತು ಅಭಿನಯದಿಂದ ನೋಡುಗನ ಹೃದಯವನ್ನು ಕದಿಯುತ್ತಾನೆ. ಜನರು ಅವನ ಹಾಸ್ಯಕ್ಕೆ ಕಣ್ಣುಗಳಲ್ಲಿ ನೀರು ಬರುವವರೆಗೆ ನಗುತ್ತಾರೆ. ಶರ್ಮಿ ಮತ್ತು ಇತರ ಕಲಾವಿದರು ನಾಟಕದ ಸಮಯದಲ್ಲಿ ಸುಮಾರು 10 ಬಾರಿ ವೇಷಭೂಷಣಗಳನ್ನು ಬದಲಾಯಿಸುತ್ತಾರೆ, ಇದರಿಂದ ಪ್ರೇಕ್ಷಕರು ಆಶ್ಚರ್ಯಕ್ಕೊಳಗಾಗಿದ್ದರು. ನಾಟಕದ ಉದ್ದಕ್ಕೂಆಗಾಗ ಬರುವ ವಿರಾಮದಲ್ಲೂ ವೇದಿಕೆಯ ಮೇಲೆ ಕೆಲವು ನಾಟಕಗಳನ್ನು ಪ್ರದರ್ಶಿಸಿ ಪ್ರೇಕ್ಷಕರು ನಿದ್ದೆ ಮಾಡದಂತೆ ತಡೆಯಲಾಗುತ್ತಿತ್ತು.

ಮುಂಜಾನೆ ಸುಮಾರಿಗೆ 3:30 ಗಂಟೆಗೆ ಕೋಪಗೊಂಡ ಅರ್ಜುನನಿಂದ ವಿಧವೆಯಂತೆ ಬದುಕುವ ಶಾಪವನ್ನು ಪಡೆದ ಮಿನ್ನಲೋಳಿಯ ರಂಗಪ್ರವೇಶವಾಗುತ್ತದೆ. ನಾಟಕಕಾರ ರೂಬನ್ ಈ ಪಾತ್ರವನ್ನು ಮಾಡಿದ್ದಾರೆ. ಅವರು ಹಾಡಿದ ಒಪ್ಪರಿ (ಪ್ರಾರ್ಥನಾ ಗೀತೆ) ಪ್ರೇಕ್ಷಕರಲ್ಲಿ ಅನೇಕರ ಕಣ್ಣುಗಳನ್ನು ಒದ್ದೆಮಾಡಿತ್ತು. ರೂಬನ್ ಹಾಡುತ್ತಿರುವಾಗ ಕೆಲವರು ಅವರ ಕೈಗೆ ಹಣವನ್ನು ಕೊಡುತ್ತಿದ್ದರು. ಈ ದೃಶ್ಯವು ಮುಗಿದ ನಂತರ, ವಿದೂಷಕ ಸ್ವಲ್ಪ ಹಾಸ್ಯಚಟಾಕಿ ಹಾರಿಸಲು ವೇದಿಕೆಗೆ ಬರುತ್ತಾನೆ.

ಸೂರ್ಯೋದಯವಾಯಿತು. ಮಿನ್ನಲೋಳಿ ಆಗಷ್ಟೇ ಅರ್ಜುನನ ಜೊತೆಗೆ ಮತ್ತೆ ಒಂದಾಗಿದ್ದಾಳೆ. ರೂಬನ್ ಮರಣಹೊಂದಿದ ವ್ಯಕ್ತಿಯ ಹೆಸರನ್ನು ಹೇಳಿ, ಅವರ ಆಶೀರ್ವಾದವನ್ನು ಪಡೆಯುತ್ತಾರೆ. ನಂತರ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿ, ಪ್ರದರ್ಶನದ ಸಮಾಪ್ತಿಯನ್ನು ಘೋಷಿಸುತ್ತಾರೆ. ಬೆಳಿಗ್ಗೆ 6 ಗಂಟೆ ಎಲ್ಲಾ ಕಲಾವಿದರೂ ಪರಿಕರಗಳ ಗಂಟುಮೂಟೆ ಕಟ್ಟುತ್ತಾರೆ.

ಕಲಾವಿದರು ಮನೆಗೆ ಹಿಂತುರುಗುವ ತಯಾರಿಯಲ್ಲಿರುತ್ತಾರೆ. ದಣಿದಿದ್ದಾರೂ ಕೂಡ ಪ್ರದರ್ಶನ ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂಬ ಸಂತೋಷ ಅವರಲ್ಲಿದೆ. “ಕೆಲವೊಮ್ಮೆ, ಜನ ನಮಗೆ [ಪ್ರದರ್ಶನದ ಸಮಯದಲ್ಲಿ] ಕೀಟಲೆ ಮಾಡುತ್ತಾರೆ. ಒಮ್ಮೆ ಒಬ್ಬ ವ್ಯಕ್ತಿ ನಾನು ನನ್ನ ಫೋನ್ ನಂಬರ್‌ ಕೊಡು ನಿರಾಕರಿಸಿದೆ ಎಂಬ ಕಾರಣಕ್ಕೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದ,” ಎಂದು ಶರ್ಮಿ ಹೇಳುತ್ತಾರೆ. “ನಾವು ಟ್ರಾನ್ಸ್ ಮಹಿಳೆಯರೆಂದು ಗೊತ್ತಾದ ಮೇಲೆ, ಗಂಡಸರು ಕೆಲವೊಮ್ಮೆ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ, ಸೆಕ್ಸ್‌ ಮಾಡುವಂತೆ ಒತ್ತಾಯಿಸುತ್ತಾರೆ. ಆದರೆ ನಾವೂ ಅವರಂತೆ ಮನುಷ್ಯರು ಎಂಬ ಅರಿವು ಅವರಿಗಿಲ್ಲ. ಒಂದು ಕ್ಷಣವಾದರೂ ಅವರು ನಾವು ಎದುರಿಸುವ ಸಮಸ್ಯೆಗಳ ಬಗ್ಗೆ ಯೋಚಿಸಿದರೆ, ಅವರು ಹೀಗೆಲ್ಲ ಮಾಡುವುದಿಲ್ಲ,” ಎಂದು ಶರ್ಮಿ ಖೇದದಿಂದ ಹೇಳುತ್ತಾರೆ.

PHOTO • Akshara Sanal
PHOTO • Akshara Sanal

ನಾಟಕದಲ್ಲಿ ಹಾಸ್ಯ ಮತ್ತು ಅಳುವಿನ ಹಾಡುಗಳಿವೆ. ಕೃಷ್ಣನ ಪಾತ್ರವನ್ನು ಮಾಡುವ ಗೋಬಿಯವರ (ಬಲ) ಜೊತೆಗೆ ಶರ್ಮಿ ಅಭಿನಯಿಸಿದ್ದಾರೆ

PHOTO • Akshara Sanal
PHOTO • Akshara Sanal

ಅಭಿನಯದ ಪರಾಕಾಷ್ಠೆಯಲ್ಲಿರುವ ಮಿನ್ನಲೋಳಿ ಪಾತ್ರದಾರಿ ರೂಬನ್‌ ಮತ್ತು  ಅರ್ಜುನನ್ ಪಾತ್ರದಾರಿ ಅಪ್ಪುನ್ (ಎಡ). ಪ್ರದರ್ಶನದ ನಂತರ ಎಣ್ಣೆ ಬಳಸಿ ಮೇಕಪ್ ತೆಗೆಯುತ್ತಿರುವ ಶರ್ಮಿ (ಬಲ)

ಅರಿತಾರಮ್ ಅನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ, ಆದ್ದರಿಂದ ಕಲಾವಿದರು ಮೊದಲು ಅದರ ಮೇಲೆ ಎಣ್ಣೆಯನ್ನು ಲೇಪಿಸುತ್ತಾರೆ, ನಂತರ ಬಟ್ಟೆಯಿಂದ ಒರೆಸುತ್ತಾರೆ. “ಪ್ರಯಾಣಿಸಬೇಕಾದ ದೂರವನ್ನು ಅವಲಂಬಿಸಿ ನಾವು ಮನೆಗೆ ತಲುಪುವಾಗ ಬೆಳಿಗ್ಗೆ 9 ಅಥವಾ 10 ಗಂಟೆಯಾಗಿರುತ್ತದೆ. ಮನೆಗೆ ಬಂದು ಅಡುಗೆ ಮಾಡಿ ಊಟ ಮಾಡಿ ಮಲಗುತ್ತೇನೆ. ಕೆಲವೊಮ್ಮೆ ನಾನು ಮಧ್ಯಾಹ್ನ ಎದ್ದು ಏನಾದರೂ ತಿನ್ನುತ್ತೇನೆ. ಇಲ್ಲವೇ ಸಂಜೆಯವರೆಗೂ ಮಲಗುತ್ತೇನೆ,” ಎನ್ನುತ್ತಾರೆ ಶರ್ಮಿ. “ನೀವು ನಿರಂತರವಾಗಿ [ಕೂತ್ತು ಸೀಸನ್‌ನಲ್ಲಿ] ಪ್ರದರ್ಶನ ನೀಡಿದರೆ ಯಾವುದೇ ಆಯಾಸ ಆಗುವುದಿಲ್ಲ. ಪ್ರದರ್ಶನಗಳ ನಡುವೆ ಸುದೀರ್ಘ ವಿರಾಮ ಸಿಗುವ ಯಾವುದೇ ಹಬ್ಬಹರಿದಿನಗಳು ಇಲ್ಲದ ಸಮಯದಲ್ಲಿ ಪ್ರದರ್ಶನ ನೀಡುವಾಗ ಆಯಾಸ ಹೆಚ್ಚು,” ಎಂದು ಅವರು ಹೇಳುತ್ತಾರೆ.

ಶರ್ಮಿಯವರು ಹೇಳುವಂತೆ ಅವರಿಗೆ ವಿಶ್ರಾಂತಿ ಪಡೆಯಲು, ಇಲ್ಲವೇ ಕೆಲವೇ ಕೆಲವು ಪ್ರದರ್ಶನಗಳನ್ನು ಮಾತ್ರ ಮಾಡಲು ಸಾಧ್ಯವಿಲ್ಲ. ತೆರುಕೂತ್ತು ಕಲಾವಿದರ ವೃತ್ತಿ ಬದುಕಿನಲ್ಲಿ ವಯಸ್ಸು ಪ್ರಮುಖ ಅಂಶ: ಕಿರಿಯ ಮತ್ತು ಆರೋಗ್ಯವಂತ ಕಲಾವಿದರಿಗೆ ಒಳ್ಳೆಯ ಅವಕಾಶಗಳೂ, ಪ್ರತಿ ಪ್ರದರ್ಶನಕ್ಕೆ 700-800 ರುಪಾಯಿ ಸಂಭಾವನೆಯೂ ಸಿಗುತ್ತದೆ. ವಯಸ್ಸಾದಂತೆ ಅವರಿಗೆ ಕಡಿಮೆ ಪ್ರದರ್ಶನಗಳನ್ನು ಕೊಡಲಾಗುತ್ತದೆ, ವೇತನವೂ ಪ್ರತಿ ಪ್ರದರ್ಶನಕ್ಕೆ ಹೆಚ್ಚು ಕಡಿಮೆ ಸುಮಾರು 400-500 ರುಪಾಯಿ ನೀಡುತ್ತಾರೆ.

ಓರ್ವ ರಂಗಭೂಮಿ ಕಲಾವಿದೆಯಾಗಿ ಶರ್ಮಿ, “ನಮ್ಮ ಮುಖಗಳು ಸುಂದರವಾಗಿರುವ ವರೆಗೆ, ನಮ್ಮ ದೇಹದಲ್ಲಿ ಸಾಕಷ್ಟು ತ್ರಾಣ ಇರುವ ತನಕ ಮಾತ್ರ ನಮಗೆ ಉದ್ಯೋಗ ಸಿಗುತ್ತದೆ. ನಾನು ಅದನ್ನು [ಸೌಂದರ್ಯ, ಗೌರವ, ಉದ್ಯೋಗವನ್ನು] ಕಳೆದುಕೊಳ್ಳುವ ಮೊದಲು ವಾಸಿಸಲು ಒಂದು ಮನೆಯನ್ನು [ಬದುಕಲು ಸಾಕಾಗುವಷ್ಟು] ಕಟ್ಟಿಕೊಳ್ಳಬೇಕು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಬೇಕು. ಆಗ ಮಾತ್ರ ನಾವು ವಯಸ್ಸಾದ ಮೇಲೂ ಬದುಕಬಹುದು!” ಎಂದು ಹೇಳುತ್ತಾರೆ.

ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಅಡಿಯಲ್ಲಿ ತಯಾರಿಸಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Poongodi Mathiarasu

Poongodi Mathiarasu is an independent folk artist from Tamil Nadu and works closely with rural folk artists and the LGBTQIA+ community.

Other stories by Poongodi Mathiarasu
Photographs : Akshara Sanal

Akshara Sanal is an independent photojournalist based in Chennai, and interested in documenting stories around people.

Other stories by Akshara Sanal
Editor : Sangeeta Menon

Sangeeta Menon is a Mumbai-based writer, editor and communications consultant.

Other stories by Sangeeta Menon
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad