ಸೈಕಲ್ ಸವಾರಿ ಮೂಲಕ ಸಾಮಾಜಿಕ ಆಂದೋಲನ ನಡೆಸಬಹುದೆ? ಬಹುಶಃ ನಿಮಗೆ ಇದು ದೂರದ ಮಾತು ಎನ್ನಿಸಬಹುದು. ಆದರೆ ಅಷ್ಟೊಂದು ದೂರವಲ್ಲ- ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಇತ್ತೀಚೆಗೆ ವಯಸ್ಕರ ಶಿಕ್ಷಣದ ಮೂಲಕ ಅಕ್ಷರ ಕಲಿತ ಹತ್ತಾರು ಸಾವಿರ ಹಳ್ಳಿಯ  ಹೆಣ್ಣುಮಕ್ಕಳಿಗೂ ಇದು ದೂರವಲ್ಲ. ಕೆಲವೊಮ್ಮೆ ಹೊಸ ಬಗೆಯ, ತಮ್ಮ  ಹಿಂದುಳಿದಿರುವಿಕೆಯ ಜಾಡ್ಯದ ನಡುನರಕ್ಕೆ ಗುದ್ದು ಕೊಡುವಂತಹ, ಪ್ರತಿಭಟನಾತ್ಮಕವೂ ಆದಂತಹ, ಅವರನ್ನು ಬಂಧನದ ಸಂಕೋಲೆಗಳನ್ನು ತುಂಡರಿಸುವಂತಹ ದಾರಿಗಳನ್ನು ಜನರು ಹುಡುಕುತ್ತಾರೆ .

ಭಾರತದ ಅತಿ ಬಡಜಿಲ್ಲೆಗಳಲ್ಲೊಂದಾದ ಈ ಜಿಲ್ಲೆಯಲ್ಲಿ, ಗ್ರಾಮೀಣ ಮಹಿಳೆಯರಿಗೆ ಸೈಕಲ್ ಸವಾರಿಯೇ ಕ್ರಾಂತಿಯ ದಾರಿಯಾಗಿ ತೋರಿದೆ. ಕಳೆದ 18 ತಿಂಗಳುಗಳಲ್ಲಿ, 100,000ಕ್ಕಿಂತ ಹೆಚ್ಚು ಹಳ್ಳಿಯ ಮಹಿಳೆಯರು, ಅದರಲ್ಲೂ ಬಹುಪಾಲು ವಯಸ್ಕ ನವಸಾಕ್ಷರರು, ಬೈಸಿಕಲ್ ಸವಾರಿಯನ್ನು ಸ್ವಾತಂತ್ರ್ಯ, ಬಿಡುಗಡೆ ಮತ್ತು ಪ್ರಗತಿಯ ಸಂಕೇತವಾಗಿ ನೋಡುತ್ತಿದ್ದಾರೆ. ಇದರಲ್ಲಿ 10 ವರ್ಷಕ್ಕಿಂತ ಚಿಕ್ಕ ಹುಡುಗಿಯರನ್ನು ಹೊರತುಪಡಿಸಿದರೆ, ಇಡೀ ಜಿಲ್ಲೆಯ ಗ್ರಾಮೀಣ ಮಹಿಳೆಯರ ಕಾಲುಭಾಗದಷ್ಟು ಜನರು ಸೈಕಲ್ ಸವಾರಿ ಕಲಿತುಕೊಂಡಿದ್ದಾರೆ. ಅದರಲ್ಲಿ 70,000ಕ್ಕೂ ಹೆಚ್ಚು ಮಹಿಳೆಯರು ತಮ್ಮ ಈ ಹೊಸ ಕೌಶಲಗಳನ್ನು ಹೆಮ್ಮೆಯಿಂದ ಪ್ರದರ್ಶಿಸಲು ಸಾರ್ವಜನಿಕ ಪ್ರದರ್ಶನ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಮತ್ತು ತರಬೇತಿ ಶಿಬಿರಗಳು ಮತ್ತು ಕಲಿಯುವ ಹಂಬಲ ಇನ್ನೂ ಮುಂದುವರಿಯುತ್ತಲೇ ಇದೆ.

ಪುದುಕೋಟೆಯ ಒಳಗಿನ ಕಡುಹಳ್ಳಿಗಳಲ್ಲಿ, ಅತಿ ಸಂಪ್ರದಾಯವಾದಿ ಹಿನ್ನೆಲೆಯ ಮುಸ್ಲಿಂ ಹುಡುಗಿಯರು ತಮ್ಮ ಸೈಕಲ್ಲುಗಳ ಮೇಲೆ ರಸ್ತೆಗಳಲ್ಲಿ ಬಾಣದಂತೆ ಸುಯ್ಯನೆ ಬರುತ್ತಾರೆ. ಸೈಕಲ್ಲಿಗಾಗಿ ಕೆಲವರು ಬುರ್ಖಾ ಹಾಕುವುದನ್ನು ಬಿಟ್ಟಿರಬಹುದು. ಸೈಕಲ್ ಮೇಲೆ ಸವಾರಿ ಮಾಡುತ್ತಾ ಬಂದ ಮುಸ್ಲಿಂ ಹುಡುಗಿ, ಜಮೀಲಾ ಬೀಬಿ ನನಗೆ ಹೇಳಿದ್ದಿಷ್ಟು: “ಇದು ನನ್ನ ಹಕ್ಕು. ನಾವೀಗ ಎಲ್ಲಿಗೆ ಬೇಕಾದರೂ ಹೋಗಬಲ್ಲೆವು. ನಾನೀಗ ಬಸ್ಸಿಗಾಗಿ ಕಾಯಬೇಕಿಲ್ಲ. ನಾನು ಸೈಕಲ್ ಓಡಿಸಲು ಶುರುಮಾಡಿದಾಗ ಜನ ನನ್ನ ಬಗ್ಗೆ ಏನೇನೆಲ್ಲಾ ಮಾತಾಡಿಕೊಂಡರು ಅಂತ ನನಗೆ ಗೊತ್ತು, ಆದರೆ ನಾನು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ”

ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಫಾತಿಮಾರಿಗೆ ಎಷ್ಟರ ಮಟ್ಟಿಗೆ ಸೈಕಲ್ ಓಡಿಸುವ ಗೀಳೆಂದರೆ, ಪ್ರತಿದಿನ ಸಂಜೆ ಅರ್ಧಗಂಟೆಗೆ ಸೈಕಲನ್ನು ಬಾಡಿಗೆಗೆ ತೆಗೆದುಕೊಂಡು ಓಡಿಸುತ್ತಾರೆ. (ಹೊಸ ಸೈಕಲ್ಲಿನ ಬೆಲೆ ರೂ. 1200 ಕ್ಕಿಂತ ತುಸು ಹೆಚ್ಚಿರುವುದರಿಂದ ಅವರಿಗಿನ್ನೂ ಸ್ವಂತಕ್ಕೆ ಖರೀದಿಸಲು ಸಾಧ್ಯವಾಗಿಲ್ಲ.) “ಸೈಕಲ್ ಸವಾರಿಯಲ್ಲಿ ನಮ್ಮ ಸ್ವಾತಂತ್ರ್ಯವಿದೆ. ಈಗ ನಾವು ಯಾರನ್ನೂ ಅವಲಂಬಿಸಬೇಕಿಲ್ಲ. ಇನ್ನು ನನಗಿದನ್ನು ಕೈಬಿಡಲು ಸಾಧ್ಯವೂ ಇಲ್ಲ” ಎಂದು ಹೇಳಿದರು. ಜಮೀಲಾ, ಫಾತಿಮಾ ಮತ್ತವರ ಸ್ನೇಹಿತೆ ಅವಕನ್ನಿ, 20ರ ಹರೆಯದ ಇವರು, ಅವರ ಸಮುದಾಯದ ಲೆಕ್ಕವಿಲ್ಲದಷ್ಟು ಯುವತಿಯರಿಗೆ ಸೈಕಲ್ ಸವಾರಿಯ ತರಬೇತಿ ನೀಡಿದ್ದಾರೆ.

Women learning how to ride bicycles in a village in Tamil Nadu
PHOTO • P. Sainath

ತಮಿಳುನಾಡಿನ ಹಳ್ಳಿಯೊಂದರಲ್ಲಿ ಸೈಕಲ್ ಓಡಿಸುವುದನ್ನು ಕಲಿಯುತ್ತಿರುವ ಮಹಿಳೆ ಸೈಕಲ್ ಕಲಿಯಬಯಸುವವರೆಲ್ಲರೂ ತಮ್ಮ ನೆಚ್ಚಿನ ಭಾನುವಾರದಂದು ಅರಿವಿನದೀಪದ ‘ಸೈಕಲ್ ಕಲಿಕಾ ಶಿಬಿರ’ದಲ್ಲಿ ಸೇರಿಕೊಳ್ಳುತ್ತಾರೆ. ಕಲಿಸುವವರೂ ಕೂಡ ಅನುಕೂಲವಾದ ಉಡುಪಿನೊಂದಿಗೆ ಬರುತ್ತಾರೆ

ಸೈಕಲ್ ಸವಾರಿಯ ಕ್ರಾಂತಿಯ ಕಿಚ್ಚು ಜಿಲ್ಲೆಯಾದ್ಯಂತ ಹಬ್ಬಿದೆ. ಇದರ ಬಗ್ಗೆ ಆಸಕ್ತಿ ಇರುವವರಲ್ಲಿ ಮಹಿಳಾ ಕೃಷಿ ಕಾರ್ಮಿಕರು, ಕಲ್ಲುಕ್ವಾರಿಯ ಕಾರ್ಮಿಕರು ಮತ್ತು ಹಳ್ಳಿಯ ನರ್ಸುಗಳು ಸೇರಿದ್ದಾರೆ. ಬಾಲವಾಡಿ ಮತ್ತು ಅಂಗನವಾಡಿಯ ಕಾರ್ಯಕರ್ತರು, ಹರಳು ಕತ್ತರಿಸುವವರು ಮತ್ತು ಶಾಲಾ ಶಿಕ್ಷಕಿಯರೂ ಈ ಭರಾಟೆಗೆ ಸೇರಿಕೊಳ್ಳುತ್ತಿದ್ದಾರೆ. ಇನ್ನು ಗ್ರಾಮ ಸೇವಕಿಯರು ಮತ್ತು ಬಿಸಿಯೂಟ ಕಾರ್ಯಕರ್ತರೂ ಹಿಂದೆ ಬಿದ್ದಿಲ್ಲ. ಅರಿವಿನದೀಪ (ಅರಿವೋಳಿ ಲ್ಯಾಕ್ಕಮ್) ನೇತೃತ್ವದಲ್ಲಿ ನಡೆದ ವ್ಯಾಪಕವಾದ ಸಾಕ್ಷರತಾ ಅಭಿಯಾನ ಈ ಶಕ್ತಿಯನ್ನು ಬಡಿದೆಬ್ಬಿಸಲು ಯಶಸ್ವಿಯಾಯಿತು.  ನಾನು ಮಾತನಾಡಿಸಿದ ಪ್ರತಿಯೊಬ್ಬ ನವಸಾಕ್ಷರ ಹೊಸಸವಾರರೂ ಅವರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಈ ಸೈಕಲ್ ಸವಾರಿಯ ನಡುವೆ ನೇರ ಸಂಬಂಧವಿರುವುದನ್ನು ಕಂಡುಕೊಂಡಿದ್ದಾರೆ.

ಅರಿವಿನದೀಪ ಚಳವಳಿಯ ಕೇಂದ್ರ ಸಂಯೋಜಕರು ಮತ್ತು ಈ ಸೈಕಲ್ ಚಳವಳಿಯನ್ನು ಪ್ರಾರಂಭಿಸಿದವರಲ್ಲಿ ಒಬ್ಬರಾದ ಎನ್.ಕಣ್ಣಮ್ಮಾಳ್ ಅವರು “ಇಲ್ಲಿ ಮುಖ್ಯವಾದುದೇನೆಂದರೆ ಹೆಣ್ಣು ಮಕ್ಕಳಿಗೆ ಇದು ಕೊಟ್ಟ ಆತ್ಮವಿಶ್ವಾಸ. ಇನ್ನೂ ಮುಖ್ಯವಾದುದೇನೆಂದರೆ ಗಂಡಸರ ಮೇಲಿನ ಅವರ ಅವಲಂಬನೆಯನ್ನು ತಗ್ಗಿಸಿದ್ದು. ಈಗ ಅವರು ನೀರು ತರಲು ನಾಲ್ಕು ಕಿಮೀವರೆಗೆ ಒಬ್ಬೊಬ್ಬರೇ ಸೈಕಲ್ ತುಳಿದುಕೊಂಡು ಹೋಗುವುದನ್ನು ನಾವು ನೋಡುತ್ತಿದ್ದೇವೆ. ಕೆಲವೊಮ್ಮೆ ಮಕ್ಕಳನ್ನೂ ಕೂರಿಸಿಕೊಂಡು ಹೋಗುತ್ತಾರೆ. ಸಾಮಾನು ಸರಕುಗಳನ್ನೂ ಸೈಕಲಿನಲ್ಲಿ ಅವರೇ ಸಾಗಿಸಬಲ್ಲರು. ಆದರೆ ಇದನ್ನು ಪ್ರಾರಂಭಿಸಿದಾಗ ಮಾತ್ರ, ಈ ಸಂಪ್ರದಾಯವಾದಿಗಳು ಅವರ ಚಾರಿತ್ರ್ಯದ ಬಗ್ಗೆ ಮಾಡಿದ ತೀಕ್ಷ್ಣ ಮಾತುಗಳ ದಾಳಿಯನ್ನು ಈ ಹೆಣ್ಣುಮಕ್ಕಳು ಎದುರಿಸಬೇಕಾಯಿತು. ಆದರೆ ನಮ್ಮ ‘ಅರಿವಿನದೀಪ’ ಸೈಕಲ್ಲಿಗೆ ಸಾಮಾಜಿಕ ಒಪ್ಪಿಗೆಯನ್ನು ಕೊಟ್ಟಾಗಿತ್ತು. ಹಾಗಾಗಿ ನಮ್ಮ ಹೆಣ್ಣುಮಕ್ಕಳು ಹೆದರಲಿಲ್ಲ.” ಎಂದು ಹೇಳಿದರು.

ಪ್ರಾರಂಭದಲ್ಲಿ ಕಲಿತವರಲ್ಲಿ ಕಣ್ಣಮ್ಮಾಳ್ ಸ್ವತಃ ಒಬ್ಬರು. ವಿಜ್ಞಾನ ವಿಷಯದಲ್ಲಿ ಪದವೀಧರೆಯಾಗಿದ್ದರೂ, ಒಮ್ಮೆಯೂ ಸೈಕಲ್ ಮುಟ್ಟುವ ಧೈರ್ಯ ಮಾಡಿರಲಿಲ್ಲ. ಅರಿವಿನದೀಪ ಸೈಕಲ್ ತರಬೇತಿ ಶಿಬಿರಕ್ಕೆ ಬಂದದ್ದು ಒಂದು ವಿಶಿಷ್ಟ ಅನುಭವ. ಕಿಲಾಕುರುಚಿ ಹಳ್ಳಿಯಲ್ಲಿ ಕಲಿಯಬಯಸುವವರೆಲ್ಲ ಅವರ ನೆಚ್ಚಿನ ಭಾನುವಾರದಂದು ಸೇರುತ್ತಾರೆ. ಸೈಕಲ್ ಚಳವಳಿಯ ಬಗೆಗಿನ  ಅವರ ಉತ್ಕಟ ಅಭಿಮಾನ ನಿಮ್ಮನ್ನು ದಂಗುಬಡಿಸುತ್ತದೆ. ಅವರಿಗೆ ಅರಿವಾಗಿದೆ. ಪುರುಷರು ಕಟ್ಟಿದ ಗೊಡ್ಡು ಸಂಪ್ರದಾಯಗಳ ಬೇಡಿಯನ್ನು ಈ ಸೈಕಲಿನಲ್ಲಿ ಬೇಧಿಸಬಹುದು ಎಂದು. ಸೈಕಲ್ ಸವಾರಿಗೆ ಹುರುಪು ತುಂಬಲು ಅರವಿನದೀಪದಿಂದ ರಚಿಸಲಾದ ಹಾಡುಗಳನ್ನು ಹೊಸಸವಾರರು ಹಾಡುತ್ತಾರೆ. ಅದರಲ್ಲಿ ಒಂದು ಸಾಲು ಹೀಗಿದೆ: “ಓ ತಂಗಿ ಬಾರೆ ಸೈಕಲ್ ಕಲಿಯೋಣ, ಕಾಲಕ್ಕೆ ತಕ್ಕಂತೆ ನಡೆಯೋಣ”

ಹೊಸದಾಗಿ ಕಲಿಯುವವರಿಗೆ ಸಹಾಯ ಮಾಡಲು ಈಗಾಗಲೆ ಕಲಿತಿರುವ ತುಂಬಾ ಜನರು ಆಸಕ್ತಿಯಿಂದ ಬರುತ್ತಾರೆ. ಮಾಸ್ಟರ್ ಟ್ರೈನರ್ ಗಳಾಗಿ  (ಇದು ಜಾಸ್ತಿಯಾಯಿತು ಎನಿಸಬಹುದು) ಅರಿವಿನದೀಪಕ್ಕಾಗಿ ಹಣದ ಅಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಾರೆ. ಇದು ಕೇವಲ ಆಸಕ್ತಿ, ಹವ್ಯಾಸಕ್ಕಾಗಿ ಕಲಿಯುವುದು ಮಾತ್ರವಲ್ಲ, ಎಲ್ಲ ಹೆಣ್ಣುಮಕ್ಕಳೂ ಸೈಕಲ್ ಕಲಿತುಕೊಂಡಿರಬೇಕೆಂಬ ಅರಿವು ಅವರಲ್ಲಿ ಗಟ್ಟಿಯಾಗಿದೆ. ಇವರ ಈ ಅನುಭವವು ಸಾಕ್ಷರತಾ ಚಳವಳಿಯನ್ನು ಇನ್ನೂ ಚುರುಕಾಗಿಸಿದೆ. ಅರಿವಿನದೀಪದ ಬಗ್ಗೆ ಈ ಹೊಸಸವಾರರು ಮುನ್ನಿಗಿಂತಲೂ ಹೆಚ್ಚು ಆಸಕ್ತರಾಗಿದ್ದಾರೆ.

ಈ ಎಲ್ಲ ವಿದ್ಯಮಾನಗಳು ಈ ಹಿಂದೆ ಜನಾನುರಾಗಿ ಜಿಲ್ಲಾಧಿಕಾರಿಯಾಗಿದ್ದ ಶೀಲಾರಾಣಿ ಚುಂಕತರವರ ಕನಸಿನ ಕೂಸು. 1991ರಲ್ಲಿ ಸಾಕ್ಷರತೆಯನ್ನು ಕಟ್ಟಕಡೆಯ ಕಡುಹಳ್ಳಿಗಳಿಗೂ ಮುಟ್ಟಿಸುವ ಸಲುವಾಗಿ ಮಹಿಳಾ ಕಾರ್ಯಕರ್ತೆಯರಿಗೆ ಸೈಕಲ್ ಕಲಿಸುವುದು ಅವರ ಯೋಚನೆಯಾಗಿತ್ತು. ಸ್ವತಂತ್ರವಾಗಿ ಓಡಾಡುವ ಸಾಮರ್ಥ್ಯವನ್ನು ಅವರು ಕಲಿಕೆಯಯ ಒಂದು ಭಾಗವನ್ನಾಗಿ ಸೇರಿಸಿಬಿಟ್ಟರು. ಸ್ವತಂತ್ರವಾಗಿ ಓಡಾಡುವ ಸಾಮರ್ಥ್ಯವಿಲ್ಲದಿರುವುದು ಮಹಿಳೆಯರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎನ್ನುವುದು ಅವರ ಈ ತೀರ್ಮಾನಕ್ಕೆ ಕಾರಣವಾಗಿತ್ತು. ಚುಂಕತರವರು ಮಹಿಳೆಯರಿಗೆ ಬ್ಯಾಂಕುಗಳಿಂದ ಸೈಕಲ್ ಸಾಲ ಕೊಡಿಸಿದರು. ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡಲು ಪ್ರತಿ ತಾಲ್ಲೂಕಿಗೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡರು. ಜಿಲ್ಲೆಯ ಅತ್ಯುನ್ನತ ಅಧಿಕಾರಿಯಾಗಿ, ತಾವೇ ವಿಶೇಷ ಮುತುವರ್ಜಿ ವಹಿಸಿದ್ದು ಒಂದು ರೋಚಕ ಕ್ರಾಂತಿಗೆ ಮುನ್ನುಡಿಯಾಯಿತು.

ಮೊದಲು ಕಾರ್ಯಕರ್ತರು ಸೈಕಲ್ ಕಲಿತರು. ಅವರಿಂದ ಹೊಸದಾಗಿ ಅಕ್ಷರ ಕಲಿತವರಿಗೆ ಸೈಕಲ್ ಕಲಿಯಬೇಕೆನಿಸಿತು. ನಂತರ ಪ್ರತಿ ಮಹಿಳೆಗೂ ಕಲಿಯುವ ಬಯಕೆಯಾಯಿತು. ಎಷ್ಟು ಬೇಡಿಕೆ ಬಂತೆಂದರೆ, ಅಂಗಡಿಗಳಲ್ಲಿ ‘ಲೇಡೀಸ್’ ಸೈಕಲ್ಲುಗಳು ಸಿಗದಂತಾದುದಕ್ಕೆ ಅಚ್ಚರಿ ಪಡಬೇಕಿಲ್ಲ.  ಅದೇನೂ ಸಮಸ್ಯೆಯಾಗಲಿಲ್ಲ. ‘ಜಂಟ್ಸ್’ ಸೈಕಲ್ಲುಗಳೂ ಓಡಿದವು. ಹ್ಯಾಂಡಲ್ಲಿನಿಂದ ಸೀಟಿನವರೆಗಿನ ಮೇಲಿನ ಕಂಬಿ ಇರುವುದರಿಂದ ಕೆಲವು ಹೆಣ್ಣುಮಕ್ಕಳಿಗೆ ಇವೇ ಅನುಕೂಲ. ಅದರ ಮೇಲೆ ಚಿಕ್ಕಮಗುವನ್ನು ಕೂರಿಸಿಕೊಂಡು ಹೋಗಬಹುದು. ಈಗ ಸಾವಿರಾರು ಹೆಣ್ಣುಮಕ್ಕಳು ‘ಜಂಟ್ಸ್’ ಸೈಕಲ್ಲುಗಳನ್ನೇ ಇಟ್ಟುಕೊಂಡಿದ್ದಾರೆ. ಇನ್ನೂ ಸಾವಿರಾರು ಹೆಣ್ಣುಮಕ್ಕಳು ಯಾವ ಸೈಕಲ್ಲಾದರೂ ಸರಿ, ತೆಗೆದುಕೊಳ್ಳಲು ಹಂಬಲಿಸುತ್ತಿದ್ದಾರೆ.

1992ರಲ್ಲಿ ಮಾರ್ಚಿ 8ರ ಅಂತರಾಷ್ಟ್ರೀಯ ಮಹಿಳಾ ದಿನ ನಡೆದ ಮೇಲಂತೂ ಇಡೀ ಜಿಲ್ಲೆಯ ವಾತಾವರಣವೇ ಬದಲಾಗಿ ಹೋಗಿತ್ತು. ಕ್ಲಿಂಗ್, ಕ್ಲಿಂಗ್ ಎಂದು ಬೆಲ್ಲು ಹೊಡೆಯುತ್ತಾ, ಹ್ಯಾಂಡಲ್ಲಿಗೆ ಬಾವುಟ ಕಟ್ಟಿಕೊಂಡ ಸೈಕಲ್ಲುಗಳೊಂದಿಗೆ 1500ಕ್ಕೂ ಹೆಚ್ಚು ಮಹಿಳಾ ಸವಾರರು ಪುದುಕೋಟೆಯಲ್ಲಿ ಬಿರುಗಾಳಿಯೆಬ್ಬಿಸಿದ್ದರು. ಅವರ ಬೃಹತ್ ಮಹಿಳಾ ಸೈಕಲ್ ಜಾಥಾದ ಪ್ರದರ್ಶನವು ನಗರವಾಸಿಗಳನ್ನು ದಂಗುಬಡಿಸಿತ್ತು.

ಇದರ ಬಗ್ಗೆ ಗಂಡಸರು ಏನು ಹೇಳುತ್ತಾರೆ? ಇದೆಲ್ಲ ಒಳ್ಳೆಯದೇ ಎನ್ನುತ್ತಾರೆ ರಾಮ್ ಸೈಕಲ್ಲಿನ ಮಾಲಕರಾದ ಎಸ್. ಕನಕರಾಜನ್. ಇವರೊಬ್ಬರೇ ಈ ವರ್ಷದಲ್ಲಿ ‘ಲೇಡೀಸ್’ ಸೈಕಲ್ಲುಗಳ ಮಾರಾಟದಲ್ಲಿ ಶೇ. 350ರಷ್ಟು ಹೆಚ್ಚಳ ಕಂಡಿದ್ದಾರೆ. ಎರಡು ಕಾರಣಗಳಿಗಾಗಿ ಅವರು ಕಡಿಮೆ ಲೆಕ್ಕ ಹೇಳಿರಬೇಕು ಎನ್ನಿಸುತ್ತದೆ. ಒಂದು, ತುಂಬಾ ಹೆಣ್ಣು ಮಕ್ಕಳು ‘ಲೇಡೀಸ್’ ಸೈಕಲ್ಲುಗಳಿಗೆ ಕಾಯದೆ ‘ಜಂಟ್ಸ್’ ಸೈಕಲ್ಲುಗಳನ್ನು ಕೊಂಡದ್ದು; ಎರಡನೆಯದು, ಕನಕರಾಜನ್ ನಾನು ಮಾರುವೇಷದಲ್ಲಿ ಬಂದಿರುವ ಮಾರಾಟ ತೆರಿಗೆ ಇಲಾಖೆಯ ಅಧಿಕಾರಿ ಆಗಿರಬಹುದು ಎಂದು ಎಚ್ಚರಿಕೆಯಲ್ಲೆ ಮಾತನಾಡಿದ್ದರು.

ಏನೇ ಆದರೂ ಎಲ್ಲಾ ಗಂಡಸರು ಶತೃಗಳಲ್ಲವಲ್ಲ. ಕೆಲವರು ಪ್ರೋತ್ಸಾಹಿಸಿದರು ಕೂಡ. ಉದಾಹರಣೆಗೆ ಅರಿವಿನದೀಪದ ಕಾರ್ಯಕರ್ತರಾದ ಮುತ್ತು ಭಾಸ್ಕರನ್. ಈಗ ಸೈಕಲ್ ಗೀತೆಯಾಗಿ ಎಲ್ಲರ ಬಾಯಲ್ಲಿರುವ ಹಾಡೊಂದನ್ನು ಸೈಕಲ್ ಸವಾರಿಯ ಕುರಿತು ಬರೆದವರು ಅವರೇ.

ಕೆಂಡದಂತೆ ಉರಿಯುತ್ತಿದ್ದ ಕುಡಿಮಿಯಣ್ಣಾಮಲೆಯ ಕಲ್ಲುಕ್ವಾರಿಯಲ್ಲಿ, ಅಲ್ಲಿದ್ದವರಿಗೆ ಸೈಕಲ್ ಕಲಿಸುತ್ತಿರುವ 22ರ ಹರೆಯದ ಕೆ. ಮನೋರಮಣಿಯವರನ್ನು ನೋಡಿದರೆ, ಇದನ್ನೆಲ್ಲ ಮಾಡಿದ್ದು ಎಷ್ಟು ಸಾರ್ಥಕವಾಗಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಜೊತೆಯಲ್ಲಿ ಕೆಲಸ ಮಾಡುವವರೂ ಸೈಕಲ್ ಕಲಿಯುವುದು ಜೀವನಕ್ಕೆ ಅತ್ಯಾವಶ್ಯಕ ಎನ್ನುವುದು ಕ್ವಾರಿಯಲ್ಲಿ ಕೆಲಸ ಮಾಡುತ್ತಲೇ, ಅರಿವಿನದೀಪದ ಸ್ವಯಂಸೇವಕಿಯಾಗಿರುವ ಅವರ ಅನಿಸಿಕೆ. “ನಾವಿರುವ ಜಾಗ ಊರಿನಿಂದ ಸ್ವಲ್ಪ ದೂರದಲ್ಲಿದೆ. ಸೈಕಲ್ ಕಲಿತಿರುವುದರಿಂದ, ತುರ್ತು ಕೆಲಸಗಳಿಗೆ ಊರೊಳಗೆ ಬೇಗ ಹೋಗಿಬರಲು ಸುಲಭ” ಎಂದು ಹೇಳಿದರು.

PHOTO • P. Sainath
PHOTO • P. Sainath

1992-93ರಲ್ಲಿ ಪುದುಕೋಟೆ ಜಿಲ್ಲೆಯಲ್ಲಿ 1,00,000ಕ್ಕೂ ಹೆಚ್ಚಿನ ಹೆಣ್ಣುಮಕ್ಕಳು ಸೈಕಲ್ ಕಲಿತಿದ್ದಾರೆ. ಇದು ಅವರ ಉತ್ತಮ ಹಣಕಾಸಿನ ಪರಿಸ್ಥಿತಿಯ ಮುನ್ಸೂಚನೆ, ಆದರೆ ಈ ಹೆಣ್ಣುಮಕ್ಕಳಿಗೆ ಸೈಕಲ್ ಎಂದರೆ ಕೇವಲ ಅಷ್ಟು ಮಾತ್ರ ಅಲ್ಲ. ಅದರಿಂದಲೇ ಅವರ ಸ್ವಾತಂತ್ರ್ಯ

1992ರಲ್ಲಿ ಒಂದೇ ವಾರದಲ್ಲಿ, ಅರಿವಿನದೀಪದಿಂದ ನಡೆಸಲಾದ ‘ಸಾರ್ವಜನಿಕ ಪ್ರದರ್ಶನ ಸ್ಪರ್ಧೆ’ಗಳಲ್ಲಿ 70,000ಕ್ಕೂ ಹೆಚ್ಚು ಮಹಿಳೆಯರು ತಮ್ಮ ಸೈಕಲ್ ಸವಾರಿಯ ಕೌಶಲಗಳನ್ನು ಪ್ರದರ್ಶಿಸಿದರು. ಇದನ್ನು ಗಮನಿಸಿದ ವಿಶ್ವಸಂಸ್ಥೆಯ ಯುನಿಸೆಫ್ ಅರಿವಿನದೀಪದ ಮಹಿಳಾ ಕಾರ್ಯಕರ್ತೆಯರಿಗೆ 50 ಮೊಪೆಡ್ಡುಗಳನ್ನು ನೀಡಿ ತಾನೂ ಪ್ರೋತ್ಸಾಹಿಸಿತು.

ಸೈಕಲ್ಲಿನಿಂದ ಆರ್ಥಿಕ ಅನುಕೂಲಗಳು ಖಂಡಿತಾ ಇವೆ. ವರಮಾನ ಹೆಚ್ಚುತ್ತದೆ. ಕೆಲವು ಮಹಿಳೆಯರು ತಾವು ಬೆಳೆದ ಸೊಪ್ಪು ತರಕಾರಿಗಳನ್ನು ಅಕ್ಕಪಕ್ಕದ ಹಳ್ಳಿಗಳಿಗೆ ಮಾರುತ್ತಾರೆ. ವ್ಯರ್ಥವಾಗಿ ಬಸ್ಸಿಗೆ ಕಾಯುತ್ತಾ ನಿಲ್ಲುವ ಬದಲು, ನೀವು ಬೈಸಿಕಲ್ ಏರಿ ಪಕ್ಕದ ಹಳ್ಳಿಯಲ್ಲಿ ವ್ಯಾಪಾರ ಶುರು ಮಾಡಬಹುದು. ಬಸ್ಸೇ ಇಲ್ಲದಿರುವಲ್ಲಿ ಸೈಕಲ್ ಮತ್ತೂ ಅನುಕೂಲವೆ. ಎರಡನೆಯದಾಗಿ ಓಡಾಟದ ಬಗ್ಗೆ ಸಮಸ್ಯೆ ಇಲ್ಲದಿರುವಾಗ ನಿಮ್ಮ ವ್ಯಾಪಾರದ ಕುರಿತು ನೀವು ಹೆಚ್ಚು ಗಮನವಹಿಸಬಹುದು. ಮೂರನೆಯದಾಗಿ ನೀವು ಹೆಚ್ಚು ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡಬಹುದು. ಕೊನೆಯದಾಗಿ ಬೇಗನೆ ಕೆಲಸ ಮುಗಿಸಿ ಬರುವುದರಿಂದ ನಿಮಗೆ ಕೈಕಾಲು ಚಾಚಿಕೊಳ್ಳಲು ಸ್ವಲ್ಪ ಬಿಡುವು ಸಿಗುತ್ತದೆ.

ಸಣ್ಣಮಟ್ಟದಲ್ಲಿ ಬೆಳೆದು ಮಾರುವ, ಬಸ್ಸಿಗೆ ಕಾಯುತ್ತಾ ನಿಲ್ಲುವವರು ಬಸ್ಸು ನಿಲ್ಲುವಲ್ಲಿಗೆ ಮುಟ್ಟಲು ತಂದೆ, ತಮ್ಮ, ಗಂಡ ಅಥವಾ ಮಗನನ್ನೋ ಅವಲಂಬಿಸುತ್ತಾರೆ. ಅವರು ಬಸ್ಸಿನಲ್ಲಿ ಕೆಲವೇ ಕೆಲವು ಹಳ್ಳಿಗಳಿಗೆ ಹೋಗಬಹುದು. ಕೆಲವರು ನಡೆದುಕೊಂಡು ಹೋಗುತ್ತಿದ್ದರು. ಬೈಸಿಕಲ್ ಕೊಳ್ಳಲಾಗದವರು ಇನ್ನೂ ನಡೆದುಕೊಂಡೇ ಹೋಗುತ್ತಿದ್ದಾರೆ. ಈ ಹೆಣ್ಣುಮಕ್ಕಳು ಬೇಗ ವಾಪಾಸು ಬರಬೇಕು, ಮನೆಯಲ್ಲಿ ಅವರ ಸಣ್ಣ ಕೂಸುಗಳು ಮತ್ತು ನೀರು ತರುವ ಮತ್ತಿರತ ಚಾಕರಿಗಳು ಅವರಿಗಾಗಿ ಕಾಯುತ್ತಿರುತ್ತವೆ. ಬೈಸಿಕಲ್ ಇರುವವರು ಎಲ್ಲ ಕೆಲಸಗಳನ್ನು ಆರಾಮಾಗಿ ಮುಗಿಸಿಕೊಳ್ಳುತ್ತಾರೆ. ಅಂದರೆ ದೂರದ ಹಳ್ಳಿಯ ರಸ್ತೆಯಲ್ಲಿ, ಹಿಂದಿನ ಕ್ಯಾರಿಯರ್ರಿನಲ್ಲಿ ಸರಕು ಇಟ್ಟುಕೊಂಡು, ಮುಂದಿನ ಕಂಬಿಯಲ್ಲಿ ತನ್ನ ಚಿಕ್ಕ ಮಗುವನ್ನು ಕೂರಿಸಿಕೊಂಡು ಹೋಗುವ ತಾಯಂದಿರನ್ನು ನೀವು ನೋಡಬಹುದು. ಈಗ ಎರಡು ಕೊಡಗಳನ್ನು ಹಗ್ಗದಲ್ಲಿ ಕ್ಯಾರಿಯರ್ರಿಗೆ ಅಡ್ಡಲಾಗಿ ಹಾಕಿಕೊಂಡು, ಇನ್ನೊಂದು ಕೊಡವನ್ನು ಕ್ಯಾರಿಯರ್ರಿನ ಮೇಲೆ ಇಟ್ಟುಕೊಂಡು, ಮನೆಗೋ ಇಲ್ಲವೆ ಕೆಲಸಕ್ಕೋ ಸೈಕಲ್ ಹೊಡೆದುಕೊಂಡೇ ಹೋಗಬಲ್ಲರು.

ಆದರೂ, ಬರೀ ಆರ್ಥಿಕ ವಿಚಾರಗಳ ಬಗ್ಗೆಯೇ ಮಾತನಾಡಿದರೆ ತಪ್ಪಾಗುತ್ತದೆ. ಸೈಕಲ್ಲು ತಂದುಕೊಟ್ಟ ಆತ್ಮಗೌರವದ ಬಲ ಅಗಣಿತವಾದುದು. “ಖಂಡಿತವಾಗಿಯೂ ಇದು ಕೇವಲ ದುಡಿಮೆಯ ವಿಷಯವಲ್ಲ,” ಎನ್ನುತ್ತಾ ಫಾತಿಮಾರು ನನ್ನತ್ತ ನೋಡಿದಾಗ ಬರಿಯ ಆದಾಯದ ಬಗ್ಗೆ ಮಾತಾಡುತ್ತಿರುವ ನಾನೆಂತ ಮೂರ್ಖನೆನಿಸಿತು. “ಸೈಕಲ್ ಹೊಡೆದರೆ ನನಗಾರು ದುಡ್ಡು ಕೊಡುತ್ತಾರೆ? ಸದ್ಯಕ್ಕೆ ನನಗೆ ಕೈಯಲ್ಲಿ ಸೈಕಲ್ ಕೊಳ್ಳಲೂ ಆಗದು. ಪ್ರತಿ ದಿನ ಸೈಕಲ್ ಬಾಡಿಗೆ ಕೊಟ್ಟು ನನ್ನ ದುಡ್ಡೇ ಖಾಲಿಯಾಗುತ್ತದೆ. ಆದರೆ ದಿನಾಲು ಸಾಯಂಕಾಲ ಸೈಕಲ್ಲು ಓಡಿಸುವಾಗ ಅನುಭವಿಸುವ ಆ ಖುಷಿ, ಬಿಡುಗಡೆಯ ಭಾವ, ನಾವೂ ಹಕ್ಕಿಗಳಂತೆ ಬಹುದೂರ ಹಾರಬಲ್ಲೆವೇನೋ ಎನ್ನಿಸುತ್ತದೆ.” ಪುದುಕೋಟೆಗೆ ಬರುವ ಮುನ್ನ ಈ ಇಗ್ಗಾಲಿ ನನಗೆ ಹೀಗೆ ಕಾಣಿಸಿರಲೇ ಇಲ್ಲ- ಬಿಡುಗಡೆಯ ಬಂಡಿಯಾಗಿ.

“ನಮ್ಮಂತಹ ಹಳ್ಳಿ ಮಹಿಳೆಯರಿಗೆ ಇದೆಷ್ಟು ದೊಡ್ಡ ವಿಷಯ ಅನ್ನುವುದು ನೋಡುವವರಿಗೆ ಗೊತ್ತಾಗುವುದಿಲ್ಲ,” ಎಂದ ಕಣ್ಣಮ್ಮಾಳ್. ಮುಂದುವರೆದು ಹೇಳಿದರು “ಇದು ವಿಮಾನವನ್ನೇ ಓಡಿಸಿದಂತೆ.  ಹಿಮಾಲಯದೆತ್ತರದ ಸಾಧನೆ. ಜನರು ನೋಡಿ ನಗಬಹುದು. ಆದರೆ ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು ಇದೆಷ್ಟು ದೊಡ್ಡ ಸಾಧನೆ ಎಂದು”

ಮುಗಿಸುವ ಮೊದಲು ‘ಉತ್ತಮ ಪತ್ರಿಕಾಧರ್ಮದ ತಕ್ಕಡಿ’ ತೂಗಿಸಲು, ಈ ಸೈಕಲ್ ಚಳವಳಿಯನ್ನು ವಿರೋಧಿಸುವವರ ಅಭಿಪ್ರಾಯಗಳನ್ನು ಇಲ್ಲಿ ಹಾಕಬೇಕೆಂದು ಅನಿಸಿತು. ಹಾಕದಿದ್ದರೂ ಯಾರು ತಾನೆ ಕೇಳುತ್ತಾರೆ? ಅಲ್ಲಿ ಮೊನ್ನೆ ತಾನೆ ಅಕ್ಷರ ಕಲಿತ 100,000 ಹೆಣ್ಣುಮಕ್ಕಳು ಸೈಕಲ್ ಓಡಿಸುತ್ತಿದ್ದಾರೆ ನೋಡಿ, ಅಷ್ಟೆ.

ಇದನ್ನು ವಿರೋಧಿಸಿದ್ದ ಗಂಡಸರು ಈಗೇನಿದ್ದರೂ ಒಂದು ರೌಂಡ್ ವಾಕಿಂಗ್ ಮಾಡಿಕೊಂಡು ಬರಬಹುದಷ್ಟೆ- ಯಾಕೆಂದರೆ ಇನ್ನು ಸೈಕಲ್ಲಿನ ವಿಷಯಕ್ಕೆ ಬಂದರೆ ಹೆಣ್ಣಮಕ್ಕಳಷ್ಟು ಜೋರಾಗಿ ಸೈಕಲ್ ಓಡಿಸಲು ಅವರ ಕೈಲಿ ಆಗುವುದಿಲ್ಲ.

ಕೊನೆಯದಾಗಿ: ನಾನು ಮತ್ತೆ 1995ರ ಏಪ್ರಿಲ್ಲಿನಲ್ಲಿ ಪುದುಕೋಟೆಗೆ ಹೋದಾಗ, ಆ ಹುಮ್ಮಸ್ಸು ಇನ್ನೂ ಇತ್ತು. ಆದರೆ ಈಗ ಒಂದು ಬೈಸಿಕಲ್ಲಿಗೆ ರೂ. 1400 ಆಗಿರುವುದರಿಂದ ಬಹುತೇಕ ಮಹಿಳೆಯರಿಗೆ ಇನ್ನೂ ಸೈಕಲ್ ಕೊಳ್ಳಲು ಸಾಧ್ಯವಾಗಿಲ್ಲ. ಈಗ ಬರುತ್ತಿರುವ ಹೊಸ ತಲೆಮಾರು ಹಿರಿಯರ ಹೋರಾಟದಿಂದ ಏನನ್ನಾದರೂ ಕಲಿತುಕೊಳ್ಳುವಷ್ಟು ಇನ್ನೂ ಬಲಿತಿಲ್ಲ. ಅಥವಾ ಅವರಂತೆ ಹೋರಾಡಬೇಕಾದ ಅಗತ್ಯವೂ ಇಲ್ಲ. ಆದರೆ ಇಷ್ಟು ಮಹಿಳೆಯರು ಸೇರಿ ಸೈಕಲ್ ಕ್ರಾಂತಿಯನ್ನು ಮಾಡಿದ್ದು ಇಡೀ ಭಾರತದಲ್ಲಿ ಪುದುಕೋಟೆಯನ್ನು ಒಂದು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸಿದೆ. ಮತ್ತು ಬೇರೆ ರಾಜ್ಯಗಳ ಮಹಿಳೆಯರಿಗೆ ಕಲಿಯುವ ಕುತೂಹಲವನ್ನು ಧಾರೆಯೆರೆದಿದೆ.

ಈ ವರದಿಯು ಮೊದಲು ಪಿ. ಸಾಯಿನಾಥ್ ರವರ 1996ರಲ್ಲಿ ಪ್ರಕಟವಾದ ಪುಸ್ತಕ ‘ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್’ (ಬರ ಅಂದ್ರೆ ಎಲ್ಲರಿಗೂ ಇಷ್ಟ - ಕನ್ನಡ ಅನುವಾದ: ಜಿ.ಎನ್. ಮೋಹನ್) ನಲ್ಲಿ ಪ್ರಕಟಿಸಲಾಗಿದೆ .

ಅನುವಾದ: ಮಂಜಪ್ಪ ಬಿ.ಎಸ್.

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : B.S. Manjappa

Manjappa B. S. is an emerging writer and translator in Kannada.

Other stories by B.S. Manjappa