“ನೀವೀಗ ಇಲ್ಲಿ ನನ್ನ ಬ್ಯಾಂಕ್ ಖಾತೆ ತೆರೀತಿದ್ದೀರಲ್ಲ, ಅದನ್ನು ನಾನು ದೇಶದಲ್ಲಿ ಬೇರೆ ಕಡೆ ಕೂಡ ಉಪಯೋಗ ಮಾಡಲಿಕ್ಕೆ ಆಗ್ತದಾ?” ಎಂದು ತನ್ನ ಜೊತೆ ಆತ್ಮೀಯತೆಯಿಂದ ಮಾತನಾಡಿ ಖಾತೆ ತೆರೆಯುವ ಔಪಚಾರಿಕತೆಗಳನ್ನು ಪೂರೈಸುತ್ತಿರುವ ಬ್ಯಾಂಕ್ ಮ್ಯಾನೇಜರನ್ನು ಕಳವಳದಿಂದ ಪ್ರಶ್ನಿಸುತ್ತಿದ್ದಾರೆ, ಧೀರಜ್ ರೆಹುವಾ ಮನ್ಸೂರ್.

“ಚಿಂತೆಮಾಡಬೇಡಿ, ನಾನು ನಿಮಗೆ ಎಟಿಎಮ್ ಕಾರ್ಡ್ ಕೊಡುತ್ತೇನೆ. ಅದನ್ನು ನೀವು ನಿಮ್ಮ ರಾಜ್ಯದಲ್ಲಿ, ನಿಮ್ಮೂರಿನಲ್ಲಿ ಎಲ್ಲೆಲ್ಲಿ ಎಟಿಎಮ್ ಇದೆಯೋ ಅಲ್ಲೆಲ್ಲ ಆರಾಮಾಗಿ ಬಳಸಬಹುದು” ಎನ್ನುತ್ತಾರೆ ಮ್ಯಾನೇಜರ್ ಸಂಜಯ್ ಅಸ್ತೂರ್ಕರ್.

ಇನ್ನಷ್ಟು ಗೊಂದಲಗೊಂಡ ಧೀರಜ್ ಪ್ರಶ್ನೆ: “ಅದರಿಂದ ನನಗೇನು ಉಪಯೋಗ? ನನಗೆ ಎಟಿಎಮ್ ಕಾರ್ಡ್ ಉಪಯೋಗಿಸುವುದು ಹೇಗಂತ ಗೊತ್ತಿಲ್ಲ. ನನ್ನಂತ ಹೆಬ್ಬೆಟ್ಟಿನವನಿಗೂ ಅದನ್ನು ಉಪಯೋಗಿಸಲು ಸಾಧ್ಯ ಇದೆಯಾ?”

ಈಗ ಕಳವಳಗೊಳ್ಳುವ ಸರದಿ ಬ್ಯಾಂಕ್ ಮ್ಯಾನೇಜರರದು. ಇದು ನ್ಯಾಯವಾದ ಪ್ರಶ್ನೆ ಎಂದವರಿಗೆ ಗೊತ್ತಿದೆ. ತನ್ನೆದುರು ಕಳವಳದಿಂದ ನಿಂತಿರುವ ಮೂವರು ಹುಡುಗರು ಅಕ್ಷರಸ್ಥರಲ್ಲ ಎಂಬುದು ಅವರಿಗೆ ಗೊತ್ತಿದೆ. ಅವರ ಬಯೋಮೆಟ್ರಿಕ್ ಮಾಹಿತಿಗಳು ಮುಂದೊಂದು ದಿನ ಅವರ ಉಪಕಾರಕ್ಕೆ ಬರಲಿರುವುದೇನೋ ಸರಿ, ಆದರೆ ಔರಂಗಾಬಾದಿನ ಆದುಲ್ ಜಿಲ್ಲೆಯಲ್ಲಿ ಈವತ್ತಿಗೆ ಆ ಸವಲತ್ತು ಲಭ್ಯವಿಲ್ಲ. ಅದನ್ನು ಎಲ್ಲಿ ಒದಗಿಸಲಾಗಿದೆಯೋ ಅಲ್ಲಿ ಅದು ಒಂದೋ ಬಳಕೆಯಲ್ಲಿಲ್ಲ ಅಥವಾ ಹಾಳಾಗಿ ಕುಳಿತಿದೆ. ಉತ್ತರ ಪ್ರದೇಶದ ಬೆಹರಿಚ್ ಜಿಲ್ಲೆಯವರಾದ ಈ ಯುವಕರಿಗೆ ಅವರ ಊರಲ್ಲಿ ಅಥವಾ ಅವರ ಕುಟುಂಬ ಈಗ ಬದುಕುತ್ತಿರುವ ಲಕ್ನೋದ ಗ್ರಾಮೀಣ ಭಾಗಗಳಲ್ಲಿ ಎಟಿಎಮ್ ಸಿಕ್ಕುವ ಸಾಧ್ಯತೆಗಳು ಇಲ್ಲವೇಇಲ್ಲ ಎಂಬಷ್ಟು ಕಡಿಮೆ ಎಂಬ ವಿಚಾರವೂ ಮ್ಯಾನೇಜರ್ ಗೆ ಗೊತ್ತಿದೆ.

“ನನಗೆ ಚೆಕ್ ಪುಸ್ತಕ ಸಿಕ್ಕಿದರೆ, ಅದರಲ್ಲಿ ಹೆಬ್ಬೆಟ್ಟು ಹಾಕಬಹುದಲ್ಲವಾ?”

ಇಲ್ಲ, ಅದು ಸಾಧ್ಯವಿಲ್ಲ. ಇದು ಬೇರೆ ಸೌಲಭ್ಯಗಳಿಲ್ಲದ ಸರಳ ಉಳಿತಾಯ ಖಾತೆಯಾಗಿದ್ದು, ಇದಕ್ಕೆ ಚೆಕ್ ಪುಸ್ತಕ ಸೌಲಭ್ಯ ಇಲ್ಲ.

ಧೀರಜ್ ಗೆ ಕಣ್ಣೀರು ಬರುವುದೊಂದು ಬಾಕಿ. “ನಾನೀಗ ನನ್ನ ಕುಟುಂಬಕ್ಕೆ ದುಡ್ಡು ಕಳುಹಿಸುವುದು ಹೇಗೆ? ನಾನೀಗ ಇಲ್ಲಿ ದುಡ್ಡು ಜಮಾ ಮಾಡಿದರೂ – ಕುಟುಂಬದವರು ಅಲ್ಲಿ ಅವರ ಹಳ್ಳಿಯಿಂದ ಲಕ್ನೋಗೆ ಹೋದರೂ – ಅವರಿಗೆ ದುಡ್ಡು ಸಿಗುವುದು ಹೇಗೆ? ನಾನು ಸ್ವಲ್ಪ ದುಡ್ಡು ಅವರಿಗೆ ತಲುಪಿಸುವ ಹೊತ್ತಿಗೆ ಅವರು ಹಸಿವಿನಿಂದ ಕಂಗೆಟ್ಟಿರುತ್ತಾರೆ.”

ಮಹಾರಾಷ್ಟ್ರದ ಆದುಲ್ ನಲ್ಲಿ ಐದು ಬೇರೆಬೇರೆ ರಾಜ್ಯಗಳಿಂದ ವಲಸೆ ಬಂದಿರುವ 11 ಕೂಲಿ ಕಾರ್ಮಿಕರಲ್ಲಿ ಧೀರಜ್ ಕೂಡ ಒಬ್ಬರು. ಉಳಿದ ನಾಲ್ವರಿಗೂ ಧೀರಜ್ ನದೇ ಸರ್ ನೇಮ್ ಇದೆ, ಅವರೂ ಉತ್ತರಪ್ರದೇಶದವರು. ಉಳಿದವರು ಅಸ್ಸಾಂ, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಲಕ್ಕೆ ಸೇರಿದವರು. ಅವರು ಪ್ರತಿಯೊಬ್ಬರೂ ದಿನಕ್ಕೆ 350ರೂ. ಕೂಲಿ ಪಡೆಯುತ್ತಾರೆ. ಮೊನ್ನೆ ನವೆಂಬರ್ 8ರಂದು ನೋಟು ರದ್ದತಿಯ ಸರ್ಜಿಕಲ್ ಬಾಂಬು ಬೀಳುವ ತನಕವೂ ಅವರು  ಈ ಸಣ್ಣ ಸಂಬಳದೊಳಗೇ ತಮ್ಮ ಆಹಾರ, ವಸತಿ, ಸಾರಿಗೆ, ಬಟ್ಟೆಗಳ ಖರ್ಚನ್ನೆಲ್ಲ ನಿಭಾಯಿಸಿಕೊಂಡು, ಉಳಿದ ಅಲ್ಪಸ್ವಲ್ಪವನ್ನು ಊರಲ್ಲಿರುವ ತಮ್ಮ ಕುಟುಂಬಕ್ಕೆ ಕಳುಹಿಸಿಕೊಡುತ್ತಿದ್ದರು.

ನಾವು ಆದುಲ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್ ಬಿ ಎಚ್) ಶಾಖೆಯಲ್ಲಿದ್ದೇವೆ. ಇದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕು. ಬ್ಯಾಂಕಿನ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಬಹಳ ಆತ್ಮೀಯತೆಯಿಂದ ಈ ವಲಸೆ ಕಾರ್ಮಿಕರ ಖಾತೆಗಳನ್ನು ತೆರೆಯಲು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಕೆಲಸದ ಅವಧಿ ಮುಗಿದಿದ್ದರೂ, ಬ್ಯಾಂಕ್ ಸಿಬ್ಬಂದಿ ಸಹನೆಯಿಂದ ಈ ಪಾಪದ, ಕಳವಳಕ್ಕೀಡಾಗಿರುವ ಹುಡುಗರ ಗುಂಪಿಗೆ ಸಹಾಯ ಮಾಡುತ್ತಿದ್ದಾರೆ. ಈ ಹೊಸ ಗ್ರಾಹಕರ ಪರಿಶೀಲನಾ ಪ್ರಕ್ರಿಯೆಯನ್ನೂ ಅವರು ಈವತ್ತು ರಾತ್ರಿಯೇ ಮುಗಿಸುತ್ತಾರೆ. ನಾಳೆಯಿಂದಲೇ ಅವರ ಖಾತೆಗಳು ಚಲಾವಣೆಗೆ ಬರಲಿವೆ.


02-DSC00681-PS-BPL Migrant XI.jpg

ಎಸ್ ಬಿ ಎಚ್ ನ ಆದುಲ್ ಶಾಖೆಯಲ್ಲಿ ತಮ್ಮ ಖಾತೆಯನ್ನು ತೆರೆಯುವ ಪ್ರಕ್ರಿಯೆಗಾಗಿ ಕಾದು ಕುಳಿತಿರುವ ಹುಡುಗರು. ಎಡದಿಂದ ಬಲಕ್ಕೆ: ರಿಂಕೂ ರೆಹುವಾಮನ್ಸೂರ್, ನೂತನ್ ಪಂಡಾ, ಉಮೇಶ್ ಮುಂಡಾ, ಬಪ್ಪಿ ಧುಲಾಯಿ, ರಣ್ ವಿಜಯ್ ಸಿಂಗ್. ಈ ಪ್ರಕ್ರಿಯೆ ಮುಗಿದ ಕೂಡಲೆ ಅವರ ಖಾತೆ ಸಕ್ರಿಯವಾಗಲಿದೆ – ಆದ್ರೆ ವಲಸೆ ಹೋಗುತ್ತಿರುವ ಅವರು ತಮ್ಮ ಖಾತೆಯಲ್ಲಿ ವ್ಯವಹರಿಸುವುದು ಹೇಗೆ?


ಹಿಂದಿನ ದಿನ ಓಸ್ಮನಾಬಾದಿನ ಸಹಕಾರಿ ಬ್ಯಾಂಕಿನಲ್ಲಿ ಬಡ ಗ್ರಾಹಕರಿಗೆ ತೋರಿಸುತ್ತಿದ್ದ ಅನಾದರಕ್ಕೆ ಹೋಲಿಸಿದರೆ, ಈ ಶಾಖೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು, ತಮ್ಮ ಅಶಕ್ತ ಗ್ರಾಹಕರನ್ನು ಆದರದಿಂದ ಕಾಣುತ್ತಿತ್ತು. ಎಸ್ ಬಿ ಎಚ್ ನಲ್ಲಿ ಆವತ್ತು ಮುಸ್ಸಂಜೆ ಹೊತ್ತಿಗೆ ಉಳಿದಿದ್ದ ಗ್ರಾಹಕರೆಂದರೆ ಈ ಹನ್ನೊಂದು ಮಂದಿ ಮಾತ್ರ. “ಸರ್ವರ್ ಗೆ ಅತಿಯಾದ ಹೊರೆ ಬಿದ್ದ ಕಾರಣ ಕೈಕೊಟ್ಟದ್ದರಿಂದಾಗಿ ನಾವು ಈವತ್ತು ನಮ್ಮ ದೈನಂದಿನ ವ್ಯವಹಾರಗಳನ್ನು ಅವಧಿಗೆ ಮುನ್ನವೇ ಮುಗಿಸಬೇಕಾಯಿತು,” ಎಂದು ವಿವರಿಸಿದರು ಒಬ್ಬರು ಸಿಬ್ಬಂದಿ. ಹೊಸ ಸರ್ವರ್ ಬಂದಿದ್ದು, ಅದನ್ನ ಸ್ಥಾಪಿಸುವ ಕೆಲಸವೂ ಚುರುಕಿನಿಂದ ನಡೆದಿತ್ತು.

“ಬಿಹಾರದಲ್ಲಿ ನಾನು ಈ ಹಣವನ್ನು ಎಲ್ಲಿ ಬ್ಯಾಂಕಿಗೆ ಜಮಾ ಮಾಡಬಹುದು ಅಥವಾ ತೆಗೆಯಬಹುದು?” ಎಂಬ ಪ್ರಶ್ನೆ ಅಲ್ಲಿನ ಜಾಮುಯಿ ಜಿಲ್ಲೆಗೆ ಸೇರಿದ ರಣವಿಜಯ್ ಸಿಂಗ್ ದು. ಆ ಗುಂಪಿನಲ್ಲಿದ್ದವರಲ್ಲಿ ಆತನೇ ಹೆಚ್ಚು ಸುಶಿಕ್ಷಿತ. ಆತ ಜಾಮುಯಿ ಕೆ.ಕೆ.ಎಂ. ಕಾಲೇಜಿನ ಹಿಸ್ಟರಿ ಪದವೀಧರ. “ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಿಂದ ನಿಮ್ಮ ಖಾತೆಗೆ ಹಣ ಜಮಾ ಮಾಡಬಹುದು, ಹಾಗೆಯೇ ಎಲ್ಲಿ ಎಟಿಎಮ್ ಇದೆಯೋ ಅಲ್ಲಿ ಹಣವನ್ನು ತೆಗೆಯಬಹುದು ಅಥವಾ ಬ್ಯಾಂಕಿನ ಶಾಖೆ ಇರುವಲ್ಲಿ ಬೇರೆ ವ್ಯವಹಾರಗಳನ್ನು ಮಾಡಬಹುದು.” ಎಂಬ ಉತ್ತರ ಆತನಿಗೆ ಸಿಕ್ಕಿತು.

“ನನ್ನದು ಜಾಮುಯಿಯಲ್ಲಿ ಕೋಣಾಯ್ ಎಂಬ ಹಳ್ಳಿ. ಎಸ್ ಬಿ ಎಚ್ ಶಾಖೆ ಬಿಹಾರದಲ್ಲೇನಾದರೂ ಇದ್ದರೆ, ಅದು ಪಾಟ್ನಾದಲ್ಲಿ ಮಾತ್ರ. ಬೇರೆ ಬ್ಯಾಂಕ್ ವ್ಯವಹಾರಗಳನ್ನು ಮಾಡುವುದಿದ್ದರೆ, ಅದಕ್ಕಾಗಿ ಪಾಟ್ನಾಕ್ಕೆ ಹೋಗಲು 160ಕಿ.ಮೀ.ದೂರ ಆಗುತ್ತದೆ” ಎಂದರು ಸಿಂಗ್.

ಅಲ್ಲಿ ಅಸ್ಸಾಂ ಜೋರ್ಹಟ್ ನ ಉಮೇಶ್ ಮುಂಡಾ, ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಅಲಿಪುರ್ ಗ್ರಾಮದ ಬಪ್ಪಿ ಕುಮಾರ್ ಧುಲಾಯಿ ಮತ್ತು ನೂತನ್ ಕುಮಾರ್ ಪಂಡಾ ಮತ್ತು ಬಹರಿಚ್ ನ ಕಜುರಿಯಾ ಗ್ರಾಮದ ಧೀರಜ್ ನ ಊರಿನವರೇ ಆಗಿರುವ ರಿಂಕು, ವಿಜಯ್, ದಿಲಿಪ್ ಮತ್ತು ಸರ್ವೇಶ್ ರೆಹುವಾ ಮನ್ಸೂರ್ ಇದ್ದಾರೆ. ಆದರೆ ಅವರ ಕುಟುಂಬದ ಕವಲುಗಳು ಈಗ ಲಕ್ನೋದ ಗ್ರಾಮೀಣ ಭಾಗದಲ್ಲಿವೆ. ರಾಮ್ ಕೇವಲ್ ಪ್ರಜಾಪತಿ ಲಕ್ನೋದವರು, ಮತ್ತು ಸಂದೀಪ್ ಕುಮಾರ್ ಮೂಲತಃ ಉತ್ತರ ಪ್ರದೇಶದ ಔರಯಿಯಾದ ಜೊಹ್ರಾನ್ ಪುರ ಗ್ರಾಮದವರು. ಅವರೆಲ್ಲರೂ ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳವರು. “ಒಂದು ವರ್ಷದಲ್ಲಿ ನಮಗೆ ಕೂಲಿ ಸಿಗುವ ಕೆಲಸ ಎಷ್ಟು ದಿನಗಳಲ್ಲಿ ಸಿಗುತ್ತದೆ ಎಂದುಕೊಂಡಿದ್ದೀರಿ?”ಎಂದವರು ಕೇಳುತ್ತಾರೆ. ಆ ಕೆಲಸಕ್ಕಾಗಿ ಹುಡುಕಿಕೊಂಡು ಈ ಬಿಪಿಎಲ್ XI  ಹಲವು ದಿನಗಳ ಕಾಲ ಸುತ್ತಾಡಬೇಕಾಗುತ್ತದೆ.

ಅವರು ಪ್ರತಿಯೊಬ್ಬರದೂ ಒಂದೊಂದು ಕಥೆ. ಹಲವಾರು ಕಥೆಗಳು. ಮಹಾರಾಷ್ಟ್ರಕ್ಕೆ ಬರುವ ಹಾದಿಯಲ್ಲಿ ಅವರು ಹಲವಾರು ಕಡೆಗಳಲ್ಲಿ ಕೆಲಸ ಮಾಡಿದ್ದಾರೆ.  ರಣವಿಜಯ್ ಸಿಂಗ್ ಆಂಧ್ರ ಮತ್ತು ಮಧ್ಯಪ್ರದೇಶಗಳಲ್ಲಿ ಕೆಲಸ ಮಾಡಿದ್ದರೆ, ಉಮೇಶ್ ಮುಂಡಾ ಮಧ್ಯಪ್ರದೇಶದಲ್ಲಿ ದುಡಿದಿದ್ದಾರೆ. ಇಬ್ಬರು ಬಂಗಾಳಿಗಳಾದ ಧುಲಾಯಿ ಮತ್ತು ಪಂಡಾ ಮೂರು ರಾಜ್ಯಗಳಲ್ಲಿ ಏಗಿಬಂದವರು. ಆದರೆ ಈವತ್ತಿಗೆ ಈ ಬದುಕುವ ಹೋರಾಟಗಳ್ಯಾವುದೂ ಅವರನ್ನು ಚಿಂತೆಗೀಡು ಮಾಡುತ್ತಿಲ್ಲ. ಅವರ ಮುಂದೆ ಈಗಿರುವ ಏಕೈಕ ಮಹಾಚಿಂತೆ ಎಂದರೆ ತಮ್ಮ ಕುಟುಂಬಗಳಿಗೆ ತಾವು ದುಡಿದ ದುಡ್ಡನ್ನು ಹೇಗೆ ಮುಟ್ಟಿಸುವುದೆಂಬ ವಿಚಾರ. ಕೆಲವರ ತಲೆಯಲ್ಲಿ ಮನೆಗೆ ಮರಳಿ ಹೋಗಬೇಕೇ ಅಥವಾ ಈಗಷ್ಟೇ ಸಿಕ್ಕಿರುವ ಕೆಲಸದಲ್ಲಿ ಉಳಿಯಬೇಕೇ ಎಂಬ ದ್ವಂದ್ವವೂ ಕಾಡುತ್ತಿದೆ.


03-PS-BPL Migrant XI.jpg

ಎಳೆಯ 19 ವರ್ಷ ಪ್ರಾಯ ತನಗೆ ಎನ್ನುವ ಸಂದೀಪ್ ಕುಮಾರ್ (ಎಡ) ಉತ್ತರ ಪ್ರದೇಶದ ಔರಾಯಿಯಾದವರು. ರಣ ವಿಜಯ್ ಸಿಂಗ್ (ಬಲ) ಬಿಹಾರದ ಜಾಮುಯಿಯ ಕೂಲಿ ಕಾರ್ಮಿಕ, ಹಿಸ್ಟರಿ ಪದವೀಧರ


ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿನ ಸಿಬ್ಬಂದಿಗಳ ಸಂಘದ ಅಖಿಲ ಭಾರತ ಮಟ್ಟದ ಪ್ರಧಾನ ಕಾರ್ಯದರ್ಶಿ ಜಗದೀಶ್ ಭವತಾನ್ಕರ್ ಈಗೆದುರಾಗಿರುವ ದಯನೀಯ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: “ ನೋಟು ವಿನಿಮಯ ಮತ್ತು ಠೇವಣಿಗಳ ಮೇಲೆಯೇ ಪೂರ್ಣ ಗಮನ ಕೇಂದ್ರೀಕ್ರತವಾಗಿರುವುದರಿಂದಾಗಿ, ಸಾಮಾನ್ಯ ಬ್ಯಾಂಕಿಂಗ್ ಸೇವೆಗಳು ಪೂರ್ಣ ನೆಲಕ್ಕಚ್ಚಿವೆ. ಅಂಚೆ ಕಚೇರಿಯ ಮೂಲಕ ಮಾಡುವ ಸಹಜ ವರ್ಗಾವಣೆಗಳೋ ಅಥವಾ ಬ್ಯಾಂಕಿನ ಮೂಲಕ ಮಾಡುವ ವರ್ಗಾವಣೆಗಳೋ ಸಂಪೂರ್ಣ ಸ್ಥಗಿತಗೊಂಡಿವೆ. ಬ್ಯಾಂಕಿನ ಬೇರೆಲ್ಲ ಚಟುವಟಿಕೆಗಳೂ ನಿಂತುಬಿಟ್ಟಿವೆ. ಎಲ್ಲ ಸಿಬ್ಬಂದಿಗಳನ್ನೂ ನೋಟು ವಿನಿಮಯ ಮತ್ತು ಠೇವಣಿ ಪಡೆಯಲು ನಿಯೋಜಿಸಲಾಗಿದೆ.”

“ನಮ್ಮ ಕೈನಲ್ಲಿ ನಗದು ಇಲ್ಲದಿರುವಾಗ ನಾವು ಮನಿ ಆರ್ಡರ್ ಗಳನ್ನು ಕಳುಹಿಸುವುದಾದರೂ ಹೇಗೆ?”ಎಂದು ಪ್ರಶ್ನಿಸುತ್ತಾರೆ ಬಪ್ಪಿ ಧುಲಾಯಿ. ಆ ಹನ್ನೊಂದು ಮಂದಿಯಲ್ಲಿ ಪ್ರತಿಯೊಬ್ಬರಿಗೂ, ಸರ್ಕಾರ 1000 ಮತ್ತು 500ರ ನೋಟುಗಳನ್ನು ರದ್ಧುಪಡಿಸಿದ ಬಳಿಕ, ಮೊದಲೇ ದುರ್ಬಲವಾಗಿದ್ದ ಅವರ ಜಗತ್ತು ಪೂರ್ಣ ಕುಸಿದು ಕುಳಿತಿದೆ.  ಹೊಸ 2000 ದ ನೋಟು ಅವರ ತಾತ್ಸಾರಕ್ಕೆ ಗುರಿಯಾಗಿದೆ.

“ಯಾರಿಗೂ ಅದು ಬೇಡವಾಗಿದೆ”ಎನ್ನುತ್ತಾರೆ ಪಂಡಾ. “ಅದು ಅಸಲಿಯೋ ನಕಲಿಯೋ ಎಂದು ಹೇಳುವುದು ಕಷ್ಟ ಎಂಬುದು ಸಿಂಗ್ ಸಮಸ್ಯೆ. “ಅದು ನಿಜವಾದ್ದರಂತೆ ಕಾಣುತ್ತಿಲ್ಲ. ಅದನ್ನು ಯಾರೂ ತಗೊಳ್ಳುತ್ತಲೂ ಇಲ್ಲ.”ಎನ್ನುವ ಧೀರಜ್, ತನ್ನ ಕೈಗೆ ಸಿಕ್ಕಿದ ಹಾಳಾಗಿ ಹರಿದು ಹೋಗಿದ್ದರೂ ಮತ್ತೆ ಚಲಾವಣೆಗೆ ಬಿಡುಗಡೆ ಮಾಡಲಾಗಿರುವ ಕೆಲವು ನೂರರ ನೋಟುಗಳನ್ನು ಕೂಡ ಯಾರೂ ತೆಗೆದುಕೊಳ್ಳುತ್ತಿಲ್ಲ. “ಅಂಗಡಿಗಳಲ್ಲಿ ಸರಿಯಾದ, ಹರಿದಿರದ ನೋಟು ತನ್ನಿ ಎನ್ನುತ್ತಿದ್ದಾರೆ” ಎಂಬುದು ಅವರ ಅಳಲು.

ಔರಾಲಿಯಾ ಸಮೀಪದಲ್ಲಿ ಕಾನ್ಪುರದ ಗ್ರಾಮೀಣ ಭಾಗದಲ್ಲಿರುವ ಸಂದೀಪ್ ಕುಮಾರ್ ಕುಟುಂಬಕ್ಕೆ ಅಲ್ಲಿ, ಮೂರು ಎಕರೆಗಳಷ್ಟು ಭೂಮಿ ಇದೆ.  ಆದರೆ ಅದನ್ನು ಸುಮಾರು 12  ಮಂದಿ ಆಧರಿಸಿ ಬದುಕುತ್ತಿದ್ದಾರೆ. ಅಲ್ಲಿ “ಬೇಸಾಯ ಸಂಪೂರ್ಣ ಹಾಳೆದ್ದುಹೋಗಿದೆ. ನಾವು ಗದ್ದೆಗೆ ಅಲ್ಪ ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದೇವೆ, ಯಾರ ಬಳಿಯೂ ದುಡ್ಡು ಇಲ್ಲ ಈಗ. ಸಣ್ಣ ನೋಟುಗಳು ನಮಗೆ ಸಿಗುತ್ತಿಲ್ಲ. ದೊಡ್ಡ ನೋಟುಗಳು ನಮ್ಮ ಬಳಿ ಇಲ್ಲ. ಇದ್ದರೂ ಅದಕ್ಕೆ ಯಾರೂ ಚಿಲ್ಲರೆ ಕೊಡಲು ಕೇಳುತ್ತಿಲ್ಲ.”

ಹನ್ನೊಂದೂ ಮಂದಿ ಇಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ನಿನವರು ನಿರ್ಮಿಸುತ್ತಿರುವ ವಿದ್ಯುತ್ ಉಪಕೇಂದ್ರದ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಪವರ್ ಗ್ರಿಡ್ ಅವರನ್ನು ನೇರವಾಗಿ ಕೆಲಸಕ್ಕೆ ಕರೆದುಕೊಂಡಿದ್ದರೂ ಅವರ ಪರಿಸ್ಥಿತಿ ಸ್ವಲ್ಪ ಚೆನ್ನಾಗಿರುತ್ತಿತ್ತು. ಆದರೆ, ಆ ಸಾರ್ವಜನಿಕ ರಂಗದ ಉದ್ಯಮ ತನ್ನ ನೇಮಕಾತಿಯ ಜವಾಬ್ದಾರಿಯನ್ನು ಗುತ್ತಿಗೆದಾರರೊಬ್ಬರಿಗೆ ಕೊಟ್ಟಿರುವುದರಿಂದ, ಆ ಕಾರ್ಮಿಕರಿಗೆ ನ್ಯಾಯವಾಗಿ ದೊರೆಯಬೇಕಾಗಿರುವ ದೈನಂದಿನ ಸಂಬಳದಲ್ಲಿ ಬಲುದೊಡ್ಡ ಪಾಲನ್ನು ಆ ಗುತ್ತಿಗೆದಾರನೇ ಇಟ್ಟುಕೊಂಡು, ಸಣ್ಣದೊಂದು ಪಾಲನ್ನು ಮಾತ್ರ ಇವರಿಗೆ ಕೊಡುತ್ತಿದ್ದಾನೆ. ಹೆಚ್ಚಿನಂಶ ಅವರಿಗೆ ದೊರೆಯುವ ಸಂಬಳದಲ್ಲಿ ನಲವತ್ತು ಶೇಕಡಾ ಭಾಗ ಗುತ್ತಿಗೆದಾರನ ಕಿಸೆಗೆ ಹೋಗುತ್ತಿದೆ. ಜೊತೆಗೆ, ಇನ್ನು ಮುಂದೆ ಅವರಿಗೆ ಪಾವತಿ ಚೆಕ್ ಮೂಲಕ ನಡೆಯಲಿದ್ದು, ನಗದು ಸಿಗುವುದಿಲ್ಲ. ಹಾಗಾಗಿ ಅವರ ತೊಂದರೆ ಇನ್ನಷ್ಟು ಹೆಚ್ಚಿದೆ.

ಅವರನ್ನು ಬ್ಯಾಂಕಿಗೆ ಕರೆತಂದ ವ್ಯಕ್ತಿಯೂ ಈ ರಾಜ್ಯದವರಲ್ಲ. ಆದರೆ, ಆತ ಸುಶಿಕ್ಷಿತ ಮತ್ತು ಭಾಗ್ಯವಂತ. ಪವರ್ ಗ್ರಿಡ್ ನಲ್ಲಿ ಇಂಜಿನಿಯರ್ ಆಗಿರುವ ಡೇನಿಯಲ್ ಕಾರ್ಕೆಟ್ಟಾ ಜಾರ್ಖಂಡ್ ನ ಆದಿವಾಸಿ ಸಮುದಾಯದವರಾಗಿದ್ದು, ಈ ದುಃಸ್ಥಿತಿಯಲ್ಲಿರುವ ಬಿ ಪಿ ಎಲ್ ಮೊಬೈಲ್ XI ಹುಡುಗರ ತಂಡದ ನಾಯಕ.  ಬೇರೆಯೇ ವರ್ಗ ಹಿನ್ನೆಲೆಯಿಂದ ಬಂದಿದ್ದರೂ, ಕಾರ್ಕೆಟ್ಟಾಗೆ ಈ ಹುಡುಗರ ದುಗುಡ ಅರ್ಥವಾಗಿದೆ. “ನಾನೂ ವಲಸೆ ಬಂದವನೇ” ಎಂದು ನಸುನಗುತ್ತಾರೆ ಆತ.

ಆ ವ್ಯಕ್ತಿಯ ಮಾರ್ಗದರ್ಶನ ಸಿಕ್ಕಿರುವ, ಬ್ಯಾಂಕಿನ ಈ ಶಾಖೆಗೆ ಬಂದಿರುವ ಈ ಹುಡುಗರು ಭಾಗ್ಯವಂತರು.

ಇವರೇ ಭಾಗ್ಯವಂತರಾದರೆ, ಇನ್ನು ದೌರ್ಭಾಗ್ಯಕ್ಕೀಡಾಗಿರುವ ಪಾಡನ್ನು ಊಹಿಸಿಕೊಳ್ಳಿ.

ಭೀಡ್ ಜಿಲ್ಲೆಯ ಘಟ್ನಂದೂರ್ ಹಳ್ಳಿಯಲ್ಲಿ, ಸ್ಥಳೀಯ ಫ್ರೀಲಾನ್ಸ್ ವರದಿಗಾರ ಅಮೋಲ್ ಜಾಧವ್ ನಮಗೆ ವಲಸೆ ಕಾರ್ಮಿಕರ ಇನ್ನೊಂದು ವಾಸ್ತವ ಮುಖವನ್ನು ಪರಿಚಯಿಸಿದರು. “ಈ ಪ್ರದೇಶದಲ್ಲಿ ಕೆಲವರು ಧನವಂತರು ಈ ಕಾರ್ಮಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಹೌದು, ಅಲ್ಲಿ ಈಗ ಆ ಕಾರ್ಮಿಕರ ವೇತನಗಳನ್ನೂ ಠೇವಣಿ ಮಾಡಲಾಗಿದೆ. ಆದರೆ, ಆ ಖಾತೆಗಳ ಎ ಟಿ ಎಂ ಕಾರ್ಡುಗಳನ್ನು ಆ ಧನವಂತರೇ ಇರಿಸಿಕೊಂಡಿದ್ದಾರೆ. ತಮ್ಮ ಕಪ್ಪುಹಣದ ಒಂದಂಶವನ್ನೂ ಅವರು ಈ ಖಾತೆಗಳಿಗೆ ಜಮಾ ಮಾಡಿದ್ದಾರೆ.  ನೆನಪಿಡಿ, ಅವರು ಆ ದುಡ್ಡನ್ನು ತಾವೇ ಹೊರತೆಗೆಯಬಹುದು ಮತ್ತು ಅಗತ್ಯ ಬಿದ್ದರೆ, ಈ ಕಾರ್ಮಿಕರ ದುಡಿದ ದುಡ್ಡಿಗೂ ಕತ್ತರಿ ಹಾಕಬಹುದು. ಈ ಕಾರ್ಮಿಕರ ಖಾತೆಗಳೆಲ್ಲ ಅವರ ನಿಯಂತ್ರಣದಲ್ಲೇ ಇದೆ.”

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

Other stories by Rajaram Tallur