``ಅವುಗಳಲ್ಲಿ ಎರಡು ಮಾತ್ರ ಕೆಲಸ ಮಾಡುತ್ತಿದೆ'', ರೋಶನ್ ಗಾಂವ್ ನ ನಿವಾಸಿಯಾದ ಬದ್ರಿ ಖರಟ್ ತನ್ನ ಕೊಳವೆಬಾವಿಗಳ ಬಗ್ಗೆ ಹೇಳುತ್ತಿದ್ದಾನೆ. ನಿಜಕ್ಕೂ ಸಂಕಷ್ಟದ ಪರಿಸ್ಥಿತಿಯಿದು. ಅದರಲ್ಲೂ ಲಕ್ಷಗಟ್ಟಲೆ ಹಣವನ್ನು ಖರ್ಚುಮಾಡಿ ಬರೋಬ್ಬರಿ ಮೂವತ್ತಾರು ಬೋರ್ ವೆಲ್ ಗಳನ್ನು ಕೊರೆದು ಕೈಸುಟ್ಟುಕೊಂಡ ಬದ್ರಿಯಂಥವನಿಗಂತೂ ಮತ್ತಷ್ಟು ಕಷ್ಟ. ಆದರೆ ಸಾಕಷ್ಟು ಭೂಮಿಯ ಮಾಲೀಕನೂ, ಸ್ಥಳೀಯ ರಾಜಕೀಯದಲ್ಲಿ ಸಕ್ರಿಯನಾಗಿರುವವನೂ ಆದ ಖರಟ್ ಜಲ್ನಾ ಜಿಲ್ಲೆಯ ತನ್ನ ಹಳ್ಳಿಯಲ್ಲಿರುವ ಉದಾರಿಗಳಲ್ಲೊಬ್ಬನೂ ಹೌದು. ದಿನಕ್ಕೆರಡು ಬಾರಿ, ಎರಡು ತಾಸುಗಳ ಕಾಲ ರೋಶನ್ ಗಾಂವ್ ನ ಗ್ರಾಮಸ್ಥರು ಬದ್ರಿಯ ಖಾಸಗಿ ನೀರಿನ ಮೂಲದಿಂದ ನೀರನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದು.

ಅಷ್ಟಕ್ಕೂ ವಿಷಯವೇನೆಂದರೆ ಕೊಳವೆಬಾವಿಗಳ ಸತತ ವೈಫಲ್ಯಗಳು ಆತನನ್ನು ನಿಜಕ್ಕೂ ಹೈರಾಣಾಗಿಸಿವೆ. ಸ್ಥಳೀಯ ನಿರ್ವಾಹಕರೊಬ್ಬರು ಹೇಳುವ ಪ್ರಕಾರ, ``ನೀರು ಸಿಕ್ಕರೂ ಸಿಗದಿದ್ದರೂ ರೈತನಂತೂ ಹಣವನ್ನು ಸಂದಾಯ ಮಾಡಲೇಬೇಕು. ಹೀಗಾಗಿ ರಿಗ್ ತಯಾರಕರು, ರಿಗ್ ಗಳ ಮಾಲೀಕರು ಮತ್ತು ಕೊಳವೆಬಾವಿಗಳನ್ನು ಕೊರೆಯುವವರಿಗೆ ಇದೊಂದು ಭಾರೀ ಬೇಡಿಕೆಯ ಕಾಲ. ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಇದೊಂದು ದೊಡ್ಡ ಉದ್ಯಮವೇ ಆಗಬಹುದು.'' ಕೊಳವೆ ಬಾವಿಗಳ ಉದ್ಯಮವು ದಾಹದ ಆರ್ಥಿಕತೆಯ ಒಂದು ಬಹುಮುಖ್ಯ ಪಾತ್ರಧಾರಿಯಾಗಿರುವುದಲ್ಲದೆ ಮತ್ತು ಇದು ಕೋಟ್ಯಾಂತರ ರೂಪಾಯಿಗಳ ಮೌಲ್ಯವುಳ್ಳದ್ದೂ ಕೂಡ ಹೌದು.

ಸದ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಈ ಪ್ರದೇಶಗಳಲ್ಲಿ ವೈಫಲ್ಯದ ಪ್ರಮಾಣಗಳು ಸಾಕಷ್ಟು ಹೆಚ್ಚಿವೆ. ಕೆಲವು ಹಳ್ಳಿಗಳಲ್ಲಂತೂ ತೊಂಭತ್ತು ಪ್ರತಿಶತ ಮತ್ತು ಅದಕ್ಕಿಂತಲೂ ಹೆಚ್ಚಿನ ವೈಫಲ್ಯದ ಪ್ರಕರಣಗಳು ಕಂಡುಬಂದಿವೆ. ``ಈ ಹಿಂದೆ ಸುಮಾರು ಮೂವತ್ತೈದರಿಂದ ನಲವತ್ತು ಕೂಲಿ ಕಾರ್ಮಿಕರನ್ನು ನಾನು ಇಟ್ಟುಕೊಂಡಿದ್ದೆ. ಈಗ ಒಬ್ಬನೂ ಕೂಡ ಇಲ್ಲ. ನನ್ನ ಜಮೀನುಗಳಲ್ಲೀಗ ಸ್ಮಶಾನಮೌನ. ಹಳ್ಳಿಯಲ್ಲಿರುವ ಬಹುತೇಕ ಎಲ್ಲಾ ಕೊಳವೆಬಾವಿಗಳೂ ಕೂಡ ಸೋಲನ್ನೇ ಕಂಡಿವೆ'', ಎನ್ನುತ್ತಿದ್ದಾರೆ ಖರಟ್. ಇನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಹಳೆಯ ಕೊಳವೆಬಾವಿಗಳು ಒಣಗಿ ಯಾವುದಕ್ಕೂ ಪ್ರಯೋಜನವಿಲ್ಲವೆಂಬಂತಾಗಿವೆ.

ಇವೆಲ್ಲದರ ಹೊರತಾಗಿಯೂ ರೈತರ ಹತಾಶೆ, ಆತಂಕಗಳು ನೀರಿನ ತೀವ್ರ ಅಭಾವವಿರುವ ಪ್ರದೇಶಗಳಲ್ಲಿ ಸಾವಿರಾರು ಹೊಸ ಕೊಳವೆಬಾವಿಗಳನ್ನು ಕೊರೆಯುವಂತೆ ಮಾಡಿವೆ. ಅತ್ತ ಕೊಳವೆಬಾವಿಯು ಮತ್ತಷ್ಟು ಆಳಕ್ಕಿಳಿಯುತ್ತಿರುವಂತೆಯೇ ರೈತರ ಸಾಲಗಳು ಮತ್ತಷ್ಟು ಮೇಲಕ್ಕೇರುತ್ತಿವೆ. ``ನೀರಾವರಿಗಾಗಿ ಕೊರೆದಿರುವ ಯಾವ ಕೊಳವೆಬಾವಿಯೂ ಕೂಡ ಐನೂರು ಅಡಿ ಆಳಕ್ಕಿಂತ ಕಮ್ಮಿಯಿಲ್ಲ. ಹಳ್ಳಿಯಲ್ಲಿರುವ ಸುಮಾರು 1500 ಕೊಳವೆಬಾವಿಗಳಲ್ಲಿ ಅರ್ಧಕ್ಕೂ ಹೆಚ್ಚು ಕಳೆದ ಎರಡು ವರ್ಷಗಳಲ್ಲೇ ಕೊರೆದಂಥವುಗಳು. ಈ ವರ್ಷ ಜನವರಿ ಮತ್ತು ಮಾರ್ಚ್‍ಗಳ ಮಧ್ಯದಲ್ಲಿ ಮತ್ತೆ 300 ಹೊಸ ಕೊಳವೆಬಾವಿಗಳನ್ನು ಕೊರೆಯಲಾಯಿತು. ಆದರೆ ಫಲಿತಾಂಶ ಮಾತ್ರ ನೀರಸ. ಹೊಸದಾಗಿ ಕೊರೆದ ಬಹುತೇಕ ಎಲ್ಲಾ ಕೊಳವೆಬಾವಿಗಳು ವೈಫಲ್ಯವನ್ನೇ ಕಂಡವು. ಹೀಗಾಗಿ ಸ್ಥಳೀಯ ರೈತರು ಆತಂಕದಲ್ಲಿದ್ದಾರೆ. ತಮ್ಮ ಜಮೀನಿನಲ್ಲಿ ಕೊಳೆಯುತ್ತಿರುವ ಬೆಳೆಯನ್ನು ನೋಡುತ್ತಾ ಒಂದಿಷ್ಟು ನಿರೀಕ್ಷೆಗಳೊಂದಿಗೆ ಕೊಳವೆಬಾವಿಯನ್ನು ಕೊರೆಸಲು ಮತ್ತೆ ತಯಾರಾಗುತ್ತಿದ್ದಾರೆ'', ಎನ್ನುತ್ತಾರೆ ಒಸ್ಮಾನಾಬಾದ್ ಜಿಲ್ಲೆಯ ತಕ್ವಿಕಿಯ ನಿವಾಸಿ ಭರತ್ ರಾವುತ್.

PHOTO • P. Sainath

ತಕ್ವಿಕಿಯ ಹೊಸ ಕೊಳವೆಬಾವಿಗಳು ಮೊದಲ ದಿನದಿಂದಲೇ ಸೋಲನ್ನಪ್ಪಿದರೆ ಹಳೆಯವುಗಳು ಒಂದೋ ನಿಧಾನವಾಗಿ ಒಣಗುತ್ತಿವೆ ಅಥವಾ ಹಿಂದಿಗಿಂತ ಕಮ್ಮಿ ನೀರನ್ನು ಕೊಡುತ್ತಿವೆ.

ಈ ಭಾಗದ ಹಳ್ಳಿಗಳ ರಸ್ತೆಗಳಲ್ಲಿ ಕಂಡುಬರುವ ಸರ್ವೇಸಾಮಾನ್ಯವಾದ ವಾಹನವು ನೀರಿನ ಟ್ಯಾಂಕರುಗಳಾದರೆ, ಜಮೀನುಗಳಲ್ಲಿ ಎತ್ತ ನೋಡಿದರೂ ಕೊಳವೆಬಾವಿಗಳ ರಿಗ್ ಗಳೇ ಕಾಣಸಿಗುತ್ತವೆ. ಅದು ಸ್ಥಳೀಯನೊಬ್ಬನು ಖರೀದಿಸಿದ ಅಥವಾ ಬಳಸಿಕೊಂಡ ರಿಗ್ ಕೂಡ ಆಗಿರಬಹುದು. ಇವುಗಳಲ್ಲಿ ಬಹಳಷ್ಟು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ತರಿಸಿಕೊಂಡವುಗಳು. ರೈತನೊಬ್ಬ ತನ್ನ 500 ಅಡಿ ಆಳದ ಕೊಳವೆಬಾವಿಗೆ 1,50,000 ರೂಪಾಯಿಗಳಷ್ಟು ವ್ಯಯಿಸಿದರೆ ಆ ವೆಚ್ಚದಲ್ಲಿ ಎಪ್ಪತ್ತಕ್ಕೂ ಹೆಚ್ಚು ಪ್ರತಿಶತ ಹೋಗುವುದು ಸ್ಟೀಲ್ ಪೈಪುಗಳು, ಸಬ್ಮರ್ಸಿಬಲ್ ಪಂಪ್, ತಂತಿ, ಸೆಟ್ಟಿಂಗ್ ಮತ್ತು ಸಾಗಾಟದ ಖರ್ಚುಗಳಿಗೆ. ಉಳಿದ 40,000 ರೂಪಾಯಿಗಳನ್ನು ರಿಗ್ ಆಪರೇಟರ್ ತೆಗೆದುಕೊಳ್ಳುತ್ತಾನೆ. ಅದು ಡ್ರಿಲ್ಲಿಂಗ್ ಕೆಲಸಕ್ಕಾಗಿ: ಮೊದಲ 300 ಅಡಿಗಳ ಆಳಕ್ಕೆ ಅಡಿಯೊಂದಕ್ಕೆ 60 ರೂಪಾಯಿಗಳಂತೆ. ನಂತರದ 100 ಅಡಿ ಆಳದಲ್ಲಿ ಅಡಿಯೊಂದಕ್ಕೆ 10 ರೂಪಾಯಿಗಳ ಲೆಕ್ಕ. ಇನ್ನು ಬೋರ್ ಅನ್ನು ರಕ್ಷಿಸಲು ಬಳಸಲಾಗುವ ಸುರಕ್ಷಾ ಪೈಪು (ಕೇಸಿಂಗ್ ಪೈಪ್) ಗಳ ಲೆಕ್ಕ ಹೇಗಿರುತ್ತದೆಂದರೆ ಅಡಿಯೊಂದಕ್ಕೆ 200 ರೂಪಾಯಿಗಳ ಲೆಕ್ಕಾಚಾರ. ಇದು ಕೆಲವೊಮ್ಮೆ ಬರೋಬ್ಬರಿ 60 ಅಡಿಗಳವರೆಗೂ ಹೋಗಬಹುದು.

ಒಂದು ಲೆಕ್ಕಾಚಾರದ ಪ್ರಕಾರ ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯದಲ್ಲಿ 20,000 ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಇದು ಹೆಚ್ಚೂ ಆಗಿರಬಹುದು ಎನ್ನುತ್ತಾರೆ ಕೆಲ ಅಧಿಕಾರಿಗಳು. ಅವರು ಹೇಳುವ ಪ್ರಕಾರ ತಕ್ವಿಕಿಯಂತಹ ನೂರಾರು ಹಳ್ಳಿಗಳು ತಮ್ಮ ತಮ್ಮ ಹಳ್ಳಿಗಳಲ್ಲಿ ಕಮ್ಮಿಯೆಂದರೂ ತಲಾ 30,000 ಕೊಳವೆಬಾವಿಗಳನ್ನು ಕೊರೆಸಿರಬಹುದಂತೆ. ಇನ್ನು ಪಂಪುಗಳನ್ನು ಮತ್ತು ಸ್ಟೀಲ್ ಪೈಪುಗಳನ್ನು ತಕ್ವಿಕಿಯಲ್ಲಿ ಕೊರೆಯಲಾದ ಹೊಸ ಕೊಳವೆಬಾವಿಗಳ ಮೂರನೇ ಒಂದು ಖರ್ಚಿನಲ್ಲಿ ಖರೀದಿಸಿದ್ದರೂ, ಈ ಒಂದೇ ಹಳ್ಳಿಯು ಜನವರಿಯಿಂದ ಮಾರ್ಚ್‍ವರೆಗಿನ 90 ದಿನಗಳಲ್ಲಿ ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿಗಳನ್ನು ಕೊಳವೆಬಾವಿಗಳಿಗೆಂದೇ ವ್ಯಯಿಸಿದೆ.

``ಒಬ್ಬ ಆಪರೇಟರ್ ದಿನಕ್ಕೆ ಮೂರು ಕೊಳವೆಬಾವಿಗಳನ್ನು ಕೊರೆಸಬಲ್ಲ'', ಎನ್ನುತ್ತಿದ್ದಾರೆ ರಾವುತ್. ``ಕನಿಷ್ಠ ಪಕ್ಷ ಎರಡಂತೂ ಕೊರೆಸಿಯೇ ಕೊರೆಸುತ್ತಾರೆ'', ಎನ್ನುತ್ತಾರೆ ರೋಶನ್ ಗಾಂವ್ ನ ಖರಟ್. ಹೀಗೆ ಮಾರ್ಗಮಧ್ಯದಲ್ಲೇ ನಾವು ಹೊಸ ಕೊಳವೆಬಾವಿಯೊಂದರ ಗತ್ತಿನ ಮಾಲೀಕನಾದ ಸಂಜಯ್ ಶಂಕರ್ ಶೇಲ್ಕೆಯನ್ನು ಭೇಟಿಯಾದೆವು. ``ಇದಕ್ಕಾಗಿ ನಾನು 1.4 ಕೋಟಿ ಖರ್ಚು ಮಾಡಿದೆ'', ಎಂದ ಸಂಜಯ್. ಇದೇನು ಕಮ್ಮಿ ಮೊತ್ತವೇ? ಆದರೆ 6 ತಿಂಗಳೊಳಗೆ ಹೂಡಿದ ಖರ್ಚು ಮರಳಿ ಬರಲಿದೆ ಅನ್ನುವುದೂ ಕೂಡ ಸತ್ಯ. ದಿನಕ್ಕೆರಡು ಕೊರೆದರೂ ಸಾಕು. ಮೇಲಾಗಿ ಬೇಡಿಕೆಗೇನೂ ಕಮ್ಮಿಯಿಲ್ಲ. ನಾವು ಮಾತಾಡುತ್ತಿರುವಂತೆ ಅವನ ಫೋನು ನಿರಂತರವಾಗಿ ರಿಂಗಣಿಸುತ್ತಲೇ ಇದೆ.

ಸದ್ಯ ಈ ಕೊಳವೆಬಾವಿಗಳ ಭರಾಟೆಯು ಕೊಂಚ ಕಮ್ಮಿಯಾಗಿದೆಯೆಂದರೆ ಅದು ಮಿತಿಮೀರಿ ಮೇಲೇರುತ್ತಿರುವ ಸಾಲದ ಮೊತ್ತದಿಂದಲಷ್ಟೇ. ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಂಡರೆ ತೀರಿಸುವುದಾದರೂ ಹೇಗೆ? ಖಾಸಗಿ ಲೇವಾದೇವಿಯವರು ಸದ್ಯ ವಾರ್ಷಿಕ 60 ರಿಂದ 120 ಪ್ರತಿಶತ ಬಡ್ಡಿದರಗಳಲ್ಲಿ ಸಾಲವನ್ನು ನೀಡುತ್ತಿದ್ದಾರೆ. ``ಈ ತಿಂಗಳಿನಿಂದ ಬ್ಯಾಂಕ್ ಸಾಲಗಳ ಮರುಪಾವತಿಗಾಗಿ ನೋಟೀಸುಗಳು ಹೊರಬೀಳಲಿವೆ. ಕೊಳವೆಬಾವಿಗಳ ಹೊಸ ಸಾಲವೂ ಈಗ ಸೇರಿರುವುದರಿಂದ ಬೆಳೆಯಾದ ನಂತರವೇ ನಾವು ಖಾಸಗಿಯವರ ಸಾಲಗಳನ್ನು ತೀರಿಸಬಲ್ಲೆವು'', ಎನ್ನುತ್ತಿದ್ದಾರೆ ರಾವುತ್. ನೀರಿನ ತೀವ್ರ ಅಭಾವದ ಹಿಂದಿರುವ ಮುಖ್ಯ ಕಾರಣವೆಂದರೆ ಕಬ್ಬಿನ ಬೆಳೆ. ಕಬ್ಬು ಎಕರೆಯೊಂದಕ್ಕೆ ಹದಿನೆಂಟು ಮಿಲಿಯನ್ ಲೀಟರುಗಳಷ್ಟು ಭಾರೀ ಪ್ರಮಾಣದ ನೀರನ್ನು ಬೇಡುತ್ತದೆ. ಇದನ್ನೇ ರೈತರು `ಡಬಲ್ ನುಕ್ಸಾನ್' (ಎರಡು ಪಟ್ಟು ನಷ್ಟ) ಎಂದು ಕರೆಯುವುದು.

ಈ ಕಥೆಗಳು ಇಲ್ಲಿಗೇ ಮುಗಿಯುವುದಿಲ್ಲ. ತೊಂಭತ್ತು ಪ್ರತಿಶತಕ್ಕೂ ಹೆಚ್ಚಿನ ಮಹಾರಾಷ್ಟ್ರವು ಗಟ್ಟಿಬಂಡೆಯ ಪ್ರದೇಶಗಳೇ ಆಗಿದೆ ಎನ್ನುತ್ತಾರೆ ಅಂತರ್ಜಲ ಸಮೀಕ್ಷೆ ಮತ್ತು ಅಭಿವೃದ್ಧಿ ಸಂಸ್ಥೆ (ಜಿ.ಎಸ್.ಡಿ.ಎ) ಯ ಅಧಿಕಾರಿಗಳು. ಇಂಥಾ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಬಾವಿಯೊಂದನ್ನು ತೋಡುವುದಾದರೆ ಸರಾಸರಿ ಆಳವು 32-40 ಅಡಿಗಳಷ್ಟಾಗುತ್ತದೆ. ಹೆಚ್ಚೆಂದರೆ 80 ಅಡಿಗಳು. ಭಾರತ ಸರಕಾರದ ಮಾಜಿ ಜಲಸಂಪನ್ಮೂಲ ಕಾರ್ಯದರ್ಶಿಯಾದ ಮಾಧವ್ ಚಿಟಾಲೆಯವರು ಹೇಳುವ ಪ್ರಕಾರ ಭೂವಿಜ್ಞಾನದ ಸತ್ಯಗಳ ಪ್ರಕಾರ 200 ಅಡಿಗಳ ನಂತರ ನೀರು ಸಿಕ್ಕುವುದೇ ಕಷ್ಟಸಾಧ್ಯ. ಇನ್ನು 200 - 650 ಅಡಿಗಳಲ್ಲೂ ಸಿಗುವ ಅವಕಾಶಗಳು ತೀರಾ ಕಮ್ಮಿ. ಆದರೂ ಕೊರೆಯಲಾದ ಹೊಸ ಕೊಳವೆಬಾವಿಗಳು ಈ ವ್ಯಾಪ್ತಿಯ ತೀರಾ ಅಂಚಿಗೆ ಹೋಗಿಬಿಟ್ಟಿವೆ. ಕೆಲವೊಮ್ಮೆ ಇದನ್ನು ದಾಟಿ ಮತ್ತಷ್ಟು ಆಳಕ್ಕಿಳಿದಿವೆ ಕೂಡ.

ಹಾಗಿದ್ದರೆ ಮಹಾರಾಷ್ಟ್ರದಲ್ಲಿ ನೀರಾವರಿ ಬಳಕೆಗಾಗಿ ಕೊರೆಸಲಾಗಿರುವ ಒಟ್ಟು ಕೊಳವೆಬಾವಿಗಳೆಷ್ಟು? ಇದೊಂದು ಮಾತ್ರ ಯಾರಿಗೂ ತಿಳಿದಿಲ್ಲ. 2008-09 ರ ಜಿ.ಎಸ್.ಡಿ.ಎ ವರದಿಯ ಪ್ರಕಾರ ಆ ವರ್ಷ ಕೊರೆಯಲಾದ ಒಟ್ಟು ಕೊಳವೆಬಾವಿಗಳ ಸಂಖ್ಯೆ 1,91,396. ``ನನ್ನ ಜಿಲ್ಲೆಯಲ್ಲಿ ಇದಕ್ಕಿಂತಲೂ ಹೆಚ್ಚಿರಬಹುದೇನೋ'', ಎಂದು ನಗೆಯಾಡುತ್ತಿದ್ದಾರೆ ಅಧಿಕಾರಿಯೊಬ್ಬರು. ``ಇಂಥಾ ಸಂಖ್ಯೆಗಳು ನಮಗೆ ಸಿಕ್ಕಿದ್ದಾದರೂ ಹೇಗೆ? ಹೊಸ ಕೊಳವೆಬಾವಿಗಳನ್ನು ಕೊರೆಸುವಾಗ ದಾಖಲಾತಿಯನ್ನು ಮಾಡಿಸುವ ರೂಢಿಯಾಗಲೀ, ನೋಂದಾಯಿಸುವ ರೂಢಿಯಾಗಲೀ ನಮ್ಮಲ್ಲಿಲ್ಲ. ಸೋಜಿಗದ ಸಂಗತಿಯೆಂದರೆ ಸಾಂಪ್ರದಾಯಿಕ ಬಾವಿಯೊಂದನ್ನು ಕೊರೆಸಬೇಕಾಗಿರುವ ಸ್ಥಳೀಯನೊಬ್ಬ ಇಂಥಾ ನೋಂದಾವಣೆಗಳನ್ನು ಮಾಡಿಸಬೇಕಿರುವುದು ಮತ್ತು ನೀರಿನ ತೆರಿಗೆಯನ್ನು ಕಟ್ಟಬೇಕಾಗಿರುವುದು ಕಡ್ಡಾಯ. ಆದರೆ ಕೊಳವೆಬಾವಿಗಳ ಒಡೆಯರಿಗೆ ಇದು ಅನ್ವಯಿಸುವುದಿಲ್ಲ'', ಎನ್ನುತ್ತಿದ್ದಾರೆ ಜಿ.ಎಸ್.ಡಿ.ಎ ಯ ಓರ್ವ ಅಧಿಕಾರಿ. ಇವೆಲ್ಲವನ್ನೂ ಸರಿದಾರಿಗೆ ತರುವ ನಿಟ್ಟಿನಲ್ಲಿ ಸಲ್ಲಿಸಲಾಗಿರುವ ರಾಜ್ಯ ಸರಕಾರದ ಹೊಸ ನಿಯಮಾವಳಿಯೊಂದು ರಾಷ್ಟ್ರಪತಿಗಳ ಮೇಜಿನಲ್ಲಿ ಅನುಮೋದನೆಗಾಗಿ ಕಾಯುತ್ತಾ ಕಾಲುಮುರಿದು ಬಿದ್ದಿದೆಯಂತೆ.

ಈ ಬಗ್ಗೆ ಚಿಟಾಲೆಯವರು ಹೀಗೆ ಹೇಳುತ್ತಾರೆ ನೋಡಿ: ``1974-1985 ಯವರೆಗೆ `ತಲಾಠಿ' (ರೆವೆನ್ಯೂ ಅಧಿಕಾರಿ) ಯವರು ಎಲ್ಲಾ ವಿಧದ ಬಾವಿಗಳನ್ನು ಒಂದೇ ವಿಭಾಗದಲ್ಲಿ ಪರಿಗಣಿಸಿ ದಾಖಲಿಸುತ್ತಿದ್ದರು. ಹೀಗಾಗಿ ಆ ಅವಧಿಯಲ್ಲಿದ್ದ ಬಾವಿಗಳ ಪೈಕಿ ಕೊಳವೆಬಾವಿಗಳೆಷ್ಟು ಎಂಬುದನ್ನು ಲೆಕ್ಕ ಹಾಕುವುದು ಕಷ್ಟ. 1985 ರ ನಂತರ ಪ್ರತ್ಯೇಕವಾಗಿ ದಾಖಲಿಸುವ ರೂಢಿಯು ಶುರುವಾಯಿತು. ಆದರೆ 1985 ರ ನಂತರವೂ ಕೊಳವೆಬಾಯಿಯ ಮಾಲೀಕರು ತಮ್ಮ ಕೊಳವೆಬಾವಿಯ ಬಗ್ಗೆ ಇಲಾಖೆಯ ಕಚೇರಿಯಲ್ಲಿ ನೋಂದಾಯಿಸುವುದು ಅಥವಾ ವರದಿ ಮಾಡುವ ಕ್ರಮವು ಕಡ್ಡಾಯವಾಗಲಿಲ್ಲ. ಈಗಲೂ ಕೂಡ ಅಂಥಾ ನಿಯಮಾವಳಿಗಳೇನೂ ಇಲ್ಲಿಲ್ಲ''. 2000 ರಲ್ಲಿ ಚಿಟಾಲೆಯವರ ನೇತೃತ್ವದ ಆಯೋಗವೊಂದು ಈ ಪ್ರದೇಶಗಳಲ್ಲಿ ಎಷ್ಟು ಸಾಂಪ್ರದಾಯಿಕ ಬಾವಿಗಳಿವೆಯೋ, ಕೊಳವೆಬಾವಿಗಳೂ ಕೂಡ ಅಷ್ಟೇ ಸಂಖ್ಯೆಯಲ್ಲಿವೆ ಎಂಬುದಾಗಿ ದಾಖಲಿಸಿತು. ಅಂದರೆ ಆ ವರ್ಷ ಸುಮಾರು 1.4 ಮಿಲಿಯನ್ ಕೊಳವೆಬಾವಿಗಳು ಎಂದಾಯಿತು. ಅದರ ನಂತರ ಅದೆಷ್ಟು ಕೊಳವೆಬಾವಿಗಳನ್ನು ಹೊಸದಾಗಿ ಕೊರೆಸಲಾಗಿದೆಯೋ ಎಂಬುದನ್ನು ಯಾರೂ ಲೆಕ್ಕವಿಟ್ಟವರಿಲ್ಲ.

2008-09 ರ ಜಿ.ಎಸ್.ಡಿ.ಎ ವರದಿಯು ತಾನು ಮುಂದಿಟ್ಟ 1,91,396 ಸಂಖ್ಯೆಯ ಹಿಂದಿರುವ ಅಪಾಯದ ಪ್ರಮಾಣವನ್ನು ದಾಖಲಿಸಿದೆ. ಅಂತರ್ಜಲ ಮಟ್ಟದ ವಿವರವನ್ನು ಹೇಳಬೇಕಿರುವ ದಾಖಲೆಗಳು ಇಂತಹ ಅರೆಬೆಂದ ಮಾಹಿತಿಗಳ ತಳಹದಿಯಲ್ಲಿ ರೂಪುಗೊಂಡಿರುವ ಕಾರಣದಿಂದಾಗಿ ಈಗ ಲಭ್ಯವಿರುವ ರಾಜ್ಯದ ಅಂತರ್ಜಲ ಮಟ್ಟದ ಬಗೆಗಿನ ಮಾಹಿತಿಗಳು ನೈಜತೆಯಿಂದ ದೂರವಾಗಿವೆ. ವರದಿಯು ರಾಜ್ಯದಲ್ಲಿ ಬಹಳಷ್ಟು ಸಂಖ್ಯೆಯ ಕೊಳವೆಬಾವಿಗಳಿವೆ ಎಂಬುದನ್ನಷ್ಟೇ ಹೇಳುತ್ತಿದೆ. ಅಲ್ಲದೆ ಇವುಗಳನ್ನು ನೀರಾವರಿಗೆ ಬಳಸಲಾಗುತ್ತಿದೆಯೆಂದೂ, ಕನಿಷ್ಠ ಪಕ್ಷ ಸ್ಥಳೀಯ ವಿದ್ಯುಚ್ಛಕ್ತಿ ಕೇಂದ್ರಗಳಲ್ಲೂ ಈ ಬಗ್ಗೆ ಯಾವ ದಾಖಲೆಗಳೂ ಇಲ್ಲವೆಂದು ಈ ವರದಿಯು ದಾಖಲಿಸಿದೆ. ಈ ವರದಿಯನ್ನು ಪರಿಗಣಿಸುವುದೇ ಆದಲ್ಲಿ ರಾಜ್ಯದ ಉಳಿದ ಅಂತರ್ಜಲ ಪ್ರಮಾಣವು ಅಪಾಯದ ಅಂಚಿನಲ್ಲಿದೆ ಎನ್ನುವುದಂತೂ ಸತ್ಯ.

ಈ ಸಮಸ್ಯೆಯನ್ನು ಪರಿಹರಿಸಲು ಮೊಟ್ಟಮೊದಲು ರಾಜ್ಯದಲ್ಲಿ ಒಟ್ಟು ಕೊಳವೆಬಾವಿಗಳೆಷ್ಟಿವೆ ಎಂಬುದನ್ನು ರಾಜ್ಯ ಸರಕಾರವು ಕಂಡುಕೊಳ್ಳಬೇಕಿದೆ. ``ಸನ್ಮಾನ್ಯ ರಾಷ್ಟ್ರಪತಿಯವರ ಅನುಮೋದನೆಯು ಬಂದ ಕೂಡಲೇ ನಾವು ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ'', ಎನ್ನುತ್ತಿದ್ದಾರೆ ಇಲಾಖೆಯ ಅಧಿಕಾರಿಯೊಬ್ಬರು.

ಇತ್ತ ಸಂಜಯ್ ಶೆಲ್ಕೆಯ ರಿಗ್ ಪೆಟ್ರೋಲ್ ಪಂಪ್ ಒಂದರ ಸಮೀಪದಲ್ಲಿ ತುಂಬಿಕೊಳ್ಳುತ್ತಿದೆ. ಬಹುಷಃ ನಾಳೆಯ ದಿನ ಮತ್ತೆ ಮೂರು ಹೊಸ ಕೊಳವೆಬಾವಿಗಳು ಬಾಯಿಬಿಡಲಿವೆ.

ಲೇಖನವು ` ದಿ ಹಿಂದೂ ' ಪತ್ರಿಕೆಯಲ್ಲಿ ಎಪ್ರಿಲ್ 19, 2013 ರಂದು ಪ್ರಕಟವಾಗಿದೆ .

ಲೇಖನವು ಪಿ . ಸಾಯಿನಾಥ್ ರವರಿಗೆ ` ವಲ್ರ್ಡ್ ಮೀಡಿಯಾ ಸಮ್ಮಿಟ್ ಗ್ಲೋಬಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ' ಪುರಸ್ಕಾರವನ್ನು (2014) ತಂದುಕೊಟ್ಟ ಸರಣಿಬರಹದ ಒಂದು ಭಾಗ .

ಅನುವಾದ: ಪ್ರಸಾದ್ ನಾಯ್ಕ

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik