ಪೋಲೀಸ್ ಠಾಣೆಯೊಂದರ ಎದುರು ತಾನು ತನ್ನ ಪತ್ನಿಯನ್ನು ಥಳಿಸುತ್ತಿದ್ದೇನೆ ಎಂಬ ಪರಿವೆಯೇ ಆತನಿಗಿರಲಿಲ್ಲ. ಕುಡಿದ ಮತ್ತಿನಲ್ಲಿ ತೇಲುತ್ತಿದ್ದ ಹೌಸಾಬಾಯಿಯ ಪತಿ ಆಕೆಯನ್ನು ನಿರ್ದಯವಾಗಿ ಥಳಿಸುತ್ತಿದ್ದ. ''ನನ್ನ ಬೆನ್ನು ಭೀಕರವಾಗಿ ನೋಯುತ್ತಿತ್ತು. ಭವಾನಿ ನಗರದಲ್ಲಿರುವ (ಸಾಂಗ್ಲಿ) ಚಿಕ್ಕ ಪೋಲೀಸ್ ಠಾಣೆಯೊಂದರ ಸಮ್ಮುಖದಲ್ಲಿ ಇದೆಲ್ಲಾ ನಡೆಯುತ್ತಿತ್ತು'', ಎಂದು ಆ ದಿನಗಳನ್ನು ಇಂದು ನೆನಪಿಸುತ್ತಿದ್ದಾರೆ ಹೌಸಾಬಾಯಿ. ಆದರೆ ಠಾಣೆಯ ನಾಲ್ವರು ಸಿಬ್ಬಂದಿಗಳಲ್ಲಿ ಅಂದು ಇಬ್ಬರು ಮಾತ್ರ ಅಲ್ಲಿದ್ದರು. ಮತ್ತಿಬ್ಬರು ಮಧ್ಯಾಹ್ನದ ಊಟಕ್ಕೆಂದು ಹೊರಗೆಲ್ಲೋ ಹೋಗಿದ್ದರಂತೆ. ಇತ್ತ ಈ ಗಡಿಬಿಡಿಯಲ್ಲೇ ಹೌಸಾಬಾಯಿಯ ಪತಿ ದೊಡ್ಡದಾದ ಕಲ್ಲೊಂದನ್ನು ಎತ್ತಿ ''ಈ ಕಲ್ಲಿನಿಂದ ಇಲ್ಲೇ ನಿನ್ನನ್ನು ಚಚ್ಚಿ ಕೊಂದುಹಾಕುತ್ತೇನೆ'' ಎಂದು ಗರ್ಜಿಸುತ್ತಿದ್ದ.

ಈ ಸದ್ದು ಠಾಣೆಯೊಳಗಿದ್ದ ಇಬ್ಬರು ಸಿಬ್ಬಂದಿಗಳನ್ನು ಠಾಣೆಯ ಹೊರಭಾಗಕ್ಕೆ ಕರೆತಂದಿತ್ತು. ''ನಮ್ಮ ಜಗಳವನ್ನು ನಿಲ್ಲಿಸಲು ಅವರು ತಮ್ಮಿಂದಾದ ಪ್ರಯತ್ನವನ್ನೇನೋ ಮಾಡಿದರು'', ಎನ್ನುವ ಹೌಸಾಬಾಯಿ ತನಗೆ ಗಂಡನ ಮನೆಗೆ ಮರಳುವ ಮನಸ್ಸಿರಲಿಲ್ಲ ಎಂದು ಅಂದು ತನ್ನೊಂದಿಗಿದ್ದ ತನ್ನ ಸಹೋದರನೊಂದಿಗೆ ಹೇಳಲು ಪ್ರಯತ್ನಿಸುತ್ತಿದ್ದಾರೆ. ''ನಾನಂತೂ ಹೋಗೋದಿಲ್ಲ ಎಂದು ಹೇಳಿಯೇ ಬಿಟ್ಟೆ. ನಿನ್ನ ಮನೆಯ ಪಕ್ಕವೇ ಒಂದು ಚಿಕ್ಕ ಸ್ಥಳವನ್ನು ನನಗಾಗಿ ಮಾಡಿಕೊಡು. ನಾನು ಅಲ್ಲೇ ಇರುತ್ತೇನೆ. ಗಂಡನ ಮನೆಗೆ ಮರಳಿ ಸಾಯುವುದಕ್ಕಿಂತ ಇಲ್ಲೇ ಇದ್ದು, ಬಂದಿದ್ದು ಬರಲಿ ಎಂದು ಹೇಗಾದರೂ ಮಾಡಿ ಜೀವನ ಸಾಗಿಸುತ್ತೇನೆ... ಇನ್ನು ಅವನ ಹೊಡೆತಗಳನ್ನು ತಾಳಿಕೊಳ್ಳುವುದು ನನ್ನಿಂದಾಗದ ಮಾತು'', ಹೌಸಾಬಾಯಿ ಹೇಳುತ್ತಿದ್ದಾಳೆ. ಆದರೆ ಆಕೆಯ ಯಾವ ಗೋಗರೆಯುವಿಕೆಯೂ ಕೂಡ ಅವಳ ಸಹೋದರನ ಮನಸ್ಸನ್ನು ಬದಲಿಸಲು ಯಶಸ್ವಿಯಾಗಿರಲಿಲ್ಲ.

ಅಂತೂ ಪೋಲೀಸರು ದಂಪತಿಗಳಿಬ್ಬರನ್ನೂ ಸಾಕಷ್ಟು ಹೊತ್ತು ಮಾತಾಡಿಸಿಯಾಗಿತ್ತು. ಕೊನೆಗೂ ತಕ್ಕಮಟ್ಟಿಗೆ ಒಂದಾದಂತೆ ಕಂಡ ದಂಪತಿಗಳಿಬ್ಬರನ್ನು ಅವರ ಹಳ್ಳಿಯತ್ತ ಸಾಗುವ ರೈಲಿನಲ್ಲಿ ಕೂರಿಸಿ ಸಿಬ್ಬಂದಿಗಳು ಕೈತೊಳೆದುಕೊಂಡಿದ್ದರು. ''ಅವರು ನಮ್ಮ ಟಿಕೆಟ್ಟುಗಳನ್ನೂ ತಂದು ನನ್ನ ಕೈಯಲ್ಲಿಟ್ಟರು. ಜೊತೆಗೇ ನನ್ನ ಪತಿಗೆ ಕೆಲ ಮಾತುಗಳನ್ನು ಹೇಳಲೂ ಮರೆಯಲಿಲ್ಲ - ಹೆಂಡತಿ ಜೊತೆಗಿರಬೇಕು ಎಂದರೆ ಅವಳನ್ನು ಚೆನ್ನಾಗಿ ನೋಡಿಕೋ. ಸುಮ್ಮನೆ ಕಿತ್ತಾಡಬೇಡ'', ಹೌಸಾಬಾಯಿಯವರ ನೆನಪುಗಳು ಇಂದು ನಿಧಾನವಾಗಿ ಸುರುಳಿ ಬಿಚ್ಚಿಕೊಳ್ಳುತ್ತಿವೆ.

ಈ ಮಧ್ಯೆ ಮತ್ತೊಂದು ಘಟನೆಯೂ ನಡೆದಿತ್ತು. ಹೌಸಾಬಾಯಿಯ ಕಾಮ್ರೇಡ್ ಗಳು ಪೋಲೀಸ್ ಠಾಣೆಯನ್ನು ಲೂಟಿ ಮಾಡಿದ್ದಲ್ಲದೆ ಇದ್ದ ನಾಲ್ಕು ರೈಫಲ್ಲುಗಳನ್ನೂ ಹೊತ್ತೊಯ್ದಿದ್ದರು. ಅಸಲಿಗೆ ನಕಲಿ 'ಪತಿ' ಮತ್ತು ನಕಲಿ 'ಸಹೋದರ'ನನ್ನು ಕರೆತಂದು ಠಾಣೆಯೆದುರು ನಡೆಸಿದ ಈ ಭರ್ಜರಿ ನಾಟಕವು ಪೋಲೀಸ್ ಸಿಬ್ಬಂದಿಗಳ ಗಮನವನ್ನು ಠಾಣೆಯಿಂದ ತಮ್ಮತ್ತ ಸೆಳೆಯುವುದಕ್ಕಷ್ಟೇ ಆಡಿದ ಆಟವಾಗಿತ್ತು. ಇದು 1943 ರ ಕಥೆ. ಹೌಸಾಬಾಯಿಗಾಗ ಹದಿನೇಳರ ಹರೆಯ. ಮೂರು ವರ್ಷದ ವಿವಾಹಿತೆ ಮತ್ತು ಸುಭಾಷ್ ಎಂಬ ಪುಟ್ಟ ಮಗುವೊಂದರ ತಾಯಿ. ಬ್ರಿಟಿಷ್ ರಾಜ್ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಆ ದಿನಗಳಲ್ಲಿ ತನ್ನ ಮಗುವನ್ನು ಸಂಬಂಧಿಯೊಬ್ಬಾಕೆಯ ಮನೆಯಲ್ಲಿ ಬಿಟ್ಟು ಚಳುವಳಿಗೆ ಧುಮುಕಿದ್ದಳು ಈ ಮಹಾತಾಯಿ. ಸದ್ಯ 74 ವರ್ಷಗಳ ನಂತರವೂ ತನ್ನ ಈ ನಕಲಿ ಪತಿಯ ಬಗ್ಗೆ ಆಕೆಗೆ ಅಸಮಾಧಾನವಿದೆ. ದಂಪತಿಗಳು ಕಿತ್ತಾಡುವ ಈ ನಾಟಕವು ಯಾವ ಕಾರಣಕ್ಕೂ ನಕಲಿಯೆಂಬಂತೆ ಕಾಣಬಾರದು ಎಂದುಕೊಂಡ ಆತ ಹೌಸಾಬಾಯಿಗೆ ಕೊಂಚ ಜೋರಾಗಿಯೇ ಬಾರಿಸಿದ್ದನಂತೆ. ''ಈ ವಯಸ್ಸಿನಲ್ಲಿ ಕಣ್ಣೂ, ಕಿವಿಯೂ ನನಗೆ ಸಾಥ್ ನೀಡುತ್ತಿಲ್ಲ, ಆದರೂ ನಿಮಗೆಲ್ಲವನ್ನೂ ನಾನೇ ಹೇಳುತ್ತೇನೆ'', ಎಂದು ಉತ್ಸಾಹದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ವಿಟಾದಲ್ಲಿ ಮೈನವಿರೇಳಿಸುವ ತಮ್ಮ ಕಥೆಯನ್ನು ನಮಗೆ ಹೇಳುತ್ತಿದ್ದಾರೆ 91 ರ ಪ್ರಾಯದ ಹೌಸಾಬಾಯಿ.

ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಯನ್ನೊಳಗೊಂಡ ತಮ್ಮ ಸಾಹಸಮಯ ಜೀವನವನ್ನು ನಿರೂಪಿಸುತ್ತಿರುವ ಹೌಸಾಬಾಯಿ

ನಾನು ಆ ಡಬ್ಬದ ಮೇಲೆ ಮಲಗುವಂತಿರಲಿಲ್ಲ. ಜೊತೆಗೇ ಅದನ್ನು ಮುಳುಗಿಸುವಂತಹ ಪರಿಸ್ಥಿತಿಯಲ್ಲೂ ನಾವಿರಲಿಲ್ಲ. ನಾನು ಬಾವಿಯಲ್ಲೇನೋ ಈಜುತ್ತಿದ್ದೆ. ಆದರೆ ಇದು ಹರಿಯುವ ನೀರಾಗಿತ್ತು. ಆ ಮಾಂಡೋವಿ ನದಿಯೆಂದರೆ ಚಿಕ್ಕದೇನಲ್ಲ

ಹೌಸಾಬಾಯಿ ಪಾಟೀಲ್ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅಂದಿನ ಆ ನಾಟಕದಲ್ಲಿದ್ದ ಹೌಸಾಬಾಯಿ ಮತ್ತು ಆಕೆಯ ಸಂಗಡಿಗರು 'ತೂಫಾನ್ ಸೇನಾ' (ಸುಂಟರಗಾಳಿ) ಎಂಬ ತಂಡಕ್ಕೆ ಸೇರಿದವರಾಗಿದ್ದರು. ಅಸಲಿಗೆ ಈ ಸೇನೆಯು `ಪ್ರತಿ ಸರ್ಕಾರ'ದ ಒಂದು ಶಸ್ತ್ರಾಸ್ತ್ರ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಒಂದು ತಂಡ. ಸತಾರಾದ ಈ ಬದಲಿ ಭೂಗತ ಸರ್ಕಾರವು 1943 ರಲ್ಲೇ ತಮ್ಮನ್ನು ತಾವು ಬ್ರಿಟಿಷ್ ಸರ್ಕಾರದಿಂದ ಸ್ವತಂತ್ರವೆಂದು    ಘೋಷಿಸಿದ್ದ ವ್ಯವಸ್ಥೆಯಾಗಿತ್ತು ಕೂಡ. ಕುಂದಾಲ್ ಪ್ರದೇಶವನ್ನು ತನ್ನ ಚಟುವಟಿಕೆಯ ಕೇಂದ್ರಸ್ಥಾನವನ್ನಾಗಿರಿಸಿ ನಿಜಕ್ಕೂ ಒಂದು ಸರಕಾರದಂತೆಯೇ ಕಾರ್ಯನಿರ್ವಹಿಸುತ್ತಿದ್ದ ಪ್ರತಿ ಸರ್ಕಾರ್ ಸುತ್ತಮುತ್ತಲ ಸುಮಾರು 600 ಕ್ಕೂ ಹೆಚ್ಚು ಹಳ್ಳಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಅಷ್ಟಕ್ಕೂ ಈ ಹೌಸಾಬಾಯಿ ಪಾಟೀಲ್ ಬೇರ್ಯಾರೂ ಅಲ್ಲ. ಹೌಸಾಬಾಯಿಯ ತಂದೆಯೂ, ದಂತಕಥೆಯೂ ಆಗಿದ್ದ ನಾನಾ ಪಾಟೀಲ್ ಸ್ವತಃ ಪ್ರತಿ ಸರ್ಕಾರ್ ವ್ಯವಸ್ಥೆಯ ಮುಖ್ಯಸ್ಥರಾಗಿದ್ದವರು.

1943 ರಿಂದ 1946 ರ ನಡುವಿನ ಕಾಲಘಟ್ಟಕ್ಕೆ ಬರುವುದಾದರೆ ಹೌಸಾಬಾಯಿಯವರು (ಹೌಸಾಬಾಯಿಯವರು 'ಹೌಸಾತಾಯಿ' ಎಂದು ಕರೆಯಲ್ಪಡುವುದೇ ಹೆಚ್ಚು. ಹಿರಿಯಕ್ಕನಿಗೆ ಗೌರವಪೂರ್ವಕವಾಗಿ "ತಾಯಿ" ಎಂದು ಕರೆಯಲ್ಪಡುವ ಪರಿಪಾಠ ಮರಾಠಿಗರಲ್ಲಿದೆ) ಬ್ರಿಟಿಷ್ ರೈಲುಗಳನ್ನು ದರೋಡೆ ಮಾಡುತ್ತಿದ್ದ, ಪೋಲೀಸ್ ಠಾಣೆಗಳನ್ನು ಲೂಟಿಗೈಯುತ್ತಿದ್ದ, ಡಾಕ್ ಬಂಗಲೆಗಳನ್ನು ಅಗ್ನಿಯ ಕೆನ್ನಾಲಗೆಗೆ ಆಹುತಿ ಮಾಡುತ್ತಿದ್ದ ಕೆಲ ಕ್ರಾಂತಿಕಾರಿಗಳ ಗುಂಪುಗಳೊಂದಿಗೆ ಸಕ್ರಿಯವಾಗಿದ್ದವರು. (ಆ ದಿನಗಳಲ್ಲಿ ಅಂಚೆಕಚೇರಿಗಳು, ಅಧಿಕೃತವಾಗಿ ಪ್ರಯಾಣಿಸುವವರಿಗೆಂದೇ ನಿರ್ಮಿಸಲಾಗಿದ್ದ ವಸತಿಗೃಹಗಳು, ತಾತ್ಕಾಲಿಕ ನ್ಯಾಯಾಲಯಗಳು ಇತ್ಯಾದಿಗಳೂ ಇದ್ದವು). 1944 ರಲ್ಲಿ ಪೋರ್ಚುಗೀಸ್ ಆಡಳಿತದ ವಿರುದ್ಧ ಗೋವಾದಲ್ಲಿ ನಡೆಸಲಾಗಿದ್ದ ಭೂಗತ ಕಾರ್ಯಾಚರಣೆಯೊಂದರಲ್ಲೂ ಈಕೆ ಪಾಲ್ಗೊಂಡಿದ್ದಳು. ಅರ್ಧರಾತ್ರಿಯಲ್ಲಿ ತುಂಬಿಹರಿಯುತ್ತಿದ್ದ ಮಾಂಡೋವಿ ನದಿಯನ್ನು ಹೌಸಾಬಾಯಿ ಮರದ ಡಬ್ಬವೊಂದರ ಮೇಲೆ ತೇಲುತ್ತಾ ದಾಟಿದ್ದರೆ ಉಳಿದವರು ಆಸುಪಾಸಿನಲ್ಲಿ ಈಜುತ್ತಲೇ ತಮ್ಮ ಗುರಿಯತ್ತ ಮುನ್ನಡೆದಿದ್ದರು. ''ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನೂ ಕೂಡ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿದ್ದಿದೆ. ಆದರೆ ಬಹುದೊಡ್ಡದಾದ ಅಥವಾ ಮಹಾ ಎನಿಸುವಂತಹ ಕೆಲಸವನ್ನೇನೂ ಮಾಡಿಲ್ಲ'', ಹೀಗೆ ಇಂಥಾ ಮೈನವಿರೇಳಿಸುವ ಸಾಹಸಗಳ ಹೊರತಾಗಿಯೂ ಹೌಸಾಬಾಯಿ ಈಗ ವಿನಮ್ರರಾಗಿ ಹೇಳುತ್ತಾರೆ.

''ನನ್ನ ಮೂರು ವರ್ಷದವಳಾಗಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ಆ ಹೊತ್ತಿಗಾಗಲೇ ನಮ್ಮ ತಂದೆಯವರು ಸ್ವಾತಂತ್ರ್ಯ ಸಂಗ್ರಾಮದ ಅಲೆಯಿಂದ ಪ್ರೇರಿತರಾಗಿದ್ದರು. ಜ್ಯೋತಿಬಾ ಫುಲೆಯವರ ಮೌಲ್ಯಗಳು ಅವರನ್ನು ಆಕರ್ಷಿಸಿತ್ತು. ಮುಂದೆ ಗಾಂಧೀಜಿಯವರ ವಿಚಾರಗಳೂ ಕೂಡ ಸೇರಿಕೊಂಡವು. ತಲಾತಿ (ವಿಲೇಜ್ ಅಕೌಂಟೆಂಟ್) ವೃತ್ತಿಯನ್ನು ಕೈಬಿಟ್ಟ ಅಪ್ಪ ಕೂಡಲೇ ಪೂರ್ಣಾವಧಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಾಗಿತ್ತು. ತಮ್ಮದೇ ಆದ ಹೊಸ ಸರಕಾರವನ್ನು ತರುವುದೇ ಅವರೆದುರಿಗಿದ್ದ ಮುಖ್ಯ ಗುರಿ. ಈ ಸರಕಾರವನ್ನು ಬಳಸಿಕೊಂಡು ಬ್ರಿಟಿಷ್ ಸರಕಾರಕ್ಕೆ ಬಲವಾದ ಹೊಡೆತವನ್ನು ನೀಡಬೇಕು ಎಂಬುದು ಅವರ ಉದ್ದೇಶವಾಗಿತ್ತು", ಎನ್ನುತ್ತಾರೆ ಹೌಸಾಬಾಯಿ.

ನಾನಾ ಪಾಟೀಲ್ ಮತ್ತವರ ಸಂಗಡಿಗರ ಬಂಧನಕ್ಕಾಗಿ ಆಗಲೇ ವಾರಂಟ್ ಹೊರಡಿಸಿಯಾಗಿತ್ತು. ಹೀಗಾಗಿ ತಮ್ಮ ಚಟುವಟಿಕೆಗಳನ್ನು ಭೂಗತಗೊಳಿಸದೆ ಅವರಿಗೆ ಬೇರೆ ಮಾರ್ಗವಿರಲಿಲ್ಲ. ನಾನಾ ಪಾಟೀಲ್ ಹಳ್ಳಿಯಿಂದ ಹಳ್ಳಿಗಳಿಗೆ ತೆರಳುತ್ತಾ, ತಮ್ಮ ಅದ್ಭುತ ಭಾಷಣಗಳಿಂದ ಜನರ ಮನಗಳಲ್ಲಿ ಕ್ರಾಂತಿಯ ಕಿಡಿಯನ್ನು ಹಬ್ಬಿಸುವುದರಲ್ಲಿ ನಿರತರಾಗಿಬಿಟ್ಟರು. ''ಹೀಗೆ ನಿರಂತರವಾಗಿ ಚಲಿಸುತ್ತಲೇ ಇದ್ದ ಅವರು ಆಗಾಗ ಅಡಗಿಕೊಳ್ಳುತ್ತಿದ್ದರು. ಅವರ ಜೊತೆಗಿದ್ದ ಬರೋಬ್ಬರಿ 500 ಜನರ ಹೆಸರಿನಲ್ಲೂ ವಾರಂಟ್ ಗಳು ಜಾರಿಯಾಗಿದ್ದವು'', ಎಂದು ಕ್ರಾಂತಿಯ ಆ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಹೌಸಾಬಾಯಿ.

A photograph of Colonel Jagannathrao Bhosle (left) & Krantisingh Veer Nana Patil
Hausabai and her father Nana Patil

1940 ರ ದಿನಗಳಲ್ಲಿ ಹೌಸಾಬಾಯಿಯವರ ತಂದೆಯಾದ ನಾನಾ ಪಾಟೀಲ್ 'ಆಝಾದ್ ಹಿಂದ್ ಸೇನಾ'ದ (ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಂದ ಪ್ರೇರಿತರಾಗಿ ಹುಟ್ಟಿದ ದಳ) ಕರ್ನಲ್ ಜಗನ್ನಾಥರಾವ್ ಭೋಸ್ಲೆಯವರೊಂದಿಗೆ (ಸಮವಸ್ತ್ರದಲ್ಲಿರುವವರು). ಹೌಸಾಬಾಯಿಯವರು (ಬಲ) ತನ್ನ ಅತ್ತಿಗೆಯರಾದ ಯಶೋದಾಬಾಯಿ (ಎಡ) ಮತ್ತು ರಾಧಾಬಾಯಿಯವರೊಂದಿಗೆ (ಮಧ್ಯ) ಇರುವ ಛಾಯಾಚಿತ್ರ. ಸ್ವಾತಂತ್ರ್ಯಾನಂತರದ ದಿನಗಳದ್ದು

ಆದರೆ ಇಂಥಾ ಸಾಹಸಗಳಿಗೆ ತೆರಬೇಕಾದ ಬೆಲೆಯೂ ಅಷ್ಟೇ ದೊಡ್ಡದಿತ್ತು. ನಾನಾ ಪಾಟೀಲರ ಗದ್ದೆ, ಆಸ್ತಿಗಳು ಮುಟ್ಟುಗೋಲಾದವು. ಪಾಟೀಲರು ಭೂಗತರಾಗಿದ್ದಾಗಲೆಲ್ಲಾ ಅವರ ಕುಟುಂಬವು ಸಾಕಷ್ಟು ಸಂಕಷ್ಟಗಳಿಗೆ ಗುರಿಯಾಗಬೇಕಾಯಿತು.

ಹೌಸಾಬಾಯಿಯವರ ಮಾತುಗಳಲ್ಲೇ ಕೇಳುವುದಾದರೆ ''ನಾವಾಗ ಅಡುಗೆ ಮಾಡುತ್ತಿದ್ದೆವು. ಅವರುಗಳು ಬಂದಾಗ ಭಾಕ್ರಿ ಮತ್ತು ಬದನೆಗಳು ಒಲೆಯ ಬೆಂಕಿಯಲ್ಲಿ ಸುಡುತ್ತಲೇ ಇದ್ದವು. ಸರಕಾರವು ನಮ್ಮ ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿತು. ಹಾಗೂ ಇದರಿಂದಾಗಿ ಒಂದೇ ಒಂದು ಕೋಣೆ ಮಾತ್ರ ನಮಗಾಗಿ ಉಳಿಯಿತು. ನಾನು, ನನ್ನ ಅಜ್ಜಿ, ಸಂಬಂಧಿಗಳು... ಹೀಗೆ ಬಹಳಷ್ಟು ಮಂದಿ ಈ ಒಂದು ಕೋಣೆಯಲ್ಲೇ ವಾಸಿಸತೊಡಗಿದ್ದೆವು".

ಹೀಗೆ ಮುಟ್ಟುಗೋಲು ಹಾಕಿಕೊಂಡ ಹೌಸಾಬಾಯಿಯವರ ಕುಟುಂಬದ ಸ್ವತ್ತುಗಳನ್ನು ಹರಾಜು ಹಾಕಲೂ ಬ್ರಿಟಿಷ್ ಸರಕಾರವು ಮುಂದಾಗಿತ್ತು. ಆದರೆ ಕೊಳ್ಳುವವರ್ಯಾರೂ ಸಿಗದಿದ್ದ ಪರಿಣಾಮ ಈ ಹೆಜ್ಜೆಯು ವಿಫಲಗೊಂಡಿತು. ''ನಿತ್ಯವೂ ಮುಂಜಾನೆ ದಾವಂಡಿಯೊಬ್ಬ (ಹಳ್ಳಿಗಳಲ್ಲಿ ಘೋಷಣೆಗಳನ್ನು ಕೂಗಲೆಂದೇ ಇರುವ ಮಂದಿ) ಬಂದು ಹೀಗೆ ಘೋಷಣೆಯನ್ನು ಕೂಗುತ್ತಿದ್ದ: ನಾನಾ ಪಾಟೀಲರ ಗದ್ದೆಯನ್ನು ಹರಾಜಿಗಿಡಲಾಗುತ್ತದೆ. ಆದರೆ ಜನರು ಮಾತ್ರ `ನಾವ್ಯಾಕೆ ನಾನಾರವರ ಗದ್ದೆಯನ್ನು ಕೊಂಡುಕೊಳ್ಳಬೇಕು? ಅವರು ಯಾರನ್ನೂ ದೋಚಿದವರೂ ಅಲ್ಲ, ಕೊಂದವರೂ ಅಲ್ಲ' ಎಂದೆಲ್ಲಾ ಮಾತಾಡಿಕೊಳ್ಳುತ್ತಿದ್ದರು'', ಎನ್ನುತ್ತಾರೆ ಹೌಸಾಬಾಯಿ.

''ಆದರೂ ಆ ಜಮೀನಿನಲ್ಲಿ ನಾವು ಸಾಗುವಳಿ ಮಾಡುವಂತಿರಲಿಲ್ಲ. ಹೀಗಾಗಿ ಬದುಕುವುದಕ್ಕಾಗಿ ಏನಾದರೂ ರೋಜ್ಗಾರ್ ಮಾಡುವುದು ಅನಿವಾರ್ಯವಾಯಿತು. ರೋಜ್ಗಾರ್ ಅಂದ್ರೆ ಏನೆಂದು ಗೊತ್ತೇ ನಿಮಗೆ? ಅಂದರೆ ನಾವು ಇನ್ಯಾರದ್ದೋ ಅಧೀನದಲ್ಲಿ ದುಡಿಯಬೇಕಿತ್ತು'', ಎನ್ನುವ ಹೌಸಾಬಾಯಿ ಈ ವಿಚಾರದಲ್ಲಿ ಬ್ರಿಟಿಷ್ ಸರಕಾರ ಒಡ್ಡಬಹುದಾಗಿದ್ದ ಹಸ್ತಕ್ಷೇಪದ ಬಗ್ಗೆ ಜನರಲ್ಲಿದ್ದ ಭಯದ ಬಗ್ಗೆಯೂ ವಿವರಿಸುತ್ತಾರೆ. ಇದರಿಂದಾಗಿ ಹಳ್ಳಿಯಲ್ಲಿ ಯಾವ ಕೆಲಸವೂ ಈ ಕುಟುಂಬಕ್ಕೆ ಸಿಗುವುದು ಅಸಾಧ್ಯದ ಮಾತಾಗಿಬಿಟ್ಟಿತು. ಕೊನೆಗೂ ತಂದೆಯವರ ಕುಟುಂಬದಿಂದ ಬಂದಿದ್ದ ಸಂಬಂಧಿಯೊಬ್ಬ ಜೋಡಿ ಎತ್ತುಗಳು ಮತ್ತು ಗಾಡಿಯೊಂದನ್ನು ಕೊಟ್ಟ ನಂತರವೇ ಈ ಸಮಸ್ಯೆಗೊಂದು ಪರಿಹಾರ ದೊರಕಿದ್ದು. ''ಈ ಗಾಡಿಯನ್ನು ಬಾಡಿಗೆಗೆಂದು ಕೊಟ್ಟು ನಾವು ಹೊಟ್ಟೆಪಾಡಿಗಾಗಿ ಒಂದಿಷ್ಟು ಸಂಪಾದಿಸಬಹುದಿತ್ತು'', ಎಂದು ಆ ಸಂಕಷ್ಟದ ದಿನಗಳನ್ನು ಗಾಢವಾಗಿ ನೆನಪಿಸಿಕೊಳ್ಳುತ್ತಾರೆ ಹೌಸಾಬಾಯಿ.

''ನಾವು ಬೆಲ್ಲ, ನೆಲಗಡಲೆ, ಜವಾರ್ ಗಳನ್ನು ಸಾಗಿಸುತ್ತಿದ್ದೆವು. ಗಾಡಿಯು ಎಡೆ ಮಚ್ಚಿಂದ್ರದಿಂದ (ನಾನಾರವರು ನೆಲೆಸಿದ್ದ ಹಳ್ಳಿ) 12 ಕಿಲೋಮೀಟರ್ ದೂರವಿದ್ದ ಟಕಾರಿ ಹಳ್ಳಿಗೆ ತೆರಳಿದರೆ ನಮಗೆ 3 ರೂಪಾಯಿಗಳ ಸಂಪಾದನೆಯಾಗುತ್ತಿತ್ತು. ಗಾಡಿಯು ಒಂದು ಪಕ್ಷ ಕರಾಡ್ ವರೆಗೆ (20 ಕಿಲೋಮೀಟರುಗಳಿಗೂ ಹೆಚ್ಚು) ಹೋದರೆ ನಮಗೆ 5 ರೂಪಾಯಿಗಳ ಸಂಪಾದನೆಯಾಗುತ್ತಿತ್ತು. ಆ ದಿನಗಳಲ್ಲಿ ನಮಗೆ ಸಿಗುತ್ತಿದ್ದಿದ್ದು ಇಷ್ಟೇ.

Yashodabai (left), Radhabai (mid) and Hausatai. They are her sisters in law
PHOTO • Shreya Katyayini

ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನು ಮಾಡಿರುವ ಕೆಲಸಗಳು 'ಅಳಿಲುಸೇವೆ'ಯಷ್ಟೇ ಅನ್ನುತ್ತಿರುವ ಹೌಸಾತಾಯಿ

''ಅಜ್ಜಿ ಹೊಲದಲ್ಲಿ ಒಂದಷ್ಟು ಅಗೆಯುವ ಕೆಲಸ ಮಾಡುತ್ತಿದ್ದರು. ನಾನು ಮತ್ತು ನನ್ನ ಸಂಬಂಧಿಯೊಬ್ಬಾಕೆ ಎತ್ತುಗಳಿಗೆ ಆಹಾರ ತಿನ್ನಿಸುತ್ತಿದ್ದೆವು. ಆ ಗಾಡಿಯೂ, ನಮ್ಮ ಜೀವನವೂ ಸಂಪೂರ್ಣವಾಗಿ ಅವಲಂಬಿಸಿದ್ದೇ ಈ ಎತ್ತುಗಳ ಮೇಲೆ. ಹೀಗಾಗಿ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಹಳ್ಳಿಗರು ನಮ್ಮೊಂದಿಗೆ ಮಾತಾಡುತ್ತಲೇ ಇರಲಿಲ್ಲ. ವ್ಯಾಪಾರಿಗಳು ಹಿಡಿ ಉಪ್ಪನ್ನೂ ನಮಗೆ ನೀಡುತ್ತಿರಲಿಲ್ಲ. 'ಹೋಗಿ ಬೇರೆ ಎಲ್ಲಿಂದಾದರೂ ಖರೀದಿಸಿ' ಎಂದು ನಮ್ಮನ್ನು ಸಾಗಹಾಕುತ್ತಿದ್ದರು. ಕೆಲವೊಮ್ಮೆ ಜನರು ಕರೆಯದಿದ್ದರೂ ನಾವು ಧಾನ್ಯಗಳನ್ನು ಅರೆಯುವ ಕೆಲಸಗಳನ್ನು ಮಾಡಲು ಅವರ ಮನೆಗಳಿಗೆ ತೆರಳುತ್ತಿದ್ದೆವು. ರಾತ್ರಿ ಮಲಗುವ ಮುನ್ನ ತಿನ್ನಲು ಒಂದಿಷ್ಟಾದರೂ ಆಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಾವು ಹೀಗೆ ಹೋಗುತ್ತಿದ್ದೆವು. ನಾವು ಉಂಬ್ರ್ಯಚ್ಯ ದೋಚ್ಯವನ್ನು (ಅಂಜೂರದ ಹೆಣ್ಣು) ಬೇಯಿಸಿ ತಿಂದು ಮಲಗಿದ ದಿನಗಳೂ ಇವೆ'', ಹೌಸಾಬಾಯಿ ತಮ್ಮ ಸವಾಲಿನ ದಿನಗಳ ಬಗ್ಗೆ ಹೇಳುತ್ತಲೇ ಇದ್ದಾರೆ.

ಭೂಗತ ತಂಡದಲ್ಲಿ ಹೌಸಾಬಾಯಿಯವರಿಗೆ ನೀಡಲಾಗಿದ್ದ ಜವಾಬ್ದಾರಿಯೆಂದರೆ ನಿಗೂಢ ಮಾಹಿತಿಗಳನ್ನು ಕಲೆ ಹಾಕುವಂಥದ್ದು. ಉದಾಹರಣೆಗೆ ವಾಂಗಿಯ (ಪ್ರಸ್ತುತ ಸತಾರಾ ಜಿಲ್ಲೆಯಲ್ಲಿದೆ) ಡಾಕ್ ಬಂಗಲೆಯೊಂದರ ಮೇಲೆ ನಡೆದ ಬೆಂಕಿ ದಾಳಿಯೊಂದರ ಹಿಂದೆ ಹೌಸಾಬಾಯಿ ಮತ್ತು ಈಕೆಯ ಸಂಗಡಿಗರು ಕಲೆಹಾಕಿದ್ದ ಮಾಹಿತಿಗಳ ಹಿನ್ನೆಲೆಯಿತ್ತು. ''ಎಷ್ಟು ಮಂದಿ ಪೋಲೀಸರಿರುತ್ತಿದ್ದರು, ಅವರು ಬಂದು ಹೋಗುವ ಅವಧಿಗಳೇನು ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಇವರ ಕೆಲಸವಾಗಿತ್ತು. ಬಂಗಲೆಗಳನ್ನು ಅಗ್ನಿಗಾಹುತಿ ಮಾಡುವ ಕೆಲಸಗಳನ್ನು ಬೇರೆಯವರು ನೋಡಿಕೊಳ್ಳುತ್ತಿದ್ದರು. ಅಲ್ಲಿ ಅಂಥಾ ಹಲವು ಬಂಗಲೆಗಳಿದ್ದವು. ಅವುಗಳೆಲ್ಲವನ್ನೂ ಕ್ರಮೇಣ ಸುಟ್ಟು ಬೂದಿ ಮಾಡಲಾಯಿತು'', ಎನ್ನುತ್ತಾರೆ ಈಕೆಯ ಪುತ್ರನೂ, ವೃತ್ತಿಯಿಂದ ವಕೀಲರೂ ಆಗಿರುವ ಸುಭಾಷ್ ಪಾಟೀಲ್.

ಆ ದಿನಗಳಲ್ಲಿ ಹೌಸಾಬಾಯಿಯವರಂತೆ ಇತರ ಮಹಿಳೆಯರೂ ಕೂಡ ಇಂಥಾ ಭೂಗತ ತಂಡಗಳಲ್ಲಿದ್ದರೇ? ಖಂಡಿತವಾಗಿಯೂ ಹೌದು ಎನ್ನುತ್ತಾರೆ ಹೌಸಾಬಾಯಿ. ''ಶಾಲೂತಾಯಿ (ಶಿಕ್ಷಕರೊಬ್ಬರ ಪತ್ನಿ), ಲೀಲಾತಾಯಿ ಪಾಟೀಲ್, ಲಕ್ಷ್ಮೀಬಾಯಿ ನಾಯಕವಾಡಿ, ರಾಜಮತಿ ಪಾಟೀಲ್... ಇವರಲ್ಲಿ ಕೆಲವರು'', ಎಂದು ನೆನಪಿಸಿಕೊಳ್ಳುತ್ತಾರೆ ಹೌಸಾಬಾಯಿ. ಹೌಸಾಬಾಯಿಯವರ ಬಹಳಷ್ಟು ಸಾಹಸಗಳು ನಡೆದಿದ್ದು 'ಶೆಲಾರ್ ಮಾಮಾ' ಮತ್ತು ದಂತಕಥೆಯಂತಿದ್ದ ಕ್ರಾಂತಿಕಾರರಾಗಿದ್ದ ಬಾಪೂ ಲಾಡ್ ರವರ ಒಡನಾಟದ ದಿನಗಳಲ್ಲಿ. ಹೌಸಾಬಾಯಿವರ ಸಂಗಡಿಗರಲ್ಲೊಬ್ಬರಾಗಿದ್ದ ಕಾಮ್ರೇಡ್ ಕೃಷ್ಣ ಸಲುಂಕಿಯವರ ಅಡ್ಡ ನಾಮಧೇಯವಾಗಿತ್ತು ಈ 'ಶೆಲಾರ್ ಮಾಮಾ' (17 ನೇ ಶತಮಾನದಲ್ಲಿದ್ದ ಖ್ಯಾತ ಮರಾಠಾ ಸೇನಾನಿಯೊಬ್ಬರ ಹೆಸರೂ ಶೆಲಾರ್ ಮಾಮಾ ಆಗಿತ್ತು).

''ಪ್ರತಿ ಸರ್ಕಾರ್ ಮತ್ತು ತೂಫಾನಿ ಸೇನಾದ ಪ್ರಮುಖ ನಾಯಕರಲ್ಲೊಬ್ಬರಾದ ಬಾಪೂ ಲಾಡ್ ನನ್ನ ತಾಯಿಯ ಸಹೋದರಿಯ ಮಗನಾಗಿದ್ದು ಸೋದರಸಂಬಂಧಿಯಾಗಿದ್ದ. ಬಾಪೂ ಯಾವಾಗಲೂ ನನಗೆ `ಮನೆಯಲ್ಲೆಂದೂ ಕೂರಬೇಡ' ಎಂದೆಲ್ಲಾ ಸಂದೇಶಗಳನ್ನು ಕಳಿಸುತ್ತಿದ್ದ. ನಾವಿಬ್ಬರೂ ಸಹೋದರ-ಸಹೋದರಿಯರಂತೆ ಕೆಲಸ ಮಾಡುತ್ತಾ ಬಹಳ ಸಕ್ರಿಯವಾಗಿದ್ದೆವು. ಪರಿಸ್ಥಿತಿಗಳು ಸಾಮಾನ್ಯವಾಗಿ ಹೀಗಿದ್ದಾಗ ಸುತ್ತಲಿನ ಜನರು ಸಂಶಯದ ದೃಷ್ಟಿಯಿಂದ ನೋಡುವ ಯಾವ ಅವಕಾಶವನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ನನ್ನ ಮತ್ತು ಬಾಪೂ ನಡುವೆ ನಿಜಕ್ಕೂ ಅಣ್ಣ-ತಂಗಿಯರ ಸಂಬಂಧವಿತ್ತೆಂದು ನನ್ನ ಪತಿಗೆ ತಿಳಿದಿತ್ತು. ಅಸಲಿಗೆ ನನ್ನ ಪತಿಯ ಹೆಸರಿನಲ್ಲೂ ವಾರಂಟ್ ಜಾರಿಯಾಗಿತ್ತು. ಹೀಗಾಗಿ ನಾವು ಗೋವೆಗೆ ಹೋಗಿದ್ದಾಗ ನನ್ನೊಂದಿಗಿದ್ದವನು ಬಾಪೂ ಮಾತ್ರ'', ಎನ್ನುತ್ತಾರೆ ಹೌಸಾಬಾಯಿ.

ಗೋವಾದಿಂದ ಸತಾರಾ ಪ್ರದೇಶಕ್ಕೆ ಸೇನಾದ ಬಳಕೆಗಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಅವಧಿಯಲ್ಲಿ ಪೋರ್ಚುಗೀಸ್ ಪೋಲೀಸರಿಂದ ಬಂಧಿಸಲ್ಪಟ್ಟಿದ್ದ ಕಾಮ್ರೇಡ್ ಒಬ್ಬನ ಬಿಡುಗಡೆಗಾಗಿಯೇ ಈ ಗೋವಾದ ಸಾಹಸವು ಮೀಸಲಾಗಿತ್ತು. ಬಾಲ್ ಜೋಷಿ ಎಂಬ ಕಾರ್ಮಿಕನೊಬ್ಬ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಮಯದಲ್ಲಿ ಬಂಧನಕ್ಕೊಳಗಾಗಿದ್ದ. ಆತ ಗಲ್ಲಿಗೇರುವ ಸಾಧ್ಯತೆಗಳೂ ಇಲ್ಲದಿರಲಿಲ್ಲ. ಆದರೆ ಆತನ್ನು ಪೋಲೀಸರ ಬಲೆಯಿಂದ ಹೇಗಾದರೂ ಬಿಡಿಸಿಕೊಂಡು ಬರಲೇಬೇಕೆಂಬುದು ಬಾಪೂನ ಗುರಿಯಾಗಿತ್ತು. ''ಅವನನ್ನು ಬಂಧಮುಕ್ತಗೊಳಿಸುವವರೆಗೂ ನಾವು ಮರಳುವ ಮಾತೇ ಇಲ್ಲ'', ಎಂದಿದ್ದರು ಬಾಪೂ.

Hausatai and her family
PHOTO • Namita Waikar
Hausatai (left) and Gopal Gandhi
PHOTO • Shreya Katyayini

ಹೌಸಾತಾಯಿ ತನ್ನ ಕುಟುಂಬದೊಂದಿಗೆ. ಮಹಾತ್ಮಾ ಗಾಂಧಿಯವರ ಮೊಮ್ಮಗನೂ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರೂ ಆದ ಗೋಪಾಲಗಾಂಧಿಯವರೊಂದಿಗೆ (ಬಲ); ಗೋಪಾಲಗಾಂಧಿಯವರು ಹೌಸಾತಾಯಿಯವರನ್ನು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಇತರ ವೀರರನ್ನು ಸನ್ಮಾನಿಸಲು ಕುಂದೇಲ್ ಪ್ರದೇಶಕ್ಕೆ ಜೂನ್ 2017 ರಲ್ಲಿ ಭೇಟಿಯಿತ್ತಾಗ ಸೆರೆಹಿಡಿದ ಚಿತ್ರ

ಹೀಗೆ ಜೋಷಿಯ ಸಹೋದರಿಯೆಂಬಂತೆ ನಾಟಕವಾಡಿ ಹೌಸಾಬಾಯಿ ಜೋಷಿಯನ್ನು ಜೈಲಿನಲ್ಲಿ ಭೇಟಿಯಾಗುತ್ತಾರೆ. ಜೈಲಿನಿಂದ ಪಲಾಯನಗೈಯುವ ಸಂಪೂರ್ಣ ಕಾರ್ಯತಂತ್ರವೊಂದನ್ನು ಚಿಕ್ಕ ಕಾಗದವೊಂದರಲ್ಲಿ ಬರೆದು ಹೌಸಾಬಾಯಿಯವರ ತುರುಬಿನಲ್ಲಿ ಅಡಗಿಸಿಡಲಾಗಿತ್ತು. ಇನ್ನು ಇದರ ಹೊರತಾಗಿ ಸೇನಾಗೆ ತಲುಪಬೇಕಿದ್ದ, ಇನ್ನೂ ಪೋಲೀಸರ ಕೈಗೆ ದಕ್ಕದಿದ್ದ ಶಸ್ತ್ರಾಸ್ತ್ರಗಳನ್ನೂ ಕೂಡ ತಲುಪಿಸಬೇಕಿತ್ತು. ಹೀಗಾಗಿ ಮರಳುವ ಪ್ರಯಾಣವು ನಿಜಕ್ಕೂ ಸವಾಲಿನದ್ದಾಗಿತ್ತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಬಹುತೇಕ ಎಲ್ಲಾ ಪೋಲೀಸರೂ ಹೌಸಾಬಾಯಿಯವರನ್ನು ನೋಡಿದ್ದ ಪರಿಣಾಮವಾಗಿ ಆಕೆಯನ್ನು ಗುರುತಿಸುವುದು ಅವರಿಗೆ ಕಷ್ಟದ ಸಂಗತಿಯೇನೂ ಆಗಿರಲಿಲ್ಲ. ಹೀಗಾಗಿ ರೈಲುಮಾರ್ಗದ ಬದಲಿಗೆ ರಸ್ತೆ ಮಾರ್ಗವನ್ನು ಆರಿಸಿಕೊಳ್ಳಲಾಯಿತು. ಆದರೆ ಮಾಂಡೋವಿ ನದಿಯ ಸವಾಲು ಇದಕ್ಕಿಂತಲೂ ದೊಡ್ಡದಾಗಿತ್ತು. ಮೀನುಗಾರರು ಬಳಸುವ ಚಿಕ್ಕದೊಂದು ದೋಣಿಯೂ ಅಲ್ಲಿರದಿದ್ದ ಪರಿಣಾಮವಾಗಿ ನದಿಯನ್ನು ಈಜಿಕೊಂಡೇ ದಾಟಬೇಕು ಎಂಬ ಸತ್ಯವು ಅವರೆಲ್ಲರಿಗೂ ಮನದಟ್ಟಾಗಿತ್ತು. ಈಜಿಕೊಂಡು ಹೋಗದಿದ್ದರೆ ಬಂಧನಕ್ಕೊಳಗಾಗುವ ಭೀತಿ. ಆದರೆ ತುಂಬಿಹರಿಯುತ್ತಿರುವ ನದಿಯನ್ನು ಈಜಿಕೊಂಡು ದಾಟುವುದಾದರೂ ಹೇಗೆ? ಈ ತಲಾಶೆಯಲ್ಲಿ ಅವರಿಗಂದು ಸಿಕ್ಕಿದ್ದೇ ಮೀನುಗಾರರು ಬಳಸುವ ಬಲೆಯೊಳಗೆ ಇರಿಸಲಾಗಿದ್ದ ಒಂದು ದೊಡ್ಡ ಮರದ ಡಬ್ಬ. ಡಬ್ಬದ ಮೇಲೆ ಅಂಗಾತ ಮಲಗಿಕೊಂಡು ಅರ್ಧರಾತ್ರಿಯಲ್ಲಿ ತೇಲುತ್ತಾ ಹೌಸಾಬಾಯಿ ದಡ ಸೇರಿದರೆ ಉಳಿದ ಕಾಮ್ರೇಡ್ ಗಳು ರಾತ್ರಿಯಿಡೀ ಈಜುತ್ತಾ ಗುರಿಯತ್ತ ತಲುಪುವುದರಲ್ಲಿ ಯಶಸ್ವಿಯಾಗಿದ್ದರು.

''ಆ ಡಬ್ಬದ ಮೇಲೆ ನಿದ್ದೆ ಹೋಗುವ ಮಾತೇ ಇರಲಿಲ್ಲ. ಜೊತೆಗೇ ಅದು ಮುಳುಗದಂತೆಯೂ ಎಚ್ಚರ ವಹಿಸಬೇಕಿತ್ತು. ನಾನು ಬಾವಿಯಲ್ಲೇನೋ ಈಜುತ್ತಿದ್ದೆ. ಆದರೆ ಇದು ಹರಿಯುವ ನೀರಾಗಿತ್ತು. ಇನ್ನು ಮಾಂಡೋವಿ ನದಿಯೆಂದರೆ ಅದು ಚಿಕ್ಕದೇನಲ್ಲ. ಇನ್ನು ಈಜುತ್ತಿದ್ದ ಉಳಿದವರು ಒಣಗಿದ ಬಟ್ಟೆಗಳನ್ನು ತಮ್ಮ ತಲೆಗೆ ಕಟ್ಟಿಕೊಂಡು ರಾತ್ರಿಯಿಡೀ ಈಜಿದರು. ಈ ಬಟ್ಟೆಗಳನ್ನು ನಂತರ ಧರಿಸಲು ಬಳಸಬಹುದು ಎಂಬುದು ಅವರ ಯೋಚನೆಯಾಗಿತ್ತು'', ಎನ್ನುತ್ತಾರೆ ಹೌಸಾಬಾಯಿ. ಹೀಗೆ ಹಲವು ಏರಿಳಿತಗಳ ಹೊರತಾಗಿಯೂ ಹೌಸಾಬಾಯಿ ಮತ್ತವರ ತಂಡವು ನದಿಯನ್ನು ದಾಟುವುದರಲ್ಲಿ ಯಶಸ್ವಿಯಾಗಿತ್ತು.

ಇದಾದ ನಂತರ ಸತತ ಎರಡು ದಿನಗಳ ಕಾಲ ಇವರೆಲ್ಲರೂ ನಡೆದುಕೊಂಡೇ ಅರಣ್ಯ ಮಾರ್ಗದಲ್ಲಿ ಸಾಗಿದ್ದರು. ದಟ್ಟ ಕಾನನದಲ್ಲಿ ಅಲೆದಾಡುತ್ತಾ ಕೊನೆಗೂ ಹೊರ ನಡೆಯಲು ಮಾರ್ಗವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದ ಇವರು ಮನೆ ತಲುಪುವಷ್ಟರಲ್ಲಿ ಹದಿನೈದು ದಿನಗಳೇ ದಾಟಿದ್ದೆವು.

ಬಾಪೂ ಮತ್ತು ಹೌಸಾಬಾಯಿ ಶಸ್ತ್ರಾಸ್ತ್ರಗಳನ್ನು ಸ್ವತಃ ಹಿಡಿದುಕೊಂಡು ಬರದಿದ್ದರೂ ಅವುಗಳ ಸಾಗಣೆಗೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಿದ್ದರು. ಹಲವು ದಿನಗಳ ನಂತರ ಜೈಲಿನಿಂದ ಪಲಾಯನಗೈಯುವುದರಲ್ಲೂ ಜೋಷಿಗೆ ಯಶಸ್ಸು ಸಿಕ್ಕಿತ್ತು.

ಹೀಗೆ ಸಂದರ್ಶನವನ್ನು ಮುಗಿಸಿ ಇನ್ನೇನು ಹೊರಡಬೇಕು ಎಂದು ಪರಿ ತಂಡವು ತಯಾರಾಗುವಷ್ಟರಲ್ಲೇ ''ಹಾಗಾದರೆ ನೀವೀಗ ನನ್ನನ್ನು ಕರೆದುಕೊಂಡು ಹೋಗುತ್ತೀರಾ?'' ಎಂದು ಉತ್ಸಾಹದಿಂದ ಕೇಳುತ್ತಿದ್ದಾರೆ ಹೌಸಾಬಾಯಿ. ಹೀಗೆ ಕೇಳುತ್ತಿದ್ದರೆ ಅವರ ಕಣ್ಣುಗಳಲ್ಲೊಂದು ಅದ್ಭುತ ಹೊಳಪು.

''ಹೊರಡೋದಾ? ಎಲ್ಲಿಗೆ'', ಅಚ್ಚರಿಯಿಂದ ನಾವು ಕೇಳುತ್ತೇವೆ.

''ನಿಮ್ಮೊಂದಿಗೆ ಕೆಲಸ ಮಾಡಲು'', ಎಂದು ಜೀವನೋತ್ಸಾಹದ ಬುಗ್ಗೆಯಂತೆ ಮುಗುಳ್ನಗುತ್ತಾ ನಮಗುತ್ತರಿಸುತ್ತಾರೆ ಹೌಸಾಬಾಯಿ.

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik