“ಏಳು ತಿಂಗಳಾಯಿತು, ಹಣ್ಣು ಹಾಲು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ, ಈಗ ಹೇಳಿ, ಅದನ್ನು ಹೇಗೆ ಪಡೆಯಲಿ? ಅವರು ನನಗೆ ನದಿಗೆ ಹೋಗಲು ಅವಕಾಶ ನೀಡಿದರೆ, ನಾನು ದೋಣಿ ಸವಾರಿ ಮಾಡುವ ಮೂಲಕ ನನ್ನ ಮಕ್ಕಳಿಗೆ ಮತ್ತು ನನಗೆ ಆಹಾರವನ್ನಾದರೂ ಪಡೆಯಬಹುದು” ಎಂದು ಸುಷ್ಮಾದೇವಿ (ಹೆಸರು ಬದಲಿಸಲಾಗಿದೆ) ಕೈಪಂಪಿನಲ್ಲಿ ತನ್ನ ಸರದಿಗಾಗಿ ಕಾಯುತ್ತಿದ್ದಾಗ ಹೇಳುತ್ತಿದ್ದರು. ಅವರು ಈಗ ಏಳು ತಿಂಗಳ ಗರ್ಭಿಣಿ ಮತ್ತು ವಿಧವೆ.

ಅವರು ದೋಣಿ ಸವಾರಿ ಮಾಡುವುದಾ ಅಂತೀರಾ? 27 ವರ್ಷದ ಸುಷ್ಮಾ ದೇವಿ ನಿಶಾದ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಗಂಡಸರು ಹೆಚ್ಚಾಗಿ ದೋಣಿ ನಡೆಸುವವರಾಗಿದ್ದಾರೆ. ಅವರಲ್ಲಿ 135 ಮಂದಿ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮಜ್‌ಗವಾನ್ ಬ್ಲಾಕ್‌ನಲ್ಲಿರುವ ಕೇವಾತ್ರಾ ಎನ್ನುವ ಊರಿನವರು. ಐದು ತಿಂಗಳ ಹಿಂದೆ ಅಪಘಾತದಲ್ಲಿ  ಮೃತಪಡುವವರೆಗೂ ಅವರ 40 ವರ್ಷದ ಪತಿ ವಿಜಯ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಅವರಲ್ಲಿ ಒಬ್ಬರಾಗಿದ್ದರು. ಅವರು ಮದುವೆಯಾಗಿ ಏಳು ವರ್ಷಗಳ ಕಾಲವಾಗಿತ್ತು. ಸುಷ್ಮಾ ಸ್ವತಃ ದೋಣಿಯನ್ನು ನಡೆಸಲು ತರಬೇತಿ ಪಡೆದಿಲ್ಲ, ಆದರೆ ವಿಜಯ್ ಅವರೊಂದಿಗೆ ಕೆಲವು ಬಾರಿ ಸವಾರಿಗೆ ಹೋಗಿದ್ದರಿಂದ ಈ ಕೆಲಸ ಮಾಡಬಹುದು ಎನ್ನುವ ವಿಶ್ವಾಸವಿದೆ.

ಲಾಕ್‌ಡೌನ್‌ನಿಂದಾಗಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಡುವೆ ಚಿತ್ರಕೂಟದ ಈ ಪ್ರದೇಶವನ್ನು ವಿಭಜಿಸುವ ಮಂದಾಕಿನಿ ನದಿಯ ಈ ಪ್ರದೇಶದಲ್ಲಿ ಒಂದೇ ಒಂದು ದೋಣಿಯೂ ಸಂಚರಿಸುತ್ತಿಲ್ಲ.

ಸೂರ್ಯಾಸ್ತದ ಒಂದು ಗಂಟೆಯ ನಂತರ ನಾವು ಮೊದಲ ಬೀದಿ ದೀಪವನ್ನು ಕೇವತ್ರಾಕ್ಕೆ ಸಾಗುವ ದಾರಿಯಲ್ಲಿ ನೋಡಿದೆವು. ಸುಷ್ಮಾ ತಮ್ಮ ಕಿರಿಯ ಮಗುವಿನೊಂದಿಗೆ ಗ್ರಾಮದ ಕೈಪಂಪ್‌ಗೆ ಪ್ಲಾಸ್ಟಿಕ್ ಬಕೆಟ್‌ನಲ್ಲಿ ನೀರು ತರಲೆಂದು ಬಂದಿದ್ದರು. ಅಲ್ಲಿ ನಾವು ಅವರನ್ನು ಭೇಟಿಯಾದೆವು.

ನಿಶಾದರು ಮಂದಾಕಿನಿ ನದಿಯಲ್ಲಿ ದೋಣಿಗಳನ್ನು ನಡೆಸುವ ಮೂಲಕ ತಮ್ಮ ಜೀವನೋಪಾಯದ ದುಡಿಮೆಯನ್ನು ಸಂಪಾದಿಸುತ್ತಾರೆ. ಚಿತ್ರಕೂಟವು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ದೀಪಾವಳಿ ಋತುವಿನಲ್ಲಿ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಮಂದಾಕಿನಿ ನದಿ ತಟದಲ್ಲಿನ ರಾಮಘಾಟ್‌ನ ನಿಶಾದ್ ದೋಣಿಗಳು ಕೇವತ್ರಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಭಾರತ್ ಘಾಟ್ ಮತ್ತು ಗೋಯೆಂಕಾ ಘಾಟ್‌ನಂತಹ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ದೋಣಿಯಲ್ಲಿ ಕರೆದೊಯ್ಯುತ್ತವೆ.

ಆ ಸಂದರ್ಭದಲ್ಲಿ ನಿಶಾದ್ ಸಮುದಾಯಗಳು ವರ್ಷದಲ್ಲಿ ಹೆಚ್ಚಿನ ಸಂಪಾದನೆ ಮಾಡುತ್ತಾರೆ. ಪ್ರತಿದಿನಕ್ಕೆ ಅವರು ಆಗ 600 ರೂ.ಗಳನ್ನು ಸಂಪಾದಿಸುತ್ತಾರೆ. ಇದು ಆ ಋತುವಿನ ಆಚೆ ಅವರು ಗಳಿಸುವ ದೈನಂದಿನ ದುಡಿಮೆಯ 2-3 ಪಟ್ಟು ಅಧಿಕವಾಗಿರುತ್ತದೆ.

Sushma Devi with her youngest child at the village hand-pump; she ensures that her saree pallu doesn't slip off her head
PHOTO • Jigyasa Mishra

ಗ್ರಾಮದ ಕೈಪಂಪ್‌ನಲ್ಲಿ ತನ್ನ ಕಿರಿಯ ಮಗುವಿನೊಂದಿಗೆ ಸುಷ್ಮಾ ದೇವಿ; ತನ್ನ ಸೀರೆಯ ಚುಂಗು ತನ್ನ ತಲೆಯಿಂದ ಜಾರದ ಹಾಗೆ ಜಾಗ್ರತೆ ಮಾಡಿಕೊಳ್ಳುತ್ತಾರೆ

ಆದರೆ ಈಗ ಲಾಕ್‌ಡೌನ್‌ನಿಂದ ದೋಣಿ ವಿಹಾರ ಸ್ಥಗಿತಗೊಂಡಿದೆ. ವಿಜಯ್  ತೀರಿಕೊಂಡ ನಂತರ ಅವರ ಹಿರಿಯ ಸಹೋದರ ವಿನೀತ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) - ಕುಟುಂಬದಲ್ಲಿ ಸಂಪಾದನೆ ಮಾಡುತ್ತಿರುವ ಏಕೈಕ ವ್ಯಕ್ತಿಯಾಗಿದ್ದಾರೆ, ಆದರೆ ಈಗ ಅವರ ದೋಣಿಯನ್ನೂ ಹೊರತೆಗೆಯಲು ಸಾಧ್ಯವಿಲ್ಲ.(ಸುಷ್ಮಾ ತಮ್ಮ ಮೂವರು ಗಂಡುಮಕ್ಕಳು, ಅವರ ಅತ್ತೆ, ಅವರ ಗಂಡನ ಸಹೋದರ ಮತ್ತು ಅವನ ಹೆಂಡತಿಯೊಂದಿಗೆ ವಾಸಿಸುತ್ತಾರೆ).

“ನನಗೆ ಗಂಡು ಮಕ್ಕಳು ಮಾತ್ರ ಇದ್ದಾರೆ. ನಾವು ಮಗಳನ್ನು ಬಯಸಿದ್ದೆವು, ಆದ್ದರಿಂದ ನಾನು ಈಗ ಒಬ್ಬಳನ್ನು ನಿರೀಕ್ಷಿಸುತ್ತಿದ್ದೇನೆ. ನೋಡೋಣ, ಎಂದು ಸುಷ್ಮಾ ಹೇಳುತ್ತಾರೆ, ಹೀಗೆ ಹೇಳುತ್ತಿರುವಾಗ ಮಂದಹಾಸದೊಂದಿಗೆ ಅವರ ಮುಖ ಅರಳಿತು.

ಕಳೆದ 2-3 ವಾರಗಳಿಂದ ಅವರು ಅಸ್ವಸ್ಥರಾಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕಾಲ್ನಡಿಗೆಯ ಮೂಲಕ  ನಡೆಯುತ್ತಾ ಒಂದು ಕಿಲೋಮೀಟರ್‌ಗಿಂತ ಸ್ವಲ್ಪ ದೂರದಲ್ಲಿರುವ ನಯಾಗಾಂವ್‌ನಲ್ಲಿರುವ ವೈದ್ಯರನ್ನು ಭೇಟಿ ಮಾಡಿದರು. ಆಗ ಅವರಿಗೆ ಹಿಮೋಗ್ಲೋಬಿನ್ ಪ್ರಮಾಣ  ಕಡಿಮೆ ಇರುವುದು ಪತ್ತೆಯಾಯಿತು -ಇದನ್ನು ಅವರು ರಕ್ತದ ಕೊರತೆ ಎಂದು ಕರೆಯುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4ರ ಪ್ರಕಾರ ಮಧ್ಯಪ್ರದೇಶದಲ್ಲಿ ಶೇ.53 ರಷ್ಟುಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮತ್ತು ಸುಮಾರು ಶೇ 54ರಷ್ಟು ಗ್ರಾಮೀಣ ಮಹಿಳೆಯರು ಮತ್ತು ಒಟ್ಟಾರೆಯಾಗಿ ಶೇಕಡಾ 72 ಕ್ಕೂ ಅಧಿಕ ಮಹಿಳೆಯರು ಮಧ್ಯಪ್ರದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ನಗರ ಪ್ರದೇಶದ ಮಹಿಳೆಯರಲ್ಲಿ ಈ ಪ್ರಮಾಣ ಶೇ.49ರಷ್ಟಿದೆ.

"ಗರ್ಭಧಾರಣೆಯು ಹಿಮೋ-ಡೈಲ್ಯೂಷನ್ ಗೆ ಕಾರಣವಾಗುತ್ತದೆ, ಇದರಿಂದಾಗಿ ಹಿಮೋಗ್ಲೋಬಿನ್ ಕೂಡ ಕಡಿಮೆಯಾಗುತ್ತದೆ. ತಾಯಿಯ ಮರಣಕ್ಕೆ ಅಸಮರ್ಪಕ ಆಹಾರವು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ." ಎಂದು ಚಿತ್ರಕೂಟದ ಸರ್ಕಾರಿ ಆಸ್ಪತ್ರೆಯ ಹಿರಿಯ ಸ್ತ್ರೀರೋಗತಜ್ಞರಾದ ಡಾ.ರಮಾಕಾಂತ್ ಚೌರ್ಹಿಯಾ ಹೇಳುತ್ತಾರೆ.

ಸುಷ್ಮಾರ ಎರಡೂವರೆ ವರ್ಷದ ಮಗ ಅವರ ಎಡಗೈಯ ಮೇಲೆ ಬೆರಳನ್ನು ಬಲವಾಗಿ ಹಿಡಿದಿರುವಾಗ ಅವರು ಬಕೆಟ್ ಹಿಡಿಯಲು ತಮ್ಮ ಬಲಗೈಯನ್ನು ಬಳಸುತ್ತಾರೆ. ಆಗೊಮ್ಮೆ ಈಗೊಮ್ಮೆ, ತಮ್ಮ ಸೀರೆಯ ದಡಿಯನ್ನು ತಮ್ಮ ತಲೆಯಿಂದ ಜಾರದಂತೆ ನೋಡಿಕೊಳ್ಳಲು ಅವರು ಬಕೆಟ್ ಅನ್ನು ನೆಲದ ಮೇಲೆ ಇಡುತ್ತಾರೆ.

 Left: Ramghat on the Mandakini river, before the lockdown. Right: Boats await their riders now
PHOTO • Jigyasa Mishra
 Left: Ramghat on the Mandakini river, before the lockdown. Right: Boats await their riders now
PHOTO • Jigyasa Mishra

ಎಡಕ್ಕೆ: ಲಾಕ್‌ಡೌನ್‌ಗೆ ಮೊದಲು ಇದ್ದಂತಹ ಮಂದಾಕಿನಿ ನದಿಯ ರಾಮಘಾಟ್, ಬಲಕ್ಕೆ: ದೋಣಿಗಳು ಈಗ ತಮ್ಮ ಸವಾರರಿಗಾಗಿ ಕಾಯುತ್ತಿವೆ

"ನನ್ನ ಪತಿ ನಮ್ಮನ್ನು ಅಗಲಿದ ನಂತರ, ಅವನೇ (ಅವರ ಸೋದರ ಮಾವ) ನಮ್ಮ ಏಳು ಮಂದಿಗೆ ಇರುವ ಏಕೈಕ ಆದಾಯದ ವ್ಯಕ್ತಿ, ಆದರೆ ಈಗ ಅವನಿಗೂ ಕೂಡ ಕೆಲಸ ಮಾಡಲು ಸಾಧ್ಯವಿಲ್ಲ. ನಮಗೆ ಆಗ ದಿನವಿಡೀ ದೋಣಿ ಹಾಯಿಸುವುದೇ ನಮ್ಮ ಕಾಯಕವಾಗಿತ್ತು, ರಾತ್ರಿ ವೇಳೆ ಮಾತ್ರ ಆಹಾರವನ್ನು ಸೇವಿಸಬೇಕಾಗಿತ್ತು, ಲಾಕ್‌ಡೌನ್‌ಗೂ ಮುನ್ನ ಅವರು ದಿನಕ್ಕೆ 300 ರಿಂದ 400 ರೂ.ದುಡಿಯುತ್ತಿದ್ದರು. ಕೆಲವೊಮ್ಮೆ ಅದು ಕೇವಲ 200 ರೂ.ಗಳಿಗೆ ಸೀಮಿತವಾಗುತ್ತಿತ್ತು. ನನ್ನ ಪತಿ ಕೂಡ ಅದೇ ರೀತಿ ಸಂಪಾದಿಸುತ್ತಿದ್ದರು. ಆದರೆ ಆಗ ಮನೆಯಲ್ಲಿ ದುಡಿಯುವವರು ಇಬ್ಬರು ಇದ್ದರು. ಇಂದು ಯಾರೂ ಇಲ್ಲ” ಎಂದು ಸುಷ್ಮಾ ವಿವರಿಸುತ್ತಿದ್ದರು.

ಕೇವತ್ರಾದಲ್ಲಿರುವ ಸರಿಸುಮಾರು ಅರ್ಧದಷ್ಟು 60ಕ್ಕೂ ಅಧಿಕ  ಕುಟುಂಬಗಳಂತೆ, ಸುಷ್ಮಾ ಅವರ ಕುಟುಂಬಕ್ಕೂ ಯಾವುದೇ ಪಡಿತರ ಚೀಟಿ ಇಲ್ಲ. ‘ಎಲ್ಲಿ ಹಾಲು, ಎಲ್ಲಿ ಹಣ್ಣು! ಇಲ್ಲಿ ಪಡಿತರ ಚೀಟಿ ಇಲ್ಲದಿರುವಾಗ ದಿನಕ್ಕೆ ಎರಡು ಬಾರಿ ಊಟ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಅವರು ಗೇಲಿ ಮಾಡುತ್ತಿದ್ದರು. ಒಂದು ಕಾರ್ಡ್ ಕೂಡ ಏಕೆ ಇಲ್ಲ? ಎನ್ನುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಾ ಇದಕ್ಕೆ ಗಂಡಸರು ಚೆನ್ನಾಗಿ ಉತ್ತರಿಸಬಲ್ಲರು ಎಂದು ಅವರು ಹೇಳುತ್ತಿದ್ದರು.

ಸುಷ್ಮಾ ಅವರ ಇಬ್ಬರು ಹಿರಿಯ ಹುಡುಗರು ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಒಬ್ಬ 3ನೇ ತರಗತಿ ಮತ್ತು ಇನ್ನೊಬ್ಬ 1ನೇ ತರಗತಿಯಲ್ಲಿದ್ದಾನೆ. “ಅವರು ಈಗ ಮನೆಯಲ್ಲಿದ್ದಾರೆ.ನಿನ್ನೆಯಿಂದ ಸಮೋಸ ಕೇಳುತ್ತಿದ್ದಾರೆ. ನಾನು ಹತಾಶಳಾಗಿ ಅವರತ್ತ  ಕೂಗಿದೆ. ಇಂದು, ನನ್ನ ನೆರೆಹೊರೆಯವರು ತಮ್ಮ ಮಕ್ಕಳಿಗಾಗಿ ಒಂದಿಷ್ಟನ್ನು ತಯಾರಿಸಿದ್ದರು ಅದರಲ್ಲಿ ಕೆಲವೊಂದಿಷ್ಟು ನನಗೂ ಕೊಟ್ಟರು,” ಎಂದು ಸುಷ್ಮಾ ಕೈ-ಪಂಪಿನಿಂದ ಅರ್ಧದಷ್ಟು ತುಂಬಿದ ತಮ್ಮ ಬಕೆಟ್ ಎತ್ತುತ್ತಾ ಅವರು ನಮಗೆ  ಹೇಳುತ್ತಿದ್ದರು. “ಈ ಅವಧಿಯಲ್ಲಿ ನಾನು ಇದಕ್ಕಿಂತ ಹೆಚ್ಚಿನ ಭಾರ ಎತ್ತುವುದನ್ನು ಕಡಿಮೆ ಮಾಡಿದ್ದೇನೆ” ಎಂದು ಅವರು ಹೇಳುತ್ತಿದ್ದರು. ಅವರ ಮನೆಯು ಪಂಪ್‌ನಿಂದ 200 ಮೀಟರ್ ದೂರದಲ್ಲಿದೆ ಮತ್ತು ಈ ದಿನಗಳಲ್ಲಿ, ಆಗಾಗ್ಗೆ, ಅವರ ಸೋದರ ಸೊಸೆ ನೀರನ್ನು ಒಯ್ಯುತ್ತಾರೆ.

ಕೈಪಂಪ್ ಹತ್ತಿರ ಇರುವ ಹಳ್ಳಿಯ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕೆಲವು ಗಂಡಸರು ತಮ್ಮ ಪುಟ್ಟ ಮಕ್ಕಳೊಂದಿಗೆ ನಿಂತಿದ್ದರು. ಅವರಲ್ಲಿ 27 ವರ್ಷದ ಚುನ್ನು ನಿಶಾದ್ ಕೂಡ ಒಬ್ಬರು. "ನಾನು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಮತ್ತು ನಾನು ಮಜ್ಗವಾನ್‌ಗೆ [ಬ್ಲಾಕ್ ಕೇಂದ್ರ ಕಚೇರಿಗೆ] ಹೋಗಬೇಕಾಗಿದೆ ಎಂದು ಅವರು ನನಗೆ ಸೂಚಿಸುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ. ಅದನ್ನು ಪಡೆಯಲು ನಾನು ಸತ್ನಾಗೆ (ಸುಮಾರು 85 ಕಿಲೋಮೀಟರ್ ದೂರ) ಹೋಗಬೇಕಾಗಬಹುದು ಎಂದು ಅವರು ಹೇಳುತ್ತಾರೆ. ಆದರೆ ಈಗ ಮೂರು ಬಾರಿ ಅರ್ಜಿ ಸಲ್ಲಿಸಿದರೂ ನನಗೆ ಕಾರ್ಡ್ ಸಿಕ್ಕಿಲ್ಲ. ಈ ಪರಿಸ್ಥಿತಿ ಬರುತ್ತಿದೆ ಎಂದು ನನಗೆ ಮೊದಲೇ ತಿಳಿದಿದ್ದರೆ, ಅದನ್ನು ಪಡೆಯಲು ನಾನು ಎಲ್ಲಿಯಾದರೂ ಒಂದ ಕಡೆ ಅಥವಾ ಎಲ್ಲ ಕಡೆ ಹೋಗುತ್ತಿದ್ದೆ. ಆಗ ನಾನು ನಗರದ ಸಂಬಂಧಿಕರಿಂದ ಸಾಲ ಪಡೆಯಬೇಕಾದ ಸನ್ನಿವೇಶವೂ ಬರುತ್ತಿರಲಿಲ್ಲ” ಎಂದು ಹೇಳಿದರು.

ಚುನ್ನು ತನ್ನ ತಾಯಿ, ಪತ್ನಿ, ಒಂದು ವರ್ಷದ ಮಗಳು ಮತ್ತು ತನ್ನ ಸಹೋದರನ ಕುಟುಂಬದೊಂದಿಗೆ ವಾಸಿಸುತ್ತಾರೆ. ಕಳೆದ 11 ವರ್ಷಗಳಿಂದ ದೋಣಿ ನಡೆಸುತ್ತಿದ್ದಾರೆ. ಕುಟುಂಬವು ಭೂರಹಿತವಾಗಿದೆ ಮತ್ತು ಲಾಕ್‌ಡೌನ್‌ನಿಂದಾಗಿ ಈಗ ಇಲ್ಲಿರುವ ಇತರ 134 ದೋಣಿ ನಾವಿಕರಂತೆ, ಅವರು ಕೂಡ ಏನನ್ನೂ ದುಡಿಯುತ್ತಿಲ್ಲ.

Boatman Chunnu Nishad with his daughter in Kewatra; he doesn't have a ration card even after applying for it thrice
PHOTO • Jigyasa Mishra

ಕೇವತ್ರಾದಲ್ಲಿ ದೋಣಿ ನಡೆಸುವ ಚುನ್ನು ನಿಶಾದ್ ತನ್ನ ಮಗಳೊಂದಿಗೆ; ಮೂರು ಬಾರಿ ಅರ್ಜಿ ಸಲ್ಲಿಸಿದರೂ ಅವರಿಗೆ ಪಡಿತರ ಚೀಟಿ ಸಿಕ್ಕಿಲ್ಲ

ಮೂರು ಬಾರಿ ಅರ್ಜಿ ಸಲ್ಲಿಸಿದರೂ ಪಡಿತರ ಚೀಟಿ ಸಿಕ್ಕಿಲ್ಲದಿರುವುದು ಕಷ್ಟವಾಗಿದೆ. ಆದರೆ, ಚುನ್ನು ಹೇಳುವಂತೆ, "ಅವರು ಎಲ್ಲಾ ಕಾರ್ಡ್ ಹೊಂದಿರುವವರಿಗೆ ರೇಷನ್ ವಿತರಿಸಿದ ನಂತರ ಉಳಿದಿದ್ದನ್ನು ಪ್ರತ್ಯೇಕ ದರದಲ್ಲಿ ಮಾರುತ್ತಾರೆ ಎನ್ನುವುದನ್ನು ನಾವು ಕೇಳಿದ್ದೇವೆ." ಎಂದರು.ಆದರೆ, ಈಗ ಇಲ್ಲಿರುವ ಕೆಲವೇ ಕೆಲವು ಪಡಿತರ ಚೀಟಿದಾರರಲ್ಲಿಯೂ ಕೆಲವರಿಗೆ ಸಿಗಬೇಕಾದ ಕೋಟಾ ಕೂಡ ಇದುವರೆಗೂ ಸಿಕ್ಕಿಲ್ಲ.

ಲಾಕ್‌ಡೌನ್ ವಿಸ್ತರಿಸಿದ ನಂತರ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಡ್ಡಾಯ ಪಡಿತರ ಚೀಟಿ ಅಥವಾ ಯಾವುದೇ ಇತರ ಗುರುತಿನ ದಾಖಲೆಯ ಅಗತ್ಯವನ್ನು ತೆಗೆದುಹಾಕುವ ಮೂಲಕ ಆಹಾರ ಸಿಗುವ ಅವಕಾಶವನ್ನು ಎಲ್ಲರಿಗೂ ವಿಸ್ತರಿಸಿದರು. ಮಧ್ಯಪ್ರದೇಶವು ರಾಜ್ಯ ಸರ್ಕಾರದ ಕೋಟಾದಿಂದ 3.2 ಮಿಲಿಯನ್ ಜನರಿಗೆ ಉಚಿತ ಪಡಿತರವನ್ನು ಘೋಷಿಸಿತು. ಈ ಪಡಿತರದಲ್ಲಿ ತಲಾ ನಾಲ್ಕು ಕಿಲೋ ಗೋಧಿ ಮತ್ತು ಒಂದು ಕಿಲೋ ಅಕ್ಕಿ ಸೇರಿದೆ.

ಇದರ ನಂತರ, ಸತ್ನಾ ಜಿಲ್ಲೆ ತನ್ನ ನಿವಾಸಿಗಳಿಗೆ ಯಾವುದೇ ದಾಖಲೆಗಳ ಅವಶ್ಯಕತೆಗಳಿಲ್ಲದೆ ಉಚಿತ ಪಡಿತರವನ್ನು ಘೋಷಿಸಿತು. ಸ್ಥಳೀಯ ಮಾಧ್ಯಮ ವರದಿ ಪ್ರಕಾರ, ನಗರ ಪಾಲಿಕೆ ಪರಿಷತ್ತಿನ (ಚಿತ್ರಕೂಟದ ಪುರಸಭೆಯ ವ್ಯಾಪ್ತಿ) ವ್ಯಾಪ್ತಿಯಲ್ಲಿ  ಬರುವ 216 ಕುಟುಂಬಗಳ ಒಟ್ಟು 1,097 ನಿವಾಸಿಗಳಿಗೆ ಅಂತಹ ಯಾವುದೇ ಪಡಿತರ ಚೀಟಿಗಳಿಲ್ಲ ಎನ್ನಲಾಗಿದೆ. ಆದರೆ ವಿತರಕರು ಸುಷ್ಮಾ ಅವರ ಕುಗ್ರಾಮವಾದ ಕೇವತ್ರಾವನ್ನು (ಕಿಯೋತ್ರಾ ಎಂದು ಸಹ ಉಚ್ಚರಿಸಲಾಗುತ್ತದೆ) ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.

ಭಾರತದ ಆಹಾರ ಸುರಕ್ಷತಾ ಜಾಲವು ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದರ ಕುರಿತು ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (IFPRI) ಯು ಪ್ರಕಟಿಸಿದ ಇತ್ತೀಚಿನ ಅಧ್ಯಯನವು ವಿವರಿಸುತ್ತಾ “COVID-19 ಕಠೋರವಾದ ವಾಸ್ತವವನ್ನು ತೆರೆದಿಡುತ್ತದೆ: ಅಸಮರ್ಪಕ ಮತ್ತು ಅಸಮವಾದ ಸುರಕ್ಷತಾ ಜಾಲವು ಈ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಲ್ಲಿನ ಅನೇಕರಿಗೆ ಆಹಾರ ಮತ್ತು ಇತರ ಸೇವೆಗಳು ಸಿಗದೆ ಇರುವಂತಹ ಪರಿಸ್ಥಿತಿಯನ್ನು ತಂದಿಡಬಹುದು” ಎಂದು ಹೇಳುತ್ತದೆ.

ಸುಷ್ಮಾ ಅವರು ತಮ್ಮ ಪತಿಯೊಂದಿಗೆ ಘಾಟ್‌ಗೆ ಭೇಟಿ ನೀಡುವುದನ್ನು ನೆನಪಿಸಿಕೊಳ್ಳುತ್ತಾ “ಅವು ಸಂತಸದ ದಿನಗಳು. ನಾವು ಬಹುತೇಕ ಪ್ರತಿ ಭಾನುವಾರದಂದು ರಾಮಘಾಟ್‌ಗೆ ಹೋಗುತ್ತಿದ್ದೆವು ಮತ್ತು ಅವರು ನನ್ನನ್ನು ಸಣ್ಣ ದೋಣಿ ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ಪ್ರವಾಸಕ್ಕೆ ಯಾವುದೇ ಗ್ರಾಹಕರನ್ನು ಅವರು ಕರೆದುಕೊಂಡು ಹೋಗುತ್ತಿರಲಿಲ್ಲ,” ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಅವರ ನಿಧನದ ನಂತರ ನಾನು ಘಾಟ್‌ಗೆ ಹೋಗಿಲ್ಲ.ನನಗೆ ಇನ್ನು ಮುಂದೆ ಅಲ್ಲಿಗೆ ಹೋಗಲು ಮನಸ್ಸಾಗುತ್ತಿಲ್ಲ.ಈಗ ಎಲ್ಲರೂ ಲಾಕ್ ಡೌನ್ ಆಗಿದ್ದಾರೆ. ದೋಣಿಗಳು ಸಹ ತಮ್ಮ ನಾವಿಕರಿಗಾಗಿ ಹಂಬಲಿಸುತ್ತಿರಬಹುದು ಎಂದೆನಿಸುತ್ತದೆ,” ಎಂದು ಅವರು ನಿಟ್ಟುಸಿರು ಬಿಡುತ್ತಾರೆ.

ಅನುವಾದ - ಎನ್. ಮಂಜುನಾಥ್

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Translator : N. Manjunath