ಜೈಪುರದಲ್ಲಿರುವ ಉಚ್ಚ ನ್ಯಾಯಾಲಯವು ಒಳ್ಳೆಯ ಆಹ್ಲಾದಕರ ಪರಿಸರದಲ್ಲಿದೆ. ಆದರೆ ಇಲ್ಲಿಯ ಉದ್ಯಾನದಲ್ಲಿರುವ ಒಂದು ಅಂಶವು ಮಾತ್ರ ರಾಜಸ್ಥಾನದಲ್ಲಿರುವ ಬಹುತೇಕರನ್ನು ಬೆಚ್ಚಿಬೀಳಿಸುತ್ತಿರುವುದು ಸತ್ಯ. ಅದೇನೆಂದರೆ ತನ್ನ ಆವರಣದಲ್ಲಿ ಮನುವಿನ ಮೂರ್ತಿಯನ್ನು ಹೊಂದಿರುವ ನ್ಯಾಯಾಲಯವೊಂದು ಇಡೀ ದೇಶದಲ್ಲಿ ಪ್ರಾಯಶಃ ಬೇರೆ ಇರಲಿಕ್ಕಿಲ್ಲ (ಮುಖಪುಟ ಚಿತ್ರವನ್ನು ಗಮನಿಸಿ).

ಮನು ಎಂಬಾತ ನಿಜಕ್ಕೂ ಈ ಜಗತ್ತಿನಲ್ಲಿದ್ದ ಎಂಬ ಬಗ್ಗೆ ನಂಬಲರ್ಹ ಸಾಕ್ಷಿಗಳು ಲಭ್ಯವಿಲ್ಲದಿದ್ದರೂ, ಈ ಮೂರ್ತಿಯು ಕಲಾವಿದನೊಬ್ಬನ ಕಲ್ಪನೆಯ ಕೂಸಾಗಿದೆ. ಆದರೂ ಒಂದು ರೀತಿಯಲ್ಲಿ ಇದು ಪರಿಮಿತ ಕಲ್ಪನೆಯೇ ಸರಿ. ಏಕೆಂದರೆ ಇಲ್ಲಿರುವ ಮನುವಿನ ಮೂರ್ತಿಯು ಜನಪ್ರಿಯ ಸಿನೆಮಾ ಕಲ್ಪನೆಗಳಲ್ಲಿರುವ "ಋಷಿ"ಯೊಬ್ಬನನ್ನು ಹೋಲುತ್ತಿದೆ.

ಪುರಾಣಗಳ ಪ್ರಕಾರ ಈ ಹೆಸರಿನ ವ್ಯಕ್ತಿಯೊಬ್ಬ "ಮನುಸ್ಮøತಿ" ಎಂಬ ಗ್ರಂಥವನ್ನು ರಚಿಸಿದ್ದ. ಈ ಸ್ಮøತಿಯಲ್ಲಿರುವುದೇನೆಂದರೆ ಶತಮಾನಗಳ ಹಿಂದೆ ಆ ಕಾಲದಲ್ಲಿ ಬ್ರಾಹ್ಮಣರು ಸಮಾಜದ ಇತರರ ಮೇಲೆ ಹೇರಿದ್ದ ನಿಯಮಗಳು. ಜಾತಿವಾದವನ್ನು ಉಗ್ರವಾಗಿ ಬೆಂಬಲಿಸುವ ನಿಯಮಗಳಿವು. ಕ್ರಿಸ್ತಪೂರ್ವ 200 ರಿಂದ ಕ್ರಿಸ್ತಶಕ 1000 ರ ನಡುವೆ ಇಂಥಾ ಹಲವು ಸ್ಮøತಿಗಳನ್ನು ರಚಿಸಲಾಗಿತ್ತು. ಕಾಲಾಂತರದಲ್ಲಿ ಹಲವು ಲೇಖಕರು ಇಂಥಾ ನಿಯಮಗಳನ್ನು ರೂಪಿಸಿ ಈ ಸ್ಮøತಿಗಳನ್ನು ರಚಿಸಿದ್ದರು. ಇವುಗಳಲ್ಲಿ ಬಹಳ ಖ್ಯಾತಿಯನ್ನು ಪಡೆದ ಸ್ಮøತಿಯೇ ಮನುಸ್ಮøತಿ. ಜಾತಿಗಳ ಆಧಾರದಲ್ಲಿ ಒಂದೇ ಬಗೆಯ ಅಪರಾಧಕ್ಕಾಗಿ ವಿವಿಧ ಶಿಕ್ಷೆಗಳನ್ನು ರೂಪಿಸಿದ್ದ ಮನುಸ್ಮøತಿಯು ಉಳಿದೆಲ್ಲವುಗಳಿಗಿಂತ ವಿಭಿನ್ನವಾಗಿ ನಿಂತಿದ್ದು ಸತ್ಯ.

ಈ ಸ್ಮøತಿಯ ಪ್ರಕಾರ ಕೆಳಜಾತಿಯ ಬದುಕು ಅಷ್ಟೇನೂ ಮೌಲ್ಯವುಳ್ಳದ್ದಲ್ಲ. "ಶೂದ್ರನೊಬ್ಬನ ಕೊಲೆಗೆ ಬೇಕಾಗಿರುವ ಪಶ್ಚಾತ್ತಾಪ" ವನ್ನೇ ಪರಿಗಣಿಸೋಣ. ಶೂದ್ರನೊಬ್ಬನ ಹತ್ಯೆಯು ಮನುಷ್ಯನೊಬ್ಬ ‘ಒಂದು ಕಪ್ಪೆಯನ್ನು, ಒಂದು ನಾಯಿಯನ್ನು, ಒಂದು ಗೂಬೆ ಅಥವಾ ಒಂದು ಕಾಗೆಯನ್ನು’ ಕೊಲ್ಲುವಷ್ಟೇ ಇಲ್ಲಿ ಸಮಾನ. ಹೆಚ್ಚೆಂದರೆ ‘ಸದ್ಗುಣಿಯಾದ ಶೂದ್ರನೊಬ್ಬನ ಹತ್ಯೆ’ಗೆ ಬೇಕಾಗಿರುವ ಪ್ರಾಯಶ್ಚಿತ್ತವು ಬ್ರಾಹ್ಮಣನೊಬ್ಬನನ್ನು ಕೊಂದಾಗ ಮಾಡಬೇಕಿರುವ ಪ್ರಾಯಶ್ಚಿತ್ತದ ಹದಿನಾರನೇ ಒಂದು ಭಾಗಕ್ಕೆ ಸಮಾನವಂತೆ.

ಸಮಾನತೆಯನ್ನು ಸಾರುವ ವ್ಯವಸ್ಥೆಯ ಕಾನೂನು ಅನುಸರಿಸಬೇಕಾದ ಮೌಲ್ಯವಂತೂ ಇದಲ್ಲ. ದಬ್ಬಾಳಿಕೆಯ ಸಂಕೇತದಂತಿರುವ ಈ ಮೂರ್ತಿಯನ್ನು ಕೋರ್ಟ್ ಆವರಣದಲ್ಲಿ ನೋಡಿದಾಗಲೆಲ್ಲಾ ಇಲ್ಲಿಯ ದಲಿತರ ರಕ್ತ ಕುದಿಯತೊಡಗುತ್ತದೆ. ಇದಕ್ಕಿಂತಲೂ ಗಂಭೀರವಾದ ಸಂಗತಿಯೆಂದರೆ ಭಾರತೀಯ ಸಂವಿಧಾನದ ಶಿಲ್ಪಿಯ ಕುರುಹೂ ಕೂಡ ಕೋರ್ಟ್ ಪರಿಸರದಲ್ಲಿಲ್ಲ. ಬದಲಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಯೊಂದು ರಸ್ತೆಯ ಮೂಲೆಯಲ್ಲಿ ಟ್ರಾಫಿಕ್ ನತ್ತ ಮುಖ ಮಾಡಿ ನಿಂತಿದೆ. ನ್ಯಾಯಾಲಯಕ್ಕೆ ಬರುತ್ತಿರುವ ಎಲ್ಲರನ್ನು ಮಾತ್ರ ಮನು ಹೆಮ್ಮೆಯಿಂದ ಎದುರುಗೊಳ್ಳುತ್ತಿದ್ದಾನೆ.

The statue of “Manu, the Law Giver” outside the High Court in Jaipur
PHOTO • P. Sainath
An Ambedkar statue stands at the street corner facing the traffic
PHOTO • P. Sainath

ಸಮಾನತೆಯನ್ನು ಸಾರುವ ವ್ಯವಸ್ಥೆಯ ಕಾನೂನು ಅನುಸರಿಸಬೇಕಾದ ಮೌಲ್ಯವಂತೂ ಇದಲ್ಲ. ದಬ್ಬಾಳಿಕೆಯ ಸಂಕೇತದಂತಿರುವ ಈ ಮೂರ್ತಿಯನ್ನು ಕೋರ್ಟ್ ಆವರಣದಲ್ಲಿ ನೋಡಿದಾಗಲೆಲ್ಲಾ ಇಲ್ಲಿಯ ದಲಿತರ ರಕ್ತ ಕುದಿಯತೊಡಗುತ್ತದೆ. ಇದಕ್ಕಿಂತಲೂ ಗಂಭೀರವಾದ ಸಂಗತಿಯೆಂದರೆ ಭಾರತೀಯ ಸಂವಿಧಾನದ ಶಿಲ್ಪಿಯ ಕುರುಹೂ ಕೂಡ ಕೋರ್ಟ್ ಪರಿಸರದಲ್ಲಿಲ್ಲ. ಬದಲಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಯೊಂದು ರಸ್ತೆಯ ಮೂಲೆಯಲ್ಲಿ ಟ್ರಾಫಿಕ್ ನತ್ತ ಮುಖ ಮಾಡಿ ನಿಂತಿದೆ. ನ್ಯಾಯಾಲಯಕ್ಕೆ ಬರುತ್ತಿರುವ ಎಲ್ಲರನ್ನು ಮಾತ್ರ ಮನು ಹೆಮ್ಮೆಯಿಂದ ಎದುರುಗೊಳ್ಳುತ್ತಿದ್ದಾನೆ

ಮನು ಹಾಕಿಕೊಟ್ಟಿರುವ ಅಡಿಪಾಯದಲ್ಲೇ ರಾಜಸ್ಥಾನವು ಬದುಕುತ್ತಾ ಬಂದಿದೆ. ಒಂದು ಸರಾಸರಿಯ ಪ್ರಕಾರ ಪ್ರತೀ 60 ತಾಸಿನಲ್ಲಿ ಓರ್ವ ದಲಿತ ಮಹಿಳೆಯೊಬ್ಬಳು ಇಲ್ಲಿ ಅತ್ಯಾಚಾರಕ್ಕೊಳಗಾಗುತ್ತಾಳೆ. ಪ್ರತೀ ತೊಂಭತ್ತು ದಿನಗಳಲ್ಲಿ ಓರ್ವ ದಲಿತನ ಕೊಲೆಯಾಗುತ್ತದೆ. ಪ್ರತೀ 65 ತಾಸುಗಳಲ್ಲಿ ಓರ್ವ ದಲಿತನ ಮೇಲಾದರೂ ಮಾರಣಾಂತಿಕ ಹಲ್ಲೆಯಾಗಿರುತ್ತದೆ. ಪ್ರತೀ ಐದು ದಿನಗಳಿಗೊಂದರಂತೆ ಓರ್ವ ದಲಿತನ ಮನೆ ಅಥವಾ ಆಸ್ತಿಪಾಸ್ತಿಯು ಬೆಂಕಿಯ ದಾಳಿಗೆ ಆಹುತಿಯಾಗುತ್ತದೆ. ಪ್ರತೀ ನಾಲ್ಕು ತಾಸುಗಳಿಗೆ ದಾಖಲಿಸಲ್ಪಟ್ಟ ಒಂದು ಪ್ರಕರಣವಾದರೂ "ಇತರ ಐ.ಪಿ.ಸಿ" (ಇಂಡಿಯನ್ ಪೀನಲ್ ಕೋಡ್) ವಿಭಾಗಕ್ಕೆ ಜಮೆಯಾಗುತ್ತದೆ. ಅಂದರೆ ಕೊಲೆ, ಅತ್ಯಾಚಾರ, ಬೆಂಕಿ ದಾಳಿ ಮತ್ತು ಮಾರಣಾಂತಿಕ ಹಲ್ಲೆಗಳಿಂದ ಹೊರತಾಗಿರುವಂಥವುಗಳು.

ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣವು ತೀರಾ ಕಮ್ಮಿಯಿದೆ. ಇದರ ಶೇಕಡಾವಾರು ಪ್ರಮಾಣವು ಕೇವಲ 2 ರಿಂದ 3 ಪ್ರತಿಶತದಷ್ಟು ಮಾತ್ರ. ಇನ್ನು ದಲಿತರ ಮೇಲಾಗುವ ಅದೆಷ್ಟೋ ಪ್ರಕರಣಗಳು ನ್ಯಾಯಾಲಯದ ಬಾಗಿಲವರೆಗೂ ತಲುಪುವುದಿಲ್ಲ.

ಲೆಕ್ಕವಿಲ್ಲದಷ್ಟು ಪ್ರಕರಣಗಳ ಕಡತಗಳು ಮುಚ್ಚಿಹೋಗಿ ಎಫ್.ಆರ್ (ಫೈನಲ್ ರಿಪೋಟ್ರ್ಸ್ / ಅಂತಿಮ ವರದಿ) ಆಗಿ ಕೊನೆಗೊಳ್ಳುತ್ತಿವೆ. ಈ ಭರದಲ್ಲಿ ನೈಜ ಮತ್ತು ಗಂಭೀರ ಘಟನೆಗಳು ಬಿದ್ದುಹೋಗುತ್ತಿವೆ.

"ಅಸಲಿಗೆ ಸಮಸ್ಯೆಯು ಹಳ್ಳಿಂದಲೇ ಶುರುವಾಗುತ್ತಿದೆ. ಗ್ರಾಮಸ್ಥರು ಜಾತಿಯ ಪಂಚಾಯಿತಿಯೊಂದನ್ನು ನಡೆಸುತ್ತಾರೆ. ಇಲ್ಲಿ ದೌರ್ಜನ್ಯಕ್ಕೆ ಬಲಿಯಾದವರನ್ನು ಅಪರಾಧಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಿನ ಪರಿಸ್ಥಿತಿಗೆ ದೂಡಲಾಗುತ್ತದೆ. ನಮ್ಮ ಸಮಸ್ಯೆ ನಾವೇ ಪರಿಹರಿಸೋಣ, ಪೋಲೀಸ್ ನಮಗ್ಯಾಕೆ ಎಂದೆಲ್ಲಾ ಹೇಳುತ್ತಾರೆ", ಎನ್ನುತ್ತಿದ್ದಾರೆ ಭನ್ವಾರಿದೇವಿ. ಭನ್ವಾರಿದೇವಿಯ ಮಗಳನ್ನು ಅಜ್ಮೇರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅತ್ಯಾಚಾರ ಮಾಡಲಾಗಿತ್ತು.

ಇಲ್ಲಿ ನೀಡಲಾಗುವ ಪರಿಹಾರವೇನೆಂದರೆ ದೌರ್ಜನ್ಯಕ್ಕೆ ಬಲಿಯಾದವರು ಅಪರಾಧಿಗಳ ಮುಂದೆ ಕೈಚಾಚುವುದು. ಇಲ್ಲೂ ಕೂಡ ಪೋಲೀಸರ ಬಳಿ ತೆರಳದಂತೆ ಭನ್ವಾರಿದೇವಿಯನ್ನು ತಡೆಯಲಾಗಿತ್ತು.

ಪ್ರಕರಣವು ಯಾವುದೇ ಆದರೂ ದಲಿತ ಅಥವಾ ಆದಿವಾಸಿ ವ್ಯಕ್ತಿಯೊಬ್ಬ ಪೋಲೀಸ್ ಠಾಣೆಗೆ ಕಾಲಿಡುವ ಪ್ರಯತ್ನವೇ ಆತನಿಗೆ ಪ್ರತಿಕೂಲ ಪರಿಣಾಮವನ್ನು ತರಬಲ್ಲದು. ಹಾಗಾದರೆ ಅಲ್ಲಿ ಆಗುವುದಾದರೂ ಏನು? ಈ ಪ್ರಶ್ನೆಯನ್ನು ಕೇಳಿದಾಗ ಭರತಪುರ ಜಿಲ್ಲೆಯ ಕುಮ್ಹರ್ ಹಳ್ಳಿಯಲ್ಲಿ ಸುಮಾರು ಇಪ್ಪತ್ತು ದನಿಗಳು ಜೊತೆಗಾಗಿ ಹೀಗೆ ಉತ್ತರಿಸಿದ್ದವು: "ಇನ್ನೂರ ಇಪ್ಪತ್ತು ರೂಪಾಯಿಗಳ ಪ್ರವೇಶಧನ. ಬಹಳಷ್ಟು ಬಾರಿ ನಾವು ನೀಡಿರುವ ದೂರನ್ನು ಅವರು ಕಾರ್ಯರೂಪಕ್ಕೆ ತರಬೇಕಾದರೂ ಏನಾದರೊಂದು ಮೊತ್ತವನ್ನು ನೀಡಲೇಬೇಕು".

ಮೇಲ್ಜಾತಿಯ ಯಾರಾದರೂ ದಲಿತನೊಬ್ಬನ ಮೇಲೆ ದಾಳಿ ಮಾಡಿದರೆ ದೂರು ಕೊಟ್ಟು ಮುಂದುವರಿಯದಂತೆ ಪೋಲೀಸರು ದಲಿತನ ಮೇಲೆ ಒತ್ತಡ ಹಾಕುತ್ತಾರೆ. "ಏನು? ತಂದೆ ಮಕ್ಕಳಿಗೆ ಹೊಡೆಯುವುದಿಲ್ಲವೇ? ಸಹೋದರರು ತಮ್ಮತಮ್ಮಲ್ಲೇ ಎರಡೇಟು ಕೊಡುವುದಿಲ್ಲವೇ? ಎಂದೆಲ್ಲಾ ನಮ್ಮನ್ನು ಕೇಳುತ್ತಾರೆ," ಎನ್ನುತ್ತಿದ್ದಾನೆ ಹರಿರಾಮ್.

"ಇಲ್ಲಿ ಮತ್ತೊಂದು ಸಮಸ್ಯೆಯೂ ಇದೆ. ಈ ಪೋಲೀಸರು ಮೊತ್ತೊಂದು ಕಡೆಯಿಂದಲೂ ಕಣ ಕೀಳುತ್ತಾರೆ. ಅವರು ನಮಗಿಂತ ಹೆಚ್ಚಿನ ಮೊತ್ತವೇನಾದರೂ ಕೊಟ್ಟರೆ ನಮ್ಮ ಕತೆ ಮುಗಿಯಿತಂತಲೇ ಖಾತ್ರಿ. ನಮ್ಮ ಬಡಜನರು ಅವರಂತೆ ಹಣ ನೀಡುವಷ್ಟು ಸ್ಥಿತಿವಂತರಲ್ಲವಲ್ಲಾ," ಎಂದು ನಗುತ್ತಾ ಹೇಳುತ್ತಿದ್ದಾನೆ ರಾಮ್ ಖಿಲಾಡಿ. ಹೀಗಾಗಿ ರೂ. 2000, ರೂ. 5000 ದ ಮೊತ್ತವನ್ನು ಪೋಲೀಸರಿಗೆ ನೀಡಿದರೂ ಸೋಲುವ ಸಾಧ್ಯತೆಗಳು ಇಲ್ಲದಿಲ್ಲ.

ಇನ್ನು ತನಿಖೆಗೆಂದು ಬರುವ ಪೋಲೀಸ್ ಅಧಿಕಾರಿಯು ದೂರು ಕೊಟ್ಟವನನ್ನೇ ದಸ್ತಗಿರಿ ಮಾಡುವ ಸಂದರ್ಭಗಳೂ ಬರುವುದುಂಟು. ಅದರಲ್ಲೂ ದೂರು ಕೊಟ್ಟವನು ದಲಿತನಾಗಿದ್ದು ಆರೋಪಿಯು ಮೇಲ್ಜಾತಿಯವನಾಗಿದ್ದರೆ ಈ ಸಾಧ್ಯತೆಗಳು ಮತ್ತಷ್ಟು ಹೆಚ್ಚು. ಕಾನ್ ಸ್ಟೇಬಲ್ ಗಳು ಮೇಲ್ಜಾತಿಗೆ ಸೇರಿದವರಾಗಿರುವುದು ಇಲ್ಲಿ ಸಾಮಾನ್ಯ.

"ಮೇಲ್ಜಾತಿಯವನೊಬ್ಬನು ನನ್ನ ಮೇಲೆ ದಾಳಿ ನಡೆಸಿದ ನಂತರ ಡಿ.ಐ.ಜಿ ಸಾಹೇಬ್ರು ನನ್ನ ಮನೆಯ ಹೊರಗೆ ಪೋಲೀಸ್ ಒಬ್ಬನನ್ನು ನೇಮಿಸಿಬಿಟ್ಟಿದ್ದರು. ಆ ಹವಾಲ್ದಾರ್ ದಿನವಿಡೀ ಯಾದವರ ಮನೆಯಲ್ಲಿ ತಿನ್ನುತ್ತಾ, ಮದ್ಯ ಸೇವನೆಯನ್ನು ಮಾಡುತ್ತಾ ಅಡ್ಡಾಡುತ್ತಿದ್ದ. ನನ್ನೊಂದಿಗೆ ಹೇಗೆ ವ್ಯವಹರಿಸಬೇಕೆಂದೂ ಈತ ಅವರಿಗೆಲ್ಲಾ ಹೇಳುತ್ತಿದ್ದ. ಈ ನಡುವೆ ನನ್ನ ಗಂಡನನ್ನು ನಿರ್ದಯವಾಗಿ ಬಡಿಯಲಾಯಿತು. ನಾನೊಬ್ಬಳೇ ಹೋಗಿ ಠಾಣೆಯ ಮೆಟ್ಟಿಲು ಹತ್ತಿದ್ದೆ. ಎಫ್.ಐ.ಆರ್ ದಾಖಲಿಸುವ ಬದಲು ´ಒಬ್ಬ ಹೆಂಗಸಾಗಿ (ಅದರಲ್ಲೂ ದಲಿತ ಸಮುದಾಯದವಳಾಗಿ) ಇಲ್ಲಿಯವರೆಗೆ ಬರಲು ನಿನಗೆಷ್ಟು ಧೈರ್ಯ?’ ಎಂದೆಲ್ಲಾ ಹೇಳಿ ನನ್ನನ್ನೇ ಹೆದರಿಸಲಾಯಿತು", ಎನ್ನುತ್ತಾರೆ ಅಜ್ಮೇರ್ ನಿವಾಸಿಯಾಗಿರುವ ಭನ್ವಾರಿದೇವಿ. ಆಕೆಯ ಧೈರ್ಯವು ಪೋಲೀಸರನ್ನು ರೊಚ್ಚಿಗೆಬ್ಬಿಸಿತ್ತು.

"ಸರ್ವೋಚ್ಚ ನ್ಯಾಯಾಲಯದಲ್ಲಿರುವ ಅಷ್ಟು ನ್ಯಾಯಾಧೀಶರಿಗೂ ಒಬ್ಬನೇ ಒಬ್ಬ ಕಾನ್-ಸ್ಟೇಬಲ್ ಗಿರುವಷ್ಟು ಅಧಿಕಾರವಿಲ್ಲ," ಎಂದು ಇವೆಲ್ಲದರ ಸಾರಾಂಶವೆಂಬಂತೆ ಹೇಳುತ್ತಿದ್ದಾನೆ ಕುಮ್ಹರ್ ಹಳ್ಳಿಯ ನಿವಾಸಿ ಚುನ್ನಿ ಲಾಲ್ ಜಾತವ್.

"ಕಾನ್-ಸ್ಟೇಬಲ್ ಒಬ್ಬ ನಮ್ಮನ್ನು ರಕ್ಷಿಸಲೂ ಬಲ್ಲ, ನಾಶವನ್ನೂ ಮಾಡಬಲ್ಲ. ನ್ಯಾಯಾಧೀಶರು ಎರಡೂ ಕಡೆಯ ನುರಿತ ವಕೀಲರುಗಳ ವಾದಗಳನ್ನು ಕೇಳಬಲ್ಲರೇ ಹೊರತು ನಿಯಮಗಳನ್ನು ತಿದ್ದುಪಡಿ ಮಾಡುವಷ್ಟು ಶಕ್ತರಲ್ಲ. ಇಲ್ಲಿಯ ಹವಾಲ್ದಾರರು ತಮ್ಮದೇ ಆದ ಕಾನೂನುಗಳನ್ನು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಬಹುತೇಕ ಏನು ಮಾಡಲೂ ಕೂಡ ಆತ ಶಕ್ತನಾಗಿದ್ದಾನೆ," ಎನ್ನುತ್ತಾನೆ ಆತ.

Chunni Lal Jatav on right, with friends in Kunher village. Three men sitting in a house
PHOTO • P. Sainath

'ಸರ್ವೋಚ್ಚ ನ್ಯಾಯಾಲಯದ ಅಷ್ಟು ನ್ಯಾಯಾಧೀಶರಿಗೂ ಒಬ್ಬನೇ ಒಬ್ಬ ಕಾನ್-ಸ್ಟೇಬಲ್ ಗಿರುವಷ್ಟು ಅಧಿಕಾರವಿಲ್ಲ,' ತನ್ನ ತೀಕ್ಷ್ಣಹಾಸ್ಯದ ಧಾಟಿಯಲ್ಲಿ ಹೇಳುತ್ತಿದ್ದಾನೆ ಕುಮ್ಹರ್ ಹಳ್ಳಿಯ ನಿವಾಸಿ ಚುನ್ನಿ ಲಾಲ್ ಜಾತವ್ (ಬಲ).

ಒಂದು ಪಕ್ಷ ಎಫ್.ಐ.ಆರ್ ದಾಖಲಿಸುವುದರಲ್ಲಿ ಯಶಸ್ವಿಯಾದರೂ ಹೊಸ ಸಮಸ್ಯೆಗಳು ಇಲ್ಲಿ ಎದುರಾಗುತ್ತವೆ. ಇದು ‘ಪ್ರವೇಶಧನ’ ಮತ್ತು ಇತರ ಮೊತ್ತಗಳನ್ನು ನೀಡಿಯೂ ಬರುವಂಥವುಗಳು. ಅದೇನೆಂದರೆ ಸಾಕ್ಷಿಯ ಹೇಳಿಕೆಗಳನ್ನು ದಾಖಲಿಸುವಲ್ಲಿ ಪೋಲೀಸರು ತೋರುವ ಅಸಡ್ಡೆ'', ಎನ್ನುತ್ತಾರೆ ಭನ್ವಾರಿ. ಈಕೆ ಹೇಳುವ ಪ್ರಕಾರ ಕೆಲವೊಮ್ಮೆ ಪೋಲೀಸರು ತಪ್ಪಿತಸ್ಥರನ್ನು ಬಂಧಿಸುವಲ್ಲಿ ಉದ್ದೇಶಪೂರ್ವಕವಾಗಿ ವಿಫಲರಾಗುತ್ತಿದ್ದಾರೆ. ಇವರನ್ನು ಕೇವಲ ‘ಪಲಾಯನಗೈದ ಅಪರಾಧಿ’ಗಳೆಂದು ಬಿಂಬಿಸಿ ನಂತರ ಅವರನ್ನು ದಸ್ತಗಿರಿ ಮಾಡುವಲ್ಲಿ ವಿಫಲರಾದೆವೆಂಬಂತೆ ದಾಖಲೆಗಳಲ್ಲಿ ತೋರಿಸಲಾಗುತ್ತಿದೆ.

ಹಲವು ಹಳ್ಳಿಗಳಲ್ಲಿ ಇಂಥಾ ‘ಪಲಾಯನಗೈದ ಅಪರಾಧಿ’ಗಳು ತಾವೇ ಸ್ವತಂತ್ರರಾಗಿ ಹಳ್ಳಿಯನ್ನು ತೊರೆದ ನಿದರ್ಶನಗಳೂ ಇವೆ. ಹೀಗೆ ಇದನ್ನೂ ಸೇರಿದಂತೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವುದರಲ್ಲಿ ಪೋಲೀಸರು ತೋರಿಸುತ್ತಿರುವ ಅಸಡ್ಡೆಯು ಪ್ರಕರಣಗಳ ತನಿಖೆಯಲ್ಲಿ ದೊಡ್ಡ ಮಟ್ಟಿನ ವಿಳಂಬವನ್ನು ತರುತ್ತಿವೆ.

ಇಂಥಾ ಘಟನೆಗಳು ದಲಿತರನ್ನು ದಾಳಿಕೋರರ ಹಂಗಿನಲ್ಲಿರುವಂಥಾ ಶೋಚನೀಯ ಪರಿಸ್ಥಿತಿಯನ್ನು ಸೃಷ್ಟಿಸಿ ತಮ್ಮ ಪ್ರಕರಣಗಳಲ್ಲಿ ಸಂಧಾನ ಮಾಡಿಕೊಳ್ಳುವಂತಿನ ಅನಿವಾರ್ಯತೆಯನ್ನು ತಂದೊಡ್ಡಿವೆ. ಧೋಲಪುರ ಜಿಲ್ಲೆಯ ನಸ್ಕೋಡಾದಲ್ಲಿ ಮೇಲ್ಜಾತಿಯ ಕೆಲವರು ರಾಮೇಶ್ವರ ಜಾತವ್ ಎಂಬ ದಲಿತನೊಬ್ಬನ ಮೇಲೆ ಅಮಾನವೀಯ ಹಿಂಸೆಯನ್ನು ನಡೆಸಿದ್ದರು. ಆತನ ಮೂಗಿನಲ್ಲಿ ತೂತೊಂದನ್ನು ಕೊರೆದು ಸೆಣಬಿನ ಒಂದು ಮೀಟರ್ ಉದ್ದದ, 2 ಮಿಲಿಮೀಟರ್ ದಪ್ಪದ ದಾರವೊಂದನ್ನು ಆತನ ಹೊಳ್ಳೆಗಳ ಮೂಲಕವಾಗಿ ಹೊರತೆಗೆಯಲಾಗಿತ್ತು. ನಂತರ ಈ ಮೂಗುದಾರವನ್ನು ಹಿಡಿದುಕೊಂಡೇ ಹಳ್ಳಿಯಲ್ಲೆಲ್ಲಾ ಆತನ ಮೆರವಣಿಗೆಯನ್ನು ಮಾಡಲಾಗಿತ್ತು.

ಈ ವಿಲಕ್ಷಣ ಘಟನೆಗೆ ಮಾಧ್ಯಮಗಳಿಂದ ಸಿಕ್ಕ ಪ್ರಚಾರದ ಹೊರತಾಗಿಯೂ ಮುಖ್ಯ ಸಾಕ್ಷಿಗಳಲ್ಲೊಬ್ಬನಾಗಿದ್ದ ರಾಮೇಶ್ವರ ಜಾತವನ ತಂದೆ ಮಂಗಿಲಾಲ್ ತಿರುಗಿಬಿದ್ದಿದ್ದ. ಅವರಿವರ್ಯಾಕೆ, ದೌರ್ಜನ್ಯಕ್ಕೆ ಬಲಿಯಾದ ವ್ಯಕ್ತಿಯೇ ಆರೋಪಿಗಳನ್ನು ಗುರುತಿಸುವಲ್ಲಿ ವಿಫಲವಾಗಿ ಅವರೆಲ್ಲರನ್ನು ಅಪಾಯದಿಂದ ಮುಕ್ತರಾಗಿಸಿದ್ದ.

ಇವೆಲ್ಲದರ ಹಿಂದಿರುವ ಕಾರಣ? "ಈ ಹಳ್ಳಿಯಲ್ಲೇ ನಾವು ಬದುಕಬೇಕು. ನಮ್ಮನ್ನು ರಕ್ಷಿಸುವವರು ಯಾರಿದ್ದಾರೆ? ನಾವು ಭಯಭೀತರಾಗಿ ಬದುಕುತ್ತಿದ್ದೇವೆ," ಎನ್ನುತ್ತಿದ್ದಾರೆ ಮಂಗಿಲಾಲ್.

Mangi Lai Jatav and his wife in Naksoda village in Dholpur district
PHOTO • P. Sainath

ನಸ್ಕೋಡಾ ಹಳ್ಳಿಯಲ್ಲಿ ನಡೆದಿದ್ದ ದಲಿತ ದೌರ್ಜನ್ಯದ ಘಟನೆಯೊಂದರಲ್ಲಿ ರಾಮೇಶ್ವರ ಜಾತವನ ತಂದೆ ಮಂಗಿಲಾಲ್ (ಬಲ) ಸೇರಿದಂತೆ ಪ್ರಕರಣದ ಮುಖ್ಯ ಸಾಕ್ಷಿಗಳು ತಿರುಗಿಬಿದ್ದಿದ್ದರು. 'ಈ ಹಳ್ಳಿಯಲ್ಲೇ ನಾವು ಬದುಕಬೇಕು. ನಮ್ಮನ್ನು ರಕ್ಷಿಸುವವರು ಯಾರಿದ್ದಾರೆ? ನಾವು ಭಯಭೀತರಾಗಿ ಬದುಕುತ್ತಿದ್ದೇವೆ,' ಎನ್ನುತ್ತಿದ್ದಾರೆ ಮಂಗಿಲಾಲ್

"ದೌರ್ಜನ್ಯಗಳ ಬಗೆಗಿನ ಅದ್ಯಾವ ಪ್ರಕರಣವೇ ಆಗಿರಲಿ ಅದನ್ನು ಆದಷ್ಟು ಬೇಗ ದಡ ಮುಟ್ಟಿಸಬೇಕು. ಪ್ರಕರಣವೊಂದು ಆರು ತಿಂಗಳಿಗಿಂತಲೂ ಹೆಚ್ಚು ದೀರ್ಘವಾಯಿತೆಂದರೆ ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಸಾಧ್ಯತೆಗಳು ತೀರಾ ಕಮ್ಮಿ. ಹಳ್ಳಿಗಳಲ್ಲಿ ಸಾಕ್ಷಿಗಳನ್ನು ಹೆದರಿಸಲಾಗುವುದು ಸಾಮಾನ್ಯ. ಹೀಗಾಗಿ ಅವರು ಹಿಂದಡಿಯಿಡುವುದು ಸಹಜ", ಎಂದು ಜೈಪುರದ ನ್ಯಾಯಾಲಯವೊಂದರಲ್ಲಿ ನನಗೆ ಹೇಳುತ್ತಿದ್ದಾರೆ ಸ್ವತಃ ದಲಿತರೂ, ಹಿರಿಯ ವಕೀಲರೂ ಆಗಿರುವ ಬನ್ವರ್ ಬಾಗ್ರಿ.

ಸಾಕ್ಷಿಗಳನ್ನು ರಕ್ಷಿಸುವ ಯಾವ ವ್ಯವಸ್ಥೆಯೂ ನಮ್ಮಲಿಲ್ಲ. ಇನ್ನು ಪ್ರಕರಣವು ವಿಳಂಬವಾಗುತ್ತಾ ಹೋದಂತೆ ಮೊದಲೇ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಸಾಕ್ಷಿಗಳು ಪೋಲೀಸರೊಂದಿಗೆ ಮೇಲ್ಜಾತಿಯ ಗುಂಪುಗಳು ಕುದುರಿಸುವ ಡೀಲ್ ಗಳಿಂದಾಗಿ ಮತ್ತಷ್ಟು ಕುಸಿದುಹೋಗುತ್ತಾರೆ.

ಪ್ರಕರಣವು ಒಂದು ಪಕ್ಷ ನೆಲ ಬಿಟ್ಟು ಮೇಲಕ್ಕೆದ್ದರೂ ಈ ಬಾರಿ ಸಮಸ್ಯೆಗಳು ವಕೀಲರಿಂದ ಶುರುವಾಗುತ್ತವೆ. "ಎಲ್ಲಾ ವಕೀಲರೂ ಕೂಡ ಬಹಳ ಅಪಾಯಕಾರಿ ವ್ಯಕ್ತಿಗಳು. ನಿಮ್ಮ ಶತ್ರುವಿನೊಂದಿಗೆ ವ್ಯವಹಾರ ಕುದುರಿಸುವ ವಕೀಲರ ಬಳಿಯೂ ನಿಮ್ಮ ಪ್ರಕರಣವು ಬಂದು ನಿಲ್ಲುವ ಸಾಧ್ಯತೆಗಳಿರುತ್ತವೆ. ಅಂಥದ್ದರಲ್ಲಿ ವಕೀಲನೊಬ್ಬ ಎದುರಾಳಿ ಬಣಕ್ಕೆ ಬಿಕರಿಯಾಗಿಬಿಟ್ಟರೆ ಕತೆ ಮುಗಿಯಿತೆಂದೇ ತಿಳಿಯಿರಿ", ಎನ್ನುತ್ತಾರೆ ಚುನ್ನಿ ಲಾಲ್ ಜಾತವ್.

ಕೋರ್ಟು-ಕಚೇರಿಗಳ ವಿಪರೀತ ಖರ್ಚುಗಳೂ ಕೂಡ ಇಲ್ಲಾಗುವ ನಿಜವಾದ ಸಮಸ್ಯೆಗಳಲ್ಲೊಂದು. "ಕಾನೂನು ನೆರವು ಯೋಜನೆಯು ಅಸ್ತಿತ್ವದಲ್ಲಿದ್ದರೂ ಅದು ಸಂಕೀರ್ಣವಾಗಿದೆ. ವಾರ್ಷಿಕ ಆದಾಯದಂಥಾ ಮಾಹಿತಿಗಳನ್ನು ಇಲ್ಲಿ ಅರ್ಜಿಗಳು ಕೇಳುತ್ತವೆ. ದಿನಕೂಲಿ ಮತ್ತು ಆಗೊಮ್ಮೆ ಈಗೊಮ್ಮೆ ಮಾತ್ರ ಸಿಗುವ ಕೆಲಸಕ್ಕೆ ತಕ್ಕಂತೆ ಸಂಬಳವನ್ನು ಪಡೆಯುವ ಬಹಳಷ್ಟು ದಲಿತರಿಗೆ ಇದು ಗೊಂದಲವನ್ನುಂಟುಮಾಡುತ್ತಿದೆ. ಇನ್ನು ಇಂಥಾ ಯೋಜನೆಗಳ ಮತ್ತು ಅವುಗಳ ಲಾಭವನ್ನು ಪಡೆದುಕೊಳ್ಳಲು ಅವರಿಗಿರುವ ಹಕ್ಕಿನ ಬಗ್ಗೆಯೂ ಜಾಗೃತಿಯಿಲ್ಲದಿರುವ ಕಾರಣ ಇವೆಲ್ಲವೂ ಸವಾಲೇ ಸರಿ", ಎನ್ನುತ್ತಿದ್ದಾರೆ ಚೇತನ್ ಬೈರ್ವಾ. ಅಂದು ಜೈಪುರ ಉಚ್ಚ ನ್ಯಾಯಾಲಯದಲ್ಲಿದ್ದ ಕಲವು ದಲಿತರಲ್ಲಿ ಇವರೂ ಒಬ್ಬರು.

ಕಾನೂನು ಪ್ರತಿನಿಧಿಸುವಿಕೆಯ ವಿಚಾರದಲ್ಲಿ ದಲಿತರಿಗೆ ಹೇಳಿಕೊಳ್ಳುವಂಥಾ ಸಹಾಯವೇನೂ ಆಗುತ್ತಿಲ್ಲ. ಜೈಪುರದ ನ್ಯಾಯಾಲಯದಲ್ಲಿ ಸುಮಾರು 1200 ವಕೀಲರಿದ್ದರೆ ಅದರಲ್ಲಿ ಎಂಟು ಮಂದಿ ಮಾತ್ರ ದಲಿತರು. ಉದಯಪುರದಲ್ಲಿರುವ ಸುಮಾರು 450 ವಕೀಲರಲ್ಲಿ ಕೇವಲ ಒಂಭತ್ತು ಮಂದಿ ದಲಿತ ಸಮುದಾಯಕ್ಕೆ ಸೇರಿದವರು. ಗಂಗಾನಗರದ ಒಟ್ಟು 435 ವಕೀಲರಲ್ಲಿ ಆರು ಮಂದಿ ದಲಿತರು. ಇನ್ನು ವ್ಯವಸ್ಥೆಯ ಏಣಿಯಲ್ಲಿ ಮೇಲಕ್ಕೆ ಹೋದಂತೆಲ್ಲಾ ಇದು ಇನ್ನಷ್ಟು ಶೋಚನೀಯವೆಂಬಂತಿದೆ. ಉಚ್ಚನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ ಒಬ್ಬನೇ ಒಬ್ಬ ನ್ಯಾಯಾಧೀಶರೂ ಇಲ್ಲ.

ಕುಮ್ಹರ್ ಜಿಲ್ಲೆಯ ಚುನ್ನಿ ಲಾಲ್ ಹೇಳುವ ಪ್ರಕಾರ ರಾಜಸ್ಥಾನದಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಮುನ್ಸಿಫ್ ಅಥವಾ ನ್ಯಾಯಾಂಗ ಅಧಿಕಾರಿಗಳಿದ್ದಾರೆ. ಆದರೆ ಅವರ ಸಂಖ್ಯೆಯು ಸಾಕಷ್ಟು ಕಮ್ಮಿಯಿದೆ. ಮೇಲಾಗಿ ಇವರುಗಳು ಪ್ರಕರಣಗಳ ಮೂಲಕವಾಗಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲವಂತೆ.

ಪ್ರಕರಣವೊಂದು ನ್ಯಾಯಾಲಯವನ್ನು ತಲುಪಿದಾಗ ಪೇಶ್ಕರ್ (ನ್ಯಾಯಾಲಯದ ಗುಮಾಸ್ತ) ಅದನ್ನು ನೋಡಿಕೊಳ್ಳುತ್ತಾನೆ. "ಈತನಿಗೆ ಲಂಚ ನೀಡದಿದ್ದರೆ ಕೋರ್ಟ್ ದಿನಾಂಕಗಳ ವಿಚಾರದಲ್ಲಿ ಮಣ್ಣು ಮುಕ್ಕುವಂತಾಗುತ್ತದೆ", ಎಂದು ಹಲವರು ನನಗೆ ಹೇಳಿದ್ದಾರೆ. "ಈ ಇಡೀ ವ್ಯವಸ್ಥೆಯೇ ಊಳಿಗಮಾನ್ಯ ವ್ಯವಸ್ಥೆಯಂತಿದೆ. ಈ ಮಾರ್ಗವಾಗಿ ಪೇಶ್ಕರನೂ ತನ್ನ ಪಾಲನ್ನು ಕಸಿದುಕೊಳ್ಳುತ್ತಾನೆ. ಮ್ಯಾಜಿಸ್ಟ್ರೇಟರ ಹಲವು ಕಚೇರಿಗಳಲ್ಲಿ ನ್ಯಾಯಾಂಗ ಅಧಿಕಾರಿಗಳೆಲ್ಲಾ ಜೊತೆಯಲ್ಲಿ ಕುಳಿತುಕೊಂಡು ಪೇಶ್ಕರನ ಖರ್ಚಿನಲ್ಲೇ ಊಟ ಮಾಡುತ್ತಾರೆ. ನಾನಿದನ್ನು ಕೆಲ ಪತ್ರಕರ್ತರಿಗೆ ಹೇಳಿ ಈ ಬಗ್ಗೆ ಅವರಿಂದ ಬರೆಸಿದ್ದೆ", ಎನ್ನುತ್ತಿದ್ದಾರೆ ಚುನ್ನಿ ಲಾಲ್.

ಇನ್ನು ಕೊನೆಯದಾಗಿ ದಲಿತ ದೌರ್ಜನ್ಯದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವೂ ತೀರಾ ಕಮ್ಮಿಯಿದೆ. ಅಷ್ಟೇ ಅಲ್ಲ!

"ತೀರ್ಪು ನ್ಯಾಯಯುತವಾಗಿಯೇ ಬರಬಹುದು. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರುವ ಅಧಿಕಾರಿಗಳ ದರ್ಪ                  ಮಾತ್ರ ನಿಜಕ್ಕೂ ವಿಪರ್ಯಾಸದ್ದು", ಎಂದು ಅಭಿಪ್ರಾಯಪಡುತ್ತಾರೆ ಜೈಪುರ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಲ್ಲೊಬ್ಬರಾದ ಪ್ರೇಮ್ ಕೃಷ್ಣ. ಇವರು ರಾಜಸ್ಥಾನದ ನಾಗರಿಕ ಸ್ವಾತಂತ್ರ್ಯ ಒಕ್ಕೂಟದ ಅಧ್ಯಕ್ಷರೂ ಹೌದು. ಪ್ರೇಮ್ ಕೃಷ್ಣ ಹೇಳುವಂತೆ ಆರ್ಥಿಕ ಮುಗ್ಗಟ್ಟು ಮತ್ತು ವ್ಯವಸ್ಥಿತವಾಗಿಲ್ಲದ ರಾಜಕಾರಣಗಳೆರಡೂ ಪರಿಶಿಷ್ಟ ಜಾತಿಯ ಜನರಿಗೆ ಬಾಧಕವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವತಃ ಸರಪಂಚ್ ಆಗಿರುವ ದಲಿತರೂ ಕೂಡ ಕಾನೂನು ವ್ಯವಸ್ಥೆಯೆಂಬ ಇಕ್ಕಟ್ಟಿನಲ್ಲಿ ಸಿಲುಕಿದ ದೃಷ್ಟಾಂತಗಳಿವೆಯಂತೆ.

Anju Phulwaria, the persecuted sarpanch, standing outside her house
PHOTO • P. Sainath

ತನ್ನ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಾವಿರಾರು ರೂಪಾಯಿಗಳನ್ನು ವ್ಯಯಿಸಿರುವ ರಹೋಲಿಯ ಉಚ್ಚಾಟಿತ ದಲಿತ ಸರಪಂಚ್ ಆಗಿರುವ ಅಂಜು ಫುಲ್ವಾರಿಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ

ತನ್ನ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಾವಿರಾರು ರೂಪಾಯಿಗಳನ್ನು ವ್ಯಯಿಸಿರುವ ರಹೋಲಿಯ ಉಚ್ಚಾಟಿತ ದಲಿತ ಸರಪಂಚ್ ಆಗಿರುವ ಅಂಜು ಫುಲ್ವಾರಿಯಾ ಸದ್ಯ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. "ಒಳ್ಳೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಮ್ಮ ಮಕ್ಕಳನ್ನು ಅಲ್ಲಿಂದ ತೆಗೆಸಿ ಸರ್ಕಾರಿ ಶಾಲೆಯೊಂದಕ್ಕೆ ಸೇರಿಸಿದ್ದೇವೆ." ಎಂದು ಹೇಳುತ್ತಿದ್ದಾರೆ ಅಂಜು. ಅಚ್ಚರಿಯ ಸಂಗತಿಯೆಂದರೆ ಈ ಒಳ್ಳೆಯ ಶಾಲೆಯ ಬೋಧಕ ವರ್ಗವೇ ದಲಿತ ಸಮುದಾಯವರ ಆಸ್ತಿಪಾಸ್ತಿಗಳನ್ನು ವಿರೂಪಗೊಳಿಸಲು ತನ್ನ ವಿದ್ಯಾರ್ಥಿಗಳನ್ನು ಪ್ರಚೋದಿಸಿತ್ತು.

ನಸ್ಕೋಡಾದಲ್ಲಿ ಮೂಗು ಚುಚ್ಚಿಸಿಕೊಂಡ ನತದೃಷ್ಟ ದಲಿತ ರಾಮೇಶ್ವರನ ತಂದೆಯಾಗಿರುವ ಮಂಗಿಲಾಲ್ ತನ್ನ ಪ್ರಕರಣದ ಖರ್ಚಿಗಾಗಿ 30000 ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ವ್ಯಯಿಸಿದ್ದಾರೆ. ದೌರ್ಜನ್ಯಕ್ಕೆ ಬಲಿಯಾಗಿರುವ ರಾಮೇಶ್ವರ್ ಹಳ್ಳಿಯಿಂದಲೇ ಕಾಲ್ಕಿತ್ತಿದ್ದಾನೆ. ಕೋರ್ಟುಕಚೇರಿಗಳ ಖರ್ಚುಗಳನ್ನು ನಿಭಾಯಿಸಲೆಂದೇ ಮಂಗಿಲಾಲ್ ತನ್ನ ಕುಟುಂಬದ ತುಂಡುಭೂಮಿಯ ಮೂರನೇ ಒಂದು ಭಾಗವನ್ನು ಮಾರಿಬಿಟ್ಟಿದ್ದಾರೆ.

ರಾಜಸ್ಥಾನದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಶೋಕ್ ಗೆಹ್ಲೋಟ್ ಇಂಥಾ ಪ್ರಕರಣಗಳ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಸಕ್ತಿ ತೋರಿದ್ದಾರೆ. ಗೆಹ್ಲೋಟ್ ಹೇಳುವಂತೆ ಅವರ ಸರ್ಕಾರವು ´ಎಫ್.ಆರ್' ಅಥವಾ ಅಂತಿಮ ವರದಿಗಳ ಹೆಸರಿನಲ್ಲಿ ಮುಚ್ಚಿಹೋಗಿರುವ ಪ್ರಕರಣಗಳ ಬಗ್ಗೆ ನಡೆಸಲಾಗಿರುವ ಕೆಲ ಗಣತಿಗಳನ್ನು ಮಾನ್ಯ ಮಾಡುವ ಬಗ್ಗೆ ಚಿಂತನೆ ಮಾಡಿದೆ. "ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಿಕ್ಕುತಪ್ಪಿಸಿದ ಅಂಶಗಳು ಸಾಬೀತಾದಲ್ಲಿ ತನಿಖೆಯ ಗಾಂಭೀರ್ಯವನ್ನು ಮೂಲೆಗುಂಪು ಮಾಡಿದ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು," ಎಂದು ಗೆಹ್ಲೋಟ್ ನನಗೆ ಹೇಳಿದ್ದರು. ಸರಪಂಚ್ ನಂತಹ ಹುದ್ದೆಗಳನ್ನೂ ಸೇರಿದಂತೆ ದಲಿತ ಮತ್ತು ಹಿಂದುಳಿದ ವರ್ಗಗಳನ್ನು ತುಳಿದುಹಾಕುತ್ತಿರುವ ಕೆಲ ಪಂಚಾಯತ್ ಕಾನೂನುಗಳನ್ನು ತಿದ್ದುಪಡಿ ಮಾಡುವ ಹಂಬಲವು ಅವರಿಗಿದೆ.

ಇತ್ತ ಅಂಜು ಫುಲ್ವಾರಿಯಾರಂತಹ ಕೆಲ ಸರಪಂಚ್ ಗಳು ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ವಿನಾಕಾರಣ ಬಲಿಪಶುಗಳಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿದ್ದೇ ಆದಲ್ಲಿ ಅಶೋಕ್ ಗೆಹ್ಲೋಟ್ ರಾಜಕೀಯವಾಗಿ ಏನನ್ನಾದರೂ ಗಳಿಸಿಕೊಳ್ಳುವುದು ಸತ್ಯ. ಆದರೆ ಇವೆಲ್ಲದಕ್ಕಿಂತಲೂ ದೊಡ್ಡ ಸವಾಲು ಈಗ ಅವರ ಮುಂದಿದೆ. ಅದೇನೆಂದರೆ ವ್ಯವಸ್ಥೆಯ ವಿಶ್ವಾಸಾರ್ಹತೆಯು ಈ ಮಟ್ಟಿಗೆ ಯಾವತ್ತೂ ಕುಗ್ಗಿಯೇ ಇರಲಿಲ್ಲ.

"ಕಾನೂನು ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಬಗ್ಗೆ ನಮಗೀಗ ಕಿಂಚಿತ್ತು ವಿಶ್ವಾಸವೂ ಉಳಿದಿಲ್ಲ. ಕಾನೂನಿರುವುದು ಸಮಾಜದ ಬಲಶಾಲಿ ವರ್ಗದ ಹಿತಕ್ಕೆ ಮಾತ್ರ ಎಂಬುದು ನಮಗ್ಗೊತ್ತು," ಎನ್ನುತ್ತಿದ್ದಾರೆ ರಾಮ್ ಖಿಲಾಡಿ.

ಅಷ್ಟಕ್ಕೂ ನ್ಯಾಯಾಲಯದ ಆವರಣದಲ್ಲಿ ಮನುವಿನ ಗಾಢವಾದ ಛಾಯೆಯನ್ನು ಹೊಂದಿರುವ ರಾಜ್ಯ ಈ ರಾಜಸ್ಥಾನ. ಇಲ್ಲಿ ಅಂಬೇಡ್ಕರರೂ ಕೂಡ ಓರ್ವ ಹೊರಗಿನ ವ್ಯಕ್ತಿಯೇ.

ಈ ಎರಡು ಭಾಗಗಳ ವರದಿಯಲ್ಲಿ ನೀಡಲಾಗಿರುವ 1991-96 ರ ಅವಧಿಯ ಅಪರಾಧ ಅಂಕಿಅಂಶಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ, ರಾಜಸ್ಥಾನ - 1998 ರ ವರದಿಯಿಂದ ಎತ್ತಿಕೊಳ್ಳಲಾಗಿದೆ. ಈ ಅಂಕಿಅಂಶಗಳು ಕಾಲಾಂತರದಲ್ಲಿ ಮತ್ತಷ್ಟು ಶೋಚನೀಯ ಸ್ಥಿತಿಯನ್ನು ತಲುಪಿರುವ ಸಾಧ್ಯತೆಗಳೂ ಇಲ್ಲದಿಲ್ಲ.

ಎರಡು ಭಾಗಗಳಲ್ಲಿರುವ ಈ ವರದಿಯು ಮೊದಲು ಜುಲೈ 11, 1999 ರ `ದ ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ಮಾನವ ಹಕ್ಕು ಪತ್ರಿಕೋದ್ಯಮಕ್ಕೆ ನೀಡಲಾಗುವ ಪ್ರತಿಷ್ಠಿತ ಆಮ್ನೆಸ್ಟಿ ಗ್ಲೋಬಲ್ ಇಂಟನ್ರ್ಯಾಷನಲ್ ಪುರಸ್ಕಾರಕ್ಕೆ ಸ್ಥಾಪನೆಯಾದ ವರ್ಷ 2000 ದಲ್ಲೇ ಪಾತ್ರವಾದ ವರದಿಯೂ ಹೌದು.

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected] This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik