“ಅವರು ನನ್ನನ್ನು ಕೊಂದೇ ಬಿಡುತ್ತಿದ್ದರು…” ಎನ್ನುವಾಗ 28 ವರ್ಷದ ಅರುಣಾ ಅವರ ಮುಖದಲ್ಲಿ ದಿಗ್ಭ್ರಮೆ ತುಂಬಿತ್ತು. ಅವರು ನಮ್ಮೊಡನೆ ಮಾತನಾಡುತ್ತಾ ಅಲ್ಲೇ ಆಡುತ್ತಿದ್ದ ಆರು ವರ್ಷದ ಮಗಳತ್ತ ನೋಡುತ್ತಿದ್ದರು. ಇಲ್ಲಿ ʼಅವರುʼ ಎಂದರೆ ಅರುಣಾರ ಕುಟುಂಬ ಸದಸ್ಯರು. ಅವರಿಗೆ ವರುಣಾ ಹೀಗೆ ಏಕೆ ವರ್ತಿಸುತ್ತಿದ್ದಾರೆನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿರಲಿಲ್ಲ. “ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಎಸೆಯುತ್ತಿದ್ದೆ. ಮನೆಯಲ್ಲಿ ಇರುತ್ತಿರಲಿಲ್ಲ. ನಮ್ಮ ಮನೆಯ ಬಳಿ ಯಾರೂ ಬರುತ್ತಿರಲಿಲ್ಲ…”

ಅವರು ಕೆಲವೊಮ್ಮೆ ತಮಿಳುನಾಡಿನ ಕಾಂಜೀಪುರಂ ಜಿಲ್ಲೆಯ ತನ್ನ ಮನೆ ಬಳಿಯ ಬೆಟ್ಟಗಳಲ್ಲಿ ಅಲೆದಾಡುತ್ತಿದ್ದರು. ಅರುಣಾ ತಮ್ಮ ಮೇಲೆ ಹಲ್ಲೆ ಮಾಡಬಹುದೆಂದು ಹೆದರಿ ಕೆಲವರು ಓಡುತ್ತಿದ್ದರೆ ಇನ್ನೂ ಕೆಲವರು ಅವರಿಗೆ ಕಲ್ಲುಗಳಿಂದ ಹೊಡೆಯುತ್ತಿದ್ದರು. ಅವರನ್ನು ಮನೆಗೆ ಕರೆ ತರುತ್ತಿದ್ದ ಅವರ ಅಪ್ಪ ಮಗಳು ಮತ್ತೆ ಮನೆ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಸಲುವಾಗಿ ಅವರನ್ನು ಕುರ್ಚಿಗೆ ಕಟ್ಟಿ ಹಾಕುತ್ತಿದ್ದರು.

ಅರುಣಾ (ಹೆಸರು ಬದಲಾಯಿಸಲಾಗಿದೆ) ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವುದು ತಿಳಿದುಬಂದಾಗ ಅವರ ವಯಸ್ಸು 18. ಈ ಕಾಯಿಲೆ ವ್ಯಕ್ತಿಯ ಯೋಚನೆ, ಭಾವನೆ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ.

ಕಾಂಚೀಪುರಂ ಜಿಲ್ಲೆಯ ಚೆಂಗಲ್‌ಪಟ್ಟು ಗ್ರಾಮದ ದಲಿತ ಕಾಲನಿಯಲ್ಲಿನ ತಮ್ಮ ಮನೆಯ ಹೊರಗೆ ಕುಳಿತು ನಮ್ಮೊಡನೆ ಮಾತನಾಡುತ್ತಿದ್ದ ಅರುಣಾ ಇಷ್ಟು ಹೇಳಿ ತಮ್ಮ ಬದುಕಿನ ಸಂಕಷ್ಟದ ದಿನಗಳ ಕುರಿತಾದ ಮಾತನ್ನು ನಿಲ್ಲಿಸಿದರು. ಹಾಗೆ ಮಾತು ನಿಲ್ಲಿಸಿದವರು ಇದ್ದಕ್ಕಿದ್ದಂತೆ ಎದ್ದು ನಡೆಯತೊಡಗಿದರು. ಗುಲಾಬಿ ಬಣ್ಣದ ನೈಟಿ ತೊಟ್ಟಿದ್ದ ಅವರು ಕಪ್ಪು ಬಣ್ಣದ ದೇಹ ಮತ್ತು ಸಣ್ಣದಾಗಿ ಕತ್ತರಿಸಿದ ಕೂದಲನ್ನು ಹೊಂದಿದ್ದರು. ನಡೆಯುವಾಗ ಮುಂದಕ್ಕೆ ಬಾಗಿದಂತೆ ಕಾಣುತ್ತಿದ್ದರು. ತನ್ನ ಒಂದು ಕೋಣೆಯ ಗುಡಿಸಲನ್ನು ಪ್ರವೇಶಿಸಿದ ಅವರು ವೈದ್ಯರ ಚೀಟಿ ಮಾತ್ರೆಗಳೊಡನೆ ಹೊರಗೆ ಬಂದರು. ತಂದಿದ್ದ ಎರಡು ಮಾತ್ರೆಗಳ ಸ್ಟ್ರಿಪ್‌ ತೋರಿಸುತ್ತಾ “ಇದು ನಿದ್ರೆಗಾಗಿ ಕೊಟ್ಟಿದ್ದಾರೆ. ಇನ್ನೊಂದು ನರ ಸಂಬಂಧಿ ರೋಗಗಳಿಗೆ ಪರಿಹಾರ ನೀಡುವುದು” ಎಂದು ಹೇಳಿದರು. “ಈಗ ನನಗೆ ನಿದ್ರೆ ಚೆನ್ನಾಗಿ ಬರುತ್ತದೆ. ಔಷಧಿ ತರುವ ಸಲುವಾಗಿ ಪ್ರತಿ ತಿಂಗಳು ಸೆಂಬಾಕ್ಕಂ [ಪ್ರಾಥಮಿಕ ಆರೋಗ್ಯ ಕೇಂದ್ರ] ಗೆ ಹೋಗುತ್ತೇನೆ."

ಒಂದು ವೇಳೆ ಅರುಣಾ ಶಾಂತಿ ಶೇಷ ಅವರನ್ನು ಭೇಟಿಯಾಗದೆ ಹೋಗಿದ್ದರೆ ಅವರ ರೋಗ ಪತ್ತೆಯಾಗದೆ ಉಳಿದುಬಿಡುವ ಸಾಧ್ಯತೆಯಿತ್ತು.

Aruna and her little daughter in their home in the Dalit colony in Kondangi village, Kancheepuram district.
PHOTO • M. Palani Kumar
Shanthi Sesha, who was the first to spot Aruna's mental illness. Her three decades as a health worker with an NGO helped many like Aruna, even in the remotest areas of Chengalpattu taluk, get treatment and medicines
PHOTO • M. Palani Kumar

ಎಡ: ಕಾಂಚೀಪುರಂ ಜಿಲ್ಲೆಯ ಕೊಂಡಂಗಿ ಗ್ರಾಮದ ದಲಿತ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಅರುಣಾ ಮತ್ತು ಅವರ ಪುಟ್ಟ ಮಗಳು. ಬಲ: ಅರುಣಾರ ಮಾನಸಿಕ ಸಮಸ್ಯೆಯನ್ನು ಮೊದಲು ಗುರುತಿಸಿದವರು ಶಾಂತಿ ಶೇಷ. ಸರ್ಕಾರೇತರ ಸಂಸ್ಥೆಯೊಂದರಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಅವರ ಮೂರು ದಶಕಗಳ ಕಾಲದಿಂದ ಚೆಂಗಲ್‌ಪಟ್ಟು ತಾಲ್ಲೂಕಿನ ದೂರದ ಪ್ರದೇಶಗಳಲ್ಲಿಯೂ ಅರುಣಾ ಅವರಂತಹ ಅನೇಕರಿಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ

61 ವರ್ಷದ ಶಾಂತಿಯವರಿಗೆ ಅರುಣಾರಿಗೆ ಏನಾಗುತ್ತಿದೆ ಎನ್ನುವುದು ತಿಳಿದಿತ್ತು. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಅರುಣಾರಂತಹ ನೂರಾರು ಜನರಿಗೆ ಅವರು ಸಹಾಯ ಒದಗಿಸಿದ್ದರು. 2017-2022ರಲ್ಲಿ ಶಾಂತಿ ಚೆಂಗಲ್‌ಪಟ್ಟುವಿನಲ್ಲಿ 98 ರೋಗಿಗಳನ್ನು ಗುರುತಿಸಿ ಅವರಿಗೆ ವೈದ್ಯಕೀಯ ಆರೈಕೆ ಪಡೆಯಲು ಸಹಾಯ ಮಾಡಿದ್ದರು. ಸ್ಕಿಜೋಫ್ರೇನಿಯಾ ರಿಸರ್ಚ್ ಫೌಂಡೇಶನ್ (ಸ್ಕಾರ್ಫ್) ನೊಂದಿಗೆ ಗುತ್ತಿಗೆ ಸಮುದಾಯ ಆರೋಗ್ಯ ಕಾರ್ಯಕರ್ತರಾಗಿರುವ ಶಾಂತಿ ಕೊಂಡಂಗಿ ಗ್ರಾಮದಲ್ಲಿ ಮಾನಸಿಕ ಸಮಸ್ಯೆಗಳೊಡನೆ ಹೋರಾಡುತ್ತಿರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಮೂಲಕ ಚಿರಪರಿಚಿತರಾಗಿದ್ದರು.

ಒಂದು ದಶಕದ ಹಿಂದೆ ಶಾಂತಿ ಅರುಣಾ ಅವರನ್ನು ಭೇಟಿಯಾದ ಸಮಯದಲ್ಲಿ "ಅವಳು ಸಣ್ಣವಳಿದ್ದಳು ಮತ್ತು ತೆಳ್ಳಗಿದ್ದಳು, ಮತ್ತು ಇನ್ನೂ ಮದುವೆಯಾಗಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಅವಳು ಸುಮ್ಮನೆ ತಿರುಗಾಡುತ್ತಿದ್ದಳು, ಏನನ್ನೂ ತಿನ್ನುತ್ತಿರಲಿಲ್ಲ. ತಿರುಕಾಲುಕುಂಡ್ರಂನ ವೈದ್ಯಕೀಯ ಶಿಬಿರಕ್ಕೆ ಕರೆತರುವಂತೆ ನಾನು ಅವಳ ಕುಟುಂಬಕ್ಕೆ ಹೇಳಿದೆ.” ಅಲ್ಲಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಜನರನ್ನು ಪತ್ತೆಹಚ್ಚಲು ಮತ್ತು ಅವರಿಗೆ ಚಿಕಿತ್ಸೆ ನೀಡಲು ಸ್ಕಾರ್ಫ್ ಪ್ರತಿ ತಿಂಗಳು ಶಿಬಿರವನ್ನು ಆಯೋಜಿಸುತ್ತಿತ್ತು.

ಅರುಣಾರ ಕುಟುಂಬವು ಆಕೆಯನ್ನು ಕೊಂಡಂಗಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತಿರುಕಾಲುಕುಂಡ್ರಮ್‌ಗೆ ಕರೆದೊಯ್ಯಲು ಪ್ರಯತ್ನಿಸಿದಾಗ, ಅವರು ಹಿಂಸಾತ್ಮಕವಾಗಿ ವರ್ತಿಸತೊಡಗಿದರು ಮತ್ತು ತನ್ನ ಬಳಿ ಯಾರೂ ಬರದಂತೆ ತಡೆಯುತ್ತಿದ್ದರು. ನಂತರ ಆಕೆಯ ಕೈಕಾಲುಗಳನ್ನು ಕಟ್ಟಿ ಶಿಬಿರಕ್ಕೆ ಕರೆದೊಯ್ಯಲಾಯಿತು. "15 ದಿನಗಳಿಗೊಮ್ಮೆ ಚುಚ್ಚುಮದ್ದು ನೀಡುವಂತೆ [ಮನೋವೈದ್ಯರು] ನನಗೆ ಹೇಳಿದರು" ಎಂದು ಶಾಂತಿ ಹೇಳುತ್ತಾರೆ.

ಚುಚ್ಚುಮದ್ದು ಮತ್ತು ಔಷಧಿಗಳ ಜೊತೆಗೆ, ಶಿಬಿರದಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಅರುಣಾಗೆ ಕೌನ್ಸೆಲಿಂಗ್ ನೀಡಲಾಯಿತು. "ಕೆಲವು ವರ್ಷಗಳ ನಂತರ, ಚಿಕಿತ್ಸೆಯನ್ನು ಮುಂದುವರಿಸಲು, ನಾನು ಅವಳನ್ನು ಸೆಂಬಕ್ಕಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದೆ" ಎಂದು ಶಾಂತಿ ಹೇಳುತ್ತಾರೆ. ಮತ್ತೊಂದು ಸರ್ಕಾರೇತರ ಸಂಸ್ಥೆ (ಬನ್ಯಾನ್) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾಲಯವನ್ನು ನಡೆಸುತ್ತಿತ್ತು. "ಅರುಣಾ [ಈಗ] ಬಹಳ ಆರೋಗ್ಯವಾಗಿದ್ದಾಳೆ" ಎಂದು ಶಾಂತಿ ಹೇಳುತ್ತಾರೆ. "ಅವಳು ಈಗ ಚೆನ್ನಾಗಿ ಮಾತನಾಡುತ್ತಾಳೆ."

ಕೊಂಡಂಗಿ ಗ್ರಾಮದ ಕೇಂದ್ರವು ಅರುಣಾರ ಮನೆಯಿಂದ ಕೆಲವು ಗಜಗಳಷ್ಟು ದೂರದಲ್ಲಿದೆ. ಪ್ರಬಲ ಜಾತಿಗಳ ಕುಟುಂಬಗಳು - ನಾಯ್ಡು ಮತ್ತು ನಾಯ್ಕರ್ - ಇಲ್ಲಿ ವಾಸಿಸುತ್ತವೆ. ಶಾಂತಿಯವರೂ ನಾಯ್ಡು ಸಮುದಾಯಕ್ಕೆ ಸೇರಿದವರು. "ಅರುಣಾ ಅವರ ಜಾತಿಗೆ [ಪರಿಶಿಷ್ಟ ಜಾತಿ] ಸೇರಿದವಳಾದ ಕಾರಣ ಅವರು ಅವಳನ್ನು [ದಲಿತ ಕಾಲನಿಯಲ್ಲಿ] ಸಹಿಸಿಕೊಂಡರು" ಎನ್ನುವುದು ಶಾಂತಿಯವರ ನಂಬಿಕೆ. ಕಾಲೋನಿಯ ನಿವಾಸಿಗಳು ನಾಯ್ಡು-ನಾಯ್ಕರ್ ಜನರಿರುವ ಬೀದಿಗಳಿಗೆ ಬರುವುದಿಲ್ಲ ಎಂದು ಅವರು ವಿವರಿಸುತ್ತಾರೆ. "ಅರುಣಾ ಇಲ್ಲಿಗೆ ಬಂದಿದ್ದರೆ, ಅದು ಜಗಳಗಳಿಗೆ ಕಾರಣವಾಗುತ್ತಿತ್ತು."

ಚಿಕಿತ್ಸೆಯ ನಾಲ್ಕು ವರ್ಷಗಳ ನಂತರ ಅರುಣಾರಿಗೆ ಮದುವೆ ಮಾಡಿಸಲಾಯಿತು. ಆದರೆ ಅವರು ಗರ್ಭಿಣಿಯಾಗುತ್ತಿದ್ದಂತೆ ಗಂಡ ಅವರನ್ನು ತೊರೆದು ಹೋದ. ನಂತರ ಆಕೆ ತನ್ನ ತವರಿಗೆ ಮರಳಿದರು. ಈಗ ತನ್ನ ಮತ್ತು ಅಣ್ಣನೊಡನೆ ಬದುಕುತ್ತಿದ್ದಾರೆ. ಮದುವೆಯಾಗಿ ಪ್ರಸ್ತುತ ಚೆನೈಯಲ್ಲಿರುವ ಅವರ ಅಕ್ಕ ಅರುಣಾರ ಮಗುವನ್ನು ನೋಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಮತ್ತು ಅರುಣಾ ಔಷಧ ಬಳಸುತ್ತಾ ತನ್ನ ಕಾಯಿಲೆಯನ್ನು ಸಂಬಾಳಿಸುತ್ತಿದ್ದಾರೆ.

ತನ್ನ ಆರೋಗ್ಯ ಗುಣಪಡಿಸಿದ ಶಾಂತಿಯಕ್ಕನಿಗೆ ತಾನು ಋಣಿ ಎನ್ನುತ್ತಾರೆ ಅರುಣಾ.

Shanthi akka sitting outside her home in Kondangi. With her earnings from doing health work in the community, she was able to build a small one-room house. She was the only person in her family with a steady income until recently
PHOTO • M. Palani Kumar

ಶಾಂತಿ ಅಕ್ಕ ಕೊಂಡಂಗಿಯಲ್ಲಿರುವ ತನ್ನ ಮನೆಯ ಹೊರಗೆ ಕುಳಿತಿದ್ದಾರೆ. ಸಮುದಾಯದ ನಡುವೆ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುವುದರಿಂದ ಬಂದ ಸಂಪಾದನೆಯಿಂದ, ಅವರು ಒಂದು ಕೋಣೆಯ ಸಣ್ಣ ಮನೆಯನ್ನು ನಿರ್ಮಿಸಲು ಸಾಧ್ಯವಾಯಿತು. ಅವರು ಇತ್ತೀಚಿನವರೆಗೂ ತನ್ನ ಕುಟುಂಬದಲ್ಲಿ ಸ್ಥಿರವಾದ ಆದಾಯವನ್ನು ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದರು

A list of villages in Tamil Nadu's Chengalpattu taluk that Shanthi would visit to identify people suffering from schizophrenia
PHOTO • M. Palani Kumar
A list of villages in Tamil Nadu's Chengalpattu taluk that Shanthi would visit to identify people suffering from schizophrenia
PHOTO • M. Palani Kumar

ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಜನರನ್ನು ಗುರುತಿಸಲು ಶಾಂತಿ ಭೇಟಿ ನೀಡುವ ತಮಿಳುನಾಡಿನ ಚೆಂಗಲ್‌ಪಟ್ಟು ತಾಲ್ಲೂಕಿನ ಗ್ರಾಮಗಳ ಪಟ್ಟಿ

*****

ಶಾಂತಿ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಕೈಯಲ್ಲಿ ಊಟದ ಡಬ್ಬಿ ಹಿಡಿದು ತಾಲ್ಲೂಕಿನ ಸಮೀಕ್ಷೆಗಾಗಿ ಗ್ರಾಮಗಳು ಮತ್ತು ಕುಗ್ರಾಮಗಳ ಪಟ್ಟಿಯನ್ನು ಹೊತ್ತು ಮನೆಯಿಂದ ಹೊರಡುತ್ತಿದ್ದರು. ಅವರು 15 ಕಿಲೋಮೀಟರ್‌ ದೂರವನ್ನು ಒಂದು ಗಂಟೆಯ ನಡಿಗೆಯ ಮೂಲಕ ಕ್ರಮಿಸಿ ಮಧುರಂತಕಂನ ಬಸ್‌ ನಿಲ್ದಾಣವನ್ನು ತಲುಪುತ್ತಿದ್ದರು. “ನಮಗೆ ಇನ್ನೊಂದೆಡೆಗೆ ಹೋಗಲು ಸಾರಿಗೆ ಸಂಪರ್ಕ ಸಿಗುವ ಸ್ಥಳವಿದು” ಎನ್ನುತ್ತಾರವರು

ತಾಲ್ಲೂಕಿನಾದ್ಯಂತ ಸಂಚರಿಸಿ ಮಾನಸಿಕ ಆರೋಗ್ಯ ಸಂಬಂದಿ ರೋಗಿಗಳನ್ನು ಗುರುತಿಸುವುದು ಮತ್ತು ಅವರಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಹಾಯ ಮಾಡುವುದು ಅವರ ಕೆಲಸವಾಗಿತ್ತು.

"ನಾವು ಮೊದಲು ಸುಲಭವಾಗಿ ತಲುಪಬಹುದಾದ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೆವು ಮತ್ತು ನಂತರ ದೂರದ ಸ್ಥಳಗಳಿಗೆ ಹೋಗುತ್ತಿದ್ದೆವು. ಆ ಪ್ರದೇಶಗಳಿಗೆ ಬಸ್ಸುಗಳು ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಕೆಲವೊಮ್ಮೆ ನಾವು ಬೆಳಿಗ್ಗೆ ಎಂಟರಿಂದ ಮಧ್ಯಾಹ್ನದವರೆಗೆ ಅಥವಾ ಮಧ್ಯಾಹ್ನ ಒಂದು ಗಂಟೆಯವರೆಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೆವು" ಎಂದು ಶಾಂತಿ ನೆನಪಿಸಿಕೊಳ್ಳುತ್ತಾರೆ.

ಶಾಂತಿ ಭಾನುವಾರ ಹೊರತುಪಡಿಸಿ ತಿಂಗಳಿಡೀ ಕೆಲಸ ಮಾಡುತ್ತಿದ್ದರು. ಸಮುದಾಯ ಆರೋಗ್ಯ ಕಾರ್ಯಕರ್ತರಾಗಿ ಅವರ ದಿನಗಳು ಮೂರು ದಶಕಗಳ ಕಾಲ ಹೀಗೇ ಇತ್ತು. ಅವರ ಕೆಲಸ ಅಷ್ಟಾಗಿ ಗುರುತಿಸಲ್ಪಡುವ ಕೆಲಸವಲ್ಲವಾದರೂ ಮಾನಸಿಕ ಸಮಸ್ಯೆಗಳಿಂದ ಬಳಲುವ ಜನರ ಸಂಖ್ಯೆಯನ್ನು ನೋಡಿದಾಗ ಅವರ ಕೆಲಸದ ಪ್ರಾಮುಖ್ಯತೆ ನಮಗೆ ಅರ್ಥವಾಗಬಹುದು. ಭಾರತದಲ್ಲಿ 10.6 ಶೇಕಡಾ ವಯಸ್ಕರ ಮೇಲೆ ಮಾನಸಿಕ ಕಾಯಿಲೆಗಳು ಪ್ರಭಾವ ಬೀರುತ್ತವೆ. ಮತ್ತು 13.7 ಶೇಕಡಾದಷ್ಟು ಜನರು ಬದುಕಿನ ಒಂದಲ್ಲ ಒಂದು ಹಂತದಲ್ಲಿ ಮಾನಸಿಕ ಸಮಸ್ಯೆಗಳಿಂದ ಬಳಲಿರುತ್ತಾರೆ. ಆದರೆ ಚಿಕಿತ್ಸೆಯ ಅಂತರ ಬಹಳ ದೊಡ್ಡದಿದೆ. ಅದು 83 ಶೇಕಾಡದಷ್ಟಿದೆ. ಕನಿಷ್ಟ  60 ಶೇಕಡಾ ಜನರಿಗೆ ಸ್ಕಿಜೋಫ್ರೇನಿಯಾಕ್ಕೆ ಅಗತ್ಯ ಕಾಳಜಿ ಸಿಗುವುದಿಲ್ಲ.

ಸಮುದಾಯ ಆರೋಗ್ಯ ಕಾರ್ಯಕರ್ತರಾಗಿ ಶಾಂತಿಯವರು ತಮ್ಮ ಪ್ರಯಾಣ ಆರಂಭಿಸಿದ್ದು 1986ರಲ್ಲಿ. ಆ ಸಮಯದಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಮಾನಸಿಕ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ವೃತ್ತಿಪರರ ಕೊರತೆಯಿತ್ತು.  ತರಬೇತಿ ಪಡೆದ ಕೆಲವರು ನಗರ ಪ್ರದೇಶಗಳಲ್ಲಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ನ್ಯಾಷನಲ್ ಮೆಂಟಲ್ ಹೆಲ್ತ್ ಪ್ರೋಗ್ರಾಂ ಯೋಜನೆಯನ್ನು ಜನರಿಗೆ "ಮಾನಸಿಕ ಆರೋಗ್ಯ ಸೌಲಭ್ಯದ ಕನಿಷ್ಟ ಲಭ್ಯತೆ ಮತ್ತು ಪ್ರವೇಶ"ವನ್ನು ಒದಗಿಸುವ ಗುರಿಯಿಟ್ಟುಕೊಂಡು ಆರಂಭಿಸಲಾಯಿತು. ವಿಶೇಷವಾಗಿ ಇದನ್ನು ದುರ್ಬಲ ಮತ್ತು ಅಶಕ್ತ ವರ್ಗಕ್ಕಾಗಿ ಆರಂಭಿಸಲಾಯಿತು.

ಶಾಂತಿಯವರು 1986ರಲ್ಲಿ ಶಾಂತಿಯವರು ಸಾಮಾಜಿಕ ಕಾರ್ಯಕರ್ತರಾಗಿ ರೆಡ್ ಕ್ರಾಸ್ ಸಂಸ್ಥೆಯನ್ನು ಸೇರಿಕೊಂಡರು. ಅವರು ಚೆಂಗಲ್ ಪಟ್ಟುವಿನ ತೀರಾ ಒಳ ಪ್ರದೇಶಗಳಿಗೆ ಭೇಟಿ ನೀಡತೊಡಗಿದರು. ಅವರು ಅಲ್ಲಿನ ದೈಹಿಕ ಅಶಕ್ತ ಜನರನ್ನು ಭೇಟಿಯಾಗಿ ಅವರ ಆ ಕ್ಷಣದ ಅಗತ್ಯಗಳನ್ನು ಸಂಸ್ಥೆಗೆ ವರದಿ ಮಾಡುತ್ತಿದ್ದರು.

A photograph from of a young Shanthi akka (wearing a white saree) performing Villu Paatu, a traditional form of musical storytelling, organised by Schizophrenia Research Foundation. She worked with SCARF for 30 years.
PHOTO • M. Palani Kumar
In the late 1980s in Chengalpattu , SCARF hosted performances to create awareness about mental health
PHOTO • M. Palani Kumar

ಎಡ: ಸ್ಕಿಜೋಫ್ರೇನಿಯಾ ರೀಸರ್ಚ್ ಫೌಂಡೇಷನ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಯುವತಿ ಶಾಂತಿಯಕ್ಕ (ಬಿಳಿ ಸೀರೆ ಉಟ್ಟಿರುವವರು) ಪಾರಂಪರಿಕ ಸಂಗೀತ ಗಾಯನದ ಮೂಲಕ ಕತೆ ಹೇಳುವ ಕಲೆ ವಿಲ್ಲು ಪಾಟು ಪ್ರದರ್ಶನ ನೀಡುತ್ತಿರುವುದು. ಅವರು 30 ವರ್ಷಗಳ ಕಾಲ ಸ್ಕಾರ್ಫ್ ಸಂಸ್ಥೆಗಾಗಿ ಕೆಲಸ ಮಾಡಿದ್ದಾರೆ. ಬಲ: ಎಂಬತ್ತರ ದಶಕದ ಕೊನೆಯಲ್ಲಿ ಚೆಂಗಲ್ ಪಟ್ಟುವಿನಲ್ಲಿ ಮಾನಸಿಕ ಆರೋಗ್ಯ ದ ಕುರಿತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿತ್ತು

1987ರಲ್ಲಿ ಶಾಂತಿಯವರನ್ನು ಸಂಪರ್ಕಿಸಿದ ಸಮಯದಲ್ಲಿ ಸ್ಕಾರ್ಫ್ ಸಂಸ್ಥೆಯು ಎನ್‌ಎಮ್ಎಚ್‌ಪಿ ಯೋಜನೆಯಡಿ ಕಾಂಚೀಪುರಂ ಜಿಲ್ಲೆಯ ತಿರುಪೊರೂರ್ ವಿಭಾಗದಲ್ಲಿ ಮಾನಸಿಕ ರೋಗಿಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸುತ್ತಿತ್ತು. ಇದು ಸಮುದಾಯ ಆಧಾರಿತ ಸ್ವಯಂಸೇವಕರ ಗುಂಪನ್ನು ರಚಿಸಲು ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು. "ಶಾಲಾ ಮಟ್ಟದ ಶಿಕ್ಷಣವನ್ನು ಪೂರ್ಣಗೊಳಿಸಿದ ಸಮುದಾಯದ ಜನರನ್ನು ಇದಕ್ಕಾಗಿ ನೇಮಿಸಿಕೊಳ್ಳಲಾಯಿತು ಮತ್ತು ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲು ಮತ್ತು ಹುಡುಕಲು ಮತ್ತು ಅವರನ್ನು ಆಸ್ಪತ್ರೆಗಳಿಗೆ ಶಿಫಾರಸು ಮಾಡುವಲ್ಲಿ ತರಬೇತಿಯನ್ನು ನೀಡಲಾಯಿತು" ಎಂದು ಸಂಸ್ಥೆಗೆ 1987ರಲ್ಲಿ ಸೇರ್ಪಡೆಗೊಂಡಿರುವ SCARF ನ ನಿರ್ದೇಶಕಿ ಡಾ. ಆರ್. ಪದ್ಮಾವತಿ ಹೇಳುತ್ತಾರೆ.

ಶಾಂತಿ ಈ ಶಿಬಿರದಲ್ಲಿ ಮಾನಸಿಕ ಸಮಸ್ಯೆಗಳಲ್ಲಿನ ವ್ಯತ್ಯಾಸ ಮತ್ತು ಅವುಗಳನ್ನು ಗುರುತಿಸುವ ಬಗೆಯನ್ನು ಕಲಿತರು. ಅಲ್ಲದೆ ಅವರು ಮಾನಸಿಕ ಆರೋಗ್ಯ ಸಂಬಂದಿ ಸಮಸ್ಯೆಗಳನ್ನು ಹೊಂದಿರುವವರನ್ನು ಆಸ್ಪತ್ರೆಗೆ ತೆರಳಲು ಪ್ರೋತ್ಸಾಹಿಸುವುದನ್ನೂ ಕಲಿತರು. ಅವರ ಮೊದಲ ತಿಂಗಳ ಸಂಬಳ 25 ರೂಪಾಯಿಗಳು. ಮಾನಸಿಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವವರನ್ನು ಆಸ್ಪತ್ರೆಗೆ ಕರೆದು ತರುವುದು ತನ್ನ ಕೆಲಸವಾಗಿತ್ತು ಎಂದು ಅವರು ಹೇಳುತ್ತಾರೆ. "ನನ್ನನ್ನು ಮತ್ತು ಇನ್ನೊಬ್ಬರನ್ನು ಮೂರು ಪಂಚಾಯತಿಗಳಿಗೆ ನೇಮಿಸಲಾಗಿತ್ತು." ಹಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅವರ ಆದಾಯ ಹೆಚ್ಚುತ್ತಾ, ಅವರು ಸ್ಕಾರ್ಫ್ ಸಂಸ್ಥೆಯ ವೃತ್ತಿಯಿಂದ 2022ರಲ್ಲಿ ನಿವೃತ್ತಿ ಹೊಂದುವಾಗ 10,000 ರೂಪಾಯಿ (ಪ್ರಾವಿಡೆಂಟ್ ಫಂಡ್ ಕಡಿತದ ನಂತರ) ಗಳಿಸುತ್ತಿದ್ದರು.

ಅವರ ಸಂಬಳ ಅವರ ಅತಂತ್ರ ಬದುಕಿಗೆ ಒಂದು ನಿಶ್ಚಿತ ಆದಾಯವನ್ನು ತಂದುಕೊಡುತ್ತಿತ್ತು. ಅವರ ಪತಿ ಮದ್ಯವ್ಯಸನಿಯಾಗಿದ್ದರು. ಅವರು ಮನೆಯ ಖರ್ಚುಗಳನ್ನು ನೋಡಿಕೊಳ್ಳಲು ಹಣ ನೀಡುತ್ತಿದ್ದುದು ಅಪರೂಪ. ಶಾಂತಿಯವರ 37 ವರ್ಷದ ಮಗ ಎಲೆಕ್ಟ್ರಿಷಿಯನ್ ಆಗಿ ದುಡಿಯುತ್ತಾರೆ. ಅವರು ದಿನವೊಂದಕ್ಕೆ 700 ರೂಪಾಯಿಗಳನ್ನು ದುಡಿಯುತ್ತಾರಾದರೂ ಅವರಿಗೆ ತಿಂಗಳಲ್ಲಿ ಹತ್ತಕ್ಕಿಂತ ಹೆಚ್ಚು ಕೆಲಸ ಸಿಗುವುದಿಲ್ಲ. ಅದು ಅವರ ಮಗಳು ಮತ್ತು ಪತ್ನಿಯನ್ನು ನೋಡಿಕೊಳ್ಳಲು ಸಾಲುವುದಿಲ್ಲ. ಶಾಂತಿಯವರ ತಾಯಿಯೂ ಅವರೊಡನೆ ಇರುತ್ತಾರೆ. 2022ರಲ್ಲಿ ಸ್ಕಾರ್ಫ್ ಸಂಸ್ಥೆ ತನ್ನ ಸ್ಕಿಜೋಫ್ರೇನಿಯಾ ಕಾರ್ಯಕ್ರಮ ಕೊನೆಗೊಳಿಸಿದ ನಂತರ ಶಾಂತಿಯವರು ತಂಜಾವೂರು ಗೊಂಬೆಗಳನ್ನು ತಯಾರಿಸತೊಡಗಿದರು. ಇದರಲ್ಲಿ 50 ಗೊಂಬೆಗಳನ್ನು ತಯಾರಿಸಿದರೆ 3,000 ರೂಪಾಯಿ ಸಿಗುತ್ತದೆ.

30 ವರ್ಷಗಳ ಕಾಲ ಸಮುದಾಯದ ನಡುವೆ ಕೆಲಸ ಮಾಡಿದ ಶಾಂತಿಯವರು ದಣಿದಿಲ್ಲ, ಬೇಸರಗೊಂಡಿಲ್ಲ. ಅವರ ಸರ್ಕಾರೇತರ ಸಂಸ್ಥೆಯ ಸೇವೆಯ ಕೊನೆಯ ಐದು ವರ್ಷಗಳಲ್ಲಿ  ಶಾಂತಿಯವರು ಚೆಂಗಲ್ ಪಟ್ಟುವಿನ ಕನಿಷ್ಟ 180 ಗ್ರಾಮಗಳು ಮತ್ತು ಕುಗ್ರಾಮಗಳಿಗೆ ಭೇಟಿ ನೀಡಿದ್ದಾರೆ. "ನನಗೆ ವಯಸ್ಸಾಗಿತ್ತು ಆದರೆ ಈ ಕೆಲಸ ಮಾಡುವುದನ್ನು ಮುಂದುವರೆಸಿದ್ದೆ. ನನಗೆ ಬಹಳ ಹಣ ಸಿಗುತ್ತಿರಲಿಲ್ಲವಾದರೂ ಸಿಕ್ಕ ಹಣದಲ್ಲಿ ಬದುಕು ಸಂಬಾಳಿಸುತ್ತಿದ್ದೆ. ನನ್ನ ಮನಸಿಗೆ ನಾನು ಮಾಡಿದ ಕೆಲಸದ ಕುರಿತು ತೃಪ್ತಿಯಿದೆ. ಇದರಿಂದ ಗೌರವ ದೊರಕಿದೆ.

*****

ಸೆಲ್ವಿ ಇ. (49) ಶಾಂತಿಯವರೊಡನೆ ಚೆಂಗಲ್ ಪಟ್ಟುವಿನ ಎಲ್ಲ ಕಡೆ ಸ್ಕಿಜೋಫ್ರೇನಿಯಾ ಸಮಸ್ಯೆ ಇರುವವರನ್ನು ಹುಡುಕುತ್ತಾ ತಿರುಗಾಡಿದ್ದಾರೆ. 2017ರಿಂದ 2022ರ ನಡುವೆ ಸೆಲ್ವಿ 117 ಗ್ರಾಮಗಳನ್ನು ಸುತ್ತಿದ್ದಾರೆ. ಇವುಗಳಲ್ಲಿ ಮೂರು ಜಿಲ್ಲಾ ವಿಭಾಗಗಳಲ್ಲಿ - ಉತ್ತಿರಮೆರೂರ್, ಕಟ್ಟನ್‌ಕೊಲತ್ತೂರ್ ಮದುರಾಂತಕಮ್ - ಸುಮಾರು ಐನೂರಕ್ಕೂ ಹೆಚ್ಚು ಜನರಿಗೆ ವೈದ್ಯಕೀಯ ನೆರವು ಪಡೆಯಲು ಸಹಾಯವನ್ನು ಒದಗಿಸಿದ್ದಾರೆ. ಅವರು 25 ವರ್ಷಗಳಿಂದ ಸ್ಕಾರ್ಫ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರು ಈಗ ಮತ್ತೊಂದು ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಅದರಡಿ ಬುದ್ಧಿಮಾಂದ್ಯತೆ ಹೊಂದಿರುವ ರೋಗಿಗಳನ್ನು ಗುರುತಿಸುತ್ತಿದ್ದಾರೆ.

ಸೆಲ್ವಿಯವರು ಚೆಂಗಲ ಪಟ್ಟುವಿನ ಚೆಂಬಾಕ್ಕಮ್ ಎನ್ನುವ ಊರಿನಲ್ಲಿ ಜನಿಸಿದರು. ಶಾಲೆಯ ಓದು ಮುಗಿಸಿ ಅವರು ಸಮುದಾಯ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡತೊಡಗಿದರು. ಅವರು ಸೆಂಗುಂತರ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಮುಖ್ಯ ಉದ್ಯೋಗ ನೇಕಾರಿಕೆ. ತಮಿಳುನಾಡಿನಲ್ಲಿ ಈ ಸಮುದಾಯವನ್ನು ಇತರೇ ಹಿಂದುಳಿದ ವರ್ಗಗಳಡಿ ಗುರುತಿಸಲಾಗಿದೆ. "ನಾನು ಹತ್ತನೇ ತರಗತಿಯ ನಂತರ ಓದಲಿಲ್ಲ" ಎನ್ನುತ್ತಾರವರು. ಕಾಲೇಜಿಗೆ ಹೋಗಬೇಕೆಂದರೆ ತಿರುಪೊರೂರಿಗೆ ಹೋಗಬೇಕಿತ್ತು. ಇದು ನಮ್ಮ ಮನೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ನನಗೆ ಓದುವ ಬಯಕೆಯಿತ್ತಾದರೂ ದೂರದ ಕಾರಣಕ್ಕಾಗಿ ಮನೆಯಲ್ಲಿ ಒಪ್ಪಿಗೆ ಕೊಡಲಿಲ್ಲ" ಎನ್ನುತ್ತಾರೆ ಸೆಲ್ವಿ.

Selvi E. in her half-constructed house in Sembakkam village. She has travelled all over Chengalpattu taluk for more than 25 years, often with Shanthi, to help mentally ill people
PHOTO • M. Palani Kumar

ಸೆಂಬಕ್ಕಂ ಗ್ರಾಮದಲ್ಲಿ ಅರ್ಧ ನಿರ್ಮಾಣವಾಗಿರುವ ತನ್ನ ಮನೆಯಲ್ಲಿ ಸೆಲ್ವಿ ಇ. ಅವರು ಮಾನಸಿಕ ಸಂಬಂಧಿ ಸಮಸ್ಯೆ ಹೊಂದಿರುವ ಜನರಿಗೆ ಸಹಾಯ ಮಾಡಲು ಶಾಂತಿಯವರೊಡನೆ 25 ವರ್ಷಗಳಿಗೂ ಹೆಚ್ಚು ಕಾಲ ಚೆಂಗಲ್ ಪಟ್ಟು ತಾಲೂಕಿನಾದ್ಯಂತ ಪ್ರಯಾಣಿಸಿದ್ದಾರೆ

ತನ್ನ 26ನೇ ವಯಸ್ಸಿನಲ್ಲಿ ಮದುವೆಯಾದ ಸೆಲ್ವಿ ಮದುವೆಯ ನಂತರ ಮನೆಯ ಏಕೈಕ ದುಡಿಮೆದಾರರಾದರು. ಎಲೆಕ್ಟ್ರಿಷಿಯನ್ ಆಗಿದ್ದ ಅವರ ಪತಿಯ ಆದಾಯವನ್ನು ನಂಬುವಂತಿರಲಿಲ್ಲ. ಹೀಗಾಗಿ ಸಿಗುತ್ತಿದ್ದ ಸಣ್ಣ ಸಂಬಳದಲ್ಲಿಯೇ ಅವರು ಮನೆ ನಡೆಸುವುದಲ್ಲದೆ ಇಬ್ಬರು ಮಕ್ಕಳ ಓದನ್ನೂ ನೋಡಿಕೊಳ್ಳಬೇಕಾಯಿತು. ಅವರ 22 ವರ್ಷದ ಹಿರಿಯ ಮಗ ಆರು ತಿಂಗಳ ಹಿಂದೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಮ್.ಎಸ್‌ಸಿ ಮುಗಿಸಿದ್ದಾರೆ. 20 ವರ್ಷದ ಕಿರಿಯ ಮಗ ಚೆಂಗಲ್ ಪಟ್ಟುವಿನ ಸರಕಾರಿ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಹಳ್ಳಿಗಳಿಗೆ ಹೋಗಿ ಸ್ಕಿಜೋಫ್ರೇನಿಯಾ ರೋಗಿಗಳನ್ನು ಚಿಕಿತ್ಸೆ ಪಡೆಯಲು ಪ್ರೇರೇಪಿಸುವ ಮೊದಲು, ಸೆಲ್ವಿ ರೋಗಿಗಳಿಗೆ ಸಲಹೆ ನೀಡುತ್ತಿದ್ದರು. ಅವರು ಇದನ್ನು 10 ರೋಗಿಗಳಿಗೆ ಮೂರು ವರ್ಷಗಳ ಕಾಲ ಮಾಡಿದಳು. "ನಾನು ವಾರಕ್ಕೊಮ್ಮೆ ಅವರನ್ನು ಭೇಟಿ ಮಾಡಬೇಕಾಗಿತ್ತು" ಎಂದು ಅವರು ಹೇಳುತ್ತಾರೆ. "ಈ ಅವಧಿಗಳಲ್ಲಿ, ನಾವು ಚಿಕಿತ್ಸೆ, ಅನುಸರಣೆಗಳು, ಆಹಾರ ಮತ್ತು ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದೆವು."

ಆರಂಭದಲ್ಲಿ ಸೆಲ್ವಿ ಸಮುದಾಯದಿಂದ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. "ಸಮಸ್ಯೆಯಿದೆಯೆಂದು ಅವರು ಒಪ್ಪಿಕೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ. "ನಾವು ಅವರಿಗೆ ಇದು ಅನಾರೋಗ್ಯ ಮತ್ತು ಇದಕ್ಕೆ ಚಿಕಿತ್ಸೆ ನೀಡಬಹುದು ಎಂದು ಹೇಳುತ್ತಿದ್ದೆವು. ಆಗ ರೋಗಿಗಳ ಕುಟುಂಬಗಳು ಕೋಪಗೊಳ್ಳುತ್ತಿದ್ದವು. ಕೆಲವರು ಅನಾರೋಗ್ಯ ಹೊಂದಿರುವ ಸಂಬಂಧಿಗಳನ್ನು ಆಸ್ಪತ್ರೆಗಳಿಗಿಂತ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯಲು ಆದ್ಯತೆ ನೀಡುತ್ತಿದ್ದರು. ವೈದ್ಯಕೀಯ ಶಿಬಿರಕ್ಕೆ ಬರುವಂತೆ ಮನವೊಲಿಸಲು ಅವರ ಮನೆಗೆ ಹಲವಾರು ಬಾರಿ ಭೇಟಿ ನೀಡಿ ಸಾಕಷ್ಟು ಪ್ರಯತ್ನ ಪಡಬೇಕಾಗುತ್ತಿತ್ತು. ರೋಗಿಗೆ ಪ್ರಯಾಣಿಸಲು ಕಷ್ಟವಾದಾಗ, ವೈದ್ಯರು ಅವರ ಮನೆಗೆ ಭೇಟಿ ನೀಡುತ್ತಿದ್ದರು."

ಈ ಸಮಸ್ಯೆಯನ್ನು ಎದುರಿಸಲು ಸೆಲ್ವಿ ತನ್ನದೇ ಆದ ತಂತ್ರವನ್ನು ರೂಪಿಸಿದರು. ಅವಳು ಹಳ್ಳಿಯ ಪ್ರತಿ ಮನೆಗೆ ಭೇಟಿ ನೀಡುತ್ತಿದ್ದರು. ಜೊತೆಗೆ ಊರಿನ ಚಹಾ ಅಂಗಡಿಗೂ ಹೋಗುತ್ತಿದ್ದರು - ಅಲ್ಲಿ ಜನರು ಸೇರುತ್ತಾರೆ - ಇದಲ್ಲದೆ ಶಾಲಾ ಶಿಕ್ಷಕರು ಮತ್ತು ಪಂಚಾಯತ್ ನಾಯಕರೊಂದಿಗೆ ಸಹ ಮಾತನಾಡುತ್ತಿದ್ದರು. ಅವರು ಸೆಲ್ವಿಯವರ ಮುಖ್ಯ ಸಂಪರ್ಕ ವ್ಯಕ್ತಿಗಳಾದರು. ಸೆಲ್ವಿಯವರು ಈ ಜನರಿಗೆ ಸ್ಕಿಜೋಫ್ರೇನಿಯಾದ ಲಕ್ಷಣಗಳನ್ನು ವಿವರಿಸಿ, ವೈದ್ಯಕೀಯ ಆರೈಕೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಸಹ ವಿವರಿಸುತ್ತಿದ್ದರು ಮತ್ತು ಅವರ ಹಳ್ಳಿಯಲ್ಲಿನ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಮಾಹಿತಿ ನೀಡುವಂತೆ ಅವರನ್ನು ವಿನಂತಿಸುತ್ತಿದ್ದರು. "ಕೆಲವರು ಹಿಂಜರಿದರು, ಆದರೆ ಕೆಲವರು ನಮಗೆ ಹೇಳಿದರು ಅಥವಾ ರೋಗಿಯ ಮನೆ ತೋರಿಸಿದರು" ಎಂದು ಸೆಲ್ವಿ ಹೇಳುತ್ತಾರೆ. "ಹಲವರಿಗೆ ನಿರ್ದಿಷ್ಟ ಸಮಸ್ಯೆ ತಿಳಿದಿರುತ್ತಿರಲಿಲ್ಲ. ಒಬ್ಬ ವ್ಯಕ್ತಿಯು ಅನುಮಾನಾಸ್ಪದನಾಗಿ ವರ್ತಿಸುತ್ತಿದ್ದಾರೆ ಎಂದು ಅವರು ನಮಗೆ ಹೇಳುತ್ತಾರೆ ಅಥವಾ ಕೆಲವರು ದೀರ್ಘಕಾಲದ ನಿದ್ರಾಹೀನತೆಯ ಬಗ್ಗೆ ಮಾತನಾಡುತ್ತಾರೆ” ಎಂದು ಅವರು ಹೇಳುತ್ತಾರೆ.

ಸಗೋತ್ರ ವಿವಾಹವನ್ನು ಕಟ್ಟುನಿಟ್ಟಾಗಿ ಅಭ್ಯಾಸ ಮಾಡುವ ಮತ್ತು ರಕ್ತಸಂಬಂಧದ ವಿವಾಹಗಳು ಸಾಮಾನ್ಯವಾಗಿರುವ ನಿಕಟ ಸಮುದಾಯದಲ್ಲಿ ಬೆಳೆದ ಸೆಲ್ವಿ ಹಲವಾರು ಮಕ್ಕಳು ಅರಿವಿನ ಅಸಾಮರ್ಥ್ಯಗಳೊಂದಿಗೆ ಜನಿಸುವುದನ್ನು ನೋಡಿದ್ದಾರೆ. ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಮತ್ತು ಅರಿವಿನ ಅಸಾಮರ್ಥ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಇದು ಅವರಿಗೆ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ, ಇದು ಅವರ ಕೆಲಸಕ್ಕೆ ಅಗತ್ಯವಾದ ನಿರ್ಣಾಯಕ ಕೌಶಲವಾಗಿದೆ.

ಸೆಲ್ವಿಯವರ ಮುಖ್ಯ ಕರ್ತವ್ಯವೆಂದರೆ ರೋಗಿಯ ಮನೆ ಬಾಗಿಲಿಗೆ ಔಷಧ ತಲುಪಿದೆಯೆನ್ನುವುದನ್ನು ಖಚಿತಪಡಿಸಿಕೊಳ್ಳುವುದು. ಭಾರತದಲ್ಲಿನ ಬಹುತೇಕ ಮಾನಸಿಕ ಆರೋಗ್ಯ ಸಂಬಂಧಿ ಕಾಯಿಲೆ ಹೊಂದಿರುವ ರೋಗಿಗಳು ತಮ್ಮ ಕಿಸೆಯಿಂದಲೇ ಆರೋಗ್ಯ ಸೇವೆ ಮತ್ತು ಔಷಧಿ ವೆಚ್ಚವನ್ನು ಭರಿಸುತ್ತಾರೆ. ಶೇಕಡಾ 40 ರಷ್ಟು ಜನರು ನ್ಯಾಷನಲ್ ಮೆಂಟಲ್ ಹೆಲ್ತ್ ಪ್ರೋಗ್ರಾಂ ಅಡಿಯಲ್ಲಿ ನೀಡಲಾಗುವ ಸೇವೆಯನ್ನು ಪಡೆಯಲು 10 ಕಿಲೋಮೀಟರುಗಳಿಗಿಂತಲೂ ದೂರ ಪ್ರಯಾಣ ಮಾಡುತ್ತಾರೆ. ದೂರ ಪ್ರದೇಶದ ಜನರಿಗೆ ಔಷಧ ಸೇವೆಗಳನ್ನು ನಿರಂತರವಾಗಿ ಪಡೆಯವುದು ಕಷ್ಟವಾಗುತ್ತದೆ. ಇನ್ನೊಂದು ಸಮಸ್ಯೆ ಎಂದರೆ ಸಮಾಜ ಇವರನ್ನು ಕಳಂಕಿತರಂತೆ ನೋಡುವುದು. ಏಕೆಂದರೆ ಇವರು ತಮ್ಮ ರೋಗಲಕ್ಷಣಗಳ ಜೊತೆ ಹೋರಾಡುತ್ತಾ ಸಮಾಜದ ನಿರೀಕ್ಷೆಯಂತೆ ಬದುಕುವಲ್ಲಿ ಸೋಲುತ್ತಾರೆ.

Selvi with a 28-year-old schizophrenia patient in Sembakkam whom she had counselled for treatment. Due to fear of ostracisation, this patient’s family had refused to continue medical care for her.
PHOTO • M. Palani Kumar
Another patient whom Selvi helped
PHOTO • M. Palani Kumar

ಎಡ: ಸೆಂಬಾಕ್ಕಮ್‌ನಲ್ಲಿ ತಾನು ಚಿಕಿತ್ಸೆಗೆ ಸಲಹೆ ನೀಡಿದ 28 ವರ್ಷದ ಸ್ಕಿಜೋಫ್ರೇನಿಯಾ ರೋಗಿಯೊಂದಿಗೆ ಸೆಲ್ವಿ. ಬಹಿಷ್ಕಾರದ ಭಯದಿಂದಾಗಿ, ಈ ರೋಗಿಯ ಕುಟುಂಬವು ಅವರಿಗೆ ವೈದ್ಯಕೀಯ ಆರೈಕೆಯನ್ನು ಮುಂದುವರಿಸಲು ನಿರಾಕರಿಸಿತು. ಬಲ: ಸೆಲ್ವಿ ಸಹಾಯ ಒದಗಿಸಿದ ಇನ್ನೊಬ್ಬ ರೋಗಿ

"ಇತ್ತೀಚಿನ ದಿನಗಳಲ್ಲಿ ಟಿವಿ ವೀಕ್ಷಣೆಯ ಕಾರಣ ಒಂದಷ್ಟು ಬದಲಾವಣೆ ಕಂಡುಬಂದಿದೆ" ಎನ್ನುತ್ತಾರೆ ಸೆಲ್ವಿ. "ಈಗ ಜನರು ಮೊದಲಿನಷ್ಟು ಹೆದರುವುದಿಲ್ಲ. ಬಿಪಿ , ಶುಗರ್ (ರಕ್ತದೊತ್ತಡ ಸಮಸ್ಯೆಗಳು ಮತ್ತು ಮಧುಮೇಹ) ಕಾಯಿಲೆಗೆ ಚಿಕಿತ್ಸೆ ನೀಡುವುದು ಸುಲಭವಾಗಿದೆ. ಇದರ ಹೊರತಾಗಿಯೂ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ನಾವು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಕುಟುಂಬದವರು ಸಿಟ್ಟಾಗುತ್ತಾರೆ.  'ಇಲ್ಲಿಗೆ ಯಾಕೆ ಬಂದಿದ್ದೀರಿ? ಇಲ್ಲಿ ಹುಚ್ಚು ಹಿಡಿದವರಿದ್ದಾರೆ ಎಂದು ನಿಮಗೆ ಯಾರು ಹೇಳಿದ್ದು...' ಎನ್ನುತ್ತಾ ನಮ್ಮೊಡನೆ ಜಗಳಕ್ಕೆ ಬರುತ್ತಾರೆ.

*****

ಚೆಂಗಲ್ ಪಟ್ಟು ತಾಲೂಕಿನ ಮನಮತಿ ಗ್ರಾಮದ 44 ವರ್ಷದ ಸಮುದಾಯ ಆರೋಗ್ಯ ಕಾರ್ಯಕರ್ತರಾದ ಡಿ.ಲಿಲಿ ಪುಷ್ಪಮ್ ಅವರು ಮಾನಸಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ತಪ್ಪು ಕಲ್ಪನೆಗಳ ಬಗೆಗಿನ ಸೆಲ್ವಿಯವರ ಅಭಿಪ್ರಾಯವನ್ನು ಒಪ್ಪುತ್ತಾರೆ. “ಹಲವು ಅನುಮಾನಗಳಿವೆ. ಮನೋವೈದ್ಯರು ರೋಗಿಗಳನ್ನು ಅಪಹರಿಸಿ ಚಿತ್ರಹಿಂಸೆ ನೀಡುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಚಿಕಿತ್ಸೆಗೆ ಬಂದರೂ ಭಯಪಡುತ್ತಾರೆ. ಲಿಲಿ ಹೇಳುತ್ತಾರೆ. “ನಾವು ಅವರಿಗೆ ನಮ್ಮ ಗುರುತಿನ ಚೀಟಿಯನ್ನು ತೋರಿಸುತ್ತೇವೆ, ನಾವು ಆಸ್ಪತ್ರೆಯಿಂದ ಬಂದಿದ್ದೇವೆ ಎಂದು ವಿವರಿಸುತ್ತೇವೆ. ಅದರ ನಂತರವೂ ಅವರು ನಮ್ಮನ್ನು ಅನುಮಾನಾಸ್ಪದವಾಗಿ ನೋಡುತ್ತಾರೆ. ನಾವು ಬಹಳ ಕಷ್ಟಪಡುತ್ತೇವೆ.”

ಲಿಲಿಯವರು ಹುಟ್ಟಿ ಬೆಳೆದದ್ದು ಮನಮತಿಯ ದಲಿತ ಕಾಲೋನಿಯಲ್ಲಿ. ಇದು ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಅವರನ್ನು ಸೂಕ್ಷ್ಮವಾಗಿರುವಂತೆ ಮಾಡಿದೆ. ತನ್ನ ಜಾತಿಯ ಕಾರಣಕ್ಕೆ ಆಗಾಗ ಅವರು ನೋವಿನ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಇದೇ ಕಾರಣದಿಂದಾಗಿ ಅವರು ಯಾರಾದರೂ ಕೇಳಿದಾದ ತನ್ನ ಮನೆಯ ಸ್ಥಳವನ್ನು ಬಹಿರಂಗಪಡಿಸುವುದಿಲ್ಲ. "ಹಾಗೆ ನನ್ನ ಮನೆಯ ವಿಳಾಸ ಹೇಳಿದರೆ ಅವರಿಗೆ ನನ್ನ ಜಾತಿ ತಿಳಿಯುತ್ತದೆ. ಜಾತಿ ತಿಳಿದರೆ ಅವರು ನನ್ನನ್ನು ನಡೆಸಿಕೊಳ್ಳುವ ರೀತಿ ಬದಲಾಗಬಹುದೆಂದು ಭಯವಾಗುತ್ತದೆ" ಎಂದು ಅವರು ಹೇಳುತ್ತಾರೆ. ಲಿಲಿಯವರು ದಲಿತ ಕ್ರಿಶ್ಚಿಯನ್ ಆಗಿದ್ದರೂ ಅವರು ತನ್ನನ್ನು ಕ್ರಿಶ್ಚಿಯನ್ ಎಂದಷ್ಟೇ ಗುರುತಿಸಿಕೊಳ್ಳುತ್ತಾರೆ.

ಸಮುದಾಯ ಆರೋಗ್ಯ ಕಾರ್ಯಕರ್ತರನ್ನು ಸ್ವೀಕರಿಸುವ ವಿಧಾನವು ಹಳ್ಳಿಯಿಂದ ಹಳ್ಳಿಗೆ ಭಿನ್ನವಾಗಿರುತ್ತದೆ ಎಂದು ಲಿಲಿ ವಿವರಿಸುತ್ತಾರೆ. "ಶ್ರೀಮಂತರು, ಮೇಲ್ಜಾತಿಯವರು ವಾಸಿಸುವ ಕೆಲವು ಸ್ಥಳಗಳಲ್ಲಿ, ಅವರು ನಮಗೆ ಕುಡಿಯಲು ನೀರನ್ನು ಸಹ ನೀಡುವುದಿಲ್ಲ" ಎಂದು ಅವರು ಹೇಳುತ್ತಾರೆ. “ಕೆಲವೊಮ್ಮೆ ನಾವು ತುಂಬಾ ದಣಿದಿರುತ್ತೇವೆ, ಒಮ್ಮೆ ಒಂದು ಸ್ಥಳದಲ್ಲಿ ಕುಳಿತು ಊಟ ಮಾಡಬೇಕಿತ್ತು, ಆದರೆ ಅವರು ನಮ್ಮನ್ನು ಬಿಡಲಿಲ್ಲ. ನಮಗೆ ಬಹಳ ಕೆಟ್ಟ ಅನುಭವಗಳಾಗುತ್ತವೆ. ನಿಜಕ್ಕೂ ಕೆಟ್ಟ ಅನುಭವ ಅವು. ಅಂತಹ ಸಂದರ್ಭದಲ್ಲಿ ನಾವು ಕುಳಿತು ಊಟ ಮಾಡಲು ಸ್ಥಳವನ್ನು ಹುಡುಕಲು ಕನಿಷ್ಠ 3 ಅಥವಾ 4 ಕಿಲೋಮೀಟರ್ ನಡೆಯಬೇಕು. ಆದರೆ ಕೆಲವು ಸ್ಥಳಗಳಲ್ಲಿ ಜನರು ನಮಗೆ ಕುಡಿಯಲು ನೀರು ಕೊಡುತ್ತಾರೆ ಮತ್ತು ನಾವು ಊಟಕ್ಕೆ ಕುಳಿತಾಗ ನಮಗೆ ಏನಾದರೂ ಬೇಕೇ ಎಂದು ಕೇಳುತ್ತಾರೆ."

ಲಿಲಿಯವರಿಗೆ ಕೇವಲ 12 ವಯಸ್ಸಿನಲ್ಲಿ ಅವರಿಗಿಂತಲೂ 18 ವರ್ಷ ಹಿರಿಯ ಸಹೋದರ ಸಂಬಂಧಿ ವ್ಯಕ್ತಿಯೊಡನೆ ಮದುವೆ ಮಾಡಿಸಲಾಯಿತು. "ನಾವು ನಾಲ್ಕು ಜನ ಹೆಣ್ಣು ಮಕ್ಕಳು. ನಾನೇ ಹಿರಿಯವಳು." ಎನ್ನುತ್ತಾರೆ. ಕುಟುಂಬದ ಬಳಿ ಮೂರು ಸೆಂಟ್ಸ್ ಭೂಮಿಯಿತ್ತು. ಅದರಲ್ಲಿ ಒಂದು ಮಣ್ಣಿನ ಮನೆಯನ್ನು ಕಟ್ಟಿದ್ದರು. "ನನ್ನ ತಂದೆಗೆ ತಮ್ಮ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ವ್ಯವಸಾಯ ಮಾಡಲು ಒಬ್ಬ ವ್ಯಕ್ತಿ ಬೇಕಾಗಿದ್ದ. ಅದಕ್ಕಾಗಿ ಅವರು ನನ್ನನ್ನು ಅವರ ಅಕ್ಕನ ಮಗನಿಗೆ ಕೊಟ್ಟು ಮದುವೆ ಮಾಡಿಸಿದರು." ಮದುವೆ ಸಂಬಂಧ ಸಂತೋಷವನ್ನು ತರಲಿಲ್ಲ. ಅವರ ಗಂಡ ನಂಬಿಕಸ್ಥ ಆಗಿರಲಿಲ್ಲ ಮತ್ತು ತಿಂಗಳುಗಳ ಕಾಲ ಅವರನ್ನು ಭೇಟಿಯಾಗುತ್ತಿರಲಿಲ್ಲ. ಒಂದು ವೇಳೆ ಬಂದರೆ ಹೊಡೆಯುತ್ತಿದ್ದರು. ಆತ ಕಿಡ್ನಿ ಕ್ಯಾನ್ಸರ್ ಆಗಿ 2014ರಲ್ಲಿ ತೀರಿಹೋದರು. ಈಗ 18 ಮತ್ತು 14 ವರ್ಷದ ಇಬ್ಬರು ಮಕ್ಕಳನ್ನು ಇವರೇ ನೋಡಿಕೊಳ್ಳಬೇಕಾಗಿದೆ.

ಸ್ಕಾರ್ಫ್ ಸಂಸ್ಥೆಯಲ್ಲಿ ಕೆಲಸ ಸಿಗುವ ಮೊದಲು ಲಿಲಿ ಅವರು ಹೊಲಿಗೆ ಕೆಲಸ ಮಾಡುತ್ತಿದ್ದರು. ಆ ಮೂಲಕ ವಾರಕ್ಕೆ 450-500 ಸಂಪಾದಿಸುತ್ತಿದ್ದರು. ಆದರೆ ಅದು ಗ್ರಾಹಕರ ಲಭ್ಯತೆಯನ್ನು ಅವಲಂಬಿಸಿತ್ತು. ತಾನು ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಮುಖ್ಯ ಕಾರಣ ಅದರಿಂದ ಹೆಚ್ಚು ಆದಾಯ ಸಿಗುತ್ತದೆ ಎನ್ನುವುದು. ಕೊವಿಡ್-19 ಅವರ 10,000 ರೂಪಾಯಿಗಳ ಆದಾಯದ ಮೇಲೆ ಪರಿಣಾಮ ಬೀರಿತ್ತು. ಅವರು ತಮ್ಮ ಫೋನ್ ಮತ್ತು ಬಸ್ ಟಿಕೆಟ್ ಖರ್ಚುಗಳನ್ನು ಸಂಸ್ಥೆಯಿಂದ ಪಡೆಯಬಹುದಿತ್ತು. "ಆದರೆ ಕೊರೋನಾ ಕಾರಣಕ್ಕೆ ನಾನು ಬಸ್ ಚಾರ್ಜ್ ಮತ್ತು ಫೋನ್ ಖರ್ಚುಗಳನ್ನು ಸಿಗುವ ಹತ್ತು ಸಾವಿರದಲ್ಲೇ ಸಂಬಾಳಿಸಬೇಕಿತ್ತು. ಅದು ಕಷ್ಟವಾಗುತ್ತಿತ್ತು." ಎನ್ನುತ್ತಾರವರು.

Lili Pushpam in her rented house in the Dalit colony in Manamathy village. A health worker, she says it is a difficult task to allay misconceptions about mental health care in rural areas. Lili is herself struggling to get the widow pension she is entitled to receive
PHOTO • M. Palani Kumar

ಮಾನಮತಿ ಗ್ರಾಮದ ದಲಿತ ಕಾಲೋನಿಯಲ್ಲಿ ಲಿಲಿ ಪುಷ್ಪಮ್ ಬಾಡಿಗೆ ಮನೆಯಲ್ಲಿದ್ದಾರೆ. ಆರೋಗ್ಯ ಕಾರ್ಯಕರ್ತರಾಗಿರುವ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸ ಎನ್ನುತ್ತಾರೆ. ಲಿಲಿ ತನಗೆ ಸಿಗಬೇಕಿರುವ ವಿಧವಾ ವೇತನ ಪಿಂಚಣಿಯನ್ನು ಪಡೆಯಲು ಸ್ವತಃ ಹೆಣಗಾಡುತ್ತಿದ್ದಾರೆ

ಈಗ, ಎನ್‌ಎಮ್ಎಚ್‌ಪಿ ಅಡಿಯಲ್ಲಿ ಸ್ಕಾರ್ಫ್ ನ ಸಮುದಾಯ ಯೋಜನೆಯು ಕೊನೆಗೊಂಡಿರುವುದರಿಂದ, ಬುದ್ಧಿಮಾಂದ್ಯತೆ ಹೊಂದಿರುವ ಜನರೊಡನೆ ಕೆಲಸ ಮಾಡುವ ಸಂಸ್ಥೆಯ ಯೋಜನೆಗಾಗಿ ಲಿಲಿಯವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಕೆಲಸ ಮಾರ್ಚ್‌ನಲ್ಲಿ ಪ್ರಾರಂಭವಾಯಿತು, ಅವರು ಇದರ ಸಲುವಾಗಿ ವಾರಕ್ಕೊಮ್ಮೆ ಹೋಗುತ್ತಾರೆ. ಆದರೆ, ಸ್ಕಿಜೋಫ್ರೇನಿಯಾ ರೋಗಿಗಳು ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಅವರು ಅವರನ್ನು ಚೆಂಗಲ್ ಪಟ್ಟು ಕೋವಲಂ ಮತ್ತು ಸೆಂಬಾಕ್ಕಂನಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದಾರೆ.

ಶಾಂತಿಯಕ್ಕ, ಸೆಲ್ವಿ ಮತ್ತು ಲಿಲಿಯವರಂತಹ ಮಹಿಳೆಯರು ಸಮುದಾಯ ಆರೋಗ್ಯ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಆದರೆ ಅವರು 4-5 ವರ್ಷಗಳ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ. ಸ್ಕಾರ್ಫ್ ರೀತಿಯ ಸರಕಾರೇತರ ಸಂಸ್ಥೆಗಳು ತಮಗೆ ಯೋಜನೆಯ ಆಧಾರದಲ್ಲಿ ಸಿಗುವ ನಿಧಿಯನ್ನು ಅವಲಂಬಿಸಿ ಕೆಲಸಗಾರರನ್ನು ತೊಡಗಿಸಿಕೊಳ್ಳುತ್ತಾರೆ. "ನಾವು ರಾಜ್ಯ ಮಟ್ಟದಲ್ಲಿ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ" ಎನ್ನುತ್ತಾರೆ ಸ್ಕಾರ್ಫ್ ಸಂಸ್ಥೆಯ ಪದ್ಮಾವತಿ. ಇದು ಸಮುದಾಯ ಆರೋಗ್ಯ ಕಾರ್ಯಕರ್ತರ ಕೆಲಸವನ್ನು ಸುಗಮಗೊಳಿಸುತ್ತದೆ ಎನ್ನುವುದು ಅವರ ನಂಬಿಕೆ.

ಭಾರತದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಬಜೆಟ್‌ನ ವಿನಿಯೋಗವು ತೀರಾ ಕಳಪೆಯಾಗಿರದೆ ಹೋಗಿದ್ದರೆ ಬಹುಶಃ ಪರಿಸ್ಥಿತಿ ಬೇರೆಯಿರುತ್ತಿತ್ತು. 2023-24ರಲ್ಲಿ, ಮಾನಸಿಕ ಆರೋಗ್ಯಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಜೆಟ್ ಅಂದಾಜು - ರೂ. 919 ಕೋಟಿ - ಕೇಂದ್ರ ಸರ್ಕಾರದ ಒಟ್ಟು ಆರೋಗ್ಯ ಬಜೆಟ್‌ನ ಕೇವಲ 1 ಪ್ರತಿಶತ. ಅದರ ಪ್ರಮುಖ ಭಾಗ ರೂ. 721 ಕೋಟಿಯನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಗೆ ಮೀಸಲಿಡಲಾಗಿದೆ. ಉಳಿದವು ಲೋಕಪ್ರಿಯಾ ಗೋಪಿನಾಥ್ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್, ತೇಜ್‌ಪುರ (ರೂ. 64 ಕೋಟಿ) ಮತ್ತು ರಾಷ್ಟ್ರೀಯ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ (ರೂ. 134 ಕೋಟಿ)ಗೆ ಹೋಗುತ್ತವೆ. ಇದಲ್ಲದೆ, ಮೂಲಸೌಕರ್ಯ ಮತ್ತು ಸಿಬ್ಬಂದಿ ಅಭಿವೃದ್ಧಿಯನ್ನು ನೋಡುವ MoHFWನ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಈ ವರ್ಷ ರಾಷ್ಟ್ರೀಯ ಆರೋಗ್ಯ ಮಿಷನ್‌ನ 'ತೃತೀಯ ಚಟುವಟಿಕೆಗಳ' ಅಡಿಯಲ್ಲಿ ಒಳಪಡಿಸಲಾಗಿದೆ. ಆದ್ದರಿಂದ, ತೃತೀಯ ಹಂತದ ಮಾನಸಿಕ ಆರೈಕೆಗಾಗಿ ಹಂಚಿಕೆಗಳನ್ನು ಎತ್ತಿಡಲಾಗುವುದಿಲ್ಲ.

ಈ ನಡುವೆ, ಮನಮತಿಯಲ್ಲಿ ಲಿಲಿ ಪುಷ್ಪಂ ಸಾಮಾಜಿಕ ಭದ್ರತಾ ಪ್ರಯೋಜನದಡಿ ತಮಗೆ ಸಿಗಬೇಕಿದ್ದ ಪ್ರಯೋಜನವನ್ನು ಪಡೆಯಲು ಹೆಣಗಾಡುತ್ತಿದ್ದಾರೆ. "ಒಂದು ವೇಳೆ ವಿಧವಾ ವೇತನ ಪಿಂಚಣಿಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಲಂಚ ಕೊಡಬೇಕು. ನನ್ನ ಬಳಿ ಅವರಿಗೆ ಕೊಡಲು 500 ಅಥವಾ 1,000 ರೂಪಾಯಿ ಕೂಡಾ ಇಲ್ಲ." ಎನ್ನುತ್ತಾರವರು. "ನನಗೆ ಇಂಜೆಕ್ಷನ್ ಕೊಡುವುದು, ಮಾತ್ರೆ ಕೊಡುವುದು ಮತ್ತು ಕೌನ್ಸೆಲಿಂಗ್ ನೀಡುವುದು ಮತ್ತು ರೋಗಿಗಳ ಫಾಲೋ ಅಪ್ ಮಾಡುವುದು ಗೊತ್ತು. ಆದರೆ ಈ ಅನುಭವವನ್ನು ಸ್ಕಾರ್ಫ್ ಸಂಸ್ಥೆ ಹೊರತುಪಡಿಸಿ ಎಲ್ಲಿಯೂ [ಉಪಯುಕ್ತವೆಂದು) ಪರಿಗಣಿಸಲಾಗುವುದಿಲ್ಲ. ನನ್ನ ಬದುಕಿನ ಪ್ರತಿ ದಿನವೂ ಕಣ್ಣೀರಿನಿಂದ ತುಂಬಿ ಹೋಗಿದೆ. ನನಗೆ ಸಹಾಯ ಮಾಡಬಲ್ಲವರು ಯಾರೂ ಇಲ್ಲವೆನ್ನುವುದೇ ನನ್ನ ನೋವಿಗೆ ಕಾರಣ."

ಫೀಚರ್ ಇಮೇಜ್: ಶಾಂತಿ ಶೇಷ ಅವರ ಯೌವನದ ದಿನಗಳ ಫೋಟೊ

ಅನುವಾದ: ಶಂಕರ. ಎನ್. ಕೆಂಚನೂರು

S. Senthalir

S. Senthalir is Senior Editor at People's Archive of Rural India and a 2020 PARI Fellow. She reports on the intersection of gender, caste and labour. Senthalir is a 2023 fellow of the Chevening South Asia Journalism Programme at University of Westminster.

Other stories by S. Senthalir
Photographs : M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar
Editor : Vinutha Mallya

Vinutha Mallya is a journalist and editor. She was formerly Editorial Chief at People's Archive of Rural India.

Other stories by Vinutha Mallya
Photo Editor : Riya Behl

Riya Behl is Senior Assistant Editor at People’s Archive of Rural India (PARI). As a multimedia journalist, she writes on gender and education. Riya also works closely with students who report for PARI, and with educators to bring PARI stories into the classroom.

Other stories by Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru