ಸುಮಾರು 34 ವರ್ಷದ ಜುನಾಲಿ ಅಪಾಂಗ್ ತಯಾರಿಸುವುದರಲ್ಲಿ ನಿಪುಣರು. "ಕೆಲವೊಮ್ಮೆ ನಾನು ಒಂದು ದಿನದಲ್ಲಿ 30 ಲೀಟರುಗಳಿಗಿಂತ ಹೆಚ್ಚು ಅಪಾಂಗ್ ತಯಾರಿಸುತ್ತೇನೆ" ಎಂದು ಅವರು ಹೇಳುತ್ತಾರೆ. ಈ ಪ್ರದೇಶದ ಇತರ ತಯಾರಕರು ವಾರದಲ್ಲಿ ಕೆಲವೇ ಕೆಲವು ಲೀಟರುಗಳನ್ನಷ್ಟೇ ತಯಾರಿಸಬಲ್ಲರು. ಯಾವುದೇ ಯಂತ್ರದ ಸಹಾಯವಿಲ್ಲದೆ ಈ ಬಿಯರ್‌ ತಯಾರಾಗುತ್ತದೆ.

ಜುನಾಲಿ ಕಿ ಭಟ್ಟಿ ಎಂಬುದು ಅಸ್ಸಾಂನ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಮಜುಲಿ ದ್ವೀಪದ ಗಢಮೂರ್ ಪಟ್ಟಣದ ಸಮೀಪದಲ್ಲಿರುವ ಅವರ ಮೂರು ಕೋಣೆಗಳ ಮನೆ ಮತ್ತು ಹಿತ್ತಲು. ಈ ಮನೆಯು ಒಂದು ಸಣ್ಣ ಕೊಳದ ಪಕ್ಕದಲ್ಲಿದೆ, ಇದು ಬೃಹತ್‌ ನದಿಯಾದ ಬ್ರಹ್ಮಪುತ್ರದ ಪ್ರವಾಹದಿಂದ ಉಂಟಾದ ಕೊಳ.

ಅಂದು ಬೆಳಗಿನ 6 ಗಂಟೆಗೆ ನಾವು ಭೇಟಿಗೆಂದು ಹೋದಾಗ ಅವರಾಗಲೇ ಎದ್ದು ತಮ್ಮ ಕೆಲಸ ಆರಂಭಿಸಿದ್ದರು. ಭಾರತದ ಪೂರ್ವ ಭಾಗದಲ್ಲಿ ಆಗಲೇ ಮೇಲಕ್ಕೇರಿದ್ದ. ಜುನಾಲಿ ಬಿಯರ್‌ ತಯಾರಿಯ ಪ್ರಕ್ರಿಯೆಯ ಭಾಗವಾಗಿ ತಮ್ಮ ಹಿತ್ತಲಿನಲ್ಲಿದ್ದ ಒಲೆಗೆ ಬೆಂಕಿ ಹಚ್ಚುತ್ತಿದ್ದರು. ಅವರ ಕೆಲಸಕ್ಕೆ ಸಂಬಂಧಿಸಿದ ಸಲಕರಣೆಗಳು ಮನೆಯೊಳಗಿದ್ದವು.

ಅಪಾಂಗ್ ಹೆಸರಿನ ಈ ಕಚ್ಚಾ ವಸ್ತುಗಳನ್ನು ಹುದುಗಿಸಿ ತಯಾರಿಸಲಾಗುವ ಪಾನೀಯವನ್ನು ಅಸ್ಸಾಂನ ಮಿಸಿಂಗ್ ಬುಡಕಟ್ಟು ಜನಾಂಗದವರು ತಯಾರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಊಟದೊಂದಿಗೆ ಸೇವಿಸಲಾಗುತ್ತದೆ ಮತ್ತು ಮಿಸಿಂಗ್ ಸಮುದಾಯದ ಭರತ್ ಚಂಡಿ ಹೇಳುವಂತೆ, "ನಾವು ಮಿಸಿಂಗ್ ಜನರು ಅಪಾಂಗ್‌ ಇಲ್ಲದ ಹಬ್ಬ ಅಥವಾ ಇತ್ಯಾದಿ ಆಚರಣೆಗಳನ್ನು ಕಲ್ಪಿಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲ." ಚಂಡಿ ಗರ್ಮೂರ್ ಮಾರುಕಟ್ಟೆಯಲ್ಲಿರುವ ಮನೆ-ಶೈಲಿಯ ಆಹಾರವನ್ನು ಒದಗಿಸುವ ಧಾಬಾ  'ಮಜುಲಿ ಕಿಚನ್'ನ ಮಾಲೀಕರು.

ಅಕ್ಕಿ ಮತ್ತು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಈ ತಿಳಿ ಕೆನೆ ಬಣ್ಣದ ಬಿಯರನ್ನು ಜುನಾಲಿ ಅವರಂತಹ ಮಿಸಿಂಗ್ ಮಹಿಳೆಯರು ವಿಶೇಷವಾಗಿ ತಯಾರಿಸುತ್ತಾರೆ. ಸಿದ್ಧಪಡಿಸಿದ ನಂತರ, ಅದನ್ನು ಗಢಮೂರ್‌ನ ಅಂಗಡಿಗಳು ಮತ್ತು ಹೋಟೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜುನಾಲಿ ನಗುತ್ತಾ, “ಗಂಡಸರಿಗೆ ಇದನ್ನು ತಯಾರಿಸುವುದರಲ್ಲಿ ಆಸಕ್ತಿಯಿಲ್ಲ. ಅವರ ದೃಷ್ಟಿಯಲ್ಲಿ ಇದೊಂದು ಕಷ್ಟದ ಕೆಲಸ. ಗಿಡಮೂಲಿಕೆಗಳು ಮತ್ತು ಎಲೆಗಳನ್ನು ಸಂಗ್ರಹಿಸುವುದರಲ್ಲೇ ಅವರು ದಣಿದು ಬಿಡುತ್ತಾರೆ" ಎನ್ನುತ್ತಾರೆ.

PHOTO • Priti David

ಜುನಾಲಿ ದೊಡ್ಡ ಪಾತ್ರಯೊಂದರಲ್ಲಿ ನೀರು ಬಿಸಿಗಿಟ್ಟು ನಂತರ ಅದಕ್ಕೆ ಅಕ್ಕಿಯನ್ನು ಹಾಕುತ್ತಾರೆ. ಈ ಮೂಲಕ ಅಪಾಂಗ್‌ ತಯಾರಿ ಆರಂಭಿಸುತ್ತಾರೆ

PHOTO • Priti David

ಜುನಾಲಿ ತನ್ನ ಮನೆಯ ಹತ್ತಿರ ತಗಡಿನ ಶೀಟ್‌ ಒಂದರ ಮೇಲೆ ಭತ್ತದ ಹುಲ್ಲನ್ನು ಸುಡುತ್ತಿರುವುದು. ಇದನ್ನು ಬೆಳಗ್ಗೆ ಆರು ಗಂಟೆಗೆ ಹೊತ್ತಿಸಲಾಗಿದ್ದು ಸುಮಾರು 3-4 ಗಂಟೆಗಳ ಕಾಲ ಉರಿಸಲಾಗುತ್ತದೆ. ನಂತರ ಸುಟ್ಟು ಉಳಿದ ಕರಿಯನ್ನು ಅನ್ನದೊಡನೆ ಬೆರೆಸಲಾಗುತ್ತದೆ

ಜುನಾಲಿಯವರ ಪತಿ ಉರ್ಬೊರ್‌ ರಿಸಾಂಗ್‌ ಮನೆಯಿಂದ 5 ನಿಮಿಷದ ದಾರಿಯಷ್ಟು ದೂರವಿರುವ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅವರ 19 ವರ್ಷದ ಮಗ ಪಬಾಂಗ್‌ ರಿಸಾಂಗ್‌ ಜೋರ್ಹತ್‌ ಎನ್ನುವಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡುತ್ತಿದ್ದಾರೆ. ಈ ಕಾಲೇಜಿಗೆ ತಲುಪಲು ಪ್ರತಿದಿನ ಬ್ರಹ್ಮಪುತ್ರ ನದಿಯಲ್ಲಿ ಒಂದು ಗಂಟೆ ಕಾಲದ ಫೆರಿ ಪ್ರಯಾಣ ಮಾಡಬೇಕಾಗುತ್ತದೆ.

ಜುನಾಲಿಯವರಿಗೆ ಅಪಾಂಗ್‌ ತಯಾರಿಸುವುದನ್ನು ಕಲಿಸಿದವರು ಅವರ ಅತ್ತೆ. ಈ ಅಪಾಂಗ್‌ ಪೇಯದಲ್ಲಿ ಎರಡು ವಿಧಗಳಿವೆ. ನಾಂಗ್ಝಿನ್‌ ಅಪಾಂಗ್‌, ಇದು ಕೇವಲ ಅಕ್ಕಿಯನ್ನು ಮುಖ್ಯಘಟಕಾಂಶವಾಗಿ ಹೊಂದಿರುತ್ತದೆ. ಇನ್ನೊಂದು ಸುಟ್ಟ ಭತ್ತದ ಹುಲ್ಲನ್ನು ಸೇರಿಸಿ ಮಾಡಿದ ಪೊರೊ ಅಪಾಂಗ್.‌ ಇದು ಪರಿಮಳಯುಕ್ತವಾಗಿರುತ್ತದೆ. ಒಂದು ಲೀಟರ್‌ ಅಪಾಂಗ್‌ 100 ರೂಪಾಯಿಗೆ ಮಾರಾಟವಾದರೆ ಅದರಲ್ಲಿ ಅರ್ಧದಷ್ಟು ಹಣ ತಯಾರಕರ ಕೈ ಸೇರುತ್ತದೆ.

ಜುನಾಲಿ ಈಗ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹತ್ತು ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಅವರಿಗೆ ಈಗ ಈ ಕೆಲಸದ ಸೂಕ್ಷ್ಮಗಳು ಅರ್ಥವಾಗತೊಡಗಿದ್ದು ಅದನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಜುಲಿ ಜಿಲ್ಲೆಯ ಕಮಲಾಬಾರಿ ವಿಭಾಗದಲ್ಲಿರು ಅವರ ಊರಿಗೆ ಪರಿ ತಂಡ ಭೇಟಿ ನೀಡಿದ ಸಮಯದಲ್ಲಿ ಜುನಾಲಿ ಪೊರೊ ಅಪಾಂಗ್‌ ತಯಾರಿಸುತ್ತಿದ್ದರು. ಅವರು ಬೆಳಗಿನ 5:30ರ ವೇಳೆಗೆ 10-15 ಕಿಲೋ ತೂಕದ ಭತ್ತದ ಹುಲ್ಲಿಗೆ ಬೆಂಕಿ ಹಚ್ಚಿ ಅದನ್ನು ಹಿತ್ತಲಿನಲ್ಲಿದ್ದ ಟಿನ್‌ ಶೀಟ್‌ ಒಂದರ ಮೇಲೆ ನಿಧಾನವಾಗಿ ಉರಿಯಲು ಬಿಡುವ ಮೂಲಕ ತಮ್ಮ ಕೆಲಸ ಆರಂಭಿಸಿದ್ದರು. “ಫೂರ್ತಿಯಾಗಿ ಸುಡಲು 3-4 ಗಂಟೆಗಳ ಸಮಯ ಬೇಕಾಗುತ್ತದೆ” ಎಂದು ಅವರು ಅಕ್ಕಿ ಬೇಯಿಸಲು ಒಲೆ ಹೊತ್ತಿಸುತ್ತಾ ಹೇಳಿದರು. ಕೆಲವು ದಿನ ಈ ಪ್ರಕ್ರಿಯೆಯನ್ನು ಅವರು ಇನ್ನೂ ಬೇಗ ಆರಂಬಿಸುತ್ತಾರೆ. ತಡರಾತ್ರಿಯ ಹೊತ್ತಿಗೆ ಹುಲ್ಲು ಸುಡಲು ಆರಂಭಿಸುತ್ತಾರೆ.

ಒಲೆಯ ಮೇಲೆ ದೊಡ್ಡ ಪಾತ್ರೆಯಿಟ್ಟು ಅದರಲ್ಲಿನ ನೀರು ಕುದಿಯಲಾರಂಭಿಸಿದಾಗ ಅದಕ್ಕೆ 25 ಕೇಜಿ ಅಕ್ಕಿ ಸುರಿಯುತ್ತಾರೆ. “ಅಕ್ಕಿ ಎತ್ತಿ ಸುರಿಯುವಾಗ ಒಂದಷ್ಟು ಬೆನ್ನು ಬರುತ್ತದೆ” ಎಂದು ಅವರು ಒಪ್ಪಿಕೊಳ್ಳುತ್ತಾರೆ.

ಅಸ್ಸಾಮಿ ಹಬ್ಬಗಳಾದ ಮಾಘ್ ಬಿಹು, ಬೋಹಾಗ್ ಬಿಹು ಮತ್ತು ಕಾಟಿ ಬಿಹು ಸಂದರ್ಭಗಳಲ್ಲಿ ಹೆಚ್ಚಿನ ಪ್ರಮಾಣದ ಬಿಯರ್‌ಗೆ ಬೇಡಿಕೆಯಿದ್ದಾಗ, ಜುನಾಲಿ ಒಮ್ಮೊಮ್ಮೆ ದಿನಕ್ಕೆ ಎರಡರಷ್ಟು ಬಿಯರ್‌ ತಯಾರಿಸುವುದೂ ಇರುತ್ತದೆ

ವಿಡಿಯೋ ನೋಡಿ: ಮಿಸಿಂಗ್‌ ಸಮುದಾಯದ ಸಾಮುದಾಯಿಕ ಪಾನೀಯ ಅಪಾಂಗ್‌ ಎನ್ನುವ ಅಕ್ಕಿ ಬಿಯರ್‌ ತಯಾರಿಕೆ

ಜುನಾಲಿ ಎರಡೂ ಕಡೆ ಉರಿಯುತ್ತಿರುವ ಬೆಂಕಿಯತ್ತ ಸಮನಾಗಿ ಕಣ್ಣು ಹಾಯಿಸುತ್ತಾರೆ. ಉರಿಯುತ್ತಿರುವ ಹುಲ್ಲನ್ನು ಕೋಲಿನಿಂದ ಕೆದಕಿ ಸಮಾನಾಗಿ ಉರಿಯುವಂತೆ ನೋಡಿಕೊಳ್ಳುತ್ತಾರೆ. 25 ಕೇಜಿ ಅಕ್ಕಿಯನ್ನು ತಿರುಗಿಸುವುದು ನಿಜಕ್ಕೂ ಕಷ್ಟದ ಕೆಲಸ. ಜುನಾಲಿ ಅದನ್ನು ಮಾಡುವಾಗ ಒಂದಷ್ಟು ಕಷ್ಟಪಡುತ್ತಾರೆ. ಅವರು ಈ ಅಕ್ಕಿಯನ್ನು ಅಂಘಡಿಯಿಂದ ತಂದಿದ್ದಾರೆ. “ನಾವು ಭತ್ತ ಬೆಳೆಯುತ್ತೇವೆಯಾದರೂ ಅದನ್ನು ನಮ್ಮ ಅಡುಗೆಗೆ ಇಟ್ಟುಕೊಳ್ಳುತ್ತೇವೆ.” ಎಂದು ಅವರು ಹೇಳುತ್ತಾರೆ.

ಅಕ್ಕಿ ಬೇಯಲು ಸುಮಾರು ಅರ್ಧ ಗಂಟೆ ಸಮಯ ಬೇಕಾಗುತ್ತದೆ. ನಂತರ ಅದನ್ನು ಒಂದಿಷ್ಟು ತಣ್ಣಗಾಗಿಸಿ ಜುನಾಲಿ ಸುಟ್ಟ ಭತ್ತದ ಹುಲ್ಲಿನ ಕರಿಯೊಡನೆ ಮಿಶ್ರಣ ಮಾಡುತ್ತಾರೆ. ಇದು ಸುಲಭವೆಂಬಂತೆ ಕಾಣುತ್ತದೆಯಾದರೂ ಬಿಸಿಯಾದ ಅನ್ನವನ್ನು ಬೂದಿಯೊಡನೆ ಸೇರಿಸಿ ನುರಿದು ಕಲಿಸುವುದನ್ನು ಸಹ ಒಳಗೊಂಡಿರುತ್ತದೆ. ಇದನ್ನು ಅವರು ಬರಿಗೈಯಲ್ಲಿ ಮಾಡುತ್ತಾರೆ. ನಂತರ ಈ ಮಿಶ್ರಣವನ್ನು ಬಿದಿರಿನ ಬುಟ್ಟಿಯೊಂದರಲ್ಲಿ ಹರಡುತ್ತಾರೆ. “ಈ ಬುಟ್ಟಿಯಲ್ಲಿಟ್ಟರೆ ಬೇಗನೆ ಆರುತ್ತದೆ. ಬೂದಿ ಮತ್ತು ಅನ್ನವನ್ನು ಬಿಸಿಯಾಗಿರುವಾಗಲೇ ಮಿಶ್ರಣ ಮಾಡಬೇಕು ಇಲ್ಲದಿದ್ದರೆ ಅವು ಪರಸ್ಪರ ಬೆರೆಯುವುದಿಲ್ಲ” ಎಂದು ತಮ್ಮ ಬೆರಳಿಗೆ ಅಂಟಿಕೊಂಡಿದ್ದ ಮಿಶ್ರಣವನ್ನು ನೋಡುತ್ತಾ ಹೇಳುತ್ತಾರೆ.

ಈ ಮಿಶ್ರಣವನ್ನು ಹಿಸುಕುವಾಗಲೇ ಜುನಾಲಿ ಅದಕ್ಕೆ ತಾನು ಸಿದ್ಧಪಡಿಸಿದ ಗಿಡಮೂಲಿಕೆಗಳನ್ನು ಸೇರಿಸುತ್ತಾರೆ. “ನೂರು ಗಿಡಮೂಲಿಕೆಗಳು ಮತ್ತು ಎಲೆಗಳು ಇದರಲ್ಲಿ ಸೇರುತ್ತವೆ” ಎನ್ನುತ್ತಾರೆ. ಅವು ಯಾವ್ಯಾವುದೆನ್ನುವ ಗುಟ್ಟನ್ನು ಬಿಟ್ಟುಕೊಡಲು ಸಿದ್ಧರಿಲ್ಲದ ಅವರು ಇದರಲ್ಲಿನ ಕೆಲವು ಎಲೆಗಳು ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಹೆಚ್ಚಿಸಲು ಮಿಸಿಂಗ್‌ ಸಮುದಾಯದ ನಡುವೆ ಖ್ಯಾತಗೊಂಡಿವೆ ಎನ್ನುತ್ತಾರೆ.

ಹಗಲಿನಲ್ಲಿ ಜುನಾಲಿ ಗರಮೂರ್‌ ಸುತ್ತಮುತ್ತ ನಡೆದು ತನಗೆ ಅಗತ್ಯವಿರುವ ಎಲೆಗಳು ಮತ್ತು ಗಿಡಮೂಲಿಕೆಗಳನ್ನು ಆಯ್ದುಕೊಂಡು ಬರುತ್ತಾರೆ. “ಅವುಗಳನ್ನು ತಂದು ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಅದನ್ನು ಸಣ್ಣ ಮುಷ್ಟಿ ಗಾತ್ರದ ಉಂಡೆಗಳನ್ನಾಗಿ ತಯಾರಿಸುತ್ತೇನೆ. ನಾನು ಅಪಾಂಗ್‌ ತಯಾರಿಸುವಾಗ 15-16 ಎಲೆ ಮತ್ತು ಗಿಡಮೂಲಿಕಗೆಳನ್ನು ಬಳಸುತ್ತೇನೆ” ಎನ್ನುತ್ತಾರೆ. ಇದೇ ಊರಿನಿಂದ ಹತ್ತಿರದಲ್ಲಿರುವ ಫುಟುಕಿ ಎನ್ನುವಲ್ಲಿ ಜನಿಸಿದ ಅವರಿಗೆ ಇಲ್ಲಿನ ಪ್ರದೇಶಗಳು ಚಿರಪರಿಚಿತ.

PHOTO • Priti David
PHOTO • Riya Behl

ಜುನಾಲಿ ಹಸಿ ಅಕ್ಕಿಯನ್ನು (ಎಡಕ್ಕೆ) ಕುದಿಯುವ ನೀರಿನ ಪಾತ್ರೆಗೆ ಸುರಿಯುತ್ತಿರುವುದು. ಅಕ್ಕಿಯನ್ನು ಬೇಯಿಸುವಾಗ ಕಲಕಲು ಅವಳು ಉದ್ದವಾದ ಮರದ ಕೋಲನ್ನು (ಬಲಕ್ಕೆ) ಬಳಸುತ್ತಾರೆ

PHOTO • Riya Behl

ಜುನಾಲಿ ತಾನು ಹೊಗೆಯೂಡುತ್ತಿರುವ ಹುಲ್ಲನ್ನು ಸಮಾನಾಗಿ ಕೆದಕುತ್ತಿರಬೇಕಾಗುತ್ತದೆ ಇಲ್ಲವಾದರೆ ಅದು ಸುಟ್ಟು ಬೂದಿಯಾಗಿಬಿಡುತ್ತದೆ

ಬಿದಿರಿನ ಬುಟ್ಟಿಯಲ್ಲಿನ ಮಿಶ್ರಣವು ತಣ್ಣಗಾದ ನಂತರ, ಅದನ್ನು ಜುನಾಲಿಯ ಮನೆಯಲ್ಲಿ ಸುಮಾರು 20 ದಿನಗಳವರೆಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. "ಅದು ಸಿದ್ಧವಾದಾಗ [ಹುದುಗುವಿಕೆಯ] ವಾಸನೆಯಿಂದ ನನಗೆ ತಿಳಿಯುತ್ತದೆ" ಎಂದು ಅವರು ಹೇಳುತ್ತಾರೆ. ಇದು ಬಿಯರ್‌ ತಯಾರಿಕೆಯ ಕೊನೆಯ ಹಂತದ ಸಮಯ: ಬೂದಿ, ಅನ್ನ ಮತ್ತು ಗಿಡಮೂಲಿಕೆಗಳ ಹುದುಗಿಸಿದ ಮಿಶ್ರಣವನ್ನು ಬಾಳೆ ಎಲೆಯಿಂದ ಸಾಲಾಗಿ ಕೋನ್ ಆಕಾರದ ಬುಟ್ಟಿಯಲ್ಲಿ ಇರಿಸಲಾಗುತ್ತದೆ ಮತ್ತು ಒಂದು ಪಾತ್ರೆಯ ಮೇಲೆ ತೂಗು ಹಾಕಲಾಗುತ್ತದೆ. ನೀರನ್ನು ಬುಟ್ಟಿಗೆ ಸುರಿಯಲಾಗುತ್ತದೆ, ಮತ್ತು ಮಿಶ್ರಣದಿಂದ ರೂಪುಗೊಂಡ ಬಿಯರ್ ಕೆಳಗಿರುವ ಪಾತ್ರೆಗೆ ಸುರಿಯುತ್ತದೆ. 25 ಕಿಲೋ ಅಕ್ಕಿ ಸುಮಾರು 30-34 ಲೀಟರ್ ಅಪಾಂಗ್ ನೀಡುತ್ತದೆ.

‌ಅಸ್ಸಾಮಿ ಹಬ್ಬಗಳಾದ ಜನವರಿಯಲ್ಲಿ ಬರುವ ಮಾಘ್ ಬಿಹು, ಏಪ್ರಿಲ್‌ ತಿಂಗಳ ಬೊಹಾಗ್ ಬಿಹು ಮತ್ತು ಅಕ್ಟೋಬರ್‌ ತಿಂಗಳ ಕಟಿ ಬಿಹು ಸಂದರ್ಭಗಳಲ್ಲಿ ಹೆಚ್ಚಿನ ಪ್ರಮಾಣದ ಬಿಯರ್‌ಗೆ ಬೇಡಿಕೆ ಇರುವಾಗ, ಜುನಾಲಿ ಹೆಚ್ಚು ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಕೆಲವೊಮ್ಮೆ ದಿನಕ್ಕೆ ಎರಡು ಬಾರಿ ಅಪಾಂಗ್‌ ತಯಾರಿಯಲ್ಲಿ ತೊಡಗುತ್ತಾರೆ. ಇದೇ ರೀತಿಯ ಬೇಡಿಕೆ ಮಿಸಿಂಗ್ ಸಮುದಾಯದ ಹಬ್ಬವಾದ ಅಲಿ-ಆಯೆ-ಲಿಗಾಂಗ್ ಸಮಯದಲ್ಲಿಯೂ ಬೇಡಿಕೆ ಹೆಚ್ಚಿರುತ್ತದೆ.

ಜುನಾಲಿ ಅಪಾಂಗ್‌ ತಯಾರಿಸುವುದರ ಹೊರತಾಗಿ ಹತ್ತಿರದ ಹೋಟೆಲ್‌ ಒಂದಕ್ಕಾಗಿ ಬಟ್ಟೆ ಒಗೆಯುವ ಕೆಲಸವನ್ನು ಸಹ ಮಾಡುತ್ತಾರೆ. ಇದರ ಜೊತೆಗೆ ಮಿಸಿಂಗ್‌ ಶೈಲಿಯ ಆಹಾರ ತಯಾರಿಕೆ ಮತ್ತು ಅದನ್ನು ಬಡಿಸುವ ಕೆಲಸವನ್ನೂ ಮಾಡುತ್ತಾರೆ. ಇನ್ನೂರು ಮೊಟ್ಟೆ ಕೋಳಿಗಳನ್ನು ಸಾಕಿರುವ ಅವರು ಹತ್ತಿರದ ಸಣ್ಣ ಹೋಂ ಸ್ಟೇಗಳಿಗೆ ಬಿಸಿ ನೀರನ್ನು ಸಹ ಬಕೆಟುಗಳಲ್ಲಿ ಸರಬರಾಜು ಮಾಡುತ್ತಾರೆ. ಇದೆಲ್ಲದರಲ್ಲಿ ಅವರಿಗೆ ಒಂದು ನೆಮ್ಮದಿಯ ಆದಾಯ ನೀಡುವುದೆಂದರೆ ಅಪಾಂಗ್‌ ತಯಾರಿಕೆ. “ಅಪಾಂಗ್‌ ತಯಾರಿಕೆಯಲ್ಲಿ ನಾನು 1,000 ರೂ ಹೂಡಿಕೆ ಮಾಡಿದರೆ 3,000 ಸಾವಿರ ಮರಳಿ ಸಿಗುತ್ತದೆ. ಅದಕ್ಕಾಗಿಯೇ ನನಗೆ ಈ ಕೆಲಸವೆಂದರೆ ಇಷ್ಟ” ಎನ್ನುತ್ತಾರವರು.

PHOTO • Riya Behl

ಭತ್ತದ ಹುಲ್ಲಿನ ಕರಿ ಮತ್ತು ಅನ್ನದ ಮಿಶ್ರಣ ಮುಂದಿನ ಹಂತಕ್ಕೆ ಬುಟ್ಟಿಯೊಳಗೆ ಇರಿಸಲು ಸಿದ್ಧವಾಗಿದೆ

PHOTO • Priti David

ಅನ್ನವನ್ನು ಪಾತ್ರೆಯಿಂದ ತೆಗೆದುಹಾ ಕಿ ಅದು ತಣ್ಣಗಾಗಲು ಅದನ್ನು ದೊಡ್ಡ ಬಿದಿರಿನ ತಟ್ಟೆಗೆ ಸ್ಥಳಾಂತರಿಸಲು ಜುನಾಲಿ ಲೋಹದ ತಟ್ಟೆಯನ್ನು ಬಳಸುತ್ತಾ ರೆ

PHOTO • Priti David

ನ್ನ ಮತ್ತು ಸುಟ್ಟ ಭತ್ತದ ಹಬೆಯ ಮಿಶ್ರಣವು ಪುಡಿ ಗಿಡಮೂಲಿಕೆಗಳ ವಿಶೇಷ ಸಂಗ್ರಹದೊಂದಿಗೆ ಬೆರೆ ಯಲು ಸಿದ್ಧವಾಗಿದೆ

PHOTO • Riya Behl

ಜುನಾಲಿ ಬರಿಗೈ ಬಳಸಿ ಅನ್ನವನ್ನು ತಿಕ್ಕುವುದು, ಉಂಡೆಗಳನ್ನು ಪುಡಿಮಾಡುವುದು ಮತ್ತು ಗಿಡಮೂಲಿಕೆಗಳನ್ನು ಜಜ್ಜುವ ಕೆಲಸ ಮಾಡುತ್ತಾರೆ

PHOTO • Riya Behl

ಜುನಾಲಿ ತನ್ನ ಬಿಡುವಿಲ್ಲದ ಬೆಳಗಿನ ಹೊತ್ತು ದೊರಕಿದ ಶಾಂತ ಕ್ಷಣವೊಂದನ್ನು ಆನಂದಿಸುತ್ತಿರುವುದು

PHOTO • Riya Behl

ʼ ನೂರು ಗಿಡಮೂಲಿಕೆಗಳು ಮತ್ತು ಎಲೆಗಳನ್ನು ಪಾಂಗ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ” ಎನ್ನುವ ಜುನಾಲಿ ಅವು ಯಾವುವು ಎನ್ನುವುದನ್ನು ತಿಳಿಸಲು ನಿರಾಕರಿಸುತ್ತಾರೆ

PHOTO • Riya Behl

ಕೆಲವು ಎಲೆಗಳು ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ ಮತ್ತು ರಕ್ತದೊತ್ತಡ ನಿವಾರಿಸುವಲ್ಲಿ ಮಿಸಿಂಗ್‌ ಜನರ ನಡುವೆ ಹೆಸರುವಾಸಿಯಾಗಿವೆ

PHOTO • Priti David

ʼ ಗಿಡಮೂಲಿಕೆಗಳನ್ನು ಒಣಗಿಸಿ ಮಿಕ್ಸಿಯಲ್ಲಿ ಪುಡಿಮಾಡಿ ಅದನ್ನು ಸಣ್ಣ ಮುಷ್ಟಿ ಗಾತ್ರದ ಉಂಡೆಗಳನ್ನಾಗಿ ತಯಾರಿಸುತ್ತೇನೆ. ಅಪಾಂಗ್‌ ತಯಾರಿಕೆಯಲ್ಲಿ 15-16 ಒಣಗಿದ ಮತ್ತು ಪುಡಿ ಮಾಡಿದ ಗಿಡಮೂಲಿಕೆಗಳನ್ನು ಬಳಸುತ್ತೇನೆ ʼ ಎಂದು ಅವರು ಹೇಳುತ್ತಾರೆ

PHOTO • Priti David

ಗಿಡಮೂಲಿಕೆಗಳು ಮತ್ತು ಎಲೆಗಳನ್ನು ಒಣಗಿಸಿ ಪುಡಿಮಾಡಲಾಗುತ್ತದೆ, ಅದು ಅಪಾಂಗ್‌ಗೆ ಪರಿಮಳ ಮತ್ತು ಶಕ್ತಿಯನ್ನು ಸೇರಿಸುತ್ತದೆ ಎಂದು ಹೇಳಲಾಗುತ್ತದೆ

PHOTO • Priti David

ಹುದುಗಿಸಿದ ಅಕ್ಕಿಯನ್ನು ಹಳದಿ ಪ್ಲಾಸ್ಟಿಕ್ ಹಾಳೆಯಲ್ಲಿ ಹಾಕಿ 15-20 ದಿನಗಳವರೆಗೆ ಇಡಲಾಗುತ್ತದೆ

PHOTO • Priti David

ತನ್ನ ಅಡುಗೆಮನೆಯ ಮೂಲೆಯಲ್ಲಿ, ಜುನಾಲಿ ಲೋಹದ ಟ್ರೈಪಾಡ್ ಮೇಲೆ ನಿಂತಿರುವ ಶಂಕು ಆಕಾರದ ಬಿದಿರಿನ ಬುಟ್ಟಿಯನ್ನು ಹೊಂದಿದ್ದಾ ರೆ . ಇದು ಅವರು ಅಪಾಂಗ್‌ ತಯಾರಿಸಲು ಬಳಸುವ ಉಪಕರಣ

PHOTO • Priti David
PHOTO • Priti David

ಭಟ್ಟಿ ಪಾತ್ರೆಯ ಕ್ಲೋಸ್-ಅಪ್ (ಎಡ) ಮತ್ತು ಪಾತ್ರೆಯಲ್ಲಿ ಬಿಯರ್ ಸಂಗ್ರಹಣೆ (ಬಲ)

PHOTO • Priti David

ಭರತ್ ಚಾಂಡಿ ಗರಮೂ ರ್‌ ನಲ್ಲಿರುವ ತನ್ನ ರೆಸ್ಟೋರೆಂಟ್, ಮಜುಲಿ ಕಿಚ ನ್‌ ನಲ್ಲಿ ಮಿಸಿಂಗ್ ಆಹಾರವನ್ನು ಬಡಿಸು ತ್ತಿರುವುದು

PHOTO • Priti David

ಅಸ್ಸಾಂನ ಮಜುಲಿ ದ್ವೀಪದ ಗರ ಮೂರ್‌ನ ಲ್ಲಿರುವ ತನ್ನ ಮನೆಯ ಹೊರಗೆ ನಿಂತಿರುವ ಜುನಾಲಿ


ಅನುವಾದ : ಶಂಕರ . ಎನ್ . ಕೆಂಚನೂರು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Photographs : Riya Behl

Riya Behl is Senior Assistant Editor at People’s Archive of Rural India (PARI). As a multimedia journalist, she writes on gender and education. Riya also works closely with students who report for PARI, and with educators to bring PARI stories into the classroom.

Other stories by Riya Behl
Editor : Vinutha Mallya

Vinutha Mallya is a journalist and editor. She was formerly Editorial Chief at People's Archive of Rural India.

Other stories by Vinutha Mallya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru