ಪಾಕಿಸ್ತಾನದ ಗಡಿಯಿಂದ ಸುಮಾರು ನಾಲ್ಕು ಕಿಲೊಮೀಟರ್ ದೂರದಲ್ಲಿ ಇರುವ ತನ್ನ ಅಣ್ಣನ ಗ್ಯಾರೇಜಿನಲ್ಲಿ ಕೆಲಸ ಮಾಡುವ ಶಂಶೇರ್ ಸಿಂಗ್ ತನ್ನ ಉಪಕರಣಗಳ ಕಡೆ ನೋಡುತ್ತಾ ಕುಳಿತಿದ್ದರು. ಅವರು ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆಯಾದರೂ ಇದು ಅವರ ಆಯ್ಕೆಯ ಕೆಲಸವೇನಲ್ಲ.

35 ವರ್ಷದ ಶಂಶೇರ್ ಮೂರನೇ ತಲೆಮಾರಿನ ಪೋರ್ಟರ್ (ಕೂಲಿ) ಆಗಿದ್ದು, ಅವರು ಒಂದು ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಅಟ್ಟಾರಿ-ವ್ಯಾಗಾ ಗಡಿಯಲ್ಲಿ ಕೆಲಸ ಮಾಡಿದ್ದರು. ಅವರ ಕುಟುಂಬವು ರಾಜ್ಯದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಗಳಡಿ ಪಟ್ಟಿ ಮಾಡಲಾಗಿರುವ ಪ್ರಜಾಪತಿ ಸಮುದಾಯಕ್ಕೆ ಸೇರಿದೆ.

ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್ ರಾಜ್ಯದ ಈ ಪ್ರದೇಶದಲ್ಲಿ, ಸಿಮೆಂಟ್, ಜಿಪ್ಸಮ್ ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಹೊತ್ತ ನೂರಾರು ಟ್ರಕ್‌ಗಳು ಒಮ್ಮೆ ಪ್ರತಿದಿನ ಭಾರತಕ್ಕೆ ಆಗಮಿಸುತ್ತವೆ. ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ, ಸೋಯಾಬೀನ್ ಸಾರ ಮತ್ತು ಹತ್ತಿ ನೂಲು ಇತ್ಯಾದಿ ಸರಕುಗಳನ್ನು ಸಾಗಿಸುವ ಟ್ರಕ್‌ಗಳು ಇದೇ ರೀತಿ ಪಾಕಿಸ್ತಾನದತ್ತ ಸಾಗುತ್ತವೆ.

ಇಲ್ಲಿ "ಗಡಿಗೆ ಲಾರಿಗಳಲ್ಲಿ ಬಂದ ಸಾಮಾನು ಸರಂಜಾಮುಗಳನ್ನು ಇಳಿಸುವ ಮತ್ತು ತುಂಬುವ ಕೆಲಸವನ್ನು ಮಾಡುತ್ತಿದ್ದ" ಸುಮಾರು 1,500 ಕೂಲಿಗಳಲ್ಲಿ ಶಂಶೇರ್ ಕೂಡಾ ಒಬ್ಬರಾಗಿದ್ದರು. ಈ ಪ್ರದೇಶದಲ್ಲಿ ಯಾವುದೇ ಕಾರ್ಖಾನೆ ಅಥವಾ ಉದ್ದಿಮೆಗಳು ಇಲ್ಲ. ಹೀಗಾಗಿ ಇಲ್ಲಿನ 20 ಕಿಲೋಮೀಟರ್ ವ್ಯಾಪ್ತಿಯ ಹಳ್ಳಿಗಳ ಜನರು ಈ ಅಟ್ಟಾರಿ-ವಾಘಾ ಗಡಿಗೆ ಬರುವ ಲಾರಿಗಳಿಂದ ಸಿಗುತ್ತಿದ್ದ ಕೂಲಿ ಕೆಲಸವನ್ನೇ ಅವಲಂಬಿಸಿದ್ದರು.

PHOTO • Sanskriti Talwar

ಶಂಶೇರ್ ಅವರು ಅಟ್ಟಾರಿ-ವಾಘಾದಲ್ಲಿರುವ ಭಾರತ ಪಾಕಿಸ್ತಾನ ಗಡಿಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಅವರು ತನ್ನ ಅಣ್ಣನ ಗ್ಯಾರೇಜಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ

ಪುಲ್ವಾಮಾದಲ್ಲಿ 2019ರಲ್ಲಿ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಇದರ ನಂತರ ಈ ಪ್ರದೇಶದಲ್ಲಿ ಸಾಕಷ್ಟು ಸಂಗತಿಗಳು ಬದಲಾಗಿವೆ. ಭಾರತವು ಈ ಘಟನೆಗೆ ಪಾಕಿಸ್ತಾನವೇ ಕಾರಣ ಎಂದು ದೂರಿ ಅದಕ್ಕೆ ನೀಡಲಾಗಿದ್ದ ಮೋಸ್ಟ್ ಫೇವರ್ಡ್ ನೇಷನ್ (ಎಂಎಫ್ಎನ್) ವ್ಯಾಪಾರ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು ಮತ್ತು ಆಮದುಗಳ ಮೇಲೆ ಶೇಕಡಾ 200ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಿತು. ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಭಾರತ ರದ್ದುಪಡಿಸಿದ ನಂತರ ಪಾಕಿಸ್ತಾನವು ವ್ಯಾಪಾರ ನಿರ್ಬಂಧಗಳನ್ನು ಹೇರುವ ಮೂಲಕ ಅದಕ್ಕೆ ಪ್ರತೀಕಾರ ತೀರಿಸಿಕೊಂಡಿತು.

ಹತ್ತಿರದ ಗಡಿ ಹಳ್ಳಿಗಳಲ್ಲಿ ವಾಸಿಸುವ ಕೂಲಿಗಳು ಮತ್ತು ಅಮೃತಸರ ಜಿಲ್ಲೆಯ 9,000ಕ್ಕೂ ಹೆಚ್ಚು ಕುಟುಂಬಗಳು ಇದರಿಂದಾಗಿ ಪರೋಕ್ಷ ಹಾನಿಗೊಳಗಾಗಿವೆ ಎಂದು ಬ್ಯೂರೋ ಆಫ್ ರಿಸರ್ಚ್ ಆನ್ ಇಂಡಸ್ಟ್ರಿ ಅಂಡ್ ಎಕನಾಮಿಕ್ ಫಂಡಮೆಂಟಲ್ಸ್ (ಬ್ರೀಫ್) ನಡೆಸಿದ 2020ರ ಅಧ್ಯಯನವು ಹೇಳುತ್ತದೆ.

ಅಮೃತಸರ ನಗರಕ್ಕೆ ಉದ್ಯೋಗಕ್ಕೆ ಹೋಗಲು ಸ್ಥಳೀಯ ಬಸ್ಸಿನಲ್ಲಿ 30 ಕಿಲೋಮೀಟರ್ ಪ್ರಯಾಣದ ಹೆಚ್ಚುವರಿ ವೆಚ್ಚವಿದೆ - ಪ್ರಯಾಣಕ್ಕೆ ಸುಮಾರು 100 ರೂ. ಖರ್ಚಾಗುತ್ತದೆ ಮತ್ತು ಅಲ್ಲಿ ಕೂಲಿ ಕೆಲಸಕ್ಕೆ ಸಿಗುವುದು ಸುಮಾರು 300 ರೂ.ಗಳು.  "ದಿನಕ್ಕೆ 200 ರೂಪಾಯಿಗಳನ್ನು ಮನೆಗೆ ತರುವುದರಲ್ಲಿ ಏನು ಅರ್ಥವಿದೆ?" ಎಂದು ಸಂಶೇರ್‌ ಕೇಳುತ್ತಾರೆ.

ರಾಜತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ದೆಹಲಿಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಕೂಲಿಗಳು, ಸರ್ಕಾರವು ತಮ್ಮ ಅಳಲನ್ನು ಕೇಳುತ್ತಿಲ್ಲ ಎಂದು ಹೇಳುತ್ತಾರೆ, ಆದರೆ ಆಡಳಿತ ಪಕ್ಷದ ಸಂಸತ್ ಸದಸ್ಯರಿದ್ದರೆ ತಮ್ಮ ಧ್ವನಿಗೆ ಬಲ ಬರತ್ತದೆ. ಇದಲ್ಲದೆ, ಸಂಸದರು ಗಡಿಯನ್ನು ಮತ್ತೆ ತೆರೆಯುವಂತೆ ಒತ್ತಾಯಿಸುತ್ತಾರೆ, ಅದು ಅವರ ಉದ್ಯೋಗಗಳನ್ನು ಅವರಿಗೆ ಮರಳಿ ಕೊಡಿಸುತ್ತದೆ ಎನ್ನುವ ನಂಬಿಕೆ ಅವರದು.

PHOTO • Sanskriti Talwar
PHOTO • Sanskriti Talwar

ಬಲ್ಜಿತ್ ಸಿಂಗ್ (ನಿಂತಿರುವವರು), ಅವರ ಅಣ್ಣ ಸಂಜಿತ್ ಸಿಂಗ್ (ಕುಳಿತಿರುವವರು) ರೋರನ್ ವಾಲಾ ನಿವಾಸಿಗಳು. ಬಲಜಿತ್ ಈ ಮೊದಲು ಗಡಿಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ತಮ್ಮ ಕೆಲಸ ಕಳೆದುಕೊಂಡಿದ್ದಾರೆ

ಬಲ: ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಬಳಿ ಪಾಕಿಸ್ತಾನದಿಂದ ವಿವಿಧ ಸರಕುಗಳನ್ನು ಸಾಗಿಸುವ ಲಾರಿಗಳು ಪ್ರತಿದಿನ ಭಾರತಕ್ಕೆ ಬರುತ್ತಿದ್ದರೆ, ಭಾರತದ ಲಾರಿಗಳು ಪಾಕಿಸ್ತಾನಕ್ಕೆ ಪ್ರವೇಶಿಸಿಸುತ್ತಿದ್ದವು. ಆದರೆ 2019ರ ಪುಲ್ವಾಮಾ ಘಟನೆಯ ನಂತರ ನೆರೆಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಮುರಿದುಬಿದ್ದವು ಮತ್ತು ಇದರ ತೀವ್ರ ಪರಿಣಾಮವಾಗಿ ಕೂಲಿಗಳು ಕೆಲಸ ಕಳೆದುಕೊಂಡರು

ಈಗ ಬೆಳೆಗಳನ್ನು ಹೊತ್ತ ಅಫ್ಘಾನಿಸ್ಥಾನದ ಲಾರಿಗಳು ಬಂದಾಗಲಷ್ಟೇ ಕೃಷಿ ಹಂಗಾಮಿನಲ್ಲಿ ಅವರಿಗೆ ಒಂದಷ್ಟು ಕೆಲಸ ಸಿಗುತ್ತದೆ. ಅವರು ಆ ಕೆಲಸವನ್ನು ಹಿರಿಯ ಕೂಲಿಯವರಿಗೆ ನೀಡುತ್ತಾರೆ. ಏಕೆಂದರೆ ಅವರ ಪಾಲಿಗೆ ಕೆಲಸ ಹುಡುಕುವುದು ಇನ್ನೂ ಕಷ್ಟ.

ಗಡಿಯನ್ನು ಮುಚ್ಚುವ ಕ್ರಿಯೆ ಪ್ರತೀಕಾರ ಎನ್ನುವುದನ್ನು ಇಲ್ಲಿನ ಕೂಲಿಗಳು ಅರ್ಥಮಾಡಿಕೊಂಡಿದ್ದಾರೆ. "1,500 ಬಂದೇ ಆವ್ನಾ ದಾ ದೀ ಚೂಲೆ ಥಂಡೆ ಕರನ್ ಲಾಗೆ ಸೌ ಬಾರಿ ಸೋಚನಾ ಚಾಹಿದಾ [ಆದರೆ ತಾವು ಆ ಮೂಲಕ ಇಲ್ಲಿನ ಅನೇಕ ಕುಟುಂಬಗಳ ಅಡುಗೆ ಒಲೆಯ ಬೆಂಕಿ ತಣ್ಣಗಾಗಿಸಲು ಕಾರಣರಾಗಿರುವುದನ್ನೂ ಸಹ ಅರ್ಥ ಮಾಡಿಕೊಳ್ಳಬೇಕು]" ಎಂದು ಶಂಶೇರ್ ಹೇಳುತ್ತಾರೆ.

ಕಳೆದ ಐದು ವರ್ಷಗಳಿಂದ, ಇಲ್ಲಿನ ಕೂಲಿಗಳು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. "ಕಳೆದ ಐದು ವರ್ಷಗಳಲ್ಲಿ ಗಡಿಯನ್ನು ಮತ್ತೆ ತೆರೆಯುವಂತೆ ವಿನಂತಿಸಿ ನಾವು ನಮ್ಮ ಮಾಂಗ್ ಪತ್ರದೊಂದಿಗೆ (ಜ್ಞಾಪಕ ಪತ್ರ) ಸಂಪರ್ಕಿಸದ ರಾಜ್ಯ ಮತ್ತು ಕೇಂದ್ರದ ಯಾವುದೇ ಆಡಳಿತಾರೂಢ ಸರ್ಕಾರವಿಲ್ಲ" ಎಂದು ಅವರು ಹೇಳುತ್ತಾರೆ.

ಕೌಂಕೆ ಗ್ರಾಮದ ದಲಿತ ಕೂಲಿ ಸೂಚಾ ಸಿಂಗ್, "ಅಮೃತಸರದ ಹಾಲಿ ಸಂಸದ, ಕಾಂಗ್ರೆಸ್ ಪಕ್ಷದ ಗುರ್ಜೀತ್ ಸಿಂಗ್ ಔಜ್ಲಾ ಅವರು ನಿವಾಸಿಗಳ ಜೀವನೋಪಾಯಕ್ಕಾಗಿ ಗಡಿಯನ್ನು ಮತ್ತೆ ತೆರೆಯುವ ಬಗ್ಗೆ ಸಂಸತ್ತಿನಲ್ಲಿ ಮೋದಿ ಸರ್ಕಾರದೊಂದಿಗೆ ಆಗಾಗ್ಗೆ ಮಾತನಾಡಿದ್ದಾರೆ. ಆದರೆ, ಅವರ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲದ ಕಾರಣ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ" ಎಂದು ಹೇಳಿದರು.

PHOTO • Sanskriti Talwar
PHOTO • Sanskriti Talwar

ಬಲ್ಜಿತ್ ಸಿಂಗ್ (ನಿಂತಿರುವವರು), ಅವರ ಅಣ್ಣ ಸಂಜಿತ್ ಸಿಂಗ್ (ಕುಳಿತಿರುವವರು) ರೋರನ್ ವಾಲಾ ನಿವಾಸಿಗಳು. ಬಲಜಿತ್ ಈ ಮೊದಲು ಗಡಿಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಬಲ: ಹರ್ಜೀತ್ ಸಿಂಗ್ ಮತ್ತು ಅವರ ನೆರೆಮನೆಯವರಾದ ಸಂದೀಪ್ ಸಿಂಗ್ ಇಬ್ಬರೂ ಕೂಲಿಗಳಾಗಿದ್ದರು. ಹರ್ಜೀತ್ ಈಗ ಹಣ್ಣಿನ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಸಂದೀಪ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರು ಸೇರಿ ಅಟ್ಟಾರಿಯಲ್ಲಿರುವ ಹರ್ಜೀತ್ ಅವರ ಮನೆಯ ಛಾವಣಿಯನ್ನು ದುರಸ್ತಿ ಮಾಡುತ್ತಿದ್ದಾರೆ

PHOTO • Sanskriti Talwar
PHOTO • Sanskriti Talwar

ಎಡ: ರೋರನ್‌ವಾಲಾ ನಿವಾಸಿಗಳಾದ ಬಲ್ಜಿತ್ (ನಿಂತಿರುವ) ಮತ್ತು ಅವರ ಹಿರಿಯ ಸಹೋದರ ಸಂಜಿತ್ ಸಿಂಗ್ (ಕುಳಿತಿರುವ) ಕೂಡ ಕೂಲಿ ಕೆಲಸ ಕಳೆದುಕೊಂಡಿದ್ದಾರೆ. ಬಲ: ಏಳು ಜನರಿರುವ ಅವರ ಕುಟುಂಬದಲ್ಲಿ, ಪ್ರಸ್ತುತ ಅವರ ತಾಯಿ ಮಂಜಿತ್ ಕೌರ್ ಅವರಿಗೆ ಪ್ರತಿ ತಿಂಗಳು ಸಿಗುವ 1,500 ರೂಪಾಯಿಗಳ ವಿಧವಾ ಪಿಂಚಣಿ ಏಕೈಕ ಸ್ಥಿರ ಆದಾಯದ ಮೂಲವಾಗಿದೆ

ಕೂಲಿ ಕೆಲಸವನ್ನು ಕಳೆದುಕೊಂಡ ನಂತರ, 55 ವರ್ಷದ ಈ ದಲಿತ ಮಜಾಬಿ ಸಿಖ್ ತನ್ನ ಮಗನೊಂದಿಗೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು, ದಿನಕ್ಕೆ ಸುಮಾರು 300 ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಗೂ ಮುಂಚಿನ ಭಾರಿ ಒಮ್ಮತವು ಕುತೂಹಲಕಾರಿಯಾಗಿತ್ತು. ಶಂಶೇರ್ ವಿವರಿಸುವಂತೆ: "ನಾವು ಈ ಚುನಾವಣೆಗೆ ನೋಟಾ ಹಾಕುವಂತೆ ಒತ್ತಾಯಿಸಲು ಬಯಸಿದ್ದೆವು, ಆದರೆ ನಮ್ಮ ಜೀವನೋಪಾಯ [ಕೂಲಿಗಳಾಗಿ] ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಬಿಜೆಪಿಗೆ (ಭಾರತೀಯ ಜನತಾ ಪಕ್ಷಕ್ಕೆ) ಮತ ಚಲಾಯಿಸುವ ಬಯಕೆ ನಮಗಿಲ್ಲ, ಆದರೆ ಸದ್ಯಕ್ಕೆ ಅದು ಅಗತ್ಯವಾಗಿದೆ" ಎಂದು ಅವರು ಹೇಳಿದರು.

ಜೂನ್ 4, 2024ರಂದು ಘೋಷಿಸಲಾದ ಚುನಾವಣಾ ಫಲಿತಾಂಶದ ಪ್ರಕಾರ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗುರ್ಜೀತ್ ಸಿಂಗ್ ಔಜ್ಲಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು ಗಡಿ ರಾಜಕೀಯದ ಮೇಲೆ ಪ್ರಭಾವ ಬೀರುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanskriti Talwar

Sanskriti Talwar is an independent journalist based in New Delhi, and a PARI MMF Fellow for 2023.

Other stories by Sanskriti Talwar
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru