ದೇಬಶಿಶ್ ಮೊಂಡಲ್ ತನ್ನ ಮನೆಯ ಒಡೆದ ಗೋಡೆಗಳತ್ತ ಒಮ್ಮೆ ಕಣ್ಣು ಹಾಯಿಸಿದರು. 35 ವರ್ಷಗಳ ಹಿಂದೆ ಅವರು ಜನಿಸಿದ ಮನೆಯ ಗುರುತಾಗಿ ಒಡೆದ ಇಟ್ಟಿಗೆ, ಸಿಮೆಂಟ್ ತುಂಡುಗಳು ಮತ್ತು ಮುರಿದ ಛಾವಣಿ ಮಾತ್ರ ಉಳಿದಿದ್ದವು.

ನವೆಂಬರ್ 11ರಂದು, ಉತ್ತರ ಕೋಲ್ಕತ್ತಾದ ತಲ್ಲಾ ಸೇತುವೆಯ ಅಡಿಯಲ್ಲಿ, ಅವರು ವಾಸಿಸುತ್ತಿದ್ದ ಕಾಲೋನಿ, ಸುಮಾರು 60 ಕುಟುಂಬಗಳಿಗೆ ನೆಲೆಯಾಗಿತ್ತು, ಅದು ಈಗ ಅವಶೇಷಗಳಾಗಿ ಕುಸಿದು ಬಿದ್ದಿದೆ. ಸ್ಥಳೀಯ ಪುರಸಭೆಯ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಸಿಬ್ಬಂದಿಗಳು ಪೊಲೀಸರೊಂದಿಗೆ ಬೆಳಿಗ್ಗೆ 10:30ರ ಸುಮಾರಿಗೆ ಬಂದರು. ಅವರು ಮನೆಗಳನ್ನು ಕೆಡವಲು ಕಾರ್ಮಿಕರನ್ನು ಕರೆತಂದಿದ್ದರು ಮತ್ತು ಎರಡು ದಿನಗಳ ನಂತರ ಕೆಲವು ಬುಲ್ಡೋಜರ್‌ಗಳನ್ನು ತರಿಸಿದ್ದರು. ಬಸ್ತಿಯನ್ನು ತೆಗೆಯಲು ಸುಮಾರು ಒಂದು ವಾರ ಬೇಕಾಯಿತು. ಅರ್ಧ ಕೆಡವಲಾದ ಎರಡು ಮನೆಗಳು ಇನ್ನೂ ನಿಂತಿವೆ, ಆದರೆ ದಿನಗೂಲಿ ಕಾರ್ಮಿಕರು (ಡಿಸೆಂಬರ್‌ನಲ್ಲಿ) ನೆಲವನ್ನು ಸಮತಟ್ಟುಗೊಳಿಸಲು ಅವಶೇಷಗಳನ್ನು ತೆರವುಗೊಳಿಸುವ ಕೆಲಸವನ್ನು ಮುಂದುವರೆಸಿದ್ದಾರೆ.

ತಲ್ಲಾ ಸೇತುವೆಯು ಬಿಟಿ ರಸ್ತೆಯ ನಜ್ರುಲ್ ಪಲ್ಲಿ ಮಾರ್ಗದಲ್ಲಿದೆ. ಬಸ್ತಿ ನಿವಾಸಿಗಳು ತಮ್ಮ ಕಾಲೋನಿ - ಪಿಡಬ್ಲ್ಯೂಡಿ ಯ ಭೂಮಿಯಲ್ಲಿ ನಿರ್ಮಿಸಲಾಗಿದೆ - 70 ವರ್ಷಕ್ಕಿಂತ ಹಳೆಯದು ಎಂದು ಅಂದಾಜಿಸುತ್ತಾರೆ.

"ಅದು ನಮ್ಮ ಪಾಲಿಗೆ ವಿದ್ಯುತ್ ಆಘಾತದಂತಿತ್ತು!" ಎಂದು ಆಂಬ್ಯುಲೆನ್ಸ್ ಡ್ರೈವರ್ ಆಗಿರುವ ದೇಬಾಶಿಶ್ ತಿಂಗಳಿಗೆ 9,000 ರೂ. ಸಂಪಾದಿಸುತ್ತಾರೆ. ಅವರು ತಂದೆ ಹುಟ್ಟಿದ ಗುಡಿಸಲಿನಲ್ಲಿ ಪಕ್ಕಾ ಮನೆ ಕಟ್ಟಲು ಸ್ಥಳೀಯ ಲೇವಾದೇವಿಗಾರರು ಹಾಗೂ ಸ್ನೇಹಿತರ ಬಳಿ ಸುಮಾರು 1.5 ಲಕ್ಷ ಸಾಲ ಮಾಡಿಕೊಂಡಿದ್ದರು. ಅವರ ಅಜ್ಜ, ಅಜ್ಜಿಯರು ಉತ್ತರ 24 ಪರಗಣ ಜಿಲ್ಲೆಯ ಸುಂದರಬನ್ಸ್‌ನ ಭಾಗದ ಸಂದೇಶ್‌ಖಾಲಿ II ಬ್ಲಾಕ್‌ನಲ್ಲಿರುವ ದಾವೂದ್‌ಪುರ ಗ್ರಾಮದಿಂದ ಕೆಲಸ ಹುಡುಕಿಕೊಂಡು ಹಲವು ದಶಕಗಳ ಹಿಂದೆ ಕೋಲ್ಕತ್ತಾಗೆ ಬಂದಿದ್ದರು.

ದೇಬಶಿಶ್ ನಿರ್ಮಿಸಿದ್ದ ಮನೆ ನೆಲಸಮಗೊಂಡಿದೆ. ಅವರ ಹೆಚ್ಚಿನ ಬಡ್ಡಿಯ ಸಾಲವು ಉಳಿದಿದೆ.

ಸೆ.24ರಂದು ಪಿಡಬ್ಲ್ಯೂಡಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸೇತುವೆಯನ್ನು ದುರಸ್ತಿಗೊಳಿಸುವಂತೆ ಮೌಖಿಕವಾಗಿ ತಿಳಿಸಿದಾಗ ತಲ್ಲಾ ಕಾಲೊನಿ ನಿವಾಸಿಗಳಿಗೆ ತೊಂದರೆ ಆರಂಭವಾಯಿತು. ಅವರು ಕೆಲವು ಸಾಮಾನುಗಳೊಂದಿಗೆ ಹೊರಡಬೇಕಾಗಿತ್ತು ಮತ್ತು ರಿಪೇರಿ ಪೂರ್ಣಗೊಂಡ ನಂತರ ಹಿಂತಿರುಗಬಹುದಾಗಿತ್ತು. ಸೆಪ್ಟೆಂಬರ್ 25ರ ಸಂಜೆ, 60 ಕುಟುಂಬಗಳನ್ನು ಎರಡು ಹತ್ತಿರದ ಸಾರಿಗೆ ಶಿಬಿರಗಳಿಗೆ ಕಾಲುವೆಯ ಬಳಿ, ಒಂದು ರೈಲ್ವೇ ಭೂಮಿಯಲ್ಲಿ, ಇನ್ನೊಂದು ರಾಜ್ಯ ನೀರಾವರಿ ಇಲಾಖೆಯ ಒಡೆತನದ ಜಮೀನಿನ ಹತ್ತಿರ ಸ್ಥಳಾಂತರಿಸಲಾಯಿತು.

PHOTO • Smita Khator

ಅವಶೇಷಗಳ ರಾಶಿ: ಕೆಡವಲಾದ ತಲ್ಲಾ ಸೇತುವೆ ಬಸ್ತಿ ಮತ್ತು ಒಡೆದ ಮನೆಯ ಮೇಲೆ ನಿಂತಿರುವ ದೇಬಶಿಶ್ ಮೊಂಡಲ್ (ಮೇಲಿನ ಬಲ) ಅವರು ಉಳಿತಾಯದ ಹಣ ಮತ್ತು ಸಾಲ ಪಡೆದು ಮನೆ ನಿರ್ಮಿಸಿದ್ದರು

ಸುಮಾರು 10 ಇತರ ಕುಟುಂಬಗಳು ತಲ್ಲಾಹ್ ವಸಾಹತಿನ ಇನ್ನೊಂದು ಬದಿಯಲ್ಲಿ ರಸ್ತೆಯುದ್ದಕ್ಕೂ ವಾಸಿಸುತ್ತಿತ್ತಾ ಪುನರ್ವಸತಿಗಾಗಿ ಕಾಯುತ್ತಿದ್ದಾರೆ. ಈ 10 ಕುಟುಂಬಗಳಲ್ಲಿ ಪಾರುಲ್ ಕರಣ್ ಕೂಡ ಅವರ ಕುಟುಂಬವೂ ಒಂದು. ಅವರು ಮಾಜಿ ಮನೆಕೆಲಸಗಾರ್ತಿ, ಈಗ ಸುಮಾರು 70 ವರ್ಷ ವಯಸ್ಸಿನವರು. ಸೇತುವೆಯನ್ನು ತೋರಿಸುತ್ತಾ, ಅವರು ಹೇಳುತ್ತಾರೆ, “ಇದು ಮೂಲತಃ ಮರದಿಂದ ಮಾಡಲ್ಪಟ್ಟಿತ್ತು. ಹಲವು ವರ್ಷಗಳ ಹಿಂದೆ ಡಬಲ್ ಡೆಕ್ಕರ್ ಬಸ್ ಅಲ್ಲಿಂದ ಕೆಳಗೆ ಬಿದ್ದಿತ್ತು. ಮರದ ಸೇತುವೆಯ ಸ್ಥಳದಲ್ಲಿ ಕಾಂಕ್ರೀಟ್‌ ಸೇತುವೆ ಮಾಡಿದಾಗ, ಯಾರನ್ನೂ ಇಲ್ಲಿಂದ ಹೊರಹಾಕಿರಲಿಲ್ಲ. ಪಾರುಲ್ ವಿಧವೆ ಮತ್ತು ಮಧುಮೇಹಿ; ಅವರ ಮಗಳು ಮನೆಯ ಸಹಾಯಕಿಯಾಗಿ ಕೆಲಸ ಮಾಡುವ ಮೂಲಕ ಅವರ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ.

ಕರಣ್ ಅವರ ಕುಟುಂಬವು ಸುಮಾರು 50 ವರ್ಷಗಳ ಹಿಂದೆ ದಾವೂದ್‌ಪುರ ಗ್ರಾಮದಿಂದ ಕೋಲ್ಕತ್ತಾಕ್ಕೆ ಬಂದಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಸುಂದರಬನದಲ್ಲಿ ಹಾವು ಮತ್ತು ಕಪ್ಪೆಗಳ ನಡುವೆ ಕೆಸರು ಮತ್ತು ನೀರಿನಲ್ಲಿ ಬದುಕುವುದು ಸುಲಭವಲ್ಲ. ನಾವು ಹಳ್ಳಿಯಿಂದ ಬಂದಾಗ, ಈ ಸ್ಥಳವು ಹುಲ್ಲಿನಿಂದ ತುಂಬಿತ್ತು ಅಲ್ಲದೆ ಗೂಂಡಾಗಳು ಮತ್ತು ಬದ್ಮಾಶ್‌ಗಳು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದರು,” ಎಂದು ಅವರು ಹೇಳುತ್ತಾರೆ. "ಬಾಬುಗಳ ಮನೆಯಲ್ಲಿ ಕೆಲಸ ಮಾಡಿದ ನಂತರ ನಾವು ಮಧ್ಯಾಹ್ನ ನೇರವಾಗಿ ಮನೆಗೆ ಮರಳಬೇಕಾಗಿತ್ತು."

ಪಾರುಲ್ ಅವರ ನೆರೆಹೊರೆಯವರು ಸ್ಥಳಾಂತರಗೊಂಡಿರುವ ಸಂಚಾರಿ ಕ್ಯಾಂಪ್‌ಗಳು ಕಪ್ಪು ಟಾರ್ಪಾಲಿನ್ ಶೀಟ್‌ಗಳಿಂದ ಮುಚ್ಚಿದ ಉದ್ದವಾದ ಬಿದಿರಿನ ರಚನೆಗಳಾಗಿವೆ, ಇದನ್ನು ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಿಸಿದೆ. ಪ್ರತಿಯೊಂದು ರಚನೆಯನ್ನು 100 ಚದರ ಅಡಿಗಳ ಕೊಠಡಿಗಳಾಗಿ ವಿಂಗಡಿಸಲಾಗಿದೆ. ಸಂಜೆ 5 ಗಂಟೆಯಿಂದ ಮಾತ್ರ ವಿದ್ಯುತ್ ಲಭ್ಯ. ಹಗಲಿನಲ್ಲಿ ಕಪ್ಪು ಟಾರ್ಪಾಲಿನ್‌ನಿಂದ, ಕೋಣೆಗಳ ಒಳಗೆ ಕತ್ತಲೆ ಇರುತ್ತದೆ. ರೈಲ್ವೆ ಯಾರ್ಡ್‌ನಲ್ಲಿರುವ ಶಿಬಿರವು ತಗ್ಗು ಪ್ರದೇಶದಲ್ಲಿದ್ದು, ನವೆಂಬರ್ 9ರಂದು ಬುಲ್ಬುಲ್ ಚಂಡಮಾರುತದ ಸಮಯದಲ್ಲಿ ಪ್ರವಾಹಕ್ಕೆ ಸಿಲುಕಿತ್ತು.

"ಚಂಡಮಾರುತ ಬಂದ ದಿನ, ಈ ಸ್ಥಳವು ಸಂಪೂರ್ಣವಾಗಿ ಜಲಾವೃತವಾಯಿತು" ಎಂದು ಹತ್ತಿರದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಶ್ರೇಯಾ ಮೊಂಡಲ್ ಹೇಳುತ್ತಾಳೆ. ಅವಳು ಮತ್ತು ಬಸ್ತಿಯ ಕೆಲವು ಮಕ್ಕಳು ಪಕ್ಕದ ಮೈದಾನದಲ್ಲಿ ಆಟವಾಡುತ್ತಿದ್ದರು. ನಾನು ರೈಲ್ವೇ ಅಂಗಳದ ಶಿಬಿರಕ್ಕೆ ಭೇಟಿ ನೀಡಿದಾಗ "ನಮ್ಮ ಕೋಣೆಗಳಲ್ಲಿ ಮೊಣಕಾಲು ಆಳದ ನೀರು ಇತ್ತು. ತುಂಬಾ ಕಷ್ಟಪಟ್ಟು ನಮ್ಮ ಪುಸ್ತಕಗಳನ್ನು ಉಳಿಸಿಕೊಂಡೆವು. ಕೆಡುಗುವ ಸಮಯದಲ್ಲಿ ನಾವು ನಮ್ಮ ಹಲವಾರು ಆಟಿಕೆಗಳನ್ನು ಕಳೆದುಕೊಂಡಿದ್ದೇವೆ, ಹಗ್ಗಗಳು ಮತ್ತು ಗೊಂಬೆಗಳನ್ನು ಕಳೆದುಕೊಂಡಿದ್ದೇವೆ..."

PHOTO • Smita Khator

ಮೇಲಿನ ಎಡಚಿತ್ರ: ಪಾರುಲ್ ಕರಣ್, ಪಾರುಲ್ ಮೊಂಡಲ್ (ಮಧ್ಯ) ಮತ್ತು ಅವರ ಅತ್ತಿಗೆ ಅವರು 50 ವರ್ಷಗಳ ಹಿಂದೆಯಿಂದಲೆ ಸೇತುವೆಯ ಕೆಳಗೆ ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಮೇಲಿನ ಬಲಚಿತ್ರ: ಇನ್ನೂ ಸ್ಥಳಾಂತರಗೊಳ್ಳದ ಕರಣ್ ಮತ್ತು ಅವರ ಮಗಳು ತಮ್ಮ ವಿದ್ಯುತ್ ಬಿಲ್ ತೋರಿಸುತ್ತಿರುವುದು, ಈ ಮೂಲಕ ಅವರು ಕಾನೂನುಬದ್ಧ ನಿವಾಸಿಗಳು ಎಂದು ಸಾಬೀತುಪಡಿಸಲು ಆಶಿಸುತ್ತಿದ್ದಾರೆ. ಕೆಳಗಿನ ಸಾಲು: ರೈಲ್ವೇ ಯಾರ್ಡ್‌ನಲ್ಲಿ (ಎಡ) ಮತ್ತು ಚಿತ್‌ಪುರ ಕಾಲುವೆಯ ಬಳಿ (ಬಲ) 'ಸಂಚಾರಿ ಕ್ಯಾಂಪ್‌ಗಳು'

ಎರಡೂ ಶಿಬಿರಗಳ ಜನರು ಬಸ್ತಿಯಲ್ಲಿ ನಿರ್ಮಿಸಿರುವ ಅದೇ ಶೌಚಾಲಯದ ಬ್ಲಾಕ್ ಬಳಸುತ್ತಿದ್ದಾರೆ (ಅದನ್ನು ಇನ್ನೂ ನೆಲಸಮ ಮಾಡಿಲ್ಲ). ರೈಲ್ವೇ ಯಾರ್ಡ್‌ನೊಂದಿಗೆ ಕ್ಯಾಂಪ್‌ಗಿಂತ ತಲ್ಲಾ ಸೇತುವೆಯಿಂದ ಸ್ವಲ್ಪ ದೂರದಲ್ಲಿರುವ ಕಾಲುವೆಯ ಸಮೀಪವಿರುವ ಸಂಚಾರಿ ಕ್ಯಾಂಪ್‌ನ ನಿವಾಸಿಗಳು ಪಾವತಿಸಿ ಬಳಸುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ, ಅದು ರಾತ್ರಿ 8 ಗಂಟೆಗೆ ಮುಚ್ಚುತ್ತದೆ. ಇದರ ನಂತರ, ಅವರು ಕೆಡವಲ್ಪಟ್ಟ ಅವಶೇಷಗಳ ನಡುವೆ ಶೌಚಾಲಯಕ್ಕೆ ನಡೆಯಬೇಕು - ಮತ್ತು ರಾತ್ರಿಯಲ್ಲಿ ಅಲ್ಲಿಗೆ ಹೋಗುವುದು ಅಸುರಕ್ಷಿತ ಎಂದು ಮಹಿಳೆಯರು ದೂರುತ್ತಾರೆ.

ಕಾಲುವೆಯ ಬಳಿ, ನಾನು 32 ವರ್ಷದ ನೀಲಂ ಮೆಹ್ತಾ ಅವರನ್ನು ಭೇಟಿಯಾದೆ. ಬಿಹಾರದ ಜಮುಯಿ ಜಿಲ್ಲೆಯ ಹಳ್ಳಿಯೊಂದರಿಂದ ಕೋಲ್ಕತ್ತಾಕ್ಕೆ ಬಂದ ಆಕೆಯ ಪತಿ ಸಟ್ಟು (ಕಡ್ಲೆಹಿಟ್ಟು) ಮಾರುವ ಬೀದಿ ವ್ಯಾಪಾರಿ. ನೀಲಂ ಮನೆ ಕೆಲಸಗಾರ್ತಿ. "ನಾವು ಎಲ್ಲಿಗೆ ಹೋಗುವುದು?" ಎಂದು ಕೇಳುತ್ತಾರೆ. “ನಾವು ಹೇಗೋ ಬದುಕುತ್ತಿದ್ದೇವೆ. ಹಲವು ವರ್ಷಗಳಿಂದ ಇಲ್ಲಿದ್ದೇವೆ. ನನ್ನ ಮಗಳು ಉತ್ತಮ ಭವಿಷ್ಯವನ್ನು ಹೊಂದಬೇಕೆಂದು ನನಗೆ ಆಸೆ ಇದೆ. ಅವಳು ಜನರ ಮನೆಗಳಲ್ಲಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ನನ್ನ ಮಗನೂ ಓದುತ್ತಿದ್ದಾನೆ. ಈ ಪರಿಸ್ಥಿತಿಯಲ್ಲಿ ನಾವು ಬದುಕುವುದು ಹೇಗೆ ಹೇಳಿ?”

ಕಾಲುವೆ ಕ್ಯಾಂಪ್ ಬಳಿ ಶೌಚಾಲಯ ನಿರ್ಮಿಸಲಾಗುವುದು ಎಂದು ಭರವಸೆ ನೀಡಲಾಗಿದೆ ಎಂದು ಅವರು ಹೇಳುತ್ತಾರೆ. ಅಲ್ಲಿಯವರೆಗೆ ಅವಳು ಮತ್ತು ಇತರ ಅನೇಕರು ಸಾರ್ವಜನಿಕ ಶೌಚಾಲಯಕ್ಕೆ ಪ್ರತಿಬಾರಿ ಎರಡು ರೂಪಾಯಿ ಕೊಡಬೇಕು. "ಶೌಚಾಲಯಗಳಿಗೆ ಪ್ರತಿಬಾರಿಯೂ ಹೇಗೆ ಪಾವತಿಸಲು ಸಾಧ್ಯ? ರಾತ್ರಿಯಲ್ಲಿ ಮಹಿಳೆಯರು ಮತ್ತು ಯುವತಿಯರು ಎಲ್ಲಿಗೆ ಹೋಗಬೇಕು? ಏನಾದರೂ ಸಂಭವಿಸಿದರೆ ಯಾರು ಹೊಣೆ ಹೊರುತ್ತಾರೆ? ಎಂದು ಕೇಳುತ್ತಾಳೆ.

ಅವರ 15 ವರ್ಷದ ಮಗಳು ನೇಹಾ ತನ್ನ ತಾಯಿಯ ಪಕ್ಕದಲ್ಲಿ ತಮ್ಮ ಸಂಚಾರಿ ಕ್ಯಾಂಪ್ ಕೋಣೆಯ ನೆಲದ ಮೇಲೆ ಕುಳಿತು ಓದುತ್ತಿದ್ದಾಳೆ. "ಈ ರೀತಿ ಓದುವುದು ತುಂಬಾ ಕಷ್ಟ," ಎಂದು ಅವಳು ಹೇಳುತ್ತಾಳೆ. "ಇಡೀ ದಿನ ವಿದ್ಯುತ್ ಇರುವುದಿಲ್ಲ. ನಾವು ನಮ್ಮ ಅಧ್ಯಯನವನ್ನು ಹೇಗೆ ಪೂರ್ಣಗೊಳಿಸಲು ಸಾಧ್ಯ?"

Left: 'Where will we go?' asks Neelam Mehta, while her daughter Neha struggles to study. Right: Dhiren Mondo asks, 'Tell me, where should we go?'
PHOTO • Smita Khator
Left: 'Where will we go?' asks Neelam Mehta, while her daughter Neha struggles to study. Right: Dhiren Mondo asks, 'Tell me, where should we go?'
PHOTO • Smita Khator

ಎಡ: 'ನಾವು ಎಲ್ಲಿಗೆ ಹೋಗಬೇಕು?' ನೀಲಮ್ ಮೆಹ್ತಾ ಕೇಳುತ್ತಾರೆ, ಆಕೆಯ ಮಗಳು ನೇಹಾ ಓದಲು ಕಷ್ಟಪಡುತ್ತಾಳೆ. ಬಲ: ಧಿರೇನ್ ಮೊಂಡಲ್, 'ಹೇಳಿ, ನಾವು ಎಲ್ಲಿಗೆ ಹೋಗಬೇಕು?'

ಆಶ್ರಯಕ್ಕೆ ಹೋಗುವ ದಾರಿಯಲ್ಲಿ ದುರ್ಗಾ ದೇವಿಯ ದೇವಸ್ಥಾನವಿದೆ. ಇಲ್ಲಿ ಸಂಜೆಯ ಪ್ರಾರ್ಥನೆಯನ್ನು 80 ವರ್ಷದ ಧಿರೇನ್ ಮೊಂಡಲ್ ಅವರು ಸಲ್ಲಿಸುತ್ತಾರೆ, ಅವರು ಈಗ ರೈಲ್ವೇ ಯಾರ್ಡ್ ಸಂಚಾರಿ ಕ್ಯಾಂಪ್‌ನಲ್ಲಿರುವ ಕೋಣೆಯಲ್ಲಿ ತಂಗಿದ್ದಾರೆ. "ನಾನು 50 ವರ್ಷಗಳಿಗಿಂತ ಹೆಚ್ಚು ಕಾಲ ಇಲ್ಲಿ ವಾಸಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. “ನಾನು ಸುಂದರಬನದ ಸಂದೇಶಖಾಲಿ ಪ್ರದೇಶದವನು. ಇಲ್ಲಿ ಕೆಲಸ ಹುಡುಕಲು ನಾವು ಎಲ್ಲವನ್ನೂ ಬಿಟ್ಟು ಹೋಗಬೇಕಾಗಿತ್ತು. ನಮ್ಮ ಗ್ರಾಮವು ನದಿಯಿಂದ ಮುಳುಗಿ ಹೋಯಿತು." ದಿನದಿಂದ ದಿನಕ್ಕೆ ಲೋಡ್ ಮಾಡಿದ ಕೈಗಾಡಿಗಳನ್ನು ಎಳೆಯುತ್ತಾ, ಮೊಂಡಲ್ ತಲ್ಲಾ ಬಸ್ತಿಯಲ್ಲಿ ಬಿದಿರಿನಿಂದ ಮಾಡಿದ ಮನೆಯಲ್ಲಿ ಮೂರು ಮಕ್ಕಳನ್ನು ಬೆಳೆಸಿದರು, ಕುಟುಂಬವು ಅಂತಿಮವಾಗಿ ಕಾಂಕ್ರೀಟ್ ಮನೆ ಮಾಡಿಕೊಂಡು ಉಳಿದುಕೊಂಡಿತ್ತು.

"ನಮ್ಮ ಮನೆಗಳನ್ನು ನಿರ್ಮಿಸಲು ನಾವು ಅವರ ಅನುಮತಿಯನ್ನು ತೆಗೆದುಕೊಂಡಿದ್ದೇವೆಯೇ ಎಂದು [ಪುರಸಭೆ] ಕೌನ್ಸಿಲರ್ ಕೇಳಿದರು!" .ನಾವು 50 ವರ್ಷಗಳಿಂದ ಇಲ್ಲಿಯೇ ಇದ್ದೇವೆ ಎಂದು ನಾನು ಅವರಿಗೆ ಹೇಳಿದೆ, ಸರಿಯಾದ ಪರ್ಯಾಯವಿಲ್ಲದೆ ಇದೆಲ್ಲವನ್ನು ಬಿಟ್ಟುಬಿಡಲು ಅವರು ಹೇಗೆ ಹೇಳುತ್ತಾರೆ? ಈ ರೀತಿಯಾಗಿ ಜನರನ್ನು ಹೇಗೆ ಹೊರಹಾಕಲು ಸಾಧ್ಯ? ಹೇಳಿ, ನಾವು ಎಲ್ಲಿಗೆ ಹೋಗಬೇಕು?"

ಸೆಪ್ಟೆಂಬರ್ 25ರ ಸಂಜೆ ಪೊಲೀಸರು ಬಂದು ನಿವಾಸಿಗಳನ್ನು ಸ್ಥಳಾಂತರಗೊಳ್ಳುವಂತೆ ಹೇಳಿದಾಗ, 22 ವರ್ಷದ ತುಂಪಾ ಮೊಂಡಲ್, "ಅವರು ನನ್ನ ಅತ್ತೆಯನ್ನು ಕೆಟ್ಟದಾಗಿ ಮಾತನಾಡಿಸಾಲು ಪ್ರಾರಂಭಿಸಿದರು, ಅವರು ನನ್ನ ಸೋದರಮಾವನ ಕಾಲರನ್ನು ಹಿಡಿದು ತಳ್ಳಿದರು. ನಾನು ಅವರನ್ನು ತಡೆಯಲು ಹೋದಾಗ, ನನ್ನನ್ನು ತಳ್ಳಲಾಯಿತು. ನಾನು ಗರ್ಭಿಣಿ, ಆದರೆ ಅವರು ಅದನ್ನು ಲೆಕ್ಕಿಸಲಿಲ್ಲ. ಅವರು ಮಹಿಳೆಯರ ತಲೆ ಕೂದಲನ್ನು ಹಿಡಿದು ಎಳೆದರು. ಒಬ್ಬ ಮಹಿಳಾ ಪೋಲೀಸ್ ಕೂಡ ಇರಲಿಲ್ಲ. ಅವರು ನಿಂದನೀಯ ಭಾಷೆ ಬಳಸುತ್ತಿದ್ದರು." ಎಂದು ಆರೋಪಿಸಿದರು.

(ಆದಾಗ್ಯೂ, ಈ ವರದಿಗಾರರೊಂದಿಗಿನ ಸಂದರ್ಶನದಲ್ಲಿ, ತಲ್ಲಾ ಬಸ್ತಿಯಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿರುವ ಚಿತ್ಪುರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಯಾನ್ ಗೋಸ್ವಾಮಿ ಅವರು ಯಾವುದೇ ಕಠಿಣ ನಿರ್ವಹಣೆ ಅಥವಾ ಬಲವಂತವನ್ನು ನಿರಾಕರಿಸಿದರು. ಅವರು ಕುಟುಂಬಗಳ ಬಗ್ಗೆ ಸಹಾನುಭೂತಿ ಹೊಂದಿದ್ದರು, ಆದರೆ ಅಲ್ಲಿನ ವಾಸಿಗಳನ್ನು ಹೊರಹಾಕುವುದು ನುರಿತ ವಾಸ್ತುಶಿಲ್ಪಿಗಳ ಪ್ರಕಾರ ಅನಿವಾರ್ಯವಾಗಿತ್ತು ಇಲ್ಲವೆಂದರೆ ಅದು ಅಪಾಯಕಾರಿ ಎಂದು ಹೇಳಿದ್ದರು. ಸೇತುವೆಯ ಯಾವುದೇ ಭಾಗವು ಕುಸಿದುಬಿದ್ದಲ್ಲಿ ಬಸ್ತಿಯಲ್ಲಿ ಸಾವು ನೋವುಗಳಾಗುತ್ತವೆ ಎಂದು ಅವರು ಹೇಳಿದರು.)

PHOTO • Smita Khator

ನೆಲಸಮಗೊಂಡ ತಲ್ಲಾ ಕಾಲೋನಿಯಲ್ಲಿ ಸುಲೇಖಾ ಮೊಂಡಲ್ ನೆರಳಿನ ಕೆಳಗೆ ಊಟ ಮಾಡುತ್ತಿದ್ದಾರೆ. ಮೇಲಿನ ಬಲಚಿತ್ರ: 'ಬಡವರು ಯಾವಾಗಲೂ ಸರ್ಕಾರಿ ಭೂಮಿಯಲ್ಲಿ ಉಳಿದುಕೊಂಡರುತ್ತಾರೆ, ಇಲ್ಲದಿದ್ದರೆ ನಾವು ಎಲ್ಲಿ ಉಳಿಯುತ್ತೇವೆ?' ಎಂದು ಲಖಿ ದಾಸ್ ಕೇಳುತ್ತಾರೆ. ಕೆಳಗಿನ ಸಾಲು: ಸಂಚಾರಿ ಶಿಬಿರಗಳಲ್ಲಿ ಮಹಿಳೆಯರು ತಮ್ಮ ಹಳೆಯ ಬಸ್ತಿಯ ಟಾಯ್ಲೆಟ್ ಬ್ಲಾಕ್‌ ತನಕ ನಡೆಯಲು ಕಷ್ಟಪಡುತ್ತಿದ್ದಾರೆ

ಸ್ಥಳೀಯ ಕೌನ್ಸಿಲರ್, ತೃಣಮೂಲ ಕಾಂಗ್ರೆಸ್‌ನ ತರುಣ್ ಸಹಾ ನನಗೆ ಫೋನ್‌ನಲ್ಲಿ ಹೇಳಿದರು, "ಅವರು ಅತಿಕ್ರಮಣದಾರರು, ಅವರಿಗೆ ಅಲ್ಲಿ ಉಳಿಯಲು ಕಾನೂನು ಹಕ್ಕಿಲ್ಲ, ಅವರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ನಾವು ಮಾನವೀಯ ಆಧಾರದ ಮೇಲೆ ನೀರು ಮತ್ತು ನೈರ್ಮಲ್ಯವನ್ನು ಒದಗಿಸಿದ್ದೇವೆ (ತಲ್ಲಾ ಬಸ್ತಿಯಲ್ಲಿ). ಕ್ರಮೇಣ, ಅವರು ಗುಡಿಸಲುಗಳನ್ನು ಪಕ್ಕಾ ಮನೆಗಳಾಗಿ ಪರಿವರ್ತಿಸಿಕೊಂಡರು. ಸೇತುವೆಯು ಅಪಾಯಕಾರಿ ಸ್ಥಿತಿಯಲ್ಲಿದೆ, "ಇದಕ್ಕೆ ತುರ್ತು ಪುನರ್ನಿರ್ಮಾಣದ ಅಗತ್ಯವಿದೆ. ದುರಸ್ತಿ ಮಾಡದಿದ್ದರೆ ಸಾವುನೋವುಗಳು ಸಂಭವಿಸಬಹುದು. ಹಾಗಾಗಿ ಅವರನ್ನು ಸ್ಥಳಾಂತರಿಸಬೇಕಾಗಿತ್ತು."

ತಲ್ಲಾ ಕುಟುಂಬಗಳ ಶಾಶ್ವತ ಪುನರ್ವಸತಿ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಸಾಹಾ ಹೇಳುತ್ತಾರೆ. "ಈಗಿನಂತೆ, ನಾವು ಅವರಿಗೆ ತಾತ್ಕಾಲಿಕ ಆಶ್ರಯದಲ್ಲಿ ಉಳಿಯಲು ಅವಕಾಶ ನೀಡುತ್ತಿದ್ದೇವೆ. ಭವಿಷ್ಯದಲ್ಲಿ ತವರದ ಮೇಲ್ಛಾವಣಿಯೊಂದಿಗೆ ಆಶ್ರಯವನ್ನು ಮುಚ್ಚಲು ವ್ಯವಸ್ಥೆಗಳು ಇರಬಹುದು. ಆದರೆ ನಾವು ಯಾವುದೇ ಕಾಂಕ್ರೀಟ್ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳುತ್ತಾರೆ. "ಅವರು ಬೇರೆಡೆ ಮನೆಗಳನ್ನು ಹೊಂದಿದ್ದಾರೆ," ಅವರು ಜನರ ಹಳ್ಳಿಗಳನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ ಮತ್ತು ಕೆಲವು ನಿದರ್ಶನಗಳಲ್ಲಿ, ಕೆಲವು ಕುಟುಂಬಗಳು ಫ್ರಿಂಜ್ ಪ್ರದೇಶಗಳಲ್ಲಿ ಸ್ಥಳ ಖರೀದಿಸಿದ್ದಾರೆ. “ಅವರು ತಮ್ಮ ಕೆಲಸದ ನಿಮಿತ್ತ ಈ ಜಾಗವನ್ನು ಅತಿಕ್ರಮಿಸಿದ್ದಾರೆ. ಅವರು ಬಹಳ ಸಮಯದಿಂದ ಇಲ್ಲಿದ್ದಾರೆ. ಅವರು ತಮ್ಮ ಕುಟುಂಬಗಳನ್ನು ಕರೆತರುತ್ತಲೇ ಇದ್ದರು. ಅವರಲ್ಲಿ ಹಲವರು ಈಗ ಚೆನ್ನಾಗಿದ್ದಾರೆ.

"ಬಡವರು ಯಾವಾಗಲೂ ಸರ್ಕಾರಿ ಭೂಮಿಯಲ್ಲಿ ಉಳಿದುಕೊಂಡಿದ್ದಾರೆ, ಇಲ್ಲದಿದ್ದರೆ ನಾವು ಎಲ್ಲಿ ಉಳಿಯುಬೇಕು?" ಗೃಹಿಣಿ ಲಖಿ ದಾಸ್, 23,  ಕೇಳುತ್ತಾರೆ. ಅವರ ಪತಿ ಕಚೇರಿ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅವರ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅವರನ್ನೂ ತಲ್ಲಾ ಬಸ್ತಿಯಿಂದ ಹೊರಹಾಕಲಾಯಿತು. “ನಾವು ಬಡವರು. ನಾವು ಕೂಲಿ ಮಾಡಿ ಸಂಪಾದಿಸುತ್ತೇವೆ," ಲಖಿ ಹೇಳುತ್ತಾರೆ. "ನಾನು ನನ್ನ ಹೆಣ್ಣುಮಕ್ಕಳಿಗಾಗಿ ಮಾತ್ರ ಎಲ್ಲಾ ಕಷ್ಟಗಳನ್ನು ಸಹಿಸುತ್ತಿದ್ದೇನೆ."

ಕೆಡವಲಾದ ಬಸ್ತಿಯ ನಿವಾಸಿಗಳು ಸೇತುವೆಯನ್ನು ದುರಸ್ತಿ ಮಾಡಿದ ನಂತರ ಮರಳಲು ಅವಕಾಶ ನೀಡಲಾಗುವುದು ಎಂದು ಕೌನ್ಸಿಲರ್‌ನಿಂದ ಲಿಖಿತ ಭರವಸೆಯನ್ನು ಬಯಸುತ್ತಾರೆ. ಈವರೆಗೆ ಅಂತಹ ಯಾವುದೇ ಭರವಸೆ ನೀಡಿಲ್ಲ.

Left: The eviction notice, pasted on November 6. A poster calling for a meeting on November 18 to demand proper and permanent rehabilitation of evicted families. Right: The Tallah basti residents at a protest march on November 11
PHOTO • Soumya
Left: The eviction notice, pasted on November 6. A poster calling for a meeting on November 18 to demand proper and permanent rehabilitation of evicted families. Right: The Tallah basti residents at a protest march on November 11
PHOTO • Smita Khator
Left: The eviction notice, pasted on November 6. A poster calling for a meeting on November 18 to demand proper and permanent rehabilitation of evicted families. Right: The Tallah basti residents at a protest march on November 11
PHOTO • Soumya

ಎಡ: ನವೆಂಬರ್ 6ರಂದು ತೆರವು ನೋಟಿಸ್ ಕೊಡಲಾಗಿದೆ. ತೆರವುಗೊಂಡ ಕುಟುಂಬಗಳಿಗೆ ಸರಿಯಾದ ಮತ್ತು ಶಾಶ್ವತ ಪುನರ್ವಸತಿಗೆ ಒತ್ತಾಯಿಸಲು ನವೆಂಬರ್ 18ರಂದು ಸಭೆ ಕರೆಯಲಾಗಿರುವ ಕುರಿತಾದ ಪೋಸ್ಟರ್. ಬಲ: ನವೆಂಬರ್ 11ರಂದು ಪ್ರತಿಭಟನಾ ಮೆರವಣಿಗೆಯಲ್ಲಿ ತಲ್ಲಾ ಬಸ್ತಿ ನಿವಾಸಿಗಳು

ಸಣ್ಣ ಪ್ರತಿರೋಧದ ಕಾರ್ಯಗಳು ನಡೆದಿವೆ - ಸೆಪ್ಟೆಂಬರ್ 25ರಂದು, ಅವರು ತಮ್ಮ ಮನೆಗಳನ್ನು ಬಿಡಬೇಕಾದಾಗ, ತಲ್ಲಾ ಕಾಲೋನಿ ನಿವಾಸಿಗಳು ಸುಮಾರು 10 ಗಂಟೆಗೆ ಸೇತುವೆಯನ್ನು ಬ್ಲಾಕ್‌ ಮಾಡಿದರು. ನವೆಂಬರ್ 11ರಂದು, ಅವರು ಮೋರ್ಚಾವನ್ನು ಶುರು ಮಾಡಿದರು. ನವೆಂಬರ್ 18ರಂದು ಅವರು ತಮ್ಮ ಬೇಡಿಕೆಗಳನ್ನು ಧ್ವನಿಸಲು ಸಾರ್ವಜನಿಕ ಸಭೆ ನಡೆಸಿದರು. ಶ್ರಮಜೀವಿ ಬಸ್ತಿಯವಾಸಿಗಳು ಒಗ್ಗೂಡಿ, ಶೌಚಾಲಯ ಮತ್ತು ನಿಯಮಿತ ವಿದ್ಯುತ್‌ಗಾಗಿ ಲಾಬಿ ಮಾಡುತ್ತಿದ್ದಾರೆ ಮತ್ತು ಪ್ರತಿ ಕುಟುಂಬಕ್ಕೆ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಮುದಾಯ ಅಡುಗೆ ಮನೆ ನಿರ್ಮಿಸಲು ಯೋಜಿಸುತ್ತಿದ್ದಾರೆ.

ನವೆಂಬರ್ 25ರಂದು, ರಾಜಾ ಹಜ್ರಾ ಎಂಬ ಬೀದಿ ವ್ಯಾಪಾರಿಯಬ್ಬರ ಕುಟುಂಬವನ್ನು ಸಹ ಹೊರಹಾಕಲಾಯಿತು, ಹೊರಹಾಕಲ್ಪಟ್ಟ ಸ್ಲಂ ಕುಟುಂಬಗಳ ಪರವಾಗಿ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಅವರ ಮುಖ್ಯ ಬೇಡಿಕೆಯು ಸರಿಯಾದ ಪುನರ್ವಸತಿಯಾಗಿದೆ - ಅವರು ಅದೇ ಬಸ್ತಿಯಲ್ಲಿ ವಾಸಿಸುವವರಾಗಿದ್ದಾರೆ ಹಾಗಾಗಿ ಅವರ ಕೆಡವಲಾದ ಬಸ್ತಿಯಿಂದ ಹೊರಹಾಕಲು ಆಗುವುದಿಲ್ಲ (ಇದು ಅವರ ಕೆಲಸದ ಸ್ಥಳಗಳು ಮತ್ತು ಶಾಲೆಗಳಿಗೆ ಹತ್ತಿರದಲ್ಲಿದೆ) ಮತ್ತು ಮೂಲಭೂತ ಸೇವೆಗಳಾದ ವಿದ್ಯುತ್, ನೀರು ಮತ್ತು ನೈರ್ಮಲ್ಯ ಕಾಪಾಡುವ ವ್ಯವಸ್ಥೆ ಮಾಡಬೇಕಿದೆ.

ಸಂಚಾರಿ ಕ್ಯಾಂಪಿಗೆ ಮರಳಿದರೆ, ಸುಲೇಖಾ ಮೊಂಡಲ್ ಮಣ್ಣಿನ ಒಲೆಯನ್ನು ಹಚ್ಚಿದ್ದಾರೆ. ಮಧ್ಯಾಹ್ನ 2:30, ಅವರು ಹತ್ತಿರದ ಮನೆಗಳಲ್ಲಿ ಕೆಲಸ ಮಾಡಿ ಹಿಂತಿರುಗಿದ್ದಾರೆ - ಮತ್ತೆ ಸಂಜೆ ಕೆಲಸ ಮಾಡಲು ತನ್ನ ಕೆಲಸದ ಮನೆಗಳಿಗೆ ಹಿಂತಿರುಗುತ್ತಾರೆ. ಬಾಣಲೆಯಲ್ಲಿ ಬದನೆಕಾಯಿ, ಆಲೂಗಡ್ಡೆ ಮತ್ತು ಹೂಕೋಸು ಬೆರೆಸಿ, ಅವರು ಹೇಳುತ್ತಾರೆ, "ನಮ್ಮನ್ನು ಹಳ್ಳಿಗೆ ಹಿಂತಿರುಗಿ ಹೋಗಿ ಎಂದು ಕೌನ್ಸಿಲರ್ ಹೇಳಿದರು! ನಾಲ್ಕು ತಲೆಮಾರುಗಳ ಹಿಂದೆ ನಾವು ದೌದ್‌ಪುರವನ್ನು ತೊರೆದಿದ್ದೇವೆ. ಈಗ ನಮ್ಮನ್ನು ಹಿಂತಿರುಗಿ ಹೋಗುವಂತೆ ಹೇಳಲಾಗುತ್ತಿದೆಯೇ? ಸುಂದರಬನ್‌ನ ಪರಿಸ್ಥಿತಿಗಳು ಎಲ್ಲರಿಗೂ ತಿಳಿದಿದೆ. ಐಲಾ ಚಂಡಮಾರುತದ ಸಮಯದಲ್ಲಿ ಸ್ವಲ್ಪ ಜನರು ಸಾವನ್ನಪ್ಪಿದ್ದಾರೆ, ನಾವು ಯಾರಿಗೂ ತೊಂದರೆ ನೀಡುತ್ತಿಲ್ಲ, ಸೇತುವೆಯನ್ನು ದುರಸ್ತಿ ಮಾಡಬೇಕೆಂದು ನಾವು ಬಯಸುತ್ತೇವೆ, ಬದಲಾಗಿ ಸರ್ಕಾರವು ನಮಗೆ ಪುನರ್ವಸತಿ ಕಲ್ಪಿಸಬೇಕು.

ವರದಿಗಾರರು ಸೌಮ್ಯ, ರಾಯ ಮತ್ತು ಔರ್ಕೊ ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತಾರೆ.

ಅನುವಾದ: ಅಶ್ವಿನಿ ಬಿ ವಡ್ಡಿನಗದ್ದೆ

Smita Khator

Smita Khator is the Translations Editor at People's Archive of Rural India (PARI). A Bangla translator herself, she has been working in the area of language and archives for a while. Originally from Murshidabad, she now lives in Kolkata and also writes on women's issues and labour.

Other stories by Smita Khator
Translator : Ashwini B. Vaddinagadde

Ashwini B. is a Bengaluru based accountant and translator and writer by passion.

Other stories by Ashwini B. Vaddinagadde