ದೂರದಿಂದ ಯಾರೋ ಕರೆದು ವಿರಾಮದ ಸಮಯ ಮುಗಿಯಿತೆಂದು ಹೇಳುತ್ತಾರೆ. ಮೇಲ್ವಿಚಾರಕ ಒಬ್ಬೊಬ್ಬರಿಗೂ ಅವಧಿ ಭಾಷೆಯಲ್ಲಿ ಯಾವ ಕೆಲಸ ಮಾಡಬೇಕೆಂದು ಹೇಳಲು ಪ್ರಾರಂಭಿಸುತ್ತಾರೆ. ಮತ್ತು ಕೆಲಸವು ಮತ್ತೆ ಪ್ರಾರಂಭವಾಗುತ್ತದೆ. ಸಣ್ಣ ಟೆಂಟ್‌ನ ಅಡಿಪಾಯದ ಕೆಲಸಕ್ಕಾಗಿ ರಾಮ್ ಮೋಹನ್ ಅವರನ್ನು ಮೈದಾನದ ನಿಶ್ಯಬ್ದ ಮೂಲೆಗೆ ಕಳಿಸಲಾಗುತ್ತದೆ.

ಅಂದು ಜನವರಿ 23ರ ಶನಿವಾರ, ಮತ್ತು ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಜನವರಿ 24ರ ಬೆಳಿಗ್ಗೆಯಿಂದ ಇಲ್ಲಿಗೆ ಬರಲು ಪ್ರಾರಂಭಿಸಲಿರುವ ಸಾವಿರಾರು ರೈತರಿಗಾಗಿ ಪೆಂಡಾಲ್‌ಗಳನ್ನು (ಡೇರೆಗಳನ್ನು) ಹಾಕಲು ಎರಡು ದಿನಗಳ ಕಾಲ 10 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿರುವ 50 ಜನರಲ್ಲಿ ರಾಮ್ ಕೂಡ ಒಬ್ಬರು. ಮೂರು ಕಾನೂನುಗಳನ್ನು ರದ್ದುಪಡಿಸುವ ಬೇಡಿಕೆಯನ್ನು ಪುನರುಚ್ಚರಿಸುವುದು ಈ ಹೋರಾಟದ ಉದ್ದೇಶ. ರ‍್ಯಾಲಿಯು ಜನವರಿ 26, ಗಣರಾಜ್ಯೋತ್ಸವದ ದಿನದಂದು ಅಂತ್ಯಗೊಳ್ಳಲಿದೆ.

ರಾಮ್ ಮೋಹನ್ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನಾಕಾರ ರೈತರೊಂದಿಗೆ ರ‍್ಯಾಲಿಯಲ್ಲಿ ಭಾಗವಹಿಸಲು ಯೋಜಿಸಿದ್ದಾರೆ. "ನಾನು ಏನಾಗುತ್ತಿದೆಯೆನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ ಮತ್ತು ಇತರ ರೈತರು ಏನು ಹೇಳುತ್ತಿದ್ದಾರೆಂದು ಕೇಳಲು ನಾನು ಬಯಸುತ್ತೇನೆ ಜೊತೆಗೆ ನಾವೂ [ಅವರ ಬೇಡಿಕೆಗಳಿಂದ] ಹೇಗೆ ಪ್ರಯೋಜನ ಪಡೆಯುತ್ತೇವೆನ್ನುವುದನ್ನು ತಿಳಿಯಬೇಕಿದೆ" ಎಂದು ಅವರು ಹೇಳುತ್ತಾರೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಉಮರಿ ಬಿಡ್ಗಮಂಜ್ ಗ್ರಾಮದಲ್ಲಿ ವಾಸಿಸುತ್ತಿರುವ ಅವರ ಕುಟುಂಬವು ಅಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತದೆ. “ನಾವು 6-7 ಬಿಘಾ ಭೂಮಿಯಲ್ಲಿ [ಎಕರೆಗಿಂತ ಸ್ವಲ್ಪ ಹೆಚ್ಚು] ಏನು ಮಾಡಬಹುದು? ಆಹಾರಕ್ಕಾಗಿ ಸಾಕಾಗುತ್ತದೆ, ಅದಕ್ಕಿಂತ ಹೆಚ್ಚೇನಿಲ್ಲ” ಎಂದು ಅವರು ಹೇಳುತ್ತಾರೆ. ಅವರು ಡೇರೆಗಳನ್ನು ತಯಾರಿಸುವಲ್ಲಿ ನಿರತರಾಗಿರುವ ರ‍್ಯಾಲಿಯು ಅವರ ಮತ್ತು ಇತರ ಕೃಷಿ ಕುಟುಂಬಗಳ ಬೆಳೆಗಳಿಗೆ ಉತ್ತಮ ಬೆಲೆ ತರಲು ಸಹಾಯ ಮಾಡುಬಹುದೆಂದು ಅವರು ಆಶಿಸಿಸುತ್ತಾರೆ.

43ರ ಹರೆಯದ ರಾಮ್ ಮೋಹನ್ ಕಳೆದ 23 ವರ್ಷಗಳಿಂದ ಮುಂಬೈನಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಮುಂಬೈನ ಮಲಾಡ್ ರೈಲ್ವೆ ನಿಲ್ದಾಣದ ಬಳಿಯಿರುವ ಲೇಬರ್ ನಾಕಾದಲ್ಲಿ ಕಾಯುವ ಮೂಲಕ ಕೆಲಸವನ್ನು ಕಂಡುಕೊಳ್ಳುತ್ತಾರೆ - ಮತ್ತು ಅವರು ಕೆಲಸ ಸಿಕ್ಕಿದ ದಿನಗಳಲ್ಲಿ, ರೂ. 700 ದೈನಂದಿನ ವೇತನವಾಗಿ ಪಡೆಯುತ್ತಾರೆ.

Ram Mohan has been working two days to pitch tents for the rally against the new farm laws in Azad Maidan, which he hopes to join
PHOTO • Riya Behl
PHOTO • Riya Behl

ಆಜಾದ್ ಮೈದಾನದಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧದ ರ‍್ಯಾಲಿಗಾಗಿ ಟೆಂಟ್ ಹಾಕಲು ರಾಮ್ ಮೋಹನ್ ಎರಡು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ, ಅವರು ಹೋರಾಟವನ್ನು ಸೇರುವ ನಿರೀಕ್ಷೆಯಲ್ಲಿದ್ದಾರೆ

ರಾಮ್‌ ಮತ್ತು ಅವರ ತಂಡವನ್ನು ದೊಡ್ಡ ಸಮಾರಂಭಗಳಿಗೆ ಟೆಂಟ್‌ಗಳು ಮತ್ತು ಅಲಂಕಾರಗಳನ್ನು ಏರ್ಪಡಿಸುವ ಕಂಪನಿಯೊಂದು ಇಲ್ಲಿ ಕೆಲಸಕ್ಕಾಗಿ ಕರೆತಂದಿತ್ತು. ಅವರೆಲ್ಲ ಅಲ್ಲಿ ಕೆಲಸ ಮುಗಿಸುತ್ತಿದ್ದಂತೆ ರೈತರು ಆಜಾದ್ ಮೈದಾನಕ್ಕೆ ಬರಲು ಪ್ರಾರಂಭಿಸುತ್ತಾರೆ. ಸುಮಾರು 180 ಕಿಲೋಮೀಟರ್ ದೂರದ ನಾಸಿಕ್‌ನಲ್ಲಿ ಜನವರಿ 23ರಂದು ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿರುವ ಬಹುತೇಕ ರೈತರು ಇಲ್ಲಿಗೆ ಬರಲಿದ್ದಾರೆ. ಮೋರ್ಚಾ ಮತ್ತು ಆಜಾದ್ ಮೈದಾನದ ರ‍್ಯಾಲಿಯನ್ನು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯೊಂದಿಗೆ ಸಂಯೋಜಿತ ಸಂಸ್ಥೆಗಳ ಒಕ್ಕೂಟವಾದ ಸಮುಕ್ತಾ ಶೆಟ್ಕರಿ ಕಾಮಗಾರ್ ಮೋರ್ಚಾ, ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ, ದೇಶಕ್ಕಾಗಿ ರೈತರು, ಮತ್ತು ದೆಹಲಿಯ ಗಡಿಯಲ್ಲಿ ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆಗೆ ಬೆಂಬಲವಾಗಿ ನಿಂತಿರುವ ಇತರ ಸಂಸ್ಥೆಗಳ ಬೆಂಬಲದೊಂದಿಗೆ ಆಯೋಜಿಸಲಾಗಿದೆ.

ಈ ಮಸೂದೆಗಳನ್ನು ಮೊದಲು 2020ರ ಜೂನ್ 5ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಗಳ ಹೆಸರಿನಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರೊಳಗೆ ಕಾನೂನನ್ನು ಅಂಗೀಕರಿಸಲಾಯಿತು. ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ರೈತರು ಈ ಕಾನೂನುಗಳನ್ನು (ಕೇಂದ್ರ ಸರ್ಕಾರದಿಂದ) ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಮಾಡುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಪ್ರತಿಭಟನಾಕಾರರು ಆಜಾದ್ ಮೈದಾನಕ್ಕೆ ಬರುವ ಮೊದಲು ವೇದಿಕೆ ಸಿದ್ಧಪಡಿಸುವ ಕಾರ್ಮಿಕರ ತಂಡದಲ್ಲಿರುವವರಲ್ಲಿ ದೇವೇಂದರ್ ಸಿಂಗ್ ಕೂಡ ಒಬ್ಬರು. ರ‍್ಯಾಲಿಗಾಗಿ ಡೇರೆಗಳನ್ನು ನಿರ್ಮಿಸಲು ಅವರಿಗೆ 3,000 ಬಿದಿರು, 4,000 ಮೀಟರ್ ಬಟ್ಟೆ ಮತ್ತು ಹಲವಾರು ಕಟ್ಟುಗಳ ಸೆಣಬಿನ ಹಗ್ಗ ಬೇಕಾಗುತ್ತದೆ ಎಂದು ಅವರು ಅಂದಾಜಿಸಿದ್ದಾರೆ.

PHOTO • Riya Behl

ದೇವೇಂದ್ರ ಸಿಂಗ್ ಅವರ ಕುಟುಂಬವು ಯುಪಿಯಲ್ಲಿ ಮೂರು ಬಿಘಾ ಭೂಮಿಯಲ್ಲಿ ಕೃಷಿ ಮಾಡುತ್ತದೆ. ಮುಂಬೈನಲ್ಲಿ, ಯಾವುದೇ ಸಮಯದಲ್ಲಿ ಹಣವನ್ನು ಮನೆಗೆ ಕಳುಹಿಸಲು ಅನುವು ಮಾಡಿಕೊಡುವುದರಿಂದಾಗಿ ಅವರು ಹೆಚ್ಚು ದಿನಗೂಲಿ ಕೆಲಸಕ್ಕೆ ಆದ್ಯತೆ ನೀಡುತ್ತಾರೆ.

ಮೈದಾನದಲ್ಲಿ ಟೆಂಟ್‌ ನಿರ್ಮಿಸುತ್ತಿರುವ ಬಹುತೇಕ ಕಾರ್ಮಿಕರಂತೆಯೇ 40 ವರ್ಷದ ದೇವೇಂದ್ರ ಸಹ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯವರು "ಕಳೆದ 1-2 ವರ್ಷಗಳಿಂದ, ಕೊರೋನಾದಿಂದಾಗಿ ಸರ್ಕಾರಗಳು [ಕೇಂದ್ರ ಮತ್ತು ರಾಜ್ಯಗಳು] ತೊಂದರೆಯಲ್ಲಿವೆ" ಎಂದು ಅವರು ಹೇಳುತ್ತಾರೆ. "ಅವರು ರೈತರ ಕುರಿತಾಗಿ ಏನು ಮಾಡಲು ಸಾಧ್ಯ?"

ದೇವೇಂದ್ರರ ಕುಟುಂಬವಾದ  ಪೋಷಕರು, ಹೆಂಡತಿ ಮತ್ತು ಮೂವರು ಮಕ್ಕಳು ಕಾರ್ನೈಲ್ ಗಂಜ್ ಬ್ಲಾಕ್‌ನ ರಾಜತೋಲಾ ಎನ್ನುವ ಹಳ್ಳಿಯಲ್ಲಿ ಮೂರು ಬಿಘಾ ಭೂಮಿಯಲ್ಲಿ ಗೋಧಿ, ಭತ್ತ ಮತ್ತು ಜೋಳವನ್ನು ಕೃಷಿ ಮಾಡುತ್ತಾರೆ. 2003ರಲ್ಲಿ ಅವರು ಕೆಲಸ ಹುಡುಕಿಕೊಂಡು ಮುಂಬೈಗೆ ಬಂದರು. "ನಾನು ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ, ಆದರೆ ಈ ಬಗೆಯ ಕೆಲಸ ಹೆಚ್ಚು ಇಷ್ಟ" ಎಂದು ಅವರು ಹೇಳುತ್ತಾರೆ.

“ಬೇರೆಡೆ ಕೆಲಸ ಮಾಡಿದರೆ ಸಂಬಳ ಸಿಗುವುದು ತಿಂಗಳ ನಂತರ. ಆದರೆ ಮನೆಯಲ್ಲಿ ಏನಾದರೂ ಸಮಸ್ಯೆಯಾದರೆ ಅವರಿಗೆ ಹಣದ ಅಗತ್ಯವಿರುತ್ತದೆ. ಈ ಕೆಲಸ ಮಾಡುವುದರಿಂದಾಗಿ ಮರುದಿನವೇ ಮನೆಗೆ ಹಣ ಕಳಿಸಲು ಸಾಧ್ಯ.” ಎಂದು ತಾನು ದಿನಗೂಲಿಯಾಗಿ ಸಾಮಾನ್ಯವಾಗಿ ಪಡೆಯುವ 500 ರೂಪಾಯಿಗಳ ಕೂಲಿಯನ್ನು ಉಲ್ಲೇಖಿಸಿ ಹೇಳುತ್ತಾರೆ.

ಈಗ ಜನವರಿ 23ರ ಮಧ್ಯಾಹ್ನ 1ರಿಂದ 2ರ ತನಕ ಕಾರ್ಮಿಕರ ಒಂದು ಗಂಟೆ ಕಾಲದ ಊಟದ ವಿರಾಮ. ಅವರು ಊಟದ ನಂತರ ಕಪ್ಪು ಮತ್ತು ಕೆಂಪು ಬಟ್ಟೆಯ ಅರ್ಧ-ನಿರ್ಮಿತ ಟೆಂಟ್ ಅಡಿಯಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾರೆ, ನಂತರ ಅವರು ವಿಶ್ರಾಂತಿ ಮುಗಿಸಿ ಅದನ್ನು ಛಾವಣಿಯಾಗಿ ಪರಿವರ್ತಿಸಲಿದ್ದಾರೆ. ಅವರ ಪಕ್ಕದಲ್ಲಿ ಕುಳಿತಿರುವುದು ಗೊಂಡಾದ ಲಕ್ಷ್ಮಣಪುರ ಗ್ರಾಮದ 20 ವರ್ಷದ ಬ್ರಿಜೇಶ್ ಕುಮಾರ್. ಅವರು ತಮ್ಮ 16 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ತಿಂಗಳಿಗೆ ಸುಮಾರು 20 ದಿನಗಳ ಕೆಲಸವನ್ನು ದಿನಕ್ಕೆ 500 ರೂ. ಕೂಲಿ ಪಡೆದು ಮಾಡುತ್ತಾರೆ. ಕಟ್ಟಡ ನಿರ್ಮಾಣ, ಪೇಂಟಿಂಗ್‌ ಇತ್ಯಾದಿ ಲಭ್ಯ ಕೆಲಸಗಳನ್ನು ಮಾಡುತ್ತಾರೆ. "ಸಿಗುವ ಎಲ್ಲ ಕೆಲಸವನ್ನೂ ಮಾಡುತ್ತೇವೆ" ಎಂದು ಬ್ರಿಜೇಶ್ ಹೇಳುತ್ತಾರೆ. ಈ ಬೃಹತ್‌ ಪೆಂಡಾಲ್‌ ನಿರ್ಮಿಸುವ ಕೆಲಸವನ್ನು ಅವರು ಎಲ್ಲಿ ಕಲಿತರು? "ಇಲ್ಲಿ ಮೊದಲು ಕೆಲಸ ಮಾಡುತ್ತಿದ್ದವರಿಂದ ಕಲಿತೆವು. ನಾವು ಅವರೊಂದಿಗೆ ಕೆಲಸ ಮಾಡುತ್ತಾ ಅವರು ಹೇಳಿದ ಕೆಲಸಗಳನ್ನು ಮಾಡುತ್ತೇವೆ. ಅವರು ಹೇಗೆ ಮೇಲೆ ಏರುವುದು ಮತ್ತು ಕಟ್ಟುವುದೆಂದು ಕಲಿಸುತ್ತಾರೆ. ಅದನ್ನು ಅನುಸರಿಸಿ ಕಲಿಯುತ್ತೇವೆ. ಹಳ್ಳಿಯಿಂದ ಯಾರಾದರೂ ಕೆಲಸಕ್ಕೆ ಬರುವವರಿದ್ದರೆ ಅವರನ್ನು ಜೊತೆಗೆ ಕರೆದುಕೊಂಡು ಬರುತ್ತೇವೆ." ಎನ್ನುತ್ತಾರೆ.

ಡೇರೆಗಳಿಗೆ ಬೆಂಬಲವಾಗಿ ಕಟ್ಟಲಾಗುವ ಬೊಂಬುಗಳ ಎತ್ತರ 18-20 ಅಡಿಗಳಷ್ಟಿರುತ್ತದೆ. ಈ ಎರಡು ದಿನಗಳಿಂದ ಎಲ್ಲ ಕಾರ್ಮಿಕರೂ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ - ಎಲ್ಲಾ ಸಣ್ಣ ಮತ್ತು ದೊಡ್ಡ ಡೇರೆಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು  - ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡುತ್ತಿದ್ದಾರೆ. ಜನವರಿ 22ರಂದು ಸೂರ್ಯಾಸ್ತದ ನಂತರ, ಅವರು ಒಂದೇ ಸ್ಟ್ರೋಬ್ ಬೆಳಕಿನಲ್ಲಿ ಕೆಲಸ ಮಾಡಿದರು, ದೇವೆಂದ್ರ ಪ್ರತಿ ಸಾಲಿನ ಬಿದಿರುಗಳನ್ನು ಒಂದೇ ಎತ್ತರದಲ್ಲಿ ಕಟ್ಟಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು.

'I won’t be joining the protest,' says Santraman (left). Brijesh adds: 'We don’t get any time away from work'
PHOTO • Riya Behl
'I won’t be joining the protest,' says Santraman (left). Brijesh adds: 'We don’t get any time away from work'
PHOTO • Riya Behl

ʼನಾನು ಹೋರಾಟದಲ್ಲಿ ಪಾಳಗೊಳ್ಳುವುದಿಲ್ಲʼ ಎನ್ನುತ್ತಾರೆ ಸಂತ್ರಾಮನ್ (ಎಡ). ಬ್ರಿಜೇಶ್‌ ಹೇಳುತ್ತಾರೆ: ʼನಮಗೆ ಕೆಲಸದಿಂದ ಬಿಡುವು ಸಿಗುವುದೇ ಇಲ್ಲ ʼ

ಅವರು ಮುಂಬೈಯಲ್ಲಿ ಮಾತ್ರ ಕೆಲಸ ಮಾಡುವುದಾಗಿ ಹೇಳುತ್ತಾರೆ. ಮಳೆ ಬೀಳುವ ಮೊದಲು ರೆಸ್ಟೋರೆಂಟ್‌ಗಳು, ಎತ್ತರದ  ತೆರೆದ ಸ್ಥಳಗಳ ಮೇಲ್ಛಾವಣಿಯನ್ನು ಹೊದೆಸುವ ಚಪ್ಪ್ರೆ ಕಾ ಕಾಮ್ ಇದ್ದಾಗ ಅವರು 30ರಿಂದ 80 ಅಡಿಗಳ ತನಕವೂ ಎತ್ತರಕ್ಕೆ ಏರಿ ಕೆಲಸ  ಮಾಡಿದ್ದಾರೆ. ""ಹೊಸಬರು ಕೆಲಸಕ್ಕೆ ಸೇರಿದಾಗ ಮೊದಲಿಗೆ ಅವರಿಗೆ ಬೊಂಬುಗಳನ್ನು ಎತ್ತಿ ಕೊಡುವ ಕೆಲಸವನ್ನು ಕೊಡುತ್ತೇವೆ. ನಂತರ ನಿಧಾನವಾಗಿ ಕೆಳ ಮಟ್ಟದಲ್ಲಿ ಬೊಂಬುಗಳನ್ನು ಕಟ್ಟಲು ಬಿಡುತ್ತೇವೆ. ನಂತರ ಮೇಲೆ ಏರುವಂತೆ ಮಾಡುತ್ತೇವೆ." ಎಂದು ನಗುತ್ತಾ ದೇವೇಂದ್ರ ಹೇಳುತ್ತಾರೆ.

"ನಾವು ಇಲ್ಲಿ ಮಜ್ದೂರಿ [ಕೂಲಿ ಕೆಲಸ] ಮಾಡದಿದ್ದರೆ, ನಮಗೆ [ಹಳ್ಳಿಯಲ್ಲಿ] ಕೃಷಿ ಮಾಡಲು ಸಾಧ್ಯವಾಗುವುದಿಲ್ಲ" ಎಂದು ರಾಮ್ ಮೋಹನ್ ಹೇಳುತ್ತಾರೆ. “ರಸಗೊಬ್ಬರ, ಬೀಜಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ನಮಗೆ ಹಣ ಬೇಕು - ಇದು ಕೃಷಿಯಿಂದ ಬರುವುದಿಲ್ಲ. ಅದಕ್ಕಾಗಿಯೇ ನಾವು ಇಲ್ಲಿ [ಮುಂಬೈನಲ್ಲಿ] ಕೆಲಸ ಮಾಡುತ್ತೇವೆ.”

ಜನವರಿ 24ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಾರಂಭವಾಗುವ ರ‍್ಯಾಲಿಯಲ್ಲಿ ಭಾಗವಹಿಸಲು ರಾಮ್ ಮೋಹನ್ ಆಲೋಚಿಸುತ್ತಿದ್ದರೆ, ಉಳಿದವರು ಉತ್ತರ ಮುಂಬಯಿಯಲ್ಲಿರುವ ತಮ್ಮ ಬಾಡಿಗೆ ಕೋಣೆಗಳಿಗೆ ಮರಳಲಿದ್ದಾರೆ. “ನಾನು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. [ಕೃಷಿ] ಕಾನೂನುಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ನಾನು ಕೆಲಸ ಮಾಡುತ್ತೇನೆ ಮತ್ತು ಸಂಪಾದಿಸುತ್ತೇನೆ, ಅಷ್ಟೆ” ಎಂದು ಗೊಂಡಾ ಜಿಲ್ಲೆಯ ಪರಸ್ಪುರ್ ಗ್ರಾಮದ 26 ವರ್ಷದ ಸಂತ್ರಾಮನ್ ಹೇಳುತ್ತಾರೆ, ಅವರ ಕುಟುಂಬದ ಬಳಿ ಯಾವುದೇ ಕೃಷಿ ಭೂಮಿಯಿಲ್ಲ.

"ಕಾಮ್ ಸೆ ಫುರ್ಸತ್ ನಹಿ ಹೋತಿ [ಕೆಲಸದಿಂದ ಬಿಡುವು ಸಿಗುವುದಿಲ್ಲ]" ಎಂದು ಬ್ರಿಜೇಶ್ ಹೇಳುತ್ತಾರೆ. “ನಾವು ಇಲ್ಲಿ ಕೆಲಸ ಮುಗಿದ ನಂತರ, ಬೇರೆಡೆ ಕೆಲಸಕ್ಕೆ ಹೋಗುತ್ತೇವೆ. ಅನೇಕರು ಈ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಾರೆ ಆದರೆ ನಾವು ಕೆಲಸ ಮಾಡದೆ ತಿನ್ನಲು ಹೇಗೆ ಸಾಧ್ಯ?”

PHOTO • Riya Behl

ಕಾರ್ಮಿಕರು ಡೇರೆಗಳನ್ನು ಕಟ್ಟುವುದನ್ನು ಮುಗಿಸಿದ ನಂತರ, ಜನವರಿ 23ರಂದು ನಾಸಿಕ್‌ನಲ್ಲಿ ಪ್ರಾರಂಭವಾಗಿರುವ ಪ್ರತಿಭಟನಾ ಮೆರವಣಿಗೆಯ ಮೂಲಕ ಸಾವಿರಾರು ರೈತರು ಆಜಾದ್ ಮೈದಾನದಲ್ಲಿ ಬಂದು ಸೇರಲು ಪ್ರಾರಂಭಿಸುತ್ತಾರೆ

PHOTO • Riya Behl

ಸೈಟುಗಳಲ್ಲಿ ಬಿದಿರಿನ ಕಟ್ಟೋಣ 18-20 ಅಡಿಗಳವರೆಗೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಟೆಂಟ್‌ಗಳನ್ನು ಕಟ್ಟಿ ಮುಗಿಸಲು ಕಾರ್ಮಿಕರು ಎರಡು ದಿನಗಳ ಕಾಲ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಅವಿರತ ಎತ್ತರದಲ್ಲಿ ಕುಳಿತು ಕೆಲಸ ಮಾಡಿದರು.

PHOTO • Riya Behl

ಸೂರ್ಯಾಸ್ತದ ನಂತರ, ಅವರು ಒಂದೇ ಸ್ಟ್ರೋಬ್ ಬೆಳಕಿನಡಿ ಕೆಲಸ ಮಾಡಿ, 19 ವರ್ಷದ ಶಂಕರ್ ಚೌಹಾನ್ ಸೇರಿದಂತೆ ಕಾರ್ಮಿಕರು ಸೇರಿ ಪ್ರತಿಯೊಂದು ಸಾಲಿನ ಬಿದಿರುಗಳನ್ನು ಒಂದೇ ಎತ್ತರದಲ್ಲಿ ಕಟ್ಟಲಾಗಿದೆಯೆ ಎಂದು ಖಚಿತಪಡಿಸಿಕೊಂಡರು

PHOTO • Riya Behl

ಬಣ್ಣ ಬಳಿಯುವುದು, ಕಟ್ಟಡ ನಿರ್ಮಾಣ ಮತ್ತು ಇತರ ಉದ್ಯೋಗಗಳು ಸೇರಿದಂತೆ 'ನಾವು ಸಿಕ್ಕ ಎಲ್ಲ ಕೆಲಸವನ್ನೂ ಮಾಡುತ್ತೇವೆ' ಎಂದು ಬ್ರಿಜೇಶ್ ಕುಮಾರ್ ಹೇಳುತ್ತಾರೆ

PHOTO • Riya Behl

ರ‍್ಯಾಲಿಗಾಗಿ ಡೇರೆಗಳನ್ನು ಹಾಕಲು ಸರಿಸುಮಾರು 3,000 ಬೊಂಬುಗಳು, 4,000 ಮೀಟರ್ ಬಟ್ಟೆ ಮತ್ತು ಹಲವಾರು ಕಟ್ಟುಗಳ ಸೆಣಬಿನ ಹಗ್ಗದ ಅಗತ್ಯವಿರುತ್ತದೆ

PHOTO • Riya Behl

'ನಮಗಿಂತ ಮೊದಲು ಬಂದವರು ಕೆಲಸ ಹೇಗೆ ಮಾಡಬೇಕೆಂದು ಕಲಿತಿರುತ್ತಾರೆ' ಎಂದು ಬ್ರಿಜೇಶ್ (ಮಧ್ಯ) ಹೇಳುತ್ತಾರೆ - ಮಹೇಂದ್ರ ಸಿಂಗ್ (ಎಡ) ಮತ್ತು ರೂಪೇಂದ್ರ ಕುಮಾರ್ ಸಿಂಗ್ ಅವರೊಂದಿಗೆ. 'ನಾವು ಅವರೊಂದಿಗೆ ಕೆಲಸ ಮಾಡುವಾಗ, ಅವರು ಹೇಗೆ ಕಟ್ಟಬೇಕು ಮತ್ತು ಏರಬೇಕೆನ್ನುವುದನ್ನು ಕಲಿಸಿದರು. ಅದರಂತೆ ನಾವು ಕಲಿತಿದ್ದೇವೆ. ಹಳ್ಳಿಯಿಂದ ಯಾರಾದರೂ ಬಂದರೆ, ನಾವು ಅವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುತ್ತೇವೆ '

PHOTO • Riya Behl

'ಹೊಸಬರಿಗೆ ಮೊದಲು ಬೊಂಬುಗಳನ್ನು ಎತ್ತಿಕೊಡುವ ಕೆಲಸವನ್ನು ನೀಡುತ್ತೇವೆ. ನಂತರ ನಿಧಾನವಾಗಿ ಕೆಳಹಂತದಲ್ಲಿ ಬೊಂಬುಗಳನ್ನು ಕಟ್ಟುವ ಕೆಲಸವನ್ನು ನೀಡುತ್ತೇವೆ. ಇದರಲ್ಲಿ ಪಳಗಿದ ನಂತರ ಹಂತಹಂತವಾಗಿ ಮೇಲೆ ಏರುವಂತೆ ಮಾಡುತ್ತೇವೆʼ ಎಂದು ದೇವೇಂದ್ರ ಹೇಳುತ್ತಾರೆ

PHOTO • Riya Behl

ಕೆಲವು ಕಾರ್ಮಿಕರು ಜನವರಿ 24ರಿಂದ ಪ್ರಾರಂಭವಾಗುವ ರ‍್ಯಾಲಿಯಲ್ಲಿ ಭಾಗವಹಿಸುವುದಕ್ಕಾಗಿ ಉಳಿಯಲು ಯೋಜಿಸಿದರೆ, ಇತರರು ಉತ್ತರ ಮುಂಬಯಿಯಲ್ಲಿರುವ ತಮ್ಮ ಬಾಡಿಗೆ ಕೋಣೆಗಳಿಗೆ ಹಿಂತಿರುಗುತ್ತಾರೆ

PHOTO • Riya Behl

'ನಾವು ಇಲ್ಲಿ ಮಜ್ದೂರಿ [ಕೂಲಿ ಕಾರ್ಮಿಕರನ್ನು] ಮಾಡದಿದ್ದರೆ, ನಮಗೆ [ಹಳ್ಳಿಯಲ್ಲಿ] ಕೃಷಿ ಮಾಡಲು ಸಾಧ್ಯವಾಗುವುದಿಲ್ಲ' ಎಂದು ರಾಮ್ ಮೋಹನ್ (ಕೆಳಗೆ) ಹೇಳುತ್ತಾರೆ. 'ರಸಗೊಬ್ಬರ, ಬೀಜಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ನಮಗೆ ಹಣ ಬೇಕು - ಇದು ಕೃಷಿಯಿಂದ ದೊರಕುವುದಿಲ್ಲ '

PHOTO • Riya Behl

'[ಕೃಷಿ] ಕಾನೂನುಗಳ ಕುರಿತು ನನಗೆ ಹೆಚ್ಚು ತಿಳಿದಿಲ್ಲ. ನಾನು ಕೆಲಸ ಮಾಡುತ್ತೇನೆ ಮತ್ತು ಸಂಪಾದಿಸುತ್ತೇನೆ, ಅಷ್ಟೆ' ಎಂದು ಸಂತ್ರಾಮನ್ ಹೇಳುತ್ತಾರೆ (ಮಾಸ್ಕ್‌ ಧರಿಸಿರುವವರು) - ಯುಪಿಯ ಗೊಂಡಾ ಜಿಲ್ಲೆಯ ಇತರರೊಂದಿಗೆ

PHOTO • Riya Behl

'ನಾವು ಇಲ್ಲಿ ಕೆಲಸ ಮುಗಿಸಿದ ನಂತರ ರೆಡೆ ಕೆಲಸಕ್ಕೆ ಹೋಗುತ್ತೇವೆ' ಎಂದು ಬ್ರಿಜೇಶ್ ಹೇಳುತ್ತಾರೆ. 'ಅನೇಕರು ಈ ಪ್ರತಿಭಟನೆಗಳಲ್ಲಿ ಸೇರುತ್ತಾರೆ. ಆದರೆ ನಾವು ಕೆಲಸ ಮಾಡದಿದ್ದರೆ, ಹೊಟ್ಟೆಯ ಪಾಡೇನು ? '

ಅನುವಾದ - ಶಂಕರ ಎನ್. ಕೆಂಚನೂರು

Riya Behl is Senior Assistant Editor at People’s Archive of Rural India (PARI). As a multimedia journalist, she writes on gender and education. Riya also works closely with students who report for PARI, and with educators to bring PARI stories into the classroom.

Other stories by Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru