ಫೋರ್ಬ್ಸ್ 2021ರ ಪಟ್ಟಿಯನ್ನು ನಂಬಬಹುದಾದರೆ (ಬಿಲಿಯನೇರ್‌ಗಳು ಮತ್ತು ಅವರ ಸಂಪತ್ತಿನ ವಿಷಯಕ್ಕೆ ಬಂದಾಗ, ಫೋರ್ಬ್ಸ್ ಪತ್ರಿಕೆಯನ್ನು ಹೆಚ್ಚು ನಂಬಬಹುದು) ಭಾರತೀಯ ಡಾಲರ್ ಬಿಲಿಯನೇರ್‌ಗಳ ಶ್ರೇಣಿಯು ಕಳೆದ 12 ತಿಂಗಳಲ್ಲಿ 102ರಿಂದ 140ಕ್ಕೆ ಏರಿದೆ. ಅವರ ಒಟ್ಟು ಸಂಪತ್ತು, ಕಳೆದ ವರ್ಷದಲ್ಲಿ "ಸುಮಾರು 596 ಬಿಲಿಯನ್ ಡಾಲರ್"‌ ಅಂದರೆ ಬಹುತೇಕ ದ್ವಿಗುಣಗೊಂಡಿದೆ.

ಇದರರ್ಥ, ಕೇವಲ 140 ವ್ಯಕ್ತಿಗಳು, ಅಥವಾ ಒಟ್ಟು ಜನಸಂಖ್ಯೆಯ ಶೇಕಡಾ 0.000014 ರಷ್ಟು ಜನರು, ನಮ್ಮ ಒಟ್ಟು ದೇಶೀಯ ಉತ್ಪನ್ನ ಮೌಲ್ಯವಾಗಿರುವ 2.62 ಟ್ರಿಲಿಯನ್ ಡಾಲರಿನ‌ 22.7 ಶೇಕಡಾ (ಅಥವಾ ಐದನೇ ಒಂದು ಭಾಗಕ್ಕಿಂತಲೂ ಹೆಚ್ಚು) ಪಾಲಿನ ಮೌಲ್ಯವನ್ನು ತಾವೇ ಹೊಂದಿದ್ದಾರೆ, ಅವರಲ್ಲಿ ಯಾವಾಗಲೂ ʼಒಟ್ಟುʼ ಎನ್ನುವ ಪದಕ್ಕೆ ಪೂರ್ತಿಯಾಗಿ ಬೇರೆಯದೇ ಅರ್ಥವಿದೆ.

ಬಹುತೇಕ ಪ್ರಮುಖ ಭಾರತೀಯ ದಿನಪತ್ರಿಕೆಗಳೆಲ್ಲವೂ ಫೋರ್ಬ್ಸ್ ಘೋಷಣೆಯನ್ನು ಉದ್ಯಮಿಗಳ ಸಾಹಸ ಕಾರ್ಯವೇನೋ ಎನ್ನುವ ರಿತಿಯಲ್ಲಿ ಹೊಗಳಿಕೆಯ ದನಿ ಬಳಸಿ ಪ್ರಕಟಿಸಿದ್ದವು. ಅವು ಈ ಕುರಿತು ಪ್ರಾಮಾಣಿಕ ವರದಿಗಳನ್ನು ಪ್ರಕಟಿಸಲೇ ಇಲ್ಲ.

"ಕೊವಿಡ್‌ನ ಮತ್ತೊಂದು ಅಲೆ ಭಾರತೆದೆಲ್ಲಡೆ ವ್ಯಾಪಿಸುತ್ತಿದೆ ಮತ್ತು ಈ ಒಟ್ಟು ಪ್ರಕರಣಗಳ ಸಂಖ್ಯೆ 1.2 ಕೋಟಿಯ ಗಡಿ ದಾಟಿದೆ. ಆದರೆ ದೇಶದ ಷೇರು ಮಾರುಕಟ್ಟೆಯ ಮಹಾಮಾರಿ ಕುಣಿತ ಇನ್ನಷ್ಟು ಎತ್ತರಕ್ಕೆ ತಲುಪಿದೆ. ಷೇರು ಮಾರುಕಟ್ಟೆಯ ಪ್ರಮುಖ ಮಾನದಂಡವಾಗಿರುವ ಸೆನ್ಸೆಕ್ಸ್‌ ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 75%ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 102 ಇದ್ದ ಬಿಲಿಯನೇರ್‌ಗಳ ಸಂಖ್ಯೆ 140ಕ್ಕೆ ಏರಿದೆ; ಅವರ ಒಟ್ಟು ಸಂಪತ್ತು ಸುಮಾರು 596 ಬಿಲಿಯನ್‌ ಡಾಲರುಗಳಷ್ಟು. ಇದು ಕಳೆದ ವರ್ಷದ ಬಹುತೇಕ ಎರಡರಷ್ಟು." ಎಂದು ಈ ದೇಶದ ಕುರಿತ ತನ್ನ ವರದಿಯ ಮೊದಲ ಪ್ಯಾರಾಗ್ರಾಫ್‌ನಲ್ಲಿ ಫೋರ್ಬ್ಸ್ ಹೇಳುತ್ತದೆ.

ಹೌದು, ಕಳೆದ ಒಂದು ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 7.7ರಷ್ಟು ಕುಸಿತ ಕಂಡರೆ ಈ 140 ಜನರ ಆದಾಯದಲ್ಲಿ ಶೇಕಡಾ 90.4ರಷ್ಟು ಏರಿಕೆ ಕಂಡುಬಂದಿದೆ. ಇತ್ತ ವಲಸೆ ಕಾರ್ಮಿಕರ ಎರಡನೇ ಅಲೆಯನ್ನು ನಾವು ನೋಡುತ್ತಿರುವಾಗ ಅತ್ತಲಿಂದ ಈ ಸುದ್ದಿ ಬರುತ್ತದೆ.  ಈ ಬಾರಿಯೂ ನಗರಗಳಿಂದ ಮತ್ತೆ ಹಳ್ಳಿಗೆ ಹೊರಡುತ್ತಿರುವವರ ಸಂಖ್ಯೆ ಲೆಕ್ಕ ಸಿಗದಷ್ಟು ದೊಡ್ಡದಾಗಿದೆ. ಇದರ ಪರಿಣಾಮವಾಗಿ ಆಗುವ ಉದ್ಯೋಗ ನಷ್ಟವು ಜಿಡಿಪಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ದೇವರ ದಯೆಯಿಂದಾಗಿ ಇದು ನಮ್ಮ ಬಿಲಿಯನೇರ್‌ಗಳ ಮೇಲೆ ಹಚ್ಚು ಪರಿಣಾಮ ಬೀರಲಿಲ್ಲ. ಆ ಕುರಿತು ಭರವಸೆ ನೀಡಲು ಫೋರ್ಬ್ಸ್‌ ಸಹಾಯವಿದೆ ನಮಗೆ.

ಇದಲ್ಲದೆ, ಕೋಟ್ಯಾಧಿಪತಿಗಳ ಸಂಪತ್ತು ಕೋವಿಡ್ -19ರ ವಿರುದ್ಧ ದಿಕ್ಕಿನ ತತ್ವವನ್ನು ಹೊಂದಿದಂತಿದೆ. ತೀವ್ರತೆಯು ಹೆಚ್ಚಾದಂತೆಲ್ಲ ಹರಡುವಿಕೆ ಕಡಿಮೆಯಾಗುತ್ತಾ ಹೋಗುತ್ತದೆ.

"ಸಮೃದ್ಧಿಯ ನಿಯಮಗಳು ಅತ್ಯಂತ ಮೇಲ್‌ಸ್ತರದಲ್ಲಿವೆ"‌ ಎಂದು ಎಂದು ಫೋರ್ಬ್ಸ್ ಹೇಳುತ್ತದೆ. "ಮೂರು ಜನ ಅತ್ಯಂತ ಶ್ರೀಮಂತರು ತಮ್ಮ ಬಳಿ 100 ಬಿಲಿಯನ್‌ ಡಾಲರಿಗಿಂತಲೂ ಹೆಚ್ಚಿನ ಸಂಪತ್ತನ್ನು‌ ಹೊಂದಿದ್ದಾರೆ." ಆ ಮೂರು ಜನರ ಒಟ್ಟು ಸಂಪತ್ತು 153.5 ಬಿಲಿಯನ್‌ ಡಾಲರ್.‌ ಅಂದರೆ ಈ ಎಲ್ಲಾ 140 ಜನರ ಸಂಪತ್ತಿನ 25 ಶೇಕಡಾದಷ್ಟನ್ನು ಈ ಮೂವರು ಹೊಂದಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿರುವ ಅಂಬಾನಿ (84.5 ಬಿಲಿಯನ್‌ ಡಾಲರ್) ಮತ್ತು ಅದಾನಿ (50.5 ಬಿಲಿಯನ್‌ ಡಾಲರ್)‌ ಇವರಿಬ್ಬರ ಸಂಪತ್ತು ಒಟ್ಟು ಸೇರಿಸಿದರೆ ಪಂಜಾಬ್‌ (85.5 ಬಿಲಿಯನ್‌ ಡಾಲರ್)‌ ಅಥವಾ ಹರಿಯಾಣದ (101 ಬಿಲಿಯನ್‌ ಡಾಲರ್)‌ ರಾಜ್ಯಗಳ ಒಟ್ಟು ಉತ್ಪನ್ನಕ್ಕಿಂತಲೂ ಹೆಚ್ಚು.

ಈ ಮಹಾಮಾರಿ ಪಿಡುಗಿನ ವರ್ಷದಲ್ಲಿ, ಅಂಬಾನಿ ತನ್ನ ಸಂಪತ್ತಿಗೆ 47.7 ಬಿಲಿಯನ್ ಡಾಲರ್ (ರೂ. 3.57 ಟ್ರಿಲಿಯನ್) ಸೇರಿಸಿಕೊಂಡಿದ್ದಾರೆ - ಅಂದರೆ ಪ್ರತಿ ಸೆಕೆಂಡಿಗೆ ಸರಾಸರಿ 1.13 ಲಕ್ಷ ರೂಪಾಯಿಗಳು - ಇದು ಪಂಜಾಬಿನ  6 ಕೃಷಿ ಕುಟುಂಬಗಳ (ಸರಾಸರಿ ಗಾತ್ರ 5.24 ವ್ಯಕ್ತಿಗಳು) ಸರಾಸರಿ ಮಾಸಿಕ ಆದಾಯಕ್ಕಿಂತಲೂ (ರೂ .18,059) ಹೆಚ್ಚು.

ಕೇವಲ ಅಂಬಾನಿಯ ಒಟ್ಟು ಸಂಪತ್ತು ಪಂಜಾಬ್ ರಾಜ್ಯದ ಜಿಎಸ್ಡಿಪಿಗೆ ಸಮನಾಗಿರುತ್ತದೆ. ಅದೂ ಕೂಡ ಹೊಸ ಕೃಷಿ ಕಾನೂನುಗಳು ಪೂರ್ಣ ಪರಿಣಾಮ ಬೀರುವ ಮೊದಲು. ಅದು ಒಮ್ಮೆ ಜಾರಿಯಾದರೆ, ಅದು ಇನ್ನಷ್ಟು ಹೆಚ್ಚಾಗುತ್ತದೆ. ಅಂದಹಾಗೆ, ಪಂಜಾಬ್ ರೈತನ ಮಾಸಿಕ ಸರಾಸರಿ ತಲಾದಾಯವು ಸುಮಾರು ರೂ. 3,450 (ಎನ್‌ಎಸ್‌ಎಸ್ 70 ನೇ ಸುತ್ತು).

ಬಹಳಷ್ಟು ಪತ್ರಿಕೆಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಯನ್ನು ಒಂದಿಷ್ಟೂ ಬದಲಿಸದೆ ಹಾಗೆಯೇ ಪ್ರಕಟಿಸಿವೆ. ಆ ವರದಿ ಫೋರ್ಬ್ಸ್ ಮಾಡಿರುವ ವರದಿಯ ಒಳನೋಟಗಳನ್ನೇ ಒಳಗೊಂಡಿಲ್ಲ. ಕೊವಿಡ್‌ ಅಥವಾ ಕೊರೋನಾ ವೈರಸ್‌ ಅಥವಾ ಮಹಾಮಾರಿಯ ಪ್ರಸ್ತಾಪ ನಿಮಗೆ ಪಿಟಿಐ ವರದಿಯಲ್ಲಿ ಎಲ್ಲೂ ಕಾಣಸಿಗುವುದಿಲ್ಲ. ಫೋರ್ಬ್ಸ್‌ ವರದಿ "ಹತ್ತು ಜನ ಭಾರತೀಯ ಶ್ರೀಮಂತರಲ್ಲಿ ಇಬ್ಬರು ಆರೋಗ್ಯ ಕ್ಷೇತ್ರದಿಂದ ಬಂದವರಾಗಿದ್ದಾರೆ. ಆರೋಗ್ಯ ರಕ್ಷಣಾ ವಲಯವು ಈ ಸಾಂಕ್ರಾಮಿಕ ಪಿಡುಗಿನ ಏರಿಕೆಯ ಫಲವನ್ನು ಎರಡೂ ಕೈಯಲ್ಲಿ ಬಾಚಿ ತಿನ್ನುತ್ತಿದೆ." ಎಂದು ಹೇಳಿದೆ. ಆದರೆ ಪಿಟಿಐ ಅಥವಾ ಇತರ ವರದಿಗಳಲ್ಲಿ "ಹೆಲ್ತ್‌ ಕೇರ್‌ʼ ಎನ್ನುವ ಪದ ಅಪ್ಪಿತಪ್ಪಿಯೂ ಕಾಣಿಸಿಕೊಂಡಿಲ್ಲ. ಅದೂ ಫೋರ್ಬ್ಸ್‌ ತನ್ನ ಪಟ್ಟಿಯಲ್ಲಿ 140 ಡಾಲರ್ ಬಿಲಿಯನೇರ್‌ಗಳಲ್ಲಿ 24 ಮಂದಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವರೆಂದು ಹೇಳಿದ್ದರೂ ಸಹ.

ಫೋರ್ಬ್ಸ್ ಪಟ್ಟಿಯ ಪ್ರಕಾರ, ಆರೋಗ್ಯ ಉದ್ಯಮದಲ್ಲಿನ 24 ಭಾರತೀಯ ಬಿಲಿಯನೇರ್‌ಗಳಲ್ಲಿ ಮೊದಲ ಹತ್ತು ಮಂದಿ ಈ ವರ್ಷ24.9 ಬಿಲಿಯನ್‌ ಡಾಲರಿನಷ್ಟು ಸಂಪತ್ತನ್ನು ಸಂಪಾದಿಸಿದ್ದಾರೆ (ದಿನಕ್ಕೆ ಸರಾಸರಿ 500 ಬಿಲಿಯನ್ ರೂ.) ಅವರ ಒಟ್ಟು ಸಂಪತ್ತು ಶೇಕಡಾ 58.3 ಬಿಲಿಯನ್ ಡಾಲರ್‌ಗಳಿಗೆ (ರೂ. 4.3 ಟ್ರಿಲಿಯನ್) ತಲುಪಿದೆ. ಕೋವಿಡ್ -19 ಒಂದು 'ಉತ್ತಮ ಮಟ್ಟ ಮಾಡುವ ಸಾಧನ' ಮತ್ತು ಇದು ಎಲ್ಲರನ್ನೂ ಒಂದೇ ಪ್ರಮಾಣಕ್ಕೆ ತರಲಿದೆ‌ ಎನ್ನಲಾಗುತ್ತಿದ್ದದ್ದು ನೆನಪಿದೆಯೇ?

Left: A farmer protesting with chains at Singhu. In the pandemic year, not a paisa's concession was made to farmers by way of guaranteed MSP. Right: Last year, migrants on the outskirts of Nagpur. If India levied wealth tax at just 10 per cent on 140 billionaires, we could run the MGNREGS for six years
PHOTO • Shraddha Agarwal
Left: A farmer protesting with chains at Singhu. In the pandemic year, not a paisa's concession was made to farmers by way of guaranteed MSP. Right: Last year, migrants on the outskirts of Nagpur. If India levied wealth tax at just 10 per cent on 140 billionaires, we could run the MGNREGS for six years
PHOTO • Satyaprakash Pandey

ಎಡ: ಸಿಂಗು ಗಡಿಯಲ್ಲಿ ಸರಪಳಿ ತೊಟ್ಟು ರೈತರೊಬ್ಬರ ಪ್ರತಿಭಟನೆ. ಸಾಂಕ್ರಾಮಿಕ ಪಿಡುಗಿನ ಈ ವರ್ಷದಲ್ಲಿ, ಯಾವುದೇ ಖಾತರಿ ಕನಿಷ್ಟ ಬೆಂಬಲ ಬೆಲೆ ನೀಡಲಾಗಿಲ್ಲ ಮತ್ತು ರೈತರಿಗೆ ಒಂದು ಪೈಸೆಯ ಪರಿಹಾರವೂ ದೊರೆತಿಲ್ಲ. ಬಲ: ಕಳೆದ ವರ್ಷ ನಾಗ್ಪುರದ ಗಡಿಯಲ್ಲಿ ವಲಸಿಗರು. ಈ 140 ಶತಕೋಟ್ಯಾಧಿಪತಿಗಳ ಮೇಲೆ ಭಾರತ ಶೇಕಡಾ 10ರಷ್ಟು ಸಂಪತ್ತು ತೆರಿಗೆ ವಿಧಿಸಿದರೂ, ಮುಂದಿನ ಆರು ವರ್ಷಗಳವರೆಗೆ ಆ ಹಣದಿಂದ ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ನಡೆಸಬಹುದು.

ನಮ್ಮ ಮೇಕ್ ಇನ್ ಇಂಡಿಯಾ - ರೇಕ್ ಇಟ್‌ ಎನಿವ್ಹೇರ್‌ (ಭಾರತದಲ್ಲಿ ತಯಾರಿಸಿ, ಹಣದ ಚೀಲವನ್ನು ಎಲ್ಲಿಯಾದರೂ ಇಡಿ) ಯೋಜನೆಯಡಿ ಪೇರಿಸಲಾಗಿರುವ ಹಣದ ಚೀಲದ ಎತ್ತರವೀಗ ಫೋರ್ಬ್ಸ್ ಶಿಖರದಷ್ಟೇ ಎತ್ತರಕ್ಕೇರಿದೆ. ಪ್ರಸ್ತುತ ನಾವು ಫೋರ್ಬ್ಸ್‌ ಪಟ್ಟಿಯಲ್ಲಿ ಮೇಲಿನಿಂದ ಕೇವಲ ಎರಡು ಸ್ಥಾನಗಳಷ್ಟೇ ಕೆಳಗಿದ್ದೇವೆ. 140 ರನ್ ಗಳಿಸಿ ಮುನ್ನುಗ್ಗುತ್ತಿರುವ ಭಾರತ ಈಗ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶ. ಜರ್ಮನಿ ಮತ್ತು ರಷ್ಯಾದಂತಹ ತೋರಿಕೆಯ ಶ್ರೀಮಂತ ದೇಶಗಳಿಗೆ ಈ ಬಾರಿ ನಾವು ಅವರ ಸ್ಥಾನವನ್ನು ತೋರಿಸಿದ್ದೇವೆ. ಈ ಮೊದಲು ಮೂರನೇ ಸ್ಥಾನಕ್ಕೆ ಇವೆರಡು ದೇಶಗಳು ಪೈಪೋಟಿ ನೀಡುತ್ತಿದ್ದವು.

96 ಬಿಲಿಯನ್ ಡಾಲರ್ ಮೊತ್ತದ ಭಾರತೀಯ ಹಣದ ಚೀಲಗಳ ಸಂಪತ್ತು ಸರಿಸುಮಾರು 4 ಲಕ್ಷ 50 ಸಾವಿರ ಕೋಟಿ ರೂಪಾಯಿಗಳು. ಇದು 75 ರಫೇಲ್ ಒಪ್ಪಂದಗಳಿಗಿಂತಲೂ ಒಂದಷ್ಟು ಹೆಚ್ಚು. ಭಾರತದಲ್ಲಿ ವೆಲ್ತ್‌ ಟ್ಯಾಕ್ಸ್‌ ಇಲ್ಲ. ಆದರೆ ಈ ಸಂಪತ್ತಿನ ಮೇಲೆ ತೆರಿಗೆ 10 ಶೇಕಡಾ ವಿಧಿಸಿದರೂ ಆ ಹಣದಿಂದ ನಾವು 4.45 ಟ್ರಿಲಿಯನ್ ರೂಪಾಯಿಗಳಷ್ಟು ಹಣ ಸಂಗ್ರಹಿಸಬಹುದು. ಈ ಮೊತ್ತದಿಂದ ಪ್ರಸ್ತುತ ವಾರ್ಷಿಕ ಹಂಚಿಕೆಯಂತೆ ರೂ. 73,000 ಕೋಟಿ (2021-22ಕ್ಕೆ) ನೀಡಿದಲ್ಲಿ ಆರು ವರ್ಷಗಳವರೆಗೆ ಸುಗಮವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನಡೆಸಬಹುದಾಗಿದ್ದು, ಅದು ಗ್ರಾಮೀಣ ಪ್ರದೇಶಗಳಲ್ಲಿ 168 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಬಲ್ಲದು.

ಪಟ್ಟಣ ಮತ್ತು ನಗರಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಎರಡನೇ ಬಾರಿ ತಮ್ಮ ಊರುಗಳತ್ತ ವಲಸೆ ಹೊರಟಿರುವುದು ಒಂದು ಸಮಾಜವಾಗಿ ನಾವು ಅವರ ವಿಶ್ವಾಸವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ. ನಮ್ಮ ಮೇಲಿನ ಈ ಅವಿಶ್ವಾಸಕ್ಕೆ ಸಂಜಸವಾದ ಕಾರಣವೂ ಇದೆ. ಹೀಗಿರುವಾಗ ಅಂತಹ ಕಾರ್ಮಿಕರಿಗೆ ಅವರ ಊರುಗಳಲ್ಲಿ ಮನರೇಗಾ ಅಡಿಯಲ್ಲಿ ಉದ್ಯೋಗ ನೀಡಬೇಕಾದ ಅವಶ್ಯಕತೆ ಎಂದಿಗಿಂತಲೂ ಹೆಚ್ಚಾಗಿದೆ.

ಈ ನೂರಾ ನಲವತ್ತು ಅದ್ಭುತ ಜನರಿಗೆ ಸ್ನೇಹಿತರಿಂದ ಸಹಾಯ ದೊರೆತಿದೆ ಕಳೆದ ಎರಡು ದಶಕಗಳಿಂದ ಕಾರ್ಪೊರೇಟ್‌ಗಳಿಗೆ ಭಾರಿ ತೆರಿಗೆ ವಿನಾಯಿತಿ ಸಿಕ್ಕಿದೆ. ಹಾಗೂ 2019ರ ನಂತರವಂತೂ ಈ ವಿನಾಯತಿಯ ವೇಗವನ್ನು ನೋಡುತ್ತಿದ್ದರೆ ಗಾಳಿಯೂ ನಾಚಿಕೊಳ್ಳುವಂತಿದೆ.

ಇದನ್ನು ನೋಡಿ, ಈ ಮಹಾಮಾರಿ ಬಂದ ಒಂದು ವರ್ಷದಲ್ಲಿ ಕನಿಷ್ಟ ಬೆಂಬಲ ಬೆಲೆಯ ಸಹಾಯವನ್ನೂ ನೀಡಲಾಗಿಲ್ಲ. ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಸುಗ್ರೀವಾಜ್ಞೆಯನ್ನು ಹೊರಡಿಸಲಾಯಿತು (ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ನಾಲ್ಕು ಗಂಟೆಗಳವರೆಗಿನ ಕೆಲಸಕ್ಕೆ ಅಧಿಕಾವಧಿ ಭತ್ಯೆ ಇಲ್ಲ), ಜೊತೆಗೆ ಹೆಚ್ಚು ಹೆಚ್ಚು ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಅತಿ ಶ್ರೀಮಂತರಿಗೆ ಹಸ್ತಾಂತರಿಸಲಾಯಿತು. ಈ ಮಹಾಮಾರಿ ಬಂದ ಈ ವರ್ಷದಲ್ಲಿ ಆಹಾರ ಧಾನ್ಯಗಳ ಹೆಚ್ಚುವರಿ ಸಂಗ್ರಹವು 104 ದಶಲಕ್ಷ ಟನ್‌ಗಳನ್ನು ತಲುಪಿದ ಸಮಯವಿತ್ತು. ಆದರೆ ಜನರಿಗೆ 'ಮಂಜೂರು' ಮಾಡಲಾಗಿರುವುದು 5 ಕಿಲೋಗ್ರಾಂಗಳಷ್ಟು ಗೋಧಿ ಅಥವಾ ಅಕ್ಕಿ ಮತ್ತು 1 ಕೆಜಿ ದ್ವಿದಳ ಧಾನ್ಯಗಳನ್ನು ಆರು ತಿಂಗಳವರೆಗೆ ಉಚಿತ. ಅದೂ ಸಹ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಒಳಪಡುವವರಿಗೆ ಮಾತ್ರ, ಈ ನಿಯಮವು ಬಹಳಷ್ಟು ಹಸಿದ ಜನರನ್ನು ಈ ಸೌಲಭ್ಯದಿಂದ ಹೊರಗಿಡಲು ಕಾರಣವಾಯಿತು. ಈ ದೇಶದ ಜನರು ಕಳೆದ ಒಂದು ವರ್ಷದಲ್ಲಿ ಹಸಿವಿನಿಂದ ಬಳಲಿದಂತೆ ಹಿಂದಿನ ಹತ್ತು ವರ್ಷಗಳಲ್ಲಿ ಬಳಲಿರಲಿಲ್ಲ.

ಫೋರ್ಬ್ಸ್‌ನ ಮಾತಿನಲ್ಲಿ ಹೇಳುವುದಾದರೆ, ಸಂಪತ್ತಿನ ಈ 'ಉಲ್ಬಣವನ್ನು' ಪ್ರಪಂಚದೆಲ್ಲೆಡೆ ಕಾಣಬಹುದು. "ಪ್ರತಿ 17 ಗಂಟೆಗಳಿಗೊಮ್ಮೆ, ಪ್ರತಿ ಒಬ್ಬ ಬಿಲಿಯನೇರ್ ಹುಟ್ಟಿ ಬರುತ್ತಿದ್ದಾರೆ. ಒಟ್ಟಾರೆಯಾಗಿ, ವಿಶ್ವದ ಶ್ರೀಮಂತ ಜನರು ಕಳೆದ ಒಂದು ವರ್ಷದಲ್ಲಿ 5 ಟ್ರಿಲಿಯನ್ ಹಣವನ್ನು ತಮ್ಮ ತಿಜೋರಿಗೆ ಸೇರಿಸಿಕೊಂಡಿದ್ದಾರೆ.” ಈ ಹೊಸ 5 ಟ್ರಿಲಿಯನ್ ಪೈಕಿ, ಶೇಕಡಾ 12ರಷ್ಟು ನಮ್ಮ ದೇಶದ ಶ್ರೀಮಂತರ ಬಳಿಯಿದೆ. ಇತ್ತ, ನಾವು ಭಾರತದ ಬಗ್ಗೆ ಯೋಚಿಸಿದರೆ, ಎಲ್ಲಾ ಕ್ಷೇತ್ರಗಳಲ್ಲೂ ಅಸಮಾನತೆ ಯಾರಿಂದಲೂ ಸವಾಲು ಮಾಡಲಾಗದಷ್ಟು ಎಗ್ಗಿಲ್ಲದೆ ಬೆಳೆಯುತ್ತಿದೆ.

ಇಂತಹ ಸಂಪತ್ತಿನ "ಉಲ್ಬಣವು" ಸಾಮಾನ್ಯವಾಗಿ ಜನರ ನೋವಿನ ಮೇಲೆ ತನ್ನ ಸವಾರಿ ಮಾಡುತ್ತದೆ. ಇದು ಕೇವಲ ಸಾಂಕ್ರಾಮಿಕ ರೋಗಗಳ ಸಮಯದಲ್ಲಷ್ಟೇ ಅಲ್ಲ. ದುರಂತಗಳು, ವಿಪತ್ತುಗಳು ಯಾವಾಗಲೂ ದೊಡ್ಡ ವ್ಯವಾಹರವೇ ಆಗಿರುತ್ತದೆ. ಹಲವರ ನೋವಿನಿಂದ ಹಣ ಹಿಂಡುವುದು ಯಾವಾಗಲೂ ಇರುವ ಸಂಪ್ರದಾಯ. ನಮ್ಮ ಉದ್ಯಮಪತಿಗಳು ಕೇವಲ "ಈ ಪಿಡುಗನ್ನು ಅಲುಗಾಡಿಸಿ ಹಣ ಮಾಡಲಿಲ್ಲ" ಬದಲಿಗೆ ಅದರ ಅಲೆಯ ಏರಿಳಿತದ ಮೇಲೆ ಅದ್ಭುತ ಸವಾರಿ ನಡೆಸಿದರು. "ಜಗತ್ತಿನೆಲ್ಲೆಡೆ ಆರೋಗ್ಯ ವಲಯಕ್ಕೆ ಈ ಮಹಾಮಾರಿಯು ವ್ಯಾಪಾರ "ಬಲವರ್ಧನೆ"ಯ ಔಷಧಿಯಾಗಿ (boost) ಕೆಲಸ ಮಾಡಿದೆ" ಎಂದು ಫೋರ್ಬ್ಸ್‌ ಹೇಳಿರುವುದು ಸರಿಯಾಗಿದೆ. ಆದರೆ ಇತರ ವಲಯಗಳಲ್ಲೂ ಇದೇ ರೀತಿಯ ಉಲ್ಬಣಗಳನ್ನು ಕಾಣಬಹುದು. ಇದು ಬಿಕ್ಕಟ್ಟಿನ ಸ್ವರೂಪ ಮತ್ತು ಅದು ಎಲ್ಲಿ ಸಂಭವಿಸಿತು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಡಿಸೆಂಬರ್ 2004ರಲ್ಲಿ ಸುನಾಮಿ ಸಂಭವಿಸಿದ ಒಂದು ವಾರ ಕಳೆಯುವ ಮೊದಲೇ ಷೇರು ಮಾರುಕಟ್ಟೆ ಎಲ್ಲೆಡೆ ಏರಿತ್ತು - ನಮ್ಮ ದೇಶದಲ್ಲಿಯೂ ಸಹ ಸುನಾಮಿಯಿಂದ ಹೆಚ್ಚು ಹಾನಿಯಾಗಿತ್ತು. ಲಕ್ಷಾಂತರ ಬಡ ಜನರ ಮನೆಗಳು, ದೋಣಿಗಳು ಮತ್ತು ಸ್ವತ್ತುಗಳು ನಾಶವಾದವು. ಇಂಡೋನೇಷ್ಯಾದಲ್ಲಿ 100,000ಕ್ಕೂ ಹೆಚ್ಚು ಜನರನ್ನು ಸುನಾಮಿ ಕೊಂದಿತು ಆದಾಗ್ಯೂ, ಜಕಾರ್ತಾ ಕಾಂಪೊಸಿಟ್ ಇಂಡೆಕ್ಸ್ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಉತ್ತುಂಗಕ್ಕೇರಿತು. ನಮ್ಮ ಸೆನ್ಸೆಕ್ಸ್ ಕೂಡ ಹೀಗೆಯೇ ಜಿಗಿಯಿತು. ಇದು ಪುನರ್ನಿರ್ಮಾಣ ಕ್ಷೇತ್ರದಲ್ಲಿ ಹರಿದ ಡಾಲರ್ ಮತ್ತು ರೂಪಾಯಿಯ ಪರಿಮಳವಾಗಿದ್ದು. ನಿರ್ಮಾಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಬೃಹತ್ ವಹಿವಾಟು ಪ್ರಾರಂಭವಾಗಿತ್ತು.

ಈ ಬಾರಿ, ಆರೋಗ್ಯ ಮತ್ತು ತಂತ್ರಜ್ಞಾನ (ವಿಶೇಷವಾಗಿ ಸಾಫ್ಟ್‌ವೇರ್ ಸೇವೆಗಳು) ಇತರ ಕೆಲವು ಕ್ಷೇತ್ರಗಳಿಗಿಂತ ಹೆಚ್ಚು ಸಾಧನೆ ಮಾಡಿವೆ. ಇವರೆಲ್ಲರ ಒಟ್ಟು ಸಂಪತ್ತು 5 ಸಾವಿರದ 240 ಕೋಟಿ ಡಾಲರ್‌ಗಳನ್ನು (ರೂ. 3 ಲಕ್ಷದ 90 ಸಾವಿರ ಕೋಟಿ) ತಲುಪಿದೆ. ಎಂದರೆ ಶೇಕಡಾ 77ರಷ್ಟು ಹೆಚ್ಚಳ. ಹೌದು ಜೊತೆಗೆ ಆನ್‌ಲೈನ್‌ ಕಲಿಕೆ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಇತ್ತ ಲಕ್ಷಾಂತರ ಮಕ್ಕಳು, ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ, ಯಾವುದೇ ರೀತಿಯ ಶಿಕ್ಷಣವಿಲ್ಲದೆ ಕಲಿಕೆಯಿಂದ ವಂಚಿತರಾಗಿದ್ದರೂ, ಆನ್‌ಲೈನ್‌ ಕಲಿಕೆ ಕೆಲವರಿಗೆ ಪ್ರಯೋಜನಗಳನ್ನು ತಂದಿತು. ಬೈಜು ರವೀಂದ್ರನ್ ತಮ್ಮ ಸ್ವಂತ ಸಂಪತ್ತಿಗೆ ಶೇಕಡಾ 39ರಷ್ಟು ಹಣವನ್ನು ಸೇರಿಸಿ 2.5 ಬಿಲಿಯನ್ ಡಾಲರ್ (18,700 ಕೋಟಿ ರೂಪಾಯಿಗಳು) ಗಳಿಸಿದ್ದಾರೆ.

ನನಗನ್ನಿಸುವಂತೆ ಜಗತ್ತಿಗೆ ನಾವು ಅದರ ಸ್ಥಾನ ಯಾವುದೆಂದು ತೋರಿಸಿದ್ದೇವೆ. ಓಹ್!‌ ಆದ್ರೆ... ಜಗತ್ತು ನಮಗೂ ನಮ್ಮ ಸ್ಥಾನ ಯಾವುದೆಂದು ತೋರಿಸಿಕೊಟ್ಟಿದೆ, ಅಲ್ಲವೆ? ವಿಶ್ವಸಂಸ್ಥೆಯ ಅಭಿವೃದ್ಧಿ ಸೂಚ್ಯಂಕದ 189 ದೇಶಗಳಲ್ಲಿ ನಾವು 131ನೇ ಸ್ಥಾನದಲ್ಲಿದ್ದೇವೆ. ಎಲ್ ಸಾಲ್ವಡಾರ್, ತಜಿಕಿಸ್ತಾನ್, ಕ್ಯಾಬೊ ವರ್ಡೆ, ಗ್ವಾಟೆಮಾಲಾ, ನಿಕರಾಗುವಾ, ಭೂತಾನ್ ಮತ್ತು ನಮೀಬಿಯಾ ಎಲ್ಲವೂ ನಮಗಿಂತಲೂ ಮುಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಮ್ಮನ್ನು ಈ ವರ್ಷ ಇಷ್ಟು ಕೆಳಗೆ ಇಳಿಸುವುದರ ಹಿಂದೆ ಯಾವುದೋ ಜಾಗತಿಕ ಪಿತೂರಿಯಿದೆಯೆಂದು ಅದರ ಕುರಿತು ತನಿಖೆ ಆರಂಭಗೊಳ್ಳಲೂಬಹುದು. ಇದಕ್ಕಾಗಿ ನಾವು ಕಾದು ನೋಡೋಣ, ಆ ಕುರಿತ ಮಾಹಿತಿಗಳಿಗೆ ಇದೇ ಸ್ಥಳದಲ್ಲಿ ಎದುರುನೋಡುತ್ತಿರಿ.

ಲೇಖನವು ಮೊದಲು ʼ ದಿ ವೈರ್‌ ʼ ನಲ್ಲಿ ಪ್ರಕಟಗೊಂಡಿತ್ತು.

ಅನುವಾದ: ಶಂಕರ ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Illustration : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru