ಮಾಧ್ಯಮಗಳು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗದ ಒಂದು ಸತ್ಯವೆಂದರೆ, ಇದೊಂದು ಇದೊಂದು ಇತ್ತೀಚಿನ ವರ್ಷಗಳಲ್ಲಿ ಜಗತ್ತು ಕಂಡ ಅತ್ಯಂತ ದೊಡ್ಡ ಮತ್ತು ಶಾಂತಿಯುತ ಹೋರಾಟವೆನ್ನುವುದು. ಹಾಗೆಯೇ ಈ ಸರ್ವವ್ಯಾಪಿ ವ್ಯಾಧಿಯ ನಡುವೆಯೂ ಅದ್ಭುತವಾಗಿ ಆಯೋಜಿಸಲ್ಪಟ್ಟ ಹೋರಾಟವೂ ಹೌದು ಮತ್ತು ಅತಿದೊಡ್ಡ ಗೆಲುವನ್ನು ಪಡೆದ ಹೋರಾಟ ಕೂಡಾ ಹೌದು.

ಇದೊಂದು ಹೋರಾಟದ ಪರಂಪರೆಯನ್ನು ಮುನ್ನಡೆಸುವ ವಿಜಯ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿ ಮತ್ತು ದಲಿತ ಸಮುದಾಯಗಳು ಸೇರಿದಂತೆ ಎಲ್ಲಾ ರೀತಿಯ ರೈತರು, ಪುರುಷರು ಮತ್ತು ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದರು. ಈಗ ನಾವು ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಗುಂಗಿನಲ್ಲಿರುವಾಗಲೇ, ದೆಹಲಿ ಗಡಿಯಲ್ಲಿ ನೆಲೆನಿಂತ ರೈತರು ಆ ಮಹಾನ್ ಹೋರಾಟದ ಸ್ಫೂರ್ತಿಯನ್ನು ಮತ್ತೆ ನಮ್ಮೆದುರಿಗಿಟ್ಟಿದ್ದಾರೆ.

ಈ ತಿಂಗಳ 29ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ರದ್ದುಗೊಳಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. 'ಉತ್ತಮ ಪ್ರಯತ್ನಗಳ ಹೊರತಾಗಿಯೂ ರೈತರ ಒಂದು ವರ್ಗವನ್ನು ಮನವೊಲಿಸಲು ವಿಫಲವಾದ ನಂತರ' ಅವರು ಹಾಗೆ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ. ಅವರು ಒಂದು ವರ್ಗಕ್ಕೆ, ಅಪಖ್ಯಾತಿಗೊಳಗಾಗಿದ್ದ ಕಾನೂನುಗಳನ್ನು ಅವು ಅವರಿಗೆ ಒಳಿತು ಮಾಡಲೆಂದು ತಂದಂತಹ ಕಾನೂನುಗಳೆಂದು ಮನವರಿಕೆ ಮಾಡಿಕೊಡುವುದರಲ್ಲಿ ಸೋತಿದ್ದಾಗಿ ಹೇಳುವುದನ್ನು ಗಮನಿಸಿ. ಇಲ್ಲಿ ಅವರು ತನಗೆ ಈ ವರ್ಗವನ್ನು ಒಪ್ಪಿಸಲು ಕೌಶಲ ಸಾಲಲಿಲ್ಲವೆನ್ನುತ್ತಾರೆಯೇ ವಿನಹ ಈ ಐತಿಹಾಸಿಕ ಹೋರಾಟದಲ್ಲಿ ಜೀವ ತೆತ್ತ 600ಕ್ಕೂ ಹೆಚ್ಚು ರೈತರ ಕುರಿತಾಗಿ ಒಂದು ಮಾತನ್ನೂ ಹೇಳುವುದಿಲ್ಲ. ಬದಲಿಗೆ ರೈತರು ಈ ಒಳ್ಳೆಯ ಕಾನೂನನ್ನು ರೈತರು ಒಪ್ಪಲಿಲ್ಲವೆಂದು ಬೇಸರಿಸುತ್ತಾರೆ. ಹಾಗೂ ಈ ಕಾನೂನಿಲ್ಲಿಯೇ ವೈಫಲ್ಯಗಳಿದ್ದವು ಅಥವಾ ಈ ಕಾನೂನನ್ನು ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ರಾತ್ರೋ ರಾತ್ರಿ ಜನರ ಮೇಲೆ ಹೇರಿದ್ದು ತಪ್ಪೆನ್ನುವುದನ್ನು ಅವರು ಒಪ್ಪಿಕೊ‍ಳ್ಳುವುದಿಲ್ಲ.

ಸರಿ, ಈಗ ಖಲಿಸ್ತಾನಿಗಳು, ದೇಶವಿರೋಧಿಗಳು, ರೈತರಂತೆ ವೇಷ ಹಾಕುವ ನಕಲಿ ಕಾರ್ಯಕರ್ತರು, ಶ್ರೀ ಮೋದಿಯವರ ತಣ್ಣನೆಯ ಮೋಡಿಗೆ ಮರುಳಾಗಲು ನಿರಾಕರಿಸಿದ ಜನರು 'ರೈತರ ಒಂದು ವರ್ಗ' ಎನ್ನುವ ಪದವಿ ಪಡೆದಿದ್ದಾರೆ. ಹಾಗಿದ್ದರೆ ಅವರು ನಿಜವನ್ನು ಮನಗಾಣಲು ನಿರಾಕರಿಸಿದರೆ? ಹಾಗಿದ್ದರೆ ಇವರನ್ನು ಯಾವ ರೀತಿಯಲ್ಲಿ ಮತ್ತು ಯಾವ ವಿಧಾನ ಬಳಸಿ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು? ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದ ಅವರಿಗೆ ರಾಜಧಾನಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕವೆ? ಕಂದಕಗಳು ಮತ್ತು ಮುಳ್ಳುತಂತಿಗಳಿಂದ ಅವರನ್ನು ತಡೆಯುವ ಮೂಲಕವೆ? ಜಲಫಿರಂಗಿಗಳಿಂದ ಅವರನ್ನು ಘಾಸಿಗೊಳಿಸುವ ಮೂಲಕವೆ? ಅವರ ಶಿಬಿರಗಳನ್ನು ಸಣ್ಣ ಗುಲಾಗ್‌ಗಳಾಗಿ ಪರಿವರ್ತಿಸುವ ಮೂಲಕವೆ? ಪರಮಾಪ್ತ ಮಾಧ್ಯಮಗಳ ಮೂಲಕ ಪ್ರತಿದಿನ ರೈತರನ್ನು ನಿಂದಿಸುವ ಮೂಲಕವೆ? ಅಥವಾ ಅವರ ಮೇಲೆ ಕೇಂದ್ರ ಮಂತ್ರಿಯ ಅಥವಾ ಅವರ ಮಗನ ಹೆಸರಿನಲ್ಲಿದೆಯೆನ್ನಲಾಗುವ ವಾಹನಗಳನ್ನು ಹತ್ತಿಸುವ ಮೂಲಕವೆ? ಯಾವುದರ ಮೂಲಕ ಮನವೊಲಿಸಲು ಪ್ರಯತ್ನಿಸಲಾಗಿತ್ತು? ಈ ರೀತಿಯ ಪ್ರಯತ್ನಗಳೇ ಸರ್ಕಾರವು ಜನರ ಮನವೊಲಿಸಲು ಬಳಸುವ ವಿಧಾನಗಳೆ? ಒಂದು ಇವುಗಳೇ "ಮನವೊಲಿಸುವ ಉತ್ತಮ ಪ್ರಯತ್ನ"ವಾಗಿದ್ದಲ್ಲಿ ಸರ್ಕಾರ ಅಂತಹ ಪ್ರಯತ್ನಗಳನ್ನು ಮಾಡದಿರಲಿ ಎನ್ನುವುದೇ ನಮ್ಮ ಬಯಕೆ.

What was the manner and method of persuasion? By denying them entry to the capital city to explain their grievances? By blocking them with trenches and barbed wire? By hitting them with water cannons?
PHOTO • Q. Naqvi
What was the manner and method of persuasion? By denying them entry to the capital city to explain their grievances? By blocking them with trenches and barbed wire? By hitting them with water cannons?
PHOTO • Shadab Farooq

ಯಾವ ರೀತಿಯಲ್ಲಿ ಮತ್ತು ಯಾವ ವಿಧಾನ ಬಳಸಿ ರೈತರ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು? ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದ ಅವರಿಗೆ ರಾಜಧಾನಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕವೆ? ಕಂದಕಗಳು ಮತ್ತು ಮುಳ್ಳುತಂತಿಗಳಿಂದ ಅವರನ್ನು ತಡೆಯುವ ಮೂಲಕವೆ? ಜಲಫಿರಂಗಿಗಳಿಂದ ಅವರನ್ನು ಘಾಸಿಗೊಳಿಸುವ ಮೂಲಕವೆ?

ಪ್ರಧಾನಮಂತ್ರಿಯವರು ಈ ವರ್ಷವೊಂದರಲ್ಲೇ ಕನಿಷ್ಠ ಏಳು ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿದ್ದಾರೆ (ಸಿಒಪಿ26ಕ್ಕಾಗಿ ಇತ್ತೀಚಿನ ಭೇಟಿಯಂತೆ). ಆದರೆ ಅಲ್ಲೇ ಅವರ ಮನೆ ಬಾಗಿಲಿಗೆ ಹತ್ತಿರದ ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿದ್ದ ರೈತರ ಬಳಿ ಹೋಗಿಬರಲು ಅವರಿಗೆ ಸಮಯ ಸಿಗಲಿಲ್ಲ. ಅಲ್ಲಿದ್ದ ರೈತರ ಸಂಕಟ ಜಗತ್ತನ್ನೇ ತಾಕಿತ್ತು. ಆಗ ಅವರನ್ನು ಮಾತನಾಡಿಸಿದ್ದರೆ ಅದು ನಿಜವಾದ ಮನವೊಲಿಸುವ ಪ್ರಯತ್ನವಾಗುತ್ತಿರಲಿಲ್ಲವೆ?

ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳ ಶುರುವಿನಿಂದಲೂ ಮಾಧ್ಯಮಗಳು ಮತ್ತು ಇತರರು ಕೇಳುತ್ತಿದ್ದದ್ದು ಒಂದೇ ಪ್ರಶ್ನೆ. ಅದು ಇವರು ಈ ಹೋರಾಟವನ್ನು ಎಷ್ಟು ದಿನ ನಡೆಸಬಲ್ಲರೆನ್ನುವುದನ್ನು. ಆ ಪ್ರಶ್ನೆಗೆ ಈಗ ರೈತರೇ ಉತ್ತರಿಸಿದ್ದಾರೆ. ಆದರೆ ಈ ಅದ್ಭುತ ಗೆಲುವು ಹೋರಾಟದ ಹಾದಿಯಲ್ಲಿ ಮೊದಲ ಹೆಜ್ಜೆ ಮಾತ್ರವೇ ಎನ್ನುವುದು ಅವರಿಗೂ ತಿಳಿದಿದೆ. ಸದ್ಯಕ್ಕೆ ಈ ಕಾನೂನುಗಳ ರದ್ದತಿಯೆಂದರೆ ರೈತರ ಕುತ್ತಿಗೆಯ ಮೇಲಿರುವ ಕಾರ್ಪೊರೇಟ್‌ ಕಾಲುಗಳನ್ನು ಹಿಂತೆಗೆಯುವುದು ಮಾತ್ರ. ಆದರೆ ಅವರ ಇತರ ಸಮಸ್ಯೆಗಳಾದ ಮೇಲೆ ಬೆಳೆ ಸಂಗ್ರಹ, ಕನಿಷ್ಟ ಬೆಂಬಲ ಬೆಲೆ ಮತ್ತು ಆರ್ಥಿಕ ನೀತಿಗಳಂತಹ ಸಮಸ್ಯೆಗಳು ಇನ್ನಷ್ಟೇ ಪರಿಹಾರ ಕಾಣಬೇಕಿವೆ.

ಟಿವಿ ಚಾನಲ್ಲುಗಳ ನಿರೂಪಕರು ಹೇಳುವಂತೆ ಇದೊಂದು ಗಾಬರಿಗೊಳಿಸುವಷ್ಟು ಅಚ್ಚರಿ ಹುಟ್ಟಿಸುವ ಹಿಂಪಡೆಯುವಿಕೆ. ಸರ್ಕಾರದ ಈ ಹಿಂದಣ ಹೆಜ್ಜೆಯ ನಿರ್ಧಾರದ ಹಿಂದೆ ಮುಂಬರುವ ಫೆಬ್ರವರಿಯಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆಯ ಚುನಾವಣೆಯ ಪಾತ್ರ ಖಂಡಿತವಾಗಿಯೂ ಇದೆ. ​

ಇದೇ ಮಾಧ್ಯಮಗಳು ನವೆಂಬರ್ 3 ರಂದು ಪ್ರಕಟವಾದ 29 ವಿಧಾನಸಭಾ ಮತ್ತು 3 ಸಂಸದೀಯ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಗಳ ಮಹತ್ವದ ಬಗ್ಗೆ ನಿಮಗೆ ಹೇಳುವಲ್ಲಿ ವಿಫಲಗೊಂಡಿವೆ. ಆ ಸಮಯದಲ್ಲಿ ಪ್ರಕಟವಾದ ಸಂಪಾದಕೀಯಗಳನ್ನು ಓದಿ ಮತ್ತು ಟಿವಿ ಕಾರ್ಯಕ್ರಮಗಳ ವಿಶ್ಲೇಷಣೆಗಳ ಮೂಲಕ ಯಾವ ಮಾಹಿತಿಗಳನ್ನು ರವಾನಿಸಲಾಯಿತೆಂಬುದನ್ನು ಗಮನಿಸಿ. ಅವು ಹೇಳಿದ್ದು ಆಡಳಿತ ರೂಢ ಸರಕಾರಗಳು ಉಪಚುನಾವಣೆಗಳಲ್ಲಿ ಗೆಲ್ಲುವುದು ಸಾಮಾನ್ಯ, ಒಂದಷ್ಟು ಸ್ಥಳೀಯವಾದ ಆಕ್ರೋಶ, ಮತ್ತದು ಕೇವಲ ಬಿಜೆಪಿಗಷ್ಟೇ ಸೀಮಿತವಲ್ಲವೆನ್ನುವಂತಹ ಚರ್ವಿತ-ಚರ್ವಣಗಳನ್ನೇ ಮಾತನಾಡಿದವು. ಕೆಲವೇ ಕೆಲವು ಪತ್ರಿಕೆಗಳಷ್ಟೇ ಫಲಿತಾಂಶದ ಮೇಲೆ ನಿಜವಾಗಿಯೂ ಪರಿಣಾಮ ಬೀರಿದ ವಿಷಯಗಳ ಕುರಿತು ಬರೆದಿದ್ದವು. ಆ ವಿಷಯಗಳೆಂದರೆ, ರೈತರ ಪ್ರತಿಭಟನೆಗಳು ಮತ್ತು ಕೋವಿಡ್ -19ನ್ನು ಸರಿಯಾಗಿ ನಿರ್ವಹಿಸದಿರುವುದು.

The protests, whose agony touched so many people everywhere in the country, were held not only at Delhi’s borders but also in Karnataka
PHOTO • Almaas Masood
The protests, whose agony touched so many people everywhere in the country, were held not only at Delhi’s borders but also in West Bengal
PHOTO • Smita Khator
PHOTO • Shraddha Agarwal

ದೇಶದ ಎಲ್ಲೆಡೆಯ ಅನೇಕ ಜನರನ್ನು ತಲುಪಿದ ಪ್ರತಿಭಟನೆಗಳು ದೆಹಲಿಯ ಗಡಿಗಳಲ್ಲಿ ಮಾತ್ರವಲ್ಲದೆ ಕರ್ನಾಟಕ (ಎಡ), ಪಶ್ಚಿಮ ಬಂಗಾಳ (ಮಧ್ಯ), ಮಹಾರಾಷ್ಟ್ರ (ಬಲ) ಮತ್ತು ಇತರ ರಾಜ್ಯಗಳಲ್ಲಿ ನಡೆದವು

ಮೋದಿಯವರ ಇಂದು ಘೋಷಣೆಯು ಅವರು ಕನಿಷ್ಠ ಪಕ್ಷ, ಮತ್ತು ಕೊನೆಯದಾಗಿ, ಆ ಎರಡೂ ಅಂಶಗಳ ಪ್ರಾಮುಖ್ಯತೆಯನ್ನು ಬುದ್ಧಿವಂತಿಕೆಯಿಂದ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ರೈತರ ಪ್ರತಿಭಟನೆ ತೀವ್ರವಾಗಿರುವ ರಾಜಸ್ಥಾನ ಮತ್ತು ಹಿಮಾಚಲದಂತಹ ರಾಜ್ಯಗಳಲ್ಲಿ ಕೆಲವು ಭಾರಿ ಸೋಲುಗಳು ಎದುರಾಗಿವೆಯೆಂದು ಅವರಿಗೆ ತಿಳಿದಿದೆ. ಆದರೆ ಮಾಧ್ಯಮ ಇಂದಿಗೂ ಪ್ರತಿಭಟನೆಗಳು ಪಂಜಾಬ್‌ ಮತ್ತು ಹರಿಯಾಣದಲ್ಲಷ್ಟೇ ನಡೆಯುತ್ತಿದೆಯೆನ್ನುವ ಗಿಳಿ ಪಾಠವನ್ನೊಪ್ಪಿಸುತ್ತಿವೆಯೇ ಹೊರತು ಉಳಿದ ವಿಷಯಗಳನ್ನು ವಿಶ್ಲೇಷಣೆ ಮಾಡುತ್ತಿಲ್ಲ.

ರಾಜಸ್ಥಾನದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಯಾವುದೇ ಸಂಘಪರಿವಾರದ ಬೆಂಬಲಿತ ಅಭ್ಯರ್ಥಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕಿಳಿದಿದ್ದನ್ನು ನಾವು ಕೊನೆಯದಾಗಿ ಯಾವಾಗ ನೋಡಿದ್ದು? ಅಥವಾ ಹಿಮಾಚಲದಲ್ಲಿ ಅವರು ಎಲ್ಲಾ ಮೂರು ಅಸೆಂಬ್ಲಿ ಮತ್ತು ಒಂದು ಸಂಸತ್ ಸ್ಥಾನವನ್ನು ಕಳೆದುಕೊಂಡ ವಿಷಯವನ್ನೇ ತೆಗೆದುಕೊಳ್ಳಿ.

ಹರಿಯಾಣದಲ್ಲಿ ಪ್ರತಿಭಟನಾಕಾರರು ಹೇಳಿದಂತೆ, "ಸಿಎಂನಿಂದ ಹಿಡಿದು ಡಿಎಂ ತನಕ ಇಡೀ ಸರ್ಕಾರ" ಬಿಜೆಪಿ ಪರವಾಗಿ ಪ್ರಚಾರದಲ್ಲಿತ್ತು; ರೈತರ ವಿಷಯದಲ್ಲಿ ರಾಜೀನಾಮೆ ನೀಡಿದ್ದ ಅಭಯ್ ಚೌಟಾಲಾ ವಿರುದ್ಧ ಕಾಂಗ್ರೆಸ್ ತನ್ನ ಮೂರ್ಖತನದಿಂದ ಅಭ್ಯರ್ಥಿಯನ್ನು ಹಾಕಿತು; ಅಲ್ಲಿ ಕೇಂದ್ರ ಸಚಿವರು ಬಹಳ ಬಹಳ ದೊಡ್ಡ ಸಂಖ್ಯೆಯಲ್ಲಿ ಪ್ರಚಾರಕ್ಕಿಳಿದಿದ್ದರು - ಆದರೂ ಬಿಜೆಪಿ ಸೋತಿತು. ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡರು ಆದರೆ ಚೌಟಾಲಾ ಅವರ ಗೆಲುವಿನ ಅಂತರದಲ್ಲಿ ಸ್ವಲ್ಪ ವ್ಯತ್ಯಾಸ ಮಾಡುವಲ್ಲಿ ಯಶಸ್ವಿಯಾದರು - ಆದರೂ ಅವರು  6,000ಕ್ಕೂ ಹೆಚ್ಚು ಮತಗಳಿಂದ ಗೆದ್ದರು.

ಈ ಮೂರೂ ರಾಜ್ಯಗಳು ರೈತರ ಪ್ರತಿಭಟನೆಯ ಪರಿಣಾಮವನ್ನು ಅನುಭವಿಸಿದವು- ಮತ್ತು ಕಾರ್ಪೊರೇಟ್‌ಗಳೆದುರು ತೆವಳುವವರಂತಲ್ಲದೆ, ಪ್ರಧಾನಮಂತ್ರಿಯವರು ಅದನ್ನು ಅರ್ಥಮಾಡಿಕೊಂಡಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆದ ಆ ಪ್ರತಿಭಟನೆಗಳ ಪರಿಣಾಮದ ಜೊತೆ ಲಖಿಂಪುರ್ ಖೇರಿಯಲ್ಲಿ ನಡೆದ ಭಯಾನಕ ಕೊಲೆಗಳ ಸ್ವಯಂಕೃತ ಹಾನಿಯೂ ಇದರಲ್ಲಿ ಸೇರಿಕೊಂಡಿತು ಮತ್ತು ಬಹುಶಃ 90 ದಿನಗಳಲ್ಲಿ ಆ ರಾಜ್ಯದಲ್ಲಿ ಚುನಾವಣೆಗಳು ಬರಲಿರುವುದರಿಂದ, ಅವರು ಬೆಳಕಿನತ್ತ ಮುಖ ಮಾಡಿದರೆನ್ನಿಸುತ್ತದೆ.

ಮೂರು ತಿಂಗಳ ಅವಧಿಯಲ್ಲಿ, ಬಿಜೆಪಿ ಸರ್ಕಾರವು ಈ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ - ವಿರೋಧ ಪಕ್ಷಗಳಿಗೆ ಅದನ್ನು ಎತ್ತುವ ಪ್ರಜ್ಞೆ ಇದ್ದರೆ - 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಮ್ಮ ಉದ್ದೇಶ ಏನಾಯಿತು ಎಂದು. ಎನ್ಎಸ್ಎಸ್ (ರಾಷ್ಟ್ರೀಯ ಮಾದರಿ ಸಮೀಕ್ಷೆ, 2018-19) 77ನೇ ಸುತ್ತಿನ ವರದಿಯಲ್ಲಿ ರೈತರಿಗೆ ಕೃಷಿ ಆದಾಯದ ಪಾಲಿನಲ್ಲಿ ಕುಸಿತವಾಗಿರುವುನ್ನು ತೋರಿಸುತ್ತದೆ - ಒಟ್ಟಾರೆಯಾಗಿ ರೈತರ ಕೃಷಿಬೆಳೆ ಆದಾಯದಲ್ಲಿ ದ್ವಿಗುಣವಾಗುವುದರ ಮಾತು ಬಿಡಿ, ಅದು ಸಂಪೂರ್ಣವಾಗಿ ಕುಸಿದಿರುವುದನ್ನು ಇದು ಹೇಳುತ್ತದೆ.

ವೀಡಿಯೊ ನೋಡಿ: ಬೆಲ್ಲಾ ಸಿಚಾವೊ – ಪಂಜಾಬಿ ಆವೃತ್ತಿ– ವಾಪಾಸ್ ಜಾವೊ, ಪೂಜನ್ ಸಾಹಿಲ್ / ಕಾರ್ವಾನ್ ಇ ಮೊಹಬ್ಬತ್ ತಂಡದ ಪ್ರಸ್ತುತಿ

ಇದು ಕೃಷಿ ಬಿಕ್ಕಟ್ಟಿನ ಕೊನೆಯಲ್ಲ. ಇದು ಆ ಬಿಕ್ಕಟ್ಟಿನ ದೊಡ್ಡ ವಿಷಯಗಳ ಮೇಲಿನ ಯುದ್ಧದ ಹೊಸ ಹಂತದ ಆರಂಭವಾಗಿದೆ

ಕಾನೂನುಗಳನ್ನು ರದ್ದುಗೊಳಿಸಬೇಕೆನ್ನುವ ದೃಢವಾದ ಬೇಡಿಕೆಯನ್ನು ಸಾಧಿಸುವುದಕ್ಕಿಂತ ಹೆಚ್ಚಿನದನ್ನು ರೈತರು ನಿಜವಾಗಿಯೂ ಸಾಧಿದ್ದಾರೆ. ಅವರ ಹೋರಾಟವು ಈ ದೇಶದ ರಾಜಕೀಯದ ಮೇಲೆ ಆಳವಾದ ಪರಿಣಾಮ ಬೀರಿದೆ. 2004ರ ಸಾರ್ವತ್ರಿಕ ಚುನಾವಣೆಯ ಮೇಲೆ ಅವರ ಸಂಕಟ ಪರಿಣಾಮ ಬೀರಿದಂತೆ.

ಇದು ಕೃಷಿ ಬಿಕ್ಕಟ್ಟಿನ ಕೊನೆಯಲ್ಲ. ಇದು ಆ ಬಿಕ್ಕಟ್ಟಿನ ದೊಡ್ಡ ವಿಷಯಗಳ ಮೇಲಿನ ಯುದ್ಧದ ಹೊಸ ಹಂತದ ಪ್ರಾರಂಭವಾಗಿದೆ. ರೈತ ಹೋರಾಟಗಳು ಬಹಳ ಹಿಂದಿನಿಂದ ನಡೆದುಕೊಂಡು ಬಂದಿವೆ. ಮತ್ತು ವಿಶೇಷವಾಗಿ 2018ರಿಂದ ಅದು ಹೆಚ್ಚು ಬಲಗೊಂಡಿತ್ತು, ಮಹಾರಾಷ್ಟ್ರದ ಆದಿವಾಸಿ ರೈತರು ನಾಸಿಕ್‌ನಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ 182 ಕಿ.ಮೀ. ನಡಿಗೆಯೊಂದಿಗೆ ರಾಷ್ಟ್ರವನ್ನು ಅಚ್ಚರಿಗೊಳಿಸಿ ಬಡಿದೆಬ್ಬಿಸಿದ್ದರು. ಆಗಲೂ, ಅವರನ್ನು 'ನಗರ ನಕ್ಸಲೀಯರು' ಎಂದು ಹೋರಾಟವನ್ನು ತಳ್ಳಿಹಾಕುವುದರೊಂದಿಗೆ ಚರ್ಚೆ ಪ್ರಾರಂಭವಾಯಿತು, ನಿಜವಾದ ರೈತರಲ್ಲ, ಮತ್ತು ಉಳಿದ ಎಲ್ಲಾ ಮಾದರಿ ಕಾವ್ ಕಾವ್‌ಗಳು ಅದರಲ್ಲಿ ಸೇರಿಕೊಂಡಿದ್ದವು. ಆದರೆ ರೈತರ ಮೆರವಣಿಗೆಯು ಅವರ ದೂಷಣೆಗಳನ್ನು ಮೀರಿ ನಿಂತು ಗೆದ್ದಿತು.

ಇಂದು ಇಲ್ಲಿ ಅನೇಕ ವಿಜಯಗಳಿವೆ. ಕಾರ್ಪೊರೇಟ್ ಮಾಧ್ಯಮದ ವಿರುದ್ಧ ರೈತರು ಗಳಿಸಿದ ಗೆಲುವು ಸಣ್ಣದಲ್ಲ. ಕೃಷಿ ವಿಷಯದ ಬಗ್ಗೆ (ಇತರ ಅನೇಕರಂತೆ), ಮಾಧ್ಯಮಗಳು ಹೆಚ್ಚುವರಿ ಶಕ್ತಿಯ ಎಎಎ ಬ್ಯಾಟರಿಗಳಾಗಿ ಕಾರ್ಯನಿರ್ವಹಿಸಿದವು (ಅಂಬಾನಿ ಅದಾನಿ ಇತ್ಯಾದಿಗೆ ದೊಡ್ಡ ದನಿಯಾಗಿ).

ಡಿಸೆಂಬರ್ ಮತ್ತು ಮುಂದಿನ ಏಪ್ರಿಲ್ ನಡುವೆ, ನಾವು ಎರಡು ಮಹಾನ್ ನಿಯತಕಾಲಿಕೆಗಳನ್ನು (ಎರಡನ್ನೂ ಆರಂಭಿಸಿದ್ದು ರಾಜಾ ರಾಮ್ ಮೋಹನ್ ರಾಯ್) ಪ್ರಾರಂಭಿಸಿ 200 ವರ್ಷಗಳಾಗಿರುವುದಕ್ಕೆ ಸಾಕ್ಷಿಯಾಗಲಿದ್ದೇವೆ, ಅದು ನಿಜವಾದ ಭಾರತೀಯ (ಮಾಲೀಕತ್ವ ಮತ್ತು ಭಾವನೆಯಿಂದ) ಪತ್ರಿಕೆಗಳ ಪ್ರಾರಂಭವಾಗಿತ್ತು ಎಂದು ಹೇಳಬಹುದು. ಅವುಗಳಲ್ಲಿ ಒಂದು - ಮಿರತ್-ಉಲ್-ಅಖ್ಬಾರ್ - ಕೊಮಿಲ್ಲಾದಲ್ಲಿ (ಈಗ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ) ನ್ಯಾಯಾಧೀಶರು ಆದೇಶಿಸಿದ ಚಾಟಿ ಏಟುಗಳಿಂದ ನಡೆದ ಪ್ರತಾಪ್ ನಾರಾಯಣ್ ದಾಸ್ ಅವರ ಹತ್ಯೆಯ ವಿಷಯದಲ್ಲಿ ಇಂಗ್ಲಿಷ್ ಆಡಳಿತವನ್ನು ಅದ್ಭುತವಾಗಿ ಬೆತ್ತಲುಗೊಳಿಸಿತ್ತು. ರಾಯ್ ಅವರ ಪ್ರಬಲ ಸಂಪಾದಕೀಯವು ನ್ಯಾಯಾಧೀಶನನ್ನು ಆ ಕಾಲದ ಅತ್ಯುನ್ನತ ನ್ಯಾಯಾಲಯವು ಎಳೆದೊಯ್ದು ವಿಚಾರಣೆಗೊಳಪಡಿಸುವಂತೆ ಮಾಡಿತ್ತು.

Farmers of all kinds, men and women – including from Adivasi and Dalit communities – played a crucial role in this country’s struggle for freedom. And in the 75th year of our Independence, the farmers at Delhi’s gates have reiterated the spirit of that great struggle.
PHOTO • Shraddha Agarwal
Farmers of all kinds, men and women – including from Adivasi and Dalit communities – played a crucial role in this country’s struggle for freedom. And in the 75th year of our Independence, the farmers at Delhi’s gates have reiterated the spirit of that great struggle.
PHOTO • Riya Behl

ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿ ಮತ್ತು ದಲಿತ ಸಮುದಾಯಗಳು ಸೇರಿದಂತೆ ಎಲ್ಲಾ ರೀತಿಯ ರೈತರು, ಪುರುಷರು ಮತ್ತು ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದರು. ಈಗ ನಾವು ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಗುಂಗಿನಲ್ಲಿರುವಾಗಲೇ, ದೆಹಲಿ ಗಡಿಯಲ್ಲಿ ನೆಲೆನಿಂತ ರೈತರು ಆ ಮಹಾನ್ ಹೋರಾಟದ ಸ್ಫೂರ್ತಿಯನ್ನು ಮತ್ತೆ ನಮ್ಮೆದುರಿಗಿಟ್ಟಿದ್ದಾರೆ

ಅಂದು ಇದಕ್ಕೆ ಪ್ರತಿಕ್ರಿಯಿದ್ದ ಗವರ್ನರ್‌ ಜನರಲ್‌ ಪತ್ರಿಕೆಗಳನ್ನು ಇಲ್ಲವಾಗಿಸುವುದಾಗಿ ಗುಡುಗಿದ್ದ. ಕಠೋರವಾದ ಹೊಸ ಪತ್ರಿಕಾ ಸುಗ್ರೀವಾಜ್ಞೆಯನ್ನು ಪ್ರಕಟಿಸಿ, ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ. ಇದಕ್ಕೆ ವಿಧೇಯರಾಗಲು ನಿರಾಕರಿಸಿದ ರಾಯ್ ಅವರು ಅವಮಾನಕರ ಮತ್ತು ಅವಮಾನಕರ ಕಾನೂನುಗಳು ಮತ್ತು ಸಂದರ್ಭಗಳಿಗೆ ವಿಧೇಯರಾಗುವ ಬದಲು ಮಿರಾತ್-ಉಲ್-ಅಖ್ಬಾರ್ ಅನ್ನು ಮುಚ್ಚುವುದಾಗಿ ಘೋಷಿಸಿದರು. (ನಂತರ ಅವರು ತಮ್ಮ ಹೋರಾಟವನ್ನು ಇತರ ಪತ್ರಿಕೆಗಳ ಮೂಲಕ ಮುಂದುವರೆಸಿದರು!)

ಆಗಿನದು ಧೈರ್ಯದ ಪತ್ರಿಕೋದ್ಯಮವಾಗಿತ್ತು. ರೈತರ ವಿಷಯದಲ್ಲಿ ನಾವು ನೋಡಿದಂತೆ ಆಪ್ತರ ಮೆಚ್ಚಿಸುವ ಮತ್ತು ಶರಣಾಗತಿಯ ಪತ್ರಿಕೋದ್ಯಮವಲ್ಲ. ಇಂದಿನ ಪತ್ರಿಕೋದ್ಯಮದಲ್ಲಿ ಸಹಿಯಿಲ್ಲದ ಸಂಪಾದಕೀಯಗಳಲ್ಲಿ ರೈತರ ಕುರಿತು ಕಾಳಜಿ ತೋರಿಸುತ್ತಾ ಇತರ ಬರಹಗಾರರಿಂದ ಸಂಪಾದಕೀಯದ ಪುಟಗಳಲ್ಲಿ (op-ed pagesಗಳಲ್ಲಿ) ರೈತ ಹೋರಾಟವನ್ನು ಅಪಖ್ಯಾತಿಗೊಳಿಸಲು, ಶ್ರೀಮಂತ ರೈತರು 'ಶ್ರೀಮಂತರಿಗಾಗಿ ಸಮಾಜವಾದವನ್ನು ಹುಡುಕುತ್ತಿದ್ದಾರೆ' ಎಂದು ಟೀಕಿಸಿ ಬರೆಸಲಾಗುತ್ತಿದೆ.

ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ಮತ್ತು ಬಹುತೇಕ ಎಲ್ಲಾ ವೃತ್ತಪತ್ರಿಕೆಗಳು - ಮೂಲಭೂತವಾಗಿ, ಅವರು ಗ್ರಾಮೀಣ ವ್ಯಕ್ತಿಗಳಾಗಿದ್ದು ಅವರೊಡನೆ ಸವಿಯಾಗಿ ವರ್ತಿಸಿ ಮಾತುಕತೆ ನಡೆಸಬೇಕಿತ್ತು ಎಂದು ಹೇಳುತ್ತಿದ್ದವು. ಸಂಪಾದಕೀಯಗಳು ಒಂದೇ ದನಿಯೊಂದಿಗೆ ಕೊನೆಗೊಳ್ಳುತ್ತಿದ್ದವು, ಆದರೆ ಈ ಕಾನೂನುಗಳನ್ನು ಹಿಂಪಡೆಯಬೇಡಿ ಅವು ಉತ್ತಮವಾಗಿವೆ ಎಂದು. ಬಹುತೇಕ ಮಾಧ್ಯಮಗಳ ದನಿ ಇದೇ ಆಗಿತ್ತು.

ಮುಕೇಶ್ ಅಂಬಾನಿಯವರ ವೈಯಕ್ತಿಕ ಸಂಪತ್ತು 84.5 ಶತಕೋಟಿ ಡಾಲರ್ (ಫೋರ್ಬ್ಸ್ 2021) ಪಂಜಾಬ್ ರಾಜ್ಯದ ಜಿಎಸ್‌ಡಿಪಿಯನ್ನು (ಸುಮಾರು 85.5 ಶತಕೋಟಿ) ಹಿಂದಿಕ್ಕಲು ಬಹಳ ಹತ್ತಿರದಲ್ಲಿದೆಯೆನ್ನುವುದನ್ನು ಈ ಪತ್ರಿಕೆಗಳು ತಮ್ಮ ಓದುಗರಿಗೆ ತಿಳಿಸಿವೆಯೇ? ರೈತರು ಮತ್ತು ಕಾರ್ಪೊರೇಟ್‌ಗಳ ನಡುವಿನ ಬಿಕ್ಕಟ್ಟಿನ ಕುರಿತು ಹೇಳಿವೆಯೇ? ಅಂಬಾನಿ ಮತ್ತು ಅದಾನಿಯ ($50.5 ಶತಕೋಟಿ) ಸಂಪತ್ತು ಸೇರಿಸಿದರೆ ಪಂಜಾಬ್ ಅಥವಾ ಹರಿಯಾಣದ ಜಿಎಸ್‌ಡಿಪಿಗಿಂತ ಹೆಚ್ಚಿದೆ ಎಂದು ಅವರು ನಿಮಗೆ ಒಮ್ಮೆಯಾದರೂ ಹೇಳಿದ್ದಾರ?

The farmers have done much more than achieve that resolute demand for the repeal of the laws. Their struggle has profoundly impacted the politics of this country
PHOTO • Shraddha Agarwal
The farmers have done much more than achieve that resolute demand for the repeal of the laws. Their struggle has profoundly impacted the politics of this country
PHOTO • Anustup Roy

ಕಾನೂನುಗಳನ್ನು ರದ್ದುಗೊಳಿಸಬೇಕೆನ್ನುವ ಅವರ ದೃಢವಾದ ಬೇಡಿಕೆಯನ್ನು ಸಾಧಿಸುವುದಕ್ಕಿಂತಲೂ ಹೆಚ್ಚಿನದನ್ನು ರೈತರು ಸಾಧಿಸಿದ್ದಾರೆ. ಅವರ ಹೋರಾಟವು ಈ ದೇಶದ ರಾಜಕೀಯದ ಮೇಲೆ ಆಳವಾದ ಪರಿಣಾಮ ಬೀರಿದೆ

ಹಾಗೆಯೇ, ಇಲ್ಲಿ ಹೇಳಲೇಬೇಕಾದ ಇನ್ನೊಂದು ಸಂಗತಿಯಿದೆ. ಇಂದು ಅಂಬಾನಿ ಭಾರತದ ದೊಡ್ಡ ಮಾಧ್ಯಮಗಳ ಮಾಇಕರಾಗಿದ್ದಾರೆ. ಮತ್ತು ಅವರ ಮಾಲಿಕತ್ವದಲ್ಲಿಲ್ಲಿದ ಮಾಧ್ಯಮಗಳಿಗೆ ಬಹುಶಃ ದೊಡ್ಡ ಜಾಹೀರಾತುದಾರನಾಗಿದ್ದಾರೆ. ಈ ಇಬ್ಬರು ಕಾರ್ಪೊರೇಟ್‌ ದಣಿಗಳ ಬಗ್ಗೆಯೂ ಆಗಾಗ ಮಾಧ್ಯಮಗಳಲ್ಲಿ ಬರೆಯಲಾಗುತ್ತದೆ. ಆದರೆ ಅದರಲ್ಲಿ ಸಂಭ್ರಮದ ದನಿಯಿರುತ್ತದೆ. ಇದು ಕಾರ್ಪೊರೇಟ್‌ಗಳೆದುರು ನಡುಬಗ್ಗಿಸಿ ತೆವಳುವ (corpo-crawl) ಮಾಧ್ಯಮ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಈ ಕುತಂತ್ರದ ಲೆಕ್ಕಾಚಾರವು ಹೇಗೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಈಗಾಗಲೇ ಅರಚಾಟಗಳು ಆರಂಭಗೊಂಡಿವೆ. ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಮತ್ತು ಮೋದಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಇದನ್ನು ತಾವು ಸಾಧ್ಯವಾಗಿಸಿದ ವಿಜಯವೆಂದು ಬಿಂಬಿಸಿದ್ದಾರೆ. ಇದು ಅಲ್ಲಿನ ಮತದಾನದ ಚಿತ್ರಣವನ್ನು ಬದಲಾಯಿಸುತ್ತದೆ ಎನ್ನುತ್ತಿದ್ದಾರೆ.

ಆದರೆ ಆ ರಾಜ್ಯದಲ್ಲಿ ಆ ಹೋರಾಟದಲ್ಲಿ ಭಾಗವಹಿಸಿದ ಲಕ್ಷಾಂತರ ಜನರಿಗೆ ಅದು ಯಾರ ಗೆಲುವು ಎನ್ನುವ ಸತ್ಯ ತಿಳಿದಿದೆ. ದಶಕಗಳಲ್ಲಿಯೇ ದೆಹಲಿ ಕಂಡಂತಹ ಅತ್ಯಂತ ಕೆಟ್ಟ ಚಳಿಗಾಲ, ಸುಡುವ ಬೇಸಿಗೆ, ಅದರ ನಂತರದ ಮಳೆ ಮತ್ತು ಮೋದಿ ಮತ್ತು ಅವರ ಸೇವೆಯಲ್ಲಿರುವ ಮಾಧ್ಯಮಗಳಿಂದ ಶೋಚನೀಯ ವರ್ತನೆಗಳನ್ನು ಸಹಿಸಿಕೊಂಡ ಪ್ರತಿಭಟನಾ ಶಿಬಿರಗಳಲ್ಲಿದ್ದವರೊಂದಿಗೆ ಪಂಜಾಬ್ ಜನರ ಹೃದಯದ ಮಿಡಿತವಿದೆ.

ಮತ್ತು ಬಹುಶಃ ಪ್ರತಿಭಟನಾಕಾರರು ಸಾಧ್ಯವಾಗಿಸಿರುವ ಅತ್ಯಂತ ಪ್ರಮುಖ ವಿಷಯವೆಂದರೆ: ಇತರ ಕ್ಷೇತ್ರಗಳಲ್ಲಿಯೂ ಪ್ರತಿರೋಧವನ್ನು ಪ್ರೇರೇಪಿಸಿರುವುದು, ಮುಖ್ಯವಾಗಿ ತನ್ನ ವಿರೋಧಿಗಳನ್ನು ಜೈಲಿಗೆ ಎಸೆಯುವ ಅಥವಾ ಬೇಟೆನಾಯಿಗಳತ್ತ ಎಸೆಯುವ ಮತ್ತು ಅವರಿಗೆ ಕಿರುಕುಳ ನೀಡುವ ಸರ್ಕಾರಕ್ಕೆ. ಇದು ಯುಎಪಿಎ ಅಡಿಯಲ್ಲಿ ಪತ್ರಕರ್ತರು ಸೇರಿದಂತೆ ನಾಗರಿಕರನ್ನು ಮುಕ್ತವಾಗಿ ಬಂಧಿಸುತ್ತದೆ ಮತ್ತು 'ಆರ್ಥಿಕ ಅಪರಾಧಗಳಿಗಾಗಿ' ಸ್ವತಂತ್ರ ಮಾಧ್ಯಮದ ಮೇಲೆ ಮುರಿದು ಬೀಳುತ್ತದೆರ. ಈ ದಿನ ಕೇವಲ ರೈತರಿಗೆ ಗೆಲುವು ಸಿಕ್ಕಿದ್ದಲ್ಲ. ಇದು ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಯುದ್ಧಕ್ಕೆ ಸಿಕ್ಕ ಗೆಲುವು. ಭಾರತೀಯ ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು.

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Illustration : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru