"ಎಲ್ಲಾ 32 ಒಕ್ಕೂಟಗಳು ನವ್ ಜವಾನ್ [ಯುವಕರು] ಯಾವುದೇ ಹಾನಿ ಮಾಡದಂತೆ ವಿನಂತಿಸುತ್ತವೆ. ಯಾರೂ ಯಾವುದೇ ಹಾನಿ ಮಾಡಬಾರದು. ಯಾರೂ ಘರ್ಷಣೆ ಮಾಡಬಾರದು. ನಮ್ಮ ಈ ಹೋರಾಟವನ್ನು ಯಾರೂ ಹಾಳುಮಾಡಬಾರದು” ಎಂ‌ದು ಮನವಿಯನ್ನು ಸಲ್ಲಿಸಿದರು. "ದೆಹಲಿ ಪೊಲೀಸರು ನಮಗೆ ನಿಗದಿಪಡಿಸಿದ ಅಧಿಕೃತ ಮಾರ್ಗವನ್ನು ಎಲ್ಲರೂ ಅನುಸರಿಸುತ್ತಾರೆ. ಜಗತ್ತು ನೋಡುವಂತೆ ನಾವು ಶಾಂತಿಯುತ ಮೆರವಣಿಗೆ ನಡೆಸುತ್ತೇವೆ” ಎಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿರುವ ಧ್ವನಿವರ್ಧಕದ ಮೂಲಕ ನಾಯಕ ಘೋಷಿಸಿದರು.

ಜನವರಿ 26 ರಂದು ಬೆಳಿಗ್ಗೆ 9: 45 ರ ಸುಮಾರಿಗೆ ಮುಂಡ್ಕಾ ಇಂಡಸ್ಟ್ರಿಯಲ್ ಏರಿಯಾ ಮೆಟ್ರೋ ನಿಲ್ದಾಣದಿಂದ ಟ್ರಾಕ್ಟರುಗಳ ಸಾಲು ಚಲಿಸುತ್ತಿದ್ದಾಗ, ಧ್ವನಿವರ್ಧಕ ಸದ್ದು ಮಾಡಿತು. ಸ್ವಯಂಸೇವಕರು ಮಾನವ ಸರಪಳಿಯನ್ನು ರೂಪಿಸಲು ವೇಗವಾಗಿ ಚಲಿಸಿದರು ಮತ್ತು ಎಲ್ಲರನ್ನೂ ನಿಲ್ಲಿಸಿ ನಾಯಕರ ಮನವಿಯನ್ನು ಕೇಳುವಂತೆ ವಿನಂತಿಸಿದರು.

ರ‍್ಯಾಲಿ ಪಶ್ಚಿಮ ದೆಹಲಿಯ ಟಿಕ್ರಿಯಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಯಿತು. 'ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್' ಘೋಷಣೆಗಳನ್ನು ಜನಸಮೂಹ ಎಬ್ಬಿಸುತ್ತಿತ್ತು. ಟ್ರಾಕ್ಟರುಗಳ ಸಾಲಿನ ಜೊತೆಗೆ, ಅನೇಕ ಪ್ರತಿಭಟನಾಕಾರರು ಮತ್ತು ಸ್ವಯಂಸೇವಕರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು - ಕೆಲವರು ತಮ್ಮ ಕೈಯಲ್ಲಿ ರಾಷ್ಟ್ರೀಯ ಧ್ವಜವನ್ನು ಹೊಂದಿದ್ದರು, ಮತ್ತು ಇತರರು ತಮ್ಮ ರೈತ ಸಂಘದ ಧ್ವಜಗಳನ್ನು ಹೊತ್ತೊಯ್ಯುತ್ತಿದ್ದರು. "ನಾವು ದೂರದ ಪ್ರಯಾಣ ಮಾಡಬೇಕಾಗಿರುವುದರಿಂದ ಪಾದಚಾರಿಗಳಿಗೆ ಟ್ರಾಕ್ಟರುಗಳಲ್ಲಿ ಹತ್ತಲು ನಾವು ವಿನಂತಿಸುತ್ತೇವೆ" ಎಂದು ಧ್ವನಿವರ್ಧಕದಲ್ಲಿ ಮಾತನಾಡಿದ ನಾಯಕ ಹೇಳಿದರು. ಆದರೆ ಅವರಲ್ಲಿ ಹಲವರು ನಡೆಯುತ್ತಲೇ ಇದ್ದರು.

ಈ ಸಾಲು ಸರಾಗವಾಗಿ ಚಲಿಸುತ್ತಿದ್ದಂತೆ, ಮುಂಡ್ಕದಲ್ಲಿ ವಾಸಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ರಸ್ತೆಗಳ ಬದಿಯಲ್ಲಿ ಅಥವಾ ವಿಭಾಜಕಗಳ ಮೇಲೆ ನಿಲ್ಲಲು ಪ್ರಾರಂಭಿಸಿದರು. ಅವರಲ್ಲಿ ಹಲವರು ಈ ಅಭೂತಪೂರ್ವ ಮೆರವಣಿಗೆಯನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಲು ಪ್ರಾರಂಭಿಸಿದರು, ಕೆಲವರು ಕೈ ಬೀಸುತ್ತಿದ್ದರು, ಇತರರು ರ‍್ಯಾಲಿಯಲ್ಲಿ ನುಡಿಸಲಾಗುತ್ತಿದ್ದ ಧೋಲ್‌ ಸದ್ದಿಗೆ ನರ್ತಿಸುತ್ತಿದ್ದರು.

ಅಲ್ಲಿದ್ದ ಮುಂಡ್ಕಾ ನಿವಾಸಿಗಳಲ್ಲಿ 32 ವರ್ಷದ ವಿಜಯ್ ರಾಣಾ ಕೂಡ ಒಬ್ಬರಾಗಿದ್ದರು. ಅವರು ತಮ್ಮ ಏರಿಯಾದ ಮೂಲಕ ಹಾದುಹೋಗುವ ರೈತರ ಮೇಲೆ ಚೆಂಡು ಹೂವುಗಳನ್ನು ಸುರಿಸಲು ಬಂದಿದ್ದರು. "ರಾಜಕಾರಣಿಗಳನ್ನು ಹೂವುಗಳಿಂದ ಸ್ವಾಗತಿಸಿದಾಗ, ರೈತರನ್ನು ಏಕೆ ಸ್ವಾಗತಿಸಬಾರದು?" ಎಂದು ಅವರು ಹೇಳಿದರು. ರಾಣಾ, ಸ್ವತಃ ಕೃಷಿಕರಾಗಿದ್ದು, ಮುಂಡ್ಕಾ ಗ್ರಾಮದಲ್ಲಿ 10 ಎಕರೆ ಭೂಮಿಯಲ್ಲಿ ಗೋಧಿ, ಭತ್ತ ಮತ್ತು ಸೋರೆಕಾಯಿ ಬೆಳೆಯುತ್ತಾರೆ. "ರೈತರು ಸೈನಿಕರಿಗಿಂತ ಕಡಿಮೆಯಿಲ್ಲ" ಎಂದು ಅವರು ಹೇಳಿದರು. “ಈ ದೇಶದ ಸೈನಿಕರು ಗಡಿಗಳನ್ನು ತೊರೆದರೆ, ಯಾರಾದರೂ ಈ ದೇಶವನ್ನು ಆಕ್ರಮಿಸಿಕೊಳ್ಳಬಹುದು. ಅದೇ ರೀತಿ ರೈತರಿಲ್ಲದೆ ದೇಶ ಹಸಿವಿನಿಂದ ಬಳಲುತ್ತದೆ."

PHOTO • Satyraj Singh ,  Sanskriti Talwar

ಟಿಕ್ರಿಯ (ಮೇಲಿನ ಸಾಲು) ರಸ್ತೆಯಲ್ಲಿ: ಮಧ್ಯಾಹ್ನದ ಹೊತ್ತಿಗೆ, ನಂಗ್ಲೋಯಿ ಚೌಕ್‌ನಲ್ಲಿ ಗೊಂದಲ ಉಂಟಾಯಿತು (ಫೋಟೋಗಳು: ಸತ್ಯರಾಜ್ ಸಿಂಗ್). ಕೆಳಗಿನ ಎಡಭಾಗ: ಮುಂಡ್ಕಾದ ರೈತ ವಿಜಯ್ ರಾಣಾ, ಮೆರವಣಿಗೆಗೆ ಹೂವಿನ ದಳಗಳೊಂದಿಗೆ ಶುಭಾಶಯ ಕೋರಿದರು. ಕೆಳಗಿನ ಬಲ: ಸ್ವಯಂಸೇವಕರು ನಂಗ್ಲೋಯಿ ಚೌಕ್‌ನಲ್ಲಿ ಮಾನವ ಸರಪಳಿಯನ್ನು ರಚಿಸಿ ರೈತರಿಗೆ ನಜಾಫ್‌ಗಢದ ಕಡೆಗೆ ಸಾಗಲು ಮಾರ್ಗದರ್ಶನ ನೀಡಿದರು (ಫೋಟೋಗಳು: ಸಂಸ್ಕೃತಿ ತಲ್ವಾರ್)

ಭಾರತದ 72 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ - ದೆಹಲಿಯ ಮೂರು ಪ್ರಮುಖ ಗಡಿಗಳಾದ ಟಿಕ್ರಿ (ಪಶ್ಚಿಮದಲ್ಲಿ), ಸಿಂಗು (ವಾಯುವ್ಯದಲ್ಲಿ) ಮತ್ತು ಗಾಜಿಪುರ (ಪೂರ್ವದಲ್ಲಿ) 32 ಒಕ್ಕೂಟಗಳು ಮತ್ತು ಸಂಘಟನೆಗಳ ಒಕ್ಕೂಟದಿಂದ ಈ ಬೃಹತ್ ಟ್ರಾಕ್ಟರ್ ರ‍್ಯಾಲಿಯನ್ನು ನಡೆಸಲು ಕರೆ ನೀಡಿತ್ತು - ಈ ಸ್ಥಳಗಳಲ್ಲಿ ನವೆಂಬರ್ 26, 2020ರಿಂದ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಗಣರಾಜ್ಯೋತ್ಸವದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಟಿಕ್ರಿಯಿಂದ ಸುಮಾರು 7,000 ಟ್ರಾಕ್ಟರುಗಳು ಹೊರಡುವ ಸಾಧ್ಯತೆಯಿದೆಯೆಂದು ಎಂದು ಹೇಳಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹನ್) ನ ಪತ್ರಿಕಾ ಸಂಯೋಜಕರಾದ ಶಿಂಘರ ಸಿಂಗ್ ಮಾನ್, ಟಿಕ್ರಿಯಿಂದ ಹೊರಡುವ ಮೆರವಣಿಗೆಯಲ್ಲಿ ಅವರ ಒಕ್ಕೂಟದಿಂದ ಕನಿಷ್ಠ 6,000 ಟ್ರಾಕ್ಟರುಗಳು ಭಾಗವಹಿಸಿದ್ದಾಗಿ ಹೇಳಿದ್ದರು. ಆದರೆ, ಪಂಜಾಬ್ ಕಿಸಾನ್ ಯೂನಿಯನ್‌ನ ರಾಜ್ಯ ಸಮಿತಿಯ ಸದಸ್ಯ ಸುಖದರ್ಶನ್ ಸಿಂಗ್ ನಟ್ ಅವರು ಮೆರವಣಿಗೆಯಲ್ಲಿ ಭಾಗವಹಿಸುವ ಟ್ರಾಕ್ಟರುಗಳ ಸಂಖ್ಯೆಯ ಬಗ್ಗೆ ಯಾವುದೇ ಅಂದಾಜು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ರ‍್ಯಾಲಿಯನ್ನು ಶಾಂತಿಯುತವಾಗಿ ನಡೆಸುವುದು ಅವರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಬೆಳಿಗ್ಗೆ 8: 45ರ ಸುಮಾರಿಗೆ ತಮ್ಮ ಒಕ್ಕೂಟದ ಎಲ್ಲಾ ಟ್ರಾಕ್ಟರುಗಳು ಟಿಕ್ರಿಯಲ್ಲಿ ನಿಂತಿವೆ ಎಂದು ಅವರು ಮಾಹಿತಿ ನೀಡಿದರು. ಮತ್ತು ಕೊನೆಯ ಕೆಲವು ಟ್ರಾಕ್ಟರುಗಳು ಹಿಂತಿರುಗುವ ಹೊತ್ತಿಗೆ, ಆಗಲೇ ಸಂಜೆ ಆರು ಗಂಟೆಯಾಗಿತ್ತು. ಆದ್ದರಿಂದ ಯಾರೂ ಅವುಗಳನ್ನು ಎಣಿಸಲು ಸಾಧ್ಯವಾಗಲಿಲ್ಲ.

ಟಿಕ್ರಿಯಲ್ಲಿ ಪ್ರತಿಭಟನಾಕಾರರಿಗೆ ದೆಹಲಿ ಪೊಲೀಸರು ನಂಗ್ಲೋಯಿ, ನಜಾಫ್‌ಗಢ, ಝರೋದಾ ಕಲಾನ್, ಕೆಎಂಪಿ ಎಕ್ಸ್‌ಪ್ರೆಸ್ ವೇ (ದೆಹಲಿಯ ಪಶ್ಚಿಮ ಪರಿಧಿಯಲ್ಲಿ) ಹಾದುಹೋಗುವ ವೃತ್ತಾಕಾರದ ಮಾರ್ಗವನ್ನು ನೀಡಿದ್ದರು, ಮತ್ತು ನಂತರ ಈ ಮಾರ್ಗದ ಮೂಲಕ ಅವರು ಟಿಕ್ರಿಗೆ ಹಿಂತಿರುಗಬೇಕಾಗಿತ್ತು - ಅದು ಒಟ್ಟು 64 ಕಿಲೋಮೀಟರ್ ಅಳತೆಯ  ಮಾರ್ಗವಾಗಿತ್ತು. ಆರಂಭದಲ್ಲಿ, ಟಿಕ್ರಿ, ಸಿಂಗು ಮತ್ತು ಗಾಜಿಪುರದಿಂದ ಪ್ರಾರಂಭವಾಗುವ ಬೆಂಗಾವಲುಗಳಿಗಾಗಿ ದೆಹಲಿ ಪೊಲೀಸರು ಮೂರು ಮಾರ್ಗಗಳನ್ನು ಆಯ್ಕೆ ಮಾಡಿದ್ದರು. ಆದರೆ, ಸಿಂಹರಾ ಸಿಂಗ್ ಮಾನ್ ಅನೌಪಚಾರಿಕವಾಗಿ ಹೇಳಿದಂತೆ, ಒಂಬತ್ತು ಮಾರ್ಗಗಳನ್ನು ಪೊಲೀಸರು ಮತ್ತು ಯೂನಿಯನ್ ನಾಯಕರ ನಡುವೆ ಚರ್ಚಿಸಿ ನಿರ್ಧರಿಸಲಾಗಿತ್ತು.

ಆದರೆ ಮಧ್ಯಾಹ್ನದ ಹೊತ್ತಿಗೆ, ಫ್ಲೈಓವರ್‌ನ ಸ್ವಲ್ಪ ಕೆಳಗಿರುವ ನಂಗ್ಲೋಯಿ ಚೌಕ್‌ನಲ್ಲಿ ಸಂಪೂರ್ಣ ಗೊಂದಲ ಉಂಟಾಯಿತು. ಈಗಾಗಲೇ ನಿಗದಿಪಡಿಸಿದ ಮಾರ್ಗದಲ್ಲಿ ನಜಾಫ್‌ಗಢಕ್ಕೆ ಹೋಗಲು ಬಲಕ್ಕೆ ತಿರುಗುವ ಬದಲು, ಕೆಲವು ವ್ಯಕ್ತಿಗಳು ಮತ್ತು ಸಣ್ಣ ಗುಂಪುಗಳ ರೈತರು ನೇರವಾಗಿ ಪಿರಗಡಿ ಚೌಕ್ ಕಡೆಗೆ ಹೋಗಿ ಅಲ್ಲಿಂದ ಮಧ್ಯ ದೆಹಲಿಯನ್ನು ತಲುಪಲು ಪ್ರಯತ್ನಿಸಿದರು. ಸ್ವಯಂಸೇವಕರು ಮತ್ತು ಸಂಯೋಜಕರು ರ‍್ಯಾಲಿಯನ್ನು ಬಲಕ್ಕೆ ತಿರುಗಿಸಲು ಮತ್ತು ನಜಾಫ್‌ಗಢದ ಮಾರ್ಗವನ್ನು ಅನುಸರಿಸಲು ಮಾರ್ಗದರ್ಶನ ನೀಡಿದರು.

ಸುಮಾರು 20 ನಿಮಿಷಗಳ ನಂತರ, ಟ್ರಾಕ್ಟರುಗಳಲ್ಲಿ ಸವಾರಿ ಮಾಡುತ್ತಿದ್ದ ರೈತರ ಗುಂಪು ಕೂಗಾಟ ನಡೆಸುತ್ತಾ ನಂಗ್ಲೋಯಿ ಚೌಕ್‌ನಲ್ಲಿ ನೆಟ್ಟಿದ್ದ ಬ್ಯಾರಿಕೇಡ್‌ಗಳನ್ನು ಮುರಿಯಿತು. ಸ್ಥಳೀಯರು ತಮ್ಮ ಟೆರೇಸ್‌ಗಳಿಂದ ಅವ್ಯವಸ್ಥೆಯನ್ನು ನೋಡಿದರು, ಅದನ್ನು ನೋಡಲು ಅನೇಕ ಜನರು ರಸ್ತೆಗೂ ಬಂದರು. ಪೊಲೀಸರು ದುಷ್ಕರ್ಮಿಗಳ ಮೇಲೆ ನಿಗಾ ಇಡುತ್ತಿರುವುದಾಗಿ ಘೋಷಿಸುತ್ತಲೇ ಇದ್ದರು. ಪರಿಸ್ಥಿತಿಯನ್ನು ದಾಖಲಿಸಲು ಪೊಲೀಸರು ಡ್ರೋನ್ ಅನ್ನು ಸಹ ನಿಯೋಜಿಸಿದರು.

Still peacefully proceeding at Nangloi (Photos: Satyraj Singh)
PHOTO • Satyraj Singh
Still peacefully proceeding at Nangloi (Photos: Satyraj Singh)
PHOTO • Satyraj Singh

ಆದರೂ ನಂಗ್ಲೋಯಿಯಲ್ಲಿ ಮೆರವಣಿಗೆ ಶಾಂತಿಯುತವಾಗಿ ಚಲಿಸುತ್ತಿರುವುದು (ಫೋಟೋ: ಸತ್ಯರಾಜ್ ಸಿಂಗ್)

ಅರಾಜಕತೆಯ ನಡುವೆ, ದೆಹಲಿಯ ಗುರ್‌ದಯಾಳ್ ಸಿಂಗ್, ಸ್ವಯಂಸೇವಕ, ನಂಗ್ಲೋಯಿ ಚೌಕ್‌ನ ಒಂದು ಮೂಲೆಯಲ್ಲಿರುವ ವೇದಿಕೆಯತ್ತ ಹೋಗಿ, ನಜಾಫ್‌ಗಢಕ್ಕೆ ಹೋಗಲು ರಸ್ತೆಯ ಮೇಲೆ ಬಲಕ್ಕೆ ತಿರುಗುವಂತೆ ಎಲ್ಲರಿಗೂ ಮತ್ತೆ ವಿನಂತಿಸಿದರು. "ನಮ್ಮ ಬೇಡಿಕೆಗಳನ್ನು ಆಲಿಸಬೇಕೆಂದು ನಾವು ಬಯಸಿದರೆ, ನಾವು ಸರಿಯಾದ ದಿಕ್ಕಿನಲ್ಲಿ ಸಾಗಬೇಕು [ದೆಹಲಿ ಪೊಲೀಸರು ಸೂಚಿಸಿದ ಮಾರ್ಗವನ್ನು ಅನುಸರಿಸಿ]." ಪ್ರತಿಯೊಬ್ಬರೂ ಈ ಮೆರವಣಿಗೆಯನ್ನು ಶಾಂತಿ ಮತ್ತು ಪ್ರೀತಿಯಿಂದ ನಡೆಸಬೇಕೆಂದು ನಾನು ವಿನಂತಿಸುತ್ತೇನೆ,”‌ ಎಂದು ಅವರು ಹೇಳಿದರು.

“ರ‍್ಯಾಲಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ನೆರೆಹೊರೆಯ ಪ್ರದೇಶಗಳಿಂದಲೂ ಅನೇಕ ಜನರು ಸೇರಿಕೊಂಡರು. ನಿಗದಿತ ಮಾರ್ಗವನ್ನು ಅನುಸರಿಸಲು ಮತ್ತು ಶಿಸ್ತು ಕಾಪಾಡಿಕೊಳ್ಳಲು ನಾವು ಎಲ್ಲ ಜನರನ್ನು ನಿರಂತರವಾಗಿ ವಿನಂತಿಸುತ್ತಿದ್ದೆವು. ಆದರೆ ಎಲ್ಲರ ಮೇಲೆ ನಿಗಾ ಇಡುವುದು ಕಷ್ಟವಾಗಿತ್ತು” ಎಂದು ಜಸ್ಬೀರ್ ಕೌರ್ ನಾಟ್ ನಂತರ ಹೇಳಿದ್ದರು. ಅವರು ಪಂಜಾಬ್ ಕಿಸಾನ್ ಒಕ್ಕೂಟದ ರಾಜ್ಯ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಇವರು ಟಿಕ್ರಿಯಲ್ಲಿ ಕ್ಯಾಂಪ್ ಮಾಡಿದ್ದಾರೆ.

ನಂಗ್ಲೋಯಿ ಚೌಕ್‌ನಲ್ಲಿ ಮಧ್ಯಾಹ್ನದ ಗೊಂದಲಗಳ ನಡುವೆಯೂ, ಮೂಲ ಮಾರ್ಗದಲ್ಲಿ ಶಾಂತಿಯುತ ರ‍್ಯಾಲಿ ಮುಂದುವರೆಯಿತು. ಈ ವಾಹನ ಸಾಲಿನಲ್ಲಿ ಪಂಜಾಬ್ ಕಿಸಾನ್ ಯೂನಿಯನ್, ಅಖಿಲ ಭಾರತ ಕಿಸಾನ್ ಸಭಾ ಮತ್ತು ಭಾರತೀಯ ಕಿಸಾನ್ ಯೂನಿಯನ್ ಇತ್ಯಾದಿಗಳಿಗೆ ಸಂಬಂಧಿಸಿದ ರೈತರ ಟ್ರಾಕ್ಟರುಗಳು ಸೇರಿದ್ದವು. ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹನ್) ನ ಮತ್ತೊಂದು ದಳವು ನಜಾಫ್‌ಗಢ್ ರಸ್ತೆಯಲ್ಲಿ ಎದುರು ದಿಕ್ಕಿನಿಂದ ಬಂದು ಸೇರಿಕೊಂಡಿತು. ಅವರು ಕೆಎಂಪಿ ಎಕ್ಸ್‌ಪ್ರೆಸ್‌ವೇ ಮಾರ್ಗವನ್ನು ಆರಿಸಿಕೊಂಡಿದ್ದರು (ನಿಗದಿತ ಮಾರ್ಗವು ವೃತ್ತಾಕಾರವಾಗಿದೆ - ನಂಗ್ಲೋಯಿ ಮಾರ್ಗ ಅಥವಾ ಕೆಎಂಪಿ ಯಾವ ಮಾರ್ಗವನ್ನು ಬೇಕಿದ್ದರು ಹಿಡಿಯಬಹುದು, ಇವೆರಡೂ ಮುಂದೆ ಹೋಗಿ ಒಂದೇ ಬಿಂದುವಿನಲ್ಲಿ ಸೇರುತ್ತವೆ).

ಹರಿಯಾಣದ ಹಿಸಾರ್ ಜಿಲ್ಲೆಯ ಸುರೇವಾಲಾ ಗ್ರಾಮದ 35 ವರ್ಷದ ಪೂನಂ ಪತ್ತಾರ್ ಅವರು ಟ್ರ್ಯಾಕ್ಟರ್‌ನಲ್ಲಿ ನಂಗ್ಲೋಯಿ-ನಜಾಫ್‌ಗಢ ರಸ್ತೆಯ ಮೂಲಕ ಹಾದುಹೋದವರಲ್ಲಿ ಒಬ್ಬರು. ಅವರು ಜನವರಿ 18ರಂದು ಕುಟುಂಬದೊಂದಿಗೆ ದೆಹಲಿಗೆ ಬಂದರು. ಅಂದಿನಿಂದ ಅವರು ಬಹದ್ದೂರ್‌ಗಢದಲ್ಲಿ (ಟಿಕ್ರಿ ಗಡಿಯ ಹತ್ತಿರ) ನಿಲ್ಲಿಸಿದ್ದ ತಮ್ಮ ಟ್ರಾಲಿಯಲ್ಲಿ ತಂಗಿದ್ದರು. ಈ ಮೆರವಣಿಗೆಯಲ್ಲಿ ಭಾಗವಹಿಸಲು ಮಾತ್ರ ಟ್ರ್ಯಾಕ್ಟರ್ ಓಡಿಸಲು ಕಲಿತಿದ್ದೇನೆ ಎಂದು ಹೇಳಿದ ಪೂನಮ್ ಓರ್ವ ಗೃಹಿಣಿ.

“ಪ್ರತಿ ವರ್ಷ ರಾಜ್‌ಪಥ್‌ನಲ್ಲಿ, ಗಣರಾಜ್ಯೋತ್ಸವದಂದು, ಹೊಲಗಳಲ್ಲಿ ಕೆಲಸ ಮಾಡುವ ರೈತರ ಬಗ್ಗೆ ನಾಟಕಗಳನ್ನು ಮಾಡಲಾಗುತ್ತದೆ. ಆದರೆ ಇದು ನಿಜವಾದುದು. ಈ ರ‍್ಯಾಲಿಯ ಮೂಲಕ ರೈತರು ತಾವು ಈ ದೇಶಕ್ಕೆ ಆಹಾರವನ್ನು ಒದಗಿಸುವವರು ಎಂದು ನಿಜವಾಗಿಯೂ ತೋರಿಸುತ್ತಿದ್ದಾರೆ,” ಎಂದು ಅವರು ಹೇಳಿದರು. “ಪ್ರತಿಭಟನೆಗಳು ಎಷ್ಟು ಕಾಲ ಮುಂದುವವರಿದರೂ ಮುಂದುವರಿದರೂ ನಾನು ಇಲ್ಲಿಯೇ ಇರುತ್ತೇನೆ. ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗುವುದಾದರೆ, ಅದು ಸರಿಯಾದ ಮತ್ತು ಶ್ಲಾಘನೀಯ ಕೆಲಸವಾಗಿದೆ.”

ಹೆಚ್ಚಿನ ಇತರ ಟ್ರಾಕ್ಟರುಗಳನ್ನು ಪುರುಷರು ಓಡಿಸುತ್ತಿದ್ದರೆ, ಮಹಿಳೆಯರು ಟ್ರಾಲಿಯಲ್ಲಿ ಕುಳಿತಿದ್ದರು. “ನಾವು ಭಯೋತ್ಪಾದಕರಲ್ಲ ಎಂದು ತೋರಿಸಲು ಬಯಸುತ್ತೇವೆ. ನಮ್ಮ ಏಕತೆಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ನಾವು ಮೋದಿ ಸರ್ಕಾರಕ್ಕೆ ತೋರಿಸಲು ಬಯಸುತ್ತೇವೆ” ಎಂದು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಮೆಹ್ಲಾನ್ ಗ್ರಾಮದ ಜಸ್ವಿಂದರ್ ಕೌರ್ ಹೇಳಿದರು, ಈ ಟ್ರಾಲಿಯೊಂದರಲ್ಲಿ ಕುಳಿತಿದ್ದ. “ಈ ಕರಾಳ ಕೃಷಿ ಕಾನೂನುಗಳನ್ನು ವಿರೋಧಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಈ ಕಾನೂನುಗಳನ್ನು ರದ್ದುಪಡಿಸುವವರೆಗೆ, ನಾವು ಹಿಂತಿರುಗುವುದಿಲ್ಲ. ನಾವು ನಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರಿಸುತ್ತೇವೆ ಮತ್ತು ಯಾವುದೇ ಹಾನಿ ಮಾಡುವುದಿಲ್ಲ.”

But then, a group of farmers in tractors broke the barricades at Nangloi chowk, amidst hooting and shouting from the occupants of some of these tractors
PHOTO • Sanskriti Talwar
But then, a group of farmers in tractors broke the barricades at Nangloi chowk, amidst hooting and shouting from the occupants of some of these tractors
PHOTO • Sanskriti Talwar

ಆದರೆ ನಂತರ, ಟ್ರಾಕ್ಟರುಗಳಲ್ಲಿ ಸವಾರಿ ಮಾಡುತ್ತಿದ್ದ ರೈತರ ಗುಂಪೊಂದು ಈ ಟ್ರಾಕ್ಟರುಗಳಲ್ಲಿ ಕುಳಿತಿರುವ ಕೆಲವು ಜನರ ಕೂಗಾಟದ ನಡುವೆ ನಂಗ್ಲೋಯಿ ಚೌಕ್‌ನಲ್ಲಿ ನೆಟ್ಟ ಬ್ಯಾರಿಕೇಡ್‌ಗಳನ್ನು ಮುರಿಯಿತು (ಫೋಟೋ: ಸಂಸ್ಕೃತಿ ತಲ್ವಾರ್)

ಅವರು ಮತ್ತು ರೈತರು ಪ್ರತಿಭಟಿಸುತ್ತಿರುವ ಕೃಷಿ ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು. ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಜಸ್ವಿಂದರ್ ಕೌರ್ ನವೆಂಬರ್ 26 ರಿಂದ ಟಿಕ್ರಿಯಲ್ಲಿದ್ದು, ಮೆಹ್ಲಾನ್ ಗ್ರಾಮದಲ್ಲಿರುವ ತನ್ನ ಮನೆಗೆ ಎರಡು ಬಾರಿ ಮಾತ್ರ  ಹೋಗಿ ಬಂದಿದ್ದಾರೆ. “ನಾನು ಕಳೆದ ವರ್ಷ ಆಗಸ್ಟ್‌ನಿಂದ ಪ್ರತಿಭಟನೆ ನಡೆಸುತ್ತಿದ್ದೇನೆ. ಮೊದಲಿಗೆ, ನಾವು ನಮ್ಮ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಿದ್ದೇವೆ. ನಂತರ ನಾವು ಪ್ರತಿಭಟಿಸಲು ಐದು ದಿನಗಳ ಕಾಲ ಪಟಿಯಾಲ ಜಿಲ್ಲೆಗೆ ಹೋದೆವು,” ಎಂದು ಅವರು ಹೇಳಿದರು. "ಈ ಚಳಿಗಾಲದ ಸಮಯದ ಪ್ರತಿಭಟನೆಯಲ್ಲಿ ತಾಯಿಯ ಮಗ ಇಲ್ಲಿ ಕುಳಿತಿರುವಾಗ, ತಾಯಿ ತನ್ನ ಮನೆಯೊಳಗೆ ಹೇಗೆ ಕುಳಿತುಕೊಳ್ಳಲು ಸಾಧ್ಯ?"  ಚಳಿ ಮತ್ತು ಕೋವಿಡ್ -19 ಕಾರಣದಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಪ್ರತಿಭಟನಾ ಸ್ಥಳಗಳಿಂದ ಮರಳಲು 'ಮನವೊಲಿಸಬೇಕು' ಎನ್ನುವ ಮುಖ್ಯ ನ್ಯಾಯಮೂರ್ತಿಗಳ (ಜನವರಿ 11) ಹೇಳಿಕೆಯನ್ನು ಉಲ್ಲೇಖಿಸಿ ಅವರು ಕೇಳಿದರು.

ಈ ನಡುವೆ, ಸಂಗ್ರೂರಿನಲ್ಲಿ, ಅವರ ಕುಟುಂಬವು ಏಳು ಎಕರೆ ಭೂಮಿಯಲ್ಲಿ ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಕೃಷಿ ಮಾಡುತ್ತದೆ. "ನಾವು ಅನೇಕ [ಇತರ] ಬೆಳೆಗಳನ್ನು ಸಹ ಬೆಳೆಯಬಹುದಿತ್ತು ಆದರೆ ಎಂಎಸ್ಪಿ ದರವನ್ನು ಗೋಧಿ ಮತ್ತು ಭತ್ತಕ್ಕೆ ಮಾತ್ರ ನಿಗದಿಪಡಿಸಲಾಗಿದೆ. ಆದ್ದರಿಂದ ನಾವು ಇತರ ಬೆಳೆಗಳನ್ನು ಬೆಳೆಯುವುದಿಲ್ಲ." ಎಂದು ಅವರು ಹೇಳಿದರು. ಒಮ್ಮೆ ಕುಟುಂಬವು ಬಟಾಣಿ ಬೆಳೆದಿದ್ದನ್ನು ಅವರು ನೆನಪಿಸಿಕೊಂಡರು. “ನಾವು ಆ ಬಟಾಣಿಯನ್ನು 2 ರೂಪಾಯಿಗೆ ಮಾರಿದ್ದೇವೆ. ಅದರ ನಂತರ, ನಾವು ಗೋಧಿ ಮತ್ತು ಭತ್ತವನ್ನು ಹೊರತುಪಡಿಸಿ ಬೇರೆ ಯಾವುದೇ ಬೆಳೆಗಳನ್ನು ಬೆಳೆದಿಲ್ಲ. ಆದರೆ ಇವುಗಳ ಬಗ್ಗೆ ಸರ್ಕಾರವು ಎಂಎಸ್‌ಪಿಗೆ ಖಾತರಿ ನೀಡದಿದ್ದರೆ, ನಾವು ಎಲ್ಲಿಗೆ ಹೋಗಬೇಕು? ”

ಅದೇ ಟ್ರಾಲಿಯಲ್ಲಿ 24 ವರ್ಷದ ಸುಖ್ವೀರ್ ಸಿಂಗ್ ಕೂಡ ಇದ್ದರು, ಅವರು ಮೆಹ್ಲಾನ್ ಗ್ರಾಮದವರಾಗಿದ್ದು, ಅವರ ಕುಟುಂಬವು ಆರು ಎಕರೆ ಜಮೀನನ್ನು ಹೊಂದಿದೆ. "ಅವರು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 1,800 ರೂಗಳನ್ನು ನಿಗದಿಪಡಿಸಿರುವುದಾಗಿ ಸರ್ಕಾರ ಹೇಳುತ್ತದೆ" ಎಂದು ಅವರು ಹೇಳಿದರು. “ಆದರೆ ನಾನು ಅದನ್ನು ಕ್ವಿಂಟಲ್‌ಗೆ 600 ರೂಗಳಿಗೆ ಮಾರಿದ್ದೇನೆ ಈ ದರಕ್ಕಿಂತ ಹೆಚ್ಚಿನ ದರಕ್ಕೆ ಯಾರಾದರೂ ಮಾರಾಟ ಮಾಡಿದ್ದೀರಾ ಎಂದು ನಮ್ಮ ಹಳ್ಳಿಯಲ್ಲಿರುವ ಯಾರನ್ನಾದರೂ ಕೇಳಿ ನೋಡಿ. ಇದು ನಮ್ಮ ಪರಿಸ್ಥಿತಿ. ಎಂಎಸ್‌ಪಿ ಬಗ್ಗೆ ಸರ್ಕಾರ ಯಾವುದೇ ಗ್ಯಾರಂಟಿ ನೀಡದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ? ಅದಕ್ಕಾಗಿಯೇ ನಾವು ನಮ್ಮ ಹಕ್ಕುಗಳನ್ನು ನೀಡುವಂತೆ ಒತ್ತಾಯಿಸಲು ಬೀದಿಗಿಳಿದಿದ್ದೇವೆ."

ನಾನು ಜಸ್ವಿಂದರ್ ಮತ್ತು ಸುಖ್ವೀರ್ ಅವರೊಂದಿಗೆ ಮಾತನಾಡುತ್ತಿದ್ದಾಗ - ಭಾರತೀಯ ಕಿಸಾನ್ ಒಕ್ಕೂಟದ (ಏಕ್ತಾ ಉಗ್ರಾಹನ್)  - ಇತರ ಟ್ರಾಕ್ಟರ್‌ನಿಂದ ಯಾರೋ ಒಬ್ಬರು ಬಂದು ತಮ್ಮ ಯೂನಿಯನ್‌ನ ಮುಖಂಡರು ಎಲ್ಲರೂ ಹಿಂತಿರುಗುವಂತೆ ಕೇಳುತ್ತಿದ್ದಾರೆಂದು ಹೇಳಲು ಬಂದರು.

PHOTO • Sanskriti Talwar ,  Naveen Macro

ಮೇಲಿನ ಎಡ: ಹರಿಯಾಣದ ಹಿಸಾರ್ ಜಿಲ್ಲೆಯ ಪೂನಂ ಪತ್ತಾರ್ ಈ ಮೆರವಣಿಗೆಯಲ್ಲಿ ಭಾಗವಹಿಸುವ ಸಲುವಾಗಿಯೇ ಟ್ರ್ಯಾಕ್ಟರ್ ಓಡಿಸಲು ಕಲಿತರು (ಫೋಟೋ: ಸಂಸ್ಕೃತಿ ತಲ್ವಾರ್). ಮೇಲಿನ ಬಲ: ನಂಗ್ಲೋಯಿ-ನಜಾಫ್‌ಗಢ ರಸ್ತೆಯಲ್ಲಿ ಟ್ರಾಲಿಯಲ್ಲಿ ಕುಳಿತ ಜಸ್ವಿಂದರ್ ಕೌರ್, 'ನಾವು ನಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರಿಸುತ್ತೇವೆ ಮತ್ತು ಯಾವುದೇ ಹಾನಿ ಮಾಡುವುದಿಲ್ಲ' ಎಂದು ಹೇಳಿದರು. ಕೆಳಗಿನ ಎಡ: ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುಖ್ವೀರ್ ಸಿಂಗ್, 'ಕೆಲವು ತಪ್ಪಿನಿಂದಾಗಿ ನಮ್ಮನ್ನು ಹಿಂತಿರುಗುವಂತೆ ಹೇಳಲಾಯಿತು' ಎಂದು ಹೇಳಿದರು. ಕೆಳಗಿನ ಬಲ: ಕಾನನ್ ಸಿಂಗ್, 'ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಇಲ್ಲಿಗೆ ಬಂದಿದ್ದೇವೆ' (ಫೋಟೋ: ನವೀನ್ ಮ್ಯಾಕ್ರೋ)

ನಾನು ಟ್ರಾಲಿಯಿಂದ ಇಳಿಯುತ್ತಿದ್ದಂತೆ, ಮಧ್ಯಾಹ್ನ 2.30 ರ ಸುಮಾರಿಗೆ, ಅವರ ಟ್ರಾಲಿ ನೈಋತ್ಯ ದೆಹಲಿಯ ಝರೋದಾ ಕಲನ್ ಬಸ್ತಿ ಬಳಿ ತಮ್ಮ ಶಿಬಿರಗಳಿಗೆ ಮರಳಲು ಯು-ಟರ್ನ್ ತೆಗೆದುಕೊಂಡಿತು - ಟೌನ್‌ಶಿಪ್ ನಂಗ್ಲೋಯಿ-ನಜಾಫ್‌ಗಢ ರಸ್ತೆಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ಅಷ್ಟೊತ್ತಿಗೆ ಈ ವಾಹನ ಸಾಲು ಟಿಕ್ರಿಯಿಂದ ಸುಮಾರು 27 ಕಿಲೋಮೀಟರ್ ದೂರದಲ್ಲಿತ್ತು.

ಮಧ್ಯಾಹ್ನದ ಹೊತ್ತಿಗೆ, ಬೆಂಗಾವಲಿನಿಂದ ಬೇರ್ಪಟ್ಟ ಕನಿಷ್ಠ ನಾಲ್ಕು ಟ್ರಾಕ್ಟರುಗಳು ಅವರೇ ಆಯ್ಕೆ ಮಾಡಿಕೊಂಡ ಮಾರ್ಗದಲ್ಲಿ ಚಲಿಸುತ್ತಿರುವುದನ್ನು ನಾನು ನೋಡಿದೆ. ಅಲ್ಲಿಯವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಮಧ್ಯಾಹ್ನ 2 ಗಂಟೆ ಸುಮಾರಿಗೆ, ಸಿಂಘು ಮತ್ತು ಗಾಜಿಪುರದಲ್ಲಿ ರೈತರು ಮತ್ತು ವ್ಯಕ್ತಿಗಳ ಗುಂಪು ಬೇರ್ಪಟ್ಟಿದೆ ಮತ್ತು ಅದು ಈಗ ಐಟಿಒ ಮತ್ತು ಲಾಲ್ ಕಿಲಾವನ್ನು ತಲುಪಿದೆ ಎಂಬ ಸುದ್ದಿ ಬರಲು ಪ್ರಾರಂಭಿಸಿದಾಗ, ಟಿಕ್ರಿಯಲ್ಲಿನ ಕೆಲವು ಗುಂಪುಗಳು ಮುಂದೆ ಸಾಗಲು ಮತ್ತು ಕೆಂಪು ಕೋಟೆಗೆ ತಾವೂ ಹೋಗಬೇಕೆಂದು ಒತ್ತಾಯಿಸಿದವು. ಆ ನಂತರವೇ ಪೊಲೀಸರು ಮತ್ತು ಈ ಗುಂಪುಗಳ ಸದಸ್ಯರ ನಡುವೆ ಘರ್ಷಣೆ ಪ್ರಾರಂಭವಾಯಿತು. ಲಾಠಿ ಮತ್ತು ಟಿಯರ್‌ಗಾಸ್ ಶೆಲ್‌ಗಳಿಂದ ಪೊಲೀಸರು ಪ್ರತ್ಯುತ್ತರ ನೀಡಿದರು. ಸಂಜೆ 4: 30ರವರೆಗೆ ಇದು ಮುಂದುವರೆಯಿತು.

ಸಂಜೆ 4 ಗಂಟೆ ಸುಮಾರಿಗೆ ಕೆಎಂಪಿ ಎಕ್ಸ್‌ಪ್ರೆಸ್‌ವೇಯಲ್ಲಿ ನಂಗ್ಲೋಯ್ ಚೌಕ್ ತಲುಪಲು ಹೊರಟಿದ್ದ ಭಾರತೀಯ ಕಿಸಾನ್ ಯೂನಿಯನ್‌ನ (ಏಕ್ತಾ ಉಗ್ರಾಹಾನ್) ಟ್ರಾಕ್ಟರುಗಳಲ್ಲಿದ್ದವರು ಸಹ ಟಿಕ್ರಿಯಲ್ಲಿರುವ ತಮ್ಮ ಶಿಬಿರಗಳಿಗೆ ಮರಳಲು ನಿರ್ಧರಿಸಿದರು.

ಸಂಗ್ರೂರ್ ಜಿಲ್ಲೆಯ ಶೆರ್ಪುರ ಬ್ಲಾಕ್‌ನ 65 ವರ್ಷದ ಕಾನನ್ ಸಿಂಗ್, ಝರೋದಾ ಕಲನ್ ಬಸ್ತಿ ಬಳಿ ಟ್ರಾಫಿಕ್ ಕಾರಣ ತನ್ನ ಟ್ರ್ಯಾಕ್ಟರ್‌ನಲ್ಲಿ ಸಿಲುಕಿಕೊಂಡರು, “ನಾವು ಕಳೆದ ಎರಡು ತಿಂಗಳಿನಿಂದ ರಸ್ತೆಗಳಲ್ಲಿ ವಾಸಿಸುತ್ತಿದ್ದೇವೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಅದು ಸಂಭವಿಸಿದಾಗಲಷ್ಟೇ ನಾವು ಪಂಜಾಬ್‌ಗೆ ಹೊರಡುತ್ತೇವೆ."

ರಾತ್ರಿ 8 ಗಂಟೆಗೆ ಪ್ರತಿಭಟನಾ ನಿರತ ರೈತ ಸಂಘಟನೆಗಳು, ಸಂಯುಕ್ತಾ ಕಿಸಾನ್ ಮೋರ್ಚಾ ಮತ್ತು ಇತರ ರೈತ ಮುಖಂಡರು ತಮ್ಮನ್ನು ಹಿಂಸಾಚಾರದಿಂದ ಪ್ರತ್ಯೇಕಿಸಿಕೊಂಡು ಆ ಘಟನೆಗಳನ್ನು ತೀವ್ರವಾಗಿ ಖಂಡಿಸಿದರು. "ಇಂದು ನಡೆದ ಅನಪೇಕ್ಷಿತ ಮತ್ತು ಸ್ವೀಕಾರಾರ್ಹವಲ್ಲದ ಘಟನೆಗಳನ್ನು ನಾವು ಖಂಡಿಸುತ್ತೇವೆ ಮತ್ತು ಆ ಕುರಿತು ವಿಷಾದಿಸುತ್ತೇವೆ ಮತ್ತು ಅಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಂದ  ನಾವು ಅಂತರ ಕಾಯ್ದುಕೊಳ್ಳುತ್ತೇವೆ." ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಕೆಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ನಿಗದಿತ ಮಾರ್ಗವನ್ನು ಉಲ್ಲಂಘಿಸಿ ಅಪಪ್ರಚಾರಗಳಲ್ಲಿ ತೊಡಗಿದ್ದರು. ಸಮಾಜ ವಿರೋಧಿ ವ್ಯಕ್ತಿಗಳು ಶಾಂತಿಯುತ ಚಳವಳಿಯೊಳಗೆ ನುಸುಳಿದ್ದಾರೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕೆಲವು ತಪ್ಪಿನಿಂದಾಗಿ ನಮ್ಮನ್ನು ಹಿಂತಿರುಗಿ ಹೋಗುವಂತೆ ಹೇಳಲಾಯಿತು" ಎಂದು ಸುಖ್ವೀರ್ ನಂತರ ನನಗೆ ಹೇಳಿದರು. "ಅವರು ನಮ್ಮ ಜನರಲ್ಲ. ಅಂತಹ ಯಾವುದೇ ಕೆಲಸ ಮಾಡಲು ನಾವು ದೆಹಲಿಗೆ ಬಂದಿಲ್ಲ. ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಲು ಮಾತ್ರ ನಾವು ಬಂದಿದ್ದೇವೆ."

"ನಾಳೆ ಸರ್ಕಾರ ಈ ಕಾನೂನುಗಳನ್ನು ರದ್ದುಪಡಿಸಿದರೆ ನಾವು ಇಲ್ಲಿಂದ ಹೊರಡುತ್ತೇವೆ" ಎಂದು ಪಂಜಾಬ್ ಕಿಸಾನ್ ಯೂನಿಯನ್ ರಾಜ್ಯ ಸಮಿತಿ ಸದಸ್ಯ ಜಸ್ಬೀರ್ ಕೌರ್ ನಾಟ್ ಹೇಳಿದರು. “ಆಗ ನಾವು ಯಾಕೆ ಇಲ್ಲಿ ಇರುತ್ತೇವೆ? ಈ ಕಾರಣಕ್ಕಾಗಿಯೇ ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ - ಈ ಕರಾಳ ಕಾನೂನುಗಳನ್ನು ರದ್ದುಪಡಿಸುವ ಬೇಡಿಕೆಯಷ್ಟೇ ನಮ್ಮದು.”

ಕವರ್‌ ಫೋಟೊ: ಸತ್ಯರಾಜ್‌ ಸಿಂಗ್

ಅನುವಾದ - ಶಂಕರ ಎನ್. ಕೆಂಚನೂರು

Sanskriti Talwar

Sanskriti Talwar is an independent journalist based in New Delhi, and a PARI MMF Fellow for 2023.

Other stories by Sanskriti Talwar
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru