ಅಮ್ಮ ಬಾಲ್ಕನಿಯಲ್ಲಿನ ತುಳಸಿ ಗಿಡದ ಪಕ್ಕದಲ್ಲಿ ಪುಟ್ಟ ದೀಪವೊಂದನ್ನು ಹಚ್ಚಿದಳು. ನನಗೆ ನೆನಪಿರುವಾಗಿನಿಂದಲೂ ಆಕೆ ಪ್ರತಿ ದಿನ ಸಂಜೆ ಹೀಗೆ ಮಾಡುತ್ತಿದ್ದಾಳೆ. ಪಾರ್ಕಿನ್‌ಸನ್‌ ಪರಿಣಾಮದಿಂದಾಗಿ ೭೦ನ್ನು ದಾಟಿದ ಆಕೆಯ ಕೈ, ಕಾಲುಗಳಲ್ಲೀಗ ಸ್ಥಿಮಿತವಿಲ್ಲ. ಮನಸ್ಸು ವಿಭ್ರಾಂತ ಸ್ಥಿತಿಯಲ್ಲಿರುತ್ತದೆ. ತನ್ನ ದೀಪವು ಕಪ್ಪಾಗಿ ಕಾಣುತ್ತಿದೆಯೆಂದು ಆಕೆಯ ಭಾವನೆ. ಅಪಾರ್ಟ್‌ಮೆಂಟಿನ ಎಲ್ಲ ಬಾಲ್ಕನಿಗಳಲ್ಲೂ ದೀಪಾವಳಿಯಂತೆ ದೀಪಗಳನ್ನು ಹಚ್ಚಲಾಗಿದೆ. ಇಂದು ದೀಪಾವಳಿಯೇ? ಆಕೆಗೆ ಆಶ್ಚರ್ಯ. ಆಕೆಯ ಜ್ಞಾಪಕ ಶಕ್ತಿಯನ್ನು ಇನ್ನು ನಂಬುವಂತಿಲ್ಲ. ಆದರೀಗ ಎಲ್ಲವೂ ಕತ್ತಲುಮಯವಾಗಿದೆ. ಹಿಂದೆಂದಿಗಿಂತಲೂ ಅದು ದಟ್ಟವಾಗಿ ಆವರಿಸಿದೆ. ತನಗೆ ಪರಿಚಿತವಾದ ಕೆಲವು ಭಜನೆಗಳು ಆಕೆಗೆ ಕೇಳಿಸುತ್ತಿವೆ. ಕೆಲವೊಂದು ಗಾಯತ್ರಿ ಮಂತ್ರದಂತಿವೆ. ಅಥವಾ ಅದು ಹನುಮಾನ್‌ ಚಾಲಿಸ ಇರಬಹುದೇ? ಯಾರಾದರೂ ‘ಪಾಕಿಸ್ತಾನ್‌ ಮುರ್ದಾಬಾದ್‌’ ಎಂದರೇ?

ನಕ್ಷತ್ರಗಳಿಲ್ಲದ ಆಕಾಶವನ್ನು ನೋಡಿದ ಆಕೆ ಕಂಪಿಸುತ್ತಾಳೆ. ಇದ್ದಕ್ಕಿದ್ದಂತೆ ಕೆಲವು ಧ್ವನಿಗಳು ಕೇಳಿಬರುತ್ತಿದ್ದು, ಆಕೆಯನ್ನು ವಿಕ್ಷಿಪ್ತಗೊಳಿಸುತ್ತಿವೆ. ಬ್ರೆಡ್ಡುಗಳನ್ನು ತಯಾರಿಸುವ ಮುಸ್ಲಿಮರು ಮಲಿನ ಬ್ರೆಡ್ಡುಗಳನ್ನು ಮಾರುತ್ತಿದ್ದಾರೆಂಬುದಾಗಿ ಎಚ್ಚರಿಸುವ ಧ್ವನಿಗಳು. ತರಕಾರಿ ಮಾರುವ ಮುಸ್ಲಿಮರು, ತರಕಾರಿಗಳ ಮೇಲೆ ಉಗುಳುತ್ತಿರುವುದರಿಂದ ಆಕೆಗೆ ಅವರನ್ನು ಬಹಿಷ್ಕರಿಸುವಂತೆ ತಿಳಿಸುವ ಧ್ವನಿಗಳು. ಏಕತೆಯ ದೀಪವನ್ನು ಹಚ್ಚುವಂತೆ ತಿಳಿಸುವ ಧ್ವನಿಗಳು. ರಸ್ತೆಗಳಲ್ಲಿ ಹಸಿದ ಹೊಟ್ಟೆಯ ಗುರ್ರೆನ್ನುವ ಧ್ವನಿಗಳು. ಆದರೆ ಅದನ್ನು ಕೇಳುವವರೇ ಇಲ್ಲ. ಧರ್ಮಗ್ರಂಥಗಳ ವಾತ್ಸಲ್ಯ ಮತ್ತು ದಯಾಶೀಲ ಕ್ಷೀಣ ಧ್ವನಿಗಳು. ಕಗ್ಗತ್ತಲಿನಲ್ಲಿ ಬೀಸುವ ಗಾಳಿಯ ಧ್ವನಿಗಳು ಆಕೆಯ ದೀಪವನ್ನು ಆರಿಸುತ್ತವೆ. ತಲೆಸುತ್ತು ಬಂದಂತಾಗಿ, ತನ್ನ ಹಾಸಿಗೆಗೆ ಮರಳಲು ಬಯಸುತ್ತಾಳಾದರೂ, ಆಕೆ ಕಗ್ಗತ್ತಲಿನಲ್ಲಿ ನಡೆದುಕೊಂಡು ಹೋಗಲಾರಳು. ತನ್ನ ನಡುಗುವ ಬೆರಳುಗಳಿಂದ ಮತ್ತೊಂದು ಬಾರಿ ತನ್ನ ದೀಪವನ್ನು ಬೆಳಗಿಸಲು ಹೆಣಗುತ್ತಾಳೆ…

ಸುಧನ್ವ ದೇಶಪಾಂಡೆಯವರ ಧ್ವನಿಯಲ್ಲಿ ಪದ್ಯವನ್ನು ಆಲಿಸಿ

PHOTO • Rahul M.

ಒಂದು ಕಪ್ಪು ಹಣತೆ

ನಾನು ಪುಟ್ಟ ದೀಪವೊಂದನ್ನು ಹಚ್ಚಿದ್ದೆನಾದರೂ
ಕಗ್ಗತ್ತಲು ದಟ್ಟೈಸಿಬಿಟ್ಟಿತು!
ಇದು ಆದದ್ದಾದರೂ ಹೇಗೆ?
ಇಲ್ಲಿಯವರೆಗೂ ಅದು ಆ ಮನೆಯ ಚಿಕ್ಕ ಮೂಲೆಯಲ್ಲಿ
ಎಷ್ಟು ನಿಶ್ಶಬ್ದವಾಗಿ ಅಡಗಿತ್ತು
ಇದೀಗ ನನ್ನ ಕಣ್ಣ ಮುಂದೆ ಹಾಗೂ ಎಲ್ಲೆಡೆಯಲ್ಲೂ
ಇದರ ತಾಂಡವ ನೃತ್ಯ!
ಕೆಳಗೆ ನೆಲಮಾಳಿಗೆಯಲ್ಲಿ ನಾನು ಅದನ್ನು
ಬೆದರಿಸಿ, ಎಚ್ಚರಿಕೆ ನೀಡಿ ಹದ್ದುಬಸ್ತಿನಲ್ಲಿಟ್ಟಿದ್ದೆ.
ಅದರ ಒಳಸಂಚನ್ನು ತಡೆಯಲು
ಕಬ್ಬಿಣದ ತೂಕದಷ್ಟು
ಅಪಖ್ಯಾತಿಯ ಹೊರೆಯನ್ನು ಅದರ
ಶಿರದ ಮೇಲೆ ಹೇರಿದ್ದೆ.
ಅದರ ಬಾಯಿ ಮುಚ್ಚಿಸಿ,
ಮುಖಕ್ಕೆ ಹೊಡೆದಂತೆ
ಬಾಗಿಲಿನ ಅಗುಳಿ ಜಡಿದಿದ್ದೆ.
ಅದು ತಪ್ಪಿಸಿಕೊಂಡದ್ದಾದರೂ ಹೇಗೆ?
ಅಡೆತಡೆಗಳೆಲ್ಲ ಏನಾದವು?
ನಿರ್ಲಜ್ಜತನದಿಂದ ಮುಚ್ಚುಮರೆಯಿಲ್ಲದಂತೆ
ಈ ಅಂಧಕಾರವು ಅಲೆದಾಡುತ್ತಿರುವುದಾದರೂ ಹೇಗೆ?
ಪುಟ್ಟದೊಂದು ಅಸ್ಪಷ್ಟ
ಪ್ರೀತಿಯ ಚೇತನವನ್ನು ಆಕ್ರಮಿಸಿ,
ಒಂದೊಮ್ಮೆ ಬೆಚ್ಚಗೆ, ಸುವರ್ಣದಿಂದ ಕಂಗೊಳಿಸುತ್ತಿದ್ದ
ಜ್ಯೋತಿಯ ಪ್ರಕಾಶಪುಂಜವೆಲ್ಲವನ್ನೂ
ಮಂಕಾಗಿಸಿ, ನಿಷ್ಕರುಣೆಯಿಂದ
ವಿಷಪೂರಿತವಾಗಿ ರಕ್ತರಂಜಿತಗೊಳಿಸುತ್ತಿದೆ
ಇಳಿಸಿದ್ದಾದರೂ ಯಾರು?
ಇದರ ಶಿರದಿಂದ ಹೊರೆಯನ್ನು
ಅಗುಳಿ ತೆಗೆದದ್ದಾದರೂ ಯಾರು?
ಕಡಿವಾಣವನ್ನು ಸಡಿಲಿಸಿ
ಅದರ ನಾಲಿಗೆಯನ್ನು ಹರಿಬಿಟ್ಟವರಾರು?
ದೀಪವನ್ನು ಬೆಳಗಿಸುವುದರಿಂದ
ಕತ್ತಲು ಉನ್ಮುಕ್ತಗೊಳ್ಳುತ್ತದೆಂದು
ಯಾರಿಗೆ ತಾನೇ ತಿಳಿದಿತ್ತು?

ಆಡಿಯೋ: ಜನ ನಾಟ್ಯ ಮಂಚ್‌ನ ನಟ ಹಾಗೂ ನಿರ್ದೇಶಕರಾದ ಸುಧನ್ವ ದೇಶ್‌ಪಾಂಡೆಯವರು,  ಲೆಫ್ಟ್‌ವರ್ಡ್‌ ಬುಕ್ಸ್‌ನ ಸಂಪಾದಕರೂ ಹೌದು.

ಛಾಯಾಚಿತ್ರಗಳು: ರಾಹುಲ್‌ ಎಂ.

ಅನುವಾದ: ಶೈಲಜ ಜಿ. ಪಿ.

Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.