"ದಾಖಲೆಗಳ ಪ್ರಕಾರ ಇಲ್ಲಿ ನೇಕಾರರಿಗೇನು ಕೊರತೆಯಿಲ್ಲ, ಆದರೆ ನಾನು ಸತ್ತರೆ ಆ ವೃತ್ತಿಯೇ [ಪ್ರಾಯೋಗಿಕವಾಗಿ] ಸತ್ತಂತೆ," ಎಂದು ಹೇಳುತ್ತಾ ತಮ್ಮ ಬಿದಿರಿನ ಗುಡಿಸಲಿನಲ್ಲಿ ಕೈಮಗ್ಗದಲ್ಲಿ ನೇಯ್ಗೆ ಮಾಡುತ್ತಿದ್ದ ರೂಪ್‌ಚಂದ್  ದೇಬನಾಥ್ ಅವರು ವಿರಾಮ ತೆಗೆದುಕೊಳ್ಳುತ್ತಾರೆ. ಗುಡಿಸಲಿನ ಹೆಚ್ಚಿನ ಜಾಗದಲ್ಲಿ ಮಗ್ಗವಿದ್ದರೂ, ಕಸದ ರಾಶಿ, ಮುರಿದು ಹೋಗಿರುವ ಪೀಠೋಪಕರಣಗಳು, ಲೋಹದ ಬಿಡಿಭಾಗಗಳು ಮತ್ತು ಬಿದಿರಿನ ತುಂಡುಗಳು ಸೇರಿದಂತೆ ಬೇರೆ ಬೇರೆ ವಸ್ತುಗಳು ರಾಶಿಬಿದ್ದಿವೆ. ಒಬ್ಬರಿಗಿಂತ ಹೆಚ್ಚು ಮಂದಿಗೆ ಕೂರಲು ಇಲ್ಲಿ ಸ್ಥಳವಿಲ್ಲ.

73 ವರ್ಷ ಪ್ರಾಯದ ರೂಪ್‌ಚಂದ್ ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ತ್ರಿಪುರಾ ರಾಜ್ಯದ ಧರ್ಮನಗರ ನಗರದ ಹೊರವಲಯದಲ್ಲಿರುವ ಗೋಬಿಂದಪುರದ ನಿವಾಸಿ. ಸ್ಥಳೀಯರು ಹೇಳುವಂತೆ ಈ ಕಿರಿದಾದ ರಸ್ತೆ ಒಂದು ಕಾಲದಲ್ಲಿ 200 ನೇಕಾರ ಕುಟುಂಬಗಳು ಮತ್ತು 600 ಕ್ಕೂ ಹೆಚ್ಚು ಕುಶಲಕರ್ಮಿಗಳು ವಾಸಿಸುತ್ತಿದ್ದ ಆ ಗ್ರಾಮಕ್ಕೆ ಹೋಗುತ್ತದೆ. ಗೋಬಿಂದಪುರದ ಕೈಮಗ್ಗ ನೇಕಾರರ ಸಂಘದ ಕಛೇರಿಯು ಕಿರಿದಾದ ದಾರಿಗಳಲ್ಲಿರುವ ಕೆಲವು ಮನೆಗಳ ನಡುವೆ ಇದ್ದು, ತುಕ್ಕು ಹಿಡಿದ ಗೋಡೆಗಳು ಎಲ್ಲರೂ ಮರೆತಿರುವ ಆ ಗತವೈಭವವನ್ನು ನೆನಪಿಸುತ್ತವೆ.

ನಾಥ ಸಮುದಾಯಕ್ಕೆ ಸೇರಿರುವ (ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳೆಂದು ಪರಿಗಣಿಸಲಾಗಿದೆ) ರೂಪ್‌ಚಂದ್  ಅವರು, "ಮಗ್ಗವಿರುವ ಒಂದೇ ಒಂದು ಮನೆಯೂ ಇಲ್ಲಿರಲಿಲ್ಲ," ಎಂದು ವಿವರಿಸುತ್ತಾರೆ. ಬಿಸಿಲಿನ ಉರಿಗೆ ತಮ್ಮ ಮುಖದಲ್ಲಿರುವ ಬೆವರನ್ನು ಒರೆಸಿಕೊಳ್ಳುತ್ತಾ ಮಾತನ್ನು ಮುಂದುವರಿಸುತ್ತಾರೆ. “ಸಮಾಜದಲ್ಲಿ ನಮಗೆ ಗೌರವವಿತ್ತು. ಈಗ ಯಾರಿಗೂ ಬೇಡವಾಗಿದ್ದೇವೆ. ಹಣ ಬಾರದ ವೃತ್ತಿಯನ್ನು ಯಾರು ಗೌರವಿಸುತ್ತಾರೆ ಹೇಳಿ?” ಎಂದು ಕೇಳುವಾಗ ಅವರ ದನಿಯಲ್ಲಿ ನಡುಕವಿತ್ತು.

1980 ರ ದಶಕದಲ್ಲಿ ತಮ್ಮ ಕೈಯಿಂದಲೇ ನೇಯ್ಗೆ ಮಾಡಿ ವಿಸ್ತಾರವಾದ ಹೂವಿನ ವಿನ್ಯಾಸಗಳನ್ನು ಹೊಂದಿರುವ ನಾಕ್ಷಿ ಸೀರೆಗಳನ್ನು ತಯಾರಿಸಿದ್ದನ್ನು ಇವರು ನೆನಪಿಸಿಕೊಳ್ಳುತ್ತಾರೆ. "ಪುರ್‌ಭಾಷಾ [ತ್ರಿಪುರಾ ಸರ್ಕಾರದ ಕರಕುಶಲ ಮಾರಾಟ ಕೇಂದ್ರ] ಧರ್ಮನಗರದಲ್ಲಿ ಒಂದು ಕೇಂದ್ರವನ್ನು ತೆರೆದಾಗ ಅವರು ನಾಕ್ಷಿ ಸೀರೆಗಳನ್ನು ತಯಾರಿಸುವುದನ್ನು ನಿಲ್ಲಿಸಿ, ಸಾದಾ ಸೀರೆಗಳನ್ನು ತಯಾರಿಸಲು ಹೇಳಿದರು," ಎಂದು ರೂಪ್‌ಚಂದ್ ಹೇಳುತ್ತಾರೆ. ಇವುಗಳು ಗುಣಮಟ್ಟವೂ ಕಡಿಮೆ, ಆದ್ದರಿಂದ ಅಗ್ಗವೂ ಕೂಡ.

ಈ ಪ್ರದೇಶದಲ್ಲಿ ನಾಕ್ಷಿ ಸೀರೆಗಳೇ ಮರೆಯಾದವು ಎಂದು ಮೆಲ್ಲಗೆ ಹೇಳುತ್ತಾರೆ. "ಇಂದು ಯಾರೊಬ್ಬ ಕುಶಲಕರ್ಮಿಯೂ ಇಲ್ಲಿ ಉಳಿದಿಲ್ಲ, ಮಗ್ಗಗಳ ಬಿಡಿಭಾಗಗಳೂ ಇಲ್ಲಿ ಸಿಗುತ್ತಿಲ್ಲ," ಎಂದು ಅವರು ಹೇಳುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ನೇಕಾರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ ದೇಬನಾಥ್ ಅವರು "ನಾವು ತಯಾರಿಸುತ್ತಿದ್ದ ಬಟ್ಟೆಗಳಿಗೆ ಮಾರುಕಟ್ಟೆಯೇ ಇರಲಿಲ್ಲ," ಎಂದು ರೂಪ್‌ಚಂದ್ ಅವರ ಮಾತಿಗೆ ದನಿಗೂಡಿಸುತ್ತಾರೆ. 63 ವರ್ಷ ವಯಸ್ಸಿನ ಇವರಿಗೆ ಇನ್ನು ಮುಂದೆ ನೇಯ್ಗೆ ಮಾಡಲು ಬೇಕಾದ ದೈಹಿಕ ಶ್ರಮ ಹಾಕಲು ಸಾಧ್ಯವಿಲ್ಲ.

PHOTO • Rajdeep Bhowmik
PHOTO • Deep Roy

ಎಡ: ರೂಪ್‌ಚಂದ್ ದೇಬನಾಥ್ (ಮಗ್ಗದ ಹಿಂದೆ ನಿಂತಿರುವ) ತ್ರಿಪುರಾದ ಗೋಬಿಂದಾಪುರ ಗ್ರಾಮದಲ್ಲಿರುವ ಸದ್ಯ ಉಳಿದಿರುವ ಏಕೈಕ ಕೈಮಗ್ಗ ನೇಕಾರ ಮತ್ತು ಈಗ ಇವರು ಗಮ್ಚಾಗಳನ್ನು ಮಾತ್ರ ಮಾಡುತ್ತಿದ್ದಾರೆ. ಇವರೊಂದಿಗೆ ನಿಂತಿರುವವರು ಸ್ಥಳೀಯ ನೇಕಾರರ ಸಂಘದ ಹಾಲಿ ಅಧ್ಯಕ್ಷ ರವೀಂದ್ರ ದೇಬನಾಥ್. ಬಲ: ಗಂಜಿಯೊಂದಿಗೆ ಸಂಸ್ಕರಿಸಿದ ನಂತರ ನೂಲುಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಆಗ ಗರಿಗರಿಯಾದ, ಗಟ್ಟಿಯಾದ ಮತ್ತು ಸುಕ್ಕುಗಟ್ಟದ ನೂಲುಗಳು ಸಿಗುತ್ತವೆ

2005 ರ ಹೊತ್ತಿಗೆ  ರೂಪ್‌ಚಂದ್  ಅವರು ನಾಕ್ಷಿ ಸೀರೆಗಳನ್ನು ನೇಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಗಮ್ಚಾ ತಯಾರಿಸಲು ಆರಂಭಿಸಿದರು. “ನಾವು ಎಂದಿಗೂ ಗಮ್ಚಾಗಳನ್ನು ಮಾಡಿರಲಿಲ್ಲ. ನಾವೆಲ್ಲ ನೇಯ್ದದ್ದು ಸೀರೆ ಮಾತ್ರ. ಆದರೆ ನಮಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ನಿನ್ನೆಯಿಂದ ನಾನು ಕೇವಲ ಎರಡು ಗಮ್ಚಾಗಳನ್ನು ನೇಯ್ದಿದ್ದೇನೆ. ಇವುಗಳನ್ನು ಮಾರಿದರೆ ಕೇವಲ 200 ರೂಪಾಯಿ ಸಿಗುತ್ತದೆ. ಇದು ನನ್ನ ಸಂಪಾದನೆ ಮಾತ್ರವಲ್ಲ. ನನ್ನ ಹೆಂಡತಿ ಕೂಡ ನನಗೆ ನೂಲು ಸುತ್ತಲು ನೆರವಾಗುತ್ತಾಳೆ. ಹಾಗಾಗಿ ಇದು ಇಡೀ‌ ನನ್ನ ಕುಟುಂಬದ ಸಂಪಾದನೆ. ಈ ಆದಾಯದಲ್ಲಿ ಬದುಕುವುದು ಹೇಗೆ?” ಎಂದು ರೂಪ್‌ಚಂದ್ ಕೇಳುತ್ತಾರೆ.

ರೂಪ್‌ಚಂದ್ ಬೆಳಗಿನ ತಿಂಡಿಯ ನಂತರ ಸುಮಾರು 9 ಗಂಟೆಗೆ ನೇಯ್ಗೆ ಕೆಲಸಕ್ಕೆ ಇಳಿಯುತ್ತಾರೆ. ಈ ಕೆಲಸ ಮಧ್ಯಾಹ್ನದ ನಂತರ ಸ್ವಲ್ಪ ಸಮಯದವರೆಗೆ ಮುಂದುವರಿಸುತ್ತಾರೆ. ಕೆಲಸವನ್ನು ಮತ್ತೆ ಆರಂಭಿಸುವ ಮೊದಲು ಅವರು ಸ್ನಾನ ಮಾಡಿ, ಊಟದ ವಿರಾಮ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈಗೆಲ್ಲಾ ಸಂಜೆ ಹೊತ್ತು ಕೆಲಸ ಮಾಡುವುದಿಲ್ಲ, ಏಕೆಂದರೆ ಅವರಿಗೆ ಕೀಲುಗಳ ನೋವಿದೆ. ಆದರೆ ಯುವಕರಾಗಿದ್ದಾಗ "ನಾನು ತಡರಾತ್ರಿಯವರೆಗೂ ಕೆಲಸ ಮಾಡಿದ್ದೆ," ಎಂದು ರೂಪ್‌ಚಂದ್ ನೆನಪಿಸಿಕೊಳ್ಳುತ್ತಾರೆ.

ರೂಪ್‌ಚಂದ್‌ರ ದಿನದ ಹೆಚ್ಚಿನ ಸಮಯ ಮಗ್ಗದಲ್ಲಿ ಗಮ್ಚಾಗಳನ್ನು ನೇಯುವುದರಲ್ಲಿ ಕಳೆದು ಹೋಗುತ್ತದೆ. ಅಗ್ಗವೂ, ದೀರ್ಘಕಾಲದ ವರೆಗೆ ಬಾಳಿಕೆ ಬರುವ ಕಾರಣ ಈ ಪ್ರದೇಶದಲ್ಲಿ ಮತ್ತು ಬಂಗಾಳದ ಪ್ರದೇಶಗಳಲ್ಲಿ ಗಮ್ಚಾಗಳು ಇನ್ನೂ ಅನೇಕ ಮನೆಗಳಲ್ಲಿ ಬಳಕೆಯಲ್ಲಿವೆ. "ನಾನು ನೇಯ್ಗೆ ಮಾಡುವ ಗಮ್ಚಾಗಳು [ಹೆಚ್ಚಾಗಿ] ಈ ರೀತಿ  ಇರುತ್ತವೆ," ಎಂದು ಬಿಳಿ ಮತ್ತು ಹಸಿರು ನೂಲುಗಳನ್ನು ಗಾಢವಾದ ಕೆಂಪು ನೂಲುಗಳೊಂದಿಗೆ ಗಮ್ಚಾಕ್ಕೆ ನೇಯ್ಗೆ ಮಾಡುವುದರಿಂದ ದಪ್ಪ ಪಟ್ಟಿಯ ಅಂಚುಗಳನ್ನು ಮಾಡುವ ಬಗ್ಗೆ ವಿವರಿಸುತ್ತಾರೆ. “ಈ ಮೊದಲು ನಾವೇ ಈ ನೂಲುಗಳಿಗೆ ಬಣ್ಣ ಹಾಕುತ್ತಿದ್ದೆವು. ಕಳೆದ 10 ವರ್ಷಗಳಿಂದ ನಾವು ನೇಕಾರರ ಸಂಘದಿಂದ ಬಣ್ಣಬಣ್ಣದ ನೂಲುಗಳನ್ನು ಖರೀದಿಸುತ್ತಿದ್ದೇವೆ,” ಎಂದು ಅವರು ಹೇಳುತ್ತಾರೆ ಮತ್ತು ತಾವು ನೇಯ್ಗೆ ಮಾಡುವ ಗಮ್ಚಾಗಳಲ್ಲಿ ಇವುಗಳನ್ನು ಬಳಸುತ್ತಿರುವುದಾಗಿ ಹೇಳುತ್ತಾರೆ.

ಆದರೆ ಕೈಮಗ್ಗ ಉದ್ದಿಮೆಯ ಪರಿಸ್ಥಿತಿ ಯಾವಾಗ ಬದಲಾಯಿತು? “ಇದು ಮೊದಲು ವಿದ್ಯುತ್‌ಚಾಲಿತ ನೇಯ್ಗೆಗಳು ಬಂದಮೇಲೆ ಮತ್ತು ನೂಲುಗಳ ಗುಣಮಟ್ಟ ಕುಸಿತವಾಗಿ ಶುರುವಾಯಿತು. ನಮ್ಮಂತಹ ನೇಕಾರರು ವಿದ್ಯುತ್‌ಚಾಲಿತ ನೇಯ್ಗೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ,”  ರೂಪ್‌ಚಂದ್  ಹೇಳುತ್ತಾರೆ.

PHOTO • Rajdeep Bhowmik
PHOTO • Rajdeep Bhowmik

ಎಡಕ್ಕೆ: ಬಿದಿರಿನಿಂದ ಮಾಡಿದ ನೂಲುಗಳನ್ನು ಸುತ್ತುವ ಚಕ್ರಗಳನ್ನು ಸ್ಕೀನಿಂಗ್‌ ಮಾಡಲು ಬಳಸಲಾಗುತ್ತದೆ. ತಿರುಗುವ ರೀಲ್‌ಗೆ ದಾರವನ್ನು ಸುತ್ತಿ ಒಂದೇ ರೀತಿ ಕಾಣುವ ದಪ್ಪದ ಸ್ಕೀನ್ ಅನ್ನು ಮಾಡಲಾಗುತ್ತದೆ. ಈ ಕೆಲಸವನ್ನು ಸಾಮಾನ್ಯವಾಗಿ ರೂಪ್‌ಚಂದ್ ಅವರ ಪತ್ನಿ ಬಸನಾ ದೇಬನಾಥ್ ಮಾಡುತ್ತಾರೆ. ಬಲ: ನೇಯ್ಗೆಗೆ ಬಳಸುವ ನೂಲುಗಳ ಕಟ್ಟುಗಳು

PHOTO • Rajdeep Bhowmik
PHOTO • Rajdeep Bhowmik

ಎಡ: ರೂಪ್‌ಚಂದ್ ತನ್ನ ತಂದೆಯಿಂದ ಈ  ಕಲೆಯನ್ನು ಕಲಿತರು ಮತ್ತು 1970 ರ ದಶಕದಿಂದ ನೇಯ್ಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಸುಮಾರು 20 ವರ್ಷಗಳ ಹಿಂದೆ ಈ ಮಗ್ಗವನ್ನು ಖರೀದಿಸಿದರು. ಬಲ:ತನ್ನ ಬರಿ ಪಾದಗಳಿಂದ ಮಗ್ಗವನ್ನು ನಿರ್ವಹಿಸುತ್ತಾ ಗಮ್ಚಾವನ್ನು ನೇಯುತ್ತಿರುವ ರೂಪ್‌ಚಂದ್

ವಿದ್ಯುತ್‌ಚಾಲಿತ ನೇಯ್ಗೆಯಂತ್ರಗಳು ದುಬಾರಿಯಾಗಿದ್ದು, ಹೆಚ್ಚಿನ ನೇಕಾರರಿಗೆ ಇದರ ಬಳಕೆ ಸಾಧ್ಯವಿಲ್ಲ. ಹೆಚ್ಚಾಗಿ, ಮಗ್ಗದ ಬಿಡಿಭಾಗಗಳನ್ನು ಮಾರಾಟ ಮಾಡುವ ಯಾವುದೇ ಒಂದು ಅಂಗಡಿಯಿಲ್ಲದ ಮತ್ತು ದುರಸ್ತಿ ಕೆಲಸ ಮಾಡುವವರೂ ಇಲ್ಲದ ಗೋಬಿಂದಪುರದಂತಹ ಹಳ್ಳಿಗಳ ನೇಕಾರರಿಗೆ ಇದು ಕಷ್ಟಸಾಧ್ಯ. ಈಗ ಈ ಯಂತ್ರಗಳನ್ನು ಬಳಸುವ ವಯಸ್ಸೂ ಅವರದ್ದಲ್ಲ ಎಂದು ರೂಪ್‌ಚಂದ್ ಹೇಳುತ್ತಾರೆ.

“ನಾನು ಇತ್ತೀಚೆಗೆ 12,000 [ರೂಪಾಯಿ] ಬೆಲೆಯ ನೂಲುಗಳನ್ನು [22 ಕೆಜಿ] ಖರೀದಿಸಿದೆ. ಕಳೆದ ವರ್ಷ ಇದಕ್ಕೆ ನನಗೆ ಸುಮಾರು 9000 ರುಪಾಯಿ ಖರ್ಚಾಗಿತ್ತು. ಈ ಆರೋಗ್ಯ ಸಮಸ್ಯೆಗಳ ಮಧ್ಯೆ ನನಗೆ ಸುಮಾರು 150 ಗಮ್ಚಾಗಳನ್ನು ತಯಾರಿಸಲು ಸುಮಾರು 3 ತಿಂಗಳು ಬೇಕಾಗುತ್ತದೆ. ನಾನು ಅವುಗಳನ್ನು ಕೇವಲ 16,000 ರೂಪಾಯಿಗಳಿಗೆ [ನೇಕಾರರ ಸಂಘಕ್ಕೆ] ಮಾರಾಟ ಮಾಡುತ್ತೇನೆ," ಎಂದು ರೂಪ್‌ಚಂದ್ ಅಸಹಾಯಕತೆಯಿಂದ ಹೇಳುತ್ತಾರೆ.

*****

1950 ರ ಆಸುಪಾಸಿನಲ್ಲಿ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಜನಿಸಿದ ರೂಪ್‌ಚಂದ್  ಅವರು, 1956 ರಲ್ಲಿ ಭಾರತಕ್ಕೆ ವಲಸೆ ಬಂದರು. “ನನ್ನ ತಂದೆ ಭಾರತದಲ್ಲಿ ನೇಯ್ಗೆಯನ್ನು ಮುಂದುವರೆಸಿದರು. ಶಾಲೆ ಬಿಡುವ ಮೊದಲು ನಾನು 9 ನೇ ತರಗತಿಯವರೆಗೆ ಓದಿದ್ದೇನೆ,” ಎಂದು ಅವರು ಹೇಳುತ್ತಾರೆ. ಯುವಕರಾಗಿದ್ದಾಗ ರೂಪ್‌ಚಂದ್ ಅವರು ಸ್ಥಳೀಯ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡಿದ್ದರು, "ಕೆಲಸಕ್ಕೆ ತುಂಬಾ ಬೇಡಿಕೆಯಿತ್ತು ಮತ್ತು ಸಂಬಳ ತುಂಬಾ ಕಡಿಮೆಯಾಗಿತ್ತು, ಆದ್ದರಿಂದ ನಾನು ನಾಲ್ಕೇ ವರ್ಷಗಳಲ್ಲಿ ಕೆಲಸ ಬಿಟ್ಟೆ," ಎಂದು ಹೇಳುತ್ತಾರೆ ಅವರು.

ನಂತರ ಅವರು ತಲೆಮಾರಿನಿಂದ ಬಂದಿರುವ ವೃತ್ತಿಯಾದ ನೇಕಾರಿಕೆಯನ್ನು ತಮ್ಮ ತಂದೆಯಿಂದ ಕಲಿಯಲು ನಿರ್ಧರಿಸಿದರು. “ಆ ಸಮಯದಲ್ಲಿ ಕೈಮಗ್ಗಕ್ಕೆ [ಉದ್ದಿಮೆ] ಒಳ್ಳೆಯ ಸಂಬಳ ಸಿಗುತ್ತಿತ್ತು. 15 ರೂಪಾಯಿಗೆ ಸೀರೆ ಮಾರಿದ್ದೇನೆ. ನಾನು ಈ ಕೆಲಸ ಮಾಡದಿದ್ದರೆ ನನ್ನ ವೈದ್ಯಕೀಯ ವೆಚ್ಚವನ್ನು ಭರಿಸಲು ಅಥವಾ ನನ್ನ [ಮೂವರು] ಸಹೋದರಿಯರಿಗೆ ಮದುವೆ ಮಾಡಿಸಲು ಸಾಧ್ಯವಿರಲಿಲ್ಲ,” ಎಂದು ಅವರು ಹೇಳುತ್ತಾರೆ.

PHOTO • Rajdeep Bhowmik
PHOTO • Deep Roy

ಎಡಕ್ಕೆ: ರೂಪ್‌ಚಂದ್ ಅವರು ವಿಸ್ತಾರವಾದ ಹೂವಿನ ವಿನ್ಯಾಸಗಳನ್ನು ಹೊಂದಿರುವ ನಾಕ್ಷಿ ಸೀರೆಗಳನ್ನು ಮಾಡುವುದರೊಂದಿಗೆ ನೇಕಾರರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಆದರೆ 1980ರ ದಶಕದಲ್ಲಿ, ಯಾವುದೇ ವಿನ್ಯಾಸಗಳಿಲ್ಲದ ಕಾಟನ್ ಸೀರೆಗಳನ್ನು ನೇಯಲು ರಾಜ್ಯ ಎಂಪೋರಿಯಂ ಅವರನ್ನು ಕೇಳಿಕೊಂಡಿತು. 2005 ರ ಹೊತ್ತಿಗೆ,  ರೂಪ್‌ಚಂದ್  ಸಂಪೂರ್ಣವಾಗಿ ಗಮ್ಚಾಗಳನ್ನು ನೇಯಲು ಆರಂಭಿಸಿದರು. ಬಲ: ಬಸನಾ ದೇಬನಾಥ್ ಎಲ್ಲಾ ಮನೆಕೆಲಸಗಳನ್ನು ಮಾಡುವುದರ ಜೊತೆಗೆ ತಮ್ಮ ಪತಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾರೆ

PHOTO • Rajdeep Bhowmik
PHOTO • Rajdeep Bhowmik

ಎಡ: ಕೈಮಗ್ಗ ಉದ್ದಿಮೆಯಲ್ಲಿ ಈಗ ಅನೇಕ ಸಮಸ್ಯೆಗಳಿರಬಹುದು, ಆದರೆ ಆ ವೃತ್ತಿಯನ್ನು ರೂಪ್‌ಚಂದ್  ಅವರಿಗೆ ಬಿಡಲು ಮನಸ್ಸಿಲ್ಲ. "ನಾನು ಎಂದಿಗೂ ದುರಾಶೆಯನ್ನು ನನ್ನ ಕುಶಲತೆಯ ಮುಂದೆ ಇಟ್ಟುನೋಡಿಲ್ಲ," ಎಂದು ಅವರು ಹೇಳುತ್ತಾರೆ. ಬಲ: ಸ್ಕೀನ್‌ಗಳನ್ನು ತಯಾರಿಸಲು ದಾರವನ್ನು ಸುತ್ತುತ್ತಿರುವ ರೂಪ್‌ಚಂದ್

ಮದುವೆಯಾದ ತಕ್ಷಣ ತಮ್ಮ ಪತ್ನಿ ಬಸನಾ ದೇಬನಾಥ್‌ರವರು ನೇಯ್ಗೆಯಲ್ಲಿ ಸಹಾಯ ಮಾಡಲು ಆರಂಭಿಸಿದ್ದನ್ನು ರೂಪ್‌ಚಂದ್ ನೆನಪಿಸಿಕೊಳ್ಳುತ್ತಾರೆ. "ಆ ಸಮಯದಲ್ಲಿ ನಮ್ಮಲ್ಲಿ ನಾಲ್ಕು ಮಗ್ಗಗಳಿದ್ದವು ಮತ್ತು ಅವರು ಇನ್ನೂ ನನ್ನ ಮಾವನಿಂದ ಕಲಿಯುತ್ತಿದ್ದರು," ಎಂದು ಇನ್ನೊಂದು ಕಡೆ ತಮ್ಮ ಪತಿ ಮಗ್ಗದ ಕೆಲಸ ಮಾಡುವ ಶಬ್ದವನ್ನೂ ಮೀರಿಸಿ ಜೋರಾಗಿ ಬಸನಾ ಅವರು ಹೇಳುತ್ತಾರೆ.

ಬಸನಾರ ದಿನಗಳು ರೂಪ್‌ಚಂದ್ ‌ಅವರಿಗಿಂತ ಹೆಚ್ಚು ದೀರ್ಘವಾಗಿರುತ್ತವೆ. ಅವರು ಬೇಗನೆ ಎದ್ದು, ಮನೆಕೆಲಸಗಳನ್ನು ಮಾಡಿ, ಮಧ್ಯಾಹ್ನದ ಊಟವನ್ನು ತಯಾರಿಸಿ ತಮ್ಮ ಪತಿಗೆ ನೂಲುಗಳೊಂದಿಗೆ ಸಹಾಯ ಮಾಡುತ್ತಾರೆ. ಸಂಜೆ ಮಾತ್ರ ಅವರಿಗೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಸಾಧ್ಯ. "ನೂಲನ್ನು ಸುತ್ತುವ ಮತ್ತು ಸ್ಕೀಯಿಂಗ್ ಮಾಡುವ ಎಲ್ಲಾ ಕೆಲಸಗಳನ್ನು ಅವಳೇ ಮಾಡುತ್ತಾಳೆ," ಎಂದು ರೂಪ್‌ಚಂದ್ ಹೆಮ್ಮೆಯಿಂದ ಹೇಳುತ್ತಾರೆ.

ರೂಪ್‌ಚಂದ್ ಮತ್ತು ಬಸನಾ ಅವರಿಗೆ ನಾಲ್ವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ ಮತ್ತು ಇಬ್ಬರು ಗಂಡುಮಕ್ಕಳು (ಒಬ್ಬ ಮೆಕ್ಯಾನಿಕ್ ಮತ್ತು ಇನ್ನೊಬ್ಬ ಆಭರಣ ವ್ಯಾಪಾರಿ) ಮನೆಯಿಂದ ತುಂಬಾ ದೂರದಲ್ಲಿ ವಾಸಿಸುತ್ತಿದ್ದಾರೆ. ಜನರು ಸಾಂಪ್ರದಾಯಿಕ ಕಲೆ ಮತ್ತು ಕರಕುಶಲತೆಯೊಂದಿಗಿನ ತಮ್ಮ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎಂದು ಕೇಳಿದಾಗ, ಈ ನುರಿತ ನೇಕಾರ, “ನಾನು ಸಹ ವಿಫಲನಾಗಿದ್ದೇನೆ. ನನ್ನ ಸ್ವಂತ ಮಕ್ಕಳನ್ನು ನಾನು ಏಕೆ ಪ್ರೋತ್ಸಾಹಿಸಬಾರದಿತ್ತು?” ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ.

*****

ಭಾರತದಾದ್ಯಂತ ಇರುವ ಶೇಕಡಾ 93.3 ರಷ್ಟು ಕೈಮಗ್ಗದ ಕಾರ್ಮಿಕರ ಮನೆಯ ಆದಾಯವು 10,000 ರುಪಾಯಿಗಿಂತ ಕಡಿಮೆಯಿದೆ. ಅಲ್ಲದೇ, ತ್ರಿಪುರಾದ ಶೇಕಡಾ 86.4 ರಷ್ಟು ಕೈಮಗ್ಗದ ಕಾರ್ಮಿಕರ ಕುಟುಂಬದ ಆದಾಯದ 5,000  ರುಪಾಯಿಗಿಂತ ಕಡಿಮೆಯಿದೆ ( ನಾಲ್ಕನೇ ಅಖಿಲ ಭಾರತ ಕೈಮಗ್ಗ ಜನಗಣತಿ, 2019-2020 ).

"ಈ ವೃತ್ತಿ ಇಲ್ಲಿ ನಿಧಾನವಾಗಿ ಸಾಯುತ್ತಿದೆ. ನಾವು ಅದನ್ನು ಸಂರಕ್ಷಿಸಲು ಏನೇನೂ ಮಾಡಿದರೂ ಸಾಕಾಗುತ್ತಿಲ್ಲ," ಎಂದು  ರೂಪ್‌ಚಂದ್ ಅವರ ನೆರೆಮನೆಯ ಅರುಣ್ ಭೌಮಿಕ್ ಹೇಳುತ್ತಾರೆ. ಅವರ ಈ ಅಭಿಪ್ರಾಯವನ್ನು ಗ್ರಾಮದ ಇನ್ನೊಬ್ಬ ಹಿರಿಯ ನಿವಾಸಿ ನಾನಿಗೋಪಾಲ್ ಭೌಮಿಕ್ ಬೆಂಬಲಿಸುತ್ತಾರೆ, "ಜನರಿಗೆ ಕಡಿಮೆ ಕೆಲಸ ಮಾಡಿ, ಹೆಚ್ಚು ಸಂಪಾದನೆ ಮಾಡಬೇಕು," ಎಂದು ಹೇಳುತ್ತಾ ನಿಟ್ಟುಸಿರು ಬಿಡುತ್ತಾರೆ. “ನೇಕಾರರು [ಯಾವಾಗಲೂ] ಗುಡಿಸಲು ಮತ್ತು ಮಣ್ಣಿನ ಮನೆಗಳಲ್ಲಿ ಬದುಕಿದವರು. ಯಾರು ಹಾಗೆ ಬದುಕಲು ಬಯಸುತ್ತಾರೆ?”  ರೂಪ್‌ಚಂದ್  ಎಂದು ಮಾತನ್ನು ಮುಂದುವರಿಸುತ್ತಾರೆ.

PHOTO • Deep Roy
PHOTO • Deep Roy

ಎಡ: ತಮ್ಮ ಮಣ್ಣಿನ ಮನೆಯ ಮುಂದೆ ರೂಪ್‌ಚಂದ್ ಮತ್ತು ಬಸನಾ ದೇಬನಾಥ್ . ಬಲ: ಬಿದಿರು ಮತ್ತು ಮಣ್ಣಿನಿಂದ ಮಾಡಿದ ಗುಡಿಸಲಿಗೆ ಟಿನ್‌ನ ಛಾವಣಿಯನ್ನು ಹಾಕಲಾಗಿದ್ದು, ರೂಪ್‌ಚಂದ್ ಅವರು ಇಲ್ಲಿಯೇ ಕೆಲಸ ಮಾಡುತ್ತಾರೆ

ಆದಾಯ ಮತ್ತು ಆರೋಗ್ಯ ಸಮಸ್ಯೆಗಳಂತ ದೀರ್ಘಕಾಲೀನ ಸವಾಲುಗಳು ನೇಕಾರರನ್ನು ಪೀಡಿಸುತ್ತವೆ. "ನನ್ನ ಹೆಂಡತಿ ಮತ್ತು ನಾನು ಪ್ರತಿ ವರ್ಷ ಮೆಡಿಕಲ್ ಬಿಲ್‌ಗಳಿಗಾಗಿ 50-60,000 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ‌," ಎಂದು  ರೂಪ್‌ಚಂದ್  ಹೇಳುತ್ತಾರೆ. ದಂಪತಿಗಳಿಗೆ ಉಸಿರಾಟದ ತೊಂದರೆ ಮತ್ತು ಹೃದಯದ ತೊಂದರೆಗಳಿದ್ದು, ವೃತ್ತಿಯ ಮೇಲೆ ಪರಿಣಾಮ ಬೀರುತ್ತವೆ.

ಈ ಕರಕುಶಲತೆಯನ್ನು ಸಂರಕ್ಷಿಸಲು ಸರ್ಕಾರವು ಕೆಲವು ಪ್ರಯತ್ನಗಳನ್ನು ಮಾಡಿದೆ. ಆದರೆ ಹಳ್ಳಿಗಳಲ್ಲಿ ವಾಸ ಮಾಡುವ  ರೂಪ್‌ಚಂದ್ ಮತ್ತು ಇತರರ ಬದುಕಿನಲ್ಲಿ ಇದು ಬದಲಾವಣೆಯನ್ನು ತಂದಿಲ್ಲ. "ನಾನು ದೀನ್ ದಯಾಳ್ ಹತ್ಖರ್ಗಾ ಪ್ರೋತ್ಸಾಹನ್ ಯೋಜನೆ (2000 ರಲ್ಲಿ ಪ್ರಾರಂಭಿಸಲಾದ ಕೇಂದ್ರ ಸರ್ಕಾರದ ಯೋಜನೆ) ಅಡಿಯಲ್ಲಿ 300 ನೇಕಾರರಿಗೆ ತರಬೇತಿ ನೀಡಿದ್ದೇನೆ," ಎಂದು  ರೂಪ್‌ಚಂದ್  ಹೇಳುತ್ತಾರೆ. "ತರಬೇತಿ ಪಡೆಯಲು ಜನ ಬರುವುದು ಕಷ್ಟ," ಎಂದು ಅವರು ಮಾತನ್ನು ಮುಂದುವರಿಸುತ್ತಾರೆ. "ಜನರು ಹೆಚ್ಚಾಗಿ ಸ್ಟೈಫಂಡ್‌ ಹಣ ಸಿಕ್ಕಿದರೆ ಬರುತ್ತಾರೆ. ಈ ರೀತಿ ನುರಿತ ನೇಕಾರರನ್ನು ತಯಾರು ಮಾಡಲು ಸಾಧ್ಯವಿಲ್ಲ," ಎಂದು ಅವರು ಹೇಳುತ್ತಾರೆ. ಕೈಮಗ್ಗದ ಸಂಗ್ರಹಣೆಯ ಕಳಪೆ ನಿರ್ವಹಣೆ, ಗೆದ್ದಲು ಮತ್ತು ಇಲಿಗಳಿಂದ ನೂಲು ನಾಶದಿಂದಾಗಿ ವ್ಯವಹಾರದ ಪರಿಸ್ಥಿತಿ ಹದಗೆಟ್ಟಿದೆ," ಎಂದು  ರೂಪ್‌ಚಂದ್ ಹೇಳುತ್ತಾರೆ.

ಕೈಮಗ್ಗ ರಫ್ತು 2012 ಮತ್ತು 2022 ರ ನಡುವೆ ಸುಮಾರು 3000 ಕೋಟಿಗಳಿಂದ ಸುಮಾರು 1500 ಕೋಟಿ ರುಪಾಯಿಗೆ ಸುಮಾರು ಶೇಕಡಾ 50 ರಷ್ಟು ಕಡಿಮೆಯಾಗಿದೆ ( ಕೈಮಗ್ಗ ರಫ್ತು ಉತ್ತೇಜನಾ ಮಂಡಳಿ ) ಮತ್ತು ಸಚಿವಾಲಯದ ನಿಧಿ ಕೂಡ ಕಡಿಮೆಯಾಗಿದೆ.

ರಾಜ್ಯದಲ್ಲಿ ಕೈಮಗ್ಗದ ಭವಿಷ್ಯವು ಮಂಕಾಗಿದೆ. "ಇದನ್ನು ಸರಿಪಡಿಸಲು ಸಾಧ್ಯವಿಲ್ಲದ ಸ್ಥಿತಿಯನ್ನೂ ಮೀರಿದೆ ಎಂದು ನಾನು ಭಾವಿಸುತ್ತೇನೆ," ರೂಪ್‌ಚಂದ್ ಹೇಳುತ್ತಾರೆ. ಒಂದು ಕ್ಷಣ ಸುಮ್ಮನಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎನ್ನುತ್ತಾರೆ. "ಮಹಿಳೆಯರು ಹೆಚ್ಚುಹೆಚ್ಚು ಈ ಕೆಲಸದಲ್ಲಿ ತೊಡಗಿಕೊಂಡರೆ ಸಹಾಯವಾಗುತ್ತದೆ. ಸಿಧೈ ಮೋಹನ್‌ಪುರದಲ್ಲಿ [ಪಶ್ಚಿಮ ತ್ರಿಪುರಾದ ವಾಣಿಜ್ಯ ಕೈಮಗ್ಗ ಉತ್ಪಾದನಾ ಕೇಂದ್ರ] ಸಂಪೂರ್ಣವಾಗಿ ಮಹಿಳೆಯರಿಂದ ನಡೆಸಲ್ಪಡುವ ಪ್ರಚಂಡ ಉದ್ಯೋಗಿಗಳ ಗುಂಪನ್ನು ನಾನು ನೋಡಿದ್ದೇನೆ," ಎಂದು ಅವರು ಹೇಳುತ್ತಾರೆ. ಪರಿಸ್ಥಿತಿಯನ್ನು ಸರಿಪಡಿಸಲು ಇರುವ ಒಂದು ಮಾರ್ಗವೆಂದರೆ, ಸದ್ಯ ಇರುವ ನೇಕಾರರಿಗೆ ನಿಗದಿತ ದಿನಗೂಲಿ ನೀಡುವುದು.

ನೀವು ಎಂದಾದರೂ ಈ ವೃತ್ತಿಯನ್ನು ಬಿಡಲು ಯೋಚಿಸಿದ್ದೀರಾ ಎಂದು ಕೇಳಿದಾಗ,  ರೂಪ್‌ಚಂದ್  ನಗುತ್ತಾರೆ. "ಎಂದಿಗೂ ಇಲ್ಲ," ಅವರು ಹೆಮ್ಮೆಯಿಂದ ಹೇಳುತ್ತಾರೆ, "ನಾನು ಎಂದಿಗೂ ದುರಾಶೆಯನ್ನು ನನ್ನ ಕುಶಲತೆಯ ಮುಂದೆ ಇಟ್ಟು ನೋಡಿಲ್ಲ," ಎನ್ನುತ್ತಾರೆ. ಮಗ್ಗದ ಮೇಲೆ ಕೈ ಇಡುವಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು. "ಇವಳು ನನ್ನನ್ನು ಬಿಟ್ಟು ಹೋಗಬಹುದು, ಆದರೆ ನಾನು ಎಂದಿಗೂ ಕೈ ಬಿಡುವುದಿಲ್ಲ."

ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ‌ಅಡಿಯಲ್ಲಿ ಮಾಡಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Rajdeep Bhowmik

Rajdeep Bhowmik is a Ph.D student at IISER, Pune. He is a PARI-MMF fellow for 2023.

Other stories by Rajdeep Bhowmik
Deep Roy

Deep Roy is a Post Graduate Resident Doctor at VMCC and Safdarjung Hospital, New Delhi. He is a PARI-MMF fellow for 2023.

Other stories by Deep Roy
Photographs : Rajdeep Bhowmik

Rajdeep Bhowmik is a Ph.D student at IISER, Pune. He is a PARI-MMF fellow for 2023.

Other stories by Rajdeep Bhowmik
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad