ಅಶೋಕ್ ಜಾತವ್ ಓರ್ವ ನಡೆದಾಡುವ ಹೆಣ.

45 ವರ್ಷ ಪ್ರಾಯದ ಇವರು ಎಲ್ಲಾ ಮನುಷ್ಯರಂತೆ ಪ್ರತಿದಿನ ಬೆಳಿಗ್ಗೆ ಏಳುತ್ತಾರೆ. ಇತರ ಕೂಲಿ ಕಾರ್ಮಿಕರಂತೆ ಬೇರೆಯವರ ಹೊಲಕ್ಕೆ ಹೋಗಿ ದುಡಿಯುತ್ತಾರೆ. ಇತರ ಕೆಲಸಗಾರರಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗುತ್ತಾರೆ. ಇವರಿಗೂ ಉಳಿದವರಿಗೂ ಇರುವ ಒಂದೇ ಒಂದು ವ್ಯತ್ಯಾಸವೆಂದರೆ: ಅಧಿಕೃತವಾಗಿ ಅಶೋಕ್ ಮರಣಹೊಂದಿದ್ದಾರೆ.

2023ರ ಜುಲೈಯಲ್ಲಿ, ಖೋರ್ಘರ್ ನಿವಾಸಿ ಅಶೋಕ್‌ರವರಿಗೆ ರೈತರಿಗಾಗಿ ಕೇಂದ್ರ ಸರ್ಕಾರ 2019 ರಲ್ಲಿ ಘೋಷಿಸಿದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ವರ್ಷಕ್ಕೆ ಸಿಗುವ ಕನಿಷ್ಠ ಆರ್ಥಿಕ ಬೆಂಬಲ 6,000 ರುಪಾಯಿ ಸತತವಾಗಿ ಎರಡು ವರ್ಷಗಳಿಂದ ಸಿಕ್ಕಿಲ್ಲ.

ಮೊದಲೆರಡು ವರ್ಷಗಳವರೆಗೆ ಹಣ ನಿಯಮಿತವಾಗಿ ಖಾತೆಗೆ ಜಮೆಯಾಗುತ್ತಿತು. ನಂತರ ಇದ್ದಕ್ಕಿದ್ದಂತೆ ನಿಂತುಹೋಯಿತು. ಏನೋ ಸಮಸ್ಯೆಯಾಗಿದೆ, ವ್ಯವಸ್ಥೆಯೇ ಇದನ್ನು ಸ್ವತಃ ಸರಿಪಡಿಸಬಹುದು ಎಂದು ಅವರು ಭಾವಿಸಿದ್ದರು. ಅಶೋಕ್ ಅಂದುಕೊಂಡದ್ದು ಸರಿಯಾಗಿತ್ತು. ಅಲ್ಲೊಂದು ಸಮಸ್ಯೆ ಇತ್ತು. ಆದರೆ ಅದು ಇವರು ಅಂದುಕೊಂಡಿದ್ದ ಸಮಸ್ಯೆಯಾಗಿರಲಿಲ್ಲ.

ಹಣ ಯಾಕೆ ಸಿಗುತ್ತಿಲ್ಲ ಎಂದು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಹೋದಾಗ, ಕಂಪ್ಯೂಟರ್‌ನ ಹಿಂದೆ ಕುಳಿತಿದ್ದ ವ್ಯಕ್ತಿ ಡೇಟಾವನ್ನು ನೋಡಿ, ನೀವು 2021ರಲ್ಲಿ ಕೋವಿಡ್ -19 ಸಮಯದಲ್ಲಿ ಮೃತಪಟ್ಟಿದ್ದೀರಿ ಎಂದು ಶಾಂತವಾಗಿಯೇ ಹೇಳಿದ. ಇದಕ್ಕೆ ನಗಬೇಕೋ ಇಲ್ಲ ಅಳಬೇಕೋ ಎಂದು ತಿಳಿಯದ ಅಶೋಕ್‌, “ಮುಜೆ ಸಮಜ್ ನಹಿ ಅಯಾ ಇಸ್ಪೇ ಕ್ಯಾ ಬೋಲು [ನನಗೆ ಹೇಳಬೇಕು ಎಂದೇ ತಿಳಿಯಲಿಲ್ಲ],” ಎಂದು ಹೇಳುತ್ತಾರೆ.

Ashok Jatav, a farm labourer from Khorghar, Madhya Pradesh was falsely declared dead and stopped receiving the Pradhan Mantri Kisan Samman Nidhi . Multiple attempts at rectifying the error have all been futile
PHOTO • Parth M.N.

ಮಧ್ಯಪ್ರದೇಶದ ಖೋರ್ಘರ್‌ನ ಕೃಷಿ ಕಾರ್ಮಿಕ ಅಶೋಕ್ ಜಾತವ್ ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಲಾಗಿದೆ ಮತ್ತು ಅವರಿಗೆ ಬರುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ನಿಲ್ಲಿಸಲಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಹಲವು ಪ್ರಯತ್ನಗಳನ್ನು ಮಾಡಿ ಕೈಚೆಲ್ಲಿ ಕುಳಿತುಕೊಳ್ಳಬೇಕಾಯ್ತು

ಅಶೋಕ್ ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಜಾತವ್ ಸಮುದಾಯಕ್ಕೆ ಸೇರಿದ ಕಾರ್ಮಿಕ. ಇವರು ಇತರರ ಕೃಷಿ ಭೂಮಿಯಲ್ಲಿ ದುಡಿದು ದಿನಕ್ಕೆ 350 ರುಪಾಯಿ ಸಂಪಾದಿಸಿ ಜೀವನ ನಡೆಸುತ್ತಿದ್ದಾರೆ. ಅಶೋಕ್ ಅವರಿಗೆ ಒಂದು ಎಕರೆ ಸ್ವಂತ ಜಮೀನಿದೆ. ಅಲ್ಲಿ ಅವರು ಮನೆ ಬಳಕೆಗೆ ಬೇಕಾದ ಆಹಾರ ಬೆಳೆಗಳನ್ನು ಬೆಳೆಯುತ್ತಾರೆ. ಅವರ ಪತ್ನಿ ಲೀಲಾ ಕೂಡ ಓರ್ವ ಕೃಷಿ ಕಾರ್ಮಿಕೆ.

"ನಾವು ಹಗಲಿನಲ್ಲಿ ದುಡಿದರೆ ಮಾತ್ರ ರಾತ್ರಿ ಊಟ ಮಾಡಬಹುದು," ಎಂದು ಶಿವಪುರಿ ಜಿಲ್ಲೆಯ ತಮ್ಮ ಹಳ್ಳಿಯಲ್ಲಿರುವ ಕೃಷಿಭೂಮಿಯಲ್ಲಿ ಸೋಯಾಬೀನ್ ಕಟಾವು ಮಾಡುತ್ತಿದ್ದ ಅಶೋಕ್‌, ತಮ್ಮ ವಿರಾಮದ ಸಮಯದಲ್ಲಿ ಹೇಳುತ್ತಾರೆ. “ವರ್ಷಕ್ಕೆ 6,000 ರುಪಾಯಿ ತುಂಬಾ ದೊಡ್ಡ ಮೊತ್ತ ಎಂದು ಅನಿಸದಿರಬಹುದು. ಆದರೆ ನಮಗೆ ಅದೇ ದೊಡ್ಡದು. ನನಗೆ 15 ವರ್ಷದ ಒಬ್ಬ ಮಗನಿದ್ದಾನೆ. ಅವನು ಶಾಲೆಗೆ ಹೋಗುತ್ತಿದ್ದಾನೆ. ಮುಂದೆ ಓದಬೇಕೆಂದಿದ್ದಾನೆ. ಎಲ್ಲದಕ್ಕಿಂತ ಹೆಚ್ಚು, ನನಗೆ ಸಾಯಬೇಕೆಂಬ ಆಸೆಯಿಲ್ಲ,” ಎನ್ನುತ್ತಾರೆ ಅವರು.

ಅಶೋಕ್ ತಮ್ಮ ಮರಣ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ಸ್ವತಃ ಶಿವಪುರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಗ್ರಾಮದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಗ್ರಾಮ ಪಂಚಾಯಿತಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆದಷ್ಟು ಬೇಗ ರದ್ದಾಗಬಹುದು ಅವರು ಅಂದುಕೊಂಡಿದ್ದರು. ಸಾರ್ವಜನಿಕ ಸಭೆಯ ನಂತರ ಪಂಚಾಯತ್ ಅಧಿಕಾರಿಗಳು ಅವರನ್ನು ಭೇಟಿ ಮಾಡಿ, ಜೀವಂತವಾಗಿರುವುದನ್ನು ಸಾಬೀತುಪಡಿಸುವಂತೆ ಕೇಳಿದ್ದರು. "ನಾನೇ ಅವರ ಮುಂದೆ ನಿಂತಿದ್ದೆ. ಇದಕ್ಕಿಂತ ಬೇರೆ ಪುರಾವೆ ಅವರಿಗೆ ಏನು ಬೇಕು?" ಅವರು ದಿಗ್ಭ್ರಮೆಯಿಂದ ಹೇಳುತ್ತಾರೆ.

ಈ ಅಸಹಜ ಮತ್ತು ಸಂಕಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದು ಇವರೊಬ್ಬರೇ ಅಲ್ಲ.

Ashok was asked by the officials to prove that he is alive. ‘I stood in front of them,' he says, bewildered , 'what more proof do they need?’
PHOTO • Parth M.N.

ತಾವು ಬದುಕಿರುವುದನ್ನು ಸಾಬೀತುಪಡಿಸುವಂತೆ ಅಶೋಕ್‌ ಅವರಿಗೆ ಅಧಿಕಾರಿಗಳು ಹೇಳಿದ್ದಾರೆ. ʼನಾನೇ ಅವರ ಮುಂದೆ ನಿಂತಿದ್ದೆ. ಇದಕ್ಕಿಂತ ಬೇರೆ ಪುರಾವೆ ಅವರಿಗೆ ಏನು ಬೇಕು?ʼ ಅವರು ದಿಗ್ಭ್ರಮೆಯಿಂದ ಹೇಳುತ್ತಾರೆ

2019 ಮತ್ತು 2022ರ ನಡುವೆ, ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ನಡುವಿನ ಮಧ್ಯವರ್ತಿಯಾಗಿರುವ ಸ್ಥಳೀಯ ಸಂಸ್ಥೆ ಬ್ಲಾಕ್ ಪಂಚಾಯತ್‌ನ ಸಿಇಒ ಮತ್ತು ಕಂಪ್ಯೂಟರ್ ಆಪರೇಟರ್ ಶಿವಪುರಿ ಜಿಲ್ಲೆಯ 12-15 ಹಳ್ಳಿಗಳ 26 ಜನರನ್ನು ದಾಖಲೆಗಳಲ್ಲಿ ಕೊಂದು ಈ ಹಗರಣವನ್ನು ಮಾಡಿದ್ದಾರೆ.

ಈ ವಂಚಕರು ಮುಖ್ಯಮಂತ್ರಿಗಳ ಸಂಬಲ್ ಯೋಜನೆಯ ಅಡಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪುವ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಸಿಗುವ 4 ಲಕ್ಷ ರುಪಾಯಿ ಪರಿಹಾರದ ಹಣವನ್ನು 26 ಮಂದಿಯ ಹೆಸರಿನಲ್ಲಿ ಸ್ವಾಹಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಸುಮಾರು 1 ಕೋಟಿ ರುಪಾಯಿ ಕ್ಲೈಮ್‌ ಮಾಡಿ ನುಂಗಿದ್ದಾರೆ. ಪೊಲೀಸರು ಇದಕ್ಕೆ ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ವಂಚನೆ ಮತ್ತು ಫೋರ್ಜರಿಗೆ ಸಂಬಂಧಿಸಿದ ಸೆಕ್ಷನ್ 420, 467, 468 ಮತ್ತು 409 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

"ನಾವು ಎಫ್‌ಐಆರ್‌ನಲ್ಲಿ ಗಗನ್ ವಾಜಪೇಯಿ, ರಾಜೀವ್ ಮಿಶ್ರಾ, ಶೈಲೇಂದ್ರ ಪರ್ಮಾ, ಸಾಧನಾ ಚೌಹಾಣ್ ಮತ್ತು ಲತಾ ದುಬೆ ಎಂಬವರ ಹೆಸರನ್ನು ಉಲ್ಲೇಖಿಸಿದ್ದೇವೆ. ಮುಂದಿನ ತನಿಖೆಗಾಗಿ ಹೆಚ್ಚಿನ ಲೀಡ್‌ ಹುಡುಕುತ್ತಿದ್ದೇವೆ," ಎಂದು ಶಿವಪುರಿ ಪೊಲೀಸ್ ಠಾಣೆಯ ಟೌನ್ ಇನ್‌ಸ್ಪೆಕ್ಟರ್ ವಿನಯ್ ಯಾದವ್ ಹೇಳುತ್ತಾರೆ.

ಹೆಚ್ಚಿನ ತನಿಖೆ ಮಾಡಿದರೆ ಶಿವಪುರಿಯಲ್ಲಿ ಇನ್ನೂ ಹೆಚ್ಚು ಜನ ಸತ್ತಿರುವುದು ಬಯಲಾಗಬಹುದು, ನ್ಯಾಯಯುತ ತನಿಖೆ ನಡೆದಲ್ಲಿ ಇನ್ನೂ ಅನೇಕ ವಂಚಕರು ಪೊಲೀಸ್‌ ಬಲೆಗೆ ಬೀಳುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಬಯಸದ ಸ್ಥಳೀಯ ಪತ್ರಕರ್ತರೊಬ್ಬರು ಹೇಳುತ್ತಾರೆ.

ಈ ಮಧ್ಯೆ, ಮೃತರು ಎಂದು ಘೋಷಿಸಲ್ಟಪಟ್ಟವರು ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗಿದೆ.

Dataram Jatav, another victim of the scam, says, ‘when you declare me dead, I lose access to all credit systems available to me’. In December 2022, the farmer from Khorgar could not get a loan from the bank to buy a tractor
PHOTO • Parth M.N.

ಹಗರಣದ ಇನ್ನೊಬ್ಬ ಬಲಿಪಶು ದಾತಾರಾಮ್ ಜಾತವ್, 'ನೀವು ನನ್ನನ್ನು ಮೃತವ್ಯಕ್ತಿ ಎಂದು ಘೋಷಿಸಿದರೆ, ನನಗೆ ಸಿಗುವ ಎಲ್ಲಾ ಕ್ರೆಡಿಟ್ ವ್ಯವಸ್ಥೆಗಳಿಂದ, ಸೌಲಭ್ಯಗಳಿಂದ ವಂಚಿತನಾಗುತ್ತೇನೆ. ಡಿಸೆಂಬರ್ 2022 ರಲ್ಲಿ, ಖೋರ್ಘರ್‌ನ ಈ ರೈತನಿಗೆ ಟ್ರ್ಯಾಕ್ಟರ್ ಖರೀದಿಸಲು ಬ್ಯಾಂಕ್‌ನವರು ಸಾಲ ನೀಡಿರಲಿಲ್ಲ

ಇದೇ ಕಾರಣಕ್ಕೆ ಖೋರ್ಘರ್‌ನಲ್ಲಿ ಐದು ಎಕರೆ ಜಮೀನು ಹೊಂದಿರುವ ರೈತ ದಾತಾರಾಮ್ ಜಾತವ್ (45) ಅವರಿಗೆ ಟ್ರ್ಯಾಕ್ಟರ್ ಖರೀದಿಸಲು ಸಾಲ ಕೊಡುವುದಕ್ಕೆ ಬ್ಯಾಂಕ್ ನಿರಾಕರಿಸಿತು. ಡಿಸೆಂಬರ್ 2022 ರಲ್ಲಿ ಟ್ರಾಕ್ಟರ್ ಖರೀದಿಸಲು ಅವರಿಗೆ ಹಣದ ಅವಶ್ಯಕತೆಯಿತ್ತು, ಅದಕ್ಕಾಗಿ ಅವರು ನೇರವಾಗಿ ಬ್ಯಾಂಕ್‌ಗೆ ಹೋದರು. "ನೀವು ಸತ್ತಿರುವುದರಿಂದ ಸಾಲ ಸಿಗುವುದು ಕಷ್ಟ ಎಂದು ಹೇಳಿದರು. ಇದ್ಯಾಕೆ ಹೀಗೆ ಎಂದು ಯೋಚಿಸುವಾಗ ಆಶ್ಚರ್ಯವಾಗುತ್ತದೆ," ಎಂದು ನಗುತ್ತಾ ಹೇಳುತ್ತಾರೆ ದಾತಾರಾಮ್.

ಒಬ್ಬ ರೈತನಿಗೆ ಸರ್ಕಾರದ ಸವಲತ್ತುಗಳು, ಯೋಜನೆಗಳು ಮತ್ತು ಸಬ್ಸಿಡಿ ಸಾಲಗಳು ಜೀವನಾಡಿ ಇದ್ದಂತೆ ಎನ್ನುವ ದಾತಾರಾಮ್, "ನನ್ನ ಹೆಸರಿನಲ್ಲಿ ದೊಡ್ಡ ಸಾಲವಿದೆ,” ಎಂದು ಸಾಲದ ಮೊತ್ತವನ್ನು ಉಲ್ಲೇಖಿಸದೆ ಹೇಳುತ್ತಾರೆ. “ನೀವು ನನ್ನನ್ನು ಮೃತಪಟ್ಟವರು ಎಂದು ಘೋಷಿಸಿದರೆ, ನನಗೆ ಸಿಗುವ ಎಲ್ಲಾ ಕ್ರೆಡಿಟ್ ಸಿಸ್ಟಮ್‌ಗಳಿಂದಲೂ ನಾನು ವಂಚಿತನಾಗುತ್ತೇನೆ. ನನ್ನ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಬಂಡವಾಳವನ್ನು ಎಲ್ಲಿಂದ ತರುವುದು? ನಾನು ಬೆಳೆ ಸಾಲ ಪಡೆಯುವುದು ಹೇಗೆ? ಖಾಸಗಿ ಲೇವಾದೇವಿಗಾರರ ಮನೆ ಬಾಗಿಲು ತಟ್ಟದ ಹೊರತು ಬೇರೆ ದಾರಿಯಿಲ್ಲ,” ಎಂದು ನೋವಿನಿಂದ ಹೇಳುತ್ತಾರೆ.

ಖಾಸಗಿ ಸಾಲ ನೀಡುವವರು ಅಥವಾ ಲೋನ್‌ ಶಾರ್ಕ್‌ಗಳಿಗೆ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ನೀವು ಸತ್ತಿದ್ದರೂ ಬದುಕಿದ್ದರೂ ಅವರಿಗೆ ಬೇಕಿಲ್ಲ. ಆದರೆ ಅವರಿಗೆ ತಮ್ಮ ಬಡ್ಡಿಯ ಹಣದ ಬಗ್ಗೆ ಮಾತ್ರ ಕಾಳಜಿ. ಈ ಬಡ್ಡಿಯೂ ತಿಂಗಳಿಗೆ ಶೇಕಡಾ 4-8 ಇರುತ್ತದೆ. ಒಮ್ಮೆ ರೈತರು ಲೋನ್‌ ಶಾರ್ಕ್‌ಗಳಿಂದ ಸಾಲ ಪಡೆದರೆ, ಅವರು ಮುಂದಿನ ವರ್ಷಗಳಲ್ಲಿ ಎಷ್ಟೇ ಬಡ್ಡಿ ಕಟ್ಟಿದರೂ ಅಸಲು ಮೊತ್ತವು ಮಾತ್ರ ಹಾಗೆಯೇ ಇರುತ್ತದೆ. ಆದ್ದರಿಂದ, ಒಂದು ಸಣ್ಣ ಸಾಲ ಕೂಡ ಸಾಲಗಾರನ ಕುತ್ತಿಗೆಗೆ ಉರುಳಾಗಿ ಪರಿಣಮಿಸುತ್ತದೆ.

"ನಾನು ತುಂಬಾ ತೊಂದರೆಯಲ್ಲಿದ್ದೇನೆ. ನನಗೆ ಬಿಎಡ್ ಮತ್ತು ಬಿಎ ಓದುತ್ತಿರುವ ಇಬ್ಬರು ಪುತ್ರರಿದ್ದಾರೆ. ನಾನು ಅವರಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಆದರೆ ಈ ವಂಚನೆಯಿಂದಾಗಿ, ನಾನು ಒಂದು ತಪ್ಪು ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಅದು ನನ್ನ ಇಡೀ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ,” ಎಂದು ದಾತಾರಾಮ್ ಹೇಳುತ್ತಾರೆ.

Left: Ramkumari with her grandchild in their house in Khorghar and (right) outside her home. Her son Hemant was a victim of the fraud. While they did not suffer financial losses, the rumour mills in the village claimed they had declared Hemant dead on purpose to receive the compensation. ' I was disturbed by this gossip,' says Ramkumari, 'I can’t even think of doing that to my own son'
PHOTO • Parth M.N.
Left: Ramkumari with her grandchild in their house in Khorghar and (right) outside her home. Her son Hemant was a victim of the fraud. While they did not suffer financial losses, the rumour mills in the village claimed they had declared Hemant dead on purpose to receive the compensation. ' I was disturbed by this gossip,' says Ramkumari, 'I can’t even think of doing that to my own son'
PHOTO • Parth M.N.

ಎಡ: ತಮ್ಮ ಮೊಮ್ಮಗನೊಂದಿಗೆ ಖೋರ್ಘರ್‌ನ ಮನೆಯಲ್ಲಿರುವ ರಾಮಕುಮಾರಿಯವರು ಮತ್ತು (ಬಲ) ತನ್ನ ಮನೆಯ ಹೊರಗೆ. ಅವರ ಮಗ ಹೇಮಂತ್ ವಂಚನೆಗೊಳಗಾಗಿದ್ದಾರೆ. ಅವರು ಆರ್ಥಿಕ ನಷ್ಟವನ್ನು ಅನುಭವಿಸದಿದ್ದರೂ ಸಹ, ಪರಿಹಾರದ ಹಣದ ಆಸೆಗಾಗಿ ತಮ್ಮನ್ನು ಯಾವು ಉದ್ದೇಶಪೂರ್ವಕವಾಗಿ ಸತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂಬ ವದಂತಿ ಹಳ್ಳಿಯ ತುಂಬಾ ಹರಡಿದೆ. 'ಈ ಗಾಸಿಪ್‌ನಿಂದ ನಾನು ವಿಚಲಿತಳಾಗಿದ್ದೇನೆ. ನನ್ನ ಸ್ವಂತ ಮಗನಿಗೆ ಹಾಗೆ ಮಾಡುವುದನ್ನು ನನಗೆ ಯೋಚಿಸಲು ಸಾಧ್ಯವಿದಿಲ್ಲ,ʼ ಎಂದು ರಾಮಕುಮಾರಿಯವರು ಹೇಳುತ್ತಾರೆ

45ರ ಹರೆಯದ ರಾಮಕುಮಾರಿ ರಾವತ್‌ ಅವರ ಮೇಲೆ ಈ ಹಗರಣ ಮಾಡಿರುವ ಪರಿಣಾಮಗಳು ವಿಭಿನ್ನವಾಗಿವೆ. ಅವರ ಮಗ ಹೇಮಂತ್ (25) ವಂಚನೆಗೆ ಒಳಗಾದವರಲ್ಲಿ ಒಬ್ಬರು. ಅದೃಷ್ಟವಶಾತ್, ಅವರ 10 ಎಕರೆ ಕೃಷಿ ಭೂಮಿ ಅವರ ತಂದೆಯ ಹೆಸರಿನಲ್ಲಿದೆ, ಆದ್ದರಿಂದ ಅವರ ಆರ್ಥಿಕ ಸ್ಥಿತಿಯ ಮೇಲೆ ಯಾವುದೇ ದುಷ್ಪರಿಣಾಮಗಳಾಗಿಲ್ಲ.

"ಆದರೆ ಜನರು ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಮಾತನಾಡಲು ಶುರುಮಾಡಿದರು," ಎಂದು ಖೋರ್ಘರ್‌ನಲ್ಲಿರುವ ತಮ್ಮ ಮನೆಯ ವರಾಂಡಾದಲ್ಲಿ ಮೊಮ್ಮಗ ಮಲಗಿರುವ ತೊಟ್ಟಿಲನ್ನು ತೂಗುತ್ತಾ ರಾಮಕುಮಾರಿ ಹೇಳುತ್ತಾರೆ. “ಈ ಗ್ರಾಮದ ಜನರು, ನಾವು ನಮ್ಮ ಮಗನನ್ನು ಉದ್ದೇಶಪೂರ್ವಕವಾಗಿ 4 ಲಕ್ಷ ರುಪಾಯಿಗಾಗಿ ದಾಖಲೆಗಳ ಮೂಲಕ ಕೊಂದಿದ್ದೇವೆ ಎಂದು ಅನುಮಾನ ಪಡುತ್ತಿದ್ದಾರೆ. ಈ ಗಾಸಿಪ್‌ನಿಂದ ನಾನು ಆತಂಕಗೊಂಡಿದ್ದೇನೆ. ನನ್ನ ಸ್ವಂತ ಮಗನಿಗೆ ಹಾಗೆ ಮಾಡಲು ನನಗೆ ಯೋಚನೆಯಲ್ಲೂ ಸಾಧ್ಯವಿಲ್ಲ,” ಎಂದು ಅವರು ನೋವಿನಿಂದ ಹೇಳುತ್ತಾರೆ.

ವಾರಗಟ್ಟಲೆ ಇಂತಹ ಅಸಹ್ಯಕರ ವದಂತಿಗಳನ್ನು ಎದುರಿಸಲು ಹೆಣಗಾಡುತ್ತಿರುವ ರಾಮಕುಮಾರಿಯವರ ಮಾನಸಿಕ ನೆಮ್ಮದಿ ಸಂಪೂರ್ಣ ಹದಗೆಟ್ಟಿದೆ. "ನಾನು ಪ್ರಕ್ಷುಬ್ಧಳಾಗಿ ಹೋಗಿದ್ದೆ, ಹುಚ್ಚಿಯಾಗಿದ್ದೆ. ಇದನ್ನು ನಾವು ಹೇಗೆ ಎದುರಿಸಬಹುದು, ಜನರ ಬಾಯಿಯನ್ನು ಹೇಗೆ ಮುಚ್ಚುವುದು ಎಂದು ಗೊತ್ತಿಲ್ಲದೆ ಆತಂಕಕ್ಕೆ ಒಳಗಾಗುತ್ತಿದ್ದೆ" ಎಂದು ಅವರು ನೋವು ತೋಡಿಕೊಳ್ಳುತ್ತಾರೆ.

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ರಾಮಕುಮಾರಿ ಮತ್ತು ಹೇಮಂತ್ ಅವರು ಈ ಸಮಸ್ಯೆಯನ್ನು ಪರಿಶೀಲಿಸುವಂತೆ ಲಿಖಿತ ಮನವಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದರು. "ನಾನು ಜೀವಂತವಾಗಿದ್ದೇನೆ ಎಂದು ಅವರಿಗೆ ಹೇಳಿದೆ," ಎಂದು ಹೇಮಂತ್ ನಗುತ್ತಾ ಹೇಳುತ್ತಾರೆ. “ಆ ರೀತಿಯ ಅಪ್ಲಿಕೇಶನ್‌ನೊಂದಿಗೆ ಅವರ ಕಚೇರಿಗೆ ಹೋಗುವುದು ತುಂಬಾ ವಿಚಿತ್ರ. ಆದರೆ ನಾವು ನಮ್ಮ ಕೈಲಾದಷ್ಟು ಮಾಡಿದ್ದೇವೆ. ಇದಕ್ಕಿಂತ ಹೆಚ್ಚು ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯ? ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ನಮಗೆ ತಿಳಿದಿದೆ. ನಮ್ಮ ಆತ್ಮಸಾಕ್ಷಿ ಶುದ್ಧವಾಗಿದೆ,” ಎಂದು ಅವರು ಹೇಳುತ್ತಾರೆ.

ಅಶೋಕ್ ಕೂಡ ತಾವು ಬದುಕಿದ್ದೇವೆ ಎಂದು ಸಾಬೀತುಪಡಿಸುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ದಿನಗೂಲಿ ಕಾರ್ಮಿಕನಾಗಿ ಕೆಲಸ ಹುಡುಕುವುದು, ಹೊಟ್ಟೆ ತುಂಬಿಸಿಕೊಳ್ಳುವುದೇ ಅವರಿಗೆ ದೊಡ್ಡದಾಗಿದೆ. "ಇದು ಸುಗ್ಗಿಯ ಕಾಲ, ಆದ್ದರಿಂದ ದಿನಾ ಕೆಲಸ ಸಿಗುತ್ತದೆ. ಬೇರೆ ದಿನಗಳಲ್ಲಿ ಹೀಗೆ ಕೆಲಸ ಸಿಗುವುದಿಲ್ಲ. ಆಗ ನಾನು ಕೆಲಸ ಹುಡುಕಿಕೊಂಡು ನಗರದ ಹತ್ತಿರ ಹೋಗಬೇಕು,” ಎಂದು ಅವರು ಹೇಳುತ್ತಾರೆ.

ಆಗೊಮ್ಮೆ ಈಗೊಮ್ಮೆ, ಸಾಧ್ಯವಾದಾಗಲೆಲ್ಲಾ ತಮ್ಮ ಅರ್ಜಿಯ ಫಾಲೋಅಪ್ ಮಾಡುತ್ತಾರೆ. ಮುಖ್ಯಮಂತ್ರಿಗಳ ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿ ಸೋತುಹೋಗಿದ್ದಾರೆ. ಆದರೆ ಸರ್ಕಾರಿ ಕಚೇರಿಗಳಿಗೆ ಅಲೆಯಲು ಮತ್ತು ದಿನದ ಸಂಬಳ ಕಳೆದುಕೊಳ್ಳಲು ಇವರಿಗೆ ಸಾಧ್ಯವಿಲ್ಲ. "ಅಬ್ ಜಬ್ ವೋ ಠೀಕ್ ಹೋಗಾ ತಬ್ ಹೋಗಾ [ಸಮಸ್ಯೆ ಸರಿಯಾದಾಗ ಸರಿಯಾಗುತ್ತದೆ]," ಎಂದು ಅಸಮಾಧಾನದಿಂದ, ಬೇಸರದಿಂದ ಹೇಳುವ ಇವರು ಹಿಂದಿಗಿಂತ ಹೆಚ್ಚು ದುಡಿಯುತ್ತಿದ್ದಾರೆ. ಆದರೆ ಈಗಲೂ, ಜೀವಂತ ಹೆಣದಂತೆ ನಡೆಯುತ್ತಿದ್ದಾರೆ.

ಅನುವಾದಕರು: ಚರಣ್‌ ಐವರ್ನಾಡು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editors : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Editors : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad