ಉನ್ನತ ಫ್ಯಾಷನ್, ಮನಮೋಹಕ ವೇಗದ ಫ್ಯಾಷನ್, ಲೈಂಗಿಕತೆ.
ಉನ್ನತ ದರ್ಜೆಯ ಪ್ರಯಾಣ, ಮಧ್ಯಮ ವರ್ಗದ ಪ್ರಯಾಣ, ಪ್ರಯಾಣ ಮತ್ತು ಪ್ರಯಾಣ!
ಮಿಮ್, ಟ್ರೆಂಡಿಂಗ್ ಹುಕ್ ಸ್ಟೆಪ್ ಡ್ಯಾನ್ಸ್ ಭಂಗಿಗಳು, ಕೆಲವೊಮ್ಮೆ ಮೋಜು ಕೆಲವೊಮ್ಮೆ ಅನೇಕ ಫಿಲ್ಟರ್‌ಗಳಂತೆ ಭಯಾನಕ.

ಈ ರೀತಿಯ 'ಕಂಟೆಂಟ್' ಆನ್‌ಲೈನ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತವೆ. ಪರಿಯು ಈ ಸಾಲಿನಲ್ಲಿ ಹೆಚ್ಚಿನ ಕೊಡುಗೆಗಳನ್ನು ಹೊಂದಿಲ್ಲ, ಆದರೂ ನಾವು ಸಾಮಾಜಿಕ ಮಾಧ್ಯಮದ ಪ್ರಪಂಚದಲ್ಲಿ ನಿರ್ದಿಷ್ಟ ಪ್ರಮಾಣದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಮತ್ತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಹೇಗೆ? ಅತ್ಯಂತ ಸರಳವಾದ ಆದರೆ ಬಹುತೇಕ ಬಳಕೆಯಾಗದ ರೀತಿಯಲ್ಲಿ: ತಿಳಿವಳಿಕೆ, ಶಕ್ತಿಯುತ ನಿರೂಪಣೆಗಳನ್ನು ರಚಿಸುವ ಸಾಮರ್ಥ್ಯದ ಮೂಲಕ.

ಪರಿಯ ಗ್ರಾಮೀಣ ಪತ್ರಿಕೋದ್ಯಮವು ವೈವಿಧ್ಯಮಯ ಪ್ರೇಕ್ಷಕರನ್ನು ಹೇಗೆ ಪ್ರಭಾವಿಸಿದೆ ಎಂಬುದರ ಕುರಿತು ವರ್ಷಾಂತ್ಯದ ನೋಟ ಇಲ್ಲಿದೆ. ( ಈ ಸಣ್ಣ ಕ್ಲಿಪ್ ಕೂಡಾ ಗಮನಿಸಿ )

ಬನ್ಸ್ವಾರಾದ ತಾತ್ಕಾಲಿಕ 'ಸಭಾಪತಿ' ವರದಿಯ ಕುರಿತ ನಮ್ಮ ಪೋಸ್ಟನ್ನು ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೀಲಾಂಜನಾ ನಂದಿಯವರ ಈ ವರದಿಯು ರಾಜಸ್ಥಾನದಲ್ಲಿ ಮಹಿಳೆಯರಿಗೆ ಪುರುಷರು ಅಥವಾ ಹಿರಿಯರ ಮುಂದೆ ಕುರ್ಚಿಗಳ ಮೇಲೆ ಅಥವಾ ಎತ್ತರದ ಸ್ಥಳಗಳಲ್ಲಿ ಕುಳಿತುಕೊಳ್ಳುವುದು ಸ್ವೀಕಾರಾರ್ಹವಲ್ಲದ ಸಂಪ್ರದಾಯವನ್ನು ಎತ್ತಿ ತೋರಿಸುತ್ತದೆ. ಈ ರೀಲನ್ನು Instagram ನಲ್ಲಿ ಸುಮಾರು 700,000 ಬಾರಿ ವೀಕ್ಷಿಸಲಾಗಿದೆ ಮತ್ತು ಸಾವಿರಾರು ಕಾಮೆಂಟ್‌ಗಳೂ ಬಂದಿವೆ. – ಹೆಣ್ಣು ಮಕ್ಕಳು ಈ ಕುರಿತು ತಮ್ಮದೇ ಆದ ರೀತಿಯ ಅನುಭವಗಳನ್ನು ವಿವರಿಸುತ್ತಾರೆ, ಕೆಲವರು ಈ ಸಣ್ಣ ವಿಷಯಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ, ಇನ್ನೂ ಕೆಲವರಿಗೆ ಈಗಲೂ ಈ ಅಭ್ಯಾಸ ಅಸ್ತಿತ್ವದಲ್ಲಿದೆ ಎಂದು ನಂಬಲು ಸಾಧ್ಯವಾಗಲಿಲ್ಲ. “ಈ ವಿಷಯಗಳನ್ನು ಗಮನಿಸಲು ನಿಗೂಢವಾದ ಕಣ್ಣು ಬೇಕು” ಎನ್ನುವ ಮೋಲಿಕಾ ಕುಮಾರ್ ಅವರ ಕಾಮೆಂಟ್ ಬಹುಶಃ ನಮ್ಮ ಜನ ಸಾಮಾನ್ಯರ ಬದುಕಿನ ದೈನಂದಿನ ಅನುಭವಗಳ ಕಥೆಗಳನ್ನು ಹೊರತರುವ ಪತ್ರಿಕೋದ್ಯಮಕ್ಕೆ ದೊರೆತ ದೊಡ್ಡ ಅಂಗೀಕಾರವಾಗಿದೆ.

ಈ ರೀತಿಯ ಮನ್ನಣೆಯು ನಿಜವಾಗಿಯೂ ನಮ್ಮನ್ನು ಮುನ್ನಡೆಸುತ್ತದೆ, ಮತ್ತು ನಮ್ಮ ಓದುಗರು ಈ ಮನ್ನಣೆಯನ್ನು ನಮಗೆ ಹಲವಾರು ರೀತಿಯಲ್ಲಿ ತೋರಿಸುತ್ತಾರೆ: ಅವರು ಈ ವರದಿಗಳಿಂದ ಕಲಿತದ್ದನ್ನು ಅವರು ನಮಗೆ ತಿಳಿಸುತ್ತಾರೆ ಮತ್ತು ಕೆಲವರು ಹಣಕಾಸಿನ ದೇಣಿಗೆಯೊಂದಿಗೆ ಪರಿ ಜೊತೆಗೆ ನಿಲ್ಲುತ್ತಾರೆ, ಈ ಸಹಾಯಗಳಿಂದ ನಾವು ನಮ್ಮ ತನಿಖಾ ಪತ್ರಿಕೋದ್ಯಮವನ್ನು ಸ್ವತಂತ್ರವಾಗಿ ಮುಂದುವರೆಸಬಹುದು.

ಮಧುರೈನ ವರ್ಣರಂಜಿತ, ಸದಾ ಬಿಡುವಿಲ್ಲದ ಮಲ್ಲಿಗೆ ಮಾರುಕಟ್ಟೆಯ ಕುರಿತು ತಯಾರಿಸಲಾದ ಅಪರ್ಣಾ ಕಾರ್ತಿಕೇಯನ್ ಅವರ ವೀಡಿಯೊದಲ್ಲಿ , ಪ್ರಪಂಚದಾದ್ಯಂತದ ವೀಕ್ಷಕರು ವೀಡಿಯೊ ಎಷ್ಟು ನೆನಪುಗಳನ್ನು ತಂದಿದೆ ಎಂದು ನಮಗೆ ತಿಳಿಸಿದರು. “ಎಂತಹ ಸುಂದರ ಬರಹ. ಮಲ್ಲಿಗೆಯ ಸುವಾಸನೆಯೊಂದಿಗೆ ಇಡೀ ದೃಶ್ಯವು ಕಣ್ಮುಂದೆ ಜೀವಂತವಾಯಿತು ಎಂದು ವೀಡಿಯೊ ನಮ್ರತಾ ಕಿಲ್ಪಾಡಿ ಹೇಳಿದ್ದಾರೆ. ಈ ರೀತಿ ವರದಿಯ ಸ್ಥಳ ಮತ್ತು ಕಾಲಕ್ಕೆ ಜನರನ್ನು ಕರೆತರಲು ಸಾಧ್ಯವಾಗುವ ಖುಷಿಯೇ ಬೇರೆ. ನಮ್ಮ ವರದಿಯ ಭಾಗವಾದ ಜನರು ತಮ್ಮ ದೈನಂದಿನ ಜೀವನದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರಿಂದ ಇದೆಲ್ಲವೂ ಸಾಧ್ಯವಾಗಿದೆ.

ಪುಣೆ ಮೂಲದ ತ್ಯಾಜ್ಯ ಸಂಗ್ರಾಹಕ ಸುಮನ್ ಮೋರೆ ಅವರ 30 ಸೆಕೆಂಡುಗಳ ಕ್ಲಿಪ್ ನಮ್ಮ Instgram ವೀಡಿಯೋಗಳಲ್ಲೇ ಅತ್ಯಂತ ಜನಪ್ರಿಯ ವೀಡಿಯೊವಾಗಿದೆ , ಅದರಲ್ಲಿ ಅವರು ಪದಗಳ ಶಕ್ತಿಯ ಬಗ್ಗೆ ಮಾತನಾಡುತ್ತಾರೆ. ಊರಿನ ಜನರು ಕಸವನ್ನು ಉತ್ಪಾದಿಸುವವರು ಹೀಗಿರುವಾಗ ಆ ಕಸವನ್ನು ಸ್ವಚ್ಛಗೊಳಿಸುವ ಮಹಿಳೆಯರನ್ನು "ಕಚ್ರೇವಾಲಿಗಳು" ಎಂದು ಏಕೆ ಕರೆಯಬೇಕು ಎಂದು ಅವರು ಕೇಳುತ್ತಾರೆ. 1.2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ವೀಡಿಯೊದ ಕೆಳಗಿನ ಕಾಮೆಂಟುಗಳಲ್ಲಿ, ಈ ಸಾಮಾಜಿಕ ನಿರ್ಲಕ್ಷ್ಯ ಮತ್ತು ತಪ್ಪು ಕಲ್ಪನೆಯ ಅಡಿಪಾಯವನ್ನು ಅಲುಗಾಡಿಸಿದ್ದಕ್ಕಾಗಿ ಜನರು ಅವರನ್ನು ಶ್ಲಾಘಿಸಿದರು. ಒಬ್ಬ ಓದುಗ ಹೀಗೆ ಬರೆದರು, "ನಾನು ಒಪ್ಪಿಕೊಳ್ಳುತ್ತೇನೆ, ನಾನು ಆ ಪದವನ್ನು [ಕಚ್ರೇವಾಲಿ] ಸಹ ಬಳಸಿದ್ದೇನೆ. ಆದರೆ ಇನ್ನು ಮುಂದೆ ಅದನ್ನು ಮತ್ತೆ ಎಂದಿಗೂ ಮಾಡುವುದಿಲ್ಲ. ಪತ್ರಿಕೋದ್ಯಮದ ಮೂಲಕ ಅಂಚಿನಲ್ಲಿರುವ ಜನರ ಅನುಭವಗಳನ್ನು ಎತ್ತಿ ತೋರಿಸಿದರೆ, ಅದು ನಿಜವಾಗಿಯೂ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಈ ಹೇಳಿಕೆ ಸಾಕ್ಷಿಯಾಗಿದೆ.

ಶಾಲಾ-ಕಾಲೇಜು ತರಗತಿಗಳಲ್ಲಿ ಈ ವರದಿಗಳನ್ನು ಚರ್ಚಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾರತದ ದೃಷ್ಟಿಕೋನವನ್ನು ಸೃಷ್ಟಿಸಲು ನಾವು ಪ್ರಯತ್ನಿಸುವ ಪರಿಯ ಶಿಕ್ಷಣ ಯೋಜನೆ ಬಗ್ಗೆ Twitter ಬಳಕೆದಾರ ವಿಷ್ಣುಸೇಯ್ಸ್ ಹೀಗೆ (@Vishnusayswhat) ಬರೆದಿದ್ದಾರೆ: “ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗಿಂತ ಕಡಿಮೆ ಸಂಪತ್ತನ್ನು ಹೊಂದಿದ್ದರೆ ಅದಕ್ಕೆ ಕಾರಣ ಅವನು ಕಷ್ಟಪಟ್ಟು ಕೆಲಸ ಮಾಡದಿರುವುದಷ್ಟೇ ಕಾರಣವಲ್ಲವೆನ್ನುವುದು ನೀವು ಭಾರತವನ್ನು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಸಾಧ್ಯವಾಗುತ್ತದೆ."

ಮತ್ತು ಸಂದೇಶವು ದೂರದವರೆಗೂ ಹರಡಿದೆ – ಬಾಲಿವುಡ್ ಐಕಾನ್ ಜೀನತ್ ಅಮಾನ್ ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಪರಿಯ ಕೆಲಸವನ್ನು ಹೈಲೈಟ್ ಮಾಡಿ ಹಾಡಿ ಹೊಗಳಿದರು, “ಪ್ರಾಮಾಣಿಕ ಗ್ರಾಮೀಣ ಕಥೆಗಳು ಮುಖ್ಯವಾಹಿನಿಯ ಕಥೆ ಹೇಳುವಿಕೆಯ ಜಾಗದಿಂದ ಕಣ್ಮರೆಯಾಗುತ್ತಿವೆ. ಇಂದಿನ ಪತ್ರಿಕೋದ್ಯಮದಲ್ಲಿ ಗ್ರಾಮೀಣ ವಿಭಾಗವನ್ನು ಸೆಲೆಬ್ರಿಟಿ ಸುದ್ದಿಗಳು ಆವರಿಸುತ್ತಿರುವುದು ನನಗೆ ಗೊತ್ತಿದೆ" ಎಂದು ಅವರು ಬರೆದುಕೊಂಡಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸೆಲೆಬ್ರಿಟಿಗಳು ಅಥವಾ ಪ್ರಸಿದ್ಧ ವ್ಯಕ್ತಿಗಳ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಕೂಡಾ ಬಹಳ ಮುಖ್ಯವಾಗುತ್ತದೆ. ಅವರು ಈ ಕುರಿತು ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ, ನಮ್ಮ ಅನುಯಾಯಿಗಳ ಸಂಖ್ಯೆ ಹಲವಾರು ಸಾವಿರದಷ್ಟು ಏರಿಕೆ ಕಂಡಿತು. ಈ ವರ್ಷದ ಮತ್ತೊಂದು ರೋಚಕ ಕ್ಷಣವೆಂದರೆ ಹಾಲಿವುಡ್ ನಟ ಮತ್ತು ಮನರಂಜನಾ ವ್ಯಕ್ತಿತ್ವ ಜಾನ್ ಸೇನಾ ನಮ್ಮನ್ನು ಟ್ವಿಟರಿನಲ್ಲಿ ಅನುಸರಿಸಲು ಪ್ರಾರಂಭಿಸಿದ್ದು!

ಆದರೆ ಈ ಎಲ್ಲಾ ಪ್ರತಿಕ್ರಿಯೆಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಕರು/ಓದುಗರು ನಾವು ವರದಿ ಮಾಡುವ ಜನರ ಕಡೆಗೆ ಗಮನಹರಿಸಿದಾಗ ನಮಗೆ ಹೆಚ್ಚು ಸಮಾಧಾನವೆನ್ನಿಸುತ್ತದೆ. ಜನರು ಸಹಾಯ ಹಸ್ತ ಚಾಚಲು ಸದಾ ಸಿದ್ಧರಿರುವುದನ್ನು ಕಂಡು ನಾವು ಮೂಕ ವಿಸ್ಮಿತರಾಗಿದ್ದೇವೆ. ಹಿರಿಯ ರೈತ ದಂಪತಿಗಳಾದ ಸುಬ್ಬಯ್ಯ ಮತ್ತು ದೇವಮ್ಮ ವೈದ್ಯಕೀಯ ವೆಚ್ಚವನ್ನು ಭರಿಸಲು ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ವಿವರಿಸುವ ಈ ವರದಿಗೆ ಪ್ರತಿಕ್ರಿಯೆಯಾಗಿ, ಹಲವಾರು ಓದುಗರು ಆರ್ಥಿಕ ಸಹಾಯ ನೀಡುವುದಾಗಿ ಹೇಳಿ ನಮ್ಮನ್ನು ತಲುಪಿದರು; ಅವರ ವೈದ್ಯಕೀಯ ಬಿಲ್‌ಗಳು ಮತ್ತು ಮಗಳ ಮದುವೆಯ ವೆಚ್ಚದ ಹೆಚ್ಚಿನ ಭಾಗವು ಅದರಿಂದ ಹೊರಬಂದಿತು. ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರಿ ಬೆಂಬಲದ ಕೊರತೆಯಿಂದಾಗಿ ಉದಯೋನ್ಮುಖ ಓಟಗಾರ್ತಿ ವರ್ಷಾ ಕದಮ್ ಭವಿಷ್ಯವು ನಾಶವಾಗಿತ್ತು. ನಮ್ಮ ಓದುಗರು ಅವರಿಗೆ ಆರ್ಥಿಕ ದೇಣಿಗೆ ನೀಡಿದ್ದಾರೆ, ರನ್ನಿಂಗ್ ಶೂಗಳನ್ನು ಖರೀದಿಸಿ ಕೊಟ್ಟಿದ್ದಾರೆ ಮತ್ತು ತರಬೇತಿ ಕೊಡಿಸಲು ಸಹ ಮುಂದಾಗಿದ್ದಾರೆ.

ಇಂಟರ್ನೆಟ್ ಜಗತ್ತು ಎಷ್ಟು ಕ್ರೂರ ಮತ್ತು ಹೃದಯಹೀನವಾದುದು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಜಗತ್ತಿನಲ್ಲಿ ಕರುಣೆ ಮತ್ತು ಸದ್ಭಾವನೆಗೆ ಎಂದಿಗೂ ಕೊರತೆಯಾಗುವುದಿಲ್ಲವೆನ್ನುವುದನ್ನು ನಮ್ಮ ಓದುಗರು ನಮಗೆ ನೆನಪಿಸುತ್ತಿರುತ್ತಾರೆ.

ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಇನ್ನೂ ಫಾಲೋ ಮಾಡುತ್ತಿಲ್ಲವಾದರೆ, ಈ ಹ್ಯಾಂಡಲ್‌ಗಳ ಮೂಲಕ ನೀವು ನಮ್ಮನ್ನು ಫಾಲೋ ಮಾಡಬಹುದು. ನಮ್ಮ ಹಿಂದಿ, ತಮಿಳು ಮತ್ತು ಉರ್ದು ಸಾಮಾಜಿಕ ಜಾಲತಾಣ ಖಾತೆಗಳೂ ಇವೆ.
ಇನ್ಸ್ಟಾಗ್ರಾಮ್
ಟ್ವಿಟರ್
ಫೇಸ್ಬುಕ್
ಲಿಂಕ್ಡ್‌ಇನ್

ಪರಿಯ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡಲು [email protected] ವಿಳಾಸಕ್ಕೆ ಬರೆಯಿರಿ.

ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು mailto:[email protected] ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.

ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ಇದು ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್‌ ಕ್ಲಿಕ್ ಮಾಡಿ.

ಅನುವಾದ: ಶಂಕರ. ಎನ್. ಕೆಂಚನೂರು

Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru